ಅಧ್ಯಯನದ ಉದ್ದೇಶ

ಪ್ರಸ್ತುತ ಅಧ್ಯಯನವು ಯಕ್ಷಗಾನದ ಆಹಾರ್ಯವನ್ನು ಸಾಂಸ್ಕೃತಿಕ ನೆಲೆಯಿಂದ ಅಧ್ಯಯನಕ್ಕೆ ಗುರಿಪಡಿಸಿದೆ. ಒಂದು ಸಂಸ್ಕೃತಿಯ ಉತ್ಪನ್ನವಾಗಿ, ಸಂಸ್ಕೃತಿಯ ಪ್ರತಿಬಿಂಬವಾಗಿ ಯಕ್ಷಗಾನದ ಆಹಾರ್ಯ ಯಾವ ಯಾವ ಅರ್ಥಸಾಧ್ಯತೆಗಳತ್ತ ತೆರೆದುಕೊಂಡಿದೆ? ಯಾವ ಕಾಲಘಟ್ಟದ ಕಲಾವಿದರ ಸೃಜನಶೀಲತೆಗೆ ಇಂಬು ನೀಡಿದೆ ಎಂಬಿವುಗಳನ್ನು  ಕಂಡುಕೊಳ್ಳು ವುದರ ಮೂಲಕ ಕಲೆ, ಸಂಸ್ಕೃತಿ ಮತ್ತು ಮನುಷ್ಯರ ಮೂಲ ಸಂಬಂಧವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಭಾರತೀಯ ಸಂದರ್ಭದಲ್ಲಿ ಎಲ್ಲ ಕಲೆಗಳಿಗೂ ಧಾರ್ಮಿಕ ಹಿನ್ನೆಲೆಯಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಧಾರ್ಮಿಕ ಹಿನ್ನೆಲೆ ಇದ್ದಾಗಲೂ ಸಹ ಕಲೆಯು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿಯೇ ನಿಂತುಕೊಳ್ಳುವುದಿಲ್ಲ. ಅದನ್ನು ಮೀರಿ ಮನರಂಜನೆ, ಕುತೂಹಲ, ಆಸಕ್ತಿಗಳು ಕಲೆಯ ಒಳಗಡೆ ಸಾಮರ್ಥ್ಯಾನುಸಾರ ಸೇರಿಕೊಳ್ಳುತ್ತವೆ. ಇವುಗಳನ್ನು ಒಟ್ಟಾಗಿ ಕಲಾತ್ಮಕ ದೃಷ್ಟಿಕೋನವೆಂದೂ ಹೆಸರಿಸಬಹುದು. ಮಾನವನ ಸೃಜನಶೀಲ ಮನಸ್ಸು ತನ್ನ ಪರಿಸರದ ಕಲೆಯೊಂದರ ಜೀವಂತ ಪ್ರಕ್ರಿಯೆಯ ಜತೆಗೆ ಅನುಸಂಧಾನವನ್ನು ಮಾಡುತ್ತಿರುತ್ತದೆ. ಆಗೆಲ್ಲ ಜೀವಂತವಾದ ಕಲೆಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಲೇ ಹೋಗುತ್ತವೆ. ಯಕ್ಷಗಾನದ ಮಟ್ಟಿಗೂ  ನಿಜ. ನಿರಂತರವಾದ ಪ್ರಯೋಗಗಳು ಕಾಲದ ಈ ಮಾತು ಸೆಳೆತಕ್ಕೆ ಸಿಲುಕಿಯೋ ಅಥವಾ ಅನಿವಾರ್ಯತೆಗೆ ಸಿಲುಕಿಯೋ ತನ್ನ ರೂಪವನ್ನು ಬದಲು ಮಾಡಿಕೊಳ್ಳುತ್ತಿರುತ್ತವೆ. ಈ ಬದಲಾವಣೆಗೆ ಸಂಸ್ಕೃತಿಯ ಅನೇಕ ಸಂಗತಿಗಳು ಸೇರಿಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಒಂದು ಕಲಾಂಗದ ಅಧ್ಯಯನವು ಒಂದು ಸಾಂಸ್ಕೃತಿಕ ಕಲೆಯ ಇತಿಹಾಸದ ಅಧ್ಯಯನವೂ ಆಗಿರುತ್ತದೆ.

ಸಾಮಾನ್ಯ ಪಾರಂಪರಿಕ ಕಲೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವಾಗ ಕಲೆಗಳ ಎಲ್ಲಾ ಅಂಗಗಳಲ್ಲೂ ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಬಹುದು. ಮೊದಲನೆಯ ಹಂತ ಸೃಜನಶೀಲತೆಯ ಹಂತ. ಎರಡನೆಯದು ಪರಿವರ್ತನೆಯ ಹಂತ. ಮೂರನೆಯದು ಸಮಕಾಲೀನ ವಸ್ತುಸ್ಥಿತಿಯ ಹಂತ. ಮೊದಲನೆಯ ಹಂತದಲ್ಲಿ ಕಲೆಯಾಗಲೀ, ಕಲೆಗೆ ಸಂಬಂಧಿಸಿದ ಆಹಾರ್ಯವಾಗಲೀ ಕಲಾವಿದನ ಸೃಜನಶೀಲತೆಯ ಭಾಗವಾಗಿ ರೂಪು ಗೊಳ್ಳುತ್ತಿತ್ತು. ಈ ಸೃಜನಶೀಲತೆಯು ಯಾವುದೋ ಒಂದು ತುರ್ತಿನ ಕಾರಣಕ್ಕಾಗಿ ರೂಪುಗೊಂಡಿರಬಹುದು. ಕೆಲವು ವೇಳೆ ಸಾಂದರ್ಭಿಕ ಅಗತ್ಯಗಳಾಗಿಯೂ ರೂಪು ಪಡೆದಿರ ಬಹುದು. ಇಲ್ಲಿ ವ್ಯಕ್ತಿಗೆ ವೈಯಕ್ತಿಕವಾದ ತುರ್ತು ಅಥವಾ ಸಾಮಾಜಿಕವಾದ ತುರ್ತು ಸೃಜನಶೀಲ ಮನಸ್ಸನ್ನು ಕೆರಳಿಸಿರುವ ಸಾಧ್ಯತೆಯೂ ಇದೆ. ಹೀಗೆ ಕೆರಳಿಸಿದ ಸಂದರ್ಭದಲ್ಲಿ ಕಲ್ಪನೆಗೆ ನಿಲುಕಿದ ನಿರ್ದಿಷ್ಟ ರೂಪವೊಂದನ್ನು ಧಾರಣೆ ಮಾಡುವ ಪ್ರಯತ್ನವನ್ನು ಕಲಾವಿದ ಮಾಡುತ್ತಿರುತ್ತಾನೆ. ಇಲ್ಲಿ ಎಲ್ಲಾ ಸಂದರ್ಭದಲ್ಲಿಯೂ ಸೃಜನಶೀಲ ಮನಸ್ಸೇ ತುಡಿದಿದೆ ಎಂದು ಹೇಳುವಂತಿಲ್ಲ. ಅನೇಕ ವೇಳೆ ಅನುಕರಣೆಯ ನೆಲೆಯಿಂದಲೂ ಕಲೆ ಅಥವಾ ಕಲೆಯ ಅಭಿನಯಾಂಗಗಳ ಸೃಷ್ಟಿಗೆ ಕಾರಣವಾಗಿರಬಹುದು.

ಎರಡನೇ ಹಂತದಲ್ಲಿ ಕಾಲದ ಅಗತ್ಯಕ್ಕನುಗುಣವಾಗಿ ಅನೇಕರು ಸೇರ್ಪಡೆಗೊಳಿಸಿದ ಅಥವಾ ತೆಗೆದು ಹಾಕಿದುದರ ಪರಿಣಾಮವಾಗಿ ಬೆಳೆಯುತ್ತಿರುತ್ತದೆ. ಈ ಪರಿವರ್ತನೆಯ ಹಂತ ಮೂಲ ಆಶಯದ ನೆಲೆಯನ್ನು ವಿಸ್ತರಿಸಲೂಬಹುದು ಅಥವಾ ಕೆಲವೊಮ್ಮೆ ಹೊಸ ಆಶಯವನ್ನೇ ಉದ್ದೀಪಿಸುವ ರೀತಿಯಲ್ಲಿ ಸೃಜನಶೀಲವಾಗಿ ಪುನರ್‌ಸೃಷ್ಟಿಸಿರಬಹುದು.

ಮೂರನೇ ಹಂತದಲ್ಲಿ ಸಮಕಾಲೀನ ಕಲಾವಿದರು ತಮ್ಮ ನೆನಪಿನ ಮತ್ತು ಅರಿವಿನ  ಭಾಗವಾಗಿ ಲಭ್ಯವಾದ ಪರಂಪರೆಯನ್ನು ನಂಬಿಕೊಂಡು ಕಲೆಯನ್ನೂ, ಕಲಾಂಗವನ್ನು ಪ್ರಯೋಗಿಸುತ್ತಿರುತ್ತಾರೆ. ಇಲ್ಲಿ ಸಮಕಾಲೀನವಾದ ವಿದ್ಯಮಾನಗಳು ಕಲೆಯ ಚೌಕಟ್ಟಿನಲ್ಲಿ  ಜಾಗ ಪಡೆದುಕೊಳ್ಳುತ್ತವೆ. ಗತ ಇತಿಹಾಸದ ಮತ್ತು ಪರಂಪರೆಯ ಭಾಗವಾಗಿಯೇ ಇವುಗಳನ್ನು ನೋಡುವ ಕಣ್ಣುಹೊಸ ತೆರದಲ್ಲಿ ವ್ಯಾಖ್ಯಾನಿಸ ಬಯಸುತ್ತದೆ. ಸಮಕಾಲೀನವಾದ ಕಲೆಯ ಎಲ್ಲ ಪ್ರವೃತ್ತಿಗಳೂ ಬದಲಾವಣೆಗಳಿಗೆ, ವಿಶ್ಲೇಷಣೆಗಳಿಗೆ, ಟೀಕೆ ಟಿಪ್ಪಣಿಗಳಿಗೆ ಒಳಗಾ ಗುತ್ತಲೇ ಇರುತ್ತವೆ.

ಈ ಮೂರನೇ ಹಂತ ಪ್ರತಿಯೊಂದು ಕಲೆಯ ಮಟ್ಟಿಗೂ ಪರಿವರ್ತನೆಯ ಹಂತವನ್ನು ವಿಸ್ತರಿಸುವ ಭಾಗವಾಗಿಯೇ ಸೇರಿಕೊಳ್ಳುತ್ತವೆ. ಆದರೆ ಸಮಕಾಲೀನ ಕಲೆಗಳ, ಕಲಾಂಗಗಳ ಮೌಲ್ಯಮಾಪನವು ಪರಿವರ್ತನೆಯ ಹಂತದ ಯಾವುದೋ ಒಂದು ಪ್ರಾತಿನಿಧಿಕ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಡೆಯುತ್ತದೆ. ಎಲ್ಲ ಕಲೆಗಳ ಮಟ್ಟಿಗೂ ಸಮಕಾಲೀನವಾದ ಒಂದು ಸ್ಥಿತಿ ಇತ್ತು; ಮುಂದೆಯೂ ಇದ್ದೇ ಇರುತ್ತದೆ ಎಂಬ ಪ್ರಜ್ಞೆಯಿಂದ ಹೊರಟಾಗ ಕಲೆಯನ್ನು ಕೇವಲ ಕಲೆಯಾಗಿ ನೋಡಲು ಸಾಧ್ಯವಾಗುವುದಿಲ್ಲ. ಅದು ಮಾನವನ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಮಾನವಶಾಸ್ತ್ರೀಯ ಹಿನ್ನೆಲೆಯಿಂದಲೂ ಅಧ್ಯಯನ ಯೋಗ್ಯ ಸಂಗತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನದಲ್ಲಿ ಯಕ್ಷಗಾನದ ಆಹಾರ್ಯವನ್ನು ನೋಡಲಾಗಿದೆ.

ಭಾರತೀಯ ಸಂದರ್ಭದಲ್ಲಿ ಒಂದು ಕಲೆಗೆ ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಬಹುದು. ಈ ಹಿಂದೆಯೇ ಪ್ರಸ್ತಾಪಿಸಿದಂತೆ ಭಾರತೀಯ ಅನೇಕ ಪಾರಂಪರಿಕ ರಂಗಕಲೆಗಳು ಧಾರ್ಮಿಕ ನೆಲೆಯಲ್ಲಿ ಜಾತಿಯ ಕಟ್ಟುಪಾಡುಗಳ ನಡುವೆ ಹುಟ್ಟಿ ಜನಪದೀಯ ವಾಗಿರುತ್ತವೆ. ಎರಡನೆಯ ಹಂತದಲ್ಲಿ ಅದು ಜಾತಿ ಮತ್ತು ಧರ್ಮದ ಪರಿಧಿಯನ್ನು  ಮೀರಿ ಹೊರಬರುವ ಸಂಕ್ರಮಣ ಸ್ಥಿತಿಯಲ್ಲಿರುತ್ತದೆ. ಮೂರನೇ ಹಂತದಲ್ಲಿ ಜಾತಿ, ಧರ್ಮಗಳ ಎಲ್ಲೆಗಳನ್ನು ಮೀರಿ ಸುಶಿಕ್ಷಿತರ ಸಂಪರ್ಕ ಪಡೆದು ಹೊಸ ಆಯಾಮವೊಂದನ್ನು ಪಡೆದುಕೊಂಡಿರುತ್ತದೆ. ಭಾರತೀಯ ಸಂದರ್ಭದ ಬಹುತೇಕ ಪಾರಂಪರಿಕ ಪ್ರಾತಿನಿಧಿಕ ರಂಗಕಲೆಗಳ ಮಟ್ಟಿಗೆ ಈ ಮೂರು ಹಂತಗಳು ಬಹುತೇಕ ನಿಜವಾಗಿರುತ್ತವೆ. ಯಕ್ಷಗಾನವು ಇದಕ್ಕೆ ಅತ್ಯಂತ ಸಮರ್ಥವಾದ ಉದಾಹರಣೆಯಾಗಿದೆ. ಇತಿಹಾಸದ ಈ ಕಾಲ ಘಟ್ಟಗಳಲ್ಲಿ ಪರೀಕ್ಷೆಗೆ ಒಡ್ಡಿಕೊಳ್ಳದ ಕಲೆಗಳು ಜಾತೀಯ ಕಟ್ಟುಪಾಡುಗಳೊಳಗೆ ಸೊರಗುತ್ತಿರಬಹುದು. ತಮಿಳುನಾಡಿನ ತೆರುಕೂತ್ತು ಇದಕ್ಕೆ ಒಂದು ಉತ್ತಮ ಉದಾಹರಣೆ. ಪ್ರಸ್ತುತ ಅಧ್ಯಯನವು ಕಲೆಯ ಸಾಮಾಜಿಕ ಇತಿಹಾಸವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮುಂದುವರಿಯುತ್ತದೆ. ಪ್ರಸ್ತುತ ಬರವಣಿಗೆಯು ತೆಂಕುತಿಟ್ಟು ಯಕ್ಷಗಾನದ ಆಹಾರ್ಯವನ್ನು ಮಾತ್ರ ಕೇಂದ್ರೀಕರಿಸಿದೆ.

ಅಧ್ಯಯನದ ಸ್ವರೂಪ

ಅಧ್ಯಯನಕ್ಕೆ ಪೂರಕವಾಗಿ ಕೇರಳ ಹಾಗೂ ಕರ್ನಾಟಕದ ಕರಾವಳಿ ಪ್ರದೇಶಗಳ ಪಾರಂಪರಿಕ ರಂಗಕಲೆಗಳ ಆಹಾರ್ಯವನ್ನು ಅಧ್ಯಯನಕ್ಕೆ ಅಳವಡಿಸಲಾಗಿದೆ. ಇಲ್ಲಿ ಧಾರ್ಮಿಕವಾದ ಹಿನ್ನೆಲೆಯಲ್ಲಿ ಅಥವಾ ಕಲಾತ್ಮಕ ಹಿನ್ನೆಲೆಯಲ್ಲಿ ರೂಪು ಪಡೆದ ಸಮಕಾಲೀನ ಸಾದೃಶ್ಯ ಕಲೆಗಳ ನಡುವೆ ಯಕ್ಷಗಾನವನ್ನು ತೌಲನಿಕವಾಗಿಯೂ ವಿಶ್ಲೇಷಿಸಲಾಗಿದೆ. ಇಲ್ಲಿ ತೆಯ್ಯಂ, ಕೂಡಿಯಾಟಂ, ಕಥಕಳಿ, ತುಳ್ಳಲ್ ಮೊದಲಾದ ಕಲಾರೂಪಗಳ ಆಹಾರ್ಯವನ್ನು ಮುಖ್ಯವಾಗಿ ಅಧ್ಯಯನಕ್ಕೆ ಗುರಿಪಡಿಸಲಾಗುವುದು. ಬಡಗುತಿಟ್ಟು, ಉತ್ತರ ಕರ್ನಾಟಕದ ಬಯಲಾಟ, ಮೂಡಲಪಾಯ, ಶ್ರೀಕೃಷ್ಣ ಪಾರಿಜಾತ, ಘಟ್ಟದ ಕೋರೆ, ಬೊಂಬೆಯಾಟ ಮೊದಲಾದ ಕಲಾ ರೂಪಗಳ ಆಹಾರ್ಯಾಂಗದ ಸ್ವರೂಪವನ್ನೂ ವಿವೇಚಿಸಲಾಗಿದೆ. ಮುಂದಿನ ಅಧ್ಯಾಯದಲ್ಲಿ ತೆಂಕುತಿಟ್ಟು ಯಕ್ಷಗಾನದ ಆಹಾರ್ಯಕ್ಕೆ ಒದಗಿ ಬಂದ ಪ್ರೇರಣೆ ಹಾಗೂ ಪ್ರಭಾವಗಳನ್ನೂ ಚರ್ಚಿಸಲಾಗಿದೆ. ತೆಂಕುತಿಟ್ಟು ಯಕ್ಷಗಾನ ಬೆಳೆದು ಬಂದ ಸಾಂಸ್ಕೃತಿಕ ಪರಿಸರವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅದರ ಹಿನ್ನೆಲೆಯಲ್ಲಿದ್ದ ನಂಬಿಕೆಗಳು, ನಡಾವಳಿಗಳು ಹಾಗೂ ಇನ್ನಿತರ ವಿದ್ಯಮಾನಗಳನ್ನೂ ಅಧ್ಯಯನದಲ್ಲಿ ಅಳವಡಿಸಲಾಗಿದೆ.

ನಂತರದ ಅಧ್ಯಾಯವು ತೆಂಕುತಿಟ್ಟು ಯಕ್ಷಗಾನದ ಪ್ರಮುಖ ವೇಷವಿಧಾನಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಪೂರ್ವರಂಗದ ವೇಷಗಳು, ಕಿರೀಟ ವೇಷಗಳು, ಪಕಡಿ ವೇಷಗಳು, ಬಣ್ಣದ ವೇಷಗಳು, ಹಾಸ್ಯ ವೇಷಗಳು, ಸ್ತ್ರೀ ವೇಷಗಳು ಎಂಬಿತ್ಯಾದಿ ವಿಭಾಗಗಳಲ್ಲಿ ವಿಂಗಡಿಸಿಕೊಂಡು ಅಧ್ಯಯನ ಮಾಡಲಾಗಿದೆ. ಪ್ರತಿಯೊಂದು ವೇಷವಿಧಾನ ನೆಲೆಯಿಂದ ಪ್ರಾತಿನಿಧಿಕ ಪಾತ್ರಗಳನ್ನು ಆಯ್ಕೆ ಮಾಡಿ, ವೇಷ ವಿಧಾನದ ಸ್ವರೂಪ, ರಚನೆ, ಪರಿಕರಗಳ ವಿವರಗಳನ್ನು ನೀಡಲಾಗಿದೆ. ವಿಷಯದ ಔಚಿತ್ಯಕ್ಕಾಗಿ ಛಾಯಾ ಚಿತ್ರ ಹಾಗೂ ರೇಖಾಚಿತ್ರ ಗಳನ್ನು ಅಧ್ಯಾಯಗಳಿಗೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಮುಂದಿನ ಅಧ್ಯಾಯವು ಒಟ್ಟು ಅಧ್ಯಯನದ ಫಲಿತಗಳನ್ನು ದಾಖಲಿಸುತ್ತದೆ. ಯಕ್ಷಗಾನದ ಆಹಾರ್ಯದ ಸಮಕಾಲೀನ ಅಗತ್ಯ ಮತ್ತು ಅದರ ಸ್ವರೂಪದ ಕುರಿತು ವಿವರಿಸಲಾಗಿದೆ. ಪ್ರಸ್ತುತ ಯಕ್ಷಗಾನದ  ಆಹಾರ್ಯ ಅಧ್ಯಯನವು ಸಮಕಾಲೀನ ತೆಂಕುತಿಟ್ಟು ಯಕ್ಷಗಾನ ಆಹಾರ್ಯದ ಬಗೆಗೆ ಹೊಸ ಬೆಳಕು ಚೆಲ್ಲುವ, ಹೊಸ ವಿಚಾರಗಳನ್ನು ಬೀರುವ ಪ್ರಯತ್ನದ ಕಾರಣಕ್ಕಾಗಿ ಸಮಕಾಲೀನ ಪ್ರಸ್ತುತತೆ ಇದೆ ಎಂದು ಭಾವಿಸಲಾಗಿದೆ.

ಅಧ್ಯಯನದ ವ್ಯಾಪ್ತಿ

ಪ್ರಸ್ತುತ ಯಕ್ಷಗಾನದ ಆಹಾರ್ಯ ಅಧ್ಯಯನವು ತೆಂಕುತಿಟ್ಟು ಯಕ್ಷಗಾನವನ್ನು ಮಾತ್ರ ಆಧರಿಸಿದೆ. ತೆಂಕುತಿಟ್ಟು ಯಕ್ಷಗಾನ ಪ್ರಕಾರವು ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವುದರಿಂದ ಮತ್ತು ಇತರೆ ಯಕ್ಷಗಾನ ಕಲಾ ಪ್ರಕಾರಗಳಿಗಿಂತ ಆಹಾರ್ಯಾಭಿನಯದಲ್ಲಿ ತೀರಾ ಭಿನ್ನ ನೆಲೆಯನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಇದನ್ನು ಪ್ರತ್ಯೇಕ ಅಧ್ಯಯನಕ್ಕೆ ಆಯ್ದುಕೊಳ್ಳ ಲಾಗಿದೆ. ಕರಾವಳಿ ತೀರದ ಇನ್ನಿತರ ರಂಗ ಕಲೆಗಳ ಜೊತೆ ಸಂಬಂಧವನ್ನು ಹೊಂದಿರುವ ತೆಂಕುತಿಟ್ಟು ಯಕ್ಷಗಾನವು ಹುಟ್ಟಿ ಬೆಳೆದ ನೆಲವು ಭಾಷಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ವಿಶಿಷ್ಟವಾಗಿದೆ. ಸಂಸ್ಕೃತಿಯ ಪ್ರಾಚೀನ ಪರಂಪರೆಯೆಂಬ ನೆಲೆಯಲ್ಲಿಯೂ ಧಾರ್ಮಿಕತೆಯ ದೃಷ್ಟಿಯಿಂದಲೂ ತೆಂಕುತಿಟ್ಟಿಗೆ ಒಂದಲ್ಲ ಒಂದು ರೀತಿಯಲ್ಲಿ ಕೇರಳೀಯ ಕಲೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ಈ ಸಂಬಂಧಗಳ ಸ್ವರೂಪ ಶೋಧನೆ ಕೂಡಾ ಪ್ರಸ್ತುತ ಅಧ್ಯಯನದ ವ್ಯಾಪ್ತಿಯಲ್ಲಿ ಬರುತ್ತದೆ. ತೆಂಕುತಿಟ್ಟು ಯಕ್ಷಗಾನದ ವೇಷಭೂಷಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂದ ಅನೇಕ ಅಧ್ಯಯನ ಗ್ರಂಥಗಳನ್ನು ಹಾಗೂ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುವ ಕಲಾವಿದರನ್ನು ಸಂದರ್ಶಿಸಿ ಮಾಹಿತಿ ಪಡೆದು ಅಧ್ಯಯನವನ್ನು ರೂಪಿಸಲಾಗಿದೆ. ಈ ಎಲ್ಲ ಆಕರಗಳ ನೆಲೆಯಿಂದ ತೆಂಕುತಿಟ್ಟು ಯಕ್ಷಗಾನದ ಆಹಾರ್ಯ ನೀಡುವ ಸಂದೇಶ, ಸಮಕಾಲೀನ ಪ್ರಸ್ತುತಗೊಳ್ಳುವಂತೆ ಮಾಡಿದ ಅದರ ಸೌಂದರ್ಯದ ಸ್ವರೂಪ ಇತ್ಯಾದಿಗಳನ್ನೇ ಪ್ರಸ್ತುತ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಪ್ರಾಚೀನ ಕಲೆಯೊಂದು ಅನೇಕ ಶತಮಾನಗಳ ಬಳಿಕವೂ ವೈಭವದಿಂದ ಜನರ ನಡುವೆ ಪ್ರಯೋಗಗೊಳ್ಳುತ್ತಾ ಪರಿಸರದ ಜನರಲ್ಲಿ ಬೌದ್ದಿಕವಾಗಿ ಜಾಗೃತಿಯನ್ನು ಮೂಡಿಸಿದೆ. ಈ ಮೂಲಕ ಯಕ್ಷಗಾನದ ಆಹಾರ್ಯದ ಕೊಡುಗೆಯನ್ನು ಪ್ರಬಂಧದ ವ್ಯಾಪ್ತಿಯಲ್ಲಿ  ಕಂಡುಕೊಳ್ಳಲಾಗಿದೆ.

ಇದುವರೆಗೆ ನಡೆದ ಅಧ್ಯಯನಗಳ ಸಮೀಕ್ಷೆ

ಯಕ್ಷಗಾನ ಕಲೆಯನ್ನು ಕುರಿತು ಅನೇಕ ಕೃತಿಗಳು ಪ್ರಕಟಗೊಂಡಿವೆ. ಆದರೆ ಯಕ್ಷಗಾನದ ಬಣ್ಣಗಾರಿಕೆ ಮತ್ತು ವೇಷಭೂಷಣಗಳ ಕುರಿತು ಸಮಗ್ರವಾದ ಅಧ್ಯಯನವನ್ನು ನಡೆಸಿದ ಕೃತಿಗಳು ಬಂದಿಲ್ಲ. ಯಕ್ಷಗಾನ ಕಲೆಯ ಬಗೆಗೆ ಬರೆಯುವಾಗ ಆನುಷಂಗಿಕವಾಗಿ ಆಹಾರ್ಯದ ಮಾಹಿತಿಯನ್ನು ನೀಡಲಾಗಿದೆ. ಹೀಗೆ ಅಲ್ಲಲ್ಲಿ ಬಂದಿರುವ ಯಕ್ಷಗಾನ ಆಹಾರ್ಯದ ಬಗೆಗಿನ ಅಧ್ಯಯನದ ಸಮೀಕ್ಷೆಯನ್ನು ಕೆಳಗೆ ಕೊಡಲಾಗಿದೆ.

ಯಕ್ಷಗಾನದ ಅಧ್ಯಯನದ ದೃಷ್ಟಿಯಿಂದ ೧೯೫ರಲ್ಲಿ ಪ್ರಕಟವಾದ ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ಕೃತಿಯು ಅತ್ಯಂತ ಪ್ರಮುಖವಾದುದು. ಇದು ಯಕ್ಷಗಾನದ ಬಗೆಗೆ ಸಮಗ್ರವಾಗಿ ಕೈಗೊಂಡ ಮೊತ್ತಮೊದಲ ಅಧ್ಯಯನ ಗ್ರಂಥವೂ ಹೌದು. ಯಕ್ಷಗಾನದ ಬಗೆಗೆ ಬಂದ ಎಲ್ಲಾ ಅಧ್ಯಯನಗಳಿಗೂ ಇದು ಭದ್ರವಾದ ಬುನಾದಿಯನ್ನು ಒದಗಿಸಿದೆ. ಅನೇಕ ಬರಹಗಾರರು ಯಕ್ಷಗಾನದ ಕುರಿತು ಚಿಂತನೆ ನಡೆಸಲು ಹಾಗೂ ಬರೆಯಲು ಈ ಕೃತಿ ಬಹುಮುಖ್ಯ ಪ್ರೇರಕ ಶಕ್ತಿಯಾಯಿತು. ಕಾರಂತರು ಪ್ರಸ್ತುತ ಕೃತಿಯಲ್ಲಿ ಮುಖ್ಯವಾಗಿ ಎರಡು ಭಾಗಗಳಲ್ಲಿ ಬರವಣಿಗೆಯನ್ನು ವಿಭಾಗಿಸಿದ್ದಾರೆ. ಮೊದಲನೆಯ ಭಾಗದಲ್ಲಿ ಯಕ್ಷಗಾನ ರಂಗಭೂಮಿಯ ಸಮಗ್ರ ಪರಿಚಯ, ಹಿನ್ನೆಲೆ, ನೃತ್ಯ, ವೇಷಭೂಷಣ, ಸಂಪ್ರದಾಯಗಳ ಬಗೆಗೆ ವಿವರವಾದ ವಿಶ್ಲೇಷಣೆಯನ್ನು ಒದಗಿಸಿದ್ದಾರೆ. ಎರಡನೆಯ ಭಾಗದಲ್ಲಿ ಯಕ್ಷಗಾನ ಕವಿಗಳ ಹಾಗೂ ಕೃತಿಗಳ ಬಗೆಗೆ ಸಮೂಲವಾದ ನೆಲೆಯಿಂದ ವಿಚಾರಗಳನ್ನು ಮಂಡಿಸಿದ್ದಾರೆ. ಈ ಎಲ್ಲಾ ದೃಷ್ಟಿಯಿಂದ ಇದೊಂದು ಯಕ್ಷಗಾನದ ಉತ್ತಮ ಆಕರ ಗ್ರಂಥವಾಗಿ ಎಲ್ಲಾ ಕಾಲಕ್ಕೂ ನೆಲೆ ನಿಲ್ಲುವಂತಾಗಿದೆ.

ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಾರಂತರ ಯಕ್ಷಗಾನ ಬಯಲಾಟ ಕೃತಿಯು ಉಲ್ಲೇಖಿಸುವ ಕೆಲವು ಸಂಗತಿಗಳು ಗಮನಾರ್ಹವಾಗಿದೆ. ಯಕ್ಷಗಾನದ ವೇಷಭೂಷಣಗಳ ಸೌಂದರ್ಯವನ್ನು ಅದರ ಸಿದ್ದಿಯನ್ನು ಮೆಚ್ಚುವ ಸುಧಾರಣೆಯ ಬಗೆಗೆ ಅಸಮಾಧಾನವನ್ನು ಕಾರಂತರು ವ್ಯಕ್ತಪಡಿಸಿದ್ದಾರೆ. ಯಕ್ಷಗಾನದ ಪಾತ್ರಗಳನ್ನು ಐದು ಮುಖ್ಯ ವಿಭಾಗಗಳಾಗಿ ಅವರು ವರ್ಗೀಕರಿಸಿದ್ದಾರೆ. ಪರಾಕ್ರಮಶಾಲಿಗಳಾದ ಕೌರವ, ಪಾಂಡವಾದಿಗಳಂಥಹ ವ್ಯಕ್ತಿಗಳ ಗುಂಪನ್ನು ಮೊದಲನೆಯ ವರ್ಗದಲ್ಲಿ ಹೆಸರಿಸಿದ್ದಾರೆ. ಎರಡನೆಯ ಗುಂಪಿನಲ್ಲಿ ಖಳನಾಯಕರ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ದಾನವರ ಗುಂಪನ್ನು ಗುರುತಿಸಿದ್ದಾರೆ. ಸಾಹಸ, ರಮಣೀಯತೆ ಗಳಿಗೆ ಹೆಸರಾದ ಹುಂಬತನದ ಹುಸಿ ಹೆಮ್ಮೆಗಳಿಂದ ಮೆರೆಯುವ ಗಂಧರ್ವ ಹಾಗೂ ಕಿರಾತರ ಗುಂಪನ್ನು ಮೂರನೆಯ ವರ್ಗದಲ್ಲಿ ಗುರುತಿಸಿದ್ದಾರೆ. ದೇವ ವರ್ಗದ್ದು ನಾಲ್ಕನೆಯ ಗುಂಪು. ಐದನೆಯ ವರ್ಗದಲ್ಲಿ ಮುನುಷ್ಯರು ಮತ್ತು ಋಷಿ ವರ್ಗದ ಪಾತ್ರಗಳು ಸೇರುತ್ತಾರೆ. ಈ ವರ್ಗೀಕರಣದಲ್ಲಿ ಕಾರಂತರು ಪಾತ್ರಗಳ ಸ್ವಭಾವವನ್ನು  ಮುಖ್ಯವಾಗಿ ದೃಷ್ಟಿಯಲ್ಲಿರಿಸಿಕೊಂಡಿದ್ದಾರೆ.

ವೇಷಭೂಷಣಗಳಿಗೆ ಸಂಬಂಧಿಸಿದಂತೆ ಅವರು ಉತ್ತರ ಕನ್ನಡ ಜಿಲ್ಲೆಯ ಅಥವಾ ಬಡಗುತಿಟ್ಟು ಯಕ್ಷಗಾನ ಪರಂಪರೆಯನ್ನು ಮಾತ್ರ ಕನ್ನಡದ ಯಕ್ಷಗಾನವಾಗಿ ಸ್ವೀಕರಿಸಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಪರಂಪರೆಯನ್ನು ಕೇರಳದ ಅನುಕರಣೆ ರೂಪದಲ್ಲಿ ಹುಟ್ಟಿಕೊಂಡುದೆಂದು ತರ್ಕಿಸುತ್ತಾರೆ. ತೆಂಕುತಿಟ್ಟಿನ ವೇಷ ವಿಧಾನವನ್ನು ಕುರಿತಂತೆ ಬಣ್ಣಗಳ ಬೆಲೆಯನ್ನು ತಿಳಿಯದೆ ಏನಾದರೂ ಬಟ್ಟೆ ಉಡುತ್ತಾರೆ ಎಂಬ ತಿರಸ್ಕಾರದ ಮಾತುಗಳೂ ಇವೆ. ವೇಷಪರಿಕರಗಳ ಮೂಲ ನಿರ್ಮಾಣಕ್ಕೂ ಅದರ ಚೆಲುವಿಗೂ ದಕ್ಷಿಣದ ಯಕ್ಷಗಾನದಲ್ಲಿ ಅರ್ಥ ಅರ್ಥ ಸಂಬಂಧವೇ ಇಲ್ಲವೆಂಬುದು ಕಾರಂತರ ಅಭಿಪ್ರಾಯ. ಅಲ್ಲಿನ ಭುಜ ಕಿರೀಟ, ಎದೆಕಟ್ಟು, ಕಟಿಯಿಂದ ತೂಗುವ ಜಾಲರಿಗಳಿಗೆ ಏನು ಬೆಡಗು ಉಳಿದಿದೆ! ಅಂಥದ್ದನ್ನು ಸುಧಾರಣೆ ಎನ್ನಬೇಕೆ ಅರಿವುಗೇಡಿತನವೆನ್ನಬೇಕೆ ಎಂದು ತೀವ್ರವಾಗಿ ಆಕ್ಷೇಪಿಸುತ್ತಾರೆ. ಈ ವೇಷಧಾರಿಗಳು ತೊಡುವ ಕಿರೀಟ ನಮ್ಮವಲ್ಲ. ಅವು ಕೇರಳದ ಅನುಕರಣೆಗಳು. ಆ ಚಿತ್ರ ಕೆಲಸಗಳು ಅಲ್ಲಿನವೇ ಎಂದು ಕಾರಂತರು ಸುಲಭವಾಗಿ ತೀರ್ಮಾನಿಸಿ ಬಿಟ್ಟಿದ್ದಾರೆ. ಅಲ್ಲಿನ ಮುಖವರ್ಣಿಕೆ ವಿನ್ಯಾಸಗಳಲ್ಲೂ ಅವರು ಕೇರಳದ ಅನುಕರಣೆಯನ್ನೇ ಪ್ರತಿಪಾದಿಸಿದ್ದಾರೆ. ಮುಖವರ್ಣಿಕೆಗಳಲ್ಲಿ ಕೇರಳ ಮತ್ತು ಕನ್ನಡ ಸಂಪ್ರದಾಯಗಳು ತೀರಾ ಬೇರೆಯಾಗಿವೆ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.  ಬಡಗುತಿಟ್ಟನ್ನು ಮಾತ್ರ ಕನ್ನಡ ಸಂಪ್ರದಾಯವೆಂದು ಹೇಳುವ ಕಾರಂತರು ದಕ್ಷಿಣದ ಯಕ್ಷಗಾನದಲ್ಲಿ ಕನ್ನಡದ ಪರಂಪರೆಯನ್ನು ನಿರಾಕರಿಸುತ್ತಾರೆ. ಹಾಗೆ ನೋಡಿದರೆ ಕಾರಂತರ ಈ ಹೇಳಿಕೆ ತೀರಾ ಅಪ್ರಬುದ್ಧವಾದ ಆಲೋಚನಾ ವಿಧಾನವೆಂದು ತಿಳಿಯಬೇಕಾಗುತ್ತದೆ. ಕಲೆ ಮತ್ತು ಅದರ ಪರಂಪರೆಗೆ ಸಂಬಂಧಿಸಿದಂತೆ ಭಾಷೆ ಯಾವಾಗಲೂ ಗೌಣವಾಗಿರುತ್ತದೆ. ಸಾಂಸ್ಕೃತಿಕವಾಗಿ ಪ್ರಾದೇಶಿಕ ಚೌಕಟ್ಟಿನ ನೆಲೆಯಲ್ಲಿ ರೂಪುಗೊಳ್ಳುವ ವೇಷವಿಧಾನಗಳಿಗೆ ನಿರ್ದಿಷ್ಟವಾದ ಪರಂಪರೆ ಆಯಾ ನೆಲದಿಂದಲೇ ಹೊಮ್ಮಿಬರುತ್ತದೆ. ಆಗೆಲ್ಲಾ ಸಮಕಾಲೀನವಾದ ಇತರೆ ರಂಗಸಂಪ್ರದಾಯಗಳ ಪ್ರೇರಣೆ, ಪ್ರಭಾವಗಳು ಸಹಜವಾಗಿರುತ್ತವೆ. ಕುಂಬಳೆ ಸೀಮೆಯ ಪರಿಸರದಲ್ಲಿ ಹುಟ್ಟಿ ಬೆಳೆದ ದಕ್ಷಿಣದ ಯಕ್ಷಗಾನವು ಪರಿಸರದ ಇತರೆ ಕಲೆಗಳ ಜೊತೆಗೆ ಸಾದೃಶ್ಯವನ್ನು ಹೊಂದಿದ್ದರೆ ಅದು ಆಕಸ್ಮಿಕ. ಹಾಗಿದ್ದಾಗಲೂ ಪರಸ್ಪರ ಸಾದೃಶ್ಯವಿರುವ ಕಲಾ ರೂಪಗಳಲ್ಲೂ ಅನನ್ಯತೆಗಳು ಅವುಗಳ ವೈಶಿಷ್ಟ್ಯವನ್ನು ಸಾರಿ ಹೇಳುತ್ತವೆ. ತೆಂಕುತಿಟ್ಟು ಯಕ್ಷಗಾನದ ಅನೇಕ ವೇಷವಿಧಾನಗಳಿಗೆ ನಿರ್ದಿಷ್ಟವಾದ ಪರಂಪರೆ ಅದೇ ನೆಲದಿಂದಲೇ ರೂಪುಗೊಂಡಿದೆ. ಭಾಷಿಕವಾಗಿ ಬಹುಭಾಷಿಕ ಪ್ರದೇಶವಾಗಿಯೂ ಸಾಂಸ್ಕೃತಿಕವಾಗಿ ಎಲ್ಲಾ ಭಾಷೆಗಳ ಸಾರ ರೂಪವನ್ನು ದಕ್ಷಿಣದ ಯಕ್ಷಗಾನ ಮೈಗೂಡಿಸಿಕೊಂಡಿರಬಹುದು.  ಕನ್ನಡ, ತುಳು, ಮಲಯಾಳಂ ಮನೆಮಾತುಗಳ ಜನ ವರ್ಗ ಕನ್ನಡದಲ್ಲಿ ರೂಪುಗೊಳಿಸಿದ ದಕ್ಷಿಣದ ಯಕ್ಷಗಾನ ಪರಂಪರೆ ಕನ್ನಡದ ಪರಂಪರೆ ಎಂಬುದರಲ್ಲಿ ಎರಡು ಮಾತಿಲ್ಲ.

ಯಕ್ಷಗಾನ ರಂಗಕಲೆಯ ಅಧ್ಯಯನ ಸಂದರ್ಭದಲ್ಲಿ ಶಿವರಾಮ ಕಾರಂತರು ಬರೆದ ಯಕ್ಷಗಾನ  (೧೯೭೪) ಎಂಬ ಕೃತಿಯು ಮುಖ್ಯವಾಗುತ್ತದೆ. ಬಡಗುತಿಟ್ಟು ಯಕ್ಷಗಾನವನ್ನು ಲಕ್ಷಿಸಿ ಬರೆದ ಕೃತಿಯಾದರೂ ಯಕ್ಷಗಾನ ಕಲೆಯ ಕುರಿತು ಸಮಗ್ರವಾಗಿ ಚಿಂತನೆ ನಡೆಸಿದ ಕಾರಣಕ್ಕೆ ಇದಕ್ಕೆ ತುಂಬ ಮಹತ್ವವಿದೆ. ಈ ಕೃತಿಯ ಕಲ್ಪನಾಸೃಷ್ಟಿ ಎಂಬ ಅಧ್ಯಾಯವು ಯಕ್ಷಗಾನದ ಆಹಾರ್ಯದ ಕುರಿತು ಚರ್ಚಿಸುತ್ತದೆ.

ಕಾರಂತರು ಯಕ್ಷಗಾನದ ಪಾತ್ರಗಳನ್ನು ದೇವತೆಗಳು, ರಾಕ್ಷಸರು, ವೀರರು, ಕಿರಾತರು, ಪ್ರಾಣಿ ವೇಷಗಳು, ಸ್ತ್ರೀ ವೇಷಗಳು, ಸರಳ ವೇಷಗಳು ಎಂದು ಮುಂತಾಗಿ ಈ ಕೃತಿಯಲ್ಲಿ ವಿಭಾಗಿಸಿದ್ದಾರೆ. ಮುಖದ ಬಣ್ಣಗಾರಿಕೆ, ಬಳಸುವ ಬಣ್ಣಗಳು, ರೇಖಾ ವಿನ್ಯಾಸಗಳು, ಬಣ್ಣ ಮತ್ತು ಬೆಳಕು, ಮುಖವರ್ಣಿಕೆಯಲ್ಲಿ ಸಂಭವಿಸಿದ ಬದಲಾವಣೆಗಳನ್ನು ತಿಳಿಸುತ್ತಾರೆ. ಬೇರೆ ಬೇರೆ ವೇಷಗಳ ರಚನೆಗೆ ಸಂಬಂಧಿಸಿದಂತೆ ತಳಪಾಯದ ಬಣ್ಣ, ನಾಮಗಳ ಬರವಣಿಗೆ, ಮುದ್ರೆಗಳು, ಹುಬ್ಬು ಮೀಸೆಗಳ ರಚನೆ, ಮುತ್ತರಿ, ಚುಟ್ಟಿ ಇಡುವುದು ಹೀಗೆ ಬಣ್ಣಗಾರಿಕೆಯ ಸೂಕ್ಷ್ಮ ವಿವರಗಳನ್ನು ಒದಗಿಸಿದ್ದಾರೆ.

ವೀರ ಪಾತ್ರಗಳು, ರಾಕ್ಷಸ ಪಾತ್ರಗಳು, ದೇವತಾ ಪಾತ್ರಗಳ ಮುಖವರ್ಣಿಕೆಗಳ ವೈವಿಧ್ಯವನ್ನು ಹೇಳುತ್ತಾರೆ. ಪಾತ್ರಗಳ ವೈಶಿಷ್ಟ್ಯವನ್ನು ಮೆಚ್ಚುವ ಕಾರಂತರು ಹನುಮಂತನ ಪಾತ್ರದ ಬದಲಾವಣೆಯನ್ನು ವಿರೋಧಿಸುತ್ತಾರೆ. ಕೆಲವು ಪಾತ್ರಗಳನ್ನು ಯಕ್ಷಗಾನೀಯ ಹಿನ್ನೆಲೆಯಲ್ಲಿ ಪುನಾರಚಿಸಬೇಕಾದ ಅಗತ್ಯವನ್ನು ಅವರು ಸೂಚಿಸುತ್ತಾರೆ. ಈ ನಿಟ್ಟಿನಲ್ಲಿ ತಾವು ಮಾಡಿದ ಪ್ರಯತ್ನಗಳ ಮಾದರಿಯನ್ನು ಚಿತ್ರಗಳ ರೂಪದಲ್ಲಿ ಕೊಟ್ಟಿದ್ದಾರೆ. ಸ್ತ್ರೀ ಪಾತ್ರಗಳು ಈ ಕಾಲದ ಸಮಾಜದ ಹೆಂಗಸರಂತೆ ಕಾಣಿಸುತ್ತಿದ್ದು, ಅವುಗಳ ಪುನಾರಚನೆಯ ಬಗೆಗೆ ಯೋಚಿಸಬೇಕಾದ ಅಗತ್ಯವನ್ನು ಹೇಳಿದ್ದಾರೆ. ಮುಖವರ್ಣಿಕೆ, ವೇಷಭೂಷಣ ಮೊದಲಾದ ವಿಷಯಗಳಲ್ಲಿ ಕಲಾವಿದರು ತಮ್ಮ ಪೂರ್ವ ಸಂಪ್ರದಾಯವನ್ನು ಅನುಸರಿಸದೆ ಉದಾಸೀನರಾಗಿರುವುದರಿಂದ ಸಾಂಪ್ರದಾಯಿಕ ವೇಷಗಳ ಕೊರತೆ ಕಾಣಿಸುತ್ತಿದೆಯೆಂದು ಪ್ರಯೋಗಗಳ ಮೂಲಕ ಇವುಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದೂ ಅಭಿಪ್ರಾಯಪಡುತ್ತಾರೆ.

‘ಸಮಗ್ರ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ’ (೧೯೭೮) ಕೃತಿಯು ಕು.ಶಿ. ಹರಿದಾಸಭಟ್ಟರು ಸಂಪಾದಿಸಿದ ಕೃತಿ. ಈ ಕೃತಿಯಲ್ಲಿ ಶಿವರಾಮ ಕಾರಂತರು ಬರೆದ ‘ಬಯಲಾಟದ ವೇಷಭೂಷಣಗಳು’ ಮತ್ತು ‘ಯಕ್ಷಗಾನದ ವೇಷಭೂಷಣಗಳು’ ಎಂಬ ಎರಡು ಲೇಖನಗಳು ಯಕ್ಷಗಾನದ ಆಹಾರ್ಯವನ್ನು ಕುರಿತಿವೆ. ಕೆ.ಎಂ. ರಾಘವ ನಂಬ್ಯಾರರ ‘ಯಕ್ಷಗಾನ ರಂಗಸ್ಥಳ : ತೆಂಕುತಿಟ್ಟು’ ಎಂಬ ಲೇಖನದಲ್ಲಿಯೂ ತೆಂಕುತಿಟ್ಟು ಯಕ್ಷಗಾನದ ವೇಷಭೂಷಣಗಳ ವಿವರಗಳಿವೆ. ಬಣ್ಣದ ವೇಷವು ಧರಿಸುವ ಕೇಶಾವರಿ ತಟ್ಟಿ ಹಾಗೂ ಬಾಲುಮುಂಡು ಎನ್ನುವ ಎರಡು ವಿಷಯ ಬಿಟ್ಟರೆ ತೆಂಕಿನ ಹಾಗೂ ಬಡಗಿನ  ವೇಷಭೂಷಣ ಗಳಲ್ಲಿ ನಿಕಟ ಸಾಮ್ಯ ಇವೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ (೧೯೮೦) ಡಾ. ಡಿ.ಕೆ. ರಾಜೇಂದ್ರ ಅವರ ಸಂಶೋಧನ ಕೃತಿ. ಮುಖ್ಯವಾಗಿ ಈ ಕೃತಿಯಲ್ಲಿ ಮೂಡಲಪಾಯ ಯಕ್ಷಗಾನ ಬಯಲಾಟ ವನ್ನು ಸಮಗ್ರವಾಗಿ ವಿವರಿಸಲಾಗಿದೆ. ಕರ್ನಾಟಕದ ಜನಪದ ರಂಗಭೂಮಿಯಲ್ಲಿ ಪ್ರಮುಖವಾಗಿರುವ ಯಕ್ಷಗಾನದ ಪ್ರಾದೇಶಿಕ ಭೇದಗಳನ್ನು ಹಾಗೂ ಅವುಗಳ ವೈಶಿಷ್ಟ್ಯಗಳನ್ನು ತಿಳಿಸಿದ್ದಾರೆ. ಯಕ್ಷಗಾನ ಒಂದು ದ್ರಾವಿಡ ಮೂಲ ಕಲೆ ಎಂದು ಗುರುತಿಸಿದ ಅವರು ಕೇರಳ, ಆಂಧ್ರ, ತಮಿಳುನಾಡುಗಳಲ್ಲಿ ಕಂಡುಬರುವ ಜನಪದ ರಂಗಭೂಮಿಯನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದಾರೆ. ಮೂಡಲಪಾಯ ಯಕ್ಷಗಾನದ ಬಣ್ಣಗಾರಿಕೆ, ವೇಷಭೂಷಣ ಹಾಗೂ ವೇಷಗಳ ಬಗೆಗಳನ್ನು ವಿಶೇಷವಾಗಿ ಈ ಕೃತಿಯಲ್ಲಿ ವಿವೇಚಿಸಲಾಗಿದೆ. ಯಕ್ಷಗಾನ ಬಯಲಾಟಕ್ಕೆ ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಹಾಗೂ ಜನಪದ ಕಥೆಗಳಿಂದ ವಸ್ತುಗಳನ್ನು ಆರಿಸಿಕೊಂಡಿರುವುದರಿಂದ, ಅವುಗಳಲ್ಲಿ ಬರುವ ವಿವಿಧ ಪಾತ್ರಗಳ ಘನತೆ, ಗೌರವಗಳಿಗೆ ತಕ್ಕ ಹಾಗೆ ಉಡುಗೆ ತೊಡುಗೆಗಳನ್ನು ತೊಡಿಸಿರುವುದನ್ನು ಗುರುತಿಸಿದ್ದಾರೆ. ಯಕ್ಷಗಾನದ ಬಡಗುತಿಟ್ಟು ಮತ್ತು ತೆಂಕುತಿಟ್ಟುಗಳ ದೈತ್ಯಪಾತ್ರಗಳ ಚಿತ್ರ ವೆಂದು ಕಥಕಳಿಯ ಚಿತ್ರಗಳನ್ನು ಒದಗಿಸಿರುವುದು ಈ ಕೃತಿಯ ಒಂದು ಋಣಾತ್ಮಕ ಅಂಶವಾಗಿದೆ.

ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸ್ಮರಣಾರ್ಥ ಪ್ರಕಟಗೊಂಡ ‘ರಂಗಸ್ಥಳ’ (೧೯೮೦) ಎಂಬ ಅಭಿನಂದನ ಗ್ರಂಥದಲ್ಲಿ ಯಕ್ಷಗಾನದ ಒಳಹೊರಗುಗಳಿಗೆ ಸಂಬಂಧಿಸಿದ ಹಲವಾರು ಲೇಖನಗಳಿವೆ. ಅವುಗಳಲ್ಲಿ ಯಕ್ಷಗಾನದ ವೇಷಭೂಷಣ ಹಾಗೂ ಬಣ್ಣಗಾರಿಕೆಗೆ ಸಂಬಂಧಿಸಿ ದಂತೆ ವಿದ್ವಾಂಸರು ಬರೆದ ಬರಹಗಳನ್ನು ಅವಲೋಕಿಸಬಹುದು.

‘ಜನಪದ ನೃತ್ಯ ನಾಟಕಗಳ ವೇಷಭೂಷಣ’ (ಪಿ.ಆರ್. ತಿಪ್ಪೇಸ್ವಾಮಿ) ಎಂಬ ಲೇಖನ ದಲ್ಲಿ ಮುಖ್ಯವಾಗಿ ಯಕ್ಷಗಾನವನ್ನು ಲಕ್ಷಿಸಿಕೊಂಡಿದ್ದು, ಸಣ್ಣಾಟ, ದೊಡ್ಡಾಟ, ಬಡಗುತಿಟ್ಟು ಹಾಗೂ ತೆಂಕುತಿಟ್ಟು ಯಕ್ಷಗಾನಗಳ ವೇಷ ವೈವಿಧ್ಯವನ್ನು ಸ್ಥೂಲವಾಗಿ ವಿವರಿಸಿದ್ದಾರೆ.

ಇಲ್ಲಿನ ‘ಯಕ್ಷಗಾನದ ಸ್ತ್ರೀವೇಷ’ ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನವು ಮೌಲಿಕವಾದುದು. ತಾವು ಬಾಲ್ಯದಲ್ಲಿ ನೋಡಿದ ಆಟಗಳ ಸ್ತ್ರೀವೇಷಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ತ್ರೀ ವೇಷಗಳ ಸ್ವರೂಪವನ್ನು ವಿಶ್ಲೇಷಿಸಿದ್ದಾರೆ. ಯಕ್ಷಗಾನದ ಸ್ತ್ರೀ ವೇಷಗಳು ವಾಸ್ತವಿಕ ಜಗತ್ತಿನ ಸ್ತ್ರೀಯರಂತೆಯೇ ಕಾಣುತ್ತಿದ್ದು, ಹಳೆಯ ಮಾದರಿಯ ಸ್ತ್ರೀವೇಷ ತಪ್ಪಿ ಹೆಚ್ಚು ಕಡಿಮೆ ಅರ್ಧ ಶತಮಾನ ಕಳೆಯಿತು ಎನ್ನುತ್ತಾರೆ. ಯಕ್ಷಗಾನದಲ್ಲಿ ವಾಸ್ತವ ಶೈಲಿಯ ಭೂಮಿಕೆಗಳು ನರ್ತಿಸುವುದರಲ್ಲಿ ಔಚಿತ್ಯವಿಲ್ಲ. ಪುರುಷ ವೇಷಗಳು ಪುರಾಣ ಕಾಲವನ್ನು ಪ್ರತಿನಿಧಿಸುವಾಗ, ಸ್ತ್ರೀವೇಷಗಳು ಸಾಮಾನ್ಯ ಸ್ತ್ರೀಯರಂತೆ ರಂಗ ಪ್ರವೇಶ ಮಾಡುವುದು ರಸಾಭಾಸಕ್ಕೆ ಕಾರಣವಾಗುತ್ತದೆ. ಆದುದರಿಂದ ಸ್ತ್ರೀವೇಷಗಳ ಸುಧಾರಣೆ ಅಗತ್ಯ ಎಂದು ಹೇಳುವ ಅವರು ತಾವು ಬಾಲ್ಯದಲ್ಲಿ ಕಂಡ ಸ್ತ್ರೀವೇಷ ರಚನಾ ವಿಧಾನವನ್ನು ವಿವರಿಸಿದ್ದಾರೆ.

‘ತೆಂಕುತಿಟ್ಟಿನ ವೇಷ ರಚನೆ’ ಎಂಬುದು ಡಿ.ಕೆ. ಸುಬ್ಬಣ್ಣಭಟ್ಟರ ಲೇಖನ. ತೆಂಕುತಿಟ್ಟು ಯಕ್ಷಗಾನದ ವೇಷ ವಿಧಾನವನ್ನು ವಿವರವಾಗಿ ಚರ್ಚಿಸುವ ಲೇಖನವಿದು. ಯಕ್ಷಗಾನ ವೇಷಭೂಷಣಗಳ ಹೆಸರುಗಳನ್ನು ಮೊದಲಿಗೆ ಪ್ರಸ್ತಾಪಿಸಿ, ವೇಷ ರಚನಾ ವಿಧಾನವನ್ನು ವಿವರಿಸಿದ್ದಾರೆ. ಯಕ್ಷಗಾನದ ಪಾತ್ರಗಳನ್ನು ಕಟ್ಟು ವೇಷ, ಪುಂಡು ವೇಷ ಮತ್ತು ಸ್ತ್ರೀ ವೇಷಗಳೆಂದು ವಿಂಗಡಿಸಿದ್ದಾರೆ. ಇವೇ ವೇಷಗಳು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅನೇಕ ಪ್ರಭೇದಗಳಾಗುವುದನ್ನು ಹೇಳಿದ್ದಾರೆ. ವೇಷಗಳ ಮುಖವರ್ಣಿಕೆ, ವೇಷಕ್ಕೊಪ್ಪುವ ಉಡುಗೆಗಳ ಬಣ್ಣ ಹಾಗೂ ಕಿರೀಟದ ವೈಶಿಷ್ಟ್ಯಗಳನ್ನು ಚರ್ಚಿಸಿದ್ದಾರೆ. ಈಶ್ವರ, ಕಿರಾತ, ಹನುಮಂತ ಹಾಗೂ ಸ್ತ್ರೀವೇಷಗಳ ಸಾಂಪ್ರದಾಯಕ ಶೈಲಿಯನ್ನು ವಿವರಿಸಿದ್ದಾರೆ.

ಎಂ. ಪ್ರಭಾಕರ ಜೋಶಿಯವರ ‘ಜಾಗರ’ (೧೯೮೫) ಕೃತಿಯು ಯಕ್ಷಗಾನ ಕಲೆಗೆ ಸಂಬಂಧಿಸಿದ ಬರಹಗಳ ಸಂಗ್ರಹ. ಇದರಲ್ಲಿನ ‘ನಾಲ್ಕು ವೇಷಗಳು’ ಎಂಬ ಲೇಖನವು ಬಡಗುತಿಟ್ಟಿನ ಬಣ್ಣದವೇಷ, ಬಡಗುತಿಟ್ಟಿನ ವೃಷಕೇತು, ತೆಂಕುತಿಟ್ಟಿನ ಭೀಮ ಹಾಗೂ ತೆಂಕುತಿಟ್ಟಿನ ರಾವಣ ಪಾತ್ರದ ವೇಷವಿಧಾನವನ್ನು ವಿಶ್ಲೇಷಿಸುತ್ತದೆ. ಎಲ್ಲ ಪಾತ್ರಗಳ ಆಹಾರ್ಯದ ಕುರಿತು ಚರ್ಚಿಸುವಾಗ ತೆಂಕು ಹಾಗೂ ಬಡಗುತಿಟ್ಟುಗಳನ್ನು ತೌಲನಿಕವಾಗಿ ಅವಲೋಕಿಸಿದ್ದಾರೆ. ವೃಷಕೇತು, ಭೀಮ, ರಾವಣ ಮೊದಲಾದ ಪಾತ್ರಗಳನ್ನು ಸುಧಾರಣೆ ಅಥವಾ ಮರುಸೃಷ್ಟಿ ಮಾಡುವ ಅಗತ್ಯವನ್ನು ಹೇಳಿದ್ದಾರೆ. ರಾವಣನಂತಹ ಪಾತ್ರಕ್ಕೆ ಎರಡು ಮೂರು ರೀತಿಯ ವೇಷ ವಿಧಾನವನ್ನು ಅಳವಡಿಸಬಹುದು. ಆದರೆ ಪರಿಷ್ಕಾರಗಳೆಲ್ಲ ಯಕ್ಷಗಾನದ ಶೈಲಿಯಲ್ಲಿಯೇ ನಡೆಯಬೇಕಾದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಎಂ. ಪ್ರಭಾಕರ ಜೋಶಿ ಅವರ ಇನ್ನೊಂದು ಕೃತಿ ‘ಕೇದಗೆ’(೧೯೮೬). ಇದು ಯಕ್ಷಗಾನ ಕಲೆಗೆ ಸಂಬಂಧಿಸಿದ ಲೇಖನಗಳ ಸಂಕಲನ. ಈ ಕೃತಿಯ ‘ಯಕ್ಷಗಾನದಲ್ಲಿ ಮುಖವರ್ಣಿಕೆ’ ಎಂಬ ಲೇಖನವು ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆಯ ವೈಶಿಷ್ಟ್ಯಗಳನ್ನು ತಿಳಿಸುತ್ತದೆ. ವೇಷಗಳನ್ನು ಬಣ್ಣದ ವೇಷ, ಕಿರೀಟದ ವೇಷ, ಪುಂಡುವೇಷ, ಮುಂಡಾಸಿನ ವೇಷ, ಕಟ್ಟುವೇಷ, ಸ್ತ್ರೀವೇಷ, ಋಷಿಮುನಿಗಳು, ಹಾಸ್ಯವೇಷ ಮತ್ತು ವಿಶಿಷ್ಟ ವೇಷಗಳೆಂದು ವಿಭಾಗಿಸಿದ್ದಾರೆ. ಯಕ್ಷಗಾನದ ಮುಖವರ್ಣಿಕೆಗೆ ಪ್ರಾಕೃತಿಕ ಬಣ್ಣಗಳಾದ ಬಿಳಿ, ಕೆಂಪು, ಕಪ್ಪು, ಹಸಿರು, ಹಳದಿ ಬಣ್ಣಗಳನ್ನೇ ಬಳಸುತ್ತಾರೆ. ಹೆಚ್ಚಿನ ವೇಷಗಳ ಮುಖದ ಮೂಲಬಣ್ಣ ಗೌರವರ್ಣ ವಾಗಿದೆ. ಯಕ್ಷಗಾನ ವೇಷಗಳ ನಾಮವೈವಿಧ್ಯಗಳನ್ನು ವಿಶ್ಲೇಷಿಸುತ್ತಾ, ವೈಷ್ಣವ ಮತ್ತು ಮಾಧ್ವ ಸಂಪ್ರದಾಯದ ಪ್ರಭಾವವನ್ನು ಅವರು ಗುರುತಿಸುತ್ತಾರೆ.

ಯಕ್ಷಗಾನದ ಬಣ್ಣದ ವೇಷವೆಂಬ ಖಳಪಾತ್ರದ ಮುಖವರ್ಣಿಕೆಯು ಜಗತ್ತಿನ ಕಲೆಗೆ ಒಂದು ವಿಶಿಷ್ಟ ಕೊಡುಗೆಯಾಗಿದೆ. ಯಕ್ಷಗಾನದ ಮುಖವರ್ಣಿಕೆಯನ್ನು ಸೃಷ್ಟಿಸಿದವರು ಅಜ್ಞಾತ ಅಸಾಧಾರಣ ಕಲಾವಿದರು. ಚಿತ್ರಕಲೆಯ ಉತ್ಕೃಷ್ಟ ಮಾದರಿಗಳನ್ನು ಅವರು ಸೃಷ್ಟಿಸಿದರು. ‘ಆಧಾರ ರೇಖೆಗಳ ಬಳಕೆ, ಸೌಂದರ್ಯ ವರ್ಣ ಸಂಯೋಜನೆ, ವರ್ಣವೈವಿಧ್ಯ, ಸಮತೋಲನ ಪರಸ್ಪರ ಹೊಂದಾಣಿಕೆ ಕೃತಕ ಆಕೃತಿಗಳಿಂದ ಭ್ರಮೆ ನಿರ್ಮಾಣ, ನಾಜೂಕುತನ, ಸ್ವತಂತ್ರ ಶೈಲಿಯ ಸ್ಥಾಪನೆ ಈ ಎಲ್ಲ ಅಂಶಗಳಲ್ಲೂ ಯಕ್ಷಗಾನದ ಬಣ್ಣಗಾರಿಕೆ ಶ್ರೀಮಂತ ವಾಗಿದೆ, ಅದ್ಭುತವೆನಿಸುವಂತಿದೆ. ಬದಲಾವಣೆಯ ಆಘಾತಕ್ಕೆ ಸಿಕ್ಕಿ ಇದು ಮರೆಯಾಗುತ್ತಿ ರುವುದು ವ್ಯಸನಾಸ್ಪದವಾಗಿದೆ ಎನ್ನುವ ಅವರು ಪರಂಪರೆಯ ಚೌಕಟ್ಟಿನಲ್ಲಿ ನಡೆಯುವ ಹೊಸ ಮುಖವರ್ಣಿಕೆಗಳ ಸೃಷ್ಟಿಯ ಕೆಲಸವನ್ನು ಸ್ವಾಗತಿಸಿದ್ದಾರೆ.

‘ಬಣ್ಣದ ವೇಷ ಮತ್ತು ಇತರ ಉಪನ್ಯಾಸಗಳು’ (೧೯೮೮) ಮುಳಿಯ ಮಹಾಬಲಭಟ್ಟರ ಕೃತಿ, ‘ಬಣ್ಣದ ವೇಷ’ ಎಂಬ ಪ್ರಧಾನ ಲೇಖನದಲ್ಲಿ ಆ ವೇಷದ ವೈಶಿಷ್ಟ್ಯಗಳನ್ನು ತಿಳಿಸಲು ಪ್ರಯತ್ನಿಸಿದ್ದಾರೆ. ಬಣ್ಣದ ವೇಷಕ್ಕೆ ಆ ಹೆಸರು ಬರಲು ಕಾರಣ, ಯಕ್ಷಗಾನದಲ್ಲಿ ಬಣ್ಣದ ವೇಷದ ಸ್ಥಾನ, ಅವುಗಳ ವೇಷ ವೈವಿಧ್ಯಗಳ ಕುರಿತು ವಿವರಿಸಿದ್ದಾರೆ. ಚುಟ್ಟಿ ಬರವಣಿಗೆಯೇ ಬಣ್ಣದ ವೇಷಗಳ ಪ್ರಧಾನ ಅಂಶ. ಈ ವೇಷವನ್ನು ರಾಜಬಣ್ಣ, ಕಾಟುಬಣ್ಣ ಮತ್ತು ಹೆಣ್ಣು ಬಣ್ಣವೆಂದು ವಿಭಾಗಿಸಿ, ಪ್ರತಿಯೊಂದು ಪಾತ್ರಗಳ ಮುಖವರ್ಣಿಕೆಗಳ ವಿವರವನ್ನು ನೀಡಿದ್ದಾರೆ. ತೆಂಕುತಿಟ್ಟಿನಲ್ಲಿ ಭೀಮ, ಶನಿ, ಹನುಮಂತ, ವರಾಹ, ನರಸಿಂಹ, ವೀರಭದ್ರ, ಮಹಿಷಾಸುರ ಮೊದಲಾದ ಪಾತ್ರಗಳೂ ಬಣ್ಣದ ವೇಷದ ಚೌಕಟ್ಟಿಗೆ ಒಳಪಡುತ್ತವೆ ಎಂದು ಸೂಚಿಸುತ್ತಾರೆ. ಬಣ್ಣದ ವೇಷದ ಪರಿಕಲ್ಪನೆಯಲ್ಲಿ ಬಳಸುವ ಅನೇಕ ರೇಖಾ ವಿನ್ಯಾಸಗಳಿಗೆ, ಬಣ್ಣಗಳಿಗೆ ಸಾಂಕೇತಿಕ ಅರ್ಥಗಳಿವೆ. ಇದು ಜಗತ್ತಿನ ಯಾವ ಕಲಾಸೃಷ್ಟಿಯೊಂದಿಗೂ ಸರಿ ಮಿಗಿಲಾಗಿ ನಿಲ್ಲುವ ಯೋಗ್ಯತೆಯುಳ್ಳ ಒಂದು ಸೃಷ್ಟಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ‘ಬಯಲಾಟದ ಬಣ್ಣಗಾರಿಕೆ’ ಎಂಬ ಇನ್ನೊಂದು ಲೇಖನದಲ್ಲಿ ಯಕ್ಷಗಾನದ ಬಣ್ಣಗಾರಿಕೆಯ ಕುರಿತು ಹೇಳಲಾಗಿದೆ. ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ ಯಕ್ಷಗಾನದಲ್ಲಿ ಬಣ್ಣಗಾರಿಕೆ ಹಾಗೂ ವೇಷಭೂಷಣಗಳಿರುತ್ತವೆ. ಬಣ್ಣಗಾರಿಕೆ ಹಾಗೂ ವೇಷಭೂಷಣಗಳಲ್ಲಿ ಹೊಂದಾಣಿಕೆ ಅಗತ್ಯ. ದೇವಮಾನವ ದಾನವಾದಿ ಪಾತ್ರಗಳನ್ನು ರಂಗಸ್ಥಳದಲ್ಲಿ ಚಿತ್ರಿಸಲು ಅವುಗಳ ಗುಣ ಸ್ವಭಾವಗಳನ್ನು ಕಲ್ಪಿಸಿಕೊಂಡ ಸೃಜನಶೀಲ ಮನಸ್ಸು ಮೂರ್ತರೂಪವನ್ನು ನೀಡಿರಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.

ಪಂಚಮ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸಂಸ್ಮರಣ ಗ್ರಂಥ ‘ಯಕ್ಷರತ್ನ’ (೧೯೯೩)ದಲ್ಲಿ ಯಕ್ಷಗಾನದ ಆಹಾರ್ಯಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಭಾಸ್ಕರರೈ ಕುಕ್ಕುವಳ್ಳಿ ಬರೆದ ‘ಹಾಸ್ಯವೇಷದ ಕಲ್ಪನೆ’ ಎಂಬ ಲೇಖನದಲ್ಲಿ ಯಕ್ಷಗಾನದ ಹಾಸ್ಯ ಸ್ವರೂಪವನ್ನು ವಿವರಿಸಲಾಗಿದೆ. ಹಾಸ್ಯವೇಷಗಳಾದ ಹನುಮನಾಯಕ, ಕೋಡಂಗಿಗಳು, ದೂತ, ಸ್ತ್ರೀ ಹಾಸ್ಯ, ಪೋಷಕ ಪಾತ್ರಗಳನ್ನು ಹೆಸರಿಸಿ ಅವುಗಳ ಬಣ್ಣ ಹಾಗೂ ವೇಷ ಭೂಷಣಗಳ ವಿವರವನ್ನು ನೀಡಿದಾರೆ.

ಪಿ. ಕೃಷ್ಣಭಟ್ ಬರೆದ ‘ಪೀಠಿಕೆ ವೇಷ ಮತ್ತು ಖಳನಾಯಕ ವೇಷದ ಕಲ್ಪನೆ’ ಎಂಬ ಲೇಖನದಲ್ಲಿ ಅವುಗಳ ಮುಖವರ್ಣಿಕೆ ಮತ್ತು ವೇಷಭೂಷಣಗಳ ವಿವರ ಇದೆ. ಖಳನಾಯಕ ಪಾತ್ರಗಳೆಂದರೆ ಕ್ರೌರ್ಯ, ರೌದ್ರ, ಭಯಾನಕ ರಸಗಳನ್ನು ಸೃಷ್ಟಿಸುವ ಪಾತ್ರಗಳು. ಆದರೆ ಬಣ್ಣದ ವೇಷಗಳೆಲ್ಲವೂ ಖಳನಾಯಕ ಪಾತ್ರಗಳಲ್ಲ. ಜರಾಸಂಧ, ಹಿರಣ್ಯಕಶಿಪು, ಕಂಸ, ತಾರಕಾಸುರ, ಇಂದ್ರಜಿತು, ಶಿಶುಪಾಲ ಇತ್ಯಾದಿ ಪಾತ್ರಗಳನ್ನು ಖಳನಾಯಕ ಪಾತ್ರಗಳೆಂದು ಗುರುತಿಸಿ, ಅವುಗಳ ವೇಷ ರಚನೆಯನ್ನು ಹೇಳಿದ್ದಾರೆ.

‘ಯಕ್ಷಗಾನ ಪರಿಶೀಲನೆ’ (೧೯೯೫) ಜಿ.ಎಸ್.ಭಟ್ಟರ ಕೃತಿ ಇದರಲ್ಲಿ ‘ಯಕ್ಷಗಾನದ ವೇಷಭೂಷಣಗಳು’ ಮತ್ತು ‘ಯಕ್ಷಗಾನದಲ್ಲಿ ಹನುಮಂತ’ ಎಂಬ ಲೇಖನಗಳು ಆಹಾರ್ಯಕ್ಕೆ ಸಂಬಂಧಿಸಿವೆ. ಯಕ್ಷಗಾನ ಪಾತ್ರಗಳನ್ನು ರಾಜವೇಷ, ದೇವತೆಗಳ ವೇಷ, ರಾಕ್ಷಸ ವೇಷ, ಹಾಸ್ಯವೇಷ ಮತ್ತು ಸ್ತ್ರೀವೇಷಗಳೆಂದು ವಿಭಾಗಿಸಿದ್ದಾರೆ. ರಾಜವೇಷದಲ್ಲಿ ಕಿರೀಟದ ವೇಷ ಮತ್ತು ಮುಂಡಾಸಿನ ವೇಷ, ಬಣ್ಣದ ವೇಷದಲ್ಲಿ ರಾಜಬಣ್ಣ, ಕಾಟುಬಣ್ಣ ಮತ್ತು ಹೆಣ್ಣು ಬಣ್ಣ ಎಂಬ ವಿಭಾಗಗಳನ್ನು ಮಾಡಿದ್ದಾರೆ. ಸ್ತ್ರೀವೇಷದಲ್ಲಿ ಸಿರಿವೇಷ ಮತ್ತು ಕಸೆವೇಷ ಎಂದು ಎರಡು ವಿಧ. ಭೀಮ, ಹನುಮಂತ, ವಾಲಿ, ಸುಗ್ರೀವ, ರಾವಣ, ಬಕಾಸುರ ಮೊದಲಾದ ವೇಷಗಳ ಬಣ್ಣಗಾರಿಕೆ ಹಾಗೂ ವೇಷಭೂಷಣಗಳ ವಿವರಣೆಗಳನ್ನು ನೀಡಿದ್ದಾರೆ. ಯಕ್ಷಗಾನದ ವೇಷಭೂಷಣಗಳ ರಚನೆಗೆ ನಮ್ಮ ಪುರಾತನ ಶಿಲ್ಪ, ನಾಗಾರಾಧನೆ, ಭೂತಕೋಲ ಇವುಗಳೆಲ್ಲ ಪ್ರೇರಣೆ ನೀಡಿರಬಹುದು ಎಂದು ಅಭಿಪ್ರಾಯಪಡುತ್ತಾರೆ. ಯಕ್ಷಗಾನದಲ್ಲಿ ಹನುಮಂತನ ಪಾತ್ರವು ವಿಶಿಷ್ಟವಾದುದು. ಹನುಮಂತನ ಬಣ್ಣಗಾರಿಕೆ ಹಾಗೂ ವೇಷಭೂಷಣಗಳಿಗೆ ಒಂದು ಪರಂಪರೆ ಇದೆ. ಮುಖವರ್ಣಿಕೆಯಲ್ಲಿ ಬರೆಯುವ ಸುಳಿ ವಿಶೇಷವಾಗಿದೆ. ಉಳಿದಂತೆ ರಾಜವೇಷದ ಉಡುಗೆ ತೊಡುಗೆಗಳು ಹನುಮಂತನಿಗೆ ಮೀಸಲಾದ ವಿಶೇಷ ಕಿರೀಟವಿದೆ. ಆದರೆ ಕಂಪೆನಿ ನಾಟಕಗಳ ಪ್ರಭಾವದಿಂದ ಹನುಮಂತನ ವೇಷದಲ್ಲಿ ಬದಲಾವಣೆ ಆಗಿದೆ ಎನ್ನುತ್ತಾರೆ.

ಉದ್ಯಾವರ ಮಾಧವ ಆಚಾರ್ಯರ ನೃತ ಪ್ರಬಂಧಗಳು (೧೯೯೭) ಕೃತಿಯಲ್ಲಿ ಬಯಲಾಟ ಉಡುಗೆ ತೊಡುಗೆಗಳು ಒಂದು ಕಿರುಟಿಪ್ಪಣಿ ಮತ್ತು ಯಕ್ಷಗಾನದ ಹೆಣ್ಣು ಬಣ್ಣ ಒಂದು ಕಿರುಟಿಪ್ಪಣಿ ಎಂಬ ಲೇಖನಗಳು ಯಕ್ಷಗಾನದ ಆಹಾರ್ಯಕ್ಕೆ ಸಂಬಂಧಿಸಿವೆ.

ಭೂತಾರಾಧನೆ ಜಾನಪದೀಯ ಅಧ್ಯಯನ (೧೯೯೭) ಕೆ. ಚಿನ್ನಪ್ಪಗೌಡರ ಸಂಶೋಧನ ಪ್ರಬಂಧ. ತುಳುನಾಡಿನ ಜನಪದ ಧಾರ್ಮಿಕ ರಂಗಕಲೆಯಾದ ಭೂತಾರಾಧನೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿದ ಕೃತಿ ಇದು. ಈ ಕೃತಿಯ ಏಳನೆಯ ಅಧ್ಯಾಯದಲ್ಲಿ ‘ಭೂತಾರಾಧನೆ ಮತ್ತು ಯಕ್ಷಗಾನ ತೌಲನಿಕ ವಿವೇಚನೆ’ ಇದೆ. ಆರಾಧನಾ ರಂಗಭೂಮಿ ಯಾಗಿರುವ ಭೂತಾರಾಧನೆಯು ಯಕ್ಷಗಾನದ ಮೇಲೆ ಬೀರಿರುವ ಪ್ರಭಾವವನ್ನು ಇದರಲ್ಲಿ ವಿವೇಚಿಸಲಾಗಿದೆ.

ಭೂತಾರಾಧನೆಯನ್ನು ಈ ಪ್ರದೇಶದ ತೆಂಕುತಿಟ್ಟು ಯಕ್ಷಗಾನದ ಜೊತೆಗೆ ಹೋಲಿಸಿ ನೋಡಿದರೆ ಅನೇಕ ಸಾಮ್ಯಗಳು ಕಾಣಿಸುತ್ತವೆ. ಬಣ್ಣಗಾರಿಕೆ, ವೇಷಭೂಷಣಗಳು, ಕುಣಿತ, ಭಾಷಾಶೈಲಿ ಹಾಗೂ ಸಂಪ್ರದಾಯಗಳಲ್ಲಿ ಭೂತಾರಾಧನೆ ಮತ್ತು ಯಕ್ಷಗಾನಕ್ಕಿರುವ ಹೋಲಿಕೆಗಳನ್ನು ಗುರುತಿಸಿದ್ದಾರೆ. ಎರಡೂ ಸಂಪ್ರದಾಯಗಳಲ್ಲಿ ಬಳಸುವ ಸುಮಾರು ೩೬ ವೇಷ ಪರಿಕರಗಳ ಸಾದೃಶ್ಯವನ್ನು ಪಟ್ಟಿಮಾಡಿ ಗುರುತಿಸಿದ್ದಾರೆ. ಭೂತಾರಾಧನೆಯ ಒಂದು ಪ್ರಭೇದವಾದ ಜಾಲಾಟವು ಯಕ್ಷಗಾನದೊಂದಿಗೆ ನಿಕಟ ಸಂಬಂಧ ಹೊಂದಿರುವುದಾಗಿ ಅಭಿಪ್ರಾಯಪಡುತ್ತಾರೆ.

ದೀವಟಿಗೆ (೧೯೯೭) ರಾಘವ ನಂಬ್ಯಾರ್ ಅವರು ಬರೆದ ಯಕ್ಷಗಾನಕ್ಕೆ ಸಂಬಂಧಿಸಿದ ಕೃತಿ. ಯಕ್ಷಗಾನ ವೇಷಭೂಷಣ ಹಾಗೂ ಬಣ್ಣಗಾರಿಕೆಯ ಪರಿಷ್ಕಾರದ ಅಗತ್ಯದ ಕುರಿತು ‘ಮೈ ಮುಖಗಳ ಮಿರುಗು’ ಎಂಬ ಭಾಗದಲ್ಲಿ ಬರೆದಿದ್ದಾರೆ. ಬೆಳಕಿನ ಸಂಯೋಜನೆಗೆ ಹೊಂದಿಕೊಂಡು ಯಕ್ಷಗಾನದ ವೇಷಭೂಷಣಗಳು ಬದಲಾಗುತ್ತಾ ಬಂದಿವೆ. ಯಕ್ಷಗಾನ ಬಣ್ಣಗಾರಿಕೆಯ ಬಣ್ಣಗಳಿಗೆ ಮತ್ತು ಧರಿಸುವ ವೇಷಭೂಷಣಗಳ ಬಣ್ಣಗಳಿಗೆ ಸೂತ್ರಬದ್ಧ ಸಾಂಗತ್ಯವಿದೆ. ಹಳೆಯ ಸಂಪ್ರದಾಯವನ್ನು ಬಿಡದೆ ಯಕ್ಷಗಾನದ ಆಹಾರ್ಯದಲ್ಲಿ ಕಾಯಕಲ್ಪ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ರಾಘವ ನಂಬ್ಯಾರರ ಇನ್ನೊಂದು ಕೃತಿ ವಿಲೋಕನ(೧೯೯೮). ಇದು ಯಕ್ಷಗಾನ ಕುರಿತ ಲೇಖನಗಳ ಸಂಗ್ರಹ. ಯಕ್ಷಗಾನ ಬಣ್ಣಗಾರಿಕೆಯ ವೈಶಿಷ್ಟ್ಯ, ವೇಷಭೂಷಣಗಳ ಅನನ್ಯತೆಯ ಕುರಿತು ತಮ್ಮ ಲೇಖನಗಳಲ್ಲಿ ಚರ್ಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಇನ್ನೂರು ವರ್ಷಗಳಲ್ಲಿ ಸುಮಾರು ಮೂರು ಹಂತಗಳಲ್ಲಿ ಯಕ್ಷಗಾನದ ವೇಷಭೂಷಣಗಳು ಬದಲಾವಣೆಗೊಂಡಿರುವುದನ್ನು ಅವರು ಐತಿಹಾಸಿಕವಾಗಿ ಗುರುತಿಸಿದ್ದಾರೆ.

ಪೊಂಗದಿರು (೧೯೯೮) ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಅಭಿನಂದನ ಗ್ರಂಥ. ಈ ಕೃತಿಯ ಮೂರನೆಯ ಭಾಗದಲ್ಲಿ ಪುಣಿಂಚತ್ತಾಯರೇ ಬರೆದ ಲೇಖನಗಳನ್ನು ಅಳವಡಿಸಲಾಗಿದೆ. ಯಕ್ಷಗಾನದ ಆಹಾರ್ಯಕ್ಕೆ ಸಂಬಂಧಿಸಿದಂತೆ ‘ಯಕ್ಷಗಾನದ ಹಾಸ್ಯ ವೇಷಗಳು’ ಎಂಬ ಲೇಖನದಲ್ಲಿ ೨೫ ರಷ್ಟು ಹಾಸ್ಯ ಪಾತ್ರಗಳನ್ನು ಹೆಸರಿಸಿ, ವಿವರಿಸಿದ್ದಾರೆ. ಯಕ್ಷಗಾನದಲ್ಲಿ ಹಾಸ್ಯದ ಬಣ್ಣಗಾರಿಕೆ ಎಂಬ ಇನ್ನೊಂದು ಲೇಖನದಲ್ಲಿ ಹಾಸ್ಯಪಾತ್ರಗಳ ಬಣ್ಣಗಾರಿಕೆಯ ವೈಶಿಷ್ಟ್ಯವನ್ನು ತಿಳಿಸಿದ್ದಾರೆ.

ಉದ್ಯಾವರ ಮಾಧವ ಆಚಾರ್ಯರ ‘ಯಕ್ಷ ಪ್ರಬಂಧಗಳು’ (೧೯೯೯) ಕೃತಿಯು ಯಕ್ಷಗಾನ ಕಲೆಗೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿವೆ. ಅವುಗಳಲ್ಲಿ ‘ಯಕ್ಷವೇಷ ವೈಭವ’ ಎಂಬ ಲೇಖನದಲ್ಲಿ ಯಕ್ಷಗಾನದ ಆಹಾರ್ಯವನ್ನು ವಿವರಿಸಿದ್ದಾರೆ. ಲೇಖನದ ಮೊದಲ ಭಾಗವು ಅವರ ‘ನೃತ್ಯ ಪ್ರಬಂಧಗಳು’ ಕೃತಿಯಲ್ಲಿ ಅಚ್ಚಾಗಿದೆ. ಎರಡನೇ ಭಾಗವು ಯಕ್ಷಗಾನ ವೇಷಭೂಷಣಗಳಲ್ಲಿ ಪರಿಷ್ಕಾರ ಮಾಡಬೇಕಾದ ಅಗತ್ಯವನ್ನು ಕುರಿತು ಹೇಳುತ್ತದೆ.

ಚಿತ್ರಗಳ ಮೂಲಕ ಸಮಕಾಲೀನ ಯಕ್ಷಗಾನ ವೇಷಗಳನ್ನು ದಾಖಲಿಸಿರುವ ಒಂದು ಅಪರೂಪದ ಕೃತಿ ಮನೋಹರ ಎಸ್. ಕುಂದರ್ ಸಂಪಾದಿಸಿರುವ ‘ಚಿತ್ರಗಳ ಮೂಲಕ ಸಮಕಾಲೀನ ಯಕ್ಷಗಾನ (೧೯೯೮). ಈ ಕೃತಿಯಲ್ಲಿ ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳಿಗೆ ಸಂಬಂಧಿಸಿದ ವೇಷಗಳ ಸುಮಾರು ೩೦೨ ಛಾಯಾಚಿತ್ರಗಳಿವೆ. ಯಕ್ಷಗಾನದ ವೇಷಗಳನ್ನು ಸ್ತ್ರೀವೇಷಗಳು, ಪಕಡಿವೇಷಗಳು, ರಾಜವೇಷಗಳು, ಬಣ್ಣದ ವೇಷಗಳು, ಹಾಸ್ಯವೇಷಗಳು, ನಾಟಕೀಯ ವೇಷಗಳು ಹೀಗೆ ವಿಭಾಗಿಸಿಕೊಂಡು ಕ್ರಮ ಪ್ರಕಾರವಾಗಿ ಚಿತ್ರಗಳನ್ನು ದಾಖಲಿಸಿದ್ದಾರೆ. ವಾಲಿ, ಸುಗ್ರೀವ, ಹನುಮಂತ, ಈಶ್ವರ, ಕಿರಾತ, ಗರುಡ ತಕ್ಷಕ, ವರಾಹ, ನಂದಿ, ನಂದಿಕೇಶ ಇತ್ಯಾದಿ ಯಕ್ಷಗಾನದ ಅಪರೂಪದ ವೇಷಗಳನ್ನು ಒದಗಿಸಿದ್ದಾರೆ. ಕೃತಿಗೆ ಕೆ.ಎಂ. ರಾಘವ ನಂಬ್ಯಾರ ಮುನ್ನುಡಿ ಇದೆ. ಅನಂತರ ಯಕ್ಷಗಾನ ಹಿಮ್ಮೇಳದ ಚಿತ್ರಗಳಿವೆ. ಕೊನೆಯ ಭಾಗದಲ್ಲಿ ಯಕ್ಷಗಾನ ಬಣ್ಣಗಾರಿಕೆ ಹಾಗೂ ವೇಷಧಾರಣೆಯ ವಿವಿಧ ಹಂತಗಳನ್ನು ಚಿತ್ರಗಳಲ್ಲಿ ದಾಖಲಿಸಿದ್ದಾರೆ. ಪ್ರತಿಯೊಂದು ಚಿತ್ರದ ಕೆಳಗೆ ಪಾತ್ರದ ಹೆಸರು, ಕಲಾವಿದನ ಹೆಸರು, ವೇಷದ ವೈಶಿಷ್ಟ್ಯ ಇತ್ಯಾದಿ ವಿವರಗಳನ್ನು ಒದಗಿಸಿದ್ದಾರೆ. ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನ ವೇಷಗಳನ್ನು ಒಂದೆಡೆ ದಾಖಲಿಸಿರುವುದರಿಂದ ತೌಲನಿಕ ಅಧ್ಯಯನಕ್ಕೆ ಸೂಕ್ತ ಅವಕಾಶ ಲಭಿಸುತ್ತದೆ.

‘ಯಕ್ಷಗಾನ ವರ್ಣವೈಭವ’ (೧೯೯೯) ಡಾ.ಗೋಪಾಲಕೃಷ್ಣ ಹೆಗಡೆ ಅವರು ಬರೆದ ಕೃತಿ. ಇದರ ಮೊದಲ ಭಾಗದಲ್ಲಿ ಯಕ್ಷಗಾನದ ಮೂಲ, ಯಕ್ಷಗಾನದ ಅರ್ಥ, ಗಣಪತಿ ಹಾಗೂ ಯಕ್ಷಗಾನ ಸಂಬಂಧ, ಯಕ್ಷಗಾನ ಪ್ರಸರಣಗೊಂಡಿರುವ ಪ್ರದೇಶ ಮೊದಲಾದ ಅಂಶಗಳನ್ನು ಚರ್ಚಿಸಿದ್ದಾರೆ. ದೇವದಾಸಿಯರ ನೃತ್ಯಸೇವೆ, ಯಾಮಾಷ್ಟಕ ಸೇವೆ, ಹಗರಣ ಮೊದಲಾದ ಕಲಾತ್ಮಕ ಆಚರಣೆಗಳು ಯಕ್ಷಗಾನ ಸಂಪ್ರದಾಯಗಳಲ್ಲಿ ಉಳಿದುಕೊಂಡು ಬಂದಿರುವುದನ್ನು ಗುರುತಿಸಿದ್ದಾರೆ.

ಎರಡನೇ ಭಾಗದಲ್ಲಿ ಯಕ್ಷಗಾನದ ಬಣ್ಣಗಾರಿಕೆ ಮತ್ತು ವೇಷಭೂಷಣಗಳ ವಿವರಗಳನ್ನು ಒದಗಿಸಿದ್ದಾರೆ. ಯಕ್ಷಗಾನದ ಆಹಾರ್ಯಾಭಿನಯದಲ್ಲಿ ಮುಖ್ಯವಾಗಿ ಎರಡು ವಿಭಾಗಗಳು. ಒಂದು, ಮುಖವರ್ಣಿಕೆ ಅಥವಾ ಬಣ್ಣಗಾರಿಕೆ; ಎರಡು, ವೇಷಭೂಷಣಗಳು ಅಥವಾ ವಸ್ತ್ರಾಲಂಕಾರಗಳು. ಯಕ್ಷಗಾನವು ವಾಸ್ತವದಿಂದ ದೂರ ನಿಂತ ಕಲೆ. ಆದುದರಿಂದಲೇ ಆಯಾ ಪಾತ್ರಗಳ ಸ್ವಭಾವ, ಗುಣಶೀಲಗಳನ್ನು ವ್ಯಕ್ತಪಡಿಸುವಂತೆ ಯಕ್ಷಗಾನದ ಬಣ್ಣಗಾರಿಕೆ ಮತ್ತು ವೇಷಭೂಷಣಗಳಿರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಕ್ಷಗಾನದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಕಿರೀಟಗಳು, ಮುಂದಲೆ, ಕೇದಗೆ, ಚೆಂಡಿನದಂಡೆ, ಕರ್ಣಪತ್ರ, ಭುಜಕೀರ್ತಿ, ಭುಜದಂಬೆ, ತೋಳಬಂದಿ, ಕೈಕಟ್ಟು, ಎದೆಹಾರ, ಸೊಂಟಪಟ್ಟಿ, ಕಾಂಚೀಧಾಮ, ಗೆಜ್ಜೆ ಇತ್ಯಾದಿ ವೇಷ ಪರಿಕರಗಳನ್ನು ವಿವರಿಸಿದ್ದಾರೆ. ಕೋಡಂಗಿ ವೇಷಗಳು, ಬಣ್ಣದ ವೇಷಗಳು, ಸ್ತ್ರೀವೇಷಗಳು, ಕಿರೀಟದ ವೇಷಗಳು, ಪೊಗಡೆ ವೇಷಗಳು, ಶೃಂಗ ಭೂಷಣ, ಪಾತ್ರಗಳು, ಋಷಿಮುನಿಗಳ ಪಾತ್ರಗಳು, ಹಾಸ್ಯಪಾತ್ರಗಳು ಎಂಬುದಾಗಿ ಯಕ್ಷಗಾನದ ವೇಷಗಳನ್ನು ವಿಭಾಗಿಸಿ ಅಧ್ಯಯನ ಮಾಡಿದ್ದಾರೆ. ಅಧ್ಯಯನಕ್ಕೆ ಸುಮಾರು ೭೦ ಕ್ಕಿಂತಲೂ ಅಧಿಕ ವರ್ಣಚಿತ್ರಗಳನ್ನು ಬಳಸಿದ್ದಾರೆ. ಅಲ್ಲಲ್ಲಿ ರೇಖಾಚಿತ್ರಗಳ ಮೂಲಕ ಆಹಾರ್ಯದ ಮಾಹಿತಿ ಒದಗಿಸಿದ್ದಾರೆ. ಇದು ಮುಖ್ಯವಾಗಿ ಯಕ್ಷಗಾನ ಬಡಗುತಿಟ್ಟು ಸಂಪ್ರದಾಯದ ವೇಷಭೂಷಣ ಹಾಗೂ ಬಣ್ಣಗಾರಿಕೆಯ ಅಧ್ಯಯನವಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ವಿಶ್ವಕೋಶ-೨ ಕರಕುಶಲ ಕಲೆಗಳು (ಸಂ. ಡಾ. ಕರೀಗೌಡ ಬೀಚನಹಳ್ಳಿ, ೨೦೦೦) ಸಂಪುಟದಲ್ಲಿ ಯಕ್ಷಗಾನದ ವೇಷಭೂಷಣಗಳ ಕುರಿತು ಲೇಖನಗಳಿವೆ. ಎಂ. ಪ್ರಭಾಕರ ಜೋಶಿಯವರು ಬರೆದ ‘ಯಕ್ಷಗಾನದ ವೇಷಭೂಷಣಗಳು’ ಎಂಬ ಲೇಖನವು ಕರಾವಳಿ ಕರ್ನಾಟಕದ ಯಕ್ಷಗಾನದ ಮೂರು ತಿಟ್ಟುಗಳ ಯಕ್ಷಗಾನ ವೇಷಭೂಷಣಗಳ ವಿವರಗಳನ್ನು ನೀಡುತ್ತದೆ. ಯಕ್ಷಗಾನ ವೇಷಭೂಷಣಗಳಿಗೂ ತೆರುಕೂತ್ತು, ಕಥಕಳಿ, ಚಿಂದು ಭಾಗವತಂ, ಭಾಗವತ ಮೇಳ ರಂಗಪ್ರಕಾರಗಳ ವೇಷಭೂಷಣಗಳಿಗೂ ಸ್ಪಷ್ಟ ಸಾಮ್ಯವಿದ್ದು, ಕೇರಳೀಯ ಪ್ರಭಾವದ ಫಲವೇ ತೆಂಕುತಿಟ್ಟು ಯಕ್ಷಗಾನದ ವೇಷಭೂಷಣಗಳೆಂದು ಅವರು ಊಹಿಸಿದ್ದಾರೆ. ಯಕ್ಷಗಾನ ವೇಷಭೂಷಣಗಳನ್ನು ಆಭರಣಗಳು, ಜವಳಿ, ಶಿರೋಭೂಷಣಗಳು ಎಂದು ಮುಂತಾಗಿ ವಿಭಾಗಿಸಿ ಅಧ್ಯಯನ ನಡೆಸಿದ್ದಾರೆ. ವೇಷಭೂಷಣಗಳ ತಯಾರಿ, ಕಿರೀಟ ಆಭರಣಗಳ ತಯಾರಿಕೆಗೆ ಬಳಸುವ ಮರಗಳು ಹಾಗೂ ವೇಷಭೂಷಣಗಳ ಬಳಕೆಯಲ್ಲಿ ಬದಲಾವಣೆಗಳು ಮೊದಲಾದ ಅಂಶಗಳನ್ನು ಚರ್ಚಿಸಿದ್ದಾರೆ.

ಒಡ್ಡೋಲಗ (೨೦೦೨) ಮಂಗಳೂರಿನಲ್ಲಿ ನಡೆದ ಬಂಟರ ಯಕ್ಷಗಾನ ಸಮ್ಮೇಳನದ ಸ್ಮರಣ ಸಂಚಿಕೆ. ಯಕ್ಷಗಾನಕ್ಕೆ ಸಂಬಂಧಿಸಿದ ಸುಮಾರು ೯೦ ಲೇಖನಗಳಿವೆ. ಯಕ್ಷಗಾನದ ಆಹಾರ್ಯದ ದೃಷ್ಟಿಯಿಂದ ಕೋಳ್ಯೂರು ರಾಮಚಂದ್ರರಾಯರು ಬರೆದ ‘ಸ್ತ್ರೀವೇಷ ಸ್ವರೂಪ ಮತ್ತು ಅನ್ವೇಷಣೆ’ ಹಾಗೂ ಅಮೃತ ಸೋಮೇಶ್ವರ ಅವರು ಬರೆದ ‘ಯಕ್ಷಗಾನ ತುಳುತಿಟ್ಟು ಲೇಖನಗಳನ್ನು ಗಮನಿಸಬಹುದು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಪ್ರಸಿದ್ಧ ಸ್ತ್ರೀಪಾತ್ರಧಾರಿ ಕೋಳ್ಯೂರು ಅವರು ಹಲವಾರು ಸ್ತ್ರೀಪಾತ್ರಗಳನ್ನು ತಾವು ನಿರ್ವಹಿಸಿದ ಬಗೆಯನ್ನು ಹೇಳಿದ್ದಾರೆ. ಅಮೃತ ಸೋಮೇಶ್ವರ ಅವರು ತುಳು ಯಕ್ಷಗಾನ ಪ್ರಸಂಗಗಳಿಗೆ ತುಳುನಾಡಿನ ದೈವಾರಾಧನೆಯ ಪ್ರಪಂಚದಿಂದ ಹಲವಾರು ವೇಷಭೂಷಣಗಳ ಮಾದರಿಯನ್ನು ರಚಿಸಿಕೊಳ್ಳಬಹುದು ಎಂದಿದ್ದಾರೆ.

ಉದ್ಯಾವರ ಮಾಧವ ಆಚಾರ್ಯರು ಬರೆದ ‘ಕಮಲಮುಂದಲೆಗೊಂದು ಹಿನ್ನೆಲೆ-ಯಕ್ಷವೇಷ ವೈಭವ’ ಎಂಬ ಲೇಖನದಲ್ಲಿ ಇಂದಿನ ಯಕ್ಷಗಾನ ಸ್ತ್ರೀವೇಷಗಳು ಪರಿಷ್ಕಾರಗೊಳ್ಳಬೇಕಾದ ಅಗತ್ಯವನ್ನು ಸಾರುತ್ತವೆ. ಪುರುಷ ವೇಷಕ್ಕೆ ಬಳಕೆಯಲ್ಲಿರುವ ಕೇದಗೆ ಮುಂದಲೆ ಎಂಬ ಶಿರೋಭೂಷಣಕ್ಕೆ ಸಂವಾದಿಯಾಗಿ ಸ್ತ್ರೀವೇಷಗಳಿಗೆ ಕಮಲ ಮುಂದಲೆಯನ್ನು ಅಳವಡಿಸಬಹುದು. ಸ್ತ್ರೀವೇಷದ ಶಿರೋಭೂಷಣ, ಎದೆಯ ಆಭರಣ, ತೋಳ್ಬಂದಿ, ಕೈಕಟ್ಟು, ಜಡೆಬಿಲ್ಲೆ, ಸೊಂಟಪಟ್ಟಿಗಳ ಮಾದರಿಗಳನ್ನು ಚಿತ್ರ ಸಹಿತ ವಿವರಿಸಿದ್ದಾರೆ.

ಯಕ್ಷಗಾನ ದೃಶ್ಯಕಲೆಯ ಮುಖವರ್ಣಿಕೆ ಮತ್ತು ವೇಷಭೂಷಣ (ವಿಶೇಷವಾಗಿ ಬಡಗು, ತೆಂಕುತಿಟ್ಟನ್ನು ಅನುಲಕ್ಷಿಸಿ- ೨೦೦೩) ಇದು ಎ.ಎಸ್. ವಿಶ್ವನಾಥ ಅವರ ಅಪ್ರಕಟಿತ ಎಂ.ಫಿಲ್ ಪ್ರಬಂಧ. ಈ ಪ್ರಬಂಧದಲ್ಲಿ ಯಕ್ಷಗಾನದ ಐತಿಹಾಸಿಕ ಹಿನ್ನೆಲೆ, ಮುಖವರ್ಣಿಕೆ, ವೇಷಭೂಷಣಗಳ ವರ್ಗೀಕರಣ, ಮುಖವರ್ಣಿಕೆಯ ವಿನ್ಯಾಸ, ವಸ್ತ್ರವಿನ್ಯಾಸ, ಆಭರಣ ವಿನ್ಯಾಸ, ಕಿರೀಟ ವಿನ್ಯಾಸ, ಪ್ರದರ್ಶನದ ಕಲಾತ್ಮಕ ವಿನ್ಯಾಸ ಮೊದಲಾದ ಅಂಶಗಳನ್ನು ದೃಶ್ಯ ಕಲಾದೃಷ್ಟಿಯಿಂದ ಅಧ್ಯಯನ ನಡೆಸಲಾಗಿದೆ. ಬಣ್ಣಗಾರಿಕೆ, ವೇಷಭೂಷಣ, ಕಿರೀಟ, ಸಂಗೀತ, ಕುಣಿತಗಳ ಸಾಮರಸ್ಯ ಅಥವಾ ಕಲಾತ್ಮಕ ವಿನ್ಯಾಸವೇ ಸಮಗ್ರ ಯಕ್ಷಗಾನ ಪ್ರದರ್ಶನವಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

ಯಕ್ಷಗಾನ ಮತ್ತು ಚಿತ್ರಕಲೆ (೨೦೦೪) ಉಪಾಧ್ಯಾಯ ಮೂಡುಬೆಳ್ಳೆಯವರ ಕೃತಿ. ಯಕ್ಷಗಾನದ ಪಾತ್ರಗಳನ್ನು ಬಣ್ಣದ ವೇಷ, ಪೊಗಡೆ ವೇಷ, ಸ್ತ್ರೀ ವೇಷ, ಹಾಸ್ಯ ವೇಷ ಮತ್ತು ಋಷಿ ಮುನಿಗಳ ವೇಷ ಎಂಬುದಾಗಿ ವಿಭಾಗಿಸಿ, ಅವುಗಳ ಕಲಾವಂತಿಕೆಯನ್ನು ಚರ್ಚಿಸಿದ್ದಾರೆ. ಯಕ್ಷಗಾನದ ಅಭಿನಯರಂಗ ಬೆಳಗಬೇಕಾದರೆ ಅಲ್ಲಿ ಚಿತ್ರಕಲೆಯ ಮಹತ್ವವೂ ಬಹಳವಿದೆ. ಚಿತ್ರ, ನಕ್ಷೆ, ಬಣ್ಣಗಳಿಲ್ಲದೆ ವೇಷವಾಗಲೀ, ಉಡುಗೆ ತೊಡುಗೆ ಗಳಾಗಲೀ ಎಂದಿಗೂ ಕಣ್ಮನ ಸೆಳೆಯಲಾರವು ಎಂದು ಕಲೆಯ ಮಹತ್ವವನ್ನು ಹೇಳಿದ್ದಾರೆ.

ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ (೨೦೦೪) ಕೇಶವಶರ್ಮ ಅವರ ಅಧ್ಯಯನ ಗ್ರಂಥ. ಯಕ್ಷಗಾನದ ಅದರಲ್ಲೂ ಮುಖ್ಯವಾಗಿ ತೆಂಕುತಿಟ್ಟು ಯಕ್ಷಗಾನದ ಬಣ್ಣಗಾರಿಕೆಯನ್ನು ಕುರಿತಂತೆ ಬಂದ ಏಕೈಕ ಪುಟ್ಟ ಕೃತಿ. ಬಣ್ಣ ಮತ್ತು ಬಣ್ಣಗಾರಿಕೆಯನ್ನು ಕುರಿತ ಅಧ್ಯಯನ ಪೂರ್ಣ ವಿಚಾರಗಳು ಈ ಕೃತಿಯಲ್ಲಿ ಇವೆ.

ಇಲ್ಲಿ ಸಮೀಕ್ಷಿಸಿದ ಲೇಖನಗಳು ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ದೃಷ್ಟಿಕೋನ ಗಳಿಂದ ಬರೆದವುಗಳು. ಯಕ್ಷಗಾನದ ಆಹಾರ್ಯದ ಕುರಿತ ಕಲ್ಪನೆಗೆ ಭಾವುಕವಾಗಿ ಪ್ರತಿಕ್ರಿಯಿಸುವ, ಕೆಲವೊಂದು ಲೇಖನಗಳು ಅದರ ವೈಶಿಷ್ಟ್ಯಗಳನ್ನು ಕುರಿತಂತೆ ಗಂಭೀರವಾಗಿ ಶೋಧಿಸುವ ಪ್ರಯತ್ನವನ್ನು ಮಾಡಿವೆ. ಬಹುತೇಕ ಲೇಖನಗಳಲ್ಲಿ ಚಿಂತನೆಗಳು ಯಕ್ಷಗಾನದ ವೇಷಭೂಷಣಗಳಿಗೆ ನಿರ್ದಿಷ್ಟ ಮಾದರಿಗಳು ಇವೆ ಎಂಬ ನೆಲೆಯಲ್ಲಿಯೇ ರೂಪು ಪಡೆದಿವೆ. ಈ ಮಾದರಿಗಳು ಪರಂಪರೆಯ ಹೆಸರಿನಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗ ಒಂದೆಡೆ ಎಂಬ ಖಚಿತ ತಿಳುವಳಿಕೆಯ ನೆಲೆಯಲ್ಲಿ ರೂಪುಗೊಂಡುದು ಒಂದು. ಇನ್ನೊಂದು ಭರತನ ನಾಟ್ಯಶಾಸ್ತ್ರ ಪ್ರಣೀತ ವಿಚಾರಗಳ ನೆಲೆಯಿಂದ ರೂಪುಗೊಳಿಸಿದ ಮಾದರಿ. ಈ ಎರಡು ಆದರ್ಶ ಮಾದರಿಗಳಿಂದ ದೂರವಾಗುತ್ತ ಯಕ್ಷಗಾನದ ಆಹಾರ್ಯ ಶೈಥಿಲ್ಯದ ದಾರಿ ಹಿಡಿದಿದೆ ಎಂಬ ಕಾಳಜಿ ಈ ಬರವಣಿಗೆಗಳಲ್ಲಿ ವ್ಯಕ್ತವಾಗಿದೆ. ಚಿನ್ನಪ್ಪಗೌಡರಂಥ ಕೆಲವರು ಇದಕ್ಕಿಂತ ಭಿನ್ನವಾಗಿ ಯಕ್ಷಗಾನದ ವೇಷಭೂಷಣಗಳಿಗೆ ಆಕರಗಳನ್ನು ಭೂತಾರಾಧನೆಯಲ್ಲಿ (ಬೂತೊ ಕೋಲೊ) ಕಾಣುವ ಪ್ರಯತ್ನ ಮಾಡಿದ್ದಾರೆ.

ಯಕ್ಷಗಾನವನ್ನು ಬೆಳೆಸಿಕೊಂಡು ಬಂದ ಜನರು ಶಾಸ್ತ್ರೀಯ ಗ್ರಂಥಗಳನ್ನು ಓದಿ ಕರಗತ ಮಾಡಿಕೊಂಡ ಪಂಡಿತರೇನಲ್ಲ. ಅದು ಅನಕ್ಷರಸ್ಥ ಜನಸಮುದಾಯ ಸ್ವತಂತ್ರವಾಗಿ ಕಾಲದ ಅಗತ್ಯಕ್ಕೆ ಮನುಗುಣವಾಗಿ ರೂಪಿಸಿಕೊಂಡ ಕಲಾಪ್ರಕಾರ. ಆರಾಧನೆಯ ಭಾಗವಾಗಿ ರೂಪುಗೊಂಡ ಈ ಕಲಾಪ್ರಕಾರ ವೇಷ ವಿಧಾನಗಳಿಗೆ ಒಂದು ಧಾರ್ಮಿಕ ಪಾವಿತ್ರ್ಯದ ಚೌಕಟ್ಟನ್ನು ಜನಸಮುದಾಯ ರೂಪಿಸಿಕೊಂಡು ಬಂದಿದೆ. ಪ್ರತಿಭಾವಂತ ಕಲಾವಿದರು ಯಕ್ಷಗಾನದ ಆಹಾರ್ಯವನ್ನು ರೂಪಿಸಿಕೊಳ್ಳುವಲ್ಲಿ ಅವರಿಗೆ ಸ್ವಾತಂತ್ರ್ಯವಿತ್ತು. ಆ ಸ್ವಾತಂತ್ರ್ಯ ಧಾರ್ಮಿಕವಾದ ಚೌಕಟ್ಟಿನ ಒಳಗಡೆಯೇ ನಡೆದಿರುವುದರಿಂದ ಯಕ್ಷಗಾನದ ಆಹಾರ್ಯಕ್ಕೆ ಒಂದು ಪರಂಪರೆ ಉಳಿದುಕೊಂಡು ಬಂದಿದೆ. ಇದು ಆಯಾ ಜನಸಮುದಾಯ ತಮ್ಮ ಸೃಜನಶೀಲತೆಯ, ಕರಕೌಶಲ್ಯದ ಹಾಗೂ ಪ್ರತಿಭೆಯ ಭಾಗವಾಗಿ ಸಾಂಸ್ಕೃತಿಕವಾಗಿ ರೂಪಿಸಿ ಕೊಂಡುದು. ಈ ನೆಲೆಯಲ್ಲಿ ಪ್ರಾದೇಶಿಕವಾಗಿ ಒಂದು ಜನಸಮುದಾಯ ಅವುಗಳ ಅಸ್ತಿತ್ವದ ಸಂದರ್ಭದಲ್ಲಿ ಅಪಾರ ಕೊಡುಗೆಗಳನ್ನು ನೀಡಿದೆ. ಇಲ್ಲಿ ಸಮುದಾಯದ ಸಾಂಸ್ಕೃತಿಕ ಕಾಳಜಿಯೇ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಯಕ್ಷಗಾನದ ಆಹಾರ್ಯ ಕಾಲಾನುಕ್ರಮದಲ್ಲಿ ಅನೇಕ ಬದಲಾವಣೆಗಳಿಗೆ ತುತ್ತಾಗಿದೆ. ಈ ಬದಲಾವಣೆಗಳಿಗೆ ಕಾರಣಗಳ ಶೋಧ ಮುಖ್ಯವಾಗುತ್ತದೆ. ಅವುಗಳ ಅಧ್ಯಯನ ಸಹ ಆಹಾರ್ಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ಒಟ್ಟಿನಲ್ಲಿ ಯಕ್ಷಗಾನದ ಆಹಾರ್ಯದ ನಿಗೂಢ ನೆಲೆಯು ಕಲಾಸಕ್ತರಿಗೆ ನಿರಂತರವಾಗಿ ಕಾಡಿವೆ ಎಂಬುದು ಮಾತ್ರ ಸುವ್ಯಕ್ತ. ಹಾಗಾಗಿ ಈ ಎಲ್ಲಾ ಅಧ್ಯಯನಗಳ ನೆಲೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಪ್ರಸ್ತುತ ಅಧ್ಯಯನವನ್ನು ರೂಪಿಸಲಾಗಿದೆ.