ಕರ್ನಾಟಕದ ಜನಪದ ರಂಗಭೂಮಿಯಲ್ಲಿ ಯಕ್ಷಗಾನವು ಪ್ರಮುಖ ಸ್ಥಾನವನ್ನು ಹೊಂದಿದೆ. ಇದು ಬೇರೆ ಬೇರೆ ಹೆಸರುಗಳಿಂದ ಕರ್ನಾಟಕದಾದ್ಯಂತ ಪ್ರಚಲಿತವಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮೊದಲಾದ ಪ್ರಾಂತಗಳಲ್ಲೂ ಯಕ್ಷಗಾನಕ್ಕೆ ಸಾದೃಶ್ಯವಿರುವ ಕಲೆಗಳು ಪ್ರಚಲಿತದಲ್ಲಿದ್ದು, ಈ ಕಲೆ ದ್ರಾವಿಡ ಮೂಲವಾದದ್ದು ಎಂಬುದಕ್ಕೆ ಸಾಕ್ಷಿಯಾಗಿವೆ. ಆಂಧ್ರ ಪ್ರದೇಶದ ಕೂಚಿಪುಡಿ, ಬೀದಿನಾಟಕ, ತಮಿಳುನಾಡಿನ ಭಾಗವತ ಮೇಳ, ತೆರುಕೂತ್ತು, ಕೇರಳದ ಕೃಷ್ಣನಾಟಂ, ಕೂಡಿಯಾಟಂ, ಕಥಕಳಿ ಮೊದಲಾದ ಕಲೆಗಳು  ಯಕ್ಷಗಾನದ  ಸೋದರ ಕಲೆಗಳಾಗಿ ದಕ್ಷಿಣ ಭಾರತದಲ್ಲಿ ಬೆಳೆದು ಬಂದಿವೆ. ಯಕ್ಷಗಾನವೆಂಬ ದೃಶ್ಯಪ್ರಯೋಗ ಪದ್ಧತಿಯು ವಿವಿಧ ರೂಪಗಳಲ್ಲಿ, ಹೆಸರುಗಳಲ್ಲಿ ಉತ್ತರ ಭಾರತದ ಕೆಲವು ಪ್ರಾಂತಗಳಲ್ಲೂ, ನೆರೆಯ ಶ್ರೀಲಂಕಾ ದೇಶದಲ್ಲೂ ಕಂಡುಬರುತ್ತದೆ. ಅಸ್ಸಾಮಿನ ಆಂಕಿಯಾನಾಟಕ, ಬಂಗಾಳದ ಜಾತ್ರಾ, ಮಹಾರಾಷ್ಟ್ರದ ತಮಾಷಾ, ಒರಿಸ್ಸಾದ ಚೌ ಮೊದಲಾದ ನೃತ್ಯ ಪ್ರಕಾರಗಳು ಇದೇ ಬಗೆಯ ರಂಗಭೂಮಿ ಸಂಪ್ರದಾಯವೆಂದು ಶಿವರಾಮ ಕಾರಂತರು ಹೇಳಿದ್ದಾರೆ (೧೯೭೪ : ೧೩).

ಹಾಡು, ಕುಣಿತ, ಬಣ್ಣ, ವೇಷ, ಮಾತು, ಅಭಿನಯ ಮೊದಲಾದ ರಂಗಭೂಮಿಯ ಎಲ್ಲ ಅಂಶಗಳನ್ನು ಹೊಂದಿರುವ ಯಕ್ಷಗಾನವು ಒಂದು ಸಂಕೀರ್ಣ  ರಂಗಕಲೆಯಾಗಿದೆ. ಯಕ್ಷಗಾನದ ಮೂಲ, ಪ್ರಾಚೀನತೆ,  ಸ್ವರೂಪಗಳ ಕುರಿತು ಅನೇಕ ಚರ್ಚೆಗಳು ನಡೆದಿವೆ, ನಡೆಯುತ್ತಿವೆ. ಯಕ್ಷ ಮತ್ತು ಗಾನ ಎಂಬ ಎರಡು ಪದಗಳು ಸೇರಿ ಉಂಟಾದ ‘ಯಕ್ಷಗಾನ’ ಎಂಬ ಸಮಸ್ತ ಪದದ ಕುರಿತು ಅನೇಕ ವಿದ್ವಾಂಸರು ಜಿಜ್ಞಾಸೆಯನ್ನು ನಡೆಸಿದ್ದಾರೆ.

ಇಂದು ನಾವು ಯಕ್ಷಗಾನ ಎಂಬ ಪದವನ್ನು ಒಂದು ರಂಗಸಂಪ್ರದಾಯಕ್ಕೆ ಬಳಸುತ್ತಿದ್ದೇವಾದರೂ, ಅದು ಮೂಲದಲ್ಲಿ ಒಂದು ಸಂಗೀತ ಶೈಲಿಗಷ್ಟೆ ಅನ್ವಯಿಸುತ್ತಿತ್ತು. ಹಲವಾರು ಶತಮಾನಗಳ ಹಿಂದೆ ಅದು ಇಂದಿನ ಹಿಂದುಸ್ಥಾನಿ ಮತ್ತು ಕರ್ನಾಟಕೀ ಪದ್ಧತಿಯ ಗಾನಶೈಲಿಯಂತೆಯೇ ಪ್ರತ್ಯೇಕವಾದೊಂದು ಗಾನಶೈಲಿ ಎನಿಸಿಕೊಂಡಿತ್ತು (೧೯೭೪ : ೫೩) ಎಂಬ ಶಿವರಾಮ ಕಾರಂತರ ಮಾತು ಗಮನಿಸಬೇಕಾದುದು. ‘ಎಕ್ಕಲಗಾಣ’ವೇ ಯಕ್ಷಗಾನಕ್ಕೆ ಮೂಲವಾಗಿರಬೇಕೆಂದು ಅವರು ಊಹಿಸಿದ್ದಾರೆ.

ಯಕ್ಷಗಾನವೆಂಬ ಗಾನಪದ್ಧತಿಯು ಕರ್ನಾಟಕದ ವಿವಿಧ ಭಾಗಗಳಲ್ಲಿ ಕ್ರಿ.ಶ. ಹನ್ನೊಂದನೇ  ಶತಮಾನದಿಂದಲೂ ಪ್ರಚಾರದಲ್ಲಿದ್ದಂತೆ ಕಾಣುತ್ತದೆ. ಕೆಲವು ಪ್ರಾಚೀನ ಸಂಗೀತ ಗ್ರಂಥಗಳಲ್ಲಿಯೂ ಯಕ್ಷಗಾನದ ಉಲ್ಲೇಖ ಕಂಡು ಬರುತ್ತದೆ. ಸಂಗೀತ ರತ್ನಾಕರವನ್ನು ಬರೆದ ಸಾರ್ಙದೇವನು ‘ಜಕ್ಕೆ’ ಎಂಬ ಪದದಿಂದ ಈ ಸಂಗೀತ ಶೈಲಿಯನ್ನು ಗುರುತಿಸಿದ್ದಾನೆ. ಜಕ್ಕೆ ಎಂಬ ಪದವು ಸಂಸ್ಕೃತದ ‘ಯಕ್ಷ’ ಪದದ ತದ್ಭವ ವೆಂಬುದು ವಿದ್ವಾಂಸರ ಅಭಿಪ್ರಾಯ. ಸಂಗೀತ ಶಾಸ್ತ್ರಕಾರನಾದ ಗೋವಿಂದ ದೀಕ್ಷಿತನೂ ಯಕ್ಷಗಾನ ಎಂಬ ಗಾನಶೈಲಿಯ ಕುರಿತು ಹೇಳಿದ್ದಾನೆ. ನಾಗಚಂದ್ರನ ಮಲ್ಲಿನಾಥ ಪುರಾಣದಲ್ಲಿ ‘ಎಕ್ಕಲಗಾಣ’ ಎಂಬ ಪದ ಬಳಕೆಯಾಗಿದೆ. ಹದಿನಾರನೇ ಶತಮಾನದ ಕವಿ ರತ್ನಾಕರ ವರ್ಣಿಯು ತನ್ನ ‘ಭರತೇಶವೈಭವ’ ಕಾವ್ಯದಲ್ಲಿ ‘ಯಕ್ಕಲಗಾಣ’ ಮತ್ತು ‘ಯಕ್ಕಡಿಗರ್’ ಎಂಬೆರಡು ಪದಗಳನ್ನು ಬಳಸಿದ್ದಾನೆ. ರತ್ನಾಕರನ ಕಾವ್ಯದಲ್ಲಿ ಈ ಯಕ್ಕಲಗಾಣನು ಶ್ರುತಿ, ತಾಳ, ಮದ್ದಳೆಗಳೊಂದಿಗೆ ಹಾಡುತ್ತಿದ್ದನೆಂಬ ವರ್ಣನೆ ಬರುತ್ತದೆ. ಆದುದರಿಂದ ಎಕ್ಕಲಗಾಣವು ಒಂದು ಸಂಗೀತ ಶೈಲಿಯಾಗಿರಬೇಕೆಂದೂ, ಆ ಗಾನಶೈಲಿಯೇ ಕುಣಿತ, ವೇಷಭೂಷಣಗಳನ್ನು ಅಳವಡಿಸಿಕೊಂಡು ಬೆಳೆದು ಯಕ್ಷಗಾನ ಆಟವಾಗಿರಬೇಕೆಂದೂ ಊಹಿಸಬಹುದು. ‘ಕರ್ನಾಟಕದ ಹಲವು ಭಾಗಗಳಲ್ಲಿ ಯಕ್ಷಗಾನ ರಂಗಭೂಮಿಯು ಹದಿನಾರನೇ ಶತಮಾನದಿಂದಲಾದರೂ ರೂಢಿಯಲ್ಲಿ ಇದ್ದಿರಬಹುದು, ಅಲ್ಲದೆ ಅದು, ಸಾಕಷ್ಟು ನೃತ್ಯಪ್ರಧಾನ ನಾಟಕವಾಗಿಯೂ ಇದ್ದಿರಬೇಕು’ (೧೯೭೪ : ೧೪) ಎಂಬ ಮಾತಗಳನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬಹುದು.

ಹದಿನಾರನೆಯ ಶತಮಾನದ ಅವಧಿಯಲ್ಲಿ ಕರ್ನಾಟಕದ ಬಹುಭಾಗವನ್ನು ವಿಜಯನಗರದ ಅರಸರು ಆಳಿಕೊಂಡಿದ್ದರು. ಅವರ ರಾಜಧಾನಿ ವಿಜಯನಗರವು  ಇರುವ ಬಳ್ಳಾರಿ ಜಿಲ್ಲೆಯ ಸೋಮಸಮುದ್ರ ಎಂಬಲ್ಲಿನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಒಂದು ಹಳೆಯ ದಾನ ಶಾಸನ ಸಿಕ್ಕಿದೆ. ಇದರ ಕಾಲ ಕ್ರಿ.ಶ.ಸು. ೧೫೫೬. ಈ ಶಾಸನವು ಆ ದೇವಾಲಯದಲ್ಲಿ ತಾಳಮದ್ದಲೆ ಸೇವೆಯನ್ನು ನಡೆಸಿದ ಇಬ್ಬರು ಬ್ರಾಹ್ಮಣರಿಗೆ ಉಂಬಳಿ ಕೊಟ್ಟ ದಾಖಲೆಯನ್ನು ಹೊಂದಿದೆ. ತಾಳಮದ್ದಲೆ ಎಂಬುದು ಯಕ್ಷಗಾನದ ಒಂದು ರೂಪ. ಅದರಲ್ಲಿ ಪದ್ಯವನ್ನು ಹಾಡುವ ಭಾಗವತನ ಸುತ್ತಲೂ ಪಾತ್ರಧಾರಿಗಳು ಕುಳಿತು ಮಾತಿನ ಮೂಲಕ ಕಥಾನಕವನ್ನು ಪ್ರೇಕ್ಷಕರಿಗೆ ಸಂವಹನಗೊಳಿಸುತ್ತಾರೆ. ಯಕ್ಷಗಾನದ ವೇಷಭೂಷಣಗಳಿಲ್ಲದೆ, ಕುಣಿತದ ಹಂಗಿಲ್ಲದೆ ಸಾಮಾನ್ಯ ಉಡುಗೆಯಲ್ಲಿ ಕುಳಿತುಕೊಂಡು ಪಾತ್ರಧಾರಿಗಳು ಯಕ್ಷಗಾನದ ಪೌರಾಣಿಕ ಆವರಣವನ್ನು ಸೃಷ್ಟಿಸುತ್ತಾರೆ. ಸೋಮಸಮುದ್ರದ ಯಕ್ಷಗಾನ ತಾಳಮದ್ದಳೆಯೇ ಶಾಸನದಲ್ಲಿ ದಾಖಲಾಗಿರುವ ತಾಳಮದ್ದಳೆ  ಸೇವೆಯು ಎಂದು ಹೇಳಲು ಆಧಾರಗಳಿಲ್ಲ. ಮಾತ್ರವಲ್ಲ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆ ಇವುಗಳಲ್ಲಿ ಯಾವುದು ಮೊದಲು ಎಂಬ ಬಗ್ಗೆಯೂ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಹೀಗೆ, ಯಕ್ಷಗಾನವು ಹಿಂದೆ ಒಂದು ಗಾನಶೈಲಿಯಾಗಿದ್ದು, ದೇವಾಲಯ ಪರಿಸರದಲ್ಲಿ ಬೆಳೆದು ಬಂದಿರಬೇಕು. ನಂತರದ ದಿನಗಳಲ್ಲಿ ಕ್ರಮೇಣ ಈ ಗಾನಶೈಲಿಗೆ ವಾಚಿಕದ ಅಂಶವು ಸೇರಿ ತಾಳಮದ್ದಳೆಯಾಗಿರಬಹುದು. ಮುಂದೆ ಪ್ರತಿಭಾವಂತರ ಸೇರ್ಪಡೆಯೊಂದಿಗೆ, ಇತರ ಜನಪದ ಕಲೆಗಳ ಪ್ರಭಾವದಿಂದ ವೇಷಭೂಷಣ, ಬಣ್ಣಗಾರಿಕೆ ಮತ್ತು ಕುಣಿತಗಳನ್ನು ಅಳವಡಿಸಿಕೊಂಡು ಯಕ್ಷಗಾನ ಬಯಲಾಟವಾಗಿ ರೂಪು ಪಡೆದಿರ ಬಹುದು.

ಜಗತ್ತಿನ ಬಹುತೇಕ ಎಲ್ಲ ಪ್ರಾಚೀನ ಕಲೆಗಳೂ ಒಂದಲ್ಲ ಒಂದು ಬಗೆಯ ಆರಾಧನೆಯ ಅಂಗವಾಗಿ ರೂಪುಗೊಂಡಿರುವುದಾಗಿ ಆಯಾ ಕಲೆಯ ಇತಿಹಾಸವನ್ನು ಗಮನಿಸಿದಾಗ ತಿಳಿಯುತ್ತದೆ. ನಮ್ಮ ದೇಶದಲ್ಲಿ ರೂಢಿಯಲ್ಲಿರುವ ಜನಪದ ಹಾಗೂ ಅಭಿಜಾತ ನೃತ್ಯಾದಿ ಕಲೆಗಳಿಗೆ ಧಾರ್ಮಿಕ ಸಂಬಂಧವಿರುವುದು ಮಾತ್ರವಲ್ಲ ಆರಾಧನೆಗೆ ಸಂಬಂಧಿಸಿದ ಅನೇಕ ಮತೀಯ ಆಚರಣೆಗಳು ಇಂತಹ ಕಲೆಗಳಲ್ಲಿ ಸೇರಿಕೊಂಡಿರುವುದನ್ನು ಕಾಣಬಹುದು. ಧಾರ್ಮಿಕ ಆಚರಣೆಗಳಲ್ಲಿ  ಮನರಂಜನೆಗೂ ಸ್ಥಾನವಿದೆ. ರಂಜನೆಯಿಲ್ಲದ ಧಾರ್ಮಿಕತೆ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತದೆ. ಹೀಗೆ ಕಲೆ ಮತ್ತು ಧಾರ್ಮಿಕ ಆಚರಣೆಗಳು ಪರಸ್ಪರ ಹೊಂದಾಣಿಕೆಯಿಂದ ಬೆಳೆದು ಬಂದಿವೆ. ಯಕ್ಷಗಾನ ಕಲೆಯೂ ಇದಕ್ಕೆ ಹೊರತಲ್ಲ.

ಯಕ್ಷೋಪಾಸನೆಯೇ ಯಕ್ಷಗಾನ ಕಲೆಗೆ ಮೂಲ ಹಾಗೂ ಪ್ರೇರಕವಾಗಿರಬೇಕೆಂದು ಅಮೃತ ಸೋಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ (೧೯೯೫ : ೩). ಭಾರತದ ಅನೇಕ ಪ್ರಾಚೀನ ದೇವಸ್ಥಾನಗಳಲ್ಲಿ ಯಕ್ಷ ಯಕ್ಷಿಣಿಯರ ಪ್ರತಿಮೆಗಳಿವೆ. ಬೌದ್ಧರಿಗೂ, ಜೈನರಿಗೂ ಯಕ್ಷ ಯಕ್ಷಿಯರಲ್ಲಿ ಪೂಜ್ಯ ಭಾವನೆ ಇದ್ದುದು ಆಯಾ ಮತೀಯ ಸಾಹಿತ್ಯದಿಂದಲೂ, ಶಿಲ್ಪಗಳಿಂದಲೂ ತಿಳಿದು ಬರುತ್ತದೆ. ನಾಗನನ್ನೂ, ಯಕ್ಷಿಯನ್ನೂ ಸಮೀಕರಿಸಿ ನಾಗಯಕ್ಷಿಯ ರೂಪದಲ್ಲಿ ಪೂಜಿಸುವ ಸಂಪ್ರದಾಯವನ್ನು ನಾಗಮಂಡಲ, ಢಕ್ಕೆಬಲಿ ಮೊದಲಾದ ನಾಗಾರಾಧನೆಯ ಆಚರಣೆಗಳಲ್ಲಿ ಕಾಣಬಹುದು. ಶ್ರೀಲಂಕಾದಲ್ಲಿ ಯಕ್ಷ ಪೂಜೆಯು ಇಂದಿಗೂ ಜೀವಂತವಾಗಿದೆ. ಯಕ್ಷಾರಾಧನೆಯ ವಿಸ್ತೃತ ರೂಪವನ್ನು ಅಲ್ಲಿನ ಜನಪದ ನೃತ್ಯಗಳಲ್ಲಿ ಕಾಣಬಹುದು. ಸಿಂಹಳದ ಕೋಲಂ, ಸೋಂಕಾರಿ, ನಾಡಗಂ ಮೊದಲಾದ ನೃತ್ಯನಾಟಕಗಳು ಯಕ್ಷಗಾನ ಕಲೆಗೆ ನಿಕಟವಾಗಿವೆ. ದಕ್ಷಿಣ ಭಾರತದ ವಿವಿಧ ಕಲಾ ಪ್ರಕಾರಗಳಿಗೂ, ಸಿಂಹಳದ ಕಲೆಗಳಿಗೂ ಪರಸ್ಪರ ಸಾದೃಶ್ಯ ಮತ್ತು ಸಂಬಂಧವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಸಿಂಹಳದಲ್ಲಿ ಯಕ್ಷಾರಾಧನೆಯಿಂದಲೇ ನಾಟಕ ಪದ್ಧತಿ ತೊಡಗಿರುವುದರಿಂದಲೂ, ಇಲ್ಲಿಯೂ ಯಕ್ಷ ಪೂಜೆಯಿಂದಲೇ, ಯಕ್ಷಗಾನ ಹಾಗೂ ಅದರ ಜ್ಞಾತಿಕಲೆಗಳ ವಿಕಾಸವಾಗಿರಬಹುದು (೧೯೯೫ : ೯) ಎಂಬ ಮಾತನ್ನು ಇಲ್ಲಿ ಗಮನಿಸಬೇಕು.

ಧಾರ್ಮಿಕ ಪ್ರಭಾವ

ಭಾರತದ ಬಹುತೇಕ ಕಲೆಗಳ ವಿಕಾಸಕ್ಕೆ ದೇವಾಲಯಗಳೇ ಕಾರಣ. ಇಲ್ಲಿನ ಕಲೆಗಳ ಮೇಲೆ ದೇವಾಲಯಗಳ ಶಿಲ್ಪಕಲೆ, ವಾಸ್ತು, ಚಿತ್ರಕಲೆ, ಪೂಜಾಕ್ರಮಗಳು, ಉತ್ಸವಾದಿ ಸಂದರ್ಭಗಳ ಅಲಂಕಾರಗಳು ಪ್ರಭಾವವನ್ನು ಬೀರಿವೆ. ಕಲೆ, ಧರ್ಮ ಮತ್ತು ಸಂಸ್ಕೃತಿಗಳು ಯಾವತ್ತೂ ಪರಸ್ಪರ ಪೂರಕ ಮತ್ತು ಪೋಷಕಗಳಾಗಿವೆ. ಈ ಮೂರು ಘಟಕಗಳೂ ಮಾನವನ ಅಂತರಂಗದ ವಿಕಾಸಕ್ಕೆ ಸಹಕಾರಿಯಾದವುಗಳು. ಹಾಗಾಗಿ ಧಾರ್ಮಿಕ ಕೇಂದ್ರಗಳ ಮೂಲಕವೇ ನಮ್ಮ ಕಲೆ, ಸಂಸ್ಕೃತಿಗಳು ಬೆಳೆದು ಬಂದುವು.

ಯಕ್ಷಗಾನದ ಇತಿಹಾಸವನ್ನು ಅವಲೋಕಿಸಿದಾಗ ಈ ಕಲೆಯು ದೇವಾಲಯದ ಕಲೆ ಯಾಗಿ ಬೆಳೆದು ಬಂದಿರುವುದು ಗೋಚರಿಸುತ್ತದೆ. ದೇವಸ್ಥಾನಗಳ ಹೆಸರುಗಳಲ್ಲಿ ದೇವಸ್ಥಾನಗಳಿಂದಲೇ ಯಕ್ಷಗಾನ ಮೇಳಗಳು ತಿರುಗಾಟಕ್ಕೆ ಹೊರಡುವುದು, ದೇವರ ಸೇವೆಯೆಂದು ಜನರು ಹರಕೆಯ ಆಟಗಳನ್ನು ಆಡಿಸುವುದು, ಯಕ್ಷಗಾನ ಪ್ರದರ್ಶನಗಳಲ್ಲಿ ಧಾರ್ಮಿಕ, ಪೌರಾಣಿಕ, ಮಹಾಪುರುಷರ ಚರಿತ್ರೆಗಳನ್ನು ಬಿತ್ತರಿಸುವುದು, ಯಕ್ಷಗಾನ ಪೂರ್ವರಂಗದ ದೇವತಾಸ್ತುತಿ, ಚೌಕಿಪೂಜೆ, ಮೇಳದ ದೇವರು ಇವೆಲ್ಲ ಯಕ್ಷಗಾನದ ಧಾರ್ಮಿಕ ಮುಖಗಳಾಗಿವೆ.

ಧಾರ್ಮಿಕ ಆಂದೋಲನಗಳ ಪರಿಣಾಮವಾಗಿ ಈ ದೃಶ್ಯಕಲೆಯಲ್ಲಿ ಆಯಾ ಕಾಲಘಟ್ಟ ದಲ್ಲಿ ಅನೇಕ ಬದಲಾವಣೆಗಳುಂಟಾಗಿವೆ. ಶೈವ ಮತ್ತು ವೈಷ್ಣವ ಪಂಥಗಳ ಮೇಲಾಟದ ಸಂದರ್ಭದಲ್ಲಿ ಆಯಾ ಸಂಪ್ರದಾಯಕ್ಕೆ ಸಂಬಂಧಪಟ್ಟ  ದೇವರ ಮಹಿಮೆಯನ್ನು ಪ್ರಚುರಗೊಳಿಸಲು ಯಕ್ಷಗಾನ ಕಲಾ ಮಾಧ್ಯಮವನ್ನು ಬಳಸಿಕೊಂಡರು. ಇದರಿಂದಾಗಿ ಯಕ್ಷಗಾನದ ಪ್ರಸಂಗ, ವೇಷಭೂಷಣ, ಮುಖವರ್ಣಿಕೆಗಳಲ್ಲಿ ಕಾಲ ಕಾಲಕ್ಕೆ ಬದಲಾವಣೆ ಗಳಾದುವು.

ಯಕ್ಷಗಾನ ಬಯಲಾಟಕ್ಕೆ ದಶಾವತಾರ ಆಟವೆಂದು ಹೆಸರಿರುವುದರಿಂದಲೂ, ಅದರ ಸೂತ್ರಧಾರನನ್ನು ‘ಭಾಗವತ’ ಎಂಬುದಾಗಿ ಕರೆಯುವುದರಿಂದಲೂ ಈ ದೃಶ್ಯಕಲೆಯ ಮೇಲೆ ಆಗಿರುವ ವೈಷ್ಣವ ಪಂಥದ ಪ್ರಭಾವವನ್ನು ಗುರುತಿಸಿಕೊಳ್ಳಬಹುದು. ಆದರೆ ಶೈವ ಪಂಥದವರೂ ಯಕ್ಷಗಾನ ಮಾಧ್ಯಮವನ್ನು ಬಳಸಿಕೊಂಡಿದ್ದು ತ್ರಿಪುರದಹನ, ಕಾಮದಹನ ಮೊದಲಾದ ಶಿವಲೀಲೆಯ ಪ್ರಸಂಗಗಳು ಇದಕ್ಕೆ ಉದಾಹರಣೆಯಾಗಿವೆ. ಯಕ್ಷಗಾನದ ಮುಖವರ್ಣಿಕೆಯಲ್ಲಿ ವೈಷ್ಣವನಾಮ ಮತ್ತು ಲಿಂಗನಾಮವೆಂಬ ಪ್ರಭೇದವೂ, ಚಕ್ರ ಹಾಗೂ ಮುದ್ರೆಗಳನ್ನು ಬರೆಯುವ ಪದ್ಧತಿಯೂ, ಪಾತ್ರಗಳನ್ನು ವೈಷ್ಣವ ಮತ್ತು ಶೈವ ಪಾತ್ರಗಳೆಂದು ವಿಭಜಿಸುವ ರೀತಿಯಲ್ಲಿ ಧಾರ್ಮಿಕ ಪ್ರಭಾವನ್ನು ಗುರುತಿಸಬಹುದು. ಯಕ್ಷಗಾನವು ಏಕಕಾಲಕ್ಕೆ ದೃಶ್ಯ ಹಾಗೂ ಶ್ರವ್ಯ ಮಾಧ್ಯಮವಾಗಿ ಬೆಳೆದು ಬಂದುದರಿಂದ ಧಾರ್ಮಿಕ ಪಾವಿತ್ರ್ಯದ ಜತೆಗೆ ಜನರಿಗೆ ಮನರಂಜನೆಯನ್ನು ಒದಗಿಸುವ ಕಲಾಪ್ರಕಾರವಾಗಿಯೂ ಬೆಳೆದು ಬಂತು. ಕರಾವಳಿ ಪ್ರದೇಶದ ನಾಗಾರಾಧನೆ, ಬೂತೊಕೋಲೊಗಳಂತಹ ಜನಪದ ಆರಾಧನಾ ಪದ್ಧತಿಗಳು ಯಕ್ಷಗಾನದ ಮೇಲೆ ಬೀರಿದ ಪ್ರಭಾವವನ್ನು ವಿದ್ವಾಂಸರು ಗುರುತಿಸಿದ್ದಾರೆ. ಯಕ್ಷಗಾನದ ಹಾಡು, ಬಣ್ಣ, ವೇಷ ಮತ್ತು ಕುಣಿತಗಳಲ್ಲಿ ಈ ಪ್ರಭಾವಗಳು ನಿಚ್ಚಳವಾಗಿವೆ.

ಯಕ್ಷಗಾನ ಬಯಲಾಟದ ಪ್ರಭೇದಗಳು

ವಿವಿಧ ಕ್ಷೇತ್ರಗಳಿಂದ ಅನೇಕ ಅಂಶಗಳನ್ನು ಸ್ವೀಕರಿಸಿಕೊಂಡು ಪುಷ್ಟವಾಗಿ ಬೆಳೆದು ಬಂದ ಯಕ್ಷಗಾನವು ಕರ್ನಾಟಕದ ಹೆಮ್ಮೆಯ ಕಲೆಯಾಗಿದೆ. ಆದರೆ ಪ್ರಾದೇಶಿಕವಾಗಿ ಹಲವಾರು ವ್ಯತ್ಯಾಸಗಳಿರುವ ಹಾಗೂ ಸಾದೃಶ್ಯಗಳೂ ಇರುವ ಕಲೆಗಳನ್ನು ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಇವೆಲ್ಲವನ್ನು ಇಂದು ಯಕ್ಷಗಾನ ಎಂಬ ಹೆಸರಿನಿಂದ ಗುರುತಿಸ ಲಾಗುತ್ತದೆ. ಎಲ್ಲ ಕಡೆಯಲ್ಲೂ ಭಾಗವತ, ಹಾಡು, ಹಿಮ್ಮೇಳ, ಪೂರ್ವರಂಗ, ವೇಷ, ಬಣ್ಣ, ಕುಣಿತ ಇತ್ಯಾದಿ ವೈಶಿಷ್ಟ್ಯಗಳೆಲ್ಲ ಇದ್ದರೂ ಅಲ್ಪ ಸ್ವಲ್ಪ ವೈದೃಶ್ಯಗಳೊಂದಿಗೆ ಹಲವಾರು ‘ತಿಟ್ಟು’ಗಳಾಗಿ, ‘ಪಾಯ’ಗಳಾಗಿ ಕವಲೊಡೆದಿವೆ ಎಂಬುದೇ ಇದರ ಹಿಂದಿನ ತಿಳುವಳಿಕೆ.

ಕರ್ನಾಟಕದ ಯಕ್ಷಗಾನ ಬಯಲಾಟದಲ್ಲಿ ಬಹಳ ಮುಖ್ಯವಾಗಿ ಕಂಡುಬರುವ ಎರಡು ಪ್ರಭೇದಗಳೆಂದರೆ ಮೂಡಲಪಾಯ ಮತ್ತು ಪಡುವಲಪಾಯ. ಪಾಯ ಎಂದರೆ ಪದ್ಧತಿ ಎಂಬ ಅರ್ಥದಲ್ಲಿ ಸ್ವೀಕರಿಸಲಾಗಿದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಕಂಡುಬರುವ ಯಕ್ಷಗಾನ ಪದ್ಧತಿಯನ್ನು ಮೂಡಲಪಾಯವೆಂದೂ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವ ಯಕ್ಷಗಾನ ಪದ್ಧತಿಯನ್ನು ಪಡುವಲಪಾಯವೆಂದೂ ಸ್ಥೂಲವಾಗಿ ವಿಭಜಿಸಲಾಗಿದೆ. ಉತ್ತರ ಕರ್ನಾಟಕದ ‘ದೊಡ್ಡಾಟ’ವೆಂಬ ಬಯಲಾಟದ ಪ್ರಕಾರವನ್ನೂ ಮೂಡಲಪಾಯದ ಗುಂಪಿಗೆ ಸೇರಿಸುತ್ತಾರೆ.

ಮೂಡಲಪಾಯ ಯಕ್ಷಗಾನದಲ್ಲಿ ಉತ್ತರದ ಸಂಪ್ರದಾಯ ಮತ್ತು ದಕ್ಷಿಣದ ಸಂಪ್ರದಾಯ ಎಂದು ವಿಭಾಗಿಸಿಕೊಳ್ಳುವ ಕ್ರಮವಿದೆ. ಈ ಎರಡು ಪದ್ಧತಿಗಳಲ್ಲಿ ಮೂಲಭೂತವಾದ ಯಾವ ವ್ಯತ್ಯಾಸಗಳಿಲ್ಲದಿದ್ದರೂ ಅಧ್ಯಯನದ ಅನುಕೂಲದ ದೃಷ್ಟಿಯಿಂದ ಹೀಗೆ ವಿಭಾಗಿಸಿರಬಹುದು. ಹಾಗೆಯೇ ಪಡುವಲಪಾಯ ಯಕ್ಷಗಾನವನ್ನು ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂದು ವಿಭಾಗಿಸಲಾಗಿದೆ. ಈ ಎರಡು ತಿಟ್ಟುಗಳಿಗೂ ಅನೇಕ ಹೋಲಿಕೆಗಳೂ, ವ್ಯತ್ಯಾಸಗಳೂ ಇವೆ. ಸಾಮಾನ್ಯವಾಗಿ ಉಡುಪಿಯನ್ನು ಗಡಿಯಾಗಿಟ್ಟುಕೊಂಡು ಅದರ ಉತ್ತರ ಭಾಗಕ್ಕೆ ‘ಬಡಗುತಿಟ್ಟು’ ಎಂದೂ, ತೆಂಕಣ ಭಾಗಕ್ಕೆ ‘ತೆಂಕುತಿಟ್ಟು’ ಎಂದೂ ಕರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನವನ್ನು ಬಡಾಬಡಗುತಿಟ್ಟು ಅಥವಾ ಉತ್ತರ ಕನ್ನಡದ ತಿಟ್ಟು ಎಂದು ವಿದ್ವಾಂಸರು ಗುರುತಿಸಿ ಕೊಂಡಿರುವುದೂ ಇದೆ.

ಉತ್ತರ ಕರ್ನಾಟಕದಲ್ಲಿ ಕಂಡುಬರುವ ‘ಸಣ್ಣಾಟ’ಗಳೂ ಯಕ್ಷಗಾನ ಬಯಲಾಟದ ಒಂದು ಪ್ರಭೇದವೇ ಆಗಿದೆ. ಇವುಗಳನ್ನು ವೈಷ್ಣವ  ಸಣ್ಣಾಟಗಳು, ಶೈವಸಣ್ಣಾಟಗಳು ಮತ್ತು ಲೌಕಿಕ ಸಣ್ಣಾಟಗಳೆಂದು ಡಿ.ಕೆ. ರಾಜೇಂದ್ರ (೧೯೮೦:೨೩) ಅವರು ವಿಭಾಗಿಸುತ್ತಾರೆ. ದೊಡ್ಡಾಟದಂತೆ ಗತ್ತು, ಗಾಂಭೀರ್ಯಗಳಿಲ್ಲದಿರುವುದೇ ಸಣ್ಣಾಟವೆಂಬ ಹೆಸರು ಬರಲು ಕಾರಣವಾಗಿರಬೇಕು. ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯ, ದಾಸರಾಟ ಇವುಗಳೆಲ್ಲ ಸಣ್ಣಾಟದ ಪ್ರಭೇದಗಳೇ ಆಗಿವೆ. ಹಾಗಾಗಿ ಯಕ್ಷಗಾನದ ಪ್ರಕಾರಕ್ಕೆ ಸೇರುತ್ತವೆ.

ಮೂಡಲಪಾಯ

ಮೂಡಲಪಾಯ ಯಕ್ಷಗಾನ ಬಯಲಾಟವು ಕರ್ನಾಟಕದ ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ, ಚಿತ್ರದುರ್ಗ, ಹಾಸನ, ಬಳ್ಳಾರಿ, ಧಾರವಾಡ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೆಳಗಾವಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಬಯಲಾಟವನ್ನು ದೊಡ್ಡಾಟವೆಂದೂ, ಮೂಡಲಪಾಯವೆಂದೂ ಕರೆಯುತ್ತಾರೆ. ದೊಡ್ಡಾಟ ಎಂಬ ಹೆಸರಿಗೆ ಅನ್ವರ್ಥವಾಗುವಂತೆ ವೇಷಭೂಷಣಗಳೆಲ್ಲ ಪಡುವಲಪಾಯಕ್ಕಿಂತ ದೊಡ್ಡದಾಗಿರುತ್ತವೆ. ಮೂಡಲಪಾಯದಲ್ಲಿಯೇ ದಕ್ಷಿಣದ ಸಂಪ್ರದಾಯ ಮತ್ತು ಉತ್ತರದ ಸಂಪ್ರದಾಯ ಎಂಬ ಪ್ರಭೇದಗಳನ್ನು ವಿದ್ವಾಂಸರು ಗುರುತಿಸಿಕೊಂಡಿದ್ದರೂ, ಹೇಳಿಕೊಳ್ಳು ವಂತಹ ವ್ಯತ್ಯಾಸಗಳೇನೂ ಕಂಡುಬರುವುದಿಲ್ಲ. ಆದರೆ ಮೂಡಲಪಾಯ ಮತ್ತು ಪಡುವಲಪಾಯ ಯಕ್ಷಗಾನಗಳಲ್ಲಿ ಸ್ಪಷ್ಟ ವ್ಯತ್ಯಾಸಗಳು ಗೋಚರಿಸುತ್ತವೆ.

ಪಡುವಲಪಾಯ

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಚಾರದಲ್ಲಿರುವ ಯಕ್ಷಗಾನ ಬಯಲಾಟದ ಪ್ರಭೇದವನ್ನು ಪಡುವಲಪಾಯ ಎಂದು ಗುರುತಿಸಲಾಗಿದೆ. ಉಡುಪಿಯನ್ನು ಕೇಂದ್ರವಾಗಿರಿಸಿಕೊಂಡು ಅದರ ಉತ್ತರ ಭಾಗದ ಯಕ್ಷಗಾನವನ್ನು ಬಡಗುತಿಟ್ಟು ಎಂದೂ, ತೆಂಕುಭಾಗದ ಯಕ್ಷಗಾನವನ್ನು ತೆಂಕುತಿಟ್ಟು ಎಂದೂ ಕರೆಯುವುದು ರೂಢಿ. ಪ್ರಾದೇಶಿಕವಾಗಿ ಹೆಸರಿನ ಭಿನ್ನತೆ ಮಾತ್ರವಲ್ಲದೆ, ಕುಣಿತ, ಹಿಮ್ಮೇಳ, ವೇಷಭೂಷಣಗಳಲ್ಲಿಯೂ ಈ ಎರಡು ತಿಟ್ಟುಗಳೊಳಗೆ ವ್ಯತ್ಯಾಸಗಳಿವೆ. ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನವು ಬಡಗುತಿಟ್ಟಿ ನಂತೆಯೇ ಕಂಡುಬಂದರೂ, ಅದರಲ್ಲಿ ಅನೇಕ ವೈದೃಶ್ಯಗಳಿರುವುದಾಗಿ ಗುರುತಿಸಿರುವ ಅಮೃತ ಸೋಮೇಶ್ವರರು ಅದನ್ನು ಉತ್ತರ ಕನ್ನಡದ ಮಟ್ಟು ಎಂದು ಕರೆದಿದ್ದಾರೆ. ತೆಂಕುತಿಟ್ಟು ಯಕ್ಷಗಾನದಲ್ಲಿ ತುಳು ಐತಿಹಾಸಿಕ ಮತ್ತು ಸಾಮಾಜಿಕ ಪ್ರಸಂಗಗಳ ಪ್ರದರ್ಶನ ಇತ್ತೀಚೆಗೆ ಹೇರಳವಾಗಿದ್ದು, ಈ ಪ್ರಭೇದವನ್ನು ತುಳುತಿಟ್ಟು ಎಂದು ಗುರುತಿಸಿಕೊಳ್ಳಬಹುದು. ಹೀಗೆ ಯಕ್ಷಗಾನದ ಒಂದೊಂದು ತಿಟ್ಟುಗಳಲ್ಲಿಯೂ ಅನೇಕ ಪ್ರಾದೇಶಿಕ ಪ್ರಭೇದಗಳನ್ನು ಕಾಣಬಹುದು.

ಯಕ್ಷಗಾನದ ಮೂಡಲಪಾಯ ಮತ್ತು ಪಡುವಲಪಾಯಗಳೊಳಗಿನ ಪ್ರಮುಖ ವ್ಯತ್ಯಾಸಗಳನ್ನು ಡಿ.ಕೆ.ರಾಜೇಂದ್ರ ಅವರು ಪಟ್ಟಿ ಮಾಡಿದ್ದಾರೆ. (೧೯೮೦ : ೨೮) ಮೂಡಲಪಾಯದಲ್ಲಿ ಪ್ರಸಂಗ ಸಾಹಿತ್ಯ ರಚನೆಯಲ್ಲಿ ಗದ್ಯ ಪದ್ಯ ಎರಡೂ ಕವಿ ನಿರ್ಮಿತವಾಗಿರುತ್ತದೆ. ಪಡುವಲಪಾಯದಲ್ಲಿ ಪದ್ಯ ಮಾತ್ರ ಕವಿ ನಿರ್ಮಿತ, ಗದ್ಯವನ್ನು ಪಾತ್ರಧಾರಿ ರಂಗದ ಮೇಲೆ ಸೃಷ್ಟಿಸಿ ಹೇಳುತ್ತಾನೆ. ಮೂಡಲಪಾಯದಲ್ಲಿ ಪಗಡಿ ಸುತ್ತುವ ಕ್ರಮ ಇಲ್ಲ. ಎಲ್ಲ ಪಾತ್ರಗಳೂ ಕಿರೀಟವನ್ನು ಧರಿಸುತ್ತವೆ. ಆದರೆ ಪಡುವಲಪಾಯದಲ್ಲಿ ಪಗಡಿ ಸುತ್ತುವ ಕ್ರಮವೇ ಅದರ ವೈಶಿಷ್ಟ್ಯ. ಮೂಡಲಪಾಯದ ಹಿಮ್ಮೇಳದಲ್ಲಿ ಬಡಗುತಿಟ್ಟಿನ ಭಾಗವತರು ನಿಂತುಕೊಂಡೇ ಆಟವನ್ನು ನಡೆಸುತ್ತಾರೆ. ಚೆಂಡೆ, ಜಾಗಟೆಗಳ ಬಳಕೆ ಇಲ್ಲ. ಮುಖವೀಣೆ ಎಂಬ ವಾದ್ಯವಿಶೇಷವನ್ನು ಬಳಸುತ್ತಾರೆ. ಪಡುವಲಪಾಯದಲ್ಲಿ ಹಿಮ್ಮೇಳದವರು ರಂಗದ ಮೇಲೆ ಎತ್ತರದ ಸ್ಥಳದಲ್ಲಿ ಕುಳಿತಿರುತ್ತಾರೆ. ಭಾಗವತರು ಜಾಗಟೆ ಹಾಗೂ ತಾಳವನ್ನು ಬಳಸುತ್ತಾರೆ. ಚೆಂಡೆ ಇಲ್ಲಿನ ಮುಖ್ಯ ವಾದ್ಯವಾಗಿರುತ್ತದೆ.

ವೇಷಭೂಷಣಗಳಲ್ಲಿ ಎರಡೂ ಪಾಯಗಳಲ್ಲಿ ಅನೇಕ ವ್ಯತ್ಯಾಸಗಳು ಕಂಡುಬರುತ್ತವೆ. ರಾಕ್ಷಸ ಪಾತ್ರದ ಕಿರೀಟ ದೊಡ್ಡದಾಗಿರುತ್ತದೆ. ಕಿರಾತವೇಷವೂ ಸ್ವಲ್ಪ ವ್ಯತ್ಯಾಸವಿರುವ ಕಿರೀಟವನ್ನು ಧರಿಸುತ್ತದೆ. ಎದೆಹಾರ, ವೀರಗಾಸೆಗಳನ್ನು ಮರದ ತುಂಡುಗಳಿಂದ ತಯಾರಿಸಿ, ಬಣ್ಣ ಬಳಿದು, ದಾರದಲ್ಲಿ ಸೇರಿಸುತ್ತಾರೆ. ಭುಜಕೀರ್ತಿಯು ಯಕ್ಷ ಕಿನ್ನರರ ಹಾರುವ ರೆಕ್ಕೆಯ ಕಲ್ಪನೆಯನ್ನು ಮೂಡಿಸುವಂತಿದ್ದು, ವಿವಿಧ ಆಕಾರಗಳಲ್ಲಿರುತ್ತವೆ. ಪಡುವಲ ಪಾಯದ ಶಿರೋಭೂಷಣಗಳು  ವೈವಿಧ್ಯಮಯವಾಗಿವೆ. ಕಿರಾತನಿಗೆ ಓರೆಪಗಡಿಯನ್ನು ಕಟ್ಟುತ್ತಾರೆ. ಎದೆಪದಕ, ವೀರಗಾಸೆಗಳನ್ನು ಬಟ್ಟೆ ಹಾಗೂ ಮರದ ತುಂಡುಗಳಿಂದ ನಿರ್ಮಿಸಿ, ಅಂಚಿನಲ್ಲಿ ಕೆಂಪು, ಕಪ್ಪು ಬಣ್ಣದ ಉಲ್ಲನ್ ಹೊದಿಸುತ್ತಾರೆ. ಭುಜಕೀರ್ತಿಯನ್ನು ಮರದಿಂದ ನಿರ್ಮಿಸಿ ಮುಳ್ಳುಗಳಂತೆ ರಚಿಸಿರುತ್ತಾರೆ. ರಾಕ್ಷಸ ಪಾತ್ರದ ಭುಜದಂಬೆ ಮಾತ್ರ ಮೂಡಲ ಪಾಯದಂತಿರುತ್ತದೆ. ಮೂಡಲಪಾಯದಲ್ಲಿ ಬಣ್ಣ ಹಾಗೂ ವೇಷಗಾರಿಕೆಯನ್ನು ಕಲಾವಿದರಿಗೆ ಇತರರು ಮಾಡುತ್ತಾರೆ. ಆದರೆ ಪಡುವಲಪಾಯದಲ್ಲಿ ಅವರವರೇ ಬಣ್ಣ ಹಾಕಿ ವೇಷವನ್ನು ಧರಿಸಿಕೊಳ್ಳುತ್ತಾರೆ.

ಬಡಗುತಿಟ್ಟು

ಯಕ್ಷಗಾನದ ತೆಂಕು ಮತ್ತು ಬಡಗುತಿಟ್ಟಿನವರು ಆಡುವ ಪ್ರಸಂಗ ಸಾಹಿತ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಎರಡೂ ತಿಟ್ಟುಗಳಲ್ಲಿ ಯಕ್ಷಗಾನ ‘ಆಟ’ವಾಗಿಯೂ, ತಾಳಮದ್ದಳೆ ಕೂಟ ಎಂಬ ಎರಡು ಮಾಧ್ಯಮಗಳಿವೆ. ಆದರೂ ಹಿಮ್ಮೇಳ, ವೇಷಭೂಷಣ, ಕುಣಿತ ಮೊದಲಾದ ಅಂಶಗಳಲ್ಲಿ ಅನೇಕ ವ್ಯತ್ಯಾಸಗಳು ಕಂಡುಬರುತ್ತವೆ.

ಬಡಗುತಿಟ್ಟಿನ ಹಿಮ್ಮೇಳವು ತೆಂಕುತಿಟ್ಟಿನ ಹಿಮ್ಮೇಳಕ್ಕಿಂತ ಭಿನ್ನವಾಗಿದೆ. ಬಡಗುತಿಟ್ಟು ಯಕ್ಷಗಾನದಲ್ಲಿ ಭಾಗವತನು ತಾಳಕ್ಕಾಗಿ ಪುಟ್ಟ ಚಕ್ರ ತಾಳವನ್ನು ಬಳಸುತ್ತಾನೆ. ಬಡಗಿನಲ್ಲಿ ಹಿಮ್ಮೇಳದವರು ಕುಳಿತುಕೊಳ್ಳುವ ರೀತಿಯೇ ವಿಶಿಷ್ಟವಾಗಿದೆ. ಭಾಗವತನಿಗೂ ಮದ್ದಳೆ ಗಾರನಿಗೂ ನಡುವೆ ಶ್ರುತಿ ಹಿಡಿವವನು ಕುಳಿತಿರುತ್ತಾನೆ. ಬಲಭಾಗದಲ್ಲಿಯೇ ಚೆಂಡೆಯವನು ಕುಳಿತು ಚೆಂಡೆ ಬಾರಿಸುತ್ತಾನೆ. ಬಡಗುತಿಟ್ಟಿನಲ್ಲಿ ಬಳಸುವ ಚೆಂಡೆ, ಮದ್ದಳೆಗಳು ಗಾತ್ರದಲ್ಲಿ ಕಿರಿದಾಗಿವೆ. ಭಾಗವತನು ಇಳಿ ಶ್ರುತಿಯಿಟ್ಟು ಏರು ಸ್ವರದಲ್ಲಿ ಹಾಡುತ್ತಾನೆ. ಪದ್ಯವೂ ತಾಳವೂ ಜತೆಯಲ್ಲಿ ನಿಲ್ಲುತ್ತದೆ.

ಬಡಗುತಿಟ್ಟಿನ ಬಯಲಾಟದಲ್ಲಿ ಭಾಗವತನ ಜೊತೆಯಲ್ಲಿ ವೇಷಧಾರಿಗಳೂ ಹಾಡುತ್ತಾರೆ. ನಾಟ್ಯ ಕ್ರಮದಲ್ಲಂತೂ ಬಡಗಿನ ಪದ್ಥತಿ ವಿಶಿಷ್ಟವಾಗಿದೆ. ಲಾಸ್ಯ ಪ್ರಧಾನವಾದ ಬಡಗಿನ ನಾಟ್ಯ ಶೃಂಗಾರ ಕರುಣ ರಸಗಳಿಗೆ ಪೋಷಕ. ಅಲ್ಲಿ ಆಂಗಿಕಾಭಿನಯಕ್ಕೆ ಹೆಚ್ಚು ಒತ್ತು. ಕುಣಿತ ಕಡಿಮೆ. ವೀರರಸಕ್ಕೆ ಪೂರಕವಾಗಿ ಮಂಡಿಯೂರಿ ಗಿರಕಿಹೊಡೆಯುವ ಪದ್ಧತಿ ಇದೆ.

ವೇಷಭೂಷಣಗಳಿಗೆ ಸಂಬಂಧಿಸಿದಂತೆ ಅನೇಕ ವ್ಯತ್ಯಾಸಗಳು ಗೋಚರಿಸುತ್ತವೆ. ಬಡಗುತಿಟ್ಟಿನ ವೇಷಧಾರಿಗಳು ಪಗಡಿಯನ್ನು ಅಟ್ಟೆ ಹಾಕಿ ತಾವೇ ಕಟ್ಟಿಕೊಳ್ಳುತ್ತಾರೆ. ಪಗಡಿಯ ಕೆಂಪು ವಸ್ತ್ರದ ಮೇಲೆ ವರ್ಣರಂಜಿತ ಜರಿಲಾಡಿಗಳನ್ನು ಕಿರಣದಂತೆ ಸುತ್ತಿ ಕೊಳ್ಳುತ್ತಾರೆ. ಶಿರೋಭೂಷಣದ ಮುಂದುಗಡೆ ಕೇದಗೆ ಎಂಬ ಆಭರಣವನ್ನು ಧರಿಸುತ್ತಾರೆ. ಬಡಗುತಿಟ್ಟಿನ ವೇಷಗಳು ಕಸೆಸೀರೆಯನ್ನು ಕಚ್ಚೆ ಹಾಕಿ ಉಟ್ಟು, ಉಳಿದ ಆಭರಣಗಳನ್ನು ಧರಿಸುತ್ತವೆ. ಎದೆಹಾರ, ಭುಜಕೀರ್ತಿ ಹಾಗೂ ವೀರಗಾಸೆಗಳು ಬಡಗಿನಲ್ಲಿ ವಿಶಿಷ್ಟವಾಗಿವೆ.

ತೆಂಕುತಿಟ್ಟು

ಉಡುಪಿಯಿಂದ ದಕ್ಷಿಣಕ್ಕೆ ಕಾಸರಗೋಡು ಜಿಲ್ಲೆಯೂ ಸೇರಿಕೊಂಡಂತೆ ಕರಾವಳಿ ಪ್ರದೇಶದಲ್ಲಿ ಪ್ರಚಲಿತವಾಗಿರುವ ಪ್ರಭೇದವೇ ತೆಂಕುತಿಟ್ಟು ಯಕ್ಷಗಾನ. ವೇಷಧಾರಣೆಯ ಕ್ರಮದಲ್ಲಿ ತೆಂಕುತಿಟ್ಟು ಯಕ್ಷಗಾನಕ್ಕೂ, ಕಥಕಳಿಗೂ ಸಾಮ್ಯ ಕಂಡುಬರುತ್ತದೆ. ಬಣ್ಣದ ವೇಷಗಳ ಕಿರೀಟ, ಚುಟ್ಟಿ ಇಡುವ ವಿಧಾನ, ವೇಷಭೂಷಣಗಳು, ರಕ್ಕಸಿಯರ ವೇಷಗಳು, ಸಾಂಪ್ರದಾಯಿಕ ಹನುಮಂತನ ವೇಷ ಇವುಗಳೆಲ್ಲ ಕಥಕಳಿಯ ನೇರ ಪ್ರಭಾವವನ್ನು ಪಡೆದುಕೊಂಡಂತಿವೆ.

ತೆಂಕುತಿಟ್ಟಿನ ಹಿಮ್ಮೇಳವು ಬಡಗುತಿಟ್ಟಿಗಿಂತ ವಿಶಿಷ್ಟವಾಗಿದೆ. ಭಾಗವತನು ತಾಳಕ್ಕಾಗಿ ದಾರಕಟ್ಟಿದ ಜಾಗಟೆಯನ್ನು ಉಪಯೋಗಿಸುತ್ತಾನೆ. ಜಾಗಟೆಯ ನಾದವು ಭಾಗವತನ ಶ್ರುತಿಯ ತಾನಕ್ಕೆ ಸರಿಯಾಗಿರಬೇಕೆಂಬ ನಿಯಮವಿದೆ. ಭಾಗವತನು ಅದನ್ನು ಎಡಗೈಯಲ್ಲಿ ಹಿಡಿದು ಬಲಗೈಯ ಕೋಲಿನಿಂದ ತಾಳ ಹಾಕುತ್ತಾನೆ. ಜಾಗಟೆಯನ್ನು ತೊಡೆಯ ಮೇಲಿಟ್ಟು, ಬೆರಳಿನಿಂದ ಮುಟ್ಟಿ ಮತ್ತು ಎತ್ತಿ ಹಿಡಿದು ಬಾರಿಸುವುದರಿಂದ ವಿಶಿಷ್ಟ ನಾದಗಳನ್ನು ಹೊರಡಿಸುತ್ತಾನೆ.

ತೆಂಕುತಿಟ್ಟಿನ ಹಿಮ್ಮೇಳದ ಸ್ಥಾನವೂ ಬಡಗಿಗಿಂತ ಭಿನ್ನವಾಗಿದೆ. ಹಿಮ್ಮೇಳದವರು ಹಿಂದಿನ ಕಾಲದಲ್ಲಿ ನಿಂತುಕೊಂಡೇ ಪ್ರಸಂಗವನ್ನು ನಿರ್ವಹಿಸುತ್ತಿದ್ದರಂತೆ. ಈಗ ಅನುಕೂಲಕ್ಕಾಗಿ ಭಾಗವತರು ರಂಗಸ್ಥಳದ ಹಿಂದೆ ಎತ್ತರದ ಮೇಜಿನ ಮೇಲೆ ಕುಳಿತು ಕೊಳ್ಳುತ್ತಾರೆ. ಅವರ ಹಿಂಬದಿಗೆ ಶ್ರುತಿ ಪೆಟ್ಟಿಗೆಯವನು, ಬಲಬದಿಗೆ ಮದ್ದಳೆಗಾರರು ಕುಳಿತಿರುತ್ತಾರೆ. ಎಡಭಾಗದಲ್ಲಿ ಚೆಂಡೆಯವನು ನಿಂತುಕೊಂಡೇ ಚೆಂಡೆ ಬಾರಿಸುತ್ತಾನೆ. ತೆಂಕುತಿಟ್ಟಿನ ಭಾಗವತ ಇಳಿಶ್ರುತಿ ಇಟ್ಟು ಏರುಸ್ವರದಲ್ಲಿ ಹಾಡುತ್ತಾನೆ.  ಪದ್ಯದ ಬಳಿಕ ಮುಕ್ತಾಯವನ್ನು ಬಾರಿಸಲಾಗುತ್ತದೆ. ಚೆಂಡೆ, ಮದ್ದಳೆಗಳ ಗಾತ್ರ ಮತ್ತು ವಾದನದ ಗತಿ ಬಡಗಿಗಿಂತ ಹಿರಿದಾಗಿದೆ.

ತೆಂಕುತಿಟ್ಟಿನಲ್ಲಿ ವೈವಿಧ್ಯಪೂರ್ಣವಾದ ಕಿರೀಟಗಳಿವೆ. ಸಿದ್ಧಪಗಡಿಗಳನ್ನೇ ಬಳಸುತ್ತಾರೆ. ಬಾಲ್‌ಮುಂಡು, ಸೋಗೆವಲ್ಲಿ, ಭುಜಕೀರ್ತಿ, ವೀರಗಾಸೆ, ಎದೆಪದಕ ಮೊದಲಾದ ವೇಷಭೂಷಣಗಳು ವೇಷಕ್ಕೆ ಪರಿಪೂರ್ಣತೆಯನ್ನು ಒದಗಿಸುತ್ತವೆ. ತೆಂಕುತಿಟ್ಟಿನ ವೇಷಗಳು ಅಡಿಯಿಂದ ಮುಡಿಯವರೆಗೆ ಸಮ ಪ್ರಮಾಣವನ್ನು ಕಾಯ್ದುಕೊಳ್ಳುತ್ತವೆ. ತೆಂಕುತಿಟ್ಟಿನ ನಾಟ್ಯವೂ ವಿಶಿಷ್ಟವಾಗಿದೆ. ಧೀಂಗಿಣ ಹಾಕುತ್ತಾ ನೆಗೆದು ಕುಣಿಯುವ ವೇಷಗಳು ರಂಗಸ್ಥಳವನ್ನು ತುಂಬಿ ನಿಲ್ಲುತ್ತವೆ. ವೇಷಗಳ ಪ್ರವೇಶಕ್ರಮ, ನಿರ್ಗಮನ, ಕುಣಿತ, ನಿಲುವು, ನೋಟಗಳಲ್ಲಿ ಕಥಕಳಿಯ ಪ್ರಭಾವವನ್ನು ಕಾಣಬಹುದು.

ತುಳು ಯಕ್ಷಗಾನ

ತೆಂಕುತಿಟ್ಟು ಯಕ್ಷಗಾನ ಪರಂಪರೆಯಲ್ಲಿ ತುಳು ಯಕ್ಷಗಾನ ಆಟಗಳಿಗೆ ತನ್ನದೇ ಆದ ಇತಿಹಾಸವಿದೆ. ಭಾಷೆ, ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು ‘ತುಳುತಿಟ್ಟು’ ಎಂದು ಗುರುತಿಸಿಕೊಂಡಿರುವುದೂ ಇದೆ. ಏನೇ ಆದರೂ ತುಳು ಯಕ್ಷಗಾನವು ತೆಂಕುತಿಟ್ಟು ಯಕ್ಷಗಾನದ ಒಂದು ಪ್ರಭೇದವಾಗಿ, ವ್ಯವಸಾಯಿ ಮೇಳಗಳ ಮೂಲಕ ಬೆಳೆದು ಬಂತು.

ತುಳು ಭಾಷೆಯಲ್ಲಿ ಯಕ್ಷಗಾನವು ಬಹಳ ತಡವಾಗಿಯೇ ಆರಂಭವಾಯಿತು. ಯಕ್ಷಗಾನದ ತೆಂಕುತಿಟ್ಟು ಉಗಮಗೊಂಡಿರುವುದೂ, ಪ್ರಚಲಿತಗೊಂಡಿರುವುದೂ ತುಳುನಾಡಿ ನಲ್ಲಿಯೇ ಆಗಿದ್ದರೂ, ಅದರ ಮಾಧ್ಯಮ ಕನ್ನಡವೇ ಆಗಿತ್ತು. ಬಹುಕಾಲದಿಂದ  ಈ  ಪ್ರದೇಶದಲ್ಲಿ ಆಡಳಿತ ಭಾಷೆಯಾಗಿ ಕನ್ನಡವೇ ಇದ್ದುದರಿಂದ ತುಳುವಿನಲ್ಲಿ ಯಕ್ಷಗಾನ ಪ್ರಸಂಗರಚನೆ ಹಾಗೂ ಪ್ರದರ್ಶನಗಳು ನಡೆಯಲಿಲ್ಲ. ಈಗ ತಿಳಿದ ಮಟ್ಟಿಗೆ ೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ ‘ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ’ ಎಂಬುದೇ ತುಳು ಭಾಷೆಯ ಮೊದಲ ಉಪಲಬ್ಧ ಪ್ರಸಂಗ ಕೃತಿ. ಅನಂತರ ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಕೃಷ್ಣಸಂಧಾನ, ಅಂಗದ ಸಂಧಾನ ಮೊದಲಾದ ಪ್ರಸಂಗಗಳು ತುಳುವಿನಲ್ಲಿ ರಚನೆಯಾಗಿವೆ. ೧೯೩೯ರಲ್ಲಿ ಪಂದಬೆಟ್ಟು ವೆಂಕಟರಾಯರು ‘ಕೋಟಿಚೆನ್ನಯ’ ಎಂಬ  ಪ್ರಸಂಗವನ್ನು ತುಳುವಿನಲ್ಲಿ ಬರೆದು ಪ್ರಕಟಿಸಿದ್ದು,  ತುಳು ಯಕ್ಷಗಾನಕ್ಕೊಂದು ಹೊಸ ಆಯಾಮವನ್ನು ನೀಡಿತು. ತುಳುನಾಡಿನ ಜನಪದ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಪಾಡ್ಡನ ಪ್ರಪಂಚದಿಂದ ಅವಳಿ ವೀರರ ಕಥೆಯನ್ನು ಯಕ್ಷಗಾನ ರಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಿದು.

ಯಕ್ಷಗಾನದ ವ್ಯವಸಾಯ ಟೆಂಟ್‌ಮೇಳಗಳು ಉಗಮಗೊಂಡಾಗ, ವೈವಿಧ್ಯಪೂರ್ಣ ಪ್ರಸಂಗಗಳು ಹುಟ್ಟಿಕೊಂಡವು. ಕನ್ನಡ ಪೌರಾಣಿಕ ಪ್ರಸಂಗಗಳನ್ನು ನೋಡಿ ಬೇಸತ್ತ ತುಳುನಾಡಿನ ಜನ ಸಹಜವಾಗಿಯೇ ತುಳು ಪ್ರಸಂಗಗಳಿಗೆ ಮಾರು ಹೋದರು. ಇದರಿಂದಾಗಿ ಅನೇಕ ಟೆಂಟ್‌ಮೇಳಗಳು ಹುಟ್ಟಿಕೊಂಡವು. ತುಳುನಾಡಿನ ಜಾನಪದ, ಐತಿಹಾಸಿಕ, ಕಾಲ್ಪನಿಕ ಜಗತ್ತಿನಿಂದ ಅನೇಕ ಪ್ರಸಂಗಗಳು ಸೃಷ್ಟಿಯಾದುವು. ತುಳುನಾಡ ಸಿರಿ, ತುಳುನಾಡ ಬಲಿಯೇಂದ್ರೆ, ಕೋಡ್ದಬ್ಬು  ಬಾರಗ, ದೇವುಪೂಂಜ ಪ್ರತಾಪ, ಗೆಜ್ಜೆದ ಪೂಜೆ, ಸತ್ಯದಪ್ಪೆ ಚೆನ್ನಮ್ಮ, ಕಾಡಮಲ್ಲಿಗೆ, ನಾಗಸಂಪಿಗೆ ಹೀಗೆ ಸಾಲು ಸಾಲು ತುಳು ಪ್ರಸಂಗಗಳು ಜನಪ್ರಿಯ ವಾದುವು. ಸುರತ್ಕಲ್ ಇರಾ ಶ್ರೀ ಸೋಮನಾಥೇಶ್ವರ ಮೇಳ, ಕರ್ನಾಟಕ ಯಕ್ಷಗಾನ ನಾಟಕ ಸಭಾ ಮಂಗಳೂರು, ಕದ್ರಿ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ, ಕುಂಬಳೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ, ಸುಬ್ರಹ್ಮಣ್ಯ ಮೇಳ ಮೊದಲಾದ ಮೇಳಗಳು ತುಳು ಯಕ್ಷಗಾನಕ್ಕೆ ಪ್ರೋನೀಡಿ ಬೆಳೆಸಿದುವು. ಅನಂತರ ಮಂಗಳಾದೇವಿ, ಕುಂಟಾರು, ಮಧೂರು, ಪುತ್ತೂರು ಮೊದಲಾದ ದೇವಸ್ಥಾನಗಳಿಂದ ತುಳು ಪ್ರಸಂಗಗಳನ್ನಾಡುವ ಮೇಳಗಳು ಹೊರಟುವು.

ಜಾನಪದೀಯ ಸೋಗಿನ ಐತಿಹಾಸಿಕ ಮತ್ತು ಕಾಲ್ಪನಿಕ ಪ್ರಸಂಗಗಳು ಯಕ್ಷಗಾನ ರಂಗಕ್ಕೆ ಬಂದಾಗ ಯಕ್ಷಗಾನ ವೇಷಗಾರಿಕೆಯಲ್ಲಿ ಬದಲಾವಣೆ ಅನಿವಾರ್ಯವಾಯಿತು. ಪೌರಾಣಿಕ ಪ್ರಸಂಗಗಳ ಪರಂಪರೆಯ ವೇಷಭೂಷಣಗಳು ತುಳು ಕಾಲ್ಪನಿಕ ಪ್ರಸಂಗಗಳ ಪಾತ್ರಗಳಿಗೆ ಒಗ್ಗದಂತಾಯಿತು. ಈ ಹಿನ್ನೆಲೆಯಲ್ಲಿ ನಾಟಕೀಯ ವೇಷಭೂಷಣಗಳಿಗೆ ಕಲಾವಿದರು ಮೊರೆ ಹೋದರು. ಕಂಪೆನಿ ನಾಟಕಗಳಲ್ಲಿ ಪೌರಾಣಿಕ ಪಾತ್ರಗಳು ಧರಿಸುತ್ತಿದ್ದ ವೇಷಭೂಷಣಗಳನ್ನು ತುಳು ಯಕ್ಷಗಾನ ಕಲಾವಿದರು ಬಳಸಿದರು. ರಾಜವೇಷಗಳಿಗೆ ವಿಗ್ ಇಟ್ಟು, ಅದರ ಮೇಲೊಂದು ಬಾಸಿಂಗದಂತಹ ಮುಂಡಾಸು, ತುಂಬು ತೋಳಿನ ಅಂಗಿ, ಸೊಂಟಕ್ಕೆ ಜರಿ ಇರುವ ನಾಟಕೀಯ ಉಡುಗೆ, ಸರಳವಾದ ಮುಖವರ್ಣಿಕೆಗಳು ಕಂಡುಬಂದುವು. ಕೆಲವು ಯಕ್ಷಗಾನ ಮೇಳಗಳು ತಮ್ಮ ಹೆಸರನ್ನು ‘ಯಕ್ಷಗಾನ  ನಾಟಕ ಸಭಾ’ ಎಂದು ಗುರುತಿಸಿಕೊಂಡುವು. ಹೀಗೆ ತುಳು ಯಕ್ಷಗಾನವು ನಾಟಕೀಯ ಅಂಶಗಳಿಗೆ ಹೆಚ್ಚಿನ ಒತ್ತು ಕೊಟ್ಟ ತೆಂಕು ತಿಟ್ಟಿನ ಪರಂಪರೆಗಿಂತ ಭಿನ್ನವಾಗಿ ಬೆಳೆದುಬಂತು.