ವಾರ್ಧಕ

ಅರವಿಂದಮುಖಿ ದಂತಪಂಗ್ತಿಯಿಂಕಾಂತಿಯಿಂ |
ಪರಿಪರಿಯ ನವರತ್ನಹಾರದಿಂ ಭಾರದಿಂ |
ಮೆರೆವಬಿಂಬೋಷ್ಟದಾನಂದದಿಂಛಂದದಿಂ ಸುರಚಿರಾಭರಣದಿಂದಾ ||
ವರಸಖಿಯರೊಳು ಮಾತನಾಡುತಂ ಕೂಡುತಂ|
ಕಿರುನಗೆಯವಾಣಿಯಿಂ ಮೆರವಫಣಿವೇಣಿಯಿಂ |
ಪುರುಷನನಿರೀಕ್ಷಿಸುವ ಹರುಷದಿಂಸರಸದಿಂ ಕುಳಿತೀರ್ಪಳೇಂಪೇಳ್ವೆನೂ| ||81||

ಭಾಮಿನಿ

ಮುನಿಪಕೇಳಾವರಪತಿವ್ರತೆ |
ಇನಿಯನನು ದೂರದಲಿ ಕಾಣುತ |
ಘನತರದ ಭಕುತಿಯಲಿ ಇದಿರ್ಗೊಂಡಾಗ ಕರತಂದೂ ||
ಕನಕಮಯ ಪೀಠದಲಿವರನನು |
ವಿನಯದಿಂಕುಳ್ಳಿರಿಸಿಚರಣಕೆ |
ಮಣಿದುಪೇಳ್ದಳು ಪ್ರೀತಿಭಾವದಿ ಕಾಂತಗೆರಗುತಲಿ| ||82||

ರಾಗ ಕಾಂಭೋಜಿ ಏಕತಾಳ

ಆವಲ್ಲಿಗೆ ಪಯಣವಿಂದು ಪ್ರಾಣಕಾಂತಾ | ರಾಜ
ಯಿಂದಾ ಪೊರಟಿರ‌್ಯಾಕೆಪ್ರಾಣಕಾಂತ ||
ಭಾವಭಕ್ತಿಯಿಂದಲಾನುಪ್ರಾಣಕಾಂತಾ | ಕೇಳ್ವೆ
ನೀವಲೀದು ವೇಳ್ವುದೆನಗೆ ಪ್ರಾಣಕಾಂತಾ  ||83||

ಸ್ಯಂದನಾವಾನಡರಿನೀವು ಪ್ರಾಣಕಾಂತಾ |  ಹಿಂದೇ
ಬಂದುದಾ ಕಾಣೆಯಿಲ್ಲೀಗೆ ಪ್ರಾಣಕಾಂತಾ |
ಎಂದಿನಂದ ವಿಲ್ಲದೀಗ ಪ್ರಾಣಕಾಂತಾ | ಮನಕೆ
ಸಂದೇಹತೋರುತ್ತಲಿದೆ ಪ್ರಾಣಕಾಂತಾ|  ||84||

ರಾಗ ಕೇತಾರಗೌಳ ಅಷ್ಟತಾಳ

ಸುದತಿಯನುಡಿಗೇಳಿಚದುರಪುಷ್ಕಳನೆಂದಾ | ಮದನಜನಕರಾಮನೂ ||
ಮುದದಿಂದತಾಳಿದಭ್ಯುದಯದಕಾರ‌್ಯಕ್ಕೆ | ವದಗಿನಾಪೋಗುವೆನು| ||85||

ಆವಕಾರ‌್ಯವು ಅದರಂದವೇನೆಂಬುದ | ನೀವಲಿದೀಗೆನ್ನೊಳು |
ಸಾವಧಾನದೊಳುಸುರೆನೆಕೇಳುತೆಂದನೂ | ಭಾವಕಿಕೇಳೆಂದನು| ||86||

ಹಿಂದೆರಣದಿದಶಕಂಧರಾದಿಗಳನ್ನು | ಕೊಂದಕಾರಣದಿಂದಲಿ |
ಬಂದಪಾತಕ ಪರಿಹರಕಾಗಿ ಹಯಮೇಧ | ವಿಂದುತಾಗೈವರಿಲ್ಲಿ| ||87||

ತುರಗಮೇಧವರಚಿಸಿದರೀಗ ನೀಧನು | ಶರವಿಡಿದ್ಯಾಕಿಲ್ಲಿಗೇ |
ಬರುವರೆ ಕಾರಣವೇನೆನೆತೋಷದೊಳ | ರುಹಿದಕಾಮಿನಿಗೇ| ||88||

ಅರಿಗಳ ಜಯಿಸಲುತುರಗದಬೆಂಬಲ | ಕಿರಿದೀಗಶತ್ರುಹನೂ |
ಭರದಿಂದಪೋಗುವಪರಿಪರಿಸುಭಟರ | ಪರಸಿನಾನೈದುವೆನೂ| ||89||

ರಾಗ ಮಧುಮಾಧವಿ ಏಕತಾಳ

ಎನಲುಕೇಳುತಹಿಂದೆ | ಜನಕನಿತ್ತಹದಿವ್ಯ |
ಕನಕಮಯದಖಡ್ಗ | ಧನುಶರಾಯುಧವಾ |
ದಿನಕರಪ್ರಭೆಯಂತೆ | ಮಿನುಗುವಕವಚವ |
ವಿನಯನಿಗಿತ್ತುಪ | ಚರಿಸಿಪೇಳಿದಳೂ| ||90||

ಇತ್ತಪೆನೀವಿದ | ಧರಿಸಲು ಅರಿಗಳ |
ಸತ್ವಗುಂದುತಲ್ಲಲ್ಲಿ | ಅಸ್ತವಾಗುವರು |
ಶತ್ರುಹನಾಜ್ಞೆಯ | ವರ್ತಿಪುದೆನುತಲಿ |
ಮುತ್ತಿನಾರಾತಿಯಾತಂ | ದೆತ್ತಲುಬಳಿಕ |  ||91||

ವನಿತೆಯಬೀಳ್ಕೊಂಡು | ಜನನಿಜನಕರಿಂಗೆ |
ಮಣಿದುನೇಮವಗೊಂಡು | ಪುನರಪಿತಾನೂ|
ಮಣಿರಥವಡರುತ | ಘನಪರಿತೋಷದಿ |
ಗುಣನಿಧಿಪೊರಟಾನು | ವಿನಯದೊಳಾಗಾ| ||92||

ಭಾಮಿನಿ

ವರಮುನಿಶ್ವರಲಾಲಿಸಿತ್ತಲು |
ಪರಮ ವಿಭವದಿರಘುಕುಲೇಶನು |
ತುರಗವನುಪೊರಡಿಸಿದ | ಬಲಸಹಿತಾಗಸಂಭ್ರಮದೀ ||
ಬರುತಿರಲುಮಾರ್ಗದಲಿಪುಷ್ಕಳ |
ನುರುಪರಾಕ್ರಮದಿಂದ ಅವರೊಡ |
ವೆರಸುತೈತಂದನುಸಗಾಧದೊಳೆನಪೇಳುವೆನೂ| ||93||

ರಾಗ ಮಾರವಿ ಏಕತಾಳ

ಈ ಪರಿಯಿಂದಮಹಾಬಲವಾ ಸೇ | ನಾಪತಿಯಾಜ್ಞೆಯಲೀ |
ಭೂಪತಿಯಶ್ವವುಮುಂದೈದಿತುನಾ| ನಾಪರಿವಿಭವದಲಿ ||94||

ಭೇರಿಮದಂಗನಗಾರಿಪಣಹ ಕಾ | ಲಾರವದಿಂದಾಗ |
ಭೂರಿಮಹರ್ಬಲನಡದುದು ಪಥವಿಡಿ | ದಾರುಭಟಿಸಿಬೇಗಾ|  ||95||

ಉತ್ತರದೇಶಕೈಯಾಲುಮಖದಶ್ವವು | ಸುತ್ತಣನಪರೆಲ್ಲಾ |
ಮತ್ತೀವಾರ್ತೆಯ ಕೇಳುತಕಾಣಿಕೆ | ಯಿತ್ತುಪಚರಿಸಿದರೂ| ||96||

ಬಂದವನಿಪರನುಮನ್ನಿಸಿಸಿಶತ್ರುಹ | ನಂದವರೊಡಗೂಡಿ |
ಮುಂದೈತರುತಿಹ ಅಹಿದಾತ್ರಕನೆಡೆ | ತಂದುದುಹಯಬೇಗಾ| ||97||

ವಾರ್ಧಕ

ಇತ್ತಲಾಪುರದರಸು ಮುದದೀಹಯಬಂದ |
ವಾರ್ತೆಯನು ದೂತನೋರುವನೈದೆ ಪೇಳಲಿಕೆ |
ಶತ್ರುಘ್ನನಿದಿರ್ಗೊಂಡು ಕಾಣಿಕೆಯನಿತ್ತು | ತದ್ರಾ್ಯಾಭಿಷೇಚನವನೂ ||
ಪುತ್ರನಿಗೆವಿರಿಚಿಸುತ | ಹಯದ ಬೆಂಬಳಿವಿಡಿದು |
ಅತ್ಯಧಿಕ ಸಂಭ್ರಮದಿ | ಪೋಗುತಿರಲಾಗ ಭ್ರುಗು |
ಪುತ್ರಚವನಾಖ್ಯಮುನಿ | ಯಾಶ್ರಮಕೆನಡೆತಂದು ನಮಿಸಿನೇಮವಗೊಂಡರೂ| ||98||

ಕಮಲನಾಭನಯಾಗದಶ್ವಮುಂದೈತರಲು |
ವಿಮಲನಪಕೇಳುತ್ತರಾಜ್ಯಮಂಸುತಗೆ | ಸಂ
ಭ್ರಮದಿ ಪಟ್ಟವಗಟ್ಟಿಶತ್ರುಘ್ನನಿದಿರ್ಗೊಂಡುಬೆಂಬಲಕೆನಡೆತಂದನೂ ||
ದ್ಯುಮಣಿಸಂಕಾಶಮಾಗಿರ್ಪನೀಲಾದ್ರಿಯಂ|
ತಮತಮಗೆನೋಡಿವಿಸ್ಮಿತರಾಗಿವಿಷ್ಣುಪದ |
ಕಮಲಕಭಿನಮಿಸಲ್ಕೆ | ಚಕ್ರಾಂಕಪುರಕಾಗಿನಡೆದುದಾಯಾಗದಶ್ವ ||99||

ರಾಗ ಏಕತಾಳ ಸವಾ

ಆಪುರದಧಿಪತಿಯಾಗಿಹನೋರ್ವನು | ಶ್ರೀಪತಿಭಕ್ತಸುಬಾಹುಕನು ||
ಭೂಪತಿಯಾತ್ಮಜದಮನನುಬೇಟೆಗೆ | ತಾಪೊರಡುತಲೈತರುತಿಹನು| ||100||

ಬಲವನು ಕೂಡಿಸಿ ಸಂತೋಷಾಂಗದಿ | ಮಣಿರಥವನುಯೇರಿ |
ವಿನಯದಿ ಬೇಟೆಯನಾಡುತ ಶಸ್ತ್ರವ | ತುಡುಕುತಲೈತಂದ| ||101||

ರಾಗ ಭೈರವಿ ಏಕತಾಳ

ಬಂದಾನಾದಮನಾ | ಬೇಟೆಯಾಡುತ್ತಾ ಬಂದಾನಾದಮನಾ|   || ಪಲ್ಲವಿ ||

ಬಂದದಮನನತಿ | ಚಂದದಿಸೇನಾ |
ವಂದದೊಡನೆ | ಸಾನಂದದೊಳಂದು | ಬಂದಾನಾದಮನಾ| ||102||

ವಿಧವಿಧಬಲೆಗಳ | ನೊದಗಿಸಿಮೃಗಗಳ |
ಸದವುತಮಾರ್ಗದಿ | ಬದಿಯನುಸಾರುತ |
ಚದುರತೆಯಿಂದಲಿ | ಬೆದರಿಸುತಂದೂ | ಬಂದಾನಾದಮನಾ| ||103||

ವೋಡುವಮೃಗಗಳ ನೋಡುತಸನ್ನೆಯ |
ಮಾಡುತಬಾಣವ | ಹೂಡುತಸಿಕ್ಕಲು |
ಪಾಡಿನೊಳಿರಿವುತ | ಕಾಡಿನೊಳಂದೂ | ಬಂದಾ ||104||

ಕಾಣುತಲಾಕಾಡ್ಗೋಣಾದಿಗಳನು |
ಬಾಣದೊಳೆಸವುತ ತ್ರಾಣದಿಕೆಡಹಲು |
ಗೋಣುಗಳರಿವುತ ಪ್ರಾಣಗೊಳುತಲೀ | ಬಂದಾ| ||105||

ರಾಗ ನಾದನಾಮಕ್ರಿಯೆ ಅಷ್ಟತಾಳ

ಇಂತುದಮನುಬೇಟೆಯಾಡುತ್ತಾ | ಅತಿ | ಸಂತಸದಿಂಸುತ್ತ ನೋಡುತ್ತಾ |
ನಿಂತಿರಲಶ್ವವಕಂಡನು | ಚರ | ರಂತಳುವದೆಕರದೆಂದಾನೂ ||106||

ಆರಶ್ವವಿದುಮುಂದೆತೋರ್ಪುದೂ | ಮತ್ತೆ | ಭೂರಿಶೃಂಗಾರವಾಗೀರ‌್ಪೂದೂ ||
ಚಾರುಲಿಖಿತವಿದೆಭಾಳಾದೀ | ಮನ | ಸೂರೆಗೊಂಡುದುರತ್ನಜಾಲಾದೀ|  ||107||

ತರಬೇಕೀಹಯವನೆಕೇಳುತಾ | ಆಗ | ಚರರತಿಹರುಷವತಾಳುತ್ತಾ |
ತುರುಗಾವಪಿಡಿವುತೈತಂದಾರೂ | ನುಪ | ಸುತನಡಿಗೆರಗುತ್ತಾ ನಿಂದಾರೂ| ||108||

ಸುಂದರಕ್ಷರದಿಂದಬರದಿಹಾ | ದಿವ್ಯ | ಚಂದನಲೇಪಿತವಾಗಿಹ |
ಛಂದದೊಳಿರುವಲೇಖವನ್ನೂ | ತೆಗೆ | ದಂದು ವಾಚಿಸಿದನುದಮನನೂ| ||109||

ರಾಗ ಕಾಂಭೋಜಿ ಝಂಪೆತಾಳ

ಶ್ರೀಮಹಾಸಾಕೇತಪುರವರಾಧೀಶ್ವರನು | ಭೂಮಿಪಾಲಕರಕುಲತಿಲಕಾ |
ಭೀಮವಿಕ್ರಮ ದಶರಥಾತ್ಮಜನು ಧುರವಿಜಯ | ರಾಮಚಂದ್ರನು ಮಖವನೆಸಗೀ| ||110||

ಬಿಟ್ಟಿರುವನಶ್ವವಿದಲಂಕರಿಸಿಫಣಿಯೊಳಗೆ | ಕಟ್ಟಿಲಿಖಿತವನುತೋಷದಲಿ |
ಧಿಟ್ಟಶತ್ರುಘ್ನಬಂದಿಹನಿವರಬೆಂಬಲಕೆ | ಸೃಷ್ಟಿಪಾಲರ ಜಯಸಲೆನುತಾ| ||111||

ಚಂಡವಿಕ್ರಮಭುಜಪರಾಕ್ರಮಿಗಳಾದವರು | ಕಂಡುಕಟ್ಟುವದುಹಯವಿದನೂ |
ತಂಡತಂಡದನಪರಗೆಲಿದುವಾಜಿಯಬಿಡಿಸಿ | ಕೊಂಡುಪೋಗುವನುಶತ್ರುಹನು| ||112||

ಈತುರಗವನುಬಂಧಿಸಲು ಸತ್ವವಿಲ್ಲದಿಹ | ಭೂತಳಾಧಿಪರಿದಿರ್ಗೊಂಡೂ |
ಪ್ರೀತಿಯಲಿಕಾಣಿಕೆಯನಿತ್ತು ಮನ್ನಿಸಲವರ | ಗಾತತೂಕ್ಷಣಪಾಲಿಸುವನೂ| ||113||

ಇಂತೆಂದು ಬರದಪತ್ರಿಕೆಯವಾಚಿಸುತ | ಅತ್ಯಂತಕೋಪಾಗ್ನಿಯಲಿಧಮನಾ |
ಮುಂತೀರ್ಪಸುಭಟರನು ನೋಡಿಪಲುಗಡಿವುತ್ತ | ಲಿಂತೆಂದನಗುತಸಂಭ್ರಮದೀ|  ||114||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನನುಸುರವೆನೀಪರಿಯ ಬಹು | ಮಾನವೀಹುಲುನಪರಿಗುಂಟೆ | ನಿ
ಧಾನಿಸದೆಬರದಿಹನು ಬುದ್ಧಿವಿ | ಹೀನರಂತೇ| ||115||

ಊರ್ವಿಪತಿಗಳಕುಲಶಿರೋಮಣಿ | ಸಾರ್ವಭೌಮಕನೆನ್ನಪಿತನಿರೆ |
ಸರ‌್ವರೊಳಗಿವಶ್ರೇಷ್ಠರೆಂಬೀ | ಗರ್ವವೇನೈ| ||116||

ಇಂದುರಣದೊಳಗೆನ್ನಕರಹತಿ | ಯಿಂದಜಹಯಮುಖ್ಯಸೇನಾ |
ವಂದಧರಣಿಯೊಳೊರಗಿಸುವೆ ತಾ | ನೆಂದುನುಡಿದಾ| ||117||

ತಂದು ಹಯವನು ಕಳುಹಿಪುರಕಾ | ನಂದಮಿಗೆಸೇನಾಪತಿಯ| ಕರೆ
ದೆಂದ ಬಲಸಹಿತೀಗಯುದ್ಧಕೆ | ನಿಂದಿರುವದು ||118||

ಭಾಮಿನಿ

ಇತ್ತಹಯಪಾಲಕರು ನಡೆತಂ |
ದುತ್ತಮಾಶ್ವವದಮನ ಕಟ್ಟಿದ |
ವಾರ್ತೆಯನುಕೇಳುತ್ತಭಯದಿಂದಾಗನಡೆತಂದು |
ಶತ್ರುಹಗೆಪೇಳಲ್ಕೆರಣದಲಿ |
ನಿಂತು ಕಾದುವದೆನುತನೇಮಿಸೆ |
ಚಿತ್ತದಲಿ ಸಂತಸವತಾಳುತ ಲಾಗಪಟುಭಟರೂ| ||119||

ರಾಗ ಶಂಕರಾಭರಣ ಮಟ್ಟೆತಾಳ

ಮತ್ತೆ ಲಾಲಿಸೈಮುನೀಂದ್ರ | ಪಥ್ವೀಪಾಲನುಸುರಲಿಂತು |
ಹಸ್ತಿಹಯರಥಾದಿಸೇನೆ | ಮುತ್ತಿತಾಗಳು |
ಕತ್ತಿಪರಶುಕುಂತಪಾಶ | ಶಕ್ತಿತೋಮರಂಗಳಿಂದ|
ವಿಸ್ತರಿಸುವೆನೇನಮುಂದೆ | ನಿಂತುದಾಕ್ಷಣ| ||120||

ಖಡಿಯಿರವರಕೊಚ್ಚಿಮುಂದೆ | ಬಿಡದಿರೆನುತ ವುಭಯಸೈನ್ಯ |
ತಡೆಯದಾಗ ರೋಷವೆತ್ತು | ಫಡಫಡೆನುತಲೀ |
ಘುಡುಘುಡಿಸುತಲಾರ್ಭಟಿಸುತ | ಕಿಡಿಯನುಗುಳುತಂದುಸ್ಯಂದ |
ವಿಡಿವುತಾಗ ಹಿಂದೆಹೆಜ್ಜೆ | ಯಿಡದಿರೆನುತಲೀ | ||121||

ಬಾಣಮಯದಿಬಲವದಮನ | ಹಾನಿಗೈದನೊಂದೆಕ್ಷಣದಿ |
ಯೇನನೆಂಬೆನದುಭುತವನು | ಅವನಿಪಾಲನೆ | ||122||

ಆನಲಾರದಿವನಧುರವ | ಪ್ರಾಣಭೀತಿಯಿಂದ ಮರಳಿ |
ಕ್ಷೋಣಿಪತಿಯಸಹಜನೆಂದ | ತಾನೆದಮನಗೆ ||123||

ರಾಗ ಭೈರವಿ ಅಷ್ಟತಾಳ

ತರಳಾನೀರಣಕೆಬಂದೂ | ಕಾದುವದಿದು | ಥರವಲ್ಲಕೇಳೊಇಂದೂ |
ಸರಿಹುಡುಗರಕೂಡಿಪರಿಪರಿಯಾಟವ | ಚರಿಸುನೀಪೋಗೆದಂನೂ| ||124||

ರಿಪುಗಳ ಶಿರಗಳನು | ಚಂಡಾಡುವ | ಅಪರೂಪದಾಟವನು |
ನಪತಿಕೇಳಿಲ್ಲಿ ಕ್ರಿಡಿಸಲೀದು ಯೋಗ್ಯವು | ಕುಪಿತನಾಗದಿರೆಂದನು ||125||

ಶಿಶುಹತ್ಯಾಪಾತಕಕೇ | ಅಂಜಿಯೆನಿಂನೊ | ಳುಸುರುವೆನೀಕ್ಷಣಕೇ |
ಹಸುಮಗನಾಗಿಸಾಹಸವತೋರಿಸಲೆಂದು | ಅಸುವನೀಗದಿರೆಲವೋ|  ||126||

ಪಾತಕಕಂಜಿನೀನೂ | ಸದ್ಧರ್ಮದ | ರೀತಿಯೊಳಿರುವಾತನು |
ಯಾತಕೀತುರಗಬಳಿವಿಡಿದೈತಂದೆ | ನೀತೆರಳೆಲೊ ಮನೆಗೇ| ||127||

ರಾಗ ಪಂತುವರಾಳಿ ಮಟ್ಟೆತಾಳ

ಎನುತಬಾಣಶತಕವನ್ನುಧಮನನಾಕ್ಷಣ |
ಯಿನಕುಲೇಂದ್ರನನುಜಗೆಸೆಯಲತಿವಿಚಕ್ಷಣಾ ||
ಕಣೆಯಹತಿಗೆಸೇನೆಮತ್ತೆದಣಿದುತಿರುಗಲೂ | ಅನಕಶತ್ರುಹಾಖ್ಯನೂರುಕಣಿಯೊಳೆಸೆಯಲೂ ||128||

ಬಂದುನಾಂಟಲಸ್ತ್ರಕೋಪದಿಂದಧಮನನೂ |
ಒಂದುಭಾರಿತ್ರಿಶಿಖಶರಗಳಿಂದಲೆಚ್ಚನೂ |
ಮುಂದುವರಿದುಬಸುರನುಚ್ಛಳಿಸಲು ಕಾಣುತಾ | ಅಂದುಸಾವಿರಾಸ್ತ್ರ ವೆಸೆಯೆಬಳಿಕನಪನುತಾ ||129||

ತುರಗಸೂತಸಹಿತಲಾಗಧರೆಗೆಬೀಳಲೂ |
ಭರದಿಪೊಸವರೂಥವಡರಿಧಮನನಾಗಲು |
ಶರವನೆಸೆಯೆ ಶತ್ರುಹಾಖ್ಯಮೂರ್ಛೆಯಿಂದಲಿ | ಧರಣಿಗೊರಗಿ ಬಳಿಕ ಚೇತರಿಸುತ ಖತಿಯಲಿ   ||130||

ಭಾಮಿನಿ

ಮುನಿಪಕೇಳೈಬಳಿಕಶತ್ರುಹ |
ಘನತರದರೋಷದಲುಸುರ್ದನು |
ರಣದಿದಮನನ ಗೆಲುವ ಸಾಹಸವಾರಿಗುಂಟಿನ್ನು
ಎನುತಮನದೊಳುಚಿಂತಿಸಲು | ಕಂ
ಡನಿತರೊಳುಪುಷ್ಕಳನುಚರಣಕೆ |
ಮಣಿದುಕಿರಿಯೈಯ್ಯನೊಳುಪೇಳ್ದನು ವುರುಪರಾಕ್ರಮದೀ| ||131||

ರಾಗ ಕೇತಾರಗೌಳ ಅಷ್ಟತಾಳ

ತಾತಕೇಳೀಗಯೀಧೂರ್ತನ | ಗೆಲುವರೆ | ಯಾತಕೆಚಿಂತಿಸುವೇ ||
ಪ್ರೀತಿಯಿಂದೆನಗಪ್ಪಣಿಯನಿತ್ತು|  ಕಳುಹಿಸು ಧೂರ್ತನ ಗೆಲುವೆನೆಂದಾ| ||132||

ರಣದೊಳುನಿಂಮನುದಣಿಸೀದವೈರಿಯ | ಕ್ಷಣದೊಳುಜಯಿಸುವೆನು |
ಅನುಮಾನಬೇಡೆಂದುಪದಕೆರಗುತಲಿ ಸಂ | ಗರಕಪ್ಪಣೆಯಕೊಂಡನು ||133||

ಮಣಿರಥವೇರ್ದುಹೂಂಕರಿಸುತ್ತಪುಷ್ಕಳ | ಧನುಶರಾಯುಧವಿಡಿದೂ |
ಘನಪರಾಕ್ರಮದಿಂದನಡೆತಂದುಸಂಗರ | ಕಿದಿರಾಗಿರೋಷದೊಳೂ| ||134||

ತಂಡತಂಡದನುಭಟರಕೂಡಿರಣದಿಮುಂಕೊಂಡು ನಿಂದಿರೆಧಮನಾ |
ಚಂಡವಿಕ್ರಮಪುಷ್ಕಳಾಖ್ಯನುಪೇಳ್ದ ಕೋ | ದಂಡವಜೇಂಗೈವುತಾ| ||135||

ರಾಗ ನಾದನಾಮ ಅಷ್ಟತಾಳಕ್ರಿಯೆ

ಎಲವೊದಮನಕೇಳುರಣದೊಳು | ನಿನ್ನ | ಗೆಲುವಾರೆ ಬಂದೆನೀಕ್ಷಣದೊಳು |
ಛಲದಂಕಭರತನಾತ್ಮಜನಾನೂ | ಪುಷ್ಕ | ಳನಸಾಹಸವಂನೆನೋಡಿನ್ನು| ||136||

ಕೇಳುಸುಬಾಹುವಾತ್ಮಜನಾನೂ | ಗುಣ | ಶೀಲಧಮನನೆಂಬರೆನ್ನನೂ |
ಲೀಲೆಯಿಂಕಟ್ಟಿದಶ್ವವಾ | ನೆಂದು | ಕಾಳಗದಲಿಬಿಡಲಸ್ತ್ರವ | ||137||

ಕಿಡಿಗೆರವುತಬಿಡೆಶರಗಳ | ಗಜ | ತುರಗಪದಾತಿಗೆತಾಗಲೂ |
ಕಿಡಿಗೆದರುತಪುಷ್ಕ| ಳಾಖ್ಯನೂ | ಅಗ್ನಿ | ಶರವೆಸದನುಪೇಳಲದರನು| ||138||

ಕಿಡಿಯಿಡುತೈತಹಬಾಣದಿ | ಸೇನೆ ಸುಡುತಿರೆಧಮನದುಮ್ಮಾನದಿ |
ಕಡುರೋಷದಿಂದಜಲಾಸ್ತ್ರೆವಾ | ಬಿಟ್ಟು | ಮಡಿಯಲೀಸದೆನಿಜಪಾಳ್ಯವಾ|  ||139||

ಜಲಮಯವಾಗುತ್ತಲಲ್ಲಲ್ಲೀ | ಸೇನೆ | ಮುಳುಗುತೇಳುತಲಿರೆವ್ಯಥೆಯಲೀ |
ಕಲಿಪುಷ್ಕಳನುವಾಯವ್ಯಾಸ್ತ್ರವ | ನೆಚ್ಚು | ನಿಲಿಸಿದನ ದರಪ್ರತಾಪವಾ ||140||

ಭಾಮಿನಿ

ಮುನಿಪಕೇಳೈಬಳಿಕದಮನನು |
ಕನಲಿಪರ್ವತಬಾಣವೆಸೆಯಲು |
ಜನರಿಗುಪಹತಿಯಾಗಲದರನುಕಂಡುಪುಷ್ಕಳನೂ ||
ಘನತರದಮಂತ್ರಾಸ್ತ್ರ ವೆಸೆಯಲು |
ಅನಿತಿದೆಲ್ಲವನುಂಗೆದಮನನ |
ತನುವನುಚ್ಚಳಿಸಲ್ಕೆ ಮೂರ್ಛಿತದ | ನಾಗಿಮಲಗಿರಲು| ||141||

ವೃತ್ತ

ದಮನಂಮೂರ್ಛಿತನಾಗಿಮಲಗಿರಲಾಗಳ್ |
ಅನಿತರೊಳಂಚರರೈತಂದಾಗಳು |
ಧರಣಿಪವೀರಸುಬಾಹುಕನಡಿಗೆರಗುತ್ತಂ |
ಕ್ರಮದಿಂದೀವಾರ್ತೆಯನರುಹಿದರತಿಭೀತಿಯೊಳಂ| ||142||