ಪ್ರಸ್ತುತ ಅಧ್ಯಯನದಿಂದ ಕಂಡುಕೊಂಡ ಫಲಿತಗಳನ್ನು ಇಲ್ಲಿ ವಿವರಿಸಬಹುದು. ಯಕ್ಷಗಾನದ ಆಹಾರ್ಯವು ತನ್ನ ಅನನ್ಯತೆಯನ್ನು ಉಳಿಸಿಕೊಂಡು ಸಮಕಾಲೀನ ಪ್ರಸ್ತುತಗೊಳ್ಳುವ ನೆಲೆಯನ್ನು ಇಲ್ಲಿ ವಿಸ್ತರಿಸಲಾಗಿದೆ. ಸಾಂಸ್ಕೃತಿಕ ನೆಲೆಯಿಂದ ಕಂಡುಕೊಂಡ ವಿಭಿನ್ನ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು.

. ಯಕ್ಷಗಾನದ ಆಹಾರ್ಯದಲ್ಲಿ ಮೂರು ಕಲೆಗಳ ಹಾಗೂ ಮೂರು ಮತೀಯ ಧರ್ಮಗಳ ಸಮನ್ವಯವಿದೆ.

ಯಕ್ಷಗಾನದ ಆಹಾರ್ಯದಲ್ಲಿ ಮುಖ್ಯವಾಗಿ ಮೂರು ಕಲೆಗಳ ಸಂಗಮ ಇರುವುದನ್ನು ಕಾಣಬಹುದು. ಇದರಲ್ಲಿ ಪೂರ್ವರಂಗ, ಉತ್ತರರಂಗ (ಮುಮ್ಮೇಳ) ಮತ್ತು ಹಿಮ್ಮೇಳ. ಪೂರ್ವರಂಗವು ನಾಗಾರಾಧನೆಯಿಂದ ಬೆಳೆದು ಬಂದ ಕಲಾಭಾಗ. ಉತ್ತರರಂಗವು ಪೂರ್ವರಂಗದಿಂದ ಮುಂದುವರಿದು ಕುಣಿತಕ್ಕೆ ಹೆಚ್ಚಿನ ಮಹತ್ವ ನೀಡಿ ಶೈವಾರಾಧಕರು ರೂಪಿಸಿದ ಕಲಾಭಾಗ. ಹಿಮ್ಮೇಳವು ವೈಷ್ಣವ ಮತಾವಲಂಬಿಗಳ ಸೃಷ್ಟಿ. ಇದು ಕಾಲಕ್ರಮೇಣ ಮುಮ್ಮೇಳದಲ್ಲಿ ಹೆಚ್ಚು ಪ್ರಭಾವಶಾಲಿಯಾಯಿತು. ಈ ಕಾರಣಕ್ಕಾಗಿ ಮುಮ್ಮೇಳದಲ್ಲಿ ಶೈವ ವೈಷ್ಣವ ಸಂಘರ್ಷದ ಹಾಗೂ ಸಮನ್ವಯದ ಕಥಾಭಾಗ ಮುಂದುವರಿಯಿತು. ಹಾಗಾಗಿ ಬಣ್ಣಗಾರಿಕೆ ಸಂದರ್ಭದಲ್ಲಿ ಪಾತ್ರಧಾರಿಯು ಮುಖ್ಯವಾಗಿ ಗಮನಿಸುವುದು ಪಾತ್ರವು ಯಾವ ಮತಧರ್ಮದ ಬಗೆಗೆ ಒಲವುಳ್ಳದ್ದು ಎಂಬುದೇ ಆಗಿದೆ. ಈ ನೆಲೆಯಲ್ಲಿ ಪಾತ್ರವೊಂದು ಶೈವಾವಲಂಬಿಯಾದರೆ ಅಡ್ಡನಾಮ, ವೈಷ್ಣವಾವಲಂಬಿಯಾದರೆ ಉದ್ದನಾಮ ಎರಡನ್ನು ಸಮನಾಗಿ ಪರಿಗಣಿಸುವ ಭಾಗವತ ಮನೋಧರ್ಮವಾದರೆ ಉದ್ದ ಮತ್ತು ಅಡ್ಡನಾಮವನ್ನ ಸೇರಿಸಿ ಹಣೆಯಲ್ಲಿ ರೇಖಾವಿನ್ಯಾಸವನ್ನು ಮೂಡಿಸಲಾಗುತ್ತದೆ.

. ಹಣೆಯ ರೇಖಾವಿನ್ಯಾಸಗಳೇ ಪಾತ್ರದ ಸ್ವಭಾವನ್ನು ಸಂಕೇತಿಸುವ ಕೇಂದ್ರ ಶಕ್ತಿಯಾಗಿದೆ.

ಪಾತ್ರಗಳ ಹಣೆಬರಹವೇ ಅವುಗಳ ಸ್ವಭಾವವನ್ನು ಸಂಕೇತಿಸುವಂತಿರುತ್ತದೆ. ಯಾವುದೇ ಪಾತ್ರದ ಮುಖವರ್ಣಿಕೆಯಲ್ಲಿ ಹಣೆಯ ಬರವಣಿಗೆಯೇ ಬಹಳ ಪ್ರಾಮುಖ್ಯವಾದುದು. ಇದುವೇ ಪಾತ್ರದ ವ್ಯಕ್ತಿತ್ವವನ್ನು ಕಟ್ಟಿಕೊಡುವ ಭಾಗವೂ ಆಗಿದೆ. ಈ ಕಾರಣಕ್ಕಾಗಿ ಯಕ್ಷಗಾನದ ಆಹಾರ್ಯದಲ್ಲಿ ಹಣೆಯ ರೇಖಾವಿನ್ಯಾಸಗಳೆ ಪಾತ್ರದ ಕೇಂದ್ರಶಕ್ತಿಯಾಗಿವೆ.

. ಯಕ್ಷಗಾನದ ಆಹಾರ್ಯವು ಅಗತ್ಯ ಹಾಗೂ ಅನುಕೂಲವನ್ನು ಆಧರಿಸಿದ ಸೃಷ್ಟಿ ಯಾಗಿದೆ.

ಯಕ್ಷಗಾನದ ಆಹಾರ್ಯವು ಕಾಲದ ಅಗತ್ಯ ಹಾಗೂ ಅನುಕೂಲಗಳನ್ನು ದೃಷ್ಟಿಯಲ್ಲಿರಿಸಿ ಕೊಂಡು ಬೆಳೆದು ಕೊಂಡುಬಂದಿದೆ. ಹಾಗಾಗಿ ಅದು ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಸ್ಪಂದಿಸಿರುವುದರಿಂದ ಎಲ್ಲಾ ಕಾಲದಲ್ಲೂ ಪ್ರಸ್ತುತವೇ ಆಗಿದೆ. ಯಕ್ಷಗಾನವು ಬಳಸುತ್ತಿದ್ದ ವೇಷಪರಿಕರಗಳು ಹಾಗೂ ಬಣ್ಣಗಳು ಆಯಾ ಕಾಲದ ಲಭ್ಯ ವಸ್ತುಗಳನ್ನೇ ಅವಲಂಬಿಸಿದೆ. ಹಾಗಿದ್ದಾಗಲೂ ಯಕ್ಷಗಾನವು ತನ್ನ ನಿಶ್ಚಿತ ಚೌಕಟ್ಟಿನ ಒಳಗಡೆಯೇ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಅನನ್ಯತೆ ಎಂಬುದು ಮುಖ್ಯವಾಗಿ ಉಳಿದಿದ್ದರೆ ಯಕ್ಷಗಾನದ ಆಹಾರ್ಯ ಅಂಶದಲ್ಲಿ ಮಾತ್ರ. ಯಕ್ಷಗಾನದ ನಾಲ್ಕು ಅಭಿನಯಾಂಗಗಳಲ್ಲಿ ಅತ್ಯಂತ ಪ್ರಮುಖವಾದುದು ಆಹಾರ್ಯ. ಇದು ಅಭಿನಯದ ಮೂಲ ತಳಹದಿ ಕೂಡ ಆಗಿದೆ. ಯಕ್ಷಗಾನ ಸಾಂಕೇತಿಕವಾಗಿ ಸಂಮ್ಮೋಹನಗೊಳ್ಳುವಲ್ಲಿ ಆಹಾರ್ಯದ ಪಾತ್ರವೇ ಪ್ರಮುಖವಾದದ್ದು. ಉಳಿದ ಅಭಿನಯಾಂಗಗಳೆಲ್ಲ ಇದಕ್ಕೆ ಪೂರಕವಾಗಿ ಒದಗಿವೆ.

ಯಕ್ಷಗಾನದಲ್ಲಿ ಪೀಠಿಕೆಯ ವೇಷಗಳು ಹಾಗೂ ಪೀಠಿಕೆಯ ಪಾತ್ರಗಳು ಒಂದಕ್ಕೊಂದು ಪೂರಕವಾದದ್ದು. ಪ್ರಸಂಗದ ಆರಂಭದಲ್ಲಿ ಬರುವ ಪೀಠಿಕೆ ವೇಷಗಳು ಮತ್ತು ಅವುಗಳ ವೇಷ ವಿಧಾನಗಳು ಯಕ್ಷಗಾನದ ಸಾತ್ವಿಕ ಸ್ವಭಾವದ ಪಾತ್ರಗಳೇ ಆಗಿವೆ. ಹಾಗಾಗಿ ಪೀಠಿಕೆ ವೇಷಧಾರಿಯ ವೇಷಭೂಷಣ ಹಾಗೂ ಆ ಕಾರಣಕ್ಕಾಗಿ ಪ್ರಸಂಗದ ಆದಿಯಲ್ಲಿ ಬರುವ ರಾಮ, ಇಂದ್ರ ಮೊದಲಾದ ಪಾತ್ರಗಳು ಪೀಠಿಕೆ ವೇಷಧಾರಿಗಳಿಗೆ ಮೀಸಲಾದುವು. ಈ ಕಾರಣಕ್ಕಾಗಿಯೇ ರಾಮ ವನವಾಸದಲ್ಲಿದ್ದರೂ ಕಿರೀಟ ತೊಟ್ಟು ರಂಗ ಪ್ರವೇಶ ಮಾಡ ಬೇಕಾಯಿತು. ಯಕ್ಷಗಾನದ ಚೌಕಟ್ಟಿನ ಒಳಗಡೆ ನೋಡುವಾಗ ರಾಮ ವನವಾಸದಲ್ಲಿದ್ದಾಗ ಜಟಾವಲ್ಕಲ ಧಾರಿಯಾಗಿ ಇರಬೇಕಾಗಿ ಇರಲಿಲ್ಲ. ಆದರೆ ಕಾಲಾ ನಂತರದಲ್ಲಿ ಕವಿಯ ವಿವರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬದಲಾವಣೆಗೆ ಗುರಿಪಡಿಸಲಾಗಿದೆ.  ಪೀಠಿಕೆ ವೇಷದ ಅನುಕೂಲಕ್ಕಾಗಿ ಮಾಡಿದ್ದೇ ಆದರೂ ಕಿರೀಟ ಧರಿಸಿದ ಮೊದಲಿನ ರಾಮನನ್ನು ಪರಂಪರೆಯೆಂದು ಕರೆಯಲಾಗುತ್ತದೆ. ಪಾಂಡವರ ಒಡ್ಡೋಲಗದಲ್ಲಿ ಐದು ಜನರ ವೇಷವು ನಾಲ್ಕು ವಿಧದಲ್ಲಿರುತ್ತದೆ. ಇದರಲ್ಲಿ ಧರ್ಮರಾಯ ಧರಿಸುವ ಕಿರೀಟವು ಕೇಸರಿ ತಟ್ಟಿಯ ಚಿಕ್ಕ ರೂಪ. ಅದೇ ದೊಡ್ಡ ಕೇಸರಿ ತಟ್ಟಿಯು ರಾಕ್ಷಸ ಪಾತ್ರಗಳ ಕಿರೀಟ. ರಾವಣನಂತಹ ರಾಕ್ಷಸ ಪಾತ್ರಗಳ ಸ್ವಭಾವಕ್ಕೂ ಧರ್ಮರಾಯನಂತಹ ಪಾತ್ರಗಳ ಸ್ವಭಾವಕ್ಕೂ ಸಾಮ್ಯವೇನಿಲ್ಲ ಆದರೆ ತಂಡದಲ್ಲಿ ಲಭ್ಯವಿರುವ ಕಿರೀಟವನ್ನು ಅನುಸರಿಸಿ ಹಾಗೂ ವೈವಿಧ್ಯತೆಯ ಕಾರಣಕ್ಕಾಗಿ ಧರ್ಮರಾಯನಿಗೆ ಚಿಕ್ಕ ಕೇಸರಿ ತಟ್ಟಿಯ ಮಾದರಿಯ ಕಿರೀಟವನ್ನು ಬಳಸಲಾಗುತ್ತದೆ. ಭೀಮನಾದರೋ ಪುರಾಣದಲ್ಲಿ ಸುಂದರ ಪುರುಷ. ಆದರೆ ಯಕ್ಷಗಾನವು ಯಾವತ್ತೂ ಆತನನ್ನು ಸುಂದರವಾಗಿ ಚಿತ್ರಿಸದೆ ರೌದ್ರ ಸ್ವರೂಪಿಯಾಗಿಯೇ ಸಂಕೀರ್ಣ ಪಾತ್ರವಾಗಿಸಿದೆ. ಇಲ್ಲಿ ಭೀಮನ ರೌದ್ರ ಸ್ವಭಾವವನ್ನು ಮಾತ್ರ ದೃಷ್ಟಿಯಲ್ಲಿರಿಸಿಕೊಂಡು ಮುಖವರ್ಣಿಕೆಯನ್ನು ಹಾಗೂ ಭೀಮನಿಗೇ ಸೀಮಿತವಾದ ಭೀಮನ ಮುಡಿಯನ್ನು ಸೃಷ್ಟಿಸಲಾಗಿದೆ. ಅರ್ಜುನ ಪೀಠಿಕೆಯ ವೇಷವಾದ್ದರಿಂದ ಕಿರೀಟವನ್ನೇ ಧರಿಸುವುದು ಸಂಪ್ರದಾಯ. ಸಾಮಾನ್ಯವಾಗಿ ಯಕ್ಷಗಾನ ಪ್ರಸಂಗಗಳಲ್ಲಿ ನಕುಲ ಸಹದೇವರಿಗೆ ಅಂತಹ ಕೆಲಸಗಳೇನಿರುವುದಿಲ್ಲ. ಹಾಗಾಗಿ ಆರಂಭದಲ್ಲಿ ಬರುವ ಪಾಂಡವರ ಒಡ್ಡೋಲಗಕ್ಕೆ ಪೂರ್ವರಂಗದ ಬಾಲಗೋಪಾಲರ ವೇಷವನ್ನು ಧರಿಸಿದ ವ್ಯಕ್ತಿಗಳೇ ನಕುಲ ಸಹದೇವರಾಗಿ ಬರುತ್ತಿದ್ದುದು ಅನುಕೂಲಕ್ಕಾಗಿ ಮಾತ್ರ. ಇದು ಪರಂಪರೆಯಾಗಿಯೇ ನಕುಲ ಸಹದೇವರು ಕುರುಕ್ಷೇತ್ರದ ಸಂದರ್ಭದಲ್ಲೂ ಬಾಲಕರಾಗಿಯೇ ಪಕಡಿ ವೇಷವನ್ನು ಧರಿಸಿ ಬರುತ್ತಾರೆ. ಇದಕ್ಕೆ ಪೂರಕವಾಗಿ ಗದಾಯುದ್ಧ ಪ್ರಸಂಗದಲ್ಲಿ ‘ಚಿಣ್ಣರು ಯಮಳರು ….’ ಎಂಬ ಪದ್ಯವು ಇದೆ. ಹಾಗಾಗಿ ಯಕ್ಷಗಾನದ ಪರಂಪರೆ ಎಂಬುದು ಅದು ಆಯಾ ಸಂದರ್ಭಗಳಲ್ಲಿ ಅನುಕೂಲಕ್ಕೆ ರೂಢಿಸಿಕೊಂಡ ಸಂಪ್ರದಾಯವೇ ಹೊರತು ಪ್ರಜ್ಞಾಪೂರ್ವಕವಾಗಿ ಪಾತ್ರಗಳ ನೆಲೆಯಿಂದ ರೂಪು ಗೊಂಡವುಗಳಲ್ಲ.

. ಯಕ್ಷಗಾನದ ಆಹಾರ್ಯವು ಸೌಂದರ್ಯದ ನೆಲೆಯಿಂದ ರೂಪುಗೊಂಡಿದೆ.

ಹಾಗಿದ್ದಾಗಲೂ ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಯಕ್ಷಗಾನದ ಆಹಾರ್ಯವು ಸೌಂದರ್ಯದ ನೆಲೆಯಿಂದ ವೈವಿಧ್ಯತೆಯ ಕಡೆಗೆ ಹೆಚ್ಚು ಲಕ್ಷ್ಯವಹಿಸಿದೆ. ಯಕ್ಷಗಾನದ ಕಲಾವಿದರು ಪ್ರಕೃತಿಯ ಸೌಂದರ್ಯದ ನೆಲೆಯಿಂದ ಆಹಾರ್ಯವನ್ನು ಹೆಚ್ಚು ಸುಂದರವಾಗಿಸಿದ್ದಾರೆ. ಪ್ರಕೃತಿಯಲ್ಲಿ ಲಭಿಸುವ ಹೂವು, ಹೂವಿನ ಬಣ್ಣ ಎಲ್ಲವೂ ಅವರ ಆಲೋಚನಾ ವಿಧಾನದಲ್ಲಿ ಸೇರಿಕೊಂಡಿದೆ. ಯಕ್ಷಗಾನದ ಪ್ರತಿಯೊಂದು ವೇಷಪರಿಕರ ಗಳಲ್ಲೂ ಪ್ರಕೃತಿಯ ಒಂದೊಂದು ವಸ್ತುವಿನ ಸ್ವರೂಪವನ್ನು ಕಾಣಬಹುದು. ನಿರ್ದಿಷ್ಟ ಮಾತೃಕೆಗಳು ನಿಸರ್ಗದಲ್ಲಿ ಕಂಡುಬಂದಾಗ ಅವುಗಳ ಸೌಂದರ್ಯವನ್ನು ಆಹಾರ್ಯದಲ್ಲಿ ಅಳವಡಿಸಿಕೊಂಡುದನ್ನು ಕಾಣಬಹುದು. ಅಲ್ಲಿ ಹೂವಿನ ಆಕಾರಗಳಿರಬಹುದು, ಎಲೆಯ ರೂಪಗಳಿರಬಹುದು, ಹಾವಿನ ಹೆಡೆಯನ್ನು ಹೋಲುವ ರಚನೆಗಳಿರಬಹುದು, ನವಿಲುಗರಿಯ ಬಳಕೆ ಇರಬಹುದು ಇವೆಲ್ಲಾ ಪ್ರಕೃತಿಯಿಂದ ಸಹಜವಾಗಿ ಸ್ವೀಕರಿಸಿದ ಸಂಗತಿಗಳು. ಹೀಗೆ ಸ್ವೀಕರಿಸಿದ ಪರಿಕರಗಳನ್ನು ತಮ್ಮ ಅಂಗಾಂಗಗಳಿಗೆ ಹೊಂದಿಕೊಳ್ಳುವ ಆಕಾರದಲ್ಲಿ ಸೃಷ್ಟಿಸಿಕೊಂಡುದು, ಅನುಕೂಲವಾಗುವ ಭಾರವನ್ನು ಹೊಂದಿಸಿಕೊಂಡುದು ಆ ಮೂಲಕ ವೇಷ ಧರಿಸಿದ ವ್ಯಕ್ತಿಯ ನಡೆ ನುಡಿಗಳ ಮೇಲೆ ಪರಿಣಾಮ ಬೀರುವಂತೆ ರೂಪಿಸಿಕೊಂಡುದು ಇತ್ಯಾದಿಗಳೆಲ್ಲ ಸೌಂದರ್ಯದ ನೆಲೆಯಿಂದಲೇ ಆಗಿದೆ.

ಯಕ್ಷಗಾನದ ಆಹಾರ್ಯದಲ್ಲಿ ಅನೇಕ ಹಂತಗಳನ್ನು ಗುರುತಿಸಲು ಸಾಧ್ಯವಿದೆ. ನಿಸರ್ಗದಿಂದ ನೇರವಾಗಿ ಪಡೆದ ವಸ್ತುಗಳನ್ನು ಧರಿಸಿದುದು ಮೊದಲ ಹಂತವೇ ಇರಬಹುದು. ಆಗ ಮನುಷ್ಯ ಮನರಂಜನೆಯದೋ ಅಥವಾ ಆರಾಧನೆಯದೋ ನಿರ್ದಿಷ್ಟ ಉದ್ದೇಶವಿಲ್ಲದೆ ರೂಪಿಸಿಕೊಂಡ ವೇಷವಿಧಾನವೇ ಮೊದಲ ಹಂತ ಇರಬಹುದು. ಇದು ಯಕ್ಷಗಾನಕ್ಕೆ ಮಾತ್ರ ಸೀಮಿತವಾದ ಹಂತವೆಂದು ಭಾವಿಸಬೇಕಾಗಿಲ್ಲ. ಮನುಷ್ಯನ ಸಹಜ ಪ್ರವೃತ್ತಿಯ ಭಾಗವಾಗಿಯೇ ಇಲ್ಲಿನ ಆಹಾರ್ಯವನ್ನು ಗುರುತಿಸಬಹುದು.

ಎರಡನೆಯ ಹಂತದಲ್ಲಿ ನಾಗಾರಾಧನೆಯ ಉದ್ದೇಶವಿರಿಸಿಕೊಂಡ ಕಲಾರೂಪದಲ್ಲಿ ಕೆಲವೊಂದು ನಿರ್ದಿಷ್ಟ ವೇಷವಿಧಾನಗಳು ಜಾಗ ಪಡೆದಿರಬಹುದು. ನಿರ್ದಿಷ್ಟವಾದ ಆಕಾರ, ಬಣ್ಣ ಇತ್ಯಾದಿಗಳ ನೆಲೆಯಿಂದ ಆರಾಧನೆಯ ಧಾರ್ಮಿಕ ಚೌಕಟ್ಟಿಗೆ ಪೂರಕವಾದ ವೇಷ ವಿಧಾನವೊಂದು ಈ ಹಂತದಲ್ಲಿ ದಾಖಲಾಗಿರಬೇಕು. ಈ ಹಿಂದೆ ಚರ್ಚಿಸಿದಂತೆ ಯಕ್ಷಗಾನದ ಪೂರ್ವರಂಗದ ವೇಷವಿಧಾನಗಳ ಪ್ರಾಚೀನ ಪಳಯುಳಿಕೆಗಳಾಗಿ ಈ ಹಂತವನ್ನು ಗುರುತಿಸ ಬಹುದು.

. ಯಕ್ಷಗಾನ ಆಹಾರ್ಯದಲ್ಲಿ ಸಾಂಸ್ಕೃತಿಕವಾಗಿ ಸಮಕಾಲೀನಗೊಳ್ಳುವ ಪ್ರಕ್ರಿಯೆ ಯಿದೆ.

ನಾಗಾರಾಧನೆಯ ಹಂತದಲ್ಲಿ ಬೌದ್ಧ ಮತದ ಪ್ರಭಾವಕ್ಕೂ ಈ ಕಲಾರೂಪ ಒಳಗಾದಂತೆ ಭಾಸವಾಗುತ್ತದೆ. ಈ ಸಂದರ್ಭದಲ್ಲಿ ಬೌದ್ಧಮತದ ಶಿಲ್ಪಗಳಲ್ಲಿ ದಾಖಲಾದ ವೇಷವಿಧಾನ ಗಳು ಈ ಕಲಾರೂಪದಲ್ಲಿ ಸೇರಿ ಕೊಂಡಿರಬಹುದು. ಆ ಬಳಿಕ ವೈದಿಕ ಮತದ ಪ್ರಾಬಲ್ಯದ ಹಂತದಲ್ಲಿ ಶೈವ, ವೈಷ್ಣವ ಪಂಥಗಳ ಕಥಾನಕಗಳು ಸೇರಿಕೊಂಡಾಗಲೆಲ್ಲ ವೇಷವಿಧಾನಗಳಲ್ಲಿ ಹೊಸ ಸೇರ್ಪಡೆ ಆಗಿದೆ. ಆಗ ಸಹಜವಾಗಿಯೇ ನಿರ್ದಿಷ್ಟ ವೇಷಗಳು ಪಾತ್ರಗಳ ಸ್ವಭಾವವನ್ನನುಸರಿಸಿ ರೂಪಿಸಿಕೊಂಡಿರಬಹುದು. ಮಾಧ್ವ ಮತದ ಪ್ರಾಬಲ್ಯದ ಹಂತದಲ್ಲೂ ಯಕ್ಷಗಾನದ ಆಹಾರ್ಯದ ಮೇಲೆ ಹಾಗೂ ವೇಷವಿಧಾನಗಳಲ್ಲಿ ಮುಖವರ್ಣಿಕೆಯಲ್ಲಿ ವ್ಯತ್ಯಾಸಗಳು ಆಗುತ್ತಾ ಬಂದಿವೆ. ಹೀಗೆ ವಿಭಿನ್ನ ಕಾಲಘಟ್ಟಗಳಲ್ಲಿ ಬೆಳೆಯುತ್ತಾ ಬಂದಾಗಲೆಲ್ಲ ಯಕ್ಷಗಾನದ ಆಹಾರ್ಯವು ಬೇರೆ ಬೇರೆ ಸಂಗತಿಗಳನ್ನು ಸೌಂದರ್ಯದ ನೆಲೆಯಿಂದ ತನ್ನೊಳಗೆ ಸೇರಿಸಿಕೊಂಡಿದೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಇದ್ದ ವೇಷಪರಿಕರಗಳಿಗೂ ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ವೇಷವಿಧಾನಗಳಿಗೂ ಇರಬಹುದಾದ ಅಂತರವೇ ಬಹಳಷ್ಟಿದೆ. ದೀವಟಿಗೆಯ ಮಂದ ಬೆಳಕಿನಲ್ಲಿ ನಡೆಯುತ್ತಿದ್ದ ಯಕ್ಷಗಾನಗಳು ಬಳಸುತ್ತಿದ್ದ ಬಣ್ಣ ಮತ್ತು ವೇಷಭೂಷಣಗಳು ಬೇರೆಯಾಗಿದ್ದವು. ಆದರೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪೆಟ್ರೋಮ್ಯಾಕ್ಸ್, ವಿದ್ಯುತ್ ಬೆಳಕಿನ ಸಂದರ್ಭದಲ್ಲಿ ಬಳಸುತ್ತಿದ್ದ ಆಧುನಿಕ ಬಣ್ಣಗಳಿಗೂ ವ್ಯತ್ಯಾಸವಿದೆ. ಮರ, ಹತ್ತಿಯ ಬಟ್ಟೆ ಇತ್ಯಾದಿ ಪರಿಕರಗಳ ಜಾಗದಲ್ಲಿ ಪ್ಲಾಸ್ಟಿಕ್, ಉಲ್ಲನ್, ನೈಲಾನ್ ಬಟ್ಟೆಗಳು ಯಕ್ಷಗಾನದ ವೇಷಭೂಷಣಗಳನ್ನು ಹೊಳೆಯುವಂತೆ ಮಾಡಿವೆ. ಬಿಡಿಬಿಡಿಯಾಗಿ ಇರುತ್ತಿದ್ದ ಸಾಮಗ್ರಿಗಳನ್ನು ಆಯಾ ಸಂದರ್ಭಕ್ಕೆ ಬೇಕಾದಾಗ ಜೋಡಿಸಿ ಧರಿಸಿಕೊಳ್ಳುವ ಸಂಪ್ರದಾಯವು ಇಲ್ಲವಾಗಿ ಸಿದ್ದವಾದ ವೇಷವಿಧಾನಗಳನ್ನು ಅನುಕೂಲದ ದೃಷ್ಟಿಯಿಂದಲೇ ಆಧುನಿಕ ದಿನಗಳಲ್ಲಿ ತರಲಾಗಿದೆ. ಆಧುನಿಕ ಮಾರುಕಟ್ಟೆಯಲ್ಲಿ ಝಗಮಗಿಸುವ ಸಾಧನಗಳು ಯಕ್ಷಗಾನದ ಪಾತ್ರಗಳನ್ನು ಅಲಂಕರಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿವೆ. ಅತಿಮಾನುಷವಾದ ಪಾತ್ರಗಳನ್ನು ಸೃಷ್ಟಿಸಲು ಹಗಲಿನಷ್ಟೇ ಪ್ರಖರವಾದ ವಿದ್ಯುತ್ ಬೆಳಕಿನಲ್ಲಿ ಆಧುನಿಕ ಮಾರುಕಟ್ಟೆಯ ಸರಕುಗಳಿಗೆ ಸಾಧ್ಯವಾಗಿದೆ.  ವೇಷವಿಧಾನಗಳಲ್ಲಿ ಎಲ್ಲಾ ಕಾಲಘಟ್ಟದ ಕಲಾವಿದರ ಸೌಂದರ್ಯ ಪ್ರಜ್ಞೆಯಂತೂ ಜಾಗೃತವಾಗಿರುವುದು ತಿಳಿಯುತ್ತದೆ. ಬದಲಾವಣೆ ಗಳಾದಾಗಲೆಲ್ಲ ಪರಂಪರೆಗೆ ಅಪಚಾರವಾಯಿತೆಂದು ಬಗೆಯುವುದು, ಅನುಕೂಲಕ್ಕೆ ಮಾಡಿಕೊಂಡ ಸುಧಾರಣೆಗಳು ಕಲಾತ್ಮಕ ಚೌಕಟ್ಟನ್ನು ಶಿಥಿಲಗೊಳಿಸಿರುವುದು ಇತ್ಯಾದಿಗಳೆಲ್ಲ ಯಕ್ಷಗಾನದ ಆಹಾರ್ಯ ಕ್ಷೇತ್ರದ ಆತಂಕಕಾರಿ ಸಂಗತಿಗಳೇ ಆಗಿವೆ.

. ಯಕ್ಷಗಾನ ಆಹಾರ್ಯವು ಅಲೌಕಿಕ ಆದರ್ಶದ ಸಂಕೇತವಾಗಿದೆ.

ಯಕ್ಷಗಾನ ಆಹಾರ್ಯವು ಅಲೌಕಿಕ ಆದರ್ಶದ ಸಂಕೇತವಾಗಿದೆ. ಅಲ್ಲಿನ ಪಾತ್ರ ಗಳೆಲ್ಲವೂ ಅತಿಮಾನುಷ ವಾದವುಗಳು. ಅವುಗಳ ಮೂಲಕವೇ ವಾಸ್ತವ ದೂರವಾದ ಸಾಹಸಗಳನ್ನು ಪಾತ್ರಗಳು ಸಾಧಿಸಿ ತೋರಿಸುತ್ತವೆ. ಆ ಮೂಲಕ ಸಮಕಾಲೀನ ಸಮಾಜಕ್ಕೆ ನೈತಿಕ ಸಂದೇಶಗಳನ್ನು ಸಾರುತ್ತವೆ. ಸಾರುವ ಸಂದೇಶವು ಪ್ರೇಕ್ಷಕರನ್ನು ತಟ್ಟಬೇಕಾದರೆ ಸಂವಹನವು ಸೌಂದರ್ಯದ ಮೂಲಕ ಅಭಿವ್ಯಕ್ತಗೊಳ್ಳಬೇಕಾಗುತ್ತದೆ. ಸೌಂದರ್ಯಾತ್ಮಕ ವಾದ ಸಂದೇಶವು ಯಾವಾಗಲೂ ಕಲಾತ್ಮಕವಾಗುತ್ತದೆ. ಆ ಕಾರಣಕ್ಕಾಗಿಯೇ ಕಲೆ ಆಸ್ವಾದನಾಯೋಗ್ಯವಾಗಿರುತ್ತದೆ. ಸೌಂದರ್ಯಕ್ಕೆ ನಿರ್ದಿಷ್ಟವಾದ ಅರ್ಥ ಸಾಧ್ಯವಾದಾಗ ಮಾತ್ರ ಕಲೆಯು ಸಹೃದಯ ಪ್ರಿಯವಾಗುತ್ತದೆ.

ಉದಾಹರಣೆಗೆ ರಾವಣ ಪಾತ್ರದ ಆಹಾರ್ಯವನ್ನೇ ತೆಗೆದುಕೊಳ್ಳೋಣ. ಬೃಹದಾಕಾರದ ಕೇಸರಿ ತಟ್ಟಿ ಎಂಬ ಕಿರೀಟವು ಪಾತ್ರಕ್ಕೆ ಸೌಂದರ್ಯವನ್ನು ಗಾಂಭೀರ್ಯವನ್ನು ಹಾಗೂ ಗಾತ್ರ ಪ್ರಾಮಾಣ್ಯವನ್ನು ಒದಗಿಸುತ್ತದೆ. ನೋಡಿದ ತಕ್ಷಣ ಹತ್ತು ತಲೆಗಳ ದೊಡ್ಡ ದೇಹವುಳ್ಳವನೆಂಬ ಕಲ್ಪನೆಯನ್ನು ಮೂರ್ತಗೊಳಿಸುವ ಸ್ವರೂಪದ ಶಿರೋಭೂಷಣ ಅದು. ಜೊತೆಗೆ ರಾಕ್ಷಸ ಸ್ವರೂಪಿ ಎಂಬುದನ್ನು ಶ್ರುತಪಡಿಸುತ್ತದೆ. ಆ ಪಾತ್ರದ ವೇಷಭೂಷಣಗಳು ನೋಡುವ ಕಣ್ಣುಗಳಿಗೆ ಸೌಂದರ್ಯವನ್ನು ಪ್ರತಿಬಿಂಬಿಸುವಂತಿದೆ. ಇವೆಲ್ಲವನ್ನು ಧರಿಸಿದ ಕಾರಣಕ್ಕೆ ಈತನೊಬ್ಬ ರಾಜ. ಸುವರ್ಣ ಲಂಕೆಯನ್ನೇ ನಿರ್ಮಿಸಿದ ಶ್ರೀಮಂತ ಸುಂದರ ಪುರುಷ. ಹಣೆಯಲ್ಲಿ ಶಿವಲಿಂಗದಾಕಾರದ ಬರವಣಿಗೆಯನ್ನು ನೋಡಿದಾಗ ಈತನೊಬ್ಬ ಶಿವಭಕ್ತ ಎಂಬ ಭಾವನೆಯನ್ನು ಹುಟ್ಟಿಸು ವಂತಿರುತ್ತದೆ. ಇಷ್ಟೆಲ್ಲ ಇದ್ದೂ ಔನ್ನತ್ಯವನ್ನು ಸಾಧಿಸಿದ ಪಾತ್ರ ತನ್ನ ಮನೋ ದೌರ್ಬಲ್ಯವೊಂದರ ಕಾರಣಕ್ಕಾಗಿ ಆಗುವ ಪತನದ ತೀವ್ರತೆಗೆ ಆಹಾರ್ಯ  ಪೂರಕವಾಗಿ ಒದಗಿಬರುತ್ತದೆ. ಪತನದ ಅನಿವಾರ್ಯ ಸ್ಥಿತಿಯಿಂದ ಪಾರಾಗಲು ಬೇಕಾದ ಎಲ್ಲಾ ಬಾಹ್ಯ ಭೌತಿಕ ಪರಿಸರಗಳು ರಾವಣನಿಗಿವೆ. ಆದರೆ ಆಂತರಂಗಿಕವಾದ ದೃಢತೆ ಮಾತ್ರ ಶಿಥಿಲವಾಗಿದೆ ಎಂಬುದನ್ನು ತೀಕ್ಷ್ಣವಾಗಿ ಸಂವಹನಗೊಳಿಸುವುದು ಸಾಧ್ಯ. ಸಾಮಾನ್ಯ ವ್ಯಕ್ತಿ ಬೀಳುವು ದಕ್ಕೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಬೀಳುವುದಕ್ಕೂ ತುಂಬಾ ಅಂತರವಿದೆ. ಸಾಮಾನ್ಯ ವ್ಯಕ್ತಿಯ ಬೀಳುವಿಕೆ ಗಿಂತಲೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಬೀಳುವಿಕೆ ಹೆಚ್ಚು ಪರಿಣಾಮಕಾರಿಯಾದುದು. ಆಡು ಬಿದ್ದರೆ ಸುದ್ದಿಯಾಗಲಾರದು. ಆನೆ ಬಿದ್ದರೆ ಸುದ್ದಿಯಾಗುವಂತೆ ಇದರ ಪರಿಣಾಮವಿರುತ್ತದೆ. ಪಾತ್ರದ ಒಟ್ಟು ವ್ಯಕ್ತಿತ್ವ ವನ್ನು ಪ್ರತಿಪಾದಿಸುತ್ತಾ ಆ ಪಾತ್ರವು ಸಾಂದರ್ಭಿಕವಾಗಿ ಪ್ರಕಟಪಡಿಸುವ ಸ್ವಭಾವ ಸಾಧ್ಯತೆಗಳ ಕಡೆಗೆ ಆಹಾರ್ಯವು ಪೂರಕವಾಗಿಯೇ ಅರ್ಥವತ್ತಾಗುತ್ತದೆ. ಹಾಗಾಗಿಯೇ ಪತನಮುಖಿ ಯಾದ ಪಾತ್ರಗಳಿಗೆ ಯಕ್ಷಗಾನದಲ್ಲಿ ತೀವ್ರ ಸ್ವರೂಪದ ಚಟುವಟಿಕೆ ಇರುತ್ತದೆ. ಅಗಾಧವಾದ ವೇಷವಿಧಾನವಿರುತ್ತದೆ. ಮನುಷ್ಯ ಸಹಜ ಅಂಗಾಂಗಗಳ ಆಕಾರವನ್ನು ಬೃಹತ್ತಾಗಿ ರೂಪಿಸುವ ಸಂಪ್ರದಾಯವನ್ನು ರೂಢಿಸಲಾಗಿದೆ. ಹಾಗಾಗಿ ಅಂತಹ ಪಾತ್ರಗಳಿಗೆ ಸಾಹಸ ಹೆಚ್ಚು, ಶಕ್ತಿ ಹೆಚ್ಚು, ಸೌಂದರ್ಯ ಹೆಚ್ಚು ಜೊತೆಗೆ ಗಾತ್ರವೂ ಹೆಚ್ಚು. ಈ ಹೆಚ್ಚುಗಾರಿಕೆಯ ಆದರ್ಶದ ಮೂಲಕವೇ ಸಂದೇಶವನ್ನು ಸೌಂದರ್ಯಾತ್ಮಕವಾಗಿ ಸಂವಹನಗೊಳಿಸುವುದು ಕಲೆಯ ಸಾರ್ವಕಾಲಿಕವಾದ ಗುಣ.

. ಯಕ್ಷಗಾನ ಆಹಾರ್ಯವು ನೈತಿಕ ಸಂದೇಶಗಳನ್ನು ಸಂವಹನಗೊಳಿಸುತ್ತದೆ.

ಯಕ್ಷಗಾನದ ಎಲ್ಲ ಪಾತ್ರಗಳು ವಾಸ್ತವ ಜಗತ್ತಿಗಿಂತ ಉನ್ನತ ಸ್ಥರದಲ್ಲಿರುವವುಗಳು. ಅವುಗಳನ್ನು ಯಾವ ನೆಲೆಯಿಂದ ನೋಡಿದರೂ ಸಾಮಾಜಿಕರಿಗಿಂತ ಎತ್ತರದಲ್ಲಿಯೇ ಇರುವವು. ಒಂದು ಆದರ್ಶ ಸ್ಥಿತಿಯನ್ನು ಪ್ರತಿನಿಧಿಸುವ ಅವುಗಳ ಜೀವನ ವ್ಯವಹಾರಗಳು ಮಾನವರ ಕುತೂಹಲದ ಸಂಗತಿಗಳಾಗಿವೆ. ಅತಿಮಾನುಷ ವೆನ್ನುವ ಈ ಪಾತ್ರಗಳ ಬದುಕಿನ ಏರಿಳಿತಗಳೆಲ್ಲ ನೋಡುಗರಿಗೆ ನೈತಿಕವಾದ ಸಂದೇಶವನ್ನು ಸಾರುತ್ತಿರುತ್ತವೆ. ಅಲ್ಲಿನ ಪಾತ್ರಗಳ ಬದುಕಿನ ಔನ್ನತ್ಯವು ಸುಕೃತಗಳ ಫಲರೂಪವಾದುದು. ಅವುಗಳ ಪತನವು ಯಾವುದೋ ಕೆಟ್ಟ ಘಳಿಗೆಯ ಮನೋದೌರ್ಬಲ್ಯದ ಕಾರಣದಿಂದಾದುದು ಎಂಬ ಸಾಮಾನ್ಯ ತಿಳುವಳಿಕೆ ಯನ್ನು ನೀಡುವುದು ಕೂಡಾ ಕಲೆಯ ಸೌಂದರ್ಯದ ಮೂಲಕವೇ ಆಗಿದೆ. ಇಲ್ಲಿನ ಪಾತ್ರಗಳ ಸೌಂದರ್ಯಕ್ಕೆ ಪೂರಕವಾದ ಆಭರಣಗಳು, ವೇಷಪರಿಕರಗಳು ರಚನೆ ದೃಷ್ಟಿಯಿಂದ ಒಂದೇ ವಸ್ತುವಿನಿಂದ ರಚಿಸಿದ್ದಾಗಿರಬಹುದು. ಆದರೆ ಅವು ಆಭರಣಗಳಾಗಿ ಪಾತ್ರಗಳ ದೇಹದ ವಿವಿಧಾಂಗಗಳಲ್ಲಿ ಧರಿಸಿದಾಗ ಅವುಗಳಿಗೆ ಸೌಂದರ್ಯದ ಜೊತೆಗೆ ಅಪಾರವಾದ ಮೌಲ್ಯವು ಪ್ರಾಪ್ತವಾಗುತ್ತದೆ.

. ಯಕ್ಷಗಾನ ಆಹಾರ್ಯವು ಅವಾಸ್ತವ ನೆಲೆಯ ಸೃಷ್ಟಿಯಾಗಿದೆ.

ಯಕ್ಷಗಾನದ ವೇಷಗಳು ವಾಸ್ತವ ನೆಲೆಯಿಂದ ರೂಪುಗೊಂಡವುಗಳಲ್ಲ. ಅವೆಲ್ಲ ಸ್ವಭಾವಕ್ಕೆ ಅನುಗುಣ ವಾದ ಬಣ್ಣ, ವೇಷವಿಧಾನಗಳಿಂದ ಮೈ ಪಡೆದವುಗಳು. ಅವುಗಳಿಗೆ ನಿರ್ದಿಷ್ಟವಾದ ಆಹಾರ್ಯವನ್ನು ಸೃಷ್ಟಿ ಸಿರುವುದು ಕಲೆಯ ಚೌಕಟ್ಟಿನ ಪರಿಧಿಯಲ್ಲಿಯೇ ಹೊರತು ಪಾತ್ರಗಳ ಪರಿಸರದ ವಾಸ್ತವ ಪ್ರಪಂಚವನ್ನು ಲಕ್ಷ್ಯದಲ್ಲಿಟ್ಟುಕೊಂಡು ಅಲ್ಲ. ಹಾಗಾಗಿ ಶ್ರೀರಾಮ, ಅರ್ಜುನ ಮೊದಲಾದ ಪಾತ್ರಗಳು ವನವಾಸದಲ್ಲಿದ್ದಾಗ ಸನ್ಯಾಸಿಗಳಂತೆ ಯಕ್ಷಗಾನ ರಂಗಸ್ಥಳದಲ್ಲಿ ಪ್ರಕಟವಾಗಬಾರದು. ಕವಿಗಳು ಕಾವ್ಯಗಳಲ್ಲಿ ಜಟಾವಲ್ಕಲಧಾರಿ ಯಾಗಿದ್ದರೆಂದು ಹೇಳಿದರೆ ಅದು ಪಾತ್ರಗಳ ಕ್ರಿಯೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳಿದ್ದಾ ಗಿರಬಹುದು. ಅದರ ಜೊತೆಗೆ ಪಾತ್ರಗಳ ಸ್ವಭಾವಗಳನ್ನು ಕೂಡ ದೃಷ್ಟಿಯಲ್ಲಿಟ್ಟು ಕೊಂಡಿರಬಹುದು.

. ಯಕ್ಷಗಾನ ಆಹಾರ್ಯದಲ್ಲಿ ಸಮುದಾಯದ ತಿಳುವಳಿಕೆಯ ಹೂರಣವಿದೆ.

ಇವೆಲ್ಲವುಗಳಿಗಿಂತ ಯಕ್ಷಗಾನದ ಆಹಾರ್ಯವು ಸಮಕಾಲೀನ ಪ್ರಸ್ತುತವಾಗುವುದು ಅದು ಸಮುದಾಯದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತವೆ ಎಂಬ ಕಾರಣಕ್ಕೆ. ಯಕ್ಷಗಾನದ ಆಹಾರ್ಯದ ಯಾವುದೇ ಅಂಶವನ್ನು ತೆಗೆದುಕೊಂಡರೂ ಪ್ರತಿಯೊಂದು ಕೂಡ ಸಾಮುದಾಯಕ ತಿಳುವಳಿಕೆಯ ಭಾಗವಾಗಿಯೇ ಅವು ಇಂದಿಗೂ ಉಳಿದುಕೊಂಡು ಬಂದಿವೆ ಎಂಬುದು ವ್ಯಕ್ತವಾಗುತ್ತದೆ. ಆಹಾರ್ಯದ ಅಂತಿಮ ಗುರಿ ಸೌಂದರ್ಯಾತ್ಮಕವಾದ ಸಂದೇಶವನ್ನು ಸಂವಹನಗೊಳಿಸುವುದೇ ಆಗಿರಬಹುದು. ಹಾಗಾದಾಗ ಕೂಡ ಯಕ್ಷಗಾನದ ಆಹಾರ್ಯವು ನಿರ್ದಿಷ್ಟ ಸಮುದಾಯವೊಂದು ಕಾಲಾನುಗುಣವಾಗಿ ರೂಪಿಸಿಕೊಂಡ ತಿಳುವಳಿಕೆಯ ಭಾಗವಾಗಿದೆ. ಮುಖದ ರೇಖೆಗಳು, ಬಣ್ಣಗಳು ಸಂಕೇತಿಸುವ ಅರ್ಥದ ನೆಲೆಯಲ್ಲಿ ಇವುಗಳನ್ನು ತಿಳಿದುಕೊಳ್ಳಬಹುದು. ಅಲ್ಲದೆ ಇಲ್ಲಿ ಮುಖ್ಯವಾಗಿ ಭಕ್ತಿಪಂಥಗಳ ಸಂಬಂಧವಾದ ಅನೇಕ ವಿವರಗಳು ಯಕ್ಷಗಾನದ ಆಹಾರ್ಯದಲ್ಲಿ ಜಾಗ ಪಡೆದುದನ್ನು ಗಮನಿಸಬಹುದು.

೧೦. ಯಕ್ಷಗಾನ ಆಹಾರ್ಯವು ಭಕ್ತಿಯ ಭದ್ರ ನೆಲೆಗಟ್ಟುಗಳಾಗಿವೆ.

ಯಕ್ಷಗಾನವು ನಾಗಾರಾಧನೆ, ಬೌದ್ಧಪಂಥ, ಅದ್ವೈತ, ಮಾಧ್ವ, ವೈದಿಕ, ಭಾಗವತ ಪಂಥಗಳ ವಿವಿಧ ಸ್ವಭಾವಗಳು ಯಕ್ಷಗಾನದ ಆಹಾರ್ಯದಲ್ಲಿ ಸೇರಿಕೊಂಡಿವೆ. ನಿರ್ದಿಷ್ಟ ಭಕ್ತಿ ಪಂಥಗಳ ನೆಲೆಯಿಂದ ಮಾತ್ರ ಶೋಧಿಸುತ್ತಾ ಹೋದರೂ ಅವುಗಳನ್ನು ಪೋಷಿಸುವ ಪೂರಕ ಕುರುಹುಗಳು ಯಕ್ಷಗಾನದ ಆಹಾರ್ಯದಲ್ಲಿ ಇವೆ. ಆಯಾ ಭಕ್ತಿ ಪಂಥಗಳು ತಮ್ಮ ಸಂದೇಶವನ್ನು ಪ್ರಕಟಿಸುವ ಸಲುವಾಗಿ ಯಕ್ಷಗಾನವನ್ನು ಬಳಸಿ ಕೊಂಡುದರ ಪರಿಣಾಮವಿದು. ಇವು ತನ್ನ ಕಾಲದ ಅಗತ್ಯಗಳಿಗೆ ಕಲೆ ಪೂರಕವಾಗಿ ಪ್ರತಿಸ್ಪಂದಿಸುವುದರ ಸ್ಪಷ್ಟ ನಿದರ್ಶನಗಳಾಗಿವೆ. ಈ ಕಾರಣಕ್ಕಾಗಿಯೇ ಯಕ್ಷಗಾನವು ಕಾಲ, ದೇಶವನ್ನು ಮೀರಿ ಮನುಷ್ಯ ಮನಸ್ಸನ್ನು ಸೂರೆಗೊಳ್ಳುತ್ತವೆ.

೧೧. ಯಕ್ಷಗಾನ ಆಹಾರ್ಯವು ಅಲೌಕಿಕ ಜಗತ್ತಿನ ಅನಾವರಣವನ್ನು ಮಾಡುತ್ತದೆ.

ಯಕ್ಷಗಾನವು ಅಲೌಕಿಕ ಜಗತ್ತಿನ ಅನಾವರಣಕ್ಕಾಗಿಯೇ ಸೃಷ್ಟಿಯಾದ ಕಲಾ ಮಾಧ್ಯಮ. ಇದರ ಮೂಲಕ ಪೌರಾಣಿಕ ಲೋಕದ ಪಾತ್ರಗಳ ಸಂಘರ್ಷವನ್ನು ಜೀವನ ಮೌಲ್ಯಗಳ ಪುನರ್ ವ್ಯಾಖ್ಯಾನಗಳನ್ನು, ಪಾರಂಪರಿಕ ಬದುಕಿನ ಕುರುಹುಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ಯಕ್ಷಗಾನ ಎಂದೂ ಸಮಕಾಲೀನ ಸಾಮಾಜಿಕ ಸಂಗತಿಗಳ ಪ್ರತಿಪಾದನೆಗೆ ಮೀಸಲಾದ ಕಲೆಯಲ್ಲ. ಅದಕ್ಕೆ ಇತರ ಅನೇಕ ಕಲಾ ಮಾಧ್ಯಮಗಳಿವೆ. ಪುರಾಣೇತರವಾದ ವಸ್ತುಗಳು ಯಕ್ಷಗಾನ ಪ್ರಸಂಗಗಳಲ್ಲಿ ಅಪ್ರಸ್ತುತವೇ ಆಗುತ್ತವೆ. ಈಗಾಗಲೇ ಅನೇಕ ಪ್ರಸಂಗಗಳ ಮೂಲಕ ಆಧುನಿಕ ವಸ್ತುಗಳು ಯಕ್ಷಗಾನವನ್ನು ಪ್ರವೇಶಿಸಿವೆ. ಆ ಮೂಲಕ ಆಧುನಿಕ ಪಾತ್ರಗಳು ಯಕ್ಷರಂಗದಲ್ಲಿ ಹುಟ್ಟಿಕೊಂಡಿವೆ. ಆದರೆ ಇಲ್ಲಿ ಯಕ್ಷಗಾನದ ಅಲೌಕಿಕವಾದ ಆಹಾರ್ಯದ ವೈಭವವು ಲುಪ್ತವಾಗಿದೆ. ಯಕ್ಷಗಾನದ ಆಹಾರ್ಯವನ್ನು ಗಮನಿಸಿದರೆ ಪೌರಾಣಿಕವಲ್ಲದ ವಸ್ತು ಅದಕ್ಕೆ ಒಗ್ಗದು. ಯಕ್ಷಗಾನದ ಕಲಾತ್ಮಕ ಚೌಕಟ್ಟು ಅದು ಪ್ರತಿಪಾದಿಸುವ ಆಶಯ, ಹಾಗೂ ಅದರ ಅಭಿವ್ಯಕ್ತಿಯ ಶೈಲಿ ಇತ್ಯಾದಿ ಎಲ್ಲವನ್ನೂ ಗಮನಿಸಿದರೆ ಅದೊಂದು ಅತಿಮಾನುಷ ಶಕ್ತಿಗಳ ವಿಹಾರ ಲೋಕವೆಂಬುದು ಸುವ್ಯಕ್ತ ವಾಗುತ್ತದೆ. ಯಕ್ಷಗಾನದ ಪ್ರತಿಯೊಂದು ಅಭಿನಯಾಂಗಗಳು ರೂಪುಗೊಂಡಿರುವುದು ಅಲೌಕಿಕ ವ್ಯಕ್ತಿಗಳ ಅಲೌಕಿಕವಾದ ವ್ಯವಹಾರಗಳ ನಿರೂಪಣೆಗಾಗಿ. ಈ ಕಾರಣದಿಂದಲೇ ಯಕ್ಷಗಾನದ ವಸ್ತು, ತಂತ್ರ, ಶೈಲಿ ಇಲ್ಲೆಲ್ಲ ಒಂದು ತೆರನ ಹೊಂದಾಣಿಕೆ ಇದೆ. ಅಭಿನಯದ ಯಾವುದೇ ಅಂಗದಲ್ಲಿ ಲೋಪವಾದರೂ ಕಲೆಯ ಸಮತೋಲನ ಕೆಡುತ್ತದೆ. ಆಧುನಿಕವಾದ ಯಾವುದೇ ಆಶಯದ ನಿರೂಪಣೆಗೆ ಯಕ್ಷಗಾನದ ಗಂಭೀರ ಶೈಲಿಯ ಅಗತ್ಯವಿರುವುದಿಲ್ಲ.

೧೨. ಯಕ್ಷಗಾನ ಆಹಾರ್ಯವು ಮಾನವೀ ಸಂವೇದನೆಯ ಭಾಗವಾಗಿದೆ

ಯಕ್ಷಗಾನದ ಆಹಾರ್ಯವು ಆಧುನಿಕ ಆಶಯದಿಂದ ಕೂಡಿರದಿದ್ದರೂ ಅದು ಮಾನವೀಯ ಸಂವೇದನೆಯ ಭಾಗವಾಗಿ ಸಮಕಾಲೀನ ಪ್ರಸ್ತುತವೇ ಆಗಿದೆ. ಇಲ್ಲಿನ ಸೃಜನಶೀಲ ಆಶಯ ಯಕ್ಷಗಾನದ ಅಭಿನಯಾಂಗಗಳ ಮೂಲಕ ಸಮಕಾಲೀನವಾಗಿ ಪ್ರಕಟ ಗೊಳ್ಳುತ್ತಲೇ ಇರುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ. ಪ್ರತಿಯೊಂದು ಅಂಗಗಳಲ್ಲೂ ಸಮಕಾಲೀನ ಪ್ರಸ್ತುತಗೊಳ್ಳುವ ಸೃಜನಶೀಲ ಸ್ಪಂದನವನ್ನು ಕಾಣಬಹುದು. ಮಾನವ ಹೃದಯವನ್ನು ತಟ್ಟುವ ಆ ಮೂಲಕ ರಸಾಸ್ವಾದನೆಗೆ ಆಸ್ಪದ ಮಾಡಿಕೊಡುವ ಸೃಷ್ಟಿಶೀಲ ಸ್ವಭಾವ ಯಕ್ಷಗಾನವನ್ನು ಸಾರ್ವಕಾಲಿಕಗೊಳಿಸಿದೆ ಮತ್ತು ಸಾರ್ವತ್ರಿಕಗೊಳಿಸಿದೆ. ಕಲೆಯ ಗುರುತನ್ನು ಉಳಿಸಿಕೊಂಡೇ ಸೃಜನಶೀಲವಾಗಿ ಸಾಗಿಬಂದ ಯಕ್ಷಗಾನ ಪರಂಪರೆಗೆ ಎಲ್ಲಾ ಕಾಲದ ಸಹೃದಯರನ್ನು ಆಕರ್ಷಿಸುವ ಅಗಾಧವಾದ ಶಕ್ತಿ ಇದೆ. ಈ ಶಕ್ತಿಯನ್ನು ಕಲೆಗೆ ಕೊಡಮಾಡುವಲ್ಲಿ ಅನೇಕಾನೇಕ ಸೃಜನಶೀಲ ಪ್ರತಿಭೆಗಳ ಕೊಡುಗೆಯಿದೆ. ಹಲವು ತಲೆಮಾರುಗಳು ಪರಂಪರಾಗತವಾಗಿ ಕ್ರೋಡೀಕರಿಸಿಕೊಂಡು ಬಂದ ಸಾಂಸ್ಕೃತಿಕ ಉತ್ಪನ್ನಗಳಾಗಿವೆ. ಇವು ಕಲೆಯನ್ನು ಜೀವನ ಸ್ಪಂದಿಯಾಗಿ ಉಳಿಸಿಕೊಳ್ಳುವಲ್ಲಿ ನೆರವಾಗಿವೆ.

೧೩. ಯಕ್ಷಗಾನ ಆಹಾರ್ಯವು ಕಲಾವಿದರ ಸೃಜನಶೀಲ ಪ್ರತಿಭೆಯ ಸೃಷ್ಟಿಗಳು.

ಯಕ್ಷಗಾನವು ಅತಿಮಾನುಷ ಪಾತ್ರಗಳಿಗೆ ಪೌರಾಣಿಕ ಕಾವ್ಯ ವಸ್ತುಗಳನ್ನು ಆಶ್ರಯಿಸಿದೆ. ರಾಮಾಯಣ, ಮಹಾಭಾರತ, ಭಾಗವತಾದಿ ವಸ್ತುಗಳನ್ನು ಆಧರಿಸಿಯೇ ಯಕ್ಷಗಾನ ಪ್ರಸಂಗಗಳು ಸೃಷ್ಟಿಯಾಗಿವೆ. ಅಲ್ಲಿನ ಆಶಯಗಳು, ಬರುವ ಪಾತ್ರಗಳು, ಅವು ಮುಂದಿಡುವ ಮೌಲ್ಯಗಳು ಇತ್ಯಾದಿಗಳೆಲ್ಲ ಯಕ್ಷಗಾನದ ಮೂಲಕವೇ ನಿರಂತರ ಪುನರ್ ಸೃಷ್ಟಿಗೊಂಡು ಪ್ರೇಕ್ಷಕರನ್ನು ತಲುಪಿವೆ. ಸಾಂಸ್ಕೃತಿಕ ಐಕ್ಯದ ಸಂದೇಶವನ್ನು ಸಾರುವ ಕಾವ್ಯಗಳನ್ನು ಆಧರಿಸಿದ ಕಲೆಗಳು ಭಾಷೆ, ದೇಶಗಳ ಎಲ್ಲೆಗಳನ್ನು ಮೀರಿ ಜನಾದರವನ್ನು ಗಳಿಸುತ್ತವೆ. ಸಂಸ್ಕೃತಿಯ ಪ್ರಸಾರದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಈಗಾಗಲೇ ಸಂಸ್ಕೃತಿಯ ಭಾಗ ವಾಗಿರುವ ಪೌರಾಣಿಕ ಪಾತ್ರಗಳ ಮೂಲಕ ಕಲಾವಿದರು ಯಕ್ಷಗಾನದ ಆಹಾರ್ಯದಲ್ಲಿ ತಮ್ಮ ಸೃಜನಶೀಲ ಗುಣವನ್ನು ಮೆರೆದು ಸಹೃದಯರ ರಸಾನುಭವಕ್ಕೆ ಕಾರಣವಾಗುತ್ತಾರೆ. ಒಂದು ಪಾತ್ರದ ಸ್ವಭಾವ, ವರ್ತನೆ, ಗುಣ ಎಲ್ಲವೂ ಕಲಾವಿದರಿಂದ ಕಲಾವಿದರಿಗೆ ಭಿನ್ನವಾಗುತ್ತವೆ. ಕಾಲದಿಂದ ಕಾಲಕ್ಕೆ ಬೇರೆಯಾಗುತ್ತವೆ. ಆ ಮೂಲಕ ವೈವಿಧ್ಯಗಳಿಗೆ, ಹೊಸತನಗಳಿಗೆ ಕಾರಣವಾಗುವ ಯಕ್ಷಗಾನ ನಿತ್ಯ ನೂತನವಾಗಿಯೇ ಇರುತ್ತದೆ.

೧೪. ಯಕ್ಷಗಾನ ಆಹಾರ್ಯವು ಸಮಕಾಲೀನ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ.

ಕಾಲದೊಡನೆ ಚಲಿಸುತ್ತಾ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಕಲಾವಿದರ ಪ್ರತಿಭಾ ಸಾಮರ್ಥ್ಯವೇ ಕಲೆಯ ಬದಲಾವಣೆಗಳಿಗೆ ಕಾರಣವಾಗುತ್ತಿರುತ್ತವೆ. ಕಲೆ ಕಾಲದ ಸಂವೇದನೆಗಳಿಗೆ ಅನುಗುಣವಾಗಿ ಬದಲಾಗುತ್ತಲೋ, ಪರಿಷ್ಕಾರಗೊಳ್ಳುತ್ತಲೋ ಇರುತ್ತದೆ. ಕಲಾತ್ಮಕವಾದ ಚೌಕಟ್ಟಿನ ಒಳಗಡೆಯೇ ಅನೇಕ ಬದಲಾವಣೆಗಳು ನಡೆದ ಕಾರಣಕ್ಕೆ ಅವು ಸಮಕಾಲೀನ ಪ್ರಸ್ತುತಗೊಂಡು ಇಂದಿಗೂ ತಮ್ಮ ಗಾಂಭೀರ್ಯವನ್ನು ಉಳಿಸಿಕೊಂಡಿವೆ. ಯಕ್ಷಗಾನದ ಎಲ್ಲಾ ಅಂಗಗಳಲ್ಲೂ ಈ ಪರಿವರ್ತನೆ ಕಾಣಿಸಿಕೊಂಡಿದೆ. ವೇಷಭೂಷಣ  ಗಳಲ್ಲಿ ಬಳಸುತ್ತಿದ್ದ ಅನೇಕ ಮರದ ಸಾಮಗ್ರಿಗಳ ಜಾಗದಲ್ಲಿ ಆಧುನಿಕ ಅಲ್ಯುಮಿನಿಯಂ, ಪ್ಲಾಸ್ಟಿಕ್ ವಸ್ತುಗಳು ಬಳಕೆಗೆ ಬಂದುದನ್ನಾಗಲಿ, ಹತ್ತಿ ಬಟ್ಟೆಯ ಬದಲಿಗೆ ಬಂದ ನೈಲಾನ್ ಬಟ್ಟೆಗಳಾಗಲಿ, ಉಲ್ಲನ್‌ಗಳಾಗಲಿ ಎಲ್ಲವೂ ಕಾಲಗತಿಗೆ ಅನುಗುಣವಾಗಿ ಬಂದವುಗಳೇ ಆಗಿವೆ. ಒಂದು ಕಾಲದಲ್ಲಿ ಕಾಡಿನಲ್ಲಿ ಲಭ್ಯವಾಗುವ ವಿವಿಧ ವರ್ಣಗಳ ಹೂವುಗಳನ್ನು ಇನ್ನಿತರ ಪರಿಕರಗಳನ್ನು ಬಳಸಿ ವೇಷಗಳ ಅಲಂಕಾರವನ್ನು ಮಾಡಿಕೊಳ್ಳುತ್ತಿದ್ದರು. ಇಂದು ವೇಷಗಳ ರಚನೆಗೆ ಅಗತ್ಯವಾದ ಹೂವುಗಳ ಲಭ್ಯತೆಯಾಗಲಿ ಅಥವಾ ಅವು ಪ್ರದರ್ಶನ ಗೊಳ್ಳಬೇಕಾದ ಸ್ಥಳ ಹಾಗೂ ಬೆಳಕಿನ ಮುಂದೆ ತೀರಾ ಅಪ್ರಸ್ತುತವೇ ಆಗಿಬಿಡುತ್ತವೆ. ಈ ಕಾರಣಕ್ಕಾಗಿ ಕಲೆಯು ತಾನು ಹುಟ್ಟಿದ ಕಾಲ, ಸಂದರ್ಭ ಮತ್ತು ಸ್ವರೂಪ ಇವುಗಳನ್ನು ಮೀರಿ ಬೆಳೆಯಬೇಕಾದ ಅವಶ್ಯಕತೆ ಇರುತ್ತದೆ. ಸಮಕಾಲೀನ ಪ್ರಸ್ತುತವಾಗುವಂತೆ ಮತ್ತು ಸಮಕಾಲೀನ ಮೌಲ್ಯಗಳ ಮೂಲಕ ಕಲೆ ಸಂವಹನ ಗೊಳ್ಳಬೇಕಾದ ಅನಿವಾರ್ಯತೆ ಜೀವಂತ ಕಲೆಗೆ ಮುಖ್ಯವಾಗುತ್ತದೆ.

ಆಹಾರ್ಯಕ್ಕೂ ಮತ್ತು ಪಾತ್ರಕ್ಕೂ ಇರುವ ಸಂಬಂಧ ಕೇವಲ ಆಕಸ್ಮಿಕವಾದುದಲ್ಲ. ಮೊದಲನೆಯದಾಗಿ ಅದು ಕಲೆಯ ಮಾಧ್ಯಮದ ಚೌಕಟ್ಟಿಗೆ ಬದ್ಧವಾದುದು. ಎರಡನೆಯ ದಾಗಿ ಅದು ಸಮಕಾಲೀನ ಮೌಲ್ಯಗಳ ನೆಲೆಯಿಂದ ಅರ್ಥವತ್ತಾದುದು. ಮಾಧ್ಯಮದ ಚೌಕಟ್ಟು ಯಾವತ್ತೂ ಕೂಡ ಅದು ಆಶಯಕ್ಕೆ ಅನುಗುಣವಾಗಿ ಶಿಥಿಲವಾಗತಕ್ಕದ್ದಲ್ಲ. ಕಲೆಯ ಶೈಲಿಗೆ, ಗಾಂಭೀರ್ಯಕ್ಕೆ ಪೂರಕವಾದ ಆಶಯಗಳನ್ನು ಮಾತ್ರ ಯಕ್ಷಗಾನ ಸ್ವೀಕರಿಸಬೇಕಾದ್ದು ಬಹಳ ಮುಖ್ಯ. ಈ ನೆಲೆಯಲ್ಲಿ ಯಕ್ಷಗಾನಕ್ಕೆ ಪ್ರಾಪ್ತವಾಗುವ ಕಲಾ ಚೌಕಟ್ಟು ಪಾರಂಪರಿಕವಾದುದು ಮತ್ತು ಸನಾತನವಾದುದು. ಸಮಕಾಲೀನ ಮೌಲ್ಯಗಳ ನೆಲೆಯಲ್ಲಿ ಅರ್ಥವತ್ತಾಗುವ ಕಾರಣಕ್ಕಾಗಿಯೇ ಅರಸರಾದವರು ತೊಡುವ ವೇಷಭೂಷಣ ಗಳು ಆದರ್ಶವಾದವುಗಳು. ಹರಿದು ಜೋಲಾಡುವ ಒಂದು ತುಂಡು ವೇಷದಲ್ಲಿದ್ದರೂ ಅದು ಪಾತ್ರಕ್ಕೆ ಸಂಗತವಾಗುವುದಿಲ್ಲ. ಅರಮನೆಯ ಚಾರಕ ಕಿರೀಟ ಧರಿಸಿ ರಾಜನಂತೆ ವೇಷ ಧರಿಸಿ ಬಂದರೂ ಯಕ್ಷಗಾನದ ಪ್ರೇಕ್ಷಕರು ಅದನ್ನು ಸ್ವೀಕರಿಸುವ ಮನಸ್ಥಿತಿ ಇರುವುದಿಲ್ಲ. ಅಂತಹ ಕಡೆಗಳಲ್ಲಿ ರಸಾಸ್ವಾದನೆಗೆ ಆಹಾರ್ಯವೇ ಅಡ್ಡಿಯಾಗಬಹುದು. ಹಾಗಾಗಿಯೇ ಯಕ್ಷಗಾನದಲ್ಲೂ ವರ್ಗಾನುಸಾರಿಯಾದ ಆಹಾರ್ಯ ವಿಧಾನವಿರುತ್ತದೆ. ವೇಷಧಾರಣೆಯ ಮೂಲಕವೇ ಆಳು, ಅರಸ, ದಾಸಿ, ರಾಣಿ, ಮಂತ್ರಿ ಇತ್ಯಾದಿಗಳಲ್ಲೂ ಭೇದವನ್ನು ಉಳಿಸಿಕೊಳ್ಳಲಾಗಿದೆ. ಸಮಕಾಲೀನ ಮೌಲ್ಯಗಳ ಭಾಗವಾಗಿಯೇ ಇವು ಸಂದೇಶಗಳ ಸಂವಹನವನ್ನು ಮಾಡುತ್ತವೆ.

ಸಮಕಾಲೀನ ದಿನಗಳಲ್ಲಿಯೂ ಯಕ್ಷಗಾನದ ಆಹಾರ್ಯವು ಪ್ರೇಕ್ಷಕರಿಗೆ ಪ್ರಿಯವಾಗಲು ಅನೇಕ ಕಾರಣಗಳಿವೆ. ಅವುಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

೧. ಮನಸೆಳೆಯಬಲ್ಲ ಕಲಾತ್ಮಕ ಸೌಂದರ್ಯ

೨. ಸೃಜನಶೀಲ ಮನೋಧರ್ಮಕ್ಕೆ ಪ್ರಚೋದನೆ ನೀಡಬಲ್ಲ ಶಿಲ್ಪ ಕೌಶಲ್ಯ

೩. ಕಲ್ಪನೆಗೆ ಪೂರಕವಾಗುವ ಅಲೌಕಿಕ ಆದರ್ಶ

೪. ಸಮಕಾಲೀನ ಜೀವನ ವಿಧಾನಕ್ಕೆ ಪೂರಕವಾಗುವ ವಿನ್ಯಾಸ

೫. ಅಲೌಕಿಕವಾದ ಕಾಲ್ಪನಿಕ ಲೋಕದ ವೈಭವೀಕರಣ

೬. ಭಕ್ತಿಯ ನೆಲೆಯನ್ನು ಮೂರ್ತಗೊಳಿಸುವ ಸಂಕೇತಗಳು

೭. ಖಾಸಗಿ ವ್ಯಕ್ತಿತ್ವವನ್ನು ಮರೆಮಾಚುವ ಬಣ್ಣಗಾರಿಕೆ ಹಾಗೂ ವೇಷವಿಧಾನ

೮. ಭಯ, ಭಕ್ತಿ ಹಾಗೂ ಮನರಂಜನೆಯನ್ನು ನೀಡಬಲ್ಲ ಅಲೌಕಿಕ ಆಹಾರ್ಯದ ಚಿತ್ರಣ

೯. ನಿರ್ದಿಷ್ಟ ಪ್ರಸಂಗಗಳ ಸಂದರ್ಭಕ್ಕೆ ರಂಗಸ್ಥಳದಲ್ಲಿ ಪ್ರತ್ಯಕ್ಷವಾಗಿ ಮತ್ತೆ ಮಾಯವಾಗುವ ಪ್ರಾಚೀನ ಮೌಲ್ಯಗಳ ಪ್ರತಿನಿಧಿಗಳು

೧೦. ಯಜಮಾನ ಸಂಸ್ಕೃತಿಯ ಪೋಷಣೆ ಮತ್ತು ಶ್ರೇಣೀಕರಣ ವ್ಯವಸ್ಥೆಯ ಪಾಲನೆ

ಯಕ್ಷಗಾನದ ಆಹಾರ್ಯವನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುವ ಅಗತ್ಯ ಸಾಂಸ್ಕೃತಿಕವಾಗಿ ಬಹುಮುಖ್ಯವಾಗಿದೆ. ಅದಕ್ಕೆ ಈ ಕೆಳಗಿನ ಕಾರಣಗಳನ್ನು ಹೆಸರಿಸಬಹುದು.

೧. ಪ್ರಾಚೀನ ಕಲಾತ್ಮಕ ಸೌಂದರ್ಯದ ಸಂಕೇತಗಳಾಗಿವೆ.

೨. ಸಾಂಸ್ಕೃತಿಕ ಪಳೆಯುಳಿಕೆಗಳಾಗಿ ಪ್ರಾಚೀನ ದಾಖಲೆಗಳೆನಿಸಿವೆ.

೩. ಸೃಜನಶೀಲ ಕಲಾವಿದರ ಪ್ರತಿಭಾ ಕೌಶಲ್ಯದ ಜೀವಂತ ನಿದರ್ಶನಗಳಾಗಿವೆ.

೪. ನಿರ್ದಿಷ್ಟ ಕಲಾಮಾಧ್ಯಮವೊಂದರ ಗುರುತು (Identity)

೫. ನಿರ್ದಿಷ್ಟವಾದ ಚಿತ್ರಶಿಲ್ಪವಿದೆ.

೬. ಬಣ್ಣ, ಬೆಳಕುಗಳ ಅಪೂರ್ವ ಹೊಂದಾಣಿಕೆಯ ತಾಂತ್ರಿಕ ವಿವರಗಳ ಸೂಕ್ಷ್ಮಗಳಿವೆ.

೭. ವೇಷವಿಧಾನಗಳ ನಿರ್ದಿಷ್ಟ ಮಾತೃಕೆಗಳಾಗಿವೆ.

೮. ಸಾಂಸ್ಕೃತಿಕ ಸ್ಮಾರಕಗಳೆನಿಸಿವೆ.

೯. ಸಮಾಜಕ್ಕೆ ಸಾಂಸ್ಕೃತಿಕವಾದ ನಿರ್ದಿಷ್ಟ ಸಂದೇಶವನ್ನು ಸಾರುತ್ತವೆ.

೧೦. ಆನಂದವನ್ನು ನೀಡಬಲ್ಲ ಸೌಂದರ್ಯಪ್ರಜ್ಞೆಯ ಪ್ರತೀಕಗಳಾಗಿವೆ.

ಈ ಎಲ್ಲಾ ಕಾರಣಗಳಿಗಾಗಿ ಪ್ರಸ್ತುತ ಅಧ್ಯಯನಕ್ಕೆ ಸಮಕಾಲೀನವಾದ ಪ್ರಸಕ್ತಿ ಇದೆ ಎಂದು ಭಾವಿಸಲಾಗಿದೆ.