ಯಕ್ಷಗಾನ ಗೊಂಬೆಯಾಟ

ಗೊಂಬೆಯಾಟವೆಂಬುದು ಪ್ರಪಂಚದಾದ್ಯಂತ ಪ್ರಚಲಿತವಿರುವ ಬಹು ಪುರಾತನವಾದ ಕಲೆ. ಇದು ಎಲ್ಲ ವಯಸ್ಸಿನ ಮತ್ತು ಎಲ್ಲ ವರ್ಗದ ಜನರಿಗೆ ಮನರಂಜನೆಯನ್ನು ನೀಡಬಲ್ಲ ಒಂದು ಕಲಾಪ್ರಕಾರ. ಕನ್ನಡನಾಡಿನಲ್ಲಿಯೂ ಬಹಳ ಹಿಂದಿನಿಂದಲೇ ಗೊಂಬೆಗಳನ್ನು ಆಡಿಸುವ ಕಲೆಯು ರೂಢಿಯಲ್ಲಿತ್ತು ಎಂಬುದಕ್ಕೆ ನಿದರ್ಶನಗಳಿವೆ. ಪ್ರಾಚೀನ ಕಾವ್ಯಗಳಲ್ಲಿ ಬಳಕೆಯಾಗಿರುವ ಸೂತ್ರದ ಗೊಂಬೆ, ಗೊಂಬೆಯಾಟ, ಸೂತ್ರಧಾರಿ ಇತ್ಯಾದಿ ಪದಗಳೇ ಇದಕ್ಕೆ ಸಾಕ್ಷಿ. ಈಗಲೂ ಕನ್ನಡನಾಡಿನ ಹಲವಾರು ಕಡೆ ಈ ಕಲೆ ಜೀವಂತವಾಗಿದೆ. ಇದರಲ್ಲಿ ಯಕ್ಷಗಾನ ಗೊಂಬೆಯಾಟವು ಮುಖ್ಯವಾದುದು.

ಕರ್ನಾಟಕದ ಗೊಂಬೆಯಾಟಗಳಲ್ಲಿ ಎರಡು ಪ್ರಭೇದಗಳನ್ನು ಕಾಣಬಹುದು. ಒಂದು ಸೂತ್ರದ ಗೊಂಬೆಯಾಟ. ಇನ್ನೊಂದು ತೊಗಲು ಗೊಂಬೆಯಾಟ. ಈ ಎರಡೂ ಪ್ರಭೇದಗಳು ಯಕ್ಷಗಾನ ಮಾಧ್ಯಮದ ಮೂಲಕ ಪ್ರದರ್ಶನಗೊಳ್ಳುತ್ತವೆ. ಬಯಲಾಟದಲ್ಲಿ ಮಾನವ ಪಾತ್ರಗಳು ನೇರವಾಗಿ ಭಾಗವಹಿಸಿದರೆ, ಇಲ್ಲಿ ಗೊಂಬೆಗಳು ಮಾನವನ ತೆರೆಮರೆಯ ಕೈಚಳಕದಿಂದ ಕುಣಿಯುತ್ತವೆ. ಕನ್ನಡನಾಡಿನಲ್ಲಿ ಸೂತ್ರದ ಗೊಂಬೆಯಾಟ ಮತ್ತು ತೊಗಲು ಗೊಂಬೆಯಾಟಗಳೆಂಬ ಎರಡು ಪ್ರಕಾರಗಳೂ ಜನಪ್ರಿಯವಾಗಿವೆ.

ಯಕ್ಷಗಾನ ಬಯಲಾಟದಂತೆಯೇ ಗೊಂಬೆಯಾಟಗಳಲ್ಲೂ ಪ್ರಾದೇಶಿಕವಾಗಿ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಕುಂದಾಪುರ ಸಮೀಪದ ಉಪ್ಪಿನಕುದ್ರು ಶ್ರೀ ಗಣೇಶ ಗೊಂಬೆಯಾಟ ಸಂಘದವರು ಬಡಗುತಿಟ್ಟು ಯಕ್ಷಗಾನವನ್ನು ಅನುಸರಿಸಿದರೆ, ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘದವರು ತೆಂಕುತಿಟ್ಟು ಯಕ್ಷಗಾನವನ್ನು ಪ್ರದರ್ಶಿಸುತ್ತಾರೆ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಮೂಡಲಪಾಯ, ದೊಡ್ಡಾಟ ಮತ್ತು ಸಣ್ಣಾಟಗಳನ್ನು ಗೊಂಬೆಯಾಟಗಳ ಮೂಲಕ ಪ್ರದರ್ಶಿಸುತ್ತಾರೆ.

ಸೂತ್ರದ ಗೊಂಬೆಯಾಟದ ಮರದ ಗೊಂಬೆಗಳು ಸುಮಾರು ಒಂದೂವರೆ ಅಡಿಯಿಂದ ಎರಡು ಅಡಿಗಳವರೆಗೆ ಎತ್ತರವಿರುತ್ತದೆ. ಹಗುರವಾದ ಮರಗಳಿಂದ ಇವುಗಳನ್ನು ತಯಾರಿಸಿರುತ್ತಾರೆ. ಕುಣಿತಕ್ಕೆ ಅನುಕೂಲವಾಗುವಂತೆ ಅಂಗಾಂಗಗಳ ನಡುವೆ ಸಂದು ಬಿಟ್ಟಿರುತ್ತಾರೆ. ಬಯಲಾಟದ ರೀತಿಯದ್ದೇ ಆದ ವೇಷಭೂಷಣಗಳನ್ನು ಸಿದ್ಧಪಡಿಸಿ ಈ ಗೊಂಬೆಗಳನ್ನು ಅಲಂಕರಿಸುತ್ತಾರೆ. ಮುಖದ ಭಾಗದಲ್ಲಿ ಯಕ್ಷಗಾನದ ಮುಖವರ್ಣಿಕೆಯನ್ನು ಮಾಡಿರುತ್ತಾರೆ. ಸಾಮಾನ್ಯವಾಗಿ ತಲೆ ಹಾಗೂ ಶಿರೋಭೂಷಣವನ್ನು ಒಂದೇ ಮರದ ತುಂಡಿನಲ್ಲಿ ಕೆತ್ತಿ ರೂಪ ಕೊಡುತ್ತಾರೆ. ಶಿರೋಭೂಷಣ ಹಾಗೂ ವೇಷಭೂಷಣಗಳನ್ನು ಗಾಜಿನ ಚೂರು, ಬೇಗಡೆ, ಜೀರ್ದುಂಬಿಗಳ ರೆಕ್ಕೆ ಹಾಗೂ ಬೆನ್ನ ಚಿಪ್ಪುಗಳಿಂದ ಅಲಂಕರಿ ಸುತ್ತಿದ್ದರು.

ಗೊಂಬೆಯಾಟಕ್ಕೆ ಮರದ ಚೌಕಟ್ಟಿನ ಪುಟ್ಟ ವೇದಿಕೆಯನ್ನು ನಿರ್ಮಿಸುತ್ತಾರೆ. ಗೊಂಬೆಯಾಟದ ರಂಗವೇದಿಕೆಯನ್ನು ‘ಕಟ್ಟು’ ಎನ್ನುತ್ತಾರೆ. ಕಪ್ಪು ಬಣ್ಣದ  ಪರದೆಯ ಹಿಂದೆ ಗೊಂಬೆಗಳನ್ನು ಕುಣಿಸುವವರೂ, ಹಾಡುವವರೂ, ಮದ್ದಳೆಗಾರರೂ ನಿಲ್ಲುತ್ತಾರೆ. ಗೊಂಬೆಗಳ ಚಲನೆಗಳಿಗೆ ಅನುಗುಣವಾಗಿ ಅವರೇ ಅರ್ಥಧಾರಿಗಳಾಗಿ ಮಾತನಾಡುತ್ತಾರೆ. ಅವರೇ ಹಾಡುತ್ತಾ, ಕೈಗಳಿಂದ ಗೊಂಬೆಗಳನ್ನು ತಾಳಕ್ಕೆ ಸರಿಯಾಗಿ ಕುಣಿಸುತ್ತಾರೆ. ಸುತ್ತಲೂ ಕತ್ತಲು ಆವರಿಸಿರುವಾಗ ನೀಲಾಂಜನದ ಬೆಳಕಿನಲ್ಲಿ ಇಂತಹ ಗೊಂಬೆಯಾಟಗಳು ಸೊಗಸಾಗಿ ಮೂಡಿಬರುತ್ತಿದ್ದವು. ಯಕ್ಷಗಾನದಂತೆಯೇ ಗಣಪತಿ ಪೂಜೆಯಿಂದ ಆರಂಭವಾಗುವ ಗೊಂಬೆಯಾಟಗಳು ಮಂಗಳ ಪದ್ಯಗಳೊಂದಿಗೆ ಮುಗಿಯುತ್ತವೆ.

ಜಿ.ಎಸ್. ಭಟ್ಟರ ಪ್ರಕಾರ ಕರಾವಳಿಯ ಯಕ್ಷಗಾನ ಗೊಂಬೆಯಾಟಕ್ಕೆ ಸುಮಾರು ಮುನ್ನೂರು ವರ್ಷಗಳಿಗೂ ಹಿಂದಿನ ಇತಿಹಾಸವಿದೆ (೧೯೯೫ : ೨೨). ಕರಾವಳಿ ಪ್ರದೇಶದಲ್ಲಿ ಈಗ ಐದು ಯಕ್ಷಗಾನ ಗೊಂಬೆಯಾಟ ಸಂಘಗಳು ಅಸ್ತಿತ್ವದಲ್ಲಿವೆ. ಕಾಸರಗೋಡಿನ ಶ್ರೀಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಮತ್ತು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮೇಳಗಳು ಪ್ರಸಿದ್ಧವಾಗಿವೆ. ಭಟ್ಕಳದ ರಘುವೀರ ಗುಡಿಗಾರ ಎಂಬುವರು ಶ್ರೀ ಸಿದ್ದಿವಿನಾಯಕ ಯಕ್ಷಗಾನ ಗೊಂಬೆಯಾಟ ಮೇಳವನ್ನು ಸ್ಥಾಪಿಸಿದ್ದಾರೆ. ಉಪ್ಪುಂದ ಗೊಂಬೆಯಾಟ ಮಂಡಳಿ ಮತ್ತು ಬೆಳ್ತಂಗಡಿಯ ಶ್ರೀ ಮಹಾಮಾಯಿ ಗೊಂಬೆ ಯಾಟ ಮೇಳಗಳು ಕರಾವಳಿಯ ಇನ್ನೆರಡು ಗೊಂಬೆಯಾಟ ಮೇಳಗಳಾಗಿವೆ.

ತಾಳಮದ್ದಳೆ

ತಾಳಮದ್ದಳೆಯು ಯಕ್ಷಗಾನದ ಒಂದು ಪ್ರಭೇದವಾಗಿದೆ. ಯಕ್ಷಗಾನದ ಒಂದು ಅಂಗವೆನಿಸಿದರೂ ಯಕ್ಷಗಾನದ ಕುಣಿತ, ವೇಷಭೂಷಣಗಳು ಇದರಲ್ಲಿ ಇಲ್ಲ. ಪದ್ಯವನ್ನು ಹಾಡುವ ಭಾಗವತನ ಮುಂಭಾಗದಲ್ಲಿ ಅರ್ಧ ವೃತ್ತಾಕಾರದಲ್ಲಿ ಕುಳಿತುಕೊಳ್ಳುವ ಪಾತ್ರಧಾರಿಗಳು ತಮ್ಮ ನಿತ್ಯದ ಉಡುಗೆಯಲ್ಲಿ ಮಾತಿನ ಮೂಲಕ ಕಥಾನಕವನ್ನು ಸಾಗಿಸುತ್ತಾರೆ. ಈ ಕ್ರಿಯೆಗೆ ‘ಅರ್ಥ ಹೇಳುವುದು’ ಎಂದು ಹೇಳುತ್ತಾರೆ. ಯಕ್ಷಗಾನ ತಾಳಮದ್ದಳೆಯ ಪಾತ್ರಧಾರಿಯನ್ನು ‘ಅರ್ಥಧಾರಿ’ ಎಂದೂ ಹೇಳುತ್ತಾರೆ.

ಯಕ್ಷಗಾನ ತಾಳಮದ್ದಳೆಯಲ್ಲಿ ಮಾತೇ ಮುಖ್ಯ ಮಾಧ್ಯಮ. ಹಾಡುಗಾರಿಕೆಯು ಮಾತುಗಾರಿಕೆಗೆ ಸ್ಫೂರ್ತಿಯಾಗಿರುತ್ತದೆ. ಇದರಲ್ಲಿ ಮುಖ್ಯ ವಾದ್ಯಗಳು ತಾಳ ಅಥವಾ ಜಾಗಟೆ ಮತ್ತು ಮದ್ದಳೆ. ಆದುದರಿಂದಲೇ ತಾಳಮದ್ದಳೆ ಎಂಬ ಹೆಸರು ಬಂದಿರಬಹುದು. ವೀರರಸದ ಪ್ರಸಂಗಗಳಿಗೆ ಚೆಂಡೆಯನ್ನು ಬಾರಿಸುವುದೂ ಇದೆ. ಭಾಗವತ ಹೇಳಿದ ಪದ್ಯಕ್ಕೆ ಅರ್ಥಧಾರಿಗಳು ಸ್ವಯಂಸ್ಫೂರ್ತಿಯಿಂದ ಅರ್ಥವನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಮಾತಿನ ಮೂಲಕವೇ ಪಾತ್ರಗಳಿಗೆ ಜೀವ ತುಂಬಿ ಪೌರಾಣಿಕ ಆವರಣವನ್ನು ನಿರ್ಮಿಸುವ ಯಕ್ಷಗಾನ ತಾಳಮದ್ದಳೆಯು ವಿಶಿಷ್ಟವಾದ ಕಲಾ ಪ್ರಕಾರವಾಗಿದೆ.

ಯಕ್ಷಗಾನ ಬಯಲಾಟದ ಮೇಳವನ್ನು ಊರಿಗೆ ಆಹ್ವಾನಿಸಿದರೆ, ಹಗಲು ಹೊತ್ತಿನಲ್ಲಿ ಆಟ ನಡೆಸುವವರ ಮನೆ ಅಥವಾ ಊರಿನ ದೇವಸ್ಥಾನದಲ್ಲಿ ‘ತಾಳಮದ್ದಳೆ’ ಸೇವೆಯನ್ನು ನಡೆಸುವ ಪರಿಪಾಠವಿತ್ತು. ಇಂದು ಯಕ್ಷಗಾನ ತಾಳಮದ್ದಳೆಯೂ ಒಂದು ಜನಪ್ರಿಯ ಕಲಾ ಮಾಧ್ಯಮವಾಗಿದೆ. ಅನೇಕ ವಿದ್ವಾಂಸರು ಈ ಕ್ಷೇತ್ರವನ್ನು ಪ್ರವೇಶಿಸಿ ತಾಳಮದ್ದಳೆ ಗೊಂದು ಹೊಸ ಆಯಾಮವನ್ನು ನೀಡಿದ್ದಾರೆ. ಮನರಂಜನೆಯ ಜತೆಯಲ್ಲಿ ಸಮಕಾಲೀನ ತಾತ್ವಿಕ ವಿಚಾರಗಳನ್ನು ಒರೆಗಲ್ಲಿಗೆ ಹಚ್ಚುವ ವೇದಿಕೆಯಾಗಿ ತಾಳಮದ್ದಳೆಯ ಪ್ರಕಾರವು ಬೆಳೆದು ಬಂದಿದೆ.

ಕರ್ನಾಟಕದ ಯಕ್ಷಗಾನ ಪರಂಪರೆಯಲ್ಲಿ ಅನೇಕ ಪ್ರಭೇದಗಳನ್ನು ಗಮನಿಸಲಾಯಿತು. ಅವುಗಳನ್ನು ಅಧ್ಯಯನ ದೃಷ್ಟಿಯಿಂದ ಮುಖ್ಯವಾಗಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮುಖ್ಯ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಪಡುವಲಪಾಯದಲ್ಲಿ ಮುಖ್ಯವಾಗಿ ತೆಂಕುತಿಟ್ಟು, ಬಡಗುತಿಟ್ಟು ಎಂಬುದು ಎರಡು ಮುಖ್ಯ ಪ್ರಭೇದಗಳು. ಉಡುಪಿಯ ದಕ್ಷಿಣಕ್ಕೆ ಕಾಸರಗೋಡಿನವರೆಗಿನ ಯಕ್ಷಗಾನ ಪ್ರಭೇದವನ್ನು ತೆಂಕುತಿಟ್ಟು ಎಂದು ಗುರುತಿಸಲಾಗುತ್ತದೆ. ಈ ಎಲ್ಲ ವರ್ಗೀಕರಣಗಳೂ ಯಕ್ಷಗಾನದ ಅಧ್ಯಯನಕಾರರು ರೂಢಿಸಿಕೊಂಡ ವರ್ಗೀಕರಣಗಳಾಗಿವೆ. ಎಲ್ಲಿಯೂ ಯಕ್ಷಗಾನದ ಪರಿಭಾಷೆಯಲ್ಲಿ ತಿಟ್ಟುಗಳ ಹೆಸರುಗಳನ್ನಾಗಲೀ, ಪ್ರಭೇದಗಳನ್ನಾಗಲೀ ಯಾರೂ ಹೆಸರಿಟ್ಟು ಗುರುತಿಸುವುದಿಲ್ಲ. ಆಯಾ ಪ್ರದೇಶಗಳವರಿಗೆ ಆಯಾ ಪ್ರಭೇದಗಳು ಬಯಲಾಟಗಳಾಗಿ ಮಾತ್ರ ಪರಿಚಿತವಾಗಿವೆ. ಇಲ್ಲಿ ಹೆಸರಿಸಿದ ವರ್ಗೀಕರಣಗಳಾಗಲೀ ಯಾರು ಯಾವ ಹಿನ್ನೆಲೆಯಲ್ಲಿ ಮಾಡಿದ್ದರೂ ಅದು ಸಮರ್ಥನೀಯವೆಂದು ಅನ್ನಿಸುವುದಿಲ್ಲ. ಮೂಡಲಪಾಯ ಎನ್ನುವುದು ಕಲಾಪ್ರಕಾರಕ್ಕೆ ಹೇಳುವ ಹೆಸರು. ಅದರ ಪಡುಭಾಗಕ್ಕೆ ಅಂದರೆ ಪಶ್ಚಿಮ ಭಾಗಕ್ಕಿರುವ ಕಲಾಪ್ರಕಾರಗಳನ್ನು ಪಡುವಲಪಾಯವೆಂದು ಹೆಸರಿಸಬಹುದು. ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂದು ಹೆಸರಿಸುವಲ್ಲಿ ಎಲ್ಲಿಂದ ತೆಂಕು (ದಕ್ಷಿಣ) ಎಲ್ಲಿಂದ ಬಡಗು (ಉತ್ತರ) ಎಂಬುದು ಸ್ಪಷ್ಟವಿಲ್ಲ. ಕರಾವಳಿಯ ಯಕ್ಷಗಾನ ಪ್ರಚಲಿತ ಪ್ರದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ತೆಂಕು ಬಡಗು ಎಂದು ಹೆಸರಿಸಬಹುದು. ಈ ಎರಡೂ ಪ್ರಭೇದಗಳು ಪ್ರತ್ಯೇಕವಾಗಿ ಇವೆ ಎಂಬುದು ಮಾತ್ರ ವಾಸ್ತವ. ಈ ಹಿನ್ನೆಲೆಯಲ್ಲಿ ತೆಂಕುತಿಟ್ಟು ಎಂಬ ಪ್ರಭೇದದ ಯಕ್ಷಗಾನವನ್ನು ಪ್ರಸ್ತುತ ಅಧ್ಯಯನಕ್ಕೆ ಅಳವಡಿಸಿಕೊಳ್ಳಲಾಗಿದೆ.

ಯಕ್ಷಗಾನದ ಮೂಡಲಪಾಯ ಮತ್ತು ಪಡುವಲಪಾಯದ ಯಕ್ಷಗಾನ ಪ್ರಭೇದಗಳು ವಿಭಿನ್ನವಾದ ಹಿನ್ನೆಲೆಯಿಂದ ಆಯಾ ಪ್ರದೇಶದ ಸಾಂಸ್ಕೃತಿಕ ಪರಿವೇಷ ತೊಟ್ಟು ಹುಟ್ಟಿಕೊಂಡವುಗಳು. ಈ ಹಿನ್ನೆಲೆಯಲ್ಲಿ ನೋಡಿದಾಗ ಯಕ್ಷಗಾನದ ತೆಂಕು ಮತ್ತು ಬಡಗು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆ ಪಡೆದಂಥವುಗಳು.

ಯಕ್ಷಗಾನದ ಅನೇಕ ಪ್ರಭೇದಗಳಿಗೆ ಸಾದೃಶ್ಯ ಕಲ್ಪಿಸುವ ಅವಾಸ್ತವ ಜಗತ್ತಿನ ಅತಿಮಾನುಷ ಪಾತ್ರಗಳ ಪೌರಾಣಿಕ ಕಥಾನಕಗಳನ್ನು ಅಭಿವ್ಯಕ್ತಿಸುವ ಪಾರಂಪರಿಕ ರಂಗಭೂಮಿ ಎಂಬುದು ಮಾತ್ರ ಮೇಲ್ನೋಟಕ್ಕೆ ಗೋಚರಿಸುತ್ತದೆ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇಂತಹ ಅನೇಕ ಕಲಾ ಪರಂಪರೆಗಳಿವೆ. ಅವು ಒಂದು ಇನ್ನೊಂದರ ವಿಸ್ತರಣೆಯೆಂದು ನೋಡದೆ ವಿಭಿನ್ನ ಕಾಲ, ಸಂದರ್ಭಗಳಲ್ಲಿ ಸ್ವತಂತ್ರವಾಗಿ ಹುಟ್ಟಿಕೊಂಡ ಕಲೆಗಳು ಎಂದು ಪರಿಭಾವಿಸುವದೇ ಸೂಕ್ತ. ಮನುಷ್ಯನ ವಲಸೆ ಹಾಗೂ ಇನ್ನಿತರ ಕಾರಣಗಳಿಂದ ಒಂದರೊಳಗೊಂದು ಅಥವಾ ಪರಸ್ಪರ ಕೊಡುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. ಹಾಗಾಗಿ ತೆಂಕುತಿಟ್ಟು ಎಂಬುದು ಒಂದು ನಿರ್ದಿಷ್ಟ ಯಕ್ಷಗಾನ ಕಲಾಪ್ರಕಾರ.

ತಿಟ್ಟು ಎಂದರೆ ಶೈಲಿ ಅಥವಾ ಶಿಸ್ತು ಎಂಬರ್ಥದಲ್ಲಿ ಸ್ವೀಕರಿಸುವುದು ಸೂಕ್ತವಾಗ ಬಹುದು. ಈಗಾಗಲೇ ಇದೇ ಅರ್ಥದಲ್ಲಿ ಅನೇಕ ಅಧ್ಯಯನಗಳಲ್ಲಿ ಬಳಸಿಕೊಂಡಿದ್ದು ಕೇರಳದ ಕಥಕಳಿ ಸಂದರ್ಭದಲ್ಲೂ ತೆಕ್ಕನ್ ಚಿಟ್ಟ, ವಡಕ್ಕನ್ ಚಿಟ್ಟ ಎಂಬ ಪ್ರಭೇದಗಳಿವೆ. ಚಿಟ್ಟ ಎಂದರೆ ಶಿಸ್ತು ಎಂದೇ ಅರ್ಥ. ಆದರೆ ಕಥಕಳಿಯ ಈ ಶೈಲಿ ಪ್ರಭೇದವು ಬಹಳ ಸೂಕ್ಷ್ಮವಾದದ್ದು. ಸಾಮಾನ್ಯ ಪ್ರೇಕ್ಷಕರಿಗೆ ಅದು ಗಣನೆಗೆ ಬರಲಾರದು. ಕಥಕಳಿಯ ಹಿನ್ನೆಲೆಯಿಂದ ಬಂದ ಸೂಕ್ಷ್ಮಗ್ರಾಹಿಗಳಾದ ಪ್ರೇಕ್ಷಕರು ಮಾತ್ರ ಕಥಕಳಿಯ ತೆಂಕು ಬಡಗು ಸೂಕ್ಷ್ಮಗಳನ್ನು ಗುರುತಿಸಬಲ್ಲರು. ಆದರೆ ಯಕ್ಷಗಾನದ ತೆಂಕು, ಬಡಗು ಎಂಬ ಶೈಲಿಗಳು ಸ್ಪಷ್ಟವಾಗಿ ಮೇಲ್ನೋಟಕ್ಕೆ ಪ್ರತ್ಯೇಕತೆಯನ್ನು ತೋರಿಸುತ್ತವೆ. ಇದೊಂದೇ ಕಾರಣದಿಂದ ತೆಂಕು ಸ್ವತಂತ್ರ ಯಕ್ಷಗಾನದ ಶೈಲಿ ಎಂದು ಸ್ಪಷ್ಟ ಮಾಡಿಕೊಳ್ಳಬಹುದು. ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ತೆಂಕುತಿಟ್ಟು ಯಕ್ಷಗಾನದ ಹುಟ್ಟಿನ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಸೂಕ್ತ.

ತೆಂಕುತಿಟ್ಟು ಸಾಂಸ್ಕೃತಿಕ ಹಿನ್ನೆಲೆ

ತೆಂಕುತಿಟ್ಟು ಯಕ್ಷಗಾನದ ಉಗಮ ಸ್ಥಾನವಾದ ಕಾಸರಗೋಡು ಮಲಯಾಳಿಗರ ಮತ್ತು ಕನ್ನಡಿಗರ ಸಾಂಸ್ಕೃತಿಕ ಮಿಲನದ ನೆಲ. ಇಲ್ಲಿನ ದೇವಾಲಯಗಳಲ್ಲಿ ಪಾಟಾಳಿಗಳು ಎಂಬ ಉಪನಾಮದಿಂದ ಗುರುತಿಸುವ ಜನರಿದ್ದರು. ಮಲಯಾಳಂನಲ್ಲಿ ಪಾಟಾಳಿ ಎಂದರೆ ಹಾಡು ಹೇಳುವ ಆಳು. (ತೊಳಿಲ್ ಮಾಡುವವ ತೊಳಿಲಾಳಿ, ಮೊದಲ್ (ಬಂಡವಾಳ) ಹಾಕುವವ ಮೊದಲಾಳಿ ಎಂಬಂತೆ) ಈ ಜನ  ದೇವಸ್ಥಾನಗಳಲ್ಲಿ ಸೇವೆ ಮಾಡಿ ದಿನಕಳೆಯುವವರು. ಇನ್ನೊಂದು ಜನವರ್ಗವನ್ನು ‘ಪದಾರ್ಥಿ’ ಎಂದು ಗುರುತಿಸಲಾಗುತ್ತದೆ. ಪದಕ್ಕೆ ಅರ್ಥ ಹೇಳುವುದರಿಂದ ಈ ಜನವರ್ಗವನ್ನು ಪದಾರ್ಥಿ ಎಂದು ಕರೆದಿರಬಹುದು. ಈ ಪದಾರ್ಥಿ ಜನರೂ ಸಹ ದೇವಸ್ಥಾನಗಳಲ್ಲಿ ಸೇವೆ ಮಾಡುವವರೇ ಆಗಿದ್ದಾರೆ. ಇಂದಿಗೂ ಪಾಟಾಳಿ, ಪದಾರ್ಥಿ ಎನ್ನುವ ಈ ಎರಡೂ ಜನಸಮುದಾಯಗಳವರೂ ದೇವಾಲಯಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಅಲ್ಲದೆ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ಸಲ್ಲಿಸಿದವರು, ಸಲ್ಲಿಸುತ್ತಿರುವವರಲ್ಲಿ ಈ ಜನರದೇ ಮೇಲುಗೈ. ಯಕ್ಷಗಾನದ ಪರಿಷ್ಕರ್ತೃವಾದ ಪಾರ್ತಿಸುಬ್ಬನೂ ಸಹ ಪಾಟಾಳಿ ಸಮುದಾಯದವನು ಎಂಬುದು ಅಧ್ಯಯನಗಳಿಂದ ದೃಢವಾಗಿದೆ.

ಪಾಟಾಳಿ ಜನರು (ಹಾಡಾಳಿ) ಯಕ್ಷಗಾನದ ಹಾಡುಗಾರರಾಗಿದ್ದರು ಎಂದು ಸುಲಭವಾಗಿ ಹೇಳುವಂತಿಲ್ಲ. ಆದರೆ ಈ ಸಮುದಾಯದವರು ಯಾವುದೋ ಸಂದರ್ಭದಲ್ಲಿ ಹಾಡುಗಾರರಾಗಿದ್ದಿರಬೇಕು. ಇದೇ ಜನರನ್ನು ದಕ್ಷಿಣ ಕನ್ನಡದ ಪ್ರದೇಶಗಳಲ್ಲಿ ಗಾಣಿಗರು ಎಂಬ ಉಪನಾಮದಿಂದ ಗುರುತಿಸಲಾಗುತ್ತದೆ. ಗಾಣಿಗ ಎಂಬುದು ಗಾಣದಿಂದ ಬಂದುದು ಎಂಬ ಅಭಿಪ್ರಾಯ ಸರಿಯಲ್ಲ. ಗಾಣದಿಂದ ಎಣ್ಣೆ ತೆಗೆಯುವ ಜನರಿಂದ ಗಾಣಿಗ ಎಂದಾಯಿತು ಎಂಬ ಅಭಿಪ್ರಾಯವಿದೆ. ಹಾಗಾದರೆ ಇದೇ ಗಾಣ ಸಂಬಂಧಿಯಾದ ಉಪನಾಮ ದಿಂದಲೇ ಎಲ್ಲಾ ಪ್ರದೇಶಗಳಲ್ಲಿ ಇವರನ್ನು ಗುರುತಿಸಬೇಕಾಗಿತ್ತು. ಗಾಣಿಗ ಎಂಬುದು ಗಾನಿಗದಿಂದ ಬಂದಿರಬಹುದು. ಕಾಸರಗೋಡಿನ ದಕ್ಷಿಣ ಭಾಗಕ್ಕೆ ಹೋದಂತೆ ಮಲಯಾಳಂ ನಲ್ಲಿ ‘ವಾಣಿಯರ್’ ಎಂದೇ ಇವರನ್ನು ಗುರುತಿಸಲಾಗುತ್ತದೆ. ಗಾನ, ಪಾಟು (ಹಾಡು) ವಾಣಿ ಹೀಗೆ ಮೌಖಿಕ ಪರಂಪರೆಯೊಂದರ ಸಾದೃಶ ಪದಗಳಿಂದ ಇವರನ್ನು ಗುರುತಿಸುವುದಕ್ಕೆ ನಿರ್ದಿಷ್ಟವಾದ ಕಾರಣಗಳಿರಲೇಬೇಕು.

ಇನ್ನು ಪದಾರ್ಥಿ ಜನರನ್ನು ಕಾಸರಗೋಡಿನ ದಕ್ಷಿಣ, ಭಾಗದಲ್ಲಿ ಕೇರಳದೆಲ್ಲೆಡೆ ‘ಮಾರಾರ್’ ಅಥವಾ ‘ಅಂಬಲಕಾರನ್’ ಎಂಬ ಉಪನಾಮದಿಂದ ಗುರುತಿಸಲಾಗುತ್ತದೆ. ಹಾಗಾದರೆ ಯಕ್ಷಗಾನ ಪ್ರಚಲಿತವಿರುವ ಪ್ರದೇಶಗಳಲ್ಲಿ ‘ಪದಾರ್ಥಿ’ ಎಂದು ಕರೆಯುವುದಕ್ಕೂ ಖಚಿತವಾದ ಕಾರಣಗಳಿರಬೇಕು. ಯಕ್ಷಗಾನ ಕ್ಷೇತ್ರಕ್ಕೆ ಇವರ ಸೇವೆ ಅಪಾರ. ದೇವಸ್ಥಾನ ಗಳಲ್ಲಿ ಅವರ ವೃತ್ತಿ ಚೆಂಡೆ ಬಾರಿಸುವುದು. ಪದಾರ್ಥಿ ಜನಾಂಗದ ಹಿರಿಯರನ್ನು ಪದಾರ್ಥಿ ವಿಷ್ಣಯ್ಯ, ಪದಾರ್ಥಿ ಸುಬ್ರಾಯ ಎಂಬಿತ್ಯಾದಿ ಹೆಸರುಗಳಿಂದಲೇ ಕರೆಯಲಾಗುತ್ತದೆ. ಸಾಮಾನ್ಯವಾಗಿ ಉಪನಾಮಗಳು ಹೆಸರಿನ ಅಂತ್ಯದಲ್ಲಿ ಸೇರಿಕೊಳ್ಳುವುದು ರೂಢಿ. ಆದರೆ ಈ ಜನಾಂಗದವರನ್ನು ಗುರುತಿಸುವಾಗ ಹೆಸರಿನ ಪೂರ್ವದಲ್ಲಿ ಉಪನಾಮ ಸೇರಿಸಿಕೊಳ್ಳ ಲಾಗುತ್ತದೆ. ಈಗಾಗಲೇ ಪಾರ್ತಿಸುಬ್ಬನ ವಿಚಾರದಲ್ಲಿ ಎಲ್ಲ ವಿದ್ವಾಂಸರೂ ಒಪ್ಪಿಕೊಂಡಂತೆ ಪಾರ್ವತಿಯ ಮಗ ಸುಬ್ಬನೇ ಆಗಿರಬಹುದು. ಆದರೆ ತಾಯಿಯ ಹೆಸರಿನಿಂದ ಮಗನನ್ನು ಗುರುತಿಸಿಕೊಳ್ಳುವ ಸಂಪ್ರದಾಯ ಈ ಪ್ರದೇಶದಲ್ಲಿ ಚಾಲ್ತಿಯಲ್ಲಿತ್ತು ಎನ್ನುವುದಕ್ಕೆ ಖಚಿತವಾದ ನಿದರ್ಶನಗಳೂ ದೊರೆಯುವುದಿಲ್ಲ. ಪದಾರ್ಥಿ ಸುಬ್ಬನೇ- ಪದಾರ್ತಿ ಸುಬ್ಬ- ಪಾರ್ತಿ ಸುಬ್ಬ ಏಕಾಗಿರಬಾರದು ಎಂಬ ಸಂದೇಹಕ್ಕೆ ಆಸ್ಪದವಿದೆ.

ಕಾಸರಗೋಡು ಪ್ರದೇಶದ ತೆಯ್ಯಂನ ವೇಷಭೂಷಣಗಳು, ದೈವಗಳ ಬಣ್ಣಗಾರಿಕೆಗಳು ಯಕ್ಷಗಾನದ ಆಹಾರ್ಯಗಳೊಡನೆ ಪರಸ್ಪರ ಕೊಡುಕೊಳುಗೆಗಳು ನಡೆದಿವೆ. ತೆಯ್ಯಂ ಮತ್ತು ದೈವದಕೋಲದ ಸಂದರ್ಭದ ತೊತ್ತಂಗಳು, ನುಡಿಗಳು ಪ್ರಮುಖ ಧಾರ್ಮಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ರೂಪುಗೊಳ್ಳುವವುಗಳಾಗಿವೆ. ಈ ಸಂದರ್ಭಕ್ಕೆ ಮಾತುಗಳು ಭಕ್ತಭಿಮಾನಿಗಳ ನಂಬಿಕೆಗಳನ್ನು ಮನಸ್ಸನ್ನು ಬಹುತೇಕ ನಿಯಂತ್ರಿಸುತ್ತವೆ. ಈ ಮಾತುಗಳೂ ಸಹ ಯಕ್ಷಗಾನದ ಸಂದರ್ಭದಲ್ಲಿ ದೈವಿಕ ಪಾತ್ರಗಳ ಅನುಗ್ರಹ ರೂಪದ ಮಾತುಗಳಲ್ಲಿ ಜಾಗ ಪಡೆದಿರಬಹುದು. ಕ್ರಮೇಣ ಅಕ್ಷರಸ್ಥರು ಅದರಲ್ಲೂ ಸಂಸ್ಕೃತ ಸಾಹಿತ್ಯದ ಹಿನ್ನೆಲೆ ಯುಳ್ಳ ಬ್ರಾಹ್ಮಣ ವರ್ಗದ ಕಲಾವಿದರು ಯಕ್ಷಗಾನವನ್ನು ಪ್ರವೇಶಿಸಿದ ಪರಿಣಾಮವಾಗಿ ಮಾತುಗಾರಿಕೆಗೆ ಹಿಂದಿಲ್ಲದ ಪ್ರಾಶಸ್ತ್ಯ ದೊರೆಯಿತು. ತೆಂಕುತಿಟ್ಟಿನ ಯಕ್ಷಗಾನದ ಸಂದರ್ಭಕ್ಕೆ ಇಂತಹ ವಿಶಿಷ್ಟವಾದ ಹಿನ್ನೆಲೆಯಿದೆ. ಇದೇ ನೆಲೆಯಿಂದ ಅವಲೋಕಿಸಿದರೆ ಇಲ್ಲಿನ ಕುಣಿತಗಳಿಗೆ ಮಾತುಗಾರಿಕೆಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಯಕ್ಷಗಾನಗಳನ್ನು ಸಮಗ್ರವಾಗಿ ಒಂದು ಪ್ರಭೇದವಾಗಿ ಪರಿಗಣಿಸಿದಾಗ ದೇಸೀಯವಾದ ಅನೇಕ ಸಾಂಸ್ಕೃತಿಕ ಸಂಗತಿಗಳು ಅಲಕ್ಷ್ಯಕ್ಕೊಳಗಾಗಿ ಕಲೆಯ ಕಲಾತ್ಮಕ ಅಂಶವೇ ಮುಖ್ಯವಾಗುತ್ತದೆ. ಕಲಾರೂಪದ ಬೆಳವಣಿಗೆ ಯನ್ನು ಸಾಂಸ್ಕೃತಿಕ ನೆಲೆಯಿಂದ ಶೋಧಿಸಿದರೆ ಅದರ ನಡೆಯ ಕಾರಣಗಳನ್ನು ಅರಿತುಕೊಳ್ಳ ಬಹುದು.

ಯಕ್ಷಗಾನದಲ್ಲಿ ಎರಡು ಪ್ರಮುಖ ವಿಭಾಗಗಳಿವೆ. ಒಂದು ಹಿಮ್ಮೇಳ. ಇನ್ನೊಂದು ಮುಮ್ಮೇಳ. ಹಿಮ್ಮೇಳ ಸಾಮಾನ್ಯವಾಗಿ ಸಮಾಜದ ಮೇಲು ವರ್ಗದವರಿಂದ ನಿಯಂತ್ರಣ ಕ್ಕೊಳಗಾಗಿದ್ದು ಆಗಾಗಲೇ ಪ್ರಚಲಿತ ವಾದ್ಯಪರಿಕರಗಳನ್ನು ಶಾಸ್ತ್ರೀಯವಾಗಿ ನುಡಿಸುವವರು. ಚೆಂಡೆ, ಮದ್ದಳೆ, ಜಾಗಟೆ ಬಾರಿಸುವವರೇ ಇಡೀ ಯಕ್ಷಗಾನ ಪ್ರಯೋಗಗಳ ನಿಯಂತ್ರಕರು. ಪಾತ್ರ ನಿರ್ವಹಿಸುವ ಕಲಾವಿದರೆಲ್ಲ ಮುಮ್ಮೇಳದವರು. ಇವರು ಸಾಮಾನ್ಯವಾಗಿ ಸಮಾಜದ ಮೇಲುವರ್ಗದ ಹೊರತಾದವರು. ಅದರಲ್ಲೂ ದೇವಸ್ಥಾನಗಳಲ್ಲಿ ಸೇವಾ ವೃತ್ತಿಯನ್ನು ಮಾಡುತ್ತಿದ್ದವರೇ ಆಗಿದ್ದರು. ಈ ಹಿನ್ನೆಲೆಯನ್ನು ಗಮನಿಸಿದರೆ ದೇವಸ್ಥಾನಗಳ ಪುರೋಹಿತ ಜನರು ಪುರಾಣದ ಕಾವ್ಯಗಳನ್ನು ವಾಚಿಸುವ ಉಳಿದ ಚಾಕರ ವೃತ್ತಿಗಳಲ್ಲಿರುವವರಿಂದ ಅರ್ಥವನ್ನು ಹೇಳಿಸುವ ತರಬೇತಿ ರೂಪದಲ್ಲಿ ಯಕ್ಷಗಾನ ರೂಪುಗೊಂಡಿರಬಹುದು. ಪುರೋಹಿತ ಜನರ ಅಧ್ಯಾಪನ ಪ್ರವೃತ್ತಿಯೇ ಈ ಕಲಾರೂಪದ ಆರಂಭದಲ್ಲಿ ಕೆಲಸ ಮಾಡಿರಬಹುದು. ಪೌರಾಣಿಕ ಕಾವ್ಯಗಳು ಕನ್ನಡದಲ್ಲಿ ಇದ್ದುದರಿಂದ ಮಲಯಾಳಂ, ತುಳು ಮನೆ ಮಾತಿನ ಜನರು ಕನ್ನಡದಲ್ಲಿಯೇ ಅರ್ಥ ವಿವರಿಸುವ ಪ್ರಯತ್ನ ಮಾಡಿದರು. ಬಿಡುವಿನ ವೇಳೆಯಲ್ಲಿ ಪುರಾಣ ವಾಚನ ಮಾಡುವ, ಅದನ್ನು ಕೇಳುವವರೆಲ್ಲರನ್ನೂ ಅದರಲ್ಲಿ ಒಳಗೊಳ್ಳುವಂತೆ ಮಾಡುವ ಸಲುವಾಗಿ ಒಬ್ಬೊಬ್ಬನೂ ಒಂದೊಂದು ಪಾತ್ರದ ಸಂಭಾಷಣೆ ಯನ್ನು ಮಾತನಾಡಲು ತೊಡಗಿರಬಹುದು. ಹೀಗೆ ಪದ, ಅರ್ಥ ವಿವರಣೆಯ ರೂಪವನ್ನು ಪಡೆದು ಬೇರೆ ಬೇರೆ ಪಾತ್ರಗಳ ಅರ್ಥಗಳನ್ನು ಬೇರೆ ಬೇರೆಯವರು ಮಾತನಾಡಲು ತೊಡಗಿ ತಾಳಮದ್ದಳೆಯಂತಹ ಕಲಾರೂಪ ಸಿದ್ದಿಸಿರಬೇಕು. ಬಳಿಕ ಪ್ರಾದೇಶಿಕವಾಗಿ ಚಾಲ್ತಿಯಲ್ಲಿದ್ದ ಕಲಾರೂಪವೊಂದರ ಬಳುವಳಿ ಪಡೆದು ವೇಷತೊಟ್ಟು ಆಟದ ರೂಪಕ್ಕೆ ಪರಿವರ್ತನೆ ಗೊಂಡಿರಬೇಕು. ಬಯಲುಗಳಲ್ಲಿ ಆಡುತ್ತಿದ್ದುದರಿಂದ ಬಯಲಾಟ ಎಂತಲೂ ಹೆಸರಾಗಿದೆ. (ದೈವದ ಕೋಲಗಳು ನಡೆಯಲು ನಿರ್ದಿಷ್ಟ ಸ್ನಾನ, ಜಾಗಗಳಿವೆ. ಬತ್ತದ ಕೊಯಿಲು ಮುಗಿದ ಬಳಿಕ ಬಯಲಲ್ಲಿ ನಡೆಯುವ ಕೋಲಗಳನ್ನು ‘ಬಯಲು ಕೋಲ’ ಎಂದೇ ಕರೆಯಲಾಗಿದೆ.)

ಪುರಾಣ ಪ್ರಸಂಗಗಳನ್ನು ಹಾಡಿ ಅರ್ಥ ವಿವರಿಸುತ್ತಿದ್ದ ಜನ ವೇಷತೊಟ್ಟು ಕುಣಿಯ ತೊಡಗಿದಾಗ ಹೆಚ್ಚು ಜನ ಆಕರ್ಷಿತರಾಗಿರಬಹುದು. ಬೌದ್ದಿಕವಾಗಿ, ಅಧ್ಯಾಪನ ಪ್ರವೃತ್ತಿಯಿಂದ ಆರಂಭವಾದ ಕಲಾರೂಪ ಆಟವಾಗಿ ರೂಪು ಪಡೆದಾಗ ದೈಹಿಕ ಶ್ರಮವೇ ಹೆಚ್ಚುಗಾರಿಕೆಯಾಗಿ ಗೋಚರಿಸಿರಬೇಕು. ಬೌದ್ದಿಕ ಶ್ರಮದ ವೇಳೆ ಮುಂಚೂಣಿಯಲ್ಲಿದ್ದ ಪುರೋಹಿತ ವರ್ಗದವರು ಹಿಮ್ಮೇಳವನ್ನು ನಿಯಂತ್ರಿಸುತ್ತಿದ್ದರು. ಮುಮ್ಮೇಳಗಳು ಬಹುತೇಕ ಬ್ರಾಹ್ಮಣೇತರ ಜನರ ನಿರ್ವಹಣೆಯ ಭಾಗವೇ ಆಯಿತು. ದೇವಸ್ಥಾನದಲ್ಲಿ ಸೇವಾ ಕೈಂಕರ್ಯದಲ್ಲಿ ನಿರತರಾದ ಜನವರ್ಗ ಬ್ರಾಹ್ಮಣರಿಂದ ಕೆಳವರ್ಗದಲ್ಲಿ ಗುರುತಿಸಿಕೊಳ್ಳುವವ ರಾದರೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿಯೇ ಇದ್ದವರಾಗಿದ್ದರು. ದೇವಾಲಯವಾಸಿಗಳೇ ಇದರಲ್ಲಿ ತೊಡಗಿಸಿಕೊಂಡದ್ದರಿಂದ ಸಮಾಜದ ಇತರೇ ಜನ ವರ್ಗದವರಿಂದಲೂ ಈ ಕಲಾರೂಪ ದೂರವೇ ಉಳಿಯಿತು. ನಿರ್ದಿಷ್ಟ ಜನವರ್ಗವೇ ಈ ಕಲೆಯನ್ನು ಉಳಿಸಿಕೊಂಡು ಬಂದಿತು.

ಬೌದ್ಧರ ಯಕ್ಷಾರಾಧನೆಯಿಂದಲೇ ಯಕ್ಷಗಾನವು ಹುಟ್ಟಿಕೊಂಡಿದೆ ಎಂಬ ಸಂಶೋಧನೆ ಗಳೂ ನಡೆದಿವೆ (ರಾಜಗೋಪಾಲ ಕ.ವೆಂ. : ೧೯೯೭). ಆದರೆ ಬೌದ್ಧರ ಯಕ್ಷಾರಾಧನೆ ಯಿಂದಲೇ ಯಕ್ಷಗಾನ ಹುಟ್ಟಿತೆಂದು ತಿಳಿಯುವುದು ಸಾಧ್ಯವಿಲ್ಲ. ಯಕ್ಷಗಾನದ ಹುಟ್ಟಿನ ಹಿನ್ನೆಲೆಯಲ್ಲಿ ಯಕ್ಷಾರಾಧನೆಯ ಪ್ರಭಾವವನ್ನು ತಳ್ಳಿಹಾಕುವಂತಿಲ್ಲ. ಕೇರಳದಲ್ಲಿ ಪ್ರಾಚೀನ ಕಾಲದಲ್ಲಿ ಅನೇಕ ಚೈತ್ಯಾಲಯಗಳಿದ್ದುವು. ಬೌದ್ಧಮತವು ಗಾಂಧಾರದಿಂದ ಕೇರಳದವರೆಗೂ ವಿಸ್ತರಿಸಿತ್ತು ಎಂಬುದಕ್ಕೆ ಅಶೋಕನ ಶಾಸನಗಳಲ್ಲಿ ಉಲ್ಲೇಖಗಳಿವೆ. ಕೇರಳದಲ್ಲಿ ಬ್ರಾಹ್ಮಣರ ವಲಸೆಯ ಪರಿಣಾಮವಾಗಿ ಆದ ಸಾಂಸ್ಕೃತಿಕ ಬದಲಾವಣೆಗಳಿಂದಾಗಿ ಬೌದ್ಧರ ಆರಾಧನಾ ಕೇಂದ್ರಗಳಾದ ಚೈತ್ಯಾಲಯಗಳು ಶಿವಾಲಯಗಳಾಗಿ ಬದಲಾದುವು (ಮೋಹನ ಕುಂಟಾರ್, ೨೦೦೦:೧೦). ಸಂಸ್ಕೃತ ಸಾಹಿತ್ಯ, ರಂಗಭೂಮಿಯ ಪ್ರಭಾವದಿಂದಾಗಿ ಸ್ಥಳೀಯ ಕಲೆಗಳಿಗೆ ಹೊಸ ರೂಪಗಳು ಲಭ್ಯವಾದವು. ಆಶಯಗಳನ್ನು ಸಂವಹನಗೊಳಿಸಲು ಕಲಾರೂಪಗಳನ್ನು ಬೌದ್ಧರು ಬಳಸುತ್ತಿದ್ದರು. ಬೌದ್ಧ ಧರ್ಮದ ಆಶಯಗಳನ್ನು ಪ್ರಕಟಿಸುತ್ತಿದ್ದ ಕಲಾರೂಪಗಳು ವೈದಿಕ ಸಂಸ್ಕೃತಿಯ ಆಶಯಗಳನ್ನು ಪ್ರಚಾರಗೊಳಿಸತೊಡಗಿದುವು. ವರ್ಣ ಸಂಕರಕ್ಕೊಳಗಾದ ಬ್ರಾಹ್ಮಣ ಜನವರ್ಗದವರು ದೇವಾಲಯಗಳಲ್ಲಿ ಇಂತಹ ಕಲೆಗಳನ್ನು ಉಳಿಸಿಕೊಂಡು ಬಂದರು. ಆರಾಧನಾ ನೆಲೆಯಿಂದ ಗಮನಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳದ ಕರಾವಳಿಯು ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಕರಾವಳಿಯ ತೀರದುದ್ದಕ್ಕೂ ದೇವಾಲಯಗಳು ವಿಭಿನ್ನ ಕಲಾ ರೂಪಗಳನ್ನು ಧಾರ್ಮಿಕ ಉದ್ದೇಶಕ್ಕಾಗಿ ಉಳಿಸಿಕೊಂಡು ಬಂದುದನ್ನು ಕಾಣಬಹುದು. ಪ್ರಾದೇಶಿಕವಾಗಿ ಅನನ್ಯವಾದ ಇಂತಹ ಕಲಾರೂಪಗಳು ಸ್ವತಂತ್ರವಾಗಿಯೇ ಕಾಲಾಂತರದಲ್ಲಿ ಬೆಳೆದುಕೊಂಡು ಬಂದುವು.