ಪಡೇನಿ

ಮುಡಿಯೇಟ್‌ನ ಮುಂದುವರಿಕೆಯೇ ಪಡೇನಿ. ಮಧ್ಯ ತಿರುವಾಂಕೂರಿನಲ್ಲಿ ಅಂದರೆ ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಲ್ಲಿ ಇರುವ ಪ್ರಮುಖ ಆರಾಧನ ಕಲೆ ಇದು. ದಾರಿಕನ್ ಎಂಬ ರಾಕ್ಷಸನನ್ನು ವಧಿಸಿದ ನಂತರ ಕೋಪಿಷ್ಟೆಯಾದ ಭದ್ರಕಾಳಿ ಆರ್ಭಟಿಸುತ್ತಾ, ತಲೆ ಬುರುಡೆ ಹಿಡಿದುಕೊಂಡು ಶಿವಸನ್ನಿಧಿಗೆ ಓಡುತ್ತಾಳೆ. ಇದು ಮುಡಿಯೇಟಿನ ಅಂತ್ಯ. ಅದರ ಬಳಿಕ ಕೋಪಾಗ್ನಿಯಲ್ಲಿ ಜ್ವಲಿಸುತ್ತಿರುವ ಭದ್ರಕಾಳಿಯನ್ನು ಶಾಂತಗೊಳಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಲ್ಲರೂ ಭಯಭೀತರಾದರು. ಬೆಂಕಿಯ ಜ್ವಾಲೆಗಳನ್ನು ಸೂಸುವ ಬಾಯಿ, ರಕ್ತವರ್ಣದ ಉಗ್ರವಾದ ಕಣ್ಣುಗಳು, ಸಿಡಿಲಿನಂತಹ ಗರ್ಜನೆಯಿಂದ ರಾಜಬೀದಿಗಳಲ್ಲಿ ಆ ದೇವಿ ಸಂಚರಿಸಿದಳು. ಆ ಸ್ಥಿತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿದ ಸುಬ್ರಹ್ಮಣ್ಯನು  ಶಿವನಲ್ಲಿ ಒಂದು ಉಪಾಯವನ್ನು ಹೇಳುತ್ತಾನೆ. ಭದ್ರಕಾಳಿಯ ಆ ಭೀಕರ ರೂಪದಂತೆ ಕೆಲವು ಕೋಲಗಳನ್ನು ಸೃಷ್ಟಿಸಿ ತೋರಿಸಿದರೆ ಕೋಪ ಶಮನಗೊಳ್ಳುವುದು ಎಂದು ಹೇಳುವನು. ಅದರಂತೆ ಶಿವನ ಭೂತಗಣಗಳಲ್ಲಿ ಕೆಲವರಿಗೆ ಕೋಲವನ್ನು ಕಟ್ಟಿ ಕಳುಹಿಸಲಾಯಿತು. ಕೆಲವು ಕೋಲ(ವೇಷ)ಗಳಿಗೆ ದೊಡ್ಡ ಕರ್ಣಾಭರಣಗಳು ಕೆಲವು ಬೆಂಕಿ ಉಗುಳುತ್ತಿವೆ. ಕೆಲವು ಆನೆ, ಸಿಂಹಗಳಂತೆ, ಪಕ್ಷಿಗಳಂತೆ ರೂಪ ಧರಿಸಿದುವು. ಇದನ್ನು ಕಂಡ ದೇವಿ ಸಮಾಧಾನದಿಂದ ನಗೆ ಸೂಸಿದಳು. ಎಲ್ಲರಿಗೂ ಸಮಾಧಾನವಾಯಿತು. ಹೀಗೆ ಅನೇಕ ರೀತಿಯ ಪಡೇನಿ ಕೋಲಗಳು ಉಂಟಾದುವು.

ಜೊತೆ ಕುದುರೆಗಳು, ಜೊತೆ ಹಕ್ಕಿಗಳು, ಯಕ್ಷಿಗಳು, ಪಂಚಮುಖ ಕಾಲ (ಈಶ್ವರ) ಮತ್ತು ಮಹಾಕಾಳಿ (ಅನೇಕ ಮುಖಗಳನ್ನು ಹೊಂದಿರುವ ಇಡೀ ಲೋಕವನ್ನೇ ಧರಿಸಿದಂತಿ ರುವ ದೊಡ್ಡ ಶಿರೋಭೂಷಣವಿರುವ ಮುಖವಾಡ ಧರಿಸಿದ ಪಾತ್ರ) ಇವು ಪಡೇನಿಯ ಪ್ರಧಾನ ಪಾತ್ರಗಳು. ಇಲ್ಲಿ ವೇಷಗಳು ಹಾಗೂ ಕುಣಿತಗಳೆಲ್ಲವೂ ಸಾಂಕೇತಿಕ. ದಾರಿಕವಧೆಯ ದೃಶ್ಯವೇನೂ ಇಲ್ಲಿಲ್ಲ. ಪ್ರದರ್ಶನದ ಜಾಗಕ್ಕೆ ಈ ಮುಖವಾಡ ಧರಿಸಿದ ಪಾತ್ರಗಳನ್ನು ತೆಂಗಿನಗರಿಯ ಪಂಜು ಉರಿಸಿ ಕರೆತರಲಾಗುತ್ತದೆ. ಯಕ್ಷಗಾನದಲ್ಲಿ ಮಹಿಷಾಸುರನನ್ನು ಕರೆತರುವ ದೃಶ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇಲ್ಲಿನ ವೇಷಭೂಷಣಗಳು ಮುಖವಾಡಗಳು ಶಿರೋಭೂಷಣಗಳೆಲ್ಲವೂ ಕಂಗಿನ ಹಸಿ ಹಾಳೆ ಮತ್ತು ತೆಂಗಿನಗರಿಗಳಿಂದ ಸಿದ್ಧಪಡಿಸಲಾಗುತ್ತದೆ. ಹಾಳೆಯನ್ನು ಕತ್ತರಿಸಿ ಅದರ ಬಿಳಿ ಮೈಯಲ್ಲಿ ಮುಖಗಳನ್ನು ಬರೆಯಲಾಗುತ್ತದೆ. ಕಪ್ಪು, ಕೆಂಪು ಮತ್ತು ಅರಿಶಿನ ಈ ಮೂರು ಬಣ್ಣಗಳ ಬಳಕೆಯನ್ನು ಮಾತ್ರ ಇಲ್ಲಿ ಕಾಣಬಹುದು. ಕಪ್ಪಿಗೆ ಕಾಡಿಗೆ, ಕೆಂಪಿಗೆ ಕಲ್ಲು ತೇದ ಪುಡಿ, ಹಳದಿಗೆ ಅರಿಶಿನವನ್ನು ಉಪಯೋಗಿಸಲಾಗುತ್ತದೆ.  ಮುಖವಾಡಗಳನ್ನು ಹೊಲಿಯಲು ತೆಂಗಿನಗರಿಯ ಕಡ್ಡಿಗಳನ್ನು ದಾರವಾಗಿ ಬಳಸಲಾಗುತ್ತದೆ. ಯಕ್ಷಗಾನದ ಸೋಗೋಲೆಯನ್ನು ನೆನಪಿಸುವ ತೆಂಗಿನ ಗರಿಯ ಸೋಗೋಲೆಯನ್ನು ಪಡೇನಿಯಲ್ಲಿ ವೇಷದ ಹೆಗಲಲ್ಲಿ ಇಳಿಬಿಡಲಾಗುತ್ತದೆ.

ದಕ್ಷಿಣ ಭಾರತದ ಎಲ್ಲ ರಂಗಸಂಪ್ರದಾಯಗಳಲ್ಲೂ ಮುಖವಾಡವನ್ನು ಧರಿಸುವ ಪದ್ಧತಿ ಇತ್ತೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಯಕ್ಷಗಾನದ ಮುಖವರ್ಣಿಕೆಯು ಮುಖವಾಡವಾಗಿಯೇ ಮಾರ್ಪಡುವುದು. ಈ ನೆಲೆಯಲ್ಲಿ ನೋಡಿದರೆ ಯಕ್ಷಗಾನ, ಕಥಕಳಿ, ತೆಯ್ಯಂ ಮೊದಲಾದ ಕಲಾ ರೂಪಗಳ ಪ್ರಾಚೀನ ರೂಪವೇ ಪಡೇನಿ ಎಂದು ಅಭಿಪ್ರಾಯಪಡಲಾಗಿದೆ. (ಕೆ.ಎಂ.ರಾಘವ ನಂಬಿಯಾರ್, ೨೦೦೨ : ೬೬) ಆದರೆ ಅತ್ಯಂತ ಪ್ರಾಕೃತ ಸ್ವರೂಪದ ಪಡೇನಿ ಇರುವುದು ಮೇಲುಜಾತಿಯ ನಾಯರ್ ಸಮುದಾಯ ದಲ್ಲಿ. ಇವುಗಳ ಪರಿಷ್ಕೃತ ರೂಪಗಳು ಕೆಳಜಾತಿಯ ಜನರಲ್ಲಿ ಪ್ರಚಲಿತದಲ್ಲಿದೆ ಎಂಬುದು ಗಮನಾರ್ಹ ಅಂಶ. ಕೆ.ಎಂ. ರಾಘವ ನಂಬಿಯಾರ್ ಅವರು ಹೇಳುವಂತೆ “ತಮಿಳುನಾಡಿನ ತೆರುಕೂತ್ತು, ಕರ್ನಾಟಕದ ಬಯಲುಸೀಮೆಯ ಯಕ್ಷಗಾನ, ಕರಾವಳಿಯ ಯಕ್ಷಗಾನ, ಭೂತಕೋಲ, ಉತ್ತರ ಕೇರಳದ ತೆಯ್ಯಂ, ದಕ್ಷಿಣ ಕೇರಳದ ಕಥಕಳಿ ಇವುಗಳ ಪರಸ್ಪರ ಹೋಲಿಕೆಗಳು, ಪರಸ್ಪರ ಪ್ರಭಾವಗಳನ್ನು ಚಿಂತಿಸಿದಾಗ ಯಾವುದರಿಂದ ಯಾವುದು ಎಂಬ ಪ್ರಶ್ನೆ ಕಾಡದೇ ಇರದು. ಇವಾವುದೂ ಒಂದರಿಂದ ಒಂದಲ್ಲ, ನಿಜಕ್ಕಾದರೆ ಇವೆಲ್ಲವೂ ಯಾವುದೋ ಒಂದು ಮೂಲ ದ್ರಾವಿಡ ಕಲಾರೂಪದಿಂದ ಸಿಡಿದು ಹೊರಟು, ಹೊರಬಂದು, ಪರಿಷ್ಕಾರಗೊಂಡ ಕಲಾರೂಪಗಳೆಂದು ತರ್ಕಿಸಿದರೆ ಸರಿಹೋದೀತು.” ಈ ನೆಲೆಯಲ್ಲಿ ಅವರು ಪಡೇನಿಯನ್ನು ಗುರುತಿಸಿರುವುದು ಸರಿಯಾಗಿಯೇ ಇದೆ. ಅವರೇ ಹೇಳುವಂತೆ ಪಡೇನಿಯು ದಕ್ಷಿಣ ಭಾರತದ ರಂಗಭೂಮಿಯ ಎಲ್ಲಾ ವೇಷವಿಧಾನಗಳ ಮಾತೃಕೆಯನ್ನು ಹೊಂದಿರುವ ಅತ್ಯಂತ ಪ್ರಾಚೀನ ಕಲೆ. ಇಲ್ಲಿ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡ ಗಳು, ತೆಂಗಿನಗರಿಯ ಕಡ್ಡಿಗಳನ್ನು ಬಳಸಿ ಹೊಲಿದ ಹಸಿ ಹಾಳೆಯ ತೊಡುಗೆಗಳು, ಸೊಂಟಕ್ಕೆ ಕೆಂಪು ಬಟ್ಟೆ ಇವುಗಳೆಲ್ಲ ಪಡೇನಿಯಲ್ಲಿ ಬಳಸಲಾಗುವ ವೇಷಪರಿಕರಗಳು. ಇವುಗಳಲ್ಲೆಲ್ಲ ದಕ್ಷಿಣ ಭಾರತದ ಪ್ರಾದೇಶಿಕ ರಂಗಕಲೆಗಳ ವೇಷದ ಮಾದರಿಗಳನ್ನು ಕಾಣಬಹುದು. ಇಲ್ಲಿನ ಯಕ್ಷಿಗಳು ಧರಿಸುವ  ಕಿರೀಟಗಳಿಗೂ ತೆಂಕುತಿಟ್ಟಿನ ಭೀಮನಮುಡಿ ಹಾಗೂ ಬಡಗುತಿಟ್ಟಿನ ಹೆಣ್ಣುಬಣ್ಣಗಳು ಧರಿಸುವ ಕಿರೀಟದ ವಿನ್ಯಾಸಗಳಿಗೂ ಹೋಲಿಕೆಯಿದೆ. ಯಕ್ಷಗಾನದ ಸೋಗೆವಲ್ಲಿಯನ್ನು ನೆನಪಿಸುವ ತೆಂಗಿನ ಸೋಗೆಯವಲ್ಲಿಗಳು ಪಡೇನಿಯಲ್ಲಿವೆ. ದೊಡ್ಡ ಚಕ್ರತಾಳ ಬಾರಿಸಿ ಭಾಗವತರು ಹಾಡುವುದು, ಮಣ್ಣಿನ ದಪ್ಪು ಭಾರಿಸುವ ಹಿಮ್ಮೇಳ ಇದೆಲ್ಲ ರಂಗಕಲೆಯ ಪ್ರಾಚೀನತೆಯನ್ನು ಸೂಚಿಸುತ್ತದೆ. ಇಲ್ಲಿ ಬಳಸುವ ಮಣ್ಣಿನ ದಪ್ಪು ಅದರ ವಿಸ್ತೃತ ರೂಪವೇ ಮೃದಂಗ(ಮೃತ್+ಅಂಗ) ಇರಬಹುದೇ ಎಂಬ ಗುಮಾನಿಗೂ ಎಡೆಯಿದೆ. ಹಾಗಾಗಿ  ರಾಘವ ನಂಬಿಯಾರರ ಅಭಿಪ್ರಾಯ ವಿಚಾರಯೋಗ್ಯವಾಗಿದೆ.

ಕಾಲಕೇಯನ್ ಎಂಬ ರಾಕ್ಷಸನ ಮಗಳಾದ ಕಾಲಕೇಶಿಯನ್ನು ಕಂಡ ದಾರಿಕನು ಅವಳನ್ನು ಮೋಹಿಸಿದನೆಂದೂ, ಮಗಳ ಒಪ್ಪಿಗೆ ಇಲ್ಲದೆ ಮದುವೆ ಮಾಡಿಸಿದನೆಂದೂ, ದಾರಿಕನ ಸಿದ್ದಿಗಳನ್ನು ಕಾಲಕೇಶಿ ಸ್ವಾಧೀನಪಡಿಸಿದರೂ, ಅದನ್ನು ಕಾಳಿ ಅಪಹರಿಸಿದಳೆಂದೂ, ಇದರಿಂದ ದಾರಿಕಾಸುರ ಸಾವಿಗೀಡಾದ ಎಂಬುದು ಇನ್ನೊಂದು ಕಥೆ. ಪಡೇನಿ ಪಾಟುಗಳಲ್ಲಿ ಕಾಳಿಯಷ್ಟೇ ಮಹತ್ವ ಕಾಲಕೇಶಿಗೂ ಇದೆ. ವಸೂರಿ ಮೂಲವೇ ಕಾಲಕೇಶಿ ಎಂದು ಹೇಳುತ್ತಾರೆ.

ಕೋಲಗಳು ಬರೇ ವೇಷಗಳಲ್ಲ. ದೈವಗಳೇ ಆಗಿವೆ. ಪ್ರತಿಯೊಂದು ಕೋಲವೂ ಕಟ್ಟಿ ರಂಗಕ್ಕೆ ಬಂದಾಗ, ಆಯಾ ದೇವತೆಗಳು ಆ ಕೋಲವನ್ನು ಪ್ರವೇಶಿಸುತ್ತವೆ ಎಂಬುದು ನಂಬಿಕೆ. ಹಾಡು, ಕುಣಿತ, ಸದ್ದು ಗದ್ದಲಗಳೊಂದಿಗೆ ಭಕ್ತ ಜನರು ಎಲ್ಲ ಕೋಲಗಳನ್ನು ಸ್ವಾಗತಿಸುವರು. ಭಕ್ತರ ಪೂಜಾದಿಗಳನ್ನು ಸ್ವೀಕರಿಸಿ ಅನುಗ್ರಹವನ್ನು ನೀಡುತ್ತವೆ. ಜನರು ಸಂತುಷ್ಟರಾಗುತ್ತಾರೆ. ಪರಂಪರೆಯಾಗಿ ಗ್ರಾಮೀಣರ ಮನಸ್ಸನ್ನು ಆವರಿಸಿಕೊಂಡಿರುವ ಈ ದೈವ ಕಲ್ಪನೆಯು ಇಂದಿಗೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಪಡೇನಿ ಒಂದು ನಿದರ್ಶನವಾಗಿದೆ.

ಗಣಪತಿ, ಕಾಲ, ಯಕ್ಷಿ, ಪಿಶಾಚಿ, ಮಾಡನ್, ಮರುತಾ, ಭೈರವಿ, ಕಾಲಾರಿ, ಕುದುರೆ, ಪಕ್ಷಿ ಮೊದಲಾದ ಸಾಮಾನ್ಯ ಕೋಲಗಳೂ ಇವೆ. ಮರುತಾ ಕೋಲಗಳ ಗುಂಪಿನಲ್ಲಿಯೇ ಕಾಲಕೇಶಿ, ನೀಲಕೇಶಿ, ಕರಿಮರುತಾ, ಪಂಡಾರ ಮರುತಾ, ಶಾಂತ ಮರುತಾ ಮೊದಲಾದವು ಗಳಿವೆ. ಅಂತರ, ಸುಂದರ, ಅಂಬರ, ಅರಕ್ಕಿಮಾಯ ಮೊದಲಾದುವು ಯಕ್ಷಿಕೂಟದಲ್ಲಿ ಸೇರುತ್ತವೆ.

ಬೂತೊಕೋಲೊ ಅಥವಾ ದೈವಾರಾಧನೆ

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಪ್ರದೇಶಗಳಲ್ಲಿ ಪ್ರಚಲಿತವಿರುವ ಒಂದು ಆರಾಧನಾ ಪದ್ಧತಿ ಬೂತೊಕೋಲೊ. ಕೇರಳದ ತೆಯ್ಯಂಗೆ ಸಂವಾದಿಯಾದ ತುಳುನಾಡಿನ ಆರಾಧನಾ ರೂಪವಿದು. ತೆಂಕುತಿಟ್ಟು ಯಕ್ಷಗಾನವು ಬೆಳೆದುಬಂದ ಪರಿಸರದಲ್ಲಿ ಪ್ರಚಲಿತವಿರುವ ಈ ಆರಾಧನಾ ಸಂಪ್ರದಾಯವು ಪರಸ್ಪರ ಪ್ರಭಾವಿಸಿರುವುದನ್ನು ಕಾಣಬಹುದಾಗಿದೆ.

ತೆಯ್ಯಂ, ಯಕ್ಷಗಾನಗಳಲ್ಲಿರುವ ಧಾರ್ಮಿಕ ಕ್ರಿಯೆಗಳನ್ನು ಹೋಲುವ ಆಚರಣೆಗಳು ಬೂತೊಕೋಲೊದಲ್ಲಿಯೂ ಇವೆ. ಬೂತ ಕಟ್ಟುವ ವೇಷಧಾರಿ ಸ್ನಾನ ಮುಗಿಸಿ ಬಂದು ಎಣ್ಣೆ ವೀಳ್ಯ ಪಡೆದು ಬಣ್ಣ ಹಾಕುವುದಕ್ಕೆ ಕುಳಿತುಕೊಳ್ಳುತ್ತಾನೆ. ಇದಕ್ಕೆ ‘ಅರ್ದಾಲೊಗು ಕುಳ್ಳುನೆ’ (ಅರದಾಲಕ್ಕೆ ಕುಳಿತುಕೊಳ್ಳುವುದು) ಎಂದು ಹೆಸರು. ಬಣ್ಣ ಹಾಕುವ ಮೊದಲು ತಲೆಗೆ ಚೆಂಡು ಕಟ್ಟಿಕೊಳ್ಳಲಾಗುತ್ತದೆ. ವೃತ್ತಾಕಾರವಾದ ಚೆಂಡಿನಾಕೃತಿಯಲ್ಲಿ ಬಟ್ಟೆಯನ್ನು ಸುತ್ತಿ ತಲೆಯ ಮಧ್ಯ ಭಾಗದಲ್ಲಿ ನಿಲ್ಲುವಂತೆ ಮಾಡಿ ಬಿಳಿ ಹಾಗೂ ಕೆಂಪು ವಸ್ತ್ರದಿಂದ ಬಿಗಿಯಲಾಗುತ್ತದೆ. ಹೊರಭಾಗದಲ್ಲಿ ಕೆಂಪು ವಸ್ತ್ರ ಮಾತ್ರ ಕಾಣುವಂತಿರುತ್ತದೆ. ಇದಾದ ಬಳಿಕ ಮುಖಕ್ಕೆ ಬಣ್ಣವನ್ನು ಹಚ್ಚಲಾಗುತ್ತದೆ. ಅರ್ದಾಲ(ಕೇಸರಿ)ವನ್ನು ಎಣ್ಣೆಯಲ್ಲಿ ಮಿಶ್ರ ಮಾಡಿ ಕೈಯಿಂದ ಹಚ್ಚಿ ಕೊಳ್ಳುವುದು. ಕಣ್ಣು, ಗಲ್ಲದ ಕೆಳಭಾಗ ಹಾಗೂ ಕೆನ್ನೆಯ ಅಂಚುಗಳನ್ನು ಬಿಟ್ಟು ಹಚ್ಚಲಾಗುತ್ತದೆ. ಕಣ್ಣಿನ ಮೇಲ್ಭಾಗದಲ್ಲಿ ಹುಬ್ಬಿಗೆ ಕಾಡಿಗೆಯನ್ನು ತೆಂಗಿನಗರಿಯ ಕಡ್ಡಿಯಲ್ಲಿ ಹಚ್ಚುವುದು ಹಾಗೆಯೇ ಗಲ್ಲದ ಕೆಳಭಾಗ ಕೆನ್ನೆಯ ಅಂಚುಗಳಲ್ಲಿ ಬೆರಳಿನಿಂದ ಕಪ್ಪು ಬಣ್ಣವನ್ನು ಹಚ್ಚಿಕೊಳ್ಳಲಾಗುತ್ತದೆ. ಕಣ್ಣಿನ ಸುತ್ತಲೂ ಕೆಂಪು ಬಣ್ಣವನ್ನು (ಇಂಗಳೀಕ) ಹಚ್ಚಿಕೊಳ್ಳುವುದು, ಹಣೆಗೆ ಉದ್ದನಾಮ ಹಾಕಿ ಕಾಡಿಗೆಯಿಂದ ಎರಡು ಉದ್ದ ಗೆರೆಗಳನ್ನು ಎಳೆಯಲಾಗುತ್ತದೆ. ಅದರ ನಡುವೆ ಕೆಂಪು ಬಣ್ಣವನ್ನು ಹಾಕಲಾಗುತ್ತದೆ. ಹುಬ್ಬಿನ ಸುತ್ತಲೂ ಬಿಳಿ ಬಣ್ಣದಿಂದ ಚುಕ್ಕಿಗಳನ್ನು ಇಡಲಾಗುತ್ತದೆ.

ಬೂತೊಕೋಲೊದಲ್ಲಿ ಅರ್ದಾಲವು ತಳಪಾಯದ ಬಣ್ಣವಾಗಿದೆ. ಅರ್ದಾಲ, ಇಂಗಳೀಕ, ಕಾಡಿಗೆ ಮತ್ತು ಬಿಳಿ ಇವೇ ಬೂತಕೋಲದಲ್ಲಿ ಬಳಸುವ ನಾಲ್ಕು ಮುಖ್ಯ ಬಣ್ಣಗಳು. ಅರ್ದಾಲ ಹಾಕಿದ ನಂತರ ಪೌಡರ್ ಹಾಕಿ ಬ್ರಷ್‌ನಿಂದ ಬಣ್ಣವನ್ನು ಹೊಂದಿಸುತ್ತಾರೆ. ಕಣ್ಣಿನ ಎರಡೂ ಭಾಗಗಳಲ್ಲಿ ಹೊಳೆಯುವ ಬಣ್ಣದ ಪುಡಿಯನ್ನು ಬಳಸಿ ಕಲಾತ್ಮಕವಾದ ಚೌಕಟ್ಟು ನೀಡುತ್ತಾರೆ. ತುಟಿಗೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ. ತಲೆಯ ಆಭರಣವನ್ನು ಧರಿಸಿದ ಮೇಲೆ ಮೀಸೆಯನ್ನು ಕಟ್ಟಿಕೊಳ್ಳುತ್ತಾರೆ.

ದಪ್ಪ ಅಂಚಿರುವ ಕೆಂಪು ವಸ್ತ್ರವನ್ನು ತಲೆಗೆ ಕಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ ವಸ್ತ್ರದ ಅಂಚು ಚಿನ್ನದ ಬಣ್ಣದಲ್ಲಿದ್ದು ಹಣೆಯ ಮೇಲ್ಭಾಗದಲ್ಲಿ ಶೋಭಿಸುವಂತಿರುತ್ತದೆ. ಕಿವಿಯ ಭಾಗದಲ್ಲಿ ಚಿನ್ನದ ಕೆಬಿನೆ ಧರಿಸುತ್ತಾರೆ. ಇದರ ಸುತ್ತಲೂ ಕೆಂಪು ಉಲ್ಲನ್‌ನಿಂದ ಅಲಂಕರಿಸಿ ರುತ್ತಾರೆ. ಆನಂತರ ತಲೆಗೆ ತಲೆಪಟ್ಟಿ ಎಂಬ ಬೆಳ್ಳಿಯ ಆಭರಣಗಳನ್ನು ಕಟ್ಟುತ್ತಾರೆ. ಅದರ ಮೇಲೆ ತಲೆ ಮಣಿ ಎಂಬ ಆಭರಣವಿರುತ್ತದೆ. ಚಿನ್ನದ  ನಾಣ್ಯಗಳಂತಿರುವ ಆಭರಣಗಳಿಗೆ ಕಿಸ್ಗಾರ ಹೂವಿನ ದಂಡೆ ಹಿನ್ನೆಲೆಯಲ್ಲಿರುತ್ತದೆ. ಈ ಎಲ್ಲಾ ಆಭರಣಗಳ ಮೇಲೆ ಕಂಚಿನ ಅರ್ಧವೃತ್ತಾಕಾರದ ತಲೆಪಟ್ಟ ಎಂಬ ಆಭರಣವನ್ನು ಕಟ್ಟಿಕೊಳ್ಳಲಾಗುತ್ತದೆ.

ನಂತರ ಭುಜಕ್ಕೆ ಕೆಂಪು, ಬಿಳಿ, ಹಸಿರು ಬಣ್ಣಗಳ ಜರಿ ಇರುವ ಕೆಂಪು ಅಂಗಿಯನ್ನು ಧರಿಸುತ್ತಾರೆ. ಕಾಲಿಗೆ ಧರಿಸುವ ಕೆಂಪು ಬಣ್ಣದ ವಸ್ತ್ರಕ್ಕೆ ಇಜಾರವೆಂದು ಹೆಸರು. ಕಾಲಿಗೆ ತೆಂಗಿನಹಾಳೆಯನ್ನು ಕಟ್ಟಿ ಅದರ ಮೇಲೆ ಗಗ್ಗರವನ್ನು ಕಟ್ಟುತ್ತಾರೆ. ಸ್ವಲ್ಪ ಮೇಲೆ ಗೆಜ್ಜೆಯನ್ನು ಕಟ್ಟಲಾಗುತ್ತದೆ. ಕೈಗಳಿಗೆ ದಂಡೆಕಾಜಿ, ಬೆಳ್ಳಿಯ ಕಡಗಗಳನ್ನು ಧರಿಸುತ್ತಾರೆ. ಎದೆಯ ಭಾಗದಲ್ಲಿ ಬೆರ್ಪತ್ತಿ, ಗುಂಡುಸರ, ಕೊರಳಪದಕ ಹಾಗೂ ವಜ್ರ ಮಾಲೆ ಧರಿಸುತ್ತಾರೆ.

ಪರವ ಜನಾಂಗದವರು ಕಟ್ಟುವ ಬೂತಕೋಲಗಳಿಗೆ ತೆಂಗಿನಗರಿಯನ್ನು ಬಳಸುವುದಿಲ್ಲ. ಸೀರೆಯನ್ನೇ ನೆರಿ ಹಿಡಿದು ಹಗ್ಗದಲ್ಲಿ ಸೊಂಟಕ್ಕೆ ಕಟ್ಟುತ್ತಾರೆ. ಇದಕ್ಕೆ ಪಾಂಬೋಡಿ ವಸ್ತ್ರ ಎಂದು ಹೆಸರು. ಐದಾರು ಸೀರೆಗಳನ್ನು ಸುತ್ತಿ ಹಿಂಭಾಗದಲ್ಲಿ ಮುಡಿಯನ್ನು ಇರಿಸಲು ಬಿದಿರಿನ ಅಡ್ಡ ಕಟ್ಟುತ್ತಾರೆ. ಕಿನ್ನಿಮಾಣಿ, ಪೂಮಾಣಿ ದೈವಗಳ ಅಣಿಗೆ ಮುಡಿ ಎಂದೇ ಹೆಸರು. ಬಿಳಿ, ನೀಲಿ, ಕೆಂಪು ಬಣ್ಣಗಳ ವಸ್ತ್ರಗಳಿಂದ ಅಲಂಕೃತವಾದ ತ್ರಿಕೋನಾಕೃತಿಯ ಉದ್ದವಾದ ಮುಡಿಯನ್ನು ಬೆಳ್ಳಿ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ. ಮುಡಿಯ ಕೆಳಭಾಗದಲ್ಲಿ ಕೆಂಪು ವಸ್ತ್ರ ಸುತ್ತಿದ ದಂಡೆಬಾಳೆ ಇರುತ್ತದೆ. ಅದಕ್ಕೆ ಬೆಳ್ಳಿಯ ಕಟ್ಟುಗಳಿವೆ. ಒಳಭಾಗದಲ್ಲಿ ಬೆಳ್ಳಿಯ ಪ್ರಭಾವಳಿ ಇದೆ. ಅದಕ್ಕೆ ‘ಮುಡಿಸಂದ್’ ಎಂದು ಹೆಸರು. ಮಧ್ಯದಲ್ಲಿ ಬೆಳ್ಳಿಯ ಕೀರ್ತಿಮುಖ, ಹೊರಭಾಗದಲ್ಲಿ ಬೆಳ್ಳಿಯ ‘ಪಕ್ಕಿ ಮಿಶಾನ್’ಗಳಿವೆ. ಮೇಲೆ ಬೆಳ್ಳಿಯ ಸತ್ತಿಗೆ ಒಳಭಾಗದಲ್ಲಿ ಬೆಳ್ಳಿಯ ಅಲಂಕಾರಗಳಿರುತ್ತವೆ.

ತೆಂಕುತಿಟ್ಟು ಯಕ್ಷಗಾನಕ್ಕೂ ಬೂತೊಕೋಲೊದ ವೇಷಗಳಿಗೂ ಪರಸ್ಪರ ಸಂಬಂಧವಿರುವುದನ್ನು ಈಗಾಗಲೇ ಮುಳಿಯ ತಿಮ್ಮಪ್ಪಯ್ಯ, ಶೇಣಿ ಗೋಪಾಲಕೃಷ್ಣ ಭಟ್, ಅಮೃತ ಸೋಮೇಶ್ವರ, ಚಿನ್ನಪ್ಪಗೌಡ ಮೊದಲಾದ ವಿದ್ವಾಂಸರು ಗುರುತಿಸಿದ್ದಾರೆ. ಶಿವರಾಮ ಕಾರಂತರು ಬಡಗುತಿಟ್ಟು ಯಕ್ಷಗಾನದ ಜೊತೆ ಬೂತೊಕೋಲೊವನ್ನು ಹೋಲಿಸಿ ಯಾವುದೇ ಹೋಲಿಕೆ ಇಲ್ಲ ಎಂಬುದನ್ನು ತಿಳಿಸಿದ್ದಾರೆ. ಆದರೆ ಬೂತೊಕೋಲೊ ಪರಿಸರದಲ್ಲಿ ಬೆಳೆದು ಬಂದಿರುವ ತೆಂಕುತಿಟ್ಟು ಯಕ್ಷಗಾನಕ್ಕೆ ಅನೇಕ ಸಂಗತಿಗಳಲ್ಲಿ ಹೋಲಿಕೆ ಇದೆ.

ಯಕ್ಷಗಾನದ ಬಣ್ಣಗಾರಿಕೆಗೆ ಬಳಸುವ ಅರದಾಳ, ಇಂಗಳೀಕ ಮೊದಲಾದ ಬಣ್ಣಗಳನ್ನು ಬೂತಕೋಲದಲ್ಲೂ ಬಳಸಲಾಗುತ್ತದೆ. ಅನೇಕ ಬೂತದ ವೇಷಗಳು ಯಕ್ಷಗಾನದ ಬಣ್ಣದ ವೇಷದ ವೈಭವವನ್ನು ಹೋಲುತ್ತವೆ. ಬೂತೊಕೋಲೊ ಇನ್ನೂ ಆರಾಧನೆಯ ಚೌಕಟ್ಟಿ ನೊಳಗಡೆಯೇ ಇರುವುದರಿಂದ ಹೆಚ್ಚು ಧಾರ್ಮಿಕವಾಗಿದೆ. ಹಾಗೂ ಜನಪದೀಯವಾಗಿದೆ. ಯಕ್ಷಗಾನದ ವೇಷವಿಧಾನಗಳಲ್ಲಿ ಬಣ್ಣಗಾರಿಕೆಯಲ್ಲಿ ಇರುವ ಸೂಕ್ಷ್ಮ ರಚನೆಗಳನ್ನು ಬೂತಕೋಲದಲ್ಲಿ ಕಾಣುವುದು ಸಾಧ್ಯವಿಲ್ಲ. ಎರಡೂ ಕಲೆಗಳಲ್ಲಿ ಪಾತ್ರಗಳ ಆಹಾರ್ಯವು ಅತಿಮಾನುಷ ಸ್ವಭಾವವನ್ನು ಪ್ರಕಟಿಸುವುದೇ ಆಗಿದೆ. ಹಳದಿ, ಕೆಂಪು, ಬಿಳಿ, ಕಪ್ಪು ಮೊದಲಾದ  ಬಣ್ಣಗಳ ಚುಟ್ಟಿ, ಮುದ್ರೆಗಳು ಹಾಗೂ ನಾಮಗಳು ಬೂತದಲ್ಲಿ ಬಿಡಿಸಲಾಗುತ್ತದೆ. ಸರಳ, ವಕ್ರ ಹಾಗೂ ಸಮಾನಾಂತರ ರೇಖೆಗಳ ಮೂಲಕ ಮುಖವಿನ್ಯಾಸವನ್ನು ಬಿಡಿಸಲಾಗುತ್ತದೆ. ಸ್ತ್ರೀವೇಷಕ್ಕೆ ಸಂಬಂಧಿಸಿದಂತೆ ಬೂತಕೋಲದಲ್ಲಿಯೂ ಸರಳವಾದ ಮುಖವರ್ಣಿಕೆ ಇದೆ. ಮುಖವರ್ಣಿಕೆಗೆ ಸಪೇದು, ಇಂಗಳೀಕ, ಅರದಾಳ ಮೊದಲಾದವುಗಳನ್ನು ಬಳಸುತ್ತಾರೆ. ಹಿಂದೆ ಇವೆಲ್ಲ ದೀವಟಿಗೆಯ ಬೆಳಕಿನಲ್ಲಿಯೇ ನಡೆಯುತ್ತಿದ್ದುದರಿಂದ ಎರಡೂ ಕಲಾ ಪ್ರಕಾರಗಳಲ್ಲಿ ಒಂದೇ ರೀತಿಯ ವೇಷ ಹಾಗೂ ಬಣ್ಣ ಪರಿಕರಗಳನ್ನು ಬಳಸುತ್ತಿದ್ದರು. ಬಣ್ಣಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಪ್ರಖರವಾಗಿ ಕಾಣುವಂತೆ ಮಾಡುತ್ತಿದ್ದರು. ಮುಖಕ್ಕೆ ಮೂಲಲೇಪನವಾಗಿ ಹಳದಿ ಬಣ್ಣವನ್ನು ಹಾಕುವುದು ಬೂತಕೋಲದ ಸಂಪ್ರದಾಯ. ಕೆಲವೊಂದು ಬೂತೊಗಳಿಗೆ ನಸುಕೆಂಪು ಬಣ್ಣವನ್ನು ಮೂಲಲೇಪನವಾಗಿ ಬಳಸುವುದೂ ಇದೆ. ಹುಬ್ಬು ಮತ್ತು ಕಣ್ಣಿನ ಎವೆಗಳಿಗೆ ಕಪ್ಪು ತುಟಿಗೆ ಕೆಂಪು ಕಿವಿಯಿಂದ ಗದ್ದದ ಬದಿಯಲ್ಲಿ ಕಪ್ಪು ಗೆರೆ, ಹಣೆಯಲ್ಲಿ ನಾಮ ಅಥವಾ ತಿಲಕ ಇವು ಬೂತಕೋಲದ ಮುಖವರ್ಣಿಕೆಯ ಸಾಮಾನ್ಯ ಸ್ವರೂಪ.

ಯಕ್ಷಗಾನ ಮತ್ತು ಬೂತಕೋಲ ಈ ಎರಡೂ ಸಂಪ್ರದಾಯಗಳಲ್ಲಿ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ  ಬಣ್ಣದ ಛಾಯೆಗಳನ್ನು ಮೂಡಿಸುತ್ತಾರೆ. ಅದರ ಮೇಲೆ ಮುದ್ರೆಗಳನ್ನು ಬರೆಯುತ್ತಾರೆ. ಕಪ್ಪು ಬಣ್ಣದ ಗದ್ದದ ರೇಖೆಯನ್ನು ಎಳೆದು ಹಸಿರು ಬಣ್ಣದಲ್ಲಿ ಚಿಕ್ಕ ವರ್ತುಲವನ್ನು ಬರೆಯುತ್ತಾರೆ. ಇಲ್ಲಿನ  ಹಸಿರು ಬಣ್ಣವು ಶೃಂಗಾರದ ಸೂಚಕವೆಂದು ಹೇಳಲಾಗುತ್ತದೆ. ಕಣ್ಣಿನ ಕೆಳಭಾಗದಲ್ಲಿ ಕೆಂಪು, ಬಿಳಿ ರೇಖೆಗಳನ್ನು ಎಳೆದು ರೇಖೆಗಳು ಪರಸ್ಪರ ಸಂದಿಸುವಲ್ಲಿ ಚುಟ್ಟಿಗಳನ್ನಿಡುತ್ತಾರೆ. ಇದು ವೀರದ ಸಂಕೇತ ಎಂದು ಹೇಳಲಾಗುತ್ತದೆ. ಪಾತ್ರಗಳ ರೌದ್ರ ಸ್ವಭಾವಗಳನ್ನು ಪ್ರಕಟಿಸಲು ವಕ್ರ ರೇಖೆಗಳು, ಮುದ್ರೆಗಳು, ಚುಟ್ಟಿಯ ಸಾಲುಗಳು, ದಪ್ಪ ಗೆರೆಗಳು ಇರುತ್ತವೆ. ಇದಕ್ಕೆ ಪೂರಕವಾಗಿ ಕೆಂಪು ಬಣ್ಣವನ್ನು ವಿಶೇಷವಾಗಿ ಬಳಸಲಾಗುತ್ತದೆ.  ಸಾಮಾನ್ಯವಾಗಿ ಒಂದೇ ತೆರನ ಪಾತ್ರಗಳು ಬಂದಾಗ ಎರಡೂ ಸಂಪ್ರದಾಯಗಳಲ್ಲಿ ಹೋಲಿಕೆಯ ವೇಷಗಳನ್ನು ನೋಡಬಹುದು. ಯಕ್ಷಗಾನದ ವರಾಹ ವೇಷದಲ್ಲಿರುವ ಹಣೆಯ ವರ್ತುಲ, ಚುಟ್ಟಿಯ ಸಾಲು ಹೊರಮುಖ ವಾಗಿ ಚಾಚುವಂತಿರುವ ಗೆರೆಗಳು ಬೂತೊಕೋಲೊದ ಪಂಜುರ್ಲಿಯಲ್ಲಿಯೂ ಇದೆ. ಪಂಜುರ್ಲಿ ಎಂಬುದು ವರಾಹ ಸಂಬಂಧಿ ಬೂತ.

ಯಕ್ಷಗಾನ ಮತ್ತು ಕಥಕಳಿಗಳ ನಡುವೆ ಉಡುಗೆ ತೊಡುಗೆಗಳಲ್ಲಿ ಸಾಕಷ್ಟು ಸಾಮ್ಯವಿರುವುದು ಕಂಡುಬರುತ್ತದೆ. ಕಚ್ಚೆ ಹಾಗೂ ಅಂಗಿ ಎರಡೂ ಕಲೆಗಳಲ್ಲಿ ಸಾಮಾನ್ಯ ಉಡುಗೆ. ಯಕ್ಷಗಾನದ ಬಾಲಮುಂಡು ಹಾಗೂ ಕಥಕಳಿಯ ನೆರಿ ಸ್ವರೂಪದಲ್ಲಿ ಭಿನ್ನವಾದರೂ ಉದ್ದೇಶದಲ್ಲಿ ಒಂದೇ. ಯಕ್ಷಗಾನದಲ್ಲಿ ಮೊದಲು ಬಾಲ್‌ಮುಂಡು ಇರಲಿಲ್ಲವೆಂದು ಹೇಳುವವರಿದ್ದಾರೆ. ಇಂದು ಬಡಗುತಿಟ್ಟಿನಲ್ಲಿರುವಂತೆ ಹದಿನಾರು ಮೊಳದ  ಚೌಕಳಿ ಸೀರೆಯನ್ನು ಕಸೆ ಹಾಕಿ ಉಡುವ ಪದ್ಧತಿಯೇ ತೆಂಕುತಿಟ್ಟಿನಲ್ಲೂ ಇತ್ತು ಎಂದು ಹೇಳಲಾಗುತ್ತದೆ. ಹಾಗಾಗಿ ಬಾಲ್‌ಮುಂಡು ನಂತರದ ಬೆಳವಣಿಗೆಯೆಂದು ಅಭಿಪ್ರಾಯ ಪಡಲಾಗಿದೆ (ನೋಡಿ : ರಾಘವ ನಂಬಿಯಾರ್ ಕೆ.ಎಂ, ೧೯೭೦ : ೭೭).

ಕಥಕಳಿಯಲ್ಲಿ ಕೃಷ್ಣನಾಟ, ರಾಮನಾಟಗಳ ಕಾಲದಲ್ಲೇ ಈ ನೆರಿ ಬಳಕೆಗೆ ಬಂತು ಎಂದು ಹೇಳಲಾಗುತ್ತದೆ. ಅದಕ್ಕೂ ಪೂರ್ವದಲ್ಲಿ ಕೂಡಿಯಾಟಂನಲ್ಲೂ ಇಂತಹ ನೆರಿಯ ಮಾದರಿಯನ್ನು ಕಾಣಬಹುದು. ಬೂತೊಕೋಲೊ ಸಂದರ್ಭದಲ್ಲೂ ತೆಂಗಿನಗರಿಯಿಂದ ಮಾಡಿದ ನೆರಿಯ ಮಾದರಿಯ ರಚನೆಗಳೇ ಇವೆ. ಇಲ್ಲಿಂದಲೇ ಕೂಡಿಯಾಟಂಗೆ ಬಟ್ಟೆಯ ರೂಪದಲ್ಲಿ ಪರಿವರ್ತನೆಯಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ತೆಂಕುತಿಟ್ಟಿಗೆ ಈ ನೆರಿಯೇ ಬಾಲ್‌ಮುಂಡಿನ ರೂಪದಲ್ಲಿ ಪ್ರವೇಶ ಪಡೆದಿರಬಹುದು. ಕೇರಳದ ಓಟಂತುಳ್ಳಲ್ ವೇಷಧಾರಿಯು ಈ ತೆರನ ಬಾಲ್‌ಮುಂಡನ್ನು ಧರಿಸುತ್ತಾನೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸೋಗೆವಲ್ಲಿಗಳು ಕಥಕಳಿ ಮತ್ತು ಯಕ್ಷಗಾನಗಳಲ್ಲಿ ಸಮಾನವಾಗಿ ಬಳಕೆಯಾಗುತ್ತಿವೆ. ಆಭರಣಗಳಲ್ಲೂ ಅನೇಕ ರೀತಿಯ ಸಾಮ್ಯಗಳನ್ನು ಕಾಣಬಹುದು. ಕಥಕಳಿಯಲ್ಲಿ ಬಳಕೆಯಾಗುವ ಕೊರಳಾರವು ಯಕ್ಷಗಾನದ ಕೊರಳಾರ ಅಥವಾ ಎದೆಪದಕದ ಪರ್ಯಾಯ ವಾಗಿ ಕಾಣುತ್ತದೆ. ಕಿರೀಟಗಳಲ್ಲಿ ಧರ್ಮರಾಯನ ಕಿರೀಟವೆಂದು ಹೇಳುವ ಯಕ್ಷಗಾನದ ಕಿರೀಟವು ಕಥಕಳಿಯ ಸಣ್ಣ ಬಟ್ಟಲು ಕಿರೀಟದಂತೆಯೇ ಇದೆ. ಕಥಕಳಿಯ ದೊಡ್ಡ ಕಿರೀಟವು ಕೇಶಾವರವು ಯಕ್ಷಗಾನದಲ್ಲಿ ಕೇಸರಿತಟ್ಟಿಯಾಗಿ ಬಳಕೆಯಾಗುತ್ತದೆ. ತೆಂಕುತಿಟ್ಟಿನ ಈ ಕಿರೀಟವನ್ನು ನೋಡಿದರೆ ಕಥಕಳಿಯ ವೇಷದ ಮಾದರಿಯನ್ನೇ ಹೋಲುತ್ತದೆ. ಕರ್ನಾಟಕದ ಇತರೆ ಯಕ್ಷಗಾನ ಸಂಪ್ರದಾಯಗಳಲ್ಲಿಲ್ಲದ ಈ ಶಿರೋಭೂಷಣವನ್ನು ಗಮನಿಸಿ ಇದು ಕಥಕಳಿಯಿಂದಲೇ ಆಮದಾದುದೆಂದು ಹೇಳಲಾಗುತ್ತದೆ. ಕಥಕಳಿಯ ಎಲ್ಲಾ ರಾಜವೇಷಗಳು ತೊಡುವ ಶಿರೋಭೂಷಣಗಳು ಇದೇ ಮಾದರಿಯವು. ಆದರೆ ಯಕ್ಷಗಾನದಲ್ಲಿ ಇದು ಬಣ್ಣದ ವೇಷ ಅಥವಾ ರಾಕ್ಷಸ ವೇಷಗಳಿಗೆ ಮಾತ್ರ ಬಳಕೆಯಾಗುವ ಶಿರೋಭೂಷಣ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಯಕ್ಷಗಾನದ ಕೇಸರಿತಟ್ಟಿ ವೇಷಗಳು ಕಥಕಳಿಯ ವೇಷಗಳಂತೆ ತೆರೆ ಪುರಪ್ಪಾಡು, ಆರ್ಭಟ, ಗಾಂಭೀರ್ಯ ಇತ್ಯಾದಿಗಳಲ್ಲೆಲ್ಲ ಸಾಮ್ಯವನ್ನು ಹೊಂದಿವೆ.

ಕಚ್ಚೆ, ಕಡಗ, ತೋಳಕಟ್ಟು, ಕೈಕಟ್ಟು, ಭುಜಕೀರ್ತಿ, ಕೊರಳಾರ, ಮೊಲೆಕಳತ್ತಾರ, ದಗಲೆ, ಡಾಬು, ಕಾಲಮುಳ್ಳು ಮೊದಲಾದವುಗಳು ಬೂತಕೋಲಗಳಲ್ಲೂ ಕಂಡುಬರುವ ಸಾಮಾನ್ಯ ವೇಷಭೂಷಣ. ಬೂತೊಕೋಲೊದ ಅಣಿ ಎನ್ನುವ ಶಿರೋಭೂಷಣವು ತೆಂಗಿನಗರಿ, ಬಟ್ಟೆ ಮೊದಲಾದವುಗಳನ್ನು ಬಳಸಿ ತಯಾರಿಸಲಾಗುತ್ತದೆ. ಬೆನ್ನ ಹಿಂದೆ ಅದನ್ನು ಕಟ್ಟಿಕೊಂಡಾಗ ವೇಷದ ಗಾತ್ರವು ದೊಡ್ಡದಾಗುತ್ತದೆ. ಪಾತ್ರದ ಸುತ್ತ ಪ್ರಭಾವಳಿ ಯಂತೆ ಇದು ವೇಷಕ್ಕೆ ಗಾಂಭೀರ್ಯವನ್ನು ಕೊಡುತ್ತದೆ. ಯಕ್ಷಗಾನ ಕಥಕಳಿಗಳ ಬೃಹದ್ ಗಾತ್ರಕ್ಕೆ ಇದು ಪ್ರೇರಣೆ ನೀಡಿರಬಹುದೆಂದು ಶಂಕಿಸುವವರೂ ಇದ್ದಾರೆ(ನೋಡಿ : ಮಹಲಿಂಗೇಶ್ವರ ಶರ್ಮ ಅಪ್ರಕಟಿತ ಪಿಎಚ್.ಡಿ ಮಹಾಪ್ರಬಂಧ : ೨೨೩).

ಮುಡಿ ಎನ್ನುವುದು ಸಾಂದರ್ಭಿಕವಾಗಿ ತೆಂಗಿನಗರಿಯಿಂದ ಸಿದ್ಧಪಡಿಸುವ ಶಿರೋ ಭೂಷಣ. ಕಥಕಳಿ ಯಲ್ಲಿಯೂ ಆರಂಭದಲ್ಲಿ ಹಸುರೆಲೆಯ ಕಿರೀಟಗಳೇ ಇದ್ದುವೆಂದು ಆ ಬಳಿಕ ಸಿದ್ಧ ಮಾದರಿಯ ಕಿರೀಟಗಳು ಬಂದುವೆಂದು ಹೇಳಲಾಗುತ್ತದೆ. ಇದನ್ನು ಗಮನಿಸಿದರೆ ಬೂತೊಕೋಲೊದ ತೆಂಗಿನಗರಿಯ (ಹಸಿರೆಲೆ) ಕಿರೀಟವೇ ಪ್ರೇರಣೆ ಎಂಬುದು ಸ್ಪಷ್ಟ ವಾಗುತ್ತದೆ.

ಕಥಕಳಿಯ ಹನುಮಂತನ ಕಿರೀಟವು ಕಥಕಳಿಯ ಕುಟ್ಟಿಚಾಮರವೆಂಬ ಶಿರೋಭೂಷಣದ ನೇರ ಪ್ರಭಾವದಿಂದ ರೂಢಿಗೆ ಬಂದಿದೆ ಎಂಬುದು ತಿಳಿಯುತ್ತದೆ. ಹನುಮಂತನ ಕಿರೀಟ, ಮುಖವರ್ಣಿಕೆ ಹಾಗೂ ವೇಷಭೂಷಣಗಳಲ್ಲಿ ತೆಂಕುತಿಟ್ಟು ಕಥಕಳಿಯನ್ನೇ ಅನುಸರಿಸಿದೆ ಎಂಬುದು ವೇದ್ಯವಾಗುವ ಸಂಗತಿ.

ಯಕ್ಷಗಾನದ ಆಲವಟ್ಟ, ಚಿಟ್ಟಪಟ್ಟಿ ಮೊದಲಾದವುಗಳು ಕಥಕಳಿಯ ಆಲವಟ್ಟಂ, ಚಿಟ್ಟತುಣಿಗಳೇ ಆಗಿವೆ. ಆಲವಟ್ಟವು ತೆಂಕುತಿಟ್ಟಿನಲ್ಲಿ ಬಣ್ಣದ ವೇಷಗಳಿಗೆ ಮಾತ್ರ ಬಳಸ ಲಾಗುತ್ತದೆ. ಇದು ಇತರೆ ಯಕ್ಷಗಾನ ಸಂಪ್ರದಾಯಗಳಲ್ಲಿ ಬಳಕೆಯಲ್ಲಿಲ್ಲ. ಹಾಗಾಗಿ ಕಥಕಳಿಯ ಜೊತೆ ಇದು ಸಾಮ್ಯವನ್ನು ಹೊಂದಿದೆ. ಚಿಟ್ಟಪಟ್ಟಿ ಎನ್ನುವ ಪದವೇ ಕಥಕಳಿಯ ಚಿಟ್ಟತುಣಿಯಿಂದಲೇ ಬಂದಿರುವ ಸಾಧ್ಯತೆಯು ಇದೆ. ಚಿಟ್ಟ ಎಂದರೆ ಬೇರ್ಪಡಿಸು ಎಂಬ ಅರ್ಥ ಮಲಯಾಳಂನಲ್ಲಿ ಇದೆ. ಇಲ್ಲಿಂದಲೇ ತೆಂಕುತಿಟ್ಟಿನಲ್ಲೂ ಈ ಪದ ಬೇರ್ಪಡಿಸುವ ಎಂಬ ಅರ್ಥದಲ್ಲೇ ರೂಢಿಗೆ ಬಂದಿರಬೇಕು.

ತೆರೆ ಹಿಡಿದು ಕುಣಿಯುವ ನೃತ್ಯ ವಿಧಾನವನ್ನು ತೆರೆಕ್ಲಾಸು ಅಥವಾ ಸಭಾಕ್ಲಾಸು ಎಂಬ ಪದದಿಂದ ಸೂಚಿಸಲಾಗುತ್ತದೆ. ಇಲ್ಲಿನ ಕ್ಲಾಸು ಎಂಬ ಪದವು ಮಲಯಾಳಂ ಭಾಷೆಯ ‘ಕಲಾಶ’ ಎಂಬ ಪದದ ಅಪಭ್ರಂಶ ರೂಪವಿರಬೇಕೆಂದು ಶೇಣಿ ಗೋಪಾಲಕೃಷ್ಟಭಟ್ಟರ ಅಭಿಪ್ರಾಯ (೧೯೮೧:೮). ಮಲಯಾಳಂನಲ್ಲಿ ‘ಕಲಾಶ’ ಎಂದರೆ ‘ಮುಕ್ತಾಯ’ ಎಂದರ್ಥ. ಕಥಕಳಿಯಲ್ಲಿ ಅಷ್ಟಕಲಾಶಗಳ ವರ್ಣನೆ ಬರುತ್ತದೆ. ಹಾಗೆಯೇ ರಾಕ್ಷನ ವೇಷಗಳ ತೆರೆಪೊರಪ್ಪಾಡು ಮತ್ತು ಹನುಮಂತನ ತೆರೆಪೊರಪ್ಪಾಡುಗಳಿಗೆ ಕಥಕಳಿಯ ಮುದ್ರೆಗಳೇ ಆಕರಗಳೆಂಬುದನ್ನು ಶೇಣಿಯವರು ಸೂಚಿಸುತ್ತಾರೆ.

ವೇಷಭೂಷಣಗಳು, ವೇಷಪರಿಕರಗಳು, ಬಣ್ಣಗಳು, ಅವುಗಳ ಧಾರ್ಮಿಕ ಕ್ರಿಯೆಗಳು ಇವೆಲ್ಲಾ ತೆಯ್ಯಂ, ಬೂತೊಕೋಲೊ, ಕಥಕಳಿ ಮತ್ತು ತೆಂಕುತಿಟ್ಟು ಯಕ್ಷಗಾನಗಳಲ್ಲಿ ಪರಸ್ಪರ ಸಾಮ್ಯವನ್ನು ಕಾಣಬಹುದು. ಇಲ್ಲಿನ ಆಭರಣಗಳು ದೇವಾಲಯಗಳ ಪೂಜಾ ಪರಿಕರಗಳೊಂದಿಗೊ ಕೆಲವೊಮ್ಮೆ ಪ್ರಾಚೀನ ರಾಜಮಹಾರಾಜರುಗಳ ಉಡುಗೆ ತೊಡುಗೆಗಳ ಜೊತೆಗೊ ಪ್ರಾಚೀನ ಶಿಲ್ಪ ಮಾದರಿಗಳ ಜೊತೆಗೊ ಒಂದಲ್ಲ ಒಂದು ರೀತಿಯಲ್ಲಿ  ಸಾದೃಶ್ಯವನ್ನು ಕಾಣಬಹುದು. ಇದು ಕೇವಲ ಆಕಸ್ಮಿಕವಲ್ಲ. ಆಯಾ ಕಾಲದ ಅಗತ್ಯಗಳಿಗನುಗುಣವಾಗಿ ಸಾಂಸ್ಕೃತಿಕವಾಗಿ ರೂಪಿಸಿಕೊಂಡ ಆಹಾರ್ಯದ ಮಾದರಿಗಳೆಂದು ತಿಳಿಯಬಹುದು.

ಗೊಂಬೆಯಾಟಗಳು

ಗೊಂಬೆಯಾಟಗಳು ಆರಂಭ ಕಾಲದ ಜನಪದ ಕಲೆಗಳಲ್ಲಿ ಒಂದು. ‘ಗೊಂಬೆಯಾಟ’ ದಲ್ಲಿ ಅನೇಕ ವಿಧಗಳಿವೆ. ಉದಾಹರಣೆಗೆ ಸಲಿಕೆ ಗೊಂಬೆಯಾಟ, ನೆರಳು ಗೊಂಬೆಯಾಟ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಇತ್ಯಾದಿಗಳು. ಯಕ್ಷಗಾನದಂತೆಯೇ ಇಲ್ಲಿನ ವೇಷ ಭೂಷಣಗಳು ಆಕರ್ಷಣೀಯವಾಗಿವೆ. ಕರ್ನಾಟಕದ ಕರಾವಳಿ ತೀರದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಸೂತ್ರದ ಬೊಂಬೆಯಾಟ ಗಳು ಚಾಲ್ತಿಯಲ್ಲಿವೆ. ಇದು ಕರ್ನಾಟಕದ ವಿಶಿಷ್ಟವಾದ ಬೊಂಬೆಯಾಟದ ಪ್ರಕಾರವಾಗಿದೆ. ಕರ್ನಾಟಕದ ಈ ಪ್ರದೇಶದಲ್ಲಿ ಹಿಂದೆ ಮೂವತ್ತಕ್ಕೂ ಹೆಚ್ಚು ಯಕ್ಷಗಾನ ಸೂತ್ರ ಬೊಂಬೆಯಾಟಗಳಿದ್ದ ಬಗೆಗೆ ಮಾಹಿತಿಗಳು ದೊರೆಯುತ್ತವೆ (ನೋಡಿ : ತೇರು, ದ.ಕ.ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ಹೊತ್ತಗೆ, ೧೯೯೩ : ೭೭). ಯಕ್ಷಗಾನದ ವೇಷಭೂಷಣಗಳ ಆಕರ್ಷಣೆಯನ್ನು ಉಳಿಸಿಕೊಂಡೇ ಗೊಂಬೆಗಳ ತಯಾರಿಯನ್ನು ಇಲ್ಲಿನ ಕಲಾವಿದರು ಮಾಡಿಕೊಳ್ಳುತ್ತಾರೆ. ಗೊಂಬೆ ತಯಾರಿಗೆ ಬೆಳ್ಳಂದಿ, ಉತ್ತಿಗ, ಕರಿಹಾಲೆ ಮೊದಲಾದ ಮರಗಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಏಕೆಂದರೆ ಇಂತಹ ಮರಗಳಲ್ಲಿ ನಾಜೂಕಿನ ಕೆತ್ತನೆಗಳು ಸುಲಭ. ಅಳತೆಗೆ ಬೇಕಾದಂತೆ ತುಂಡರಿಸಿ ಉಳಿಯಿಂದ ನಿರ್ದಿಷ್ಟ ಆಕಾರ ಕೊಡುವುದು ಸುಲಭ. ಆರಿಸಿದ ಒಂದು ಮರದ ತುಂಡಿನ ಅರ್ಧ ಭಾಗವನ್ನು ಮುಖದ ಕೆತ್ತನೆಯನ್ನು ಉಳಿದ ಅರ್ಧ ಭಾಗದಲ್ಲಿ ಕಿರೀಟ, ಕೇದಗೆ, ಮುಂದಲೆ ಇತ್ಯಾದಿ ಗಳನ್ನು ಕೆತ್ತಲಾಗುತ್ತದೆ. ಕಿವಿಯ ಆಭರಣ, ಹಣೆಪಟ್ಟಿ ಮೊದಲಾದವುಗಳನ್ನು ಅದೇ ಮರದ ತುಂಡಿನಲ್ಲಿಯೇ ಕೆತ್ತಲಾಗುತ್ತದೆ. ಗೊಂಬೆಗಳ ದೇಹ, ತೋಳು, ಕೈ, ತೊಡೆ, ಕಾಲು ಮುಂತಾದವುಗಳನ್ನು ಬೇರೆ ಸಣ್ಣ ಸಣ್ಣ ಮರದ ತುಂಡುಗಳಿಂದ ನಿರ್ಮಿಸಲಾಗುತ್ತದೆ. ಬಳಿಕ ಪರಸ್ಪರ ಹಗ್ಗದಿಂದ ಜೋಡಿಸುವುದು ಎಲ್ಲ ಗೊಂಬೆಗಳ ಕೈಕಾಲುಗಳು ಒಂದೇ ರೀತಿಯಲ್ಲಿರುವುದಿಲ್ಲ. ಪ್ರತಿಯೊಂದು ಗೊಂಬೆಗಳನ್ನು ಅಷ್ಟಮಾಂಶ ಪದ್ಧತಿಗೆ ಅನುಗುಣ ವಾಗಿ ಮಾಡಲಾಗುತ್ತದೆ. ರಾಕ್ಷಸ ಪಾತ್ರದ ಗೊಂಬೆಗಳನ್ನು ಮುಖ ವಿಕಾರವಾಗಿರುವಂತೆ ಕೆತ್ತಲಾಗುತ್ತದೆ. ಇಂತಹ ಗೊಂಬೆಗಳ ಕೆತ್ತನೆಯಲ್ಲಿ ಮುಖದ ರಚನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಕಣ್ಣುಗಳು, ಬಾಯಿ, ಕೋರೆದಾಡೆ ಇವು ವಿಕಾರವಾಗಿ ಭಯ ಹುಟ್ಟಿಸುವಂತೆ ಇರುತ್ತದೆ. ಮುಖದ ಅಳತೆಗೆ ಅನುಗುಣವಾಗಿ ಅದೇ ಮರದ ತುಂಡಿನಲ್ಲಿ ಕಿರೀಟ ಭಾಗವನ್ನು ಕೂಡಾ ಕೆತ್ತಲಾಗುತ್ತದೆ. ಸಾಮಾನ್ಯವಾಗಿ ರಾಕ್ಷಸ ಗೊಂಬೆಗಳ ಕೈಕಾಲುಗಳು ದೇಹದ ಅಳತೆಗೆ ಅನುಗುಣವಾಗಿರುವುದಿಲ್ಲ. ಇದರಲ್ಲಿ ಕೈ, ಕಾಲು ದೊಡ್ಡದಾಗಿರುತ್ತದೆ. ಏಕೆಂದರೆ ಇದರ ಅಂಗ ರಚನೆಯ ನೆಲೆಯಿಂದಲೇ ಪ್ರೇಕ್ಷಕರಲ್ಲಿ ಭಾವವನ್ನೂ ಕೆರಳಿಸಬೇಕೆಂಬ ಉದ್ದೇಶವಿದ್ದಿರಬಹುದು. ಈ ಕಾರಣಕ್ಕಾಗಿಯೇ ಇವುಗಳನ್ನು ಅಂಗ ಭಾಷೆಯ ಗೊಂಬೆಯಾಟವೆಂದು ಕರೆಯುವ ರೂಢಿಯಿದೆ. ಸಾಮಾನ್ಯವಾಗಿ ಎಂಟರಿಂದ ಹತ್ತು ಕಿ.ಲೋ.ಗ್ರಾಂ. ಭಾರವಾದ ಈ ತರದ ರಾಕ್ಷಸ ಗೊಂಬೆಗಳಿಗೆ ಸೂತ್ರ ಕೂಡಾ ಆರಕ್ಕಿಂತ ಹೆಚ್ಚಿರುತ್ತದೆ. ಉಳಿದ ಸಾಮಾನ್ಯ ಪಾತ್ರಗಳಿಗೆ ಆರು ಸೂತ್ರಗಳನ್ನು ಮಾತ್ರ ಬಳಸಲಾಗುತ್ತದೆ.

ಸಾಮಾನ್ಯವಾಗಿ ಕ್ರೂರ ಪಾತ್ರಗಳಿಗೆ ಕೆಂಪು, ಹಳದಿ, ಕಪ್ಪು ಬಣ್ಣಗಳನ್ನು ಬಳಸುತ್ತಾರೆ. ಬಟ್ಟೆಗಳಲ್ಲೂ ಇದೇ ಬಣ್ಣವನ್ನು ಆಯ್ಕೆ ಮಾಡಲಾಗುತ್ತದೆ. ತೆಂಕುತಿಟ್ಟು ಯಕ್ಷಗಾನ ಪ್ರಚಲಿತದಲ್ಲಿರುವ ಪ್ರದೇಶದಲ್ಲಿ ಈ ಸೂತ್ರದ ಗೊಂಬೆಯಾಟದ ಪ್ರಕಾರ ಚಾಲ್ತಿಯಲ್ಲಿ ರುವುದರಿಂದ ವೇಷಭೂಷಣಗಳನ್ನು ತೆಂಕುತಿಟ್ಟು ಯಕ್ಷಗಾನದಲ್ಲಿರುವಂತೆಯೇ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಗೊಂಬೆಯ ರಚನೆಯಲ್ಲಿ ಮುಖದ ಭಾವಕ್ಕೆ ಹೆಚ್ಚಿನ ಗಮನವನ್ನು ಕೊಡಲಾಗುತ್ತದೆ. ಸ್ತ್ರೀವೇಷ, ಪುರುಷವೇಷ, ಹಾಸ್ಯವೇಷ ಮೊದಲಾದವುಗಳನ್ನು ನಿರ್ಮಾಣದ ಆರಂಭದ ಹಂತದಲ್ಲಿಯೇ ಆ ಪಾತ್ರದ ಭಾವ ತುಂಬುವಂತೆ ಸೃಷ್ಟಿ ಮಾಡಲಾಗುತ್ತದೆ. ಕೃಷ್ಣನ ವೇಷ ಇವಳ ವೇಷಗಳಿಗಿಂತ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ನೀಲವರ್ಣದಿಂದ ಕೃಷ್ಣನ ವೇಷಭೂಷಣಗಳನ್ನು ಸಿದ್ಧ ಮಾಡುತ್ತಾರೆ.

ಬೊಂಬೆಗಳ ನಿರ್ಮಾಣದ ಸಂದರ್ಭದಲ್ಲಿ ಮೊದಲಿಗೆ ಆ ಪಾತ್ರಗಳ ರೂಪುರೇಷೆ ಚಿತ್ರಣಗೊಂಡಿರುತ್ತದೆ. ಕೆತ್ತನೆಯ ಕೆಲಸ ಮುಗಿದ ಬಳಿಕ ಬಿಡಿ ಭಾಗಗಳನ್ನು ಹಗ್ಗದಿಂದ ಜೋಡಿಸಿ ಗೊಂಬೆಯ ಅಸ್ಥಿಪಂಜರವನ್ನು ಸಿದ್ಧ ಮಾಡಲಾಗುತ್ತದೆ. ನಂತರ ಪಾತ್ರಕ್ಕನುಗುಣ ವಾದ ಬಣ್ಣವನ್ನು ಬಳಿಯಲಾಗುತ್ತದೆ. ಬಳಿಕ ಪಾತ್ರಕ್ಕನುಗುಣವಾದ ಆಭರಣಗಳನ್ನು, ಚಿನ್ನದಂತೆ ಹೊಳೆಯುವ ಜರಿವಸ್ತುಗಳನ್ನು ಕಾಗದಗಳಿಂದ ಅಂಟಿಸುತ್ತಾರೆ. ಹೀಗೆ ಅಂಟಿಸಲು ಬಳಸುವ ವಿಶಿಷ್ಟವಾದ ಅಂಟನ್ನು ಸ್ವತಃ ಕಲಾವಿದರೇ ಸ್ಥಳೀಯವಾಗಿ ಸಿದ್ಧಪಡಿಸಿಕೊಳ್ಳುತ್ತಾರೆ. ಹಲಸಿನ ಮೇಣ ಮತ್ತು ಜೇನು ಮೇಣಗಳ ಮಿಶ್ರಣವನ್ನು ಬಿಸಿಮಾಡಿ ವಿಶಿಷ್ಟವಾದ ಅಂಟೊಂದನ್ನು ಬಳಸಲಾಗುತ್ತದೆ. ಇದರಿಂದ ಬೇಗಡೆಯಂತಹ ವಸ್ತುಗಳು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ ಹಾಗೂ ತಮ್ಮ ಹೊಳಪನ್ನು ಕಾಯ್ದುಕೊಂಡಿರುತ್ತವೆ. ಆ ಬಳಿಕ ವಸ್ತ್ರಾಭರಣ, ಭುಜಕೀರ್ತಿ, ಎದೆಪದಕ, ಸೊಂಟಪಟ್ಟಿ, ಕಾಲುಪಟ್ಟಿ, ವೀರಗಾಸೆ ಮೊದಲಾದವುಗಳನ್ನು ಯಕ್ಷಗಾನದ ಶೈಲಿಯಲ್ಲಿ ಜೋಡಿಸಲಾಗುತ್ತದೆ. ಇವುಗಳಿಂದೆಲ್ಲ ಬೊಂಬೆಗಳು ಸಿದ್ಧವಾಗುತ್ತವೆ. ಸೂತ್ರಗಳನ್ನು ಜೋಡಿಸುವ ಮೂಲಕ ಬೊಂಬೆಯ ರಚನೆಯನ್ನು ಪೂರ್ಣಗೊಳಿಸಲಾಗುತ್ತದೆ.

ಸೂತ್ರದ ಗೊಂಬೆಯಾಟದಂತಹ ಸಂದರ್ಭದಲ್ಲೂ ಹನುಮಂತನ ಗೊಂಬೆಗಳನ್ನು ತಯಾರಿಸುವುದು ಒಂದು ರೀತಿಯಲ್ಲಿ ವಿಶಿಷ್ಟವಾಗಿದೆ. ಹನುಮಂತನ ಗೊಂಬೆಯ ತಲೆಭಾಗ, ಕೈಕಾಲು ಮಾತ್ರ ಮರದ್ದು. ಇವುಗಳನ್ನು ದೇಹಕ್ಕೆ ದಾರದಿಂದ ಜೋಡಿಸಲಾಗುತ್ತದೆ. ಇವುಗಳ ಕೈಕಾಲುಗಳನ್ನು ಎಲ್ಲ ರೀತಿಯ ಚಲನೆಗೂ ಸಾಧ್ಯವಾಗುವಂತೆ ರೂಪಿಸಲಾಗುತ್ತದೆ. ಬಳಿಕ ದೇಹ ಹಾಗೂ ದಾರಗಳ ಮಧ್ಯೆ ರೋಮದಂತೆ ಕಾಣಿಸಲು ಗೋಣಿಚೀಲದ ದಾರಗಳನ್ನು ಕೌಶಲ್ಯಪೂರ್ಣವಾಗಿ ಬಳಸಲಾಗುತ್ತದೆ. ತಕ್ಷಣ ನೋಡಿದರೆ ಇವು ರೋಮಗಳಂತೆಯೇ ಭಾಸವಾಗುತ್ತವೆ. ಇಂತಹ ಹನುಮಂತನ ಬೊಂಬೆಯ ರಚನೆಯಲ್ಲಿ ಮುಖವರ್ಣಿಕೆ ಕೂಡಾ ತುಂಬಾ ಶ್ರಮದಾಯಕವಾದುದು. ಇದರ ಮೂಗು ಹಾಗೂ ಬಾಯಿಯ ಭಾಗವನ್ನು ತಯಾರಿಕೆಯ ಹಂತದಲ್ಲಿಯೇ ಪಾತ್ರಕ್ಕೆ ಅನುಗುಣವಾಗಿ ರೂಪಿಸಲಾಗುತ್ತದೆ. ಸಾಮಾನ್ಯವಾಗಿ ಹನುಮಂತನ ಗೊಂಬೆಗಳಿಗೆ ಹಸಿರು ಬಣ್ಣವನ್ನು ಬಳಸಲಾಗುತ್ತದೆ. ಚಿಕ್ಕ ಹಾಗೂ ಗೋಣಿಚೀಲದಿಂದ ತಯಾರಿಸಿದ ಬಾಲವನ್ನು ಜೋಡಿಸ ಲಾಗುತ್ತದೆ. ಹೀಗೆ ಗೊಂಬೆಯಾಟದ ಎಲ್ಲ ವೇಷವಿಧಾನವನ್ನು ನೋಡಿದರೆ ತೆಂಕುತಿಟ್ಟು ಯಕ್ಷಗಾನದ ಅನುಕರಣೆ ಮಾಡಿರು ವುದನ್ನು ಕಾಣಬಹುದು.

ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನಗಳಿಗೆ ಅನೇಕ ರೀತಿಯಲ್ಲಿ ಸಾಮ್ಯ ವೈಷಮ್ಯಗಳಿರುವುದನ್ನು ಈಗಾಗಲೇ ಅಧ್ಯಯನ ಸಂದರ್ಭದಲ್ಲಿ ಅಲ್ಲಲ್ಲಿ ಸೂಚಿಸಲಾಗಿದೆ. ಬಡಗುತಿಟ್ಟಿನಲ್ಲಿ ಕೇದಗೆ ಎಂಬ ಆಭರಣವನ್ನು ಪ್ರತಿದಿನ ಪ್ರಯೋಗದ ವೇಳೆಗೆ ಜೋಡಿಸಿ ಕಟ್ಟಿಕೊಳ್ಳುವ ಪದ್ಧತಿ ಇಂದಿಗೂ ಇದೆ. ದೊಡ್ಡಾಟದಲ್ಲಿಯೂ ಇದೇ ರೀತಿಯಲ್ಲಿದೆ. ಹಿಂದೆ ತೆಂಕುತಿಟ್ಟಿನಲ್ಲಿಯೂ ಇದೇ ರೀತಿ ಇದ್ದಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇಂದು ತೆಂಕುತಿಟ್ಟಿನಲ್ಲಿ ಕೇದಗೆಯೆಂಬ ಆಭರಣ ಪ್ರತ್ಯೇಕವಾಗಿ ಇಲ್ಲ.

ಪಕಡಿ (ಕೇದಗೆ ಮುಂದಲೆ) ಮತ್ತು ಮುಂಡಾಸುಗಳು ತೆಂಕು, ಬಡಗುತಿಟ್ಟುಗಳಲ್ಲಿ ಹೆಚ್ಚು ವ್ಯತ್ಯಾಸವನ್ನು ಕಾಣಬಹುದು. ೨೦ನೆ ಶತಮಾನದ ಆರಂಭದಲ್ಲಿ ತೆಂಕುತಿಟ್ಟಿನಲ್ಲಿಯೂ ಪಕಡಿ ಮತ್ತು ಮುಂಡಾಸುಗಳನ್ನು ಬಡಗುತಿಟ್ಟಿನಲ್ಲಿರುವಂತೆ ಅಟ್ಟೆ ಕಟ್ಟಿಕೊಂಡು ತಯಾರಿಸುತ್ತಿದ್ದರಂತೆ (ರಾಘವ ನಂಬಿಯಾರ್.ಕೆಂ.ಎಂ, ೧೯೯೮ : ೧೦೭). ತೆಂಕಿನಲ್ಲಿ ಈಗ ಸಿದ್ಧ ಪಕಡಿಗಳು ಬಂದು ಈಗ ಅಡ್ಡೆ ಕಟ್ಟುವ ಸಂಪ್ರದಾಯ ಸಂಪೂರ್ಣವಾಗಿ ಇಲ್ಲವಾಗಿದೆ. ಬಡಗುತಿಟ್ಟಿನ ದೊಡ್ಡ ಮುಂಡಾಸಿನ ವೇಷಗಳು ನೆನಪಿಸುವ ರೀತಿಯ ತುಂಬು ತೋಳಿನ ದಗಲೆಯ ಪಕಡಿ ವೇಷಗಳನ್ನು ತೆಂಕುತಿಟ್ಟಿನಲ್ಲಿ ಕಾಣಬಹುದು. ಶಲ್ಯ, ವಿಭೀಷಣ, ಕೋಟೆಕರ್ಣ ಮೊದಲಾದ ವೇಷಗಳು ಬಡಗುತಿಟ್ಟಿನ ಮುಂಡಾಸಿನ ವೇಷಗಳನ್ನು ನೆನಪಿಸುತ್ತವೆ.

ಬಡಗುತಿಟ್ಟಿನ ಸಂದರ್ಭದಲ್ಲಿ ಬಣ್ಣದ ವೇಷದ ಸಂಕೀರ್ಣತೆಯನ್ನು ಸ್ವಲ್ಪಮಟ್ಟಿಗೆ ಹೆಣ್ಣುಬಣ್ಣದಲ್ಲಿ ಕಾಣಬಹುದು. ಇತರ ಪುರುಷ ಪಾತ್ರಗಳಲ್ಲಿ ರೌದ್ರ ಸ್ವಭಾವದ ಬಣ್ಣದ ವೇಷಗಳು ಅಷ್ಟು ಪರಿಣಾಮಕಾರಿಯಾಗಿ ಬಡಗುತಿಟ್ಟಿನಲ್ಲಿ ಇಲ್ಲ. ವೀರರೌದ್ರ ರಸಪ್ರಧಾನ ವಾದ ಪ್ರಸಂಗಗಳನ್ನು ಹೆಚ್ಚಾಗಿ ಆಡದೇ ಇರುವ ಕಾರಣಗಳಿಗಾಗಿ ಈ ವೇಷಗಳು ಬಡಗುತಿಟ್ಟಿ ನಲ್ಲಿ ಮರೆಗೆ ಸಂದಿರಬಹುದು. ಬಡಗುತಿಟ್ಟಿನಲ್ಲಿ ಭೀಮನ ಪಾತ್ರವು ಧರ್ಮರಾಯನಂತೆಯೇ ಸಾತ್ವಿಕವಾದುದು. ಆದರೆ ತೆಂಕುತಿಟ್ಟಿನಲ್ಲಿ ಭೀಮನ ಪಾತ್ರ ಉಗ್ರಸ್ವರೂಪಿ. ತೆಂಕುತಿಟ್ಟಿನ ಪರಶುರಾಮ ಕಿರೀಟ, ಗಡ್ಡದ ವೇಷವಾಗಿ ಮುಖ ಕೆಂಪು ಬಣ್ಣದಿಂದ ಉಗ್ರವಾಗಿರುತ್ತದೆ.

ತೆಂಕು, ಬಡಗುತಿಟ್ಟುಗಳೆರಡರಲ್ಲೂ ಸೊಂಟದ ಉಡುಗೆಯ ಪದ್ಧತಿಯಲ್ಲಿ ಎರಡು ವ್ಯತ್ಯಾಸವಿದೆ. ಬಡಗುತಿಟ್ಟಿನಲ್ಲಿ ಕೊರ್ನಾಡು ಸೀರೆಯೆಂಬ ಚೌಕುಳಿ ಬಟ್ಟೆಯನ್ನು ಕಸೆಹಾಕಿ ಉಟ್ಟುಕೊಳ್ಳುತ್ತಿದ್ದರು. ಹಿಂದೆ ಇದೇ ಪದ್ಧತಿ ತೆಂಕುತಿಟ್ಟಿನಲ್ಲೂ ಇತ್ತು ಎಂದು ಹೇಳ ಲಾಗುತ್ತದೆ. ಆದರೆ ಬಡಗುತಿಟ್ಟಿನ ಕೊರ್ನಾಡು ಸೀರೆಯೆಂಬುದು ತಮಿಳುನಾಡಿನಿಂz ಬಂದುದು ಎಂದು ಹೇಳಲಾಗುತ್ತದೆ. ಹಾಗಾಗಿ ಇದು ಅರ್ವಾಚೀನವೇ ಇರಬಹುದು ಎಂದು ಎನಿಸುತ್ತದೆ.

ಕಿರೀಟ ತೊಟ್ಟುಕೊಳ್ಳುವ ಮತ್ತು ಪಾತ್ರ ರಚನೆಯ ವಿಧಾನದಲ್ಲಿ ಎರಡೂ ತಿಟ್ಟುಗಳಲ್ಲೂ ಸಾಕಷ್ಟು ವ್ಯತ್ಯಾಸವಿರುವುದನ್ನು ಗಮನಿಸಬಹುದು. ತೆಂಕುತಿಟ್ಟಿನಲ್ಲಿ ಅರ್ಜುನನಿಗೆ ಕಿರೀಟ ವಾದರೆ ಬಡಗುತಿಟ್ಟಿನಲ್ಲಿ ಕೇದಗೆ ಮುಂದಲೆ. ಕರ್ಣನಿಗೆ ತೆಂಕುತಿಟ್ಟಿನಲ್ಲಿ ಕಿರೀಟ ಬಡಗುತಿಟ್ಟಿನಲ್ಲಿ ವಿಶೇಷವಾದ ಕಪ್ಪು ಮುಂಡಾಸ. ಇವುಗಳಿಗೆಲ್ಲ ನಿರ್ದಿಷ್ಟ ಕಾರಣಗಳೇನು ಎನ್ನುವುದನ್ನು ಶೋಧಿಸುತ್ತ ಹೋಗುವುದೇ ಪ್ರಾಚೀನ ಆಹಾರ್ಯ ಪರಂಪರೆಯ ಪ್ರತ್ಯೇಕ ಅಧ್ಯಯನವೇ ಆಗಬಹುದು.

ಹೀಗೆ ದಕ್ಷಿಣ ಭಾರತದ ಅನೇಕ ರಂಗ ಕಲೆಗಳು ಆರಾಧನ ನೆಲೆಯಿಂದ ರೂಪು ಗೊಂಡಿದ್ದರೂ ಮನರಂಜನೆಯ ಕಾರಣಗಳಿಗಾಗಿ ಇಂದಿಗೂ ಉಳಿದುಕೊಂಡಿವೆ.  ಆರಾಧನೆಯ ಸಂದರ್ಭದಲ್ಲಿ ಎಲ್ಲಾ ರಂಗಕಲೆಗಳಿಗೂ ನಿರ್ದಿಷ್ಟ ಧ್ಯೇಯ ಧೋರಣೆಗಳು ಇದ್ದಿರಬಹುದು. ಅವು ಪ್ರಾದೇಶಿಕವಾಗಿ ವಿಭಿನ್ನ ಆಲೋಚನಾ ವಿಧಾನಗಳಿಂದ ರೂಪು ಪಡೆದಿವೆ. ಈ ಕಾರಣಕ್ಕಾಗಿಯೇ ಒಂದೊಂದು ಕಲಾ ಪ್ರಕಾರದಲ್ಲಿ ಒಂದೊಂದು ಪಾತ್ರ ವಿಧಾನಗಳಿಗೆ, ಪಾತ್ರಗಳ ಸ್ವಭಾವಗಳಿಗೆ ಬೇರೆ ಬೇರೆ ಆಹಾರ್ಯ ವಿಧಾನಗಳನ್ನು ರೂಪಿಸಿ ಕೊಂಡು ಬರಲಾಗಿದೆ.