ರಾಗ ಸಾಂಗತ್ಯ ರೂಪಕತಾಳ

ಜನಪ ಕೇಳ್ ಜನನವೆ ಲಯಬೀಜ ಮರಣವು | ಜನನಬೀಜವ ತೋರಿಕೆಡುವ ||
ತನುವಿನಾನಂದಕ್ಕೆ ಮನಮಾಡದಿರ್ದು ನಿ | ನ್ನನು ನೀನೆ ತಿಳಿಯೆಂದ ಮುನಿಪ || ೨೪ |

ಬುಧನಭಿಮನ್ಯುವೆಂದರಿತುಕೊ ಮನದಲ್ಲಿ | ಕುದಿಗೊಳ್ಳಬೇಡ ನೀ ಬರಿದೆ ||
ಒದಗಿ ಪುಟ್ಟಿದನರ್ಜುನಗೆ ಸುತನಾಗುತ್ತ | ಪದಿನಾಲ್ಕು ವರುಷವೆಯವಧಿ || ೨೫ ||

ದೇಹಾಭಿಮನ್ಯುವೋ ಜೀವವೋ ದಿಟ ಜಡ | ದೇಹ ಕೆಟ್ಟರೆ ಹೋದುದೇನು ||
ದೇಹ ಶಾಶ್ವತವಲ್ಲ ಮಡಿದುಹೋದವರೊಳು | ಮೋಹವನಿಟ್ಟಳಲದಿರು || ೨೬ ||

ಎಂದು ಸುಜ್ಞಾನಬೋಧೆಯ ಪೇಳಿವ್ಯಾಸ ಮು | ನೀಂದ್ರನಾಶ್ರಮಕಡಿಯಿಡಲು ||
ಕಂದ ವಾಸವನಲ್ಲಿ ಪೋದುದನರಿತು ಮು | ಕುಂದ ತಾ ತಿರುಹಿದ ರಥವ || ೨೭ ||

ತರಣಿ ತಾ ಮುಳುಗಿದನಾಲಿಸು ಫಲುಗುಣ | ತೆರಳುವ ಶಿಬಿರಕಿಂದಿನಲಿ ||
ಧುರದ ಸಂಗತಿಯೆಲ್ಲ ನಾಳೆಯೆಂದಚ್ಯುತ | ಕರೆತಂದನಧಿಕ ವೇಗದಲಿ || ೨೮ ||

ಭಾಮಿನಿ

ಹರಿಧನಂಜಯರಿತ್ತ ಬರುತಿರೆ |
ಸರಸವಾಡುತ ಪಾರ್ಥನನು ಕಂ |
ಡರೆನಗೆಯೊಳಾಲೋಚಿಸಿದನಸುರಾರಿ ಚಿತ್ತದಲಿ ||
ತರಳನಳಿದುದ ಸುರಪತನುಜನಿ |
ಗರುಹಬೇಕೆನುತಾಗ ಮೆಲ್ಲನೆ |
ನರಗೆ ಪೇಳ್ದನು ಜಲವ ಮುಳುಗುವುದೆನುತ ವಹಿಲದಲಿ || ೨೯ ||

ವಾರ್ಧಕ

ಇಂತುಸಿರುತಾ ಕ್ಷಣವೆ ಸುರಪತನುಜಾತನಂ |
ಕಂತುಪಿತ ಕೂಡಿ ಕೊಳಕಿಳಿದು ವಿಜಯನೊಳೆಂದ |
ಸಂತಸದಿ ಜಲವ ಮುಳುಗಿದ ಬಳಿಕ ಕಡೆಗೆ ಮುಂದೇಳ್ವರಾರ್ ನೋಳ್ಪುದೆಂದು ||
ಪಂಥವೆಸಗುತ ನೀರ ಮುಳುಗಿದಾ ಮೇಲೆ ಹರಿ |
ಯಂತರಂಗದಿ ಶರವ ಬಗಿದೆದ್ದು ವೇಗದಿಂ |
ನಿಂತರ್ಜುನನೊಳೆಂದ ಕೇಳು ಫಲುಗುಣ ನಿನ್ನ ಸುತ ಮರಣಕಯ್ದನೆನುತ || ೩೦ ||

ಕಂದ

ಇಂತಚ್ಯುತನೊರೆದಾಪವ |
ಸಂತಸದಿಂ ಮುಳುಗೆ ಪಾರ್ಥನೆದ್ದಾಕ್ಷಣದೊಳ್ |
ನಿಂತಾಲಿಸಿ ಬಲು ದುಗುಡದಿ |
ಕಂತುಪಿತನ ಕರೆದೆಬ್ಬಿಸಿ ನುಡಿದಂ ಜವದೊಳ್ || ೩೧ ||

ಭಾಮಿನಿ

ಪಂಚಬಾಣನ ಪಿತನೆ ಕೇಳ್ ಗಗ |
ನಾಂಚಲದಿ ನುಡಿ ಕೇಳಿ ಮನದಿ ಪ |

ಳಂಚಿಸುವುದಿನ್ನಾಯ್ತು ವಂಚಿಸಬೇಡ ಮುರವೈರಿ ||
ಚಂಚಲವು ಬಲುವಾಗಿ ಚಿತ್ತವ |
ಮಿಂಚಿಹೋಗುವುದೆನುತ ನುಡಿಯಲು |
ಮುಂಚೆ ತಿಳಿದುದು ಸುತನ ಮರಣದ ಶಕುನ ಪಾರ್ಥನಿಗೆ || ೩೨ ||

ರಾಗ ಬಿಲಹರಿ ಅಷ್ಟತಾಳ

ತಿಳಿದುದಾ ಕ್ಷಣ ಪುತ್ರಶೋಕಲಕ್ಷಣಗಳು | ಫಲುಗುಣನಿಗೆ ಹೆಚ್ಚಿತಂದು ಸಂತಾಪ |
ಕಳವಳಗೊಂಡತಿ ಭಯದಿಂದಲುಸಿರಿದ | ನಳಿನನಾಭನೊಳು ಕಂಬನಿಯ ತುಂಬುತಲೆ || ೩೩ ||

ಸೆಳೆದೊಡಲೊಳಗುರಿತಾಪ ಹೆಚ್ಚಿದೆ ಧೈರ್ಯ | ಕಳವಳಗೊಡುತಿದೆ ಕಡು ಭಯವಾಗಿ |
ತಳುವದಿಂತಾಗುವ ಕಾರಣವೇನೆಂದು | ಒಳವ ಪೇಳಯ್ಯ ವಾಸುದೇವ ಸಂಜೀವ || ೩೪ ||

ಕಂದನಿರವ ಕಾಣದಾಪೆನು ಕೌರವರ್ | ಕೊಂದರೆಂಬುದ ಕೇಳುವೆನೊ ಕಿವಿಯೊಳಗೆ ||
ಇಂದಿನ ಚಕ್ರವ್ಯೂಹದಿಂದ ಬಾಲಕನಿಗೆ | ಬಂದ ಕಂಟಕವಲ್ಲದಿಲ್ಲ ನಿಶ್ಚಯವು  || ೩೫ ||

ತಂದೆ ಕೇಳೀಗ ಧೃತಿಗುಂದದೆ ನಡೆ ನಿನ್ನ | ಕಂದನನಾರೊಯ್ವರೆಂದು ಕಂಸಾರಿ |
ಬಂದು ಪಾರ್ಥನ ರಾಜಮಂದಿರದೊಳು ಬಿಟ್ಟು | ನಿಂದಿರದಯ್ದಿದ ಸಿಂಧುರವರದ || ೩೬ ||

ವಾರ್ಧಕ

ಸುರನಗರಿ ನಡುಗಿತು ಸುರೇಶ್ವರಂ ಪನ್ನಗಾ |
ಭರಣನಂ ನೆನೆನೆನದು ಯಮಪುರದಿ ಗಜಬಜಿಸಿ |
ಸರಕು ತೆಗೆದುದು ಮೃತ್ಯು ಪೊಕ್ಕಳು ಮಹೇಶ್ವರನ ಮರೆಯನತಿ ಭೀತಿಯಿಂದ |
ಬಿರಿದು ರಂಜಿಸಿ ಸಕಲ ಸೇನೆ ಪರಿವಾರವಿಳೆ |
ಯರಸನೇ ಗತಿಯೆಂದಿರಲ್ ನರನ ದುಮ್ಮಾನ |
ವಿರದೆ ತ್ರೈಜಗಗಳಂ ಬೆದರಿಸಿದುದೇನೆಂಬೆನಹಿತ ಬಲ ತಲ್ಲಣಿಸಲು || ೩೭ ||

ಭಾಮಿನಿ

ಧಾರಿಣೀಶ್ವರ ಕೇಳಿದಿರು ಬಹ |
ನಾರಿಯರ ರತುನಾರತಿಗಳನು |
ವೀರಕೊಳ್ಳದೆ ಬಂದು ಧರ್ಮಜಗೆರಗಲೆತ್ತುತಲೆ ||
ಭೂರಿ ಭಯಗೊಳಲಂದು ತನ್ನಕು |
ಮಾರನಾವೆಡೆ ಕಾಣೆನೀ ಪರಿ |
ವಾರದೊಳಗೆನಲಳುತ ಬಂದೆರಗಿದಳು ಸೌಭದ್ರೆ || ೩೮ ||

ರಾಗ ನವರೋಜು ಆದಿತಾಳ

ಸುತನಿಂದೆಲ್ಲಿಗೆ ಪೋದ | ಪ್ರಾಣ | ರತುನ ತಾನೇನಾದ ||
ಪತಿಯೆ ನೀ ತೋರೆಂದು | ಬಿದ್ದ | ಳತಿ ದುಃಖದೊಳು ನೊಂದು || ೩೯ ||

ರಣಸಾಹಸಿಗಳಿದ್ದು | ಎ | ನ್ನಣುಗನಟ್ಟಿದರಿಂದು |
ಋಣವು ತೀರಿತೆಯೆಂದು | ನರ | ವನಿತೆ ಕೂಗಿದಳಂದು || ೪೦ ||

ಬಾ ಮಗನೆ ಪಿತನೆಡೆಗೆ | ಬಹು | ಪ್ರೇಮವ ತೋರಿಸು ನಮಗೆ ||
ನೀ ಮುನಿದು ಪೋಗುವರೆ | ರಣ | ಕಾಮಿತನಾಗ್ಯಗಲುವರೆ || ೪೧ ||

ಸ್ಮರಕೋಟಿಶೃಂಗಾರ | ಸ | ಚ್ಚರಿತ ಸಂಗರಧೀರ ||
ಅರಿಗಜ ಸಿಂಹಾಕಾರ | ಮರೆ | ದಿರಲೆಂತು ಸುಕುಮಾರ || ೪೨ ||

ಭಾಮಿನಿ

ಅರಸ ಕೇಳಿಂತಳುವ ಕಾಂತೆಯ |
ಸುರಿವ ಕಂಬನಿಯೊರಸಿ ದುಃಖದಿ |
ಕರಗಿ ಸಂತಾಪದಲಿ ಬೆದೆ ಬೆದೆಬೆಂದು ಕಡು ನೊಂದು ||
ತರಹರಿಸಿ ಬಾಯಾರಿ ತನ್ನಯ |
ತರಳನಾವೆಡೆ ಹೇಳು ಹೇಳೈ |
ಹಿರಿದು ಬಳಲಿಸಬೇಡವೆಂದಗ್ರಜನ ಬೆಸಗೊಂಡ || ೪೩ ||

ರಾಗ ನೀಲಾಂಬರಿ ರೂಪಕತಾಳ

ಪತಿಯು ಮಡಿದಿಹ | ಸತಿಯು ನಾಯಕ | ರತುನವಿಲ್ಲದ | ಪದಕ ದೇವತಾ ||
ಸ್ತುತಿಗಳಿಲ್ಲದ | ಕಾವ್ಯರಚನೆಯು | ಸುತನು ತೋರದ | ಸಭೆಯಿದೇನೈ || ೪೪ ||

ಬರಲು ಇದಿರಾಗಿ | ಬಂದು ಮೋಹದಿ | ಕರದಿ ಮೆಯ್ಯನು | ತಡವರಿಸುತಲಿ ||
ಸರಳ ಗಾಯವ | ಕಂಡು ಮರುಗುವ | ತರಳನೆಲ್ಲಿಗೆ | ಪೋದನಗ್ರಜ || ೪೫ ||

ಭೀಮನೀ ಮಹಾ | ದ್ರುಪದ ನಕುಲ ನಿ | ಸ್ಸೀಮ ಸಾತ್ಯಕಿ | ಮುಖ್ಯರಿದ್ದೆನ್ನ ||
ಕಾಮಧೇನುವ | ಕಳುಹಿ ಕೊಟ್ಟಿರೆ | ಕ್ಷೇಮವಾಯಿತೇ | ನಿಮ್ಮ ಮನಸಿಗೆ || ೪೬ ||

ವಿಗಡರಿನಿಬರು | ಇದ್ದು ದುರ್ಗವ | ಹೊಗದೆ ಹೊರಗಣ | ಮಾರಿ ಹೊರಗಿಂದ |
ಅಗಲಲೆನುತಲಿ | ಅಟ್ಟಿದಿರಲ್ಲ | ಮಗನ ಕಾಣದೆ | ಮನಸು ನಿಲ್ಲದು || ೪೭ ||

ಭಾಮಿನಿ

ನುಡಿದು ಫಲವೇನಕಟ ತಾನಿ |
ನ್ನೊಡೆಯರಿಲ್ಲದ ವಸ್ತುವಾದೆನು |
ಪಡೆದ ಪುಣ್ಯವಿದೆಂದು ಬಿಸುಸುಯ್ದಳಲಿ ಮೂರ್ಛಿಸುತ ||
ಹೊಡಕರಿಸಿ ಕೊಂಡೆದ್ದು ರೋಷದಿ |
ಕಡೆಯ ವಡಬಾನಲನ ತೆರದಲಿ |
ನುಡಿದ ಕೊಂದವನಾರು ಮಗನನು ನಿಜದಿ ಪೇಳೆನಲು || ೪೮ ||

ರಾಗ ಭೈರವಿ ಏಕತಾಳ

ಶರದ ಪಂಡಿತನೆಂಬವನೊ | ಸಂ | ಗರದಲಿ ರಿಪು ಸೈಂಧವನೊ ||
ತರಣಿಸುತನೊ ಸೌಬಲನೊ | ವಿ | ಸ್ತರಿಸೈ ಯಾರೆಂಬುದನು || ೪೯ ||

ಅಶ್ವತ್ಥಾಮನೊ ಕೃಪನೊ | ಕಲಿ | ದುಶ್ಯಾಸನನೆಂಬವನೊ ||
ಶಾಶ್ವತ ಭೂರಿಶ್ರವನೊ | ಪೇ | ಳೀಶ್ವರನಾಣೆ ಕೊಲ್ಲುವೆನು || ೫೦ ||

ಕೃತವರ್ಮನೊ ಬಾಹ್ಲಿಕನೊ | ಭೂ | ಪತಿ ಶಲ್ಯನೊ ತತ್ಸುತನೊ ||
ಕೃತಕದಿ ಕೊಂದವನಾರು | ಪೇ | ಳತಿಶಯದಲಿ ದಯೆದೋರು || ೫೧ ||

ರಾಗ ದೇಶಿ ಝಂಪೆತಾಳ

ಕೇಳಯ್ಯ ದೇವೇಂದ್ರಜಾತ ವಿಖ್ಯಾತ      || ಪಲ್ಲವಿ ||

ನೀನು ಸಮಸಪ್ತಕರ ಧುರಕೆ ಪೋಗಲು ಭೀಮ |
ಸೇನ ಸಾತ್ಯಕಿ ನಕುಲ ದ್ರುಪದಾದಿ ನೃಪರು  || ೫೨ ||

ಚಕ್ರವ್ಯೂಹವ ಪೊಗದೆ ನೊಂದು ಬಂದರು ಬಳಿಕ |
ವಿಕ್ರಮದೊಳಭಿಮನ್ಯು ಪೋದನಾಹವಕೆ || ೫೩ ||

ಅರಸನಾತ್ಮಜರ ನೂರ್ವರನು ಕೊಂದಾರಣದಿ |
ಒರಸಿದನು ಬಿಡದೆ ಮೂರಕ್ಷೌಹಿಣೀ ಬಲವ || ೫೪ ||

ತರಳನಿಗೆ ಬೆಂಬಲಕೆ ಪೋದವರ ಬಾಗಿಲೊಳು |
ಹರನ ವರವುಂಟೆಂದು ತಡೆದ ಸೈಂಧವನು || ೫೫ ||

ವೀರಾಧಿವೀರ ಷಡುರಥರೊಡನೆ ಹೊಯ್ದಾಡಿ |
ಏರಿದನು ಮಗನು ವಾಸವನ ಗದ್ದುಗೆಯ  || ೫೬ ||

ತರಳನಿಗೆ ಮರಣವನು ತಂದವನೆ ಸೈಂಧವನು |
ಅರುಹಲೇನೆನಲು ಕಿಡಿಗೆದರಿದನು ಪಾರ್ಥ || ೫೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರರೆ ಪ್ರಳಯದ ರುದ್ರನೆನೆ ಹೂಂ | ಕರಿಸುತಡಿಯಿಡುತೌಡುಗಚ್ಚುತ |
ನರನು ವೀರಾವೇಶದಲಿ ಭೂ | ವರನಿಗೆಂದ || ೫೮ ||

ಹುಡುಗನನು ಕೊಂದವನ ದೇಹಕೆ | ಹಿಡಿಯಿದಕೊ ಮಿಗೆ ಸಂಚಕಾರವು |
ನುಡಿದು ತಪ್ಪಿದರಿದಕೆ ಕೇಳ್ ನಿ | ನ್ನಡಿಗಳಾಣೆ || ೫೯ ||

ನಾಳೆ ಬೈಗಿಂದೊಳಗೆ ರಿಪುವನು | ಸೀಳುವೆನು ಸೀಳದಡೆ ಬಲು ನರ |
ಕಾಳಿಯಾಗಲಿ ತನಗೆ ಭಾಷೆಯ | ಕೇಳುಭೂಪ || ೬೦ ||

ಹರಿಹರರ ಮರೆಹೊಗಲಿ ವಾಣೀ | ವರನ ಕರದ ಕಮಂಡಲದೊಳವ |
ನಿರದೆ ಹುದುಗಲಿ ಸೈಂಧವನ ಸಂ | ಹರಿಸದಿರೆನು || ೬೧ ||

ರವಿಯು ಮುಳುಗದ ಮುನ್ನ ರಿಪು ಸೈಂ | ಧವನ ನಾಳಿನೊಳೊರೆಸದಿರ್ದಡೆ |
ಅವಗಡಿಸಿ ದಾವಾನಲನ ಕುಂ | ಡವನು ಹೊಗುವೆ || ೬೨ ||

ಭಾಮಿನಿ

ಕೇಳು ಧರ್ಮಜನೆಂಬ ಶೌರ್ಯ ಛ |
ಡಾಳತನ ನುಡಿಯಾಲಿಸುತ್ತ ಮ |
ರಾಳವಾಹನನಯ್ಯನತಿ ಹಿಗ್ಗುತಲೆ ನಡೆತಂದು ||
ಲೀಲೆಯಲಿ ಕಂಡಾಗ ಪಾರ್ಥನ |
ಮೇಲೆ ಕರುಣಾರಸವ ಬೀರುತ |
ಶ್ರೀಲತಾಂಗಿಯ ರಮಣ ನುಡಿದನು ಮಧುರವಚನದಲಿ || ೬೩ ||

ರಾಗ ನವರೋಜು ಏಕತಾಳ

ಮೆಚ್ಚಿದೆ ಮೆಚ್ಚಿದೆ ಪಾರ್ಥ | ನಿನ್ನ | ಹೆಚ್ಚಿನ ಭಾಷೆಯು ಸ್ವಾರ್ಥ || ಪ ||

ವೈರಿ ಸೈಂಧವಭಟನ | ಸಂ | ಸಾರವು ತೀರಿತು ವಚನ ||
ಮೀರುವರ್ ಯಾರು ಸುರಾಸುರರೊಳು ರಘು |
ವೀರನ ಬಾಣವಲ್ಲವೆ ನಿನ್ನಯ ನುಡಿ || ಮೆಚ್ಚಿದೆ || ೬೪ ||

ಖೂಳ ಸೈಂಧವನೃಪನ | ನೀ | ಸೀಳಲು ಪೋಗಿಹ ಮಗನ |
ಬಾಳಾಂಬಕನೊಳು ಪಡೆದಂತಾಯಿತು |
ನಾಳೆಗೆ ಸರ್ವರ ಶೋಕ ನಿವಾರಣ || ಮೆಚ್ಚಿದೆ || ೬೫ ||

ಭಾಮಿನಿ

ಇಂತು ಗೋವಿಂದನು ಕಿರೀಟಿಯ |
ಸಂತವಿಸಲಾ ಪುತ್ರಶೋಕವ |
ನಾಂತು ಮಗುಳಾಧರಿಸಲಾರದೆ ಬಂದು ಸೌಭದ್ರೆ ||
ಕಂತುಪಿತನಂಘ್ರಿಯಲಿ ಬಿದ್ದು ಮ |
ಹಾಂತವಾಗಿ ಪ್ರಲಾಪಿಸಿದಳದ |
ನೆಂತು ಬಣ್ಣಿಪೆ ಕೇಳು ಜನಮೇಜಯಮಹೀಪತಿಯೆ  || ೬೬ ||

ರಾಗ ರೇಗುಪ್ತಿ ಆದಿತಾಳ

ಅಣ್ಣ ನಾ ಮರೆವುದೆಂತು | ಎನ್ನಯ ಮುದ್ದು | ಚಿಣ್ಣನ ಋಣವು ಸಂತು ||
ಪುಣ್ಯಶ್ಲೋಕನೆ ನಿನಗಳಿಯನೆನಿಸುತೆನ್ನ | ಕಣ್ಣಮುಂದಿರುತಿರ್ದನು | ಅಭಿಮನ್ಯು || ೬೭ ||

ಹದಿನಾಲ್ಕು ವರುಷದೊಳು | ಕಂಟಕವು ಬಂ | ದೊದಗಲೆಂದಷ್ಟರೊಳು ||
ಪದುಮಭವನು ಫಣೆಯೊಳಗಿಂತು ಬರೆದನು | ಹದಮೀರಿ ಹೋಯಿತಲ್ಲ | ಈಶ್ವರ ಬಲ್ಲ || ೬೮ ||

ನೀವೆಲ್ಲರಿದ್ದಿರಲ್ಲ | ಎನ್ನಣುಗನಿ | ಗೀ ವಿಧಿಯಾಯಿತಲ್ಲ |
ಆವ ಪ್ರಕಾರದಿ ಸೈರಿಸಿಕೊಳಲಿನ್ನು | ದಾವಾಗ್ನಿಯನು ಹೊಗಲೋ | ಬಾಳಿರಲೋ || ೬೯ ||

ವಚನ
ಈ ರೀತಿಯಿಂದ ಸುಭದ್ರಾದೇವಿ ದುಃಖಿಸುತ್ತಿರಲಾಗಿ ಕೃಷ್ಣನು ಏನೆಂದು ಸಂತೈಸುತಿರ್ದನೆಂತೆನೆ –

ರಾಗ ಮಧ್ಯಮಾವತಿ ಏಕತಾಳ

ಕೇಳವ್ವ ತಂಗಿ ನೀ ಮರುಗದಿರಿನ್ನು | ಪೇಳುವೆ ಸೈರಿಸಬೇಕು ದುಃಖವನು ||
ಫಾಲದಿ ಕಮಲಜ ಬರೆದಕ್ಕರವನು | ತಾಳದೆ ಮೀರ್ವರ್ ಯಾರುಂಟು ಕರ್ಮವನು || ೭೦ ||

ಮಗನಿಗೆ ಮರಣವ ತಂದ ಖೂಳನನು | ಸಿಗಿಸುವೆ ನಾಳೆ ನೀ ನೋಡು ಭಾಷೆಯನು ||
ಮೃಗರಾಜನೊಳು ಮುನಿದಿಭವು ಬಾಳುವುದೆ | ಹಗರಣವನು ಬಿಟ್ಟು ತೆರಳು ದುಃಖಿಸದೆ || ೭೧ ||

ವಾರ್ಧಕ

ನಳಿನಾಕ್ಷನಿಂತೆಂದು ತಂಗಿಯನೊಡಂಬಡಿಸಿ |
ಮೊಳಗಿಸಿದನಾ ಪಾಂಚಜನ್ಯಮಂ ಕೋಟಿ ಸಿಡಿ |
ಲುಲಿವವೋಲಪ್ಪಳಿಸಲಾ ನರಂ ಕೂಡೆ ವರ ದೇವದತ್ತವನೂದಲು ||
ಘುಳು ಘುಳು ಧ್ವನಿ ಛಡಾಳಿಸುತೆಂಟು ದಿಕ್ಕಿನೊಳು |
ಕಳವಳಂಕೊಂಡು ಮೈಮರೆಯಲು ಜಗತ್ತ್ರಯಂ |
ಬಳಿಕ ಕುರುಸೇನೆ ತಲೆಗೆಳಗಾದುದಾ ರಾತ್ರೆ ಫಲುಗುಣನ ಭೀತಿಯಿಂದ || ೭೨ ||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ಕೇಳು ಕೇಳು ಧರಣಿಪಾಲಕ | ಇರುಳು ಬೊಂ |
ಬಾಳದೀವಿಗೆಗಳ ಪಿಡಿದ | ರಾಳು ಹರಿದುವೆಂಟು ದೆಸೆಗೆ  || ಕೇಳು    || ಪಲ್ಲವಿ ||

ಎಲೆಲೆ ಕುಳ್ಳರಿವರು ನಮ್ಮ | ಹೊಳಲು ಹೊಕ್ಕು ರಾತ್ರಿ ಬರಿದೆ |
ಧಳಧುಳಿಯನು ಮಾಡುತಿಹರು | ಕೊಲೆಗಡುಕರು ಪಾಂಡುಸುತರು |
ನಿಲದೆ ಕವಿಯೆನುತ್ತ ಸುಭಟರು | ಹೊಕ್ಕು ತಮ್ಮ |
ದಳದಿ ಹೊಯ್ದು ಹಳಚುತಿರ್ದರು  || ಕೌರವನ್ನ
ಬಳಿಗೆ ಬಂದರೋಡಿ ರಥಿಕ | ರಳವಿಗೊಡುತಲಹಿತಬಲದಿ || ಕೇಳು || ೭೩ ||

ಕಡಿವಣವನು ಕರಿಯ ಮುಖಕೆ | ತೊಡಿಸಿ ದಂತಿ ಘಟೆಗಳಿಂಗೆ |
ನಿಡುನೊಗಂಗಳನ್ನು ಕಟ್ಟಿ | ಬಿಡದೆ ಕಿವಿಯೊಳ್ ಕೀಲನಿಕ್ಕಿ |
ಝಡಿಯುತಿರ್ದರೇನನೆಂಬೆನು |  ಗುಳವ ಕುದುರೆ |
ಗಿಡಿಸಿ ಬಿಡಿಸಿ ಹೆಕ್ಕರಿಕೆಯನು || ಹಾಯ್ಕಿ ಶರವ ||
ಪಿಡಿದು ಧನುವ ಹೂಡಿ ಬಿಟ್ಟ | ರಡಸಿ ಮರುಳುಹಿಡಿದುದಾಗ || ಕೇಳು || ೭೪ ||

ಈತ ಪಾರ್ಥನೀತ ನಕುಲ | ನೀತ ದ್ರುಪದನೀತ ಭೀಮ |
ನೀತನೆಲೆ ಘಟೋತ್ಕಚನು ಭು | ಜಾತಿಶಯದ ವೀರರೆನುತ |
ಭೀತಿಯಿಂದ ಹೊಕ್ಕು ಹೊಯ್ದರು | ಕೌರವನನು |
ದೂತರೆಲ್ಲ ಮುತ್ತಿಕೊಂಡರು || ಬಳಿಕ ಸೇನೆ |
ಧಾತುಗೆಟ್ಟು ತಮ್ಮೊಳ್ ತಾವೆ | ಘಾತಿಸಿದರದೇನನೆಂಬೆ || ಕೇಳು || ೭೫ ||

ಭಾಮಿನಿ

ಅರಸ ಕೇಳಿಂತಾಗುತಿರಲ |
ಬ್ಬರಿಸಿ ಬೊಬ್ಬೆಯ ನಿಲಿಸುತಿರೆ ಬಂ |
ದರುಹಿದರು ಕೌರವಗೆ ಬೇಹಿನ ಚರರು ಸೈಂಧವನ ||
ಶಿರವ ಕೊಂಬನು ನಾಳೆ ಫಲುಗುಣ |
ನುರಿಯ ಹೊಗುವನು ಕೊಳ್ಳದಿರ್ದಡೆ |
ಸ್ಥಿರವಿದೆನಲಾ ನುಡಿಗೆ ಭಯಗೊಂಡನು ಜಯದ್ರಥನು || ೭೬ ||

ರಾಗ ಸುರುಟಿ ಆದಿತಾಳ

ಕೇಳು ಕೌರವೇಂದ್ರ | ಭಾಗ್ಯವಿ | ಶಾಲ ಸುಗುಣಸಾಂದ್ರ ||
ಬೀಳುಗೊಂಬೆವೀ ದೇಶವ ನಮಗೆ ಪ | ಲಾಯನಕಪ್ಪಣೆ ಕೊಡಿಸೈ ಬೇಗದಿ || ೭೭ ||

ನರನ ಕುಮಾರಕನ | ಕೊಂದವ | ನಿರದೆ ದುಶ್ಯಾಸನನ ||
ತರಳನು ನಾವ್ ಮಾಡಿದುದೇನೈ ಸುರ | ವರನಣುಗನಿಗೆ ವಿರೋಧವನಿಂದಿಲಿ || ೭೮ ||

ಹರನ ಶರದ ಬಲವು | ಮತ್ತಾ | ಮುರಮಥನನ ಒಲವು ||
ಇರುವದು ನರನ ನುಡಿಯು ಹೊಳ್ಳಾಗದು | ಬರಿದೊಂದಪಕೀರ್ತಿಯು ತನಗೊದಗಿತು || ೭೯ ||

ಶರದ ಪಂಡಿತನಿಂದ | ತನಗೀ | ಪರಿಯಾಯಿತು ಮುಂದಾ ||
ಹರನ ಮರೆಯ ಹೊಕ್ಕರು ತೀರದು ನಾಳೆ | ಶಿರವನು ಕಾಯ್ವರ ಕಾಣೆ ಮೂಲೋಕದಿ || ೮೦ ||

ರಾಗ ಕೇದಾರಗೌಳ ಅಷ್ಟತಾಳ

ಎಂದತಿ ಭಯಗೊಳಲಾಗ ಕೌರವರಾಯ | ನೆಂದ ಸೈಂಧವನೃಪಗೆ ||
ಇಂದಿದಕಂಜುವುದೇಕೆ ಭೀಮಾರ್ಜುನ | ರಿಂದಲೇನಾಗುವುದು || ೮೧ ||

ಭೀಮನ ಭಾಷೆಯೇನಾಯಿತು ತನ್ನಯ | ಕಾಮಿನಿಗಾಗಿ ಪೇಳ್ದ ||
ಸಾಮರ್ಥ್ಯವೇಕೆ ತೋರನು ಬಿಡು ಭಯವನು | ನೀ ಮರುಗದಿರೆಂದನು || ೮೨ ||

ಗರಡಿಯಾಚಾರ್ಯನ ಬಲವುಂಟು ವಜ್ರಪಂ | ಜರವಾಗಿ ನಮಗಿಂದಿಲಿ ||
ಪೊರೆವನು ನಾವಾತಗರುಹುವುದೆಂದಾಗೆ | ಲ್ಲರು ಬಂದರವನೆಡೆಗೆ || ೮೩ ||

ಭಾಮಿನಿ

ವಸುಧೆಪತಿ ಕೇಳಾ ಜಯದ್ರಥ |
ನೆಸೆವ ಕರ್ಣ ಕೃಪಾದಿಗಳು ಬಂ |
ದಸಮಬಲ ದ್ರೋಣಂಗೆ ಕಾಣಿಸಿಕೊಳಲು ತವಕದಲಿ ||
ಉಸಿರಿರ‍್ಯಾತಕೆ ಬಂದಿರೀ ನಡು |
ನಿಶಿಯೊಳೆಂದಡೆ ಕೌರವೇಂದ್ರನು |
ಬಿಸುಸುಯುತ್ತರುಹಿದನು ಭೀತಿಯನೆಲ್ಲ ಕಲಶಜಗೆ || ೮೪ ||

ರಾಗ ತುಜಾವಂತು ಝಂಪೆತಾಳ

ಗರಡಿಯಾಚಾರ್ಯ ಕೇಳಯ್ಯ ಗುರುವರ್ಯ | ಅರುಹುವೆನು ಸೈಂಧವಗೆ ಬಂದ ದುರ್ಘಟವ || ಪ ||

ನಾಳೆ ರವಿ ತೊಲಗದಾ ಮುನ್ನ ಸೈಂಧವನೃಪನ | ಸೀಳುವೆನು ಸೀಳದಿರಲಗ್ನಿ ಕುಂಡದಲಿ ||
ಬೀಳುವೆನೆನುತ್ತ ಭಾಷೆಯ ತೊಟ್ಟ ಫಲುಗುಣನು | ಮೇಲೇನುಪಾಯ ಕಂಡುದನರುಹಿರೆಮಗೆ ||೮೫||

ಆ ನದೀಸುತನ ಮೇಲೆಮಗೆ ಪರಮಾಪ್ತ ಜನ | ನೀನಲ್ಲದಿಲ್ಲವೈ ನಿಶ್ಚಯವು ನೋಡೆ |
ಏನಾದರೊಂದು ಬಗೆಯೊಳು ಸೈಂಧವನ ಕಾಯ್ವ | ಜಾಣತನ ನಿಮ್ಮದಲ್ಲದೆ ಪಥವ ಕಾಣೆ || ೮೬ ||

ಎನುತ ಪಾದದಿ ಬಿದ್ದ ಕೌರವನ ಪಿಡಿದೆತ್ತಿ | ವಿನಯದಲಿ ಪೇಳಿದನು ಶಸ್ತ್ರಪಂಡಿತನು ||
ಜನಪ ಕೇಳಾರು ಕೊಲ್ಲುವರು ಕಾಯುವರೆಲ್ಲ | ಘನತೆ ದೈವಾಧೀನವಲ್ಲದಿನ್ನುಂಟೆ || ೮೭ ||

ರಾಗ ಶಂಕರಾಭರಣ ಏಕತಾಳ

ಕೌರವರಾಯ ಕೇಳಯ್ಯ | ಶೌರಿಯ ತಂತ್ರವಿದೆಲ್ಲ |
ಮೀರುವರಾರುಂಟು ಜಗದಿ | ಭೂರಿ ಮಹಿಮೆಯ || ೮೮ ||

ಆತ ಪಾಂಡುಸುತರ ಭಾರ | ವಾತು ಕೊಂಡಿರ್ಪನು ನರನು |
ಸೋತುಪೋಪುದುಂಟೆ ಬಯಲ | ಮಾತಿದೆಂದನು  || ೮೯ ||

ಕೇಳು ಕರ್ಣ ಬೊಮ್ಮನನ್ನು | ಕೇಳಬಂದೆವೆ ನಾವಿನ್ನು |
ನಾಳಿನ ಕಾಳಗಕೇನು | ಹೇಳರು ಬರಿದೆ || ೯೦ ||

ಎಂದು ಚಿಂತಿಸುವ ಕೌರ | ವೇಂದ್ರಗೆ ಧೈರ್ಯವ ದ್ರೋಣ |
ನಂದು ಪೇಳ್ದ ಬಿಡು ಬಿಡಿಂಥ | ಬಂದ ಭಯಗಳ  || ೯೧ ||

ಜಡಜವ್ಯೂಹವನ್ನು ರಚಿಸಿ | ಬಿಡದೆ ಕಾಯ್ವೆ ಸೈಂಧವನ |
ಮೃಡನೆ ಬಂದಡ್ಡೈಸಿದರೆಯು | ತಡೆದುಕೊಂಬೆನು || ೯೨ ||

ಭಾಮಿನಿ

ಅರಸ ಕೇಳಿಂತೆಂದು ಕೌರವ |
ರರಸನನು ಸಂತವಿಸಿ ನುಡಿದನು |
ಧುರಕೆ ಬರಲಿ ಸಮಸ್ತ ವೀರರು ಷಡುರಥಾದಿಗಳು ||
ಮರೆದು ಕಳೆಯಿನ್ನಂಜಿಕೆಯನೆನೆ |
ಹರಿದುದತ್ತಲು ಸಭೆಯು ಲಕ್ಷ್ಮೀ |
ವರನು ಪಾರ್ಥನಿಗರುಹಿದನು ದ್ರೋಣನ ಪರಾಕ್ರಮವ || ೯೩ ||

ರಾಗ ಕಾಂಭೋಜಿ ಅಷ್ಟತಾಳ

ಕೇಳು ಧನಂಜಯ ಬಗೆಯ | ರಿಪು |
ಪಾಳಯದೊಳಗಾದ ಪರಿಯ ||
ಖೂಳ ಸೈಂಧವ ಭೀತಿಗೊಳಲು ಕೌರವ ಬಂದು |
ಕೋಲಪಂಡಿತನಿಗೆ ಪೇಳಿದ ಹದನವ  || ೯೪ ||

ವನಜವ್ಯೂಹವ ನಾಳೆ ರಚಿಸಿ | ಸೈಂಧ |
ವನ ಕಾವೆನೆನುತ ಭೀಕರಿಸಿ |
ಮನಸಿಜಾರಿಯ ಹೊಗೆಗೊಡೆನೆಂದು ದ್ರೋಣಾದ್ಯ |
ರನುವಾದರಿದಕೊ ಸಂಗರವಸದಳ ನಾಳೆ  || ೯೫ ||

ಭಾಮಿನಿ

ಮುರಹರನ ನುಡಿ ಕೇಳಿ ಫಲುಗುಣ |
ನರುಹಿದನು ನಿನ್ನೊಲುಮೆಯಿರುತಿರೆ |
ಧುರದಿ ಬಗೆವೆನೆ ದ್ರೋಣ ಪದ್ಮವ್ಯೂಹಗೀಹಗಳ |
ಪರಿಕಿಸೆನುತಾಯುಧದ ಶಾಲೆಗೆ |
ನರನು ಬಂದರ್ಚಿಸಿದನಾ ಶಂ |
ಕರನ ಪಾಶುಪತಾದಿ ಶರಗಳನುಗ್ರಮಂತ್ರದಲಿ || ೯೬ ||

ರಾಗ ವಸಂತಭೈರವಿ ಏಕತಾಳ

ಪೂಜೆಯ ಮಾಡಿದನು | ಪಾರ್ಥನು | ಬೀಜಮಂತ್ರಾಕ್ಷರದಿ  || ಪೂಜೆಯ     || ಪ ||

ಧನು ಶರ ಮೊದಲಾದ | ಕೈದುವನಿಟ್ಟು | ವನಜಾಕ್ಷಿ ದುರ್ಗೆಯನು |
ವಿನಯದಿ ಪ್ರಾರ್ಥಿಸುತ | ನವವಿಧ | ಘನತರ ಭಕ್ತಿಯಲಿ || ಪೂಜೆಯ || ೯೭ ||

ಧೂಪದೀಪಂಗಳಲಿ | ನವಮಾಂ | ಸೋಪಫಲಂಗಳಲಿ |
ಶ್ರೀಪರಮೇಶ್ವರಿಯ | ಮಂತ್ರಕ | ಲಾಪವ ಜಪಿಸುತಲಿ || ಪೂಜೆಯು || ೯೮ ||

ಭಾಮಿನಿ

ಇಂತು ಪೂಜಿಸಿ ಬಳಿಕ ನರನೇ |
ಕಾಂತಧ್ಯಾನದಿ ಮಲಗಿರಲು ಕಾ |
ಮಾಂತಕನ ಒಲವಾದುದನು ಮಿಗೆ ಕನಸಿನಲಿ ಕಂಡು ||
ಸಂತಸದೊಳೆದ್ದುದಯದಲಿ ಶ್ರೀ |
ಕಾಂತನಿಂಗಭಿನಮಿಸಿ ಪೇಳಿದ |
ನಂತರಂಗದೊಳಾದ ಸ್ವಪ್ನದ ಬಗೆಯನೆಲ್ಲವನು || ೯೯ ||