ರಾಗ ಕೇತಾರಗೌಳ ಝಂಪೆತಾಳ
ಆ ನುಡಿಯ ಕೇಳಿ ಭರದೀ | ಬಳಿಕ ಪವ | ಮಾನಸುತರತಿರೋಷದಿ ||
ತಾನೆ ನರಹರಿಯಾದನೂ | ಗರ್ಜಿಸುತ | ಲಾನಿತಂಬಿನಿಗೆಂದನೂ ||೧೯೮||
ರಾಗ ಮಾರವಿ ಏಕತಾಳ
ಆರಿಗೆ ಭೋಜನ ಸಮಯವು ನಗರದೊ |
ಳಾರಿಲ್ಲವೆ ಜನರೂ ||
ಮಾರಿಗೆ ತುತ್ತಾದರೊ ಮೌನವೊ ಯೆನ |
ಗಾರು ತಡೆಸಿದವರು ||೧೯೯||
ಸುರಿಯದೆ ವರ್ಷವು ಬೆಳೆಯದೆ ಧಾನ್ಯಗ |
ಳುರೆದುರ್ಭಿಕ್ಷಕರ ||
ಕರವಿಡಿದಿಹ ತರುಣಿಯರಿನಿಬರತಾ |
ನರಿತುಬಿಡುವುದವರ ||೨೦೦||
ಗೊಲ್ಲರ ಮನೆಯನು ಪೊಗುತಲಿ ಪಾಲ್ಮೊಸ |
ರೆಲ್ಲವ ಕದ್ದುಣುವ ||
ಖುಲ್ಲಗೋವಳನಿಗೆ ದೊರೆತನವಾದಡೆ |
ಬಲ್ಲೆನೆ ನೀತಿಯವ ||೨೦೧||
ಮಾವನ ಶಿರವನರಿದು ಮೊಲೆಗೊಟ್ಟಳ |
ಜೀವವ ತೆಗೆದಧಮಾ ||
ಭಾವನ ಮಿಗೆ ಸಂಭಾವಿಸುವನೆ ಜಗ |
ತೀವಲಯದೊಳಮಮಾ ||೨೦೨||
ಜಲರುಹಭವಸುರಮುಖ್ಯರ ಸನ್ನುತಿ |
ಗೊಳುವ ಪ್ರಭುತ್ವವನೂ ||
ಕಳಗೊಂಡೀನರನಾದವನೆಮ್ಮಯ |
ನೆಲೆಯರಿವನೆ ತಾನೂ ||೨೦೩||
ಭಾಮಿನಿ
ಮಾನಭಂಗಿತನಾದೆ ನಿನ್ನೀ |
ಮಾನಹೀನನ ಕಾಂಬುದೆನಗೆ ಸು |
ಮಾನವಲ್ಲೆಂದೆನುತ ಮಾರುತಿ ಕನಲಿ ಮೊಗದಿರುಹೆ |
ದಾನವಾಂತಕನರಿತು ಮನದಲಿ |
ತಾ ನಗುತ ಕರೆದೊಳಗೆ ಬರುತಲಿ |
ದೇನು ತಡೆದವಳಾವಳೇತಕೆ ಕೋಪವೆನೆ ನುಡಿದ ||೨೦೪||
ರಾಗ ಶಂಕರಾಭರಣ ಮಟ್ಟೆತಾಳ
ಸಿಂಧುಶಯನನೀ ಮುನಿದಡೆ | ಇಂದಿಗೀ ಬ್ರಹ್ಮಾಂಡ ನಿನಗ |
ದೊಂದು ತುತ್ತನ್ನಿಹುದೆ ಬಾಯ್ಗೆ | ಬಂದೆನೋರ್ವನೇ ||
ಮಂದರಾಧ್ರಿಧರನೆ ಕರುಣ | ದಿಂದಲೆನ್ನನುಳುಹು ಪೋಪೆ |
ನಿಂದು ತಡೆಸಿದರಕ್ಷಣಕೆ | ಚಂದವೈಸಲೇ ||೨೦೫||
ರಾಗ ಶಂಕರಾಭರಣ ಏಕತಾಳ
ಎನೆ ಮುರಾರಿ ನಗುತ ನುಡಿದ | ಘನವಿಕ್ರಮಿಯೆ ಸೈರಿಸಹಹ |
ಗುಣವಿಹೀನರಕಟ ನಿನ್ನ | ನಿನಿತು ತಡೆದರೇ ||೨೦೬||
ರಾಗ ಶಂಕರಾಭರಣ ಮಟ್ಟೆತಾಳ
ಸರಸಿಜಾಕ್ಷ ನಿನ್ನ ಕೊಡೆ | ನರನ ಸಲುಗೆಯೆನಗೆಯಿಹುದೆ |
ಪುರದ ದ್ವಾರದಲ್ಲಿ ಯೆನ್ನ | ಬರಿದೆ ತಡೆಸಿದೇ ||
ಹರಿಯೆ ನೀನಿಲಿಸಲ್ಕದೇನು | ಕೊರತೆಯಪ್ಪುದೆನಗೆ ಭೂಪ |
ನೊರೆದುದಲ್ಲವೆಂಬುದೇಕೆ | ಗರುವತನವದೂ ||೨೦೭||
ವಾರ್ಧಕ
ಮರುತಸುತನಿಂತೆನಲು ಮುರಹರಂ ನಗುತವನ |
ಸೆರಗಪಿಡಿದಿತ್ತ ಬಾರೆನುತ ಕುಳ್ಳಿರಿಸಿ ಮುದ |
ವೆರೆದು ಬಿಗಿಯಪ್ಪುತಿಂತೆಂದನೆಲೆಸಖ ನಿನ್ನ ಸರಸಕಾಗಿಯೆ ದ್ವಾರದಿ ||
ಬರಿದೆ ನಿಲಿಸಿದೆ ಹೊರತು ನಿಮ್ಮೈವರೊಡನೆ ನಾ |
ನೆರಡಣಿಸುವೆನೆ ಸಾಕು ಮರುಗಬೇಡೆನುತವನ |
ಕರವಪಿಡಿದೊಳಗೊಯ್ದು ಮಧುರ ಭೋಜನಗೈಸಿ ಮುದದಿ ಮತ್ತಿಂತೆಂದನೂ ||೨೦೮||
ರಾಗ ಬೇಗಡೆ ಅಷ್ಟತಾಳ
ಮರುತನಂದನ ಪೇಳು ಸುಖವೆ ನಿಮ್ಮವರ್ಗೆ |
ಧರಣಿಪ ಫಲುಗುಣ ಮಾದ್ರೇಯರಿಂಗೇ ||
ವರ ಧೃತರಾಷ್ಟ್ರ ದ್ರೌಪದಿ ಕುಂತಿಯರಿಗೆ |
ಪುರ ಪರಿಜನ ಬಂಧುನಿಕರಕೆಲ್ಲರಿಗೆ ||೨೦೯||
ಏನು ಕಾರಣದೊಳಟ್ಟಿದ ನಿನ್ನ ನೃಪನೂ |
ತಾನು ಮಖವನಾರಂಭಿಪನೆ ಪೇಳಿನ್ನು |
ಸಾನುರಾಗದಿ ಬಂದ ಪರಿಯೆಲ್ಲವನ್ನೂ |
ನೀನರುಹೆನಲೆಂದ ವಾಯುನಂದನನೂ ||೨೧೦||
ರಾಗ ನಿಲಾಂಬರಿ ತ್ರಿವುಡೆತಾಳ
ಲೋಕನಾಯಕ ಲಾಲಿಸು | ಗೋಪಾಲಕೃಷ್ಣ |
ನೀ ಕರುಣವನಿರಿಸೂ ||
ಶೋಕಹರ ವರ | ನಾಕಪತಿ ನುತ |
ಶ್ರೀ ಕಮಲದಳನಯನ ಚಿನ್ಮಯ || ಪಲ್ಲವಿ ||
ಕರಿವರದನೆ ನಿನ್ನನೂ | ನಂಬಿದವರ್ಗೆ |
ಬರುವುದೇನೆಡರದಿನ್ನು ||
ಹರಿಯೆ ನೀನಗ್ರಜನಿಗರುಹಿದ | ತೆರದಿ ಮಖವನು ತೊಡಗಲೋಸುಗ |
ಭರದೊಳಟ್ಟಿದನೆನ್ನ ನಿನ್ನನು | ಕರೆದುತರುವುದೆನುತ್ತ ಹರುಷದಿ ||೨೧೧||
ನಿರತನಿನ್ನಯ ಪಾದವ | ನಂಬಿಹೆವೆಂಬು |
ದರಿತು ನಮ್ಮೊಳು ದಯವ ||
ಯಿರಿಸಿ ತನ್ನಪರಾಧವೆಲ್ಲವ | ಮರೆದು ಸರ್ವರವೆರಸಿ ಬಂದ |
ಧ್ವರವ ನಡೆಸಿದುಪೊರೆಯೊಯೆನುತಲಿ | ಹರಿತನಯ ಹರಿಚರಣಕೆರಗಿದ ||೨೧೨||
ವಾರ್ಧಕ
ಮುರಹರಂ ಮುದದೊಳನಿಲಜನ ಶಿರವಂ ನೆಗಹಿ |
ಬರುವೆ ಗಜಪುರಕೆನುತ್ತಖಿಳ ಯಾದವನಿಕರ |
ತರುಣಿ ರುಗ್ಮಿಣಿ ಭಾಮೆದೇವಕಿಯರೊಡನೆ ಕರಿತುರಗ ಧನಕನಕಗಳನೂ ||
ನೆರಹಿ ರಥವೇರಿ ಬಂದಾಜಾಹ್ನವಿಯ ತಟದೊ |
ಳಿರಿಸಿ ಪಾಳಯವನಿಭಪುರಕೆ ಬರೆ ಶ್ರೀವರನ |
ಧರಣಿಪತಿಯುಪಚರಿಸಿ ವಿಷ್ಟರದಿ ಕುಳ್ಳಿರಿಸುತಿಂತೆಂದನತಿವಿನಯದಿ ||೨೧೩||
ರಾಗ ಕಾಂಭೋಜಿ ಝಂಪೆತಾಳ
ದೇವಲಾಲಿಪುದು ವಸು | ದೇವದೇವಕಿಯು ಬಲ |
ದೇವಸ್ಮರ ಮುಖ್ಯ ಸತಿನಿವಹ ||
ನೀವು ಬಿಟ್ಟೈತಂದ | ಭಾವವೇನೈ ಭೀಮ |
ನಾವೆಡೆಯೊಳೆನಲು ಹರಿನುಡಿದ ||೨೧೪||
ರಾಗ ಮಧ್ಯಮಾವತಿ ಏಕತಾಳ
ಕೇಳಯ್ಯಶಶಿಕುಲ ರಾಜಶೇಖರನೇ |
ಏಳಯ್ಯ ಸುರನದಿ ತಟಕಿನ್ನು ನೀನೇ ||
ಪಾಳ್ಯವೆರಸಿ ಬಂದೆ ಪರಿಕಿಸು ಮುದದಿ |
ಜಾಲವಲ್ಲಿದು ಭೀಮನರುಹಲು ಭರದಿ ||೨೧೫||
ವಾರ್ಧಕ
ಎನಲರ್ಜುನನ ಮೊಗವ ನೋಡಿ ಧರ್ಮಜನೆಂದ |
ನಿನಿಬರೀಯಾದವನಿಕಾಯ ಸಹ ನಮ್ಮೆಡೆಗೆ |
ಚಿನುಮಯಾತ್ಮಕ ಪರಂಜ್ಯೋತಿ ಸ್ವರೂಪ ಶ್ರೀಹರಿ ಬಂದುದಚ್ಚರಿಯಲಾ ||
ವಿನಯದಿಂದವರ ಸತ್ಕರಿಸಿತಹುದೆಂದು ಪುರ |
ವನು ಶೃಂಗರಿಸಲರುಹುತನುಜರೊಡನೈದಿದಂ |
ಘನಮಹಿಮ ಸಹಿತ ಬಂದವರ ಮನ್ನಿಸುತಿರಲು ಭಾಮೆ ದ್ರುಪದಜೆಗೆಂದಳು ||೨೧೬||
ರಾಗ ಬಿಲಹರಿ ಏಕತಾಳ
ಇಳೆಯೊಳು ಚದುರೆ ನೀ | ಲಲನೆಯೆನ್ನರಸನ |
ನೊಲಿಸಿಕೊಂಡನು ದಿನ | ದೊಳು ಮೀರ್ವೆನಮ್ಮ ||
ಬಲು ಪತಿವ್ರತೆ ಪತಿ | ಗಳನೈವರನ್ನು ಮ |
ರುಳು ಗೈವಳೊಳು ಮಾತಾ | ಡಲು ಬೆದರುವೆವು ||೨೧೭||
ಕರುಣ ವಾರಿಧಿಯ ನಾ | ನರಿತೊಲಿಸದಡೆನ್ನ |
ದುರುಳದುಃಶ್ಶಾಸನ | ಸೆರಗನೊಯ್ದಾಗ ||
ವರ ಮಾನಕಾಯ್ದವ | ರಿರುವರೆ ಕೇಳು ನಿ |
ನ್ನರಸನು ದಯದಿಂದ | ಪೊರೆದಿಹನೆನ್ನ ||೨೧೮||
ಸರಿ ಸರಿ ಮೆಚ್ಚಿದೆ | ನಿರತಗೃಹದಿ ನಿಲ ||
ದಿರುವ ಬಗೆಯ ಗೈದೆ | ಹರುಷವಿದಹಹ |
ಅರಿಯದೆ ಮಾತಾಡಿ | ದಿರವಕ್ಷಮಿಸುವುದೆಂದು |
ಭರದಿ ನುಡಿಯೆ ಭಾಮೆ | ಗೊರೆದಳ್ಪಾಂಚಾಲೆ ||೨೧೯||
ಪಾರಿಜಾತವ ನೊಂಪಿ | ಸಾರಿ ನೀರಮಣನ |
ನಾರದಗಿತ್ತಬಳಿಕಾರಿನ್ನೊಡೆಯರು ||
ಶ್ರೀ ರುಕ್ಮಿಣೀ ಧವ | ನೋರ್ವನನಾಥರ್ಗೆ ||
ದಾರಿ ದೋರಿಪನಾತ ನಾಥನು ಪುಸಿಯೇ ||೨೨೦||
ಭಾಮಿನಿ
ಇನಿತು ದ್ರೌಪದಿ ಸತ್ಯಭಾಮಾ |
ವನಿತೆಯರು ನುಡಿಯುತಿರೆ ಮತ್ತಾ |
ಜನರು ಹರಿಯಾಜ್ಞೆಯೊಳು ಹಯವನು ಪೂಜಿಸಲ್ಕತ್ತ |
ದನುಜನನುಸಾಲ್ವಾಖ್ಯನಣ್ಣನ |
ಮನುಮಥನಪಿತ ತರಿದವೈರವ |
ನೆನೆದು ಸಿಡಿಲಂದದಲಿ ಭೋರ್ಗರೆದೆಂದ ಸಚಿವನೊಳು ||೨೨೧||
ರಾಗ ಭೈರವಿ ಏಕತಾಳ
ಮಂತ್ರಿ ಸುಧಾರನೆ ಕೇಳು | ಹರಿ | ಪಿಂತಣ್ಣನ ಸಮರದೊಳು ||
ಪಂಥದಿ ತರಿದನು ಶಿರವ | ಮದ | ದಿಂದಲುರುಹಿದ ಪುರವ ||೨೨೨||
ಆ ವೈರವ ತಾಳುವೆನೇ | ಹುಲು | ಗೋವಳನವ ಬಾಳುವನೇ ||
ಜೀವಿಸಲೆಡೆಗೊಡದವನಾ | ರಣ | ದೇವತೆಗುಣಬಡಿಸುವೆನಾ ||೨೨೩||
ಮದನಾರಿಯ ಕರುಣದಲೀ | ಸಿಲು | ಕಿದ ಮದ್ರಿಪುವಿಂದಿನಲೀ ||
ಕದನದೊಳಣ್ಣನ ಪಗೆಯಾ | ಮುಗಿ | ಪುದಕಿದುಲೇಸಿನ ಸಮಯಾ ||೨೨೪||
ಬಡಿದಹಿತರನಾ ಹಯವ | ಸೆರೆ | ಪಿಡಿಯಲು ಹರಿಯೈತರುವ |
ಬಿಡಿಸಲು ಬಂದಾತನನೂ | ತರಿ | ದಿಡುತ ನುಡಿಯ ಸಲಿಸುವೆನೂ ||೨೨೫||
ವಾರ್ಧಕ
ಎನುತ ಗರ್ಜಿಸಿ ಖಳಂ ಪಡೆವೆರಸುತೈತಂದು |
ಘನತರದ ಮಾಯದಿಂ ಕವಿಸಿ ಕಾರ್ಗತ್ತಲೆಯ |
ಜನಪ ಧರ್ಮಜನಧ್ವರದ ಹಯವ ಕೊಂಡೊಯ್ದು ಕಟ್ಟಿ ಮೇಣ್ ನಿಜ ಬಲವನೂ ||
ಕ್ಷಣದೊಳಗೆ ಪದ್ದಿನಾಕಾರದಿಂ ನಿಲಿಸಿ ಮ |
ತ್ತನುವರಕ್ಕುದ್ಯುಕ್ತನಾಗಿ ತನ್ನಯ ಶರಾ |
ಸನದೊಳಂಬಂ ಸೇರಿಸುತ ಸಾಲ್ವನಾಪ್ತಭಟ ನಿವಹಕಿಂತೆಂದನಂದೂ ||೨೨೬||
ರಾಗ ಶಂಕರಾಭರಣ ಮಟ್ಟೆತಾಳ
ಶೂರ ಸುಭಟರೆಲ್ಲ ಕೇಳಿ | ಚೋರ ಗೊಲ್ಲತರಳನೊಡನೆ |
ಭೂರಿ ವಿಕ್ರಮದೊಳು ಕಾದ | ಲಾರದವನನೂ ||
ಮಾರಿ ಬಳಗಕೀವೆ ನೀ ಮ | ಹಾರಣಾಗ್ರ ಗೈವನವನೆ |
ವೀರಮಿತ್ರ ನೆನಗೆ ಮುಂದೆ | ಸಾರಿ ಪೆಳ್ದೆನೂ ||೨೨೭||
ಮಿತ್ರಭಾವವೆಣಿಸುತವಗೆ | ಮತ್ತೆ ಗೋಗಜಾಶ್ವಧನ ಸು |
ರತ್ನವನಿತೆಯರನು ಕೊಡುವೆ | ಸತ್ಯವೀನುಡಿ ||
ಯತ್ನದಿಂದ ಧುರದಿ ಗೋಪ | ಮೊತ್ತದೊಡೆಯನನ್ನು ಕೊಲಿರೆ |
ನುತ್ತ ನೇಮವಿತ್ತು ಗರ್ಜಿ | ಸುತ್ತಲಿರ್ದನೂ ||೨೨೮||
ಭಾಮಿನಿ
ಜನಪ ಕೇಳೀ ತೆರದೊಳತ್ತಲು |
ದನುಜನಿರುತಿರಲಿತ್ತ ಖಳ ಸಂ |
ಜನಿತಮಾಯಕೆ ಹಯವ ಪೂಜಿಸುತಿರ್ದ ನಾರಿಯರು ||
ಮುನಿಜನರು ತಲ್ಲಣಿಸೆ ಬೆರಗಿನ |
ಮನದೊಳೆಣ್ದೆಸೆಗಿರದೆ ಚದರ |
ಲ್ಕನುವರಿತು ದನುಜಾರಿ ತಲೆ ದೂಗುತ್ತಲಿಂತೆಂದ ||೨೨೯||
ರಾಗ ಮಧ್ಯಮಾವತಿ ಏಕತಾಳ
ಕೇಳಿರೆನ್ನಯ ಮಾತನೊಲಿದು ನೀವೆಲ್ಲ ||
ಆಲೋಚಿಸುವುದೇತಕೆ ಸಮಯವಿದಲ್ಲ || ಪಲ್ಲವಿ ||
ಇವನನುಸಾಲ್ವನೆಂಬವನೀತನಣ್ಣನ |
ಬವರದಿ ಪಿಂತೆ ಕೊಂದಿಹೆನದರಿಂದ ||
ಹವಣಿಸುತೆನ್ನ ವೈ | ರವಕಟ್ಟಿ ಬಂದರೆ |
ಜವದೊಳೆಮ್ಮಯ ತುರ | ಗವನೊಯ್ದ ಖಳನು ||೨೩೦||
ದುರುಳನ ಗೆಲಿದಿನ್ನು | ತರುವರಾರೀ ನಮ್ಮ |
ತುರಗವನಾ ಸುಭ | ಟರಿಗೊಲಿದಿಂದೂ ||
ಮೆರೆವ ವೀಳ್ಯವನೀವೆ | ಧುರವಗೆಲ್ಲುವೆವೆಂಬ |
ಭರವಸೆಯಿರ್ದಡೆ | ಪೊರಡುವುದೆಂದ ||೨೩೧||
ಭಾಮಿನಿ
ಮುರಮಥನನಿಂತೆನಲು ಕೇಳ್ದತಿ |
ಧುರಸಮರ್ಥರು ಬೆದರಿ ಮೌನದೊ |
ಳಿರಲು ಕಂಡೀ ಪರಿಯನೆಲ್ಲವ ನಗುತ ಪ್ರದ್ಯುಮ್ನ ||
ಭರದಿನಡೆತಂದಚ್ಯುತನಪದ |
ಸರಸಿಜಕೆ ತಲೆವಾಗಿ ತನ್ನಯ |
ಕರವ ಮುಗಿದಿಂತೆಂದನಾಕ್ಷಣ ಶೌರ್ಯದೇಳ್ಗೆಯನು ||೨೩೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ತಾತ ಕೊಡು ವೀಳಯವ ವೈರಿ | ವ್ರಾತವನು ಗೆಲಿದಶ್ವವನು ತಹೆ |
ನೀತತೂಕ್ಷಣ ನೋಡು ಮಮಸ | ತ್ವಾತಿಶಯವ ||೨೩೩||
ವಾರುಹವ ನಾ ತಾರದಡೆ ವೃಷ | ಳೀ ರಮಣನುಗ್ರಗತಿಗಿಳಿವೆನು |
ಮೀರುವೆನೆ ನುಡಿಯಿದಕೆ ಕಳುಹೈ | ಭೂರಿ ಮುದದಿ ||೨೩೪||
ಎನುತಲಾ ಪ್ರದ್ಯುಮ್ನ ಪೌರುಷ | ವನು ನುಡಿಯೆ ಕರುಣಿಸಲು ವೀಳ್ಯವ |
ದನುಜಹರನಡಿಗೆರಗಿ ಪೊರಟನು | ಘನತೆಯಿಂದ ||೨೩೫||
ಶಂಬರಾರಿಯು ಕದನಕೈದುವ | ದಂ ಬಳಿಕ ವೃಷಕೇತು ಕಾಣುತ |
ಸಂಭ್ರಮದಿ ಗರುಡಧ್ವಜಗೆ ಮಣಿ | ದಂಬರದೊಳು ||೨೩೬||
ರಾಗ ಭೈರವಿ ಏಕತಾಳ
ಜಲಜಾಕ್ಷನೆ ಕೇಳಿಂದು | ರಿಪು | ಬಲವನು ಸಮರದಿ ಕೊಂದು ||
ನಲಿಯುವ ಶಾಕಿನಿ ಗಣಕೇ | ದಿಗು | ಬಲಿ ಕೊಡುವೆನು ಈ ಕ್ಷಣಕೇ ||೨೩೭||
ಧುರದಲಿಮದ್ಭುಜ ಬಲದಿ | ತ್ರಿದ | ಶರು ಮೆಚ್ಚುವ ವೋಲ್ಕಾದೀ ||
ತುರಗವನೊಯ್ದನಗೆಲಿದು | ತವ | ಚರಣಕೊಪ್ಪಿಸುವೆ ಪಿಡಿದೂ ||೨೩೮||
ಕ್ಷಿಪ್ರದಿ ಖಳನ ನಿನ್ನಡಿಗೇ | ತಂ | ದೊಪ್ಪಿಸದಡೆ ಮುಂದೆನಗೇ ||
ವಿಪ್ರನ ಕೊಲಲೆಳಸಿದನಾ | ಗತಿ | ಯಪ್ಪುದು ಕಳುಹಿಪುದೆನ್ನ ||೨೩೯||
ಭಾಮಿನಿ
ದಿನಪಮೊಮ್ಮನ ಠೀವಿ ಪ್ರದ್ಯು |
ಮ್ನನ ಸಹಸ ನುಡಿಗಳನು ಕೇಳುತ |
ಚಿನುಮಯನು ಬಿಗಿದಪ್ಪಿ ಹರುಷದೊಳಿತ್ತ ವೀಳಯವ ||
ಮಣಿರಥಕೆ ಮೀನಧ್ವಜವ ನಾ |
ಕ್ಷಣದೊಳಳವಡಿಸುತ್ತ ಧನುಶರ |
ವನುಗೊಳುತ ರಥವೇರಿ ಸ್ಮರನಡೆತಂದನಾಹವಕೇ ||೨೪೦||
ಕಂದ
ಬರುತಿಹ ಸ್ಮರನಂ ಸಾಲ್ವಂ |
ಪರಿಕಿಸುತಿವ ಮೀನ ಧ್ವಜನೆಂದರಿತಾಗಂ |
ಉರಿಮಸಗುತಲತಿ ಭರದಿಂ |
ಸರಿದವನಂ ತಡೆಯಲು ಮತ್ತಾಸ್ಮರನೆಂದಂ ||೨೪೧||
ರಾಗ ತುಜಾವಂತು ಮಟ್ಟೆತಾಳ
ಭಳಿರೆ ವೈರಿಸುಭಟ ಕೇಳೆಲಾ | ತೋರುವೆಯಾ ಬಾಹು |
ಬಲವ ರಣದೊಳೆಲವೊ ದುರ್ಬಲಾ || ಪಲ್ಲವಿ ||
ಆರೆಲಾ ನೀ ಪೇಳು ನಮ್ಮ | ವಾರುಹವ ಕದ್ದೊಯ್ದ ನಿನ್ನ |
ಭೂರಿಗರ್ವವಿಳಿಸಿದಪೆನು | ಸಾರಿ ಪೇಳ್ದೆ ಕೇಳು ಖಳ ಕು |
ಠಾರನೆನಿಪಹರಿಯ ತರಳನೂ | ನಾಬಿಡೆನಲ್ಲದಡೆ |
ಕ್ರೂರ ಶರದಿತರಿವೆ ನಿನ್ನನ್ನೂ | ನೀವಿಂತುಗೈದ
ಚೋರತನಕೆ ಮದ್ದನರೆವೆನೂ ||೨೪೨||
ಎನಲು ನುಡಿದ ಸಾಲ್ವನನುಜ | ದನುಜನನುಸಾಲ್ವಾಖ್ಯನಹೆನು |
ನಿನಗೆ ಪಂಚಶರ ಪ್ರಯೋಗ | ವನಿತೆಯರೊಳು ಲೇಸುವಿರಹ |
ವೆನಗದಿಲ್ಲವಿಂದ್ರಿಯಂಗಳ | ನಿಗ್ರಹಿಸಲಿಲ್ಲ |
ಸೆಣಸುತಿಹೆನು ತೊಡುವೆ ಶರಗಳ | ವಾರುಹವ ಬಿಡೆನು |
ಮನೆಗೆ ತೆರಳಲ್ಲದಡೆ ನಿಲ್ಲೆಲಾ ||೨೪೩||
ಎಲವೊ ದೈತ್ಯ ಕೇಳು ನಿನ್ನ | ಛಲವ ತೋರುತಿಹೆಯ ನಿಲ್ಲು |
ಸುಲಭವೇನೂ ಪೇಳೆನುತ್ತ | ಜಲಜನಾಭನಾತ್ಮಜಾತ |
ಬಲುಶರಾಳಿಯಿಂದ ಮುಸುಕಲೂ | ಕತ್ತರಿಸಿಕ್ಷಣದಿ |
ಮುಳಿದುದೈತ್ಯಕಣೆಗಳೆಸೆಯಲೂ | ಬರೆ ಮಧ್ಯಪಥದೊ |
ಳಿಳೆಗೆ ಭರದಿ ಸ್ಮರನು ಕೆಡಹಲೂ ||೨೪೪||
ಭಾಮಿನಿ
ದುರುಳನಾಗಮಹೋಗ್ರ ಶರವನು |
ಸ್ಮರಗಿಡಲು ಸೈರಿಸದೆ ಮೂರ್ಛೆಯೊ |
ಳೊರಗೆ ರಥವನು ತಿರುಹಿ ಮತ್ತಾ ಸಾರಥಿಯು ಜವದೀ ||
ಬರಲು ಮದನನ ಹರಿಯು ಪರಿಕಿಸಿ |
ಭರಿತ ಪೌರುಷದಿಂದ ಮಮಸುತ |
ಧುರದಿ ರಿಪುಮಥನದೊಳು ಬಳಲಿದನೆನುತಲಿಂತೆಂದ ||೨೪೫||
ರಾಗ ರೇಗುಪ್ತಿ ಅಷ್ಟತಾಳ
ಅಹಹಯಿನ್ನೇನೆಂಬೆನೂ | ಕಂಡೆನು ನಿನ್ನ |
ಸಹಸವ ಧುರದೊಳಾನು |
ಕುಹಕಿ ದೈತ್ಯನಗೆದ್ದು ತುರಗವ ತಂದಿಂತು |
ಬಹು ಬಳಲಿದೆಯ ನೀನು | ಪೇಳಿರವನು ||೨೪೬||
ಧುರ ಪರಾಕ್ರಮಿತಾನೆಂದು | ಗರ್ವದಿ ಭಾಷೆ |
ಯರುಹುತಲೆನ್ನೊಳಿಂದು ||
ಬರಿದಾಯ್ತು ತರುಣಿಯರೊಳು ಸರಸವೆ ಪೇಳು |
ಪುರುಷತ್ವವೆ ನಿನಗೇ | ಸೋತಿಹ ಬಗೆಗೇ ||೨೪೭||
ಪುರಕೆ ಪೋಗುವದೆಂತಿನ್ನು | ಸ್ತ್ರೀಯರು ನಗ |
ದಿರುವರೆ ವಿಪುನವನ್ನು ||
ತೆರಳೆಕೊಡರು ಮುನಿ | ವರರು ಸೇರ್ದಡೆ ಬಾಣಾ |
ಸುರನಲ್ಲೀಶತಾನು || ನೆಲಸಿರ್ಪನೂ ||೨೪೮||
ವಾರ್ಧಕ
ಗತಿ ನಿನಗೆ ಬೇರೇನ ಕಾಣೆನೈಪ್ರಾಪ್ತ ವಿ |
ನ್ನತಿಶಯದನಂಗತ್ವವೇ ನಿಜಂ ನಿನಗಿನ್ನು |
ಮತಿಹೀನಸುಡು ನಿನ್ನ ಬಾಳುವೆಯನೆಂದು ಹರಿಯೊದೆದನೆಡಗಾಲ್ತುದಿಯೊಳು ||
ಕ್ಷಿತಿನಾಥ ಕೇಳಿಂತು ಮುರಮಥನನಾಗ ಕಡು |
ಖತಿಯೊಳಾತ್ಮಜನಕಾಲ್ದಳದೊಳೊದೆಯಲ್ಕೆ ಮಾ |
ರುತಿಕಂಡು ಶತಪತ್ರ ನೇತ್ರನಡಿದಾವರೆಗೆ ಮಣಿದೆಂದ ದೈನ್ಯತೆಯೊಳು ||೨೪೯||
ರಾಗ ಮಧುಮಾಧವಿ ಏಕತಾಳ
ಲಾಲಿಸು ಭಕ್ತ ಸಂಜೀವ ಬಿನ್ನಪವ |
ಬಾಲನ ಮೇಲಿಷ್ಟು ಕೋಪವೆ ದೇವ ||
ಖೂಳನಾತನು ಮೋಸದಿಂದ ಗೆದ್ದಿಹನು |
ಮೇಲುದಳವ ಕಳುಹಿಸುವುದು ನೀನೂ ||೨೫೦||
ಬಲಹೀನನೇಸ್ಮರ ಸೋಲ್ವನೆ ಖಳಗೆ |
ಕಲಿಕರ್ಣ ತನುಜ ತಾನೈದಲೀ ಬಗೆಗೇ ||
ಕೊಳುಗುಳವನು ಗೆದ್ದು ತುರಗವತರುವ |
ಛಲದಂಕನಹ ನೋಡು ನಿಜವಿದುದೇವ ||೨೫೧||
ರಾಗ ಕಾಂಭೋಜಿ ಏಕತಾಳ
ಮಾರುತಾತ್ಮಜ ರಣಧೀರ ಕೇಳಯ್ಯ |
ಕ್ರೂರಕರ್ಮಿಗೆ ಪರಿಹಾರ ಪೇಳಯ್ಯ || ಪಲ್ಲವಿ ||
ಭೂರಿ ಗರ್ವದಿ ಭಾಷೆ | ದೋರಿಕಾದಾಡಿ ಸೋ
ತೀರೀತಿ ಬರಲು ಶ | ರೀರಖಂಡನೆಯೂ |
ಸೇರಿತು ಸಾಕುವಿ | ಚಾರ ಸಹಸವಿರೆ |
ವಾರುಹವನು ತಾರೊ | ವೀರ ನೀನೆಂದು ||೨೫೨||
Leave A Comment