ಕರಾವಳಿಯ ಇತರ ಅನೇಕ ಧಾರ್ಮಿಕ ಕಲೆಗಳ ಸಂದರ್ಭಗಳು ಕೂಡಾ ನಾಗನಂತೆಯೇ ಮೈ ಕುಣಿಸುವ, ತಲೆಯಾಡಿಸುವ ಚಲನೆಯನ್ನು ಕಾಣಬಹುದು. ಯಕ್ಷಗಾನದಂತಹ ಕಲೆಯೂ ಇದಕ್ಕೆ ಹೊರತಲ್ಲ. ಯಕ್ಷಗಾನದ ವೇಷಭೂಷಣ, ನೃತ್ಯ ಇತ್ಯಾದಿಗಳಲ್ಲಿ ನಾಗಚಲನೆಯ ಸ್ವರೂಪವನ್ನು ಕಾಣಬಹುದು. ನೃತ್ಯದಲ್ಲಿ ಕೈಯ ಚಲನೆ ಮತ್ತು ರಂಗನೃತ್ಯದ ಸಂದರ್ಭ ದಲ್ಲೂ ನಾಗ ಸಂಚಾರ ಇರುವಂತೆ ತಿಳಿದು ಬರುತ್ತದೆ. ಈ ತೆರನ ಹಸ್ತ ಚಲನೆಗಳು ಪತಾಕಮುದ್ರೆಯಾಗಿ ಬದಲಾಗಿರುವುದನ್ನು ಸಹ ಗಮನಿಸಬಹುದು. ಯಕ್ಷಗಾನದ (ಬಡಗುತಿಟ್ಟು) ಯುವಪಾತ್ರಗಳು ವೀರಾವೇಶದ ತುರೀಯಾವಸ್ಥೆಯಲ್ಲಿ ಮಂಡಿಯೂರಿ ಕುಣಿಯುವಾಗ ನೋವುಂಡ ನಾಗನು ವಿರೋಧಿಯನ್ನು ಪ್ರತಿಭಟಿಸುವಂತೆ ಕಾಣುತ್ತದೆ. ಕಿರೀಟ ವೇಷಧಾರಿಗಳು ಯುದ್ಧದ ಸಂದರ್ಭಗಳಲ್ಲಿ ‘ಕಾಕು’ ಹೊಡೆಯುವ ಕ್ರಮವು ನಾಗ ಸಿಟ್ಟಿಗೆದ್ದಾಗ ಹೆಡೆಯಪ್ಪಳಿಸುವ ರೀತಿಯನ್ನು ಅನುಸರಿಸುವಂತಿದೆ. ತೆಂಕುತಿಟ್ಟು ಯಕ್ಷಗಾನ ದಲ್ಲೂ ಯುದ್ಧದ ಸಂದರ್ಭದಲ್ಲಿ ಸೋಲುವ ಪಾತ್ರವೊಂದು ಕೊನೆಯ ಬಾರಿ ಮಂಡಿಯೂರಿ ಕುಳಿತು, ಕೈಯನ್ನು ನೆಲಕ್ಕೆ ಊರಿ ತಲೆಯನ್ನು ನಾಗನ ಹೆಡೆಯಂತೆ ಕುಣಿಸುತ್ತಾ ತನ್ನ ಪರಾಕ್ರಮದ ಕೊನೆಯ ಕ್ಷಣವನ್ನು ಪ್ರಕಟಿಸುತ್ತದೆ.

ಯಕ್ಷಗಾನದ ವೇಷಭೂಷಣದ ಸಂದರ್ಭದಲ್ಲೂ ಕೂಡಾ ನಾಗ ಸ್ವರೂಪವನ್ನು ಕಾಣಬಹುದಾಗಿದೆ. ಯಕ್ಷಗಾನದ ತುರಾಯಿ, ಪಕಡಿ ಮೊದಲಾದವುಗಳು  ನಾಗ ಹೆಡೆಯ ಆಕಾರವನ್ನೇ ಹೋಲುತ್ತವೆ. ಬಡಗುತಿಟ್ಟಿನ ಕೇದಗೆ ಮುಂದಲೆ, ಮುಡಿಕೇದಗೆಗಳು ನಾಗನ ಹೆಡೆಯನ್ನು ಹೋಲುವ ಪರಿಕರಗಳು. ಬಡಗುತಿಟ್ಟಿನಲ್ಲಿ ಮಾತ್ರ ಬಳಕೆಯಲ್ಲಿರುವ ಕೇದಗೆಸರವು ನಾಗಚಿಹ್ನೆಯನ್ನು ಹೊಂದಿದೆ. ನಾಗ ಮಂಡಲದಲ್ಲಿ ಬಳಸುವ ‘ಪಾಟರೀ’ ಬಣ್ಣವನ್ನು ಯಕ್ಷಗಾನದಲ್ಲೂ ಹಿಂದೆ ಬಳಸುತ್ತಿದ್ದರಂತೆ. ಹಿಂದಿನ ಕಾಲದಲ್ಲಿ ಹಾಡುಗಾರರ ಅಥವಾ ಭಾಗವತರ ಧ್ವನಿಗೆ ಪೂರಕವಾಗಿ ಪುಂಗಿಯಂತಹ ಶ್ರುತಿಬುರುಡೆಯನ್ನು ಊದುವ ರೂಢಿಯಿತ್ತಂತೆ. (ಮಾಹಿತಿ: ವಿಶ್ವನಾಥ ಶೇಟ್, ಸಿದ್ಧಾಪುರ) ಇದಕ್ಕೆ ನಾಗಸ್ವರ ಎಂದೇ ಹೆಸರು. ಪುಂಗಿಯೂದಿ ಯಕ್ಷಗಾನ ವೇಷಗಳನ್ನು ಕುಣಿಸುತ್ತಿದ್ದರೆಂದರೆ ಯಕ್ಷಗಾನದ ಪಾತ್ರಗಳು ಸಾಕ್ಷಾತ್ ನಾಗಗಳನ್ನೇ ಸಂಕೇತಿಸುತ್ತವೆ ಎಂದಾಯಿತು.

ಯಕ್ಷಗಾನದ ಪೂರ್ವರಂಗದ ವೇಷದಲ್ಲೂ ಸುಬ್ಬರಾಯ ಎಂಬ ಒಂದು ವೇಷವಿದೆ. ರಂಗಸ್ತುತಿಯಲ್ಲಿ ‘ಕುಂಡಲಮಣಿ ಭೂಷಣ ಓ ಸುಬ್ಬರಾಯ’ ಎಂಬ ಹಾಡಿನಿಂದ ಷಣ್ಮುಖನನ್ನು ಪ್ರಾರ್ಥಿಸುವ ಸ್ತುತಿ ಗೀತೆಯಿದೆ. ಇಲ್ಲಿ ಸುಬ್ಬರಾಯನೆಂದರೆ ಷಣ್ಮುಖನಲ್ಲ. ಸಾಕ್ಷಾತ್ ನಾಗನೇ ಎಂಬ ಶಿವರಾಮ ಕಾರಂತರ ಅಭಿಪ್ರಾಯ ಸಮ್ಮತವಾದುದೇ. ಸುಬ್ಬರಾಯನ ವೇಷವು ಯಕ್ಷಗಾನದಲ್ಲಿ ಬಹಳ ಪ್ರಾಚೀನ ಕಾಲದಿಂದಲೇ ರೂಢಿಯಲ್ಲಿದೆ. ಅದರ ವೇಷದ ಸ್ವರೂಪವು ನಾಗನನ್ನೇ ಅನುಸರಿಸುವ ರೀತಿಯಲ್ಲಿದೆ. ನಾಗಗಳ ಪೀಡನೆಗಳನ್ನು ನಿಗ್ರಹಿಸಲು ಹಾಡುವ ‘ಬಂದ ಹಾಗೆ ಹಿಂದಕ್ಕೆ ಹೋಗೆಲೋ ಸುಬ್ಬರಾಯ’ ಎಂಬಿತ್ಯಾದಿ ಹಾಡುಗಳು ನಾಗಾರಾಧನೆಯ ಪ್ರಭಾವವನ್ನು ನೆನಪಿಸುವಂತಿವೆ.

ನಾಗನನ್ನು ಹಾಗೂ ಸುಬ್ರಹ್ಮಣ್ಯನನ್ನೂ ಒಂದೇ ರೂಪದಲ್ಲಿ ಆರಾಧಿಸುವ ಸಂಪ್ರದಾಯ ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ಹೆಸರಿನ ಸ್ಥಳದಲ್ಲಿಯೂ ನಾಗನೇ ವಿಶೇಷವಾಗಿ ಪೂಜೆಗೊಳ್ಳುವುದನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು. ನಾಗಾರಾಧನೆಯಿಂದ ಶೈವಾರಾಧನೆಗೆ ಪರಿವರ್ತನೆಗೊಂಡ ಕಾಲದ ಪಳೆಯುಳಿಕೆ ಯನ್ನು ಇದರಲ್ಲಿ ಕಾಣಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಚಲಿತ ಕಥೆಯೊಂದಿದೆ (ನೋಡಿ : ಸುಶೀಲ ಉಪಾಧ್ಯಾಯ, ೧೯೯೮). ಸುಬ್ರಹ್ಮಣ್ಯನು ಒಂದು ದಿನ ಬ್ರಹ್ಮದೇವರ ಬಳಿ ಹೋಗಿ ಪ್ರಣವ ಮಂತ್ರದ ಅರ್ಥ ಕೇಳಿದನಂತೆ. ಬ್ರಹ್ಮದೇವರಿಗಾದರೋ ಇದಕ್ಕೆ ಸರಿಯಾದ ವಿವರಣೆ ಕೊಡಲಾಗಲಿಲ್ಲ. ಕೋಪಗೊಂಡ ಸುಬ್ರಹ್ಮಣ್ಯನು ಬ್ರಹ್ಮನನ್ನು ಕೋಣೆಯೊಳಗೆ ಕೂಡಿ ಹಾಕಿ ಬಾಗಿಲು ಭದ್ರಪಡಿಸಿದನಂತೆ. ತಾನೇ ಸೃಷ್ಟಿಕಾರ್ಯದಲ್ಲಿ ತೊಡಗಿದನಂತೆ. ಕೊನೆಗೆ ಈಶ್ವರನೇ ಬ್ರಹ್ಮನನ್ನು ಉಪಾಯದಿಂದ ಮುಕ್ತಗೊಳಿಸಿದನಂತೆ. ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪಪಟ್ಟ ಸುಬ್ರಹ್ಮಣ್ಯನು ಸರ್ಪರೂಪವನ್ನು ತಾಳಿ ಪಶ್ಚಿಮ ಘಟ್ಟಗಳಲ್ಲಿ ಅಲೆಯುತ್ತಿದ್ದನಂತೆ. ಬಳಿಕ ಮಗನನ್ನು ಹುಡುಕುತ್ತಾ ಬಂದ ಪಾರ್ವತಿಯು ಸಹ್ಯಾದ್ರಿಯ ತಪ್ಪಲಲ್ಲಿ ಸರ್ಪ ರೂಪದ ಮಗನನ್ನು ಕಂಡಳು. ಅಷ್ಟರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳು ಅಲ್ಲಿಗೆ ಬಂದರು. ವಿಷ್ಣು ಸರ್ಪದ ಬೆನ್ನು ತಟ್ಟಿದಾಗ ಸುಬ್ರಹ್ಮಣ್ಯ ತನ್ನ ನಿಜ ರೂಪವನ್ನು ಪಡೆದನಂತೆ. ಈ ಘಟನೆಯ ನೆನಪಿಗಾಗಿ ಪಶ್ಚಿಮ ಕರಾವಳಿಯಲ್ಲಿ ನಾಗ ಸುಬ್ರಹ್ಮಣ್ಯ ಎಂಬ ಅಭೇದ್ಯ ಕಲ್ಪನೆಯಲ್ಲಿ ಒಂದೇ ರೂಪದಿಂದ ಪೂಜೆಗೊಳ್ಳುತ್ತಾರೆ ಎಂಬುದು ಐತಿಹ್ಯ. ಇಂದಿಗೂ ನಾಗಾರಾಧನೆಯಿಂದ ದೊರೆಯುವ ಫಲಪ್ರಾಪ್ತಿಯು ಯಕ್ಷಗಾನ ಆಡಿಸುವುದರಿಂದಲೂ ದೊರೆಯುತ್ತದೆ ಎಂಬುದು ನಂಬಿಕೆ. ಸಂತಾನ, ಆರೋಗ್ಯ ಹಾಗೂ ಸಂಪತ್ತಿಗೆ ಕಾರಣವಾಗುವ ನಾಗಾರಾಧನೆಯ ಫಲಸಿದ್ದಿಯೇ ಯಕ್ಷಗಾನ ನಡೆಸುವುದರಿಂದಲೂ ಲಭಿಸುತ್ತದೆಯೆಂದು ಪ್ರತೀತಿ. ನಾಗಾರಾಧನೆಯ ಪ್ರಭಾವವು ಯಕ್ಷಗಾನಕ್ಕೆ ನೇರವಾಗಿ ಬಂದಿರುವ ಸಾಧ್ಯತೆಯೂ ಇದೆ. ನಾಗ, ಯಕ್ಷ ಇತ್ಯಾದಿಗಳೆಲ್ಲ ಪ್ರಾಚೀನ ಕಾಲದಿಂದಲೇ ಕರಾವಳಿ ತೀರದಲ್ಲಿ ಆರಾಧನೆಗೊಳ್ಳುತ್ತಿದ್ದ ದೈವೀಸಂಕಲ್ಪಗಳು. ಇವು ಕಾಲಾನುಕ್ರಮದಲ್ಲಿ ವಿವಿಧ ಧರ್ಮ ನಂಬಿಕೆಗಳಿಗೆ ಅನುಗುಣವಾಗಿ ರೂಪುಗೊಂಡಿರುತ್ತವೆ. ಇವುಗಳನ್ನು ಪೂರ್ವರಂಗದ ವೇಷಗಳ ಸಂದರ್ಭದಲ್ಲಿ ಗಮನಿಸ ಬಹುದಾಗಿದೆ.

ಇವುಗಳನ್ನೆಲ್ಲ ಗಮನಿಸಿದರೆ ಯಕ್ಷಗಾನದಲ್ಲಿ ನಾಗಾರಾಧನೆಯ ಸ್ಪಷ್ಟ ಲಕ್ಷಣಗಳಿ ರುವುದು ತಿಳಿಯುತ್ತದೆ. ಯಕ್ಷಗಾನವು ರಂಗಭೂಮಿಗಿಂತಲೂ ಹೆಚ್ಚಾಗಿ ಆರಾಧನ ರೂಪದ ಕಲೆ. ಗಾನ ರೂಪದ ಆರಾಧನೆಯು ರಂಗಭೂಮಿಯ ಹಂತಕ್ಕೆ ಬೆಳೆಯುವ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಪಂಥಗಳು ಇದನ್ನು ಪ್ರಭಾವಿಸಿರುವುದು ಕಂಡುಬರುತ್ತದೆ. ಮುಖ್ಯವಾಗಿ ಯಕ್ಷಗಾನದ ಮೇಲೆ ನಾಗಾರಾಧನೆ, ಶೈವ ಹಾಗೂ ವೈಷ್ಣವ ಪಂಥಗಳ ಪ್ರಭಾವ ನಿಚ್ಚಳವಾಗಿ ಆಗಿದೆ. ಆಯಾ ಭಕ್ತಿ ಪಂಥಗಳು ಪ್ರಭಾವಶಾಲಿಯಾಗಿದ್ದಾಗ ಯಕ್ಷಗಾನವನ್ನು ತಮ್ಮ ಭಕ್ತಿ ಆಚರಣೆಯ ಉಪಾಧಿಯಾಗಿ ಬಳಸಿಕೊಂಡಂತೆ  ಕಾಣುತ್ತದೆ.

ತೆಂಕುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಮೂರು ಮುಖ್ಯ ಕಲಾಂಗಗಳಿವೆ. ಮೊದಲನೆಯದು ಪೂರ್ವರಂಗ. ಎರಡನೆಯದು ಮುಮ್ಮೇಳ ಹಾಗೂ ಮೂರನೆಯದು ಹಿಮ್ಮೇಳ. ಪೂರ್ವರಂಗವು ಯಕ್ಷಗಾನದಲ್ಲಿ ಇಂದು ಪರಂಪರೆಯ ಧಾರ್ಮಿಕ ಭಾಗವಾಗಿ ಉಳಿದುಕೊಂಡಿದೆ. ಯಕ್ಷಗಾನದ ಆರಂಭಿಕ ಸ್ವರೂಪವೂ ಇಲ್ಲಿಂದಲೇ ವಿಸ್ತಾರಗೊಂಡುದು. ಇದು ನಾಗಾರಾಧನೆಯ ಸ್ವರೂಪದಲ್ಲಿ ವಿಸ್ತಾರಗೊಂಡಿದೆ. ಇಲ್ಲಿರುವ ಸುಬ್ಬರಾಯ ಎಂಬ ವೇಷವು ನಾಗನ ಪ್ರತಿರೂಪವೇ ಹೊರತು ಷಣ್ಮುಖನ ಸಂಕೇತವಲ್ಲ. ಶೈವ ಪಂಥದ ಪ್ರಭಾವದಿಂದ ಸುಬ್ಬರಾಯನನ್ನು ಷಣ್ಮುಖ ಸುಬ್ಬರಾಯ ಎಂದು ಹೇಳುವ ಪರಿಪಾಠ ರೂಢಿಗೆ ಬಂದಿರಬೇಕು. ಷಣ್ಮುಖ ಹಾಗೂ ನಾಗ ಅಭೇದ ಕಲ್ಪನೆಯೂ ಇದೇ ಕಾಲಘಟ್ಟದ ಸೃಷ್ಟಿಯಾಗಿದೆ. ಹಾಗೆಯೇ ಇಲ್ಲಿ ಬರುವ ಅರ್ಧನಾರೀಶ್ವರ ಎಂಬ ವೇಷವೂ ಇದೇ ಹಿನ್ನೆಲೆಯಲ್ಲಿ ರೂಪ ಪಡೆದುದು. ಅದಕ್ಕೂ ಹಿಂದೆ ಪ್ರಾಚೀನ ರೂಪದಲ್ಲಿ ಅದು ಅರ್ಧನಾರೀ ವೇಷವೇ ಆಗಿತ್ತು. ಇಂದಿಗೂ ಅದನ್ನ ಅರ್ಧನಾರೀ ವೇಷವೆಂದೂ ಕರೆಯುವ ಪರಿಪಾಠವಿದೆ. ನಾಗಮಂಡಲ, ನಾಗಾರಾಧನೆಯ  ಸಂದರ್ಭಗಳಲ್ಲಿ ಅರ್ಧನಾರೀ ವೇಷವು ಇಂದಿಗೂ ಇದೆ ಎಂಬುದನ್ನು ನೋಡಿದರೆ ಇಲ್ಲಿನ ವಸ್ತುಸ್ಥಿತಿ ತಿಳಿಯುತ್ತದೆ. ಯಕ್ಷಗಾನವು ಒಂದು ಸಮೂಹ ಕಲೆ. ಇಲ್ಲಿ ಅನೇಕ ಪಾತ್ರಗಳ ಹಾಗೂ ಸಂಗೀತ, ಸಾಹಿತ್ಯ, ನೃತ್ಯಾದಿ ಕಲೆಗಳ ಸಮ್ಮಿಲನದ ಮೂಲಕವೇ ಯಕ್ಷಗಾನವೆಂಬ ಕಲಾರೂಪ ಸಿದ್ಧವಾಗುತ್ತದೆ. ನಾಗಮಂಡಲದಂತಹ ನೃತ್ಯಪೂಜೆ ನಡೆಯುವ ಪರಿಸರದಲ್ಲಿಯೇ ಯಕ್ಷಗಾನವೂ ಪ್ರವರ್ಧಮಾನಕ್ಕೆ ಬಂದಿದೆ. ನಾಗಮಂಡಲದಲ್ಲಿ ಮಂಡಲ ನಾಯಕನಾದ ಸುಬ್ಬರಾಯನಿಗೆ ಪೂಜೆ ಸಲ್ಲಿಸಲಾಗುತ್ತದೆ. ಯಕ್ಷಗಾನದಲ್ಲಿಯೂ ಸುಬ್ಬರಾಯನನ್ನೇ ಮುಖ್ಯ ಆರಾಧನಾ ಕೇಂದ್ರವಾಗಿ ಕಲ್ಪಿಸಿರುವುದನ್ನು ಕಾಣಬಹುದು. ಯಕ್ಷಗಾನದಲ್ಲಿ ಗಣಪತಿಯು ಮುಖ್ಯ ದೇವತೆಯಾಗಿ ಪೂಜಿಸುವುದಾದರೂ ಅದು ಕಾಲಾನಂತರ ಸೇರ್ಪಡೆಗೊಂಡುದೇ ಆಗಿರಬೇಕು. ವಿಘ್ನೇಶ್ವರನನ್ನ ದುಷ್ಟ ದೇವತೆಗಳ ಸಾಲಿನಲ್ಲಿ ಪರಿಗಣಿಸಲಾಗಿತ್ತು. ಆದರೆ ವೈದಿಕ ಮತಗಳು ಅವುಗಳನ್ನು ಬದಲಿಸಿ ವಿಘ್ನ ನಿವಾರಕನೆಂದು ಒಪ್ಪಿಕೊಂಡಂತೆ ತಿಳಿದು ಬರುತ್ತದೆ. ಈ ತೆರನ ಪರಿವರ್ತನೆಗೆ ಪುರಾಣಗಳೇ ಕಾರಣವಾಗಿರಬಹುದು. ಈ ನೆಲೆಯಲ್ಲಿ ಯಕ್ಷಗಾನವು ವಿಘ್ನೇಶ್ವರನನ್ನು ಅಧಿದೇವತೆಯಾಗಿ ಸ್ವೀಕರಿಸಿರಬಹುದು. ಬೌದ್ಧ ಧರ್ಮದಲ್ಲಿನ ಜಾತಕ ಕತೆಗಳು ಸೂಚಿಸುವಂತೆ ಆನೆಯು ಬುದ್ಧನ ಭಕ್ತರಲ್ಲಿ ಒಂದಾಗಿದ್ದಿತು. ಆನೆ ಮುಖವುಳ್ಳ ವಿನಾಯಕನು ಯಕ್ಷಾ ದೇವತೆ ಗಳಲ್ಲೊಬ್ಬ (ನೋಡಿ: ಕ.ವೆಂ. ರಾಜಗೋಪಾಲ, ೧೯೯೭:೧೪೬). ಬೌದ್ಧ ಧರ್ಮದ ಆನೆಯು ವೈದಿಕ ಧರ್ಮಕ್ಕೆ ಹೊಂದಿಕೊಳ್ಳುವ ವೇಳೆಗೆ ವಿನಾಯಕನ ರೂಪವನ್ನು ತಾಳಿರ ಬೇಕು.

ಸ್ಕಂದ ಪುರಾಣದಲ್ಲಿ ವಿಷ್ಣು-ಶಿವ-ಪಾರ್ವತಿ ಈ ಮೂರು ಅಂಶಗಳ ದೈವಿಕ ಐಕ್ಯತೆಯ ವಿಚಾರ ಬರುತ್ತದೆ. ಶಿವನ ಎಡಭಾಗದಲ್ಲಿ ಮೊದಲು ವಿಷ್ಣು ನಂತರ ಪಾರ್ವತಿಯು ಸೇರಿಕೊಂಡ ಕತೆಯೂ ಇದೆ. ಇದರಲ್ಲಿ ಧಾರ್ಮಿಕವಾಗಿ ಈ ಮೂರು ದೇವತೆಗಳು ಅಭೇದ ಕಲ್ಪನೆಯನ್ನು ಒಪ್ಪಿಕೊಂಡಂತಾಗುತ್ತದೆ. ಹಾಗಾಗಿ ವೈದಿಕ ಕಲ್ಪನೆಯಲ್ಲಿ ಸ್ತ್ರೀ ಪುರುಷರ ಸಮನ್ವಯವು ಸಿದ್ಧವಾಗುತ್ತದೆ.

ಪ್ರಕೃತಿ ಮತ್ತು ಪುರುಷ ಶಕ್ತಿಗಳು ಒಂದನ್ನೊಂದು ಒಲಿಸಿ ಬಾಳುವ ವೈಚಾರಿಕ ಭಾವನೆಯೂ ಸೇರಿಕೊಂಡಂತೆಯೂ ಗೋಚರಿಸುತ್ತದೆ. ನರ್ತಕನ ಸ್ತ್ರೀ ಪುರುಷ ವೇಷ ವೆಂಬುದು ಅದಕ್ಕೆ ಸಂಕೇತವಾಗಿ ಕಾಣುತ್ತದೆ. ಯಕ್ಷಗಾನದ ಪೂರ್ವರಂಗದಲ್ಲಿರುವ ಅರ್ಧನಾರೀ ವೇಷವು ಇದೇ ಸಂಕೇತದ ನೆಲೆಯಲ್ಲಿ ಮುಂದುವರಿದಿದೆಯೆಂದು ಪರಿಭಾವಿಸಬಹುದು. ಈ ನೆಲೆಯಲ್ಲಿ ನಾಗಾರಾಧನೆಯೂ ಯಕ್ಷಗಾನದ ಪೂರ್ವಕಾಲದ ಸಂಕಲ್ಪವೇ ಆಗಿದ್ದಿರಬೇಕು ಎಂದು ಊಹಿಸಬಹುದು. ನಾಗಾರಾಧನೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಒಂದು ಪ್ರಾಚೀನ ಸಂಪ್ರದಾಯ. ಇದು ಕಾಲಾನಂತರ ದಲ್ಲಿ ವಿವಿಧ ಸ್ವರೂಪಗಳಲ್ಲಿ ಆಚರಣೆಗೊಂಡು ಉಳಿದು ಬೆಳೆದುಕೊಂಡು ಬಂದಿವೆ. ದಕ್ಷಿಣ ಕನ್ನಡದಲ್ಲಿರುವ ನಾಗಮಂಡಲ, ಢಕ್ಕೆ ಬಲಿ, ಕಾಡ್ಯನಾಟ ಎಂಬಿತ್ಯಾದಿ ಆಚರಣಾ ಸಂಪ್ರದಾಯಗಳೆಲ್ಲ ನಾಗಾರಾಧನೆಯ ವಿವಿಧ ರೂಪಗಳಾಗಿವೆ.

ಯಕ್ಷಗಾನವು ನಾಗಾರಾಧನೆಯ ಆಚರಣಾವಿಧಾನದ ನೆಲೆಯಿಂದಲೇ ವಿಕಾಸಗೊಂಡ ಕಲೆಯೆಂಬುದಕ್ಕೆ ಕೇವಲ ಅರ್ಧನಾರಿ ವೇಷ ಹಾಗೂ ಸುಬ್ಬರಾಯ ವೇಷ ಇಷ್ಟೇ ಆಧಾರಗಳಲ್ಲ. ಶೋಧನೆ ಮಾಡುತ್ತಾ ಹೋದರೆ ನೃತ್ಯದಲ್ಲಿಯೂ ನಾಗಾರಾಧನೆಯ ಸ್ವಭಾವ ವನ್ನು ಗುರುತಿಸಬಹುದು.

ದಕ್ಷಿಣ ಕನ್ನಡದ ನಾಗಾರಾಧನೆಯ ಸಂದರ್ಭದಲ್ಲಿಯೂ ನಾಗನನ್ನು ಪ್ರತಿನಿಧಿಸುವ ಒಬ್ಬ ಬ್ರಾಹ್ಮಣ ಪಾತ್ರಿಯಿರುತ್ತಾನೆ. ಅವನ ಎದುರಿಗೆ ನರ್ತಕನಾದವನು ಅರ್ಧನಾರಿ, ಅರ್ಧಪುರುಷ ವೇಷ ಧರಿಸಿ  ಕುಣಿಯುತ್ತಿರುತ್ತಾನೆ. ಹಿಮ್ಮೇಳದಲ್ಲಿ ತಾಳ, ಢಕ್ಕೆ ಮತ್ತಿತರ ವಾದ್ಯಗಳಿರುತ್ತವೆ. ಹಾವಿನಂತೆ ದೇಹ ಬಳುಕಿಸುವ ನಾಗಪಾತ್ರಿಯ ಮುಂಭಾಗ ವಿವಿಧ ರೀತಿಯಲ್ಲಿನ ತನಕ ಕುಣಿಯುತ್ತಾನೆ. ಮೊದಲಿಗೆ ನಾಗನನ್ನು ಕೆಣಕಿ ಕೋಪ ಬರಿಸುವುದು ಅನಂತರ ಭಕ್ತಿಯಿಂದ ಸ್ತುತಿಸಿ ಸಂಪ್ರೀತಗೊಳಿಸುವ ಕ್ರಿಯೆಗಳೆಲ್ಲವೂ ನೃತ್ಯದ ಮೂಲಕವೇ ನಡೆಯುತ್ತದೆ. ಇಲ್ಲಿ ನಾಗ ಎಂದರೆ ಅನಾದಿಕಾಲದಿಂದಲೂ ಜನರ ಹೃದಯದಲ್ಲಿ ಬೆದರಿಕೆಯನ್ನು ಹುಟ್ಟಿಸಿದ ಸರ್ಪವೇ ಆಗಿರಬಹುದು. ಈ ಭಯದ ಭಾವನೆಯ ಜೊತೆಗೆ ಪೌರಾಣಿಕ ಕಲ್ಪನೆಗಳು ಸೇರಿ ಮಹಾಶೇಷನಾಗಿ, ಸುಬ್ರಹ್ಮಣ್ಯನಾಗಿ ನಾಗನನ್ನು ಕಾಣಲಾಗಿದೆ.

ನಾಗಾರಾಧನೆಯ ಸಂದರ್ಭದಲ್ಲಿ ಬರುವ ಡಮರುವಿನ ಸ್ಥಾನದಲ್ಲಿ ಮದ್ದಳೆಯಂತಹ ವಾದನ ಉಪಕರಣಗಳು ಸೇರಿಕೊಂಡುದು ಕಾಲಾನಂತರದ ಧಾರ್ಮಿಕ ಪಂಥಗಳ ಪ್ರಭಾವಗಳ ಕಾಲದಲ್ಲಿಯೇ ಆಗಿರಬೇಕು. ನರ್ತನ ಪ್ರಧಾನವಾದ ನಾಗಾರಾಧನೆಯೂ ಯಕ್ಷಗಾನ ನೃತ್ಯ ನಾಟಕವಾಗಿ ವಿಕಾಸಗೊಂಡ ಸಂದರ್ಭದಲ್ಲಿ ಅನೇಕ ಧಾರ್ಮಿಕ ಪಂಥಗಳಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡಿದೆ. ಶಿವರಾಮ ಕಾರಂತರು ಸಹ ಯಕ್ಷಗಾನದ ಮೂಲವನ್ನು ನಾಗಮಂಡಲದಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅವರೇ ಹೇಳುವಂತೆ “ಸಭಾ ಲಕ್ಷಣದಲ್ಲಿ ಕಾಣಿಸುವ ಬಯಲಾಟದ ಸಂಪ್ರದಾಯದಲ್ಲಿ ಚೆನ್ನಾಗಿ ಉಳಿದು ಬಂದಿರುವ ಒಬ್ಬ ದೇವತೆಯೆಂದರೆ ಗಣಪತಿ. ಈತನ ಜತೆಯಲ್ಲಿ ಸುಬ್ಬರಾಯನೂ ಮುಖ್ಯವಾಗಿರುವುದು ಇಲ್ಲಿನ ವೈಶಿಷ್ಟ್ಯ. ಭರತನಾಟ್ಯ ಶಾಸ್ತ್ರದಲ್ಲಿ ಷಣ್ಮುಖನಿಗೆ ಅಂಥ ಸ್ಥಾನವಿರಲಾರದಾದರೂ ಈ ಆಟದ ಸಂಪ್ರದಾಯವು ಹುಟ್ಟಿ ಬೆಳೆದಿರುವ ನಾಡಿನಲ್ಲಿ ‘ಸುಬ್ಬರಾಯ’ ಗಣ್ಯ ದೇವತೆ. ಅದರಲ್ಲಿ ಶಿವನ ಮಗ ಕುಮಾರ, ಸ್ಕಂದ, ಷಣ್ಮುಖ ಎಂಬಿವು ಸುಬ್ರಹ್ಮಣನಿಗೆ ಅನ್ವಯಿಸುವ ಹೆಸರುಗಳೇ. ಸುಬ್ರಹ್ಮಣ್ಯನೇ ಇಲ್ಲಿನ  ಸುಬ್ಬರಾಯ. ಈ ನಾಡಿನ ಸಂಪ್ರದಾಯದಲ್ಲಿ ಸುಬ್ಬರಾಯ ಮತ್ತು ನಾಗ ಇವರುಗಳು ಒಂದೇ (ಕಾಲಾಂತರದಲ್ಲಿ ಸುಬ್ರಹ್ಮಣ್ಯ ಮತ್ತು ಸ್ಕಂದರು ಈ ಸೀಮೆಯಲ್ಲಿ ಒಂದೆನಿಸಿಕೊಂಡರು). ನಾಗನಿಗೆ ವಿಶೇಷ ಪೂಜಾ ಸಂಪ್ರದಾಯ ವಿದೆ. ನೃತ್ಯ ಮುಖೇನ ಸಲ್ಲುವ ಈ ವಿಶಿಷ್ಟವಾದ ಪೂಜೆಗೆ ನಾಗಮಂಡಲ ಎಂಬ ಹೆಸರಿದೆ. ಆದುದರಿಂದಲೇ ಸ್ತುತಿ ಪದ್ಯದಲ್ಲಿ ಕುಂಡಲಮಣಿ ಮುಕುಟ ಸುಬ್ಬರಾಯನನ್ನು ‘ಮಂಡಲ ನಾಯಕ’ನನ್ನಾಗಿಯೂ ಸಂಬೋಧಿಸಿದ್ದಾರೆ. ಇಲ್ಲಿನ ನೃತ್ಯ ಸಂಪ್ರದಾಯದಿಂದ ಯಕ್ಷಗಾನ ಬಯಲಾಟವು ತನಗೆ ಅನಿವಾರ್ಯವಾಗಿದ್ದ ಕುಣಿತದ ವಿಧಾನವನ್ನು ತೆಗೆದುಕೊಂಡಿರ ಬಹುದೆಂದು ಇದರಿಂದ ಸೂಚನೆಯಾಗುತ್ತದೆ” (೧೯೫೭ : ೫೬, ೫೭). ಕಾರಂತರ ಈ ಅಭಿಪ್ರಾಯವನ್ನು ಗಮನಿಸಿದರೆ ನಾಗಮಂಡಲವೇ ಯಕ್ಷಗಾನದ ನೃತ್ಯ ಸಂಪ್ರದಾಯಕ್ಕೆ ಮೂಲ ಪ್ರೇರಣೆ ಎಂದ ಹಾಗಾಗುತ್ತದೆ. ಆದರೆ ನಾಗಮಂಡಲ ಎಂಬ ಸ್ವತಂತ್ರ ಆಚರಣಾ ವಿಧಾನವೊಂದು ಇಂದಿಗೂ ಅಸ್ತಿತ್ವವನ್ನು ಉಳಿಸಿಕೊಂಡಿರುವಾಗ ಯಕ್ಷಗಾನವೆಂಬ ಇನ್ನೊಂದು ಸಂಪ್ರದಾಯವು ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ. ಈ ನೆಲೆಯಲ್ಲಿ ಯೋಚಿಸಿದರೆ ನಾಗಾರಾಧನೆಯ ಯಾವುದೋ ಒಂದು ಸಂಪ್ರದಾಯವು ಯಕ್ಷಗಾನವಾಗಿ ವಿಕಾಸಗೊಂಡಿದೆ ಎಂದು ಭಾವಿಸುವುದೇ ಹೆಚ್ಚು ಸೂಕ್ತವಾದುದು. ಬೌದ್ಧಮತದಲ್ಲಿ ಯಕ್ಷಕಲೆಯನ್ನು ಗುರುತಿಸುವ ಕ.ವೆಂ. ರಾಜಗೋಪಾಲ ಅವರು ಯಕ್ಷಗಾನಕ್ಕೆ ನಾಗಾರಾಧನೆ ಅಥವಾ ನಾಗಮಂಡಲ ಮೂಲ ಎಂಬ ವಾದವನ್ನು ಒಪ್ಪುವುದಿಲ್ಲ. (೧೯೭೭ : ೧೫೪, ೧೫೫) ಬೌದ್ಧ ಮತದ ಯಕ್ಷರಿಗೂ ಯಕ್ಷಗಾನಕ್ಕೂ ನೇರ ಸಂಬಂಧವಿದೆ ಎಂಬ ವಾದವನ್ನು ಕ.ವೆಂ. ಅವರು ಸಮರ್ಥಿಸುತ್ತಾರೆ. ಹಾಗೆ ಹೇಳುವಾಗ ಅವರು ನಾಗಾರಾಧನೆಯ ಸಂಪ್ರದಾಯವು ಬೌದ್ಧ ಮತಕ್ಕೂ ಪೂರ್ವದಲ್ಲಿಯೇ ಅಸ್ತಿತ್ವ ದಲ್ಲಿತ್ತು ಎಂಬುದನ್ನು ಒಪ್ಪುವುದಿಲ್ಲ. ನಾಗಾರಾಧನೆಯ ಸಂಪ್ರದಾಯವು ನಾಗರಖಂಡ ಎಂದೇ ಹೆಸರಾದ ಕರಾವಳಿ ಪ್ರದೇಶದಲ್ಲಿ ಬೌದ್ಧ ಮತವು ಅಸ್ತಿತ್ವಕ್ಕೆ ಬರುವುದಕ್ಕಿಂತ ಪೂರ್ವದಲ್ಲಿಯೇ ಪ್ರಚಾರದಲ್ಲಿತ್ತು ಎಂಬುದನ್ನು ಐತಿಹ್ಯಗಳ ಮೂಲಕ ಸಾಧಿಸಬಹುದಾಗಿದೆ. ಈ ನೆಲೆಯಲ್ಲಿ ನೋಡಿದರೆ ಯಕ್ಷಗಾನಕ್ಕೆ ನಾಗಾರಾಧನೆಯೇ ಮೂಲ ಎಂಬ ಕಾರಂತರ ವಾದವನ್ನು ಒಪ್ಪಬಹುದು. ಬೌದ್ಧಮತದ ಪ್ರಾಬಲ್ಯದ ಸಂದರ್ಭದಲ್ಲಿ ಬೌದ್ಧ ಯಕ್ಷರ ಕುರುಹುಗಳನ್ನು ಯಕ್ಷಗಾನವು ಅಳವಡಿಸಿಕೊಂಡಿರಬಹುದು. ನಾಗಪಂಥವು ಬೌದ್ಧಮತವನ್ನು ಒಪ್ಪಿ ಯಕ್ಷಾರಾಧನೆಗೂ ಪ್ರಾಶಸ್ತ್ಯವನ್ನು ನೀಡಿರಬಹುದು. ಯಕ್ಷರೆಲ್ಲರೂ ವೃಕ್ಷ ದೇವತೆಗಳು. ಒಂದೊಂದು ದೇವತೆಯೂ ಒಂದೊಂದು ವೃಕ್ಷದಲ್ಲಿ ವಾಸಮಾಡುತ್ತದೆಯೆಂದು ಹೇಳಲಾ ಗುತ್ತದೆ. ಬೌದ್ಧರ ಜಾತಕ ಕತೆಗಳೂ ಈ ಬಗೆಗೆ ಬೆಳಕು ಚೆಲ್ಲುತ್ತವೆ. ಇದಕ್ಕೆ ಸಂಬಂಧಿಸಿದಂತೆ ಸ್ಕಂದ ಪುರಾಣದ ನಾಗರಖಂಡದಲ್ಲಿ ವೃಕ್ಷ ಮಹಾತ್ಮ್ಯ ವರ್ಣನೆ ಇದೆ. ನೀರಿಗೆ ಸಂಬಂಧಪಟ್ಟ ದೇವತೆಗಳೂ ಯಕ್ಷರಲ್ಲಿ ಬರುತ್ತಾರೆ. ಹೀಗಿರುವಾಗ ಜನಜೀವನದಲ್ಲಿ ಯಕ್ಷರ ಆರಾಧನೆಗೆ ಪ್ರಾಶಸ್ತ್ಯ ಸಿಕ್ಕಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ನಾಗಪಂಥ, ಬೌದ್ಧಪಂಥಗಳ ಸಮನ್ವಯೀಕರಿಸಿಕೊಂಡ ಯಕ್ಷಗಾನವು ನಂತರ ವೈದಿಕ ರೂಪವನ್ನು ಪಡೆದಿರಬೇಕು. ವೈದಿಕ ಮತಗಳ ಹೊಂದಿಕೆಯ ಸೂಚನೆಗಳನ್ನು ಇಂದಿಗೂ ಕೂಡಾ ಯಕ್ಷಗಾನದಲ್ಲಿ ಕಾಣಬಹುದು. ಶೈವ ಮತ್ತು ವೈಷ್ಣವ ಮತಗಳಲ್ಲಿ ಭೇದವನ್ನು ಆಹಾರ್ಯದಲ್ಲಿ ಪ್ರಕಟಿಸುವ ಯಕ್ಷಗಾನವು ಆಶಯದಲ್ಲಿ ಎರಡೂ ಮತಗಳ ಹೊಂದಾಣಿಕೆಯನ್ನೇ ಪೋಷಿಸುತ್ತದೆ. ಸಾಮಾಜಿಕವಾಗಿ ಈ ಎರಡೂ ಮತಗಳವರೂ ಯಕ್ಷಗಾನವನ್ನು ಸ್ವೀಕರಿಸುವ ರೀತಿಯಲ್ಲಿ ಆಯೋಜಿಸಿಕೊಳ್ಳಲಾಗಿದೆ.

ಗಣಪತಿಯ ಸ್ತುತಿ ಮತ್ತು ವೇಷ ಇಲ್ಲದೆ ಪೂರ್ವರಂಗವು ನಡೆಯುವುದರಿಂದ ಯಕ್ಷಗಾನವು ನಾಗಾರಾಧನೆಯಿಂದ ವಿಸ್ತೃತಗೊಂಡ ಕಲಾರೂಪ ಎನ್ನುವುದಕ್ಕೆ ಇನ್ನೊಂದು ಮುಖ್ಯ ನಿದರ್ಶನ. ಗಣಪತಿಯ  ವೇಷವು ಯಕ್ಷಗಾನದ ಪೂರ್ವರಂಗದಲ್ಲಿ ಇಲ್ಲ. ಆದರೆ ಪ್ರಸಂಗಗಳ ಸಂದರ್ಭದಲ್ಲಿ ಗಜಮುಖನ ಸ್ತುತಿ ನಂತರದ ಸೇರ್ಪಡೆಯೇ ಹೊರತು ಯಕ್ಷಗಾನದ ಮೂಲದ್ದಲ್ಲ. ನಾಗಾರಾಧನೆಗೆ ಪ್ರಾಶಸ್ತ್ಯ ನೀಡಿದ್ದರಿಂದಲೇ ಯಕ್ಷಗಾನದ ಪೂರ್ವರಂಗದಲ್ಲಿ ಸುಬ್ಬರಾಯ ಹಾಗೂ ಅರ್ಧನಾರೀ ವೇಷಗಳು ಜಾಗ ಪಡೆದಿವೆ. ಏಕೆಂದರೆ ಸುಬ್ಬರಾಯನ ವೇಷವಾಗಲೀ, ಅರ್ಧನಾರಿ ವೇಷವಾಗಲಿ ಇವು ಮುಂದಿನ ಪ್ರಸಂಗಗಳ ಭಾಗವಾಗಿ ಅಂತಹ ಯಾವುದೇ ಪಾತ್ರಗಳು ಬರುವುದಿಲ್ಲ. ಅವುಗಳು ಕೇವಲ ಪರಂಪರೆಯ ಹೆಸರಿನಲ್ಲಿ ಯಕ್ಷಗಾನದ ಪೂರ್ವರಂಗದಲ್ಲಿ ಸಾಂಪ್ರದಾಯಕವಾಗಿ ಬರುವ ವೇಷಗಳು ಮಾತ್ರ. ಇಂದಿನ ಪೂರ್ವರಂಗದಲ್ಲೂ ಕೂಡಾ ಈ ತೆರನ ವೇಷಗಳು ರಂಗದಿಂದ ಮರೆ ಯಾಗಿವೆ. ಸಮಕಾಲೀನ ದಿನಗಳಲ್ಲಿ ಅಪ್ರಸ್ತುತವಾಗಿ ಅರ್ಥಹೀನವಾಗಿ ಉಳಿದ ಈ ವೇಷಗಳು ಯಕ್ಷಗಾನದ ಸಾಂಸ್ಕೃತಿಕ ಪಳೆಯುಳಿಕೆಗಳು ಎಂಬ ವಾಸ್ತವ ತಿಳಿದುಕೊಂಡರೆ ಯಕ್ಷಗಾನದ ಪ್ರಾಚೀನತೆ ಮತ್ತು ಮೂಲ ಸ್ವರೂಪವನ್ನು ಅರ್ಥೈಸಿಕೊಳ್ಳಬಹುದು.

ನಾಗಾರಾಧನೆಯ ಏಕವ್ಯಕ್ತಿಯ ನೃತ್ಯ ಸಂಪ್ರದಾಯವು ತುಂಬಾ ಸಂಕೀರ್ಣವಾಗಿದ್ದು ಅದು ಒಬ್ಬ ವ್ಯಕ್ತಿಯ ಮನೋಧರ್ಮಕ್ಕೆ ಅನುಗುಣವಾಗಿಯೇ ಪ್ರಕಟವಾಗುತ್ತದೆ. ಧಾರ್ಮಿಕವಾದ ಉದ್ದೇಶಗಳಿಗೆ ಅನುಗುಣವಾಗಿ ಅದರ ನರ್ತನಾದಿ ಆಚರಣೆಗಳು ಭಕ್ತರಲ್ಲಿ ಭಯದ ವಾತಾವರಣವನ್ನು ಮೂಡಿಸಿ ಭಾವಾಧೀನಗೊಳಿಸುತ್ತಿದ್ದುವು. ಕ.ವೆಂ. ರಾಜಗೋಪಾಲ ಅವರು ಹೇಳುವಂತೆ ಯಕ್ಷ ಕಲ್ಪನೆಯು ಬೌದ್ಧ ಧರ್ಮದಲ್ಲಿ ಅಶೋಕನ ಕಾಲದಷ್ಟಾದರೂ ಹಿಂದಿನದು. ಹಾಗೂ ಆ ಕಾರಣಕ್ಕಾಗಿ ನಾಗಪಂಥಕ್ಕಿಂತಲೂ ಮುಂಚಿತವಾಗಿ ವಿಕಾಸವಾಗಿ ಅದು ಒಂದು ಹದವನ್ನು ಮುಟ್ಟಿತ್ತು ಎಂದು ಪ್ರತಿಪಾದಿಸುತ್ತಾರೆ. ನಾಗಸಂಪ್ರದಾಯವು ನಾಗಪಂಥವಾಗಿ ರೂಪುಗೊಳ್ಳುವ ಮೊದಲೇ ಜನಜೀವನದಲ್ಲಿ ರೂಢವಾಗಿತ್ತು ಎಂಬುದನ್ನು ಊಹಿಸಬಹುದು. ಏಕೆಂದರೆ ಬ್ರಾಹ್ಮಣೇತರವಾದ ಸಮುದಾಯ ಗಳು ನಾಗಾರಾಧನೆಯನ್ನು ಆಚರಿಸಿಕೊಂಡು ಬಂದ ಬಗೆಗೆ ಕೆಲವು ಬುಡಕಟ್ಟುಗಳ ಅಧ್ಯಯನದಿಂದ ತಿಳಿದುಕೊಳ್ಳಬಹುದು. ಶಿಷ್ಟವಾದ ಮತಪಂಥಗಳು ರೂಪುಗೊಳ್ಳುವ ಪೂರ್ವದಲ್ಲೇ ಪರ್ಯಾಯವಾಗಿ ಆದಿವಾಸಿ ಜನಸಮುದಾಯಗಳು ನಾಗಾರಾಧನೆಯನ್ನು ರೂಢಿಸಿಕೊಂಡು ಬಂದಿವೆ. ಕೇರಳದ ಪುಳ್ಳುವ ಮೊದಲಾದ ಜನಸಮುದಾಯಗಳು ನಾಗಾರಾಧನೆಯನ್ನು ತಮ್ಮ ಮೂಲ ಹಕ್ಕು ಎಂಬಂತೆ ಪ್ರತಿಪಾದಿಸುತ್ತ ಬಂದಿರುವುದನ್ನು ಕಾಣಬಹುದು. ಅದೇ ಮುಂದುವರೆದು ತೆಯ್ಯಂಗಳ ರೂಪದಲ್ಲಿ ಕೇರಳದೆಲ್ಲೆಡೆ ನಾಗಾರಾಧನೆಯು ಪ್ರಚಲಿತದಲ್ಲಿದೆ. ತೆಯ್ಯಂ ಆಚರಣಾ ಪದ್ಧತಿ ಕೂಡ ನಾಗಾರಾಧನೆಯ ಒಂದು ಸ್ವರೂಪದ ವಿಕಾಸಗೊಂಡ ಸಂಪ್ರದಾಯವೇ ಆಗಿದೆ. ಇಲ್ಲಿ ಶಿಷ್ಟ ಸಂಪ್ರದಾಯಗಳಿಗೆ ಇತರ ಜಾನಪದ ಸಂಪ್ರದಾಯಗಳು ಪ್ರೇರಣೆಯಾಗಿ ಒದಗಿ ಬಂದಿದುರಲ್ಲಿ ಆಶ್ಚರ್ಯವಿಲ್ಲ. ಕೇರಳದಲ್ಲಿರುವ ಕೞುಮೆಳತ್ತುಪಾಟ್ಟು, ಸರ್ಪಂತುಳ್ಳಲ್ ಮೊದಲಾದವು ನಾಗಾರಾಧನೆಯ ವಿಭಿನ್ನ ಸ್ವರೂಪಗಳೇ ಆಗಿವೆ. ಆದಿವಾಸಿ ಜಾತಿ ಜನಾಂಗಗಳು ನಾಗಾರಾಧನೆಯನ್ನು ವಿವಿಧ ರೀತಿಯಲ್ಲಿ ಆಚರಿಸಿಕೊಂಡು ಬಂದಿರುವುದನ್ನು ಇವುಗಳಿಂದ ತಿಳಿದುಕೊಳ್ಳಬಹುದು. ಕ.ವೆಂ. ಅವರು ಹೇಳುವಂತೆ ಯಕ್ಷಗಾನಕ್ಕೆ ಬೌದ್ಧರ ಯಕ್ಷಾರಾಧನೆಯೇ ಮೂಲವಾಗಿರಬೇಕಾಗಿಲ್ಲ. ನಾಗಾರಾಧನೆಯು ಯಕ್ಷಾರಾಧನೆಯನ್ನು ಸ್ವೀಕರಿಸುವುದರ ಮೂಲಕ ವಿಸ್ತರಿಸಿರುವ  ಸಾಧನೆ ಯನ್ನು ಅಲ್ಲಗಳೆಯುವಂತಿಲ್ಲ.

ಕ.ವೆಂ. ಅವರು ಹೇಳುವಂತೆ ಬುದ್ಧನು ಭಗವಂತನೆಂಬ ಹೆಸರಿನಿಂದಲೇ ಯಕ್ಷಗಾನದ ಭಾಗವತನ ಸೃಷ್ಟಿಯಾಯಿತು ಎಂಬುದನ್ನು ಒಪ್ಪಿಕೊಳ್ಳಲಾಗದು. ಭಾಗವತ ಎಂಬುದು ಭಾಗವತ ಮನೋಧರ್ಮದ ಕತೆಗಳಿಗೆ ಸಂಬಂಧಿಸಿದಂತೆ ಸೃಷ್ಟಿಯಾದುದು. ೧೨ನೇ ಶತಮಾನದ ನಂತರದ ಕಾಲಘಟ್ಟದಲ್ಲಿ ಭಕ್ತಿಪಂಥದ ಕೊಡುಗೆಯಾಗಿ ಇದನ್ನು ಪರಿಭಾವಿಸ ಬಹುದು. ಯಕ್ಷಗಾನದ ಪೂರ್ವರಂಗದ ಹಾಡುಗಾರನನ್ನು ಸಂಗೀತಗಾರ ಎಂದೇ  ಹೇಳಲಾಗುತ್ತದೆ. ಹಿಮ್ಮೇಳದ ಹಾಡುಗಾರ ಭಾಗವತ. ಯಕ್ಷಗಾನದ ವೇಷಭೂಷಣಗಳು ಬುದ್ಧನ ವಿಗ್ರಹದ ಹಿಂದಿನ ಪ್ರಭಾವಳಿಯನ್ನು ಹೋಲುವಂತೆ ಇವೆ ಎಂಬುದನ್ನು ಅಲ್ಲಗಳೆ ಯುವಂತಿಲ್ಲ. ಈ ಎಲ್ಲವುಗಳನ್ನು ಪರಿಶೀಲಿಸಿದರೆ ಯಕ್ಷಗಾನದಲ್ಲೂ ಬೌದ್ಧಮತದ ಪ್ರಭಾವವನ್ನು ಒಪ್ಪಿಕೊಳ್ಳಬಹುದು.

ಪ್ರಾಚೀನತೆಯನ್ನು ಹಿಂದಕ್ಕೆ ಒಯ್ಯಬಹುದಾದ ಸಂದರ್ಭದಲ್ಲಿ ಯಕ್ಷಗಾನವು ಇವತ್ತಿನ ಸ್ವರೂಪದಲ್ಲಿಯೇ ಇದ್ದಿರಲಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಕ್ಷಗಾನದ ಪೂರ್ವರಂಗದ ಸಂದರ್ಭದಲ್ಲಿ ಮಾತ್ರ ಅಷ್ಟು ಪ್ರಾಚೀನವಾದ ಪಳಯುಳಿಕೆಗಳನ್ನು ಗುರುತಿಸಬಹುದು. ಪೂರ್ವರಂಗದ ನೃತ್ಯ ವಿಧಾನಗಳು ಕೇವಲ ಆರಾಧನೆಯ ರೂಪದಲ್ಲಿ ವಿಕಾಸಗೊಂಡವುಗಳು. ಪೂರ್ವರಂಗದ ನಂತರದ ಪ್ರಯೋಗ ಸಾಧ್ಯತೆಗಳೆಲ್ಲ ಆಯಾ ಕಾಲಘಟ್ಟದಲ್ಲಿ ಧಾರ್ಮಿಕ ಸಂದೇಶಗಳನ್ನು ಸಾರುವ ಉದ್ದೇಶವುಳ್ಳವು. ಈ ಕಾರಣಕ್ಕಾಗಿಯೇ ಅವು ಯಾವುದೇ ಧರ್ಮದ ಒಲವನ್ನು ವ್ಯಕ್ತಪಡಿಸಿದರೂ ಸಹ ಪೂರ್ವರಂಗವು ಮಾತ್ರ ನಿರ್ದಿಷ್ಟವಾದ ಧಾರ್ಮಿಕ ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಉಳಿದುಕೊಂಡು ಬಂದಿವೆ. ಈ ನೆಲೆಯಲ್ಲಿ ಇಂದಿಗೂ ತೆಂಕುತಿಟ್ಟು ಯಕ್ಷಗಾನದ ಪೂರ್ವರಂಗದಲ್ಲಿ ಉಳಿದುಕೊಂಡಿರುವ ಸುಬ್ಬರಾಯ ವೇಷ, ಅರ್ಧನಾರಿ ವೇಷ ಇತ್ಯಾದಿಗಳನ್ನು ಅರ್ಥೈಸಬಹುದು. ಬೌದ್ಧ ಶಿಲ್ಪಕಲೆಯಲ್ಲಿ ಕಂಡುಬರುವ ಯಕ್ಷರ ಕಾಲ್ಪನಿಕ ಪ್ರತಿಮೆಗಳು ಯಕ್ಷಗಾನದ ವೇಷಭೂಷಣ ಗಳಿಗೆ ಪ್ರಾಚೀನ ಮಾದರಿಗಳೇ ಆಗಿರಬಹುದು. ಆದರೆ ಇದಮಿತ್ತಂ ಎಂದು ಹೇಳಲು ಆಧಾರ ಸಾಲದು. ಯಕ್ಷ ಪ್ರತಿಮೆಗಳಲ್ಲಿ ಅಂದಿನ ಜನಜೀವನದ ವೇಷಭೂಷಣಗಳು ಹೊಂದಿಕೊಂಡಿರಬಹುದು. ಭಕ್ತಿಯ ಕಾರಣಕ್ಕಾಗಿ ಯಕ್ಷ ಶಿಲ್ಪಗಳ ಮಾದರಿಯ ವೇಷ ಭೂಷಣಗಳನ್ನು ಅಳವಡಿಸಿರಬೇಕು. ಕಾಲಕ್ರಮೇಣ ವೈದಿಕ ಮತಗಳ ಕಥಾನಕಗಳಿಗೆ ಅವಕಾಶವಾದಂತೆ ಯಕ್ಷಗಾನದ ಕತೆಗಳು ಭಕ್ತಿಯ ನೆಲೆಯಿಂದ ಒಂದು ಶಕ್ತಿಯಾಗಿ ಬೆಳೆದು ಬಂದಿರಬೇಕು. ಆದರೆ ಯಕ್ಷಗಾನದಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ವೇಷ ಭೂಷಣಗಳಲ್ಲಿ ಪ್ರಾಚೀನ ಪಳಯುಳಿಕೆಗಳು ಬಹಳ ಇವೆ. ಅವುಗಳಿಗೆ ನಿರ್ದಿಷ್ಟವಾದ ಅರ್ಥಗಳನ್ನು ಕಲ್ಪಿಸುವುದು ಕಷ್ಟಸಾಧ್ಯ.

ಯಕ್ಷಗಾನವು ಬ್ರಾಹ್ಮಣೇತರರಿಂದಲೇ ಪೋಷಿಸಿಕೊಂಡು ಬಂದ ಕಲೆ ಎಂಬುದನ್ನು ಅವುಗಳ ಧಾರ್ಮಿಕ ನೆಲೆಯಿಂದಲೇ ಕಂಡುಕೊಳ್ಳಬಹುದು. ಅಲ್ಲಿನ ಅನೇಕ ನೃತ್ಯ, ಕುಣಿತ, ವೇಷಭೂಷಣಗಳೆಲ್ಲ ಒಂದು ರೀತಿಯಲ್ಲಿ ಜನಪದವಾದುದು. ಕಾಲಕ್ರಮೇಣ ಧಾರ್ಮಿಕ ಪ್ರಾಬಲ್ಯದಿಂದಲೇ ಅದೊಂದು ಸಶಕ್ತ ಕಲೆಯಾಗಿ ಉಳಿದುಕೊಂಡು ಬರಲು ಸಾಧ್ಯವಾಯಿತು. ಜನಮನದಲ್ಲಿ ಬೇರೂರಿದ್ದ ಕಲಾರೂಪ ನಿರ್ದಿಷ್ಟವಾದ ಒಂದು ಧಾರ್ಮಿಕ ಸಂಪ್ರದಾಯ ವನ್ನು ಮಾತ್ರ ಪ್ರೋಇತಿಹಾಸದ ಕಾಲಘಟ್ಟದಲ್ಲಿ ಬೇರೆ ಬೇರೆ ಮತ ಸಂಪ್ರದಾಯಗಳಿಗೆ ಜನಪದವಾಗಿ ಒಗ್ಗಿಕೊಂಡಿದ್ದರಿಂದಲೇ ಉಳಿದುಕೊಂಡು ಬಂದಿವೆ.

ಹೀಗೆ ಯಕ್ಷಗಾನವು ನಾಗಾರಾಧನೆಯ ಮೂಲಕ ವಿಕಾಸಗೊಂಡು ಬೌದ್ಧಮತ, ಶಾಕ್ತಮತ, ಶೈವಮತ, ವೈಷ್ಣವಮತ, ವೈದಿಕಮತ, ಭಾಗವತ ಮೊದಲಾದ ಕಥಾನಕಗಳನ್ನು ಒಳಪಡಿಸಿಕೊಂಡಿತು. ಈ ಎಲ್ಲಾ ಮತಗಳ ಪ್ರಾಬಲ್ಯದ ಸಂದರ್ಭದಲ್ಲಿ ಧಾರ್ಮಿಕ ಕಲೆಯಾಗಿ ಯಕ್ಷಗಾನವು ಮುಕ್ತವಾಗಿ ಬೆಳೆದು ಬಂತು. ಎಲ್ಲಾ ಧರ್ಮಗಳನ್ನು ತನ್ನಲ್ಲಿ ಒಳಗೊಳಿಸುವುದು ಸಾಧ್ಯವಾದ್ದರಿಂದಲೇ ಯಕ್ಷಗಾನಕ್ಕೆ ಸಂಕೀರ್ಣವಾದ ಸ್ವರೂಪ ಸಾಧ್ಯವಾಯಿತು. ಒಂದೇ ಧರ್ಮದ ವಿವೇಚನೆಗೋ ತರ್ಕಕ್ಕೋ ಲಭ್ಯವಾಗದ ಅನೇಕ ಸಂಗತಿಗಳು ತನ್ನಲ್ಲಿ ಮೈಗೂಡಿಸಿ ಕೊಳ್ಳಲು ಸಾಧ್ಯವಾಯಿತು. ಅಪ್ಪಟ ಧಾರ್ಮಿಕ ಕಲೆಯಾಗಿ ರೂಪು ಪಡೆದ ಯಕ್ಷಗಾನವು ಕಾಲಾನಂತರದಲ್ಲಿ ಮನರಂಜನೆಯ ಸಾಧನವೂ ಆಗಿ ಸಮಾಜದಲ್ಲಿ ನೈತಿಕ ಸಂದೇಶವನ್ನು ಸಾರುತ್ತಾ ಸೌಂದರ್ಯಾತ್ಮಕವಾಗಿ ಬೆಳೆದು ನಿಂತಿತು. ಇಂದು ಅಸ್ತಿತ್ವದಲ್ಲಿರುವ ಯಕ್ಷಗಾನದ ನೃತ್ಯ, ಸಂಗೀತ, ಸಾಹಿತ್ಯ, ವೇಷಭೂಷಣಾದಿ ವಿವರಗಳಲ್ಲೆಲ್ಲ ಹಲವು ಕಾಲದ, ಹಲವು ಧರ್ಮಗಳ ಪಳೆಯುಳಿಕೆಗಳನ್ನು ಕಾಣಬಹುದಾಗಿದೆ.

ಯಕ್ಷಗಾನ ಬಯಲಾಟದಲ್ಲಿ ಶಿವರಾಮ ಕಾರಂತರು ವೇಷಭೂಷಣಗಳ ಬಗೆಗೆ ಮಂಡಿಸಿದ ವಿಚಾರ ಕುತೂಹಲಕರವಾಗಿದೆ. ಅವರು ಹೇಳುವಂತೆ ಒಂದು ವಿಸ್ಮಯದ ಸಂಗತಿ ಎಂದರೆ ಈ ಯಕ್ಷಗಾನದ ವೇಷಭೂಷಣಗಳು ನಮ್ಮ ನಾಡಿನ ಯಾವುದೇ ಶಿಲ್ಪ ಇಲ್ಲವೆ ಚಿತ್ರಗಳನ್ನು ಆಧರಿಸಿಲ್ಲವೆಂಬುದು. ಅವು ಕೇವಲ ಸ್ವತಂತ್ರ ಸೃಷ್ಟಿಗಳು. ಐಹೊಳೆ, ಬಾದಾಮಿ, ಬೇಲೂರು ಮೊದಲಾದಲ್ಲಿ ಕಾಣುವ ದೇವೀ, ದೇವ, ದಾನವರ ಕಿರೀಟ, ಆಭರಣ, ವೇಷಗಳನ್ನು ಅವೆಂದೂ ಅನುಕರಿಸಲಿಲ್ಲ. ಅಲ್ಲಿನ ಪ್ರತಿಮೆಗಳಲ್ಲಿ ಚಿನ್ನಾಭರಣ ಗಳನ್ನು ಕಾಣುತ್ತೇವೆ. ಈ ಯಕ್ಷಗಾನದ ಆಭರಣಗಳಲ್ಲಿ ಬಳಸಿದ ಸಾಧನದ ದೆಸೆಯಿಂದಾಗಿ ಆಭರಣಗಳು ರೂಪುಗೊಂಡಿವೆ. ಕಟ್ಟಿಗೆ, ಗಾಜು, ವರಕಿನ ಹಾಳೆ ಇವು ಮೂರನ್ನು ಅವರು ಬಳಸಿ, ಅವಕ್ಕೆ ಒಗ್ಗುವ ಆಕಾರಗಳನ್ನು ಕೊಟ್ಟು, ಬೆಳಕು ಚೆನ್ನಾಗಿ ಮಿರುಗುವಂತೆ ಆಭರಣ ರಚನೆ ಮಾಡಿದ್ದಾರೆ. ಬಳೆ, ಭುಜಕಿರೀಟ, ವಕ್ಷಾಭರಣ ಎಲ್ಲವೂ ಹಾಗಿವೆ. ಕಿರೀಟವೂ ಹಾಗಿದೆ. ಮುಂಡಾಸವೂ ಹಾಗಿದೆ. ದೇಶೀಯವಾದ ಉಡುಗೆ ತೊಡುಗೆಗಳಲ್ಲಿ ಅದಕ್ಕೆ ನೆರವು ಕಾಣುವುದಿಲ್ಲ. ನಮ್ಮ ಉತ್ಸವಗಳಲ್ಲಿ ಉತ್ಸವ ಮೂರ್ತಿಗಳ ಹಿಂದೆ ರಚಿಸುವ ಪ್ರಭಾವಳಿಯಾಗಲಿ ದೆವ್ವಗಳ ಅಣಿಯಾಗಲಿ ಈ ಕಲ್ಪನೆಗಳನ್ನು ಅವರಿಗೆ ಕೊಟ್ಟಂತಿಲ್ಲ. ಮುಂಡಾಸದ ಎಲೆ ಆಕಾರ ವಿಸರಿಸುವ ಕಿರಣ ಇದರದೇ ಆದ ಒಂದು ಬೆಡಗು. ಹಿಂದೆಯೂ ಈಗಲೂ ಈ ಅಲಂಕಾರಗಳನ್ನು ಮಾಡುತ್ತಿದ್ದ ಜನರು ಬನವಾಸಿ, ಸಾಗರ, ಕುಮಟ ಮೊದಲಾದ ಊರುಗಳಲ್ಲಿ ವಾಸಿಸುತ್ತಿದ್ದ ಗುಡಿಗಾರ ವರ್ಗದವರು. ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅವರ ವಸತಿ ಸಾಕಷ್ಟಿತ್ತು. ಮುಖ್ಯವಾಗಿ ಮರ, ಬಣ್ಣ ಮತ್ತು ಬೆಂಡುಗಳ ಕೆಲಸ ಅವರದ್ದು. ಇದರಲ್ಲಿನ ಯಾವನೋ ಒಬ್ಬನ ಪ್ರತಿಭೆಯು ಇಂತಹ ವೇಷಗಳ ನಿರ್ಮಾಣಕ್ಕೆ ಕಾರಣವಾಯಿತೆಂದು ಹೇಳಬಹುದು (೧೯೫೭ : ೧೬೨). ಕಾರಂತರ ಈ ವಿಚಾರ ಸರಣಿಯನ್ನು ಗಮನಿಸಿದರೆ ವೇಷಭೂಷಣಗಳ ಬಗೆಗೆ ಅವರು ಅಮೂರ್ತವಾದ ಚಿಂತನೆಯನ್ನು ಹರಿಯಬಿಟ್ಟಂತೆ ಕಾಣಿಸುತ್ತದೆ. ಆ ಕಾರಣವಾಗಿ ಇದ್ದಕ್ಕಿದ್ದಂತೆ ವೇಷಭೂಷಣ ಗಳು ಪ್ರತಿಭೆಯ ಸೃಷ್ಟಿಯಾಗುವುದು ಜನಜೀವನದಲ್ಲಿ ಅಸಹಜವಾದದ್ದು. ಪರಂಪರಾಗತ ವಾಗಿ ಬಳಸುತ್ತ ಬಂದ ನಾಜೂಕಲ್ಲದ ವಸ್ತುಗಳು ಸೌಂದರ್ಯದ ದೃಷ್ಟಿಯಿಂದ ಕಾಲಕ್ರಮೇಣ ಬದಲಾಗುತ್ತ ಬಂದಿರುವುದನ್ನು ಜನಪದ ಆಭರಣ ಹಾಗೂ ವೇಷಭೂಷಣಗಳಲ್ಲಿ ಕಾಣುತ್ತೇವೆ. ಪ್ರಾಚೀನ ಕಾಲದಿಂದಲೇ ಸಾಂಪ್ರದಾಯಿಕವಾಗಿ ಬಳಸುತ್ತ ಬಂದ ವಸ್ತುಗಳಿಗೆ ಪರ್ಯಾಯ ಸೃಷ್ಟಿಯು ಸೌಂದರ್ಯದ ನೆಲೆಯಿಂದ ಆಗುವುದಿದೆ. ಅಂತಹ ಸಂದರ್ಭದಲ್ಲಿ ಒಬ್ಬನ ಪ್ರತಿಭೆಯು ಪರಿಷ್ಕಾರದ ವೇಳೆ ಕೆಲಸ ಮಾಡಿರುವ ಸಾಧ್ಯತೆ ಇದೆ.

ಕ.ವೆಂ. ರಾಜಗೋಪಾಲ ಅವರು ಹೇಳುವಂತೆ ಬೌದ್ಧರ ಯಕ್ಷ ಶಿಲ್ಪಗಳಿಂದ ಯಕ್ಷಗಾನದ ವೇಷಭೂಷಣಗಳು ಮೂಡಿರಬಹುದೆಂಬ ಅಭಿಪ್ರಾಯವಿದೆ. ಆದರೆ ಇದಕ್ಕೂ ಸ್ಪಷ್ಟವಾದ ಆಧಾರಗಳಿಲ್ಲ. ಅಲ್ಲಿನ ಶಿಲ್ಪಗಳನ್ನು ಗಮನಿಸಿ ಪರಿಷ್ಕೃತ ರೂಪವೊಂದನ್ನು ಯಕ್ಷಗಾನದ ವೇಷಭೂಷಣದ ವೇಳೆ ನೀಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅಡೂರು ಶ್ರೀಧರರಾಯರು ಯಕ್ಷಗಾನದ ಆಭರಣಗಳಿಗೆ ದೇವಾಲಯಗಳಲ್ಲಿ ಬಳಕೆಯಲ್ಲಿರುವ ಪೂಜಾ ಪರಿಕರಗಳೇ ಮಾತೃಕೆಗಳೆಂದು ಹೇಳುತ್ತಾರೆ. ದೇವಾಲಯದ ಪೂಜಾ ಸಾಮಗ್ರಿಗಳಲ್ಲಿ ಮುಖ್ಯವಾಗಿ ಕಲಶದ ಆಕಾರದಿಂದಲೇ ಯಕ್ಷಗಾನದ ಕಿರೀಟ ಸೃಷ್ಟಿಯಾಯಿತೆಂಬುದು ಅವರ ಅಭಿಪ್ರಾಯ. ಯಕ್ಷಗಾನದ ಕಿರೀಟಗಳನ್ನು ಗಮನಿಸಿದ ಅದು ದೇವಸ್ಥಾನಗಳಲ್ಲಿ ಬಳಕೆಯಲ್ಲಿರುವ ಹಲವಾರು ಪರಿಕರಗಳ ಹೊಂದಾಣಿಕೆಯ ಕಲ್ಪನೆಯಿಂದ ಹುಟ್ಟಿಕೊಂಡಿರಬೇಕೆಂದು ಅನ್ನಿಸುತ್ತದೆ. ದೇವಸ್ಥಾನಗಳಲ್ಲಿ ಕಲಶದ ಮೇಲ್ಗಡೆ ಮಾವಿನೆಲೆ ಹಾಗೂ ತೆಂಗಿನ ಕಾಯಿಗಳ ಅಲಂಕಾರವಿರುತ್ತದೆ. ಇದೇ ಕಲ್ಪನೆಯಲ್ಲಿ ಕೋಲು ಕಿರೀಟದ ನಿರ್ಮಾಣವಾಗಿರಬೇಕು. ದೇವಸ್ಥಾನಗಳಲ್ಲಿ ಬಳಸುವ ವಿವಿಧ ಬಗೆಯ ಆರತಿಗಳು ಕಿರೀಟಗಳ ಕಿವಿಗಳಿಗೆ ಆಕಾರ ನೀಡಿದವು. ಕಲಶಗಳಿಗೆ ಮಾಡುವ ಹೂವಿನ ಅಲಂಕಾರ ಕಿರೀಟಗಳ ವಿವಿಧ ವಿನ್ಯಾಸಗಳಿಗೆ ಪ್ರೇರಣೆ ನೀಡಿರಬೇಕು. ಕಲಶ ಪಾತ್ರೆಯ ಹಿಂಭಾಗದಲ್ಲಿ ವಿಶಾಲವಾದ ಹರಿವಾಣ ಇರಿಸಿದಾಗ ಬಟ್ಟಲು ಕಿರೀಟ(ಕೇಸರಿತಟ್ಟಿ)ದ ಕಲ್ಪನೆ ಹುಟ್ಟಿರಬೇಕು. ಅಕ್ಕಿ ತುಂಬಿದ ಹರಿವಾಣವನ್ನು ಒಂದರ ಮೇಲೊಂದು ಇರಿಸಿ ಭೀಮನ ಮುಡಿ, ಬಕೆಟ್ ಆಕಾರದ ಪಾತ್ರೆಗೆ ಮಾವಿನೆಲೆಗಳನ್ನು ಇರಿಸಿದರೆ ಕೊಂಡೆ ಕಿರೀಟ ರೂಪಗಳು ದೊರೆಯುತ್ತವೆ. ದೇವಸ್ಥಾನಗಳ ಪಕ್ಕದಲ್ಲಿರುವ ಅಶ್ವತ್ಥ ಮರಗಳ ಎಲೆಗಳೇ ಪಕಡಿಗಳ ರಚನೆಗೆ ಪ್ರೇರಣೆ ಎಂಬುದು ಅವರ ಅಭಿಪ್ರಾಯ. ಪಂಚಾರತಿ ಹಾಗೂ ಹರಿವಾಣಗಳು ಎದೆ ಪದಕಗಳಿಗೆ ಪ್ರೇರಣೆ ನೀಡಿರಬೇಕು. ವೇಷಗಳ ಆಕಾರಕ್ಕೆ ತಕ್ಕಂತೆ ಗಾಂಭೀರ್ಯವನ್ನು ಹೆಚ್ಚಿಸಲು ಕರ್ಣಪತ್ರ, ಭುಜಕೀರ್ತಿಗಳು ನಿರ್ಮಾಣವಾದವು. ಸೊಂಟಕ್ಕೆ ಬಿಗಿಯುವ ಜಟ್ಟಿ, ಇಳಿಬಿಡುವ ವೀರಗಸೆ, ಕಾಲಿಗೆ ಸುತ್ತುವ ಬಟ್ಟೆ, ಮೊಣಕಾಲು ಹಾಗೂ ಪಾದದ ಬಳಿ ಕಟ್ಟುವ ಗೆಜ್ಜೆಗಳು ಒಂದು ಕಾಲದ ಜನಜೀವನವನ್ನು ಪ್ರತಿಬಿಂಬಿಸುತ್ತವೆ.

ಆದರೆ ಇವುಗಳಲ್ಲೆಲ್ಲ ಯಕ್ಷಗಾನದ ಆಭರಣಗಳ ಹಾಗೂ ಕಿರೀಟಗಳ ಮಾದರಿಯನ್ನು ಕಾಣಬಹುದೇ ಹೊರತು ಇವನ್ನೇ ಮಾತೃಕೆಗಳೆಂದು ಒಪ್ಪಿಕೊಳ್ಳಲು ಆಗದು. ಧಾರ್ಮಿಕವಾದ ಪೂಜಾ ಪರಿಕರಗಳಲ್ಲಿ ಪಾವಿತ್ರ್ಯವನ್ನು ಗುರುತಿಸುವ ಪ್ರಯತ್ನ ನಡೆಯಬಹುದೇ ಹೊರತು ಅದನ್ನು ಮೀರಿ ಬ್ರಾಹ್ಮಣೇತರ ಜನವರ್ಗದ ಧಾರಣ ವಸ್ತುಗಳಾಗಿ ಗುರುತಿಸುವುದು ಅಸಾಧ್ಯ. ಹಾಗೆಯೇ ಈ ಪೂಜಾ ಪರಿಕರಗಳನ್ನು ನೋಡಿದ ಕೂಡಲೇ ಅವುಗಳೆಲ್ಲ ಯಕ್ಷಗಾನದ ವೇಷ ರಚನೆಗೆ ಇದ್ದಕ್ಕಿದ್ದಂತೆ ಆಕರಗಳಾಗಿ  ಬಳಕೆಯಾಗುವುದು ಅಸಾಧ್ಯವಾದ ಮಾತು. ಈ ಹಿನ್ನೆಲೆಯಿಂದ ನೋಡಿದರೆ ಯಕ್ಷಗಾನಕ್ಕೆ ದೇವಾಲಯಗಳೇ ಮೂಲ ಎಂಬ ತರ್ಕವನ್ನಿಟ್ಟುಕೊಂಡು ಅಲ್ಲಿನ ಪೂಜಾ ಸಾಮಗ್ರಿಗಳಲ್ಲಿಯೇ ವೇಷಭೂಷಣಗಳ ಮಾತೃಕೆ ಗಳನ್ನು ಹುಡುಕುವ ಪ್ರಯತ್ನವಾಗಿ ಮಾತ್ರ ಈ ವಿಚಾರಧಾರೆಯನ್ನು ನೋಡಬಹುದಾಗಿದೆ.

ಯಕ್ಷಗಾನದ ಆಭರಣಗಳಿಗೆ ಮಾತೃಕೆ ಎನ್ನಬಹುದಾದ ಮಾದರಿಗಳನ್ನು ಪ್ರಾಚೀನ ದೇವಾಲಯಗಳ ಶಿಲ್ಪಗಳಲ್ಲಿ ಕಾಣಬಹುದಾಗಿದೆ. ಕಾಸರಗೋಡಿನ ಅನಂತಪುರದಲ್ಲಿರುವ ದೇವಾಲಯದಲ್ಲಿ ಗರ್ಭಗುಡಿಯ ಹೊರ ಆವರಣದ ಗೋಡೆಗಳಲ್ಲಿ ಯಕ್ಷಗಾನದ ಪಕಡಿಯನ್ನು ಹೋಲುವ ಶಿಲ್ಪಾಕೃತಿಗಳಿವೆ. ೧೫೦೦ ವರ್ಷಗಳಷ್ಟು ಪ್ರಾಚೀನವಾದ ಈ ದೇವಾಲಯದ ಶಿಲ್ಪ ರಚನೆ ಯಾವುದೋ ಒಂದು ಸಮಕಾಲೀನ ಕಲೆಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ತರ್ಕಿಸಬಹುದು ಅಥವಾ ಆ ಕಾಲಘಟ್ಟದಲ್ಲಿ ಶಿಲ್ಪಿಯೊಬ್ಬ ತನ್ನ ಪ್ರತಿಭೆಯ  ಹಿನ್ನೆಲೆಯಿಂದ ಕಲ್ಪಿಸಿದ ಆಕೃತಿಯೂ ಆಗಿರಬಹುದು. ಹಾಗಿದ್ದರೆ ಯಕ್ಷಗಾನಕ್ಕೆ ಅದು ಪ್ರೇರಣೆ ನೀಡಿದ್ದರಲ್ಲಿ ಅಚ್ಚರಿಯೇನಿಲ್ಲ. ಜನಜೀವನದ ನಡುವೆ ಬಳಕೆಯಲ್ಲಿದ್ದ ಯಾವುದೋ ಆಚರಣೆಯ ವಿಧಿವಿಧಾನಗಳ ನೆಲೆಯಿಂದಲೇ ನರ್ತನ ಪ್ರಧಾನವಾದ ಯಕ್ಷಗಾನಕ್ಕೂ ವೇಷಭೂಷಣಗಳು ಕೊಡುಗೆಯಾಗಿ ಬಂದಿರಬಹುದಾಗಿದೆ.

ಒಟ್ಟಿನಲ್ಲಿ ಯಕ್ಷಗಾನವು ಸ್ಪಷ್ಟವಾಗಿ ಎರಡು ಮೂರು ಕಲೆಗಳ ಸಂಗಮವಾಗಿ ಗೋಚರಿ ಸುತ್ತದೆ. ಮೊದಲನೆಯದಾಗಿ ಯಕ್ಷಗಾನವು ನಾಗಾರಾಧನೆಯ ನೆಲೆಯಲ್ಲಿ ರೂಪುಗೊಂಡಿದೆ. ನಾಗಾರಾಧನೆಯು ಬ್ರಾಹ್ಮಣೇತರ ಜನ ಸಮುದಾಯವು ಆಚರಿಸಿಕೊಂಡು ಬಂದ ಆರಾಧನಾ ಪದ್ಧತಿ. ಇದು ನರ್ತನ ಪ್ರಧಾನವಾಗಿದ್ದು ಆರಾಧನೆಗೆ ಸಂಬಂಧಿಸಿದಂತೆ ವಾದ್ಯ ಪರಿಕರಗಳನ್ನು ಹಿನ್ನೆಲೆಯಾಗಿ ಬಳಸಿರುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಭಾಷೆ ಎಂಬುದು ಗೌಣವಾದ ಸಂಗತಿಯಾಗಿತ್ತು. ತಾಳ ಲಯಗಳಿಗೆ ತಕ್ಕುದಾದ ನರ್ತನವನ್ನು ವೇಷಭೂಷಣ ಧರಿಸಿಯೇ ಮಾಡಿರಬಹುದಾಗಿದೆ. ಇದನ್ನು ಯಕ್ಷಗಾನದ ಪ್ರಾಥಮಿಕ ಸ್ವರೂಪವೆಂದು ಗುರುತಿಸ ಬಹುದು. ಆಗ ಅದನ್ನು ಯಕ್ಷಗಾನವೆಂದು ಅಥವಾ ನಾಗಾರಾಧನೆಯೆಂದು ಗುರುತಿಸುವುದಕ್ಕೆ ಬದಲಾಗಿ ಜನಜೀವನದಲ್ಲಿ ತಮ್ಮ ದೈನಂದಿನ ಆತಂಕ ಭಯಗಳ ನಿವಾರಣೆಗಾಗಿ ರೂಢಿಸಿಕೊಂಡ ಒಂದು ಆಚರಣಾ ಪದ್ಧತಿಯೆಂದು ಮಾತ್ರ ಇದನ್ನು ತಿಳಿಯಬಹುದಾಗಿದೆ. ಈ ಹಂತದ ಕಲಾರೂಪದ ಪಳಯುಳಿಕೆಯಾಗಿಯೇ ಇಂದಿನ ಯಕ್ಷಗಾನದ ಪೂರ್ವರಂಗದಲ್ಲಿ ಉಳಿದುಕೊಂಡು ಬಂದ ಸುಬ್ಬರಾಯ ಮತ್ತು ಅರ್ಧನಾರೀ ವೇಷಗಳನ್ನು ಗುರುತಿಸ ಬಹುದಾಗಿದೆ.

ಎರಡನೇ ಹಂತದಲ್ಲಿ ಬೌದ್ಧ ಮತವು ಜನರ ನಡುವೆ ಪ್ರಚಲಿತವಾಗಿದ್ದ ನಾಗಾರಾಧನೆಯ ಪದ್ಧತಿಯನ್ನು ಯಕ್ಷಾರಾಧನೆಯ ರೂಪದಲ್ಲಿ ಸ್ವೀಕರಿಸಿ ಜನಾಕರ್ಷಣೆ ಮಾಡಿರಬಹುದು. ಬೌದ್ಧಮತವು ನೆಲೆಗೊಳ್ಳುವುದಕ್ಕೆ ಪ್ರಾದೇಶಿಕವಾದ ಆರಾಧನಾ ಪದ್ಧತಿಗಳು ಅಗತ್ಯ ವಾಗಿದ್ದುವು. ಸಂಪೂರ್ಣ ಧಾರ್ಮಿಕ ಉದ್ದೇಶಕ್ಕಾಗಿಯೇ ಈ ಕಲೆಯನ್ನು ಬೌದ್ಧಮತ ಕೂಡ ಸ್ವೀಕರಿಸಿ, ನಾಗಾರಾಧನೆಯನ್ನು ಯಕ್ಷಾರಾಧನೆಯ ಮೂಲಕ ಸಮನ್ವಯೀಕರಿಸಿ ಕೊಂಡಿರಬಹುದಾಗಿದೆ. ನಾಗಯಕ್ಷದಂತಹ ದೇವತೆಗಳು ಈ ಕಾಲದ ಸೃಷ್ಟಿಯೂ ಆಗಿರಬಹುದು. ಗಾನ ರೂಪದಲ್ಲಿ ನಾಗಯಕ್ಷದಂತಹ ದೇವತೆಗಳನ್ನು ಆರಾಧಿಸುತ್ತಿದ್ದಿರ ಬಹುದು. ಬೌದ್ಧಮತದ ಪ್ರಾಬಲ್ಯದ ಕಾಲಘಟ್ಟದಲ್ಲಿ ಕಲೆಯ ಈ ಸ್ವರೂಪವನ್ನು ನೆಲೆಗೊಳಿಸಬಹುದಾಗಿದೆ. ಯಕ್ಷಗಾನ ಎಂಬ ಹೆಸರು ಈ ಆಚರಣಾ ವಿಧಾನಕ್ಕೆ ಈ ಹಿನ್ನೆಲೆಯಿಂದಲೇ ಬಂದಿರುವ ಸಾಧ್ಯತೆಯನ್ನು ಪರಿಗಣಿಸಬಹುದಾಗಿದೆ. ಜನಪದರ ನಡುವೆ ಇದ್ದ ಆರಾಧನಾ ಪದ್ಧತಿಯು ಬೌದ್ಧ ಚೈತ್ಯಾಲಯಗಳಿಗೆ ಇದೇ ಸಂದರ್ಭದಲ್ಲಿ ಪ್ರವೇಶ ಪಡೆದಿರಬಹುದು.

ಮೂರನೇ ಹಂತದಲ್ಲಿ ಈ ಆರಾಧನಾ ಪದ್ಧತಿಯು ಶೈವ ಪಂಥಕ್ಕೆ ಅಧೀನವಾಗಿ ಬೆಳೆದು ಬಂದಿರುವುದನ್ನು ಕಾಣಬಹುದು. ಇಲ್ಲಿ ಶಿವ ಪಾರಮ್ಯವನ್ನು ಸೂಚಿಸುವ ನರ್ತನ ಗಳಿಗೆ ಪ್ರಾಶಸ್ತ್ಯ ನೀಡಿ ಉತ್ತರ ರಂಗವನ್ನು ಸೃಷ್ಟಿಸಿರಬಹುದಾಗಿದೆ. ನಾಗಾರಾಧನೆಯ ಸಂದರ್ಭದ ಕುಣಿತವನ್ನು ಯಕ್ಷರೂಪವನ್ನೂ ಸಮನ್ವಯಿಸಿಕೊಂಡ ಈ ಕಲಾರೂಪವನ್ನು ವಿಸ್ತೃತವಾಗಿ ನರ್ತನ ಪ್ರಾಧಾನ್ಯವಾದ ಶಿವನ ಹಾಗೂ ಶಿವ ಗಣದ ಸಮೂಹಕ್ಕೆ ಪ್ರಾಶಸ್ತ್ಯವನ್ನು ನೀಡಿರಬಹುದು. ಮುಮ್ಮೇಳದ ಕುಣಿತಗಳಲ್ಲಿ ಶಿವಪರವಾದ ನರ್ತನಗಳು, ಆಶಯಗಳು ಈ ಸಂದರ್ಭದ ಸೃಷ್ಟಿಯಾಗಿರಬಹುದು. ಇಲ್ಲಿ ಈಗಾಗಲೇ ಕಲೆಯಲ್ಲಿ ಜಾಗ ಪಡೆದಿದ್ದ ಸುಬ್ಬರಾಯನ ವೇಷವನ್ನು ಷಣ್ಮುಖ ಸುಬ್ಬರಾಯನ ವೇಷವೆಂದು ಅಭೇದವಾಗಿ ಕಲ್ಪಿಸಿಕೊಂಡಿರಬಹುದು. ಅರ್ಧನಾರೀ ವೇಷವು ಅರ್ಧನಾರೀಶ್ವರವೆಂದು ಪರಿಗಣನೆ ಗೊಳಗಾಗಿರಬಹುದು. ಶಿವಗಣದಲ್ಲಿ ಶಿವಗಣಗಳ ನಾಯಕನಾದ ವಿಘ್ನೇಶ್ವರನಿಗೆ ಪ್ರಥಮ ಮನ್ನಣೆ ಇದೇ ಹಂತದಲ್ಲಿ ಸಿಕ್ಕಿರುವ ಸಾಧ್ಯತೆ ಇದೆ. ಚೈತ್ಯಾಲಯಗಳು ಶಿವಾಲಯಗಳಾಗಿ ಬದಲಾದಾಗ ಅಲ್ಲಿ ಈ ಆರಾಧನಾ ಪದ್ಧತಿಯು ನೆಲೆಗೊಂಡಿರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಶಿವ ದೇವಾಲಯಗಳಲ್ಲಿ ಪರಿಚಾರಕರಾದ ಜನವರ್ಗವೇ ಈ ಕಲೆಯನ್ನು ಪೋಷಿಸಿಕೊಂಡು ಬಂದಿರುವ ಸಾಧ್ಯತೆ ಇದೆ. ಹೀಗೆ ಸಮಾಜದ ಕೆಳಸ್ತರದಲ್ಲಿದ್ದ ಸಮುದಾಯ ವನ್ನು ಸೃಷ್ಟಿಸುವ ಕಲೆ ದೇವಾಲಯವನ್ನು ಪ್ರವೇಶಿಸಿ ಮೇಲ್‌ಸ್ತರದವರ ಅಧೀನದಲ್ಲಿ ಬೆಳೆದುಬಂದಿರಬಹುದು.

ನಂತರದ ಕಾಲಘಟ್ಟದಲ್ಲಿ ವೈಷ್ಣವ ಪಂಥದ ಪ್ರಭಾವದ ವೇಳೆಗೆ ಶೈವ ವೈಷ್ಣವ ಪಂಥಗಳ ನಡುವೆ ಸಂಘರ್ಷ ನಡೆಯಿತು. ಈ ಹಂತದಲ್ಲಿ ಯಕ್ಷಗಾನದ ಮೇಲೂ ವೈಷ್ಣವ ಪಂಥದವರು ಹಿಡಿತವನ್ನು ಸಾಧಿಸಲು  ಪ್ರಯತ್ನಿಸಿರಬೇಕು. ಹರಿಕಥೆಯಂತಹ ಕಥಾನಿರೂಪಣ ಕಲೆಗಳು ಯಕ್ಷಗಾನದ ಹಿಮ್ಮೇಳದಲ್ಲಿ ನೆಲೆಗೊಳ್ಳಲು ಪ್ರಯತ್ನಿಸಿರಬೇಕು. ಇದೇ ಸಂದರ್ಭದಲ್ಲಿ ದೇವಾಲಯಗಳ ಒಡೆತನಗಳು ಸ್ಥಳೀಯವಾದ ಶೈವ ಬ್ರಾಹ್ಮಣರ ಕೈತಪ್ಪಿ ಹೋದವು. ಶೈವ ವೈಷ್ಣವಗಳ ನಡುವೆ ಸಮನ್ವಯವನ್ನು ಸಾಧಿಸಲು ಶ್ರಮಿಸಿದ ಪರಿಣಾಮ ವಾಗಿ ದೇವಾಲಯಗಳಲ್ಲಿ ಶೈವ ವೈಷ್ಣವರು ಒಂದಾಗಿ ನೆಲೆಗೊಳ್ಳಲು ಕಾರಣವಾಯಿತು. ಇದೇ ವೇಳೆಗೆ ದೇವಾಲಯಗಳನ್ನೇ ಅವಲಂಬಿಸಿದ್ದ ಕಲೆಗಳು ಕೂಡ ಹರಿಹರರ ಅಭೇದ ಕಲ್ಪನೆಯನ್ನು ಮುಂದಿಟ್ಟ ಕಥಾನಕಗಳನ್ನೇ ಪ್ರಯೋಗಕ್ಕೆ ಅಳವಡಿಸಲೆತ್ನಿಸಿದವು. ಇದುವರೆಗಿನ ಯಕ್ಷಗಾನದ ನರ್ತನ ರೂಪದ ಕಲೆಗೆ ಶಾಸ್ತ್ರೀಯವಾದ ಹಿನ್ನೆಲೆಯ ಚೌಕಟ್ಟು ಲಭಿಸಿರಬೇಕು. ಹರಿಕಥೆಯಂತಹ ಕಥಾ ನಿರೂಪಣಾ ವಿಧಾನದಿಂದ ಮಾಧ್ವ ಸಂಪ್ರದಾಯದ ಹಿಮ್ಮೇಳವು ಯಕ್ಷಗಾನಕ್ಕೆ ಜೋಡಣೆಯಾಗಿರಬೇಕು. ಹಿಮ್ಮೇಳವು ಸ್ಪಷ್ಟವಾಗಿ ಮೇಲ್ವರ್ಗದವರ ಕೊಡುಗೆಯಾಗಿದ್ದು ಇದು ಶಾಸ್ತ್ರೀಯ ಚೌಕಟ್ಟಿಗೆ ಅಳವಟ್ಟಿದೆ. ಹಿಮ್ಮೇಳವು ಮಧ್ವಮತದ ಪ್ರಾಬಲ್ಯದಿಂದ ಮುಮ್ಮೇಳದಲ್ಲಿರುವ ಶೈವ ಅನುಯಾಯಿಗಳನ್ನು ನಿಯಂತ್ರಣಕ್ಕೆ ತರುವ ಹುನ್ನಾರದಲ್ಲಿ ಈ ಕಲೆಗಳನ್ನು ರೂಪಿಸಿದಂತೆ ತೋರುತ್ತದೆ. ಶೈವ ಪರವಾದ ನರ್ತನಗಳು ಕುಣಿತಗಳು ಇವೆಲ್ಲ ಶ್ರಮ ಸಂಸ್ಕೃತಿಯ ಭಾಗವಾಗಿದ್ದು ದೇವಾಲಯಗಳ ಪರಿಚಾರಕ ವರ್ಗದವರೇ ಇದನ್ನು ನಿರ್ವಹಿಸುತ್ತಿದ್ದರು. ಮುಮ್ಮೇಳವನ್ನು ನಿಯಂತ್ರಿಸುತ್ತಿದ್ದ ಹಿಮ್ಮೇಳದಲ್ಲಿ ಬೌದ್ದಿಕವಾಗಿ ಪ್ರಬುದ್ಧರಾದ ಮಾಧ್ವ ಪರವಾದ ಬ್ರಾಹ್ಮಣ ವರ್ಗದವರೇ ಇದ್ದರು. ಹಿಮ್ಮೇಳ ಮತ್ತು ಮುಮ್ಮೇಳದ ನಡುವೆ ರಂಗದಲ್ಲಿ ಕೂಡ ಚೆಂಡೆವಾದಕನು ಪ್ರತ್ಯೇಕವಾದ ಒಂದು ಜಾಗದಲ್ಲಿ ನಿಂತಿರುತ್ತಾನೆ. ಈತ ಮುಮ್ಮೇಳಕ್ಕೂ ಹಿಮ್ಮೇಳಕ್ಕೂ ಒಂದು ರೀತಿ ಸಂಪರ್ಕವನ್ನು ಸಾಧಿಸುವ ಸಮನ್ವಯಕಾರ. ಸಾಮಾಜಿಕವಾಗಿ ಈತ ಅತ್ತ ಬ್ರಾಹ್ಮಣವರ್ಗದವನೂ ಅಲ್ಲದ ಇತ್ತ ಮುಮ್ಮೇಳದ ಏಕ ಜಾತಿಗೂ ಸೇರದ ಚಂಡೆವಾದಕ ವೃತ್ತಿಗೆ ಸೇರಿದವನಾಗಿದ್ದ. ದೇವಾಲಯಗಳಲ್ಲೂ ಚಂಡೆ ಬಾರಿಸುವ ವೃತ್ತಿ ನಿರ್ವಹಿಸುತ್ತಿದ್ದ ಈತ ಎರಡು ಕಲೆಗಳ ನಡುವೆ ಹಾಗೂ ಎರಡು ಸಮುದಾಯಗಳ ನಡುವೆ ನಿರ್ದಿಷ್ಟವಾದ ಒಂದು ಗೆರೆಯ ಮೇಲೆ ನಿಂತಿರುತ್ತಾನೆ. ಇದನ್ನು ಸಾಮಾಜಿಕವಾಗಿ ಎರಡೂ ವ್ಯವಸ್ಥೆಗಳ ಜೋಡಣೆಯ ಗೆರೆಯಾಗಿಯೂ ಗುರುತಿಸಬಹುದು.

ಈ ಸಂದರ್ಭದಲ್ಲಿ ಯಕ್ಷಗಾನದ ಕಲೆಯೊಳಗೆ ನಾಗಾರಾಧನೆಯ ಪಳಯುಳಿಕೆಗಳು, ಬೌದ್ಧ ಮತ್ತು ಶೈವ ಧರ್ಮದ ನರ್ತನ ಪ್ರಧಾನ ಆಚರಣಾ ಸಂಪ್ರದಾಯಗಳು, ನಂತರದಲ್ಲಿ ಮಾಧ್ವಮತದ ಕಥನ ನಿರೂಪಣಾ ಕಲೆಗಳು ಸೇರಿಕೊಂಡಂತೆ ಭಾಸವಾಗುತ್ತದೆ. ಇವತ್ತಿಗೂ ಯಕ್ಷಗಾನದಲ್ಲಿ ಗುರುತಿಸುವ ಪೂರ್ವರಂಗ ನಾಗಾರಾಧನೆಯ ಪಳಯುಳಿಕೆಯಾದರೆ ಉತ್ತರರಂಗದ ಮುಮ್ಮೇಳವು ಶೈವ ಪ್ರಾತಿನಿಧ್ಯವನ್ನು ಸೂಚಿಸುತ್ತದೆ. ಹಿಮ್ಮೇಳವು ವೈಷ್ಣವಪರ ಆಶಯಗಳನ್ನು ಪ್ರತಿಪಾದಿಸುತ್ತದೆ. ಹೀಗೆ ಸಂಪೂರ್ಣ ಧಾರ್ಮಿಕ ಕಲೆಯಾಗಿದ್ದ ಜಾನಪದ ನಾಗಾರಾಧನೆ ಪದ್ಧತಿಯು ವಿಕಾಸಗೊಂಡು ೧೨ನೇ ಶತಮಾನದ ವೇಳೆಗೆ ವೈಷ್ಣವ ಪ್ರಾಬಲ್ಯದ ಶಾಸ್ತ್ರೀಯ ಚೌಕಟ್ಟಿನ ಜೊತೆ ಹೊಂದಿಕೊಂಡಿತು. ಈ ಕಾರಣಕ್ಕಾಗಿ ಯಕ್ಷಗಾನ ವನ್ನು ಇಂದಿಗೂ ಜಾನಪದ ಕಲೆ ಎಂದು ಶಾಸ್ತ್ರೀಯ ಕಲೆ ಎಂದು ಸ್ಪಷ್ಟವಾಗಿ ಗೆರೆ ಎಳೆದು ಹೇಳಲಾಗದ ಸ್ಥಿತಿ ಇದೆ. ಆದರೆ ಯಕ್ಷಗಾನದ  ಮುಮ್ಮೇಳವು ಸ್ಪಷ್ಟವಾಗಿ ಜಾನಪದ ಕಲೆಯಾಗಿದ್ದರೆ ಹಿಮ್ಮೇಳವು ಶಾಸ್ತ್ರೀಯವಾಗಿ ಸಿದ್ಧಗೊಂಡ ಕಲೆ. ಮುಮ್ಮೇಳದಲ್ಲಿ ದೈಹಿಕ ಶ್ರಮವೇ ಅಧಿಕವಾದರೆ ಹಿಮ್ಮೇಳವು ಪೂರ್ತಿ ಬೌದ್ದಿಕವಾದುದು. ಹಾಗಾಗಿ ಯಕ್ಷಗಾನ ವೆಂಬುದು ಜನಪದ ಮತ್ತು ಶಾಸ್ತ್ರೀಯ ಕಲೆಗಳ ಸಮ್ಮಿಳನಗೊಂಡ ಒಂದು ಸಾಂಘಿಕ ಕಲೆ. ಹಾಗೂ ಶಾಸ್ತ್ರೀಯ ಮತ್ತು ಜನಪದಗಳನ್ನು ಸಮನ್ವಯೀಕರಿಸಿಕೊಂಡ ಒಂದು ದೇಸೀ ಕಲೆ.

ಯಕ್ಷಗಾನವು ಈ ವೇಳೆಗೆ ಧಾರ್ಮಿಕವಾದ ಉದ್ದೇಶದ ಜೊತೆಗೆ ಮನರಂಜನೆಯ ಆಶಯವನ್ನು ತನ್ನೊಳಗೆ ಅಳವಡಿಸಿಕೊಂಡಿತು. ನರ್ತನ ಪ್ರಧಾನವಾಗಿದ್ದ ಆರಾಧನಾ ಸಂಪ್ರದಾಯವು ಹಿನ್ನೆಲೆಯ ಗಾನಕ್ಕೆ ಪೂರಕವಾಗಿ ನರ್ತಿಸಿ ಆಚರಣೆಯನ್ನು ರೂಪಿಸಿ ಕೊಂಡಿದ್ದವು. ತರುವಾಯ ಯಕ್ಷಗಾನಕ್ಕೆ ಮನರಂಜನೆಯ ನೆಲೆಯೂ ಸೇರಿಕೊಂಡಿದ್ದರಿಂದ ಯಕ್ಷಗಾನವು ಆಟವಾಗಿ ರೂಪು ಪಡೆಯಿತು. ಇಲ್ಲಿಂದ ಯಕ್ಷಗಾನಕ್ಕೆ ಆಟದ ಸ್ವರೂಪವು  ಲಭ್ಯವಾಯಿತು. ಈ ಸಂದರ್ಭದಲ್ಲಿ ಯಕ್ಷಗಾನಕ್ಕೆ ಹಾಗೂ ಅದರ ವೇಷಭೂಷಣಗಳಿಗೆ ಕಲಾತ್ಮಕ ದೃಷ್ಟಿಕೋನಗಳು ಲಭ್ಯವಾದವು. ಸೌಂದರ್ಯದ ನೆಲೆಯಿಂದಲೇ ಎಲ್ಲಾ ಕಾಲಘಟ್ಟದಲ್ಲೂ ಪ್ರತಿಯೊಬ್ಬ ಕಲಾವಿದನು ತನ್ನ ಪ್ರತಿಭೆಯನ್ನು ಪ್ರಕಟಿಸುವ ಅವಕಾಶವನ್ನು ಪಡೆದನು. ಈ ಸಂದರ್ಭದಲ್ಲಿ ವೈದಿಕ ಪುರಾಣಗಳು, ಕಥಾನಕಗಳು, ರಾಮಾಯಣ, ಮಹಾಭಾರತ, ಭಾಗವತ ಮೊದಲಾದವುಗಳೆಲ್ಲ ಯಕ್ಷಗಾನದ ಕಥೆಗಳಾಗಿ ಸ್ವೀಕರಿಸಲಾಯಿತು. ಯಾವ ಕಥೆಗಳನ್ನು ಸ್ವೀಕರಿಸಿದರೂ ಶೈವ ಅವಲಂಬಿಗಳಿಗೆ ಸೋಲನ್ನು ವೈಷ್ಣವ ಅವಲಂಬಿ ಗಳಿಗೆ ಗೆಲುವನ್ನು ರೂಪಿಸುವ ಆಶಯದ ನೆಲೆಯಲ್ಲಿಯೇ ಯಕ್ಷಗಾನದ ಪ್ರಸಂಗಗಳು ಕೊನೆಯಾಗುತ್ತಿದ್ದವು. ಯಕ್ಷಗಾನದ ಶೈಲಿಯಲ್ಲಿ ಅಲ್ಲಲ್ಲಿ ರಚನೆಗೊಳ್ಳುತ್ತಿದ್ದ ಕಾವ್ಯಗಳನ್ನು ಯಕ್ಷಗಾನ ಆಟವು ಬಳಸಿಕೊಂಡಿತು. ಇಂತಹ ಯಕ್ಷಗಾನ ಕಾವ್ಯಗಳನ್ನು ಬಳಸಿಕೊಳ್ಳುತ್ತಾ ರೆಂಬ ಕಾರಣಕ್ಕಾಗಿಯೂ ಇನ್ನಷ್ಟು ಪ್ರಸಂಗ ರಚನೆಗಳು ನಂತರದ ಕಾಲಘಟ್ಟದಲ್ಲಿ ಆದುವು. ಯಕ್ಷಗಾನ ರೂಪದಲ್ಲಿ ಹೇಳಿದ ಕಾವ್ಯಗಳನ್ನು ಆಕಸ್ಮಿಕವಾಗಿ ಯಕ್ಷಗಾನ ಬಳಸಿಕೊಂಡವೇ ಹೊರತು ಯಕ್ಷಗಾನ ಆಟಕ್ಕಾಗಿಯೇ ಪ್ರಸಂಗಗಳ ಸೃಷ್ಟಿ ಆರಂಭ ಕಾಲಘಟ್ಟಗಳಲ್ಲಿ ಆಗಿರಲೇ ಇಲ್ಲ. ಈ ಕಾರಣಕ್ಕಾಗಿ ಯಕ್ಷಗಾನ ಪ್ರಸಂಗಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಮಾಹಿತಿ ಗಳಿಲ್ಲ. ಜನರ ಬಾಯಲ್ಲಿ ಯಕ್ಷಗಾನವಾಗಿ ಉಳಿಯದೇ ಅದು ಆಟ ಎಂಬ ಹೆಸರಿನಲ್ಲಿ ಉಳಿದುಬಂತು. ಬಯಲಿನಲ್ಲಿ ಆಡಿದ್ದರಿಂದ ಯಕ್ಷಗಾನ ಬಯಲಾಟವಾಗಿ ತಾಳಮದ್ದಳೆಯು ಯಕ್ಷಗಾನ ತಾಳಮದ್ದಳೆಯಾಗಿ ಹೆಸರು ಪಡೆಯಿತು (ಯಕ್ಷಗಾನ ಎಂದು ಅಕ್ಷರಸ್ಥರು ಬಳಕೆ ತಂದ ಪದ. ಅನಕ್ಷರಸ್ಥರು ಆಟ, ಬಯಲಾಟ, ತಾಳಮದ್ದಳೆ ಎಂದೇ ಕರೆಯುತ್ತಿದ್ದರು). ಧಾರ್ಮಿಕ ಉದ್ದೇಶದ ಜೊತೆಗೆ ಯಕ್ಷಗಾನಕ್ಕೆ ಮನರಂಜನೆಯ ಉದ್ದೇಶವೂ ಸೇರಿಕೊಂಡುದು ಸುಮಾರು ಹದಿನಾರು ಹದಿನೇಳನೆಯ ಶತಮಾನದ ವೇಳೆಗೆ ಆಗಿರಬಹುದು. ಈ ಸಂದರ್ಭದಲ್ಲಿ ಯಕ್ಷಗಾನವನ್ನು ನಾಟಕೀಯವಾಗಿ ವಿಸ್ತರಿಸುವ ವಿವಿಧ ಕಥಾನಕಗಳ ಕಲ್ಪನಾ ಸೃಷ್ಟಿಯಿಂದ ರಂಗಭೂಮಿಗೆ ಒಂದು ಹೊಸ ಆಯಾಮವೇ ದೊರೆತಂತಾಯಿತು. ಈ ಸಂದರ್ಭದಲ್ಲಿ ಕವಿಗಳು ಪ್ರಸಂಗಗಳನ್ನು ಬರೆದು ಯಕ್ಷಗಾನದ ಕಾವ್ಯಶೈಲಿಯಲ್ಲಿ ಕಥಾನಕಗಳನ್ನು ಸೃಷ್ಟಿಸಿದರು. ಆದರೆ ಈ ಪ್ರಸಂಗಗಳ್ಯಾವುವೂ ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದವುಗಳಲ್ಲ. ಅವು ಯಕ್ಷಗಾನದ ಶೈಲಿಯಲ್ಲಿ  ಕತೆಗಳನ್ನು ಹೇಳಲು ಸೃಷ್ಟಿಯಾದವುಗಳು. ಈ ವೇಳೆಗೆ ವೈದಿಕ ಧರ್ಮವು ಯಕ್ಷಗಾನದಲ್ಲಿ ಸ್ಪಷ್ಟವಾಗಿ ನೆಲೆಯೂರಿತ್ತು. ದಶಾವತಾರಗಳ ಕಲ್ಪನೆಗೂ ಇಂಬುದೊರೆತಿತ್ತು. ಪುರಾಣ ಕಥಾನಕಗಳು ಸಮಾಜಕಾರರ ಸಂದೇಶವನ್ನು ಸಾರುವ ಮುಖ್ಯ ವಾಹಿನಿಗಳಾಗಿ ಗೋಚರವಾದುವು. ಅಲ್ಲಿನ ಪಾತ್ರಗಳು ಪೌರಾಣಿಕ ಅವರಣದಲ್ಲಿಯೇ ಅತಿಮಾನುಷವಾದ ಪ್ರವೃತ್ತಿಗಳ ಮೂಲಕ ಜನರ ಮನಸೂರೆಗೊಂಡವು. ಈ ಎಲ್ಲವುಗಳ ಮೂಲಕ ಯಕ್ಷಗಾನವು ಧಾರ್ಮಿಕ ಉದ್ದೇಶದ ಜೊತೆಗೆ ಮನರಂಜನೆಯನ್ನು ಸಮನ್ವಯೀಕರಿಸಿಕೊಂಡು ಮುಂದುವರಿಯಿತು.