ಭಾಮಿನಿ
ಕ್ಷೋಣಿಪತಿ ಕೇಳಾ ಪ್ರವೀರನ |
ಬಾಣದಿರಿತದಿ ತನು ಬಳಲಿ ಸುಮ |
ಬಾಣ ಮೈಮರೆಯಲ್ಕೆ ಸೂತವರೂಥವನುತಿರುಹೇ ||
ಕಾಣುತುಗ್ರನೊಲಾ ವೃಷಧ್ವಜ |
ತಾನಧಿಕ ರೋಷದಲಿ ನಡೆತಂ |
ದಾನರಾಧಿಪನಣುಗನೊಡನಿಂತೆಂದ ಪೌರುಷದಿ                     ||೩೬೮||

ರಾಗ ಮಾರವಿ ಏಕತಾಳ
ಕದನಾಗ್ರಣಿ ನೀ | ನಿದಿರಾಗೆಲೊ ನಿಲು | ಮದನನ ಸೋಲಿಸಿದ ||
ಅಧಿಕ ತರದ ಗ | ರ್ವದಿ ನಿಂದಿರೆ ಬಿಡೆ | ನಿದು ದಿಟ ನೋಡೆಂದ             ||೩೬೯||

ಕರಕೌಶಲಗಳ | ನರಿಯದವರು ಸಂ | ಗರಕಿದಿರಾಗುವರೆ ||
ದೊರೆನೀಲಧ್ವಜ | ತರಳ ಪ್ರವೀರನೊ | ಳೊರೆಯದಿರೈ ಬರಿದೆ               ||೩೭೦||

ದಿನಕರ ನಂದನ | ನಣುಗ ವೃಷಧ್ವಜ | ನೆನಿಸುವೆ ರಿಪುವೆನಿಪ ||
ಮನಸಿಜಗಾನೆ ವೃಷಧ್ವಜನಹೆನೈ | ಗಣಿಪೆನೆ ತವ ದರ್ಪ                       ||೩೭೧||

ರವಿ ಮೊಮ್ಮನೆ ನೀ | ನವನಿಯೊಳಿರೆ ವಿಹಿ | ತವೆ ಪಿರಿಯವರಿರುವಂ ||
ಭವನ ಕೊಡನೆ ಪೋ | ಗುವ ಮನವಿರ್ಪುದೆ | ಬವರದಿ ತೊರೆದಸುವ       ||೩೭೨||

ತುರಗವ ಬಿಡದಿರೆ | ತರಿದು ನಿನ್ನ ಹಿರಿ | ಯರ ಸಹಿ ತೀಕ್ಷಣದಿ ||
ತೆರಳಿಸುವೆನು ನೋ | ಡರೆ ನಿಮಿಷದೊಳೆನು | ತಿರದೆಚ್ಚನು ಶರವ         ||೩೭೩||

ರಾಗ ಘಂಟಾರವ ಅಷ್ಟತಾಳ
ಭಳಿರೆ ಸಾಹಸಿ ಹುಲು ಕಣೆಗಳನೆಚ್ಚು |
ಫಲವಿಹುದೆ ಯೆನು | ತಲಿ ಪ್ರವೀರನು | ಮುಳಿದು ತಾ ಮುರಿದಿಟ್ಟನು       ||೩೭೪||

ಆತುಕೋ ನೀನಿನ್ನಾದಡೆನುತ ವೃಷ |
ಕೇತು ಮುಸುಕಲು ತರಳ ತತಿಗಳ | ನಾತತೂಕ್ಷಣ ಖಂಡಿಸೇ                ||೩೭೫||

ಭಾಮಿನಿ
ವೀರತನದಿ ಪ್ರವೀರ ಕರ್ಣ ಕು |
ಮಾರರೀರ್ವರು ಖತಿವಿಡಿದು ಕೈ |
ಮೀರಿ ನಿಶಿತ ಶರೌಘಗಳ ನವರೋರ್ವರೋರ್ವರ್ಗೆ ||
ಸೇರಿಸುತಲಿರೆ ಬಳಿಕ ಕರ್ಣಕು |
ಮಾರಕನ ಪಿಂದಿಕ್ಕಿ ಮುಂದಕೆ |
ಸಾರುತಡಹಾಯ್ದೆಂದನನುಸಾಲ್ವಕ ಪ್ರವೀರನೊಳು                  ||೩೭೬||

ರಾಗ ಪಂತುವರಾಳಿ ಮಟ್ಟೆತಾಳ
ಭಳಿರೆ ವೈರಿ ಸುಭಟನಿಲ್ಲೆಲಾ | ಸಂಗರಕೆಯೆನ್ನೊ |
ಳಳುಕಬೇಡ ಸದರವಲ್ಲೆಲಾ                        || ಪಲ್ಲವಿ ||

ಮೊದಲೆ ಮನುಜ ನೀ ನಿನ್ನದರೊಳು | ತರಳನಾಗಿ |
ಕದನವೆಸಗಲಹುದೆ ಭರದೊಳು ||
ಮದನ ಮುಖ್ಯರನ್ನು ಕೊಳಗು | ಳದಲಿ ಗೆಲಿದ ಗರ್ವವಿಳಿಸಿ |
ಕುದುರೆಯನ್ನು ಬಿಡಿಸಿ ನರನ | ಪದಕೊಪ್ಪಿಸುವೆ ಕೇಳು ಕ್ಷಣದಿ                ||೩೭೭||

ದುರುಳ ಗಳಹ ಬೇಡಸುಮ್ಮನೇ | ಕಾಳಗದಿ ನಿನ್ನ |
ಕೊರಳನರಿದು ಮೆರೆಯದಿರುವೆನೇ ||
ತುರಗವನ್ನು ಬಿಡುವನಲ್ಲ | ಬರಿದೆ ಸಾಯಬೇಡ ಜೋಕೆ ||
ತೆರಳು ಪಂಚ ಬಾಣಗಾದ | ಪರಿಯನರಿತು ಶೀಘ್ರದಿಂದ                       ||೩೭೮||

ಬಾಲ ನೀನೆನುತ್ತ ಸಾರಿದೇ | ಮುಂದಿನ್ನು ಬಿಡೆನು |
ತೋಳ ಸತ್ವದೋರದಾಹುದೇ ||
ಕೀಲಿಸುವೆ ಶರೌಘವಿದನು | ತಾಳಿ ಕೊಂಬುದೆನುತಲಸ್ತ್ರ |
ಜಾಲವನ್ನು ಸುರಿಸಲಾ ಭೂ | ಪಾಲನಣುಗ ಸಹಿಸದಾದ                       ||೩೭೯||

ಭಾಮಿನಿ
ಜನಪ ಕೇಳನುಸಾಲ್ವನಸ್ತ್ರದಿ |
ತನು ಬಳಲಿ ಬಳಿಕಾ ಪ್ರವೀರನು |
ಮಣಿರಥದಿ ಮೈಮರೆಯಲರಿ ವಾಹಿನಿಯ ತರಿತರಿದೂ ||
ದನುಜ ಮುಂದೈತರಲು ಕಾಣುತ |
ಲನಿತರೊಳು ನೃಪ ನೀಲಕೇತನು |
ಘನತರದ ರೋಷದಲಿ ದೈತ್ಯಾಗ್ರಣಿಯ ತಡೆದೆಂದ                  ||೩೮೦||

ರಾಗ ಕಾಂಭೋಜಿ ಝಂಪೆತಾಳ
ಎಲವೊ ದಾನವನೆಮ್ಮ | ಬಲವನೆಲ್ಲವನೀನು |
ಗೆಲಿದು ಬಾಲಕನ ಮೂರ್ಛಿಸಿದ ||
ಬಲವನೆನ್ನೊಳು ತೋರು | ಕಲಹದೊಳು ನಾನಿನ್ನ |
ತಲೆಯ ಚೆಂಡಾಡುವೆನು ಕ್ಷಣದಿ                   ||೩೮೧||

ಮಾನವನೆ ಕೇಳು ನೀ | ದಾನವರಿಗೆಂತಹ ಸ |
ಮಾನರೇ ನರರು ಬಿಡುನಿನ್ನ |
ತ್ರಾಣ ಸಲ್ಲದು ಹಯವ | ನೀನೇ ತಂದಿತ್ತೊಡನೆ |
ಕಾಣಿಕೆಯೆನೆಸಗಿದರೆ ಲೇಸು                       ||೩೮೨||

ದುರುಳ ಕೇಳೆಲವೊ ಸಂ | ಗರಕಂಜಿ ಕಪ್ಪವನು |
ತುರಗಸಹ ತೆರುವಡಾ ನರಗೆ ||
ಪರಿಕಿಸಲು ನಿನ್ನಂತೆ | ಬರಿಯ ಹೇಡಿಗಳಲ್ಲ |
ಧುರಧೀರರಾವು ನೋಡೆಂದ                       ||೩೮೩||

ಮರುಳು ಭೂಪಾಲ ನೀ | ಧುರಧೀರನಾದೊಡೀ |
ಸರಳ ಸವಿಗೊಂಬುದೆನುತಂದೂ ||
ಸುರಿಸೆ ಖಳನಸ್ತ್ರವನು | ತರಿದು ನಿಮಿಷಾರ್ಧದೊಳು |
ಧರೆಗೆ ಕೆಡಹಿದನು ದಾನವನಾ                    ||೩೮೪||

ವಾರ್ಧಕ
ಇಳೆಯಧಿಪ ಲಾಲಿಸೈ ಬಳಿಕ ನೀಲಧ್ವಜಂ |
ಫಲುಗುಣನ ಮುಂದೆ ಮದಕರಿಯಂತೆ ಪೊಕ್ಕು ಕೋ |
ಲ್ಗಳನೆಚ್ಚುಸವರಿ ಬೆಟ್ಟದೊಲೊಟ್ಟುತಿರೆ ಕಂಡು ಕಿಡಿಯುಗುಳುತಾಕ್ಷಣದೊಳು ||
ಕಲಿಪಾರ್ಥನಾಹವಸಮರ್ಥ ಗಾಂಡೀವಮಂ |
ಸೆಳೆದಸ್ತ್ರಮಂ ತುಡುಕಿ ಝೇಂಕರಿಸಿ ಹೂಂಕರಿಸು |
ತಲಿಭರದಿ ಸಾಗುತಂ ತಾಗುತಂ ನೃಪನೀಲಕೇತನೊಡನಿಂತೆಂದನು                   |೩೮೫||

ರಾಗ ಸೌರಾಷ್ಟ್ರ ತ್ರಿವುಡೆತಾಳ
ನಿಲ್ಲೆಲವೊ ಮಾಹೀಷ್ಮತೀಪುರ | ವಲ್ಲಭನೆ ಕೇಳಿತ್ತ ಕೊಳುಗುಳ |
ದಲ್ಲಿ ನಮ್ಮಯ ಬಲವರಿದ ಬಲು | ಹಿಲ್ಲಿತೋರು                       ||೩೮೬||

ಸಾಕೆಲವೊ ಗಳಹದಿರು ಸುಮ್ಮನೆ | ಪಾಕಶಾಸನ ಸುತನೆ ನಿನ್ನನು |
ನಾಕಳುಹಿದಪೆ ಶರಮುಖದೊಳಾ | ನಾಕಕಿನ್ನು                       ||೩೮೭||

ಜಡಮತಿಯೆ ಸಾರಿದೆನು ಬೇಗನೆ | ಬಿಡು ಹಯವ ಕಪ್ಪವನು ಸಹ ಕೊಡು |
ಕೊಡದಿರಲು ರಣದೇವಿಗೌತಣ | ಬಡಿಪೆ ನಿನ್ನ             ||೩೮೮||

ಕ್ಷತ್ರಿ ಕುಲಜರು ನಾವೆಲವೊ ಕಲಿ | ಪಾರ್ಥ ನೀನಿದನರಿಯದಾದೆಯ |
ಸತ್ವದಿಂ ಕಟ್ಟಿದೆವು ತುರಗವ | ವ್ಯರ್ಥವಲ್ಲ                 ||೩೮೯||

ಪೂತುರೇ ನೃಪ ನಿನಗನಿತು ಸ | ತ್ವಾತಿಶಯವಿರೆ ಪರಿಕಿಸುವೆ ನೀ |
ನಾತುಕೊಳ್ಳೆನು ತೆಗೆದ ನರಶರ | ವ್ರಾತಗಳನು                      ||೩೯೦||

ಭಾಮಿನಿ
ವಸುಧೆ ಪಾಲಕ ಕೇಳು ಪಾರ್ಥನು |
ಪೊಸಮಸೆಯ ವಿಶಿಖಗಳ ತಾ ತೆಗೆ |
ದೆಸೆದು ಜವದಿಂದರಿಭಟನ ವಕ್ಷವನು ಕೀಲಿಸಲು ||
ಬಸವಳಿದು ಜಾಮಾರ್ಧ ಮೂರ್ಛೆಯೊ |
ಳೆಸೆದು ಮೆಲ್ಲನೆ ಚೇತರಿಸುತಾ |
ಯಸದಿ ಕಣ್ದೆರೆದೊಡನೆ ತನ್ನಲಿ ಮರುಗುತಿಂತೆಂದ                  ||೩೯೧||

ರಾಗ ಸಾವೇರಿ ಏಕತಾಳ
ಶಿವನೆಯಿನ್ನೇನೆಂಬೆನು | ಯೀ ವಿಧಿಯಾಯ್ತು |
ಬವರದಿ ನರನೊಳಾನು ||
ಜವಗೆಟ್ಟೆನಯ್ಯೊಯಿನ್ನು | ಗೆಲ್ಲುವೆನೆಂತು |
ದಿವಿಜೇಂದ್ರತನಯನನೂ               ||೩೯೨||

ಕ್ಷತ್ರಿಪಂಥದಿ ಹಯವ | ಬಂಧಿಸಿ ಧುರಕೆ |
ವ್ಯರ್ಥ ಬೆದರಿ ಕಪ್ಪವ ||
ತೆತ್ತರೆ ಪಾರ್ಥಗಿನ್ನು | ಜೀವಿಸಿ ಮೇಣೀ |
ಪೃಥ್ವಿಯೊಳ್ಕಾರ್ಯವೇನು               ||೩೯೩||

ಘನ ಪರಾಕ್ರಮಿ ವಹ್ನಿಯು | ಜಾಮಾತನೆನ |
ಗಿನಿತರಲೀವಿಧಿಯು |
ಎನಗೊದಗಿತು ನಾಮುಂದೇ | ಬರಿಸುವೆ ಪಾವ
ಕನ ಶೀಘ್ರದಿಂದಯಿಂದೇ               ||೩೯೪||

ಕಂದ
ಜನಪತಿ ಬಳಿಕಾವಹ್ನಿಯ |
ಮನದೋಳ್ ಧ್ಯಾನಿಸುತತಿ ಭಕ್ತಿಯೊಳಿರಲರಿತುಂ ||
ಘನವೇಗದಿ ತಾ ನಡೆತಂ |
ದನಲಂ ಹದನೇನುತ್ತಲಿ ಬೆಸಗೊಳಲೆಂದಂ                ||೩೯೫||

ರಾಗ ಕಾಂಭೋಜಿ ಏಕತಾಳ
ಕೇಳು ಕೃಶಾನು ನಾ | ನಾಳಿದೆನೀರಾಜ್ಯ |
ಪೇಳಲೇನೈಸತ್ವ | ಶೀಲ ಸಂಪನ್ನ ||
ಮೇಲೆ ನಿನ್ನ ಸಹಾಯ | ದಾಳುತನದಿ ನೃಪ |
ಜಾಲಗಣಿಸದಿರ್ದೆ ಜಾಲವಿದಲ್ಲ                    ||೩೯೬||

ಇಂದ್ರನಂದನನಶ್ವ | ಬಂಧಿಸಿ ನಾಕಾದಿ |
ಹೊಂದಿದುದಪಜಯ | ಮುಂದೇನು ದಾರಿ ||
ಬಂಧು ನೀನಾಗಿರ | ಲಿಂದೆನಗೀ ವಿಧಿ |
ಬಂದುದೇನಿದ ಹರಿ | ಸೆಂದರೆ ನುಡಿದ                      ||೩೯೭||

ರಾಗ ಕೇತಾರಗೌಳ ಅಷ್ಟತಾಳ
ಮಾತುಳ ಚಿಂತಿಪು | ದೇತ ಕಿನ್ನಿದಕಿನ್ನು | ಭೀತಿಯ ಬಿಡುಕ್ಷಣದಿ ||
ಶ್ವೇತವಾಹನನ ವಿ | ಖ್ಯಾತಸೈನ್ಯವಪೊಕ್ಕು | ನಾತಡೆದವರುಗಳ                       ||೩೯೮||

ಘನಪರಾಕ್ರಮಿಯರ್ಜುನನ ಬಲಕಾಂತಾರ | ವನು ನಿಮಿಷದೊಳಗಿಂದು ||
ಮುನಿದು ಭಸ್ಮಗೈವೆ | ನನು ಮಾನಿಸದಿರೆಂದು | ಜನಪತಿಗಭಯವಿತ್ತ     ||೩೯೯||

ವಾರ್ಧಕ
ಇಂದು ಕುಲತಿಲಕ ನೀಕೇಳು ಮಾಹೀಷ್ಮತಿ ವ |
ಸುಂಧರಾಧಿಪಗರುಹಿ ಧೈರ್ಯವಂ ಬಳಿಕ ಖತಿ |
ಯಿಂದ ಪೊಕ್ಕಾ ನರನ ಬಲವ ಸುಡತೊಡಗಿದಂ ಸಪ್ತರಸನಂ ರಭಸದಿ ||
ಮಂದಿಗಜರಥವಾಜಿಯೊಂದುಳಿಯದಂತೆ ಹೊಗೆ |
ಯಿಂದುಂಬಿ ಭುಗಿಲೆನುತ ಧಳ್ಳುರಿಯ ಸೂಸಿದರೆ |
ಬೆಂದು ಬೇಗುದಿಯಾಗಿ ಸೀದುಸೀಕರಿಯೋಗಿ ಭಸ್ಮಮಾದುದು ಕ್ಷಣದೊಳು           ||೪೦೦||

ಕಂದ
ಸ್ವಾಹಾಕಾಂತಂ ಪಾರ್ಥನ |
ಮೋಹರವಂ ಸುಟ್ಟುರುಹಲು ಕಂಡೀ ಪರಿಯಂ ||
ಈ ಹದನಚ್ಚರಿ ಮುಂದೇ |
ನಾಹುದೊಯೆನುತಲಿ ಚಿಂತಿಸಿದಂ ಕೌಂತೇಯಂ                    ||೪೦೧||

ರಾಗ ನೀಲಾಂಬರಿ ಝಂಪೆತಾಳ
ಅಕಟಕಟಯಿನ್ನೇನಮಾಳ್ಪೆ | ಧರ್ಮಜನ |
ಮುಖವನಾನಿನ್ನೆಂತುನೋಳ್ಪೆ                     || ಪಲ್ಲವಿ ||

ಧರೆಯರಾಯರನೆಲ್ಲ ಗೆಲಿದು | ಕಪ್ಪವನು |
ತರಲೆನ್ನ ಕಳುಹಿತಾನಂದು | ದೀಕ್ಷೆಯನು |
ಧರಿಸಿರುವನಗ್ರಜನು ಮಖಕಾಯ್ತು ಕುಂದು                 ||೪೦೨||

ಮೂರುಲೋಕದ ಗಂಡ ಪಾರ್ಥ | ಹರಿಹರರ |
ವೀರತನದಿಂದ ಮೆಚ್ಚಿಸಿದಾತನೆನುತ | ಬಿರುದೆನಗೆ |
ಧಾರಿಣಿಯೊಳಿರ್ದುದೀವರೆಗೆ ಪೊಗಳುತ್ತ                    ||೪೦೩||

ಈ ನರಾಧಿಪನ ದೆಸೆಯಿಂದ | ಸೇನೆಗತಿ |
ಹಾನಿಯೊದಗಿತು ಕಾಣೆನೊಂದ | ಬಂದೆಡರ
ನೀನೆ ಪರಿಹರಿಸು ಕರುಣಾಕರ ಮುಕುಂದ                  ||೪೦೪||

ಭಾಮಿನಿ
ಏನಿದದ್ಭುತ ತ್ರಿಭುವನವ ತಾ |
ಹಾನಿಗೈದಪೆನೆನುತ ಪುರಹರ ||
ತಾನೆ ಕಣ್ದೆರೆದುರುಹ ತೊಡಗಿದನೋ ಮಹಾದೇವ |
ಈ ನಿಧಾನವನರಿಯೆ ಸೈನ್ಯವಿ |
ದೇನು ಕಾರಣ ಧರೆಗುರುಳುತಿದೆ |
ತಾನು ಮುನಿದನಿದೇಕೆ ಶಿಖಿಯೆಂದೆನುತ ಯೋಚಿಸಿದ              ||೪೦೫||

ರಾಗ ಸಾಂಗತ್ಯ ರೂಪಕತಾಳ
ಬಂದ ವಿಘ್ನವಹರಿ | ಸೆಂದಗ್ನಿದೇವನ |
ನಿಂದು ಪ್ರಾರ್ಥಿಸುವೆ ಭಕ್ತಿಯಲಿ ||
ಮುಂದೆ ದಾರಿಯಕಾಣೆ | ನೆಂದೆ ದೇವೇಂದ್ರನ |
ನಂದನ ಮನವ ಮಾಡಿದನೂ                     ||೪೦೬||

ಕರದಚಾಪವ ಧರೆ | ಗಿರಿಸಿ ತಾ ಶುಚಿಯಾಗಿ |
ಕರವ ಜೋಡಿಸಿ ದೈನ್ಯದಿಂದ ||
ಶಿರವ ಬಾಗುತ ನೀನೆ | ಪೊರೆಯೆಂದು ನುತಿಗೈದ |
ನಿರದೆ ಮತ್ತನಲ ಸೂಕ್ತದಲಿ                        ||೪೦೭||

ರಾಗ ಸಾರಂಗ ಅಷ್ಟತಾಳ
ಜಯ ಜಯ ಶ್ರೀದಹನ | ಹೇ ಸಪ್ತರಸನ |
ಜಯ ಜಯ ಶ್ರೀದಹನ ||
ಜಯ ಜಯ ತ್ರಿಭುವನ | ಲಯ ಪರಿಪಾಲನ |
ದಯದಿ ಪಾಲಿಪುದೆನ್ನ | ಸದ್ಗುಣರನ್ನ             ||೪೦೮||

ದೇವನೀನೆ ಮುನಿವೆಯ | ಮುಂದೆನ್ನನು |
ಕಾವ ಮಹಿಮರ‍್ಯಾರಯ್ಯ ||
ನಾವೆಸಗುವ ಮಖ | ದಾವರ ಹವಿರ್ಭಾಗ |
ದೇವನಿನಗೆ ನಿನ್ನಿಂ | ದೇವಾಳಿಗಹುದಯ್ಯ                 ||೪೦೯||

ಎನ್ನ ಮೇಲತಿದಯದಿ | ಗಾಂಡೀವಧನು |
ವನ್ನಿತ್ತೆ ನೀನೆ ವನದಿ ||
ನಿನ್ನೊಳುದ್ಭವಿಸಿದ | ಕನ್ಯೆ ಪಾಂಚಾಲೆ ನೋ |
ಡನ್ಯರೆ ನಿನಗೆ ಪ್ರ | ಸನ್ನನಾಗೈದೇವ                        ||೪೧೦||

ಕಂದ
ಕರುಣದಿ ಪಾಲಿಸು ವೈಶ್ವಾ |
ನರ ನೀನೆನ್ನಂ ಜಯ ಜಯವೆನುತಲಿ ಪಾರ್ಥಂ ||
ಪರಿಪರಿಯಿಂ ನುತಿಸುತ್ತಿರೆ |
ಹರುಷದಿ ಮೈದೋರುತ ಪಾವಕನಿಂತೆಂದಂ              ||೪೧೧||

ರಾಗ ಕಾಂಭೋಜಿ ಝಂಪೆತಾಳ
ತರಳ ಮೆಚ್ಚಿದೆ ಸಾಕು | ಶಿರವ ನೆಗಹೆನುತಗ್ನಿ |
ಕರವ ಪಿಡಿದೆತ್ತಿ ಸಂಭ್ರಮದೀ ||
ಮರುಗಲೇಕೈ ಬರಿದೆ | ತುರಗಮೇಧವಿದ್ಯಾಕೆ |
ದುರಿತಹರ ಹರಿ ನಿಮ್ಮೊಳಿರಲು                   ||೪೧೨||

ಅಹುದು ನೀವೆಂಬುದಂ ಮೀರಬಪ್ಪುದೆ ಹರಿಯ |
ಸಹವಾಸವೇ ಸಾಲ್ಗುಜಗದೀ ||
ವಹಿಸುವವರಾರು ಸದ್ಧರ್ಮ ಮಾಧವನಾಜ್ಞೆ |
ಯಿಹುದೆಮಗೆ ಮಖವನೆಸಗುವಡೆ                ||೪೧೩||

ಆತನಪ್ಪಣೆಯೊಳಿ | ನ್ನೀ ತುರಗ ಮೇಧವನು |
ತಾ ತೊಡಗಿದನು ಧರ್ಮಜಾತ |
ನಾ ತೆರಳಿ ಬಂದೆನೀ | ರೀತಿಯಾದುದು ಪೊರೆಯೊ |
ವೀತಿಹೋತ್ರನೆ ಕರುಣವಿರಿಸಿ                      ||೪೧೪||