ವಚನ

ಆ ಮರುದಿವಸ ಪ್ರಾತಃಕಾಲದಲ್ಲಿ ಮತ್ತಾ ಕುಮಾರಕರ ಕರೆದು ಏನೆನುತ್ತಿದ್ದನು –

ರಾಗ ದೇಶಿ ಅಷ್ಟತಾಳ

ಮಕ್ಕಳೆಲ್ಲ ಬನ್ನಿರೋ ಎಂದಕ್ಕರಿಂದ ವಕ್ಷವೇರಿ |
ತಕ್ಕು ದಿಕ್ಕು ತದಿಗಿಣ ತೋಂ |
ಎಂದುಕ್ಕುವ ಹರುಷದಿ ಮರನನಲುಗಿಸುವ || ಓಡಿ ಹೋಗುವ ||143||

ತಿರುಗಿ ಆಡಿ ಬರುವ ಮತ್ತೆ | ಕೂಡೆಯಾಡುವ ಬೇಗನೀಡಿ |
ಕರವನಾಗ ನೀಡಿ ನಂಬುಗೆಯನ್ನು | ಓಡಿ ತಪ್ಪಿಸಿಕೊಂಡು ||
ಓಡಿ ಹೋಗುವನಾಗ ಗಾಡಿಕಾರ ಭೀಮನು ||144||

ಎರಡು ಕರದಿ ನೂರುಕುವರರ ಸೆರಗ ಪಿಡಿದು |
ಮರದಿಂದ ನೆಲಕ್ಕೆ ಕೆಡಹುತಲಿರಲು ದೂರು |
ಧರಣೀಶಗೆ ಬಂದುದನಿತರೊಳಗೆ ||
ಓಡಿ ಹೋಗುವ | ಗಾಡಿ ಭೀಮನು ||145||

ಇಂತು ಮಕ್ಕಳ ಮಾತಕೇಳಿ ಭೂಕಾಂತ ದಟ್ಟಿಸಿ ಕೇಳುವ | ನಿಂತು |
ತಪ್ಪಿಸಿಕೊಂಡು ಪೋಗುವ |
ತನ್ನಯ ಸೆಟೆಯ ಗಾಯವನ್ನೆ ತೋರಿ |
ಕುಂತೀ ಸುತ ತಪ್ಪಿಸಿಕೊಂಡು ಪೋಗುವ ||146||

ರಾಗ ಕೇದಾರಗೌಳ ಏಕತಾಳ

ಕುರುಪತಿ ತನುಜರೆಲ್ಲರು ಬಂದಾಗ | ಮರುತ ಸುತನ ಕಂಡರು ||
ದುರುಳ ಸಿಕ್ಕಿದನೆನುತ | ಆ ಭೀಮನ | ಕರದ್ವಯವ ಬಿಗಿದರಂದು ||147||

ಉರಗನ ವಿಷಗಳನ್ನು ಕಜ್ಜಾಯಕೆ | ಬೆರಸಿ ಇಕ್ಕಿದರಂದು ||
ಹರುಷದಿ ಸವಿದುಂಡನು ಆ ಮಾರುತಿ | ವರ ಸುಧೆಯಾಯಿತೆಂದನು ||148||

ಕಾಳಕೂಟವ ಕೊಟ್ಟರು | ಆ ಭೀಮಗೆ | ಹಾಲುಂಡವೋಲಾಗಲು |
ಬೀಳಿಕ್ಕಿದರು ಜಾಲಕೆ | ಮೇಲೆದ್ದು ಬಂದು | ಕಾಲೊಳು ಕೊಲುತಿದ್ದನು ||149||

ಎಲ್ಲಿ ಕಂಡರು ಮಕ್ಕಳ | ಕರೆ ಕರೆದು | ಕೊಲ್ಲುವ ಮರುತ ಸೂನು ||
ಇಲ್ಲಿರಲಾರೆವೆಂದು | ಗಂಗಾಸುತ | ಗೆಲ್ಲರು ಪೇಳಿದರು ||150||

ವಚನ

ಇಂತೆಂದು ಇವರುಗಳು ಇತ್ತಲಾಗಿ ಈ ಪ್ರಕಾರದಿಂದಿರುತಿರಲಾಗಿ | ಅತ್ತಲಾ ದ್ರೋಣನೈತರು ತಿದ್ದನೆಂತೆನೆ-

ರಾಗ ಸೌರಾಷ್ಟ್ರ ಅಷ್ಟತಾಳ

ಭಾರದ್ವಾಜ ಪುತ್ರ ಧೀರ ದ್ರೋಣಾಂಕ ಕುಮಾರಗೂಡಿ |
ಸೇರಿದ ದ್ರುಪದನ ಪಟ್ಟಣಕೆ ||
ದಡ್ಡಿ ಚಾರರು ನೋಡಿ | ಎಲ್ಲಿಗೆ ಗಮನವೊ ನಿಲ್ಲು ನಿಲ್ಲೆಲವೊ |
ಭೂವಲ್ಲಭನು ಕೊಲುವ ನಮ್ಮನು ಬಲ್ಲಜಾಣಗೆ ತರವಲ್ಲ ಕಾಣೋ ||151||

ವಚನ

ಇಂತೆಂದ ಬಾಗಿಲವರೊಡನೆ ದ್ರೋಣರು ಇಂತೆನುತಿದ್ದನು –

ಕಂದ

ದೊರೆಗಿಂತೆಂದು ವಿವೇಕದಿಂ |
ದರುಹುಗುಂ ದ್ರೋಣಾಂಕನಾಂ ಬಂದಿಹೆ |
ನಿರುತ ಭೋಜನವೆಂಬುದೆ |
ಅಗಲಿದೆ ಪಾಂಚಾಲ ಪುಣ್ಯಾತ್ಮನ ಬರವಾ |
ಗಲರುಹ ಸೇವಕ ಪ್ರಿಯಸಖನಂ |
ಕಂಡಾನು ಸಂತೋಷಿಪೆಂ ದೊರೆಗಿಂತು |
ಪುರದತ್ತ ಪೋಗಿ ಬಳಿಕಾಂ |
ದೈತ್ಯಾರಿ ಕಾವಂ ದಿನಾ ||152||

ರಾಗ ದ್ವಿಪದಿ ಝಂಪೆತಾಳ

ಜೀಯ ಚಿತ್ತವಧಾನ ಜನ್ನಮುನಿಗೆ ಸಮಾನ |
ಆಯಿತೀಕ್ಷಣ ಬಂದ ದಾರಿಯೇನೆಂದ ||153||

ಬಾಲತ್ವ ಸಖನು ಗಡ ಬಡತನವಡಸಿತು ಗಡ |
ಭೂಲೋಲ ವಳಗಿಂದು ಬಿಡಲೇ ಎಂದ ||154||

ವಚನ

ಇಂತೆಂದ ಮಾತ ಕೇಳಿ ದ್ರುಪದ ಏನೆನುತಿದ್ದನು –

ರಾಗ ಸೌರಾಷ್ಟ್ರ ಏಕತಾಳ

ಏನ ಪೇಳಿದೆ ನೀನು | ಮಾನವೇಂದ್ರನು ನಾನು |
ದಾನ ವಿಪ್ರನು ಸಖನೇನೊ ||
ಆನೆಗೆ ಸರಿಯಾಗಿ | ಕಾನನ ನರಿಯು |
ಬಹುದೇನೆಲೊ ದಡ್ಡಿಯ ಚರನೆ ||155||

ಗರುಡ ದೇವನು ಎತ್ತ ಗರಿಯುಳ್ಳ ಹದ್ದೆತ್ತ |
ಉರಗನೆತ್ತಲು ಒಳ್ಳೆಯೆತ್ತ
ತಿರುಕ ಹಾರುವನೆತ್ತ | ಅರಸ ತಾನೆತ್ತಲು |
ಒರೆದೆಲ್ಲೊ ಸಖನೆಂದು ಎನಗೆ ||156||

ಕುಟ್ಟೋ ಬಾಯನು | ಹೊಯ್ಯೋ ನಾಲಿಗೆಯ ಕೊಯ್ಯೋ |
ಕಟ್ಟೋ ಈ ಬಾಗಿಲ ಚರನ ||
ಮೆಟ್ಟಿ ತುಳಿಯೋ ಎಂಬ ಮಾತ ಕೇಳಿ ತಾನಾಗ |
ತಟ್ಟನೆ ಬಂದು ಗರ್ಜಿಸಿದ ||157||

ರಾಗ ದ್ವಿಪದಿ ಝಂಪೆತಾಳ

ತಿರುಕ ಹಾರುವ ನಿನ್ನ ಕಡೆಯಿಂದ ನಾನು |
ಅರಸಿನೊಳು ಎನಿಸಿ ಕೊಂಬುದ ಪೇಳ್ವೆಯೇನು ||158||

ಎನುತ ಕೈವಿಡಿದು ದೂಡಲು ರೋಷದಿಂದ |
ತನಯನನು ಕರಕೊಂಡು ತಟ್ಟನೈತಂದ ||159||

ಮುಟ್ಟಿದರೆ ಕೆಲರ ಕೊಂದೆನು |
ಮುಟ್ಟಿದರಾಗಲೆ ಕೆಲರು ಕೂಗುತ್ತಲಿರಲು ||160||

ಆದಿತ್ಯ ದ್ರೋಣಾಂಕ ನಡೆದನು |
ಒಳಯಕ್ಕೆ ದ್ರುಪದ ಭೂಪನ ಕಂಡನು ||161||

ವಚನ

ಕುರಿಯೆ ನಮ್ಮೊಳು ಮೊದಲು ವಿದ್ಯವ ಕಲಿತ ಚೆನ್ನಿಗನಂ | ನಿನ್ನಡೆಗೆ ಕಳುಹಿ | ತವ ಚರಣಂಗಳಂ ಚೆನ್ನಾಗಿ ಬಿಗಿಸಿ ಕೊಡುವೆನು ಕುನ್ನಿಯೆ ನಿಲ್ಲು ನಿಲ್ಲೆಂದ ದ್ರೋಣ ||

ರಾಗ ಸೌರಾಷ್ಟ್ರ ಅಷ್ಟತಾಳ

ಎಂದುಗ್ರ ಕೋಪದಿ ಸಿಂಧು ನಗರ | ಕೈ ತಂದ ಬೇಗ | ಕುವರರ ||
ವಂದವ ಕಂಡಾಗ ನಂದನ | ಸಹಿತಾಗ | ನಿಂದನಾಗ ||162||

ವಚನ

ಯಮ ತನುಜ ಭೀಮ ಪಾರ್ಥರು ಕೌರವರು ನೂರ್ವರು ಆಟದೆಡೆಯಲ್ಲಿ ವಿಮಲ ಕೂಪದಲ್ಲಿ ಮುದ್ರಾಕ್ರಮವಿಡಿದಿಹ ಉಂಗುರವು ಬೀಳೆ ಕಂಡಿಂತೆಂದರು –

ರಾಗ ಲಹರಿ ಏಕತಾಳ

ನಿನ್ನ ಕೈಯ್ಯ ಸಾಗದೆಂದನೊಬ್ಬ ಕುವರ |
ಕಣ್ಣಸನ್ನೆಯಿಂದಿಳಿದು ಹೊಕ್ಕನಲ್ಲ ನೀರ ||
ಇಳಿದು ಬಾವಿಯಿಂದಲೆದ್ದುಹೊಳೆದನಾಗ | ಅದ |
ತಿಳಿದು ಮತ್ತೊಬ್ಬ ಬಾಲಕ ಸುಳಿದ ಬೇಗ ||
ಘಳಿಲನೆ ಧುಮ್ಮಿಕ್ಕೆ ಎದ್ದು ಹೊಳೆದನಾಗ | ಉಂಗ್ರ |
ವೆಳೆದು ಕೊಡುವೆನೆಂದನರ್ಧ ಭಾಗ ||163||

ವಚನ

ಇಂತೆಂದು ಈ ರೀತಿಯಲ್ಲಿ ಕಟ್ಟಿ ಬಿಡುವದಂ ಕಂಡು ದ್ರೋಣ ಅಶ್ವತ್ಥಾಮಂಗೆ ಕಣ್ಣು ಸನ್ನೆಯಂ ಮಾಡಲಾಗಿ ಏನ ಮಾಡುತ್ತಿದ್ದನು ಎಂದರೆ –

ರಾಗ ಶಂಕರಾಭರಣ ಪಂಚಘಾತ ಮಟ್ಟೆ

ಹುಲ್ಲ ಮಂತ್ರಿಸಿ ಬಿಟ್ಟನಲ್ಲಿ |
ಉಂಗುರವೆಳೆದು ತರಲು ಕುವರ ವಂದ ನೆರೆದು ಹರುಷದಿಂದ ವಂದಿಸಿದರು ||164||

ಎಲ್ಲ ಶರದ ವೇದವನ್ನು ಬಲ್ಲ ಜಾಣರೆಂದು ಪೇಳ್ದ |
ಸೊಲ್ಲ ಕೇಳಿ ಭೀಷ್ಮ ಕರೆಸಿ ನಿಲ್ಲಿರೆಂದನು ||165||

ದೊರೆ ದೊರೆಗಳ ಮಕ್ಕಳೆಲ್ಲ ಬರಲು ಕೋಟಿ ಸಂಖ್ಯೆಯಿಂದ |
ತರ ತರಹದ ಸಾಧನೆಗಳ ಮಾಡುತಿದ್ದರು ||166||

ರಾಗ ದ್ವಿಪದಿ ಝಂಪೆತಾಳ

ಸೂತ ಭವನದಿ ಬೆಳೆದ ಕರ್ಣನೈತಂದು |
ಈ ತರಳರೊಡನೆ ವಿದ್ಯವ ಕಲಿತನಂದು ||167||

ಇಂತೆಲ್ಲ ಕುವರರೊಂದಾಗಿ ಹರುಷದೊಳು |
ಸಂತೋಷದಿಂದ ಕಲಿತಿರಲು ವಿದ್ಯೆಗಳು ||168||

ಧೃತರಾಷ್ಟ್ರಭೀಷ್ಮನೊಳು ಪೇಳೆ ಹರುಷದೊಳು |
ಸುತರ ಪ್ರೌಢಿಕೆಯ ಪೇಳೆಂದು ವಿನಯದೊಳು ||169||

ಆಗೈದು ಯೋಜನಕೆ ನಿಂತುಕೊಂಡವರು |
ಶರಮಲ್ಲ ವಿದ್ಯಗಳ ತೋರೆ ಹರುಷದೊಳು ||170||

ವಚನ

ಆಗಲಾ ಧೃತರಾಷ್ಟ್ರಏನೆನುತಿದ್ದನು –

ರಾಗ ಲಹರಿ ಏಕತಾಳ

ಅರರೆ ಕುಮಾರರು ದಿಟ್ಟರು | ನಗುತ |
ಗುರುವಿಗುಡುಗೊರೆಯನಿತ್ತರು ||
ಶರದೊಳರ್ಜುನನೀಗ ಜಾಣನು | ಇವನ |
ಸರಿಬಹ ಕರ್ಣನೊಡ್ಡಾರನು ||
ದೊರೆ ಕುಮಾರರು ಮತ್ತೆ ಸಾಕಯ್ಯ | ನಮ್ಮ |
ಕುರುವಂಶಕ್ಕೆಣೆಯುಂಟೆ ನೋಡಯ್ಯ ||171||

ಮಲ್ಲಯುದ್ಧದಿ ಭೀಮ ನಿಪುಣನು | ಇವನು |
ಬಲ್ಲಿದನಹುದು ಕರುರಾಯನು ||
ಎಲ್ಲ ಸುತರು ಸುಗುಣವಂತರು | ನಗುತ |
ಅರರೆ ಕುಮಾರರು ದಿಟ್ಟರು ||172||

ವಚನ

ಆಗಲಾ ಧತರಾಷ್ಟ್ರನು ಪೇಳಲಾಗಿ ಕುಮಾರರೊಡನೆ ದ್ರೋಣ ಏನೆನುತಿದ್ದನು –

ರಾಗ ಕೇದಾರಗೌಳ ಏಕತಾಳ

ಭಲರೆ ಮಕ್ಕಳಿರೆಲ್ಲ ಕುಲತಿಲಕಗಳು ನೀವು |
ಇಳೆಯೊಳು ಚೆಲುವ ರಾಜರು ನೀವೆನೆ ||
ಇಂತು ಭೂಪಾಲರೆಲ್ಲ ಕೇಳ್ದು ಸಂತೋಷದಿಂ |
ತಮ್ಮ ಗಹಾಂತರಕೈದಲು ದ್ರೋಣ |
ನಿಂತ ಶಿಷ್ಯರ ತಿಂಥಿಣಿ ಕಂಡು ತನ್ನ
ಪಂಥದ ನುಡಿಯ ನೆನೆದು |
ದಂತಿಪುರದರಸರೊಳು ಇಂತೆಂದನಾಗ ||173||

ಎಲ್ಲ ಮಕ್ಕಳೆಲ್ಲ ಬನ್ನಿ ಸೊಲ್ಲ ಕೇಳಿ |
ಗುರುದಕ್ಷಿಣೆಯಲ್ಲಿ ನನ್ನೊಡಂಬಡಿಸಲಿಲ್ಲವೆಂದು |
ಬಲ್ಲಿದರು ನೀವೆಂದೆವೇನಿಲ್ಲವೇ |
ನೀವೇನ ಪೇಳ್ದರು ಇಲ್ಲವೆಂದೆವೆ ನಿರೂಪಿಸೆಂದರು ||174||

ವಚನ

ಆಗಲಾ ದ್ರೋಣ ಏನೆನುತ್ತಿದ್ದನೋ – ಮಕ್ಕಳಿರಾ ಕೇಳಿರಯ್ಯ ಚಿಕ್ಕಂದೆಮ್ಮೊಡನೆ ವಿದ್ಯವ ಕಲಿತ ದ್ರುಪನ ಗಹಕ್ಕಾನು ಪೋಗೆ ಎನ್ನನುಂ ಧಿಕ್ಕರಿಸಿ ನುಡಿದನು ಆ ಸಮಯದಿ –

ಝಂಪೆ

ಎನ್ನೊಡನೆ ವಿದ್ಯವ ಕಲಿತ ಚೆನ್ನಿಗನ ಕೈಯಿಂದ |
ನಿನ್ನ ಬಿಗಿತಹೆನೆಂದು ಭಾಷೆ ಪೇಳಿದೆನು ||175||

ಆ ಮಾತ ಸಲಿಸಿ ಕೊಡಬೇಕೆಂದು ಪೇಳೆ |
ಭೂಪಾಲಸೂನು ಕೌರವನು ಎದ್ದ |
ಬಳಿಕಿಲ್ಲಿ ತಹೆನೆಂದನುಜರೊಡನೆ ಸಂತಸದಿ ಬಂದ ||176||

ವಚನ

ಆಗಲಾ ಕುರುಪತಿ ಪಾಂಚಾಲಪುರಮಂ ಪೊಕ್ಕು ಏನುಮಾಡುತ್ತಿದ್ದನು –

ಶಂಕರಾಭರಣ ಪಂಚಘಾತ ಮಟ್ಟೆತಾಳ

ನಮ್ಮ ಗುರುವಿನಾ | ಹೆಮ್ಮೆಯಿಂದಲಿ |
ಒಮ್ಮೆ ಬಯ್ದ ಪಾಪಿ ಬರಲಿ ಘಮ್ಮನೀಕ್ಷಣ ||177||

ಕೊಲ್ಲುವೆನೆಂದ | ಮಾತ ಕೇಳುತ |
ತೊಟ್ಟುಶರವ ಕೌರವನಿಗೆ ಬಿಟ್ಟನಾಕ್ಷಣ ||178||

ಬಾಣತಾಗಲು | ಕ್ಷೋಣಿಪಾಲರು |
ತ್ರಾಣಗುಂದಿ ತಮ್ಮ ಪುರಕೆ ಮಾಣದೈದಲು ||179||

ಬಂದು ಗುರುವಿನಾ | ಮುಂದೆ ನಿಂದನು |
ಇಂದ್ರಸುತನನೋಡೆ ಗುರುವಿಗೊಂದಿಸಿದನು ||180||

ಎಲ್ಲಿ ಹೋದನೊ | ಎನುತ ಕಟ್ಟಿದ |
ನಿಲ್ಲು ಎನುತ ಪಾಂಚಾಲನ ಮನೆಯ ಹೊಕ್ಕನು ||181||

ಎಲ್ಲಿ ಚೋರನು | ಎನುತ ಕಟ್ಟಿದ |
ನಿಲ್ಲದಾಗ ಗುರುವಿನೆಡೆಗೆ ತಂದು ಚಾಚಿದ ||182||

ವಚನ

ಇಂತೆಂದು ಆಗ ದ್ರೋಣ ಏನೆನುತಿದ್ದನು –

ರಾಗ ಮಾರವಿ ಏಕತಾಳ

ಅಮ್ಮಮ್ಮ ಇವ ದೊಡ್ಡ ಹೆಮ್ಮೆಯ ರಾಯನು |
ನಮ್ಮ ಪಾದಕ್ಕೆ ಬೀಳಬಹುದೆ ||
ನಮ್ಮ ನಿಂದಿಸಿದಂಥ ಎಮ್ಮೆಯ ಪುತ್ರನು |
ದಮ್ಮಯ್ಯ ನೋಡೆಂದ ಪಾರ್ಥ ||183||

ಏನೆಲೊ ಇಂದ್ರಜ ನೀನಿಂದಿವನ ಕಟ್ಟಿದೆ |
ನೋಡಲಾರೆನೆಂದನಾ ದ್ರೋಣ |
ಹೀನ ತಪ್ಪಿದರೇನು ಪಾಪಗಳಿಲ್ಲ |
ದ್ರೋಣ ನೋಡೆಂದನರ್ಜುನನು ||184||

ತಿರುಕ ಹಾರುವ ನಾನು ಚರಣಕ್ಕೆ ಬೀಳುವರೆ |
ಮರೆತನು ಮುನ್ನಿನ ಮಾತ ||
ಗುರುದ್ರೋಹಿ ಪರಸತಿಯರನು ಚಿಂತಿಸುವಗೆ |
ಅರುವೆ ಮರವೆಗಳು ಸಹಜ ||185||

ಪುರುಹೂತ ನಂದನ ದುರುಳನ ಕಳುಹೆಂದು |
ಗುರು ಪೇಳಲಾಕ್ಷಣ ಬಿಟ್ಟು ||
ಅರಸಾದ ದ್ರುಪದ ರಾಯನು ಮರುಗುತ್ತ |
ತನ್ನ ಪುರವ ಹೊಕ್ಕನು ಚಿಂತಿಸುತ ||186||

ರಾಗ ಕೇತಾರಗೌಳ ಏಕತಾಳ

ಏನಮಾಡಲಿ ನಾನಿಂದು | ಶಿವನೆ ನಾ
ನೇನ ಮಾಡಲಿ ನಾನಿಂದು ||
ಏನಮಾಡಲಿ ಎನ್ನ ಮಾನಭಂಗವ ಮಾಡಿ |
ಆ ನರ ಕಟ್ಟಿದ ದ್ರೋಣಗೆ ಯೋಚಿಸಿದ || ಏನ … ||187||

ಎನ್ನ ಕಟ್ಟಿದ ದೊಡ್ಡ ಚೆನ್ನಿಗನಿಗೆ ಒಬ್ಬ |
ಕನ್ನಿಕೆಯನೀಯದೆ ಇನ್ನಿರಲಾರೆ |
ಆತನ ಗುರುವನು ಘಾತಿಸುವ ಪುತ್ರನ |
ವೀತಿ ಹೋತ್ರನಾದರು ತಾ ತನಗೀಯನೆ || ಏನ … ||188||

ವಚನ

ಇಂತೆಂದು ಪಾಂಚಾಲಭೂಪ ಯಾಜೋಪಯಾಜಕರಿಂದ ಯಜ್ಞಮುಖದಿಂದ ಪಡೆದಿರುತ್ತಿರಲಿತ್ತಲಾಗಿ ಕೌರವ ಏನೆನುತಿದ್ದನು –

ರಾಗ ದ್ವಿಪದಿ ಝಂಪೆತಾಳ

ಜನನಿ ಯಾತಕೆ ಪೆತ್ತಳೆಂದು |
ಈ ಭೂಮಿಯೊಳು ವನಜ ಭವ ಏನೆಂದು ||189||

ಬರೆದ ಫಣೆಯೊಳಗೆ ಪಾಂಚಾಲ |
ಭೂಪನ ಕಟ್ಟಿ ತಂದನಾ ಪಾರ್ಥ ||190||

ಚಂಚಲ ಮನದಿಂದ ಹೆದರಿ |
ಬಂದೆನೆಂದು ಇದಕೆ ಪ್ರಾಯಶ್ಚಿತ್ತವೇನೆಂದು ಶಕುನಿಯನು ||191||

ಮುದದಿಂದ ಬೆಸಗೊಂಡ ಆತನುಸುರಿದನು |
ಪಾಂಡು ಭೂಪರ ನೀನು ಹಲವು ಬಗೆಯಿಂದ |
ರೂಪಗೆಡುವ ತೆರನ ಮಾಡಬೇಕೆಂದ ||192||

ಎಂದ ಮಾತುಳನಿಗೆ ವಂದಿಸಿ ಕೌರವನು |
ಚಂದದಿಂದರಗಿನ ಮನೆಯ ಮಾಡಿದನು ||193||

ವಚನ

ಇಂತೆಂದು ಅಂಧಭೂಪತಿ ತನ್ನವರೊಳೊಂದಾಗಿ ಕಳಿಯದು ಎಂದು ಪೇಳ್ದನಾಗ –

ರಾಗ ಶಂಕರಾಭರಣ ತ್ರಿವುಡೆತಾಳ

ಇಂದು ನಿಮ್ಮೈವರಿಗೆ ಅರಮನೆ |
ಯೊಂದಿಹುದು ನೀವೆಲ್ಲವೈದುವು
ದೆಂದು ಪೇಳಲು ಕೇಳಿ ಬಂದರು ಕುವರರಾಗ ||194||

ಇವರು ಕುಟಿಲವದೇನು ಬಲ್ಲರು |
ಅವರು ಸಂಭ್ರಮದಿಂದ ರಾಜ |
ಭವನದೊಳಗೀರೇಳು ತಿಂಗಳು ಮೇಲೆ ಒಂದು ದಿನ ||195||

ವಚನ

ಕಂಡು ಕುರುಪತಿ ಪುರೋಚನಂ ಅರಗಿನಮನೆಗೆ ಅಗ್ನಿಯನಿಕ್ಕುಯೆನಲಾ | ದುರುಳನೈತಂದು  ವೈಶ್ವಾನರನಂ ಮುಟ್ಟಿಸೆ ಜ್ವಾಲೆ ನೆಗೆಯಿತ್ತು ನಭವಾ | ತಿರುದುಂಡು ಒಬ್ಬ ಕನ್ನೆ ತರಳರೈವರಂ ಕೂಡಿಕೊಂಡಾ ಗಹದೊಳು | ಮೈಮರದು ಮಲಗಿರಲು ಸುರತರುಣಿಯರೊಡನೆ ಸಂದರೇನು ವಿಚಿತ್ರವೋ | ಆಗಲಾ ಧರ್ಮಜ ಮೊದಲಾದವರೆಲ್ಲ ಏನು ಮಾಡುತ್ತಿದ್ದರು –

ರಾಗ ಶಂಕರಾಭರಣ ತ್ರಿವುಡೆತಾಳ

ಕುಂತಿಯಾತ್ಮಜರೆಲ್ಲ ಆ ದಿನ |
ಕಂತು ಜನಕನ ಪದಕೆ ನಮಿಸಿ ಗ |
ಹಾಂತರದಿ ಮಲಗಿರಲು ಬಂದನು ವೀತಹೋತ್ರ ||196||

ಭಿತ್ತಿಗಳು ಜರಿಜರಿದು ಬಿದ್ದವು |
ಮತ್ತೆ ನೆಲಗಟ್ಟುಗಳು ಬೆಂದವು |
ಇತ್ತ ನೋಡೆ ಕವಾಟಗಳ ನೆಲೆ ಕಾಣದಾಯ್ತು ||197||

ಶಿವ ಶಿವಾ ಎನುತೆದ್ದು ಭೀಮನು |
ಅವನಿಪನು ಸಹಿತೈದು ಮಂದಿಯು |
ನವಕವಾಟವ ತೆಗೆದು ಹೊಕ್ಕನು ಘೋರ ಕಾನನಕಾಗಿಯು ||198||

ಬರುತ ಬಟ್ಟೆಯೊಳಲ್ಲಿ ಭೂಪನ |
ಚರಣ ಜರಿದುದು ಪಾದ ನೊಂದುದು |
ಮರುಗಿದರು ಮಾದ್ರಿಜರು ಕುಂತಿಯು ನಿಂದಳಲ್ಲಿ ||199||

ಇನಿತು ಸಂಕಟವೆತ್ತಿತೆಂದರು |
ಅನಿಲನಂದನನಾಗಲೈವರು |
ಘನ ಭುಜಾಗ್ರದೊಳೌಕಿ ನಡೆದನು ಕಾನನದಲಿ ||200||

ವಚನ

ಇಂತೀ ತೆರದಿಂ ಬಂದು ಭೀಮನು ಒಂದು ವಟವಕ್ಷದಡಿಯಲ್ಲಿ ಇವರನೆಲ್ಲ ಮಲಗಿಸಿ ಕಾದಿರಲು ಆ ವನದರಸ ಹಿಡಿಂಬ ನರಮನುಜರ ಕಂಪನಾಘ್ರಾಣಿಸಿ ತನ್ನ ತಂಗಿಯೊಡನೆ ಏನೆನುತಿದ್ದನೋ –

ರಾಗ ದ್ವಿಪದಿ ಝಂಪೆತಾಳ

ಕೇಳೆನ್ನ ಬಂಗಾರೆ ಕೇಳಿತ್ತ ಬಾರೆ |
ಏಳು ಮುಂದಿಹರಾರು ನೋಡಿ ನೀ ಬಾರೆ ||201||

ಎನಲು ಹಾ ಎನುತಂದು ಎನ್ನ ಪುಣ್ಯವೆ ಯೆಂದು |
ಅನಿಲಜನ ಇದಿರೆ ಬಂದಾಗಲ್ಲಿ ನಿಂದು ||202||

ಮರುತಾತ್ಮಜನ ನೋಡಿ ಮತ್ತೆ ಮಮತೆಯ ಮಾಡಿ |
ಸರಸ ವಾಕ್ಯವನಾಡಿ ಸುಳಿದಳಾ ಪ್ರೌಢಿ ||203||

ರಾಗ ಪಾಡಿ ಏಕತಾಳ

ಬಂದು ರಕ್ಕಸಿ | ಭೀಮನ || ಮುಂದೆ ನಿಂದಳು |
ಎತ್ತಣಿಂದ ಬಂದಿರಯ್ಯ | ಚಿತ್ತಜರೂಪರು ನೀವು |
ಸುತ್ತಮಲಗಿಹರಾರೆನ್ನುತ್ತ ಕೇಳಿದಳು ||204||

ಉತ್ತರವ ಕೊಡದೆ ಭೀಮ | ಮತ್ತವಳ ನೋಡದಿರ್ದರು ಸಾರಿ |
ಉತ್ತುಂಗ ಕುಚವ ತೋರಿ | ಹತ್ತಿರಕೆ ಸಾರಿ ||205||

ಯಾರೆಂದು ಕೇಳುವ ವಿಚಾರವೇತಕತ್ತ ಸಾರೆ |
ನಾರಿ ನೀನ್ಯಾವಳೆಂದು ಮಾರುತಿ ಕೇಳೆ |
ಧೀರ ಹಿಡಿಂಬನನುಜೆಯರು ಮುರಿದು ತಿಂಬೆನೆಂದು
ಸಾರಿ ಬಂದು ಸೋತೆ ನಿನ್ನ ಮೂರುತಿ ಕಂಡು ||206||

ನೀನು ನಾನೊಂದಾಗಿರುವಾಗ | ನಾನಾರ ತಿನ್ನಲಿ ಈಗ |
ಏನ ಬೇಡಿದರು ನಿನಗೀವೆಂದಳು ||207||

ಮಾನಿನಿಯ ಮಾತ ಕೇಳಿ | ತಾನೆದ್ದು ನಿಂತನಿಲಜ
ಮೌನವ ತಾಳಿರೆಂದು | ಪೇಳಿದ ನುಡಿಯ ಕೇಳಿ || ||208||