ರಾಗ ಕೇತಾರಗೌಳ ಏಕತಾಳ

ನಿನ್ನ ಕಂಡು ಪೋಗಲಾರೆ ಎಲೆ ನಲ್ಲ | ಈಗ |
ಮನ್ಮಥ ಬಾಧೆಗೆ ಸಿಲುಕಿದೆನಲ್ಲ ||209||

ಹಣ್ಣ ಕಂಡು ಹಕ್ಕಿ ಬಿಡುವುದೆ ನಲ್ಲ | ಚೊಕ್ಕ |
ಚಿನ್ನಸರ ಸಿಕ್ಕರೊಲ್ಲರೆ ನಲ್ಲ ||210||

ಹೆಣ್ಣೊಲಿಯೆ ವಂಚಿಪೆ ಯಾಕೆ ನಲ್ಲ | ಹಿ |
ರಣ್ಯ ಗರ್ಭಮಾಡಿದ ಮಾಟವು ನಲ್ಲ ||211||

ಚರಣಕ್ಕೆರಗುವೆ ಮಾತನಾಡಯ್ಯ | ತರ |
ಹರಿಸಲಾರದೆ ಮುತ್ತನೀಗ ಬೇಡಯ್ಯ ||212||

ರಾಗ ತೋಡಿ ಅಷ್ಟತಾಳ

ಮಾತನಾಡಬೇಡತ್ತ ಸಾರೆ | ಮಾನಿನಿ ಕಡು ಜಾರೆ |
ಏತಕೆಲ್ಲ ನಿಂದೆ ರಕ್ಕಸಿಯನ್ನು ತಡೆಯಲಾರೆ ||213||

ರಕ್ಕಸಿಯೆಂದೆನ್ನ ಬೇಡ | ಕುಚಕ್ಕೆ ಕಯ್ಯ ನೀಡೋ |
ಎಕ್ಕ ಸೊಕ್ಕಿನ ಮಾತು ಬೇಡೆಂದು | ಧಿಕ್ಕರಿಸುತ ನುಡಿದನು ||214||

ಅಕ್ಕಟಾ ನಾ ನಿನ್ನ ರೂಪವ ಕಂಡು | ಗಹಕ್ಕೆ ಪೋಗಲಾರೆನೆನಲು |
ಸೊಕ್ಕಿನವಳೆಂದು ಭೀಮ ನಕ್ಕು ಸುಮ್ಮನಿರ್ದನು ||215||

ವಚನ

ಇಂತೆಂದು ಭೀಮನೊಡನೆ ಪ್ರಸಂಗಿಸಲು | ಇವಳ ಅಣ್ಣ ಹಿಡಿಂಬನು ಹೇಗೆ ಬರುತಿದ್ದನದೆಂತೆನೆ-

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೋರೆ ದಾಡೆಯು ತೋರ್ವ ಮೀಸೆಯು |
ಜೋರು ಮೋರೆಯದೋರುತ |
ನೂರು ಮಂದಿಯ ನುಂಗಿ ನೊಣೆಯುವ |
ಮಾರಿ ರಕ್ಕಸ ಬಂದನು |
ಬಂದ ನೋಡೆ ರಕ್ಕಸ ಬಂದ ನೋಡೇ ||216||

ರಕ್ಕಸಾರ್ಭಟಿಸುತ್ತ ನಿಂದಿರೆ |
ನಕ್ಕನಾ ಕಲಿ ಭೀಮನು |
ಸೊಕ್ಕಿದೇತಕೆ ಕೂಗಬೇಡವೊ |
ಕ್ಷಣದಿ ನಿಲಿಸುವೆ ಕೊಬ್ಬನು |
ಒಂದ ನೋಡೆ ರಕ್ಕಸ ಬಂದ ನೋಡೇ ||217||

ರಾಗ ಶಂಕರಾಭರಣ ತಾಳ ಪಂಚಘಾತ ಮಟ್ಟೆ

ಎನ್ನ ಕೊಬ್ಬನು ನಿಲಿಸುವಾತನೋ | ಎಲವೊ ರಕ್ಕಸ |
ಮಲಗಿದೈವರು | ಘಳಿಲನೇಳ್ವರಿತ್ತ ಬಾರೊ ಕೊಲುವೆನೆಂದನು ||218||

ಕೊಲ್ಲುವೆನೆಂದ | ಮಾತ ಕೇಳುತ |
ಮಲ್ಲ ಭೀಮ ನೊಂದುಕೊಂಡು ಮುಂದೆ ನಿಂದನು ||219||

ನಿಲ್ಲದಾತನ | ಮಲ್ಲಯುದ್ಧದಿ |
ಬಲ್ಲ ತನದಿ ಹಲ್ಲ ಮುರಿದು ಅಲ್ಲಿ ಹೆಣಗಿದ ||220||

ಹೆಣಗುತನಿಲಜಾ | ಕ್ಷಣಕೆ ಮನದೊಳು |
ಗಣಿಸದಾಸುರಾಗ್ರಣಿಯ ನೀಕ್ಷಿಸಿ || ಮರನ ಮುರಿದನು ||221||

ಕರವ ಪಿಡಿದನು |
ದುರುಳ ರಾಕ್ಷಸನ್ನ ಬಡಿದು ಮರುಳಿ ಬಂದನು ||222||

ಬಡಿಯಲಾಕ್ಷಣ ಧಡ ಧಡಿಸುತಾ |
ಪೊಡವಿಯಲ್ಲಿ ಕೆಡೆದು ಬಿದ್ದ ದಡಿಗ ರಾಕ್ಷಸ ||223||

ವಚನ

ಇಂತೀ ರಕ್ಕಸ ಬಿದ್ದ ಸದ್ದಿನಮೇಲೆ ಧರ್ಮಾರ್ಜುನರೆಲ್ಲ ಎದ್ದು ಏನೆನುತಿದ್ದರು –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಭೀಮಯಿದೇನು ಮಾರುತಿ ||
ದಾನವನ ನೀನೊಬ್ಬ ಜಯಿಸಿದೆ |
ಏನ ಮಾಡಲು ಬಹುದು ಶಿವ ಶಿವ ಎಂದರವರು ||224||

ತಮ್ಮ ಅವ ಬಂದಾಕ್ಷಣದಿ ನೀ |
ನಮ್ಮನೆಬ್ಬಿಸದೇಕೆ ಮೊದಲೇ |
ಅಮ್ಮ ಸಹಿತೈವರನು ಪೊತ್ತು ಬಳಲಿದವನು ||225||

ವಚನ

ಇಂತೆಂದು ಪೇಳಲಾಗಿ ಭೀಮ ಏನೆನುತಿದ್ದನೋ –

ರಾಗ ಕಲ್ಯಾಣಿ ತ್ರಿವುಡೆತಾಳ

ನಮ್ಮೇನ ಮಾಡುವನು |
ಮಣ್ಣ ಕಚ್ಚಿದ ಹಿಡಿಂಬಕನು ತಾನು |
ಮೊದಲೊಬ್ಬ ಸತಿಯ ಕಳುಹಿದನಿವನೀಗ ಅಣ್ಣ ||226||

ವಚನ

ಇಂತೆಂದು ಭೀಮ ಪೇಳಲಾಗಿ ಹಿಡಿಂಬೆ ಯೇನೆನುತಿದ್ದಳೂ ಯೆಂದರೆ –

ರಾಗ ಕಾಂಭೋಜಿ ಏಕತಾಳ

ಮಾತ ಕೇಳಯ್ಯ | ಇವನನ್ನು ಕಂಡು |
ಸೋತೆ ನಾ ಬಂದು ಮುಂದೆ ನಾನೈತಂದೆ |
ಮತ್ತೆ ನನ್ನಣ್ಣನು ನಿಮ್ಮ ತಿನ್ನಲು ಬಂದ ಕೊಂದನಿವನಿಂದು ||227||

ಇನ್ನವನ ಚಿಂತೆಯು ಎನಗಿಲ್ಲವೆಂದು |
ಚೆನ್ನಿಗ ನೆರೆದರೆ ಸಾಕು ದಯಸಿಂಧು |
ಮಾತ ಕೇಳಯ್ಯ ಇವನ ಕಂಡು ಸೋತೆ ನಾನಿಂದು ||228||

ರಾಗ ದೇಸಿ ಝಂಪೆತಾಳ

ಆಡಿದ ಮಾತನು ಕೇಳ | ಎನ್ನ | ಕೂಡ ದಯ ಮಾಡ |
ನಮ್ಮ ನಿಮ್ಮ ಯೋಗ ನೋಡೆ ನೋಡೆ ||
ರೂಢಿ ಮೆಚ್ಚರಿಂತವನ ಪಾಡಾದೆ ಪ್ರೌಢೆ |
ನಾವು ಜೋಡಾದರೆ ಮೆರೆಯೆ ಮತ್ತೇನೆಂಬ ಕೂಡೆ ||229||

ವಚನ

ಇಂತೆಂದು ದೈನ್ಯ ವಚನಂಗಳಿಂದ ಬೇಡಿಕೊಳಲು ಆ ನುಡಿಗೆ ಭೀಮ ಒಡಂಬಡಿಸಲು ಕೇಳದೆ ಇರಲಾಗಿ | ವ್ಯಾಸರು ಬರುತ್ತಿರ್ದರದೆಂತೆನೆ –

ರಾಗ ಮೆಚ್ಚು ಬಹುಳ ಏಕತಾಳ

ಉಟ್ಟ ಕಷ್ಣಾಜಿನದಿಂದ | ಉರದ ರುದ್ರಾಕ್ಷಿಯ ಚಂದ |
ಮೆಟ್ಟಿದ ಹಾವುಗೆಯಿಂದ  ಮುನಿತಿಲಕನೈತಂದ ||230||

ನಿಟಿಲಾಕ್ಷನ ಭಜಿಸುತ | ಅಟವಿಯೊಳಿರುತಿರ್ದ
ವಟುಗಳ ಕೂಡೈತಂದ | ಘಟ ಸಮರ್ಥ ಮುನಿಯು ||231||

ಬಂದ ವ್ಯಾಸಮುನಿಗೊಂದಿಸುತ | ಪಾಂಡವರೆಲ್ಲ ನಿಂದಿರೆ |
ಚಂದವೀಕ್ಷಿಸುತಿಂತೆಂದ ||232||

ಚೂರ್ಣಿಕೆ

ಏ ಭೀಮ ಕೇಳು ಈ ಮಹಿಯೊಳು ಪ್ರೇಮ ಪೇಳ್ಸುಮ್ಮಾನಗಳ ತಾಳಬೇಡ |
ಈ ವನಿತೆಯಿಂದೊಬ್ಬ ಕುಮಾರ ಜನಿಸಿ ವೈರಿಗಳನ್ನು |
ತಾನೋರ್ವ ಸಂಹರಿಸುವನು ||

ರಾಗ ಸೌರಾಷ್ಟ್ರ ಏಕತಾಳ

ಎಂದು ಭೀಮನನಂದೊಡಂಬಡಿಸಿ |
ಮುನೀಂದ್ರ ಪ್ರೇಮಗಂಟಿಕ್ಕಲು ಕಂಡು |
ಚಂದದಿಂದಿರಲಾಗಲಾರತಿಗಳ ಹಿಂಡು |
ಇಂದ್ರಜ ಯಮಜರಾನಂದದಿಂದಂದು || ಶೋಭಾನ | ಶೋಭಾನವೆ ||233||

ವಚನ

ಇಂತಿರಲಾ ಅಮರಾಂಗನೆಯರು ಬಂದು ಮಂಗಳಾರತಿಯ ನೆತ್ತಿದರದೆಂತೆನೆ –

ರಾಗ (ಮಾಧ್ಯಮಾವತಿ ಏಕತಾಳ)

ಮಂಗಳಂ ಜಯ ಮಂಗಳಂ | ಮಾತಂಗ ಗಾತ್ರನಿಗೆ |
ಮಂಗಳಂ ಜಯ ಮಂಗಳಂ ||
ಪಂಕಜಾಕ್ಷಿಗೆ ಆ ಮುದ್ರಾಂಕಿತವಿತ್ತು |
ಆ ಲಂಕೆಯೊಳ್ಮೆರೆದವಗೆ ಮಂಗಳಂ |
ಲಂಕಾಧಿಯಕ್ಷ ಮುಖ್ಯರ ಕೊಂದ ರಾಮನ |
ಕಿಂಕರನಾದಗೆ ಮಂಗಳಂ ||234||

ಸೀತೆಯ ಶಿರೋಮಣಿಯನು ರಘುವರಗಿತ್ತು |
ಪ್ರೀತಿಯ ಪಡೆದವಗೆ ಮಂಗಳಂ |
ತ್ರೇತಾಯುಗದಿ ಹರಿರೂಪಾದ ಹಯ |
ಕುಂತಿಯ ಜಾತಗೆ ಮಂಗಳಂ ||235||

ಯಮತನುಜನನುಜಗೆ ಅರ್ಜುನನಗ್ರಜ |
ಯಮಳರ ಅಣ್ಣಗೆ ಮಂಗಳಂ |
ವನಚರನನುಜೆ ಹಿಡಿಂಬಾರಮಣಗೆ |
ಮಂಗಳಂ ಜಯ ಮಂಗಳಂ ||236||

ವಚನ

ಆ ಮೇಲೆ ವ್ಯಾಸರು ತೆರಳಲಾಗಿ ಭೀಮ ಹಿಡಿಂಬೆಯರು ಹೇಗಿರುತಿರ್ದರದೆಂತೆನೆ –

ರಾಗ ಸೌರಾಷ್ಟ್ರ ಏಕತಾಳ ರಾಮಕ್ರಿಯೆ

ಭೀಮನ ಪ್ರಿಯದೊಳು ಕಾಮಿನಿ ಕರೆವಳು |
ಆ ಮಹಾತ್ಮನ ತಳ್ಕಿಸುವಳು |
ಕಾಮನ ಕಲೆಯೊಳು ನೇಮವಾಗಿರುವಳು |
ಪ್ರೇಮದಿ ಮಾತನಾಡುವಳು ||237||

ತಕ್ಕಿಸಿ ಚುಂಬನದಿಂದ |
ದಕ್ಕಿತು ತನಗಿಂದಾನಂದ |
ಅಕ್ಕರ ಪ್ರಿಯದಿಂದ ಸಕ್ಕರದೂಟಯೆಂದು |
ಪಕ್ಕನೆ ಸವಿದ ಮಾರುತಿ ಕಂದ ||238||

ನೋಡಿ ದಣಿಯಳೊಂದು ಗೂಡಿ ದಣಿಯಳ್ ಬಂದು |
ಪಾಡಿದಳಂದು ನಿಂದು |
ಗಾಡಿಕಾತಿ ಬಾರೆಂದು |
ಜೋಡನಿಕ್ಕುವರಂದು |
ಪ್ರೌಢ ಮಾರುತಿ ದಯಸಿಂಧು ||239||

ಕಂದ

ಇಂತಾರು ತಿಂಗಳಿರಲಾ |
ಕಾಂತೆಗೆ ಜನಿಸಿದನು ಒಬ್ಬ ಸೂನು |
ಘಟೋತ್ಕಚನೆಂಬ ನಾಮವನಿತ್ತು |
ಕಾಂತಾರದೊಡೆತನವ ಕೊಟ್ಟನಾ ಭೀಮ ||240||

ರಾಗ ದ್ವಿಪದಿ ಝಂಪೆತಾಳ

ಅಂದಲ್ಲಿ ಪಶ್ಚಿಮಕೆ ಆನಂದದಿಂದ |
ಬಲ್ಲಿದೈವರು ಕುಂತಿ ಬರಲು ಪುರವೊಂದ ||241||

ಅರಸುತ್ತ ಬರಲಾಗಲೇಕ ಚಕ್ರವನು |
ಭರದಿಂದ ಪೊಕ್ಕನುವನರಸುತ್ತಲಿಹರು ||242||

ಒಬ್ಬ ವಿಪ್ರೋತ್ತಮನ ಮನೆಯೊಳಗೆಯಂದು |
ಬಹಳ ಶೋಕವನು ತಾಳುತಿರಲಂದು ||243||

ಇದು ಯೇನು ಯೆಂದು ಕೇಳಿದಳು ವರವನಿತೆಯಂದು ||244||

ವಚನ

ಈ ರೀತಿಯಿಂದ ಕೇಳಿದ ಕುಂತಿಯೊಡನೆ ಬ್ರಾಹ್ಮಣನು ಏನೆಂದನೂ ಎಂದರೆ –

ರಾಗ ಸೌರಾಷ್ಟ್ರ ಏಕತಾಳ

ಏನು ಹೇಳಲಿ ತಾಯೆ ನಾಳೆ ಮಗನ ಮದುವೆ |
ಈಗ ಬಂದಿಹುದು ಮಾರಿಯೊಂದು ||
ದಿನ ದಿನ ತಪ್ಪದೆ ಕೊಡುವ ತೆರಿಗೆಯುಂಟು ನಾಳೆ ಬಂದಿಹುದು ಎನಗೆ ||245||

ಎಂದಮಾತನು ಕೇಳಿ ಕಾಂತೆ ಹರುಷ | ದಿಂದ ಎಂದಳು ತಾನತಿ ಬೇಗದಿಂದ ||
ಭೂಸುರ ನೀನೇಕೆ ಮರುಗುವೆ ನಾನೀವೆನೋರ್ವನ ||246||

ಐದು ಮಕ್ಕಳಿಗನ್ನವೈದೆ ಗಳಿಲಾರೆ | ಐದರೊಳೋರ್ವನ ನೀವೆ ||
ಐದಿಂದ್ರಿಯಕೆ ತಪ್ತಿಯೈದುವನೆ ಸಾಕ್ಷಿ | ಐದೆ ವಿಪ್ರನೊಳೆಂದಳಾಗ ||247||

ಏನವ್ವ ನಿನ್ನ ಸೂನುವ ನೀನೀವೆಯ | ಈ ನಡತೆಯ ಕಂಡುದಿಲ್ಲ ||
ಮಾನವ ಬೇಡಲು ದಾನವ ನಿನ್ನ | ಚಿಣ್ಣನ ನೀವರಿದು ನೀತವೇನೆ ||248||

ವಚನ

ಎಂದ ಮಾತಿಗೆ ಕುಂತಿ ಏನೆಂದಳು ಎಂದರೆ –

ರಾಗ ದ್ವಿಪದಿ ಝಂಪೆತಾಳ

ಇನಿತೇಕೆ ಚಿಂತೆ ಕೇಳಿದರೆ ಭೂಸುರನೆ |
ನಿನಗೆ ರಕ್ಕಸ ಭಯವೆ ಬೇಡ ಕೇಳಯ್ಯ ||249||

ಮದುವೆಗೆ ಸಮಸ್ತ ವಸ್ತುಗಳನ್ನು ತರಿಸು |
ಬುಧ ಶಿರೋಮಣಿ ಕೇಳು ಬ್ರಾಹ್ಮಣರ ಕರೆಸು ||250||

ರಕ್ಕಸಗೆ ಬೇಕಾದ ಭಕ್ಷ್ಯ ಭೋಜ್ಯಗಳ |
ತಟ್ಟನೆ ಅಣಿಗೊಳಿಸು ಹೇಳಿ ಫಲವಿಲ್ಲ ||251||

ಪಂಕಜಾಸನನ ಲಿಖಿತ ತಪ್ಪುವುದೆ ನಾ |
ಸುಮ್ಮನಿದ ಕೇಳಿ ಹೋಹಳಲ್ಲೆನೆ ತನ್ನ ಕ್ಲೇಶಮಂ ವಿಪ್ರ ಪೇಳಿದನು ||252||

ಊರ ಹೊರಗೊಂದು ವಿಪಿನಾಂತರದೊಳು |
ಮಾರಿ ಬಕಾಸುರನಿಹನು ||253||

ಕೇರಿ ಮನೆ ಮನೆ ತಗ್ಗದನ್ನವ ಚೋರ ರಕ್ಕಸನುಂಬ ತಾಯೆ |
ದಿನಕೊಬ್ಬ ಮನುಜ ಹನ್ನೆರಡು ಖಂಡುಗದನ್ನ |
ಘನವಾದ ಶಾಖಗಳನುಂಬ ||254||

ಎನಗೊಬ್ಬ ಪುತ್ರನಾತಗೆ ನಾಳೆ ಮದುವೆಯು |
ಎನಗೆ ಬಾರಿಯ ದಿನವು ನಾಳೆಯಮ್ಮ ||255||

ವಚನ

ಇಂತೆಂದ ಮಾತ ಕೇಳಿ ಕುಂತಿಯೇನುತಿದ್ದಳು –

ರಾಗ ಸೌರಾಷ್ಟ್ರ ಏಕತಾಳ

ಭೂಸುರ ಕೇಳಿದೇತರ ಕಷ್ಟವು |
ನೀ ಸುಮ್ಮನಿರು ಚಿಂತೆಬೇಡ |
ಆ ಶಿವನೈದು ಸುತರನಿತ್ತ ನಿತ್ಯದಿ |
ಒಡಲ ಹೊರೆವುದತಿ ಕಷ್ಟ ||256||

ಈ ಪರಿ ಹೇಳುವುದೇನೆಲೆ ತಾಯೆ |
ಬರಿದೆ ಕಾಡಬೇಡಮ್ಮ |
ಭರದಿಂದ ವಿಧಿ ತಾನೆ ಬಲ್ಲ |
ಕರಕರಿಸಬೇಡ ತೆರಳು | ಬರಿಯ ಮಾತಲ್ಲೆನಲು ||257||

ವಚನ

ಇಂತೆಂದು ಬ್ರಾಹ್ಮಣ ಅಳುವದಂ ಕೇಳಿ ಕುಂತಿಯೇನೆನುತಿದ್ದಳು –

ರಾಗ ಸೌರಾಷ್ಟ್ರ ಏಕತಾಳ

ಯಾತಕೆ ಭೂಸುರ ಚಿಂತೆಯನಾಂತಿಹೆ |
ಮಾತನಾಡೆಂದಳು ಕುಂತಿ | ಮಾತನಾಡುವುದೆಲ್ಲಿ ಬ್ರಹ್ಮತೇಜವನು ||258||

ಅನಕ ಮತ್ತೊಬ್ಬ ಧರಣಿ ಸುರನ |
ಮನೆಯ ಬಿಡಾರವನು ಮಾಡಿ ಪಾಂಡುವಿನ ||259||

ಮಕ್ಕಳೈವರು ನಿತ್ಯ ಮಜ್ಜನವ ಧರಿಸಿ |
ರಕ್ಕಸಾರಿಯ ಪಾದರಜಕೆಲ್ಲ ನಮಿಸಿ | ಭಿಕ್ಷಾನ್ನವೆತ್ತಿ ಆ ಭೀಮಗರ್ಧವನು ||260||

ತತ್ ಕ್ಷಣದೊಳಿತ್ತು ಆ ಐದು ಮಕ್ಕಳನು |
ಸಂತೈಸಿಕೊಂಡಿರುವ ಸಮಯದೊಳು ಇರುಳು |
ಅಳುವ ಭೂಸುರನೆಡೆಗೆ ಅಲ್ಲಿಗೈದಿದಳು ||261||

ರಾಗ ಪಾಡಿ ಏಕತಾಳ

ಯಾಕೆ ಮರುಗುವೆ ನೀ ಪೇಳೆನಗೆ ಪೇಳು |
ನಾ ಕಂಡು ಪೋಗುವವಳಲ್ಲ ಆ ಕಮಲಾಕ್ಷ ಬಲ್ಲ ||262||

ಕುರುಡನ ಮುಂದೆ ಸಣ್ಣಕ್ಕಿಯನ್ನಗಳನ್ನು ಬಂಡಿಯಲಿರಿಸು |
ನನಗೊಬ್ಬ ಸುತನಿಹನು ದಷ್ಟ ದಾರಿದ್ರ |
ದಿನ ಹೊರೆಯಾರೆನು ಕೊಟ್ಟೆನಯ್ಯ ||263||

ಊರೊಳೈವರು ಬೇಡಿದನ್ನಗಳನ್ನೆಲ್ಲ |
ಮಾರಿಸುತನುಣುತಿಹನು ಸಾಕಾಯಿತಲ್ಲಿ |
ಸರ್ವಥಾ ನಿನಗವನ ಕೊಟ್ಟೆನೆಂದು |
ಊರ್ವಿಸುರ ಈ ನುಡಿಯ ನಚ್ಚಿ ದಯಸಿಂಧು ||264||

ವಚನ

ಇಂತೆಂದು ವಿಪ್ರೋತ್ತಮನ ಒಡಂಬಡಿಸಿ ಕುಂತಿಯು ಬಂದು ತನ್ನ ಬಾಲಕರೊಡನೆ ಏನೆನುತ್ತಿದ್ದಳು-

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕಂದಗಳಿರ ಕೇಳಿರಯ್ಯ ಒಂದು ಸುದಿ್ದಯ ತಿಳಿದು ಬಂದೆ |
ಇಂದು ಎನ್ನಯ ಭೀಮನಿಗೆ ಪಾರಣೆಯು ಬಂತು ||265||

ಎನಲು ಚಪ್ಪರಿಸಿದನು ಭೀಮನ |
ಜನನಿಯೇನೇನೆಂದು ನುಡಿಯಲು |
ಮನಕೆ ಸಂತಸವಾಯ್ತು ಮತ್ತದ ಪೇಳಿರೆನಲು ||266||

ಮಗನೆ ಊರೊಳಗೊಬ್ಬ ವಿಪ್ರನು |
ಮಗನ ಮದುವೆಯ ಮಾಡಿಸುವನದ |
ನಗಲಿಸುವ ವಿಘ್ನಗಳು ಬಂದುದು ದೈತ್ಯನಿಂದ ||267||

ಆತನಿಗೆ ದಿನಕೊಬ್ಬ ಮನುಜ ಮ |
ಹಾತಿಶಯವಹ ಅನ್ನ ಶಾಕವು |
ನೀತಿಯಲಿ ದಿನದಿನಕೆ ಕೊಡಬೇಕೆಂತೆ ಮಗನೆ ||268||

ವಸುಮತೀಸುರ ತನ್ನ ಕಟ್ಟಳೆ |
ಯೆಸೆವ ದಿನ ಬರೆ ಚಿಂತಿಸುತ್ತಿರೆ |
ಅಶನದಾಸೆಗೆ ನಿನ್ನ ಕೊಡುವೆನೆನುತ್ತ ಬಂದೆ ||269||

ರಾಗ ದೇಸಿ ಝಂಪೆತಾಳ

ಲೇಸ ಮಾಡಿದೆ ತಾಯೆ ನೀ ಸಲಹಿದೆ ಎನ್ನ ಉಪವಾಸವನು ಬಿಡಿಸಿದೆ |
ಇನ್ನೇಸು ಧನ್ಯಳೋ ಎಂದು ||270||

ಚಕ್ಕುಲಿಯ ಕಜ್ಜಾಯಗಳನು ತಿಂಬಾಗಲು |
ಗಾರಿಗೆಯ ಸಕ್ಕರೆಯ ಬೆರೆದು ಘತವೆರಸಿಕೊಂಬ |
ಇಕ್ಕೆ ಸಂತಸದಿಂದನ್ನಗಳನುಂಬಾಗ |
ನಕ್ಕಾನೋ ಎನ್ನ ಕಂದ ಹೇರಂಬ | ಲೇಸ ||271||

ವಚನ

ಇಂತೆಂದು ಭೀಮ ಪೇಳಲಾಗಿ ಧರ್ಮರಾಯ ಏನೆನುತಿದ್ದನೊ –

ರಾಗ ಗೌಳಪಂತು ಏಕತಾಳ

ಎಂಥ ಮಾತು ಪೇಳ್ದೆಯೆಂದು ಎನ್ನಬಹುದೇನಮ್ಮ |
ಸಂತತಿಯೊಳಗತಿ ಸಣ್ಣ ಈ ಭೀಮ |
ಅಂತಕನ ತೆರದಸುರರ ಅರೆದು ತಿಂಬನೆ ದೂರ |
ಮುಂತಾರಿಗುಸುರುವೆ ಮೋಹದ ತಮ್ಮಾ ಏ ಭೀಮ ||
ಪೋಗಬೇಡ | ನೀ ಪೋಗಬೇಡ ||272||

ಎಲ್ಲಿಯ ಬ್ರಾಹ್ಮಣ | ಎಲ್ಲಿಯ ಮದುವೆಯು |
ಎಲ್ಲಿಯ ಸರಸವಲ್ಲೆ | ಸೊಲ್ಲ ಕೇಳುವರಿಲ್ಲ ಬಕಾಸುರನ ಕೊಂದಲ್ಲಿ ನಮಗೇನು ಫಲ
ಬಲ್ಲೆ ನೀ ಮಾತೆಲ್ಲ ಪೇಳಲೊಲ್ಲೆ ಪೋಗದಿರೋ ಭೀಮ ||273||

ವಚನ

ಇಂತೆಂದ ಮಾತಿಗೆ ಆ ಭೀಮ ಏನೆನುತಿದ್ದನು –

ಪಂಚಕ

ಇನ್ನು ಚಿಂತಿಸಬೇಡ ಅಸುರಗನ್ನವೀವ ಮೊದಲೆಯುಂಡು |
ಚೆನ್ನಾಗಿಯವನ ಕೊಂದು ಬರುವೆ ಕೇಳೆನ್ನ ಮಾತನಗ್ರಜ |
ನಿನ್ನದಯದಿಂದ ತಮ್ಮನ ಸಾಹಸವ ನೋಡಣ್ಣ |
ಎನ್ನಲಾಶೀರ್ವಾದವಿತ್ತು ತನ್ನ ತಾಯ ಮೊಗವ ನೋಡಿ |
ಇನ್ನು ಪೋಗೆಂದನಗ್ರಜ ||274||