ಭಾಮಿನಿ
ಆ ಸಮಯದಲಿ ಯೌವನಾಶ್ವ ಮ |
ಹೀಶನಾಳುಗಳಾ ಹಯವನತಿ |
ತೋಷದಿಂ ನೀರ್ಗುಡಿಸೆ ನಗರವ ಪೊರಡಿಸುತ ಬರಲು ||
ಆ ಸಮೀರಜನೀಕ್ಷಿಸುತಲಿ |
ನ್ನೇಸುಧನ್ಯನೊತಾನೆನುತಲಿರ |
ಲಾಸಹಸಿಯಡಿಗೆರಗಿ ನುಡಿದನು ಮೇಘನಾದಭಟ                   ||೧೦೩||

ರಾಗ ಕೇತಾರಗೌಳ ಝಂಪೆತಾಳ
ಜೀಯ ಬಿಡು ಮನದೆಣಿಕೆಯ | ಮದ್ಬಲುಹಿ |
ನಾಯತವ ಪರಿಕಿಸಯ್ಯ ||
ನೋಯದೆಳ್ಳಿನಿತು ಮನದೀ | ಸಂತಸದಿ ||
ನೀಯೆನ್ನ ಕಳುಹು ಜವದೀ              ||೧೦೪||

ತುರಗವನು ತಂದು ನಿನ್ನ | ಪಾದಪಂ |
ಕರುಹಕೊಪ್ಪಿಸದಡೆನ್ನ ||
ಪಿರಿದುಶಪಥವನು ಕೇಳು | ಬರಲೆನಗೆ |
ವರಪಂಚಪಾತಕಗಳು                   ||೧೦೫||

ಗಗನಪಥಮಂ ಪಿಡಿಯುವೆ | ಮಾಯೆಗಳ |
ನುಗಿದಶ್ವಮಂ ಸೆಳೆಯುವೆ ||
ನಗಧರನೆ ಸಾಕ್ಷಿಯೆನುತ | ತಾಕೈಯ |
ಮುಗಿದು ಬೀಳ್ಕೊಂಡನತ್ತ              ||೧೦೬||

ವಾರ್ಧಕ
ಅರಸ ಕೇಳಾ ಮೇಘನಾದನಿಂತಲ್ಲಿಂದ |
ಭರದಿಚಿಗಿದಂಬರಕೆ ಮಾಯೆಯಂ ಬೀಸಿ ಘನ |
ತರವರುಷ ಸುರಿಸಿದಂ ಕವಿಸಿದಂ ಹರಿಯಕಾಹಿನವರ್ಗೆ ಕತ್ತಲೆಯನು ||
ತರಹರಿಸಿ ಬಲಬೆದರಿ ಪರಿದುದೆಣ್ದೆಸೆಗಾಗ |
ಧರೆಗಿಳಿದು ಹೈಡಿಂಬ ದಿವ್ಯಾಶ್ವಮಂ ಕೊಂಡು |
ಸರಿದನಾಗಸಕದಂ ಕಂಡು ಕಡುಗಲಿ ಭಟರು ತಡೆದೆಂದರತಿರೌದ್ರದಿ       ||೧೦೭||

ರಾಗ ಮಾರವಿ ಏಕತಾಳ
ಫಡಫಡನಿಲುನಿಲು | ಕೆಡುಕ ಖಳಾಧಮ | ಅಡಿಯಿಡದಿರುಮುಂದೆ
ಬಿಡುಬಿಡುತುರಗವ | ಕಡಿವೆವು ಶಿರವನು | ಮಡಿಯದಿರೆಲೊ ಹಂದೆ         ||೧೦೮||

ಯೆನಲೆಂದನು ಸಿಂ | ಹನ ಕೊಲಲಾ ವಾ | ರಣನಿಧಿರಾದಂತೆ ||
ಫಣಿಕುಲ ಗರುಡನ | ಕೆಣಕಿದೊಲಾಯ್ತಿಂ | ದಿನ ನಿಮ್ಮಯ ಮಾತೇ          ||೧೦೯||

ದುರುಳನೆ ನೀನೀ | ಬರಿ ಮಾಯೆಗಳನು | ವಿರಚಿಸುತೆಮ್ಮಿರವ ||
ಅರಿಯದೆ ಬಂದಿಹೆ | ಸರಸವೆ ಧುರವೆಂ | ದಿರದೆಚ್ಚರು ಶರವ ||             ||೧೧೦||

ಬರುವಶರಂಗಳ | ತರಿದೆಂದನು ನಿ | ಮ್ಮರಸನ  ಭಟರೊಳಗೆ ||
ಧುರಧೀರರು ಮೇ | ಣಿರುವರೊ ನೀವೆದಿ | ಟ್ಟರೊ ಪೇಳುವದೆನಗೆ           ||೧೧೧||

ರಾಗ ಕಾಂಭೋಜಿ ಝಂಪೆತಾಳ
ಎಂದು ಹೈಡಿಂಬಿತಾ | ಮುಂದ್ವರಿಯಲೆಂದರೆಲೊ |
ಮಂದಮತಿ ನೀ ಕಪಟದಿಂದ ||
ಬಂದೆಮ್ಮಹಯವ ಕಳ | ವಿಂದಲೊಯ್ದಿಹೆ ನಿನ್ನ |
ನಿಂದುಳುಹೆವೆಂದೆಚ್ಚರಾಗ              ||೧೧೨||

ಪೊಡೆದ ಶರಗಡಣವನು | ಕಡಿದೊಡನೆ ಕೂರಸಿಯ |
ಪಿಡಿದು ಬಹುಭಟರುಗಳ ಸದೆದು ||
ಎಡಗೈಯ ಹಯವನಳ | ವಡಿಸಿ ಬಂದನಿಲಸುತ |
ನಡಿಗೊಪ್ಪಿಸಿದನು ಕೇಳಿತ್ತ              ||೧೧೩||

ತುರಗರಕ್ಷೆಯೊಳಿರ್ದ | ಚರರು ಮಾನಸದೊಳೀ
ಪರಿಯ ಭಂಗದಿ ನೊಂದು ಬಳಿಕ ||
ದೊರೆ ಯೌವನಾಶ್ವಗಿದ | ನರುಹುವೆವೆನುತ್ತ ಬಂ |
ದರು ಪಟ್ಟಣಕ್ಕೆ ದುಃಖಿಸುತ                        ||೧೧೪||

ಭಾಮಿನಿ
ಇತ್ತ ಭದ್ರಾವತಿ ಪುರದಿ ವರ |
ಧಾತ್ರಿ ಪತಿಯಹ ಯೌವನಾಶ್ವನು |
ಅತ್ಯಧಿಕ ವೈಭವದಿ ಸಂತಸದೊಳಗಿರುವ ಸಮಯ ||
ಮತ್ತೆ ನಡನಡುಗುತ್ತ ಬಂದು ಚ |
ರರ್ತವಕದಿಂ ಗೋಳಿಡುತ ಮಣಿ |
ಯುತ್ತ ಬಿನ್ನೈಸಿದರು ನಡೆದಿಹ ಪರಿಯನರಸಂಗೆ                     ||೧೧೫||

ರಾಗ ಸಾರಂಗ ಅಷ್ಟತಾಳ
ಲಾಲಿಸಿ ಕೇಳೊಡೆಯ | ನಾವೆಂಬುದ |
ಏಳು ಸಂಗರಕೆ ಜೀಯ ||
ಪೇಳಲೇನರಿಗಳ | ಧಾಳಿಯಾಗಿದೆ ಬಂದು |
ಗಾಳಿಯಂದದದೊಳಿಂದು | ಖೂಳನೋರ್ವನು ನಿಂದು             ||೧೧೬||

ಅವನಿಪನೀ ಮೋಹದಿ | ಪಾಲಿಪ ತುರ |
ಗವನು ನೀರ್ಗುಡಿಸಲೈದಿ ||
ಬವರವಾಗಿಹುದುದಾ | ನವಗೆ ಸೋತೆವು ನಾವು |
ಕವಿಸಿಮಾಯವನು ಹ | ಯವನೊಯ್ದ ನಿಮಿಷದಿ                     ||೧೧೭||

ಭಾಮಿನಿ
ಭೃತ್ಯರೆಂದುದ ಕೇಳಿ ಮನದಲಿ |
ಪೃಥ್ವಿಪಗೆ ರೋಷಾಗ್ನಿ ಧಗಧಗಿ |
ಸುತ್ತ ಬರೆಕೊನೆ ಮೀಸೆಯಲುಗಿಸುತೌಡನೊಡಗಟ್ಟಿ ||
ಮತ್ತೆ ಖಡ್ಗವ ಜಡಿದು ಹೂಂಕರಿ |
ಸುತ್ತ ಪೊಸತಿದು ಬಂತೆನುತಸಚಿ |
ವೋತ್ತಮರ ಕರೆಸುತ್ತ ತಾನಿಂತೆಂದನಾಕ್ಷಣದಿ                        ||೧೧೮||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಏನಿದಚ್ಚರಿ ಪೊಸತಿದಹ ನ | ಮ್ಮೀ ನಗರ ಕೈತಂದನಾವನು |
ಕಾಣದಂದದೊಳೊಯ್ದನಶ್ವವ | ಹೀನ ಬಲನು                        ||೧೧೯||

ಹುಲುಭಟನ ಕಲಹದಲಿ ಸೋತರು | ನೆಲನಧಿಪರೆನುತಾಡಿ ನಗುವರು |
ಫಲವಿಹುದೆ ನಾವ್ ಕ್ಷತ್ರಿಯರ ಕುಲ | ದೊಳಗೆ ಜನಿಸಿ              ||೧೨೦||

ತುಂಬಿಮರಿ ಸಂಪಿಗೆಯ ಸೌರಭ | ಕಂ ಬಯಸಿ ಬಂದುದಿದು ನಾನೇ |
ನೆಂಬೆಪರಿಕಿಸ ಬೇಹುದವನಾ | ಡಂಬರವನು             ||೧೨೧||

ಹರವಿರಿಂಚಿ ಬಲಾರಿ ಮುಖ್ಯರ | ಮರೆಯ ಹೊಕ್ಕರು ಬಿಡೆನು ಖೂಳನ |
ತರಿದು ಶೈಮಿನಿಗಟ್ಟುವೆನುನಾ | ನರೆನಿಮಿಷದಿ                       ||೧೨೨||

ವೀರ ಕುವರ ಸುವೇಗ ತ್ವರಿತದಿ | ನೀ ರಣಾಗ್ರಕೆ ಪೊರಡೆನುತಲಾ |
ಧಾರಿಣೀಪತಿ ಹೊಸಿ ದುಂದುಭಿ | ಭೇರಿಗಳನು                        ||೧೨೩||

ಭಾಮಿನಿ
ಧುರಕೆ ಪೊರಡಿಸಿ ಸರ್ವಸೇನೆಯ |
ಕರಿತುರಗ ರಥಸಹಿತಲಾಕ್ಷಣ |
ಪರಿಕಿಸುವೆ ಹಯಚೋರನಾತನ ತೋರ್ಪುದೆಂದೆನುತ ||
ಭರದಿ ಧನುಶರವಿಡಿದು ರಥದೊಳು |
ಬರಲು ಕಂಡಾ ಕರ್ಣಸುತ ಬಿ |
ಲ್ದಿರುವನೊದರಿಸಿ ಸಮರಕನುವಾಗಲ್ಕೆ ನೃಪನುಡಿದ                ||೧೨೪||

ರಾಗ ಭೈರವಿ ಅಷ್ಟತಾಳ
ಧುರಕೆ ಬಂದಿದಿರಾಗಿರ್ಪೆ | ನೀನಾರೆಲೋ | ತರಳರಂದದಲಿ ತೋರ್ಪೆ ||
ತರವಲ್ಲ ನಿನಗೆ ಸಂ | ಗರ ಬೇಡ ಸಾರಿದೆ | ತುರಗ ಬಿಟ್ಟತ್ತ ಸಾರು                      ||೧೨೫||

ಸೆಣಸಲಾರಾದಡೇನು | ಬಿಡುವನಲ್ಲ | ಕರಿ ಹಿರಿದಾದಡೇನು ||
ಮರಿ ಸಿಂಹವಂಜಿ ಹಿಂ | ಜರಿಯುವುದೇ ನಿನ್ನ | ಪರಿಕಿಸಿ ಬೆದರುವೆನೆ       ||೧೨೬||

ಅನುವರಕೆನ್ನೊಡನೆ | ನಿಲ್ಲುವ ಭಟ | ರನು ಜಗದೊಳಗೆ ಕಾಣೆ ||
ವಿನಯದಿ ಶಿಶುವೆಂದ | ಡಿನಿತುಗರ್ವವೆಯೆಂದು | ಜನಪ ಶರವೆಚ್ಚನು      ||೧೨೭||

ತರಿದು ಶರೌಘವನು | ಭೂಪನ ರಥ | ತುರಗ ಸಾರಥಿಗಳನು ||
ಭರದಿ ಕೆಡಹೆ ಪೊಸರಥ ವೇರುತಸ್ತ್ರವ | ಸುರಿಸೆ ಕರ್ಣಜ ಖಂಡಿಸೆ          ||೧೨೮||

ವಾರ್ಧಕ
ಜನಪಾಲ ಬಳಿಕ ಕಲಿಕರ್ಣಜನ ಮೇಲೆ ಮಹ |
ಮುನಿಸಿನಿಂದನಲಾಸ್ತ್ರವೆಸೆಯೆ ವರುಣಾಸ್ತ್ರದಿಂ ||
ತಣಿಸಲುರಗ ಕಳಂಬವೆಚ್ಚಡದ ತರಿದ ಗರುಡ ಕಳಂಬದಿಂ ತ್ವರಿತದಿಂ ||
ಕ್ಷಣದಿ ತಿಮಿರವ ಮುಸುಕೆ ದಿನಪನಿಂ ಪರಿಹರಿಸೆ |
ಘನಶರವನೆಸೆಯಲದನನಿಲನಿಂ ಚದುರಿಸುತ |
ಧನುವ ಝೇಂಕರಿಸುತಿಹ ರವಿಮೊಮ್ಮನಂ ಕಂಡು ಕ್ಷಿತಿಪಗರ್ಜಿಸುತೆಂದನು           ||೧೨೯||

ರಾಗ ಕಾಂಭೋಜಿ ಝಂಪೆತಾಳ
ಪೂತುರೇ ತರುಣಮಂತ್ರಾಸ್ತ್ರ ಪ್ರತೀಕಾರ |
ಚಾತುರ‍್ಯಮುಂಟೆಲಾ ನಿನಗೆ ||
ಆತುರವಿದೇಕೆ ತವ | ತಾತ ಮುತ್ತಾತರ‍್ಯಾ |
ರೈತಿಳುಹು ಮೆಚ್ಚಿದೆನು ಕೊನೆಗೆ                  ||೧೩೦||

ಶರಮುಖದಿ ಕಾಣಲಿಲ್ಲವೆ ಕರ್ಣ ಕಮಲ ಹಿತ |
ಕರರವರ ನಾನುಸುರಬಹುದೆ ||
ಧುರದಿ ಪಿತ ಮುತ್ತಯ್ಯರನು ಕೇಳ್ವೆ ಪ್ರಾಜ್ಞನೀ |
ನರಿತುಕೊಪರೋಕ್ಷದಿಂ ಮುಂದೆ                  ||೧೩೧||

ಭಾಪುರೇ ಬಾಲಕ ಪ್ರ | ತಾಪಿ ನೀನಪ್ಪೆಲೇ |
ಸೀ ಪ್ರಕಾರದ ಶರಾವಳಿಯು ||
ನೀ ಪ್ರಯೋಗಿಸಲು ದಿಟ | ವೈ ಪರೀಕ್ಷಿಸೆನುತ್ತ |
ಭೂಪ ತೆಗದೆಚ್ಚ ಕೂರ್ಗಣೆಯ                     ||೧೩೨||

ಸಾಕಾಗದೀಶರಂ | ನಾಕಡಿದೆನದ ನೋಡು |
ನೂಕಸ್ತ್ರನಿಕರವನು ಭರದಿ ||
ಯೀ ಕಠಿಣ ಕಣೆಯ ಕೊಳ್ಳೆಂದೆಚ್ಚಡಾಕ್ಷಣದಿ |
ಭೂಕಾಂತ ಮೂರ್ಛೆಯಂ ತಳೆದ                 ||೧೩೩||

ಭಾಮಿನಿ
ಧರಣಿಪತಿ ಮೂರ್ಛೆಯೊಳಿರಲು ಕಂ |
ಡರಿ ನಿವಹ ಮುಸುಕಲು ವೃಷಧ್ವಜ ||
ತರಿತರಿದು ತಾನೊಟ್ಟಿ ನಿಂದಿರೆ ಬಸವಳಿದ ನೃಪನ ||
ಪರಿಕಿಸುತ ರಥವಿಳಿದು ಧನುತರ |
ವಿರಿಸು ತವನೆಡೆಗೈದಿ ತಾನು ಪ |
ಚರಿಸಿ ನುಡಿಯಲು ನುಡಿಯದಿರಲಿಂತೆಂದ ತನ್ನೊಳಗೆ              ||೧೩೪||

ರಾಗ ಕೇತಾರಗೌಳ ಅಷ್ಟತಾಳ
ಅರಸನೇಳನಿದ್ಯಾಕೆ | ಧುರಪರಿಶ್ರಮದಿಂದ | ಧರೆಯೊಳಗೊರಗಿರುವ ||
ವಿರಚಿದೆನು ಮೂರ್ಛೆ | ಪರಿಹಾರವಪ್ಪಂತೆ | ಪರಿಪರಿಯುಪಚಾರವ         ||೧೩೫||

ಸತ್ಯವದೆನಗಿರ್ದೊಡಾಂ ಧೀರನಾದ ಡಾ | ದಿತ್ಯಂಗೆ ಪೌತ್ರನಾಗಿ ||
ಮತ್ತೆನ್ನತಾತಂಗಪತ್ಯತಾನಾದೊಡೀ | ಧಾತ್ರೀಶನೇಳಲೆಂದ                 ||೧೩೬||

ಚಿತ್ತದಿ ಪಗೆಮಾಳ್ಪ | ಕೃತ್ಯವ ಬಿಟ್ಟು ಬ | ಳಲ್ಕೆಗೌಚಿತ್ಯಮಾದ ||
ಉತ್ತಮ ರೀತಿಯಿಂ | ದಪ್ಪಂತೆ ಸಂತೈಸಿ | ಪೃಥ್ವಿಪಾಲಕನಂದು             ||೧೩೭||

ವಾರ್ಧಕ
ಪೊಡವಿಪತಿ ಬಳಿಕ ಕಣ್ದೆರೆದು ಮೈಮುರಿದೆದ್ದು |
ಎಡಬಲವ ನೋಡುತಂ ಚೇತರಿಸುತಿರ್ಪೆಡೆಯೊ |
ಳೊಡನೆ ಕರ್ಣಾತ್ಮಜಂ ಮುನ್ನತಾನಿರ್ದ ಪ್ರದೇಶಕೈತಂದು ನಿಂದು ||
ಎಡಗೈಯ ಕಾರ್ಮುಕವನೊದರಿಸುತ ಬಾಣಮಂ |
ಪಿಡಿದು ತಿರುವುತ್ತಲಾರ್ದೆಸೆವ ತೆರದಿಂದ ಗುಡು |
ಗುಡಿಸುತಿರೆ ನೃಪನಿತ್ತ ತನ್ನವರ ಕಾಣದಿಂತೆಂದ ಮನನಾಚುತಂದು                    ||೧೩೮||

ರಾಗ ಸಾಂಗತ್ಯ ರೂಪಕತಾಳ
ಸಾಕಿನ್ನುಧುರದ ಹಂಬಲವೆನಗೇಕೆ ಮ |
ತ್ತೀ ಕುಮಾರನೊಳು ಪೌರುಷವು ||
ಸೋಕಲರಿಯದೆನ್ನ | ಲೋಕದಿ ಜೈಸಿದ |
ರಂ ಕಾಣೆನಿಂದಿನವರೆಗೆ                 ||೧೩೯||

ಜನಿಸಿ ಕ್ಷತ್ರಿಯರೊಳು | ರಣಕೆ ಹಿಮ್ಮೆಟ್ಟಲು |
ಘನವಾದ ಕೊರತೆಯಾದಪುದು |
ಧನುವೆತ್ತಲೆಂತುಯಿ | ನ್ನನುವರ ಗೊಡಲೆಂದು |
ಯೆನಗೀತನೊಳು ಸಾಧ್ಯವಹುದೆ                 ||೧೪೦||

ಕಂದನೀತನು ಗುಣ | ವೃಂದನಾಗಿಹ ತೇಜ |
ದಿಂದೊಪ್ಪುತಿಹ ರವಿಯಂತೆ ||
ಮುಂದೀತನೊಳು ವೈರ | ವೆಂದಿಗು ಸಲದೆನು |
ತಂದು ವೃಷಧ್ವಜಗೆಂದ                  ||೧೪೧||

ರಾಗ ರೇಗುಪ್ತಿ ತ್ರಿವುಡೆತಾಳ

ಭಳಿರೆ ಮೆಚ್ಚಿದೆನು ವೀರ | ಕರಚಮತ್ಕಾರ | ಗಳಿಗಾಹ ಸರಳಸಾರ ||
ಬಲುಭುಜ ಸತ್ವಕಿ | ನ್ನಿಳೆಯೊಳೆಣೆಯಗಾಣೆ |
ಕಲಹದೊಳೆನ್ನನು | ಗೆಲಿದ ಕಾರಣದಿಂದ                   ||೧೪೨||

ಪೆಸರದೇನುಸುರೆನ್ನೊಳು | ತಾತನದಾವ | ವಸುಧೇಶ ರಿರ್ಷನೊಳು ||
ಪುಸಿಯಲ್ಲ ತವಶೀಲ | ಕೆಸೆವ ವಿಕ್ರಮಗ |
ಪಸರಿಸಿ ಲೋಕದಿ | ಜಸವ ಪಡೆವಬಾಲ                   ||೧೪೩||

ಧರೆಯೊಳಗತಿ ಖ್ಯಾತಿಯ | ಪೊಂದಿಹಚೆಲ್ವ || ತುರಗವೇತಕೆ ಪೇಳಯ್ಯ ||
ಭರಿತ ಸಾಹಸಿನಿನ್ನೊ | ಳರಿಯದೆ ಹಳಚಿದೆ |
ಮರಿದುಗೈದಿಹ ತಪ್ಪ | ನಿರದೆ ಕ್ಷಮಿಸು ಕ್ಷಿಪ್ರ               ||೧೪೪||

ರಾಗ ಜಂಜೂಟಿ ಅಷ್ಟತಾಳ
ಧರಣೀಶ ಕೇಳೆನ್ನ ನುಡಿಯ | ಸರ | ಸಿರುಹ ಬಾಂಧವ ದಿನಮಣಿಯ ||
ತರಳನು ಕರ್ಣನಾತನನು ಕೇಳ್ದರಿವೆಯ ||
ಧುರಪರಾಕ್ರಮಿಯವನ ನಿಜ ಸುತ | ವರ ವೃಷಧ್ವಜನಹೆನು ಲೋಕದಿ      ||೧೪೫||

ಭರತವಂಶದ ಧರ್ಮಸುತನು | ಮಖ | ವಿರಚಿಪನದಕೆ ಶ್ರೀವರನು ||
ಮರುತನಂದನನ ಈ ಹರಿಗೆಂದು ಕಳುಹಲು ||
ಹರುಷದಿಂದವನೊಡನೆ ಬಂದಿಹೆ | ಸರಸವಲ್ಲಿದು ಹದನವಿನಿತೈ             ||೧೪೬||

ರಾಗ ಕಾಂಭೋಜಿ ಏಕತಾಳ
ದಿನಪತಿ ಮೊಮ್ಮಮು | ನ್ನೆನಗರುಹಿಸದಾದೆ |
ಮನವಿಟ್ಟನೇ ಧರ್ಮ | ಜನು ಘನ ಮಖಕೆ ||
ಜನರು ಧರ್ಮದ ರೂಪ | ನೆನುವರವನನಿನ್ನು |
ಜನಪಗೆ ಹಯವಿದೊಂ | ದನು ನೀನೊಯ್ಯುವುದೆ                    ||೧೪೭||

ಇಂದಿರೆಯರಸನ ಪದಕೆ ಸರ್ವಸ್ವವ |
ತಂದೊಪ್ಪಿಸುವೆ ನಾನೆ | ಬಂಧುಗಳೊಡನೆ ||
ಸಂದೇಹ ಬಿಡುವಾಯ್ತು | ನಂದನನೆಲ್ಲಿಹ |
ನೆಂದರೆ ವೃಷಕೇತ | ನಂದು ಪೇಳಿದನು                    ||೧೪೮||

ವಾರ್ಧಕ
ಧರಣಿಪತಿ ಕೇಳಚ್ಯುತನ ಪದಕೆ ಮನವಿಟ್ಟು |
ಸರ‍್ವಸ್ವಮೊಪ್ಪಿಸುವನಾವನವಗಾ ಪಾಂಡು |
ತರಳರೊಳಗೆರಡಿಲ್ಲವವರ ಸಖ್ಯವದಾಗೆ ಹರಿಯೊಲಿದನದರಿಂದ ನೀಂ ||
ಮರುತ ಸುತನಂ ಕಾಂಬುದೊಳಿತೆನಲು ಸಮ್ಮತಿಸೆ |
ತರಣಿ ಮೊಮ್ಮಂ ಸಹಿತರಥವಡರಿ ಭೀಮನಿಹ |
ಪೊರೆಗಾಗಿ ಬರುತಿರೆ ವೃಷಧ್ವಜನ ಪೊಗಳಿ ಸುಮನಸರು ಸುಮಮಳೆಗರೆದರು       ||೧೪೯||

ಕಂದ
ಇತ್ತಲು ಧುರಕೆನುತಲಿ ಖತಿ |
ವೆತ್ತೈತರುವ ಸುವೇಗನ ಕಾಣುತಲಾಗಂ ||
ಚಿತ್ತದಿ ನಲಿವುತ ಮಾರುತಿ |
ಸತ್ವದಿ ತಡೆಯಲ್ಕವ ಗರ್ಜಿಸುತಿಂತೆಂದಂ                 ||೧೫೦||

ರಾಗ ಮಾರವಿ ಏಕತಾಳ
ಆರೆಲೊ ಹುಲುಭಟ | ಚೋರತನದಿ ಮಮ | ವಾರುಹವದನೊಯ್ದ ||
ಭೂರಿಪರಾಕ್ರಮಿ | ತೋರಾತನ ಶಿರ | ಹಾರಿಸುವೆನು ಕ್ಷಣದಿ                  ||೧೫೧||

ತೋರುವೆನೈ ಯಮ | ನೂರನು ನಡೆನಡೆ | ಸಾರೈತವ ಪುರಕೆ ||
ಸಾರವಹುದೆ ಸುಕು | ಮಾರನೆ ಧುರವಿದು | ಪೌರಷವಿನಿತೇಕೆ                ||೧೫೨||

ಧಿರುರೆ ತರಳತನ | ವಿರದು ಶರಕೆ ತವ | ಕೊರಳರಿದೀಕ್ಷಣದಿ ||
ಮರುಳುಗಣಂಗಳ | ನೆರವಿಗೆ ಹಬ್ಬವ | ವಿರಚಿಸುವೆನು ಭರದಿ                ||೧೫೩||

ಇದಕೊ ಗದಾದಂ | ಡದ ಹತಿಯಂ ಗೊಂ | ಬುದಕಿದು ಸುಮುಹೂರ್ತ ||
ಮದಮುಖತನ ನಡೆ | ಯದು ಬುದ್ಧಿಯ ಕೇ | ಳದೆ ನಿಲುವೆಯಾ ಧೂರ್ತ  ||೧೫೪||

ಕನಲಿ ಸುವೇಗನು | ಕಣೆಗಳನೆಚ್ಚಡೆ | ಗಣಿಸದೆ ಮರುತಜನು ||
ಘನಗದೆಯಿಂದ ಪೊ | ದನು ನೃಪಸುತನನು | ಸೆಣಸಿದರವರಿನ್ನು           ||೧೫೫||

ವಾರ್ಧಕ
ನರನಾಥ ಲಾಲಿಸೀ ತೆರದಿ ಪವನಜ ಸುವೇ |
ಗರು ಕಾದಿ ಜರೆದಾಡುತಿರೆ ಕಂಡು ವೃಷಕೇತ |
ವರಯೌವನಾಶ್ವಂಗೆ ಹರುಷದಿಂ ತೋರಿದಂ ಧರಣೀಶ ನೋಡು ನಿನ್ನ ||
ತರಳನೊಡನುಗ್ರದಿಂದಲಿ ಕಾಳಗದೊಳಿರ್ಪ |
ವರಸುಧಾಕರವಂಶ ಶರಧಿಶಶಿಯೆನಿಪ ಭೂ |
ವರ ಯಮಜನನುಜಸುಗುಣೋದ್ದಾಮ ರಣಭೀಮ ಭೀಮನೀತನೆಯೆಂದನು          ||೧೫೬||

ರಾಗ ಮಧ್ಯಮಾವತಿ ಏಕತಾಳ
ತರಣಿಪೌತ್ರನಮಾತಿಗಿಳಿದು ರಥವನು |
ಧರಣಿಪಸುತನೆಡೆಗೈದಿ ಪೇಳಿದನು ||
ಹರಿತಾನಟ್ಟಿದನಿವರನು ಮಖಹಯಕೆ |
ಧುರಬೇಡ ಬಿಡು ಸಾಕು ರೋಷವಿನ್ನೇಕೆ                    ||೧೫೭||

ಇಂದಿರೆಯರಸಗೆಮ್ಮಯ ಸರ್ವಸ್ವವನು |
ಚಂದದೊಳೊಪ್ಪಿಸೆ ಕಂದ ಕೇಳಿನ್ನು ||
ಸಂದೇಹವಿಲ್ಲೆನುತನಿಲಜಗಂದು |
ವಂದಿಸೆ ವೃಷಕೇತನೆಂದನು ಬಂದು             ||೧೫೮||

ರಾಗ ಸುರುಟಿ ಏಕತಾಳ
ಲಾಲಿಪುದೆಲೆ ತಾತ | ಸದ್ಗುಣ | ಲೋಲ ಪವನಜಾತ ||
ಪಾಲಿಸೆನುತ ತವ | ಕಾಲಿಗೆ ತನ್ನಯ |
ಮೌಳಿಯ ಚಾಚಿಹ | ಭೂಲೋಲನಪರಿ                     ||೧೫೯||

ನೀ ಮೊದಲೆನಗೊಲಿದು | ತೋರಿದ | ಸೀಮೆಯಧಿಪನಿಂದು ||
ಕಾಮಪಿತನ ಕಾಂ | ಬಾಮನವಿಟ್ಟಿಹ |
ಪ್ರೇಮದಸುತನಿವ | ನೈ ಮನ್ನಿಸುನೀ                        ||೧೬೦||

ತರಳನ ನುಡಿಕೇಳಿ | ಮತ್ತಾ | ಮರುತಜ ಮುದತಾಳಿ ||
ಧರೆಯಧಿಪನನುಪ | ಚರಿಸುತ ನೆಗಹಲು |
ಸರಸದೊಳಾನೃಪ | ವರನಿಂತೆಂದನು                      ||೧೬೧||