ರಾಗ ಮಾರವಿ ಅಷ್ಟತಾಳ

ಅಕ್ಕ ತಂಗಿಯರಿಬ್ಬರಂದು | ನಸು |
ನಕ್ಕು ದೇವರ್ಕಳಿಗೆರಗುತ್ತ ನಿಂದು ||
ಅಕ್ಕ ಕುಂತಿಯು ಮಾದ್ರಿದೇವಿಯರನ್ನು ಕರೆದು |
ತನ್ನ ಸಂತೋಷದಿಂದೊಂದು ಮಂತ್ರವಿತ್ತುದನ್ನು |
ತಾ ತನ್ನ ಜಿಹ್ವೆಗಂದದನು ಕೊಂಡು ||
ಚಿಂತಿಸುತಿರ್ಪಳಶ್ವಿನೀ ದೇವರನ್ನು ||
ಅಕ್ಕ ತಂಗಿಯರವರಿಬ್ಬರಂದು ||55||

ವಿನಯದಿ ಮಾದ್ರಿಯನೀಕ್ಷಿಸಲಂದು ||
ತನಯರು ದ್ವಯರಾಗಲೆಂದು | ಪೇಳಿ |
ತೆರಳಿದರತ್ತ ಹರುಷವ ತಂದು ||
ಅಕ್ಕತಂಗಿಯರವರಿಬ್ಬರಂದು ||56||

ರಾಮ ಲಕ್ಷ್ಮಣರ ಕಂಡಂತೆ | ಬಲ |
ರಾಮ ಕೃಷ್ಣರನು ಪೋಲುವರೆಂಬಂತೆ ||
ಭೂಮಿಯೋಳ್ಪೆತ್ತಳಾ ಕಾಂತೆ | ಜಗದಿ |
ಭೂಪನಿಗಿನ್ನಾರು ಎಣೆಯಿಲ್ಲವೆಂಬಂತೆ ||
ಅಕ್ಕತಂಗಿಯರವರಿಬ್ಬರಂದು ||57||

ವಚನ

ಇಂತೆಂದು ಜನಿಸಿದ ಕುಮಾರಕರಂ ಕಂಡು ಕುಂತಿ ಮಾದ್ರಿಯರು ಭೂಕಾಂತನೆಡೆಗೆ ಬಂದರದೆಂತೆನೆ-

ರಾಗ ಮಧುಮಾಧವಿ ಏಕತಾಳ

ಕುಂತಿ ಮಾದ್ರಿಯರು | ಕರೆತರಲು ಹರುಷದೊಳು |
ಸಂತೋಷದಿಂದ ಭೂಕಾಂತನ ಬಳಿಗೆ ||
ನಿಂತಿಹ ಹದನನು ಸಂತಸದಿ ತಿಳಿದು |
ಸಂತತಿಗಳ ಯತಿಗಳಿಗೆ ತೋರಿಸಿದ ||58||

ವರ ಧರ್ಮಸುತ ಭೀಮನರ್ಜುನ ನಕುಲ |
ಕಿರಿಯಾತ ಸಹದೇವ ನೋಡು ಭೂಪಾಲ ||59||

ಕರುಣದಿ ಧರಣಿ ಸುರರನ್ನು ಕರೆಸಿ |
ನಾಮಕರಣ ವಿರಚಿಸಿ ಗುರುಮುಖದಿಂದ ||
ಬರಹವ ಕಲಿಸುತ ಕರಿಪುರದೊರೆಯು |
ತರುಣಿಯರೇಳ್ಗೆಯ ನೋಡಿ ಕಂಡು ಹಿಗ್ಗಿದನು ||60||

ವಚನ

ಇಂತೀ ಇಂದುಕುಲ ತಿಲಕ ಛಲದಂಕ ಧರ್ಮಜ, ಭೀಮ ಫಲುಗುಣ ಯಮಳರಿರುತಿರೆ | ಇಂತೀ ಪಾಂಡುಭೂಪಾಲನ ಸಂತತಿಗಳೆಲ್ಲ || ಹಣ್ಣ ಸಂತೋಷದಿಂದಲೆ ಕೊಯ್ದು ಕುಂತಿಗೀಯಲು ಕಾಂತೆ  ನಸುನಗುತ ಭೂಕಾಂತಗೆಕೊಟ್ಟರೆ ಲಕ್ಷ್ಮೀಕಾಂತ ರಕ್ಷಿಸೆನುತ್ತಲನಂತ ಮೋಹದಿಂ ಇಂತಿರುವ ಸಮಯಾಂತರದಲ್ಲಿ ಮನ್ಮಥನೈತರುತಿರ್ದನದೆಂತೆನೆ –

ರಾಗ ಶಂಕರಾಭರಣ ತ್ರಿವುಡೆತಾಳ

ಎಳೆದಳಿರು ಮಾಮರನನೀಕ್ಷಿಸಿ |
ಪೊಳೆವ ಕೇತಕಿಯೊಲವ ನೋಡುತ |
ಅಳಿಯ ಬಳಗವ ಕೂಡಿಕೊಂಡೈ | ತಂದ ಮದನ ||61||

ಸಂಗಡಕೆ ಮರಿದುಂಬಿ ಮಾರುತ |
ಮುಂಗಡೆಯ ಫಲವಕ್ಷ ನೋಡುತ |
ತಿಂಗಳಿನ ಮೇಳದಲಿ ಬಂದು | ಪಂಚಶರನು ||62||

ಮಂದ ಮಾರುತನೆಂಬ ರಥ ಮುದ |
ದಿಂದಲೊಪ್ಪುವ ಕಬ್ಬು ವಿಲ್ಲನು |
ಇಂದಿವರ ಬಾಣವನು ಪಿಡಿದೈ | ತಂದ ಸ್ಮರನು ||63||

ಬಂದು ಮನ್ಮಥ ಪಾಂಡು ಭೂಪನ |
ಅಂದುವೀಕ್ಷಿಸಿ ಶರವನೆಸೆಯಲು |
ಇಂದುಮುಖಿ ಮಾದ್ರಿಯನು ನೆನದಿಹ | ಸಮಯದಲ್ಲಿ ||64||

ರಾಗ ದ್ವಿಪದಿ ಝಂಪೆತಾಳ

ಅಕ್ಕನ ಸಮೀಪದಿಂದಗಲುತ್ತಲಿರಲು |
ಮಕ್ಕಳಿಗೆ ಮೊಲೆಯೂಡಿ ಪತಿಯೆಡೆಗೆ ಭರದಿ ||65||

ಬರಲು ನೂಪುರ ರವಗಳನು ಕೇಳಿ ಋಷಿಯ |
ವರ ಸಮೂಹವು ನಡುಗುತಿರೆ ಬಂದಳಾಗ ||66||

ಕಂಡನಾ ಭೂಪಾಲ ಕಾಮಿನಿಯವಯವ |
ಪುಂಡರೀಕದ ಬಾಣ ತಾಗೆ ಭೂಪತಿಯು ||67||

ಇವಳು ರಂಭೆಯೊ ಊರ್ವಶಿಯೊ ತಿಲೋತ್ತಮೆಯೊ |
ವಿವರಿಸುವಡಳವಲ್ಲಯೀಕ್ಷಿಸಲು ಸತಿಯೊ ||68||

ಎಂದು ಮನದೊಳು ರಾಯ ಕಳವಳಿಸುವಾಗ |
ಬಂದು ಮಾದ್ರಿಯ ಸೆರಗ ಪಿಡಿದ ತಾ ಬೇಗ ||69||

ವಚನ

ಅತ್ತಲಾ ಮಾದ್ರಿ ಏನೆನುತಿದ್ದಳೂ –

ರಾಗ ಲಹರಿ ಏಕತಾಳ

ಮುಟ್ಟಬೇಡಯ್ಯ ಪಾಂಡು ಭೂಪಾಲ | ಮಹಮುನಿ |
ಕೊಟ್ಟ ಶಾಪ ತಾ ಪೋಪುದೇನೋ ಭೂಪಾಲ ||
ಮುಟ್ಟದಂದಿಂದಿಗು ಭೂಪಾಲ | ವಾಲೆಯಿಟ್ಟು ಗುಟ್ಟಿನೊಳಿರ್ದೆ ಭೂಪಾಲ ||70||

ಮಂದ ಮಾರುತನಲ್ಲೆ ಎಲೆ ಮಾದ್ರಿ | ಕಣ್ಣ |
ಮುಂದೆ ಬಂದಿತಲ್ಲೆ ಭಂಗ ಎಲೆ ಮಾದ್ರಿ ||
ಎಂದಿನ ಹಾಗಲ್ಲ ಕಾಣೆ | ಎಲೆ ಮಾದ್ರಿ | ಇಂದು |
ಬಂದುದು ಬರಲೆನಗೆ ಎಲೆ ಮಾದ್ರಿ ||71||

ಮಕ್ಕಳಿಗಿನ್ನೇನುಗತಿಯೋ ಭೂಪಾಲ | ಎನ್ನ |
ತಕೈಸಲುಳಿವೆಯೇನೋ ಭೂಪಾಲ ||
ಎಕ್ಕ ಸೊಕ್ಕಿದೇತಕ್ಕಯ್ಯ ಭೂಪಾಲ | ಕು
ಚಕ್ಕೆ ಕಯ್ಯನಿಕ್ಕ ಬೇಡಯ್ಯ ಭೂಪಾಲ ||72||

ಇಂಥ ಮಾತುಗಳೇಕೊ ಭೂಪಾಲ | ಅಕ್ಕ |
ಕುಂತಿ ಸಿಟ್ಟಿ ಮಾಡಳೇನೋ ಭೂಪಾಲ ||
ಕಂತುವ ನಚ್ಚುವರೇನೊ ಭೂಪಾಲ | ಈ |
ಚಿಂತೆಯ ಬಿಟ್ಟೆನ್ನ ಬಿಡೊ ಭೂಪಾಲ ||73||

ವಚನ

ಇಂತೆಂದು ರಾಯ ಏನೆನುತಿದ್ದನೂ –

ರಾಗ ಭೈರವಿ ತ್ರಿವುಡೆತಾಳ

ಎನ್ನ ಮೇಲಿನಿತೇಕೆ ಕೋಪವು | ಏಣಲೋಚನೆ ಕೇಳೆಲೆ |
ನಿನ್ನ ಕಾಣದೆ ನಾನು ಚಿಂತಿಪೆ | ನಿತ್ಯ ಬಳಲಿದೆ ಭಾಮಿನಿ ||
ವನಕೆ ಬಹ ಸಮಯದಲಿ ನಿನ್ನನು | ಒಡನೆ ಬರಬೇಡೆಂದೆನೆ |
ಬಂದ ಮನ್ಮಥ ಬಂದ ನೋಡೆ ||74||

ವನಿತೆ ಕುಂತಿಯ ಮೇಲಣಾಶೆಗಳಿಂದ ನಿನ್ನನು ಬೈದೆನೆ |
ಮನುಮಥನ ಶರದಿಂದ ಬಂದರೆ ಮುಗುದೆ ನೀ ಪೋಗೆಂದೆನೆ |
ಇನಿತು ಮುನಿಯುವದೇನು ಭಾಮಿನಿ | ಇನ್ನು ಸೈರಿಸಲಾರೆನೆ |
ಬಂದ ಮನ್ಮಥ ಬಂದ ನೋಡೆ ||75||

ವಚನ

ಇಂತೆಂದ ಭೂಕಾಂತನೊಡನೆ ಮಾದ್ರಿ ಏನೆನುತಿದ್ದಳು –

ರಾಗ ಭೈರವಿ ಅಷ್ಟತಾಳ

ಸರಸ ಸಾಕಯ್ಯ ಧೀರ | ಮುಗಿವೆ ನಾ ಕಯ್ಯ ||
ಮಾರಶರಕೆ ನೀ ಮಯ್ಯ | ಮಾರಬೇಡವೊ ದಮ್ಮಯ್ಯ ||76||

ಅಕ್ಕನೊಡನೆ ಪೇಳಲಿಲ್ಲ | ಎನ್ನ ಮಕ್ಕಳ ಕೂಡಾಡಲಿಲ್ಲ |
ತಕ್ಕಿಸಬೇಡ ಮತವಲ್ಲ | ಮುಕ್ಕಣ್ಣ ಶಿವನೆ ಬಲ್ಲ ||77||

ಎಲ್ಲ ಬುದ್ಧಿಯ ನೀಬಲ್ಲೆ | ಏನೆಲೊ ನಿನ್ನೆದೆ ಕಲ್ಲೆ |
ತಲ್ಲಣವೇಕೆನ್ನ ಸೊಲ್ಲ | ಎಳ್ಳಷ್ಟಾದರು ಕೇಳಲೊಲ್ಲೆ ||78||

ವಚನ

ಇಂತೆಂದು ಮಾದ್ರಿಯೆನಲಾಗಿ ರಾಯ ಏನೆನುತಿದ್ದನು –

ರಾಗ ಶಂಕರಾಭರಣ ಅಷ್ಟತಾಳ

ಕೇಳುವೆ ಮಾದ್ರಿ ನಿನ್ನ ಮಾತನಿಂದು | ತಾಳಲಾರೆ ||
ನಾಳೆ ಬಂದುದನನುಭವಿಸಿಕೊಂಬೆನು ನಾನು | ತಾಳಲಾರೆ ||ಪಲ್ಲವಿ||

ಜನಿಸಿದಾರಭ್ಯದಿಂಥ ತಾಪಗಳಿಲ್ಲ | ತಾಳಲಾರೆ ||
ಮನುಮಥನೆನ್ನ ಮೇಲೆಸೆದ ಶರಗಳನ್ನು ತಾಳಲಾರೆ ||
ವನಜಭವನ ಲಿಖಿತ ತಪ್ಪಿಸುವರಾರೆ | ತಾಳಲಾರೆ ||
ಮುನಿ ಶಾಪವು ಏನಮಾಡಬಲ್ಲದು ನೀರೆ | ತಾಳಲಾರೆ ||79||

ಹುಟ್ಟಿದ ಮನುಜರು ಸ್ಥಿರಜೀವಿಯಹರೇನೆ | ತಾಳಲಾರೆ ||
ನೆಟ್ಟನೆನ್ನೀಕ್ಷಿಸು ನೆರೆಯೆ ಮೋಹವ ಮಾಡು | ತಾಳಲಾರೆ ||
ಬಟ್ಟ ಕುಚದ ನೀರೆ ಭಾವ ಮೊಗವ ತೋರೆ | ತಾಳಲಾರೆ ||
ಪಟ್ಟೆ ಶಾಲೆಯನುಟ್ಟ ಚಂದವ ಕಂಡು | ತಾಳಲಾರೆ ||80||

ವಚನ

ಈ ರೀತಿಯಿಂದ ಭೂಪಾಲ ಪೇಳಲಾಗಿ ಮಾದ್ರಿ ಏನೆನುತಿದ್ದಳು –

ರಾಗ ಕಾಂಭೋಜಿ ಝಂಪೆತಾಳ

ಇನಿತೇಕೆ ಮರುಳಾದೆ ಏ ಪಾಂಡು ಭೂಪಾಲ |
ಘನ ಕುಚವ ನೀ ಮುಟ್ಟಬೇಡ ಪಾಂಡು ಭೂಪಾಲ ||
ಮನುಮಥನಲಗೆ ಮುನ್ನ | ಮೋಹವನ್ನಂತರಿಸಿ
ಇನಿಯನೀ ಮಾತಕೇಳು ತಾಳು ||81||

ಶತಮಖವ ಮಾಡಿ ಭೂಲೋಕದೊಳು ಶ್ರೀಹರಿಯ
ನತಿ ಭಕುತಿಯಿಂದ ಭಜಿಸಿ |
ವ್ರತ ನಿಯಮ ಸ್ನಾನ ಹೋಮಗಳಿಂದ ನಿತ್ಯ ಬಂದ
ತಿಥಿಗಳ ಪೂಜೆ ರಚಿಸಿ ||
ಯತಿಗಳೊಡನೈದಿ ಆ ಸುರ ಪಟ್ಟವನು ತಾಳ್ದು ಸುರ |
ಸತಿಯರೆಲ್ಲರ ಭೋಗಿಸಿ | ಸಾಲ
ದತುಳ ಗೌತಮನರಸಿಯನು ನೆರೆದ ದೇವೇಂದ್ರ |
ವ್ರತಗೆಟ್ಟನೆಂದು ಕಂಡು ಪಾಂಡು ||82||

ವಚನ

ಇಂತೆಂದು ಮಾದ್ರಿಯೆನಲಾಗಿ ರಾಯ ಏನೆನುತಿದ್ದನು –

ರಾಗ ದ್ವಿಪದಿ ಝಂಪೆತಾಳ

ಯಾಕೆ ನೀ ಬರಿ ಮಾತನೆಂಬೆ ಏಣಾಕ್ಷಿ |
ನಾ ಕಯ್ಯ ಬಿಡಲಾರೆ ನರಹರಿಯೆ ಸಾಕ್ಷಿ ||83||

ಮಾದ್ರ ದೇಶಾಧಿಪನ ಮಗಳೆ ಮತ್ತೇನೆ |
ಮಾದ್ರಿ ಬಾ ಮನುಮಥನ ಮದನ ಮದ್ದಾನೆ ||84||

ಯಾತ ಕುಚಗಳ ಮೇಲೆ ಎಳೆಯ ಚಂದಿರನ |
ನೀತಿಯಂ ನಿಲಿಸಿದನೊ ಗಳಿಗೆಯಲಿ ಸ್ಮರನ ||85||

ಶರತಾಗೆ ಪಾಂಡುವಿನ ಸ್ತ್ರೀ ಬಲಾತ್ಕರದಿ |
ನೆರೆವ ಸಮಯಾಂತರದಿ ಕೆಡೆ ನಡೆದು ಭರದಿ ||86||

ದೂರದಲಿ ನಿಂತಿರುವ ಸತಿಯಳನು ಕಂಡು |
ಮಾರನಂಬಿನ ಗಾಯದಿಂದ ಮನನೊಂದು ||87||

ವಚನ

ಇಂತೆಂದು ರಾಯನು ವಿರಹವೇದನೆಯಿಂದಲೋರ್ವ ಸಖಿಯಂ ಕರೆದು ಏನೆನುತಿದ್ದನು –

ರಾಗ ನೀಲಾಂಬರಿ ಏಕತಾಳ

ಸರಸಿಜನೇತ್ರೆ ಬಾರೆ | ನಾ ತಾಳಲಾರೆ |
ಸ್ಮರಬಾಧೆ ಘನವಾಗಿದೆ ||
ಕಿರಿಯ ಸ್ತ್ರೀ ಮಾದ್ರಿ ಬಂದು | ಎನ್ನಿದಿರೆ ನಿಂದು |
ಕುರುಳ ನೇವರಿಸುತಂದು ||
ಗುರುಕುಚಗಳನೆ ತೋರಿ | ಮರೆಗೆಮಾಡಿ |
ತಿರುಗಿದಳೇತಕೆ ನಾರಿ ||88||

ಮುನಿಶಾಪ ಬಂದಿತೆನುತ | ಮಾನಿನಿಯನ್ನೊ |
ಳ್ಮುನಿದು ಮುಟ್ಟಿದಿರೆನ್ನುತ |
ಘನತಾಪವನು ಬೀರುತ | ಗಳಿಗೆ ಸುಖ |
ಕನಸಿನ ತೆರನೆನುತ ||89||

ತಷೆಯಡರಿದ ನರನು | ಡರ ನೀರನು |
ಸಸಿನೆ ಸೇವಿಪ ತೆರನು ||
ಶಶಿಮುಖಿಯರ ನೆನೆದು | ಮನುಜ ಮತ್ತೆ |
ವಶತಪ್ಪಿ ಮರುಳಾಹನು ||90||

ಇಂತಾ ನೀತಿಯನು ಪೇಳಿ |
ಕಾಂತೆ ಜಾರಿದಳೆ ಸಾರಿ |
ನಿಂತಿರಬೇಡ ಪೋಗೆ | ಸೈರಿಪೆ ಹೇಗೆ |
ಕಾಂತಳೆ ಅರಗಳಿಗೆ ||91||

ವಚನ

ಇಂತೆಂದು ರಾಯ ಪೇಳಲಾಗಿಸಖಿಯು ಮಾದ್ರಿಯೊಡನೆ ಏನೆನುತ್ತಿದ್ದಳು

ರಾಗ ಕಾಂಭೋಜಿ ಝಂಪೆತಾಳ

ಯಾಕೆ ಮುನಿಸಿನೊಳು ಬಂದೆ | ಏಣಾಕ್ಷಿ |
ಸಾಕು ನಡೆನಡೆ ಎನ್ನ ಮುಂದೆ ||
ನೀ ಕುಹಕಗಳನೆಲ್ಲ | ನೆರೆ ಪೇಳ್ದುದಕೆ ನಲ್ಲ |
ಕಾಕುಮಾತಂದ ನಲ್ಲೆ ||92||

ವಸವಂತ ವನಕೆ ಬಂದ | ಸಮಯದೊಳು |
ಪೂಸ ಯವ್ವನೆಯನು ಕಂಡ ||
ವಸುಮತೀಶನು ನಿನ್ನ | ಶಶಿಮುಖದ ಮೇಲೆ ಮನ |
ದೆಸೆಯ ಸರಿಸನು ಕಾಣೆ ಜಾಣೆ ||93||

ಹೇಳುವರು ಮರುಳಾದರೆ |
ಕೇಳುವರು ಹುಚ್ಚಾದರೇನೆ ||
ಕಾಳು ಮುನಿಪರೆ ತನ್ನ | ಮೇಲೆ ಶರ ಬೀಳೆ ರೋ |
ಷಾಳಿಯಿಂ ಶಾಪವಿತ್ತುದನು ಮರೆತ ||94||

ಅರಸನಿದನರಿದಾದನೇನೆ | ಮುನಿಶಾಪ |
ಪರಿಹರಿಸದಿರದು ಕಾಣೆ ||
ಸ್ಮರಕಲೆಯ ತಿಳಿದ ಪ್ರವೀಣ | ಕಡುಜಾಣನೊಳು |
ಸರಸ ಮೋಹವ ಮಾಡೆ ಕೂಡೆ ||95||

ರಾಗ ದ್ವಿಪದಿ ಝಂಪೆತಾಳ

ನೀ ಎನ್ನ ಕಾಡದೆ ನಡೆ ಸಖಿಯೆ ಯೀಗ |
ಮಾಯಂಗಳನುಪೇಳಿ ಮೋಸದಿಂ ಬೇಗ ||96||

ನಲ್ಲನಿಗು ನಿನಗು ನಾ ನೆರೆ ಸಖಿತ್ವವನು |
ನಲ್ಲಳೆ ಮಾಳ್ಪೆನೆಂದುರೆ ಬಂದೆ ನಾನು ||97||

ಬಂದರೇನಾಯಿತೆ ನಾನು ಬಹಳಲ್ಲ |
ನಿಂದಿರಲು ಬೇಡ ಪೋಗೀ ಮಾತನೆಲ್ಲ ||98||

ಎನಲು ಸಖಿಯಿಂತೆನುತಲುಸುರಿದಳು ನಗುತ |
ನಲ್ಲ ಜೀವಿಸಲಾರ ಬಾರವ್ವ ಎನುತ ||99||

ಎಂದು ಪೇಳಲು ಮಾದ್ರಿ ಮನವೊಡಂಬಟ್ಟು |
ಬಂದು ಪ್ರಾಣೇಶನಿಗೆ ಎರಗಿ ನಿಂದಿರಲು ||100||

ರಾಗ ಕಾಂಭೋಜಿ ಏಕತಾಳ

ನೀರೆ ಬಾರೆ ಮುದ್ದು ಮೊಗವ ತೋರೆ | ಈಗ |
ಮಾರನುರುಬೆ ತಾಳಲಾರೆ ನೀರೆ ||
ಇತ್ತಬಾರೆ ಒಂದು ಮುತ್ತ ತಾರೆ | ನಿನ್ನ |
ವತ್ತ ಕುಚವನೆನ್ನೆದೆಯೊಳೊತ್ತಿಯಾರೆ ||
ಚಿತ್ತಜ ಕಲೆಯ ಬಲ್ಲಮತ್ತಯಾನೆ | ನೀನು |
ಮಾತಿಗುತ್ತರವಿಲ್ಲದೇತಕೆ ನಿತ್ತೆ ಜಾಣೆ ||101||

ಮಾತ ಬಲ್ಲೆ ಮಯ್ಯ ಮುಟ್ಟ ಬೇಡ ಕಾಣೊ | ಇದು |
ನೀತವೆ ಮುನಿಶಾಪ ಬಾರದೇನೊ ||
ಕಾತುರಗೊಂಬರೆ ಕರವ ಮುಗಿವೆನಯ್ಯ | ನಿನ್ನ |
ನೇತಕೆ ನಾ ನೋಡ ಬಂದೆ ದಮ್ಮಯ್ಯ ||102||

ಚಂದಿರನುದಯಿಸುತ ಬಂದನಲ್ಲೆ | ಕಣ್ಣ |
ಮುಂದೆ ಬಂದು ಮರುತನಿಂದನಲೆ ||
ಎಂದಿನ ಹಾಗಲ್ಲ ಕಾಣೆ ಯಿಂದು ನಲ್ಲೆ | ಕಾಮ |
ಚಂದದಿಂದ ಬಾಣವೆಸದು ಕೊಂದನಲ್ಲೆ ||103||

ಕೋಟಿ ಜನ್ಮಾಂತರದೊಳ ಬಂದೆ ನಾನು | ಈ |
ಪಾಟಿ ದುಃಖಗಳನುಣಲಿಲ್ಲವೇನು |
ಮಾಟವೆಂಬುದು ಬಂದೆನ್ನ ಕಾಡಿ ಬಿಡನು | ಮದನ |
ಚಾಟಕವಿದೆಲ್ಲ ಯಿತ್ತ ಬಾರೆ ನೀರೆ ||104||

ವಚನ

ಇಂತೆಂದ ರಾಯನೊಡನೆ ಮಾದ್ರಿ ಏನೆನುತ್ತಿದ್ದಳು –

ರಾಗ ದ್ವಿಪದಿ ಝಂಪೆತಾಳ

ಎನ್ನ ನೀ ಮುಟ್ಟಿದರೆ ಯೀಗ ಸ್ವರ್ಗ |
ವನ್ನು ಕಾಂಬಿರಿ ಮುನಿಯ ಶಾಪದಿಂ ಬೇಗ ||105||

ಇನ್ನು ಬಿಡು ಬಿಡು ಸೆರಗ ಸಾರಿದೆನು ನಾನು |
ನಿನ್ನಾಣೆ ನಡೆ ನಡೆ ನಾಟಕವಿದೇನು ||106||

ಎಂದೆನಲು ಸತಿಯ ಮುಂದಲೆಯನ್ನು ಪಿಡಿದು |
ಅಂದು ಚೌರಾಸೀತಿ ಬಂಧದಲಿ ಬಿಗಿದು ||107||

ನೆರೆದು ಮೈಮರೆದನಾ ನರನಾಥನಾಗ |
ಒರಗಿದನು ಹಾಯೆಂದು ಪಾಂಡು ನಿಮಿಷದೊಳು ||108||

ನಾರಾಯಣಾಚ್ಯುತಾ ಮುಕುಂದ ಎನುತಾಗ |
ಧಾರುಣಿಯಮೇಲೊರಗಿ ಮಲಗಿದನು ಬೇಗ ||109||

ಧರಣಿಪಾಲಕ ಪಾಂಡು ಸ್ವರ್ಗವೈದಿದನು |
ದೊರೆರಾಯ ಮಲಗಿದೈ ಧೀರ ಯೀ ವನದಿ ||110||

ಎನುತ ಮಾದ್ರಾದೇವಿ ಎನ್ನ ಪ್ರಾಣೇಶ |
ವನದ ಪಾಲಾದ್ಯಲ್ಲ ವಶನು ಭೂಮೀಶ ||111||

ಮಾತಾಡದಿಹುದೇಕೆ ಮತ್ತೆನ್ನ ಕೂಡೆ |
ಯಾತಕ್ಕೆ ಸುಮ್ಮನಿಹೆ ಯೆನುತಲಾ ಪ್ರೌಢೆ ||112||

ದೂರದಿಂದೊದರುತಿರೆ ಧರ್ಮಜನು ಬಂದು |
ವರ ಭೀಮ ಸುರಪ ಸುತ ನಕುಲ ರೈ ತಂದು ||113||

ಕಿರಿಯವರು ತಾಯಿರವ ಕಂಡು ಕರೆತರಲು ||
ಹರನ ಸ್ಮರಿಸುತ ಹಾ ಹಾ ಯೆನುತ ಬರಲು ||114||

ವಚನ

ಇಂತೆಂದು ಕುಂತಿ ಮಾದ್ರಿಯರು ಬಹುವಿಧದಿಂ ಪ್ರಳಾಪಿಸುತ್ತಿರಲು ಕುಮಾರರು ಏನೆನುತ್ತಿದ್ದರು-

ರಾಗ ದ್ವಿಪದಿ ಝಂಪೆತಾಳ

ಅಪ್ಪಯ್ಯ ನಿನಗೀಗ ಮುಪ್ಪು ಬಂತಲ್ಲ |
ಅಪ್ಪಿ ಕೊಂಬರೆ ಯದ್ದು ಬರಲಿಲ್ಲವಲ್ಲ ||115||

ನಿನ್ನ ಮುಂದಕೆ ನಾ ವೈವರು ಬಂದು |
ಚಿಣ್ಣತನದಿ ಹಿಂದಣಂತೆ ನಲಿವುತಲಿ ||116||

ಬರಲು ಸಂತೋಷ ಮುದ್ದು ಮಾಡುವೆಯಾ |
ಹರ ಹರ ಈ ವನದಿ ಮಲಗಿದೈ ರಾಯ ||117||

ರಾಗ ಪಂತುವರಾಳಿ ಝಂಪೆತಾಳ

ಅರಸರಿಲ್ಲದ ರಾಜ್ಯ ಪುರುಷರಿಲ್ಲದ ನಾರಿ |
ಹಿರಿಯರಿಲ್ಲದ ಮನೆಯು ಇರವಾಯಿತೆಮಗೆ ||118||

ಮಕ್ಕಳಿಲ್ಲದ ಭಾಗ್ಯ ಮಡದಿಯಿಲ್ಲದ ಭೋಗ |
ರೊಕ್ಕವಿಲ್ಲದ ನರನು | ರಂಜಿಸುವ ತೆರನು ||119||

ನಮಗೆ ಪಾಂಡು ನಪಾಲ ನಮಿಪೆವಾರನು ಕಂಡು |
ಕಮಲನಾಭನೆ ಗತಿಯು ಯೆಂದರಾ ಸುತರು ||120||

ವಚನ

ಇಂತೀ ಪ್ರಕಾರದಲ್ಲಿ ಆ ಕುಮಾರಕರು ಪ್ರಳಾಪಿಸುತ್ತಿರಲು ಮಾದ್ರಿ ಏನೆನುತಿದ್ದಳು –

ರಾಗ ಗೌಳ ಪಂತು ಏಕತಾಳ

ಅರಸ ಬಂದನು ಎನ್ನ | ಸೆರಗ ಪಿಡಿದನು ಮುನ್ನ |
ತರವಲ್ಲ ವೆಂದೆ ನಾನು | ಎಷ್ಟು ಹೇಳಿದೆನು ||121||

ಕೆಡುವ ಕಾಲಕೆ ಬುದ್ಧಿ ಗೂಡುವದೆ ಪೂರ್ವದಿ |
ಪಡೆತಂದ ವಿಧಿ ಬೆನ್ನ | ಬಿಡುವುದೇನಕ್ಕ ||122||

ಇನ್ನು ಜೀವಸಲಾರೆ ಎನ್ನ ಕುಮಾರಕರ |
ನಿನ್ನ ಕೈಯೊಳಗಿತ್ತೆ ಮನ್ನಿಸೆ ಸಲಹೆ ||123||

ಯನುತಲಾ ಮಾದ್ರಿ | ತನ್ನಿನಿಯನಕೂಡೆ |
ಅಗ್ನಿಯೊಳು ತೆರಳ್ದಳು ಮಾದ್ರಿ ||124||

ವಚನ

ಇಂತೆಂದು ಆ ಕುಮಾರಕರು ಏನೆಂದು ಪ್ರಳಾಪಿಸುತ್ತಿದ್ದರು –

ರಾಗ ಸೌರಾಷ್ಟ್ರ ಏಕತಾಳ

ತರಳ ಪ್ರಾಯದಿ ನಮ್ಮ ತಂದೆಯನೊಯ್ವುದು |
ಥರವೆನೋ ನಿಮಗೆ ಯಮರಾಜ ||
ದುರುಳ ಬುದ್ಧಿಯಿದೇಕೊ ಧರ್ಮಜನಾದರು |
ನೆರೆ ನೋಡಲಾಗದೆ ನಿನಗೆ ||125||

ದೇವೇಂದ್ರ ನಿನ್ನಯ ಕಂದ ಮರುಗುವನೆಂದು |
ತಾಪಗಳಿಲ್ಲವೆ ನಿಮಗೆ ||
ಭೂವಳಯದಿ ಪಾಂಡು ಭೂಪಾಲನೊವಾಗ |
ನೀವಿರಲಿಲ್ಲವೆ ಮರುತ ||126||

ನಮ್ಮ ತಂದೆಗಳಾದ ಅಶ್ವಿನಿ ದೇವರೆ |
ನಿಮ್ಮ ಮನಕೆ ಸರಿ ಬಂತೆ ||
ಎಮಗೀ ವಿಧಿಮಾಡಿ ನಿಮ್ಮ ನಗರಕೊದು |
ಎಮ್ಮನುದ್ಧರಿಸೆಂದ ನಕುಲ ||127||

ಯುಗನಾಲ್ಕು ಕೂಡಿ ಸಾವಿರಬಾರಿ ಮಗುಚಲು |
ಹಗಲೊಂದೆನಿಸಿದಾ ವಿಧಿಗೆ ||
ಈಗ ಬುದ್ಧಿ ಪೇಳುವ ಪ್ರೌಢ ನಾಯಕನಾರು |
ಸೊಗಸು ಮಾಡಿದ ನಮ್ಮ ಪಿತಗೆ ||128||

ಅಯ್ಯಯ್ಯ ಬೊಮ್ಮನ ಬಯ್ಯಲೇತಕೆ ನ |
ಮ್ಮಯ್ಯನ ಕಾಂಬ ಪುಣ್ಯಗಳು |
ಸುಯ್ಯವಾಗಿ ಹೋುತು ಹುಯ್ಯಲಾಯಿತು ಹಿರಿ |
ಯಯ್ಯಗೆ ಪೇಳುವರಿಲ್ಲ ||129||

ವಚನ

ಇಂತೆಂದು ಕುಮಾರಕರು ಪ್ರಳಾಪಿಸುತ್ತಿರಲಾ ಕುಂತಿ ಏನೆನುತ್ತಿದ್ದಳು.

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮರುಗುವಿರೆ ಶಿಶುಗಳಿರ ಧರಣಿಪ | ಸುರರ ಪಟ್ಟಣಕೈದಿದನು ತಾ |
ಸಿರವರನೆ ಗತಿ ನಿಮಗೆ ಬನ್ನಿರೊ | ದೊರೆಯಬಿಟ್ಟು ||130||

ಪೂರ್ವಜನ್ಮದಿ ಪರರ ಜನಕಗೆ | ಸರ್ವಥಾ ನೀವೆರಡ ಬಗೆದಿರಿ |
ಓರ್ವರಾದರು ಪುಣ್ಯವಂತರು | ಪುಟ್ಟಲಿಲ್ಲ ||131||

ವಚನ

ಇಂತೆಂದು ಆ ವನದೊಳಗಿದ್ದ ಋಷಿಗಳೆಲ್ಲ ಬಹ ಬಗೆಯದೆಂತೆನೆ – ವ್ಯಾಸ ಮುನಿದಾಸ ದೂರ್ವಾಸ ಗೌತಮ ಗಾರ್ಗ್ಯರೆಲ್ಲ ಆ ಮುನಿಗಳು ಪಾಂಡುವಿನ ಸಂಸ್ಕಾರಮಂ ಮಾಡಿಸಿ ಈ ಕುಮಾರರ್ಗೆ ಏನೆನುತಿರ್ದರು –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕಂದಗಳಿರ ಕೇಳಿರಯ್ಯ | ತಂದೆಯನು ಚಿಂತಿಸಲು ಬೇಡ ಮು |
ಕುಂದನಾಧೀನ ಸಕಲ ಪ್ರಾಣಿಗಳೆಲ್ಲ ಜಗದಿ ||132||

ಇಂದು ಹಸ್ತಿನಪುರಕೆ ಪೋಗುವ | ಅಂಧ ಭೂಪತಿಗೆರಗಿಸುವ ನಾವೆಂದು |
ನಂಬುಗೆಗೊಟ್ಟು ಕರತಂದರು ಕುಮಾರಕರ ||133||

ಬರುತ ಧತರಾಷ್ಟ್ರನ ಪದಾಬ್ಜದೊ | ಳೆರಗಿದನು ಧರ್ಮಜನು ಮಾರುತಿ |
ಸುರಪಸುತ ನಕುಲಾದಿಗಳು ವಂದಿಸಿದರಾಗ ||134||

ವಂದಿಸಿದ ಪಾಂಡವರ ತಕ್ಕಿಸು | ತಂದು ಕಣ್ಣೀರಿಂದ ಹೊರಳಿದ |
ಇಂದು ದೇಸಿಗರಾದಿರೆ ಪಾಂಡುವಿನ ಸುತರೇ ||135||

ವಚನ

ಇಂತೆಂದು ಕುಮಾರಕರ ಸಂತೈಸಿ ಕೆಲವು ದಿನದ ಮೇಲೆ ತನ್ನ ಕುಮಾರಕರು ಪಾಂಡವರು ಸಹ ಕೃಪಾಚಾರ್ಯರಲ್ಲಿ ವಿದ್ಯಾಭ್ಯಾಸಕ್ಕೆ ನಿಲಿಸಲು  ಭೀಮ ಮಾಡುವ ಚರಿತ್ರವದೆಂತೆನೆ –

ರಾಗ ಶಂಕರಾಭರಣ ಪಂಚಘಾತ ಮಟ್ಟೆತಾಳ

ಬರದು ಬರುವ ಮಾರ್ಗದೊಳಗೆ | ಮರುತ ತನುಜನೆಲ್ಲರನ್ನು |
ಕರೆದು ಚಿನಿಕೋಲನಾಡಿರೆಂದು | ನಂಬಿಸಿ ಕರೆದನು ||136||

ಜೇನನೊಣವ ಕೊಲುವ ತೆರದಿ | ಕೌರವರನ್ನು ಬಡಿವ |
ಮರುಳನೆಂದು ನಪಗೆ | ದೂರುತಿರಲು ಕೇಳುವ ||137||

ಒಂದು ದಿನ ುಮಾರರೆಲ್ಲ ಒಂದುಗೂಡಿ ಬರುವುದನ್ನು |
ಅಂದು ಕಂಡು ಭೀಮಗತ್ತಿನೊಳಗೆ ನೂರ್ವರ ||138||

ಸಂದು ಕಾಲಮುರಿದು ಸಣ್ಣ ಬಂಡಿ ಕೋಲೊಳಿಟ್ಟು ದೂಡೆ |
ಕಂಡು ಪೇಳಲಂದು ಭೂಪನೆಡೆಗೆ ಬಂದರು ||139||

ವಚನ

ಆಗಲಾ ಧತರಾಷ್ಟ್ರನು ಭೀಮನೊಡನೆ ಏನೆನುತ್ತಿದ್ದನು –

ದ್ವಿಪದಿ

ಏ ಭೀಮ ಕೇಳಯ್ಯ | ಈ ಕುಮಾರಕರ |
ನೀ ಬಲಾತ್ಕಾರದಲಿ ನೋಯಿಸಿದೆ ಧೀರ ||140||

ನೀನೊಬ್ಬ ಬೇರಾಡು ಇವರು ಬೇರಿರಲಿ |
ಈ ನೋವ ನಾನು ದಿನ ದಿನಕೆ ಕೇಳಿದೆನು ||141||

ಎಂದು ಹಿರಿಯರ ಮಾತ ಕೇಳಿ ನೀವೆಲ್ಲ |
ಅಂದೊಡಂಬಟ್ಟು ಆ ಗುರುವಿನೊಳು ಪೇಳಿ ||142||