ಭಾರತೀಯ ಸಂದರ್ಭದಲ್ಲಿ ಉಳಿದುಕೊಂಡು ಬಂದ ರಂಗ ಪರಂಪರೆಗಳು ಅನೇಕ ಇವೆ. ಅವುಗಳನ್ನು ಪೌರಾಣಿಕ ಕಥಾನಕಗಳನ್ನು ರಂಗದಲ್ಲಿ ಅಭಿನಯಿಸುವ ಸಮಾನ ಲಕ್ಷಣಗಳ ಕಾರಣಕ್ಕಾಗಿ ಒಂದೇ ನೆಲೆಯಲ್ಲಿ ಗುರುತಿಸಬಹುದಾಗಿದೆ. ಪೌರಾಣಿಕವಾದ ಭಕ್ತಿಪೂರ್ವಕ ಕಥೆಗಳೇ ಇವುಗಳ ಮುಖ್ಯ ನೆಲೆ. ಆ ಕಾರಣಕ್ಕಾಗಿ ಇವುಗಳಿಗೆ ಧಾರ್ಮಿಕ ವಾದಂತಹ ಚೌಕಟ್ಟೊಂದು ಸಿದ್ದವಾಗಿದೆ. ಭಾರತಾದ್ಯಂತ ಇರುವ ರಂಗ ಪರಂಪರೆಗಳು ಒಂದಲ್ಲ ಒಂದು ಹಂತದಲ್ಲಿ ಭಕ್ತಿ ಪರಂಪರೆಯ ಜೊತೆಗೆ ಗುರುತಿಸಿಕೊಂಡಿವೆ. ಈ ನೆಲೆ ಯಲ್ಲಿ ನೋಡುವಾಗ ಯಕ್ಷಗಾನದ ಸಂವಾದಿ ಕಲೆಗಳು ಹಾಗೂ ಅದರ ಸಾಂಸ್ಕೃತಿಕ ಪರಿಸರದ ಇನ್ನಿತರ ರಂಗ ಕಲೆಗಳು ಒಂದು ರೀತಿಯಲ್ಲಿ ಪರಸ್ಪರ ಕೊಡು ಕೊಡುಗೆಗಳ ಮೂಲಕ ಬೆಳೆದು ಬಂದಿವೆ ಎಂಬಷ್ಟು ಸಾಮ್ಯವನ್ನು ಹೊಂದಿವೆ. ಹಾಗೆ ನೋಡಿದರೆ ಇವೆಲ್ಲ ಸ್ವತಂತ್ರ ಸೃಷ್ಟಿಗಳು ಎನ್ನುವಷ್ಟರಮಟ್ಟಿಗೆ ವೈದೃಶ್ಯವನ್ನೂ ಹೊಂದಿವೆ ಎಂಬುದು ಕೂಡ ಗಮನಕ್ಕೆ ಬರುತ್ತದೆ. ಪ್ರಾದೇಶಿಕ ಸಂಸ್ಕೃತಿಯ ನೆಲೆಯಿಂದ ರೂಪುಗೊಂಡ ಈ ಕಲಾ ಪ್ರಕಾರಗಳಿಗೆ ಅನನ್ಯತೆ ತಾನೇ ತಾನಾಗಿ ಪ್ರಾಪ್ತವಾಗಿದೆ. ಈ ನೆಲೆಯಲ್ಲಿ ಕರಾವಳಿ ಕರ್ನಾಟಕದ ಹಾಗೂ ಕೇರಳದ ಕೆಲವು ಪಾರಂಪರಿಕ ರಂಗ ಕಲೆಗಳನ್ನು ಆಹಾರ್ಯದ ದೃಷ್ಟಿಯಿಂದ ನೋಡುವುದು ಇಲ್ಲಿ ಪ್ರಸ್ತುತವಾಗಬಹುದು.

ಕೇರಳದ ಕೂಡಿಯಾಟಂ, ಕಥಕಳಿ, ತೆಯ್ಯಂ, ತುಳ್ಳಲ್, ದಕ್ಷಿಣ ಕನ್ನಡದ ಬೂತೊ, ಕರ್ನಾಟಕದ ಬಡಗುತಿಟ್ಟು ಯಕ್ಷಗಾನ ಹಾಗೂ ಬೊಂಬೆಯಾಟಗಳು ಇಲ್ಲಿ ಮುಖ್ಯವಾಗಿ ಗಮನ ಸೆಳೆಯುತ್ತವೆ. ಆಹಾರ್ಯದ ದೃಷ್ಟಿಯಿಂದ ಅತ್ಯಂತ ವೈಭವಪೂರ್ಣವಾಗಿ ಶೋಭಿಸುವ ಈ ಕಲಾ ಪ್ರಕಾರಗಳಲ್ಲಿ ಸಾಂಸ್ಕೃತಿಕವಾಗಿ ಸಮಾನ ಲಕ್ಷಣಗಳನ್ನು ಗುರುತಿಸ ಬಹುದು. ಆದರೆ ಅಲ್ಲಿನ ಅನೇಕ ಲಕ್ಷಣಗಳನ್ನು ನೋಡಿದರೆ ಪ್ರಾದೇಶಿಕವಾಗಿ ಅನನ್ಯತೆ ಯನ್ನೇ ಉಳಿಸಿಕೊಂಡಿರುವುದು ಕೂಡ ಗಮನ ಸೆಳೆಯುತ್ತದೆ. ಈ ಎಲ್ಲ ಕಲಾ ಪ್ರಕಾರಗಳು ಭಕ್ತಿ ಪರಂಪರೆಯ ಭಾಗವಾಗಿಯೇ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ಜನ ಸಮುದಾಯಗಳ ನಡುವೆ ಬೆಳೆದುಕೊಂಡು ಬಂದಿವೆ. ಇವೆಲ್ಲ ಕಲಾತ್ಮಕವಾಗಿ ಇಂದು ನಮ್ಮ ಮುಂದೆ ಉಳಿದುಕೊಂಡಿವೆಯಾದರೂ ಪ್ರಾಚೀನ ಕಾಲದಲ್ಲಿ ಇವೆಲ್ಲ ಜನಪದರ ಬದುಕಿನ ಭಾಗವಾಗಿಯೇ ಆವಿರ್ಭವಿಸಿವೆ ಎನ್ನುವುದು ಮುಖ್ಯವಾದ ಸಂಗತಿ. ಈ ನೆಲೆಯಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿನ್ನೆಲೆಗೂ ಈ ಕಲಾ ಪ್ರಕಾರಗಳ ಹಿನ್ನೆಲೆಗೂ ಸಾಮ್ಯವಿದೆ. ಆದರೆ ಇವು ಒಂದು ಕಲೆಯ ಮುಂದುವರಿಕೆಯಾಗಿ ಇನ್ನೊಂದು ಬೆಳೆದಿಲ್ಲವೆಂಬುದು ವಾಸ್ತವ.  ಕಾಲಕ್ಕನುಗುಣವಾಗಿ ಪ್ರತಿಸ್ಪಂದಿಸುತ್ತಾ ಬೆಳೆದ ಈ ಕಲಾ ಪ್ರಕಾರಗಳು ಎಲ್ಲಾ ಕಾಲದ ಜನರ ಗಮನವನ್ನು ಸೆಳೆದಿದೆ. ಆ ಮೂಲಕ ಸಮಕಾಲೀನವಾಗಿ ಜನ ಸಮುದಾಯಗಳು ಆ ಕಲೆಯ ಮೇಲೆ ಮುದ್ರೆಯೊತ್ತುವುದೂ ಸಾಧ್ಯವಾಗಿದೆ. ಅಲ್ಲದೆ ಈ ಎಲ್ಲಾ ಕಲೆಗಳು ಕಾಲಾತೀತವಾಗಿ ಮಾನವ ಸಮುದಾಯಗಳ ಜೊತೆ ನಿರಂತರವಾಗಿ ಉಳಿದುಕೊಂಡು ಬಂದಿವೆ. ತನ್ನ ಆಹಾರ್ಯದ ವೈಭವಗಳ ಕಾರಣಗಳಿಗಾಗಿಯೋ ಅಥವಾ ಅಲ್ಲಿನ ಸೌಂದರ್ಯ ಕ್ಕಾಗಿಯೋ ಅಥವಾ ಇನ್ನಿತರ ಧಾರ್ಮಿಕ ಕಾರಣಗಳಿಗಾಗಿಯೋ ಅವುಗಳಿಗೆಲ್ಲ ಎಲ್ಲಾ ಕಾಲದಲ್ಲೂ ಪ್ರಯೋಗಕ್ಕೆ ಸಮುದಾಯದ ಪರವಾನಗಿ ದೊರೆತಿದೆ. ಅವು ನೀಡುವ ಸಂದೇಶಗಳು ಸಾಂಕೇತಿಕ ನೆಲೆಯಲ್ಲಿರಲಿ ಅಥವಾ ವಾಚ್ಯವಾಗಿಯೇ ಇರಲಿ ಅವೆಲ್ಲ ಸಮಕಾಲೀನ ಜನರ ಬದುಕಿನ ಮೇಲೆ ನಿಶ್ಚಿತವಾದಂತಹ ಪ್ರಭಾವವನ್ನು ಬೀರಿವೆ. ಆ ಮೂಲಕ ಸಮುದಾಯದ ಜೀವನ ವಿಧಾನವನ್ನು ಹಾಗೂ ಮಾತಿನ ಶೈಲಿಯನ್ನು ಒಟ್ಟಿನಲ್ಲಿ ಮಾನವೀಯ ಸಂಬಂಧಗಳನ್ನು ಹೊಸ ನೆಲೆಯಲ್ಲಿ ವ್ಯಾಖ್ಯಾನಿಸಿಕೊಳ್ಳುವಲ್ಲಿ ನೆರವಾಗಿವೆ. ಈ ಹಿನ್ನೆಲೆಯಲ್ಲಿ ಮೊದಲು ಪಾರಂಪರಿಕ ರಂಗಭೂಮಿಗಳ ಆಹಾರ್ಯದ ವೈಭವವನ್ನು ಒಂದೊಂದಾಗಿ ವಿಸ್ತರಿಸಬಹುದು.

ಕೂಡಿಯಾಟಂ

ಕೇರಳದಲ್ಲಿ ಪ್ರಚಲಿತದಲ್ಲಿದ್ದ ಸಂಸ್ಕೃತ ನಾಟಕ ಪ್ರಯೋಗವೇ ಕೂಡಿಯಾಟಂ. ಇದು ದೇವಾಲಯದಲ್ಲಿ ಪ್ರಚಲಿತದಲ್ಲಿದ್ದ ಒಂದು ರಂಗ ಪ್ರಕಾರ. ಸಂಸ್ಕೃತ ಭಾಷೆ ಮತ್ತು ದೇವಾಲಯಗಳ ನೆರವಿನಿಂದ ರೂಪುಗೊಂಡ ಈ ಕಲಾ ಪ್ರಕಾರವು ಕೇರಳದ ಶಿಷ್ಟ ರಂಗಪರಂಪರೆಗಳಲ್ಲೇ ಅತ್ಯಂತ ಪ್ರಾಚೀನವಾದುದು. ಒಂದಕ್ಕಿಂತ ಹೆಚ್ಚು ಪಾತ್ರಗಳು ಜೊತೆಗೂಡಿ ಅಭಿನಯಿಸುವುದರಿಂದ ಈ ಕಲೆಗೆ ‘ಕೂಡಿಯಾಟಂ’ ಎಂಬ ಹೆಸರು ಬಂತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇಲ್ಲಿ ಇನ್ನೊಂದು ಅಂಶವನ್ನು ಮುಖ್ಯವಾಗಿ ಗಮನಿಸಬಹುದು. ಅಂದರೆ ಒಬ್ಬರೇ ಅಭಿನಯಿಸುವ ಕಲಾ ಪ್ರಕಾರಗಳು ಅದಕ್ಕಿಂತಲೂ ಪೂರ್ವದಲ್ಲಿ ಪ್ರಚಲಿತದಲ್ಲಿದ್ದುವೆಂಬುದನ್ನು ಇದರಿಂದ ಊಹಿಸಬಹುದು. ಒಂದಕ್ಕಿಂತ ಹೆಚ್ಚು ಪಾತ್ರಗಳು ಸೇರಿ ಅಭಿನಯಿಸುವ ಕಲೆಗೆ ಕೂಡಿಯಾಟಂ ಎಂದು, ಒಂದೇ ಪಾತ್ರವಿರುವ ರೂಪಕ ಪ್ರಕಾರಕ್ಕೆ ಕೂತ್ತು ಎಂದು ಹೆಸರು. ಆದರೆ ಈಗ ಚಾಕ್ಯಾರರ ಕಥಾ ಪ್ರದರ್ಶನಕ್ಕೆ ಕೂತ್ತ್ ಎಂದು ನಾಟಕ ಅಭಿನಯಕ್ಕೆ ಕೂಡಿಯಾಟಂ ಎಂದು ಹೇಳುತ್ತಾರೆ.

ಸುಮಾರು ೧೮೦೦ ವರ್ಷಗಳ ಹಿಂದೆ ಚೆಂಗುಟ್ಟ ಪೆರುಮಾಳರ ಕಾಲದಲ್ಲಿ ಚಾಕ್ಯಾರರ ಕೂತ್ತು ಹಾಗೂ ಆಟಂ ಇತ್ತೆಂದು ಶಿಲಪ್ಪದಿಕಾರಂ ಕೃತಿಯಲ್ಲಿ ಹೇಳಲಾಗಿದೆ. ಪೆರುಮಾಳರ ತಮ್ಮನಾದ ಇಳಂಗೋ ಅಡಿಗಳ್ ಶಿಲಪ್ಪದಿಕಾರಂ ಕೃತಿಯ ಕರ್ತೃ. ಕೇರಳದ ಬಹುತೇಕ ರಾಜರು ಒಂದೇ ರೀತಿಯಲ್ಲಿ ಗೌರವಿಸುತ್ತಿದ್ದ ಕಲೆಯೇ ಕೂಡಿಯಾಟಂ. ಈ ವಿಷಯದಲ್ಲಿ ಉತ್ತರ ಕೇರಳದ ತಳಿಪರಂಬಕ್ಕೆ ಹೆಚ್ಚಿನ ಪ್ರಾಧಾನ್ಯ ಇದೆ. ತಳಿಪರಂಬ ದೇವಾಲಯದಲ್ಲಿ ರಂಗಪ್ರವೇಶವಾಗಿ ಆ ಗ್ರಾಮವಾಸಿಗಳ ಅಂಗೀಕಾರವನ್ನು ಪಡೆದ ನಾಟಕಗಳು ಕೇರಳದ ಎಲ್ಲಾ ಕೇಂದ್ರಗಳಲ್ಲೂ ಗೌರವವನ್ನು ಪಡೆಯುತ್ತಿದ್ದವು.

ಚಾಕ್ಯಾರ್ ಎಂಬುದು ಒಂದು ಪುಟ್ಟ ಜನ ಸಮುದಾಯ. ಆ ಸಮುದಾಯಕ್ಕೆ ಹಿಂದೆ ಕೇರಳದಾದ್ಯಂತ ಪ್ರಸಿದ್ದಿಯಿತ್ತು. ಸಮಾಜದ ಎಲ್ಲಾ ವರ್ಗದ ಜನರೂ ಇವರ ಕಲೆಗೆ ಪ್ರೋನೀಡುತ್ತಿದ್ದರು. ಭಕ್ತಿಯಿಂದ ದೇವಾಲಯಗಳಲ್ಲಿ ನಡೆಸುತ್ತಿದ್ದ ಕೂಡಿಯಾಟದ ಮುಖ್ಯ ನಿರ್ವಾಹಕರು ಚಾಕ್ಯಾರರು. ಮತ್ತು ಅವರ ಮಹಿಳೆಯರಾದ ನಂಙ್ಯಾರರು. ಅಭಿನಯಕ್ಕೆ ಚಾಕ್ಯಾರ್, ವಾದನಕ್ಕೆ ನಂಬಿಯಾರ್, ಹಾಡುವುದಕ್ಕೆ ನಂಙ್ಯಾರು ಇದು ಸಂಪ್ರದಾಯ. ಸ್ತ್ರೀವೇಷಧಾರಿಗಳು ನಂಙ್ಯಾರರೇ. ಸುಕುಮಾರಿಗಳಲ್ಲದ ಸ್ತ್ರೀವೇಷಗಳನ್ನು ಸ್ವತಃ ಚಾಕ್ಯಾರರೇ ನಿರ್ವಹಿಸುತ್ತಿದ್ದರು. ತಾಳ ಹಿಡಿದು ಹಾಡುವುದು ನಂಙ್ಯಾರ್ ಮಹಿಳೆಯರ ಕೆಲಸ. ನಂಙ್ಯಾರರೆಂದರೆ ನಂಬಿಯಾರ್ ಸಮುದಾಯದ ಮಹಿಳೆಯರು. ಮಂಗಳ ಶ್ಲೋಕ ಹಾಡುವುದು, ಕಥೆಯನ್ನು ಪರಿಚಯಿಸುವುದು, ಚುಟ್ಟಿ ಇಡುವುದು, ವೇಷ ಧರಿಸಲು ನೆರವಾಗುವುದು ಹೀಗೆ ನಂಬಿಯಾರರಿಗೆ ವಾದನದ ಹೊರತಾದ ಅನೇಕ ಕರ್ತವ್ಯಗಳಿವೆ.

ಚಾಕ್ಯಾರ್ ಕೂತ್ತ್ ಭರತನ ನಾಟ್ಯಶಾಸ್ತ್ರದ ನೆಲೆಯಿಂದಲೇ ರೂಪುಗೊಂಡ ಶಾಸ್ತ್ರೀಯ ಕಲೆ. ಇಲ್ಲಿನ ಅನೇಕ ಸಂಗತಿಗಳು ನಾಟ್ಯಶಾಸ್ತ್ರವನ್ನು ಆಧರಿಸಿಯೇ ರಂಗದಲ್ಲಿ ಪ್ರಯೋಗ ಗೊಳ್ಳುತ್ತಿದ್ದವು. ಚಾಕ್ಯಾರರ ಚಿತ್ರ, ಶಿಲ್ಪ ಕಲೆಗಳ ನೈಪುಣ್ಯವೇ ಆಹಾರ್ಯ ಅಭಿನಯದ ಉತ್ಕರ್ಷಕ್ಕೆ ಕಾರಣ. ಕಥಕಳಿಯ ವೇಷವಿಧಾನವನ್ನು ಚಾಕ್ಯಾರರಿಂದಲೇ ಸ್ವೀಕರಿಸಲಾಗಿದೆ. ಕಥಕಳಿಯ ಪಚ್ಚೆ, ಕತ್ತಿ, ಕರಿ, ತಾಡಿ, ಮಿನುಕ್ಕು ಮೊದಲಾದ ವಿಭಾಗಗಳಲ್ಲಿ ಚಾಕ್ಯಾರರ ವೇಷವಿಧಾನವು ಸೇರ್ಪಡೆಯಾಗುವುದಿಲ್ಲ. ಚಾಕ್ಯಾರರಲ್ಲಿ ವೇಷ ವೈವಿಧ್ಯಗಳಿವೆ. ಒಂದು ವೇಷದಂತೆ ಇನ್ನೊಂದು ವೇಷ ಕೂಡಿಯಾಟಂದಲ್ಲಿ ಕಂಡುಬರುವುದಿಲ್ಲ. ವೇಷಗಳ ಸ್ವಭಾವವನ್ನು ನಾಟ್ಯಶಾಸ್ತ್ರದಲ್ಲಿ ಹೇಳಿದಂತೆ ಆಟದ ಕ್ರಮದಲ್ಲಿ ವಿವರಿಸಲಾಗಿದೆ. ಅಕ್ಕಿ, ಮಸಿ, ಅರಶಿನ, ಮನಯೋಲ(ಕೇಸರಿ), ಚಾಯಿಲ್ಯ(ಕೆಂಪು), ನೀಲ, ಅಭ್ರಕ, ಬಾಳೆನಾರು, ಬಿದಿರು, ಹಾಳೆ ಮೊದಲಾದ ಸಾಮಗ್ರಿಗಳಿಂದ ಚಾಕ್ಯಾರರು ವೇಷವನ್ನು ಸಿದ್ಧಪಡಿಸುತ್ತಾರೆ. ಅಲಂಕಾರಕ್ಕಾಗಿ ವಿವಿಧ ಬಗೆಯ ಹೂಗಳನ್ನು, ಹುಲ್ಲುಗಳನ್ನು ಬಳಸುತ್ತಾರೆ. ಇದರಿಂದೆಲ್ಲಾ ಉತ್ತಮವಾದ ಆಹಾರ್ಯ ಕ್ರಮ ಸಿದ್ಧವಾಗುತ್ತದೆ.

ಕೂತ್ತನ್ನು ಅಭಿನಯಿಸುತ್ತಿದ್ದರಿಂದಲೇ ದೇವಾಲಯಗಳಲ್ಲಿ ರಂಗ ಪ್ರಕಾರಗಳ ಅಭಿನಯ ಕ್ಕಾಗಿಯೇ ‘ಕೂತ್ತಂಬಲಂ’ ಎಂಬ ಜಾಗವನ್ನು ನಿಗದಿಪಡಿಸಲಾಗಿತ್ತು. ಇದಲ್ಲದೆ ವಲಿಯಂಬಲಂ, ಊಟುಪುರ ಕೆಲವೊಮ್ಮೆ ಗರ್ಭಗುಡಿಯ ಮುಂಭಾಗದಲ್ಲಿ ನಿರ್ಮಿಸಿದ ವೇದಿಕೆಯ ಮೇಲೆ ಈ ಕಲಾ ಪ್ರಕಾರಗಳೆಲ್ಲ ಪ್ರಯೋಗಗೊಳ್ಳುತ್ತಿದ್ದವು. ಕೂಡಿಯಾಟಂಗೆ ಸುಮಾರು ೨೦೦೦ ವರ್ಷಗಳ ಇತಿಹಾಸವಿರುವುದಾಗಿ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಮಹಾಕವಿ ಭಾಸನ  ನಾಟಕಗಳಿಗೆ ಕೂಡಿಯಾಟಂ ಕಲಾ ಪ್ರಕಾರಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯವಿತ್ತು. ಈ ನೆಲೆಯಲ್ಲಿ ನೋಡಿದರೆ ಭಾಸನ ಕಾಲದಲ್ಲಿ ಅಥವಾ ಆನಂತರ ಈ ಕಲೆ ಅಸ್ಥಿತ್ವಕ್ಕೆ ಬಂದಿರಬಹುದೆಂದು ಊಹಿಸಲೆಡೆಯಿದೆ. ಶ್ರೀ ಶಂಕರಾಚಾರ್ಯರ ಶಿಷ್ಯರಲ್ಲಿ ಒಬ್ಬರಾದ ಶಕ್ತಿಭದ್ರ ಕವಿ ಆಶ್ಚರ್ಯ ಚೂಡಾಮಣಿಯನ್ನು ಬರೆದು ಪ್ರಯೋಗ ಮಾಡಿದ ಸಂದರ್ಭದಲ್ಲಿ ಈ ಕಲಾ ಪ್ರಕಾರಕ್ಕೆ ಕೆಲವು ಪರಿಷ್ಕಾರಗಳನ್ನು ಮಾಡಲಾಯಿತೆಂದು ಹೇಳಲಾಗಿದೆ. ಕೂಡಿಯಾಟವು ಅಭಿನಯಪ್ರಧಾನವಾದ ರಂಗಕಲೆ. ಸಂಸ್ಕೃತ ನಾಟಕಗಳು ಕೂಡ ಇಲ್ಲಿನ ಅಭಿನಯಗಳಿಗೆ ಪೂರಕವಾಗಿ ಇದ್ದುವೆಂಬುದು ಮುಖ್ಯ ವಿಷಯ.

ಪುರುಷರು ಮತ್ತು ಮಹಿಳೆಯರು ಭಾಗವಹಿಸುತ್ತಿದ್ದ ಈ ಕಲಾ ಪ್ರಕಾರ ಪ್ರಾಚೀನ ಕೇರಳದಲ್ಲಿ ಅತ್ಯಂತ ಪ್ರತಿಷ್ಠಿತವಾದ ಕಲೆಯಾಗಿತ್ತು. ಭಾರತದ ಸ್ತ್ರೀ ಪಾತ್ರಗಳಲ್ಲೆಲ್ಲ ಅತ್ಯಂತ ಪ್ರಾಚೀನವಾದುದು ಹಾಗೂ ನಾಲ್ಕು ವಿಧದ ಅಭಿನಯಗಳಿಂದ ಕೂಡಿದ ಸಂಸ್ಕೃತ ನಾಟಕವೇ ಕೂಡಿಯಾಟಂ. ದೇವಾಲಯಗಳಲ್ಲಿ ಮಾತ್ರ ಪ್ರಯೋಗಗೊಳ್ಳುತ್ತಿದ್ದ ಕೂತ್ತು, ಕೂಡಿಯಾಟಂ, ನಂಙ್ಯಾರ್‌ಕೂತ್ತು ಮೊದಲಾದ ಕಲಾ ಪ್ರಕಾರಗಳು ನಂಬಿಯಾರ್, ಚಾಕ್ಯಾರ್ ಮೊದಲಾದ ಸಮುದಾಯಗಳ ಕುಲವೃತ್ತಿಗಳಾಗಿದ್ದುವು. ನಂಬಿಯಾರರೇ ವಾದ್ಯಗಳನ್ನು ಬಾರಿಸುತ್ತಿದ್ದರು. ೨೦ನೇ ಶತಮಾನದ ಮಧ್ಯ ಭಾಗದಲ್ಲಿ ದೇವಸ್ಥಾನದ ಈ ಕಲೆಯು ಅನೇಕರ ವಿರೋಧದ ನಡುವೆಯೂ ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಬಂತು. ೧೯೬೫ರಲ್ಲಿ ಚಾಕ್ಯಾರರು ಕಲಾಮಂಡಲ ಸಂಸ್ಥೆಯಲ್ಲಿ ಕೂಡಿಯಾಟವನ್ನು ಹೇಳಿಕೊಡ ತೊಡಗಿದಾಗ ಎಲ್ಲಾ ಜಾತಿಯವರು ಇದನ್ನು ಕಲಿಯುವುದು ಸಾಧ್ಯವಾಯಿತು.

ಕೂಡಿಯಾಟದಲ್ಲಿ ಆಕರ್ಷಕವಾದ ವೇಷ ವಿಧಾನಗಳಿವೆ. ಇಲ್ಲಿನ ಪಾತ್ರಗಳಿಗೆ ಶಿಸ್ತುಬದ್ಧವಾದ ಅಭಿನಯ ಶೈಲಿಯೂ ಇದೆ. ಕೂಡಿಯಾಟದ ಸ್ತ್ರೀವೇಷಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತವೆ. ಮುಖವರ್ಣಿಕೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸದೊಡನೆ ಮಾತ್ರ ವೇಷದ ಪ್ರತ್ಯೇಕತೆಯನ್ನು ತೋರಿಸಲಾಗುತ್ತಿತ್ತು. ಆರಂಭ ಕಾಲದಲ್ಲಿ ಸ್ತ್ರೀವೇಷಗಳಿಗೆ ಚಾಯಿಲ್ಯಂನ್ನು ಮೂಲಲೇಪನವಾಗಿ ಹಾಕಲಾಗುತ್ತಿತ್ತು. ಕಾಡಿಗೆಯಿಂದ ವೃತ್ತವನ್ನು ಬರೆದು ಕಣ್ಣು, ಹುಬ್ಬುಗಳನ್ನು ತಿದ್ದಲಾಗುತ್ತಿತ್ತು. ಅಕ್ಕಿ ಹಿಟ್ಟಿನ ಬೊಟ್ಟು ಇಡಲಾಗುತ್ತಿತ್ತು. ಕಾಲಾನಂತರದಲ್ಲಿ ಹೊಸ ಶೈಲಿಯ ಮುಖವರ್ಣಿಕೆಯನ್ನು ರೂಪಿಸುವ ಸಂದರ್ಭದಲ್ಲಿ ಆಧುನಿಕ ವೇಷ ವಿಧಾನದ ಬಣ್ಣ ಹಾಗೂ ಪರಿಕರಗಳನ್ನು ಬಳಸಲಾಗುತ್ತಿದೆ. ನಾಟಕಾಭಿನಯ ವನ್ನು ಒಂದು ಜಾತಿ ಸಮುದಾಯವು ಕುಲವೃತ್ತಿಯಾಗಿಸಿ ಕೊಂಡು ಅದನ್ನು ದೇವಾಲಯ ದೊಂದಿಗೆ ಸಮೀಕರಿಸಿ ದೈವ ಪ್ರೀತಿಗಾಗಿ ನಡೆಸುವ ಪುಣ್ಯ ಕರ್ಮವೇ ನಾಟಕಾಭಿನಯ ಎಂದು ನಂಬಿರುವ ಕಾರಣ ಚಾಕ್ಯಾರರ ಕೂಡಿಯಾಟವು ಇಂದಿಗೂ ಉಳಿದುಕೊಂಡು ಬಂದಿದೆ.

ಕೂಡಿಯಾಟಂ ಕಲಾ ಪ್ರಕಾರವು ಕಾಲಾ ನಂತರದಲ್ಲಿ ರಾಮನಾಟಂ ಎಂಬ ಕಲಾ ಪ್ರಕಾರವಾಗಿ ಕವಲೊಡೆಯಿತು ಎಂದು ಹೇಳಲಾಗುತ್ತದೆ. ಹಾಗೆಯೇ ಕೃಷ್ಣನಾಟಂ ಎಂಬ ಕಲಾ ಪ್ರಕಾರವು ಇದರಿಂದ ವಿಸ್ತೃತಗೊಂಡ ಇನ್ನೊಂದು ಕಲಾ ರೂಪವೆಂದೂ ತಿಳಿಯಲಾಗಿದೆ. ಇವೆಲ್ಲವನ್ನು ಕ್ರೋಡೀಕರಿಸಿದ ಆಧುನಿಕ ಕಲಾ ರೂಪವೇ ಕಥಕಳಿ.

ಕಥಕಳಿ

ಕಥಕಳಿಯ ಕಥಾ ಪಾತ್ರಗಳಿಗೆಲ್ಲ ಒಂದು ನಿಶ್ಚಿತವಾದ ವೇಷವಿಧಾನವಿದೆ. ಇದು ಕಥಕಳಿಯ ಅಲೌಕಿಕ ವಾತಾವರಣವನ್ನು ಹಾಗೂ ಪುರಾಣ ಪಾತ್ರಗಳ ಗಾಂಭೀರ್ಯವನ್ನು ನೆಲೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾವನೆಗಳನ್ನು ಸಾಧಾರಣೀಕರಿಸಿ  ಕಲಾತ್ಮಕವಾದ ಭಾವವನ್ನು ಉದ್ದೀಪಿಸುವಲ್ಲಿ ಈ ಕಲೆಗೆ ಆಹಾರ್ಯವು ನೆರವಾಗುತ್ತವೆ. ಕಥಾ ಪಾತ್ರಗಳ ಗುಣ ವಿಶೇಷವನ್ನೇ ಮುಖ್ಯ ನೆಲೆಯಾಗಿರಿಸಿ ವೇಷಗಳನ್ನು ಕಥಕಳಿಯಲ್ಲಿ ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಚ್ಚ, ಕತ್ತಿ, ಕರಿ, ತಾಡಿ, ಮಿನುಕ್ಕ್ ಎಂದು ೫ ವಿಧವಾಗಿ ವಿಭಜಿಸಲಾಗಿದೆ.

ಕಥಕಳಿಯ ವೇದಿಕೆಯಲ್ಲಿ ಬಣ್ಣಗಾರಿಕೆಯು ವಿಶೇಷವಾದ ಆವರಣವನ್ನು ಸೃಷ್ಟಿಸುತ್ತವೆ. ಜನಪದ ಕಲೆಗಳನ್ನು ಅಧ್ಯಯನ ನಡೆಸಿದ ವಿದ್ವಾಂಸರು ಕಥಕಳಿಯ ಬಣ್ಣಗಾರಿಕೆಯು ಅತ್ಯಂತ ಪ್ರಾಚೀನವಾದುದೆಂದು ಹೇಳಿದ್ದಾರೆ. ಇದು ಆರ್ಯೇತರವಾದ ಮತ್ತು ಆರ್ಯರಿಗಿಂತಲೂ ಪೂರ್ವದಲ್ಲಿ ಇದ್ದ ಸಂಸ್ಕೃತ ಸಾಹಿತ್ಯ ಸಂದರ್ಭದ ಸೃಷ್ಟಿಯಾಗಿರ ಬಹುದೆಂದು ಭಾವಿಸಲಾಗಿದೆ. ಈ ಬಣ್ಣಗಾರಿಕೆ ಹಾಗೂ ವೇಷಭೂಷಣಗಳು ಅಪರಿಚಿತವಾದ ಅದ್ಭುತವಾದ ಲೋಕವೊಂದನ್ನು ಸೃಷ್ಟಿಸಿ ವಿಕೃತವೆನಿಸಿದರೂ ಅದರ ಸಾಂಕೇತಿಕ ವೈಶಿಷ್ಟ್ಯವು ಕಥಕಳಿಗೊಂದು ಹೊಸ ಮೆರುಗನ್ನು ನೀಡಿದೆ.

ಸಾಮಾನ್ಯವಾಗಿ ಪಾತ್ರಗಳನ್ನು ಸಾತ್ವಿಕ, ರಾಜಸ ಮತ್ತು ತಾಮಸ ಎಂಬೀ ನೆಲೆಯಲ್ಲಿ ಕಾಣಬಹುದಾದರೂ ಕಥಕಳಿಯಲ್ಲಿ ಅವುಗಳ ವರ್ಗೀಕರಣ ಬೇರೆ ರೀತಿಯಾಗಿದೆ. ಅದು ಪಾತ್ರಗಳ ಸ್ವಭಾವಗಳನ್ನು ಆಧರಿಸಿದೆ ಎನ್ನುವುದನ್ನು ಗಮನಿಸಬಹುದು. ಇಲ್ಲಿನ ಬಣ್ಣಗಾರಿಕೆಯು ಚಿತ್ರ ಕಲಾವಿದನ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಕಲಾವಿದನು ರಚಿಸುವ ಗೆರೆಗಳು, ಚುಕ್ಕೆಗಳು ಹಾಗೂ ಬಳಸುವ ಬಣ್ಣಗಳು ಸೌಂದರ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.

ಬಣ್ಣಗಾರಿಕೆಗೆ ಬಿಳಿ, ಹಸಿರು, ಕೆಂಪು, ಕಪ್ಪು, ಹಳದಿ ಮತ್ತು ಚಾಯಿಲ್ಯಂ (ರಕ್ತವರ್ಣ) ಬಣ್ಣಗಳನ್ನು ಬಳಸುತ್ತಾರೆ. ಇವುಗಳು ಗಾಢವೂ, ಹೊಳಪುಳ್ಳವೂ ಆಗಿರುತ್ತವೆ. ತಳಪಾಯದ ಬಣ್ಣವನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಮುಖಕ್ಕೆ ಹಚ್ಚುತ್ತಾರೆ. ಇದರಿಂದಾಗಿ ಮುಖ ಕಾಂತಿಯುಕ್ತವೂ, ಮೃದುವೂ ಆಗುತ್ತದೆ. ಕಥಕಳಿಯ ವೇದಿಕೆಯ ಮಂದವಾದ ದೀಪದ ಬೆಳಕು, ಅದರ ಹಿನ್ನೆಲೆಯಲ್ಲಿರುವ ಕತ್ತಲು ಎಲ್ಲವೂ ಬಣ್ಣಗಾರಿಕೆಗೆ ವಿಶೇಷವಾದ ಮೆರುಗು ನೀಡುತ್ತದೆ. ಬಣ್ಣದ ಆಯ್ಕೆಯನ್ನು ಮಾಡುವಾಗ ಪಾತ್ರದ ಸ್ವರೂಪ ಹಾಗೂ ಅದಕ್ಕೆ ಹೊಂದಿಕೊಂಡಂತೆ ಭಾವಗಳನ್ನೂ, ಸ್ವಭಾವವನ್ನೂ ದಾಟಿಸಲು ಸಾಧ್ಯವಾಗುವಂತೆ ಎಚ್ಚರಿಕೆ ಯನ್ನು ವಹಿಸಲಾಗಿದೆ. ಕಥಕಳಿಯಲ್ಲಿ ಬಣ್ಣಗಾರಿಕೆಯು ಸಾಂಕೇತಿಕ ಭಾಷೆಯಾಗುತ್ತದೆ. ಬಣ್ಣಗಳ ಕೌಶಲ್ಯಪೂರ್ಣ ಬಳಕೆ ಹಾಗೂ ಅವುಗಳು ಪ್ರಕಟಿಸುವ ಭಾವ ವಿನ್ಯಾಸಗಳು ವಿಶಿಷ್ಟವಾಗಿವೆ.

. ಪಚ್ಚೆ ವೇಷ

ಪಚ್ಚೆ ಎಂದರೆ ಮಲಯಾಳಂನಲ್ಲಿ ಹಸಿರು ಎಂದರ್ಥ. ಮುಖದಲ್ಲಿ ಚುಟ್ಟಿಯ ಒಳಭಾಗದಲ್ಲಿ ಸಂಪೂರ್ಣವಾಗಿ ಹಸಿರು ಬಣ್ಣವನ್ನು ಹಚ್ಚುವುದರಿಂದ ಈ ವೇಷಕ್ಕೆ ಪಚ್ಚೆ ವೇಷವೆಂದು ಹೆಸರು. ಸಾತ್ವಿಕ ಗುಣಸ್ವಭಾವದ ಪಾತ್ರಗಳಿಗೆ ಈ ವೇಷ. ಶ್ರೀರಾಮ, ಲಕ್ಷ್ಣಣ, ಶ್ರೀಕೃಷ್ಣ, ಪಾಂಡವರು, ನಳ, ಭೀಮಕರಾಯ, ರುಕ್ಮಾಂಗದ, ಅಂಬರೀಷ, ಹರಿಶ್ಚಂದ್ರ, ಕರ್ಣ, ಕುಶಲವರು, ಅಭಿಮನ್ಯು, ವೈಶ್ರವಣ, ಬಾಹುಕ, ಪುಷ್ಕರ, ಋತುಪರ್ಣ, ಇಂದ್ರ, ಜಯಂತ, ಕಚ, ವಿಭೀಷಣ ಮೊದಲಾದ ಪಾತ್ರಗಳು ಪಚ್ಚೆ ವೇಷಗಳಾಗಿವೆ.

ಶ್ರೀರಾಮ ಹಾಗೂ ಶ್ರೀಕೃಷ್ಣ ಪಚ್ಚೆ ವೇಷಗಳೇ ಆಗಿದ್ದರೂ ಸ್ವಲ್ಪ ವ್ಯತ್ಯಾಸಗಳಿವೆ. ನಳ ಮೊದಲಾದ ಪಚ್ಚೆ ವೇಷಗಳ ಉಡುಪುಗಳು ಬಿಳಿ ಹಾಗೂ ಅಂಗಿ ಕೆಂಪು ಬಣ್ಣದ್ದಾಗಿರುತ್ತದೆ. ತಲೆಯಲ್ಲಿ ಕಿರೀಟವನ್ನು ಧರಿಸುತ್ತಾರೆ. ಶ್ರೀಕೃಷ್ಣ ಪಾತ್ರಧಾರಿ ಉಳಿದ ಪಚ್ಚೆ ವೇಷಗಳ ಕಿರೀಟದ ಬದಲಾಗಿ ನವಿಲುಗರಿಗಳಿರುವ ‘ಕೃಷ್ಣಮುಡಿ’ಯನ್ನು ಧರಿಸುತ್ತಾನೆ. ಉಡುಪು (ಉಡುತ್ತ್‌ಕೆಟ್ಟ್) ಹಾಗೂ ಉತ್ತರೀಯ (ಸೋಗೆವಲ್ಲಿ)ದ ಬಣ್ಣ ಹಳದಿ ಹಾಗೂ ಅಂಗಿಯ ಬಣ್ಣ ಕಪ್ಪಾಗಿರುತ್ತದೆ. ಶ್ರೀರಾಮನ ಕೃಷ್ಣಮುಡಿಯಲ್ಲಿ ನವಿಲುಗರಿಗಳಿರುವುದಿಲ್ಲ. ದಶರಥನ ಪಾತ್ರಕ್ಕೆ ಬಿಳಿಗಡ್ಡವೂ ಇರುತ್ತದೆ. ಬಾಹುಕನು ಕಡು ಹಸಿರು ಬಣ್ಣವನ್ನು ಬಳಿಯುತ್ತಾನೆ. ಉಡುಪು, ಅಂಗಿ, ಕೈಗಳಿಗೆ ಕಪ್ಪು ಬಣ್ಣವಿರುತ್ತದೆ. ವಿಷ್ಣುವಿಗೆ ಶಂಖಚಕ್ರ ಹಾಗೂ ವನಮಾಲೆಯಿರುತ್ತದೆ.

. ಕತ್ತಿ ವೇಷ

ರಜೋಗುಣ ತುಂಬಿದವರೂ, ಅಸುರ ವಂಶದಲ್ಲಿ ಹುಟ್ಟಿದವರೂ ರಾಕ್ಷಸರೂ ಕತ್ತಿ ವೇಷಗಳಾಗಿವೆ. ಇವು ರಾಜಸ ಗುಣ ಸ್ವಭಾವವಿರುವ ಪಾತ್ರಗಳಾಗಿವೆ. ಒಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿ, ಬಿಳಿ ಅಂಚುಗಳಿರುವ ಕತ್ತಿಯ ಆಕಾರವನ್ನು ಮೀಸೆ ಇರುವ ಜಾಗದಲ್ಲಿ ಬರೆಯುವ ಕಾರಣ ಈ ವೇಷಕ್ಕೆ ಕತ್ತಿ ಎಂದು ಹೆಸರು. ಮೂಗು ಹಾಗೂ ಹಣೆಯಲ್ಲಿ ಚುಟ್ಟಿ ಹೂಗಳು ಹಾಗೂ ದಂಷ್ಟ್ರಗಳು ಈ ವೇಷದ ವೈಶಿಷ್ಟ್ಯವಾಗಿದೆ. ಉಡುಗೆಗಳ ಬಟ್ಟೆ ಬಿಳಿ ಹಾಗೂ ಅಂಗಿ ಕೆಂಪು ಬಣ್ಣದ್ದಾಗಿರುತ್ತದೆ. ಪಚ್ಚೆ ವೇಷಕ್ಕಿರುವಂತೆ ಕಿರೀಟ ವಿರುತ್ತದೆ.

ಕತ್ತಿವೇಷದಲ್ಲಿ ಕುರುಂಗತ್ತಿ ಮತ್ತು ನೆಡುಂಗತ್ತಿ ಎಂದು ಎರಡು ವಿಧ. ಮುಖವರ್ಣಿಕೆಯಲ್ಲಿರುವ ವ್ಯತ್ಯಾಸವೇ ಈ ಎರಡು ವೇಷಗಳನ್ನು ಪ್ರತ್ಯೇಕಿಸುತ್ತದೆ. ಇವು ಗಳಲ್ಲಿ ಕುರುಂಗತ್ತಿಯೇ ಹೆಚ್ಚು ಸೌಂದರ್ಯ. ರಾವಣ, ದುರ‍್ಯೋಧನ ಮೊದಲಾದ ಹಿಂದೆ ಹೇಳಿದ ವೇಷಗಳೆಲ್ಲ ಕುರುಂಗತ್ತಿಯಾಗಿದೆ. ‘ನೆಡುಂಗತ್ತಿ’ಗೆ ಕಣ್ಣಿನ ಕೆಳಭಾಗದಲ್ಲಿ ಬರೆಯುವ ಕತ್ತಿಯ ತುದಿಯು ಕಣ್ಣು ರೆಪ್ಪೆಗಳ ತುದಿವರೆಗೆ ತಲುಪಿರುತ್ತದೆ. ಕ್ರೌರ್ಯವು ಹೆಚ್ಚು ಕಾಣಿಸುವುದು ನೆಡುಂಗತ್ತಿ ವೇಷಗಳಲ್ಲಿ. ಘಟೋತ್ಕಚ, ಹಿಡಿಂಬ, ಕಾಲಕೇಯ ಮೊದಲಾದ ವೇಷಗಳು ನೆಡುಂಗತ್ತಿಗಳಾಗಿವೆ.

ರಾವಣ, ಹಿರಣ್ಯಕಶಿಪು, ಜರಾಸಂಧ, ಕಂಸ, ದುರ್ಯೋಧನ, ಶಿಶುಪಾಲ, ಮಹಾಬಲಿ, ಬಾಣ, ಕಿರಿಯ ನರಕಾಸುರ ಮೊದಲಾದ ವೇಷಗಳನ್ನು ಕುರುಂಗತ್ತಿಗಳು ಎಂದು ಹೇಳಲಾ ಗುತ್ತದೆ. ಕಿಮ್ಮೀರ, ನಿವಾತ ಕವಚರು, ಶಿಶುಪಾಲ ಹಿಡಿಂಬ, ಘಟೋತ್ಕಚ ಮೊದಲಾದ ವೇಷಗಳನ್ನು ನೆಡುಂಗತ್ತಿಗಳು ಎಂದು ಹೇಳುತ್ತಾರೆ. ದಕ್ಷಿಣದಲ್ಲಿ ದುಶ್ಯಾಸನ ವೇಷ ಹಿಂದೆ ನೆಡುಂಗತ್ತಿಯಾಗಿತ್ತು. ಈಗ ‘ಕೆಂಪುತಾಡಿ’ ಬಳಕೆಯಲ್ಲಿದೆ.

ಆಹಾರ್ಯದ ಚೆಲುವಿನಿಂದ ಕಥಕಳಿಯಲ್ಲಿ ಅತ್ಯಂತ ಆಕರ್ಷಕವಾದುದು ಕತ್ತಿವೇಷ. ಸೌಂದರ್ಯ ಹಾಗೂ ಗಾಂಭೀರ್ಯ ಸಮಾನವಾಗಿ ಸೇರಿಕೊಂಡಿರುವ ಒಂದು ಅಪೂರ್ವ ವೇಷ ವಿಧಾನವದು. ಯಕ್ಷಗಾನದ ಎದುರುವೇಷಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕೋಟ್ಟಯಂ ಕಥೆಗಳು ಹಾಗೂ ನಳ ಚರಿತೆಯನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳ ಹೆಚ್ಚಿನ ವೇಷಗಳು ಕತ್ತಿ ವೇಷಗಳಾಗಿವೆ. ರಾವಣವಿಜಯ, ವಾಲಿ ವಿಜಯ, ಕಾರ್ತವೀರ್ಯ ವಿಜಯ, ರಾವಣೋದ್ಭವ, ದುರ‍್ಯೋಧನ ವಧೆ, ಉತ್ತರಾ  ಸ್ವಯಂವರ, ಕೀಚಕವಧೆ, ರಾಜಸೂಯ, ಬಾಣಯುದ್ಧ, ನರಕಾಸುರವಧೆ, ಪ್ರಹ್ಲಾದ ಚರಿತ್ರೆ, ಪೂತನೀಮೋಕ್ಷ, ಕಂಸವಧೆ ಮೊದಲಾದ ಕಥೆಗಳಲ್ಲಿ ಕತ್ತಿವೇಷಗಳಿಗಿರುವ ಪ್ರಾಧಾನ್ಯವನ್ನು ಗಮನಿಸಿಕೊಂಡರೆ ಇದು ಗೊತ್ತಾಗುತ್ತದೆ. ಅಸುರಾಂಶಸಂಭವರೂ, ರಜೋಗುಣವುಳ್ಳವರೂ, ಧೀರೋದ್ಧಾತರೂ ಆದ ನಾಯಕರಿಗೆ ಸಾಮಾನ್ಯವಾಗಿ ಕತ್ತಿವೇಷ. ರಾವಣ, ದುರ್ಯೋಧನ, ಕೀಚಕ, ಜರಾಸಂಧ ಬಾಣ, ನರಕಾಸುರ ಹಿರಣ್ಯಕಶಿಪು, ಕಂಸ ಮೊದಲಾದವೂ ಪಾತ್ರಗಳು ಕತ್ತಿ ವೇಷಗಳಾಗಿವೆ. ಇದರಲ್ಲಿ ಕೆಲವು ಪಾತ್ರಗಳನ್ನು ಕೆಲವು ಕಥೆಗಳಲ್ಲಿ ತಾಡಿವೇಷಗಳಾಗಿಯೂ ಪ್ರಸ್ತುತಪಡಿಸುತ್ತಾರೆ. ದಕ್ಷಿಣದ ‘ರಾಜಸೂಯ’ದಲ್ಲಿ ಜರಾಸಂಧನು ‘ಕತ್ತಿ’ಯಾದರೆ, ಶಿಶುಪಾಲ ‘ಚೆವನ್ನತಾಡಿ’ಯಾಗಿದ್ದಾನೆ. ‘ರುಕ್ಮಿಣಿ ಸ್ವಯಂವರ’ದಲ್ಲಿ ಶಿಶುಪಾಲ ‘ಕತ್ತಿ’ಯಾದರೆ ಜರಾಸಂಧ ‘ಚೆವನ್ನ ತಾಡಿ’ ಯಾಗುತ್ತಾನೆ. ಅದೇ ರೀತಿ ‘ನರಕಾಸುರ ವಧೆ’ಯಲ್ಲಿ ಕಿರಿಯ ನರಕಾಸುರ ಕತ್ತಿಯಾದರೆ, ಹಿರಿಯ ನರಕಾಸುರ ತಾಡಿ ವೇಷವಾಗಿದೆ. ಶೃಂಗಾರಪದದ ಅಭಿನಯಕ್ಕೆ ಹೊಂದಿಕೊಂಡು ಒಂದೇ ಪಾತ್ರ ಹೀಗೆ ವೇಷದಲ್ಲಿ ಬದಲಾಗುತ್ತದೆ.

ತೆಯ್ಯಂ

ತೆಯ್ಯಂ ಕೋಲವೆಂದರೆ ವ್ರತನಿಷ್ಠವಾದ ವ್ಯಕ್ತಿಯೊಬ್ಬ ನಿರ್ದಿಷ್ಟ ವೇಷಭೂಷಣಗಳನ್ನು ತೊಟ್ಟು ದೈವವಾಗಿ ಕುಣಿಯುವುದು. ಸಾಮಾನ್ಯವಾಗಿ ತೀರಿಕೊಂಡ ಹಿರಿಯರು ನಾಡಿನ ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡಿದ ಪ್ರಾಚೀನರು ದೈವಗಳಾಗಿ ಆರಾಧನೆಗೊಳ್ಳುವುದು ಸಂಪ್ರದಾಯ. ದೈವದ ವೇಷಕಟ್ಟಿ ಕುಣಿಸಿ ಹರಕೆಗಳನ್ನು ಒಪ್ಪಿಸಿದರೆ ಸಂಕಲ್ಪಿಸಿದ ದೈವವು ಸಂಪ್ರೀತಗೊಳ್ಳುತ್ತದೆ ಎಂಬುದು ನಂಬಿಕೆ. ದೈವ ವೇಷಧಾರಿಯ ಮುಂದೆ ಭಕ್ತರ ಕಷ್ಟಗಳನ್ನು ನಿವೇದಿಸಿಕೊಂಡರೆ ಅಭಯ ರೂಪದ ಮಾತುಗಳನ್ನು ದೈವ ಪ್ರತಿನಿಧಿಯಾದ ವೇಷಧಾರಿ ಹೇಳಿದರೆ ಭಕ್ತರಿಗೂ ಭರವಸೆ. ಹೀಗೆ ದೈವ ಪ್ರತಿನಿಧಿಯಾದ ದೈವದ ವೇಷಧಾರಿ ಧಾರ್ಮಿಕವಾಗಿ ಜನ ಸಮುದಾಯಗಳನ್ನು ನಿಯಂತ್ರಿಸುತ್ತಿರುವುದನ್ನು ಕಾಣಬಹುದು.

ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಸೇರಿಸಿಕೊಂಡ ಕರಾವಳಿ ಪ್ರದೇಶವನ್ನು ಹಾಗೂ ಕೇರಳದ ಇಂದಿನ ಕಾಸರಗೋಡು ಜಿಲ್ಲೆ, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಮೊದಲಾದ ಪ್ರದೇಶಗಳಲ್ಲೂ ತೆಯ್ಯಂ ಆಚರಣೆಯನ್ನು ಕಾಣಬಹುದು. ದಕ್ಷಿಣ ಕನ್ನಡದ ಪ್ರದೇಶದಲ್ಲಿ ಈ ತೆಯ್ಯಂ ಆಚರಣೆಯನ್ನು ‘ದೈವದ ಕೋಲ ಅಥವಾ ಬೂತೊ ಕೋಲೊ’ ಎಂದು ಕರೆಯುತ್ತಾರೆ. ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ತುಳುವರು ಇದೇ ಹೆಸರಿನಿಂದ ಕರೆದರೆ ಕನ್ನಡಿಗರು ದೈವ ಎಂದು ಮಲಯಾಳಿಗರು ತೆಯ್ಯಂ ಎಂದೂ ಕರೆಯುತ್ತಾರೆ. ಮಲಪ್ಪುರಂ ಹಾಗೂ ಕಲ್ಲಿಕೋಟೆಯಲ್ಲಿ ತಿರ ಎಂಬ ಹೆಸರಿನಿಂದಲೂ ಪಾಲಕ್ಕಾಡು ಜಿಲ್ಲೆಯಲ್ಲಿ ‘ಪೂದಂ’ ಹಾಗೂ ‘\ರ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ‘ಕೋಲ’ ಎಂದರೆ ವೇಷ. ವೇಷ ಕಟ್ಟಿಸುವುದರಿಂದ ದೈವ ಸಂತೋಷಗೊಳ್ಳುತ್ತದೆ ಎಂಬುದೇ ಇವೆಲ್ಲವುಗಳ ಹಿಂದಿರುವ ಸಾಮಾನ್ಯ ನಂಬಿಕೆ. ಈ ಎಲ್ಲ ಆಚರಣೆಗಳೂ ಮನೆಯ ಮುಂದಿನ ವಿಶಾಲ ಜಾಗದಲ್ಲಿಯೋ ಅಥವಾ ಬಯಲುಗಳಲ್ಲೊ ನಡೆಯುತ್ತವೆ. ಕೃಷಿ ಮುಗಿದು ಕಟಾವಿನ ನಂತರ ಬಯಲುಗಳಲ್ಲಿ ನಡೆಯುವ ಕೋಲಗಳನ್ನು ‘ಬಯಲುಕೋಲ’ಗಳೆಂದೂ ಕರೆಯುವುದಿದೆ. ಇದನ್ನು ಕೇರಳ ಮತ್ತು ದಕ್ಷಿಣ ಕನ್ನಡ ‘ಬೂತೊತಾನ’ ಅಥವಾ ಸ್ಥಾನಗಳೆಂದು ಕರೆಯುವ ಪುಟ್ಟ ದೈವಸ್ಥಾನಗಳ ಮುಂದೆ ನಡೆಸಲಾಗುತ್ತದೆ. ಉತ್ತರ ಕೇರಳದಲ್ಲಿ ‘ತಾನ’ಗಳಲ್ಲದೆ ಕಾವುಗಳಲ್ಲೂ ತೆಯ್ಯಂಕೋಲಗಳು ನಡೆಯುತ್ತವೆ. (ಕಾವುಗಳೆಂದರೆ ಮರಗಳು ತುಂಬಿರುವ ಸ್ವಲ್ಪ ಜಾಗ ಎಂದರೆ ‘ಬನ’) ಕೆಲವು ತಾನಗಳು ಮನೆಗಳ ಸಮೀಪದಲ್ಲೂ, ಕೆಲವು ದೈವಗಳ ತಾನಗಳು ಜನವಸತಿಗಿಂತ ದೂರದಲ್ಲೂ ಇರುತ್ತವೆ.

ತೆಯ್ಯಂ, ತಿರ, ಬೂತೊ ಇವೆಲ್ಲ ಒಂದೇ ಸಂಸ್ಕೃತಿಯ ವಿಭಿನ್ನ ರೂಪಾಂತರಗಳಾಗಿ ಆಚರಣೆಗೆ ಬಂದಂತೆ ಕಾಣುತ್ತದೆ. ದೈವಗಳು ಕೋಪಗೊಂಡು ಮನುಷ್ಯನ ನಾಶವನ್ನು ಮಾಡುತ್ತವೆ. ಅವುಗಳನ್ನು ತೃಪ್ತಿ ಪಡಿಸಿದರೆ ಮನುಷ್ಯರನ್ನು ಕಾಪಾಡುತ್ತವೆ. ನಂಬಿದವರನ್ನು ರಕ್ಷಿಸುವುದಲ್ಲದೆ ಸಾಮಾಜಿಕವಾದ ದುಷ್ಟರನ್ನು ಶಿಕ್ಷಿಸುವುದೂ ದೈವಗಳ ಮುಖ್ಯ ಕೆಲಸ. ಇಂತಹ ನಾಶ ಮತ್ತು ರಕ್ಷಣೆ ಹಾಗೂ ದುಷ್ಟ ಶಕ್ತಿಯ ನಾಶದ ಅನೇಕ ಕಥೆಗಳು ಜನಪದರಲ್ಲಿ ಪ್ರಚಲಿತದಲ್ಲಿವೆ. ದೈವಗಳನ್ನು ನಂಬಿದವರ ಅಭಿವೃದ್ದಿ ಹೊಂದಿದ ಕಥೆಗಳೂ ಅನೇಕವಿವೆ. ಯಾವುದೇ ದೈವಗಳು ವಿನಾಕಾರಣ ತೊಂದರೆ ಕೊಡುವುದೆಂದಿಲ್ಲ. ಅವಗಣಿಸಿದರೆ ಸಿಟ್ಟುಗೊಂಡು ಮನುಷ್ಯನಿಗೆ ಹಾನಿ ಮಾಡುವ ದೈವಗಳೂ ಇವೆ. ಆದರೆ ದೈವಗಳನ್ನು ನಂಬಿ ಹರಕೆ ಹೇಳಿ ಪ್ರಾರ್ಥಿಸಿಕೊಂಡರೆ ದೈವಗಳು ಅನುಕೂಲಭಾವದಿಂದಲೇ ವರ್ತಿಸುತ್ತವೆ. ದೈವಗಳ ಬಾಧೆಯನ್ನು ಉಚ್ಛಾಟಿಸಲು ಅನೇಕ ಮಾಂತ್ರಿಕ ವಿದ್ಯೆಗಳೂ ಇವೆ. ಅವುಗಳ ಜತೆಗೆ  ವೇಷಕಟ್ಟಿ ಅವುಗಳನ್ನು ಪ್ರತ್ಯಕ್ಷೀಕರಿಸಿಕೊಂಡು ಆರಾಧಿಸುವ ಪದ್ಧತಿಯೂ ಇದೆ. ಇದನ್ನು  ತೆಯ್ಯಂ ಆಚರಣೆ ಎನ್ನುವರು.

ಯಾವುದೇ ದೇವರಿಗೆ ನಿರ್ದಿಷ್ಟ ರೂಪಭಾವಗಳು ಲಭ್ಯವಾಗುವುದು ಕಲಾವಿದನ ಕಲ್ಪನೆಯ ಸೃಷ್ಟಿಯಿಂದ. ಅನೇಕ ಶಿಷ್ಟ ದೇವತೆಗಳು ವಿವಿಧ ಆಕಾರಗಳನ್ನು ಹೊಂದಿರುವುದು ಕೂಡಾ ಇದೇ ಹಿನ್ನೆಲೆಯಲ್ಲಿ. ಲಿಖಿತ ರೂಪದ ದಾಖಲೆಗಳು ಅಲಿಖಿತವಾದ ಐತಿಹ್ಯಗಳು ಹಾಗೂ ಇನ್ನಿತರ ಮೌಖಿಕ ಪರಂಪರೆಗಳು ದೇವರುಗಳಿಗೆ ಹತ್ತು ಹಲವು ಆಕಾರಗಳನ್ನು ನೀಡಿವೆ. ಸಾಮಾನ್ಯವಾಗಿ ಪ್ರಕೃತಿಯನ್ನೇ ಪೂಜಿಸುವ ಜನ ಸಮುದಾಯ ನಿರ್ದಿಷ್ಟ ರೂಪವನ್ನು ಕಲ್ಪಿಸಿ ಆರಾಧನೆಗೆ ತೊಡಗಿರುವುದು ಮಾನವನ ಸಾಂಸ್ಕೃತಿಕ ಇತಿಹಾಸದ ನಿರ್ದಿಷ್ಟ ಕಾಲಘಟ್ಟವೊಂದನ್ನು ಸೂಚಿಸುತ್ತದೆ. ಅಲೌಕಿಕ ಶಕ್ತಿಯನ್ನು ಪಡೆದ ಈ ದೇವತೆಗಳು ಶಿಲೆಯಲ್ಲಿ, ಚಿತ್ರಗಳಲ್ಲಿ ರೂಪು ಪಡೆದು ಭಕ್ತರಿಗೆ ದರ್ಶನ ನೀಡಿದರೆ ತೆಯ್ಯಂಗಳ ಸಂದರ್ಭದಲ್ಲಿ ಮನುಷ್ಯನೇ ವೇಷತೊಟ್ಟು ದೇವರ ರೂಪದಲ್ಲಿ ಪ್ರತ್ಯಕ್ಷವಾಗುವ ಪ್ರಕ್ರಿಯೆ ಇದೆ. ಕಲ್ಲುದೇವರು, ಚಿತ್ರದ ದೇವರುಗಳು ನಂಬಿದ ಭಕ್ತರಿಗೆ ಅಭಯವನ್ನು ಮಾತಿನ ರೂಪದಲ್ಲಿ ನೀಡಲಾರವು. ಆದರೆ ತೆಯ್ಯಂ ರೂಪದ ದೇವರ ವೇಷವು ಭಕ್ತರಿಗೆ ಅಭಯದ ಮಾತುಗಳನ್ನು ನೇರವಾಗಿ ಕಿವಿಗೆ ಕೇಳಿಸುತ್ತದೆ. ತನ್ನ ಶಕ್ತಿ ಸಾಮರ್ಥ್ಯವನ್ನು ರೂಪ ಭಾವವನ್ನು ಭಕ್ತರ ಬಾಹ್ಯ ಕಣ್ಣುಗಳಿಗೂ ದರ್ಶನ ಮಾಡಿಸುತ್ತದೆ. ಮನುಷ್ಯರು ದೇವರನ್ನು ತಲುಪಲು ಅಂತರಂಗದ ಧ್ಯಾನ, ಏಕಾಗ್ರತೆಗಳ ಬದಲು ಸುಲಭವಾಗಿ ನಿರ್ದಿಷ್ಟ ರೂಪದಲ್ಲಿ ಪ್ರತ್ಯಕ್ಷ ಗೊಳ್ಳುವ ಪ್ರಕ್ರಿಯೆ ನಿಜಕ್ಕೂ ಕುತೂಹಲಕರವಾದುದು. ಪ್ರತಿಯೊಬ್ಬ ಭಕ್ತರ ಮನಸ್ಸಿ ನಲ್ಲಿಯೂ ತಾನು ನಂಬಿದ ದೈವವು ರೂಪುಗೊಳ್ಳುವುದು ತೆಯ್ಯಂ ಕಟ್ಟಿದ ವೇಷವಿಧಾನದ ನೆಲೆಯಿಂದಲೇ ಆಗಿದೆ. ಹೀಗೆ ಭಕ್ತರನ್ನು ಪ್ರತ್ಯಕ್ಷವಾಗಿ ಹರಸಿ ಅಭಯ ನೀಡುವ ಎಷ್ಟೋ ವಿಭಿನ್ನ ಸ್ವರೂಪಗಳ ದೈವಗಳು ತೆಯ್ಯಂ, ಬೂತೊ, ತಿರಗಳ ರೂಪದಲ್ಲಿ ಪ್ರಕಟವಾಗುತ್ತಿವೆ. ತೆಯ್ಯಂಗಳು ತಮ್ಮ ಪರಿಸರ ಹಾಗೂ ತಾವು ನಂಬಿದ ಭಕ್ತರ ಹೊರತಾಗಿ ಇತರರಿಗೂ ಆಕರ್ಷಣೀಯವಾಗಿರುವುದು ತಮ್ಮ ಆಹಾರ್ಯದ ಸೌಂದರ್ಯದಿಂದ. ತೆಯ್ಯಂ ವೇಷ ವಿಧಾನದಲ್ಲಿ ಕೇರಳ ಪರಿಸರದ ಅನೇಕ ಸಾಂಸ್ಕೃತಿಕ ವಿವರಗಳು, ಜನಪದ ನಂಬಿಕೆಗಳು, ಸೃಜನಶೀಲ ನೆಲೆಗಳು ಸ್ಪಷ್ಟವಾಗಿ ಗೋಚರವಾಗುತ್ತವೆ.

ಈಗಾಗಲೇ ಹೇಳಿದಂತೆ ತೆಯ್ಯಂ ಮೂಲತಃ ಒಂದು ಆರಾಧನಾ ಮೂಲವಾದ ಆಚರಣೆ. ಪ್ರತಿಯೊಂದು ಶಿಷ್ಟ ಕಲೆಗಳು ಹಿಂದೆ ಜನಪದ ಕಲೆಗಳಾಗಿ ಮನುಷ್ಯನ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದವುಗಳೇ  ಆಗಿವೆ. ಜನಪದ ಕಲೆಗಳೇ ಪರಿಷ್ಕಾರಗೊಂಡು ಶಿಷ್ಟ ಕಲೆಗಳಾಗಿ ರೂಪುಗೊಳ್ಳುತ್ತವೆ ಎಂಬುದು ಸಾಮಾನ್ಯ ಅಭಿಪ್ರಾಯ. ಯಾವುದೇ ಜನಪದ ಕಲೆ ಎಲ್ಲ ಕಾಲಗಳಲ್ಲಿಯೂ ತಾನು ಹುಟ್ಟಿಕೊಂಡಾಗಿನ ಮೂಲ ಸ್ವರೂಪವನ್ನೇ ಉಳಿಸಿಕೊಂಡಿರು ವುದಿಲ್ಲ. ಅವು ಧಾರ್ಮಿಕ ಚೌಕಟ್ಟಿನಲ್ಲಿ ಉಳಿದುಕೊಂಡರೂ ಕೂಡಾ ಕಾಲ ದೇಶಕ್ಕನುಗುಣ ವಾಗಿ ಪರಿಷ್ಕಾರಗೊಂಡಿರುತ್ತವೆ. ಆ ಪರಿಷ್ಕಾರದ ಹಿಂದೆ ಮನುಷ್ಯನ ಧಾರ್ಮಿಕ ಪ್ರಜ್ಞೆಯ ಜತೆಗೆ ಕಲಾತ್ಮಕ ಪ್ರಜ್ಞೆಯೂ ಮೇಳೈಸಿ ಕಲೆಗೊಂದು ಪ್ರಾಪಂಚಿಕ ಶಕ್ತಿಯನ್ನು ತಂದು ಕೊಡುತ್ತದೆ.

ವ್ಯಕ್ತಿಯ ಇಷ್ಟಾನಿಷ್ಟಗಳನ್ನು ನಡೆಸಿಕೊಡಲು ಪಂಚಭೂತಗಳ ಮನೋಧರ್ಮಕ್ಕನು ಗುಣವಾಗಿ ಮನುಷ್ಯನ ಪ್ರಜ್ಞೆ ತೆಯ್ಯಂನಂತಹ ದೇವರನ್ನು ಸೃಷ್ಟಿ ಮಾಡಿತು. ಎಲ್ಲಾ ಆದಿ ಮಾನವರೂ ರೂಪ, ಶಬ್ದಗಳಿಂದ ದೇವರನ್ನು ಮೆಚ್ಚಿಸಲು ಪ್ರಯತ್ನಿಸಿದ್ದರು. ಅವುಗಳಲ್ಲಿ ಉತ್ತರ ಕೇರಳದ ತೆಯ್ಯಂ ಆರಾಧನಾ ಪದ್ಧತಿಯೂ ಒಂದು ವಿಧಾನ. ಇಂತಹ ಅನೇಕ ಪ್ರಾಚೀನ ಆರಾಧನಾ ಪದ್ಧತಿಗಳನ್ನು ಕೇರಳದ ಆದಿವಾಸಿಗಳಲ್ಲಿ ಇಂದಿಗೂ ಕಾಣಬಹುದು. ಪ್ರಪಂಚದ ಬಹುತೇಕ ಕಲೆಗಳು ದೈವಿಕ ಭಾವನೆಯ ನೆಲೆಯಲ್ಲಿಯೇ ಹುಟ್ಟಿಕೊಂಡಿವೆ. ದೇವರು ಎಂಬ ಕಲ್ಪನೆ ಮನುಷ್ಯ ಪ್ರಜ್ಞೆಗೆ ಬಾರದೆ ಇರುತ್ತಿದ್ದರೆ ಮನುಷ್ಯನ ಕಲಾಪ್ರಜ್ಞೆ ಯಾಗಲೀ ಸೌಂದರ್ಯ ಪ್ರಜ್ಞೆಯಾಗಲೀ ಜಾಗೃತವಾಗುತ್ತಿರಲಿಲ್ಲ. ಭಾರತದ ಶಿಲ್ಪ, ವಾದ್ಯ, ಸಂಗೀತ, ಸಾಹಿತ್ಯದಂತಹ ಕಲೆಗಳು ಭಕ್ತಿಯ ಭಾವನೆಗಳಿಂದಲೇ ಹುಟ್ಟಿಕೊಂಡಿವೆ.

ಕೇರಳದ ಅನೇಕ ಕಲೆಗಳನ್ನು ಗಮನಿಸಿದಾಗ ಮುಖ್ಯವಾಗಿ ಗಮನ ಸೆಳೆಯುವುದು ಅಲ್ಲಿನ ಸೌಂದರ್ಯ ಅಥವಾ ವರ್ಣ ವೈಭವ. ಧಾರ್ಮಿಕ ಕಾರ್ಯಕ್ರಮಗಳಲ್ಲೇ ಅತ್ಯಂತ ಹೆಚ್ಚು ಸುಂದರ ಹಾಗೂ ವರ್ಣ ರಂಜಿತ ಆಚರಣೆಗಳಲ್ಲಿ ತೆಯ್ಯಂ ಮುಂಚೂಣಿಯಲ್ಲಿದೆ. ಭೌತಿಕವಾಗಿ ತಮ್ಮ ಮುಂದೆ ಇಲ್ಲದಿರುವ ಅಮೂರ್ತ ಸ್ವರೂಪವನ್ನು ಸಾಕ್ಷಾತ್ಕರಿಸುವ ಕಲೆಯನ್ನು ತೆಯ್ಯಂ ಆಚರಣೆಯ ಸಂದರ್ಭದಲ್ಲಿ ಕಾಣಬಹುದು. ತಮಗಿಲ್ಲದ ಅನೇಕ ಶಕ್ತಿ ಸಾಮರ್ಥ್ಯ ಇತ್ಯಾದಿಗಳನ್ನೆಲ್ಲ ತಾವು ನಂಬಿದ ತೆಯ್ಯಂಗಳಿಗೆ ಆರೋಪಿಸಿ, ಆವಾಹಿಸಿ ನಂಬಿಕೊಂಡು ಬಂದಿದ್ದಾರೆ. ಲೌಕಿಕವಾಗಿ ಕೇರಳದ ಜನರು ಮಂಡಿ ಮರೆಮಾಚುವಷ್ಟು ಮಾತ್ರ ತುಂಡು ವಸ್ತ್ರವನ್ನು ಧರಿಸುವವರು. ಆದರೆ ತಾವು ನಂಬಿದ ದೈವಗಳಿಗೆ ಹಾಗೂ ತಾವು ಸೃಷ್ಟಿಸಿದ ಕಲೆಗಳಿಗೆ ವರ್ಣ ರಂಜಿತವಾದ ಉಡುಗೆ ತೊಡುಗೆಗಳನ್ನು ತೊಡಿಸಿದರು. ತೆಯ್ಯಂನ ಅಡಿಯಿಂದ ಮುಡಿಯವರೆಗಿನ ವೇಷ ವಿಧಾನಗಳನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ.

ಯಾವುದೇ ಒಂದು ಆಚರಣೆಗೆ ಅಥವಾ ಶಕ್ತಿಯ ಆವಾಹನೆಗೆ ಆವರಣ ನಿರ್ಮಾಣ ಅತ್ಯಂತ ಅಪೇಕ್ಷಣೀಯವಾಗಿದೆ. ಸಾಮಾನ್ಯಕ್ಕಿಂತ ಭಿನ್ನವಾದ ಸಾಂದರ್ಭಿಕ ಆವರಣ ಸೃಷ್ಟಿಗಾಗಿ ವೇಷಭೂಷಣ ಹಾಗೂ ವಾದ್ಯ ಪರಿಕರಗಳು ನೆರವಾಗುತ್ತವೆ. ಯಾವುದೇ ಕಲೆಯ ಸಂದರ್ಭದಲ್ಲಿ ಇದು ಅತ್ಯಂತ ಅಗತ್ಯ. ತೆಯ್ಯಂಗಳು ತಾವು ಆರಾಧನೆಗೊಳ್ಳುವ  ಭಕ್ತರ ಮುಂಭಾಗದಲ್ಲಿ ತಾವು ತೊಟ್ಟುಕೊಂಡ ವೇಷ ವಿಧಾನ, ಕುಣಿತ, ಹಾಡು, ವಾದ್ಯ ಪರಿಕರಗಳ ಮೂಲಕ ಅಲೌಕಿಕವಾದ ಆವರಣವೊಂದನ್ನು ನಿರ್ಮಿಸುತ್ತವೆ.

ಸಾಮಾನ್ಯವಾಗಿ ತೆಯ್ಯಂ ಸಂದರ್ಭದಲ್ಲಿ ಆರಾಧನೆಗೊಳ್ಳುವ ವ್ಯಕ್ತಿ ಆ ಸಮುದಾಯದ ಓರ್ವ ಸದಸ್ಯನೇ ಆಗಿರುತ್ತಾನೆ. ಆ ಸದಸ್ಯ ತಾನು ಬದುಕಿದ್ದಾಗ ಸಾಮಾನ್ಯರಲ್ಲೇ ಒಬ್ಬನಾಗಿ ಸಾವಿನ ಬಳಿಕ ವಿಶಿಷ್ಟ ಗುಣಗಳಿಂದಾಗಿ ದೈವವಾಗುತ್ತಾನೆ. ಹೀಗೆ ಹಿರಿಯ ತಲೆಮಾರಿನ ವ್ಯಕ್ತಿಯೊಬ್ಬ ಸಾವಿನ ನಂತರ ತನ್ನ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಾನೆಂಬ ನಂಬಿಕೆ ಅನೇಕ ದೈವಗಳ ಸೃಷ್ಟಿಗೆ ಕಾರಣವಾಗಿದೆ. ಹಾಗೆ ಹೇಳುವಾಗ ಸಮುದಾಯದಲ್ಲಿ ತೀರಿಕೊಂಡ ಎಲ್ಲ ಸದಸ್ಯರು ದೈವವಾಗುತ್ತಾರೆಂದಲ್ಲ. ತಾನು ಮಾಡಿದ ಪುಣ್ಯ ಕೆಲಸಗಳ ಕಾರಣಗಳಿಗೋ ಅಥವಾ ತಾನು ನಂಬಿದ ಧಾರ್ಮಿಕ ಕೆಲಸಗಳ ಕಾರಣಕ್ಕೊ ಮರಣಾ ನಂತರ ಆ ವ್ಯಕ್ತಿಯ ಆತ್ಮವು ಮೋಕ್ಷದತ್ತ ಹೋಗದೆ ದೈವ ಸಮುದಾಯದ ಸದಸ್ಯನಾಗುತ್ತದೆ. ಹೀಗೆ ಸದಸ್ಯನಾದ ವ್ಯಕ್ತಿ ಆ ಸಮುದಾಯದಿಂದ ನಿರಂತರ ಆರಾಧನೆಗೊಳ್ಳುವುದು ಸಂಪ್ರದಾಯ. ಆ ವ್ಯಕ್ತಿಯ ಲೌಕಿಕ ರೂಪ ಭಾವಗಳನ್ನಾಗಲೀ ಆತನನ್ನೇ ದೇವರೆಂದು ಅಂಗೀಕರಿಸುವುದಕ್ಕಾಗಲೀ ಅಥವಾ ಭಕ್ತಿಯನ್ನು ಸಮರ್ಪಿಸಲು ಸಮುದಾಯಕ್ಕೆ ಸಾಧ್ಯವಿರಲಿಲ್ಲ. ಆಗೆಲ್ಲ ಮಾನವ ಮುಖವಾಡ ಗಳನ್ನು ಧರಿಸಿಯೋ, ಮುಖಕ್ಕೆ ಬಣ್ಣ ಹಚ್ಚಿಯೋ, ವಿವಿಧ ವೇಷಭೂಷಣಗಳನ್ನು ಧರಿಸಿಯೋ ಆ ವ್ಯಕ್ತಿಗೆ ಅಲೌಕಿಕವಾದ ರೂಪಧಾರಣೆ ಯೊಂದನ್ನು ಮಾಡಿರಬೇಕು. ಆ ವ್ಯಕ್ತಿಯಿಂದ ಭಿನ್ನವಾಗಿ ಸಮುದಾಯ ಕಲ್ಪಿಸಿದ ಅರ್ಥ ಮತ್ತು ಭಾವಗಳು ಪ್ರತಿಫಲಿಸಬೇಕಾದರೆ ಅದಕ್ಕೆ ಅನುಗುಣವಾದ ರೂಪವಿರಬೇಕು. ಅಲೌಕಿಕವಾದ ವಾತಾವರಣವು ತೆಯ್ಯಂಗೆ ಅಗತ್ಯವಾದುದ ರಿಂದ ವಾದ್ಯ ಪರಿಕರಗಳನ್ನು ಬಳಸಿರಬೇಕು.

ತೆಯ್ಯಂ ಆಚರಣೆಗೆ ದೈವತಾನದ ಮುಂಭಾಗದ ಅಥವಾ ಕಾವಿನ ಬಳಿಯ ತೆರೆದ ಜಾಗವೇ ವೇದಿಕೆಯಾಗಿರುತ್ತದೆ. ವಾದ್ಯ ಘೋಷಗಳು ಉಚ್ಚ ಸ್ವರದಲ್ಲಿ ಮೊಳಗುತ್ತಿರಲು ತೆಂಗಿನ ಗರಿಯನ್ನು ಸೇರಿಸಿ ಕಟ್ಟಿದ ಸೂಟೆ(ಪಂಜು)ಯನ್ನು ಉರಿಸಿದ ಬೆಳಕಿನಲ್ಲಿ ತೆಯ್ಯಂಗಳು ಪ್ರತ್ಯಕ್ಷವಾಗುತ್ತವೆ. ಇಕ್ಕೆಲಗಳಲ್ಲಿ ಇಬ್ಬರು ಕೈಗಳನ್ನು ಹಿಡಿದುಕೊಂಡು ತೆಯ್ಯಂ ಕಾಲಿನ ಗಗ್ಗರ (ಕಡಗ)ಗಳನ್ನು ಶಬ್ದ ಮಾಡುತ್ತಾ ರಂಗ ಪ್ರವೇಶ ಮಾಡುತ್ತದೆ. ಪೂರಕ ಆವರಣ ನಿರ್ಮಾಣಕ್ಕಾಗಿ ಪ್ರಾರಂಭಿಕ ಹಾಡು, ಕುಣಿತಗಳು ನಾಂದಿಯ ರೂಪದಲ್ಲಿ ನಡೆಯುತ್ತವೆ. ದೀಪ, ಸೂಟೆಗಳ ಮಂದ ಬೆಳಕಿನಲ್ಲಿ ತೆಯ್ಯಂಗಳ ಕೆಂಪುವಸ್ತ್ರ, ಆಭರಣ, ಕಿರೀಟ ಇತ್ಯಾದಿಗಳು ಹೊಳೆಯುತ್ತಿರುತ್ತವೆ. ತೆಯ್ಯಂನ ನಡಿಗೆ, ಅಂಗವಿನ್ಯಾಸ, ಕಣ್ಣಿನ ಚಲನೆ ಇತ್ಯಾದಿಗಳೆಲ್ಲ ತಾವು ತೊಟ್ಟುಕೊಂಡ ವೇಷಕ್ಕೆ ಪೂರಕವಾಗಿ ಇಡೀ ಪರಿಸರದಲ್ಲೇ ಅಲೌಕಿಕವಾದ ವಾತಾವರಣವನ್ನು ನಿರ್ಮಿಸಿಬಿಡುತ್ತದೆ. ಅಲೌಕಿಕವಾದ ತೆಯ್ಯಂನ ಸತ್ಯಕ್ಕೆ ತಾವೇ ನಿರ್ಮಿಸಿ ಕೊಟ್ಟ ಸೌಂದರ್ಯದ ಅಲೌಕಿಕತೆಗೆ ಆರಾಧಕರು ಭಕ್ತಿ ಭಾವದಿಂದ ಕೈಜೋಡಿಸುತ್ತಾರೆ.

ಆದಿವಾಸಿ ಜನರಲ್ಲಿ ಪ್ರಚಲಿತವಿರುವ ನೃತ್ಯದ ಮಾದರಿಯಲ್ಲೇ ತೆಯ್ಯಂಗಳು ಕೂಡಾ ನೃತ್ಯವನ್ನು ಮಾಡುತ್ತವೆ. ಆದಿವಾಸಿಗಳಲ್ಲಿ ಸಂತೋಷ ಪ್ರಕಟಣೆಗಿಂತಲೂ ಹೆಚ್ಚಾಗಿ ದೈವಾರಾಧನೆ ಹಾಗೂ ಪ್ರೇತ ಪಿಶಾಚಿಗಳ ಉಚ್ಛಾಟನೆ ಮೊದಲಾದ ಉದ್ದೇಶಗಳಿಗೆ ನೃತ್ಯವನ್ನು ಮಾಡುತ್ತಿದ್ದರು. ಆದಿವಾಸಿ ಜನರು ವಿವಿಧ ತರದ ವೇಷಗಳನ್ನೋ, ಹಲವು ತರದ ಶಬ್ದಗಳನ್ನುಂಟುಮಾಡುವ ಉಪಕರಣಗಳನ್ನು ಬಳಸುತ್ತಿದ್ದರು. ಕೆಲವು ತೆಯ್ಯಂಗಳು ಕುಣಿತದೊಂದಿಗೆ ನೃತ್ಯವನ್ನೂ ಮಾಡುತ್ತವೆ. ಇದು ಕಾಲಕ್ರಮೇಣ ಆದ ಸೇರ್ಪಡೆಯಾಗಿರ ಬಹುದು.

ಸಾಮಾನ್ಯವಾಗಿ ತೆಯ್ಯಂಗಳು ಶಿವನ ಅಂಶವಾಗಿ ಆರಾಧನೆಗೊಳ್ಳುವುದನ್ನು ಕಾಣ ಬಹುದು. ಉತ್ತರ ಕೇರಳದಲ್ಲಿ ವೈಷ್ಣವ ಧರ್ಮ ಪ್ರಚಾರಕ್ಕೆ ಬಂದ ತರುವಾಯ ಸೃಷ್ಟಿಯಾದ ವೈಷ್ಣವ ತೆಯ್ಯಂ ವಿಷ್ಣುಮೂರ್ತಿ. ಇದರಲ್ಲಿ ನೃತ್ಯಾದಿ ಅಭಿನಯವನ್ನು ಬಹುತೇಕ ಅಳವಡಿಸಿ ಕೊಳ್ಳಲಾಗಿದೆ. ಕೇರಳದ ತೀಯ ಅಥವಾ ಬಿಲ್ಲವ ಸಮುದಾಯದವರು ತೆಯ್ಯಂ ಆರಾಧನೆಯನ್ನು ಒಂದು ರೀತಿಯಲ್ಲಿ ಸಾರ್ವತ್ರಿಕವಾಗಿ ಸ್ವೀಕರಿಸಿಕೊಂಡವರು. ಉಳಿದಂತೆ ಇತರ ಸಮುದಾಯಗಳಿಗೆ ಅವರವರದ್ದೇ ಆದ ತೆಯ್ಯಂಗಳಿವೆ.

ತೆಯ್ಯಂ ಆರಾಧನೆಯ ಸಂದರ್ಭದಲ್ಲಿ ಹಾಡುವ ಮೌಖಿಕ ಹಾಡನ್ನು ತೋಟ್ಟಂ (ತ್ತಂ) ಪಾಟುಗಳೆಂದು ಕರೆಯುತ್ತಾರೆ. ಚೆಂಡೆ ಮೊದಲಾದ ವಾದ್ಯೋಪಕರಣಗಳ ತಾಳಕ್ಕೆ ಸರಿಯಾಗಿ ತೆಯ್ಯಂ ನೃತ್ಯ ಮಾಡುತ್ತದೆ. ನಿರ್ದಿಷ್ಟವಾದ ತೆಯ್ಯಂಗಳಿಗೆ ನಿರ್ದಿಷ್ಟವಾದ ಹೆಜ್ಜೆ, ಕುಣಿತ, ಸಂಜ್ಞೆಗಳಿರಬೇಕೆಂಬ ಅಲಿಖಿತ ನಿಯಮವಿದೆ. ಹಾಗೆಯೇ ವಾದ್ಯೋಪಕರಣಗಳ ವಾದನ ಕ್ರಮಕ್ಕೂ ಅಲಿಖಿತ ನಿಯಮವಿದೆ. ವಾದನ ಲಯದ ಬದಲಾವಣೆ ಗನುಗುಣವಾಗಿ ಕುಣಿತದ ಶೈಲಿಯೂ ಬದಲಾಗುತ್ತಿರುತ್ತದೆ. ತೆಯ್ಯಂನ ಹೆಜ್ಜೆಗಾರಿಕೆಯ ಅರಿವುಳ್ಳವರು ಮಾತ್ರ ಚೆಂಡೆ ವಾದನವನ್ನು ಮಾಡುತ್ತಾರೆ. ಈ ಕಾರಣಕ್ಕೆ ಒಂದು ಲಯಬದ್ಧವಾದ ಕುಣಿತವನ್ನು ತೆಯ್ಯಂ ನಲ್ಲಿ ಕಾಣಬಹುದು.

ತೆಯ್ಯಂಗಳ ಹಿನ್ನೆಲೆ, ಐತಿಹ್ಯ ಮತ್ತು ತೋಟ್ಟಂಪಾಟುಗಳಲ್ಲಿ ಬರುವ ಸಾಹಿತ್ಯದ ಭಾವಕ್ಕೆ ಅನುಗುಣವಾದ ನೃತ್ಯವನ್ನು ತೆಯ್ಯಂನಲ್ಲಿ ಕಾಣಬಹುದು. ಹನ್ನೆರಡು ಮಂದಿ ಸಹೋದರರು ಸತ್ತುದನ್ನು ನೆನಪಿಸಿಕೊಂಡು ಅದಕ್ಕಾಗಿ ಮದುವೆ ಮಂಟಪದಲ್ಲಿ ದುಃಖಿಸುತ್ತಿರುವ ಆರ್ಯ ಕನ್ನಿಕೆಯ ಸಂಕಲ್ಪದ ‘ಆರ್ಯಪೂಂಗನ್ನಿ’ ಎಂಬ ತೆಯ್ಯಂನ ಪ್ರತಿಯೊಂದು ಭಾವವೂ ಆ ದುಃಖವನ್ನು ನೆನಪಿಸುವಂತಿರುತ್ತದೆ. ಹಾಗೆಯೇ ಕದಿವನ್ನೂರು ವೀರನ್ ಎಂಬ ತೆಯ್ಯಂನ ನೃತ್ಯವು ಭಯಾನಕವಾಗಿರುತ್ತದೆ. ಕೆಲವು ತೆಯ್ಯಂಗಳು ರೌದ್ರ ಸ್ವಭಾವವನ್ನು ಉಳ್ಳವುಗಳಾಗಿವೆ. ಕೆಲವು ತೆಯ್ಯಂಗಳು ಮಾಡುವ ಅಟ್ಟಹಾಸಗಳಿಂದ ಒಂದು ರೀತಿಯ ಅಲೌಕಿಕ ವಾತಾವರಣ ವನ್ನು ನಿರ್ಮಿಸುತ್ತವೆ. ತೆಯ್ಯಂಗಳು ಸಾಮಾನ್ಯವಾಗಿ ಅನುಗ್ರಹದ ಸಂದರ್ಭದಲ್ಲಲ್ಲದೆ ಉಳಿದ ಹೊತ್ತಿನಲ್ಲಿ ಮಾತನಾಡುವುದೆಂದಿಲ್ಲ. ತೆಯ್ಯಂ ಗಳು ತಮ್ಮ ನೋಟ ಹಾಗು ನಡಿಗೆಯಲ್ಲಿನ ಗಾಂಭೀರ್ಯದಿಂದಲೇ ಆರಾಧಕರಿಗೆ ಕೆಡುಕಿನ ಕುರಿತ ಭಯವನ್ನು ಮೂಡಿಸುತ್ತವೆ.

ತೆಯ್ಯಂ ವೇಷಕಟ್ಟುವ ಕಲಾವಿದ ಹಸಿ ತೆಂಗಿನಗರಿಯಲ್ಲಿ ನೆಯ್ದ ಚಾಪೆಯ ಮೇಲೆ ಮಲಗುವುದು ಸಂಪ್ರದಾಯ. ತೆಯ್ಯಂ ನಡೆಯುವ ಸ್ಥಳದಲ್ಲಿ ನೆಯ್ದ ಗರಿಗಳನ್ನು ಮರೆಯಾಗಿ ಕಟ್ಟಿ ‘ಅಣಿಯರ’ವನ್ನು ಸಿದ್ಧಪಡಿಸುತ್ತಾರೆ. ಈ ಅಣಿಯರ ಎಂಬ ಬಣ್ಣದ ಮನೆಯಲ್ಲಿಯೇ ತೆಯ್ಯಂ ವೇಷ ರೂಪ ಪಡೆಯುತ್ತದೆ. ತೆಯ್ಯಂ ಅಲಂಕಾರಕ್ಕಿರುವ ಆಭರಣಗಳನ್ನು ವಸ್ತ್ರ ಗಳನ್ನು ಅಲ್ಲೇ ನೇತು ಹಾಕಿರುತ್ತಾರೆ. ನೆಲದಲ್ಲಿ ಹಾಸಿದ ನೇಯ್ದ ತೆಂಗಿನ ಗರಿಯಲ್ಲಿ ತೆಯ್ಯಂ ಕಲಾವಿದ ಗಂಟೆಗಳ ಕಾಲ ಮುಖಬರವಣಿಗೆಗಾಗಿ ಮಲಗುತ್ತಾನೆ. ಉಳಿದ ವೇಳೆಗೂ ತೆಯ್ಯಂ ಕಲಾವಿದ ಮಲಗುವುದು ತೆಂಗಿನ ಗರಿಗಳ ಮೇಲೆಯೇ. ಮುಖಬರವಣಿಗೆ ಹಾಗೂ ಎಲ್ಲಾ ವೇಷ ವಿಧಾನಗಳೂ ಈ ಅಣಿಯರದಲ್ಲಿಯೇ ನಡೆಯುತ್ತದೆ. ಹೀಗೆ ಕಲಾವಿದ ತೆಯ್ಯವಾಗುವ ಪ್ರಕ್ರಿಯೆ ಧಾರ್ಮಿಕ  ವಿಧಿ ವಿಧಾನಗಳ ಭಾಗ. ಸೌಂದರ್ಯವೆಂಬುದು ಸಿದ್ಧವಾಗುವುದೂ ಇಲ್ಲಿ ಧಾರ್ಮಿಕ ನೆಲೆಯಿಂದಲೇ ಆಗಿದೆ.

ಮುಖ ಬರವಣಿಗೆ

ತೆಯ್ಯಂ ಕಟ್ಟುವ ಜನವರ್ಗದವರಲ್ಲಿ ಮುಖ್ಯವಾಗಿ ನಾಲ್ಕು ಜನಾಂಗದವರನ್ನು ಗುರುತಿಸಬಹುದು. ಹೊಲೆಯರು, ವೇಲರು, ಮಲಯರು ಹಾಗೂ ವಣ್ಣಾನರು. ಹೊಲೆಯರು ಕಟ್ಟುವ ತೆಯ್ಯಂಗಳಿಗೆ ಮುಖಬರವಣಿಗೆ ಇರುವುದಿಲ್ಲ. ಅವರು ಹೆಚ್ಚಾಗಿ ಮುಖವಾಡಗಳನ್ನೇ ಧರಿಸಿ ತೆಯ್ಯಂ ಕಟ್ಟುತ್ತಾರೆ. ಪ್ರಾಚೀನ ಕಾಲದಲ್ಲಿ ಎಲ್ಲಾ ತೆಯ್ಯಂಗಳೂ ಮುಖವಾಡವನ್ನು ಧರಿಸುತ್ತಿದ್ದುವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ವೇಲರು ಬರೆಯುವ ಬಣ್ಣಗಾರಿಕೆಯಲ್ಲಿ ಅಷ್ಟು ನಾಜೂಕು ಇರುವುದಿಲ್ಲ. ರೇಖಾವಿನ್ಯಾಸಗಳ ಅತ್ಯಂತ ಪ್ರಾಚೀನ ರೂಪವನ್ನು ಇವರಲ್ಲಿ ಕಾಣಬಹುದು. ಹಳದಿ, ಕಪ್ಪು, ಕೆಂಪು ಎಂಬ ಬಣ್ಣಗಳನ್ನು ಮಾತ್ರ ಬಳಿಯುತ್ತಾರೆ. ಆದರೆ ವೇಲರು ಕಟ್ಟುವ ತೆಯ್ಯಂಗಳಿಗೆ ಹೆಚ್ಚಾಗಿ ರೇಖೆಗಳನ್ನು ಬರೆಯು ವುದಿಲ್ಲ. ಆದರೆ ವಣ್ಣಾನ್ ಹಾಗೂ  ಮಲಯರ ಮುಖದ ಬಣ್ಣಗಾರಿಕೆಯು ವಿಶೇಷ ವಿನ್ಯಾಸದಿಂದ ಕೂಡಿರುತ್ತದೆ. ಇವರಿಗೆ ಮುಖದ ಬಣ್ಣಗಾರಿಕೆಗೆ ನಿರ್ದಿಷ್ಟವಾದ ನಿಬಂಧನೆಗಳು ಇವೆ. ಅಲ್ಲಿನ ರೇಖೆಗಳನ್ನು ಬದಲಾಯಿಸಲು ಯಾರಿಗೂ ಅಧಿಕಾರವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. ಆದರೆ ರೇಖೆಗಳ ಒಳಭಾಗದಲ್ಲಿ ಅವರವರ ಸೃಜನಶೀಲತೆಗಳಿಗನುಗುಣ ವಾಗಿ ಕಲಾವಂತಿಕೆಯನ್ನು ಮೆರೆಯಬಹುದು.

ತೆಯ್ಯಂಗಳ ಮುಖ ಬರವಣಿಗೆಯಲ್ಲಿ ಸುಮಾರು ೩೦ಕ್ಕಿಂತಲೂ ಹೆಚ್ಚು ವೈವಿಧ್ಯಗಳಿವೆ. ವಣ್ಣನ್ ಸಮುದಾಯದವರ ಬಣ್ಣಗಾರಿಕೆಯ ಶೈಲಿಯು ಅತ್ಯಂತ ಸುಂದರವಾಗಿದೆ. ತೆಯ್ಯಂಗಳಲ್ಲಿ ಕೆಂಪು, ಕೇಸರಿ ಮತ್ತು ಕಪ್ಪು ಎಂಬ ಈ ಮೂರು ಬಣ್ಣಗಳನ್ನು ಮಾತ್ರ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಕೇಸರಿ ಬಣ್ಣಕ್ಕೆ ಮನಯೋಲ,* ಕೆಂಪು ಬಣ್ಣಕ್ಕೆ ಚಾಯಿಲ್ಯಂ,* ಕಪ್ಪು ಬಣ್ಣಕ್ಕೆ ದೀಪದ ಮಸಿಯನ್ನು ಬಳಸುತ್ತಿದ್ದರು. ಆದರೆ ಹಿಂದೆ ಪ್ರಕೃತಿದತ್ತವಾದ ಕಲ್ಲುಗಳನ್ನು ಪುಡಿ ಮಾಡಿ ತಯಾರಿಸುತ್ತಿದ್ದರು. ಈಗ ಸಿದ್ಧವಾದ ಬಣ್ಣದ ಪುಡಿಗಳು ಬಳಕೆಯಲ್ಲಿವೆ.

ಬಣ್ಣಕ್ಕೆ ಕುಳಿತುಕೊಳ್ಳುವ ಮೊದಲು ತೆಯ್ಯಂ ಕೋಲವನ್ನು ನಡೆಸುವವರು ‘ಅಡಯಾಳಂ’ (ಗುರುತಿಗಾಗಿ ಕೊಡುವ ವೀಳ್ಯ) ಕೊಡುತ್ತಾರೆ. ವೀಳ್ಯದ ಸಂಕೇತವಾಗಿ ಅಕ್ಷತೆ ಹಾಗೂ ತೆಂಗಿನೆಣ್ಣೆಯು ಜೊತೆಗಿರುತ್ತದೆ. ಅಡಯಾಳ ಪಡೆದ ತೆಯ್ಯಂ ವೇಷಧಾರಿ ತಲೆಗೆ ಎಣ್ಣೆಹಾಕಿ ಸ್ನಾನ ಮಾಡಿ ಬರಬೇಕು. ನಂತರ ಧಾರ್ಮಿಕ ವಿಧಿಗಳ ಮೂಲಕ ಅನುಮತಿ ಪಡೆದು ಬಣ್ಣಗಾರಿಕೆಗೆ ಕುಳಿತುಕೊಳ್ಳುತ್ತಾನೆ. ತೆಯ್ಯಂ ಸಂದರ್ಭದಲ್ಲಿ ‘ಗಿಂಡಿವೆಳ್ಳಂ’ ಇರಿಸಿ ತೆಯ್ಯಂ ಕಲಾವಿದನ ಆಯ್ಕೆ ನಡೆಯುತ್ತದೆ. ಆಯ್ಕೆಯಾದ ಕಲಾವಿದ ಗಿಂಡಿನೀರು ತೆಗೆದು, ಐದು ವೀಳ್ಯ, ಒಂದು ಅಡಿಕೆಯನ್ನು ಪಡೆದು ತೆಯ್ಯಂ ಕಟ್ಟಲು ಅನುಮತಿ ಪಡೆಯುತ್ತಾನೆ. ಒಪ್ಪಿಗೆ ಪಡೆದ ನಂತರ ಗಿಂಡಿ ನೀರಿನಲ್ಲಿ ಮುಖ ತೊಳೆದು, ‘ಅಣಿಯರ’ (ನೇಪಥ್ಯ)ದಲ್ಲಿ ‘ತೊಡಙಲ್’ (ಆರಂಭ) ನಡೆಯುತ್ತದೆ. ಆಗ ಕಲಾವಿದ ಕೆಂಪು ಬಟ್ಟೆಯನ್ನು ಧರಿಸುತ್ತಾನೆ.

ತೆಯ್ಯಂ ವೇಷಧಾರಿ ಮನಯೋಲ (ಕೇಸರಿ)ವನ್ನು ಕೈಗೆ ತೆಗೆದುಕೊಂಡು ಎಣ್ಣೆಯಲ್ಲಿ ಕಲಸಿ ನುಣುಪಾಗಿ ಕೈಗಳಿಂದ ಮುಖಕ್ಕೆ ಹಚ್ಚಿಕೊಳ್ಳುವನು. ಹುಬ್ಬು ಮತ್ತು ಕಣ್ಣಿಗೆ ಕಪ್ಪು ಬಣ್ಣವನ್ನು ಹಚ್ಚಿಕೊಳ್ಳುತ್ತಾನೆ. ಇಷ್ಟನ್ನು ಕಲಾವಿದ ಸ್ವತಃ ತಾನೆ ಮಾಡಿಕೊಂಡ ಮೇಲೆ ಉಳಿದ ಬರವಣಿಗೆಗಾಗಿ ಬೇರೆಯವರು ಸಹಾಯ ಮಾಡುತ್ತಾರೆ. ತೆಯ್ಯಂ ವೇಷಧಾರಿ ಮುಖದ ಬರವಣಿಗೆಗಾಗಿ ತಾಳ್ಮೆಯಿಂದ ಬಹಳ ಹೊತ್ತು ಮಲಗ ಬೇಕಾಗುತ್ತದೆ. ಮುಖ ಹಾಗೂ ಮೈಗಳಿಗೆ ಕಲಾವಿದನೊಬ್ಬ ರೇಖೆಗಳ ಮೂಲಕ ವಿನ್ಯಾಸಗಳನ್ನು ರೂಪಿಸುತ್ತಾನೆ.

ಬಣ್ಣಗಾರಿಕೆಯಲ್ಲಿ ಮನಯೋಲ (ಕೇಸರಿ) ತಳಪಾಯದ ಬಣ್ಣವಾಗಿರುತ್ತದೆ. ಮನಯೋಲವನ್ನು ನೀರಿನಲ್ಲಿ ಕಲಸಿ  ಕೈಗಳಿಂದ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಅದರ ಮೇಲೆ ತೆಂಗಿನ ಗರಿಯ ಹಸಿ ಕಡ್ಡಿಗಳನ್ನು ಬಳಸಿ ಕೆಂಪು ಮತ್ತು ಕಪ್ಪು ಬಣ್ಣದ ಬರವಣಿಗೆ ಮಾಡುತ್ತಾರೆ. ಕಣ್ಣಿನ ಭಾಗದಲ್ಲಿ ಎಣ್ಣೆಯಲ್ಲಿ ಕಲಸಿದ ಮಸಿಯನ್ನು ವೃತ್ತಾಕಾರದಲ್ಲಿ ಬರೆಯುತ್ತಾರೆ. ಇದಕ್ಕೆ ‘ವಟ್ಟೆೞುತ್ತು’ ಎಂದು ಹೆಸರು. ಮೂಗಿನ ಮಧ್ಯದಲ್ಲಿ ಉದ್ದಕ್ಕೆ ಕೆಂಪು ಬಣ್ಣವನ್ನು ಬರೆಯುತ್ತಾರೆ. ಇದಕ್ಕೆ ‘ಚಿರಿಗಕೊಡಿ’ ಎಂದು ಹೆಸರು. ಮೂಗಿನ ಹೊಳ್ಳೆಯಿಂದ ಕೆನ್ನೆಯ ಎರಡೂ ಬದಿಗಳಲ್ಲಿ ಅಶ್ವತ್ಥದೆಲೆ ಆಕಾರದ ಸೂಕ್ಷ್ಮ ಬರವಣಿಗೆ ಗಳಿರುತ್ತವೆ. ಅದಕ್ಕೆ ‘ಕೋಯಿಪುಷ್ಟಂ’ (ಕೋಳಿ ಹೂ) ಎಂದು ಹೆಸರು. ಕಣ್ಣಿನ ಕೊನೆಯಲ್ಲಿ ಕಂಡುಬರುವ ರೇಖೆಗಳಿಗೆ ಚುರುಳ್ ಎಂದು ಹೆಸರು. ತುಟಿಗೆ ಬರೆಯುವ ಕೆಂಪುಬಣ್ಣ ದಪ್ಪವಾಗಿರುತ್ತದೆ. ಈ ಬರವಣಿಗೆಗೆ ಚುಂಡ್ ಬರೆಯುವುದು ಎನ್ನುತ್ತಾರೆ. ಕಣ್ಣಿನ ಕೊನೆಯಿಂದ ಹಣೆಯ ಕಡೆಗೆ ‘ಕೂಕಿರಿವಾಲ್’ (ನಾಯಿ ಬಾಲ) ಎಂಬ ವಿಶಿಷ್ಟ ಬರವಣಿಗೆ ಇರುತ್ತದೆ. ಹಣೆಯ ಮೇಲ್ಭಾಗದ ಕಣ್ಣಿನ ಆಕೃತಿಯ ಸೂಕ್ಷ್ಮ ಬಣ್ಣಗಾರಿಕೆಗೆ ನೇತ್ರ ಬರವಣಿಗೆ ಎಂದು ಹೆಸರು. ಗಲ್ಲದ ಕೆಳಗೆ ಕೆಂಪು ಬಣ್ಣದಲ್ಲಿ ‘ತಾಡಿತಂಡ್’ ಬರೆಯುತ್ತಾರೆ.

ಈ ಮುಖಬರವಣಿಗೆಯ ಪ್ರತಿಯೊಂದು ಹಂತಕ್ಕೂ ಪ್ರತಿಯೊಂದು ಭಾಗಕ್ಕೂ  ಬೇರೆ ಬೇರೆ ಹೆಸರುಗಳಿವೆ. ಪ್ರತಿಯೊಂದು ಬರವಣಿಗೆಯನ್ನು ಪ್ರಧಾನ ಭಾಗಗಳ ಹೆಸರಿನಿಂದ ಗುರುತಿಸಲಾಗುತ್ತದೆ. ಶಂಖ ಮತ್ತು ವೈರಿದ್ದಳ, ಪ್ರಾಕೆೞುತ್ತು ಮೊದಲಾದ ಹೆಸರುಗಳು ಬಳಕೆಯಲ್ಲಿವೆ. ಇಲ್ಲಿ ಮುಖದಲ್ಲಿ ಶಂಖಾಕೃತಿಯ ಬರವಣಿಗೆಯನ್ನು ಕಾಣಬಹುದು. ಕಣ್ಣಿನ ಬರವಣಿಗೆಗೆ ಸಂಬಂಧಿಸಿದಂತೆ ಮಾನ್‌ಕಣ್ಣು ವೆಚ್ಚೆೞುತ್ತ್ (ಜಿಂಕೆಯ ಕಣ್ಣಿಟ್ಟು ಬರೆಯುವುದು) ವಟ್ಟಕಣ್ಣಿಟ್ಟೆೞುತ್ತ್ (ವೃತ್ತಾಕಾರದಲ್ಲಿ ಕಣ್ಣಿನ ಬರವಣಿಗೆ) ಮೊದಲಾದ ಹೆಸರುಗಳಿವೆ. ಕೊಡುಂಪುರಿಗ ವೆಚ್ಚೆೞುತ್ತ್ (ದೊಡ್ಡ ಹುಬ್ಬಿನ ಬರವಣಿಗೆ) ಕೊಡುಪುರಿಗವು ಕೋಯಿಪೂವುಂ (ದೊಡ್ಡ ಹುಬ್ಬೂ ಕೋಳಿಜುಟ್ಟೂ) ಮೊದಲಾದವು ಹುಬ್ಬಿನ ಬರವಣಿಗೆಗೆ ಸಂಬಂಧಿಸಿದ ಹೆಸರುಗಳಾಗಿವೆ. ‘ನರಿಕುರಿಚ್ಚೆೞುತ್ತ್’ (ಹುಲಿಯ ಕುರಿತ ಬರವಣಿಗೆ) ಇದು ಹುಲಿಯ ಮುಖವನ್ನು ನೆನಪಿಸುವ ಬರವಣಿಗೆ ಈ ಬರವಣಿಗೆಗಳನ್ನು ಒಬ್ಬ ಚಿತ್ರ ಕಲಾವಿದನ ಭಿತ್ತಿಗೆ ವರ್ಗಾಯಿಸಿಕೊಂಡರೆ ಆಧುನಿಕ ಚಿತ್ರಕಲೆಯಾಗಬಹುದು.

ಮುಖದ ಬರವಣಿಗೆಗಳು ಆಯಾ ದೈವದ ಸ್ವಭಾವಗಳಿಗನುಗುಣವಾಗಿ ವಿಭಿನ್ನ ವಾಗಿರುತ್ತವೆ. ಮುಖ್ಯವಾಗಿ ಬರವಣಿಗೆಗೆ ಸಂಬಂಧಿಸಿದಂತೆ ಪ್ರಾಕೃತಿಕ ಬಣ್ಣಗಳನ್ನೇ ಬಳಸುತ್ತಾರೆ. ಕೆಂಪು, ಹಳದಿ ಬಣ್ಣಗಳಿಗೆ ಅಕ್ಕಿ ಹಿಟ್ಟನ್ನು ಅರೆದು ಸೇರಿಸುತ್ತಾರೆ. ಹಳದಿ ಹಾಗೂ ನೀಲಿ ಬಣ್ಣವನ್ನು ತೆಂಗಿನೆಣ್ಣೆಯಲ್ಲಿ ಮಿಶ್ರ ಮಾಡಿ ಅಪೂರ್ವವಾಗಿ ಬಳಸುವ ಹಸಿರು ಬಣ್ಣವನ್ನು ತಯಾರಿಸುತ್ತಾರೆ. ಈ ತೆರನ ಬಣ್ಣಗಳನ್ನು ಸಿದ್ಧಪಡಿಸಲು ಪ್ರತಿಭಾವಂತ ಕಲಾವಿದರಿಗೆ ಮಾತ್ರ ಸಾಧ್ಯ.

ಮುಖದ ಬಣ್ಣಗಾರಿಕೆಯನ್ನು ತೆಯ್ಯಂ ವೇಷಧಾರಿಗಳು ‘ಮುಖತ್ತೆೞುತ್ತ್’ (ಮುಖ ಬರವಣಿಗೆ) ಎಂದು ಹೇಳುತ್ತಾರೆ. ಈ ಬರವಣಿಗೆಗೆ ನಿರ್ದಿಷ್ಟವಾದ ಅರ್ಥವಿದೆ ಎಂಬುದನ್ನು ಈ ಪದವೇ ಸೂಚಿಸುತ್ತದೆ. ನಿರ್ದಿಷ್ಟ ತೆಯ್ಯಂಗಳಿಗೆ ನಿರ್ದಿಷ್ಟವಾದ ಮುಖವರ್ಣಿಕೆ ರೇಖೆಗಳು ಇವೆಯೆಂಬುದು ಆ ತೆಯ್ಯದ ಪ್ರಾಮುಖ್ಯವನ್ನು ತಿಳಿಸುತ್ತವೆ. ಇವುಗಳಿಗೆಲ್ಲ ನಿರ್ದಿಷ್ಟವಾದ ಸಂಕೇತ ಹಾಗೂ ಅರ್ಥ ಇದ್ದವು ಎಂದು ತಿಳಿಯಬಹುದು. ಆದರೆ ಆ ರೇಖೆಗಳ ಅರ್ಥದ ಕುರಿತಾಗಲೀ ಸಂಕೇತದ ಕುರಿತಾಗಲೀ ತೆಯ್ಯಂ ಕಲಾವಿದರಿಗೆ ತಿಳುವಳಿಕೆ ಇಲ್ಲ. ಆದರೂ ಈ ಬರವಣಿಗೆಗಳು ತೆಯ್ಯಂನ ಭಾವವನ್ನು ಪೋಷಿಸುತ್ತವೆ ಎಂಬುದು ಮಾತ್ರ ವಾಸ್ತವ. ದಿನ ಕಳೆದಂತೆ ಅವುಗಳೆಲ್ಲ ಹಿಂದಿಗಿಂತ ಹೆಚ್ಚು ಕಲಾತ್ಮಕವಾಗಿ ಪ್ರಕಟ ವಾಗುತ್ತಿವೆ ಎಂಬುದನ್ನು ಮಾತ್ರ ಇಲ್ಲಿ ಗಮನಿಸಬಹುದು.