ವಚನ

ಈ ತೆರದಿ ಅಗ್ರಜಾನುಜರೆಲ್ಲ ಸಮ್ಮತಂಬಡಿಸಿ ಆ ರಾತ್ರಿಯಲ್ಲಿ ಮಲಗಿರಲು | ಇತ್ತಲಾ ಬ್ರಾಹ್ಮಣನ ಮನೆಯಲ್ಲಿ  ಪಾಕಶಾಲೆಗಳು ಹೇಗೆ ಒಪ್ಪುತ್ತಿದ್ದವೋ –

ರಾಗ ಕಾಂಭೋಜಿ ಏಕತಾಳ

ವಂತಕ ದಾಡಿಮ ಕದಳಿಗಳ |
ಮುಂತೆಸೆದವು ಹಾಗಿಲ ಕಾಯಿಗಳ |
ಸಂತಸದಿಂದ ರಚಿಸಿದರಾವಿಗಳ |
ತಿಂಥಿಣಿ ಮೆರೆದವು ಶಾಕಗಳ ||275||

ಕರಜಿಕಾಯಿ ಚಕ್ಕುಲಿ ದೋಸೆಗಳ |
ಥರ ಥರ ವಡೆ ಹೋಳಿಗೆಗಳ |
ತರಗು ಗಾರಿಗೆಗಳನು ಮಾಡಿ ದೊಟ್ಟುವನು |
ಹರುಷದಿ ನೋಡಿದ ಭೂಮಿಸುರನನ್ನು ||276||

ವಚನ

ಆ ವಾಸನೆ ಸಂತಸವಿಡಿದು ಏನೆನುತಿದ್ದನು –

ಕಾಂಭೋಜಿ ಝಂಪೆತಾಳ

ಎಂದಿಗೆ ಉದಯವಾಗುವುದೋ |
ಏನಮಾಡುವುದಿಂದನ್ನ ಶಾಕಗಳಾಯಿತು |
ಬೆಂದುದು ಚಕ್ಕುಲಿಯಾ |
ವಗ್ಗರಣೆಯು ಭೋರೆನುತಿದೆ ಎನಗೊಂದ ತಂದೀವರಿಲ್ಲ ||277||

ಸಾಸುವೆಯ ಒಗ್ಗರಣೆ ಶಬುದ |
ಬೇವುತಲಿದಕೋ ಬೀಸುತಿಹುದು ಧೂಮವು |
ದೋಸೆಗಳು ಬೇವುತಿದೆ ದೋಣಿಯೊಳು ಅನ್ನಗಳ |
ರಾಶಿಯೊಟ್ಟಿ ಬಹಳಾದುವಲ್ಲ ||278||

ವಚನ

ಹೀಗೆಂದು ಚಿಂತಿಸುವ ಭೀಮನು ಕಂಡು ಕುಂತಿಯೇನೆನುತಿದ್ದಳು –

ರಾಗ ಗೌಳಪಂತು ಏಕತಾಳ

ಏನು ಮಗನೇ ಕಂದ | ಮಾತನಾಡದೆ |
ಯೇನುಳಿದಿದ್ದೆಯೋ ಭೀಮ ||
ನೀನೇಕೆ ಮರುಳಾದೆ ನಾಳಿನ್ನುಣ್ಣಲು ಬಹುದು |
ಭಾನು ಬರಲೆಂದಳು ಕುಂತಿ ||279||

ಉಣ್ಣಬಹುದು ಎಂಬ ಮಾತ ಕೇಳ್ದರೆ ತಾಯೆ |
ತಣ್ಣಗಾಯಿತು ಎನ್ನ ಮನಸು ||
ಎಣ್ಣೆಯೊಳಗೆ ಬೇವ ಕಜ್ಜಾಯ ದ್ವನಿಯಿಂದ |
ಹಣ್ಣಿಪುದೆನಗೆ ಸಂತಸವು ||280||

ಎಂದು ಪೇಳುವ ಸಮಯಕ್ಕೆ ತರಣಿಯು
ಬಂದು ತೋರಿತು ಪೂರ್ವಾಚಲದಿ ||
ಮಂದಗಮನೆ ಕುಂತಿ ಅಂದು ಭೀಮನ ಕರ |
ತಂದಳು ಆ ದ್ವಿಜನ ಮಂದಿರಕೆ ||281||

ಕುಂತಿಯು ಬ್ರಾಹ್ಮಣ ಸಹ ಬಂದು ಅನ್ನವ |
ನಂತ ಕಜ್ಜಾಯವ ತರಿಸಿ ||
ಮುಂತೆಸೆದಿಹ ಕೋಣನ ಬಂಡಿಗೋರಂತೆ |
ನಿಂತು ತುಂಬಿಸಿದರು ಬೇಗ ||282||

ಒಂದು ಸಾಲಾಗಿ ಕಜ್ಜಾಯವ ತೂಗಿಸಿ |
ಒಂದು ಸಾಲಿನೊಳನ್ನವಿರಿಸಿ ||
ಒಂದು ಸಾಲಿನಲಿ ಹರುವೆಂು ತುಪ್ಪವ |
ತಂದೊಟ್ಟಿದರು ಬಂಡಿಯೊಳಗೆ ||283||

ಇದು ಲವಣಗಳ ಶಾಕಗಳು ತೊವೆಯಿದು |
ಇದು ಅನ್ನದ್ಹೆಡಿಗೆ ನೊಡಯ್ಯ ||
ದಧಿ ಹಾಲು ತುಪ್ಪ ಕೇಳಿದು ಕಜ್ಜಾಯವು |
ಮದಮುಖದವನೆ ನೋಡಯ್ಯ ||284||

ಕೇಳಯ್ಯ ಭೂಸುರ ಹೇಳುವೆ ನೀನೇಕೆ |
ಕೂಳೆಲ್ಲ ನಾನುಂಬುದೇನು ||
ಕೇಳದೆನ್ನಯ ಮಾತ ಖೂಳ ರಕ್ಕಸಗಿತ್ತ |
ಮೇಲೇನ ಪೇಳ್ವೆನು ನಾನು ||285||

ಹುಟ್ಟಿದ ಮನುಜರ್ಗೆ ಮರಣವೆಂಬುದು ಸಿದ್ಧ |
ಕೊಟ್ಟಳು ಮಾರಿ ರಕ್ಕಸಗೆ ||
ನೆಟ್ಟನೆ ನಿನ್ನ ಕುಮಾರ ಬದುಕಿದನೇನಿನ್ನು |
ಬಿಟ್ಟೆನ್ನ ಕಳುಹೆಂದ ಭೀಮ ||286||

ವಚನ

ಇಂತೆಂದ ಮಾತಂ ಕೇಳಿ ಬ್ರಾಹ್ಮಣ ಕುಂತಿಯೊಡನೆ ಏನೆನುತಿದ್ದನು –

ಕಂದ

ಹನ್ನೆರಡು ಖಂಡುಗದಕ್ಕಿಯ |
ಅನ್ನವು ಶಾಕವು ತುಪ್ಪ ದಧಿ ಹರವಿಗಳನಂ ||
ಮುನ್ನತವಿರಿಸಿದೆ ಕೇಳ್ |
ನಿನ್ನವನಂ ಕಳುಹೆನಲಿವಳಿಂತೆಂದಳು ||287||

ಬಾ ಮಗನೆ ಅಸುರಗನ್ನವಂ |
ನೇಮದಿಂ ಕೊಡುಯೆನಲು ಭೀಮನಡರಿದ ಬಂಡಿ |
ಆ ಮಹಿಷದ್ವಯನ ಝಡಿಯಲು |
ಗ್ರಾಮಂಗಳಂ ಕಳೆದು ನಡೆದನಾ ಕಾನನಕ್ಕೆ ||288||

ಪುರದೊಳಗಿರ್ದ ಧರಣಿ |
ಸುರರೆಲ್ಲ ನೆರೆದು ಬಂದೀಕ್ಷಿಸೆ ಮತ್ತಾ |
ಶ್ಚರಿಯವಂ ತಾಳ್ದರು |
ಹರ ಹರ ಎನುತಾಗವರು ತಂತಮ್ಮ ಮನೆಗೈದಿದರ್ ||289||

ವಚನ

ಇತ್ತಲಾಗಿ ಭೀಮನು ಬಕನ ಬಳಿಗೈದಿ ಏನೆನುತಿದ್ದನು ಎಂದರೆ –

ರಾಗ ಘಂಟಾರವ ಅಷ್ಟತಾಳ

ಸಾರಿನ ಸೂರೆಯ ಕಂಡನು | ಅಲ್ಲಿ |
ಮಾರುತಿ ಸವಿ ಸವಿದುಂಡನು || ಸಾರಿನ ||
ತುಪ್ಪದ ಕೊಡನೆತ್ತಿ ಕುಡಿದನು | ಇದಿ |
ರಿಪ್ಪ ಶಾಕಾನ್ನವ ಹೊಡೆದುಂಡನು ||
ಅಪ್ಪಾದ ಜಗಳಕ್ಕೆ ನಡೆದನು | ಅಣ್ಣ |
ನಪ್ಪನ ರಥವನ್ನು ಹೊಡೆದನು || ಸಾರಿನ ||290||

ಅಸುರನಿದ್ದಲ್ಲಿಗೆ ಹೋದನು | ಆತ |
ಗಶನದ ತುತ್ತೊಂದ ತೂರಿದನು ||
ಹಸನಾಗಿ ಮತ್ತಾತನುಂಡನು | ಸಂ |
ತಸದಿ ರಕ್ಕಸನನ್ನು ಕರೆದನು || ಸಾರಿನ – ||291||

ರಕ್ಕಸನಿದಿರೆದ್ದು ಬಂದನು | ಆಗ | ಘಕ್ಕನೆ ನೋಡುತ ನಿಂದನು ||
ಮುಕ್ಕಣ್ಣ ಶಿವಬಲ್ಲನೆಂದನು | ಯು |
ದ್ಧಕ್ಕೆ ಬಾರೆಂದು ಹೋರಿದನು || ಸಾರಿ …. ||292||

ರಾಗ ಮಾರವಿ ಝಂಪೆತಾಳ

ಮಾರಿ ರಕ್ಕಸ ಬಂದು ಮಾರುತಿಯನು ಕಂಡು |
ಭೋರೆಂದು ಮೊರೆವುತ್ತ ಭುಗಿಲೆಂದು ನಿಂದು ||
ನೂರು ಬಾರಿ ಗುದ್ದಿದರೇನೆಂದರಿಯನು |
ನೀರ್ಮಜ್ಜಿಗೆಯನುಂಬ ಸಂಭ್ರಮದಿ ||293||

ರಾಗ ಭೈರವಿ ಪಂಚಘಾತ ಮಟ್ಟೆ

ಉಂಬ ಸಮಯದಿ | ದೊಂಬಿ ಮಾಡಿದೆ |
ನಂಬಲಾರೆ ನೀನು ಹಿ | ಡಿಂಬನಣ್ಣನೋ ||294||

ಎನುತ ಢರ‌್ರನೆ | ಎದ್ದು ತೇಗಿದ | ಧ್ವನಿಯ ಕೇಳಿ |
ದಿಟ್ಟ ಬಕನು | ಕನಲಿ ರೋಷದಿ ||295||

ಬಂದು ಹಿಡಿದನು | ಕೂಗಿ ನುಡಿದನು |
ಮಂದರಾದ್ರಿಯಂತೆ ಭೀಮ | ನಂದು ಹೊಡೆದನು ||296||

ಎಲವೊ ಮನುಜನೆ | ನಿಲ್ಲೆನುತ್ತಲೆ |
ಮಲಯಚಲದ ವೋಲು ನಿಂದ ಖಳಕುಲಾಗ್ರಣಿ ||297||

ಗಿರಿ ಗಿರಿ ಗಳು ಮಲೆವ ತೆರದೊಳು |
ದುರುಳ ಬಕಾಸುರ ಭೀಮ ಭರದಿ ಕಾದಲು ||298||

ಮಲ್ಲಯುದ್ಧದಿ | ಮಡಿದರಲ್ಲಿವ |
ಯೆನುತ ಭೀಮನೊಂದು | ಮರನ ಮುರಿದನು ||299||

ನುಸಿಯ ಬಡಿಯಲು | ಅಸುರಗೊಂಡೆಯ |
ವಸುಧೆಯೊಳಗೆ ಬಿದ್ದು ದನುಜ ಅಸುವನಳಿದನು ||300||

ಅವನ ಅಂಗವ | ಇವನು ಕಂಡನು |
ತವಕದಿಂದ ತರಲು ಕಂಡರವನಿಯಮರರು ||301||

ವಚನ

ಈ ರೀತಿಯಲ್ಲಿ ಬಕಾಸುರನ ಸಂಹರಿಸಿ ಅವನ ಹೆಣವಂ ಆ ಬಂಡಿಗಂ ಕಟ್ಟಿಕೊಂಡು ಅಗ್ರಹಾರಕ್ಕೆ ಬರುವಾಗ ಸಕಲ ಬ್ರಾಹ್ಮಣರು ಏನೆನುತಿದ್ದರೋ –

ರಾಗ ಗೌಳಪಂತು ಅಷ್ಟತಾಳ

ಊರಿಗೆ ಬರುವ ಮಾರಿಯ ನೋಡಿರೊ |
ಏರಿ ಬಂಡಿಯ ಮೇಲೆ ಹೋರಿಯ ಹೊಡೆವುತ್ತ ||
ಅಲ್ಲಿಗೈದಿದ ನರ ಎಲ್ಲಿಗ್ಹೋದನೋ ಕಾಣೆ |
ಖುಲ್ಲ ಬಕಾಸುರ ಕೋಪದೊಳು |
ಎಲ್ಲರ ತಿನಬೇಕೆಂಬ ಯತ್ನದೊಳೀಗ ನಿಲ್ಲದೆ ಬರುವ ಉಲ್ಲಾಸದಿಂದ ||302||

ವಚನ

ಇಂತೆಂದು ಸಕಲ ಬ್ರಾಹ್ಮಣರು ತಮ್ಮ ತಮ್ಮ ಮನೆಗೈದಿ ಸರಕ ಸಂವರಿಸುತ್ತಿರಲು ಅವರವರೊಳಗೆ  ಏನೆನುತಿದ್ದರೂ –

ರಾಗ ಕಾಂಭೋಜಿ ಏಕತಾಳ

ಎಂದಿನ ಹಾಗಲ್ಲ ಇವನಾರಯ್ಯೋ | ನಮ್ಮ |
ತಿಂಬೆನೆಂದೆನುತ್ತ ಬಹನಾರಯ್ಯ ||
ಅನ್ನ ಮನುಜ ಮಹಿಷರನ್ನು ತಿಂದು | ಬಂಡಿ |
ಯ ನೂರದೆಯಲ್ಲ ಕ್ಷಣ ಬಂದುದೆಲ್ಲಿಂದ ||
ಕಂಡ ಜನವಿನಿತು ಚೋದ್ಯವೆಂದು | ಅಸು |
ರನ್ನೆ ಬಹನೆಂದು ಚಿಂತಿಸುತ್ತ ನಿಂದು ||303||

ಇಲ್ಲಿಂದ ಹೋದ ಮನುಜನೆಲ್ಲಿ ಗೈದಿದ | ಅನ್ನ |
ವೆಲ್ಲವ ತಾನೆ ಉಂಡನೊ ಖುಲ್ಲಗೀಯದೆ ||
ಎಲ್ಲಾರ ನುಂಗುವೆನೆಂದು ರೋಷದಿಂದಲಿ | ಬಂದ |
ನಲ್ಲೋ ಉಂಬ ಸೊಲ್ಲ ಕೇಳುತ್ತ ನುಡಿದ ||304||

ಹೋದ ಮನುಜನೆ ಾಣಿರಣ್ಣಗಳಿರ | ಇಂದೀ |
ದುರಾತ್ಮನ ಕೊಂದೆ ಅಣ್ಣಗಳಿರ ||
ಆದರೀಕ್ಷಿಸೆಂದನಾ ಕಳೇವರವ |
ಬಾಗಿಲೊಳ್ಮೆರಸುತ್ತ ಭೀಮ ಬಂದ ||305||

ವಚನ

ಇಂತೆಂದು ಪೇಳಿದ ಭೀಮನಂ ಕಂಡು ಬ್ರಾಹ್ಮಣರೆಲ್ಲ ಧೈರ್ಯದಿಂ ಬಂದು ಆಶೀರ್ವಾದವಂ ಮಾಡಿ ನಿನ್ನಿಂದ ಅಗ್ರಹಾರಕ್ಕೆ ವಿಪತ್ತು ಪರಿಹರಿಸಿತು ಎಂದು | ಭೀಮ ಬಂದು ಧರ್ಮಜ ಮುಂತಾದವರು ಕಾಣಿಸಿಕೊಂಡು ಕುಂತಿಗಭಿನಮಿಸಿ ಸಂತೋಷದಿಂದಿರುವ ಸಮಯಾಂತರದಲ್ಲಿ ಒಬ್ಬ ವಿಪ್ರೋತ್ತಮನಂ ಕಂಡು ಧರ್ಮಜ ಏನೆನುತ್ತಿದ್ದನು –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎತ್ತಲಿಂದೈತಂದೆ ಭೂಸುರ |
ಇತ್ತಲೆಲ್ಲಿಗೆ ಗಮನವೆನೆವಿ |
ಪ್ರೋತ್ತಮನು ಧರ್ಮಜಗೆ ಬಳಿಕುತ್ತರಿಸಿದ ||306||

ಈಸುದಿನ ಹಸ್ತಿನಪುರದೊಳು
ವಾಸವಾಗಿ ಇದ್ದೆನಯ್ಯ |
ಮೋಸ ಹೋದರು ಪಾಂಡವರು ಆ ದೇಶದೊಳಗೆ ||307||

ಧಾರುಣಿಪ ಧರ್ಮಜನ ಸಂಗಡ |
ವರ ಸುಧರ್ಮಗಳೆಲ್ಲ ಹೋದವು |
ಪುರದೊಳಗೆಯಿರಬಾರದೆಂದಾ ಭರದಿ ಬಂದೆ ||308||

ಎಂದ ನುಡಿಯನು ಕೇಳಿ ಯಮಜನು |
ತಂದನು ನಯನೋದಕವನು |
ಮಡಿದರು ಕುಂತಿನಂದನರೆನುತಲೆ ಸುಯಿದಿಂದು ಬಲು ಶೋಕಿಸಿದನು |
ಭೂಸುರನಿದಿರಿನೊಳು ||309||

ರಾಗ ದ್ವಿಪದಿ ಝಂಪೆತಾಳ

ಅವರ ಸುದ್ದಿಯು ಸಾಕು ಅವನಿ ಸುರ ನೀನು |
ತವಕದಿಂದೆತ್ತಲೈದುತ್ತಲಿಹೆ ನಾನು ||310||

ತಿಳಿವುದಾದರೆ ತಿಳಿವೆನೆನ್ನಲಾಗ |
ಇಳೆಯ ಸುರ ಧರ್ಮಜಗೆ ಪೇಳುತಿಹ ಬೇಗ ||311||

ಪಾಂಚಾಲ ಭೂಪಾಲ ಪುತ್ರಿಯನು ಪಡೆದು |
ತಾ ಚಕ್ರಧರ ಮುಖ್ಯರಾಯರನು ಕರೆದು ||312||

ಮದುವೆಯನು ಮಾಡುವನು ಮಗಳ ಸಂಭ್ರಮದಿ |
ಬುಧರಿಷ್ಟವನೀವ ಭೂಮಿಪನು ಮುದದಿ ||313||

ಅದನರಿತು ದಕ್ಷಿಣೆಯ ಆಶೆಯೊಳು ಬಂದೆ |
ಚದುರ ತಾಂ ಪೋಗುವೆನು ಕೇಳು ದಯಸಿಂಧು ||314||

ವಚನ

ಇಂತೆಂದು ಬ್ರಾಹ್ಮಣ ಪೇಳಲಾಗಿ ಆ ಪಟ್ಟಣದ ಬ್ರಾಹ್ಮಣರು ಏನೆನುತಿದ್ದರು –

ರಾಗ ಕಾಂಭೋಜಿ ಏಕತಾಳ

ಹಿರಿಯ ಬ್ರಾಹ್ಮಣ ಸಿಕ್ಕಿದ ನಮಗಿಂದು |
ಗುರುಗಳುಪಾಧ್ಯರೆ ಹರನ ಪೂಜಿಸಿ |
ವರ ಶಿಷ್ಯರನ್ನು ಈಗ ಕರೆದು ಬನ್ನಿ ಪೋಗುವ || ಹಿರಿಯ ||315||

ಎಲ್ಲ ವಿಪ್ರರು ಬನ್ನಿರೆಲ್ಲ ಭಟ್ಟರು ಬನ್ನಿರೆಲ್ಲ ||
ಎಲ್ಲ ದೀಕ್ಷಿತರೈದಿ ಸೊಲ್ಲನವಧರಿಸಿ || ಹಿರಿಯ ||316||

ನಿತ್ಯಕರ್ಮವ ಮಾಡುತ್ತ ಶ್ರೀಕೃಷ್ಣನನ್ನು |
ಸ್ತುತ್ಯವ ರಚಿಸಿ ನೀವೆತ್ತ ಪೋಗದೆ ಬನ್ನಿರೋ | ಹಿರಿಯ …. ||317||

ನಿನ್ನ ಪಾಂಚಾಲ ಕನ್ನೆಯ ಮದುವೆಗೆ |
ಹೊನ್ನು ದಕ್ಷಿಣೆ ಬಹವಿನ್ನು ಸಂದೇಹ ಬೇಡ || ಹಿರಿಯ …. ||318||

ವಚನ

ಇಂತೆನಲು ಬ್ರಾಹ್ಮಣರು ವಿಪ್ರೋತ್ತಮನೊಡನೆ ಪೋಗುತ್ತಿರಲಾ | ಪಾಂಡವರು ಬರುತ್ತಿರಲಾಗಿ | ಮಾರ್ಗದಲ್ಲಿ ನಿಮಿತ್ತಗಳಾದವದೆಂತೆನೆ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮುಂದೆ ಧರ್ಮಜ ನಡೆಯಲಾತನ |
ಹಿಂದೆ ಭೀಮನು ನಗುತ ಬರುತಿರೆ |
ಇಂದ್ರನಂದನ ಯಮಳರೈತರುತಿರ್ದರಾಗ ||319||

ಕನ್ನೆಯರ ಕರದೊಳಗೆ ಕಲಶವ |
ಕನ್ನೆಯರು ಪಿಡಿದಿದಿರು ಬಂದರು ಸು |
ಪರ್ಣನೆಡದಿಂ ಬಲಕೆ ಸುಳಿಯಲು ಮಾರ್ಗದೊಳಗೆ ||320||

ಏನಿದಚ್ಚರಿ ನಮ್ಮೊಡನೆ ಆ |
ಮಾನಿನಿಯ ವರನಿಲ್ಲಿ ಇರುವನೊ |
ಈ ನಿಮಿತ್ತವಿದತಿ ಶುಭಗಳೆಂದವನಿಸುರರು ||321||

ಇಂತು ಮಾತಾಡುತ್ತಲವರೋ
ರಂತೆ ಬರುತಿರೆ ಕತ್ತಲೆಯ ದಳ |
ವಂತೆ ದಕ್ಷಿಣಕೈದಲಾದೆಸೆದೆಸೆಯೊಳಲ್ಲಿ ||322||

ವಚನ

ಇಂತೆಂದು ತಮ್ಮೊಳಗೆ ಆಲೋಚನೆಯಂ ಮಾಡುತ್ತ ಕತ್ತಲೆಯಲ್ಲಿ ಬೀಸುಗೊಳ್ಳಿಯ ಬೆಳಕಿನಲ್ಲಿ ಬರುತ್ತಿರಲಾಗಿ | ಅಂಗಾರವರ್ಮನ ಕೂಡೆ ಹೆಣಗಿದ ಬಗೆಯದೆಂತೆನೆ –

ರಾಗ ಸೌರಾಷ್ಟ್ರ ಏಕತಾಳ

ಗಂಧರ್ವನೋರ್ವನು ಬಂದು |
ಭೂತಳದೊಳು ಎಂದೆಂದು ಜಲಕ್ರೀಡೆಯಾಡಿ ಹಿಂದೆ ಹೋಗುವನಂತೆ |
ಅಂದು ಪಾಂಡವರೆಲ್ಲವೊಂದಾಗಿ ಬರಲು ನೋಡಿದನು ||323||

ನಾರಿಗಳೆಲ್ಲರು ಸೀರೆಗಳನು ಬಿಟ್ಟಾ |
ನೀರೊಳಗಿರುವ ವೇಳ್ಯದಲ್ಲಿ |
ಹಾರುವ ನೀನಿಂದು ರಾತ್ರಿಯೊಳು ಬಂದ ಕಾರಣವೇನೆಂದು ಎಸೆದ ||324||

ಅಸಮ ಸಾಹಸಿ ಪಾರ್ಥ ಬಹ ಕಣೆಗಳ ಕಂಡು |
ಬೀಸುಗೊಳ್ಳಿಯ ಮಂತ್ರಿಸಿ ಬಿಟ್ಟ ||325||

ನೀರ ಹೊಕ್ಕರೆ ಬಿಡದೆ ಹೋರಿತಾ ಬಾಣವು |
ಹಾರಿದ ಗಗನದ ಮಾರ್ಗದೊಳು || ಸೇರಿತಾ ದಾರಿಯ ಕಟ್ಟಲು ಭರದಿಂದ |
ನಾರಿಯರೊಡನೆ ಬಂದಾ ನೀರ ಕುಡಿಯಲು ಬಾಯಾರಿ ಬೊಬ್ಬಿಡುತೈತಂದು ||326||

ಯಾರಯ್ಯ ನೀವೀಗ ಕಾರಣ ಪುರುಷರು | ಬಾರಿ ಬಾರಿಗೆ ನಮೊ ಎನುತ |
ಶರಣೆಂದ ಸುರನನು | ನೆಗಹಿ ನೀನಾವ ಪುರುಷನೆಂದು ಯಮ ಸೂನು ||327||

ಗುರುತ ಹೇಳುವೆ ನಿಮ್ಮ ಶರವೆನ್ನ ಸುಡುತಿದೆ | ಪರಿಹರಿಸದನೆಂದನು |
ಪರಿಹರಿಸುವಡೆನ್ನ ಶರವಲ್ಲ ಹಿಂ | ದಿರುವ ಭೂಸುರನ ಮಾಯಕವು ||328||

ಅರುಹೆನೆ ಭೂಸುರನ ಚರಣಕ್ಕೆ ನಮಿಸುತ್ತ |
ಕರುಣದಿ ಕಾಯ ಬೇಕೆಂದ ||329||

ಎಂದ ಸುರನ ಕಂಡು ಇಂದ್ರಜ ನಿಲಿಸಿ | ಎಂದನು ಅಂಗಾರವರ್ಮ ||
ಬಂದ ಪರಿಯೇನು ಮುಂದೆ ಪೋಗುವುದೆತ್ತ ||
ಸೌಂದರ್ಯಕರು ನೀವಾರು ಎಂದೆನಲು ಪಾಂಡವರೆಲ್ಲರು ನಾವು ||330||

ಘನವಾದ ದ್ರುಪದನ ಪಟ್ಟಣಕ್ಕೆ |
ಜನಪನ ಕುವರಿಯ ಮದುವೆಗೆ ಪೋಪೆವು |
ಮುನಿಸು ಬೇಡೆನುತಲಪ್ಪಿದನು ||331||

ವಚನ

ಆಗಲಾ ಅರ್ಜುನನು ನೀನಾರೆಂದು ಕೇಳಲು ಏನೆನುತಿದ್ದನು –

ರಾಗ ದ್ವಿಪದಿ ಝಂಪೆತಾಳ

ಅಂಗಾರವರ್ಮನಾ ಅಮರಲೋಕದೊಳು |
ಅಂಗನೆಯಯರೆಲ್ಲರಂ ಕರೆತಂದು ಜಲದಿ ||332||

ಆಡುತಿಹ ಸಮಯಕ್ಕೆ ನಿಮ್ಮನ್ನು ಕಂಡೆ |
ಮೂಢತನದೊಳು ಒಂದು ಶರವ ತಕ್ಕೊಂಡೆ ||333||

ಅದರಿಂದ ಬಂದ ಅಪಮತ್ಯುವನ್ನೆಲ್ಲ |
ಮುದದಿಂದ ನೀನು ಪರಿಹರಿಸಿರ್ಪೆಯಲ್ಲ ||334||

ಎಂದು ರತ್ನಗಳ ಕಾಣಿಕೆಯನೀಯೆ |
ಅಂದು ಧರ್ಮಜ ಕಂಡು ನುಡಿದನಿಂತೆಂದು ||335||

ನಿಮ್ಮ ರತ್ನಗಳೆಲ್ಲ ಇಲ್ಲಿರಲಿ ತಾಳು |
ಇನ್ನೊಂದು ಸಮಯಕ್ಕೆ ತರಿಸುವೆನು ಕೇಳು ||336||

ಎಂದು ಧರ್ಜಜ ಪೇಳೆ ಅತಿ ಹರುಷದಿಂದ |
ಗಂಧರ್ವ ತೆರಳಿದನು ಗಳಿಗೆಗಲ್ಲಿಂದ ||337||

ಮುಂದೆ ಧೌಮ್ಯನ ಕೂಡಿಕೊಂಡು ದ್ರೌಪದಿಯ |
ತಂದೆಯಾಳುವ ಪುರವ ಪೊಕ್ಕರಾ ಕ್ಷಿತಿಯ ||338||

ವಂದಾಕರ ಸರಣಿ ವಾರಂತೆಯಿರಲು |
ಇಂದು ಮುಖಿಯರು ಮಂಗಲಾರತಿಯ ತರಲು ||339||

ವಚನ

ಇಂತು ಮಂಗಳ ಘೋಷದಿಂದ ಬ್ರಾಹ್ಮಣರ ಸಂಗಡ ಪಾಂಡವರು ಪಟ್ಟಣಕ್ಕೆ ಬಂದು ಇರುತ್ತಿರಲಾ ಪಟ್ಟಣದಲ್ಲಿ ಏನು ಮಾಡುತ್ತಿದ್ದರೋ – ಮಂಗಳಂ ಜಯ ಮಂಗಳಂ ||

ರಾಗ ದ್ವಿಪದಿ ಝಂಪೆತಾಳ

ದ್ರುಪದ ದಷ್ಟದ್ಯುಮ್ನ ದ್ರೌಪದಿಯ ಪಡೆದು |
ನಪರಾಜನೆಂದೆನಿಸಿ ಅತಿ ಕೀರ್ತಿಪಡೆದು ||340||

ವರಕುಮಾರಿಯ ವಿವಹದುತ್ಸವಕ್ಕೆಂದು |
ಪುರವ ಶಂಗರಿಸಲ್ಕೆ ಮಂತ್ರಿಗೆನಲೆಂದು ||341||

ಕೇಳಿದಾಕ್ಷಣವೆ ಮೇಲ್ಗಟ್ಟು ತೋರಣವ |
ಸಾಲಾಗಿ ರಚಿಸಿದರು ಪಟ್ಟಣದೊಳಿರುವ ||342||

ಮನೆ ಮನೆಗೆ ಬಣ್ಣಗಳ ರಚಿಸಿದರು ನಿತ್ಯ |
ಕನಕ ಬೊಂಬೆಗಳ ನಿರ್ಮಿಸಿದನಮಾತ್ಯ ||343||

ಕೋಟಿ ಶಕಟಗಳ ಬೀದಿಯಲಿ ನಿಲಿಸಿದನು |
ನೀಟಾಗಿ ಮೆರೆವ ಭೇರಿಗಳ ಹೊಯ್ಸಿದನು ||344||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕುಂದಣದ ರೂಪೊಂದು ದೆಸೆಯಲಿ |
ಅಂದವಡೆದ ಕವಾಟದಲಿ ಪೂರ್ಣೇಂದುವನು |
ತಂದಿರಿಸಿದರೊ ಎನೆ ಮೆರೆದುದಾ ನಗರ ||345||

ಪಂಚಯೋಜನದಗಲದಲಿ |
ಅತಿಕಾಂಚನದ ವೋಲ್ನೆಲನ ರಚಿಸಲು |
ಪಂಚ ಸಾಸಿರ ನಪರ ಗಹವನು ಪಾಂಚ ವಿರಚಿಸಿದನು ||346||

ವಚನ

ಈ ಪ್ರಕಾರದಲ್ಲಿ ಪಾಂಚಾಲ ಪಟ್ಟಣವ ಶಂಗರಿಸಿ ಛಪ್ಪನ್ನ ದೇಶದ ಭೂಪರಿಗೆ ಲೇಖನವ ಬರೆಸಿ ಕಳುಹುತ್ತಿರ್ದನದಂತೆನೆ –

ರಾಗ ದ್ವಿಪದಿ ಝಂಪೆತಾಳ

ಕರುಣ ಸಾಗರನು ಕರಣಿಕರ ಕರೆಸಿದನು |
ತರುಣಿ ದ್ರೌಪದಿಯ ಸ್ವಯಂವರದ ವಸಗೆಯನು ||347||

ಬರೆಸಿದನು ರಾಯಸವ ದೇಶ ಭೂಪರಿಗೆ |
ದೇಸಿನೊಕ್ಕಣೆಯಿಂದ ಬಿರುದಿನೊಕ್ಕಣೆಗೆ ||348||

ಕೇಳಿದಾಕ್ಷಣ ಕರಣಿಕನು ಹಿಗ್ಗಿದನು |
ತಾಳಿಸಿದ ವಾಲೆಯನು ಕಂಠವನು ಪಿಡಿದು ||349||

ಸ್ವಸ್ತಿ ಶ್ರೀಮತು ಸಕಲ ಭೂಪರಿಗೆ |
ಉಕ್ಕಿ ಹರುಷವನು ಮಾಡುವೆನು ಈ ಧರೆಗೆ ||350||

ಪಾಂಚಾಲ ಭೂಪ ಪಾರ್ವತಿಯಂತೆ ಮೆರೆವ |
ವಂಚನೆಗಳಿಲ್ಲದೆ ಹೋಗಿ ಕರಸುವೆನು ದೊರೆಯ ||351||

ನಾಳೆ ಎನ್ನಾಮಗಳನೀವ ವಸಗೆಗಳ |
ತಾಳಲಾಗದು ಎರಡು ಮನವ ಹರುಷಗಳ ||352||

ಗೋರಾಷ್ಟ್ರ ಗೋಡ ಮುಖ ಕಾಂಚಿ ಬರ್ಬರ |
ಮಾರಾಷ್ಟ್ರ ಬಡ್ಡಿ ರಾಯರಿಗೆ ವಂದಿಸಿದ ||353||

ರಿಂಗ ಕಾಂಭೋಜ ಮಾಳವೆಯ ನಪೋತ್ತಮಗೆ |
ಅಂಗ ದೇಶದ ನಪಗೆ ಕೌರವೇಶ್ವರಗೆ ||354||

ವಂದನಂ ಬಿನ್ನಪವಿದೆಲ್ಲಮಂ ತಂದು |
ಇಂದು ಮುಖಿ ದ್ರೌಪದಿಯ ಮದುವೆಗಂ ಬಂದು ||355||

ತೆರಳಬೇಕೆಂದು ಲಿಖಿತವನು ಬರೆಸಿದನು |
ಚರರು ಕೊಂಡೊಯ್ಯಲಾಕ್ಷಣದಿ ಓಲೆಯನು ||356||

ಬಂದರಾ ಛಪ್ಪನ್ನ ನಪ ಕುಲೋತ್ತಮರು |
ಚಂದದಿಂದಿರ್ಗೊಂಡು ಮನ್ನಿಸಿದನವರ ||357||