ವಚನ

ಇಂತೆಂದು ದಷ್ಟದ್ಯುಮ್ನ ತನ್ನ ತಂದೆಯ ಪಾದಕ್ಕೆರಗಿ ಏನೆನುತಿದ್ದನೋ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಭೂಮೀಸುರರು ವೇದವ | ನೊರೆವರಾ ಕ್ಷತ್ರಿಯರು ಸಂಗರ |
ಪರಿಯ ಪೇಳ್ವರು | ಧಮಶಾಸ್ತ್ರವ ಕೇಳು ಪೇಳ್ವೆ ||435||

ಧನವಿವರ್ಧನ ಚಿಂತೆ ಪಣ್ಯಗೆ | ದಿನದಿನಕೆ ಕಷಿಮಾತು ಶೂದ್ರಗೆ |
ಇನಿತು ಜಾತಿ ಸ್ವಭಾವ ಧರ್ಮವು ಲೋಕದೊಳಗೆ ||436||

ಇವರು ಕ್ಷತ್ರಿಯರದರೊಳಗೆ ಪಾಂ |
ಡವರೆ ಯೋಚಿಸಬೇಡ ಹೋಗವರ ನೆಲೆಯನು ತಿಳಿದು ಬಂದೆನು ಎಂದನಾಗ ||437||

ಇನ್ನು ಕೇಳುವುದೇನು ಮೂಡಣ ಕನ್ನಿಕೆಯು ಕುಂಕುಮವನಿಟ್ಟಳು |
ನಿನ್ನ ಮಗಳನು ಧಾರೆಯೆರೆ ನಪರನ್ನ ಎಂದ ||438||

ವಚನ

ಇಂತೆಂದು ಧಷ್ಟದ್ಯುಮ್ನ ನುಡಿದ ಮಾತಂ ಕೇಳಿ ದ್ರುಪದ ಮನಲಾಭದಿಂದ ಪಾಂಡವರಂ ಕರೆಸಲು, ಅವರೊಡನೆ ದ್ರುಪದ ಯೇನೆನುತಿದ್ದನೋ –

ರಾಗ ಮಾರವಿ ಏಕತಾಳ

ಚೆನ್ನಾಗಿ ಸ್ನಾನವ ಮಾಡಿರೋ | ಪುಣ್ಯಾರ್ಚನೆ ಮೈಗೆ ಕುಳ್ಳಿರೊ |
ಚಿನ್ನ ಬಂಗಾರವ ತೊಡಿರೋಯೆಂದು | ಚೆನ್ನಾಗಿ ಸ್ನಾನವ ಮಾಡಿ ||439||

ವಚನ

ಇಂತೆಂದು ದ್ರುಪದ ಯೇನೆನುತಿದ್ದನೋ –

ರಾಗ ಮಾರವಿ ಝಂಪೆ

ನಿಮ್ಮ ಪಂಚಕದೊಳಗೆ ನಿನ್ನೆ ಧನುವೆತ್ತಿದ |
ಚೆನ್ನಿಗ ನಾರಯ್ಯ | ಚದುರ ಬಾರಯ್ಯ ||440||

ಧಾರೆಯೆರೆವೆ ನಾನು ಧಾರುಣಿ ಸುರರಿಗೆ ಧೇನು |
ಭೂರಿ ದಕ್ಷಿಣೆ ಕನಕ ಬೇಗ ಕೊಡಿಯೆನುತ ||441||

ಎನಲು ಓಂಕಾರಗಳು | ಎಸೆಯಲು ಬ್ರಾಹ್ಮರೊಳು |
ಘನವಾದ್ಯ ರಚನೆಗಳು ತುಂಬಿತು ಬಹಳ ||442||

ಮೆಟ್ಟಕ್ಕಿ ಹರಿವಾಣ ಮುಗುದೆವೆಂಗಳು ಪಿಡಿದು |
ಥಟ್ಟನೈತಂದರಾ ತದನಂತರದೊಳು ||443||

ವಚನ

ಇಂತೆಂದು ಸಿಂಹಾಸನಸ್ಥ ಪಾಂಡವರಂ ಕರೆಸಲು ಎದ್ದು ಬಹ ಬಗೆಯೆನದೆಂತೆನೆ –

ರಾಗ ಮಧುಮಾಧವಿ ಏಕತಾಳ

ಇಳಿದ ಧರ್ಮಜ ಮುಂದೆ | ಸುಳಿದ ಭೀಮನು ಹಿಂದೆ |
ಹೊಳೆದನರ್ಜುನನೊಂದೆ ಗಳಿಗೆ ಸಭೆಯೊಳಗೆ ||
ಉಳಿದ ಯಮಳರಂದು | ಘಳಿಲನಲ್ಲಿಗೆ ಬಂದು |
ನಿಲಲು ಪಾಂಚಾಲ ಗರ್ಜಿಸಿ ನೋಡಿ ನುಡಿದ ||444||

ಏನಿದೈವರು ನೀವು | ಎಸೆವ ಬಾಸಿಗ ಕಟ್ಟಿ |
ಆನಂದಿದೆದ್ದುದೇತಕೆಂದೆನುತ ||
ಓ ನಾರಿ ಯೆಮ್ಮೈವರಿಗೆ ವಧುವಾದಳಿನ್ನೇನೆಂಬೆನಯ್ಯ |
ಜನನಿಯ ವಾಕ್ಯದಿಂದ ||445||

ಅಸುರರೊ ಸುರರೊ ವಸುಧೆವಲ್ಲಭರೊ |
ಹಸನಾಗಿ ನೀವಾರು ಪೇಳಿರೈ ಎನಗೆ ||
ವಸುಮತೀಶನ ಮಾತ ಯಮಜ ಕೇಳಿದನು |
ಬಿಸಜನೇತ್ರನ ಪಾದ ಭಜಕರು ನಾವು ||446||

ಕರಿಪುರದರಸು ಪಾಂಡುವಿನ ಮಕ್ಕಳು ನಾವು |
ಧರಣಿ ಸುರರ ವೇಷದೊಳಗೆ ಬಂದಿಹೆವು ||
ಸುರಪನಂದನ ನಿನ್ನವರ ಕುಮಾರಿಯ ತಂದ |
ಅರಸನಾವೈವರು ನೆರೆವುದೆ ಸಿದ್ಧ ||447||

ವಚನ

ಇಂತೆಂದು ಪಾಂಡವರೆನಲು ದ್ರುಪದನ ಹರುಷ ಧ್ರುವಲೋಕಕ್ಕೆ ಪೋಗೆ | ಮಗಳಿಗೈವರು ವರರೆಂದಾಕ್ಷಣ | ದ್ರುಪದ ಏನೆನುತಿದ್ದನೋ –

ರಾಗ ದ್ವಿಪದಿ ಝಂಪೆತಾಳ

ಒಂದು ಗಂಡಿಗೆ ವನಿತೆಯರು ಬಹಳಹರು |
ಇಂದುಮುಖಿಯೋರ್ವಳೈವರಿಗೆಯಿಳೆಯೊಳು ||448||

ಮದುವೆಯನು ಮಾಡೆಂದು ಮಂತ್ರಶಾಸ್ತ್ರದೊಳು |
ವಿಧಿ ವಿಹಿತದಿಂದೊಡಂಬಡಿಸುವರೆ ಪೇಳು ||449||

ನೀವು ಪಾಂಡವರು ನೆರೆ ನೋಡಿ ನಡೆವವರು |
ಈ ವಸುಧೆಯೊಳು ಧರ್ಮಶಾಸ್ತ್ರವನು ನೋಡಿದವರು ||450||

ಎಂದ ಮಾತನು ಕೇಳಿ ಯಮಜ ನಸುನಗುತ |
ಇಂದೈವರಿಗೆ ಧಾರೆಯೆರೆಯೊ ನರನಾಥ ||451||

ಇನಿತು ಮಾತನು ಕೇಳಿ ದ್ರುಪದ ಛಲಗೊಟ್ಟ |
ಕನಕ ಕಲಶವನು ಧಾರುಣಿಯೊಳಂದಿಟ್ಟು ||452||

ವಚನ

ಇಂತೆಂದು ತದನಂತರದಲ್ಲಿ ವೇದವ್ಯಾಸರು ಬರುತಿರ್ದರೆಂತೆನೆ –

ರಾಗ ಮೆಚ್ಚು ಬಹುಳ ಝಂಪೆತಾಳ

ಕಾವಿಯ ವಸ್ತ್ರವ ಧರಿಸಿ | ಕರಕಮಂಡಲ ಧರಿಸಿ |
ಭೂವರನ ಗಹವರಸಿ ಬರುತಿರ್ದ ತವಸಿ ||453||

ವರ ಮುನಿಗಳಂದು | ವ್ಯಾಸಮುನಿಯ ದಂಡು | ತಿರುಗಿ ಬರುತಿರೆ ಕಂಡು |
ದ್ರುಪದ ಮುಂದೆ ನಿಂದು ||454||

ಮುನಿಯ ಚರಣಕೆ ತನ್ನ | ಮೌಳಿ ಎರಗುತ ಮುನ್ನ |
ಜನಪನುಸುರುತ ಖಿನ್ನ | ನಿರುತಿರೆ ನಪನ ಬೆನ್ನ ||455||

ತಡವರಿಸಿ ಕರವಿಡಿದು | ತಾಳುಯೆಂದೆನುತೊರೆದು |
ನುಡಿ ಚಿಂತೆ ಪರಿಹರಿದು | ಸುಜ್ಞಾನ ಮರೆದು ||456||

ವಚನ

ಇಂತೆಂದು ದ್ರುಪದರಾಯ ವ್ಯಾಸರೊಡನೆ ಯೇನೆನುತಿದ್ದನೋ –

ರಾಗ ಮೆಚ್ಚು ಬಹುಳ ಝಂಪೆತಾಳ

ಎನ್ನ ಬಿನ್ನಪವ ಕೇಳು | ವ್ಯಾಸ ಮುನೀಶ |
ಕನ್ನೆಯೋರುವಳ ಕಾಮಿಸುತೈವರು |
ಮುನ್ನ ಧಾರೆಯನೆರೆಯೆನ್ನ ಬಹುದೆ ಸ್ವಾಮಿ |
ನಿನ್ನ ಮನಕೆ ಸರಿಯೆ ವ್ಯಾಸ ಮುನೀಶ ||457||

ಕೇಳು ಪಾಂಚಾಲಕನೆ | ಎಸೆವ ನಿನ್ನಯ ಕುವರಿ |
ಭಾಳನೇತ್ರನದಯ | ವುಳ್ಳವಳು ಬಹಳ |
ನಾರಾಯಣ ಋಷಿಗೆ ನಾರಿಯಾಗಿರುತಿರಲು |
ನೀರೆ ಪತಿ ಭಕ್ತಿಯಲಿ ನಿತ್ಯ ಮೆಚ್ಚಿಪಳು ||458||

ತನ್ನ ಪತಿಯ ದೇವ ತನ್ನ ಪತಿಯ ದೈವ |
ತನ್ನ ಪತಿಯ ಸೌಖ್ಯ | ಪತಿಯ ವರ ಸೌಖ್ಯ |
ಎಂದು ಪೂರ್ವದ ಭವದಲಂದದಿಂ ನಡೆದು |
ಹಿಂದಾದ ವಿವರಗಳನೆಂದಪೆನು ಕೇಳು ||459||

ವಚನ

ವ್ಯಾಸರು ದ್ರುಪದಗೆಯೇನೆನುತಿದ್ದರೂ –

ರಾಗ ಮಧುಮಾಧವಿ ಏಕತಾಳ

ಪತಿ ತನ್ನ ಸತಿಯ ಭಕುತಿಯನೆ ಕಂಡು |
ಸತತ ಸುರತ ಸಾಂಗಯುತನಾಗಿ ಮೆರೆದ |
ಅತಿ ಪ್ರೀತಿಯುತದಿಂದ ಸತಿಯಿಲ್ಲವೆಂದು ಪಾರ್ವತಿ |
ಪಿತನ ತಪ್ಪಲಿಗೆಂದ ಮನತಂದು ||460||

ಚರಣ ಜಾನುಗುರುಗಳಲಿ ಶಿರಗಳಲಿ |
ಥರಮಧ್ಯಧರ ಕುಷ್ಠಶರೀರ ತಾನಾದ |
ಪರಿಯ ಕಂಡಳು ಕಾಂತೆ ಸರಸ ಚುಂಬನದಿ |
ಎರವಿಲ್ಲದೆರಕದೊಳಿರುವಳದೆಂತೊ ||461||

ಮುನಿ ಕುಷ್ಠರೋಗವ ತಾಳಿದ ಮೇಲೆ |
ಮಾನಿನಿ ಮತ್ತಾತನ ಹೆಚ್ಚು ಪೂಜಿಪಳಾಗ |
ಇನಿತು ಹೇಸಿಕೆ ಕಂಡು ಬಿಡುವಳಲ್ಲೆಂದು |
ದಿನವಾತ ಮಾಡಿದ ನೆನಹ ಕೇಳೆಂದ ||462||

ರಾಗ ಮಾರವಿ ಝಂಪೆತಾಳ

ಒಂದು ದಿನ ಮುನಿಸೇವ್ಯನೈತಂದು |
ಮಿಂದು ಮಡಿದರ್ಘ್ಯವನು ಮಿಗೆಕೊಟ್ಟು ಬಂದು ||463||

ಸತಿಶಿರೋಮಣಿಯಾದ ಸದ್ಗುಣಿಯ ನೋಡಿ |
ಯತಿರಾಜನೆಡೆಯೊಳಿರೆ ಅನ್ನವನು ಪ್ರೌಢೆ ||464|

ಬಡಿಸಲಾಕ್ಷಣ ಸಂತೋಷದಿಂದುಂಡು |
ಮಡನಮೋಯೆಂದೆಂಬ ಮಾನಿನಿಯ ಕಂಡು ||465|

ಕೊಳೆವ ಬೆರಳನು ಭುಕ್ತ ಶೇಷದೊಳಗಿಟ್ಟು |
ಘಳಿಲನೆದ್ದಾ ಗಂಡನದಕೊಡಂಬಟ್ಟು ||466||

ಬೆರಳ ಬೇರಿರಿಸಿ ಭೋಜನವ ಮಾಡುತಿರುವ |
ತರುಣಿಯನು ಮುನಿಯರಿತ ತಾ ತವಕದಿರವ ||467||

ಏ ಮುದ್ದು ಮಾನಿನಿಯೆ ಏ ಪ್ರಾಣ ಸಖಿಯೆ |
ಕಾಮಿನಿಯೆ ಮದ್ದಾನೆ ಕೇಳಿಂದುಮಖಿಯೆ ||468||

ವಚನ

ಇಂತೆಂದು ಮುನಿಯೇನೆನುತಿದ್ದನೋ –

ರಾಗ ಕೇತಾರಗೌಳ ಏಕತಾಳ

ನಾರಿ ರಮಣಿ ಸುಗುಣಾಕರಿ | ಕೇಳೆನ್ನ ಮನವ ನೀನು |
ಸೂರೆಗೊಂಡೆ ಬಾರೆ ಮೋಹನ್ನಕಾರೆ ||469||

ಎನ್ನ ಶರೀರದ ಹೇಸಿಕೆಯನು | ನೋಡದೆ ನೀನು |
ಅನ್ನದೊಳಿದ್ದಂಗುಲಿಯನು ಬೇರಿಟ್ಟು ||470||

ಮುನ್ನ ಭೋಜನವ ಮಾಡಿದುದ ಕಂಡೆನು ಈಗ |
ಇನ್ನೇನು ವರ ಬೇಕೆಂಬುದ ಕೊಡುವೆ ನಾನು ||471||

ಇಂತೆಂದು ಮಾತ ಪೇಳಲು ಕೇಳಿ ನಸುನಕ್ಕು |
ರತಿಕಾಂತೆಯು ತನ್ನಿನಿಯಗೆ ಕಯ್ಯ ಮುಗಿದು ||472||

ಕಂತು ರೂಪ ನೀನಾಂತೆನ್ನ ಅಂತ ರಂಗದೊಳಿರ್ದು |
ಸಂತತ ಸಲಹೊ ಯೆಂದೆರಗಿದಳು ಅಡಿಗೆ ||473||

ವಚನ

ಇಂತೆಂದು ತರಳಾಕ್ಷಿ ನುಡಿದ ಮಾತಂ ಕೇಳಿ | ಮುನಿ ಮದನ ರೂಪವಂ ಧರಿಸಿ ವರುಷ ಹತ್ತೆಂಟು ಪರ್ಯಂತವಳ ರಮಿಸಿ ಮುನಿ ತಪಕ್ಕೆ  ಪೋದನದೆಂತೆನೆ – ತರುಣಿ ಬೆನ್ನಟ್ಟಿ ಬರಲಾಗಿ ತಡೆದಳೋ ತನ್ನರಸ ಬಾರೋ ಬಾರೆಂದೆನುತಲಿರೆ ಹರನಂ ಮೆಚ್ಚಿಸಲು ಗಿರಿಜಾತೆ ಸಹ ಬರುತಿರ್ದನದೆಂತೆನೆ –

ರಾಗ ಕೇತಾರಗೌಳ ಏಕತಾಳ

ನಂದಿ ಭಂಗಿ ವೀರಭದ್ರ | ಇಂದುಮುಖಿ ಗೌರಿದೇವಿ |
ನಿಂದಿರಲು ಗಣನಾಥ |
ಅಂದು ಈಕ್ಷಿಸಿ ಕರಿಚರ್ಮಾಂಬರ ಗಂಗಾಧರ ಹರ ಕಿರುಜಡೆ ಕರ್ಣದುರಗಾಭರಣದ |
ಪೆರೆ ನೊಸಲ | ವರಭಸಿತದವನ | ಕೊರಳಗೊರಳಸುರ |
ರರಸ ವಂದಿತಗೆ ಸರ್ವರು ನಮಿಸೆ ||474||

ವಚನ

ಇಂತೀ ಸದಾಶಿವ ಬಂದನದೆಂತೆನೆ –

ರಾಗ ಶಂಕರಾಭರಣ ಏಕತಾಳ

ಬಂದ ಕೈಲಾಸದಿಂದ ಶಿವಂ | ಸುರವಂದ ಮುನೀಶ್ವರ ವಂದವ ನೋಡುತ |
ಬಂದ ಕೈಲಾಸದಿಂದ ಶಿವಂ ||475||

ನಂದಿವಾಹನ ಬಂದ | ನಿಟಿಲಲೋಚನ ಬಂದ |
ಇಂದು ಶೇಖರ ಬಂದ | ಈಶ ಬಂದ |
ಕಂದರ್ಪ ವೈರಿ ಬಂದ || ಕತ್ತಿವಾಸನು ಬಂದ |
ನಿಂದು ಭಜಿಸುವಳ ಮುಂದೆ ಸದಾಶಿವ |
ಬಂದ ಕೈಲಾಸದಿಂದ ಶಿವಂ ||476||

ರಾಗ ಮಧುಮಾಧವಿ ಏಕತಾಳ

ನಿಂದು ಭಜಿಸುವಳ ಮುಂದೆ ಶಿವ ನಿಂದು |
ಇಂದುಮುಖಿ ನಿನ್ನಯ ಅಂದವೇನೆಂದು |
ಒಂದಾಗಿ ಬೆಸಗೊಳ್ಳಲಂದು ಮನದಂದು |
ಇಂದುಮುಖಿ ಕನ್ನೆಯೆಂದುಸುರಿದಳು ||477||

ರಾಗ ಶಂಕರಾಭರಣ ಏಕತಾಳ

ಪತಿಯ ಕಾಣದೆ ಶಿವನೆ ಕಂಗೆಡುತಿದ್ದೆ |
ಪತಿಯ ಕಾಣದೆ ಶಿವನೆ ||
ಚಿಕ್ಕ ಪ್ರಾಯದಿಯೆನ್ನ ಮದುವೆಯಾಗಿ |
ದಕ್ಕಟ ದ್ವಿಜರನ್ನ |
ಹಕ್ಕಲ ಮನದಿ ಮೋಹಕರವಾದ ಮುನ್ನ ||
ಒಂದೆ ಕ್ಷಣದಿ ಬಿಡೆನು ಪತಿಯ |
ತಾನೊಂದೆ ಕ್ಷಣದೊಳಗೆ ||478||

ನಾಗಭೂಷಣನೆ ಕೇಳು | ನಾರಾಯಣ
ಯೋಗಿಯೆನ್ನಗಲಿದನು ||
ಈಗಿಲ್ಲ ತೋರುತಿದ್ದರೆ ಮಾಯವಾದ |
ಹೇಗೆ ತಾಳೆನೊ ಶಿವನೆ | ಮಾಯವಾದ | ಹೇಗೆ ತಾ ||479||

ರಾಗ ಮಾರವಿ ಝಂಪೆತಾಳ

ಪತಿಯ ಕೊಡು ಪತಿಯ ಕೊಡು ಪತಿಯ ಕೊಡು ಯೆನುತ |
ಸತಿ ಪಂಚ ವಾಕ್ಯದಿಂ ಪೇಳಿ ನಸುನಗುತ ||480||

ಶತಮಖಾರ್ಯನು ಐದು ಮಂದಿ ಪುರುಷರನು |
ಸತಿಗೆ ಕರುಣಿಸಿದ ಪಶುಪತಿಯಾದ ಶಿವನು ||481||

ಮಗಳೆ ಪೂರ್ವದೊಳೈವರಿಂದ್ರರಿರುತಿರಲು |
ಅಗಜೆಯಾತ್ಮಜೆಯೊಳು ಭೂಲೋಕದೊಳಗವರು ||482||

ಹಸ್ತಿನಾಪುರದರಸ ಪಾಂಡುವಾತ್ಮಜರು |
ವಿಸ್ತರಿಸುವೆನು ನಿನ್ನರಸಹರವರು ||483||

ರಾಗ ಮಧುಮಾಧವಿ ಏಕತಾಳ

ಹರ ಹರ ಮಾನುಷ ಜನ್ಮವೆಂಬುದೆ ಕಷ್ಟ |
ತರುಣಿ ರೂಪಾಂತಿಹುದೆ ಅತಿ ಕಷ್ಟ |
ಪುರುಷರೈವರಿಗೋರ್ವಳರಸಿಯಹುದು ಕಷ್ಟ |
ಪರಮೇಶ ನೀನಿಂಥ ವರವ ಕೊಡುವರೆ ||484||

ಮುನ್ನ ನಾನಾವ ನೋಂಪಿಯ ನೋಂತೆನೊ ಸ್ವಾಮಿ |
ಎನ್ನನು ದ್ಧರಿಸಯ್ಯ ಏ ಗುಣವರ್ಯ |
ಇನ್ನಾರು ಗತಿಯೆಂದು ರನ್ನ ಸಂಪನ್ನಯೆಂದೆನುತೆರಗಿದಳು ||485||

ವಚನ

ಇಂತೆಂದು ತರಳಾಕ್ಷಿ ನುಡಿದ ಮಾತಂ ಕೇಳಿ ಗಿರಿಜಾತೆಯೇನೆಂದು ನಿರೂಪಿಸುತ್ತಿದ್ದಳು –

ರಾಗ ಕೇತಾರಗೌಳ ಏಕತಾಳ

ನಾರಿ ನಿನ್ನ ನಿಂದಿಪರು ಜಗದಿ ಕುಂಭೀಪಾಕದಿ |
ಭರದಿಂದ ಲೋಲಾಡುವರು ||
ಪರಮ ಪತಿವ್ರತೆ | ವರ ದ್ರುಪದನ ಸುತೆ |
ಗಿರಿಜೆಯ ಸನ್ನುತೆಯೆಂದು ||486||

ಅರಿಯದೆ ನಿನ್ನ ಕಂಡರೆ ಮತ್ತೆ |
ಸ್ಮರಿಸುವರು ಪತಿವ್ರತೆಯಾಗಿಹರು ||
ಮರೆಯದೆ ನಿನ್ನ ಚರಿತವನ್ನು ಹೇಳಲು ಪಾಪ
ಹರಿದು ಹೋಗಲಿಯೆಂದು ಗಿರಿಜಾತೆ ಪೇಳಿದಳು ||487||

ವಚನ

ಇಂತೆಂದು ನಂದಿ ಭಂಗಿ ವೀರಭದ್ರ ಷಣ್ಮುಖ ಗಣಪ ಭೂತಗಣಂಗಳು ಗಿರಿಜೆ ಸದಾಶಿವಂ ತನ್ನ ಪುರಕ್ಕಂ ಪೋಗಲು | ಇತ್ತಲಾ ದ್ರುಪದೆಗೆ ಹೇಳಿ ತನ್ನ ಆಶ್ರಮಕ್ಕೆ ವ್ಯಾಸರು ತೆರಳಿ ಪೋಗಲಾಗಿ | ಇತ್ತಲಾ ದ್ರುಪದ ಪಾಂಡವರಂ ಕರೆದು ದ್ರೌಪದಿಯ ಧಾರೆಯನೆರೆವೆನೆಂದು ಸಿದ್ಧಾಂತವಂ ಮಾಡಿದನದೆಂತೆನೆ –

ರಾಗ ದ್ವಿಪದಿ ಝಂಪೆತಾಳ

ಇಂದುವದನೆಯರ ವಂದವೈತರಲು |
ಚಂದದಿಂ ದ್ರುಪದನ ಹೆಂಡಿರೆಸೆಯಲು ||488||

ಆಗಳಾ ಧರ್ಮಜಾದಿಗಳನೆಲ್ಲ ಕರೆದು |
ಭೀಮ ಪಾರ್ಥರನೆಲ್ಲ ಯಮಳರಂ ಕರೆದು ||
ಆಗ ದ್ರೌಪದಿಯ ಧಾರೆಯೆರೆವೆಯೆನಲು ||489||

ವಚನ

ಆ ಸಮಯದಲ್ಲಿ ಅತ್ರಿ ಮರೀಚಿ ಕಣ್ವ ಕಾಶ್ಯಪ ಭಗು ಭಾರದ್ವಾಜ ವಸಿಷ್ಠ ವಿಶ್ವಾಮಿತ್ರ ಇಂದ್ರ ಚಂದ್ರ ದ್ವಾದಶಾತ್ಮಕ ಇಂತಿವರ ಕೂಡಿ ಪಾಂಚಾಲ ವಿವಾಹಮಂ ಮಾಳ್ಪೆನೆಂದು ಕೇಳಿ ಬಂದನದೆಂತೆನೆ-

ರಾಗ ದ್ವಿಪದಿ ಝಂಪೆತಾಳ

ಇಂದುವದನೆಯರ ವಂದವೈತರಲು |
ಚಂದದಿಂ ದ್ರುಪದನಾ ಹೆಂಡಿರೈ ತರಲು ||490||

ಲಗ್ನವೈತರೆ ಧರ್ಮರಾಯನಂ ಕರೆದು |
ತಮ್ಮ ಭೀಮ ಪಾರ್ಥರಿಗೊರೆದು ಯಮಳರಂ ಕರೆದು ||491||

ದ್ರೌಪದಿಯ ಧಾರೆಯೆರೆದನು ದ್ರುಪದ |
ಪುಣ್ಯತತಿಯಾಗುತ್ತ ಮೆರೆದ ||492||

ವಚನ

ಇಂತೆಂದು ದ್ರೌಪದಿಯ ಪಾಂಡವರಿಗೆ ದ್ರುಪದ ಧಾರೆಯನ್ನೆರೆಯಲಾಗಿ | ನಾರಿಯರು ಮಂಗಲೋತ್ಸವಮಂ ಪಾಡಿದರದೆಂತೆನೆ –

ಢವಳಾರ

ಅಂಗನೆಯರೆಲ್ಲರು ಕೂಡಿ | ಮಂಗಳ ಢವಳವ ಪಾಡಿ |
ಮಂಗಳ ಢವಳವ ಪಾಡಿ ||
ಅಂಗನೆಯರೆಲ್ಲರು ನೆರೆದಾರತಿಯನೆತ್ತಿದರೆ ಶೋಭಾನೆ ||493||

ಮದುಮಕ್ಕಳೈವರ ಕುಳ್ಳಿರಿಸಿ | ಸುದತಿ ದ್ರೌಪದಿಯಲ್ಲುದಿಸೆ |
ಸುದತಿ ದ್ರೌಪದಿಯಲ್ಲುದಿಸೆ |
ಚದುರೆಯರೆಲ್ಲರು ನೆರೆದಾರತಿಯನೆತ್ತಿದರೆ ಶೋಭಾನೆ ||494||

ಭೂಸುರರೆಲ್ಲರು ನೆರೆದು | ಆಶೀರ್ವಾದಗಳ ಮಾಡೆ |
ಆಶೀರ್ವಾದಗಳ ಮಾಡೆ |
ಆ ಸುಗುಣರೆಲ್ಲರು ಮಂತ್ರಾಕ್ಷತೆ ಮಾಡಿದರೆ ಶೋಭಾನೆ ||495||

ಮಂಗಳಂ ಜಯಮಂಗಳಂ |
ಮಂಗಳಂ ಪಾಂಡವ ಕುಮಾರರಿಗೆ |
ಮಂಗಳಂ ದ್ರೌಪದಿ ಪತಿವ್ರತೆಗೆ | ||496||

ಮಂಗಳಂ ದ್ರುಪದೇಂದ್ರಪಾದ ಶರಣರಿಗೆ |
ಮಂಗಳಂ ಪುರಂದರ ವಿಠಲ ರಾಯಗೆ

ಮಂಗಳಂ ಜಯ ಮಂಗಳಂ | ಸದಾ ಶುಭ ಮಂಗಳಂ || ||497||

 

|| ಸಂಪೂರ್ಣಂ ||