ಧಾರ್ಮಿಕ ಸಮನ್ವಯ                        

ಸಾಂಸ್ಕೃತಿಕವಾದ ಕೆಲವು ಮಹತ್ವದ ಸಂಗತಿಗಳನ್ನು ಇಲ್ಲಿ ವಿಸ್ತರಿಸಬಹುದೆನಿಸುತ್ತದೆ. ಮಧ್ವಾಚಾರ್ಯರು ತುಳುನಾಡಿನ ಕುಂಬಳೆ ಸೀಮೆಯ ಪ್ರದೇಶಗಳಿಗೆ ಬರುವುದಕ್ಕೆ ಮೊದಲು ಅಲ್ಲಿ ಶೈವ ಸಂಪ್ರದಾಯವು ಪ್ರಚಲಿತದಲ್ಲಿತ್ತು. ಹದಿಮೂರನೆಯ ಶತಮಾನದ ಆರಂಭದಲ್ಲಿ ಮಧ್ವಾಚಾರ್ಯರ ಆಗಮನದ ಸಂದರ್ಭದಲ್ಲಿ ದೊಡ್ಡ ಧಾರ್ಮಿಕ ಸಂಘರ್ಷವೆ ನಡೆಯಿತು. ಅದ್ವೈತ ಮತ್ತು ದ್ವೈತ ಮತಗಳ ನಡುವೆ ವಿಚಾರ ಭೇದಗಳು ಉಂಟಾದವು. ಪರಿಣಾಮವಾಗಿ ಪರಸ್ಪರ ದ್ವೇಷ ಭಾವನೆಯೂ ಬೆಳೆಯಿತು. ಅದ್ವೈತ ಮತಾನುಯಾಯಿಗಳು ಶಿವನನ್ನೇ ಪ್ರಧಾನ ದೇವತೆಯಾಗಿ ಪೂಜಿಸುತ್ತಿದ್ದರು. ದ್ವೈತ ಮತಾನುಯಾಯಿಗಳು ವಿಷ್ಣುವನ್ನು ಪ್ರಧಾನ ದೇವತೆಯಾಗಿ ಪರಿಗಣಿಸಿದ್ದರು.

ಕುಂಬಳೆ ಸೀಮೆಯ ಉತ್ತರಕ್ಕೆ ತರುವಾಯದ ದಿನಗಳಲ್ಲಿ ದ್ವೈತ ಮತವು ಹೆಚ್ಚು ಪ್ರಾಬಲ್ಯವನ್ನು ಪಡೆಯಿತು. ದಕ್ಷಿಣಕ್ಕೆ ಅದ್ವೈತ ಮತವು ಪ್ರಾಬಲ್ಯವನ್ನು ಪಡೆದಿತ್ತು. ಕುಂಬಳೆ ಸೀಮೆಯೂ ನಡುವೆ ಇದ್ದುದರಿಂದ ಇದು ಎರಡೂ ಮತ ಸಂಪ್ರದಾಯಗಳ ಕಲಹಕ್ಕೆ ರಣರಂಗವಾಗಿ ಪರಿಣಮಿಸಿತು (ಉದಯವರ್ಮರಾಜ, ೧೯೯೮). ಎರಡೂ ಸಂಪ್ರದಾಯಗಳು ಪರಸ್ಪರ ಒಂದನ್ನೊಂದು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದುವು. ವಾದ ವಿವಾದಗಳು ಏರ್ಪಟ್ಟು ಪರಸ್ಪರ ಸಂಘರ್ಷದ ಹಾದಿ ತುಳಿದುವು. ಈ ಸಂಘರ್ಷವನ್ನು ಕೊನೆಗಾಣಿಸುವುದು, ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸುವುದು ಅನಿವಾರ್ಯವಾಯಿತು. ಇದಕ್ಕೆ ಕುಂಬಳೆ ಸೀಮೆಯ ಅರಸರಲ್ಲಿ ಪ್ರಸಿದ್ಧವಾದ ಇಮ್ಮಡಿ ಜಯಸಿಂಹನು ಮುತುವರ್ಜಿ ವಹಿಸಿದ.

ಜಯಸಿಂಹನು ಕುಂಬಳೆ ಸೀಮೆಯ ಕೂಡಲು ಎಂಬ ಪ್ರದೇಶದಲ್ಲಿ ಇಮ್ಮಡಿ ಜಯಸಿಂಹನ ನೇತೃತ್ವದಲ್ಲಿ  ವಿದ್ವಾಂಸರು ಒಂದುಗೂಡಿ ಧಾರ್ಮಿಕ, ತಾತ್ವಿಕ ಚರ್ಚೆಗಳನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದನು. ಈ ಚರ್ಚೆ ಒಂದು ರೀತಿಯ ಧಾರ್ಮಿಕ ಸಮನ್ವಯದ ಒಂದು ವೇದಿಕೆಯಾಗಿದ್ದಿರಬೇಕು. ಅದನ್ನು ಸಾಧಿಸುವಲ್ಲಿ ಯಶಸ್ವಿಯಾದುದರ ಸಂಕೇತವಾಗಿ ವಿಜಯಸ್ತಂಭವೊಂದನ್ನು ಈ ಪ್ರದೇಶದಲ್ಲಿ ಸ್ಥಾಪಿಸಿದ ಬಗೆಗೆ ಉಲ್ಲೇಖಗಳು ದೊರೆಯುತ್ತವೆ. ಈ ಕೂಡಲು ಕೇವಲ ಧಾರ್ಮಿಕ ಚರ್ಚೆಗಳಿಗಾಗಿ ಕೂಡಿದ ಸ್ಥಳವಾಗಿರಲಿಲ್ಲ. ಅದು ಮಾಧ್ವ ಮತ್ತು ಶೈವ ಸಂಪ್ರದಾಯಗಳನ್ನು ಒಂದುಗೂಡಿಸಿದ ನೆಲ. ಶೈವ ಮಾಧ್ವರ ನಡುವಿನ ವೈರವನ್ನು ಬಿಟ್ಟು ಶಿವ ಹಾಗೂ ವಿಷ್ಣುವಿನ ಆರಾಧನೆಯನ್ನು ಒಟ್ಟಿಗೆ ನಡೆಸಿಕೊಂಡು ಬರುವ ಭಾಗವತ ಸಂಪ್ರದಾಯಕ್ಕೆ ನಾಂದಿ ಹಾಡಿದ ಊರು. ಭಾಗವತ ಸಂಪ್ರದಾಯವು ವೈಷ್ಣವ, ಮಾಧ್ವ, ಶೈವರನ್ನು ಪರಸ್ಪರ ಸಮಾನ ದೃಷ್ಟಿಯಿಂದ ನೋಡುತ್ತದೆ. ಈ ಪ್ರದೇಶದಲ್ಲಿನ ಭಾಗವತ ಸಂಪ್ರದಾಯ ಬ್ರಾಹ್ಮಣರು ವಿಷ್ಣುವಿನ ಆರಾಧನೆ ಮಾಡುವವ ರಾದರೂ ಶಿವನ ಆರಾಧನೆಯನ್ನು ವಿರೋಧಿಸುವವರಲ್ಲ. ಹಾಗಾಗಿ ಭಾಗವತ ಸಂಪ್ರದಾಯವೂ ಸಂಪೂರ್ಣ ಶೈವ ಸಂಪ್ರದಾಯವೂ ಅಲ್ಲ. ಸಂಪೂರ್ಣ ವೈಷ್ಣವ ಸಂಪ್ರದಾಯವೂ ಅಲ್ಲ. ಅದು ಇವೆರಡರ ಮಿಲನದಿಂದುಂಟಾದ ಹೊಸ ಸಂಪ್ರದಾಯವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದ ಸಂಪ್ರದಾಯವು ಶೈವ ವೈಷ್ಣವ ಸಂಪ್ರದಾಯಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತಾ ಬಂದಿದೆ ಎಂಬುದನ್ನು ಇಲ್ಲಿ ನೆನೆಯಬಹುದು.

ಬ್ರಾಹ್ಮಣರು ತುಳುನಾಡಿಗೆ ಮುಖ್ಯವಾಗಿ ಎರಡು ಹಂತಗಳಲ್ಲಿ ವಲಸೆ ಬಂದು ನೆಲೆಸಿದವರು ಎಂಬುದನ್ನು ಗುರುರಾಜ ಭಟ್ಟರು ತಮ್ಮ ‘ತುಳುನಾಡು’ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹೀಗೆ ಮೊದಲು ವಲಸೆ ಬಂದ ಬ್ರಾಹ್ಮಣರು ಶಿವ ಸಂಪ್ರದಾಯದವ ರಾಗಿದ್ದರು. ಸ್ಥಳೀಯ ದೇವಾಲಯಗಳ ಧಾರ್ಮಿಕ ಆಚರಣೆಗಳೆಲ್ಲ ಇವರ ನೇತೃತ್ವದಲ್ಲಿಯೇ ನಡೆಯುತ್ತಿತ್ತು. ನಂತರ ವಲಸೆ ಬಂದ ಜನವರ್ಗದವರು ಮಧ್ವಾಚಾರ್ಯರ ಪ್ರಭಾವದಿಂದ ಪ್ರಬಲರಾದರು. ಸ್ಥಾನೀಯ ಬ್ರಾಹ್ಮಣರ ಅಧೀನದಲ್ಲಿದ್ದ ದೇವಾಲಯಗಳನ್ನು ಮಾಧ್ವರು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ಸ್ಥಾನೀಯ ಬ್ರಾಹ್ಮಣರಿಗೆ ಪೌರೋಹಿತ್ಯದ ಹೊರತಾಗಿ ಉಳಿದ ಚಾಕರ ವೃತ್ತಿಗಳನ್ನು ನಿರ್ವಹಿಸುವ ಕೆಲಸವನ್ನು ವಹಿಸಿದರು. ಹಾಗಾಗಿ ಹೂ ಕಟ್ಟುವ, ದೀಪಕ್ಕೆ ಎಣ್ಣೆ ತರುವ, ವಾದ್ಯಗಳನ್ನು ಬಾಜಿಸುವ ಇತ್ಯಾದಿ ಕೆಲಸಗಳೆಲ್ಲವನ್ನು ಸ್ಥಾನೀಯರೇ ಮಾಡುವಂತಾಯಿತು. ಸ್ಥಾನೀಯ ಜನರು ತಾವು ಮಾಡುವ ವೃತ್ತಿಯೇ ಕಾರಣ ವಾಗಿ ಒಂದೊಂದು ಜಾತಿಯ ಗುಂಪುಗಳಾಗಿ ಪ್ರತ್ಯೇಕವಾಗಿರುವ ಸಾಧ್ಯತೆಯೂ ಇದೆ. ಬ್ರಾಹ್ಮಣರಿಗೆ ಪೌರೋಹಿತ್ಯವೂ ಕೈ ತಪ್ಪಿ ಹೋದಂತಾಯಿತು. ಪಾಟಾಳಿಗಳು, ಪದಾರ್ಥಿಗಳು, ಪೂಕೆಟ್ಟಿ(ಹೂಕಟ್ಟುವವರು)ಗಳು, ಅಂಬಲ(ದೇವಾಲಯದವರು)ಕಾರರು ಮೊದಲಾದ ಜನವರ್ಗದವರೆಲ್ಲ ದೇವಾಲಯಕ್ಕೆ ಸಂಬಂಧಿಸಿದಂತೆ ವಿವಿಧ ಸೇವಾ ಕೈಂಕರ್ಯದ ಹಕ್ಕುಗಳನ್ನು ಪಡೆದರು. ಇವರೆಲ್ಲರೂ ಬ್ರಾಹ್ಮಣ ವರ್ಗದವರೇ ಎಂದು ಭಾವಿಸಬೇಕಾಗಿಲ್ಲ. ಈ ಪರಿವರ್ತನೆಗೂ ಪೂರ್ವದಲ್ಲಿ ಶೈವ ಸಂಪ್ರದಾಯದ ಬ್ರಾಹ್ಮಣರು ಪೌರೋಹಿತ್ಯದ ಹಕ್ಕು ಪಡೆದಿದ್ದ ಸಂದರ್ಭದಲ್ಲಿಯೂ ಇತರ ಸೇವಾ ಕೈಂಕರ್ಯಗಳನ್ನು ನಿರ್ವಹಿಸುತ್ತಿದ್ದ ಜನವರ್ಗದವರೂ ಇದ್ದರು. ಶಿವಾರಾಧಕರಾದ ಸ್ಥಾನೀಯರಿಗೆ ವೈಷ್ಣವರ ಪೌರೋಹಿತ್ಯದ ಅಧೀನದಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯ ಸ್ಥಿತಿಯೊಂದು ಸಾಮಾಜಿಕವಾಗಿ ನಿರ್ಮಾಣವಾಯಿತು. ಸ್ಥಾನೀಯ ಬ್ರಾಹ್ಮಣರು ತಮ್ಮನ್ನು ಶಿವಬ್ರಾಹ್ಮಣರೆಂದು ಕರೆದು ಕೊಳ್ಳುತ್ತಾರೆ. ಅಲ್ಲದೆ ಅನೇಕ ದೇವಾಲಯಗಳು ಅವರ ಸ್ವಾಧೀನದಲ್ಲಿಯೇ ಇದ್ದುದರ ಬಗೆಗೆ ಇಂದಿಗೂ ಮೌಖಿಕ ಉಲ್ಲೇಖಗಳು ಐತಿಹ್ಯಗಳು ತುಳು ನಾಡಿನಲ್ಲಿವೆ. ಶೈವ ಸಂಪ್ರದಾಯದ ಬ್ರಾಹ್ಮಣರು ದೇವಾಲಯಗಳ ಪೂಜಾ ಕೈಂಕರ್ಯಗಳನ್ನು ಕಳೆದುಕೊಳ್ಳಲು ಮಾಧ್ವಮತದ ಪ್ರಭಾವವೇ ಕಾರಣವಾಗಿರಬೇಕು. ಅನೇಕರು ಪೌರೋಹಿತ್ಯದ ಕೆಲಸವನ್ನರಸಿ ದಕ್ಷಿಣ ಕೇರಳದತ್ತ ಪ್ರಯಾಣ ಬೆಳೆಸಿದ ಬಗೆಗೂ ಉಲ್ಲೇಖಗಳು ದೊರೆಯುತ್ತವೆ.

ಸಂಘರ್ಷಕ್ಕೆ ತೆರೆಯೆಳೆದ ತರುವಾಯದ ಶೈವ ಮತ್ತು ಮಾಧ್ವ ದಿನಗಳಲ್ಲಿ ಸಂಪ್ರದಾಯ ದವರು ಪರಸ್ಪರ ಹೊಂದಾಣಿಕೆಯ ಬಾಳುವೆ ನಡೆಸಿರಬೇಕು. ದೇವಾಲಯಗಳಲ್ಲಿ ಪೌರೋಹಿತ್ಯ ನಡೆಸುವ ಒಂದು ವೈಷ್ಣವ ಜನವರ್ಗ ಹಾಗೂ ಇತರ ಸೇವಾ ಕೈಂಕರ್ಯ ನಡೆಸುವ ಶಿವಾರಾಧಕ ಜನವರ್ಗ ಎಂಬ ಎರಡು ಪ್ರತ್ಯೇಕ ಜನಸಮುದಾಯಗಳು ದೇವಾಲಯಗಳ ಆಶ್ರಯದಲ್ಲಿ ಕೂಡಿ ಬಾಳಿರಬಹುದು. ಇವರು ಪರಸ್ಪರ ಸಂಘರ್ಷಕ್ಕೆ ಮನ ಮಾಡದೆ ಸೌಹಾರ್ದಯುತವಾಗಿ ನಡೆದುಕೊಂಡುದರಿಂದಲೇ ಇಂದೂ ಸಹ ಪಾರಂಪರಿಕವಾದ ಈ ಪದ್ಧತಿ ಮುಂದುವರಿದಿದೆ.

ಪರಿಣಾಮವಾಗಿ ರಾಮಾಯಣ, ಮಹಾಭಾರತ, ಭಾಗವತಾದಿಗಳ ವಾಚನ, ಪ್ರವಚನಗಳಿಗೆ ದೇವಾಲಯಗಳಲ್ಲಿ ಪುರೋಹಿತ ಜನವರ್ಗದವರು ಚಾಲನೆ ನೀಡಿದರು. ಈ ನೆಲೆಯಲ್ಲಿ ಬಿಡುವಿನ ವೇಳೆ ಪುರಾಣ ಪ್ರವಚನ ಮಾಡುವ ಅದನ್ನು ದೇವಾಲಯಗಳಲ್ಲಿ ಕೆಲಸ ನಿರ್ವಹಿಸುವ ಇತರೆಲ್ಲ ಜನವರ್ಗದವರು ಕೇಳುವ ಸಂಪ್ರದಾಯವೊಂದು ಚಾಲ್ತಿಗೆ ಬಂದಿರ ಬೇಕು. ಹರಿಪಾರಮ್ಯದ ಕತೆಗಳಿಗೆ ಮಾಧ್ವ ಸಂಪ್ರದಾಯದವರು ಗಮಕದ ಮೂಲಕ ಚಾಲನೆ ಕೊಟ್ಟಾಗ ಶೈವ ಸಂಪ್ರದಾಯದವರು ಅದಾಗಲೇ ಪ್ರಚಲಿತದಲ್ಲಿದ್ದ ಸ್ಥಳೀಯ ಕಲಾರೂಪಗಳ ನೆಲೆಯಿಂದ ಮುಮ್ಮೇಳವನ್ನು ಸೃಷ್ಟಿಸಿಕೊಂಡಿರಬೇಕು. ಪೌರಾಣಿಕ ಕಥಾನಕಗಳನ್ನು ಹೇಳುವ ಕಲಾಮಾಧ್ಯಮಗಳು ಬಹುಮಟ್ಟಿಗೆ ಭರತನ ನಾಟ್ಯಶಾಸ್ತ್ರದ ಪ್ರಭಾವಲಯದಲ್ಲಿ ಸ್ಥಳೀಯ ಕಲೆಗಳಿಗೆ ಹೊಸ ರೂಪ ಕೊಟ್ಟಂತೆ ಕಾಣಿಸುತ್ತದೆ. ಹಾಗಾಗಿ ಅತ್ತ ಸಂಪೂರ್ಣ ಜನಪದವೂ ಆಗದೆ ಇತ್ತ ಶಾಸ್ತ್ರೀಯವೂ ಆಗದೆ ಸಂಕ್ರಮಣ ಸ್ಥಿತಿಯಲ್ಲಿಯೇ ಯಕ್ಷಗಾನ ಉಳಿದಿದೆ. ಮಾಧ್ವ ಸಂಪ್ರದಾಯದ ಮೂಲದಿಂದಲೇ ಜನಿಸಿ ತೆಂಕುತಿಟ್ಟಿನ ಯಕ್ಷಗಾನ ಕಲಾರೂಪ ಮಾಧ್ವ ಮತ್ತು ಶೈವ ಸಂಪ್ರದಾಯದ ಸಮನ್ವಯ ಕಲೆಯಾಗಿ ಪ್ರಚಾರಕ್ಕೆ ಬಂದಿರಬೇಕು. ಅದೂ ಈ ಎರಡೂ ಸಂಪ್ರದಾಯಗಳ ಸಮನ್ವಯಕ್ಕೆ ನಾಂದಿ ಹಾಡಿದ ಕುಂಬಳೆ ಸೀಮೆಯ ನೆಲದಲ್ಲಿಯೇ ಆಗಿದೆ ಎಂಬುದು ಮುಖ್ಯ. ತುಳುಜನರೇ ಹೆಚ್ಚಿರುವ ಈ ಪ್ರದೇಶದಲ್ಲಿ ಕನ್ನಡ ಮಲಯಾಳಂ ಭಾಷಿಕರೂ ಅನೇಕರಿದ್ದಾರೆ. ಈ ಪ್ರದೇಶದಲ್ಲಿ ಲಿಖಿತಭಾಷೆ ಕನ್ನಡವೇ ಆದ್ದರಿಂದ ತುಳುನಾಡಿನ ದೇವಾಲಯಗಳಲ್ಲಿ ಸೇವಾ ಕೈಂಕರ್ಯಗಳಲ್ಲಿ ನಿರತರಾಗಿದ್ದ ತುಳು, ಮಲಯಾಳಂ ಮನೆಮಾತಿನ ಜನರು ಪುರಾಣಗಳನ್ನು ಓದಿದ್ದು, ಕೇಳಿಸಿಕೊಂಡಿದ್ದು ಕನ್ನಡದಲ್ಲಿ. ಈ ಕಾರಣಕ್ಕಾಗಿ ಈ ನೆಲದಲ್ಲಿ ಕನ್ನಡದ ಕಲೆಯೊಂದು ಅರಳಲು ಸಾಧ್ಯವಾಯಿತು. ಕನ್ನಡ ಕಲಿತ ಕನ್ನಡೇತರ ಮನೆಮಾತಿನವರು ಕನ್ನಡ ಕಲೆಯೊಂದನ್ನು ರೂಪಿಸಿಕೊಂಡರು. ಆದ್ದರಿಂದಲೇ ಯಕ್ಷಗಾನದ ಭಾಷೆ ಆಡುನುಡಿಗಿಂತ ಭಿನ್ನವಾಗಿದೆ. ಅದು ಗ್ರಾಂಥಿಕ ಭಾಷೆಯ ಅನುಕರಣ ರೂಪದ ಶೈಲಿಯನ್ನು ರೂಪಿಸಿಕೊಂಡಿದೆ.

ಶೈವ, ವೈಷ್ಣವ ಸಂಪ್ರದಾಯದ ಸಮನ್ವಯೀ ಕಲೆಯಾಗಿ ಎರಡೂ ಸಂಪ್ರದಾಯಗಳು ಅನಿವಾರ್ಯವಾಗಿ ಒಂದು ವೇದಿಕೆಯನ್ನು ಒಪ್ಪಿಕೊಂಡಿದ್ದರು. ಏಕೆಂದರೆ ಶೈವ ಸಂಪ್ರದಾಯ ದವರಿಂದ ದೇವಾಲಯಗಳ ಪೌರೋಹಿತ್ಯವನ್ನು ಮಾಧ್ವ ಸಂಪ್ರದಾಯದವರು ಪಡೆದು ಕೊಂಡರು. ಅಲ್ಲದೆ ಅನೇಕ ಶಿವಾಲಯಗಳಲ್ಲಿ ವಿಷ್ಣುವಿನ ಪ್ರತಿಷ್ಠಾಪನೆ ಮಾಡಿದರು. ಆಗ ಶೈವ ಸಂಪ್ರದಾಯದವರು ದೇವಾಲಯ ಬಿಟ್ಟು ಹೊರ ಹೋಗಬೇಕು. ಆಗ ಮತ್ತೆ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ. ದೇವಾಲಯದಲ್ಲಿಯೇ ಉಳಿಯಬೇಕಾದರೆ ವೈಷ್ಣವ ಸಂಪ್ರದಾಯವನ್ನು ಒಪ್ಪಿಕೊಳ್ಳಲೇಬೇಕು. ಆಗಲೇ ಕ್ಷೀಣಿಸುತ್ತಿದ್ದ ಶೈವ ಸಂಪ್ರದಾಯವು ಪ್ರಬಲವಾಗಿದ್ದ ಮಾಧ್ವ ಸಂಪ್ರದಾಯದ ಮುಂದೆ ತಲೆಬಾಗಲೇ ಬೇಕಾಯಿತು. ಹಾಗಾಗಿ ಇಲ್ಲಿ ಭಾಗವತ ಮನೋಧರ್ಮದಿಂದ ಎರಡನ್ನು ಒಪ್ಪಿಕೊಂಡು ಒಂದೇ ದೇವಸ್ಥಾನದ ಆಶ್ರಯದಲ್ಲಿ  ಸೌಹಾರ್ದದಿಂದ ಬದುಕುವ ಮನ ಮಾಡಿರಬೇಕು.

ಶೈವ, ವೈಷ್ಣವ ಪಂಥಗಳ ವಿಕಾಸಗಳೂ ಯಕ್ಷಗಾನದ ಕಥಾನಕಗಳಲ್ಲಿ ಸೇರಿಕೊಂಡಿ ರುವುದನ್ನು ಗುರುತಿಸಬಹುದಾಗಿದೆ. ಮಾಧ್ವ ಮತ್ತು ಶೈವ ಸಂಪ್ರದಾಯದ ಮನಸ್ಸುಗಳು ತಮ್ಮ ತಮ್ಮ ಮನೋಧರ್ಮಗಳ ಮೇಲ್ಮೆಗಾಗಿ ಉತ್ಸಾಹದಿಂದ ಪ್ರವರ್ತಿಸಿರುವುದನ್ನು ಕಾಣಬಹುದು. ಯಕ್ಷಗಾನದ ಉಗಮದ ನೆಲೆಯಲ್ಲಿಯೇ ಇದ್ದ ಈ ವಿಭಿನ್ನ ಮನೋಧರ್ಮ ಗಳು ತೆಂಕುತಿಟ್ಟು ತನ್ನ ಅಂತರ್ಯದಲ್ಲಿ ಬೆಳೆಸುತ್ತಲೇ ಬಂದಿದೆ. ಅದು ಒಂದು ಮನೋಧರ್ಮಕ್ಕೆ ಪರ್ಯಾಯವಾಗಿ ಇನ್ನೊಂದು ಮನೋಧರ್ಮದ ಸೃಷ್ಟಿಯಾಗಿ ಮೈವಡೆಯುತ್ತಾ ಬಂದಿರುವುದು ಕುತೂಹಲದ ಸಂಗತಿ. ಆದರೆ ಭಾಗವತ ಸಂಪ್ರದಾಯ ಎಂಬೊಂದು ಒಪ್ಪಿತ ನೆಲೆಯಲ್ಲಿ ಇದು ಸಂಘರ್ಷದ ಹಾದಿ ತುಳಿಯದೆ ಸಮನ್ವಯದ ನೆಲೆಯಲ್ಲಿಯೇ ಮುಂದುವರಿದಿದೆ. ತೆಂಕುತಿಟ್ಟು ಯಕ್ಷಗಾನದ ಆಂತರ್ಯದಲ್ಲಿ ಹುದುಗಿರುವ ಒಂದು ರೀತಿಯ ದ್ವಂದ್ವಗಳಿಗೆ ಇದೂ ಒಂದು ಕಾರಣವಾಗಿರಬಹುದು. ಶಿವಾರಾಧಕರಾದ ಜನರ ಮೇಲೆ ಮಾಧ್ವ ಸಂಪ್ರದಾಯವು ಸ್ವಾಧೀನ ಪಡೆದುದೇ ಕಾರಣವಾಗಿ ಅಲ್ಲಿ ವಿಷ್ಣು ಪಾರಮ್ಯದ ಕತೆಗಳಿಗೆ ಪ್ರಾಶಸ್ತ್ಯ ದೊರೆಯುವಂತಾಯಿತು. ಭಾಗವತ ಸಂಪ್ರದಾಯದ ಅನೇಕ ರಂಗಕಲೆಗಳು ದೇಶದಾದ್ಯಂತ ಧಾರ್ಮಿಕ ಕಾರಣಗಳಿಗಾಗಿ ಪ್ರಚಾರ ಪಡೆದಿವೆ. ಕೇರಳದಲ್ಲಿ ಕೃಷ್ಣನಾಟಂ, ರಾಮನಾಟಂ ಇತ್ತು. ಇಲ್ಲಿ ಹಾಡುವವನು ಭಾಗವತ. ಯಕ್ಷಗಾನದ ಹಾಡು ಗಾರನೂ ಭಾಗವತನೇ. ಇದೂ ಕೂಡಾ ಭಾಗವತ ಸಂಪ್ರದಾಯದ ಕುರುಹೇ ಆಗಿದೆ. ಭಾಗವತರು ಮತ್ತು ಹಿಮ್ಮೇಳದವರು ನಿಯಂತ್ರಿಸುತ್ತಿದ್ದ ಮುಮ್ಮೇಳದಲ್ಲಿ ಶಿವಾರಾಧಕ ಬ್ರಾಹ್ಮಣೇತರ ಜನರೇ ಇದ್ದಿರಬಹುದು. ಶಿವ ಭಾರತೀಯ ಸಂಪ್ರದಾಯದಲ್ಲಿ ನಟರಾಜನೇ ತಾನೆ! ಮಡಿವಂತರೆನಿಸಿಕೊಂಡವರು ಅಶ್ಲೀಲವೆನ್ನಬಹುದಾದ ಭಂಗಿಯ ನಟನೆಯನ್ನು ಶಿವ ಅಭಿನಯಿಸಿದವನು. ತೆಂಕುತಿಟ್ಟಿನ ಸಂದರ್ಭದ ಕುಣಿತಗಳೂ ಹಾಗೆಯೇ ರೂಕ್ಷವಾದುದು. ಹೆಚ್ಚು ದೈಹಿಕ ಶ್ರಮವನ್ನು ಬಯಸುವ ಚಲನೆಯುಳ್ಳದ್ದು. ಇದು ಬೌದ್ದಿಕ ಜಾಣ್ಮೆಯಿಂದ ತಮ್ಮನ್ನು ನಿಯಂತ್ರಿಸುತ್ತಿದ್ದ ಹಿಮ್ಮೇಳದ ಮಾಧ್ವ ಸಂಪ್ರದಾಯಕ್ಕೆ ಶಿವಾರಾಧಕರಾದ ಮುಮ್ಮೇಳದವರು ಒಡ್ಡಿದ ಸವಾಲಿನ ರೂಪದ್ದು. ಪಂಥಾಹ್ವಾನಕ್ಕೆ ಹೆಸರಾದ ಶಿವನನ್ನು ಅವನ ಆರಾಧಕರು ಅನುಸರಿಸಿದ್ದರಲ್ಲಿ ವಿಶೇಷವೇನಿಲ್ಲ. ಶಿವನ ನಟನ ಚಾತುರ್ಯಕ್ಕೆ ಸಂಬಂಧಿಸಿದ ಕತೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶಿವ ಒಮ್ಮೆ ಪಾರ್ವತಿಯೊಡನೆ ಪಂಥಕಟ್ಟಿ ಕುಣಿದು ನರ್ತಿಸಿದ್ದ. ಹೆಜ್ಜೆ ಹೆಜ್ಜೆಗೂ ಶಿವನನ್ನು ಪಾರ್ವತಿಯೂ ಅನುಸರಿಸಿದಳು. ಮೀರಿಸಿದಳು. ಕುಣಿತದ ನಡೆ ತೀವ್ರದಂತೆ ಪಾರ್ವತಿಯನ್ನು ಸೋಲಿಸುವುದಕ್ಕೆ ಅಸಾಧ್ಯವೆಂದು ಭಾವಿಸಿದ ಶಿವ ಕುಣಿತದ ಚರ್ಯೆಯನ್ನೇ ಬದಲಿಸಿದನಂತೆ. ಕಾಲನ್ನು ಭುಜದ ಮಟ್ಟಕ್ಕೂ ಮೀರಿ ಎತ್ತಿದನಂತೆ. ಆಗ ಪಾರ್ವತಿ ನಾಚಿ ಮೂಕಳಾಗಿ ನಿಂತು ಬಿಟ್ಟಳಂತೆ. ಏಕೆಂದರೆ ಅದು ಸ್ತ್ರೀಯರ ಮರ್ಯಾದೆಗೂ ಮೀರಿದ ಭಂಗಿಯಾಗಿತ್ತು. ಅದನ್ನು ಅಭಿನಯಿಸಲು ಆಕೆ ಮುಂದಾಗಲಿಲ್ಲ. ಲೋಕದ ಮಡಿವಂತಿಕೆಯ ಜನ ಅಶ್ಲೀಲ ಎನ್ನಬಹುದಾದ ಭಂಗಿಯನ್ನು ಪಾರ್ವತಿ ಅಭಿನಯಿಸದೆ ಸೋಲೊಪ್ಪಿದಳಂತೆ. ಹಾಗೆಯೇ ಯಕ್ಷಗಾನದ ಮುಮ್ಮೇಳದಲ್ಲೂ ನೆಲಬಿಟ್ಟು ಜಿಗಿಯುವ ಗಿರ್ಕಿ ಕುಣಿತಗಳಿವೆ. ಅದು ಹೆಣ್ಣಿನ ದೈಹಿಕ ಚರ್ಯೆ ಹೊಂದಿಕೊಳ್ಳದ ಕುಣಿತ. ಮಹಿಳೆಯರೂ ಸಾತ್ವಿಕ ಪ್ರವೃತ್ತಿಯ ವೈಷ್ಣವರೂ ಒಪ್ಪದ ಅಭಿನಯದ ಕುಣಿತ. ಇದು ತೆಂಕುತಿಟ್ಟಿನ ಸಂದರ್ಭದಲ್ಲಿ ಮಾತ್ರ ಇದೆ. ದೈಹಿಕವಾಗಿ ಶ್ರಮ ಪಡದೆ ಇಂತಹ ಅಭಿನಯ ಭಂಗಿಗಳೂ ಅಸಾಧ್ಯ. ಹಿಮ್ಮೇಳದ ಬೌದ್ದಿಕ ಸಾಮರ್ಥ್ಯದ ಸರಿ ಸಮಾನವಾಗಿ ಮುಮ್ಮೇಳ ತನ್ನ ಸಾಮರ್ಥ್ಯವನ್ನು ದೈಹಿಕವಾಗಿ ತೋರಿಸಿರಬೇಕು. ಹಿಮ್ಮೇಳಕ್ಕೆ ಪ್ರತಿಸ್ಪರ್ಧಿಯಾಗಿಯೇ ಮುಮ್ಮೇಳದ ಚಟುವಟಿಕೆಗಳು ಚಾಲ್ತಿಗೆ ಬಂದಿರಬಹುದು.

ಮಾಧ್ವ ಸಂಪ್ರದಾಯದ ಹಿಮ್ಮೇಳ ಮತ್ತು ಶಿವಸಂಪ್ರದಾಯದ ಮುಮ್ಮೇಳಗಳ ಸೌಹಾರ್ದಯುತ ಸ್ಪರ್ಧಾತ್ಮಕ ಮನೋಭಾವವೇ ಸಮಷ್ಟಿ ರಂಗಕಲೆಯೊಂದನ್ನು ರೂಪಿಸಿರಬೇಕು. ಮುಂದುವರಿದು ಬೌದ್ದಿಕತೆಯನ್ನೇ ಮೆರೆಯುತ್ತಿದ್ದ ಮಾಧ್ವ ಸಂಪ್ರದಾಯವು ಮುಮ್ಮೇಳಕ್ಕೂ ಪ್ರವೇಶ ಪಡೆಯಿತು. ಆಗ ಅಲ್ಲಿ ಸಾತ್ವಿಕ ಸ್ವಭಾವದ ಮತ್ತು ತಾಮಸ ಸ್ವಭಾವದ ಪಾತ್ರಗಳಾಗಿ ಎರಡು ಗುಂಪುಗಳಾದುವು. ಒಂದು ಪೀಠಿಕೆಯ ಪಾತ್ರಗಳಾಗಿ ಮುಖ್ಯ ಪ್ರಸಂಗದ ಬೌದ್ದಿಕ ನಿಯಂತ್ರಕ ಶಕ್ತಿಯೆನಿಸಿದುವು. ಇನ್ನೊಂದು ಎದುರು ಪಾತ್ರಗಳಾಗಿ ದೈಹಿಕ ಶ್ರಮವನ್ನೇ ಪ್ರಕಟಿಸುವ ಪಾತ್ರಗಳಾಗಿ ಉಳಿದುವು. ಇವುಗಳನ್ನು ಪೀಠಿಕೆ ವೇಷಗಳೆಂದು ಎದುರು ವೇಷಗಳೆಂದು ಮುಖ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ. ಪೀಠಿಕೆಯ ವೇಷಗಳು ಮಾತುಗಾರಿಕೆಯ ಮೂಲಕ ತಮ್ಮ ಜಾಣ್ಮೆಯನ್ನು ತೋರಿಸಿದರೆ ಎದುರು ವೇಷಗಳು ಕುಣಿತದ ಮೂಲಕ ಪ್ರತಿಕ್ರಿಯಿಸುವುದು. ಪೀಠಿಕೆಯ ಪಾತ್ರಗಳು ಹಿತಮಿತವಾಗಿ ನಯವಿನಯ ಗಳನ್ನು ಪ್ರಕಟಿಸಿದರೆ ಎದುರು ವೇಷಗಳು  ಕಾಠಿಣ್ಯವನ್ನು ಮೆರೆದು ವಿಜೃಂಭಿಸಿ ಸೋಲೊಪ್ಪಿದುವು. ಹಾಗಾಗಿ ಯಕ್ಷಗಾನದಲ್ಲಿ ಇಂದಿಗೂ ಬೌದ್ದಿಕ ಶ್ರಮವನ್ನು ಹಾಕುವ ಪಾತ್ರಗಳು ಅಥವಾ ಜನವರ್ಗ ಮತ್ತು ದೈಹಿಕ ಶ್ರಮವನ್ನು ಹಾಕುವ ಪಾತ್ರಗಳು ಅಥವಾ ಜನವರ್ಗ ಮುಂದುವರಿದುಕೊಂಡೇ ಬಂದಿವೆ. ಹಾಗಾಗಿ ಮಾತು ಮತ್ತು ಕುಣಿತಗಳು ಕಲಾವಿದರ ಶ್ರಮವನ್ನು ಅವಲಂಬಿಸಿ ಪ್ರಕಟಿಸಲಾಗುತ್ತದೆಯೇ ಹೊರತು ಕಲಾತ್ಮಕವಾದ ಚೌಕಟ್ಟುಗಳ ಒಳಗೆ ಇದಕ್ಕೆ ಇತಿಮಿತಿಗಳಿಲ್ಲ.

ಮಾಧ್ವ ಸಂಪ್ರದಾಯವು ಹುಟ್ಟು ಹಾಕಿದ ಹಿಮ್ಮೇಳ, ಹಿಮ್ಮೇಳಕ್ಕೆ ಪ್ರತಿಸ್ಪರ್ಧಿಯಾಗಿ ಶೈವಸಂಪ್ರದಾಯದ ಮುಮ್ಮೇಳ, ಮುಮ್ಮೇಳಕ್ಕೆ ಪ್ರವೇಶ ಪಡೆದ ಮಾಧ್ವ ಸಂಪ್ರದಾಯ, ಅದಕ್ಕೆ ಪ್ರತಿಸ್ಪರ್ಧಿಯಾಗಿ ಶೈವಸಂಪ್ರದಾಯವೂ ತನ್ನ ಕಲಾ ಪ್ರಾವಿಣ್ಯವನ್ನು ವಿಸ್ತರಿಸುತ್ತಾ ಸಾಗಿದೆ.  ಹಾಗಾಗಿ ಮುಮ್ಮೇಳದಲ್ಲಿಯೂ ಪೀಠಿಕೆ ವೇಷ – ಎದುರು ವೇಷ, ಬೌದ್ದಿಕ ಶ್ರಮ- ದೈಹಿಕ ಶ್ರಮ, ಮಾತುಗಾರಿಕೆ – ಕುಣಿತ, ಮಾರ್ಗ- ದೇಸಿ, ಶಿಷ್ಟ-ಪರಿಶಿಷ್ಟ, ವೈದಿಕ – ವೈದಿಕೇತರ, ಸಾತ್ವಿಕ-ತಾಮಸ ಹೀಗೆ ಈ ಪ್ರವೃತ್ತಿಗಳು ಸ್ಪರ್ಧಾತ್ಮಕವಾಗಿಯೇ ಮುಂದುವರಿದು ಕೊಂಡು ಬಂದಿವೆ. ಹೀಗೆ ದ್ವಂದ್ವಗಳ ಮೂಲಕವೇ ತೆಂಕುತಿಟ್ಟು ಬೆಳೆದು ಬಂದಿದೆ. ಆದರೆ ಇಲ್ಲಿನ ದ್ವಂದ್ವಗಳು ಎಂದೂ ಪರಸ್ಪರ ಸಂಘರ್ಷಕ್ಕಿಳಿಯದೆ ಹೊಂದಾಣಿಕೆಯ ರೂಪ ದಲ್ಲಿಯೇ ಕಲೆಯನ್ನು ಬೆಳೆಸಿವೆ. ಇವುಗಳ ನಡುವೆ ಆರೋಗ್ಯಕರವಾದ ಪೈಪೋಟಿಯಂತೂ ನಡೆದಿದೆ. ನಡೆಯುತ್ತಿದೆ. ಈ ಪೈಪೋಟಿ ಒಂದು ತತ್ವದ ಅಥವಾ ಸಿದ್ಧಾಂತದ ಪ್ರತಿಪಾದನೆಗಾಗಿ ಅಲ್ಲ. ಅದು ಕೇವಲ ಪ್ರಯೋಗವೊಂದರ ಮೇಲ್ಮೆಗಾಗಿ ಮಾತ್ರ ಎಂಬುದು ಮುಖ್ಯ ಸಂಗತಿ.

ದೇವತೆಗಳು ಹಾಗೂ ರಾಕ್ಷಸರು ಪರಸ್ಪರ ಸಂಘರ್ಷಕ್ಕಿಳಿದ ಕಥಾನಕಗಳನ್ನು ಆಯ್ದುಕೊಂಡಾಗಲೂ ಯಕ್ಷಗಾನದಲ್ಲಿ ವಿಷ್ಣುವಿನದೇ ಮೇಲುಗೈ. ರಾಕ್ಷಸರು ಶಿವನನ್ನು ಆರಾಧಿಸುವ ಮತ್ತು ಅವನ ವರಬಲದಿಂದ ಶ್ರಮ ಸಂಸ್ಕೃತಿಯ ಪರಾಕಾಷ್ಠೆಯನ್ನು ಪ್ರದರ್ಶಿಸುವವರು. ದೇವತೆಗಳು ವಿಷ್ಣುವಿನ ಬೆಂಬಲದಿಂದ ರಾಕ್ಷಸರನ್ನು ಜಾಣ್ಮೆಯಿಂದ ಸೋಲಿಸುವವರು. ಹೀಗೆ ಬೌದ್ದಿಕ ಶ್ರಮವು ದೈಹಿಕ ಶ್ರಮ ಸಂಸ್ಕೃತಿಯನ್ನು ನಿಯಂತ್ರಿಸುವ ಪ್ರಕ್ರಿಯೆಯೊಂದು ತೆಂಕುತಿಟ್ಟಿನ ಯಕ್ಷಗಾನದ ಸಂದರ್ಭದಲ್ಲಿ ನಿರಂತರ ಸಾಗಿ ಬಂದಿದೆ.

ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿಯೇ ಬೌದ್ದಿಕ ಶ್ರಮಕ್ಕೆ ಮೊದಲ ಸ್ಥಾನ.  ದೈಹಿಕ ಶ್ರಮಕ್ಕೆ ನಂತರದ ಸ್ಥಾನ. ನಮ್ಮ ಆಡಳಿತಶಾಹಿ ವ್ಯವಸ್ಥೆಯಲ್ಲಿಯೂ ಲೇಖನಿ ಹಿಡಿದು ಬೌದ್ದಿಕ ಶ್ರಮದ ಕೆಲಸ ನಿರ್ವಹಿಸುವವರಿಗೆ ಇರುವ ಗೌರವಗಳು ದೈಹಿಕ ಶ್ರಮದ ಕೆಲಸ ನಿರ್ವಹಿಸುವವರಿಗಿಂತ ಅಧಿಕ. ಇದು ನಮ್ಮ ದೇಶದ್ದು ಅಷ್ಟೆ ಇಲ್ಲ. ಜಗತ್ತಿನ ಎಲ್ಲಾ ದೇಶಗಳ ಪರಿಸ್ಥಿತಿಯೂ ಇದೇ. ಈ ಎರಡೂ ದುಡಿಮೆಗಳಿಗೆ ದೊರೆಯುವ ಫಲಾಫಲಗಳು ಯಾವತ್ತೂ ಒಂದೇ ರೀತಿಯಾಗಿ ಇರಲಿಲ್ಲ. ಇಂತಹ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಯಕ್ಷಗಾನದ ಅದರಲ್ಲೂ ಮಾತನ್ನೇ ಮುಖ್ಯವಾಗಿ ಕಲೆಯ ಪ್ರಮುಖಾಂಗವೆಂದು ಪ್ರಾಶಸ್ತ್ಯ ಕೊಟ್ಟ ತೆಂಕುತಿಟ್ಟಿನಲ್ಲಿ ಕಾಣಬಹುದು. ಯಕ್ಷಗಾನದ ಮುಮ್ಮೇಳದ ಎಲ್ಲಾ ಕಲಾವಿದರನ್ನು ಬೌದ್ದಿಕವಾಗಿ ನಿಯಂತ್ರಿಸುತ್ತಿದ್ದವರು ಹಿಮ್ಮೇಳದ ಕಲಾವಿದರು. ಬೌದ್ದಿಕ ಶ್ರಮವನ್ನೇ ಬಂಡವಾಳವಾಗಿ ಮಾಡಿಕೊಂಡ ಜನವರ್ಗದವರು ಯಕ್ಷಗಾನವನ್ನು ಪ್ರವೇಶಿಸಿ ಮುಮ್ಮೇಳದಲ್ಲಿ ಭಾಗವಹಿಸ ತೊಡಗಿದರು. ಆಗ ನಿಯಂತ್ರಣ ತಾನೇ ತಾನಾಗಿ ಮುಮ್ಮೇಳದ ಕಲಾವಿದರೆಡೆಗೆ ವಿಸ್ತರಿಸಿತು. ಸಮಷ್ಟಿ ರೂಪದ ಸಮಗ್ರ ಕಲೆಯಾಗಿದ್ದ ಯಕ್ಷಗಾನ ಒಂದು ನಿರ್ದಿಷ್ಟ ಮನೋಧರ್ಮದಲ್ಲಿ ಭಾಗವತರಿಂದ ನಿಯಂತ್ರಣಕ್ಕೆ ಒಳಗಾಗುತ್ತಿತ್ತು. ಮುಮ್ಮೇಳ ದಲ್ಲೂ ಬೌದ್ದಿಕ ಶ್ರಮದ ಬಳಕೆ ಹೆಚ್ಚಾದಾಗ ಸಮಷ್ಟಿ ರೂಪದ ಯಕ್ಷಗಾನದಲ್ಲಿ ವ್ಯಷ್ಟಿ ಪ್ರಜ್ಞೆ ಬೆಳೆಯಿತು. ಇದರಿಂದಾಗಿ ಯಕ್ಷಗಾನದ ಕಲಾವಿದರು ಹೊಸ ಸಂವೇದನೆಯ ನೆಲೆಯಿಂದ ಪಾತ್ರಗಳನ್ನು ವ್ಯಕ್ತಿನಿಷ್ಠವಾಗಿ ಬೆಳೆಸುತ್ತಾ ತಮ್ಮ ಪಾತ್ರವನ್ನು ತಾವೇ ನಿರ್ದೇಶಿಸ ತೊಡಗಿದರು. ಆಂಗಿಕ, ಆಹಾರ್ಯ, ಸಾತ್ವಿಕಾದಿ ಅಭಿನಯಗಳ ಮೂಲಕ ದೈಹಿಕ ಶ್ರಮವನ್ನು ಹಾಕಿ ಪ್ರಯೋಗಗೊಳ್ಳುತ್ತಿದ್ದ ಕಲೆಯಲ್ಲಿ ವಾಚಿಕಾಂಗವೊಂದೇ ಉಳಿದವುಗಳ ಗೈರು ಹಾಜರಿಯನ್ನು ತುಂಬಿಕೊಡಬಹುದು ಎಂಬುದನ್ನು ತೋರಿಸಿಕೊಟ್ಟರು. ರಂಗದಲ್ಲಿ ಪ್ರಯೋಗಗೊಳ್ಳುವ ಒಂದು ನಿರ್ದಿಷ್ಟ ಅವಧಿಯನ್ನು ತುಂಬಿಕೊಡಲು ದೈಹಿಕ ಶ್ರಮದ ಅಭಿನಯಕ್ಕಾದರೆ ನಾಲ್ಕೋ ಐದೋ ಜನ ಕಲಾವಿದರು ಬೇಕಾಗುತ್ತಿದ್ದರು. ಇವೆಲ್ಲವನ್ನು ಒಬ್ಬನೇ ಕಲಾವಿದ ವಾಚಿಕಾಂಗದ ಮೂಲಕ ಪ್ರೇಕ್ಷಕ ರಂಜನೀಯವಾಗಿ ತುಂಬಿಕೊಡಬಲ್ಲ ಎಂಬುದನ್ನು ತೋರಿಸಿಕೊಟ್ಟರು. ಪರಿಣಾಮವಾಗಿ ಯಕ್ಷಗಾನದ ವಾಚಿಕಾಂಗ ಹಿಂದಿಲ್ಲದ ಹೊಸ ಆಯಾಮದತ್ತ ಹೊರಳಿ ಕೊಂಡಿತು. ದೈಹಿಕ ಶ್ರಮದ ಕಲೆಯ ಜಗತ್ತನ್ನು ಬೌದ್ದಿಕ ಜನ ಆಶ್ರಯಿಸಿಕೊಂಡ ಫಲಿತ ಇದು. ಬೌದ್ದಿಕ ವರ್ಗ ಇಡೀ ಕಲಾರೂಪವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರಿಂದ ಕಲೆಗೆ ಸಾಮಾಜಿಕವಾದ ಮನ್ನಣೆ ಕೂಡಾ ಪ್ರಾಪ್ತವಾಗಿದೆ. ಇದಕ್ಕೆ ಕಾರಣವನ್ನು ಶೋಧಿಸಿದರೆ ವಾಚಿಕಾಂಗದ ಅನೇಕ ಬೌದ್ದಿಕ ಚಟುವಟಿಕೆಗಳೇ ಗಮನ ಸೆಳೆಯುತ್ತವೆ. ಹಾಗಾಗಿ ಯಾವ ಶ್ರಮವೇ ಇರಲಿ ಆ ಶ್ರಮ ಸಂಸ್ಕೃತಿಯ ಗೌರವಗಳು, ಮೌಲ್ಯಗಳು ಪ್ರಕಟವಾಗಬೇಕಾದರೆ ಮಾತಿನ ಅಭಿವ್ಯಕ್ತಿ ಅನಿವಾರ್ಯ ಎಂದೆನಿಸುತ್ತದೆ.

ತೆಂಕುತಿಟ್ಟು ಯಕ್ಷಗಾನ ಯಾವತ್ತೂ ವಾಚಿಕವನ್ನು ಪ್ರಮುಖವಾಗಿಯೇ ಪರಿಗಣಿಸಿತ್ತು ಎಂದು ತಿಳಿಯಬೇಕಾಗಿಲ್ಲ. ಆದರೆ ಬೌದ್ದಿಕತೆಯೇ ಬಹುತೇಕ ನಿಯಂತ್ರಕ ಶಕ್ತಿಯಾಗಿ ಉಳಿಯುವ ಪ್ರಯತ್ನವನ್ನು ನಡೆಸಿತ್ತು ಎನ್ನುವುದು ಮಾತ್ರ ಸ್ಪಷ್ಟ. ಆ ಬೌದ್ದಿಕತೆಗೆ ಪ್ರತಿಯಾಗಿ ತುಂಬಿಕೊಡಲು ವೇಷಭೂಷಣ, ಬಣ್ಣಗಾರಿಕೆ ಹಾಗೂ ಕುಣಿತಗಳನ್ನು ಅತ್ಯಂತ ಶ್ರಮ ಪೂರ್ವಕವಾಗಿ ಬಳಸಿರುವುದನ್ನು ಕಂಡುಕೊಳ್ಳಬಹುದು. ಪಾರ್ತಿಸುಬ್ಬನು ತೆಂಕುತಿಟ್ಟಿನ ಈ ಯಕ್ಷಗಾನ ಕಲಾರೂಪವನ್ನು ಪರಿಷ್ಕಾರ ಗೊಳಿಸಿದನೆಂದು ಈಗಾಗಲೇ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಪರಿಷ್ಕಾರ ಮುಖ್ಯವಾಗಿ ನಿರ್ದಿಷ್ಟ ಪ್ರಸಂಗ ರಚನೆಯ ಮೂಲಕ ಸ್ಪಷ್ಟವಾದ ರಂಗಕಲೆಯಾಗಿ ರೂಪಿಸುವ ನೆಲೆಯಲ್ಲಿಯೇ ನಡೆದಿರಬಹುದು.

ಕೇರಳ ರಾಜ್ಯದ ಉದ್ದಗಲಕ್ಕೂ ತಿರುಗಾಡಿದ ಪಾರ್ತಿಸುಬ್ಬ ಕಥಕಳಿಯೇ ಮೊದಲಾದ ಕಲಾರೂಪಗಳಿಂದ ಪ್ರೇರಣೆ ಪಡೆದ. ಈ ಹಿನ್ನೆಲೆಯಿಂದ ಯಕ್ಷಗಾನ ಆಟಗಳನ್ನು ಪರಿಷ್ಕಾರಗೊಳಿಸಿದ. ವೇಷಭೂಷಣ, ಬಣ್ಣಗಾರಿಕೆಗಳ ಕೆಲವಂಶಗಳನ್ನು ಸೇರಿಸಿ ಹೊಸ ಹೊಳಹನ್ನು ನೀಡಿದ. ಕೇರಳದ ಕಥಕಳಿ, ಕೃಷ್ಣನಾಟಂ, ತುಳ್ಳಲ್ ಕಲೆ ಇವುಗಳು ಹಾಗೂ ತೆಂಕುತಿಟ್ಟಿನ ಯಕ್ಷಗಾನ ಸಮಾನ ಹಿನ್ನೆಲೆಯುಳ್ಳವುಗಳು. ಆದರೆ ಇವೆಲ್ಲ ಪ್ರಾದೇಶಿಕವಾಗಿ ಸ್ವತಂತ್ರವಾದ ಕಲೆಗಳು. ಕೇಳಿಕೊಟ್ಟು, ತೆರೆ ಪುರಪ್ಪಾಡು ಇತ್ಯಾದಿ ಕೆಲವು ಪಾರಿಭಾಷಿಕ ಪದಗಳು ಇಂದಿಗೂ ತೆಂಕುತಿಟ್ಟಿನ ಯಕ್ಷಗಾನ ಹಾಗೂ ಕಥಕಳಿಯಲ್ಲಿ ಸಮಾನವಾಗಿವೆ. ಹಿಂದೆ ತೆಂಕುತಿಟ್ಟಿನಲ್ಲಿ ಹಿಮ್ಮೇಳಗಳು ಕಥಕಳಿಯಲ್ಲಿಯಂತೆ ನಿಂತುಕೊಂಡಿರುವ ಪದ್ಧತಿ ಯಿತ್ತು. ಕೇರಳದ ತುಳ್ಳಲ್ ಕಲೆಗಳ ವೇಷಭೂಷಣಗಳಿಗೂ ಯಕ್ಷಗಾನದ ವೇಷಭೂಷಣ ಗಳಿಗೂ ಸಾಮ್ಯವಿದೆ. ಇವುಗಳ ನಡುವೆ ಕೊಡು ಕೊಳುಗೆಗಳು ನಡೆದಿರುವ ಸಾಧ್ಯತೆ ಇದೆ. ವೇಷಭೂಷಣಗಳಲ್ಲೂ ತೆಂಕುತಿಟ್ಟು ಮತ್ತು ಕಥಕಳಿಗಳಿಗೆ ಅನೇಕ ಸಾದೃಶ್ಯಗಳಿವೆ. ಯಕ್ಷಗಾನ ದಿಂದಲೂ ಅನೇಕ ಸಂಗತಿಗಳನ್ನು ಕೂಡಿಯಾಟಂನ ಪರಿಷ್ಕೃತ ರೂಪವಾದ ಕಥಕಳಿ ಕಲಾಪ್ರಕಾರವು ಸ್ವೀಕರಿಸಿರುವ ಸಾಧ್ಯತೆಗಳಿವೆ. ಇವು ಒಂದರಿಂದ ಇನ್ನೊಂದು ಪ್ರೇರಣೆ ಪಡೆಯಿತು ಎನ್ನುವುದಕ್ಕಿಂತ ಪರಸ್ಪರ ಪೂರಕವಾಗಿ ಕೊಡು ಕೊಳುಗೆಗಳ ಮೂಲಕ ಜೊತೆ ಜೊತೆಗೆ ಬೆಳೆದವು ಎಂದರೆ ಹೆಚ್ಚು ಸಮರ್ಪಕವಾದೀತು.

ನಾಗಾರಾಧನೆ ಮತ್ತು ಯಕ್ಷಗಾನ

ಪ್ರಕೃತಿ ಮತ್ತು ಜೀವರಾಶಿಗಳಿಂದ ಮಾನವನು ಭಯ ನಿವಾರಣೆಗಾಗಿ ತಾಳಿಕೊಂಡ ವಿನೀತ ಭಾವವೇ ಭಕ್ತಿ. ತನ್ನ ಮಾನಸಿಕ, ದೈಹಿಕ, ಸಂಪತ್ತಿನ ಸಂರಕ್ಷಣೆಗಾಗಿ ಮನುಷ್ಯ ಅದೃಶ್ಯ ಶಕ್ತಿಗಳ ಆರಾಧನೆಯಲ್ಲಿ ತೊಡಗಿದ. ಭಕ್ತಿಯ ಆರಂಭದ ಹಂತದಲ್ಲಿ ಮಾನವ ಅದೃಶ್ಯ ಶಕ್ತಿಗಳ ಸಾಮರ್ಥ್ಯವನ್ನು ನಂಬಿ ಭಕ್ತಿಯಿಂದ ನಮಿಸಿದ. ವಿನಯ ಪೂರ್ವಕವಾಗಿ ತನ್ನ ಕಷ್ಟಗಳನ್ನು ಅದೃಶ್ಯ ಶಕ್ತಿಯಲ್ಲಿ ತೋಡಿಕೊಂಡ. ಕ್ರಮೇಣ ಅದೃಶ್ಯ ಶಕ್ತಿಯ ಸಂಕೇತಗಳಾಗಿ  ಪ್ರಾಕೃತಿಕ ವಸ್ತುಗಳಲ್ಲಿ ದೇವರನ್ನು ಕಂಡ. ತನ್ನ ಬದುಕನ್ನು ಕಾಪಾಡುವ ಅಥವಾ ನಾಶ ಮಾಡುವ ಶಕ್ತಿಯನ್ನು ಹೊಂದಿದ. ಮರ, ಗಾಳಿ, ನೀರು, ಕಲ್ಲು ಮೊದಲಾದ ಎಲ್ಲವುಗಳಲ್ಲೂ ದೈವಿಕ ಶಕ್ತಿಯನ್ನು ಕಂಡು ತಲೆಬಾಗಿದ. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳಲ್ಲೂ ಅದಮ್ಯ ಚೇತನವನ್ನು ಕಂಡು ತಾದಾತ್ಮ್ಯತೆಯಿಂದ ಶಿರಬಾಗಿದ. ಹೀಗೆ ಪ್ರಕೃತಿಯಲ್ಲಿ ದೈವಿಕ ಶಕ್ತಿಯನ್ನು ಕಂಡುಕೊಳ್ಳುವುದರ ಮೂಲಕ ತಾನು ದೇವರ ಸಾಮಿಪ್ಯದ ಸೌಖ್ಯವನ್ನೂ ಅನುಭವಿಸಿದ.

ಪ್ರಕೃತಿಯನ್ನು ನಂಬಿ ಬಾಳಿದ ಮನುಷ್ಯ ಪ್ರಕೃತಿಯಲ್ಲೇ ಒಂದಾಗಿ ತನಗೆ ಆಶ್ರಯ ನೀಡಿದ ಪ್ರಕೃತಿಯನ್ನೇ ದೇವರೆಂದು ನಂಬಿಕೊಂಡು ಬಂದ. ಮಕ್ಕಳಿಗೆ ಪೋಷಣೆ ನೀಡುವ ತಾಯಿ ದೇವರಾಗುವಂತೆ, ಮಾನವನಿಗೆ ರಕ್ಷಣೆ ನೀಡುವ ಮಾನವರೂ ದೇವರಾಗುವಂತೆ ಮಾನವ ಸಮುದಾಯವನ್ನು ರಕ್ಷಿಸುವ ಪ್ರಕೃತಿಯನ್ನೇ ಮಾನವ ದೈವತ್ವದ ಮಟ್ಟದಲ್ಲಿ ಕಲ್ಪಿಸಿಕೊಂಡ. ಆದರೆ ಇಲ್ಲೆಲ್ಲ ಭಕ್ತಿ ಎಂಬುದು ಒಂದು ಅಮೂರ್ತವಾದ ಪರಿಕಲ್ಪನೆಯಾಗಿ ಭಕ್ತರಿಂದ ವಿನಯದ ಭಾವನೆಯು ದೇವರೆಡೆಗೆ ಪ್ರವಹಿಸುತ್ತಿರುತ್ತದೆ. ತನ್ನ ನಂಬಿಕೆ ಗಾಢವಾದಂತೆ ನಂಬಿದ ಪ್ರಾಕೃತಿಕ ಶಕ್ತಿಗಳು ಅನುಗ್ರಹಿಸುತ್ತವೆ ಎಂಬ ಅಮೂರ್ತ  ಭಾವನೆ ಯಲ್ಲಿ ಮಾನವ ಭಕ್ತಿಯನ್ನು ಪೋಷಿಸಿಕೊಂಡು ಬಂದ. ಮಾನವನ ಭಕ್ತಿಯ ಅದಮ್ಯ ಉತ್ಸಾಹವು ಇಷ್ಟಕ್ಕೇ ತಣಿಯಲಿಲ್ಲ. ತಾನು ನಂಬಿದ ಶಕ್ತಿಯನ್ನು ಜೀವಂತವಾಗಿ ಪ್ರತ್ಯಕ್ಷೀಕರಿಸಿಕೊಳ್ಳಬೇಕೆಂಬ ಬಯಕೆ ಗಾಢವಾಯಿತು. ಆಗೆಲ್ಲ ಮನುಷ್ಯ ಮೌನವಾಗಿ ಇರುವ ಪ್ರಕೃತಿಯ ಕಲ್ಲು, ಮರ, ಗಾಳಿ, ನೀರು ಇತ್ಯಾದಿಗಳ ವಿಕೋಪಗಳೆಲ್ಲ ದೈವದ ಸಿಟ್ಟೆಂದೇ ಭಾವಿಸಿದ. ಪ್ರಕೃತಿಯ ಇಂತಹ ವಿಕೋಪಗಳಿಗೆಲ್ಲ ತನ್ನ ಭಕ್ತಿಯ ಕೊರತೆಯಲ್ಲೇ ಕಾರಣಗಳನ್ನು ಕಂಡುಕೊಂಡ. ಆಗೆಲ್ಲ ಮಾತಿಲ್ಲದ ನಿಶ್ಚಲ  ದೈವಿಕ ಸಂಕೇತಗಳಲ್ಲೆಲ್ಲ ಮಾತಿನ ಅರ್ಥವನ್ನು ಕಂಡುಕೊಳ್ಳಲೆತ್ನಿಸಿದ. ಪ್ರಕೃತಿಯ ನಿಶ್ಚಲ ವಸ್ತುಗಳನ್ನೂ ಮೀರಿ ಪ್ರಾಣಿಗಳಲ್ಲೂ ದೈವದ ಶಕ್ತಿಗಳನ್ನು ಕಂಡು ಆರಾಧಿಸತೊಡಗಿದ್ದು ಮಾನವನ ಇತಿಹಾಸದ ಸಂದರ್ಭದಲ್ಲಿ ಒಂದು ಪ್ರಮುಖವಾದ ಹಂತ. ಜಗತ್ತಿನಲ್ಲಿಯೇ ಮಾನವನು ಭಕ್ತಿಯಿಂದ ಪೂಜಿಸಿದ ಮೊದಲ ಪ್ರಾಣಿ ಚಿಹ್ನೆಯೆಂದರೆ ನಾಗ ಅಥವಾ ಹಾವು.

ಈ ಹಂತದಲ್ಲಿ ಮನುಷ್ಯನ ನಾಗಾರಾಧನೆಯ ಆಚರಣೆಯನ್ನು ಮುಖ್ಯವಾಗಿ ಗುರುತಿಸ ಬಹುದು. ನಾಗಗಳು ದೈವೀ ಸ್ವರೂಪಗಳಾಗಿ ಮನುಷ್ಯರನ್ನು ರಕ್ಷಿಸುತ್ತವೆ. ಹಾನಿಯನ್ನು ಮಾಡಿದಲ್ಲಿ ನಾಶವನ್ನೂ ಮಾಡಬಲ್ಲ ಶಕ್ತಿಯನ್ನು ಹೊಂದಿವೆ. ಹಾಗಾಗಿ ಪ್ರಕೃತಿ ವಿಕೋಪ ಗಳಿಗೆ ಹೆದರಿದಂತೆ ಮಾನವ ನಾಗಗಳ ಬಗೆಗೂ ಭಯದ ಭಾವನೆಯನ್ನು ತಾಳಿದ. ಪ್ರಕೃತಿಯಲ್ಲಿ ಪ್ರತ್ಯಕ್ಷವಾಗುವ ಎಲ್ಲಿ ಬೇಕೆಂದರಲ್ಲಿ ಓಡಾಡಿ ಮಾನವನಿಗೆ ಎದುರುಗೊಳ್ಳುವ ನಾಗಗಳಲ್ಲೂ ಮಾನವ ದೈವತ್ವವನ್ನು ಕಂಡ. ನಾಗಗಳ ಬಗೆಗೆ ವರ್ಣರಂಜಿತವಾದ ಅನೇಕ  ಕಥೆಗಳು ಆದಿಮ ಜನಸಂಸ್ಕೃತಿಯಲ್ಲಿ ಪ್ರಚಲಿತದಲ್ಲಿವೆ. ಸಂಪತ್ತನ್ನು ಕಾಯುವ ದೈವಗಳಾಗಿ ನಾಗಗಳ ಬಗೆಗೆ ವರ್ಣರಂಜಿತವಾದ ಕತೆಗಳಿವೆ. ಆದಿಶೇಷನೇ ಈ ಭೂಮಿಯನ್ನು ಹೊತ್ತು ನಿಂತಿದ್ದಾನೆ ಎನ್ನುವ ಕಥೆಯಾಗಲಿ, ಪಾತಾಳಲೋಕದ ಪ್ರಜೆಗಳೆಲ್ಲರು ನಾಗರು ಎಂಬುದಾಗಲಿ, ಸುಂದರ ಕನ್ಯೆಯರ ರೂಪದಲ್ಲಿ ಪ್ರತ್ಯಕ್ಷವಾಗಿ ಪ್ರರುಷರ ಮೇಲೆ ಸಮ್ಮೋಹನ ಬೀರುವ ನಾಗಕನ್ನಿಕೆಯರ ಬಗೆಗಾಗಲಿ, ಜನಪದರಲ್ಲಿ ವೈವಿಧ್ಯಮಯವಾದ ಕತೆಗಳಿವೆ.

ಧಾರ್ಮಿಕ ನಂಬಿಕೆಯ ಭಾಗವಾಗಿಯೇ ನಾಗಗಳು ಜನಪದರ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ನಾಗಗಳನ್ನು  ಸಂತೃಪ್ತಿಗೊಳಿಸುವ ಸಲುವಾಗಿ ರೂಢಿಸಿಕೊಂಡು ಬಂದ ಅನೇಕ ಆರಾಧನಾ ಸಂಪ್ರದಾಯಗಳು, ಆಚರಣಾ ವಿಧಾನಗಳು ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶಗಳಲ್ಲಿ ಇಂದಿಗೂ ಉಳಿದುಕೊಂಡು ಬಂದಿವೆ. ಈ ಪ್ರದೇಶದ ಅನೇಕ ಧಾರ್ಮಿಕ ಕಲೆಗಳ ಹಿಂದೆ ನಾಗಾರಾಧನೆಯ ಪ್ರಭಾವ ಇರುವುದನ್ನು ಸಹ ಗುರುತಿಸಬಹು ದಾಗಿದೆ.

ಯಕ್ಷಗಾನವು ನಾಗಾರಾಧನೆಯ ಭಾಗವಾಗಿಯೇ ಬೆಳೆದು ಬಂದ ಧಾರ್ಮಿಕ ಕಲೆ. ಇಂದಿಗೂ ಯಕ್ಷಗಾನದಲ್ಲಿ ಉಳಿದು ಬಂದಿರುವ ಅನೇಕ ಸಾಂಸ್ಕೃತಿಕ ಅವಶಿಷ್ಟಗಳು ಇದಕ್ಕೆ ಪೂರಕವಾದ ಪುರಾವೆಗಳನ್ನು ಒದಗಿಸುತ್ತವೆ. ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶದ ಅನೇಕ ಸಾಂಸ್ಕೃತಿಕ ಕಲೆಗಳ ಹಿಂದೆ ಆರಾಧನಾ ಮನೋಭಾವ ಇರುವುದನ್ನು ಕಾಣಬಹುದು. ಇಲ್ಲೆಲ್ಲ ನಾಗಾರಾಧನೆಯ ಅಂಶವನ್ನು ತನ್ನ ಆರಾಧನಾ ಸಂಪ್ರದಾಯದಲ್ಲಿ ಉಳಿಸಿಕೊಂಡು ಬಂದಿವೆ. ಕೆಲವು ಬಾರಿ ಅವುಗಳಿಂದ ಪ್ರಭಾವಗೊಂಡಿರುವುದನ್ನು ಕೂಡ ಗಮನಿಸಬಹುದು. ಇವುಗಳಿಗೆ ನಿರ್ದಿಷ್ಟವಾದ ಸಾಂಸ್ಕೃತಿಕ ಪ್ರದೇಶದ ಕಲಾ ವೇಷಗಳ ಅನೇಕ ವೈಶಿಷ್ಟ್ಯಗಳನ್ನು ಪಟ್ಟಿ ಮಾಡಬಹುದು. ಅಂತಹವುಗಳಲ್ಲಿ ತೆಂಕುತಿಟ್ಟು ಯಕ್ಷಗಾನದ ವಿಶಿಷ್ಟತೆಗಳನ್ನು ಕುರಿತು ಪರಿಶೀಲಿಸಬಹುದು. ಅದಕ್ಕೆ ಮುನ್ನ ಈ ಕಲಾರೂಪ ಹುಟ್ಟಿ ಬೆಳೆದ ನೆಲದ ಸಾಂಸ್ಕೃತಿಕ ಅನನ್ಯತೆಗಳನ್ನು ತಿಳಿದುಕೊಳ್ಳಬೇಕಾದುದೂ ಅತ್ಯಂತ ಅಗತ್ಯ ವಾಗಿದೆ.

ನಾಗಾರಾಧನೆ ಎನ್ನುವುದು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಆರಾಧನಾ ವಿಧಾನಗಳಲ್ಲಿ ಪ್ರಮುಖವಾಗಿದೆ. ಅನಾದಿ ಕಾಲದಿಂದಲೂ ಜಗತ್ತಿನ ಬೇರೆ ಬೇರೆ ಜನಾಂಗದವರು ನಾಗಾರಾಧನೆಯನ್ನು ಆಚರಿಸಿಕೊಂಡು ಬಂದಿದ್ದಾರೆ. ಪ್ರಕೃತಿಯ ಶಕ್ತಿಯನ್ನು ನಂಬಿ ಮಾನವರು ಗಾಳಿ, ನೀರು ವೃಕ್ಷ, ಸೂರ್ಯ, ಚಂದ್ರ ಮೊದಲಾದವುಗಳಲ್ಲಿ ದೈವತ್ವವನ್ನು ಕಂಡರು. ಪ್ರಕೃತಿಯ ಸೃಷ್ಟಿಯಾದ ಪ್ರಾಣಿ, ಪಕ್ಷಿಗಳಲ್ಲೂ ದೈವೀಶಕ್ತಿಯನ್ನು ಕಲ್ಪಿಸಿಕೊಂಡರು. ಕಾಲಿಲ್ಲದೆ ನಡೆಯುವ, ಕಿವಿಯಿಲ್ಲದೆ ಕೇಳುವ, ಹೆಡೆಯೆತ್ತಿ ಕುಣಿಯಬಲ್ಲ ಹಾವುಗಳ ಕುರಿತು ಮಾನವರು ಭಯದಿಂದಲೇ ಪೂಜ್ಯಭಾವವನ್ನು ಪ್ರಕಟಿಸಿದರು. ಹಾವಿನ ಕಡಿತಕ್ಕೆ ಬಲಿಯಾಗುವ ಭಯ ಪ್ರಕೃತಿಯಲ್ಲಿ ಒಂದಾಗಿ ಬದುಕುವ ಮಾನವರಿಗೆ ನಿರಂತರ  ಕಾಡಿರಬೇಕು. ಇವುಗಳಿಂದ ರಕ್ಷಣೆ ಪಡೆಯುವ ಮಾನವರು ಮೊತ್ತಮೊದಲು ಕಂಡುಕೊಂಡ ಮಾರ್ಗ ಆರಾಧನೆ. ಎಲ್ಲಾ ಪ್ರಾಚೀನ ಸಂಸ್ಕೃತಿಗಳೂ ನಾಗಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಆರಾಧ್ಯ ಸ್ಥಾನದಲ್ಲಿರಿಸಿ ಗೌರವಿಸಿವೆ. ಗ್ರೀಕ್, ಮೆಸಪೊಟೋಮಿಯಾ ಹಾಗೂ ಮೆಡಿಟರೇನಿಯನ್ ಮೊದಲಾದ ಪುರಾತನ ಸಂಸ್ಕೃತಿಗಳಲ್ಲೂ ನಾಗಾರಾಧನೆಗೆ ಪ್ರಮುಖವಾದ ಸ್ಥಾನವಿತ್ತು ಎಂಬುದು ಅಲ್ಲಿನ ಪ್ರಾಚೀನ ಅವಶೇಷಗಳು ಪುರಾವೆಯನ್ನು ಒದಗಿಸಿವೆ. ಅಲ್ಲಿ ಸಂತಾನ ಪ್ರಾಪ್ತಿ, ರೋಗ ನಿವಾರಣೆ ಮೊದಲಾದವುಗಳಿಗಾಗಿ ನಾಗಾರಾಧನೆ ನಡೆಯುತ್ತಿತ್ತು. ಗ್ರೀಕ್ ದೇಶದ ಆರೋಗ್ಯ ದೇವತೆ ಹಿಡಿದಿರುವ ದಂಡದಲ್ಲಿ ನಾಗಲಾಂಛನ ವಿದೆ. ಇದನ್ನೇ ವೈದ್ಯಶಾಸ್ತ್ರವು ಲಾಂಛನದಲ್ಲಿ ಉಳಿಸಿಕೊಂಡಿದೆ. ಆಫ್ರಿಕಾ, ಕಾಂಬೋಡಿಯಾ, ಚೀನಾ, ಬ್ರಿಜಿಲ್ ಮೊದಲಾದ ದೇಶಗಳ ಮೂಲ ನಿವಾಸಿಗಳು ನಾಗಾರಾಧನೆಯ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದಾರೆ.

ಭಾರತದಲ್ಲಿ ವೇದಕಾಲದಿಂದಲೂ ನಾಗಾರಾಧನೆಯು ನಡೆದುಕೊಂಡು ಬಂದಿದೆ. ಆದರೆ ಪಶ್ಚಿಮ ಕರಾವಳಿಯಲ್ಲಿರುವಷ್ಟು ನಾಗನ ವೈಭವದ ಆಚರಣೆಗಳಾಗಲಿ, ನಾಗ ಬನಗಳಾಗಲಿ, ನಾಗ ಪ್ರತಿಷ್ಠೆಗಳಿರುವ ದೇವಾಲಯಗಳಾಗಲಿ ಭಾರತದಲ್ಲಿ ಬೇರೆಲ್ಲೂ ಇಲ್ಲ. ಕೇರಳ, ಕರ್ನಾಟಕವನ್ನೊಳಗೊಂಡ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ನಾಗತಂಬಿಲ, ನಾಗಸಂಸ್ಕಾರ, ನಾಗಮಂಡಲ, ಆಶ್ಲೇಷಾ ಬಲಿ, ಕಾಡ್ಯನಾಟ ಮೊದಲಾದ ಅನೇಕ ಆಚರಣಾ ವಿಧಾನಗಳಿವೆ.

ನಾಗಾರಾಧನೆಗೂ ಪಶ್ಚಿಮ ಕರಾವಳಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿರುವ ಐತಿಹ್ಯಗಳು ಪ್ರಚಲಿತದಲ್ಲಿವೆ. ಪಶ್ಚಿಮ ಕರಾವಳಿಯ ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಸಂಪೂರ್ಣವಾಗಿ ಸಮುದ್ರವೇ ಆವರಿಸಿತ್ತು. ಪರಶುರಾಮನ ಕೊಡಲಿ ಎಸೆತದಿಂದ ಸಮುದ್ರ ಹಿಂದೆ ಸರಿಯಿತು. ಆಗ ಸರ್ಪವರ್ಗದ ಜಲಜಂತುಗಳು ಇಲ್ಲಿಯೇ ನೆಲೆ ನಿಂತುವಂತೆ. ಈ ಕಾರಣಕ್ಕಾಗಿಯೇ ಈ ಪ್ರದೇಶವನ್ನು ನಾಗಖಂಡ ಎಂದು ಕರೆಯಲಾಗುತ್ತದೆ. ಪರಶುರಾಮನು ಸಮುದ್ರವನ್ನು ಹಿಂದೆ ಸರಿಸಿ ಸೃಷ್ಟಿಸಿದ ಭೂ ಪ್ರದೇಶವನ್ನು ಬ್ರಾಹ್ಮಣರಿಗೆ ದಾನ ಮಾಡಿದಾಗ ಸರ್ಪಗಳು ತಮ್ಮ ಜಾಗವನ್ನು ಬಿಟ್ಟುಕೊಡಲು ಒಪ್ಪಲಿಲ್ಲವಂತೆ. ಅವುಗಳ ಪ್ರೀತಿಗಾಗಿ ನಾಗಪೂಜೆ ನಡೆಸುವ ಸಂಪ್ರದಾಯ ಜಾರಿಗೆ ತಂದ ಮೇಲೆ ಅವು ಶಾಂತಚಿತ್ತರಾಗಿ ಸಹಬಾಳ್ವೆ ನಡೆಸಲು ಅನುಮತಿ ನೀಡಿದುವು ಎಂದು ‘ಕೇರಳೋತ್ಪತ್ತಿ’ ಎಂಬ ಮಲಯಾಳಂ ಕಾವ್ಯದಲ್ಲಿ ಹೇಳಿದೆ. ದಕ್ಷಿಣ ಕನ್ನಡದ ನಾಗಮಂಡಲದ ಹಾಡುಗಳಲ್ಲಿಯೂ ಪಾತಾಳಲೋಕದಿಂದ ನಾಗಗಳು ತಮ್ಮ ಮರಿಗಳೊಡನೆ ಬಂದು ಈ ನೆಲದಲ್ಲಿ ವಿಹರಿಸುತ್ತಿದ್ದಾಗ ಮಾನವರು ಅವುಗಳಿಗೆ ತೊಂದರೆ ಕೊಟ್ಟುದ್ದಕ್ಕಾಗಿ ಅವು ಮಾನವರಿಗೆ ರೋಗರುಜಿನ, ಸಂತತಿ ಹಾನಿ ಮುಂತಾದ ತೊಂದರೆಗಳನ್ನು ಕೊಡುತ್ತಿದ್ದುವಂತೆ. ಇದರಿಂದ ಜನರು ನಾಗಗಳ ಆರಾಧನೆ ಯನ್ನು ಮಾಡಿದ್ದರಿಂದ ಸರ್ಪಗಳು ಸಂತುಷ್ಟರಾಗಿ ಜನರಿಗೆ ಬೇಕಾದ ವರಗಳನ್ನು ಅನುಗ್ರಹಿಸಿದುವಂತೆ.

ಕರ್ನಾಟಕದ ಕರಾವಳಿಯನ್ನೂ ಒಳಗೊಂಡಂತೆ ಕೇರಳದ ಕರಾವಳಿ ತೀರದಲ್ಲಿಯೂ ನಾಗನ ಕುರಿತಾದ ನಂಬಿಕೆಗಳು ಪ್ರಬಲವಾಗಿವೆ. ಕೇರಳದಲ್ಲಿ ‘ನಾಗತಾಲಿ’ ಎಂಬ ಕೊರಳಾಭರಣವನ್ನು ಹೆಂಗಸರು ಧರಿಸುತ್ತಾರೆ. ‘ನಾಗಕೆಟ್ಟ್’ ಎಂಬ ಉಂಗುರವನ್ನು ಕೂಡಾ ಧರಿಸುವುದಿದೆ. ವಿಷವನ್ನು ನಿವಾರಿಸಲು ಈ ಉಂಗುರವನ್ನು ಬಳಸಲಾಗುತ್ತದಂತೆ. ಸರ್ಪದ ಚಿತ್ರಗಳನ್ನು ಮಂಡಲಗಳಲ್ಲಿ ಬರೆದು ಪೂಜಿಸುತ್ತಾರೆ. ಸರ್ಪವನ್ನು ಮೈಮೇಲೆ ಆವಾಹನೆ ಮಾಡಿಕೊಳ್ಳುವವರೂ ಇದ್ದಾರೆ. ಸತ್ತ ಸರ್ಪವನ್ನು ಕಂಡರೆ ಶ್ರೀಗಂಧದ ಕಟ್ಟಿಗೆಯಲ್ಲಿ ಸುಟ್ಟು ಸಂಸ್ಕಾರವನ್ನು ನೆರವೇರಿಸುವ ಸಂಪ್ರದಾಯವಿದೆ. ಸರ್ಪ ವಿಷದ ನಿವಾರಣೆಯ ಸಿದ್ದಿಯನ್ನು ಪಡೆಯುವ ಸಲುವಾಗಿ ಸರ್ಪಗಳನ್ನು ಮನೆಗಳಲ್ಲಿ ಸಾಕುವವರೂ ಇದ್ದಾರೆ. ನಾಗಪ್ರತಿಷ್ಠೆಯ ಆರಾಧನಾ ಕೇಂದ್ರಗಳು ಕರಾವಳಿ ತೀರದಲ್ಲಿ ಬಹಳಷ್ಟಿವೆ. ಸರ್ಪ ನೃತ್ಯದಲ್ಲಿ ಸರ್ಪನ ಪ್ರತಿರೂಪದ ಶಿರೋಭೂಷಣಗಳನ್ನು ಕಟ್ಟಿಕೊಂಡು ಕುಣಿಯುವ ಪದ್ಧತಿ ಇದೆ. ಕರ್ನಾಟಕದ ಕರಾವಳಿ ತೀರದಲ್ಲಿ ನಾಗಾರಾಧನೆಯ ಆಚರಣೆಗಳೆಲ್ಲ ವೈದಿಕ ಕ್ರಿಯೆಗಳ ಮೂಲಕ ಬ್ರಾಹ್ಮಣ ಸಮುದಾಯದವರೇ ನಡೆಸಿಕೊಡುತ್ತಾರೆ. ಆದರೆ ಕೇರಳದಲ್ಲಿ ಪುಳ್ಳುವರ್ ಎಂಬ ದಲಿತ ಜನಾಂಗದವರೇ ನಾಗಾರಾಧನೆಯ ಮೂಲಕ ಅನೇಕ ಸಿದ್ದಿಗಳನ್ನು ಪಡೆದು ಕೊಂಡವರು. ನಾಗಾರಾಧನೆಯ ಆಚರಣೆಯ ಪೌರೋಹಿತ್ಯಗಳನ್ನೆಲ್ಲ ನಿರ್ವಹಿಸುವುದು ಪುಳ್ಳುವರ್ ಜನಾಂಗದ ಹಕ್ಕು. ಪುಳ್ಳುವರ್ ಜನಾಂಗದವರು ಸರ್ಪಸಿದ್ದಿ ಹಾಗೂ ಆಚರಣೆಗಳ ಅಧಿಕಾರ ಪಡೆದ ಬಗೆಗೆ ಒಂದು ಐತಿಹ್ಯವಿದೆ.

ಪಾಂಡವರು ಖಾಂಡವ ದಹನವನ್ನು ಮಾಡಿದಾಗ  ಅಲ್ಲಿದ್ದ ಹಲವಾರು ನಾಗಗಳು ನಾಶವಾದುವು. ಅವುಗಳಲ್ಲಿ ವಾಸುಕಿ ಎಂಬ ಸರ್ಪವು ಬೆಂಕಿಯಿಂದ ಹಾರಿ ಕೇರಳದ ಕುಟ್ಟನಾಡು ಎಂಬ ಸ್ಥಳದಲ್ಲಿ ಹೋಗಿ ಬಿತ್ತು. ಆ ಸಂದರ್ಭದಲ್ಲಿ ಪುಳ್ಳುವ ಜನಾಂಗಕ್ಕೆ ಸೇರಿದ ಹೆಂಗಸರು ಬಾವಿಯಿಂದ ನೀರನ್ನು ತರುತ್ತಿದ್ದರಂತೆ. ಅವರು ವಾಸುಕಿಗೆ ಕುಡಿಯಲು ನೀರು ಕೊಟ್ಟು ದಾಹವನ್ನು ಇಂಗಿಸಿದರಂತೆ. ಆ ಬಳಿಕ ಅದು ಅವರ ಗಡಿಗೆಯೊಳಗೆ ಸೇರಿಕೊಂಡು ಮನೆ ಸೇರಿತು. ಗಡಿಗೆಯನ್ನು ಕೋಣೆಯೊಳಗಿರಿಸಿದಾಗ ಅದು ಅಲ್ಲಿ ಹುತ್ತ ಕಟ್ಟಿ ವಾಸ ಮಾಡತೊಡಗಿತು. ಆ ಬಳಿಕ ಅದು ತನ್ನನ್ನು ರಕ್ಷಿಸಿದ ಪುಳ್ಳುವರ್ ಜನಾಂಗಕ್ಕೆ ವಿಷ ಶಮನ ಮಾಡುವ ಶಕ್ತಿಯನ್ನು ಅನುಗ್ರಹಿಸಿತಂತೆ. ಅಷ್ಟೇ ಅಲ್ಲದೆ ಅವರಿಗೆ ಸರ್ಪದ ಹಾಡು ಹೇಳಿ ಕುಣಿಯುವ, ಕುಣಿಸುವ ಹಾಗೂ ಸರ್ಪಶಾಪವನ್ನು ಪರಿಹರಿಸುವ ಅಧಿಕಾರವನ್ನು ಕೊಟ್ಟಿತು. ಈಗಲೂ ಪುಳ್ಳವ ಜನಾಂಗದವರು ನೆಲದಲ್ಲಿ ಆಯತಾಕಾರದ ಚೌಕಟ್ಟಿನೊಳಗಡೆ ಪಂಚವರ್ಣಗಳಿಂದ ಸರ್ಪ ಮಂಡಲವನ್ನು ಬರೆದು ಸರ್ಪಹಾಡ(ಸರ್ಪಪಾಟು)ನ್ನು ಹಾಡುತ್ತಾರೆ. ಸರ್ಪಹಾಡಿನ  ಸಂದರ್ಭದಲ್ಲಿ ತಲೆಗೂದಲನ್ನು ನಾಗನ ಹೆಡೆಯಂತೆ ಗಂಟುಹಾಕಿ ಕೊಂಡು ಕೈಯಲ್ಲಿ ಸಿಂಗಾರವನ್ನು ಹಿಡಿದುಕೊಂಡು ನಾಗದೈವಗಳೇ ಮೈಮೇಲೆ ಬಂದಂತೆ, ಬಾಯಿಗೆ ಅಂಗೈಯಿಂದ ಬಡಿದುಕೊಂಡು ವಿಚಿತ್ರವಾದ ಧ್ವನಿ ಹೊರಡಿಸುತ್ತಾರೆ. ಮುಖ್ಯವಾಗಿ ನಾಗರಾಜ, ನಾಗಯಕ್ಷ, ಕರಿನಾಗ, ಪಿಣಿಯಾಳ್‌ನಾಗ ಮುಂತಾದ ನಾಗದೈವಗಳ ಆವೇಶಗಳು ಮೈಮೇಲೆ ಬರುತ್ತವೆ. ನಾಗದೇವತೆಯು ಮೈಮೇಲೆ ಬಂದ ವ್ಯಕ್ತಿಯು ಮಂಡಲದ ಮೇಲೆ ಬಿದ್ದುಕೊಂಡು ನಾಗನಂತೆ ತೆವಳುತ್ತಾ, ಹೊರಳುತ್ತಾ ಬುಸುಗುಡುತ್ತಿರುತ್ತಾನೆ. ಹೂಂಕಾರ ಮಾಡುತ್ತಾ ಮಂಡಲದ ತಳದಿಂದ ಸುತ್ತೆಲ್ಲ ಉರುಳಾಡುತ್ತಾನೆ. ಮೈಮೇಲೆ ಬಂದ ಇತರರೂ ಸಹ ಅವನನ್ನು ಅನುಸರಿಸುತ್ತಾರೆ. ಹೆಂಗುಸರು ಹುಡುಗಿಯರೆನ್ನದೆ ಎಲ್ಲರೂ ಇದರಲ್ಲಿ ಭಾಗವಹಿಸುತ್ತಾರೆ.