ಯಕ್ಷಗಾನದ ಪರಿಭಾಷೆಗಳಲ್ಲಿ ‘ಆಹಾರ್ಯ’ ಎಂಬ ಪದ ಬಳಕೆ ಇಲ್ಲ. ಆದರೆ ಆಂಗಿಕ, ಆಹಾರ್ಯ, ಸಾತ್ವಿಕ, ವಾಚಿಕ ಇವು ನಾಲ್ಕು ಪ್ರಚಲಿತ ಅಭಿನಯಾಂಗಗಳನ್ನು ಯಕ್ಷಗಾನ ಅಧ್ಯಯನ ಮಾಡಿದವರು ಈಗಾಗಲೇ ಬರಹಗಳಲ್ಲಿ ಹೆಸರಿಸಿದ್ದಾರೆ. ಆಹಾರ್ಯ ಎಂದರೆ ಪಾತ್ರದ ಪ್ರಸಾಧನ. ಅಂದರೆ ಬಣ್ಣಗಾರಿಕೆ ಮತ್ತು ವೇಷಭೂಷಣಗಳೇ ಯಕ್ಷಗಾನದ ಆಹಾರ್ಯದ ಪ್ರಮುಖಾಂಗಗಳು. ಇವುಗಳಿಗೆ ಪರ್ಯಾಯವಾಗಿ ‘ಆಹಾರ್ಯ’ ಎಂಬ ಪದವನ್ನು ಪ್ರಸ್ತುತ ಅಧ್ಯಯನದಲ್ಲಿಯೂ ಅನುಕೂಲಕ್ಕಾಗಿ ಬಳಸಲಾಗಿದೆ. ಅಭಿನಯಾಂಗಗಳಲ್ಲಿ ಒಂದಾದ ಆಹಾರ್ಯದ ಪ್ರಚಲಿತ ಅರ್ಥವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಯಕ್ಷಗಾನದ ಬಣ್ಣಗಾರಿಕೆ ಮತ್ತು ವೇಷಭೂಷಣಗಳ ಅಧ್ಯಯನ ಮಾಡಲಾಗಿದೆ. ಬಣ್ಣಗಾರಿಕೆ ಮತ್ತು ವೇಷಭೂಷಣಗಳ ಮೂಲಕವೇ ಯಕ್ಷಗಾನದ ಅಸ್ಮಿತೆ ಉಳಿದುಕೊಂಡಿದೆ. ಹಾಗಾಗಿ ಅವುಗಳೇ ಯಕ್ಷಗಾನದ ಅಭಿನಯಾಂಗಳಲ್ಲಿ ಪ್ರಮುಖ. ಆದರೆ ಅಲ್ಲಿರುವ ಅನೇಕ ವಿಷಯಗಳು, ಬಣ್ಣಗಳು ಅವುಗಳ ಅರ್ಥ ಸಂಕೇತಗಳು ಸ್ಪಷ್ಟವಲ್ಲ. ಅರ್ಥವಾಗದಿದ್ದರೂ ಅವಶಿಷ್ಟಗಳ ರೂಪದಲ್ಲಿ ಅವು ತಲೆಮಾರಿನಿಂದ ತಲೆಮಾರಿಗೆ ಉಳಿದುಕೊಂಡು ಬಂದ ಸಂಗತಿಯೇ ಅತ್ಯಂತ ಕುತೂಹಲಕರವಾದುದು. ಈ ಕುತೂಹಲದ ಭಾಗವಾಗಿಯೇ ‘ಯಕ್ಷಗಾನ ಆಹಾರ್ಯ’ ಅಧ್ಯಯನ ಗ್ರಂಥವು ರೂಪುಗೊಂಡಿದೆ.

ಪ್ರಸ್ತುತ ಯಕ್ಷಗಾನ ಆಹಾರ್ಯ ಕೃತಿಯನ್ನು ೨೦೦೩-೦೫ನೇ ಸಾಲಿನಲ್ಲಿ ಯು.ಜಿ.ಸಿ. ಅನುದಾನದಿಂದ ಪ್ರಧಾನ ಸಂಶೋಧನ ಯೋಜನೆಯಾಗಿ ರೂಪಿಸಲಾಗಿದೆ. ಯಕ್ಷಗಾನದ ಅಭಿನಯಾಂಗಗಳಲ್ಲಿ ಒಂದಾದ ವಾಚಿಕವನ್ನು ಕುರಿತಂತೆ ವಾಚಿಕಾಭಿನಯ ಮತ್ತು ಯಕ್ಷಗಾನ ವಾಚಿಕಾಧ್ಯಯನ ಎಂಬ ಎರಡು ಕೃತಿಗಳನ್ನು ರೂಪಿಸಿದ್ದೆ. ಅದರ ಮುಂದುವರಿಕೆಯಾಗಿ ಪ್ರಸ್ತುತ ಕೃತಿಯಲ್ಲಿ ಯಕ್ಷಗಾನ ಆಹಾರ್ಯವನ್ನು ಕುರಿತಂತೆ ಅಧ್ಯಯನವನ್ನು ಕೈಗೊಂಡಿದ್ದೇನೆ. ಯಕ್ಷಗಾನದ ಬಣ್ಣಗಾರಿಕೆ ಹಾಗೂ ವೇಷಭೂಷಣಗಳು ಆಹಾರ್ಯಾಂಗ ದಲ್ಲಿ ಪ್ರಮುಖವಾಗಿವೆ. ಆಹಾರ್ಯವೇ ಯಕ್ಷಗಾನದ ಅತ್ಯಂತ ಆಕರ್ಷಣೀಯವಾದ ಭಾಗ. ಅವುಗಳನ್ನು ಕುರಿತಂತೆ ನನಗಿರುವ ಆಸಕ್ತಿಯ ನೆಲೆಯಿಂದ ಕ್ಷೇತ್ರಕಾರ್ಯ ಕೈಗೊಂಡು ವಿವಿಧ ಆಕರಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಪ್ರಸ್ತುತ ಅಧ್ಯಯನ ಗ್ರಂಥವನ್ನು ರೂಪಿಸಲಾಗಿದೆ.

ಪ್ರಸ್ತುತ ವಿಷಯವನ್ನು ಕುರಿತಂತೆ ಚರ್ಚಿಸುತ್ತಿರುವ ಯಾವುದೋ ಸಂದರ್ಭವೊಂದರಲ್ಲಿ ಯು.ಜಿ.ಸಿ. ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸುವಂತೆ ನನಗೆ ಸೂಚಿಸಿದ್ದಲ್ಲದೆ ಅನೇಕ ರೀತಿಯಲ್ಲಿ ನೆರವಾದವರು ಹಿರಿಯರಾದ ಪ್ರೊ. ಕೆ.ವಿ. ನಾರಾಯಣ ಅವರು. ಹಾಗೆಯೇ ಪ್ರಸ್ತಾವ ಸಲ್ಲಿಸಿ ಯು.ಜಿ.ಸಿ.ಯಿಂದ ಅನುದಾನ ಪಡೆದು ಯೋಜನೆಯನ್ನು ಪೂರ್ಣ ಗೊಳಿಸುವಲ್ಲಿ ನನಗೆ ಒತ್ತಾಸೆ ನೀಡಿದ್ದಾರೆ. ಹಿಂದಿನ ಎಲ್ಲಾ ಕುಲಪತಿಯವರು, ಕುಲಸಚಿವರು  ಹಾಗೂ ಆಡಳಿತಾಂಗದ ಎಲ್ಲಾ ಮಿತ್ರರೂ ಈ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಆಡಳಿತಾತ್ಮಕವಾಗಿ ನೆರವಾಗಿದ್ದಾರೆ. ಯೋಜನೆಯ ರೂಪುರೇಷಗಳನ್ನು ರೂಪಿಸುವ ಸಂದರ್ಭ ದಲ್ಲಿ ಹಲವು ಜನರ ಜೊತೆಗೂಡಿ ಚರ್ಚಿಸಿ ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ಪಡೆದಿದ್ದೇನೆ. ಪ್ರೊ. ಎ.ವಿ. ನಾವಡ, ಡಾ. ಮೋಹನ್ ಕೃಷ್ಣ ರೈ, ಡಾ. ಶಿವರಾಮ ಪಡಿಕ್ಕಲ್, ಪ್ರೊ. ಓ. ಎಲ್. ನಾಗಭೂಷಣಸ್ವಾಮಿ, ವಿಭಾಗದ ಸಹೋದ್ಯೋಗಿ ಮಿತ್ರರು ಚರ್ಚೆಗಳ ರೂಪದಲ್ಲಿ ನನ್ನ ಈ ಅಧ್ಯಯನಕ್ಕೆ ನೆರವಾಗಿದ್ದಾರೆ.

ಯೋಜನೆಗೆ ಸಂಶೋಧನ ಸಹಾಯಕರಾಗಿ ನೆರವಾದವರು ಶ್ರೀ ಎನ್. ಶ್ರೀಧರ ಯೇತಡ್ಕ. ಮಾಹಿತಿ ನೀಡಿ ನೆರವಾದವರು ಅನೇಕರಿದ್ದಾರೆ. ಅವರ ಹೆಸರುಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ಈ ದಿಸೆಯಲ್ಲಿ ನೆರವಾದವರು ಶ್ರೀ ನಿಡ್ಲೆ ಗೋವಿಂದ ಭಟ್ ಮತ್ತು ಶ್ರೀ ಶ್ರೀಧರ ರಾವ್ ಅಡೂರು. ಅಕ್ಷರ ಜೋಡಣೆ ಮಾಡಿದವರು ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ. ಇಲ್ಲಿನ ಛಾಯಾಚಿತ್ರಗಳನ್ನು ಒದಗಿಸಿದವರು ಶ್ರೀ ಗಣೇಶ ಯಾಜಿ ಹಾಗೂ ಪ್ರಭಾ ಸ್ಟುಡಿಯೊ ಅಡೂರು ಅವರು. ಒಳಪುಟದ ರೇಖಾಚಿತ್ರ ಗಳನ್ನು ರಚಿಸಿಕೊಟ್ಟವರು ಗೆಳೆಯ ಡಾ. ಎ.ಎಸ್. ವಿಶ್ವನಾಥ ಕುಂದಾಪುರ ಅವರು. ಈ ಕೃತಿಯ ಪ್ರಕಟಣೆಗೆ ಅನುಮತಿ ನೀಡಿದವರು ಮಾನ್ಯ ಕುಲಪತಿಯವರಾದ ಡಾ. ಎ. ಮುರಿಗೆಪ್ಪ ಹಾಗೂ ಕುಲಸಚಿವರಾದ ಮಿತ್ರ ಡಾ. ಮಂಜುನಾಥ ಬೇವಿನಕಟ್ಟಿ. ಪ್ರಕಟಣೆಯ ಕೆಲಸಕ್ಕೆ ಸಹಾಯ ಮಾಡಿದವರು ಶ್ರೀ ಸುಜ್ಞಾನಮೂರ್ತಿ, ಜೆ. ಬಸವರಾಜ, ಮುಖಪುಟ ರಚಿಸಿದವರಿಗೆ ಹಾಗೂ ಪ್ರಸಾರಾಂಗದ ಎಲ್ಲಾ ಸಿಬ್ಬಂದಿಗಳ ನೆರವಿಗೆ ಕೃತಜ್ಞತೆಯ ‘ಕೇಳಿ’ ಬಾರಿಸುತ್ತಾ ಈ ಕೃತಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಮೋಹನ ಕುಂಟಾರ್
ವಿದ್ಯಾರಣ್ಯ