ಅಲಂಕಾರಗಳು

ತೆಯ್ಯಂನಲ್ಲಿ ಕೆಂಪು ಬಣ್ಣದ ವಿಶೇಷವಾದ ವೇಷ ವಿಧಾನವನ್ನು ಕಾಣಬಹುದು. ಧರಿಸುವ ವಸ್ತ್ರಗಳು, ಆಭರಣಗಳು, ಮುಖಕ್ಕೆ ಹಚ್ಚುವ  ಬಣ್ಣಗಳು ಬಹುತೇಕ ಎಲ್ಲವೂ ಕೆಂಪು ಬಣ್ಣವೇ. ಇದು ಆರ್ಯೇತರವಾದ ಕಾಳಿ ಪೂಜೆಯೊಂದಿಗೆ ಸಂಬಂಧವನ್ನು ಹೊಂದಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಕೇರಳದ ಇತರೇ ಭಾಗಗಳಲ್ಲಿರುವ ಆಚರಣಾ ಸಂಪ್ರದಾಯಗಳಲ್ಲೂ ಕೆಂಪು ಬಣ್ಣದ ಪ್ರಾಧಾನ್ಯ ಗಮನಾರ್ಹವಾಗಿದೆ. ಕಥಕಳಿಯ ಅಲೌಕಿಕವಾದ ವೇಷವಿಧಾನವನ್ನು ತೆಯ್ಯಂಗಳಲ್ಲಿ ಕಾಣಬಹುದು. ತೆಯ್ಯಂನ ಭಾವಕ್ಕೆ ಅನುಗುಣವಾದ ವೇಷವಿಧಾನವೇ ತೆಯ್ಯಂಕೋಲದ ವೈಶಿಷ್ಟ್ಯ. ರೌದ್ರ ಸ್ವಭಾವದ ಹೆಣ್ಣು ತೆಯ್ಯಂಗಳೂ ಅನೇಕ ಇವೆ. ಕಾಳಿಯೊಂದಿಗಿರುವ  ವಿಶೇಷ ಭಕ್ತಿಯೇ ಇದಕ್ಕೆ ಕಾರಣವಿರ ಬಹುದು. ಪ್ರತಿಯೊಂದು ತೆಯ್ಯಂಗಳಿಗೂ ವಿಭಿನ್ನ ರೂಪ ಭಾವಗಳಿವೆ.

ತೆಯ್ಯಂಗಳು ಕಾಲಿನಲ್ಲಿ ಕಂಚು ಅಥವಾ ಬೆಳ್ಳಿಯಿಂದ ನಿರ್ಮಿಸಿದ ಗಗ್ಗರ ಅಥವಾ ‘ಚಿಲಂಬ’ನ್ನು ಕಟ್ಟಿಕೊಳ್ಳುತ್ತಾರೆ. ಅದರ ಒಳಗಡೆ ಕುಣಿಯುವಾಗ ಶಬ್ದ ಬರುವ ಸಲುವಾಗಿ ಅಕ್ಕಿಕಾಳನ್ನು ಹಾಕಿರುತ್ತಾರೆ. ಚಿಲಂಬಿನ ಮೇಲೆ ಕೆಂಪು ವಸ್ತ್ರದಿಂದ ರಚಿಸಿದ ಹೊರಭಾಗದಲ್ಲಿ ಕವಡೆಗಳಿಂದ ಅಲಂಕರಿಸಿದ ಕಾಲು ಕಡಗದಂತಹ ‘ಪಟ್ಟು ಪಾಡಗಂ’ ಎಂಬ ತೊಡುಗೆಯನ್ನು ಕಟ್ಟಿಕೊಳ್ಳುತ್ತಾರೆ. ಅದರ ಮೇಲೆ ಗೆಜ್ಜೆ ಕಟ್ಟಲಾಗುತ್ತದೆ.

ಸೊಂಟಕ್ಕೆ ಉಡುವ ಬಟ್ಟೆಗಳನ್ನು ವೆಳಂಬನ್ ಎಂದು ಕರೆಯುತ್ತಾರೆ. ವೇಳಂಬನ್ ವಸ್ತ್ರದಲ್ಲಿ ತಾವೆಳಂಬನ್, ಕುಟ್ಟಿ ವೆಳಂಬನ್, ಇರಟ್ಟ ವೆಳಂಬನ್ ಎಂಬ ಮೂರು ಬಗೆಗಳಿವೆ. ಹೊರಭಾಗದಲ್ಲಿ ಅಪೂರ್ವ ನೆರಿಗೆಗಳಿರುವ ಕೆಂಪು ವೆಳಂಬನ್ ಬಹುತೇಕ ಎಲ್ಲ ತೆಯ್ಯಂಗಳ ಸೊಂಟದ ವಸ್ತ್ರ. ಇವಲ್ಲದೆ ಪಟ್ಟುಚೊರ, ಅರವಂಜಿ, ಒಡಕೋಲ್, ಅರಯೋಡ ಎಂಬಿವುಗಳು ಕೂಡಾ ಇತರ ಸೊಂಟದ ತೊಡುಗೆಗಳು. ಕೆಂಪು ಅಂಚಿನ ವಸ್ತ್ರಗಳನ್ನು ಅದರ ಮೇಲೆ ಕೆಂಪು ವಸ್ತ್ರಗಳನ್ನು ಸಂಘಕಾಲದ ವೇಲನ್ ಆರಾಧನಾ ಸಂಪ್ರದಾಯದಲ್ಲಿ ಉಪಯೋಗಿಸುತ್ತಿದ್ದರಂತೆ. ಪುರುಷ ತೆಯ್ಯಂಗಳಿಗೆ ವೆಳಂಬನ್, ಕಣ್ಣಿವಳಯನ್, ಚೆಂಙವಳಯನ್, ತೂಗಾಡುವ ಕಿರುಬಾಲಗಳು, ಕೋಲಾನ್ನಿ, ಶಿರೋಭೂಷಣ ಎಂಬಿವು ವೇಷಪರಿಕರಗಳಾಗಿವೆ. ಹೆಗಲಿನಲ್ಲಿ ಬಿಗಿದು ಕಟ್ಟುವ ‘ಮಾರುತಾಙ’ ಎಂಬ ಹಗ್ಗವು ಸೊಂಟದ ಉಡುಪುಗಳನ್ನು ಭದ್ರವಾಗಿರಿಸುತ್ತದೆ. ಹೆಣ್ಣು ತೆಯ್ಯಂಗಳಿಗೆ ‘ಮಾರುಮುಲ’ (ಮಾರ್ವಡಂ, ಮುಲಾರ್) ಎಂಬ ಮೊಲೆಕಟ್ಟನ್ನು ಎದೆಗೆ ಧರಿಸುತ್ತಾರೆ. ಪುರುಷ ತೆಯ್ಯಂಗಳಿಗೆ ಇದರ ಬದಲಾಗಿ ಶರೀರದ ಬಣ್ಣಗಾರಿಕೆ ಇರುತ್ತದೆ. ಕೆಲವು ತೆಯ್ಯಂಗಳ ಶರೀರದಲ್ಲಿ ಹಾವಿನ ರೂಪವನ್ನು ಚಿತ್ರಿಸುತ್ತಾರೆ. ಇದೇ ಅಲ್ಲದೆ ವೀರ ತೆಯ್ಯಂಗಳು ಶರೀರ ತುಂಬಾ ಹತ್ತಿಯನ್ನು ಅಂಟಿಸಿಕೊಳ್ಳುತ್ತವೆ. ಕದಿವನ್ನೂರು ವೀರನ್‌ನ ಶರೀರ ತುಂಬಾ ಅಕ್ಕಿ ಹಿಟ್ಟು ಲೇಪಿಸಿ, ಅಕ್ಕಿ ಕಾಳುಗಳನ್ನು ಅಂಟಿಸುತ್ತಾರೆ. ಚೂಡಗಂ, ಹಸ್ತಕಡಗಂ, ಕೈತಂಡ ಎಂಬಿವು ತೋಳಿನ ಅಲಂಕಾರಗಳು. ಪ್ರಮುಖ ತೆಯ್ಯಂಗಳಿಗೆ ಮಾತ್ರ ‘ಕೈಪಡವು’ ಎಂಬ ತೊಡುಗೆ ಇರುತ್ತದೆ. ಕುತ್ತ್‌ಕೆಟ್ಟ್ ‘ಅಡ್ಡಿಗೆ’ ಓಲಕಾದ್ (ಕಿವಿಯ ಆಭರಣ) ಚೆನ್ನಿಮಲರ್ (ಚೆನ್ನೆಪೂ) ಎಗಿರ್ (ದಂಷ್ಟ್ರ) ಅರಿಂಬುಮಾಲ, ತಲಪಾಳಿ (ತಲೆಮಣಿ) ತಲೆಪಟ್ಟಂ (ಮುಡಿಗೆ ಆಧಾರವಾದ ಕಂಚಿನ ಆಭರಣ) ತಲತಂಡ (ಹೂದಂಡೆ ತಲಪಾಳಿ ಮತ್ತು ಮುಡಿಯ ನಡುವೆ ಧರಿಸುವ ಕಿಸ್ಕಾರ ಹೂವಿನ ದಂಡೆ) ಇವಿಷ್ಟು ತೆಯ್ಯಂನ ಪ್ರಧಾನ ಅಲಂಕಾರಗಳು. ಭಗವತಿ ಮೊದಲಾದ ರೌದ್ರಮೂರ್ತಿಗಳಿಗೆ ಮಾತ್ರ ‘ಎಗಿರ್’ ಬಳಸುತ್ತಾರೆ. ಕೆಲವು ತೆಯ್ಯಂಗಳಿಗೆ ಕಣ್ಣುಗಳನ್ನು ಮರೆಯಾಗಿಸುವ ಚಿಕ್ಕ ದ್ವಾರಗಳಿರುವ ಕಂಚಿನ ಅಥವಾ ಬೆಳ್ಳಿಯ ಪೊಯ್ಕಣ್ಣು (ಹುಸಿಗಣ್ಣು) ಗಳಿರುತ್ತವೆ. ಇದನ್ನು ವಯನಾಟ್ ಕುಲವನ್‌ನಂತಹ ಪ್ರಮುಖ ತೆಯ್ಯಂಗಳು ಧರಿಸುತ್ತವೆ. ಇದನ್ನು ಧರಿಸುವುದರ ಮೂಲಕ ತೆಯ್ಯಂಗೆ ಒಂದು ರೀತಿಯ ಅಲೌಕಿಕ ಗಾಂಭೀರ್ಯ ಲಭ್ಯವಾಗುತ್ತದೆ.

ವಿಷ್ಣುಮೂರ್ತಿಯ ಒತ್ತೆಕೋಲವಾದರೆ ‘ಕುಳಿಚ್ಚಾಟ’ ಎಂಬ ತೆಯ್ಯಂ ಪೂರ್ವರಂಗ ಪ್ರಯೋಗವಿರುತ್ತದೆ. ಇದು ಅಲ್ಪಸ್ವಲ್ಪ ವೇಷಭೂಷಣಗಳೊಂದಿಗೆ ನಡೆಯುವ ತೆಯ್ಯಂನ ಪೂರ್ವರಂಗದ ಪ್ರದರ್ಶನವಾಗಿರುತ್ತದೆ. ಕುಳಿಚ್ಚಾಟಂ ಎಂದರೆ ಸ್ನಾನದ ನಂತರದ ಆಟ ಎಂದರ್ಥ. ಇದು ಮುಂದಿನ ತೆಯ್ಯಂ ಪ್ರದರ್ಶನದ ಪೀಠಿಕೆಯೂ, ಸಿದ್ಧತೆಯೂ ಹೌದು. ಹೊಸದಾಗಿ ತೆಯ್ಯಂ ಕಟ್ಟಲಾರಂಭಿಸುವ ವ್ಯಕ್ತಿಗಳು ಕುಳಿಚ್ಚಾಟದ ತೆಯ್ಯಂ ಕಟ್ಟುತ್ತಾರೆ. ಯಕ್ಷಗಾನದ ಪೂರ್ವರಂಗವು ಇದರ ಸಂವಾದಿಯೇ ಆಗಿರಬಹುದು.

ಕುಳಿಚ್ಚಾಟಂ ಆಹಾರ್ಯ ವಿಶಿಷ್ಟವಾಗಿದೆ. ಮುಖಕ್ಕೆ ಬಣ್ಣಗಾರಿಕೆ ಇರುವುದಿಲ್ಲ. ಶ್ರೀಗಂಧವನ್ನು ಮುಖಕ್ಕೆ ಲೇಪಿಸುತ್ತಾರೆ. ಕಲಾವಿದನ ಹಿಂಭಾಗ ಎತ್ತರವಾಗಿ ಕಾಣಿಸಲು ಮೊದಲು ನೆರಿ ಇರುವ ವಿಶಿಷ್ಟವಾದ ಬಟ್ಟೆಯನ್ನು ಧರಿಸುತ್ತಾರೆ. ಅದರ ಮೇಲೆ ‘ಕಾಣಿ’ ಎಂಬ ಬಟ್ಟೆಯನ್ನು ಉಡುತ್ತಾರೆ. ಬಿಳಿ ಬಣ್ಣದ ಈ ಬಟ್ಟೆಯು ಕೆಂಪು ಬಣ್ಣದ ಅಂಚಿನಿಂದ ಕೂಡಿರುತ್ತದೆ. ದಪ್ಪವಾದ ಅಂಚಿನಲ್ಲಿ ನಾಲ್ಕು ಹಂತಗಳಿವೆ. ಬಿಳಿ ಕಪ್ಪು ಬಣ್ಣದ ಪಟ್ಟಿಗಳಿವೆ. ಕೆಂಪು, ಕಪ್ಪು ಬಣ್ಣದ ಡೈಮನ್ ಆಕೃತಿಯ ಸಾಲುಗಳಿವೆ. ಕಾಣಿಯ ಮೇಲೆ ಕೆಂಪು ಬಟ್ಟೆಯನ್ನುಡುತ್ತಾರೆ. ಸೊಂಟದಿಂದ ಇಳಿಬಿಡುವ ಭೂಷಣಕ್ಕೆ ‘ಮುನ್ನಾಕ್’ ಎಂದು ಹೆಸರು. ಇದು ಯಕ್ಷಗಾನದ ವೀರಕಸೆಯಂತಿರುತ್ತದೆ. ಮುನ್ನಾಕ್ ಸೇರಿಕೊಂಡಿರುವಂತೆ ಸೊಂಟಕ್ಕೆ ‘ಉರುಕ್ಕುಂವಡಿ’ ಕಟ್ಟುತ್ತಾರೆ. ಇದು ಯಕ್ಷಗಾನದ ‘ಡಾಬು’ವನ್ನು ಹೋಲುವ ಆಭರಣ.

ಇಷ್ಟು ಅಲಂಕಾರಗಳು ‘ಅಣಿಯರ’ದಲ್ಲಿ ಮಾಡಿಕೊಂಡ ಬಳಿಕ ‘ತೆಯ್ಯಂ’ ರಂಗಕ್ಕೆ ಬರುತ್ತದೆ. ಅನಂತರ ಕೈಗಳಿಗೆ ‘ಕೈಪುಡಪ್ಪ್’ ಎಂಬ ಅಂಗಿಯನ್ನು ತೊಡಿಸುತ್ತಾರೆ. ಇದು ಕೆಂಪು ಬಣ್ಣದ ಉಲ್ಲನ್ ಅಂಗಿಯ ತೋಳು ಮಾತ್ರ. ಇದರ ಮೇಲೆ ಮುಂಗೈ ವಳ (ಬಳೆ), ಚೂಡಂ, ಕೈತಂಡ (ಕಿಸ್ಗಾರ ಹೂವಿನದು) ಧರಿಸುತ್ತಾರೆ. ಭುಜಗಳಿಗೆ ಕುಂಜುಮರಿ (ಭುಜಕಟ್ಟು), ಅದರ ಕೆಳಗೆ ತಂಡವಳ, ಬಿರ್‌ದ್ (ಕವಡೆ ಕಾಯಿಗಳಿರುವಂತದ್ದು) ಧರಿಸುತ್ತಾರೆ. ಎದೆಯ ಭಾಗಕ್ಕೆ ಧರಿಸುವ ಮಣಿಸರಕಿನ ಆಭರಣ ‘ಕೊರಲಾರಂ’. ಇದು ಯಕ್ಷಗಾನದ ಎದೆಪದಕದಂತಿರುತ್ತದೆ. ಕೊರಳಿಗೆ ಬಿಗಿಯಾಗಿ ಕಟ್ಟುವ ಆಭರಣಕ್ಕೆ ‘ಪವ್ವಂ’ ಎಂದು ಹೆಸರು. ಇದು ಯಕ್ಷಗಾನದ ‘ಅಡ್ಡಿಕೆ’ಗೆ ಸಮಾನವಾಗಿದೆ. ಕೊರಳಿಗೆ  ಧರಿಸುವ ದೊಡ್ಡ ಹಾರಕ್ಕೆ ‘ವನಮಾಲ’ ಎಂದು ಹೆಸರು.

ತೆಯ್ಯಂ ಕುಳಿಚ್ಚಾಟಕ್ಕಿಂತ ಭಿನ್ನವಾಗಿದೆ. ತೆಯ್ಯಂ ಪರಿಪೂರ್ಣವಾದ ಕಲೆಯಾಗಿದೆ. ಕುಳಿಚ್ಚಾಟದಂತೆ ಕಾಣಿ, ನೆರಿಬಟ್ಟೆ ಧರಿಸಬೇಕಾಗಿಲ್ಲ. ಕೆಂಪು ವಸ್ತ್ರವನ್ನು ಧರಿಸುತ್ತಾರೆ. ಕೈಗಳಿಗೆ ಕೈಪುಡಪ್ಪ್ ಧರಿಸಿ, ತಂಡವಳ, ಬಿರ್‌ದ್, ಮುಂಗೈವಳ, ಚೂಡಂ (ಸೂಡಗ) ಧರಿಸುತ್ತಾರೆ. ಅದರ ಹೊರತಾಗಿ ತೆಂಗಿನ ಗರಿಯಿಂದ ರಚಿಸಿದ ‘ನಖಂ’ ಧರಿಸುತ್ತಾರೆ. ಕೈಬೆರಳುಗಳಿಗೆ ಉದ್ದವಾದ ಬೆಳ್ಳಿಯ ಉಗುರು ಇಡುವ ಕ್ರಮವೂ ಇದೆ. ಕೈಗಳಿಗೆ ಧರಿಸುವ ತಂಡವಳ, ತಲಪು, ಕೊರಳ ಅಡ್ಡಿಕೆ ಮೊದಲಾದವುಗಳಿಗೆ ಕಿಸ್ಗಾರ ಹೂವನ್ನೇ ಬಳಸುತ್ತಾರೆ.

ವಿಷ್ಣುಮೂರ್ತಿ ತೆಯ್ಯಂನ ಬಹುಮುಖ್ಯ ವೇಷಧಾರಣೆ ಎಂದರೆ ಸೊಂಟದ ಭಾಗದಲ್ಲಿ ಕಟ್ಟುವ ಅರಯೋಡಂ. ಒತ್ತೆಕೋಲದಲ್ಲಿ ಇದನ್ನು ಬಾಳೆದಿಂಡಿನ ಹೊರ ತೊಗಟೆ ಹಾಗೂ ತೆಂಗಿನ ಗರಿಗಳಿಂದ ಹೆಣೆದು ಕಲಾತ್ಮಕವಾಗಿ ಮಾಡುತ್ತಾರೆ. ಸಾಮಾನ್ಯ ತೆಯ್ಯಂ ಕೋಲಗಳಲ್ಲಿ ಸಿದ್ಧ ‘ಅರಯೋಡ’ಗಳಿರುತ್ತವೆ. ಇದು ಕೆಂಪು ಬಟ್ಟೆ, ಮಣಿ ಸರಕುಗಳಿಂದ ನಿರ್ಮಿಸ ಲಾಗಿರುತ್ತದೆ. ಅರಯೋಡದ ಮೇಲೆ ‘ವಳಯಂ’ ಎಂಬ ವೃತ್ತಾಕಾರದ ಝಗಮಗಿಸುವ ವೇಷಭೂಷಣವನ್ನು ಧರಿಸುತ್ತಾರೆ. ಅರಯೋಡದ ಒಳಭಾಗದಿಂದ ಹೊರಭಾಗಕ್ಕೆ ಒಂದು ಉದ್ದವಾದ ಬಾಲದ ಆಕಾರ ಚಾಚಿರುತ್ತದೆ. ಇದಕ್ಕೆ ‘ತಂಡವಾಲ್’ ಎಂದು ಹೆಸರು. ಒತ್ತೆಕೋಲದಲ್ಲಿ ಇದು ಎಳೆಯ ತೆಂಗಿನಗರಿಯದಾಗಿರುತ್ತದೆ. ವಿಷ್ಣುಮೂರ್ತಿ ತೆಯ್ಯಂ ಸೊಂಟಕ್ಕೆ ಕಟ್ಟುವ ಅರಯೋಡವನ್ನು ಭುಜದವರೆಗೂ ಬರುವಂತೆ ಎತ್ತರಕ್ಕೆ ಸುತ್ತಲೂ ಕಟ್ಟಿಕೊಳ್ಳುತ್ತಾರೆ. ಈ ತೊಡುಗೆಯು ಕೆಂಡದ ರಾಶಿಯ ಮೇಲೆ ಬೀಳುವಾಗ ಕೆಂಡವು ಮೈಗೆ ತಾಗದಂತೆ ತಡೆಯುತ್ತದೆ. ವಿಷ್ಣುಮೂರ್ತಿ ತೆಯ್ಯಂ ಧರಿಸುವ ಈ ಅರಯೋಡವು ಹಸಿ ಬಾಳೆ ನಾರಿನಿಂದ ದಪ್ಪಗೆ ರಚಿಸುವ ಕಾರಣಕ್ಕಾಗಿ ಬೆಂಕಿಯ ಶಾಖವು ದೇಹಕ್ಕೆ ತಾಗದಂತೆ ತಡೆಯುತ್ತದೆ. ಸೊಂಟಕ್ಕೆ ಸುತ್ತುವ ತೊಡುಗೆಯಲ್ಲಿ ಸುಮಾರು ಇಪ್ಪತ್ತೊಂದು ಎಳೆಗರಿಗಳನ್ನು ಕಟ್ಟುವುದು ಸಂಪ್ರದಾಯ. ಈ ಕಾರಣಕ್ಕಾಗಿ ಬೆಂಕಿಯ ಕೆಂಡದ ಮೇಲೆ ಬಿದ್ದ ತೆಯ್ಯಂ ವೇಷಧಾರಿಗೆ ಬೆಂಕಿಯ ಶಾಖ ತಟ್ಟುವುದಿಲ್ಲ. ಬೆಂಕಿಯ ಶಾಖದಿಂದ ರಕ್ಷಿಸಿಕೊಳ್ಳಲು ಕಲಾವಿದ ಕೈ, ಕಾಲು, ಶರೀರಗಳಿಗೆ ಅಕ್ಕಿ ಹಿಟ್ಟನ್ನು ನೀರಲ್ಲಿ ಕಲಸಿ ಹಚ್ಚಿಕೊಳ್ಳುತ್ತಾನೆ. ಈ ವೇಷ ರಚನೆಯನ್ನು ನೋಡಿದರೆ ತೆಯ್ಯಂಗಳು ಕಲಾತ್ಮಕ ಸೌಂದರ್ಯದಿಂದ ಶೋಭಿಸುವಂತೆ ರಚಿಸುವಾಗಲೂ ತೆಯ್ಯಂ ಆಚರಣೆಯ ಸಂದರ್ಭದಲ್ಲಿ ಲೌಕಿಕ ಅನುಕೂಲತೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳುತ್ತಾರೆ ಎಂಬುದನ್ನು ಕಂಡುಕೊಳ್ಳಬಹುದು.

ಮಲಯರು ಕಟ್ಟುವ ಬಹುಮುಖ್ಯ ಹೆಣ್ಣುತೆಯ್ಯಂ ರಕ್ತೇಶ್ವರಿ ಅಥವಾ ಚಾಮುಂಡಿ. ಬಣ್ಣಗಾರಿಕೆ ಮತ್ತು ವೇಷಧಾರಣೆಯಲ್ಲಿ ವಿಷ್ಣುಮೂರ್ತಿಗಿಂತ ಅಲ್ಪ ವ್ಯತ್ಯಾಸಗಳಿವೆ. ಕೈಗಳಿಗೆ ಧರಿಸುವ ಕೈಪುಡಪ್, ಕೈಕೂಡ್, ತಂಡವಳ, ಬಿರ್‌ದ್, ಕೈತಂಡ, ಮುಂಗೈವಳ, ಚೂಡಂ ಮೊದಲಾದ ಆಭರಣಗಳು ವಿಷ್ಣುಮೂರ್ತಿಗೆ ಧರಿಸುವುದೇ ಆಗಿದೆ. ತಲೆಗೆ ಧರಿಸುವ ಕಿರೀಟ, ತಲಪೂವ್, ತಲಪ್ಪಾಳಿ, ಲಕ್ಷ್ಮಿಕಾದ್, ಕುಟ್ಟಿಕಾದ್, ಚೆನ್ನಿಮಲರ್, ಬಿಡಿಚ್ಟಕುತ್ತಿ, ತಲಮಲ್ಲಿಗ, ಕೞುತ್ತ್‌ಕೆಟ್ಟ್ ಇತ್ಯಾದಿಗಳು ಸಮಾನವಾಗಿವೆ.

ಚಾಮುಂಡಿಗೆ ಎಳೆಯ ತೆಂಗಿನಗರಿ (ಒಲಿ) ಧರಿಸುವ ಕ್ರಮವಿಲ್ಲ. ಕೆಂಪು ಬಣ್ಣದ ನೆರಿಗಳಿರುವ ವೆಳುಂಬನ್ ಉಡುತ್ತಾರೆ. ಅನೇಕ ನೆರಿಗಳಿರುವ ಇದು ಮೂರು ಅಂತಸ್ತು ಗಳಲ್ಲಿದ್ದು, ಬಿಳಿ, ಕಪ್ಪು ಬಣ್ಣದ ಅಡ್ಡ ರೇಖೆಗಳಿಂದ ಕೂಡಿದೆ. ಸೊಂಟಕ್ಕೆ ಕಟ್ಟುವ ಸಾಮಗ್ರಿಗೆ ಕಲ್ಲಚುತ್ತ್ ಅಥವಾ ಅರೆಕೆಟ್ಟ್ ಎಂದು ಹೆಸರು. ಇದು ಮರದ ಅರ್ಧವೃತ್ತಾಕಾರದ ರಚನೆಯಾಗಿದ್ದು, ಉಲ್ಲನ್ ಹಾಗೂ ಬೇಗಡೆಗಳಿಂದ ಝಗಮಗಿಸುತ್ತದೆ. ಎದೆಯ ಭಾಗದಲ್ಲಿ ಸರ್ಪದ ಹೆಡೆಯ ಆಕೃತಿಯ ಮುಲಮಾರ್ ಧರಿಸುತ್ತಾರೆ. ಕುತ್ತಿಗೆಗೆ ಕೞುತ್ತ್‌ಕೆಟ್ಟ್ ಹಾಗೂ ಕೞುತ್ತ್‌ಪೂ ಇರುತ್ತದೆ. ಕೊರಳಿಗೆ ವನಮಾಲ ಧರಿಸುತ್ತಾರೆ.

ಚಾಮುಂಡಿ ತೆಯ್ಯಂ ಹಿಂಭಾಗಕ್ಕೆ ಕಟ್ಟಿಕೊಳ್ಳುವ ವಿಸ್ತಾರವಾದ ವೃತ್ತಾಕಾರದ ಪ್ರಭಾವಳಿಗೆ ‘ಪೊರತಟ್ಟ್’ ಎಂದು ಹೆಸರು. ಇದು ತುಳುನಾಡಿನ ದೈವಗಳ ‘ಅಣಿ’ಗೆ ಸಮಾನವಾಗಿದೆ. ಇದರಲ್ಲಿ ಕೆಂಪು ಬಟ್ಟೆಯ ಅಲಂಕಾರವಿದೆ. ಕೆಂಪು, ಕಪ್ಪು ಬಣ್ಣಗಳ ವಜ್ರ ಆಕಾರದ ರಚನೆಗಳು ವೃತ್ತಾಕಾರದಲ್ಲಿವೆ. ಬೆಳ್ಳಿಯ ಚಂದ್ರಾಕೃತಿಗಳನ್ನು ಹೊಲಿಯುತ್ತಾರೆ. ಇದಕ್ಕೆ ಅಲಕ್ಕ್ ಎಂದು ಹೆಸರು. ಪೊರತಟ್ಟಿನ ಅಂಚು ನವಿಲುಗರಿಯಿಂದ ಕೂಡಿದ್ದು, ಅದಕ್ಕೆ ಪೀಲಿತ್ತಳ ಎಂದು ಹೆಸರು. ಅದರ ಹೊರಭಾಗದಲ್ಲಿ ತೆಂಗಿನ ಎಳೆಯ ಗರಿಯಿಂದ ಸುಂದರ ವಾದ ಆಕೃತಿಯನ್ನು ಹೊಲಿಯುತ್ತಾರೆ. ಪೊರತಟ್ಟಿನ ಮೇಲ್ಭಾಗದಲ್ಲಿ ಮೂರು ಕೋಲುಗಳಲ್ಲಿ ತೆಂಗಿನ ಎಳೆಯ ಗರಿಯ ಕಟ್ಟುಗಳಿರುತ್ತವೆ. ಇದಕ್ಕೆ ಚವರಿಕೆಟ್ಟ್ ಎಂದು ಹೆಸರು. ಬೆಳ್ಳಿಯ ಸತ್ತಿಗೆಗಳನ್ನು ಇರಿಸುವುದೂ ಇದೆ. ಪೊರತಟ್ಟಿನ ಹಿಂಭಾಗದಲ್ಲಿ ಒಂದು ಬಟ್ಟೆ ಇಳಿಬಿಟ್ಟಿದ್ದು ಇದಕ್ಕೆ ‘ಪಟ್ಟ್’ ಎಂದು ಹೆಸರು. ಮೃಗ ಸಂಕಲ್ಪದ ತೆಯ್ಯಂಗಳಿಗೆ ಉದ್ದವಾದ ಬಾಲಗಳಿ ರುತ್ತವೆ. ವೀರಭದ್ರ ಮೊದಲಾದ ತೆಯ್ಯಂಗಳು ಮೈ ತುಂಬಾ ಹತ್ತಿಯನ್ನು ಅಂಟಿಸಿಕೊಳ್ಳುತ್ತವೆ.

ಬೆಂಕಿಯಲ್ಲಿ ಹಾರುವ ಮತ್ತು ದೊಂದಿಗಳನ್ನು ಬಳಸುವ ತೆಯ್ಯಂಗಳು ಸಾಮಾನ್ಯವಾಗಿ ಎಳೆಯ ತೆಂಗಿನ ಗರಿಗಳಿಂದ ನಿರ್ಮಿಸಿದ ತೊಡುಗೆಗಳಿರುತ್ತವೆ. ವಿಶೇಷ ರೀತಿಯಲ್ಲಿ ಸಿದ್ಧಪಡಿಸಿದ ಇದಕ್ಕೆ ‘ಉಡ’ ಎಂದು ಹೆಸರು. ಗುಳಿಗ, ಪೊಟ್ಟನ್ ಮೊದಲಾದ ತೆಯ್ಯಂಗಳಿಗೂ ಎಳೆಯ ತೆಂಗಿನಗರಿಗಳನ್ನೇ ಬಳಸುತ್ತಾರೆ.

ಶಿರೋಭೂಷಣಗಳು

ಮುಡಿ ಎಂಬುದು ತೆಯ್ಯಂಗೆ ಶಿರೋಭೂಷಣವಾಗಿದೆ. ಆದರೆ ಅದು ಕೇವಲ ಶಿರೋಭೂಷಣ ಮಾತ್ರ ಅಲ್ಲ. ಮುಡಿ ಎಂಬುದು ತೆಯ್ಯಂಗಳಿಗೆ ಆತ್ಮವಿದ್ದಂತೆ. ಸಾಮಾನ್ಯ ವಾಗಿ ಮುಡಿ ತಲೆಯ ಮೇಲಿರಿಸುವುದು ದೈವಸ್ಥಾನದ ಹೊಸ್ತಿಲ ಮುಂಭಾಗದಲ್ಲಿ. ಚೆಂಡೆ ಮೊದಲಾದ ವಾದ್ಯಘೋಷಗಳೊಂದಿಗೆ ಮುಡಿಯನ್ನು ತಲೆಗಿರಿಸಿದಾಗ ಕಲಾವಿದ ತೆಯ್ಯ ವಾಗುತ್ತಾನೆ. ಮುಡಿಯೊಂದಿಗೆ ದೈವಿಕ ಶಕ್ತಿಯು ಕಲಾವಿದನಲ್ಲಿ ಆವೇಶಗೊಳ್ಳುತ್ತದೆ ಎಂದರ್ಥ. ಮುಡಿ ತೆಗೆಯುವುದೆಂದರೆ ತೆಯ್ಯಂ ಮುಕ್ತಾಯವಾಯಿತೆಂದೇ ಅರ್ಥ. ಮುಡಿ ತೆಗೆಯುವಾಗ ಕೂಡಾ ಚೆಂಡೆ ಹಾಗೂ ವಾದ್ಯ ಘೋಷಗಳ ನಾದಗಳಿರುತ್ತವೆ.

ಸಾಮಾನ್ಯವಾಗಿ ಎಲ್ಲಾ ತೈಯ್ಯಂಗಳಿಗೂ ಟೊಪ್ಪಿ ಹಾಗೂ ಮುಡಿ (ಕಿರೀಟ) ಕಟ್ಟುತ್ತಾರೆ. ವಿವಿಧ ತೈಯ್ಯಂಗಳಿಗೆ ವಿವಿಧ ರೀತಿಯ ಮುಡಿಗಳಿರುತ್ತವೆ. ಭಗವತಿಗೆ ವೃತ್ತಾಕಾರದಲ್ಲಿರುವ ‘ವಟ್ಟಮುಡಿ’ ವೀರಭದ್ರನ್‌ಗೆ, ರಕ್ತಜಾತನ್ ಮೊದಲಾದ ತೈಯ್ಯಂಗಳಿಗೆ ಸಪೂರ ಹಾಗೂ ಉದ್ದನೆಯ ‘ಪೊದಚ್ಚಮುಡಿ’ ವೇಟಕ್ಕುರುಮಗನಿಗೆ ನವಿಲುಗರಿಯಿಂದ ರಚಿಸಿದ ‘ಪೀಲಿಮುಡಿ’ ಇರುತ್ತದೆ.

ತೆಯ್ಯಂಗಳ ಶಿರೋಭೂಷಣವನ್ನು ತೆಯ್ಯಂ ಆಚರಣೆಯ ಸಂದರ್ಭದಲ್ಲಿ ಸಿದ್ಧಮಾಡಿ ಕಟ್ಟಿಕೊಳ್ಳಲಾಗುತ್ತದೆ. ವಿವಿಧ ತೆಯ್ಯಂಗಳಿಗೆ ವಿವಿಧ ರೀತಿಯ ಶಿರೋಭೂಷಣಗಳಿರುತ್ತವೆ. ಮುಡಿಗಳನ್ನು ಎಳೆಯ ತೆಂಗಿನಗರಿ, ನವಿಲುಗರಿ, ಪಟ್ಟೆ ವಸ್ತ್ರಗಳು ಹಾಗೂ ಮರದಿಂದ ನಿರ್ಮಿಸುತ್ತಾರೆ. ಸಾಮಾನ್ಯವಾಗಿ ಇವುಗಳನ್ನು ವಟ್ಟಮುಡಿ, ಚವರಿಮುಡಿ, ಪೀಲಿಮುಡಿ, ಚಟ್ಟಮುಡಿ, ಪೂಕುಟ್ಟಿಮುಡಿ, ವಲ್ಯಮುಡಿ, ಪೂಮುಡಿ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ತೆಯ್ಯಂಗಳ ಮುಡಿಗಳಲ್ಲಿ ಒಂದು ಅಡಿಯ ಟೊಪ್ಪಿ ಮುಡಿಯಿಂದ ಆರಂಭಿಸಿ ಸುಮಾರು ೩೨ ಅಡಿಗಳಷ್ಟು ಉದ್ದದ ಮುಡಿಗಳೂ ಇರುತ್ತವೆ. ವೃತ್ತಾಕಾರದಲ್ಲಿರುವ ಕೆಲವೊಮ್ಮೆ ಹಾವಿನ ಹೆಡೆಯಾಕಾರದಲ್ಲಿರುವ ವಿವಿಧ ಆಕಾರದ ಮುಡಿಗಳೂ ಇರುತ್ತವೆ.  ಕುಂಬಳೆಯ ಆಲಿ ಚಾಮುಂಡಿ ತೆಯ್ಯಂ ವಲಿಯ ಮುಡಿಗೆ ಒಂದು ಉತ್ತಮ ಉದಾಹರಣೆ. ಎತ್ತರದ ಮುಡಿಗಳು ಭಗವತಿ ಸ್ಥಾನದ ಎದುರಿನ ಧ್ವಜಸ್ತಂಭದಷ್ಟು ಎತ್ತರವಾಗಿರುತ್ತದೆ. ದೊಡ್ಡ ಮುಡಿಗಳನ್ನು ಬಿದಿರ ಸಲಾಕೆಗಳನ್ನು ಬಳಸಿ, ಕೆಳಗಿನಿಂದ ಮೇಲಕ್ಕೆ ಅಗಲ ಕಿರಿದಾಗುತ್ತಾ ಹೋಗುವ ಮುಡಿಯು ಕಡುಕೆಂಪು ಬಣ್ಣದ ವಸ್ತ್ರದಿಂದ ಅಲಂಕೃತವಾಗಿರುತ್ತದೆ. ಇದನ್ನು ಧರಿಸಿದ ತೆಯ್ಯಂ ವೇಷಧಾರಿ ಮುಡಿಯ ಸಮತೋಲನವನ್ನು ಕಾಯ್ದುಕೊಂಡು ನೃತ್ಯ ಮಾಡಬೇಕಾಗು ತ್ತದೆ.

ಇಂತಹ ವಿಶೇಷ ಮುಡಿಕಟ್ಟುವ ತೆಯ್ಯಂ ವೇಷಧಾರಿ ದೈವಸ್ಥಾನದ ಪಕ್ಕದಲ್ಲಿ ನಿರ್ಮಿಸಿರುವ ‘ಪದಿ’ ಎಂಬ ಚಪ್ಪರದಲ್ಲಿ ಏಳು ದಿವಸಗಳ ಕಾಲ ವ್ರತಾಚರಣೆಯಲ್ಲಿರಬೇಕು.

ವಳಪಟ್ಟಣಂನ ಕಳರಿವಾದುಕ್ಕಲ್ ಕ್ಷೇತ್ರದ ತಾಯಿ ಪರದೇವತೆಯ ಮುಡಿಗೆ ಏಳು ಕಂಗಿನ ಮರಗಳನ್ನು ಉಪಯೋಗಿಸುತ್ತಾರಂತೆ. ಆದರೆ ಈ ಮುಡಿಯನ್ನು ಕಲಾವಿದ ತಲೆಯಲ್ಲಿ ಧರಿಸುವುದಿಲ್ಲ. ಸರಿಯಾಗಿ ನಿಲ್ಲಿಸಿದ ಈ ಮುಡಿಯ ಕೆಳಗೆ ಕಲಾವಿದ ಸ್ವಲ್ಪ ಹೊತ್ತು ನಿಲ್ಲುತ್ತಾನೆ. (ರಾಘವನ್ ಪಯ್ಯನಾಡು, ೧೯೭೯, ತೆಯ್ಯಂವು ತೋಟ್ಟಪಾಟುಂ, ಪು. ೧೧೯) ಮುಡಿಯನ್ನು ವಿವಿಧ ಹೂಗಳಿಂದ ಅಲಂಕರಿಸುತ್ತಾರೆ. ಕಿಸ್ಕಾರ ಹೂವಿನ ದಂಡೆಯನ್ನು ತೆಯ್ಯಂಗಳ ಮುಡಿ ಹಾಗೂ ಇನ್ನಿತರ ವೇಷ ವಿಧಾನಗಳಲ್ಲೂ ಯಥೇಚ್ಛವಾಗಿ ಬಳಸುತ್ತಾರೆ. ಪ್ರಕೃತಿಯಲ್ಲಿ ದೊರೆಯುವ ಹೂ, ಎಲೆ, ತೆಂಗಿನಗರಿ ಇವುಗಳಿಂದ ವಿವಿಧಾಕಾರದ ಮುಡಿಗಳನ್ನು ತೆಯ್ಯಂನ ಸಂದರ್ಭದಲ್ಲಿ ವಿಶೇಷವಾಗಿ ಕಾಣಬಹುದು. ತರುವಾಯದ ದಿನಗಳ ಪರಿಷ್ಕಾರವೋ ಎಂಬಂತೆ ಬಟ್ಟೆಯ ಮುಡಿಗಳು, ಮರದ ಮುಡಿಗಳು, ಕಿರೀಟವನ್ನು ಹೋಲುವ ರಚನೆಗಳೂ ಬಂದಿರುವುದನ್ನು ಕಾಣಬಹುದು.

ಕುಳಿಚ್ಚಾಟಂನ ವಿಷ್ಣುಮೂರ್ತಿಗೆ ತಲೆಗೆ ಕೆಂಪು ಬಟ್ಟೆಯನ್ನು ಬಿಗಿದು ಕಿರೀಟವನ್ನು ಕಟ್ಟುವ ವ್ಯವಸ್ಥೆ ಮಾಡುತ್ತಾರೆ. ಯಕ್ಷಗಾನದ ಧರ್ಮರಾಯನ ಕಿರೀಟದಂತಿರುವ, ಅದಕ್ಕಿಂತಲೂ ಸಣ್ಣದಾಗಿರುವ ವೃತ್ತಾಕಾರದ ಕಿರೀಟವನ್ನು ಬಿಗಿಯಾಗಿ ಕಟ್ಟುತ್ತಾರೆ. ಹಣೆಯ ಮೇಲ್ಭಾಗದಲ್ಲಿ ಕಟ್ಟುವ ಬೆಳ್ಳಿಯ ಅಥವಾ ಕಂಚಿನ ಆಭರಣಕ್ಕೆ ‘ತಲಪ್ಪಾಳಿ’ ಎಂದು ಹೆಸರು. ಇದರಲ್ಲಿ ೨೧ ನಾಗನ ಹೆಡೆಯ ಆಕೃತಿಗಳೂ, ಅರಳೆಲೆಗಳೂ ಇರುತ್ತವೆ. ತಲಪ್ಪಾಳಿಯ ಮೇಲೆ ‘ತಲಪೂವು’ ಕಟ್ಟುತ್ತಾರೆ. ಇದು ಕಿಸ್ಗಾರ ಹೂವಿನದಂಡೆ ಹಾಗೂ ಬೆಳ್ಳಿಯ ಹೂಗಳನ್ನು ಪೋಣಿಸಿದ ಆಭರಣವಾಗಿರುತ್ತದೆ. ಕಿವಿಯ ಬಳಿಯಲ್ಲಿ ಧರಿಸುವ ಆಭರಣಗಳಿಗೆ ‘ತಕ್ಕಯುಂ ಚುಳಿಯುಂ’ ಎಂದು ಹೆಸರು. ಕಿರೀಟದ ಹಿಂಭಾಗದಲ್ಲಿ ಇಳಿಬಿಡುವ ಕೂದಲಿಗೆ ‘ವಂಜಿ’ ಎಂದು ಹೆಸರು. ಇದು ಸಾಮಾನ್ಯವಾಗಿ ಪ್ಲಾಸ್ಟಿಕ್‌ನದು. ಹಿಂದೆ ಹತ್ತಿಯ ನೂಲಿನದಾಗಿರುತ್ತಿತ್ತು. ಇದು ಯಕ್ಷಗಾನದ ಕೇಸರವನ್ನು ಹೋಲುತ್ತದೆ. ವಿಷ್ಣುಮೂರ್ತಿಯ ‘ಕುಳಿಚ್ಚಾಟಂ’ ಮುಖವರ್ಣಿಕೆಯನ್ನು ಹೊರತುಪಡಿಸಿದರೆ ಯಕ್ಷಗಾನ ಮತ್ತು ಕಥಕಳಿಯ ವೇಷವನ್ನು ಬಹುತೇಕ ಹೋಲುತ್ತದೆ.

ವಿಷ್ಣುಮೂರ್ತಿಯು ತಲೆಗೆ ಧರಿಸುವ ಕಿರೀಟದಲ್ಲಿ ಬೇರೆ ಬೇರೆ ಹಂತಗಳಿವೆ. ಕಿರೀಟದ ಮೇಲೆ ‘ಬಿಡಿಚ್ಚ್‌ಕುತ್ತಿ’ ಎಂಬ ಸರ್ಪದಾಕೃತಿಗಳಿರುವ ಆಭರಣಗಳಿವೆ. ಅದರ ಮೇಲೆ ‘ತಲಮಲ್ಲಿಗ’ ಎಂಬ ಬೆಳ್ಳಿಯ ಆಭರಣವಿರುತ್ತದೆ. ಕಿರೀಟದ ಮೇಲ್ಭಾಗದಲ್ಲಿ ಬೆಳ್ಳಿಯ ಸತ್ತಿಗೆ ಇರುತ್ತದೆ. ಹಣೆಯ ಮೇಲೆ ತಲಪ್ಪಾಳಿ ಕಟ್ಟುತ್ತಾರೆ. ಅದರ ಮೇಲೆ ‘ತಲಪೂವ್’ ಕಟ್ಟುತ್ತಾರೆ. ಇದು ಕಿಸ್ಗಾರ ಹೂವಿನದಂಡೆ. ಕಿರೀಟದ ಎರಡೂ ಬದಿಗಳಲ್ಲಿ ಕಿವಿಯ ಕಡೆಯಿಂದ ಮೇಲಕ್ಕೆ ಲಕ್ಷ್ಮಿಕಾದ್. ಅದಕ್ಕಿಂತ ಕೆಳಗೆ ಕುಟ್ಟಿಕಾದ್ ಮತ್ತು ಚೆನ್ನಿಮಲರ್ (ಕೆನ್ನೆಪೂ) ಧರಿಸುತ್ತಾರೆ. ಕಿರೀಟದ ಹಿಂಭಾಗದಲ್ಲಿ ವಂಜಿ (ಕೇಸರ) ಇರುತ್ತದೆ. ಕುತ್ತಿಗೆಯ ಭಾಗದಲ್ಲಿ ಕೞುತ್ತುಕೆಟ್ಟ್, ಕೞುತ್ತ್‌ಪೂವ್ ಎಂಬ ಆಭರಣಗಳು ಕಿಸ್ಕಾರ ಹೂವಿನ ದಂಡೆಗಳಾಗಿರುತ್ತವೆ. ಹಣೆಯಲ್ಲಿ ಧರಿಸುವ ಪುಟ್ಟ ಬೆಳ್ಳಿಯ ಆಭರಣಕ್ಕೆ ‘ಪೊಂಗುರಿ’ ಎಂದು ಹೆಸರು. ಸೊಂಟದ ಕೆಳಭಾಗದಲ್ಲಿ ‘ಒಲಿ’ (ತೆಂಗಿನ ಎಳೆಯ ಗರಿ) ಧರಿಸುತ್ತಾರೆ. ಒತ್ತೆಕೋಲದ ವಿಷ್ಣುಮೂರ್ತಿಯು ತಲೆಗೆ ಧರಿಸುವ ಕಿರೀಟವು ಪೂರ್ಣವಾಗಿ ತೆಂಗಿನ ಗರಿಯದಾಗಿರುತ್ತದೆ. ಇದಕ್ಕೆ ‘ವಾದಿರ’ ಎಂದು ಹೆಸರು. ತಲಪ್ಪಾಳಿ, ಕುಟ್ಟಿಕಾದ್, ತಲಪೂ, ಚೆನ್ನಿಮಲರ್ ಧರಿಸುತ್ತಾರೆ.

ವರ್ಣರಂಜಿತವಾದ ತೆಯ್ಯಂ ಮುಡಿಗಾಗಲೀ, ಇನ್ನಿತರ ವೇಷಭೂಷಣಗಳ ಸಿದ್ಧತೆಗಳನ್ನು ತೆಯ್ಯಂ ಕಟ್ಟುವ ಸಮುದಾಯದ ಜನರೇ ಸ್ವತಃ ನಿರ್ಮಿಸಿಕೊಳ್ಳುತ್ತಾರೆ. ಮುರಿಕ್ಕ್ ಅಥವಾ ಭಾರ ಕಡಿಮೆ ಇರುವ ಇತರ ಮರಗಳನ್ನು ಕಿರೀಟ ನಿರ್ಮಾಣಕ್ಕೆ ಬಳಸುತ್ತಾರೆ. ಈ ಮರಗಳ ಜತೆಗೆ ಮಯಣ ಹಾಗೂ ಅರಗನ್ನು ಬಳಸುತ್ತಾರೆ. ಅಲಂಕಾರಕ್ಕೆ ಬೇಕಾದಂತೆ ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿಸುತ್ತಾರೆ. ಸೀಸದ ಫಲಕ ರೂಪವನ್ನು ಮಾಡಿ ಅರಿಶಿನ, ತುಪ್ಪ, ಮಯಣ, ಅರಗು ಇತ್ಯಾದಿಗಳನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡುತ್ತಾರೆ. ಬಿಸಿಯಾದಾಗ ಸೀಸದ ಫಲಕ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಮುಡಿಯ ಹೊರಭಾಗಕ್ಕೆ ಬಳಸುತ್ತಾರೆ. ಆದರೆ ಈಗ ಇಂತಹ ಫಲಕಗಳು ಸಿದ್ಧವಾಗಿ ಅಂಗಡಿಯಲ್ಲಿಯೂ ದೊರಕುತ್ತವೆ. ಮುಡಿಯಲ್ಲಿ ಅಲ್ಲಲ್ಲಿ ಹೊಳೆಯುವ ಆಭರಣಗಳನ್ನು ಅಂಟಿಸುತ್ತಾರೆ. ಈ ಫಲಕಗಳಿಗೆ ಕೆಂಪು ಬಣ್ಣ ಹಚ್ಚಲು ‘ಚಾಯಿಲ್ಯಂ’ದ ಜತೆಗೆ ಮಯಣ ಹಾಗೂ ಅರಗನ್ನು ಬಳಸುತ್ತಾರೆ. ತೆಯ್ಯಂ ಆಚರಣೆಯು ಅತ್ಯಂತ ಪ್ರಾಚೀನವಾದುದೆಂದು ಹಲವರ ಅಭಿಪ್ರಾಯ. ಆದರೆ ಅದು ಕಾಲಕ್ಕೆ ತಕ್ಕಂತೆ ಆಧುನಿಕವಾಗುತ್ತಲೂ ಸೌಂದರ್ಯಾತ್ಮಕವಾಗಿದೆ. ತೆಯ್ಯಂನ ಆರಾಧನಾ ವಿಧಾನ ಪ್ರಾಚೀನ ರೀತಿಯದ್ದಾಗಿದೆ. ಅದರ ಸೌಂದರ್ಯಪ್ರಕೃತಿಯನ್ನಾಧರಿಸಿದೆ.

ಹಿಂದಿನ ಕಾಲದಲ್ಲಿ ವೇಷ ಧರಿಸುವ ವ್ಯಕ್ತಿಯಿಂದ ವಿಭಿನ್ನವಾದ ರೂಪವನ್ನು ಪ್ರತಿನಿಧೀಕರಿಸಲು ಮುಖವಾಡಗಳನ್ನು ಧರಿಸುತ್ತಿದ್ದರು. ಪ್ರೇಕ್ಷಕರಿಗೆ ಆ ವ್ಯಕ್ತಿಯ ಕುರಿತ ಪ್ರಜ್ಞೆ  ಮರೆಯಾಗುವುದಕ್ಕೆ ಮುಖವಾಡಗಳು ನೆರವಾಗುತ್ತಿದ್ದಿರಬೇಕು. ತೆಯ್ಯಂಗಳು ಕಂಗಿನ ಹಾಳೆಯ ಮುಖವಾಡಗಳನ್ನು ಬಳಸುತ್ತಿದ್ದುವು. ಹಾಳೆಯ ಹೊರ ಭಾಗದಲ್ಲಿ ಮಸಿಯಿಂದ ಕಣ್ಣು, ಮೂಗು ಇತ್ಯಾದಿಗಳನ್ನು ಬರೆಯುತ್ತಿದ್ದರು. ಇಂತಹ ಮುಖವಾಡಗಳನ್ನು ಗುಳಿಗ ಮತ್ತು ಪೊಟ್ಟನ್ ತೆಯ್ಯಂ ಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಯಕ್ಷಗಾನದ ಮುಖವರ್ಣಿಕೆಗಳಿಗೆ ಇಂತಹ ಮುಖವಾಡಗಳೇ ಪ್ರೇರಣೆ ನೀಡಿರಬಹುದಾದ ಸಾಧ್ಯತೆಗಳೇ ಇದೆ.

ಹಿಂದೆ ಯಾವುದೋ ಒಂದು ಕಾಲಘಟ್ಟದಲ್ಲಿ ಎಲ್ಲಾ ತೆಯ್ಯಂಗಳೂ ಮುಖವಾಡಗಳನ್ನೇ ಧರಿಸುತ್ತಿದ್ದಿರಬೇಕು. ಕಥಕಳಿಯಲ್ಲಿಯೇ ಮರದ ಮುಖವಾಡಗಳನ್ನು ಧರಿಸುತ್ತಿದ್ದುದಾಗಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ (ರಾಘವ ಪಯ್ಯನಾಡು, ೧೯೯೮). ಮಾನವನ ಸೌಂದರ್ಯಪ್ರಜ್ಞೆ  ಬೆಳೆದಂತೆ ಮುಖದಲ್ಲಿ ಬಣ್ಣ ಹಚ್ಚಲು ಆರಂಭಿಸಿರಬೇಕು. ಮುಖವಾಡ ದಿಂದ ಬಣ್ಣಗಾರಿಕೆಯವರೆಗಿನ ಬೆಳವಣಿಗೆಯಲ್ಲಿ ತೆಯ್ಯಂನ ಭಾವಾಭಿನಯಕ್ಕೂ ಅವಕಾಶ ದೊರೆತಿರಬೇಕು. ಮುಖವಾಡಗಳನ್ನು ನೋಡಿದರೆ ತೆಯ್ಯಂ ವೇಷಗಳು ತಮ್ಮ ಪ್ರಾಚೀನ ಸ್ವರೂಪವನ್ನು ಪ್ರಕಟಿಸುವಂತೆ ತೋರುತ್ತವೆ. ಮುಖವಾಡ ಮತ್ತು ತೆಂಗಿನ ಗರಿಗಳ ತೊಡುಗೆಗಳು ತೆಯ್ಯಂನ ಪ್ರಾಚೀನತೆಯ ಕುರುಹುಗಳಾಗಿವೆ. ಆದರೆ ಮುಖ ಬರವಣಿಗೆ, ವರ್ಣರಂಜಿತವಾದ ಶಿರೋಭೂಷಣಗಳು, ವಸ್ತ್ರ ಮೊದಲಾದ ವೇಷಭೂಷಣಗಳು ಆಧುನಿಕತೆಯ ಸಂಕೇತಗಳಂತೆ ಭಾಸವಾಗುತ್ತವೆ. ಯಕ್ಷಗಾನವು ಈ ಸಂದರ್ಭದ ಸೃಷ್ಟಿ ಎಂದು ತೋರುತ್ತದೆ. ಕಥಕಳಿಯ ಮುದ್ರೆಗಳ ಅಪರಿಷ್ಕೃತ ರೂಪವನ್ನು ತೆಯ್ಯಂಗಳಲ್ಲಿ ಗುರುತಿಸಲಾಗಿದೆ. ತೆಯ್ಯಂಗಳಿಗಿಂತ ಹೆಚ್ಚಾಗಿ ತಿರಗಳಲ್ಲಿ ಕಥಕಳಿ ಮುದ್ರೆಗಳ ರೂಪವನ್ನು ಕಾಣಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ತೆಯ್ಯಂಗಳಿಗೂ ಬೆಂಕಿಗೂ ದೈವಿಕವಾದ ಸಂಬಂಧವಿರುವುದನ್ನು ಕಾಣಬಹುದು. ಶರೀರದ ಸುತ್ತಲೂ ಕಟ್ಟಿದ ತೆಂಗಿನ ಹುರಿಗೆ ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಮುಳುಗಿಸಿ ಉರಿಯುವ ದೊಂದಿಗಳ ಮಧ್ಯೆ ಸಹಿಸಲಸಾಧ್ಯವಾದ ಬಿಸಿಯನ್ನು ಅನುಭವಿಸುತ್ತಾ ನೃತ್ಯ ಮಾಡುವ ಭಗವತಿ ಭಯಾನಕವಾಗಿರುತ್ತದೆ. ಇದರೊಂದಿಗೆ ತೆಂಗಿನ ಗರಿಯ ಮುಡಿಯ ಮೇಲೆ ತುಂಬಾ ಕೋಲುದೀಪ ಉರಿಸಿ ಇಡುತ್ತಾರೆ. ಯಕ್ಷಗಾನದ ವೀರಭದ್ರನ ಕಿರೀಟಕ್ಕೆ ಈ ತೆರನ ಕೋಲುದೀಪ ಉರಿಸಿ ರಂಗಪ್ರವೇಶ ಮಾಡುವ ಸಂಪ್ರದಾಯ ಇದೆ. ದೂರದಿಂದ ನೋಡುವಾಗ ಬೆಂಕಿಯ ಜ್ವಾಲೆಯ ರೂಪವೊಂದು ನೃತ್ಯ ಮಾಡುವಂತೆ ಕಾಣುತ್ತಿರುತ್ತದೆ. ಇನ್ನಿತರ ಅನೇಕ ತೆಯ್ಯಂಗಳು ಕೈಯಲ್ಲಿ ದೊಂದಿ ಹಿಡಿದು ನೃತ್ಯ ಮಾಡುವ ಸಂಪ್ರದಾಯವಿದೆ. ಗುಳಿಗನ್ ತೆಯ್ಯಂ ತೆಂಗಿನ ಗರಿಯ ಸೂಟೆಯನ್ನು ಬೀಸುತ್ತಾ ಕುಣಿಯುತ್ತದೆ. ಬೆಂಕಿ ಕೆಂಡದಲ್ಲಿ ಪ್ರೇಕ್ಷಕರೆದುರು ಬೆಂಕಿಯ ರಾಶಿಯಲ್ಲಿ ಕವುಚಿ ಬೀಳುವ ತೆಯ್ಯಂಗಳಿವೆ. ವಿಷ್ಣುಮೂರ್ತಿ ತೆಯ್ಯಂ ಬೃಹದಾಕಾರದ ಕೆಂಡದ ರಾಶಿಯ ಮೇಲೆ ಬೀಳುವ ದೃಶ್ಯ ರೋಮಾಂಚಕಾರಿಯಾದುದು. ಬೆಂಕಿಯು ಸೌಂದರ್ಯವನ್ನು ಪ್ರಕಟಿಸುವುದರ ಜೊತೆಗೆ ನಾಶದ ಸಂಕೇತವೂ ಆಗಿದೆ. ಹಾನಿಕಾರಕವಾದ ಬೆಂಕಿಯ ಜೊತೆ ತೆಯ್ಯಂ ಆಟವಾಡುವುದರ ಮೂಲಕ ತನ್ನ ಅಲೌಕಿಕ ಸಾಮರ್ಥ್ಯವನ್ನು ಪ್ರಕಟಪಡಿಸುತ್ತದೆ. ಆರಾಧಕರಲ್ಲಿ ಭಕ್ತಿಯ ಅಗಾಧತೆಯನ್ನು ವೃದ್ದಿಸಲು ತೆಯ್ಯಂನ ಈ ಅಲೌಕಿಕ ಸಾಮರ್ಥ್ಯ ಹಾಗೂ ಸೌಂದರ್ಯ ನೆರವಾಗುತ್ತದೆ. ಯಕ್ಷಗಾನದಲ್ಲಿ ರಾಕ್ಷಸ ಪಾತ್ರಗಳು ಪಂಜು ಹಿಡಿದು ಬೆಂಕಿಗೆ ರಾಳದಪುಡಿ ಎಸೆಯುತ್ತ ಬೆಂಕಿಯ ಜ್ವಾಲೆಯನ್ನು ಪ್ರಕಟಿಸುತ್ತವೆ.

ಸಾಮಾನ್ಯವಾಗಿ ಎಲ್ಲಾ ತೆಯ್ಯಂಗಳೂ ಕೈಯಲ್ಲಿ ಆಯುಧಗಳನ್ನು ಧರಿಸುತ್ತವೆ. ಉತ್ತರ ಕೇರಳದಲ್ಲಿ ಆಚರಣೆಯಲ್ಲಿರುವ ತೆಯ್ಯಂಗಳಲ್ಲಿ ಹೆಣ್ಣು ತೆಯ್ಯಂಗಳೇ ಅಧಿಕ. ಸಾಮಾನ್ಯವಾಗಿ ತೆಯ್ಯಂಗಳು ವಿವಿಧ ರೀತಿಯ ಶೂಲಗಳನ್ನೊ, ಕೋಲುಗಳನ್ನೊ, ಬಿಲ್ಲು ಬಾಣಗಳನ್ನೊ ಸಣ್ಣ ಕತ್ತಿಗಳನ್ನೊ, ಗುರಾಣಿ, ದಂಡ ಮೊದಲಾದ ಆಯುಧಗಳನ್ನೊ ಧರಿಸುತ್ತವೆ. ಸಾಮಾನ್ಯ ವಾಗಿ ತೆಯ್ಯಂಗಳು ಬಳಸುವ ಆಯುಧಗಳು ಹರಿತವಾದ ಲೋಹದ ಆಯುಧಗಳಾಗಿರುತ್ತವೆ. ವಾದ್ಯ ತಾಳಗಳ ಲಯಕ್ಕನುಗುಣವಾಗಿ ಆಯುಧ ಹಿಡಿದು ನೃತ್ಯ ಮಾಡುವ ತೆಯ್ಯಂ ಕೋಲಗಳಿಗೆ ನಿರ್ದಿಷ್ಟವಾದ ಹೆಜ್ಜೆಗಾರಿಕೆಯೂ ಇದೆ. ಅಲೌಕಿಕವಾದ ಸನ್ನಿವೇಶ ಸೃಷ್ಟಿಗೆ ಪೂರಕವಾಗುವ ವರ್ಣವೈಭವದ ಜೊತೆಗೆ ಇಲ್ಲಿನ ಜಾನಪದ ಕಲಾತ್ಮಕ ದೃಷ್ಟಿಕೋನ ಗಮನಾರ್ಹವಾಗಿದೆ.

ಮುಡಿಯೇಟ್

ಭದ್ರಕಾಳಿಯನ್ನು ಸುಪ್ರೀತಗೊಳಿಸಲು ನಡೆಸುವ ಒಂದು ಧಾರ್ಮಿಕ ರಂಗಕಲೆಯೇ ಮುಡಿಯೇಟ್. ಎರ್ನಾಕುಳಂ, ಕೋಟ್ಟಯಂ, ಇಡುಕ್ಕಿ ಜಿಲ್ಲೆಗಳಲ್ಲಿ ಇದು ಪ್ರಚಾರದಲ್ಲಿದೆ. ಮಾರಾರ್ ಹಾಗೂ ಕುರುಪ್ಪು ಸಮುದಾಯದ ಜನರು ಈ ಕಲೆಯನ್ನು ನಿರ್ವಹಿಸುತ್ತಾರೆ. ಭದ್ರಕಾಳಿಯ ವೇಷ ಧರಿಸುವ ಕಲಾವಿದ ತಲೆಯಲ್ಲಿ ಧರಿಸುವ ಕಿರೀಟಕ್ಕೆ ಮುಡಿ ಎಂದು ಹೆಸರು. ಕಾಳಿಯ ಭೀಕರವಾದ ಮುಖ ಹಾಗೂ ಜಟಾಭಾರವು ಕೂಡಿಕೊಂಡಿರುವುದೇ ಮುಡಿ. ಸಾಮಾನ್ಯವಾಗಿ ಮುಡಿಯನ್ನು ಹಲಸಿನ ಮರದಿಂದ ನಿರ್ಮಿಸುತ್ತಾರೆ. ಹಲಸಿನ ಮರದ ತಿರುಳನ್ನು ವೃತ್ತಾಕಾರದಲ್ಲಿ ಕತ್ತರಿಸಿ ಸಿಂಹ, ಗಜ ಕುಂಡಲಗಳನ್ನು ಹಾಗೂ ನಾಗರ ಹೆಡೆಗಳನ್ನು ನಿರ್ಮಿಸುತ್ತಾರೆ. ಕೆಂಪು ಬಟ್ಟೆ, ಮುತ್ತುಗಳು ಹಾಗೂ ನವಿಲು ಗರಿಗಳಿಂದ ಮುಡಿಯನ್ನು ಅಲಂಕರಿಸುತ್ತಾರೆ. ಮುಡಿಯ ಸುತ್ತಲೂ ಕಿಸ್ಗಾರ ಹೂವಿನ ಅಲಂಕಾರವನ್ನು ಮಾಡುವುದಿದೆ. ಭದ್ರಕಾಳಿ ದೇವಸ್ಥಾನಗಳಲ್ಲಿ ಮುಡಿಯೇಟು ನಡೆಯುವಾಗ ಕಾಳಿಯ ವೇಷಧಾರಿ ಇತರ ಅಲಂಕಾರಗಳನ್ನು ಪೂರೈಸಿ ದೇವಾಲಯದ ಮುಂಭಾಗದಲ್ಲಿ ಮುಡಿಯನ್ನು ಧರಿಸುತ್ತಾನೆ. ಉಳಿದ ವೇಷಗಳಿಗೆ ಈ ನಿಬಂಧನೆಗಳಿಲ್ಲ. ಮುಡಿಯೇಟ್ ಎಂದರೆ ಮುಡಿ ಯನ್ನು ಸ್ವೀಕರಿಸುವುದು ಎಂದರ್ಥ. ಈ ಕಾರಣಕ್ಕಾಗಿಯೇ ಈ ಧಾರ್ಮಿಕ ಕಲೆಗೆ ಮುಡಿಯೇಟ್ ಎಂಬ ಹೆಸರು ಬಂದಿದೆ. ಭದ್ರಕಾಳಿ ದೇವಾಲಯಗಳಲ್ಲಿ ಮುಡಿಯೇಟಿಗೆ ಮೊದಲು ಕಳಮೆೞುತ್ತುಪಾಟುಂ ನಡೆಸುವರು. ಅಲಂಕರಿಸಿದ ಚಪ್ಪರದ ಕೆಳಗೆ ಪಂಚವರ್ಣ ಗಳಿಂದ ಕಳ ಬರೆಯುವರು. ಬೇತಾಳವಾಹನೆಯಾದ ಕಾಳಿಯು ದಾರಿಕಾಸುರನ ತಲೆಯನ್ನು ಕಡಿದು ನಿಂತಿರುವ ರೂಪವನ್ನು ಕಳದಲ್ಲಿ ಬರೆಯುತ್ತಾರೆ. ಈ ಕಳವು ಮುಡಿಯೇಟ್‌ನಲ್ಲಿ ಚಿತ್ರ, ಶಿಲ್ಪ ಮೊದಲಾದ ಸೌಂದರ್ಯದ ಕಲ್ಪನೆಯ ಹೆಗ್ಗುರುತಾಗಿದೆ. ಕಳದಲ್ಲಿ ರಚಿಸಿದ ಕಾಳಿಯ ಚಿತ್ರಕ್ಕೆ ಕಳಂ ಪೂಜೆಯ ಮೂಲಕ ಜೀವದ ಆವಾಹನೆಯನ್ನು ಮಾಡಲಾಗುತ್ತದೆ. ಅದರ ಸಂಕೇತವಾಗಿ ವೇಷಭೂಷಣವನ್ನು ಧರಿಸಿದ ಪಾತ್ರಧಾರಿಯು ದೃಶ್ಯರೂಪದಲ್ಲಿ ಮುಡಿಯೇಟ್‌ನಲ್ಲಿ ಕಾಣಿಸಿಕೊಳ್ಳುತ್ತಾನೆ. ಜನರ ಮನಸ್ಸಿನಲ್ಲಿರುವ ಕಾಳಿಯನ್ನು ಕಳದಲ್ಲಿ ರುವ ಕಾಳಿಯಾಗಿ ಪರಿವರ್ತಿಸಿ ಆ ಮೂಲಕ ಜೀವಂತ ಪಾತ್ರಧಾರಿಯಲ್ಲಿ ಸೇರಿಸಿಕೊಳ್ಳ ಲಾಗುತ್ತದೆ. ಹೀಗೆ ಸಂಕಲ್ಪದ ಕಾಳಿಯು ಜನರ ಮುಂದೆ ದೃಶ್ಯ ರೂಪದಲ್ಲಿ ಮುಡಿಯೇಟ್ ಕಲೆಯಲ್ಲಿ ಮೂರ್ತಗೊಳ್ಳುತ್ತದೆ.

ಮುಡಿಯೇಟ್ ಪ್ರದರ್ಶನದ ಗಂಟೆಗಳಿಗೆ ಮುಂಚಿತವಾಗಿಯೋ, ಕೆಲವೊಮ್ಮೆ ಮೂರು ದಿವಸಗಳಿಗೋ, ಏಳು ದಿವಸಗಳಿಗೋ, ನಲವತ್ತು ದಿವಸಗಳಿಗೋ ಮುಂಚಿತವಾಗಿ ಕಳಂನ್ನು ಬರೆಯಲಾರಂಭಿಸುತ್ತಾರೆ. ಹರಕೆ ರೂಪದಲ್ಲಿ ಯಾವುದಾದರೂ ಕುಟುಂಬದ ಜನರೇ ಕಳಂನ್ನು ಬರೆಯುತ್ತಾರೆ. ದಾರಿಕನನ್ನು ವಧಿಸಿ ಭದ್ರಕಾಳಿಯು ಕೋಪದಿಂದ ಕೈಲಾಸದ ಕಡೆಗೆ ಬರುತ್ತಿದ್ದಾಗ ಆಕೆಯನ್ನು ಶಮನಗೊಳಿಸಲು ಶಿವನ ಸಲಹೆಯಂತೆ ಭೂತಗಣಗಳು ಕಾಳಿಯ ಚಿತ್ರವನ್ನು ದಾರಿಯಲ್ಲಿ ಬರೆದವಂತೆ. ಇದನ್ನು ಕಂಡು ಕಾಳಿ ಸಂತುಷ್ಟೆಯಾದಳಂತೆ. ಇದರ ಸಂಕೇತವಾಗಿ ಕಳಮೆೞುತ್ತು ಆರಂಭವಾಯಿತು ಎಂಬುದು ಐತಿಹ್ಯ.

ಕಳ ಬರೆಯುವ ಮನೆಯಲ್ಲಿ ಕೃಷಿ ಸಮೃದ್ದಿಯನ್ನು ಪ್ರತಿನಿಧೀಕರಿಸುವ ತೆಂಗಿನ ಗರಿ, ಕಂಗು, ಮಾವಿನ ಎಲೆ ಮೊದಲಾದವುಗಳಿಂದ ಸಿಂಗರಿಸಿದ ಚಪ್ಪರವಿರುತ್ತದೆ. ಈ ಚಪ್ಪರದ ಕೆಳಗೆ ಇಷ್ಟ ದೇವತೆಯ ಪ್ರಾರ್ಥನೆಯೊಂದಿಗೆ ಕಳಮೆೞುತ್ತು ಆರಂಭಿಸುತ್ತಾರೆ. ಅಕ್ಕಿ ಹುಡಿ, ಅರಿಶಿನ ಹುಡಿ, ಹಸಿರು ಹುಡಿ, ಕಪ್ಪು ಹುಡಿ ಹಾಗೂ ಅರಿಶಿನ ಮತ್ತು ಸುಣ್ಣ ಸೇರಿಸಿ ತಯಾರಿಸಿದ ಕೆಂಪು ಬಣ್ಣದ ಹುಡಿಯನ್ನು ಕಳಂ ಚಿತ್ರಕ್ಕೆ ಬಳಸುತ್ತಾರೆ. ಬಾಗೇ ಮರದ ಎಲೆಯನ್ನು ಹುಡಿ ಮಾಡಿ ಹಸಿರು ಬಣ್ಣವನ್ನು ತಯಾರಿಸಲಾಗುತ್ತದೆ. ಪ್ರಕೃತಿದತ್ತವಾದ ಧಾನ್ಯಗಳ ಹುಡಿ ಹಾಗೂ ಸಸ್ಯಗಳ ಹುಡಿಯನ್ನು ಬಳಸಿ ರಚಿಸುವ ಈ ಚಿತ್ರವು ಕೇರಳದ ಪ್ರಕೃತಿಯ ಪ್ರತಿಫಲನವೆಂದು ತಿಳಿದುಕೊಳ್ಳಬಹುದು. ರಾತ್ರಿ ಹೊತ್ತಿನ ಆಚರಣೆಯ ವಾತಾವರಣಕ್ಕೆ ಅನುಗುಣವಾಗಿ ತೀಕ್ಷ್ಣ ಮತ್ತು ಸರಳ ಬಣ್ಣಗಳನ್ನು ಸಂಕಲಿಸಿದ ಸೌಂದರ್ಯವನ್ನಿಲ್ಲಿ ಕಾಣಬಹುದು. ಕತ್ತಲೆ (ಕಪ್ಪು) ಪ್ರಕೃತಿ (ಹಸಿರು) ಕುರುದಿ (ಕೆಂಪು) ಪಂಜು (ಹಳದಿ) ಮಡಿ ಬಟ್ಟೆ (ಬಿಳಿ)- ಹೀಗೆ ವಿವಿಧ ಅಂಶಗಳು ಸೇರಿದ ವರ್ಣ ಚಿತ್ರವೇ ಕಳಂ. ಮೊದಲು ಕಪ್ಪು ಬಣ್ಣವನ್ನು ಹಾಕಿ ನಾಲ್ಕು, ಎಂಟು, ಹದಿನಾರು ಕೈಗಳ ಪ್ರಮಾಣಕ್ಕೆ ಹೊಂದಿಕೊಂಡು ದಾರಿಕನ ಶಿರವನ್ನು ಕೈಯಲ್ಲಿ ಹಿಡಿದ ಭದ್ರಕಾಳಿಯ ಚಿತ್ರವನ್ನು ರಚಿಸುತ್ತಾರೆ. ಕಳಂ ರಚನೆಗೆ ಸುಮಾರು ಮೂರು ಘಂಟೆ ಸಮಯ ತಗಲುತ್ತದೆ. ಭದ್ರಕಾಳಿಯ ರೂಪವನ್ನು ಸಾಕ್ಷಾತ್ಕಾರಗೊಳಿಸುವ ಸಲುವಾಗಿ ಕಳಂ ಹಾಡನ್ನು ಹಾಡುತ್ತಾರೆ.

ದೇವಾಲಯದ ಅಥವಾ ಕಾವಿನ ಸಮೀಪವಿರುವ ಒಂದು ಕೋಣೆಯೇ ಮುಡಿಯೇಟಿನ ಅಣಿಯರ, ಅಂದರೆ ವೇಷದ ಮನೆ. ವೇಷಭೂಷಣಗಳನ್ನೆಲ್ಲ ಅಲ್ಲಿಯೇ ಇರಿಸುತ್ತಾರೆ. ದೇವಿಯನ್ನು ಸಂಕಲ್ಪಿಸಿ ದೀಪ ಬೆಳಗಿಸಿ ಪೂಜೆ ಮಾಡಿದ ಬಳಿಕವೇ ಅಲಂಕಾರಕ್ಕೆ ತೊಡಗುತ್ತಾರೆ. ಕನ್ನಡಿ ನೋಡಿಕೊಂಡು ಸ್ವಯಂ ಮುಖಕ್ಕೆ ಬಣ್ಣ ಹಾಕುವರು. ಚುಟ್ಟಿಯನ್ನು ಮಾತ್ರ ಇನ್ನೊಬ್ಬರ ಸಹಾಯದಿಂದ ಇಟ್ಟುಕೊಳ್ಳುತ್ತಾರೆ. ಮುಡಿಯೇಟಿನಲ್ಲಿ ಶಿವ, ನಾರದ, ಕಾಳಿ, ಕೂಳಿ, ದಾರಿಕ, ದಾನವೇಂದ್ರ, ಕೋಯಿಂಬಡ ನಾಯರ್ ಮೊದಲಾದ ಏಳು ಪಾತ್ರಗಳು ವೇದಿಕೆಗೆ ಬರುತ್ತವೆ. ಇವುಗಳಿಗೆಲ್ಲ ಪಾರಂಪರಿಕವಾದ ವೇಷಭೂಷಣಗಳಿರುತ್ತವೆ.

ಮುಡಿಯೇಟಿನ ರಂಗವೇದಿಕೆಯಲ್ಲಿ ಮೊದಲಿಗೆ ಬರುವುದು ಶಿವ. ಹೆಚ್ಚು ಆಂಗಿಕ ಅಭಿನಯವಿಲ್ಲದ ಇದು ಮಿನುಕ್ಕು ವೇಷ. ಕಣ್ಣಿಗೆ ಕಾಡಿಗೆಯಲ್ಲದೆ ಮುಖವರ್ಣಿಕೆ ಇಲ್ಲ. ಅಂಗಿ ಮತ್ತು ಉತ್ತರೀಯ ವೇಷ. ಶಿವನು ತೆರೆಯ ಹಿಂದೆ ಪೀಠದಲ್ಲಿ ನಿಲ್ಲುತ್ತಾನೆ. ಎತ್ತಿನ ಮೇಲೆ ಕುಳಿತಿದ್ದಾನೆ ಎಂಬ ನಂಬಿಕೆಯಲ್ಲಿ ಕೈಯಲ್ಲಿ ಒಂದು ಎತ್ತಿನ ತಲೆ ಇರುತ್ತದೆ. ಎತ್ತಿನ ತಲೆಯನ್ನು ಆಚೀಚೆ ಆಡಿಸುತ್ತಿರುವನು. ಒಂದನೇ ದೃಶ್ಯದಲ್ಲಿ ಮಾತ್ರ ಬರುವ ಶಿವನಿಗೆ ವಾಚಿಕಾಭಿನಯವಿಲ್ಲ. ಹಾಡುವವರು ಹಾಡುತ್ತಾರೆ. ನಾರದನೂ ಒಂದನೇ ದೃಶ್ಯದಲ್ಲಿ ಮಾತ್ರ ಪ್ರವೇಶಿಸುವನು. ಬಿಳಿ ವಸ್ತ್ರವನ್ನು ಧರಿಸಿ ಸನ್ಯಾಸಿಗಳ ಕೂದಲು ಮತ್ತು ಗಡ್ಡವಿರಿಸಿದ ಈ ವೇಷವು ಪರಿಷ್ಕೃತವಲ್ಲ. ಕೈಯಲ್ಲಿ ಓಲೆಗ್ರಂಥವನ್ನು ಪ್ರತಿನಿಧಿಸುವ ತೆಂಗಿನಗರಿ ಗಳಿರುತ್ತವೆ. ತೆರೆಯ ಹಿಂದಿನಿಂದ ಮುಂದೆ ಹೆಜ್ಜೆಯಿಡುತ್ತಾ ಪ್ರವೇಶಿಸಿ ದಾರಿಕಾಸುರನ ದುರಾಡಳಿತವನ್ನು ಶಿವನಿಗೆ ವಿವರಿಸುತ್ತಾನೆ. ಮುಖದಲ್ಲಿ ದೀಪದ ಮಸಿಯನ್ನು ಬಳಿದು, ಅದರ ಮೇಲೆ ಅಕ್ಕಿಹಿಟ್ಟು ಹಾಗೂ ಸುಣ್ಣದ ವಸೂರಿ ಕಲೆಯ ಚುಟ್ಟಿಗಳನ್ನು ಬರೆದು ಕಾಳಿಯ ಮುಖವರ್ಣಿಕೆ ಮಾಡಲಾಗುತ್ತದೆ. ಬಾಯಿಗೆ ದಂಷ್ಟ್ರವನ್ನು ಚಿತ್ರಿಸಲಾಗುತ್ತದೆ. ಮುಖ ಹಾಗೂ ಹಣೆಯಲ್ಲಿ ಚೆತ್ತಿಪೂ ಅಂಟಿಸುತ್ತಾರೆ. ತಲೆಗೆ ಕೆಂಪು ವಸ್ತ್ರ ಕಟ್ಟುವರು. ದೇಹಕ್ಕೆ ಉತ್ತರೀಯವನ್ನು ಕಟ್ಟಿ, ತೋಳ್‌ಬಳೆ, ಮುಲಮಾರ್, ಆಭರಣಗಳು, ಹೂಮಾಲೆ, ಸೊಂಟಕ್ಕೆ ಪಡಿಯರಂಣಂ ಧರಿಸಿದ ಕಾಳಿಯ ವೇಷ ಶೋಭಿಸುವುದು. ಕತ್ತಿ, ಕಡ್ತಲೆ ಮೊದಲಾದ ಆಯುಧಗಳನ್ನು ಬದಲಾಯಿಸುತ್ತಾ ಬಳಸುವರು. ಪ್ರವೇಶಕ್ಕೆ ಕತ್ತಿ, ಯುದ್ಧಕ್ಕೆ ಕಡ್ತಲೆ. ಕಾಳಿಯ ವಿಶೇಷವಾದ ಮುಡಿಯೇ ಮುಡಿಯೇಟಿನ ಸೌಂದರ್ಯ. ಮೂರರಿಂದ ಮೂರೂವರೆ ಅಡಿ ಅಗಲವಿರುವ, ಹಲಸಿನ ಮರದ ಹಲಗೆಯಿಂದ ನಿರ್ಮಿಸಿದ ಅರ್ಧವೃತ್ತಾಕಾರ ಮುಡಿಯಲ್ಲಿ ಪುರಾಣ ಪ್ರತೀಕಗಳನ್ನು ಕೆತ್ತಿರುತ್ತಾರೆ. ಆನೆ, ಸರ್ಪಗಳು ಬೇತಾಳ, ಕಾಳೀಮುಖ ಎಂಬ ಚಿತ್ರಗಳು ಇದರಲ್ಲಿರುತ್ತವೆ. ಕಿವಿಯಲ್ಲಿ ಆನೆ, ಸಿಂಹ ಎಂಬ ರೂಪಗಳಿವೆ. ತೆಂಗಿನ ಗರಿಗಳಿಂದ ಕಿರೀಟದ ಹಿಂಭಾಗವನ್ನು ಕೂದಲೆಂಬಂತೆ ಅಲಂಕರಿ ಸುತ್ತಾರೆ. ಪ್ರದರ್ಶನದ ವೇಳೆ ಆವೇಶ ಬಂದಾಗ, ಕಿರೀಟವನ್ನು ಕಿತ್ತು, ಆಯುಧವನ್ನು ನೆಲಕ್ಕೆ ಕುಟ್ಟಿ ರೋಷ ತೀರಿಸುವುದಿದೆ. ಕಾವಿನ ಮುಂಭಾಗದಿಂದ ಕಾಳಿಯ ಪ್ರವೇಶ ವೈಭವಯುತವಾಗಿರುತ್ತದೆ. ಪೂಜಾರಿಯಿಂದ ಬಳೆ ಹಾಗೂ ಮಾಲೆಯನ್ನು ಪಡೆದು ಮುಡಿ ಏರಿಸಿ, ನೃತ್ಯದ ಹೆಜ್ಜೆಗಳನ್ನಿಡುತ್ತಾ, ದೊಂದಿಗೆ ರಾಳದಪುಡಿಯೆರಚಿ ಬರುವ ದೃಶ್ಯ ಭಕ್ತಿ ನಿರ್ಭರವಾಗಿರುತ್ತದೆ. ಅನಂತರ ಕಾಳಿ ತೆರೆಕುಣಿತ ಹಾಗೂ ಪೀಠದಲ್ಲಿ ಹತ್ತಿ ಅಭಿನಯಿಸುತ್ತದೆ. ಯುದ್ಧ, ಕೂಡಿಯಾಟ ಮೊದಲಾದ ಅಭಿನಯ ವೈಶಿಷ್ಟ್ಯಗಳು ಇದರಲ್ಲಿವೆ. ಕಥೆ ಮತ್ತು ಯುದ್ಧ ಭಾಗಗಳು ಆಕರ್ಷಕವಾಗಿವೆ. ರಾತ್ರಿಯ ಮೌನದಲ್ಲಿ ಆಯುಧಗಳು ಘಟ್ಟಿಸುವ ಶಬ್ಧಗಳು ಮೈ ನವಿರೇಳಿಸುತ್ತವೆ. ಪ್ರದರ್ಶನದ ವೇಳೆಯಲ್ಲಿ ಎರಡು ಮೂರು ಬಾರಿ ಕಾಳಿಗೆ ಆವೇಶ ಬರುತ್ತದೆ. ಆಗ ಪೀಠದಲ್ಲಿ ಕುಳಿತುಕೊಳ್ಳುವ ಕಾಳಿಗೆ ಗಾಳಿ ಬೀಸಿ ಶಾಂತಗೊಳಿಸುತ್ತಾರೆ. ರಂಗ ಪ್ರದರ್ಶನದ ಮೂಲಕ ಆಚರಣೆಯನ್ನು ಮಾಡಿ ಜನರನ್ನು ಸಹಭಾಗಿಯಾಗಿಸುವುದು ಇದರ ಉದ್ದೇಶ. ಕೊನೆಯ ರಂಗದಲ್ಲಿ ದಾರಿಕನ ಶಿರವನ್ನು ತರಿದು ತಂದ ಮುೞಚ್ಚಲ್, ಮುಡಿಯುೞಚ್ಚಲ್, ಮಕ್ಕಳಿಗೆ ಅನುಗ್ರಹ ಮೊದಲಾದ ಹಂತಗಳಿವೆ.

ಕಾಳಿಯ ಸಹಚರಿಯಾದ ಕೂಳಿ ಭೂತಗಣಗಳನ್ನು ನೆನಪಿಸುವ ಒಂದು ಹಾಸ್ಯ ಪಾತ್ರವಾಗಿದೆ. ಇದರ ಮುಖವರ್ಣಿಕೆ ಹಾಸ್ಯಾತ್ಮಕ ಶೈಲಿಯಲ್ಲಿದೆ. ವೇಷಗಾರಿಕೆಯಲ್ಲಿ ಅತಿಶಯೋಕ್ತಿ ತುಂಬಿದೆ. ಕೆಂಪು ಅಂಗಿ, ಉತ್ತರೀಯ, ಡೊಳ್ಳು ಹೊಟ್ಟೆ ಹಾಗೂ ಮಾಲೆ ಕಟ್ಟಿದ ವೇಷವಾಗಿದೆ. ಕೈಯಲ್ಲಿ ಮರದ ಗೆಲ್ಲು ಇರುತ್ತದೆ. ಕಾಳಿ ತೀವ್ರವಾದ ರೌದ್ರಭಾವದ ಸನ್ನಿವೇಶವನ್ನು ಸೃಷ್ಟಿಸುವಾಗ ಕೂಳಿಯು ಲೌಕಿಕವೂ, ಹಾಸ್ಯಾಸ್ಪದವೂ ಆಗಿರುವ ಒಂದು ಪರಿಧಿಯಲ್ಲಿ ಬೀಭತ್ಸ ಭಾವವನ್ನೂ ಪ್ರಕಟಿಸುತ್ತದೆ. ಲೌಕಿಕತೆಯ ಕೂಡಿಯಾಟವಾದ ಇದು ಪ್ರೇಕ್ಷಕರನ್ನು ಹಾಸ್ಯ ಸನ್ನಿವೇಶದ ಪಾರಮ್ಯಕ್ಕೆ ಕೊಂಡೊಯ್ಯುತ್ತದೆ. ಒಂದು ಮಾಂತ್ರಿಕ ಆಚರಣೆಯ ಭಯವನ್ನು ಕಾಳಿ ಸೃಷ್ಟಿಸಿದರೆ, ಆಟದ ಲೀಲಾವಿಲಾಸವನ್ನು ಕೂಳಿ ಸೃಷ್ಟಿಸುತ್ತದೆ. ಕೂಳಿಯ ಪ್ರವೇಶ ವಿಶೇಷವಾದುದು. ಕಾವಿನ ಯಾವುದಾದರೂ ಒಂದು ಕಡೆಯಿಂದ ‘ಅಯ್ಯಪ್ಪ ತಿಂದಗತ್ತಂ’ ಎಂದು ತಾಳಾತ್ಮಕವಾಗಿ ಕೂಳಿ ಬರುತ್ತದೆ. ಮಕ್ಕಳು, ಯುವಕರು, ಹಾಸ್ಯ ಪ್ರವೃತ್ತಿಯವರು ಕೂಳಿಯ ಹಿಂದಿನಿಂದ ಬೊಬ್ಬೆ ಹಾಕುತ್ತಾರೆ. ಕಾಳಿ ಪ್ರವೇಶದ ರೌದ್ರಭಾವವನ್ನು ಕೂಳಿಯ ಪ್ರವೇಶವು ಶಾಂತಗೊಳಿಸುತ್ತದೆ. ಆ ನಂತರ ಕಳವಿಳಕ್‌ನ ಹಿಂದೆ ಕೂಳಿಯ ಅಭಿನಯವಿರುತ್ತದೆ. ಕೀರಲು ಸ್ವರದ ಸಂಭಾಷಣೆ ಅನಂತರ ತಾಯಿಯನ್ನು ಹುಡುಕಿಕೊಂಡು ಬಂದಿರುವುದಾಗಿಯೂ ಹೇಳುತ್ತದೆ. ಕೆಲವು ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ. ಕೂಳಿಯ ಸ್ನಾನ, ಹಲ್ಲುಜ್ಜುವ ಕ್ರಿಯೆ, ತಿರುವಾದಿರ ಕಳಿ ಇವುಗಳೆಲ್ಲ ಹಾಸ್ಯ ದೃಶ್ಯಗಳಾಗಿವೆ. ಇದರಲ್ಲಿ ಪ್ರೇಕ್ಷಕರೂ ಭಾಗವಹಿಸುವಂತೆ ಮಾಡಲು ಕೂಳಿಗೆ ಸಾಧ್ಯ ವಾಗುತ್ತದೆ. ಪ್ರೇಕ್ಷಕರಿಗೆ ಕೂಳಿಯಲ್ಲಿ ಮಾತನಾಡಬಹುದು. ಕೂಳಿ ಮಾಡುವುದೆಲ್ಲ ಲೋಕಧರ್ಮಕ್ಕೆ ವಿರುದ್ಧವಾದುದೇ ಆಗಿರುತ್ತದೆ. ಸ್ನಾನ ಮಾಡಿ ಹಲ್ಲುಜ್ಜುವುದು, ತಿರುಗಿ ನಿಂತು ಅಂಗಳ ಗುಡಿಸುವುದು ಇತ್ಯಾದಿ. ಕೂಳಿಯ ಇಂತಹ ಅಭಿನಯಗಳ ನಂತರ ಕಾಳಿ ಬರುತ್ತಾಳೆ. ತಾಯಿಯನ್ನು ಸಂಧಿಸುವ ಸನ್ನಿವೇಶ ಭಕ್ತಿಪೂರಿತವಾಗಿದೆ. ಅನಂತರದ ಯುದ್ಧ ಮೊದಲಾದ ದೃಶ್ಯಗಳಲ್ಲಿ ತಾಯಿಯೊಂದಿಗೆ ನಿಲ್ಲುವ ಕೂಳಿ, ಮಕ್ಕಳನ್ನು ಪಡೆದು ತಲೆಗೆ ಎಣ್ಣೆ ಹಾಕಿ ಅನುಗ್ರಹಿಸುತ್ತದೆ. ದಾರಿಕಾಸುರನ ಆಡಳಿತದಿಂದ ವಿಕೃತವಾದ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವುದೇ ಕೂಳಿಯ ಪಾತ್ರ ಎಂಬ ಅಭಿಪ್ರಾಯವಿದೆ.

ಮುಡಿಯೇಟಿನ ಪ್ರತಿನಾಯಕ ಪಾತ್ರಗಳಾದ ದಾರಿಕದಾನವೇಂದ್ರನದು ಕತ್ತಿ ವೇಷ. ಈ ಕತ್ತಿ ವೇಷದ ಪ್ರಭಾವದಿಂದಲೇ ಅನಂತರ ಕಥಕಳಿಯಲ್ಲಿ ಬಂದಿತೆಂದು ಹೇಳಲಾಗುತ್ತದೆ. ಬಿಳಿ ಉತ್ತರೀಯ, ಕೆಂಪು ಅಂಗಿ, ಕಿರೀಟ ಹಾಗೂ ಉಳಿದ ಅಲಂಕಾರಗಳು ಈ ವೇಷಗಳಿಗಿವೆ. ಚಾಕ್ಯಾರ್‌ಕೂತಿನಂತೆ ನೆರಿಗೆ ಇರುವ ಉಡುಪುಗಳಿವೆ. ದಾರಿಕನ ಪ್ರವೇಶ ವೈಭವದಿಂದ ಕೂಡಿರುತ್ತದೆ. ತೆರೆನೋಟ, ಆರ್ಭಟೆ, ಯುದ್ಧಕ್ಕೆ ಆಹ್ವಾನವನ್ನು ದಾರಿಕನ ಮಂತ್ರವು ಮಾಡುತ್ತದೆ. ಒಂದು ಪ್ರತಿನಾಯಕ ಪಾತ್ರದ ಉಜ್ವಲವಾದ ಪ್ರದರ್ಶನ, ವೀರರಸದ ನಾಟ್ಯವೂ ದಾರಿಕನಿಗಿದೆ. ವೇಲಕಳಿಯನ್ನು ಸ್ಮರಿಸುವ ನಂದಿಕೇಶ್ವರನನ್ನು ಪ್ರತಿನಿಧಿಸುವ ಪಾತ್ರ ಕೋಯಿಂಬಡ ನಾಯರ್. ಇದೊಂದು ಮಿನುಕ್ಕು ವೇಷ. ಪಡೆನಾಯಕನಂತೆ ಎಡಗೈಯಲ್ಲಿ ಗುರಾಣಿ ಹಾಗೂ ಬಲಗೈಯಲ್ಲಿ ಕತ್ತಿ ಇರುತ್ತದೆ. ಬಿಳಿ ವಸ್ತ್ರವನ್ನು ಧರಿಸಿರುತ್ತಾನೆ. ದಾರಿಕಾಸುರ, ಕಾಳಿ, ಕೂಳಿ ಇವುಗಳ ಪ್ರವೇಶದ ನಂತರ ಲೌಕಿಕ ಸಂಭಾಷಣೆ ಹಾಗೂ ಲೋಕಧರ್ಮಿಯಾದ ಅಭಿನಯವನ್ನು ಪ್ರದರ್ಶಿಸುವ ಈ ಪಾತ್ರ ಬರುತ್ತದೆ. ಮುಡಿಯೇಟ್ ಎಂದರೇನು? ಕಾವಿನಲ್ಲಿ ನಡೆಸುವ ಹಿನ್ನೆಲೆ ಏನು? ಕಥಾ ಸಂದರ್ಭ ಯಾವುದು? ಎಂಬುದಾಗಿ ಪ್ರೇಕ್ಷಕರಿಗೆ ತಿಳಿಸಿಕೊಡುವ ಈ ಪಾತ್ರವು ಸಾಮಾನ್ಯವಾಗಿ ಸೂತ್ರಧಾರನ ಕೆಲಸವನ್ನು ನಿರ್ವಹಿಸುತ್ತದೆ. ಕಳಿವಿಳಕ್ ಮುಂಭಾಗದಲ್ಲಿ ನಿಧಾನವಾಗಿ ಹೆಜ್ಜೆ ಇರಿಸಿ ಅಭಿನಯಿಸುವ ಈ ಪಾತ್ರವು ಹಿಮ್ಮೇಳದವರೊಂದಿಗೆ ಸಂವಾದ ನಡೆಸುತ್ತದೆ. ಒಬ್ಬ ಕಥೆ ಹೇಳುವವನ ಪ್ರದರ್ಶನವನ್ನು ಇಲ್ಲಿ ಕಾಣಬಹುದು. ಅಂದಿನ ಆಳ್ವಿಕೆ, ದುರಾಡಳಿತ, ದೇವಸ್ಥಾನಗಳ ಸ್ಥಿತಿ, ಬಡತನ ಮೊದಲಾದ ಫ್ಯೂಡಲ್ ಸಮಾಜದ ಅಂಶಗಳನ್ನು ಈ ಸಂಭಾಷಣೆಗಳಿಂದ ತಿಳಿಯಬಹುದು.