ರಾಗ ಮಧ್ಯಮಾವತಿ ಏಕತಾಳ

ಲಾಲಿಸಿ ಕೇಳು ಮುರಾರಿ ಮುಕುಂದ | ಲೀಲೆಯಿಂದಿರುಳ್ಕಂಡ ಸ್ವಪ್ನದಾನಂದ || ಲಾಲಿಸಿ  || ಪ ||

ದೇವ ನಿಮ್ಮಡಿಗಳ ಕಂಡೆನು ಶಿವ ಮಹಾ | ದೇವನ ಸನ್ನಿಧಿಗೆ ಪೋಗಿರಲಾಗಿ |
ಆ ವಿಭುವಿನಪ್ಪಣೆಯಿಂದ ಸರಸಿಯೊಳು ಗಾಂ | ಡೀವಧನುವ ಪಿಡಿದು ಕಲಿತೆ ವಿದ್ಯೆಯನು ||೧೦೦||

ಈಶನೆಡೆಗೆ ಬರಲೆನಗಾಗ ಮಂತ್ರೋಪ | ದೇಶವಾದುದು ಸರಳ ಬಿಡುತೊಡುವಂತೆ ||
ಶ್ರೀ ಸದಾಶಿವನನುಗ್ರಹದಲಿ ಪೂರ್ಣವಾಗಿ | ಪಾಶುಪತವು ವಶವರ್ತಿಯಾದುದನು || ೧೦೨ ||

ಎನಲಾ ಮಾತಿಗೆ ನಸುನಗುತಲಚ್ಯುತನೆಂದ | ಘನ ಜಯಕಾರ್ಯಕಾಗಿ ಹರನೊಲವಾಯ್ತು |
ನಿನಗಿನ್ನು ಸರಿಯಾರು ವೈರಿ ಸೈಂಧವನನ್ನು | ರಣದಿ ಸಂಹರಿಸುವ ವ್ಯಾಪಾರವೆಂದನು  ||೧೦೩||

ಭಾಮಿನಿ

ಅರಸ ಕೇಳ್ ಬಳಿಕಾ ಯುಧಿಷ್ಠಿರ |
ಧರಣಿಪತಿನೇಮದಲಿ ನೆರೆದುದು |
ಕರಿ ತುರಗ ರಥ ಸಹಿತ ಸೈನಿಕವಪರಿಮಿತವಾಗಿ ||
ಮೊರೆವ ನಾನಾ ವಾದ್ಯ ಘೋಷದಿ |
ಧುರಕೆ ಸನ್ನಹವಾಗುತಿರಲಾ |
ಶರದ ಪಂಡಿತ ಬಲಿದನಿತ್ತಲು ಪದ್ಮವ್ಯೂಹವನು || ೧೦೪ ||

ದ್ವಿಪದಿ

ಅಖಿಳ ಗಜ ರಥ ಹಯದ ಸಾಲುಗಳ ನಿಲಿಸಿ |
ವಿಕಟ ಶಕಟವ್ಯೂಹ ದುರ್ಗವನು ಬಲಿಸಿ || ೧೦೫ ||

ಅದರೊತ್ತಿನಲಿ ಮಕರವ್ಯೂಹವನು ಮಾಡಿ |
ಅದಕೆ ದುಶ್ಯಾಸನಾದಿಗಳನೊಡಗೂಡಿ || ೧೦೬ ||

ಬಳಿಕ ಯೋಜನವೈದನುಜತೆಗಳವಡಿಸಿ |
ಹೊಳೆವ ಚಕ್ರವ್ಯೂಹಕೋಟೆಯನು ಬಲಿಸಿ || ೧೦೭ ||

ಕಾಂಭೋಜ ಭೂಪ ಮೊದಲಾದ ರಥಿಕರನು |
ಇಂಬುಗೊಳಿಸಿದನುಪಕಿರೀಟಪತಿಗಳನು  || ೧೦೮ |

ತುರಗವೈವತ್ತಾರು ಕೋಟಿಗಳ ನಿಲಿಸಿ |
ಕರಿಘಟೆಗಳೆಂಟು ಲಕ್ಷವನದಕೆ ಬೆರಸಿ || ೧೦೯ ||

ಸುರುಚಿರ ವರೂಥವೈವತ್ತು ಸಾವಿರವ |
ಭರದಿ ಕಾಲಾಳು ನಿಲಿಸಿದನಪರಿಮಿತವ || ೧೧೦ ||

ನಿಯುತಾಯು ಮೊದಲಾದ ನೃಪರ ಕಾಹಿನಲಿ |
ಜಯಕೆ ಹಂಸವ್ಯೂಹ ಬಲಿದನುಗ್ರದಲಿ || ೧೧೧ ||

ಅರ್ಬುದ ಹಯೇಭ ಸುರಥಾವಳಿಯ ಕೂಡಿ |
ಗರ್ಭವ್ಯೂಹವ ಬಲಿದನತಿರಥರಗೂಡಿ || ೧೧೨ ||

ಹತ್ತು ಸಾವಿರ ಮಂಡಲೇಶ್ವರರ ಬರಿಸಿ |
ಮತ್ತದಕೆ ಸಮಸಪ್ತಕರ ಸೈನ್ಯವೆರಸಿ || ೧೧೩ ||

ಚಪಲ ಗಜರಥವೆಂಟುಕೋಟಿ ಬಲದಿಂದ |
ವಿಪುಲ ಪದ್ಮವ್ಯೂಹವೆಸಗೆ ನಲವಿಂದ || ೧೧೪ ||

ಬಿತ್ತರದ ಸೂಚಿವ್ಯೂಹವ ವಿರಚಿಸಿದನು |
ಸುತ್ತವಲಯದೊಳಗತಿರಥರ ನಿಲಿಸಿದನು || ೧೧೫ ||

ವಾರ್ಧಕ

ಸೋಮದತ್ತ ಸುದಂತನು ದಾರನಶ್ವತ್ಥಾಮ |
ಕ್ಷೇಮಧೂರ್ತಿಕ ಶಲ್ಯ ಭೂರಿಶ್ರವಾರ್ಕಸುತ |
ಭೀಮವಿಕ್ರಮ ದೀರ್ಘಬಾಹು ವೃಷಸೇನ ಕೃಪ ಮುಖ್ಯರಾದತಿರಥರನು ||
ಆ ಮಹಾ ಪದ್ಮಸೂಚಿವ್ಯೂಹವಲಯದೊಳ್ |
ತಾ ಮುದದಿ ನಿಲಿಸಿ ತನ್ಮಧ್ಯದೊಳ್ ಕಲಿ ಸಿಂಧು |
ಭೂಮಿಪತಿಯಂ ಕಾಯ್ದುಕೊಂಡಿರ್ದರೇನೆಂಬೆ ಹರನಿಗರಿದೆನೆ ದುರ್ಗವು || ೧೧೬ ||

ಭಾಮಿನಿ

ಭೋರಿಡಲು ಬಹು ವಾದ್ಯತತಿ ಧುರ |
ಧೀರ ದ್ರೋಣನು ಶಕಟವ್ಯೂಹದ |
ದ್ವಾರದಲಿ ಮಿಗೆ ಬಂದು ನಿಂದನು ಬಲವನೀಕ್ಷಿಸುತ ||
ಚಾರಕರನಟ್ಟಿದನು ಯಮನ ಕು |
ಮಾರನಿದ್ದಲ್ಲಿಗೆ ಮಹಾರಣ |
ಶೂರರೆದ್ದರು ಕೇಳುತಾಕ್ಷಣ ಧರ್ಮಜಾದಿಗಳು || ೧೧೭ ||

ರಾಗ ಅಹೇರಿ ಝಂಪೆತಾಳ

ರಣಕೆ ಸನ್ನಹವಾದರೆಲ್ಲ | ಭೀಮ | ತ್ರಿಣಯಸಖ ಪಾರ್ಥ ಮೊದಲಾದ ಮಹರಥರು || ರಣಕೆ   || ಪ ||

ಅರಸನೆಡವಂಕದಲಿ ದ್ರುಪದ ಧೃಷ್ಟದ್ಯುಮ್ನ |
ಧರಣಿಪ ವಿರಾಟ ಕುಂತೀಭೋಜ ನಕುಲ ಸಂ |
ಗರವಿಜಯ ಸಾತ್ಯಕಿ ಘಟೋತ್ಕಚ ಮಹಾಯವನ |
ರಿರಲು ಬಲವಂಕದೊಳ್ ನೃಪನ | ಮುಂದ |
ಕುರವಣಿಸಿದರು ಫಲುಗುಣಾಚ್ಯುತಾದಿಗಳು  || ರಣಕೆ || ೧೧೮ ||

ಖಂಡೆಯ ಧನುರ್ಭಾಣ ಚಕ್ರ ಶಕ್ತಿಯು ಪಾಶ |
ಭಿಂಡಿವಾಳ ಕೃಪಾಣ ಕುಂತ ತೋಮರಗಳು |
ದ್ದಂಡ ಶಲ್ಲೆಹ ಪರಶು ವಜ್ರ ಮುದ್ಗರಗಳಂ |
ಚಂಡ ಭುಜಬಲರಾಂತರಾಗ | ರಣವ |
ಕಂಡು ನಡೆದರು ಬಹಳ ಪಟುಭಟರು ಬೇಗ || ರಣಕೆ || ೧೧೯ ||

ಭೇರಿ ಪಟಹ ಮೃದಂಗ ರಣಕಹಳೆ ಕೊಂಬು ಡಮಾಮಿ |
ಭೋರಿಡುವ ನಾನಾ ಸುವಾದ್ಯರಭಸದಲಿ ರಣ |
ಶೂರರೇಳ್ವಬ್ಬರಕೆ ನಡುಗಿತಾ ಕುರು ಸೇನೆ |
ಧಾರಿಣಿಪ ನುಡಿದನಚ್ಯುತಗೆ | ಪದವ |
ನಾರಾಧಿಸುತ ನಿಂತು ಪರಮ ಪಾವನಗೆ  || ರಣಕೆ || ೧೨೦ ||

ರಾಗ ಭೈರವಿ ಝಂಪೆತಾಳ

ತರಳನಿವ ಮುಂದುಗಾಣದೆ ಪೇಳ್ದ ನುಡಿಯನ್ನು |
ನೆರೆ ನಡೆಸಿ ರಕ್ಷಿಸುವ ಭಾರ ನಿಮಗೈಸೆ || ೧೨೧ ||

ಹಗೆಯ ಕೊಲ್ಲದಡಗ್ನಿ ಹೊಗುವ ಮತ್ತಾ ಪಾರ್ಥ |
ಬಗೆಯೊಳಯ್ವರ ಜೀವಕಧಿಪತಿಯೆ ನೀನು || ೧೨೨ ||

ಎಂದು ಕರುಣಾಳುಗಳ ದೇವನೊಳು ಬೇಡಿಕೊಳ |
ಲಂದು ಧರ್ಮಜಗಭಯವಿತ್ತನಸುರಾರಿ || ೧೨೩ ||

ಭಾಮಿನಿ

ಪೊಡವಿಪತಿ ಕೇಳ್ ಮನದ ಚಿಂತೆಯ |
ಬಿಡು ಜಯದ್ರಥಖೂಳನನು ತಲೆ |
ಗಡಿದು ಕೆಡಹುವ ಕಾಲದೆಸೆಯಲಿ ಷಡುರಥರ ಗೆಲಿದು ||
ಕೊಡಹುವನು ರಿಪುಬಲವನೆನಲಾ |
ಕಡಲಶಯನನ ಪದಕೆ ವಂದಿಸಿ |
ಮೃಡನ ಶರವನು ಜಪಿಸಿದನು ನರನಧಿಕ ಭಕ್ತಿಯಲಿ || ೧೨೪ ||

ರಾಗ ಸಾಂಗತ್ಯ ರೂಪಕತಾಳ

ಮಣಿಮಯ ರಥವನು ಬಲವಂದು ಮೇಲಿರ್ಪ | ಹನುಮಂತನನು ಕಂಡು ನಮಿಸಿ ||
ತ್ರಿಣಯಮಿತ್ರನ ಪಾದರಜವ ಶಿರದೊಳಾಂತು | ಧನುಶರಕೆರಗಿ ಕೈಗೊಂಡ || ೧೨೫ ||

ಕವಚವನುರೆ ತೊಟ್ಟು ಬಾಹುರಕ್ಷೆಯನಾಂತು | ತವಕದಿ ಧರ್ಮಜಗೆರಗಿ ||
ದಿವಿಜವ್ರಜಕೆ ಕಯ್ಯ ಮುಗಿದು ರಥವನೇರಿ | ಬವರಕೆ ನಡೆದನಾ ಪಾರ್ಥ || ೧೨೬ ||

ದೇವದುಂದುಭಿ ಮೊಳಗಿದುವಾಗ ನರನ ಗಾಂ | ಡೀವಧನುವಿನ ಝೇಂಕೃತಿಗೆ ||
ಆ ವೈರಿಮೋಹರ ತಲ್ಲಣಗೊಳುವಂತೆ | ದೇವೇಂದ್ರಸುತ ನಡೆತಂದ || ೧೨೭ ||

ರಾಗ ಶಂಕರಾಭರಣ ಮಟ್ಟೆತಾಳ

ನರನು ಬರುವ ಭರವ ಕಾಣುತರಸನನುಜನು |
ಕೆರಳಿ ಬೇಗ ಧನುವ ಕೊಂಡು ಧುರಕೆ ನಡೆದನು ||
ಸರಳ ಮಳೆಯ ಕರೆವುತಿರಲು ಕಂಡು ಪಾರ್ಥನು |
ಉರಿಯನುಗುಳುತಾಗ ಘೋರ ಶರವ ಕೊಂಡನು || ೧೨೮ ||

ಧುರದೊಳಿವನ ಕೊಂದರಣ್ಣ ಭೀಮಸೇನನ |
ಹಿರಿದು ಭಾಷೆ ಕೆಡುವುದೆನುತಲಿಂದ್ರನಂದನ ||
ಎರಡು ಶರದಿ ತೇರುಚಾಪಗಳನು ಖಂಡಿಸಿ |
ಉರವ ಡೋರುಗಡೆದನಾಗ ಧುರದಿ ಹೊರಳಿಸಿ || ೧೨೯ ||

ಭಾಮಿನಿ

ಅರಸ ಕೇಳ್ ದುಶ್ಯಾಸನನ ಭೀ |
ಕರಿಸಿ ಮುಂದೊತ್ತುತಲೆ ಕಂಡನು |
ಗುರುವನಾ ಘನತರದ ಶಕಟವ್ಯೂಹದ್ವಾರದಲಿ ||
ತೆರಹುಗೊಡನಿವನೆಂದು ನರನ |
ಬ್ಬರಿಸಿ ರಥವನು ನೂಕಿದರೆ ಹೂಂ |
ಕರಿಸಿ ತಡೆವುತ ದ್ರೋಣನಾ ಫಲುಗುಣನಿಗಿಂತೆಂದ || ೧೩೦ ||

ರಾಗ ದೇಶಿ ಅಷ್ಟತಾಳ

ಎಲವೊ ಪಾರ್ಥನೆ ಕೇಳು ನಿನಗೆ ದೈವ |
ಬಲವು ಸಂಘಟಿಸಿದೆಯೆನುತ ಮನ | ದೊಳಗೆ ಗರ್ವಿಸದಿರು ಕಣಾ || ೧೩೧ ||

ನಾಳೆ ಸೈಂಧವನೃಪನ ಸಂಗರದೊಳು |
ಸೀಳುವೆನು ದಿಟವೆನುತ ನುಡಿದು | ಬ್ಬಾಳುತನವನು ತೋರಿಸು || ೧೩೨ ||

ಆಳು ಕೂಡಿದೆ ಚೂಣಿಯೊಳಿದರೊಳೊಂ |
ದಾಳ ಗೆಲಿದರೆ ಗೆಲವು ನಿನ್ನದು | ಸೋಲು ತನಗಿಂದೆನುತಲಿ || ೧೩೩ ||

ಎನುತಲೆಚ್ಚನು ಬಾಣಸಂತತಿಯನ್ನು |
ಘನತರದಿ ಕಿಡಿಯಿಡುತ ಪಾರ್ಥನ | ತನುವಿನಗ್ರದಿ ತಳಿದವು  || ೧೩೪ ||

ಗುರುವಿನಸ್ತ್ರಸಮೂಹವ ಸವರುತ್ತ |
ಮರಳಿ ಕಾಣಿಕೆ ಮಾಡಿ ಪೇಳ್ದನು | ಸುರಪಸುತನತಿ ವಿನಯದಿ || ೧೩೫ ||

ಅಂಬಿಗಿಂಬನು ಕೊಡುವೆ  ನೀವ್ ಗುರುಗಳು |
ಡೊಂಬಿಯೇತಕೆ ಬರಿದೆ ಸೈಂಧವ | ನೆಂಬ ಖೂಳನ ತೋರಿಸಿ || ೧೩೬ ||

ಮರುಳೆ ಕೇಳೆಮ್ಮ ಗೆಲಿದ ಮೇಲಾತನ |
ಶಿರದ ಗೊಡವೆಯೆನುತ್ತ ಗಾಂಡಿವ | ತಿರುವ ಕಡಿದನು ದ್ರೋಣನು || ೧೩೭ ||

ಭಾಮಿನಿ

ನರನು ಮಂತ್ರಾಸ್ತ್ರಗಳ ತೊಡುತಿರ |
ಲರಿವುತಚ್ಯುತ ಕೆರಳಿದನು ಫಡ |
ಮರುಳೆ ಗುರುವನು ಗೆಲುವರುಂಟೇ ಬೇಡು ಪದಕೆರಗಿ ||
ಧುರವ ಜಯಿಸುವೆಯೆನಲು ಧನು ಶರ |
ವಿರಿಸಿ ರಥದಿಂದಿಳಿದು ಬೇಗದಿ |
ಶಿರವ ಚಾಚುತಲಾ ಧನಂಜಯ ನುಡಿದ ದ್ರೋಣನೊಳು || ೧೩೮ ||

ರಾಗ ಕೇದಾರಗೌಳ ಅಷ್ಟತಾಳ

ತಿಳಿಯಲೆಮ್ಮೈವರ ಜೀವನ ನಿಮ್ಮಿಂದ | ಲುಳಿಯಬೇಕತಿ ದಯದಿ |
ಸಲಹಿಕೊಂಡರು ಲೇಸು ಕೊಂದರು ಲೇಸೆಂದು | ಫಲುಗುಣನರುಹಿದನು || ೧೩೯ ||

ತರಳತನದೊಳಿಪ್ಪಾಗೆಮ್ಮಯ ಬೊಪ್ಪನು | ತೆರಳಿದ ಸುರಪುರಕೆ |
ಹಿರಿದು ಬದುಕಿದೆವು ನಿಮ್ಮಿಂದ ಭೀಷ್ಮರಿಂ | ದರುಹುವುದೇನು ಮತ್ತೆ || ೧೪೦ ||

ಘಾಸಿಯಾದೆವು ಜೂಜಿನಿಂದಲಾರಣ್ಯನಿ | ವಾಸವ ಮಾಡಿದೆವು ||
ಭಾಷೆಯಿದೊಂದನು ಕಾಯಬೇಕೆನುತಲೆ | ವಾಸವಸುತ ಪೇಳ್ದನು || ೧೪೧ ||

ನೀವು ಹೂಣಿಗರಾಗಿ ರಿಪುವ ಕಾಯ್ದಿರ್ದಡೆ | ನಾವು ನಿಲ್ಲೆವು ಧುರಕೆ ||
ಈವುದಭಯವೆನೆ ನಗುತಲಾ ದ್ರೋಣನು | ದೇವೇಂದ್ರಸುತಗೆಂದನು || ೧೪೨ ||

ಕಂದನಶ್ವತ್ಥಾಮ ಹುಸಿ ನೀನೆ ಮೋಹದ | ಕಂದನೆನಗೆ ದಿಟವು |
ಇಂದು ಮುನಿವುದುಂಟೆ ಗೆಲು ಹೋಗು ಭಾಷೆಯು | ಸಂದುದೆನುತ ಬಿಟ್ಟನು || ೧೪೩ ||

ಭಾಮಿನಿ

ಸವ್ಯಸಾಚಿಯು ಗುರುಬಲವನಪ |
ಸವ್ಯದಲಿ ವಂಚಿಸುತ ನಡೆತರ |
ಲವ್ವಳಿಸುತತಿರಥರು ತಡೆದರು ಮಕರವ್ಯೂಹದಲಿ ||
ಅವ್ಯಯನ ಬಲವಿರಲು ಬಲ್ಲನೆ |
ದಿವ್ಯಶರಗೊಂಡಹಿತ ಬಲವನು |
ಹವ್ಯವಾಹನನಂತೆ ಸವರಿದನೇನ ಬಣ್ಣಿಪೆನು || ೧೪೪ ||

ರಾಗ ಕಾಂಭೋಜಿ ಝಂಪೆತಾಳ

ತೇರು ಟೆಕ್ಕೆಯ ರಥದ ಸಾರಥಿಯ ಸವರಿ ರಣ | ಶೂರರ ಧನುರ್ಬಾಣಗಳನು |
ಓರಂತೆ ಕಡಿದು ಕೆಡಹಿದ ವೈರಿಮೋಹರವ | ಸೂರೆಗೊಂಡನು ಧನಂಜಯನು || ೧೪೫ ||

ಇದೆ ನರನ ಸಿಂಹಗರ್ಜನೆ ಬಿಲ್ಲ ಠೇಂಕಾರ | ವಿದೆಪಾರ್ಥ ಬಂದನೆಂದೆನುತ ||
ಕದನಕಲಿಗಳು ಕೈದುಗಳನು ಬಿಸುಟೋಡಿದರು | ರುಧಿರಮಯವಾಯ್ತು ಸಂಗರವು || ೧೪೬ ||

ತುರಗ ಬಳಲಲು ಕಂಡು ಧರೆಗೆ ಬಾಣವ ಹೊಡೆದು | ತ್ವರಿತದಿ ಸರೋವರವ ರಚಿಸಿ ||
ಹರಿಧನಂಜಯರಲ್ಲಿ ಮೆರೆಯಲಿತ್ತಲು ಭೀಮ | ಗೊರೆದನಾ ಧರ್ಮನಂದನನು || ೧೪೭ ||

ಹರಿಯ ಶಂಖಧ್ವನಿಯ ಕಾಣೆನೇನಾದನೋ | ನರನು ಸಂಗರದೊಳಿಂದಿನಲಿ ||
ಪರಿಕಿಸೆನುತಟ್ಟಿದರೆ ಭೀಮಸೇನನ ರಥವ | ನುರವಣಿಸಿ ತಡೆದನಾ ದ್ರೋಣ || ೧೪೮ ||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಭೀಮ ಗಮನವೆಲ್ಲಿ | ನಿಲು ಸಮರ್ಥನಹುದು ಪಾರ್ಥ |
ನಳುಕಿದಂತೆ ಪೋಗುತಿಹೆಯೊ | ಬಲುಹ ತೋರ್ಪೆಯೊ || ೧೪೯ ||

ನಿಲುಗಡೆಯನು ಸೂಚಿಸೆಂದ | ಡುಲಿದು ದ್ರೋಣಗೆಂದನವನು |
ತಿಳಿಯೆ ಪಾರ್ಥ ಹುಡುಗನೈಸೆ | ಬಳಿಕ ನಿಮ್ಮೊಳೂ || ೧೫೦ ||

ಧುರದಿ ತ್ರಾಹಿಯೆಂಬುದುಂಟೆ | ಗುರುಗಳಿದನು ನೋಡಿರೆನುತ |
ಮುರಿದು ಹೊಕ್ಕನತಿರಥರ ನು | ಗ್ಗನರಿದು ನಿಮಿಷದಿ  || ೧೫೧ ||

ಮರುತಸುತನ ಭರವ ಕಂಡು | ಕೆರಳಿ ದ್ರೋಣನಧಿಕ ಮಂತ್ರ |
ಶರವನೆಚ್ಚಡನಿಲಜಾತ | ತರಿವುತೆಂದನು || || ೧೫೨ ||

ಆತನಸ್ತ್ರಚಯಕೆ  ಭುಜ ಬ | ಲಾತಿಶಯನು ದಂಡೆಯೊಡ್ಡಿ |
ಸೂತನನ್ನು ಕೆಡಹಿ ಹಯವ | ಘಾತಿಸಿದನು  || ೧೫೩ ||

ಗುರುಗಳೆಮಗೆ ನೀವು ನಮ್ಮ | ಗರುಡಿಯೊಳಗೆ ಆಡುವಾಗ |
ಮರೆತ ವಂದನೆಯನು ಕೊಂಬು | ದಿರದೆ ಸಮರದಿ || ೧೫೪ ||

ಶರದಿ ಕಾದಲಿವನ ಕೂಡೆ | ಹರನಿಗರಿದೆನುತ್ತ ಭೀಮ |
ನುರಿಯನುಗುಳುತಾಗ ಗದೆಯ | ತಿರುಹುತೆಂದನು || ೧೫೫ ||

ಆತುಕೊಳ್ಳಿ ವಂದನೆಯನು | ಪ್ರೀತಿಯಿಂದಲೆನುತ ನಿಜವ |
ರೂಥ ಚೂರ್ಣ ಗೆಯ್ದು ಹೊಕ್ಕ | ವಾತ ಸಂಭವ || ೧೫೬ ||

ವಾರ್ಧಕ

ಮರುತಜನ ಗದೆಯ ಹೊಯ್ಲಿಗೆ ನಿಲ್ಲಲಾರದಾ |
ಗುರುವೈದಲಿತ್ತ ಶರಜವ್ಯೂಹ ದುರ್ಗಮಂ |
ಮುರಿದು ಮಕರವ್ಯೂಹಕಡಹಾಯ್ದು ಕೆಡಹಿದಂ ಶತಕೋಟಿಸೈನಿಕವನು ||
ಉರುಬಿದಂ ಮುಂದೆ ಚಕ್ರವ್ಯೂಹದಳವಿಯೊಳ್ |
ತರುಬುವತಿರಥರನಪ್ಪಳಿಸಿದಂ ಭೀಮನ |
ಬ್ಬರಕೆ ನಿಲ್ಲದೆ ಬಹಳ ನುಗ್ಗಾಯ್ತು ಕುರುಸೇನೆಯದ್ಭುತವನೇನೆಂಬೆನು || ೧೫೭ ||

ಝಡಿದು ಹಂಸವ್ಯೂಹಮಂ ಮುರಿದು ಸುಭಟರಂ |
ಕೆಡಹಿದಂ ಮುಂದೆ ಗರ್ಭವ್ಯೂಹ ವಲಯದೊಳ್ |
ತಡೆವ ಕರಿಘಟೆ ರಥ ತುರಂಗ ಕಾಲಾಳ್ಗಳಂ ಕೆಡಹುತೊಂದೇಕ್ಷಣದಲಿ ||
ಅರಸಿ ಮುಂದೊತ್ತಿ ಪದ್ಮವ್ಯೂಹ ಬಾಗಿಲೊಳ್ |
ಮಡುಹಿದಂ ಕೌರವಾನುಜರನುಳಿದವರ ಜವ |
ಗೆಡಿಸಿ ಭೀಮಂ ಮೆರೆದನಹಿತ ಬಲದೊಳ್ ವಿಪಿನದಾವಾಗ್ನಿರೂಪನಾಗಿ || ೧೫೮ ||

ಸೂರೆಗೊಂಡಬುಜ ಸೂಚಿವ್ಯೂಹಮಂ ಮುರಿದು
ವೈರಿ ಸೈಂಧವಪಡೆಯ ಕೆಣಕಿ ಹೊಯ್ದಾಡಿದಂ |
ಕೌರವ ದ್ರೋಣನಶ್ವತ್ಥಾಮ ಮುಖ್ಯ ಷಡುರಥರೊಡನೆ ಸಂಗರದೊಳು |
ವೀರ ಸಾತ್ಯಕಿಯೊಂದು ಕಡೆಯೊಳ್ ಮಹಾರಥರ |
ನೋರಂತೆ ಕೆಡಹಿ ಭೂರಿಶ್ರವಾದಿಗಳ ಸಂ |
ಹಾರವಂ ಮಾಡಿ ಮೆರೆದಂ ಹರಿಯನುಗ್ರಹದಿ ಪಾರ್ಥನಡಹಾಯ್ದ ಮುಂದೆ || ೧೫೯ ||

ಭಾಮಿನಿ

ಪೊಡವಿಪತಿ ಜನಮೇಜಯನೆ ಕೇ |
ಳೊಡೆಯ ಕೃಷ್ಣನು ತನ್ನ ಭಕ್ತನು |
ನುಡಿದ ಭಾಷೆಯ ಸಲಿಸಬೇಕೆಂದಾ ಸುದರ್ಶನವ ||
ಹಿಡಿಯೆ ರವಿ ಮಂಡಲಕೆ ದಿನಮಣಿ |
ನಡೆದನೆಂದಾ ಪಾರ್ಥ ರಥವನು |
ತಡೆಯದಿಳಿದಚ್ಯುತಗೆ ಬಿನ್ನಹ ಮಾಡಿದನು ಬಳಿಕ || ೧೬೦ ||

ರಾಗ ಆನಂದ ಭೈರವಿ ಏಕತಾಳ

ವಾರಿಜನೇತ್ರ ಕೇಳಯ್ಯ | ವೈರಿ ಸೈಂಧವನ ಛಾಯ |
ತೋರದು | ಯುದ್ಧ | ತೀರದು || ೧೬೧ ||

ರವಿಯಸ್ತಮಾನವಾದನು | ತವಕದಿಂದಗ್ನಿಕುಂಡವನು |
ಮಾಡುವೆ | ತನುವೀ | ಡಾಡುವೆ || ೧೬೨ ||

ಇಂತೆಂಬ ಪಾರ್ಥನ ಬಗೆಯ | ಕಂತುಪಿತ ಕಾಣುತೆಳೆನಗೆಯ |
ಸೂಸಿದ | ಮಾಯ | ಬೀಸಿದ || ೧೬೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಯ ಕೇಳೈ ರಣದಿ ನರ ನಾ | ರಾಯಣರು ಮಾತಾಡುತಿರೆ ಕುರು |
ರಾಯ ಹಿಗ್ಗಿದನುಳಿದ ಸೈಂಧವ | ರಾಯನೆನುತ || ೧೬೪ ||

ಒದರಿದವು ಬಹು ವಾದ್ಯಗಳು ನೆಲ | ನದುರಲಾ ರಿಪುಸೇನೆ ಪಾರ್ಥನ |
ತುದಿಯ ಕಾಲವ ಕಾಂಬೆವೆನುತಲೆ | ಒದಗಿ ನಿಲಲು || ೧೬೫ ||

ನಿಲುಕಿ ನೋಡಿದನೆಲ್ಲಿ ತೋರಾ | ಫಲುಗುಣನನೆನಗೆನುತ ಸೈಂಧವ |
ನುಲಿಯೆ ಹರಿ ಕಂಡಾಗ ಪಾರ್ಥಗೆ | ತಿಳಿಯುತೆಂದ || ೧೬೬ ||

ತಡವ ಮಾಡದಿರೆಲವೊ ಫಲುಗುಣ | ತೊಡು ಮಹಾ ಶರವನ್ನು ವೈರಿಯ |
ಕೆಡಹು ಬೇಗದೊಳೆನಲು ಹರಿಯೊಳು | ನುಡಿದ ನರನು || ೧೬೭ ||

ದೇವ ರವಿಯಸ್ತಮಿಸಿದನು ನೀ | ನಾವುದುಚಿತವ ಕಂಡೆಯೆನೆ ನಿನ |
ಗಾವ ಭಯ ಬೇಡೆಂದನಾ ರಾ | ಜೀವನಾಭ || ೧೬೮ ||

ಗಾಢದಲಿ ಸೈಂಧವನ ಕೊಲು ಮಾ | ತಾಡಿ ಫಲವಿಲ್ಲೆನಲು ಚಾಪಕೆ |
ಪೂಡಿದನು ಪಾಶುಪತಶರವನು | ನೋಡಿ ನರನು || ೧೬೯ ||

ವಾರ್ಧಕ

ತೆಗೆಯೆ ಜಗ ಕಂಪಿಸಿತು ತೀವ್ರದಿಂ ತಾರೆಗಳ |
ನೊಗಳಿಸಿತು ನಭ ಮಹಾಜಲಧಿ ಮೊದಲಾದ ರತು |
ನಗಳನೋಕರಿಸಿತು ಕುಲಾಚಲಗಳೊಲೆದವೆಡ ಬಲದಿ ನಿಮಿಷಾರ್ಧದೊಳಗೆ ||
ದಿಗಿಭತತಿ ನಡನಡುಗೆ ವಾಸುಕಿ ಫಣಾಳಿಗಳ |
ನುಗಿಯೆ ದಳ್ಳುರಿ ಕಾರಿತೇನೆಂಬೆ ಪ್ರಳಯವೆನೆ |
ವಿಗಡ ಪಾರ್ಥಗೆ ಬೆಸಸು ಬೆಸಸೆನ್ನುತಿರ್ದುದಾ ಪಾಶುಪತವಾ ಸಮಯದಿ || ೧೭೦ ||

ರಾಗ ಮಾರವಿ ಏಕತಾಳ

ನರನತಿ ವೇಗದಿ ಪಾಶುಪತವ ಕಿವಿ | ವರೆಗುಗುದರಿಭಟನ |
ಶಿರವನೆಚ್ಚಡೆ ಕೊಂಡೊಯ್ದುದು ಗಗನಾಂ | ತರಕೆ ಕ್ಷಣಾರ್ಧದೊಳು || ೧೭೧ ||

ಹಾರುವ ರಕ್ತದ ಧಾರೆಯೊಳ್ ತೊಯ್ದುದು | ಕೌರವಬಲವಂದು |
ಗಾರುಗೊಂಡುದು ಘನ ಶೌರ್ಯದಿ ಶಕ್ರಕು | ಮಾರನು ಕಂಡೆಂದ || ೧೭೨ ||

ಬೀಳುಬೀಳಭಿಮನ್ಯುವಿನೊಧೆ ನಿನ್ನನು | ಬಾಳಲೀವುದೆಯೆನಲು ||
ಕೇಳುತ ಹರಿ ನುಡಿದನು ತೊಡು ತೊಡು ಪ್ರತಿ | ಕೋಲನು ಶಿರದೆಡೆಗೆ || ೧೭೩ ||

ನೆರೆ ತಂದೆಯ ಶಾಪವು ಇವ ನಾಸ್ಯವ | ಧರೆಗಿಳುಹಿದ ಭಟನ ||
ಶಿರ ಸಾಸಿರ ಹೋಳಾಗಲೆನುತ ತಪ | ಸಿರುವ ದುರಾತುಮನು || ೧೭೪ ||

ವೃದ್ಧಕ್ಷತ್ರಿಯನಾತನ ಕೈಯೊಳು | ಹೊದ್ದುವಂತೆಸಗೆನಲು ||
ರುದ್ರನ ಘೋರ ಶರಕೆ ಬೆಸಸಿದನವ | ನಿದ್ದೆಡೆಗಮಿಸೆನುತ  || ೧೭೫ ||

ತುಡುಕಿ ಕೊರಳ ಕೊಂಡೊಯ್ದುದು ನಭದಲಿ | ಗಿಡುಗನು ಹಾಯ್ವಂತೆ |
ಬಿಡುತಿರಲರ್ಘ್ಯವನಾಗಲೆ ಕೈಯಲಿ | ಕೆಡಹಿತು ಶಿರವನ್ನು  || ೧೭೬ ||

ಅರ್ಘ್ಯಜಲವು ಕೆಂಪಾದುದ ನೋಡಿ ವೈ | ರಾಗ್ಯದಿ ಧರೆಗಿಡಲು |
ಶೀಘ್ರದಿ ಶಿರ ಸಾಸಿರ ಹೋಳಾಯಿತು | ಉಗ್ರಶಾಪದೊಳವಗೆ || ೧೭೭ ||

ವಾರ್ಧಕ

ಸಂಗರಂ ಮೆರೆವುದಾವುದರಿಂದವನಿಯೊಳ್ ಕು |
ಲಾಂಗನೆಯರಿಂಗಧಿಕ ಭಾಗ್ಯಮೇನೆಂದರಿದು |
ಕಂಗೊಳಿಸಲೆರಡು ಪೆಸರಂ ಬರೆದು ಮೊದಲು ಪಙ್ಕ್ತಯ ಮುನ್ನಿನಕ್ಷರವನು ||
ಸಂಗಡಿಸಲೆರಡನೆಯ ಪಙ್ಕ್ತಯಭಿಧಾನದಿಂ |
ಕಂಗೊಳಿಸುತಿರ್ಪ ನೃಪನಂ ಮುರಿದನೆಂದಮರ |
ಪುಂಗವ ಕದಂಬದೊಳಗಚ್ಯುತನ ಮೈದುನನ ಶೌರ್ಯಮಂ ಪೊಗಳುತಿರಲು || ೧೭೮ ||

ರಾಗ ಸಾಂಗತ್ಯ ರೂಪಕತಾಳ

ರಾಯ ಕೇಳಿನ್ನೇನನೆಂಬೆನು ಶ್ರೀಕೃಷ್ಣ | ರಾಯನ ಮಂತ್ರಶಕ್ತಿಯನು |
ರಾಯ ಕೌರವನಹಂಕಾರವು ಜರಿದುದು | ಪಾಯವನರಿವರಾರೆಂದ || ೧೭೯ ||

ತರಣಿಗೆ ಮರೆಯ ಮಾಡಿದ ಚಕ್ರವನು ಬೇಗ | ಕರೆದಾಗ ಭಾನುಮಂಡಲವ |
ನರನಿಗೆ ತೋರಲಾಗರಿಸೇನೆ ಸೂರ್ಯನ | ಜರೆಯಲೂಣೆಯವು ಬಂದಪುದೆ || ೧೮೦ ||

ದೈವಬಲವೆ ಮಹಾಬಲವಯ್ಯ ಶಿವ ಶಿವ | ದೈವ ಪೌರುಷಕೆಣೆಯುಂಟೆ ||
ದೈವಹೀನರ ಕೈಗೆ ಪರಶು ಪಾಷಾಣವು | ದೈವಾಧೀನದಿ ಜಗವಿಹುದು || ೧೮೧ ||

ಎಂದು ದ್ರೋಣಾದಿನಾಯಕರು ಮಾತಾಡುತ್ತ | ಲಂದು ಪಾಳಯಸಹ ತೆರಳೆ ||
ಬಂದನಾ ಫಲುಗುಣನಚ್ಯುತನೊಡನೆ ಸಾ | ನಂದದಿ ಧರ್ಮಜನೆಡೆಗೆ || ೧೮೨ ||

ಭಾಮಿನಿ

ಜನಪ ಜನಮೇಜಯನೆ ಕೇಳೈ |
ಚಿನುಮಯಾರ್ಜುನರಯ್ತರಲು ಕಂ |
ಡಿನಜಸುತನಿದಿರಾಗಿ ಸತ್ಕಾರದಲಿ ಪೊಡವಟ್ಟು ||
ವನಜನಾಭನ ಪದವನಪ್ಪುತ |
ಘನತರದ ಭಕ್ತಿಯಲಿ ಪೇಳ್ದನು |
ಜನಪರೊಳಗಿನ್ನೇಸು ಧನ್ಯನೊಧರ್ಮನಂದನನು || ೧೮೩ ||

ಜಲಜನಾಭನೆ ನಿನ್ನ ಮಹಿಮೆಯ | ನೆಲೆಯ ಬಲ್ಲವರಾರು ತ್ರಿಜಗದಿ |
ಸಲಹಿಕೊಂಡೈ ನಮ್ಮ ಬಿಡದೀ ಬಂದ ವಿಗ್ರಹದಿ ||
ಹಲವು ಪೇಳುವುದೇನೆನಲು ಹರಿ | ಯಲಘುಭಾಷಾ ಕಲ್ಪವೃಕ್ಷವು |
ಫಲವು ಬಂತೆಂದೆಲ್ಲರುರೆ ಸೇರಿದರು ಬೀಡಿಗೆಯ || ೧೮೪ ||

ರಾಗ ಢವಳಾರ ತ್ರಿವುಡೆತಾಳ

ಸರಸಿಜಲೋಚನ ಭವವಿಮೋಚನ | ಸರಸಿಜಭವಭವನುತಿಪಾತ್ರ |
ವರ ಸಾರ್ವಭೌಮ ಗುಣಧಾಮ | ಗುಣಧಾಮನೆ ಬಾ ಬಾರೆನುತಲಿ |
ತರುಣಿಯರಾರತಿಯ ಬೆಳಗಿರಿ || ಶೋಭಾನೆ || ೧೮೫ ||

ಯಮರಾಜನ ಸುಕುಮಾರಕನಿಗೆ | ಕ್ಷಮೆದಮೆಯಲಿ ಧರ್ಮದಿ ನಡೆವವಗೆ |
ಕುಮತಿವರ್ಜಿತಗೆ ಸುಮಾನಸಗೆ | ಸುಮಾನಸಗಾ ಧರ್ಮರಾಯನಿಗೆ |
ವಿಮಲೆಯರಾರತಿಯ ಬೆಳಗಿರೆ || ಶೋಭಾನೆ  || ೧೮೬ ||

ಸುಗದೋರ್ದಂಡಗೆ ಚಂಡಗೆ | ಹಗೆಯರ ಸದೆ ಬಡೆವ ಉದ್ದಂಡಗೆ |
ಝಗಝಗಿಪ ಭೀಮ ಸುಗುಣಗೆ | ಸುಗುಣಗೆ ಶ್ರೀಕೃಷ್ಣಾದ್ವೈತಗೆ |
ಮುಗುದೆಯರಾರತಿಯ ಬೆಳಗಿರೆ || ಶೋಭಾನೆ  || ೧೮೭ ||

ಗಾಂಡೀವಧಾರಗೆ ಧೀರಗೆ | ಚಂಡವಿಕ್ರಮನಿರುಪಮಗೆ |
ಭಂಡ ಸೈಂಧವನಗೆಲಿದವಗೆ | ಗೆಲಿದಾ ಧುರಧೀರಗೆ ಪಾರ್ಥಗೆ |
ಕುಂಡಲದಾರತಿಯ ಬೆಳಗಿರೆ || ಶೋಭಾನೆ  || ೧೮೮ ||

ಭೂಪನ ಮೋಹದ ಸೋದರನಿಗೆ | ವ್ಯಾಪಿಸಿ ಮಾದ್ರಿಗೆ ಜನಿಸಿದ ಸುಕ |
ಲಾಪ ನಕುಲಾಂಕಗೆ ಸಹದೇವಗೆ |  ಸಹದೇವಗೆ ಜಯ ಜಯವೆನುತಲಿ |
ದ್ರೌಪದಿಯರಾರತಿಯ ಬೆಳಗಿರಿ || ಶೋಭಾನೆ  || ೧೮೯ ||

ಭಾಮಿನಿ

ಅರಸ ಕೇಳಿಂತುತ್ಸವದಿ ಮುರ |
ಹರನ ಸಭೆಯಲಿ ಪಾಂಡುಪುತ್ರರು |
ಮೆರೆದರವರಿನ್ನೇನು ಧನ್ಯರೊ ಮೂರು ಲೋಕದಲಿ ||
ಗುರುಕುಲೋತ್ತಮ ಮಧ್ವಪತಿ ಶ್ರೀ |
ವರದ ಕೃಷ್ಣನ ಕರುಣಕವಚವ |
ಧರಿಸಿದವರಿಗದೇನು ದೊಡ್ಡಿತೊ ಭೂಪ ಕೇಳೆಂದ || ೧೯೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಿಯೆನಖಿಳ ಪುರಾಣಶಾಸ್ತ್ರದ | ನೆರವಿಯನು ಶರಪುರದ ಗಣಪತಿ |
ವರನಿರೂಪದಿ ವರ್ಣಿಸಿದೆನಿದ | ನರಿವ ತೆರದಿ || ೧೯೧ ||

ಕೇಳಿ ತಪ್ಪಿರೆ ತಿದ್ದುವುದು ಗುಣ | ಶೀಲ ಕವಿಗಳು ಜಗದಿ ಸರ್ವ ಜ |
ನಾಳಿ ಕೇಳಿಯೆ ಮೆರೆಸುವುದು ಹರಿ | ಲೀಲೆಗಳನು || ೧೯೨ ||

ಇದು ಸಮಸ್ತಾಘೌಘಪರಿಹರ | ವಿದುಕಣಾ ಇಹಪರಕೆ ಶುಭಕರ |
ವಿದು ಮುಕುಂದನ ಪರಮಲೀಲಾ | ಸುಧೆಯು ಜಗಕೆ || ೧೯೩ ||

ಮಧ್ವ ಮುನಿಯ ವರಪ್ರಸಾದದ | ಸಿದ್ಧಿಯಲಿ ವಿರಚಿಸಿಹೆ ಕೃತಿಯನು |
ಹೊದ್ದದಿದರೊಳು ಕಲ್ಮಷವು ಹರಿ | ಸಿದ್ಧಮಂತ್ರ || ೧೯೪ ||

ಭಕ್ತಿಯಲಿ ಬರೆದೋದಿ ಕೇಳ್ವರ | ಭಕ್ತಜನರ ಮನೋರಥಂಗಳ |
ಶಕ್ತನಹ ಶರಪುರದ ಗಣಪತಿ | ಯಿತ್ತು ಪೊರೆವ || ೧೯೫ ||

ರಾಗ ಮುಖಾರಿ ಝಂಪೆತಾಳ

ಜಯ ಮಂಗಳಂ | ನಿತ್ಯ | ಶುಭಮಂಗಳಂ     || ಪಲ್ಲವಿ ||

ಮಂಗಳಂ ಮತಿಭಾಗ್ಯದಾಯಕ ವಿನಾಯಕಗೆ |
ಮಂಗಳಂ ಸಿದ್ಧಚಾರಣಸೇವ್ಯಗೆ ||
ಮಂಗಳಂ ಶರಪುರದ ಶ್ರೀಮಹಾಗಣಪತಿಗೆ |
ಮಂಗಳಂ ಶರಭಲಿಂಗೇಶ್ವರನಿಗೆ || ಜಯ ಮಂಗಳಂ || ೧೯೬ ||

ಉದಧಿಲಂಘಿಸಿದವಗೆ ಮಹವಜ್ರಕಾಯನಿಗೆ |
ಸದಮಲದಿ ಜನಕಜೆಗೆ ವಂದಿಸಿದಗೆ |
ಅಧಮ ರಾವಣನ ಲಂಕೆಯ ಪಿತನ ಸಖಗಿತ್ತ |
ಕದನಕಲಿಗಳ ದೇವ ಹನುಮಂತಗೆ || ಜಯ ಮಂಗಳಂ || ೧೯೭ ||

ಶರದಿಂದುಭಾಸಿನಿಗೆ  ಶರಣಜನಪೋಷಿಣಿಗೆ |
ಮಿರುಪ ಭೃಂಗಾಳಕಿಗೆ ಗುಣಪೂರ್ಣೆಗೆ |
ಸರಸಿಜಾಸನನ ಪಟ್ಟದರಾಣಿ ಶಾರದೆಗೆ
ಶರದವಾಹನ ಮುಖ್ಯ ಸುರನಮಿತೆಗೆ || ಜಯ ಮಂಗಳಂ || ೧೯೮ ||

ಪಶ್ಚಿಮಾಂಬುಧಿಯ ತಡಿಯಲಿ ಬಂದು ಮಾರುತಿಗೆ |
ನಿಶ್ಚಯವ ತೋರಿ ಪೂಜೆಯ ಕೊಂಬಗೆ |
ಆಶ್ಚರ್ಯಮಹಿಮನಿಗೆ ಆನಂದಭರಿತನಿಗೆ |
ಸಚ್ಚರಿತ ಮಧ್ವಪತಿ ಶ್ರೀಕೃಷ್ಣಗೆ || ಜಯ ಮಂಗಳಂ | ನಿತ್ಯ | ಶುಭಮಂಗಳಂ || ೧೯೯ ||

ಭಾಮಿನಿ

ಶ್ರೀಗಜಾನನ ಸಕಲ ಯೋಗ ಸು |
ಭಾಗ ಫಲದಾಯಕ ವಿನಾಯಕ |
ನಾಗವಾಹನ ಮುಖ್ಯ ಸುರತತಿವಂದ್ಯ ಗುಣಸಾಂದ್ರ ||
ಭಾಗವತ ಪರಿಪಾಲ ಬಹು ನಿಗ |
ಮಾಗಮಾರ್ಚಿತ ನೀನೊಲಿದು ದಯ |
ವಾಗೆನಗೆ ಶರಪುರದ ಗಣನಾಯಕ ನಿರಾಕಾರ || ೨೦೦ ||

ಯಕ್ಷಗಾನ ಸೈಂಧವನ ವಧೆ ಮುಗಿದುದು