ಮೊದಲನೆಯ ಸಂಧಿ : ಅಭಿಮನ್ಯು ಕಾಳಗ
ರಾಗ ನಾಟಿ ಝಂಪೆತಾಳ
ಜಯ ಮಹಾಗಣನಾಥ | ಜಯ ರಾಮಸುಪ್ರೀತ |
ಜಯತು ಸದ್ಗುಣಯೂಥ | ಜಯ ಬಹು ಖ್ಯಾತ || ಜಯತು ಜಯ ಜಯತು || ಪ ||
ಗಜನಿಭಾಕೃತಿವದನ | ಘನಯೋಗಿಹೃತ್ಸದನ |
ಅಜಮುಖ್ಯಸುರನಮಿತ | ಅಖಿಲ ಗುಣಭರಿತ ||
ಭುಜಗಭೂಷಣ ದೇವ | ಭುವನಜನಸಂಜೀವ |
ತ್ರಿಜಗಧೀಶಾನಂತ ವರ ಏಕದಂತ || ಜಯತು ಜಯ ಜಯತು || ೧ ||
ವಿಘ್ನಭುಜಗಸುಪರ್ಣ ವಿಮಲ ಶೂರ್ಪಾಕರ್ಣ |
ವಿಘ್ನವಿಪಿನಕುಠಾರ | ವಿಶ್ವಾಧಿಕಾರ ||
ವಿಘ್ನಗಜ ಜೀಮೂತ | ವಿದಳಿತಾಘವ್ರಜ |
ವಿಘ್ನರಾಜ ಮುಕುಂದ | ಸಕಲ ಗುಣವೃಂದ | ಜಯತು ಜಯ ಜಯತು || ೨ ||
ಶರಪುರಸ್ಥಿರವಾಸ | ಶರಭ ಲಿಂಗೋಲ್ಲಾಸ |
ಕರಧೃತಮಹಾಪಾಶ | ಕಲುಷಾಬ್ಧಿನಾಶ |
ಶರಣಜನ ಪರಿಪಾಲ | ನಿರತ ಗಾನವಿಲೋಲ |
ವರದ ಶ್ರೀವಿಘ್ನೇಶ | ವಿನುತಜನ ಪೋಷ | ಜಯತು ಜಯ ಜಯತು || ೩ ||
ರಾಗ ಸೌರಾಷ್ಟ್ರ ಅಷ್ಟತಾಳ
ಕ್ಷೀರಸಾಗರಕನ್ಯೆ ಲೋಕಪ್ರಸನ್ನೆ ಶ್ರೀ | ಲಕ್ಷ್ಮೀದೇವಿ | ಮುದ್ದು |
ನಾರಾಯಣನುರಚಿಹ್ನೆ ಸನ್ಮೋಹನ್ನೆ | ಲಕ್ಷ್ಮೀದೇವಿ ||
ಭೂರಿ ಸನ್ಮತಿ ಭಾಗ್ಯವಿತ್ತೆನ್ನ ರಕ್ಷಿಸೆ | ಲಕ್ಷ್ಮೀದೇವಿ | ಬಂದು |
ಸೇರಿದೆ ನಿನ್ನಯ ಪಾದಪದ್ಮಂಗಳ | ಲಕ್ಷ್ಮೀದೇವಿ || ೪ ||
ವಾರ್ಧಕ
ವರ ಮಹಾಬ್ರಹ್ಮಾಣಿಯಂ ಭುಜಗವೇಣಿಯಂ |
ತರಣಿಶತಸಂಕಾಶೆಯಂ ಸುಜನಪೋಷೆಯಂ |
ಸುರುಚಿರಾಲಂಕಾರೆಯಂ ಶುಭಾಕಾರೆಯಂ ಧೀರೆಯಂ ಗುಣಸಾರೆಯಂ ||
ಶರದಿಂದುನಿಭವಕ್ತ್ರೆಯಂ ಘನಚರಿತ್ರೆಯಂ |
ದುರಿತಸಂತತಿ ಶಮನೆಯಂ ದ್ವಿರದಗಮನೆಯಂ |
ಸರಸವಿದ್ಯಾರೂಪೆಯಂ ಸತ್ಕಲಾಪೆಯಂ ನುತಿಸಿ ಮತಿಯಂ ಪಡೆವೆನು || ೫ ||
ದಶವದನಮದಭಂಗನಂ ಸುವಜ್ರಾಂಗನಂ |
ಅಸಮಕೀರ್ತಿಕಲಾಪನಂ ರೌದ್ರರೂಪನಂ |
ಅಸುರಕುಲವಿಧ್ವಂಸನಂ ಪರಮಹಂಸನಂ ಶಾಂತನಂ ಹನುಮಂತನಂ ||
ವಸುದೇವಜಾಧೀನನಂ ಭೀಮಸೇನನಂ |
ಋಷಿಕುಲಶಿರೋರನ್ನನಂ ಸುಮತಿಪೂರ್ಣನಂ |
ಎಸೆವ ಮಧ್ವಾಚಾರ್ಯನಂ ಗುರುಕುಲಾರ್ಯನಂ ಭಜಿಸಿ ಕೃತಿಯಂ ಪೇಳ್ವೆನು || ೬ ||
ಗಿರಿಜಾವಿಲೋಲನಂ ಶರಣಜನಪಾಲನಂ |
ತರಣಿಶತಭಾಸನಂ ಕರಿಚರ್ಮವಾಸನಂ |
ಉರಗೇಂದ್ರಹಾರನಂ ದುರಿತೌಘದೂರನಂ ತ್ರ್ಯಕ್ಷನಂ ಸ್ಮರಶಿಕ್ಷನಂ ||
ಹರಿಣಾಂಕಚೂಡನಂ ವರವೃಷಾರೂಢನಂ |
ಗುರುಕುಲೋತ್ತುಂಗನಂ ಗಂಗೋತ್ತಮಾಂಗನಂ |
ಶರಪುರಾಧೀಶನಂ ಶರಭಲಿಂಗೇಶನಂ ಸ್ಮರಿಸಿಮತಿಯಂ ಪಡೆವೆನು || ೭ ||
ಭಾಮಿನಿ
ಅಜ ಭವಾದಿ ಸಮಸ್ತ ದಿವಿಜ |
ವ್ರಜಕೆ ತಲೆವಾಗುತಲೆ ವಾಣಿಯ |
ಭಜಿಸಿ ಭಕ್ತಿವಿಶೇಷದಲಿ ವ್ಯಾಸರನು ಕೊಂಡಾಡಿ ||
ನಿಜಗುರು ಮರುತ್ಸುತನ ಹೃತ್ಸರ |
ಸಿಜದಿ ನೆಲೆಗೊಳಿಸುತಲೆ ಪಾದಾಂ |
ಬುಜಕೆ ಮಣಿಯುತ ಗುರು ಜನರನಾರಾಧಿಸುತ ಬಿಡದೆ || ೮ ||
ಕಂದ
ಶ್ರೀಮತ್ಕುಡುಮಪುರೀಶಂ |
ಸಾಮಜದನುಜಹರಂ ಸರ್ವಾರ್ಥ ಪ್ರದಾತಂ ||
ಕಾಮಿತಫಲವಿಂದೆಮಗಂ |
ಪ್ರೇಮದೊಳಿತ್ತಪುದು ಮಂಜುನಾಥನೆ ದಯದಿಂ || ೯ ||
ದ್ವಿಪದಿ
ಗುರು ವಾದಿರಾಜಸ್ವಾಮಿಗಳಡಿಯ ಭಜಿಸಿ |
ವರಪುರಂದರದಾಸರಂಘ್ರಿಗಳ ಸ್ಮರಿಸಿ || ೧೦ ||
ಭೂರಿ ಗ್ರಂಥಗಳಲಿ ವಿಶೇಷದಲಿ ಮೆರೆವ |
ಭಾರತಪುರಾಣದಿ ಕಿರೀಟಿಸುತನೆನುವ || ೧೧ ||
ಅಭಿಮನ್ಯು ಚಕ್ರವ್ಯೂಹವ ಪೊಕ್ಕ ಕಥೆಯ |
ಅಭಿವರ್ಣಿಸುವೆನು ಮೇಲಾದ ಸಂಗತಿಯ || ೧೨ ||
ಕನ್ನಡದ ನುಡಿಗಳಿಂದೆಕ್ಷಗಾನದಲಿ |
ವರ್ಣಿಸುವೆ ಮಧ್ವಪತಿ ಕೃಷ್ಣನೊಲವಿನಲಿ || ೧೩ ||
ಕೇಳಿ ಕವಿ ಜನರು ತಪ್ಪಿರಲು ತಿದ್ದುವುದು |
ಶೀಲ ಗುಣನಿಧಿಗಳವಧರಿಸಿ ಮೆರೆಸುವುದು || ೧೪ ||
ವಚನ
ಇಂತೀ ಸಕಲ ಗುರುದೇವ ಋಷಿಕವಿಗಳಂ ಕೊಂಡಾಡುತ್ತ ಸಂತೋಷದಿಂದೀ ಕಥೆಯನುಂ ಪೇಳ್ವೆನದೆಂತೆನೆ –
ರಾಗ ಸೌರಾಷ್ಟ್ರ ತ್ರಿವುಡೆತಾಳ
ದಯದಿ ವೈಶಂಪಾಯ ಜನಮೇ | ಜಯಗೆ ಭಾರತಕಥೆಯನೊಲಿದತಿ |
ನಯದಿ ವರ್ಣಿಸುತಿರಲು ಕೇಳುತ | ಪ್ರಿಯದೊಳೆಂದ || ೧೫ |
ಯತಿಕುಲೋತ್ತಮ ಕೇಳು ಪಾರ್ಥನ | ಸುತನು ನಿರುಪಮ ಚಕ್ರವ್ಯೂಹದೊ |
ಳತಿರಥರೊಳವನೆಂತು ಕಾದಿದ | ವಿತರಣದಲಿ || ೧೬ ||
ಚಂಡಭುಜಬಲ ಸೈಂಧವನ ತಲೆ | ಗೊಂಡನೆಂತು ಧನಂಜಯನು ಶ್ರೀ |
ಪುಂಡರೀಕಾಕ್ಷನ ಚರಿತ್ರೆಯ | ಕಂಡುದುಸಿರೈ || ೧೭ ||
ಎಂದು ಭಕ್ತಿಯೊಳರಸನೆನಲಾ | ನಂದದಲಿ ಭೂಪತಿಯ ತಳ್ಕಿಸಿ |
ಸಿಂಧುಶಯನನ ನೆನೆದು ಪೇಳ್ದ ಮು | ನೀಂದ್ರ ಮುದದಿ || ೧೮ ||
ರಾಗ ಭೈರವಿ ಝಂಪೆತಾಳ
ರಾಜಾಧಿರಾಜ ಜನ | ಮೇಜಯನೆ ಕೇಳೈ ಸ |
ರೋಜಾಕ್ಷಕಥೆ ಕಲ್ಪ | ಭೂಜ ಸಜ್ಜನಕೆ || ೧೯ ||
ದುರಿತಾಂಬುನಿಧಿಯನು | ತ್ತರಿಸುವಡೆ ನಾವೆಯಿದ |
ಹರಿಸು ನಿಮ್ಮವರ ಶುಭ | ಚರಿತೆಗಳನೊಲಿದು || ೨೦ ||
ಹರಿಚಮತ್ಕ ತಿಯಿಂದಲಾ | ಧುರದಿ ಭೀಷ್ಮನನು ಸಲೆ |
ಸರಳಮಂಚವ ಮಾಡಿ | ನರನು ಮಲಗಿಸಲು || ೨೧ ||
ಸುರನದಿಯ ಸುತನ ಕಂ | ಡರಿಭಯಂಕರ ದ್ರೋಣ |
ಗಿರದೆ ಪಟ್ಟವ ಕಟ್ಟಿ | ಕುರುರಾಯನಿರಲು || ೨೨ ||
ವರ ದ್ರೋಣ ಧರ್ಮಜನ | ಸೆರೆವಿಡಿಯೆ ಬಳಿಕ ಸಂ |
ಗರದಿ ಹರಿ ಬಿಡಿಸಿಕೊಂ | ಡರಿಭಟರ ಗೆಲಿದ || ೨೩ ||
ಇಂತಚ್ಯುತನ ದಯದಿ | ಕೌಂತೇಯರಿರಲಿತ್ತ |
ಚಿಂತಿಸಿದ ಕುರುರಾಯ | ನಂತರಂಗದೊಳು || ೨೪ ||
ರಾಗ ಸಾವೇರಿ ರೂಪಕತಾಳ
ಏನ ಮಾಡುವುದಿನ್ನು ಪಾಂಡವರ ಸೋಲಿಪಡೆ |
ದಾನವಾಂತಕನವರ್ಗೆ ಸಾರಥಿಯಾಗಿಹನು || ಏನ || ಪಲ್ಲವಿ ||
ಬಲರಾಮನಿಹನೆಂದು ಬಹಳ ಧೈರ್ಯವ ತಾಳ್ದೆ |
ನಿಳೆಯ ಪ್ರದಕ್ಷಿಣೆಯಾಯ್ತವಗಂದು || || ೨೫ ||
ಛಲದಂಕ ಭೀಷ್ಮಂಗೆ ಸರಳ ಮಂಚವದಾಯ್ತು |
ಬಿಲುಮುರಿದು ವಿದುರನು ಮೊದಲೆ ಜಾರಿದನು || || ೨೬ ||
ಮೊದಲೊಂದು ಬಾರಿ ಕುಂಭದ ಕುವರ ಕಟ್ಟಿದಡೆ |
ಇದಿರಾಗಿ ಯಮಜನ ಯದುಪತಿ ಬಿಡಿಸಿದನು || || ೨೭ ||
ಇದರ ಮೇಲಿನ್ನು ಯತ್ನವ ಕಾಣೆ ಪಾಂಡವರ |
ಕದನದಿ ಗೆಲುವಂಥ ಕಲಿಗಳಾರುಂಟು || || ೨೮ ||
ಭಾಮಿನಿ
ಧರೆಯಧಿಪ ಕೇಳಿಂತು ಕೌರವ |
ರರಸ ಚಿಂತಾಭಾರದಲಿ ತರ |
ಹರಿಸುತಿರಲಾ ವೇಳೆಯಲಿ ಕಲಶಜನು ನಡೆತಂದು ||
ಅರುಹಿದನು ಬಲು ಕ್ಲೇಶಲತೆಯನು |
ತರಿದು ಕಳೆ ಸಲೆ ಧೀರನಾಗಿರು |
ಪರಿಕಿಸೆನ್ನ ಪರಾಕ್ರಮಾಂಕುಶ ಮೊನೆಯನೆಂದೆನುತ || ೨೯ ||
ರಾಗ ಕಾಪಿ ಅಷ್ಟತಾಳ
ಕುರುಕುಲಾಗ್ರಣಿಯೆ ಕೇಳಯ್ಯ | ನಾಳೆ |
ಪರಿಕಿಸು ತನ್ನಯ ಶೌರ್ಯದ ಬಗೆಯ || ಕುರು || ಪ ||
ಅರ್ಜುನನೊಬ್ಬ ತಪ್ಪಿದರೆ | ಮಿಕ್ಕ | ಧೂರ್ಜಟಿ ಮೊದಲಾದವರೆನಗಿದಿರೆ |
ಊರ್ಜಿತ ಚಕ್ರವ್ಯೂಹವನು | ಮಾಡಿ | ಗರ್ಜಿಸಿ ಕಟ್ಟುವೆ ಧರ್ಮಪುತ್ರನನು || || ೩೦ ||
ಉರಗಭೂಷನ ವರವುಂಟು | ಇನ್ನು | ಸರಿಯಾರು ಸೈಂಧವನೃಪನಿಗೆ ಗಂಟು |
ಸರಕುಮಾಡನು ನಾಲ್ವರನ್ನು | ಕಾ | ದಿರುವನು ಪದ್ಮವ್ಯೂಹದ ದ್ವಾರವನ್ನು || || ೩೧ ||
ವಾರ್ಧಕ
ಗರಡಿಯಾಚಾರ್ಯನಿಂತೆನುತ ಘನಶೌರ್ಯಮಂ |
ಕುರುರಾಯನೊಡನುಸಿರುತಾ ಕ್ಷಣವೆ ನಿಲಿಸಿದಂ |
ಕರಿಘಟೆಗಳಂ ಶತಸಹಸ್ರಮಂ ರಥಗಳಯ್ವತ್ತು ಸಾವಿರಗಳೊಡನೆ ||
ತುರಗವಕ್ಷೌಹಿಣಿಗಳಂ ಸಾಲುಸಾಲಿನಿಂ |
ವರಪದಾತಿಗಳಯ್ದು ಲಕ್ಷಮಂ ಪಙ್ಕ್ತಯಿಂ |
ಪರುಠವಿಸಿ ಬಾಗಿಲೊಳಗಾ ಜಯದ್ರಥನ ನಿಲ್ಲೆಂದನಾ ದ್ರೋಣನಂದು || ೩೨ ||
ಭಾಮಿನಿ
ಅವನಿಪತಿ ಕೇಳಿಂತಬುಜವ್ಯೂ |
ಹವನು ರಚಿಸಲು ಕಾಣುತಾ ಕೌ |
ರವನು ಹಿಗ್ಗಲು ಬಳಿಕ ಸಮಸಪ್ತಕರು ಸಂಗರದಿ ||
ದಿವಿಜಪತಿನಂದನನೊಡನೆ ಕಾ |
ದುವೆವು ಬಿಡೆವೆಂದೆನುತ ಗರ್ಜಿಸ |
ಲವರಿಗಿತ್ತನು ವೀಳೆಯವ ನೃಪ ಹೊನ್ನಬಟ್ಟಲಲಿ || ೩೩ ||
ರಾಗ ಭೈರವಿ ಆದಿತಾಳ
ಭರದಿಂ ವೀಳ್ಯವ ಕೊಳುತ | ಹುಂ | ಕರಿಸಿ ಪರಾಕ್ರಮವೆನುತ |
ಕುರುರಾಯನಿಗರುಹಿದರು | ಸಲೆ | ಹರುಷದಿ ಸಮಸಪ್ತಕರು || ೩೪ ||
ಗೋತ್ರಾರಿಯ ನಂದನಗೆ | ಮೊಗ | ವೆತ್ತಲು ಬಿಡೆವೀ ಕಡೆಗೆ |
ಮತ್ತಾ ನಾಲ್ವರಗೆಲಿದು | ನಿ | ನ್ನರ್ತಿಯ ಸಲಿಸಿಕೊ ಒಲಿದು || ೩೫ ||
ತಂದೆಯ ಕೊಂದಾತನನು | ಎಂ | ದೆಂದಿಗು ಬಿಡೆ ವೈರವನು ||
ಮುಂದಾಗುವ ಕಾರ್ಯವನು | ಮಾ | ಡೆಂದು ಕರೆದು ದೂತರನು || ೩೬ ||
ಕೇಳಿರೊ ಭಟರರ್ಜುನಗೆ | ನೀವ್ | ಪೇಳಿರೊ ಸಂಗರದೊಳಗೆ ||
ನೀಲಾಂಗನ ಬಿಟ್ಟೀಗ | ಶಶಿ | ಮೌಳಿಯ ಕರೆಸಿಕೊ ಬೇಗ || ೩೭ ||
ಎಂದಾತನ ಬಳಿ ನಿಂದು | ನೀವ್ | ಕುಂದದೆ ಸೆರಗನು ಪಿಡಿದು ||
ಮುಂದಲಸದೆ ಬಹುದೆನುತ | ಬಲು | ಮಂದಮತಿಗಳಿರಲಿತ್ತ || ೩೮ ||
ಕಂದ
ಈ ತೆರವೆಂದುದ ಕೇಳ್ದಾ |
ದೂತರು ನಡೆತಂದರ್ಜುನನಿದಿರೊಳ್ ಭರದಿಂ ||
ಭೀತಿಯನುರೆ ಬಿಟ್ಟಾಗಲ್ |
ಕಾತರದಿಂದುಸಿರಿದರೊಡೆಯರ್ ಬೆಸಸಿದುದಂ || || ೩೯ ||
ರಾಗ ಮುಖಾರಿ ಏಕತಾಳ
ಲಾಲಿಸಿ ಕೇಳಿಂದ್ರ ಸಂಜಾತ | ಆಲಸ್ಯ ಮಾಡ | ದೇಳು ಸಂಗರಕೆ ಲೋಕವಿಖ್ಯಾತ || ಪ ||
ನಂದಗೋಪಜನ ಬಿಟ್ಟು ಬೇಗ | ಕರೆಸಿಕೊ ಧುರ | ಕಿಂದು ಮೌಳಿಯ ಬೆಂಬಲಕೀಗ |
ಇಂದು ರಣಾಗ್ರದಿ ಬದುಕಿದರೆಯು ನೀ | ನೆಂದೆಂದಿಗಾದರು ಬದುಕಿದ ಗಡ |
ಮುಂದಪ್ಪುದನೆಲ್ಲ ಶಿವನೇ ಬಲ್ಲ | ನಿಂದಿರು ನಿಂದಿರು ಧೈರ್ಯವ ಕುಂದದೆ || ೪೦ ||
ಗೋವಳ ಸಾರಥಿ ನಿನ್ನ ರಥಕೆ | ಅಡವಿಗಳಲ್ಲಿ | ಜೀವಿಪ ಕಪಿಯು ನಿನ್ನ ಧ್ವಜಕೆ ||
ಈ ವಿಧಿಯೇನೆಂಬೆವು ನಡೆನಡೆ ರಣ | ಕೋವಿದರಿಹರೆಮ್ಮಲ್ಲಿ ನೀನವರೊಳು |
ಜೀವಿಸಿದರೆ ನಿನ್ನವ್ವೆಗೆ ಕುವರನು | ಭಾವಿಸೆನುತ ಮಿಗೆ ಹಿಡಿದರು ಸೆರಗನು || ೪೧ ||
ಭಾಮಿನಿ
ಚರರ ನುಡಿಯನು ಕೇಳಿ ನಗುತಲೆ |
ನರನು ಪೇಳ್ದನು ನಲವಿನಿಂದಲಿ |
ಬರುವೆವೈ ಸಂಗರಕೆ ಬೇಕಾದವರನೊಡಗೊಂಡು ||
ಭರದಿ ನಿಮ್ಮೊಡೆಯರಿಗೆ ಸೂಚಿಸಿ |
ತೆರಳಿ ನೀವೆಂದವರ ಕಳುಹಲು |
ಶರದ ಪಂಡಿತನಾಳ್ಗಳೈತಂದೊರೆದರರ್ಜುನಗೆ || ೪೨ ||
ರಾಗ ಸಾರಂಗ ಅಷ್ಟತಾಳ
ಕೇಳು ಧರ್ಮಾನುಜಾತ | ಸಂಗರಕೆ ಬೇ | ಗೇಳು ಮೂಲೋಕಖ್ಯಾತ || ಪ ||
ಕಲಿಘಟೋತ್ಕಚಗರಿದು | ಭೀಮನಿಗಸ | ದಳವಾಗಿ ತೋರುವುದು |
ಒಳಹೊಗಲರಿದು ಮಾದ್ರೇಯರಿಗಿಂದಿನ | ನಳಿನವ್ಯೂಹದ ಕೋಟೆಯ ಬಲುಸೇನೆಯ || ೪೩ ||
ಶಿವನೊಳ್ ಬೇಡಿದ ಶರವ | ನೀ ತೆಗೆ ಗಾಂಡೀ | ವವ ಬಾಗಿ ಕುಲದೈವವ |
ತವಕದಿ ಬೇಡಿಕೊ ಅವರಿವರಂತಲ್ಲ | ಅವಗಡಿಸಲು ಗುರುವಿಂಗಿದಿರ್ ಯಾರುಂಟು || ೪೪ ||
ಭಾಮಿನಿ
ಅರಸ ಕೇಳರ್ಜುನನ ದೂತರು |
ಜರೆದು ನುಡಿಯಲ್ಕವರ ಕಳುಹುತ |
ಕರವ ಮುಗಿದಸುರಾಂತಕಂಗರುಹಿದನು ಭಕ್ತಿಯಲಿ ||
ಚರಣಚಿತ್ತವದಾವ ತಟ್ಟಿನೊ |
ಳಿರುವದಿಂದಿನ ಸಮರವೆನಲಂ |
ಬುರುಹನಾಭನು ಮನದಿ ನಿಶ್ಚಯಿಸಿದನು ನಸುನಗುತ || ೪೫ ||
ರಾಗ ಕಾಂಭೋಜಿ ಝಂಪೆತಾಳ
ಅಳಿಯನೀ ಮೋಹರದೊಳುಳಿದರಿನ್ನವಗೆ ಮುಂ | ದಳಿವಿಲ್ಲ ಕಲಿಯುಗದೊಳೆನುತ ||
ತಿಳಿದು ಫಲುಗುಣಗೆಂದನೇಳು ಸಮಸಪ್ತಕರೊ | ಳಳವಿಗೊಡಲಿಂದು ಬೇಗದಲಿ || ೪೬ ||
ಬಗೆವನೇ ನಿನ್ನಯ ಕುಮಾರನೀ ಸಮರವನು | ತೆಗೆಯದೇತಕೆ ಭಂಡತನವು ||
ಹಗಲರಸನಾರೋಗಣೆಗೆ ಸೊಡರು ಬೇಕೆ ಮಿಗೆ | ಖಗರಾಜನಂಜುವನೆ ಫಣಿಗೆ || ೪೭ ||
ಎಂದಾಗ ಕಪಟನಾಟಕ ರಥವ ತಿರುಹುತಲಿ | ಬಂದನರ್ಜುನನನೊಡಗೊಂಡು ||
ನಿಂದು ಸಮಸಪ್ತಕರೊಳಳವಿಯನು ಕೊಟ್ಟನು ಪು | ರಂದರಾತ್ಮಜನು ಶೌರ್ಯದಲಿ || ೪೮ ||
ರಾಗ ಶಂಕರಾಭರಣ ಮಟ್ಟೆತಾಳ
ನರನು ಗಾಂಢೀವಧನುವ ಝೇಂಕರಿಸುತಲಿ | ಸರಳ ಮಳೆಯ ಕರೆದನಾಗ ಫಡ ಫಡೆನುತಲಿ ||
ಸುರಪಸುತನ ಮಾರ್ಗಣಗಳ ತರಿವುತುಗ್ರದಿ | ದುರುಳ ಖಳರನೇಕಶರವ ಬಿಡಲು ಶೀಘ್ರದಿ ||೪೯||
ಅತುಳಬಲ ಕಿರೀಟಯದನು ಕಡಿಯಲೆಂದರು | ಪಿತನು ಪೋದ ಠಾವ ನಿನಗೆ ತೋರ್ಪೆವೆಂದರು |
ಸುತರು ಪೋಪುದುಚಿತ ಜನಕರಿರುವ ಲೋಕವ | ಹಿತದಿ ತೋರ್ಪೆನೆನುತ ನರನು ಕವಿದನಸ್ತ್ರವ ||೫೦||
ಪಾರ್ಥಮೋಹನಾಸ್ತ್ರಕಿದಿರು ನಿಲ್ಲದಧಟರು | ಧಾತ್ರಿಗೊರಗೆ ನಿದ್ರೆಯಿಂದ ಬಳಿಕಲಿಬ್ಬರು |
ಮತ್ತೆ ಮೂದಲಿಸುತ ಕರೆದರಾ ರಣಾಗ್ರದಿ | ದೈತ್ಯರನ್ನು ಜರೆವುತಾಗ ಘನ ವಿಲಾಸದಿ || ೫೧ ||
ವಾರ್ಧಕ
ಹರಿಧನಂಜಯರಿತ್ತ ಕಾದುತಿರಲಿತ್ತ ಸಂ |
ಗರಕೆ ಧೃಷ್ಟದ್ಯುಮ್ನ ಕಲಿ ಘಟೋತ್ಕಚ ನಕುಲ |
ಧುರವಿಜಯ ಸಾತ್ಯಕಿ ವಿರಾಟ ಕುಂತೀಭೋಜ ಮುಖ್ಯರಾ ದುರ್ಗವನ್ನು ||
ಮುರಿಯಲಾರದೆ ಗಾಯವಡೆದು ತಿರುಗುತ್ತಿರಲು |
ಮರುತಜಂ ಕಾದಿ ಮರಳಿದನೆಂದು ಧರ್ಮಜಂ |
ಬೆರಳ ಮೂಗಿನೊಳಿಟ್ಟು ಚಿಂತೆಯಂ ತಾಳಿ ತನ್ನೊಡನೆ ತಿಳಿದಿಂತೆಂದನು || ೫೨ ||
ಭಾಮಿನಿ
ಕಾಮಪಿತನಿದ ಬಲ್ಲನಾ ಬಲ |
ರಾಮನರಿವನು ಪಾರ್ಥ ತಿಳಿವನು |
ಭೂಮಿಯಲಿ ಸುರಪತಿಯ ಮೊಮ್ಮನು ಬಲ್ಲ ಹೋಗಲಿಕೆ ||
ಕ್ಷೇಮದಲಿ ಬರಲರಿಯನವನೀ |
ಸೀಮೆಯಲಿ ಮಿಕ್ಕವರ ಕಾಣೆನು |
ಹಾ ಮಹಾದೇವೆನುತ ಚಿಂತಿಸುತಿರ್ದನವನೀಶ || ೫೩ ||
ರಾಗ ಮಾರವಿ ಏಕತಾಳ
ಇಂತು ಚಿಂತಿಸುವುದನರಿತಭಿಮನ್ಯು ಮ | ಹಾಂತ ಪರಾಕ್ರಮದಿ ||
ನಿಂತು ಮುಂಗೈಸರಪಣಿಯನು ಸರಿಸುತ | ಪಂಥದಿ ಪಿತಗೆಂದ || ೫೪ ||
ಬೊಪ್ಪನೆ ಬಿಡು ಬಿಡು ಚಿಂತೆಯ ರಿಪುಗಳ | ಸೊಪ್ಪರಿವೆನು ಬಿಡದೆ |
ತಪ್ಪದೆ ಚಕ್ರವ್ಯೂಹವ ಪೊಕ್ಕಧಟರ | ನೊಪ್ಪಿಸುವೆನು ಯಮಗೆ || ೫೫ ||
ಬಲ್ಲೆನು ನಾನಾ ವ್ಯೂಹದಿ ಸೆಣಸುವು | ದೆಲ್ಲ ಚಮತ್ಕೃತಿಯ ||
ನಿಲ್ಲದೆ ವೀಳ್ಯವನೆನಗಿತ್ತು ಕಳುಹಿಸು | ತಲ್ಲಣಗೊಳದೀಗ || ೫೬ ||
ಮಾರಿಗೆ ಹಬ್ಬವ ಮಾಡುವೆ ಕೌರವ | ವೀರರ ತಲೆಗಡಿದು ||
ಸೂರೆಗೊಂಬೆ ನಿಮಿಷಾರ್ಧದಿ ದುರ್ಗವ | ಪೌರುಷ ನೋಡೆಂದ || ೫೭ ||
ಭಾಮಿನಿ
ವಸುಧೆಪತಿ ಕೇಳಾಗ ಧರ್ಮಜ |
ಪಸರಿಸುವ ಚಿಂತೆಗಳ ಬಿಟ್ಟು |
ಲ್ಲಸದಿ ಮಗುವನು ತೆಗೆದು ಬಿಗಿದಪ್ಪುತಲೆ ಮುಂಡಾಡಿ ||
ಶಿಶುವು ನೀನೆಲೆ ಮಗನೆ ಸಂಗರ |
ವಸದಳವು ಧುರಧೀರ ಷಡುರಥ |
ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ || ೫೮ ||
ರಾಗ ತೋಡಿ ಆದಿತಾಳ
ಮಗನೆ ಕೇಳ್ ಕಾಲಾಗ್ನಿಯ ಹೊಗಬಹುದಹಿಪನ | ಝಗಝಗಿಸುವ ಪೆಡೆಯೊಳು ನಲಿದಾಡಬಹುದು |
ವಿಗಡ ಮೃತ್ಯುವಿನ ಬಾಯೊಳು ಹೊಕ್ಕು ಬರಬಹುದು | ಪೊಗುವಡಸಾಧ್ಯವು ಚಕ್ರವ್ಯೂಹವನು |
ಎಂತು ಪೋಪೆಯೊ ಮಗನೆ | ಚಕ್ರವ್ಯೂಹಕಿ |
ನ್ನೆಂತು ಪೋಪೆಯೋ ಮಗನೆ || ೫೯ ||
ರಾಗ ಭೈರವಿ ಮಟ್ಟೆತಾಳ
ಬಿಡು ಬಿಡಾ ಮಹಾ | ಸಿಂಹರಾಜನ | ತುಡುಕಿ ಕರಿಗಳು | ಬದುಕಲಾಪವೆ |
ತಡೆಯದೆನ್ನನು | ಕಳುಹಿ ಪರಿಕಿಸು | ಕೊಡನ ಕುವರನ | ಕುಟಿಲಕಂಜೆನು || ೬೦ ||
ರಾಗ ತೋಡಿ ಆದಿತಾಳ
ಕಂದ ಕೇಳಶ್ವತ್ಥಾಮ ಗುರು ಕೃಪಾದಿತ್ಯಸುತ | ರೊಂದಾಗಿರ್ಪರು ನವಗ್ರಹರೊಗ್ಗಾದಂತೆ ||
ಇಂದುಧರಗೆ ಒಳಪೊಕ್ಕು ಜೀವಿಸಲರಿದು | ಸಂದೇಹವುಂಟೆ ರಣ ಸಾಮಾನ್ಯವಲ್ಲ ||
ಎಂತು ಪೋಪೆಯೊ ಮಗನೆ || ೬೧ ||
ರಾಗ ಭೈರವಿ ಮಟ್ಟೆತಾಳ
ಗಾಳಿ ಬೆವರುವು | ದುಂಟೆ ವಹ್ನಿಯ | ಜ್ವಾಲೆ ತುಹಿನಕೆ | ಬೆದರಿ ಪೋಪುದೆ |
ಬಾಲನೆಂದೆನ್ನ | ಚಿಂತೆ ಮಾಡದೆ | ಕಾಳಗಕ್ಕಿಂದು | ಕಳುಹುಬೇಗದಿ || ೬೨ ||
ರಾಗ ತೋಡಿ ಆದಿತಾಳ
ಮಾಣದೆ ಭೀಮ ಬಂದಾ ನಕುಲ ಸಾತ್ಯಕಿಯರ | ಪ್ರಾಣ ಮಾತ್ರದಿ ಬಿಟ್ಟರರಿಭಟರಿಂದು ||
ತ್ರಾಣವುಳ್ಳ ವಿರಾಟ ದ್ರುಪದರುಮ್ಮಹವಲ್ಲಿ | ಕಾಣದೆಯಡಗಿತು ಕಾಳಗದೊಳಗೆ ||
ಎಂತು ಪೋಪೆಯೊ ಮಗನೆ || ೬೩ ||
ರಾಗ ಭೈರವಿ ಮಟ್ಟೆತಾಳ
ಹಲವು ಪುಷ್ಪದ | ವಾಸನೆಗಳ | ಕೊಳಲು ಸಂಪಿಗೆ | ಯರಳ ಪರಿಮಳ |
ಅಳಿಕುಲಕ್ಕದು | ಪಥ್ಯವಪ್ಪುದೆ | ತಿಳಿಯದೆನ್ನನು | ಕೆಣಕಿ ನೋಡಲಿ || ೬೪ ||
ಭಾಮಿನಿ
ಇಳೆಯರಸ ಕೇಳಿಂತು ಕುವರನ |
ಛಲದ ನುಡಿಗುರೆ ಹಿಗ್ಗುತಲೆ ಬೆಂ |
ಬಲಕೆ ಮೋಹರಸಹಿತ ಬಹೆವೆಂದಾಗ ವೀಳೆಯವ ||
ಘಳಿಲನಿತ್ತಭಿಮನ್ಯು ವೀರನ |
ಕಳುಹಲಾ ವಾರ್ತೆಯನು ಕೇಳುತ |
ನಳಿನಮುಖಿ ಸೌಭದ್ರೆ ಬಂದಳು ಕುವರನೆಡೆಗಳುತ || ೬೫ ||
ರಾಗ ಕಾಂಭೋಜಿ ಏಕತಾಳ
ಏತಕಿಂಥ ಬುದ್ಧಿ ಬಂತು | ಕಂದ ಕಂದ | ನಿನಗೆ |
ಪ್ರೀತಿಯೇನೊ ಮರಣದೊಸಗೆ | ಕಂದ ಕಂದ || ೬೬ ||
ನೀತಿಯಲ್ಲ ಪೋಪುದಿಂದು | ಕಂದ ಕಂದ | ಎನ್ನ |
ಘಾತಿಸಿ ಪೋಗಯ್ಯ ರಣಕೆ | ಕಂದ ಕಂದ || ೬೭ ||
ಸರಸವಲ್ಲ ಸಮರವಿಂದು | ಕಂದ ಕಂದ | ಕಲಶ |
ತರಳನ ಗೆಲಲಾ ಭವಗರಿದು | ಕಂದ ಕಂದ || ೬೮ ||
ಹಿರಿಯ ತಂದೆಯಂಜರ್ ಯಾಕೊ | ಕಂದ ಕಂದ | ಮುಂದೆ |
ಬರುವ ಹಾನಿ ವೃದ್ಧಿಯೆಂತೊ | ಕಂದ ಕಂದ || ೬೯ ||
Leave A Comment