ಶ್ರೀಮನ್ಮಹಾಭಾರತದೊಳಗಣ

ಯಕ್ಷಗಾನ ಆದಿಪರ್ವ

ರಾಗ ಮಾರವಿ ಝಂಪೆತಾಳ

ಶರಣು ಗೌರಿಯ ಪುತ್ರ | ಶರಣು ರವಿಶಶಿ ನೇತ್ರ ||
ಶರಣು ಕೋಮಲಗಾತ್ರ | ಶರಣು ಸುಚರಿತ್ರ ||1||

ದುರಿತ ತಿಮಿರ ಪತಂಗ | ದೇವ ದೇವೋತ್ತುಂಗ ||
ಪರಮ ನೀತಿ ವಿಚಾರ | ಪೊಗಳುವೆನು ಧೀರ ||2||

ಮೂಷಿಕನ ಮೇಲೇರಿ | ಮಿಗೆ ಬರುವೆ ದಯದೋರಿ ||
ಭೂಸುರರ ಭಕ್ತಿಯನು | ಬಿಡದೆ ಕೈಗೊಂಬವನು ||3||

ಏನೆಂದು ಪೊಗಳುವೆನು | ಎನಗಳವೆ ಯಿಂದು ||
ನಿರುತ ಹರಕೆಯ ತಂದು | ನಿನ್ನ ಮುಂದಕೆ ಬಂದು ||
ಎರಗಿ ನೈವೇದ್ಯವನು | ಇತ್ತು ಪೋಗುವರನ್ನು ||4||

ಕರವಿಡಿದು ರಕ್ಷಿಸುವೆ | ಕಲ್ಯಾಣದಿಂದಿರುವೆ ||
ಚರಣಕೆರಗುವೆ ನಿತ್ಯ | ಭಾಪು ಗಣನಾಥ ||5||

ವಚನ

ಇಂತೆಂದು ಸಿದ್ಧಿವಿನಾಯಕನಂ ಭಜಿಸಿ ಸಾಂಬಶಿವನ ಭಜಿಸುವೆನದೆಂತೆನೆ –

ರಾಗ ಮೆಚ್ಚು ಬಹುಳ ಝಂಪೆತಾಳ

ಜಯ ನಿತ್ಯ ಕಲ್ಯಾಣ | ಜಯತು ಉರಗಾಭರಣ ||
ಜಯ ಸುರಾರ್ಚಿತ ಚರಣ | ಜಯ ಕಲುಷ ಹರಣ ||6||

ಜಯ ದಕ್ಷ ಮದಭಂಗ | ಜಯತು ನಂದಿಯ ತುರಂಗ ||
ಜಯತು ಕರುಣಾಪಾಂಗ | ಜಯ ಮೋಹನಾಂಗ ||7||

ಜಯ ರಜತಗಿರಿವಾಸ | ಜಯ ಚಂದ್ರಮೌಳೀಶ ||
ಜಯ ಮುನಿ ಮನೋಲ್ಲಾಸ | ಜಯ ಪಾರ್ವತೀಶ || ಜಯತು ಜಯತು ||8||

ವಚನ

ಇಂತೆಂದು ಸಾಂಬಶಿವನಂ ಭಜಿಸಿ ಗಿರಿಜಾತೆಯಂ ಭಜಿಸುವೆನದೆಂತೆನೆ –

ರಾಗ ಮಧುಮಾಧವಿ ಏಕತಾಳ

ಅಂಬಾ ಕೈಮುಗಿದಂಬ | ಸ್ತುತಿಯ ಕೈಗೊಂಬ |
ಕೀರ್ತಿವಿಡಂಬೆಯ ನೆನೆವೆನು ನಾನು | ಲೋಕ ಜನನಿಯಾ |
ಕರಿಮುಖನ ಮಾತೆ | ಕರುಣಿಪುದೆನ್ನ ವಾಕ್ಯದಿ ನೆಲಸಮ್ಮಾ ||9||

ವಚನ

ಇಂತೆಂದು ಗಿರಿಜಾತೆಯಂ ಭಜಿಸಿ ಸರಸ್ವತಿಯಂ ಭಜಿಸುವೆನದೆಂತೆನೆ –

ರಾಗ ಮಾರವಿ

ಕಮಲಜಾತನ ರಾಣಿ | ಕಮಲಸನ್ನಿಭ ವೇಣಿ ||
ಕಮಲಾಕ್ಷ ಭಕ್ತ ಹ | ತ್ಕಮಲವಾಸಿನಿಯೆ ||10||

ಹರಿ ಮಧ್ಯೆ ಹರಿ ವೇಣಿ | ನಿರುತ ವೀಣಾಪಾಣಿ ||
ವರವ ಕೊಡು ಕಲ್ಯಾಣಿ | ಸ್ಮರಿಸುವೆನು ವಾಣಿ ||11||

ವಚನ

ಇಂತೆಂದು ಸಕಲ ದೇವತಾ ಪ್ರಾರ್ಥನೆಯಂ ಮಾಡಿ ಶ್ರೀಮನ್ಮಹಾಭಾರತದೊಳಗಣ ಆದಿಪರ್ವ ಪ್ರಸಂಗವನ್ನು ಯಕ್ಷಗಾನ ಕ್ರಮದಿಂದ ಪೇಳ್ವೆನದೆಂತೆನೆ –

ರಾಗ ದ್ವಿಪದಿ

ಇಂದುಕುಲ ಶಾಂತನುದರಲ್ಲಿ ಪುಟ್ಟಿದನಾ |
ಕಂದ ಚಿತ್ರಾಂಗದನು ವಿಚಿತ್ರವೀರ್ಯಕನ ||12||

ವಧುವಂಬೆಯಂಬಿಕೆಗೆ ಸೂನುವೆಂದೆನಿಪ ||
ಚದುರ ಧತರಾಷ್ಟ್ರನು ಪಾಂಡವ ಕ್ಷಿತಿಪ ||13||

ಧರಣಿಯಂ ಪಾಲಿಸಿದನಾ ದಯಾಸಿಂಧು |
ಪರಮ ಧರ್ಮಿಷ್ಠನಾ ಪುಣ್ಯ ದಯಸಿಂಧು ||14||

ಆ ಜಗಾಧಿಪ ಕುಂತಿಮಾದ್ರಿ ದೇವಿಯನು |
ರಾಜಲಕ್ಷಣದಿಂದಲಾಗೆ ಮದುವೆಯನು ||15||

ಸಂಭ್ರಮದಿ ಮಾಡಿಕೊಂಡರಲೊಂದು ದಿವಸ |
ಜಂಭಾರಿಯಂತೆ ಒಡ್ಡೋಲಗವನಿತ್ತ ||16||

ವಚನ

ಇಂತು ಪಾಂಡುಭೂಪಾಲನು ಒಡ್ಡೋಲಗಂಗೊಟ್ಟು ಕುಳಿತ ಸಮಯದಲ್ಲಿ ವನಚಾರರು ಬಂದು ಏನೆನುತಿದ್ದರು –

ರಾಗ ಮೆಚ್ಚುಬಹುಳ ಝಂಪೆತಾಳ

ಎಲೆ ಪಾಂಡುಭೂಪಾಲ | ಇಷ್ಟು ದಿನ ಈ ರಾಜ್ಯ ||
ಬೆಲೆಯಿಲ್ಲದಂತಾಯ್ತ | ಬಿನ್ನಪವ ಕೇಳು ||17||

ವನದೊಳಗೆ ಮಗಬಾಧೆ | ವಶವೆಲ್ಲ ಶಿವ ಬಲ್ಲ |
ನಿನಗೊರೆವೆ ಯಿದನೆಲ್ಲ | ಲಾಲಿಪುದು ಸೊಲ್ಲ ||18||

ವಚನ

ಇಂತೆಂದ ವನಚಾರಕರ ನುಡಿಯಂ ಕೇಳಿ ಪಾಂಡುಭೂಪಾಲನು ಬೇಟೆಯಾಡುತ್ತ ಬಂದನದೆಂತೆನೆ-

ರಾಗ ಶಂಕರಾಭರಣ ಅಷ್ಟತಾಳ

ಬೇಂಟೆಯಾಡ ಬಂದನೋ | ಭೂಪಾಲ |
ಬೇಂಟೆಯಾಡ ಬಂದನೋ ||
ಗೋಟ ಮರಾಟ ಕರಾಟ ಹಮ್ಮೀರ |
ಮಾರಾಷ್ಟ್ರ ನಪರು ಹತ್ತುಕೋಟಿ ಸಹಿತ |
ಬೇಂಟೆಯಾಡ ಬಂದನೋ ||19||

ಇತ್ತಿತ್ತ ಬನ್ನಿರಯ್ಯಿ | ಹಕ್ಕಿಯ ಹುಲ್ಲೆಯ ಮಗಂಗಳ |
ಹತ್ತೆಂಟು ತಂದರೆ | ಮುತ್ತಿನ ಪದಕವನಿತ್ತು ಮನ್ನಿಪೆನೆಂದು |
ಬೇಂಟೆಯಾಡ ಬಂದನು | ಭೂಪಾಲ | ಬೇಂಟೆಯಾಡಬಂದನು ||20||

ಇಂತೆಂದು ಭೂಕಾಂತನಂದು | ವನಾಂತರದಿಂದ |
ಮಗಂಗಳ ಕೊಂದು | ಕೊಂತದಲಿರಿದು ಮಾರಾಂತಕನ ನೆನೆವುತ್ತ |
ನಿಂತ ಸಮಯಕಾಯಿತು ಮುಂದೆ ವಿಚಿತ್ರ || ಬೇಂಟೆಯಾಡ ಬಂದನು ||21||

ವಚನ

ಇಂತು ಬೇಟೆಯಾಡುತ್ತಿರಲು ಒಂದು ವಿಚಿತ್ರವಂ ಕಂಡನದೆಂತೆನೆ –

ರಾಗ ಮಧುಮಾಧವಿ ಏಕತಾಳ

ಅಂದು ಭೂಪೋತ್ತಮ ವನಕೆ ತಾ ಬಂದು |
ಚಂದದಿ ಮಗಬೇಟೆಯಾಡುತಲಂದು ||
ಮುಂದು ಮುಂದಕೆ ಬಂದು ಕಂಡನಾ ನಪನು |
ಕಂದರ್ಪಶರಕೆಚ್ಚಿ ನಿಂತಿರ್ದ ಮಗವ ||22||

ವಚನ

ಇಂತೀ ಋಷಿಗಳರಸನು ಚಂದದಿಂ ತನ್ನರಸಿಯೊಳು ಮಗರೂಪದೊಳು ಕ್ರೀಡಿಸುತ್ತಿರ ಲೊಂದು ಶರವನೆಸೆದಾಗ ಪಾಂಡುಭೂಪನು ಮಗಮಿಥುನಕೆಸೆಯಲಾಕ್ಷಣ ಧಗಧಗಿಸುವ ಕೋಪದಿಂದ ಮುನಿವರರತಿ ಬೇಗದಿಂದ ನಿಜರೂಪವನಾಂತು ಮತ್ತಿಂತೆಂದನು.

ರಾಗ ಶಂಕರಾಭರಣ ಏಕತಾಳ

ಯಾತಕೆನ್ನನು ಕೊಂದೆ ಭೂಪಾಲ | ಜಗನ್ನಾಥನ ಭಜಿಸುತ್ತ |
ಕಯ್ಯ ಮುಗಿದು ತೋಷದೊಳಿರ್ದೆ | ಯಾತಕೆನ್ನನು ||

ನಿನ್ನ ರಾಜ್ಯವ ಬಯಸಲಿಲ್ಲವೊ ಭೂಪಾಲ |
ನಿನ್ನ ಕನ್ನಿಕೆಯ ಕಳಲಿಲ್ಲವೊ ಭೂಪಾಲ |
ಎನ್ನರಸಿಯೊಳು ಸುರತವನೆಸಗುವಾ |
ಗೆನ್ನನೇತಕೆ ಯೆಸೆದೆ ಭೂಪಾಲ || ಯಾತಕೆ ||23||

ಸತಿಯ ರಮಿಸುತಲಿರೆ ಕೊಂದೆಯಲ್ಲ |
ಭೂಪತಿಯೆ ನಿನಗೀ ವಿಧಿ ಮುಂದೆಲ್ಲ |
ಶತಗುಣಂಗಳನು ಮಾಡಿದೆಯಲ್ಲ |
ಇನ್ನು ಹಿತವಾಗುವದೇನೊ ಮುಂದೆಲ್ಲ || ಯಾತಕೆ ||24||

ನಿನ್ನ ಸತಿಯ ಕೂಡಲು ಯಮ ತಾ ಬಂದು |
ಚೆನ್ನಾಗಿ ಕರಕೊಂಡು ಪೋಗಲಿಯೆನುತ ||
ತಾನಿಂದು ರೂಪವ ಬಿಟ್ಟು ಸಮ್ಮುಖದಲಿ |
ಮುನಿ ನೊಂದು ಹೀಗೆಂದು ಪೇಳಿದನಾಗ || ಯಾತಕೆ ||25||

ವಚನ

ಇಂತೆಂದು ರಾಯ ಮುನಿ ನುಡಿದ ಮಾತಂ ಕೇಳಿ ಏನೆಂದು ಚಿಂತಿಸುತಿದ್ದನೋ –

ರಾಗ ಮಧುಮಾಧವಿ ತಾಳ ಪಂಚಘಾತ ಮಟ್ಟೆ

ಏಕೆ ಮುನಿವೆ ಮುನಿವರೇಣ್ಯ | ಎನ್ನ ಮೇಲಿಂದು ||
ಕಾಕು ಬುದ್ಧಿಯಿಂದ ನಾನು | ಕಾಣದೆಸೆದೆನು ||26||

ನರಮನುಜನು ಮಗದ ರೂಪನಾಂತುಕೊಂಡು ಕಾನನದೊಳು ||
ಇರುವುದನ್ನು ಇಲ್ಲಿ ನಾನು ಈಗ ಕಂಡೆನು ||27||

ಹುರಿಯ ನೇಣ ಕಯ್ಯಳ್ಪಿಡಿಯೆ ಉರಗನಂತೆ ಕಚ್ಚಿತಲ್ಲ ||
ಅರಿಯದೆಸೆದೆನೆಂದು ಮುನಿಯ ಚರಣಕ್ಕೆರಗಿದ ||
ಮುನಿಯ ಚರಣಕ್ಕೆರಗಿದ ||28||

ವಚನ

ಇಂತೆಂದು ಕೊಟ್ಟ ಶಾಪ ತಿರುಗದೆಂದು ಮುನಿ ಕೈವಲ್ಲ್ಯಕ್ಕೈದಲು ಇತ್ತಲಾ ರಾಯ ಚಿಂತಿಸುತ್ತ ಏನೆನುತ್ತಿದ್ದನು –

ರಾಗ ಮಧುಮಾಧವಿ ಏಕತಾಳ

ಇನ್ನು ದೇಶಕೆ ಪೋಗಲಾರೆ | ಈ ವನದೊಳು |
ಓನ್ನಮ ಶಿವಯೆಂದು ಜಪಿಸುತ್ತಲಿಹೆನು ||
ಕನ್ನೆಯರನು ಬಿಟ್ಟು ಖಿನ್ನ | ನಾಗುತ ರಾಜ್ಯ |
ವನ್ನು ಅಗ್ರಜಗಿತ್ತೆ ಯೆಂದು ಪೇಳಿದನು ||29||

ವಚನ

ಇಂತೆಂದು ರಾಯನು ಮಮ್ಮನೆ ಮರುಗಿ ರಾಷ್ಟ್ರಾಧಿಕಾರಮಂ ದತರಾಷ್ಟ್ರಂಗೊಪ್ಪಿಸಿ ಕುಂತಿಮಾದ್ರಿಯರಂ ಕೂಡಿ ಬದರಿಕಾಶ್ರಮದಲ್ಲಿ ತಪಸ್ಸಂ ಮಾಡುತ್ತಿರಲಂದು ಅತ್ತಲಾ ಹಸ್ತಿನಾವತಿಯೊಳು ಧತರಾಷ್ಟ್ರನು ಗಾಂಧಾರಿಯ ವಿವಾಹಮಂ ಮಾಡಿಕೊಂಡು | ರಾಜ್ಯಭಾರಮಂ ಧರಿಸಿ ಸುಖದಿಂದಿರಲೊಂದು ದಿವಸ ವೇದವ್ಯಾಸರು ಬರುತಿರ್ದರು | ಕರದೊಳು ರುದ್ರಾಕ್ಷಿ ಶಿರದೊಳ್ ಜಡೆ | ಫಣೆಗೆ ಭಸಿತ ಜಿಹ್ವಾರಂಗದಿಂದ ಪರವಸ್ತುವಿನ ಚರಣ ಸ್ಮರಣೆಗಳಿಂದ ಬಂದ ವ್ಯಾಸಮುನಿಗರ್ಘ್ಯಾಸನೋಪಚಾರಂಗಳಂ ಅನುಕರಿಸುತ್ತಬಲೆ ತನ್ನ ಸಂತತಿಗಿಂತಾನುತಾಪಮೆಲ್ಲಮಂ ಪೇಳೆ ವಿನಯದಿಂ ವ್ಯಾಸ ಮಂತ್ರೋಪದೇಶಮಂ ಕರುಣಿಸೆ ಕಪೆಯಿಂದ ಗಾಂಧಾರಿ ಗರ್ಭಮಂ ತಾಳ್ದಳು | ಇತ್ತಲಾ ಕುಂತಿ ತನ್ನ ಪತಿಯಾದ ಪಾಂಡುವಿನ ಸಮೀಪಕ್ಕಂ ಬಂದು ಏನೆನುತಿದ್ದಳೂ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ರಾಜ್ಯವ ಬಿಟ್ಟೆ ಹೆಂಡಿರ |
ಸರಕು ಮಾಡದೆ ತೊಟ್ಟೆ |
ವರ ತರುವ ತೊಗಲುಟ್ಟೆ ಎನ್ನೊಳು ಸಿಟ್ಟೆ ||30||

ಅತ್ತಲಾ ಗಾಂಧಾರಿಗಿಂದು ಮುನಿ ಬಂದು |
ಉತ್ತಮದ ಮಂತ್ರವನು ಕರುಣಿಸೆ |
ಮತ್ತೆನಗೆ ದಯಸಿಂಧು ಲಾಲಿಸೆನುತ್ತ ನಿಂದು ||31||

ಪೇಳುತಿರಲಾ ಭೂಮಿಪಾಲನು |
ಕೇಳದಂದದಿ ಸುಮ್ಮನಿರುತಿರೆ |
ತಾಳಲಾರೆನು ಎನ್ನ ನುಡಿಯನು ಲಾಲಿಸೆನಲು ||32||

ವಚನ

ಇಂತೆಂದು ಕುಂತಿ ನುಡಿಯಲು ರಾಯ ಏನೆನುತಿದ್ದನು –

ರಾಗ ದ್ವಿಪದಿ ಝಂಪೆತಾಳ

ಎಲೆ ಕುಂತಿ ಕೇಳೆನಗೆ ಯತಿವರಿಯನಿಂದು |
ಮುಳಿದು ಶಾಪವನಿತ್ತ ಮುಗುದೆ ಕಡು ನೊಂದು ||33||

ಪತ್ನಿಯರ ಕೂಡಿದರೆ ಫಣಿ ಕಚ್ಚಿದಂಥ |
ಯತ್ನವಾವುದು ಕೇು ಎಂದ ಭೂಕಾಂತ ||34||

ಏನ ಮಾಡುವೆನಿನ್ನು ಏ ಮುದ್ದು ನೀರೆ |
ನೀ ನಿಲ್ಲಬೇಡವೀಗತ್ತತ್ತ ಸಾರೆ ||35||

ಮಾತಾಡದಿಹುದೇಕೆ ಮತ್ತೆನ್ನ ಕೂಡೆ |
ಈ ತರುಣಿ ಹೀಗೆಂದು ಪೇಳಿದಳು ನಪಗೆ ||36||

ರಾಗ ಸೌರಾಷ್ಟ್ರ ಅಷ್ಟತಾಳ

ಒಂದು ದಿವಸ ನಮ್ಮಯ್ಯನ ಗಹಕೆ | ದೂರ್ವಾಸ ಮುನಿಯೈತರೆ |
ಪೂಜಿಸದಿರಲೆನ್ನ ಜನಕ | ಕಂಡು ನಾನು ಚರಣಕ್ಕೆರಗಿದೆನು ||37||

ಸರಸಿಜದಿಂದೆನ್ನ ಶಿರವನ್ನು ಪಿಡಿದೆತ್ತಿ ಹರುಷದಿಂದ |
ಹರಕೆ ಮಂತ್ರೋಪದೇಶವನಿತ್ತು ತೆರಳಲತ್ತಾ ||38||

ಘನ ಮಂತ್ರವನು ನಾನು ನೆನೆಯಲಾ ದಿನಪನು ವಿನಯದಿಂದ ಬಂದನು |
ಕಾಣುತೆನಗೆ ಮಗನನಿತ್ತಾ | ನಾ ಗಂಗಾ ಜನನಿಗಿತ್ತೆ ||39||

ಎನ್ನೊಳು ಋಷಿಮಂತ್ರ ಇನ್ನು ನಾಲ್ಕಿದೆಯೀಗ ನಿನ್ನೊಳ್ಪೇಳಿ |
ಸುರರನ್ನು ನೆನೆದು ಸುತರನ್ನು ಪಡೆಯಲೆ ಸಂಪನ್ನ ವಾರ್ತೆ ||40||

ವಚನ

ಇಂತೆಂದ ಸರಸಿಜವದನೆಗೆ ಯನ್ನಯ ಕರಣಕ್ಕೆ ಹರುಷಮಂ ತಂದೆ ಶಶಿಕುಲ ಮುಂದೆ ಮೆರವರ್ತಿಯುಂಟು ನಡೆ ಕುವರರ ಪಡೆ ಯೆಂದೆನಲಾಗ | ಕುಂತಿಯು ನದಿಯೆಡೆಗಂ ಬಂದು ಯಮದೇವರಂ ಚಿಂತಿಸೆ ಅಂತಕಂ ಬಂದು ಸೋಂಕಲು ದಂತಿಪುರದರಸಿ ಗರ್ಭಮಂ ತಾಳ್ದಳು –

ರಾಗ ರಾಮಕ್ರಿಯೆ ಝಂಪೆತಾಳ

ಎಳೆ ರವಿಯಂದದಲಿ ಪೊಳೆಯೆ ಶಿಶು ಗರ್ಭದೊಳು |
ನಳಿನಾಯತ ನೇತ್ರೆ ಪುಳಕವಾಂತಿಹಳು ||41||

ನಡೆ ಮೆಲ್ಲನಾದಷ್ಟು ನುಡಿ ತೊದಳುತಿರೆಗುಟ್ಟು |
ಬಿಡದೆ ಅರ್ಭಕನನಿಟ್ಟ ಪೊಡಲೋಳಳವಟ್ಟು ||42||

ದಂತಿಪುರದ ಕಾಂತೆ ಕುಂತಿಯೆ ಗುಣವಂತೆ |
ಸಂತಸದಿ ಪೆತ್ತಳಂತೆ ನಿನ್ನಂತೆ ||43||

ಎನಲು ಸಖಿಯರು ತಮ್ಮ ಮನದೊಳರಿದುದ ಘಮ್ಮನೆ |
ನೆನೆದು ಗಾಂಧಾರಿಯಮ್ಮನ ನೆನೆದಳಮ್ಮಾ ||44||

ರಾಗ ಕೇತಾರಗೌಳ ಏಕತಾಳ

ಇತ್ತಲೀ ಕುಂತಿಯು ಧರ್ಮಜನುತ್ತಮ ನಕ್ಷತ್ರದಲ್ಲಿ |
ಪೆತ್ತ ವಾರ್ತೆ ಹಸ್ತಿನಾಪುರದತ್ತ ಪೋಗಲು ||
ಚಿತ್ತದೊಳು ಕ್ರೋಧವ ತಾಳುತ್ತ ಗಾಂಧಾರಿಯು ಬಸು |
ರೊತ್ತಿ ಪಿಡಿಯಲು ಕರುಳ್ ಪಥಿವಿಗೆ ಬೀಳೆ ||45||

ಆ ಸಮಯದಲ್ಲಿ ವೇದವ್ಯಾಸ ಮುನಿ ಬಂದು ಕಂಡ |
ನಾ ಸತಿಯ ಗರ್ಜಿಸುತ್ತ ಮಾಂಸವೆಲ್ಲವ ||
ಮೋಸವೋಗದಂತೆ ಪಿಡಿದೈಸು ಖಂಡಗಳನ್ನು |
ಹೇಸದೊಂದೊಂದ ನಿಲಿಸಿ ಪೂಜಿಸೆ ||46||

ನೂರವಂದನೆಯ ದಿನ ಕುಮಾರನನ್ನೀಕ್ಷಿಸುಯೆಂದು |
ಮಾರುತವೇಗದಿ ಮುನಿಧೀರನಾಶ್ರಮಕೆ |
ಸಾರಿ ಪೋಗುತಿರಲಾಪ್ರಕಾರದಿಂದಲಿ ರಾಜಿಸೆ |
ಕೌರವರ ಜನನ ಗಾಂಧಾರಿಗಾಯಿತು ||47||

ವಚನ

ಇಂತೆಂದು ಈ ಪ್ರಕಾರದಲ್ಲಿ ಕೌರವರ ಜನನವಾಗಲಾಗಿ ಇತ್ತಲಾ ಕುಂತಿಯು ಮತ್ತೊಂದು ದಿನ ನದಿಯೆಡೆಗೆ ಬಂದು ಏನಮಾಡುತ್ತಿದ್ದಳು –

ರಾಗ ಕೇತಾರಗೌಳ ಅಷ್ಟತಾಳ

ಮುದದಿಂದ ಮಿಂದು ಮುಡಿಯನುಟ್ಟಳಾಗ |
ಸದಮಳ ವಾಯುವ ನೆನೆದಳು ||
ತದನಂತರದಿ ಬಂದು ಮಾರುತ ಮುಟ್ಟಲು |
ಚದುರೆ ಗರ್ಭವನಾಂತಳು ಕುಂತಿ ||48||

ನವಮಾಸ ಪೂರ್ಣಮಾಸದೊಳೊಂದಿ |
ಪವಮಾನ ರೂಪನ ಪಡೆದಳು ||
ದಿವಿಜರೆಲ್ಲರು ಬಂದು ನಲಿದಾಡೆ ಕೌ |
ರವರೆಲ್ಲ ಕೇಳಿ ಯೋಚಿಸುತಿರಲು ||49||

ಥಟ್ಟನರೆಗಲ್ಲ ಮೇಲೆ ಭೀಮನು |
ಪುಟ್ಟಲಿಬ್ಬಗೆಯಾದುದನಂದು ಕುಂತಿ ||
ನೆಟ್ಟನೆ ನಿಂತುಯೀಕ್ಷಿಸುತಿರಲು ಕಂಡಾಗ |
ತೊಟ್ಟಿಲೊಳಿಟ್ಟು ತೂಗಿದಳಾಗ ||50||

ಕಂದಯ್ಯ ಮಾರುತಿ ಬಾರಯ್ಯ |
ಮುದದಿಂದೆನ್ನ ಮಾಣಿಕ ನಿಲಯಯ್ಯ ||
ಚಂದಿರನನು  ನೋಡಿ ನಲಿಯಯ್ಯ |
ಎಂದಾಗ ಮಂದಗಮನೆ ಕುಂತಿ ಪಾಡಿ ತೂಗಿದಳು ||51||

ವಚನ

ಇಂತೆಂದು ಜನಿಸಿದ ಕುಮಾರನಂ ಕಂಡು ಹರುಷಿತಳಾಗಿ ಕೆಲವು ದಿನದ ಮೇಲೆ ನದಿಯಡೆಗಂ ಬಂದು ಇಂದ್ರದೇವನಂ ನೆನೆಯಲಾಗಿ ಆತ ಕಾಂಬ ಬಗೆಯದೆಂತೆನೆ –

ರಾಗ ಮಧುಮಾಧವಿ ಏಕತಾಳ

ಬಿಳಿಯಾನೆಯೇರಿ ಬೇಗದಿಂ ಬಂದನಿಂದ್ರ |
ನಳಿನಾಕ್ಷಿ ಕಂಡು ನಾಚಲು ಮುದದಿಂದ ||
ಲಲನೆಯ ಪಿಡಿಯಲು ಚಲುವೆ ಗರ್ಭವನಾಂತು ||
ಒಲವ ನೋಡುತ ಶಕ್ರ ಘಳಿಲನೈದಿದನು ||52||

ವರ ಶುಭಲಗ್ನದುತ್ತಮ ತಾರೆಯಲ್ಲಿ |
ವರ ಕುಮಾರಕನ ಬೆಸನಾದಳು ಕುಂತಿ ||53||

ವಚನ

ಇಂದ್ರನ ದೆಸೆಯಿಂದ ಕನ್ನೆಯಲ್ಲಿಂದ್ರಜಂ ಜನಿಸಲ್ಕಿಂದ್ರಾದ್ಯಖಿಳಾನುರಾಗವುಪೇಂದ್ರನ ಮೇಲೆ ಪೂಮಳೆಗರೆದರು ಆಗಲಾ ಕುಂತಿಯು ಮೂವರು ಕುಮಾರಕರಂ ಕಂಡು ಹರುಷಿತಳಾಗಿ ಮಾದ್ರಿಯೊಡನೇನೆನುತಿದ್ದಳೂ –

ಕಂದ

ಎಲೆ ಮಾದ್ರಿ ನಾಲ್ಕು ಪುತ್ರ |
ಕುಲತಿಲಕರನ್ನು ಪಡೆದು ಇನ್ನೊಂದು ಮಂತ್ರವಾ ಪೇಳ್ವೆ ||
ನೊಲವಿಂದ ಧರಿಸೆನೆ |
ಘಲಘಲನೆ ಬಂದಳಕ್ಕನ ಬಳಿಗೆ ||54||