ಭಾಮಿನಿ

ಎಲೆ ಜಯದ್ರಥ ಕೇಳು ನಿನ್ನಯ |
ತಲೆಯ ಕೊಂಬನು ನಾಳೆ ಫಲುಗುಣ |
ತಿಳಿದುಕೋ ಎಂದಬ್ಬರಿಸುತಲ್ಲಿಂದ ಮರಳಿದನು ||
ಉಳಿದ ಸುಭಟರು ಕಾದಲಾರದೆ |
ಕಳವಳಿಸಿ ತಿರುಗಿದರು ದುರ್ಗದೊ |
ಳಳವಿಗೊಡುತಭಿಮನ್ಯು ಮೆರೆದನು ನರನ ಪ್ರತಿಗಾಗಿ  || ೧೪೪ ||

ವಾರ್ಧಕ

ಅವನಿಪತಿ ಕೇಳಿತ್ತಲಭಿಮನ್ಯು ಸಮರದೊಳ್ |
ಸವರಿದಂ ಪದಿನೆಂಟು ಸಾವಿರ ಗಜಂಗಳಂ |
ವಿವರಿಸಲ್ಕಯ್ವತ್ತು ಸಾವಿರ ತುರಂಗ ಮೂವತ್ತು ಸಾವಿರ ರಥಿಕರ ||
ಬವರದೊಳ್ ಗೆಲಿದು ಲಕ್ಷಪದಾತಿಗಳನೊರೆಸಿ |
ತವಕದಿಂ ವೀರ ಶಲ್ಯಕುಮಾರನಂ ಮುರಿಯ |
ಲವಗಡಿಸಿದರ್ ಲಕ್ಷಣಾದಿ ದುರ್ಯೋಧನಾತ್ಮಜರು ಸಖನಳಿದನೆಂದು || ೧೪೫ ||

ರಾಗ ಶಂಕರಾಭರಣ ಮಟ್ಟೆತಾಳ

ಸುರಪಸುತಕುಮಾರ ಕೇಳು ಶಲ್ಯಸುತನನು |
ಮುರಿದೆನೆಂಬ ಗರ್ವ ಬೇಡ ನಿನ್ನವೊಡಲನು ||
ಭರದಿ ಸೀಳಿ ತೆಗೆವೆವೀಗ ನಮ್ಮ ಸಖನನು |
ಪರಿಕಿಸೆನುತ ಕರೆದರಾಗ ಸರಳ ಮಳೆಯನು || ೧೪೬ ||

ಅಹುದು ನಿಮಗೆ ಮಿತ್ರನಾದಡಾತನೊಗ್ಗಿಲಿ |
ವಿಹಿತದಿಂದ ಪವಡಿಸುವುದೆನುತ್ತ ಭರದಲಿ |
ಗಹಗಹಿಸುತಲೆರಡು ಶರದಿ ಲಕ್ಷಣಾದ್ಯರ |
ಸಹಿತ ಕೆಡಹಿದನು ತ್ರಿಪಂಚಶರದೊಳೆಲ್ಲರ || ೧೪೭ ||

ಇಂತು ಕುವರಸಂತತಿಯನು ಸಂಹರಿಸಿದನು |
ಚಿಂತಿಸುತಲೆ ಕೌರವೇಂದ್ರ ಕಾಣುತೆಂದನು ||
ಪಂಥ ಸುಡು ಸುಡಿವರ ಬಂದು ಪೊಕ್ಕ ಮನೆಗಳು |
ಎಂತು ಹಾಳುಬೀಳದಿಹುದೆ ದ್ರೋಣಕಲಿಗಳು || ೧೪೮ ||

ರಾಗ ಘಂಟಾರವ ಧ್ರುವತಾಳ

ಇಕ್ಷುಚಾಪನಂತೆ ತೋರ್ಪ | ಲಕ್ಷಣ ಹಾ ಮಗನೆ |
ಅಕ್ಷಿಗಳ ತೆರೆದೀಗೆನ್ನ | ನೀಕ್ಷಿಸಿ ಮಾತಾಡು || ೧೪೯ ||

ಷಡುರಥರಿದ್ದೆನ್ನ ಸುತರ | ಬಿಡದೆ ವೈರಿ ಭಟನ ||
ಜಡಿವಾಯುಧಕಾಹುತಿಯ ಕೊಟ್ಟು | ಮಿಡುಕದಿರುವರಲ್ಲ || ೧೫೦ ||

ಸಾಲದೆ ಪಾಂಡರ ಕುಲಕೆ | ಬಾಲನೀತನೊಬ್ಬ ||
ಖೂಳರಿವರ ಮಾತಕೇಳಿ | ಮೂಲವಳಿದುದಕಟ || ೧೫೧ ||

ರಾಗ ಕಾಂಭೋಜಿ ಝಂಪೆತಾಳ

ಆಳಿದನ ಮೂದಲೆಯ ಗಾಳಿ ಬರೆ ಖತಿಶಿಖಿ ಚ | ಡಾಳಿಸಿತು ಸುಭಟರೆಲ್ಲರಿಗೆ ||
ಡಾಳಿಸುವ ಶಸ್ತ್ರಾಸ್ತ್ರಗಳ ಧರಿಸಿ ಮುತ್ತಿದರು | ಬಾಲಕನ ಮೇಲೆ ಮೇಲ್ವಾಯ್ದು || ೧೫೨ ||

ರವಿತನಯ ಶಲ್ಯ ಗೌತಮಿ ಕೌರವನ ತಮ್ಮ | ತವಕಿಸುತ ದ್ರೋಣಸುತ ಸಹಿತ ||
ಇವರು ಷಡುರಥದೊಂದುಗೂಡಿ ಮುತ್ತಿದರು ವಾ | ಸವನ ಮೊಮ್ಮನ ರಣಾಂಗಣದಿ || ೧೫೩ ||

ಎಲವೊ ಮಗುವೆಂದು ಬಿಟ್ಟೆವು ಎರಡು ಬಾರಿ ಕೇಳ್ | ತಿಳಿಯದುಮ್ಮಹದಿಂದ ಕುಣಿವೆ ||
ಫಲುಗುಣನ ಕರೆಸಿಕೋ ಬೆಂಬಲಕೆ ಕೆಡದಿರೆಂ | ದಲಘು ಭಟರೆಚ್ಚರಸ್ತ್ರಗಳ || ೧೫೪ ||

ಪಾರ್ಥ ಪರಿಯಂತೇಕೆ ಗೋಗ್ರಹಣದಲಿ ಬಲು ಸ | ಮರ್ಥಿಕೆಯ ತೋರಿದವರಹುದು |
ವ್ಯರ್ಥ ಕೌರವನ ದ್ರವ್ಯವ ತಿಂದು ಜೀವಿಸುವ | ಧೂರ್ತರೆಂದೆಚ್ಚನಭಿಮನ್ಯು || ೧೫೫ ||

ಭಳಿರೆ ಬಿಲ್ಲಾಳುತನ ಬಿಂಕದಲಿ ಶಿವ ನೀನು | ಇಳೆಯೊಳೆಣೆಯಿಲ್ಲೆಂದು ಪೊಗಳಿ ||
ಕಲಶಭವನೆಚ್ಚಡಾ ಶರವನೆಲ್ಲವ ತರಿದು | ತಲೆಗೆಳಗು ಮಾಡಿದನು ಕ್ಷಣದಿ || ೧೫೬ ||

ಇಂತು ಷಡುರಥರು ಹಿಮ್ಮೆಟ್ಟುತಿರಲಾ ದ್ರೋಣ | ನಂತರಂಗದಿ ರವಿಜಗೆಂದ ||
ನಿಂತಿವನ ಕೂಡೆ ಕಾದುವಡರಿದು ಚಾಪವಿರ | ಲಂತಕಾಂತಕಗೆ ಸಮ್ಮುಖದಿ || ೧೫೭ ||

ರೂಪುಗಾಣಿಸದೆ ಬೆಂಗಡೆಯಲ್ಲಿ ನಿಂತವನ | ಚಾಪವನು ಮುಕ್ಕಡಿಯ ಮಾಡು ||
ಭೂಪತಿಯ ಕಾರ್ಯವೆನೆ ಮನಗುಂದಲೆಂದನೀ | ಪಾಪ ನಿನಗಿಲ್ಲೆನುತ ದ್ರೋಣ || ೧೫೮ ||

ಭಾಮಿನಿ

ಹಿಂದೆ ರವಿಸುತ ಕೃಪ ನೃಪಾನುಜ |
ರೊಂದು ಕಡೆಯಲಿ ಕಾದಿದರುಮಿಗೆ |
ಮುಂದೆ ದ್ರೋಣನು ಸುತಸಹಿತ ರಿಪುಭಟನ ಕೆಣಕಿದರು ||
ನಿಂದು ದಿವ್ಯಾಸ್ತ್ರದಲಿ ಚಾಪವ |
ನಂದು ಮುಕ್ಕಡಿಯಾಗಿ ಕಡಿಯಲು |
ಮಂದಹಾಸದಿ ತಿರುಗಿ ಕರ್ಣನ ಕಂಡನಭಿಮನ್ಯು || ೧೫೯ ||

ರಾಗ ಮಧ್ಯಮಾವತಿ ಅಷ್ಟತಾಳ

ಧೀರನಹುದಹುದೊ | ಕರ್ಣನೆ ರಣ | ಶೂರನಹುದಹುದೊ |
ಧಾರಿಣಿಯೊಳಗಿದಿರಿಲ್ಲ ನೀ ಕಪಟದಿ || ಧೀರನಹುದಹುದೊ     || ಪಲ್ಲವಿ ||

ಚೋರನಂದದಿ ಹಿಂದೆ ನಿಂತೆ | ರೂಪು | ದೋರದೆ ಬಾಣವನಾಂತೆ |
ಓರೆಯೊಳ್ ಧನುವ ಖಂಡಿಸಿದೆಯೀ ವಿದ್ಯವ |
ನಾರುಕಲಿಸಿದರಯ್ಯ | ಲೋಕದಿಕೀರ್ತಿ
ಸಾರವ ಪಡೆದೆಯಯ್ಯ | ಕ್ಷತ್ರಿಯರೊಳು |
ದಾರನೆಂದಾದೆಯಯ್ಯ || ಕರ್ಣನೆ ರಣ | ಧೀರನಹುದಹುದೊ ||೧೬೦|

ಕರದ ಚಾಪವು ಪೋದರೇನು | ಖಡ್ಗ | ವಿರಲು ಶೌರ್ಯವ ನೋಡು ನೀನು |
ಶಿರವ ಚೆಂಡಾಡಿ ಶಾಕಿನಿ ಡಾಕಿನಿಯರಿಗೆ |
ಪರಿತೋಷಬಡಿಸುವೆನು | ಸಂಗರದಿ ನೆ |
ತ್ತರವನೆ ಕುಡಿಸುವೆನು | ಉಳಿದವರೆಮ |
ಪುರಕೀಗ ನಡೆಸುವೆನು | ಕರ್ಣನೆ ರಣ | ಧೀರನಹುದಹುದೊ || ೧೬೧ ||

ಭಾಮಿನಿ

ಎನಲು ಲಜ್ಜಿತನಾಗಿ ಕರ್ಣನು |
ಧನು ಮುರಿಯೆ ದ್ರೋಣಾದಿ ನಾಯಕ |
ರನುವರದಿ ರಥ ಟೆಕ್ಕೆ ಸಾರಥಿ ಸಹಿತ ಕೆಡಹುತಲಿ |
ಕಣೆಗರೆಯಲತಿ ಧೈರ್ಯದಲಿ ನರ |
ತನಯ ಖಡ್ಗವ ಕೊಂಡು ರಿಪುಕಾ |
ನನವ ಸವರುತ ಬೀದಿವರಿದನು ಕಣನ ಚೌಕದಲಿ  || ೧೬೨ ||

ರಾಗ ಪಂಚಾಗತಿ ಮಟ್ಟೆತಾಳ

ವೀರ ಪಾರ್ಥನಣುಗ ಖಡ್ಗ | ಧಾರೆಯಲಿ ವಿರೋಧಿಭಟರ |
ಸೂರೆಗೊಂಡು ಬೆರಸಿ ಪೊಯ್ದ | ಬೇರೆ ರಥಿಕರ |
ಆರುಭಟೆಗೆ ನಿಲ್ಲದಹಿತ | ವಾರ ಬೆದರುತಿರಲು ಕಂಡು |
ಕೌರವೇಂದ್ರ ಜರೆದ ಸಮರ | ಶೂರರೆಲ್ಲರ || ೧೬೩ ||

ಸೋತನೆಂದು ಹೆಮ್ಮೆ ನುಡಿವಿ | ರೀತನಾರು ನಮ್ಮ ಸುಭಟ |
ವ್ರಾತವನ್ನು ಸವರಿ ಬರುವ | ಭೀತಿಯಿಲ್ಲದೆ |
ಏತಕಿನ್ನು ನಿಮಗೆ ಶೌರ್ಯ | ವಾತಗೆರಗಿರೆನಲು ಭುಜಬ |
ಲಾತಿಶಯರು ಮತ್ತೆ ಗಜ ವ | ರೂಥವಡರುತ || ೧೬೪ ||

ಫಡ ಫಡೆನುತ ವೀರ ಕರ್ಣ | ನಡೆಸಿ ಬರೆ ರಥಾಶ್ವಗಳನು |
ಜಡಿವುತಪ್ಪಳಿಸಲು ಕಂಡು | ಕಡಿದನಸಿಯನು ||
ಒಡನೆ ಗದೆಯ ಕೊಂಡು ರಥ ನೂ | ರಡಿಯ ನೂಕಿ ಪೊಯಿದಡಿನಜ |
ಕಡುಗಿ ದಿವ್ಯಶರದಿ ಕರವ | ಪೊಡವಿಗಿಳುಹಿದ  || ೧೬೫ ||

ಮರುಳು ಸೂತತನುಜ ಕೇಳು | ಕರವು ಪೋದಡೇನು ಭುಜದ |
ಸಿರಿಗೆ ಕೊರತೆ ಬಪ್ಪುದುಂಟೆ | ಪರಿಕಿಸೆನುತಲಿ ||
ಭರದಿ ರಥದ ಚಕ್ರಗೊಂಡು | ತಿರುಹುತಿನಜಗೆರಗಿ ಬೊ |
ಬ್ಬಿರಿದು ರಥ ತುರಂಗಮವ ನು | ಗ್ಗರಿದ ನಿಮಿಷದಿ || ೧೬೬ ||

ವಾರ್ಧಕ

ಮೆಟ್ಟಿದಂ ಗಜ ರಥ ತುರಂಗ ಕಾಲಾಳ್ಗಳಂ |
ವಟ್ಟಿದಂ ಕಾದುತಿಹ ರಿಪುಗಳಾಯುಧಗಳಂ |
ಕುಟ್ಟಿದಂ ಷಡುರಥರನಡಹಾಯ್ದು ಸಮರದೊಳ್ ಗಜರಿ ವೀರಾವೇಶದಿ ||
ಹೆಟ್ಟಿದಂ ಕುರುಪತಿಯ ಸೇನಾಧಿನಾಯಕರ |
ನೊಟ್ಟಿದಂ ನುಗ್ಗರಿವುತೆಮಪುರಕೆ ರಿಪುಬಲವ |
ನಟ್ಟಿದಂ ಭೂಪ ಕೇಳದ್ಭುತವನಮರತತಿ ಬೆರಗಾಗಿ ನೋಡುತಿರಲು || ೧೬೭ ||

ಭಾಮಿನಿ

ಅರರೆ ಹರಿಯ ರಥಾಂಗವೆನಲ |
ಬ್ಬರಿಸಿ ಹೊಯ್ದಡೆ ಮತ್ತೆ ಕರ್ಣನು |
ತರುಬುತಿಪ್ಪತ್ತೈದು ಬಾಣದೊಳೆಚ್ಚನರಿಭಟನ ||
ಶರಮಯವು ಸರ್ವಾಂಗದಿಂದಿರ |
ಲರಿಯದಭಿಮನ್ಯುವಿಗೆ ಝಡಿತಕೆ |
ಮರಣವನು ನೆನೆವಂತೆ ದುಶ್ಯಾಸನನ ಸುತ ತಡೆದ || ೧೬೮ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲವೊ ಪಾರ್ಥನ ಸುತ ಕೇಳಿಂದು | ನಿನ್ನ | ತಲೆಯ ಕೊಂಬೆನು ನಿಮಿಷದೊಳೆಂದು ||
ಪೊಳೆವ ಖಡ್ಗವ ಕೊಂಡು ಬರಲಾಗ | ಆತ | ನೊಳ ಪೊಕ್ಕು ಕಾದಿದನತಿ ಬೇಗ || ೧೬೯ ||

ಕರಹತಿಯೊಳಗೆ ಡೆಂಡೆಣಿಸುತ | ಧರೆ | ಗುರುಳಿ ಧಿಮ್ಮನೆ ಮತ್ತೆ ತಿರುಗುತ ||
ಸರಿಯಾಗಿ ಹೆಣಗಿದರಿಬ್ಬರು | ಕಂಡು | ಸುರರಾಗ ಭಳಿಭಳಿರೆಂದರು || ೧೭೦ ||

ಅರಿಯ ಕೃಪಾಣದ ಗಾಯದಿ | ತರ | ಹರಿಸುತಲೆದ್ದತಿ ಶೌರ್ಯದಿ ||
ಶಿರಕೆರಗಲು ಧರೆಗುರುಳಿದ | ಕಂಡು | ಸುರಪನಮೊಮ್ಮ ವಿಶ್ರಮಿಸಿದ || ೧೭೧ ||

ರಾಗ ಸಾಂಗತ್ಯ ರೂಪಕತಾಳ

ಕಾಳಗಿಚ್ಚೆದ್ದು ಛಡಾಳಿಸಿ ನಿಲುವಂತೆ | ಬಾಲಕನಸ್ತ್ರತಲ್ಪದಲಿ ||
ತೋಳದಿಂಬಿನೊಳಿರೆ ಕೌರವಾತ್ಮಜರಂದು | ಕಾಲೆಡೆಯಲಿ ಕೆಡೆದಿರಲು || ೧೭೨ ||

ಬಿಗಿದ ಹುಬ್ಬಿನ ಬಿಟ್ಟ ಕಂಗಳತ್ಯುಗ್ರದಿ | ಹೊಗರು ಮೋರೆಯ ಹೊಸಪರಿಯ ||
ವಿಗಡ ಭಟಾಗ್ರಣಿ ಶಸ್ತ್ರಶಯನದಲ್ಲಿ | ಝಗಝಗಿಸುತಲಿರ್ದನಂದು || ೧೭೩ ||

ಸಾವ ಹರೆಯವೆ ಬಾಲಗೆ ಶಿವ ಶಿವಯೆಂದು | ದೇವಾಳಿ ಮರುಗೆ ವಾಸವನ ||
ಸಾವಿರಾಲಿಗಳಲ್ಲಿ ಒರತೆ ಪುಟ್ಟಿತು ಪೌತ್ರ | ಭಾವ ಮೋಹದೊಳಳಲಿದನು || ೧೭೪ ||

ಷಡುರಥರೊಂದಾಗಿಕೊಂಡೊಬ್ಬ ಹಸುಳೆಯ | ಹೊಡೆದರು ಹೇಸಿಕೆಗೊಳದೆ ||
ಸುಡು ಸುಡು ಕೌರವಾದಿಗಳಾವ ವೀರರೆಂ | ದಡಿಗಡಿಗಾಡಲು ಸುರರು || ೧೭೫ ||

ಹಲವು ಗಜವೊಂದಾಗಿ ಸಿಂಹನ ಮರಿಯನ್ನು | ಕೊಲುವಂತಾಯಿತು ಎಂದ ಇಂದ್ರ |
ಇಳುಹಿದನಪ್ಸರ ಸ್ತ್ರೀಯರ ಬೇಗದಿ | ಹೊಳೆವ ವೀರನ ಕರೆತರಲು || ೧೭೬ ||

ವಾರ್ಧಕ

ಶರದಿಂದುಮುಖಸಾಂದ್ರಭಾಸದಿಂ ತೋಷದಿಂ |
ಸುರಚಿರಾಮಯ ರತ್ನ ಹಾರದಿಂ ಪೂರದಿಂ |
ಪರಿಮಳಿಪ ದಿವ್ಯತರ ಗಂಧದಿಂ ಚಂದದಿಂ ಪೊಂಗಲಶಕುಚಭಾರದಿ ||
ಮೆರೆವಯೆಳೆಲತೆಯಂತೆ ಬಳುಕುತಂ ತುಳುಕುತಂ |
ಕಿರುನಗೆಯ ಮೊಗದ ಗುಣಶೀಲೆಯರ್ ಬಾಲೆಯರ್ |
ಮೊರೆವ ಘನವಾದ್ಯರವಭರಿತದಿಂ ತ್ವರಿತದಿಂ ಸುರಗಣಿಕೆಯರ್ ಬಂದರು || ೧೭೭ ||

ವಚನ

ಈ ರೀತಿಯಿಂದ ಸುರಗಣಿಕೆಯರ್ ಬಂದಭಿಮನ್ಯುವಿನ ಕಂಡು ತಮ್ಮೊಳುತಾವೆ ಮಾತನಾಡುತಿರ್ದರ ದೆಂತೆನೆ –

ರಾಗ ನಾದನಾಮಕ್ರಿಯ ಆದಿತಾಳ

ತಂಗಿ ನೋಡೀ ಬಾಲನಂಗಸೌಂದರ್ಯವ | ಶೃಂಗಾರದಲಿ ಕಾಮನಲ್ಲೆ ||
ಹಿಂಗಿತೀತನಿಗಾಗಿ ಸುರಪನ ಸಾವಿರ | ಕಂಗಳೊಳೊರತೆ ಪುಟ್ಟಿದವು || ೧೭೮ ||

ಹಸುಳೆಯೊಬ್ಬನನೆಂತು ಕಳುಹಿದ ಯಮಜಾತ | ನಸಮಸಾಹಸರುಳ್ಳಾ ಹವಕೆ ||
ಎಸೆವ ಮೆಯ್ಯೊಳು ನೋಡಲಿಂಬಿಲ್ಲ ಕಣೆಗಳು | ಮುಸುಕಿ ನಟ್ಟಿರುವ ಗಾಯಗಳು || ೧೭೯ ||

ಎನುತ ಮಾತಾಡುತ್ತಲಭಿಮನ್ಯುವೀರನ | ವಿನಯದಿ ಕರೆದೊಯ್ದು ಬೇಗ ||
ಅನಿಮಿಷೇಂದ್ರನ ಸಭೆಯೊಳಗೆ ನಿಲಿಸಿದರು | ಘನ ಪರಾಕ್ರಮಿಯನ್ನು ಮುದದಿ || ೧೮೦ ||

ನೋಡಿ ದೇವೇಂದ್ರನು ಪೌತ್ರಸ್ನೇಹದಲಿ ಕೊಂ | ಡಾಡಿ ಪರಾಕ್ರಮಗಳನು ||
ರೂಢಿಯೊಳೆಣೆಗಾಣೆನೆನುತ ಗದ್ದುಗೆಯೊಳು | ಜೋಡಾಗಿರ್ದರು ಮೋಹದಿಂದ || ೧೮೧ ||

ವಾರ್ಧಕ

ಕೇಳು ಜನಮೇಜಯಮಹೀಶನೆ ಧುರಪ್ರಳಯ |
ಕಾಲನಂ ಮುರಿದೆವೆಂದುಬ್ಬೇರಿ ಕುರುವೀರ |
ರಾಲಯವ ಪೊಗಲು ರವಿ ಜಾರಿದಂ ಬಾಲಕನ ಕಾಣಲರಿದೆಂಬಂದದಿ ||
ಸೋಲವಿದು ಪಾಂಡವರಿಗಲ್ಲ ನಿಶ್ಚಯ ಪ್ರಳಯ |
ಕಾಲ ಕೌರವಕುಲಕೆ ನಾಳೆ ಫಲುಗುಣನಿಂದ |
ಸೋಲುಂಟೆ ಮಧ್ವಪತಿ ಕೃಷ್ಣನಾ ಭಕ್ತರ್ಗೆ ನಿಗಮಸಿದ್ಧವಿದೆಂದನು || ೧೮೨ ||

ಅಂತು ಸಂಧಿ ೧ಕ್ಕೆ ಯಕ್ಷಗಾನ ಅಭಿಮನ್ಯುಕಾಳಗ ಮುಗಿದುದು

 


ಎರಡನೆಯ ಸಂಧಿ : ಸೈಂಧವ ವಧೆ

ಭಾಮಿನಿ

ಅವನಿಪತಿ ಕೇಳೈ ಕಿರೀಟಿಯ |
ಕುವರನಳಿದುದ ಕೇಳಿ ದುಗುಡದಿ |
ಪವನಸುತ ನಕುಲಾದಿಗಳು ಪೊಕ್ಕರು ನಿಜಾಲಯವ ||
ಇವರ ಕಾಣುತ ಮಗನ ಸುದ್ದಿಯ |
ನವನಿಪತಿ ಬೆಸಗೊಳಲು ಮಿಗೆ ವಾ |
ಸವನ ಗದ್ದುಗೆಯೇರಿದನುಯೆನಲರಸನಳಲಿದನು  || ೧ ||

ರಾಗ ಆನಂದಭೈರವಿ ರೂಪಕತಾಳ

ಅಯ್ಯೋ ಮೋಹದ ಕಂದ | ಏನಾದೆಯೊ ಗುಣವೃಂದ ||
ಕಯ್ಯಾರೆ ಕೊಲಿಸಿದಂ | ತಾದುದೆಯೆನ್ನಿಂದ || ಅಯ್ಯೊ    || ಪಲ್ಲವಿ ||

ಧರ್ಯದಿ ಸಿಂಹನ ಪೋಲುವ | ವೀರ ರಣಶೂರ |
ವೈರಿಗಳೆಂಬಡವಿಗೆ ದಾ | ವಾಗ್ನಿಯಾಕಾರ || ಅಯ್ಯೋ || ೨ ||

ಭೈರವವಿಕ್ರಮ ನಿನ್ನುವ | ನೆಂತು ಮರೆತಿಹುದೀಗ |
ಸೈರಿಸುವೆ ನಾ ಮನದಳಲನು | ಸವೆದುದೆ ಸಂಯೋಗ || ಅಯ್ಯೋ || ೩ ||

ಗೌರೀಶಸಖ ಪಾರ್ಥರು | ಬಂದು ಕೇಳಿದರೇನು |
ಪೌರುಷವಾಡುವೆನವರೊಳು | ಪತಿಕರಿಸುತ ನಾನು || ಅಯ್ಯೋ || ೪ ||

ಕೌರವ ಕೊಂದನೆನಲೊ | ನಾನೇ ಕೊಂದೆನೆನಲೊ ||
ನಿವೃತ್ತಿಯ ಕಾಣೆನು ಹುತ | ವಾಹನನನು ಪೊಗಲೊ  || ಅಯ್ಯೋ || ೫ ||

ಭಾಮಿನಿ

ಕುಲಿಶಹತಿಯಲಿ ಕುಲಶಿಲೋಚ್ಚಯ |
ಇಳೆಗೆ ಒರಗುವ ತೆರದಿ ಧರ್ಮಜ |
ನಳಲಿ ಮೂರ್ಛಿತನಾಗಲಾ ಭೀಮಾದಿಗಳು ಮರುಗಿ |
ಕಳವಳವಗೊಳಲಂದು ವಾರ್ತೆಯ |
ತಿಳಿದು ದ್ರುಪದಾತ್ಮಜೆ ಸುಭದ್ರೆಯ |
ರಳುತ ಬಂದಡಗೆಡೆದರೆಮನಂದನನ ಸಭೆಯೊಳಗೆ || ೬ ||

ರಾಗ ಯರಕಲ ಕಾಂಭೋಜಿ ಏಕತಾಳ

ಆವಲ್ಲಿ ಪೋದೆಯಭಿಮನ್ಯು | ಅಯ್ಯಯ್ಯೊ ಎನ್ನ | ಜೀವರತ್ನವೆ ಬಾ ಇನ್ನು ||
ಜೀವದಾಸೆಗೆ ಬಾಲನ | ಸಂಗರಕಟ್ಟಿ | ತಾವಿಂದು ಕುಳಿತ ಜತನ  || ೭ ||

ಅಳದಿರು ಯುಧಿಷ್ಠಿರರಾಯ | ಸುಮ್ಮನಿರಯ್ಯ | ತಿಳಿದೆ ನಾ ನಿಮ್ಮ ಬಗೆಯ ||
ಹಲುಬಿದರಿನ್ನು ಬಾಹನೆ | ಮಡಿದಭಿಮನ್ಯು | ಘಳಿಲನೆನ್ನಯ ಮರಿಯಾನೆ || ೮ ||

ಅಕಟ ನೀನೇಕೆ ಪುಟ್ಟಿದೆ | ಪಾಪಿಯುದರದಿ | ನಕುಲ ಭೀಮರ್ಗೆ ಜನಿಸದೆ ||
ಸುಕೃತವಿಲ್ಲ ನಿನ್ನಯ್ಯಗೆ | ಅದರಿಂದ ಬಲು ಕಂ | ಟಕರಾದರವರ್ ನಿನಗೆ || ೯ ||

ಧುರವನ್ನು ಹೊಗಬಲ್ಲನೆ | ಷಡುರಥರೊಳು | ಇರಿದಾಡತಕ್ಕವನೆ |
ಧರೆಯ ವೈಭವಕೋಸುಗ | ಎನ್ನಣುಗನ | ತ್ವರಿತದಿಂದಟ್ಟಿದರಾಗ || ೧೦ ||

ಕರುಣಿಗಳೆಂಬರೆಲ್ಲರು | ಈ ಧರ್ಮರಾಯ | ಕೊರಳ ಕೊಯ್ವುದನರಿಯರು ||
ತರಳರೀ ದ್ರೌಪದೇಯರ | ಗಜಪುರ ಪೊಗಿಸಿ | ಮೆರೆಸಿ ರಾಜ್ಯದ ಬಹುಭಾರ || ೧೧ ||

ಭಾಮಿನಿ

ಅರಸ ಜನಮೇಜಯನೆ ಕೇಳಂ |
ಬುರುಹನೇತ್ರೆಯ ವಚನಶಸ್ತ್ರಗ |
ಳಿರದೆ ಕೊಂಡವು ಭೂಪನಂಗವನೇನ ಬಣ್ಣಿಪೆನು ||
ಉರಿವ ಕಿಚ್ಚಿಗೆ ಘೃತವನಿಕ್ಕಿದ |
ಪರಿಯದಾಯ್ತನಿತರೊಳು ತಿಳಿದಾ |
ಪರಮ ವೇದವ್ಯಾಸ ಬಂದನು ಜನಪನಿದ್ದೆಡೆಗೆ || ೧೨ ||

ರಾಗ ಶಂಕರಾಭರಣ ಏಕತಾಳ

ಬಂದ ವೇದವ್ಯಾಸಮುನಿಗೆ | ವಂದಿಸಿ ಭಕ್ತಿಯೊಳಿರಲು |
ಕಂದುಮೊಗದ ನೃಪನ ಶಿರವ | ನಂದೆತ್ತಿ ನುಡಿದ || ೧೩ ||

ತಿಳಿದು ಬಂದೆ ನಿಮ್ಮ ದುಃಖಂ | ಗಳನೆಲ್ಲವ ಪೇಳ್ವುದೇನು |
ನಳಿನಭವನು ಬರೆದ ಬರೆಹಂ | ಗಳ ಮೀರ್ವರಾರು || ೧೪ ||

ಅಡಸಿದಾಪತ್ತಿನಲ್ಲಿ ಧೈರ್ಯ | ವಿಡಿದಿರ್ಪುದಲ್ಲದೆ ಬಾಯ |
ಬಿಡಲೆದ್ದು ಬಾಹನೆ ಇನ್ನು | ಮಡಿದ ಅಭಿಮನ್ಯು || ೧೫ ||

ಋಣರೂಪದಿಂದಲಿ ನಿಜ | ವನಿತೆ ಪುತ್ರ ಗೋಗೃಹಂಗಳ್ |
ಋಣವು ತೀರೆ ಕಾಕತ್ರಯವು | ಗುಣಭೇದ ನೋಡೈ || ೧೬ ||

ಹಿಂದೆ ಕಂಪನೆಂಬ ನೃಪಗೆ | ಕಂದನೋರ್ವ ಹರಿಯೆಂಬಾತ |
ಅಂದು ಮಡಿಯಲಿಂತು ದುಃಖಿಸೆ | ಬಂದ ನಾರದ || ೧೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧಾರಿಣೀಶ್ವರ ಕೇಳು ಮೃತ್ಯುವ | ನಾರು ಜಯಿಸುವರುಂಟು ಜಗದೊಳ |
ಗಾರಿಗಾದರು ತಪ್ಪಲರಿಯದ | ಪಾರವೆಂದ || ೧೮ ||

ಸತ್ಯವಚನವ ಕೇಳಿ ಭೂಪತಿ | ಮತ್ತೆ ನುಡಿದನು ದೇವ ಋಷಿಯೊಳು |
ಮೃತ್ಯುದೇವತೆ ಯಾರು ವಿವರಿಸೆ | ನುತ್ತ ಬಿಡದೆ || ೧೯ ||

ಜನಪ ಕೇಳಾ ಬ್ರಹ್ಮದೇವನ | ಘನತರದ ಕೋಪದಲಿ ಜನಿಸಿದ |
ಮನಸಿಜಾರಿಯು ಮತ್ತೆ ಪುಟ್ಟಿದಳ್ | ವನಿತೆ ಮೃತ್ಯು  || ೨೦ ||

ಅವಳ ತೆತ್ತಿಗರಾರು ಮಂದಿಯು | ವಿವರಿಸಲು ಷಡ್ವರ್ಗರುಜೆಗಳು |
ಅವಳ ಬಳಗವಿದೆಂದು ತಿಳಿವುದು | ಭುವನದೊಳಗೆ || ೨೧ ||

ಧರೆಯನಾಳುವ ವೀರ ಷೋಡಶ | ಧೊರೆಗಳವಳೊಶವಾದರೈ ವಿ |
ಸ್ತರಿಸಲೇನೆಂದಭಯಗೊಡುತಲೆ | ಭರದಿ ನಡೆದ || ೨೨ ||

ಭಾಮಿನಿ

ಕಂಪನಣುಗನ ಕಥೆಯ ಕೇಳುತ |
ತಂಪುಗೊಳಿಸಲು ಮತ್ತೆ ಬಾಲನ |
ನೆಂಪುಗೊಂಡಳಲುತ್ತ ನುಡಿದನು ವ್ಯಾಸಮುನಿಯೊಡನೆ ||
ಸೊಂಪು ಗುಣದಲಿ ಶೌರ್ಯ ತಾಪದ |
ಕಂಪಿನಲಿ ಸುತಗೆಣೆಯ ಕಾಣೆನು |
ಕಂಪನಣುಗನ ಪರಿಯಿದಲ್ಲೆಂದನು ಯುಧಿಷ್ಠಿರನು || ೨೩ ||