ಭಾಮಿನಿ
ಪೊಡವಿಪತಿ ಕೇಳಿಂತು ಕುವರನ |
ಪಿಡಿದು ತಕ್ಕಯ್ಸುತಲೆ ಶೋಕದ |
ಕಡಲೊಳಾಳುತ್ತಿರ್ದಳಂದಿಲಿ ಹಲುಬುತಾ ಜನನಿ ||
ತಡೆವರೇ ಎಲೆ ತಾಯೆ ಈ ಪರಿ |
ನುಡಿವರೇ ರಣವನ್ನು ಜಯಿಸೆಂ |
ದೊಡನೆ ಕಳುಹದೆ ಮರುಗುವರೆ ನೀನೆಂದನಭಿಮನ್ಯು || ೭೦ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸುರಿವ ಕಂಬನಿಯನ್ನು ಸೆರಗಿಂ | ದೊರಸಿ ಜನನಿಯ ಪಾದರಜವನು |
ಶಿರದೊಳಾಂತಾ ಪಾರ್ಥನಂದನ | ಪೊರಟಧುರಕೆ || ೭೧ ||
ಭಾರಿ ಖತಿಗೊಂಡಾ ಕ್ಷಣವೆ ರಣ | ಧೀರ ಖಡ್ಗವ ಝಳಪಿಸುತ್ತಲು |
ಬ್ಬೇರಿ ನಡೆತರೆ ಕಂಡು ಸುಮನಸ | ವಾರ ಮರುಗೆ || ೭೨ ||
ಧರಣಿಪತಿ ನಿರ್ದಯನಲಾಯೆಳೆ | ಗರುವ ನೂಕುವರುಂಟೆ ವ್ಯಾಘ್ರನ |
ಜರಿಗೆ ದೊರೆತನ ಸುಡು ಸುಡೆಂದರು | ನೆರೆದ ಜನರು || ೭೩ ||
ಝಳಪಿಸುವ ಗಂಡುಡುಗೆ ಝೇಂಪಿಸೆ | ಹೊಳೆವ ಹೊನ್ನ ಕಠಾರಿಯಾಯುಧ |
ಗಳ ಸಮಗ್ರವನಾಂತು ನಗುಮೊಗ | ಚೆಲುವ ಪೊರಟ || ೭೪ ||
ಅರಸನಂಘ್ರಿಗೆ ನಮಿಸಿ ನಕುಲಾ | ದ್ಯರಿಗೆ ವಂದಿಸಿ ಭೂಮಿ ದಿವಿಜರ |
ಹರಕೆಗೊಂಡೇರಿದನು ಮಣಿರಥ | ವಿರದೆ ಬಳಿಕ || ೭೫ ||
ಮೊಳಗಿದುವು ಬಲು ವಾದ್ಯ ನಾಲ್ದೆಸೆ | ಗಳನು ಕಂಪಿಸೆ ಛತ್ರ ಚಾಮರ |
ಗಳು ವಿರಾಜಿಸಲಖಿಳಬಲ ಬೆಂ | ಬಳಿಯೆ ಬರಲು || ೭೬ ||
ಭಾಮಿನಿ
ಅರಸ ಕೇಳೈ ಸೂರ್ಯರಥವೇ |
ಧರಣಿಗಿಳಿವಂದದಲಿ ಪಟುಭಟ |
ರರಸನಮಲ ವರೂಥ ಬರೆ ಕಂಡಾಗ ಕಾಂತೆಯರು ||
ಕರಗುತಿರ್ದರು ಶಿವ ಶಿವಾ ಮೋ |
ಹರದ ದುರ್ಗವನೆಂತು ಪೊಗುವನೊ |
ತರಳತನವಲ್ಲೆಂದು ಕಂಬನಿದುಂಬುತುಸಿರಿದರು || ೭೭ ||
ರಾಗ ನೀಲಾಂಬರಿ ಏಕತಾಳ
ಆಡುವ ಬಾಲನಲ್ಲೆ | ಅಭಿಮನ್ಯುವಿನ | ನೋಡಿತ್ತ ಪೋಗದೆ ನಿಲ್ಲೆ |
ರೂಢಿಪ ಚಕ್ರವ್ಯೂಹಕೆ | ಈ ಸಣ್ಣ ಮಗುವ | ದೂಡುವರಲ್ಲೆ ಯುದ್ಧಕೆ || ೭೮ ||
ಎಂತು ಕಾದುವನೊ ಈತ | ಷಡುರಥರೊಳು | ಕಂತುಸ್ವರೂಪ ಜಾತ ||
ಪಂಥವ ಬಿಡಲೊಲ್ಲನು | ಹೇಗಾಗುವುದೊ | ಅಂತಕಾಂತಕ ಬಲ್ಲನು || ೭೯ ||
ತಂದೆಯಿಲ್ಲದ ವೇಳ್ಯದಿ | ಈ ಸಣ್ಣ ಶಿಶುವ | ಮುಂದಕಟ್ಟುವರ್ ಭರದಿ ||
ಮಂದಮತಿಯಾದಳೇನೆ | ಸುಭದ್ರಾದೇವಿ | ಯಿಂದೆಂತು ಬಿಟ್ಟಳೊ ಜಾಣೆ || ೮೦ ||
ವಾರ್ಧಕ
ಮಕ್ಕಳಂ ಪಡೆದ ಗುಣಶೀಲೆಯರ್ ಬಾಲೆಯರ್ |
ಕಕ್ಕುಲಿತೆಗೊಳುತ ಮಾತಾಡುತಂ ನೋಡುತಂ |
ದುಃಖರಸಶರಧಿಯೊಳಗಾಳುತಂ ಏಳುತಂ ಬೆರಗಾಗಿ ಬೆಂಡಾದರು ||
ಒಕ್ಕಣಿಸಲೇನಿತ್ತಲಭಿಮನ್ಯು ಧನುವನುಂ |
ಘಕ್ಕನುರೆ ಝೇಂಕರಿಸೆ ನರಲೋಕ ಸುರಲೋಕ |
ಮುಕ್ಕುಳಿಸಲಾ ಧನುರ್ನಾದದಿಂ ಭೇದದಿಂ ರಿಪುದುರ್ಗ ತಲ್ಲಣಿಸಲು || ೮೧ ||
ತೊಲತೊಲಗು ರಿಪುಗಜ ಮೃಗೇಂದ್ರನಿದೊ ಬರುತಲಿದೆ |
ತೊಲತೊಲಗು ರಿಪುವನಕುಠಾರವದು ಬರುತಲಿದೆ |
ತೊಲತೊಲಗು ಕುರುಕುಲೋರಗದುಷ್ಟಸಂತತಿಗೆ ಖಗರಾಜ ಬರುತಲಿದಕೊ ||
ತೊಲತೊಲಗು ಶತ್ರುಮೇಘಸಮೀರ ಬರುತಲಿದೆ |
ತೊಲತೊಲಗು ಪರಬಲಾಚಲವಜ್ರ ಬರುತಲಿದೆ |
ತೊಲತೊಲಗು ಪಾಂಡವರ ಕುಲದೀಪ ಬರುತನೆಂದೊದರೆ ಕಹಳಾವಳಿಗಳು || ೮೨ ||
ರಾಗ ಕೇದಾರಗೌಳ ಅಷ್ಟತಾಳ
ಎಂದು ಕಹಳೆಗಳ್ ಭೋರ್ಗುಡಿಸಲು ಪಾರ್ಥನ | ನಂದನನಾ ರಥವು ||
ಮುಂದುವರಿದು ಬರೆ ಸಾರಥಿಯಭಿಮನ್ಯು ವಿ | ಗೆಂದನೊಂದುತ್ತರವ || ೮೩ ||
ಕಟಕ ನೋಡಿದುವೆ ಬಾಲಕನೆ ಈ ಸಮರ ಧೂ | ರ್ಜಟಿಯಾತ್ಮಭವನಿಗಿಂದು ||
ಘಟಿಸಲಸಾಧ್ಯ ನೀನಿದಕುಬ್ಬಿ ಬಹರೆ ಕೇಳ್ | ಭಟ ನಿನ್ನ ಮನವೇನಯ್ಯ || ೮೪ ||
ಕೊರಳಿನ ಬಲುಹ ನೋಡದೆ ತಾ ಮಹಾದ್ರಿಯ | ಹೊರಿಸಲಂಘೈಸುವರೆ ||
ಗುರು ಕೃಪಾಶ್ವತ್ಥಾಮ ಕರ್ಣಾದಿ ಭಟರೆಲ್ಲ | ಸುರರನ್ನು ಲೆಕ್ಕಿಪರೆ || ೮೫ ||
ಅರರೆ ಮೆಚ್ಚಿದೆನು ನಿನ್ನಯ ಶೌರ್ಯಕೆಂದು ಕೈ | ಬೆರಳ ಮೂಗಿನೊಳಿಡುತ ||
ಶಿರವ ತೂಗಲು ಕಂಡು ಸೂತನೊಳಿಂತೆಂದ | ನರನ ಕುವರ ನಗುತ || ೮೬ ||
ರಾಗ ಕಾಂಭೋಜ ಝಂಪೆತಾಳ
ಮರುಳೆ ಸಾರಥಿ ಕೇಳು ನಮ್ಮ ನಾವೇ ಪೊಗಳಿ | ಮೆರೆಯಲಾಗದು ಸುಪ್ರಸಿದ್ಧ ||
ಗುರು ಕೃಪಾಶ್ವತ್ಥಾಮ ಕರ್ಣ ಸೈಂಧವ ಶಕುನಿ | ನೊರಜು ಈ ನರರ ಪಾಡೇನು || ೮೭ ||
ಧುರದೊಳ್ ಕಪರ್ದಿಯಾನನದಿ ಶ್ರಮಜಲಬಿಂದು | ಸುರಿಸುವೆನು ರಣದಿ ಭಾರ್ಗವನ ||
ಗರುವವನ್ನೀಗಿ ವೃತ್ರಾರಿಯನು ಬರೆದು ಸಂ | ಚರಣೆ ನಿಲಿಸುವೆನು ಕೃತಾಂತಕನ || ೮೮ ||
ಅವರಿವರೊಳೇನು ಸಾರಥಿ ಕೇಳು ತನ್ನನು | ದ್ಭವಿಸಿದ ಪರಾಕ್ರಮಿಯು ಪಾರ್ಥ ||
ಬವರದೊಳಗಿದಿರಾಗಿ ನಿಂದಡೊಮ್ಮೆಗೆ ಗೆಲುವೆ | ತವಕದಿಂ ರಥವ ಹರಿಸೆಂದ || ೮೯ ||
ರಾಗ ಭೈರವಿ ತ್ರಿವುಡೆತಾಳ
ಅರಸ ಕೇಳಾ ಚಾಪನಾದಕೆ | ತರಹರಿಸಿ ಕುರುಸೇನೆ ಗಜರಥ |
ತುರಗಗಳ ಮುಂದಿರಿಸಿ ಬಾಗಿಲೊ | ಳುರವಣಿಸುತಲೆ ತಡೆದು ನಿಲ್ಲಲು |
ಹರಿಯಳಿಯನದ ಬಲ್ಲನೇ ಹೊ | ಕ್ಕಿರಿದು ರಥವನು ನೂಕಿ ರಿಪುಗಳ |
ಶಿರವ ಚೆಂಡಾಡಿದನು ಕೊಳವನು | ಕರಿಯು ಕದಡಿದ ತೆರದಿ ನಿಮಿಷದೊ |
ಳೇನನೆಂಬೆ | ಸಾಹಸ | ವೇನನೆಂಬೆ || ೯೦ ||
ಘುಡುಘುಡಿಸುತಲೆ ಕಲಿ ಜಯದ್ರಥ | ತಡೆದು ನಿಲ್ಲಲು ತವಕದಿಂದಲಿ |
ಫಡ ಫಡಿದಿರಲಿ ತೊಲಗೆನುತ ಮು | ಕ್ಕಡಿಯ ಮಾಡಿದನವನ ರಥವನು |
ಬಿಡದೆ ಸಾರಥಿಸಹಿತ ಚಾಪವ | ಕಡಿದು ಸೌಬಲ ಮುಖ್ಯರನು ಜವ |
ಗೆಡಿಸಿದನು ಕಾಲಾಗ್ನಿರುದ್ರನ | ಪಡಿಯಲಾ ಅಭಿಮನ್ಯು ಸಮರವ ||
ನೇನನೆಂಬೆ | ಸಾಹಸ | ವೇನನೆಂಬೆ || ೯೧ ||
ರಥ ಮುರಿಯೆ ಮನಗುಂದಿ ಸುಮಹಾ | ರಥರು ಹಿಮ್ಮೆಟ್ಟಿದರು ಕ್ಷಣದಲಿ |
ವಿತರಣಾಗ್ರಣಿ ವೀರ ಪಾರ್ಥನ | ಸುತನು ರಿಪುಗಳನೊದೆದು ಹೊಕ್ಕನು |
ಅತಿರಥರ ಬಾಣಾವಳಿಗಳನು | ಮಥಿಸಿದನು ಮುಂದೊತ್ತುತಿಹ ಗಜ |
ರಥ ತುರಂಗ ಪದಾತಿಗಳನೊರೆ | ಸುತ ಭಯಂಕರದೋರಿ ನಡೆದನು ||
ಏನನೆಂಬೆ | ಸಾಹಸ | ವೇನನೆಂಬೆ || ೯೨ ||
ವಾರ್ಧಕ
ಕರಿ ತುರಗ ಕೋಟ್ಯಾನುಕೋಟಿಗಳನೊರೆಸಿದಂ |
ತರುಬುವತಿರಥ ಮಹಾರಥರ ಸಂಹರಿಸಿದಂ |
ಬೆರಸಿ ಕಾಲಾಳ್ಗಳ ಕರುಳ್ಗಳಂ ಸುರಿಸಿದಂ ಕೂರ್ಗಣೆಯೊಳಗಣಿತದಲಿ ||
ಅರಸ ಕೇಳ್ ಮಕ್ಕಳಾಟಿಕೆ ಮಾರಿಯಾಯ್ತೆಂದು |
ಕುರುಬಲದಿ ಕಾದುವರ ಕಾಣೆ ರಣದೊಳ್ನಿಂದು |
ಸುರಪತಿಯ ಮೊಮ್ಮನ ಪರಾಕ್ರಮಕೆ ಮನದಂದು ದಿವಿಜಸಂತತಿ ಪೊಗಳಲು || ೯೩ ||
ರಾಗ ಭೈರವಿ ಏಕತಾಳ
ಇನ್ನೇನೆಂಬೆ ರಣದಲಿ | ಅಭಿ | ಮನ್ಯುವಿನಸ್ತ್ರಂಗಳಲಿ ||
ಚೂರ್ಣವಾದುದು ಗಜರಥವು | ಬಲು | ಜೀರ್ಣವಾದುದು ಕುರುಬಲವು || ೯೪ ||
ಪಥಗಾಣದೆ ಮುಂದೆ ಸಿಕ್ಕಿ | ಅತಿ | ರಥರಿಳೆಯೊಳು ಧುಮ್ಮಿಕ್ಕಿ ||
ಅತಿ ಭಯದಲಿ ನಡುಗಿದರು | ಬಲು | ಸ್ತುತಿಸುತ ಪದಕೆರಗಿದರು || ೯೫ ||
ಕೊರಳನು ಕಾಯೆಂದೆನುತ | ತಮ್ಮ | ಬೆರಳನು ಬಾಯೊಳಗಿಡುತ ||
ಶರಚಾಪವನಿಕ್ಕಿದರು | ನಿಜ | ಕರದಿ ತೃಣವ ಕಚ್ಚಿದರು || ೯೬ ||
ಭಾಮಿನಿ
ಅರಸ ಕೇಳಭಿಮನ್ಯು ಝಡಿತಕೆ |
ಜರಿದುದಬುಜವ್ಯೂಹ ಕರಿಘಟೆ |
ತುರಗ ಕಾಲಾಳುಗಳು ನುಗ್ಗಾಯ್ತಪರಿಮಿತವಾಗಿ ||
ತರಣಿಸುತ ದ್ರೋಣಾದಿಗಳು ಕೈ |
ಮರೆದರರ್ಜುನನಣುಗನುಗ್ರಕೆ |
ಕುರುಕುಲಾಗ್ರಣಿ ಕಂಡು ಬೆರಗಾಗುತ್ತಲಿಂತೆಂದ || ೯೭ ||
ರಾಗ ಪಂಚಾಗತಿ ಮಟ್ಟೆತಾಳ
ಭಳಿರೆ ಪಾರ್ಥನಣುಗ ನಿನ್ನ | ಬಲುಹಿಗಿನ್ನು ಸರಿಯದಾರು |
ಹಲವದೇತಕೊಬ್ಬ ಸಾಕು | ಕುಲಕೆ ರತುನನು ||
ಫಲುಗುಣನು ಕೃತಾರ್ಥನಾದ | ನೊಲಿದು ನಿನ್ನ ಪಡೆದ ಬಗೆಯೊ |
ಳಲಸದೆಂದ ಕೌರವೇಂದ್ರ | ತಲೆಯ ತೂಗುತ || ೯೮ ||
ಎನುತ ಭಾರಿ ಧನುವ ಕೊಂಡು | ಕನಲಿ ಮನ್ನೆಯರನು ಜರೆದು |
ತನಯನೊಡನೆ ತರುಬಿನಿಂದ | ರಣಸಮರ್ಥನು |
ಅಣುಗ ನೀನು ಕೆಡಲು ಬೇಡ | ಗುಣದಿ ಪೋಗು ಪೋಗೆನುತ್ತ |
ಕಣೆಯ ಮಳೆಯ ಕರೆದನಾಗ | ಳೆಣಿಕೆಯಿಲ್ಲದೆ || ೯೯ ||
ನಾನು ಅಣುಗನಾದಡೆನ್ನ | ಬಾಣಗಳಿಗೆ ಬಾಲತನವೆ |
ಹೂಣಿ ನೋಡಿರೆನುತಲೆಚ್ಚ | ನಾಣಿಶರಗಳ |
ಕ್ಷೆಣಿಪತಿಗೆ ಗಾಯವಾಗಿ | ಕ್ಷೀಣವಾಯ್ತು ರಥವು ಧುರದಿ |
ತ್ರಾಣಗುಂದಲೀಕ್ಷಿಸಿದನು | ದ್ರೋಣ ನೃಪನನು || ೧೦೦ ||
ಭಾಮಿನಿ
ಅರಸ ಸಿಕ್ಕಿದನಕಟ ಬಾ ಬಾ |
ತರಣಿಸುತ ಸೌಬಲ ಕೃಪಾದ್ಯರು |
ಧರಿಸಿ ಶಸ್ತ್ರಾಸ್ತ್ರಗಳನೆನುತೊದರಿದನು ಕಲಿ ದ್ರೋಣ ||
ಹರಿವುತತಿರಥರಾ ಕ್ಷಣವೆ ಕುರು |
ವರನ ತೊಲಗಿಸಿದರು ಕಿರೀಟಿಯ |
ತರಳನನು ಮುಸುಕುತ್ತ ಮತ್ತಾ ದ್ರೋಣನಿಂತೆಂದ || ೧೦೧ ||
ರಾಗ ಮಾರವಿ ಏಕತಾಳ
ಸೋತೆವು ನೀ ಗೆದ್ದವ ಶಿಶುಹತ್ಯದ | ಪಾತಕಕಂಜುವೆವು |
ಆತುಕೊಳೆಂದು ದ್ರೋಣ ಮಹಾಶರ | ವ್ರಾತವ ಮುಸುಕಿದನು || ೧೦೨ ||
ಶಿಶುತನದಲಿ ಶಂಬರನೆಂಬಸುರನ | ಅಸುಗೊಳ್ಳನೆ ಸ್ಮರನು ||
ಶಶಿಧರಸುತ ಗುಹ ತಾರಕ ದೈತ್ಯನ | ಉಸಿರನು ತೊಲಗಿಸನೆ || ೧೦೩ ||
ಶಿಶುವೇ ಪಾರ್ಥಕುಮಾರಕ ರಿಪುಭಟ | ರೆಸೆದಸ್ತ್ರಾವಳಿಯ |
ಕುಶಲದಿ ತರಿವುತ ಷಡುರಥರನು ಮಿಗೆ | ದೆಸೆಗೆಡಿಸಿದನಂದು || ೧೦೪ ||
ವಾರ್ಧಕ
ಗುರುಸುತನ ನೋಯಿಸಿ ರಣಾಗ್ರದೊಳ್ ಶಲ್ಯನಂ |
ಮುರಿದೆಚ್ಚು ಕೃಪನುಗ್ರಮಂ ನಿಲಿಸಿ ಕೃತವರ್ಮ |
ನುರವಣೆಯೊಳೆಸೆದು ದುಶ್ಯಾಸನನ ಗರ್ವಮಂ ಮುರಿದನೊಂದೇ ಕ್ಷಣದೊಳು ||
ದುರುಳ ಬಾಹ್ಲಿಕ ಸೋಮದತ್ತರಂ ಸದೆಬಡೆದು |
ಧುರದೊಳ್ ಮಹಾರಥರನೊಬ್ಬನೇ ಶಿಶು ಗೆಲಿದ |
ನರರೆ ಕೌತುಕವೆಂದು ಕಂಡು ಕರ್ಣಂ ಬಂದು ತಡೆದನಾ ಬಾಲಕನನು || ೧೦೫ ||
ರಾಗ ಭೈರವಿ ಅಷ್ಟತಾಳ
ಎಲವೊ ಬಾಲಕನೆ ಕೇಳು | ನಮ್ಮಯ ಕುರು | ಬಲವ ನೀ ಸಮರದೊಳು ||
ಗೆಲಿದೆನೆನುತ ಹಿಗ್ಗಬೇಡವೆಂದೆಚ್ಚನು | ಬಲುತರ ಶರಗಳನು || ೧೦೬ ||
ನಾವು ಬಾಲಕರಹುದು | ನಮ್ಮಸ್ತ್ರಕೆ | ನೀವು ಜೀವಿಸಿಕೊಂಬುದು |
ಠೀವಿಯ ನೋಳ್ಪೆನೆಂದೆಚ್ಚನು ಅಭಿಮನ್ಯು | ಹಾವಳಿಯೇನೆಂಬೆನು || ೧೦೭ ||
ಮೂರಾರು ಮಾರ್ಗಣದಿ | ಕರ್ಣನ ಎದೆ | ಡೋರುಗಳೆದನುಗ್ರದಿ ||
ಗಾರುಗೊಂಡೆದೆಯಾರಿ ಸೊರಗಿದ ರಣದಲಿ | ಪೂರಾಯ ಗಾಯದಲಿ || ೧೦೮ ||
ರವಿಜ ಮೈಮರೆಯಲಾಗ | ಕಾಣುತ ಶಲ್ಯ | ನವಘಡಿಸುತಲೆ ಬೇಗ ||
ಕುವರ ನೀ ಫಡ ಹೋಗೆಂದೆಚ್ಚನು ಶರಗಳು | ಕವಿದುದು ಸಮರದೊಳು || ೧೦೯ ||
ಬಾಲನೆಂದುಸಿರಬೇಡ | ಎನ್ನಸ್ತ್ರಕೆ | ಬಾಲತ್ವವುಂಟೆ ನೋಡಾ ||
ಆಳಿನಂಗವನೇನ ಬಲ್ಲೆಯೆಂದಭಿಮನ್ಯು | ಕೀಲಿಸಿದಸ್ತ್ರವನು || ೧೧೦ ||
ನರಜನ ಬಾಣಗಳ | ಖಂಡಿಸಿ ಶಲ್ಯ | ನುರುತರದಂಬುಗಳ |
ಸುರಿಯಲು ತರಿವುತ ಪದಿನೈದು ಬಾಣದೊ | ಳೊರಗಿಸಿದನು ಧುರದಿ || ೧೧೧ ||
ವಾರ್ಧಕ
ಅರಸ ಕೇಳ್ ಶಲ್ಯ ಮೈಮರೆಯಲವನನುಜ ಹುಂ |
ಕರಿಸುತಭಿಮನ್ಯುವಂ ಧುರದೊಳಡಹಾಯ್ವುತಿರ |
ಲೆರಡು ಶರದಿಂದವನ ಶಿರವನಿಳುಹಲು ಬಳಿಕ ಕಾದುವಧಟರ ಕಾಣೆನು ||
ಮುರಿದು ಮಾದ್ರೇಶಮೋಹರವು ಹಿಮ್ಮೆಟ್ಟುತಿರ |
ಲರಿಭಯಂಕರ ದ್ರೋಣನರಿತು ಕೃಪನಿಂಗೆ ವಿ |
ಸ್ತರಿಸಿದಂ ಫಣೆಗಣ್ಣ ಹರನೀತ ಶಿಶುವೆ ಸಂಗರದೊಳಸದಳವೆಂದನು || ೧೧೨ ||
ರಾಗ ಕೇದಾರಗೌಳ ಅಷ್ಟತಾಳ
ಗರುಡಿಯಾಚಾರ್ಯನ ನುಡಿ ಕೇಳಿ ಕೌರವ | ರರಸನು ಕಿಡಿಯಿಡುತ |
ಕರೆದು ಕರ್ಣನಿಗೆ ಮೆಚ್ಚಿಸುತಿರ್ದನಿವರು ಬಾ | ಹಿರರೆಂದು ಬಯ್ಯುತಲೆ || ೧೧೩ |
ಬಿಡದರಿಭಟನ ಪೊಗಳುವರು ನೋಡೆಮ್ಮ | ಕಡೆಯವರಂಜುವಂತೆ |
ಕಡು ಖೂಳರೆಂಬೆನೆ ಗುರುಗಳು ನಾವಿಂತು | ಪಡೆದ ಸುಕೃತವೆಂದನು || ೧೧೪ ||
ನುಡಿಯ ಕೇಳ್ದನುಜ ದುಶ್ಯಾಸನನುಗ್ರದಿ | ಘುಡುಘುಡಿಸುತಲೆಂದನು |
ಬಿಡು ಚಿಂತೆ ವಿಪ್ರರ ನಡತೆಗಳೈಸೆನ್ನ | ಬಿಡು ಸಂಗರಕೆ ಬೇಗದಿ || ೧೧೫ ||
ದೇವದಾನವರ ಸಮಾನವು ನೋಡೆನ್ನ | ಠೀವಿಯ ಸಂಗರದಿ |
ತೀವಿದ ರಿಪುಭಟನನು ತಲೆಗಡಿವೆನೆಂ | ದಾ ವೀರ ಪೊರವಂಟನು || ೧೧೬ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭೇರಿ ಶಂಖ ನಗಾರಿಗಳು ಮಿಗೆ | ಭೋರಿಡುತ ನಾಲ್ದೆಸೆಯು ಕಂಪಿಸೆ |
ಭೂರಿ ಬಿರುದುಗಳಿಂದ ಪೊರಟನು | ದಾರ ಭಟನು || ೧೧೭ ||
ಭಾರಿ ಬಲ ಸಹ ಬರಲಿಕಿತ್ತಲು | ಸಾರಥಿಗೆ ಸೂಚಿಸಿದನಾ ರಣ |
ಧೀರ ಪಾರ್ಥಜ ಭುಜವನೊದರಿಸು | ತಾರುಭಟಿಸಿ || ೧೧೮ ||
ಕೇಳು ಸಾರಥಿಯೆರಡು ಶರದಲಿ | ಸೀಳಿ ಬೆನ್ನಲಿ ಕರುಳ ತೆಗೆವೆನು |
ಖೂಳನನು ನೀ ನೋಡು ಮಮ ಕ | ಟ್ಟಾಳು ತನವ || ೧೧೯ ||
ಎನುತ ಕೊನೆಮೀಸೆಗಳ ತಿರುಹುತ | ಧನುವ ಝೇಂಕರಿಸಲು ಜಗತ್ತ್ರಯ |
ಘನ ಪರಾಕ್ರಮಕದುರೆ ಕೌರವ | ನನುಜಗೆಂದ || ೧೨೦ ||
ಭೀಷಣನು ನೀನಹುದೆಲವೊ ದು | ಶ್ಯಾಸನನೆ ಕೇಳ್ ನಿನ್ನ ಭಂಗಿಸ |
ದೀಸಕಂಜಿದರೆನಗೆ ಶರಸಂ | ನ್ಯಾಸವಿನ್ನು || ೧೨೧ ||
ರಾಗ ಮಾರವಿ ಮಟ್ಟೆತಾಳ
ಎಂದ ಮಾತಿಗೆ | ಕೌರವಾನುಜ |
ನಿಂದು ನೂರು ಶರವನೆಚ್ಚ | ನಂದು ನರಜಗೆ || ೧೨೨ ||
ಭೀಮ ಫಲುಗುಣ | ರೆಂಬವರೊಳು ಸಂ |
ಗ್ರಾಮಗೊಡುವುದುಚಿತ ನೀನು | ಹುಡುಗನಾದೆಲಾ || ೧೨೩ ||
ಕೊಳಚೆ ನೀರನು | ದಾಟಲರಿಯದೆ |
ಜಲಧಿ ಕಾಲಹೊಳೆಯಿದೆಂಬ | ಶೌರ್ಯವೇತಕೆ || ೧೨೪ ||
ಭೀಮಪಾರ್ಥರ | ಗೊಡವೆಯೇತಕೊ |
ನೀನು ಮೊದಲು ಸೆಣಸಿ ಜೀವಿ | ಸೆನ್ನ ಕೈಯಲಿ || ೧೨೫ ||
ಎನುತನೇಕ ಮಾ | ರ್ಗಣಗಳಿಂದಲಿ |
ಕನಲಿ ಕವಿಯಲೆಂಟು ದೆಸೆಯು | ಕಾಣದಿದ್ದುವು || ೧೨೬ ||
ವಾರ್ಧಕ
ಅಭಿಮನ್ಯು ಬಿಟ್ಟ ಪ್ರತಿಕೂಲ ಶರಜಾಲ ರಿಪು |
ಸುಭಟನ ಶತಾಸ್ತ್ರಮಂ ತಡೆಗಡಿದು ಸದೆಬಡಿದು |
ಇಭ ಘಟೆ ತುರಂಗ ಕಾಲಾಳ್ಗಳಂ ಸಾಲ್ಗಳಂ ಸವರಿ ಬಲು ಸೈನಿಕವನು ||
ರಭಸಿದಿಂದೆದ್ದಾಗ ಕೊಚ್ಚಿದವು ಮುಚ್ಚಿದವು |
ಅಭಿನವೋದ್ಭಾಸದಿಂ ಬೀರಿದವು ತೂರಿದವು |
ನಭಕಡರುವಂದದಿ ವರೂಥಗಳ ಯೂಥಗಳನಚ್ಚರಿಯನೇನೆಂಬೆನು || ೧೨೭ ||
ಭಾಮಿನಿ
ರಾಯ ಕೇಳಭಿಮನ್ಯುಬಾಣನಿ |
ಕಾಯವನು ತಡೆಗಡಿದು ಬಹುತರ |
ಸಾಯಕವ ಬಿಡಲದನು ಖಂಡಿಸಿ ಪಾರ್ಥಸುತನೆಂದ ||
ತಾಯಿಗವಮಾನವನು ಮಾಡಿದ |
ನಾಯೆ ನಿನ್ನನು ಕೊಲುವೆನೆಂದರೆ |
ವಾಯುಪುತ್ರನ ಭಾಷೆಗಂಜುವೆನೆಂದು ತೆಗೆದಚ್ಚ || ೧೨೮ ||
ರಾಗ ಸಾಂಗತ್ಯ ರೂಪಕತಾಳ
ರಾಯ ಜನಮೇಜಯ ಕೇಳಿತ್ತಲಭಿಮನ್ಯು | ಸಾಯಕದಲಿ ದುಶ್ಯಾಸನನು |
ಗಾಯವಡೆದು ಗರ್ವಗುಂದಿ ಮೂರ್ಛಿತನಾಗ | ಲಾಯೆಡೆಯಲಿ ಕರ್ಣ ತಡೆದ || ೧೨೯ ||
ಮಗುವೆಂದು ಒಮ್ಮೆ ನಾ ಬಿಟ್ಟರೆ ಗರ್ವದಿ | ಮಿಗುವರಿದೆಮ್ಮಯ ಬಲವ ||
ಹಗರಣಗೊಳಿಸಿದೆ ಫಡ ಫಡೆಂದಡಹಾಯ್ದು | ತೆಗೆದಚ್ಚನಸ್ತ್ರಸಂಕುಲವ || ೧೩೦ ||
ಬಲ್ಲೆ ನೀ ಬಾಯಬಡಕನೆಂದು ನಿನ್ನನು | ಕೊಲ್ಲಲು ಪಿತ ಕೋಪಿಸುವನು ||
ನಿಲ್ಲು ನಿಲ್ಲಾದರೆಂದೆನುತೆಂಟು ಶರದಿಂದ | ಬಿಲ್ಲ ಖಂಡಿಸಿ ಭೀಕರಿಸಿದ || ೧೩೧ ||
ಶರಹತಿಯಲಿ ನಿರಾಯುಧನಾಗಿ ಭಯಗೊಂಡು | ತರಹರಿಸಿದ ಕರ್ಣ ನೊಂದು ||
ಸುರಿವ ರಕ್ತದಿ ತೇರು ತೋಯ್ದುದು ಸಾರಥಿ | ತಿರುಗಿಸಿದನು ಬೇಗ ರಥವ || ೧೩೨ ||
ಪಿತನಿಂತು ಗಾಯವಡೆದನೆಂಬುದರಿತಾಗ | ಸುತ ವೃಷಧ್ವಜ ಬಂದು ತಡೆದ |
ಅತಿರಥನೊಡನಾತ ಕಾದಲೈದಂಬಿಲಿ | ಮಥಿಸಿದ ಕರ್ಣನಂದನನ || ೧೩೩ ||
ಭಾಮಿನಿ
ಕೆಲಬರೀ ಪರಿಯಿಂದ ಮಡಿದರು |
ಕೆಲಬರತಿ ಗಾಯದಲಿ ನೊಂದರು |
ಕೆಲಬರಾಯುಧಗಳನು ಬಿಸುಟೋಡಿದರು ಸಮರದಲಿ ||
ನಿಲದೆ ಕುರುಸೇನಾ ಸಮುದ್ರವು |
ಕಲಕಿತಭಿಮನ್ಯುವಿನ ಝಡಿತಕೆ |
ವಿಲಯಭೈರವನೆನಿಸಿ ತೋರಿದನಾ ಮಹಾಹವದಿ || ೧೩೪ ||
ರಾಗ ಮಾರವಿ ಝಂಪೆತಾಳ
ಇತ್ತಲಭಿಮನ್ಯು ಷಡುರಥರೊಡನೆ ಕಾದುತಿರ | ಲತ್ತ ಧರ್ಮಜ ಮನದಿ ಚಿಂತಿಸುತಲೆಂದ ||
ಪುತ್ರನೊಬ್ಬನೆ ಪೋಗಿ ಏನಾದನೋ ಕಾಣೆ | ಸತ್ತ್ವಾತಿಶಯ ಭೀಮ ಪೋಗಯ್ಯ ರಣಕೆ || ೧೩೫ ||
ಸಕಲ ಸೈನಿಕ ಸಹಿತ ತೆರಳಿ ಬೆಂಬಲಮಾಗಿ | ಸುಕುಮಾರಕನ ಬಿಡಿಸಿಕೊಂಡು ಬಾರಯ್ಯ ||
ನಕುಲ ಧೃಷ್ಟದ್ಯುಮ್ನ ದ್ರುಪದನು ವಿರಾಟ ಸಾ | ತ್ಯಕಿ ಸಹಿತ ಪೋಗಿರೈ ತಡಮಾಡದೀಗ ||೧೩೬||
ಕರಿ ತುರಗ ರಥ ಸಹಿತ ಸೈನಿಕರನೊಡಗೊಂಡು | ಪೊರಟರರಸಗೆ ನಮಿಸಿ ಪರುಠವಣೆಯಿಂದ ||
ಮೊರೆದುವಗಣಿತ ವಾದ್ಯ ಭೇರಿ ತಮ್ಮಟೆ ಕಹಳೆ | ತರತರದಿ ನೆಲನದುರುವಂತೆ ಫೋಷದಲಿ ||೧೩೭||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಗದೆಯ ತಿರುಹುತ ಸಿಂಹನಾದದೊ | ಳೊದರಿ ಮಗನಾವೆಡೆಯೆನುತ ಬಲು |
ಕದನಕಲಿಗಳ ದೇವ ಭೀಮನು | ಮೊದಲು ನಡೆದ || ೧೩೮ ||
ಪೃಥವಿ ಕಂಪಿಸೆ ಭೀಮಸೇನನ | ರಥದ ವಹಿಲಕೆ ಬರಲು ಬಾಗಿಲೊ |
ಳತಿರಥರ ತಡೆದನು ಜಯದ್ರಥ | ಖತಿಯೊಳಿರದೆ || ೧೩೯ ||
ತೆರಹುಗೊಡು ಫಡ ಫಡ ಜಯದ್ರಥ | ಹೊರತೆಗೆದು ನಿಲ್ಲೆಂದು ಹೂಣಿಗ |
ರುರುಬಿದಡೆ ಮಾರಾಂತುನಿಂದನು | ಹರನ ವರದಿ || ೧೪೦ ||
ಖೂಳ ನಿನಗೀ ಗರ್ವವೇಕೆಲೊ | ಬೋಳುಗೆಯ್ದುದನರಿಯೆ ತೊಲಗೆಂ |
ದಾಳು ಬಿಂಕದಿ ಕೊಟ್ಟ ಬಲುತರ | ಕಾಳಗವನು || ೧೪೧ ||
ತೆರಹುಗೊಡೆನಿಂದಿನಲಿ ನಡೆ ನಡೆ | ಮರೆದು ಕಳೆಯಭಿಮನ್ಯುವನು ಶಶಿ |
ಧರನ ಕಾರುಣ್ಯಾವಲೋಕನ | ವಿರುವುದೆನಗೆ || ೧೪೨ ||
ನರಹೊರತು ನಿಮ್ಮೀಗ ನಾಲ್ವರ | ಸರಕುಮಾಡುವನಲ್ಲ ಹೋಗೆಂ |
ದುರುತರಾಸ್ತ್ರವ ಕವಿಯಲನಿಲಜ | ನರಿತು ನುಡಿದ || ೧೪೩ ||
Leave A Comment