ವೇಷ ತಯಾರಿಕಾ ವಿಧಾನ

ವೇಷಭೂಷಣಗಳ ಮರದ ಮಾದರಿಗಳನ್ನು ಮರಗೆಲಸದ ಕೆತ್ತನೆ ಬಲ್ಲವರಿಂದ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಒಂದೇ ಮಾದರಿಯ ಅನೇಕ ವಿನ್ಯಾಸಗಳ ಆಭರಣಗಳು ಬೇರೆ ಬೇರೆ ಅಂಗಗಳ ಆಭರಣಕ್ಕೆ ಮತ್ತೆ ಮತ್ತೆ ಬಳಸುವುದಿದೆ. ಮರದ ಕಾಂಡದಿಂದ ತಯಾರಿಸಿದ ಆಕೃತಿಗಳಲ್ಲಿ ಕುಸುರಿ ಕೆಲಸಗಳು ಮತ್ತು ಕನ್ನಡಿಯನ್ನು ಕೂರಿಸಲು ಸ್ವಲ್ಪ ಆಳವನ್ನು, ದಾರವನ್ನು ಪೋಣಿಸಲು ತೂತನ್ನು ಮಾಡಿಕೊಳ್ಳಲಾಗುತ್ತದೆ. ಅಂಟಿನ ನೆರವಿನಿಂದ ಆಳ ಮಾಡಿದ ಜಾಗಕ್ಕೆ ಕನ್ನಡಿಯನ್ನು ಕತ್ತರಿಸಿ ಬೇಕಾದಂತೆ ಬೇಗಡೆಗಳನ್ನು ಹಚ್ಚಿ ದಾರಗಳಿಂದ ಪೋಣಿಸಿ ಹಾರ, ಕೈಕಟ್ಟು, ತೋಳ್ಕಟ್ಟು, ಡಾಬು ಮೊದಲಾದ ಆಭರಣಗಳನ್ನು ತಯಾರಿಸ ಲಾಗುತ್ತದೆ. ಎದೆ ಕವಚ, ಭುಜಕೀರ್ತಿ ಮೊದಲಾದ ವಿಶಾಲವಾದ ಉಡುಗೆಗಳ ತಯಾರಿಕೆಗೆ ಬಟ್ಟೆಗಳನ್ನು ಬಳಸಲಾಗುತ್ತದೆ. ವೆಲ್‌ವೆಟ್ ಬಟ್ಟೆಯ ಹಿಂಭಾಗಕ್ಕೆ ಕ್ಯಾನ್‌ವಾಸ್ ಅಥವಾ ಸೆಣಬಿನ ಚೀಲಗಳನ್ನು ಬೇಕಾದ ಆಕಾರದಲ್ಲಿ ಜೋಡಿಸಿ ಹೊಲಿದುಕೊಳ್ಳಲಾಗುತ್ತದೆ. ಇದಕ್ಕೆ ಪ್ಯಾಡ್ ಎಂದು ಕರೆಯುವರು. ಅದರ ಮೇಲೆ ಮೊದಲೇ ತಯಾರಿಸಿಕೊಂಡ ಆಭರಣಗಳನ್ನು ಬೇಕಾದ ವಿನ್ಯಾಸಗಳಲ್ಲಿ ಜೋಡಿಸಿಕೊಂಡು ವೆಲ್‌ವೆಟ್ ಬಟ್ಟೆಯ ಮೇಲೆ ಹೊಲಿಯಲಾಗುತ್ತದೆ. ಹೀಗೆ ಹೊಲಿಯುವುದರಿಂದ ಅವುಗಳನ್ನು ಬೇಕಾದಂತೆ ಬಿಚ್ಚಿ ಬದಲಿಸಿಕೊಳ್ಳಲು ಅವಕಾಶವಿರುತ್ತದೆ. ವರ್ಷಕ್ಕೊಮ್ಮೆ ಅವುಗಳು ಕೆಟ್ಟು ಹೋದಾಗ ಮತ್ತೆ ಮತ್ತೆ ವಿನೂತನವಾಗಿ ನಿರ್ಮಿಸಲು ಅನುಕೂಲವಾಗುತ್ತದೆ. ಎದೆಪದಕದಂತಹ ಆಭರಣಗಳ ಅಂಚಿನಲ್ಲಿ ಕಪ್ಪು ಅಥವಾ ಕೆಂಪು ಉಲ್ಲನ್ ದಾರಗಳ ಗೊಂಡೆಯನ್ನು ಕಟ್ಟಲಾಗುತ್ತದೆ.

ಕಿತ್ತು ಹೋದ ಬೇಗಡೆಗಳನ್ನು, ಗಾಜುಗಳನ್ನು, ದಾರಗಳನ್ನು ಬೇಕಾದ ಹಾಗೆ ಬಿಡಿಬಿಡಿಯಾಗಿ ಬದಲಿಸಿ ವಿನೂತನಗೊಳಿಸಿಕೊಳ್ಳುವ ರೀತಿಯಲ್ಲಿ ವೇಷಗಳ ತಯಾರಿಕೆ ಇರುತ್ತದೆ. ಇದರಿಂದ ಯಾವುದೇ ಒಂದು ಪುಟ್ಟ ಆಭರಣವು ಮುರಿದು ಹೋದರೆ ಇಡೀ ಎದೆಪದಕವೋ, ಭುಜಕೀರ್ತಿಯೋ ಉಪಯೋಗ ಶೂನ್ಯವಾಗುವುದಿಲ್ಲ. ಮುರಿದವುಗಳನ್ನು ಮಾತ್ರ ಬದಲಿಸಿ ಹೊಸತಾಗಿಸಿಕೊಂಡರೆ ಸಾಕಾಗುತ್ತದೆ. ಆಭರಣ ಗಳನ್ನು ಸಿದ್ಧಪಡಿಸುವ ಕುಶಲಕರ್ಮಿಗಳು ಯಕ್ಷಗಾನದ ವೇಷಭೂಷಣಗಳನ್ನು ತಯಾರಿಸಿಕೊಡುತ್ತಾರೆ. ಆದರೆ ಇವುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಮಾರುಕಟ್ಟೆಯ ವ್ಯವಸ್ಥೆ ಇಲ್ಲ. ಈಗೀಗ ಒಂದೆರಡು ಸಂಸ್ಥೆಗಳು ವೇಷಭೂಷಣಗಳನ್ನು ತಯಾರಿಸಿ ಕೊಡುತ್ತವೆ. ಮೇಳಗಳಲ್ಲಿ ವರ್ಷಕ್ಕೊಮ್ಮೆ ಹೊಸ ಪ್ಯಾಡ್‌ಗಳನ್ನು ಹೊಲಿದುಕೊಳ್ಳಲಾಗುತ್ತದೆ. ಹಳೆಯ ಮರದ ಆಭರಣಗಳನ್ನು ಉಪಯೋಗಿಸಿ ಹೊಸದಾಗಿ ತಯಾರಿಸಲಾಗುತ್ತದೆ.

ವೇಷಧಾರಣ ವಿಧಾನ

ಮುಖದ ಬಣ್ಣಗಾರಿಕೆಯಾದ ಮೇಲೆ ವೇಷಧಾರಿಗಳು ಈಗಾಗಲೇ ಧರಿಸಿರುವ ಒಳ ಇಜಾರನ್ನು ಸರಿಯಾಗಿ ಕಟ್ಟಿಕೊಳ್ಳುತ್ತಾರೆ. ಇದು ನರ್ತಿಸಲು ಅನುಕೂಲವಾಗುವಂತೆ ಸಡಿಲವಾಗಿರುತ್ತದೆ. ಬಳಿಕ ಕಾಲು ಚೀಲ ಹಾಕಿ, ಗೆಜ್ಜೆಯನ್ನು ಕಟ್ಟಲಾಗುತ್ತದೆ. ಇಜಾರನ್ನು ಕಾಲಿನ ಮೀನಖಂಡದ ಮೇಲ್ಭಾಗದಲ್ಲಿ ಮೊಣಕಾಲಿನ ಕೆಳಗೆ ಉಲ್ಲನ್ನಿನ ಕಾಲುಚೀಲದ ಮೇಲೆ ಬಿಗಿಯಾಗಿ ಕಟ್ಟುತ್ತಾರೆ. ಆಮೇಲೆ ಮುಖಕ್ಕೆ ಬಣ್ಣ ಬರೆಯುತ್ತಾರೆ. ಕೆಲವರು ಬಣ್ಣ ಬರೆಯುವ ಮೊದಲು ಗೆಜ್ಜೆ ಕಟ್ಟಿದರೆ, ಕೆಲವರು ಆಮೇಲೆ ಕಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ ಗೆಜ್ಜೆ ಕಟ್ಟುವ ಮೊದಲು ದೇವರಿಗೆ ನಮಸ್ಕರಿಸುವುದು, ಗುರು ಸಮಾನರಾದ ಹಿರಿಯ ಕಲಾವಿದರಿದ್ದರೆ ಅವರಿಂದ ಮುಟ್ಟಿಸಿಕೊಂಡು ಆಶೀರ್ವಾದ ಪಡೆಯುವುದು ಸಂಪ್ರದಾಯ. ಕೆಲವರು ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಗೆಜ್ಜೆ ಕಟ್ಟುವ ಕ್ರಮವನ್ನು ಅನುಸರಿಸುತ್ತಾರೆ. ಗೆಜ್ಜೆ ಕಟ್ಟಿದ ಬಳಿಕ ಕಾಲ್ಚೆಂಡು ಹಾಗೂ ಕಾಲ್ಗಡಗಗಳನ್ನು ಕಟ್ಟಿಕೊಳ್ಳುತ್ತಾರೆ. ಈಗೀಗ ಕಾಲ್ಚೆಂಡು, ಕಾಲ್ಗಡಗಗಳು ಬಳಕೆಯಲ್ಲಿಲ್ಲ. ಬದಲಿಗೆ ಕಾಲ್‌ಪಟ್ಟೀಸನ್ನು ಕಟ್ಟುವ ಸಂಪ್ರದಾಯವಿದೆ.

ಕಸೆ ಹಾಕಿ ಅಂಡು ಕಟ್ಟುವುದು ಮುಂದಿನ ಕೆಲಸ. ಇಲ್ಲಿಂದ ಮುಂದೆ ವೇಷಧಾರಿಗೆ ವೇಷ ಕಟ್ಟಿಕೊಳ್ಳಲು ಸಹಾಯಕನೊಬ್ಬನಿರುತ್ತಾನೆ. ಸೊಂಟದ ಗಾತ್ರವನ್ನು ಹಿಗ್ಗಿಸಲು ಮತ್ತು ನಿತಂಬ ಪ್ರದೇಶವನ್ನು ಎತ್ತರವಾಗಿ ಕಾಣುವಂತೆ ಮಾಡಲು ಕಟ್ಟುವ ಹಳೆಯ ಬಟ್ಟೆಯ ಕಂತೆಯನ್ನು ‘ಅಂಡು’ ಎಂದು ಹೇಳಲಾಗುತ್ತದೆ. ವೇಷಧಾರಿಯು ಎರಡೂ ಕೈಗಳಲ್ಲಿ ಎಳೆದು ಹಿಡಿದ ನೂಲಿನ ದಾರಕ್ಕೆ ಬೇಕಾದಷ್ಟು ಹಳೆಯ ಬಟ್ಟೆಗಳನ್ನು ಗೋಣಿ ತಾಟುಗಳನ್ನು ಒಂದರ ಮೇಲೆ ಒಂದರಂತೆ ಹಾಕಲಾಗುತ್ತದೆ. ವೇಷದ ಸ್ವಭಾವ ಮತ್ತು ಗಾತ್ರವನ್ನು ಅನುಸರಿಸಿ ನಿರ್ದಿಷ್ಟ ಪ್ರಮಾಣದಲ್ಲಿ ಅಂಡು ಕಟ್ಟಲಾಗುತ್ತದೆ. ಬಣ್ಣದ ವೇಷಗಳ ಅಂಡು ಎಲ್ಲಕ್ಕಿಂತ ದೊಡ್ಡದಿರುತ್ತದೆ. ನಂತರ ಕಿರೀಟ ವೇಷ ಬಳಿಕ ಪಕಡಿ ವೇಷದ ಅಂಡು, ಸ್ತ್ರೀ ವೇಷದ ಅಂಡು ಎಲ್ಲಕ್ಕಿಂತಲೂ ಚಿಕ್ಕದಿರುತ್ತದೆ. ಇದನ್ನು ಕಸೆ ಹಾಕುವುದು ಎಂದೂ ಹೇಳಲಾಗುತ್ತದೆ.

ಆನಂತರ ಮೈಗೆ ದಗಲೆಯನ್ನು ಹಾಕಿಕೊಳ್ಳಲಾಗುತ್ತದೆ. ಗಾತ್ರವನ್ನು ಅನುಸರಿಸಿ ಒಂದಕ್ಕಿಂತ ಹೆಚ್ಚು ಹಳೆಯ ದಗಲೆಗಳನ್ನು ಹಾಕಿಕೊಳ್ಳುವುದಿದೆ. ತುಂಬು ತೋಳಿನ ಈ ಅಂಗಿಯನ್ನು ಕಿರೀಟ ವೇಷಧಾರಿಗಳು ಧರಿಸುತ್ತಾರೆ. ಪುಂಡುವೇಷಕ್ಕಾದರೆ, ದಗಲೆಯ ಬದಲಿಗೆ ರವಕೆ ಅಥವಾ ಅರ್ಧ ತೋಳಿನ ಅಂಗಿಯನ್ನು ಬಳಸಲಾಗುತ್ತದೆ. ಒಳ ದಗಲೆಗಳನ್ನು ಹಾಕಿದ ಮೇಲೆ ಈ ಮೊದಲು ಹಾಕಿದ ಮೇಲ್‌ಚಡ್ಡಿಯದೇ ಬಣ್ಣದ ದಗಲೆಯನ್ನು ಹಾಕಲಾಗುತ್ತದೆ. ಇಷ್ಟನ್ನೂ ಧರಿಸಿದ ಬಳಿಕ ಸೊಂಟಕ್ಕೆ ಇದುವರೆಗೆ ಧರಿಸಿದ ಅಂಡು, ಚಡ್ಡಿ ಇತ್ಯಾದಿಗಳು ಬಿಗಿಯಾಗಿ ನಿಲ್ಲುವಂತೆ ಒಂದು ಸುತ್ತು ಜಟ್ಟಿಯನ್ನು ಬಿಗಿದು ಗಂಟು ಹಾಕಿಕೊಳ್ಳಲಾಗುತ್ತದೆ. ನಂತರ ಬಾಲ್‌ಮುಂಡು ಕಟ್ಟಿ ಜಟ್ಟಿಯನ್ನು ಅದರ ಮೇಲೆ ಬಿಗಿಯಾಗಿಸುತ್ತ ವೇಷಕ್ಕೆ ತಕ್ಕಂತೆ ಆರರಿಂದ ಹನ್ನೆರಡು ಇಂಚುಗಳವರೆಗೂ ಸುತ್ತಿ ಕೊಳ್ಳಲಾಗುತ್ತದೆ. ವೇಷಗಳ ಸೊಂಟಕ್ಕೆ ಈ ಜಟ್ಟಿಯಿಂದಲೇ ಆಧಾರವು ದೊರೆಯುತ್ತದೆ. ಕೊನೆಗೆ ಉಳಿದ ಜಟ್ಟಿಯ ತುದಿಯನ್ನು ಮೊದಲ ಸುತ್ತಿನ ಒಳಗಡೆ ಸಿಕ್ಕಿಸಿ ಭದ್ರ ಮಾಡ ಲಾಗುತ್ತದೆ. ಕೆಲವರು ಮೊದಲಿಗೆ ಒಂದು ಸುತ್ತು ಕಟ್ಟಿದ ಜಟ್ಟಿಯ ಗಂಟಿನ ತುದಿಯನ್ನು ಉದ್ದಬಿಟ್ಟು ಅದಕ್ಕೆ ಕೊನೆಗೆ ಉಳಿಯುವ ತುದಿಯನ್ನು ಕಟ್ಟಿಬಿಡುತ್ತಾರೆ.

ಆ ಬಳಿಕ ಸೀರೆಯನ್ನು ಕಸೆ ಹಾಕಿ ಉಡಲಾಗುತ್ತದೆ. ಸೀರೆಯನ್ನು ಎರಡು ಪದರುಗಳಾಗಿ ಮಡಚಿ ಇಕ್ಕೆಲಗಳಲ್ಲೂ ಸಮಾನ ಉದ್ದವಿರುವಂತೆ ಸೊಂಟಕ್ಕೆ ಸುತ್ತಿ ಹೊಕ್ಕುಳ ಸಮೀಪ ಗಂಟು ಹಾಕಿ ಉಟ್ಟುಕೊಳ್ಳಲಾಗುತ್ತಿತ್ತು. ನಂತರ ಕಸೆಹಾಕಿ ಉಟ್ಟ ಕೊನೆಯ ತುದಿಯನ್ನು ಹಿಂದಿನಿಂದ ಮುಂದೆ ತಂದು ಕಟ್ಟಿಕೊಳ್ಳಲಾಗುತ್ತಿತ್ತು. ಸೊಂಟಕ್ಕೆ ದಟ್ಟಿಯನ್ನು ಬಿಗಿಯಾಗಿ ಸುತ್ತಿಕೊಂಡ ಬಳಿಕ ತಲೆಯ ಹಿಂಭಾಗ ಕಟ್ಟಿದ ಸೀರೆಯ ತುದಿಯನ್ನು ದಟ್ಟಿಯ ಮೇಲೆ ಇಳಿಬಿಡಲಾಗುತ್ತಿತ್ತು. ಇದರಿಂದ ದಟ್ಟಿಯು ಹೊರಗೆ ಕಾಣಿಸದೆ ಮರೆಯಾಗುತ್ತದೆ. ಕಸೆಯು ಮೊಣಕಾಲಿನವರೆಗೆ ಇದ್ದು ವಜ್ರಾಕೃತಿಯನ್ನು ನಿರ್ಮಿಸುತ್ತದೆ. ಆದರೆ ಇಂದು ಕಸೆ ಉಡುವ ಪದ್ಧತಿ ತೆಂಕು ತಿಟ್ಟಿನಲ್ಲಿ ಮರೆಯಾಗಿದೆ. ಆದರೆ ಬಡಗುತಿಟ್ಟಿನಲ್ಲಿ ಇದೆ. ಇಂದು ತೆಂಕುತಿಟ್ಟಿನಲ್ಲಿ ಕಸೆಯಿಲ್ಲದೆ ಬಾಲ್‌ಮುಂಡು ಎಂಬ ತೊಡುಗೆಯನ್ನೇ ಧರಿಸಲಾಗುತ್ತದೆ. ಮೊಣಕಾಲಿನಿಂದ ಸ್ವಲ್ಪ ಕೆಳಗೆ ಇಳಿಬಿಟ್ಟು ನಿಲ್ಲುವ ತೆಳ್ಳನೆಯ ನೆರಿಗೆಯಿಂದ ಕೂಡಿದ ಬಾಲ್‌ಮುಂಡು ಕುಣಿತದ ಸಂದರ್ಭದಲ್ಲಿ ಗಾಳಿಗೆ ತೇಲುತ್ತಾ ವೇಷಕ್ಕೆ ಭರ್ಜರಿಯಾದ ಆಕೃತಿಯನ್ನು ಕೊಡುತ್ತದೆ. ಬಾಲ್‌ಮುಂಡು ಬಿಳಿಯ ಬಣ್ಣದಾಗಿದ್ದು, ಅದರ ಕೆಳಭಾಗದಲ್ಲಿ ವಿವಿಧ ಬಣ್ಣಗಳ ಗೋಟುಗಳಿರುತ್ತವೆ. ವೇಷದ ದಗಲೆಗಳಿಗೆ ಹೊಂದಿಕೆಯಾಗುವ ಗೋಟುಗಳಿರುವ ಬಾಲ್‌ಮುಂಡುಗಳನ್ನು ಧರಿಸುತ್ತಾರೆ. ಪುಂಡುವೇಷಗಳಿಗೆ ಸಣ್ಣ ಅಳತೆಯ ಬಾಲ್‌ಮುಂಡನ್ನು, ರಾಜ ವೇಷಗಳಿಗೆ ಸ್ವಲ್ಪ ದೊಡ್ಡ ಅಳತೆಯ ಬಾಲ್‌ಮುಂಡನ್ನು ಬಳಸಲಾಗುತ್ತದೆ. ಬಾಲ್‌ಮುಂಡುಗಳು ಸೊಂಟದ ಹಿಂಭಾಗ ಸುತ್ತುವರಿದಿದ್ದು ಮುಂಭಾಗ ದಲ್ಲಿ ಎರಡೂ ಕಾಲುಗಳ ನಡುವೆ ತೆರೆದಿರುತ್ತದೆ. ಇದರಿಂದ ಕುಣಿಯಲು ಯಾವುದೇ ತೊಂದರೆಯಾಗುವುದಿಲ್ಲ. ಕೆಲವು ವೇಷಗಳ ಬಾಲ್‌ಮುಂಡುಗಳು ಸಂಪೂರ್ಣ ಸುತ್ತಿರುತ್ತವೆ. ನಂತರ ಸೊಂಟದ ಹಿಂಭಾಗಕ್ಕೆ ಉಲ್ಲನ್ ಡಾಬನ್ನು ಕಟ್ಟಿಕೊಳ್ಳಲಾಗುತ್ತದೆ. ಕೆಲವು ಮೇಳ ಗಳಲ್ಲಿ ಉಲ್ಲನ್ ಡಾಬು ಇಲ್ಲದೆ ನೇತಾಡುವ ಜರಿ ಪಟ್ಟಿಯನ್ನು ಕಟ್ಟಿ ಅದರ ಮೇಲೆ ಅಗಲ ಡಾಬನ್ನು ಕಟ್ಟುವರು. ನಂತರ ಬಾಲ್‌ಮುಂಡಿನ ಎರಡೂ ತುದಿಗಳ ನಡುವೆ ಮುಂಭಾಗದಲ್ಲಿ ಬಿಟ್ಟ ಜಾಗದಲ್ಲಿ ಅಥವಾ ಎರಡೂ ಕಾಲಿನ ಮಧ್ಯಕ್ಕೆ ವೀರಗಸೆ ನಿಲ್ಲುವಂತೆ ಸೊಂಟಕ್ಕೆ ಕಟ್ಟಲಾಗುತ್ತದೆ. ಕೆಲವು ವೇಷಗಳು ವೀರಗಸೆಯ ಇಕ್ಕೆಲಗಳಲ್ಲೂ ಮಾರು ಮಾಲೆಯನ್ನು ಕಟ್ಟಿಕೊಳ್ಳುವುದೂ ಇದೆ.

ಬಳಿಕ ವೇಷಧಾರಿ ಕೈಕಟ್ಟು, ತೋಳ್ಕಟ್ಟು ಮತ್ತು ಭುಜಕೀರ್ತಿಗಳನ್ನು ಕಟ್ಟಿಸಿಕೊಳ್ಳುತ್ತಾನೆ. ಬಳಿಕ ಎರಡೂ ಹೆಗಲುಗಳಲ್ಲಿ ಇಳಿಬಿಟ್ಟು ಬಾಲ್‌ಮುಂಡಿನಿಂದಲೂ ಕೆಳಗೆ ಜೋಲಾಡುವಂತೆ ಎರಡು ಅಥವಾ ಮೂರು ಸೋಗೆವಲ್ಲಿಗಳನ್ನು ಧರಿಸುತ್ತಾನೆ. ಆ ಬಳಿಕ ಎದೆ ಪದಕವನ್ನು ಕಟ್ಟಿಕೊಳ್ಳಲಾಗುತ್ತದೆ. ಕೊರಳಿಗೆ ಕಟ್ಟಿದ ಎದೆ ಪದಕವು ಕುಣಿಯುವಾಗ ಮೇಲೆ ಹಾರದಂತೆ ಕೆಳಗಿನಿಂದಲೂ ದಾರಕಟ್ಟಿ ಸೊಂಟಕ್ಕೆ ಕಟ್ಟಿಕೊಳ್ಳಲಾಗುತ್ತದೆ. ಬಳಿಕ ಕೊರಳಿಗೆ ಅಗಲಡ್ಡಿಗೆ, ಗುಂಡಡ್ಡಿಗೆ ಮೊದಲಾದವನ್ನು ಕಟ್ಟಲಾಗುವುದು. ಆ ಬಳಿಕ ಕೆಲವರು ಕೊರಳ ಹಾರವನ್ನು ಹಾಕಿಕೊಳ್ಳುವರು. ಪುಂಡು ವೇಷಗಳಿಗೆ ತುಂಡು ಸೋಗೆವಲ್ಲಿಗಳಿದ್ದು ಅದನ್ನು ಸೊಂಟದಿಂದ ಇಳಿಯಬಿಡುತ್ತಾರೆ.

ಇಷ್ಟನ್ನೂ ವೇಷಧಾರಿ ತೊಟ್ಟುಕೊಂಡ ಮೇಲೆ ಮುಂದೆ ಕಿರೀಟ ಕಟ್ಟಿಕೊಳ್ಳಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಾನೆ. ಹಣೆಯ ನಾಮದ ಮೇಲೆ ಒಂದು, ಒಂದೂವರೆ ಇಂಚು ಹಿಂದಕ್ಕೆ ಅಥವಾ ನೆತ್ತಿಯ ಮುಂದೆ ಅನೇಕ ಪಟ್ಟಿಗಳಿಂದ ಗಂಟು ಬರುವಂತೆ ಮಾಡ ಲಾಗುತ್ತದೆ. ಈ ಪಟ್ಟಿಗಳ ತುದಿಗಂಟನ್ನು ತಲೆಯ ಕೆಳಗೆ ಕುತ್ತಿಗೆಯ ಹಿಂಭಾಗದಲ್ಲಿ ಕಟ್ಟುತ್ತಾರೆ. ಇದಾದ ಮೇಲೆ ಮೀಸೆ ಹಾಗೂ ಕರ್ಣಪತ್ರವನ್ನು ಕಟ್ಟಿಕೊಳ್ಳಲಾಗುತ್ತದೆ. ಹಿಂದಕ್ಕೆ ಬೆನ್ನಿನ ಮೇಲೆ ಪೂರ್ತಿಯಾಗಿ ಇಳಿಬಿಟ್ಟಂತೆ ಕೇಸರಿಯನ್ನು ನೆತ್ತಿಗೆ ಗಂಟು ಹಾಕಿ ಕಟ್ಟಿಕೊಳ್ಳಲಾಗುತ್ತದೆ. ಆ ಬಳಿಕ ಕಿರೀಟವನ್ನು ಕಟ್ಟಿಕೊಳ್ಳಲಾಗುವುದು. ಚಿಟ್ಟೆಪಟ್ಟಿಯ ಗಂಟುಗಳಿಗೆ ಬಿಗಿಯಾಗಿ ನಿಲ್ಲುವಂತೆ ಕಿರೀಟವನ್ನು ತಲೆಯ ಮೇಲೆ ಇರಿಸಿ ಹಿಂದಕ್ಕೆಳೆದು ಬಿಗಿದು ಕಟ್ಟಲಾಗುತ್ತದೆ. ವೇಷಧಾರಣೆಯ ಕೊನೆಯ ಭಾಗವಾಗಿ ಮತ್ತು ಕರ್ಣಪತ್ರದ ನಡುವೆ ಕಿವಿಯ ಮೇಲ್ಭಾಗದಲ್ಲಿ ಬರುವಂತೆ ‘ಕೆನ್ನೆಪೂ’ವನ್ನು ಇರಿಸಲಾಗುತ್ತದೆ. ಕೆನ್ನೆಪೂವಿನ ಮುಳ್ಳನ್ನು ಎರಡೂ ಕಿವಿಯ ಮೇಲ್ಭಾಗದಿಂದ ತುರುಕಿಸಿ, ಕಡ್ಡಿಯ ಕೊನೆಗಿರುವ ಎರಡೂ ಕೆನ್ನೆಪೂಗಳ ಹಗ್ಗವನ್ನು ಹಿಂಭಾಗದಲ್ಲಿ ಬಿಗಿಯುತ್ತಾರೆ. ಇದು ಕಿರೀಟ ಮತ್ತು ಕರ್ಣಪತ್ರಗಳ ನಡುವೆ ಇರುವ ಜಾಗದಲ್ಲಿ ಬಿಗಿಯಾಗಿ ನಿಂತು ಕರ್ಣಪತ್ರಕ್ಕೆ ಒಂದು ತೆರನ ಆಧಾರ ವಾಗಿರುತ್ತದೆ. ಕೊನೆಯದಾಗಿ ಯಕ್ಷಗಾನ ವೇಷಧಾರಿ ಕೇಸರಿಯನ್ನು ಸೇರಿಸಿಕೊಂಡು ಸಪೂರ ಡಾಬನ್ನು ಮುಂಭಾಗದಲ್ಲಿ ವೀರಕಸೆಯ ಮೇಲಿನ ಅಂಚಿಗೆ ತಾಗಿ ಕಟ್ಟಿಕೊಳ್ಳುತ್ತಾನೆ. ಹೀಗೆ ಒಳ ಇಜಾರು ಧರಿಸುವುದರೊಂದಿಗೆ ಆರಂಭವಾದ ಯಕ್ಷಗಾನದ ವೇಷಗಾರಿಕೆಯು ಸಪೂರ ಡಾಬು ಬಿಗಿಯುವುದರ ಮೂಲಕ ಕೊನೆಗೊಳ್ಳುತ್ತದೆ.

ಈ ತೆರದಲ್ಲಿ ಬಣ್ಣಗಾರಿಕೆ, ವೇಷಭೂಷಣಗಳನ್ನು ತೊಟ್ಟು ಯಕ್ಷಗಾನದ ಪಾತ್ರವೊಂದು ಪೂರ್ಣರೂಪದಲ್ಲಿ ಸಿದ್ಧಗೊಳ್ಳುತ್ತದೆ. ಕಲಾವಿದ ತನ್ನ ಲೌಕಿಕವಾದ ಭೌತಿಕ ಶರೀರವನ್ನು ಸಂಪೂರ್ಣವಾಗಿ ವೇಷದಲ್ಲಿ ಮರೆಮಾಚಿ ಅಲೌಕಿಕ ಪಾತ್ರವಾಗುತ್ತಾನೆ. ಇಲ್ಲಿಂದ ಮುಂದೆ ಪಾತ್ರಧಾರಿಯ ನಡೆ, ನುಡಿ, ಹಾವಭಾವಗಳೆಲ್ಲ ಲೌಕಿಕವನ್ನು ಮೀರಿ ನಿಲ್ಲುವ ಒಂದು ಸ್ಥಿತಿ ಯನ್ನು ಕಾಣಬಹುದು. ಅಂತರಂಗದಲ್ಲಿ ಪಾತ್ರಗಳ ಸ್ವಭಾವವನ್ನೂ ತುಂಬಿ ಭಾವುಕನಾಗುವ ಸ್ಥಿತಿಯನ್ನೂ ಕೂಡ ಇಲ್ಲಿ ಕಲ್ಪಿಸಿಕೊಳ್ಳಬಹುದು. ಲೌಕಿಕವಾದ ಎಲ್ಲ ಸಂಗತಿಗಳನ್ನು ಮರೆಯುವಂತೆ ಮೈಮೇಲಿನ ಇಡೀ ವೇಷಭೂಷಣ ಪ್ರಚೋದಿಸುತ್ತಿರುತ್ತದೆ. ವೇಷತೊಟ್ಟ ಪಾತ್ರಧಾರಿಗೆ ತನ್ನ ಮೈಯ ಉಡುಗೆ ತೊಡುಗೆಗಳು ನೇರವಾಗಿ ಕಾಣುವುದಿಲ್ಲವಾದರೂ ವೇಷಗಳನ್ನು ಕಟ್ಟಿದ ಕಟ್ಟುಗಳು ಪಾತ್ರಧಾರಿಯ ನರನಾಡಿಗಳ ರಕ್ತ ಸಂಚಾರದ ಮೇಲೆ ಪರಿಣಾಮವನ್ನು ಬೀರುತ್ತದೆ. ವೇಷಧಾರಿಯ ಮೈಯ ಮೇಲೆ ಸುಮಾರು ೬೪ ಗಂಟುಗಳಿವೆ ಯೆಂದು ಹೇಳಲಾಗುತ್ತದೆ.

ಹಳೆಯ ನಿಯಮದ ಪ್ರಕಾರವೂ ವೇಷಧಾರಿಯ ಮೈಯ ಮೇಲೆ ಒಟ್ಟು ೬೪ ಕಟ್ಟುಗಳು ಇರಬೇಕಂತೆ. ಹಾಗೆಯೇ ನಾಲ್ಕು ಕುತ್ತುವಿಕೆ ಅಂದರೆ ಒತ್ತಿ ಸುರಿಯುವಿಕೆಗಳೂ ಇರಬೇಕೆಂಬುದು ಪದ್ಧತಿ. ವೇಷ ರಚನೆಯಲ್ಲಿನ ಬದಲಾವಣೆಯ ಕಾರಣಕ್ಕೆ ಬಣ್ಣ, ರಾಜ, ಪುಂಡು ವೇಷಗಳಿಗೆ ಅನುಗುಣವಾಗಿ ಕೆಲವು ಕಟ್ಟುಗಳ ಸಂಖ್ಯೆ ಕಡಿಮೆಯಾಗಿರಬಹುದು.  ಎಂ. ಪ್ರಭಾಕರ ಜೋಶಿಯವರು ಯಕ್ಷಗಾನ ಪದಕೋಶದಲ್ಲಿ ಈ ೬೪ ಕಟ್ಟುಗಳ ಪಟ್ಟಿಯನ್ನು ನೀಡಿದ್ದಾರೆ (೧೯೯೪ : ಪು, ೭, ೮). ಅವುಗಳ ಪ್ರಕಾರ ಅಂಡಿಗೆ, ಕಚ್ಚೆಲಾಡಿಗೆ, ಬಾಲ್‌ಮುಂಡಿಗೆ, ವೀರಕಸೆಗೆ, ಮಾರುಮಾಲೆಗೆ, ಹಾರಕ್ಕೆ, ಮೀಸೆಗೆ, ಕರ್ಣಪತ್ರಕ್ಕೆ, ಕೇದಗೆಗೆ, ಕೇಸರಿಗೆ, ಗಡ್ಡಕ್ಕೆ ತಲಾ ಒಂದರಂತೆ ಒಟ್ಟು ಹನ್ನೊಂದು ಕಟ್ಟುಗಳಿರುತ್ತವೆ. ಗೆಜ್ಜೆಗಳಿಗೆ, ಕಾಲಕಡಗಗಳಿಗೆ, ಮೊಣಕಾಲ ಕೆಳಗೆ ಜಂಗುಗಳಿಗೆ, ಕಚ್ಚೆಗೆ, ಕೈಕಟ್ಟುಗಳಿಗೆ, ತೋಳ್ಕಟ್ಟುಗಳಿಗೆ, ಎದೆ ಪದಕಕ್ಕೆ ಅಡ್ಡಿಗೆಗಳಿಗೆ ತಲಾ ಎರಡರಂತೆ ಹದಿನಾರು ಕಟ್ಟುಗಳಿರುತ್ತವೆ. ಒಳಚಲ್ಲಣಕ್ಕೆ, ದಟ್ಟಿಗೆ, ಡಾಬುಗಳಿಗೆ, ಚಿಟ್ಟೆ ಪಟ್ಟಿಗಳಿಗೆ, ಕಿರೀಟಕ್ಕೆ ತಲಾ ಮೂರು ಕಟ್ಟುಗಳಂತೆ ಒಟ್ಟು ೧೫ ಕಟ್ಟುಗಳಿರುತ್ತವೆ. ಕಾಲುಮುಳ್ಳುಗಳಿಗೆ, ಕಾಲುಚೆಂಡುಗಳಿಗೆ, ದಗಲೆಗಳಿಗೆ, ತಲಾ ಆರು ಕಟ್ಟುಗಳಂತೆ ಒಟ್ಟು ೧೮ ಕಟ್ಟುಗಳಿರುತ್ತವೆ. ಇದಲ್ಲದೆ ಭುಜಮುಳ್ಳುಗಳ ನಾಲ್ಕು ಕಟ್ಟುಗಳೂ ಸೇರಿ ಒಟ್ಟು ೬೪ ಕಟ್ಟುಗಳಾಗುತ್ತವೆ. ನಾಲ್ಕು ಕುತ್ತುಗಳೆಂದರೆ ಕರ್ಣಪತ್ರದ ಮೇಲಿನ ಎಡೆಯಲ್ಲಿ ಕಿವಿಯ ಮೇಲ್ಭಾಗದಲ್ಲಿ ನಿಲ್ಲುವ ಎರಡು ಕೆನ್ನೆಪೂಗಳು ಹಾಗೂ ಎರಡು ಚೆನ್ನೆಪೂಗಳು. ಬಣ್ಣದ ವೇಷಗಳಿಗೆ ಇವುಗಳ ಬದಲಿಗೆ ಓಲೆಗಳನ್ನು ಕಿರೀಟಕ್ಕೆ ಕಟ್ಟುತ್ತಾರೆ. ಕರ್ಣಶಿಖಿ ಪತ್ರಗಳನ್ನು ಓಲೆ ಮತ್ತು ಕಿರೀಟದ ಮಧ್ಯೆ ಕುತ್ತುವುದೂ ಉಂಟು. ಈ ಗಂಟುಗಳು ಪ್ರೇಕ್ಷಕರಿಗೆ ಕಾಣದಂತೆ ಕಟ್ಟಿಕೊಳ್ಳಲಾಗುತ್ತದೆ.

ವೇಷಭೂಷಣದಲ್ಲಿನ ವಿವಿಧ ಆಭರಣಗಳು, ವಸ್ತ್ರಗಳು ಇತ್ಯಾದಿಗಳ ಬಣ್ಣಗಳೆಲ್ಲ ಒಂದಕ್ಕೊಂದು ಪೂರಕವಾಗಿ ಹೊಂದಿಕೊಳ್ಳುತ್ತದೆ. ವಿವಿಧ ವಿಧಾನಗಳ ಸಾಂಗತ್ಯದ ಮೂಲಕವೇ ಆಹಾರ್ಯವು ಹೆಚ್ಚು ಸೌಂದರ್ಯಾತ್ಮಕವಾಗುತ್ತದೆ. ಈ ವೇಷ ವಿಧಾನ ಸಂಪ್ರದಾಯವು ಯಾವುದೇ ಒಂದು ಕಾಲಘಟ್ಟದ ಸೇರ್ಪಡೆಯಾದವೇ ಅಥವಾ ಹಲವು ಕಾಲಘಟ್ಟಗಳ ಕೊಡುಗೆಯಾಗಿಯೊ ಗುರುತಿಸುವ ಸಾಧ್ಯತೆಯಿದೆ. ಸೇಡಿಯಾಪು ಕೃಷ್ಣಭಟ್ಟರು (ರಂಗಸ್ಥಳ, ೧೯೮೦) ಹೇಳುವಂತೆ ತೆಂಕುತಿಟ್ಟಿನ ರಾಜವೇಷಗಳ ವಸ್ತ್ರಾಚ್ಛಾದನ ಪ್ರಕಾರವು ಅದರ ವಿಕಾಸ ಕಾಲವನ್ನು ನಮಗೆ ತಿಳಿಸಬಲ್ಲುದಾಗಿದೆ. ಕೈ ಮೈಗಳನ್ನು ಬಿಗಿದಪ್ಪಿಕೊಂಡರೂ ಅಲ್ಲಲ್ಲಿ ಜೋಲುವ ‘ವಲಿ’ಗಳನ್ನು ಹೊಮ್ಮಿಸುವ ಅಂಗಿ ಸುರಾಲುಗಳು ಮೊಳಕಾಲನ್ನು ಮೀರಿ ಜೋಲುವ ನೆರಿಗೆಯ ‘ಕಟಿಪ್ರವರಣ’ ವಸ್ತ್ರಧಾರಣದ ಈ ಶೈಲಿಗೂ ಮೊಗಲ್ ಚಕ್ರವರ್ತಿಗಳ ಹಾಗೂ ಪ್ರತಾಪಸಿಂಹಾದಿ ನರೇಶರ ಹಳೆಯ ಪ್ರತಿಕೃತಿ(Portrait)ಗಳಲ್ಲಿ ಕಾಣುವ ಪ್ರವರ್ಣ ಸ್ವರೂಪಕ್ಕೆ ಸಾಮ್ಯವು ಸುಸ್ಪಷ್ಟ. ತಾತ್ಪರ್ಯವೆನೆಂದರೆ ತೆಂಕುತಿಟ್ಟಿನ ರಾಜವೇಷಗಳ ಗಡ್ಡಮೀಸೆಗಳ ಮತ್ತು ಉಡುಗೆ ತೊಡುಗೆಗಳ ಸ್ವರೂಪಕ್ಕೆ ಮೂರು ನಾಲ್ಕು ಶತಮಾನಗಳ ಹಿಂದಿನ ನಮ್ಮ ದೇಶದ ರಾಜರ ಗಡ್ಡಮೀಸೆಗಳ ಹಾಗೂ ಉಡುಗೆಗಳ ಸ್ವರೂಪವೇ ಮಾತೃಕೆ ಎಂಬುದನ್ನು ಕಾಣಬಹುದಾಗಿದೆ. ಹೀಗೆ ಸೇಡಿಯಾಪು ಅವರು ಯಕ್ಷಗಾನದ ವೇಷಭೂಷಣಗಳ ಮಾತೃಕೆಗಳನ್ನು ಮೊಗಲ್ ಹಾಗೂ ರಜಪೂತ ಶೈಲಿಯಲ್ಲಿ ಕಾಣುತ್ತಾರೆ.

ಯಕ್ಷಗಾನದ ಆಯುಧಗಳು

ಯಕ್ಷಗಾನವು ಪುರಾಣ ಲೋಕವನ್ನು ಮೂರ್ತಗೊಳಿಸುವ ಒಂದು ಕಲೆಯಾಗಿದ್ದು, ಯಕ್ಷಗಾನ ಪ್ರಸಂಗಗಳಲ್ಲಿ ಯುದ್ಧ ಸನ್ನಿವೇಶಗಳೇ ಹೆಚ್ಚಾಗಿರುತ್ತವೆ. ಪುರಾಣ ಪಾತ್ರಗಳಿಗೆಲ್ಲ ಒಂದೊಂದು ಆಯುಧವನ್ನು ಕಲ್ಪಿಸಲಾಗಿದೆ. ಈ ಆಯುಧಗಳೆಲ್ಲ ಯಕ್ಷಗಾನದಲ್ಲಿ ಯಕ್ಷಗಾನೀಯ ನೆಲೆಯಲ್ಲಿ ಪ್ರತ್ಯಕ್ಷಗೊಳ್ಳುತ್ತವೆ.

ವಜ್ರಾಯುಧ

ಇದು ದೇವೇಂದ್ರನ ಆಯುಧ. ದಧೀಚಿ ಮಹರ್ಷಿಯ ಬೆನ್ನೆಲುಬಿನಿಂದ ನಿರ್ಮಿತ ವಾದುದು ಎಂಬ ಪೌರಾಣಿಕ ಕಥೆಯಂತೆ ಯಕ್ಷಗಾನದಲ್ಲಿಯೂ ಇದನ್ನು ಸಿದ್ಧಪಡಿಸಲಾಗಿದೆ. ಸುಮಾರು ಒಂದು ಮೊಳ ಉದ್ದವಾಗಿರುವ ಯಕ್ಷಗಾನದ ವಜ್ರಾಯುಧವನ್ನು ಮರದಿಂದ ತಯಾರಿಸುತ್ತಾರೆ. ಮರದ ದಂಡದಂತಿದ್ದು, ಮಧ್ಯೆ ಮೂರು ಗಂಟುಗಳನ್ನು ಕೆತ್ತುತ್ತಾರೆ. ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಿಯುತ್ತಾರೆ. ಕೈಯಲ್ಲಿ ಹಿಡಿಯಲು ‘ಹಿಡಿ’ಯ ರೂಪವನ್ನು ಕೆತ್ತಲಾಗಿದೆ. ಈಗ ಸ್ಟೀಲ್‌ನಿಂದ ರಚಿಸಿದ ವಜ್ರಾಯುಧವನ್ನು ಕೂಡ ಉಪಯೋಗಿಸಲಾಗುತ್ತದೆ.

ಗದೆ

ಭೀಮ ಹಾಗೂ ದುರ‍್ಯೋಧನರಿಗೆ ಆಯುಧ ಗದೆ. ಹಿಂದೆ ಇದನ್ನು ಮರದಿಂದ ತಯಾರಿಸುತ್ತಿದ್ದರು. ಈಗ ಸ್ಟೀಲಿನ ಗದೆಗಳು ಬಂದಿವೆ. ಸುಮಾರು ಒಂದು ಮೊಳ ಉದ್ದದ ಮರದ ಹಿಡಿಗೆ ಹತ್ತು ಇಂಚು ಸುತ್ತಳತೆಯ ಮರದ ಬುರುಡೆಯನ್ನು ಜೋಡಿಸಿ ಗದೆಯನ್ನು ಮಾಡುತ್ತಿದ್ದರು. ಗದೆಗೆ ಯೋಗ್ಯವಾದ ಬಣ್ಣವನ್ನು ಲೇಪಿಸುತ್ತಿದ್ದರು.

ದೊಡ್ಡ ಗದೆ

ಇದು ವಜ್ರಾಯುಧಕ್ಕಿಂತ ದೊಡ್ಡದಾಗಿದ್ದು ತಲೆಯು ದುಂಡಗಾಗಿರುತ್ತದೆ. ಈ ಗದೆಗಳು ಇತ್ತೀಚೆಗೆ ಬಳಕೆಗೆ ಬಂದಿದ್ದು ಭೀಮ, ಕೌರವ, ಯಮ ಮೊದಲಾದ ಪಾತ್ರಗಳು ಹಿಡಿದುಕೊಳ್ಳುತ್ತವೆ. ಇವುಗಳು ಕೂಡ ಹಿಂದೆ ಮರದ ರಚನೆಗಳಾಗಿದ್ದು ಈಗ ಸ್ಟೀಲಿನ ರಚನೆಗಳಾಗಿವೆ.

ಬಿಲ್ಲು ಬಾಣ

ಸಾಮಾನ್ಯವಾಗಿ ರಾಜವೇಷಗಳೆಲ್ಲ ಕೈಯಲ್ಲಿ ಹಿಡಿಯುವ ಆಯುಧ ಬಿಲ್ಲು ಮತ್ತು ಬಾಣ. ಬಿಲ್ಲನ್ನು ಅಡಿಕೆ ಮರ, ಮರ, ಬಿದಿರುಗಳಿಂದ ತಯಾರಿಸುತ್ತಾರೆ. ಯಕ್ಷಗಾನದ ಬಿಲ್ಲು ಬಾಗಿರದೆ ನೇರವಾಗಿರುತ್ತದೆ. ಸುಮಾರು ಐದು ಅಡಿ ಉದ್ದದ ನೇರವಾದ ಬಿದಿರಿಗೆ ಹತ್ತಿಯ ನೂಲನ್ನು ಕಟ್ಟಿ ಬಿಲ್ಲನ್ನು ತಯಾರಿಸುತ್ತಾರೆ. ಬಾಣವೂ ಕೂಡಾ ಬಿದಿರು ಅಥವಾ ಮರದ್ದಾಗಿರುತ್ತದೆ. ಸುಮಾರು ಒಂದು ಅಡಿ ಉದ್ದವಿರುತ್ತದೆ. ಬಿಲ್ಲಿನ ಎರಡೂ ತುದಿಗಳಲ್ಲಿ ಗೆಜ್ಜೆಗಳನ್ನು ಕಟ್ಟಿ, ಎರಡು ಉಲ್ಲನ್ ಗೊಂಡೆಗಳನ್ನು ಕಟ್ಟುತ್ತಾರೆ. ಮಧ್ಯ ಭಾಗದಲ್ಲಿ ಗೊಂಡೆಗಳನ್ನು ಕಟ್ಟುವ ಕ್ರಮವಿದೆ. ಬಿದಿರಿಗೆ ಹಳದಿ ಮತ್ತು ಕೆಂಪು ಬಣ್ಣವನ್ನು ಪಟ್ಟೆಯ ಆಕಾರದಲ್ಲಿ ಬಳಿಯುತ್ತಿದ್ದರು. ಯಕ್ಷಗಾನದ ಬಿಲ್ಲು ನೆಲದಲ್ಲಿ ಊರಿದಾಗ ಪಾತ್ರಧಾರಿಯ ಭುಜಕ್ಕೆ ಸಮವಾಗಿರಬೇಕೆಂದೂ, ಬಾಣವು ತ್ರಿಶೂಲದ ಮಧ್ಯದ ಶೂಲದಾಕಾರವಾಗಿ ಆರೆಂಟು ಇಂಚುಗಳಷ್ಟು ಉದ್ದವಾಗಿರುತ್ತವೆ. ಪುಂಡುವೇಷಗಳು ಹಿಡಿಯುವ ಬಿಲ್ಲುಗಳು ಐದಡಿಗಳಿ ಗಿಂತ ಚಿಕ್ಕದಾಗಿರುತ್ತದೆ.

ಖಡ್ಗ

ರಾಕ್ಷಸ ವೇಷಗಳೂ, ಎದುರು ವೇಷಗಳೂ ಕೈಯಲ್ಲಿ ಹಿಡಿಯುವ ಆಯುಧ ಖಡ್ಗ. ಇದನ್ನು ಹಿಂದೆ ಮರದಿಂದ ತಯಾರಿಸುತ್ತಿದ್ದರು. ಈಗ ಸ್ಟೀಲಿನ ಖಡ್ಗಗಳು ಬಂದಿವೆ. ಇದು ಸುಮಾರು ಒಂದೂವರೆ ಅಡಿಯಿಂದ ಎರಡು ಅಡಿಗಳಷ್ಟು ಉದ್ದವಾಗಿರುತ್ತದೆ. ಮರದ ಖಡ್ಗವಾದರೆ ಅದಕ್ಕೆ ಯೋಗ್ಯವಾದ ಬಣ್ಣವನ್ನು ಬಳಿಯಲಾಗುತ್ತದೆ.

ದಂಡ

ಇದು ಋಷಿಮುನಿಗಳು, ಬ್ರಹ್ಮ ಮೊದಲಾದ ಪಾತ್ರಗಳು ಕೈಯಲ್ಲಿ ಹಿಡಿಯುವ ಆಯುಧ. ಮರದಿಂದ ತಯಾರಿಸುತ್ತಾರೆ. ಸುಮಾರು ಒಂದು ಅಡಿ ಉದ್ದವಾಗಿದ್ದು, ತುದಿಯಲ್ಲಿ ‘U’ ಆಕಾರವಿರುತ್ತದೆ. ಹಳದಿ ಮತ್ತು ಕೆಂಪು ಬಣ್ಣವನ್ನು ಬಳಿಯುತ್ತಾರೆ.

ಚಕ್ರ

ಯಕ್ಷಗಾನದಲ್ಲಿ ಶ್ರೀಕೃಷ್ಣ, ವಿಷ್ಣು ಮೊದಲಾದ ಪಾತ್ರಗಳು ಕೈಯಲ್ಲಿ ಹಿಡಿಯುವ ಆಯುಧ ಚಕ್ರ. ಇದನ್ನು ಮರದಿಂದ ತಯಾರಿಸುತ್ತಾರೆ. ಸುಮಾರು ಆರು ಇಂಚು ಅಗಲವಾದ ಚಕ್ರವನ್ನು ಕುಸುರಿ ಕೆಲಸಗಳಿಂದ, ಬಣ್ಣದ ಬೇಗಡೆಗಳಿಂದ ಅಲಂಕರಿಸುತ್ತಾರೆ. ಸುಮಾರು ಅರ್ಧ ಅಡಿ ಉದ್ದವಾದ ಇದು ಒಂದು  ಹಿಡಿಯಿಂದ ಕೂಡಿರುತ್ತದೆ. ಚಕ್ರವು ಹಳದಿ ಬಣ್ಣ ದಿಂದ ಶೋಭಿಸುವಂತೆ ಬೇಗಡೆಯಿಂದ ಅಲಂಕರಿಸಲಾಗುತ್ತದೆ.

ತ್ರಿಶೂಲ

ಮೂರು ಶೂಲಗಳಿದ್ದು ಈಶ್ವರ ಮತ್ತು ದೇವಿ ಪಾತ್ರಗಳು ಈ ಆಯುಧವನ್ನು ಹಿಡಿಯುತ್ತವೆ.

ಪರಶು

ಕೊಡಲಿಯಾಕಾರದ ಆಯುಧ. ಇದನ್ನು ಗಣಪತಿ, ಪರಶುರಾಮ ಮೊದಲಾದ ಪಾತ್ರಗಳು  ಹಿಡಿದುಕೊಳ್ಳುತ್ತವೆ.

ಅಗಲ ಕತ್ತಿ

ಇದು ಚಂಡ-ಮುಂಡ, ಚಂಡ-ಪ್ರಚಂಡ ಮೊದಲಾದ ಜೊತೆ ಪಾತ್ರಗಳು ಹಾಗೂ ರಾಕ್ಷಸ ಪುಂಡು-ಪಾತ್ರಗಳು ಉಪಯೋಗಿಸುವ ಆಯುಧ.

ಇವಲ್ಲದೆ ಕಮಂಡಲ, ನಾರದನ ಚಿಟಿಕೆ, ಸರ್ಪ, ಪತ್ರ, ಈಶ್ವರನ ಮುಡಿ, ಚಂದ್ರ ಮೊದಲಾದ ವಸ್ತುಗಳು ಕೂಡ ಯಕ್ಷಗಾನದ ಪರಿಕರಗಳಲ್ಲಿ ಸೇರುತ್ತವೆ.

ವೇಷಗಳ ತೂಕ

ಯಕ್ಷಗಾನದಲ್ಲಿ ಬಳಸುವ ಶಿರೋಭೂಷಣಗಳಲ್ಲಿ ಅನೇಕ ಬಗೆಗಳಿವೆ. ಅವುಗಳಿಗೆ ವಿಭಿನ್ನ ವಿನ್ಯಾಸಗಳಿವೆ. ಅವುಗಳ ತೂಕ ಸಹ ಬೇರೆಬೇರೆಯಾಗಿವೆ. ಅವುಗಳನ್ನು ಕೇಶಾವರಿ ತಟ್ಟಿ, ಸಣ್ಣ ಕೇಶಾವರಿ ತಟ್ಟಿ, ಕುತ್ತರಿ ಕಿರೀಟ, ಭೀಮನ ಮುಡಿ, ಹನುಮಂತನ ಕಿರೀಟ, ಪೂಂಬೆ ಕಿರೀಟ, ರಾಜ ಕಿರೀಟ, ಪಕಡಿ ಕಿರೀಟ, ನಾಟಕೀಯ ಕಿರೀಟ, ದೇವಿ ಕಿರೀಟ, ತುರಾಯಿ, ಕೊಂಬುಗಳು ಹೀಗೆ ಹೆಸರಿಸಲಾಗುತ್ತದೆ.

ಯಕ್ಷಗಾನದಲ್ಲಿ ಅತ್ಯಂತ ಭಾರದ ವೇಷಭೂಷಣಗಳನ್ನು ಧರಿಸುವ ವೇಷಗಳೆಂದರೆ ಬಣ್ಣದ ವೇಷಗಳು. ರಾಕ್ಷಸ ಪಾತ್ರಗಳ ಮುಖವನ್ನು ಚುಟ್ಟಿ ಇಡುವ ಮೂಲಕ ಹಿಗ್ಗಿಸುವುದರ ಜತೆಗೆ ಇಡೀ ದೇಹವನ್ನು ವೇಷಭೂಷಣಗಳ ಮೂಲಕ ಹಿಗ್ಗಿಸುತ್ತಾರೆ. ಬಣ್ಣದ ವೇಷಗಳು ಧರಿಸುವ ಕೇಶಾವರಿ ತಟ್ಟೆ ಕಿರೀಟವು ಒಟ್ಟು ೨೪ ಇಂಚುಗಳಷ್ಟು ಅಗಲವಾಗಿದ್ದು, ಮರದಿಂದ ಈ ಕಿರೀಟವನ್ನು ತಯಾರಿಸುತ್ತಾರೆ. ಇದು ಸುಮಾರು ಎರಡರಿಂದ ಎರಡೂವರೆ ಕಿ.ಗ್ರಾಂ. ತೂಕವಿರುತ್ತದೆ. ಕಿರೀಟದ ಅಂಚಿನಲ್ಲಿ ಒಂದು ಇಂಚು ಉಲ್ಲನ್ ಇರುತ್ತದೆ. ಯಕ್ಷಗಾನದ ಎಲ್ಲ ವೇಷಗಳ ಪೃಷ್ಠದ ಭಾಗದಲ್ಲಿ ಅಂಡು ಕಟ್ಟಿ ಹಿಗ್ಗಿಸುವ ಸಂಪ್ರದಾಯವಿದೆ. ರಾಕ್ಷಸ ಪಾತ್ರಗಳಿಗಂತೂ ಗೋಣಿಚೀಲ ಮತ್ತು ಬಟ್ಟೆಗಳನ್ನು ಉಪಯೋಗಿಸಿ ಅಂಡು ಕಟ್ಟುತ್ತಾರೆ. ಸುಮಾರು ಒಂದು ಕೇಜಿಯಷ್ಟು ಅಂಡು ಭಾರವಿರುತ್ತದೆ. ಅದರ ಮೇಲೆ ಬಾಲ್‌ಮುಂಡು ಧರಿಸಿ, ಸುಮಾರು ಐದು ಮಾರು ಉದ್ದದ ದಟ್ಟಿಯನ್ನು ಬಿಗಿಯುತ್ತಾರೆ. ಬಣ್ಣದ ವೇಷಗಳ ಭುಜದಂಬೆ, ಎದೆ ಪದಕ, ವೀರಗಾಸೆಗಳೇ ಸಾಕಷ್ಟು ವಿಸ್ತಾರವಾಗಿದೆ. ಬಣ್ಣದ ವೇಷಗಳು ಮೂರು ನಾಲ್ಕು ಸೋಗೆವಲ್ಲಿಗಳನ್ನು ಧರಿಸುವುದು ಕ್ರಮ. ಹೀಗೆ ಒಬ್ಬ ಬಣ್ಣದ ವೇಷಧಾರಿ ಸುಮಾರು ಹತ್ತು ಕಿ. ಗ್ರಾಂ.ಗಳಷ್ಟು ವೇಷಭೂಷಣಗಳನ್ನು ಧರಿಸಿಕೊಳ್ಳುತ್ತಾನೆ.

ಒಂದು ಕಿರೀಟ ವೇಷವು ಐದರಿಂದ ಏಳು ಕಿ.ಗ್ರಾಂ.ಗಳಷ್ಟು ವೇಷಭೂಷಣಗಳನ್ನು ಧರಿಸುತ್ತದೆ. ರಾಜ ಕಿರೀಟವು ಸುಮಾರು ೩/೪ ಕಿ.ಗ್ರಾಂ. ಭಾರವಿರುವುದು. ಬಣ್ಣದ ವೇಷಕ್ಕೆ ಹೋಲಿಸಿದರೆ ಅಂಡು ಬಟ್ಟೆಯ ಪ್ರಮಾಣವೂ ಕಡಿಮೆ. ಎದೆ ಪದಕ, ಭುಜಕೀರ್ತಿ, ವೀರಗಾಸೆಗಳ ಗಾತ್ರ ಕಿರಿದು.

ಪುಂಡು ವೇಷಧಾರಿಗಳು ಇನ್ನೂ ಕಡಿಮೆ ವೇಷ ಪರಿಕರಗಳನ್ನು ಧರಿಸುತ್ತಾರೆ. ಪಕಡಿ ಕಿರೀಟವು ತುಂಬ ಕಡಿಮೆ ಭಾರವುಳ್ಳದ್ದು. ಬಟ್ಟೆ, ಉಲ್ಲನ್, ಬೇಗಡೆ, ನವಿಲುಗರಿಗಳಿಂದ ಸಿದ್ಧಪಡಿಸಿದ ಇದು ಸುಮಾರು ೫೦೦ ಗ್ರಾಂ ಭಾರವಿರುವುದು. ಪುಂಡುವೇಷಗಳು ಹೆಚ್ಚು ಕುಣಿತವಿರುವ ವೇಷಗಳಾದುದರಿಂದ ವೇಷಭೂಷಣಗಳೆಲ್ಲ ಮಿತವಾಗಿವೆ.

ಯಕ್ಷಗಾನದಲ್ಲಿ ಅತ್ಯಂತ ಕಡಿಮೆ ಭಾರದ ವೇಷಭೂಷಣಗಳನ್ನು ಧರಿಸುವ ವೇಷ ಗಳೆಂದರೆ ಸ್ತ್ರೀವೇಷಗಳು ಮತ್ತು ಹಾಸ್ಯ ವೇಷಗಳು. ಸ್ತ್ರೀವೇಷಗಳು  ಸಾಮಾನ್ಯ ಸ್ತ್ರೀಯರಂತಿರುವುದರಿಂದ ಹೆಚ್ಚು ಭಾರವನ್ನು ಹೊರುವ ಪ್ರಮೇಯವಿಲ್ಲ. ರಾಣಿ ವೇಷಗಳು ಪುಟ್ಟ ಕೇದಗೆ ಕಿರೀಟವನ್ನು ಧರಿಸುತ್ತವೆ. ತೋಳ್ಕಟ್ಟು,  ಕೈಕಟ್ಟು, ಜಾಲರಿ ಡಾಬುಗಳೆಲ್ಲ ಹೆಚ್ಚು ಭಾರವಿರುವ ಪರಿಕರಗಳಲ್ಲ. ಸ್ತ್ರೀವೇಷಗಳ ಹಿಂಭಾಗಕ್ಕೆ ಬಟ್ಟೆ ಕಟ್ಟಿ ನಿತಂಬವನ್ನು ಎತ್ತರಿಸುವ ಕ್ರಮವಿದೆ. ಹಾಸ್ಯ ಪಾತ್ರಗಳಂತೂ ಸರಳವಾದ ವೇಷಗಳು. ಅವು ದಗಲೆ, ಪೈಜಾಮ, ಕಚ್ಚೆಗಳ ಮೂಲಕ ಯಕ್ಷಗಾನದಲ್ಲಿ ಪ್ರಕಟಗೊಳ್ಳುತ್ತವೆ.

ಯಕ್ಷಗಾನದ ವೇಷಗಳ ವರ್ಗೀಕರಣ

ಯಕ್ಷಗಾನದ ವೇಷಗಳು ರೂಪುಗೊಳ್ಳುವುದು ಚೌಕಿಯಲ್ಲಿ. ಯಕ್ಷಗಾನದ ಬಣ್ಣದ ಮನೆ(Green room)ಗೆ ಚೌಕಿ ಎಂದು ಹೆಸರು. ಚೌಕಿಯ ವ್ಯವಸ್ಥೆಯನ್ನು ಗಮನಿಸಿದರೆ ವೇಷಗಳ ಸಾಂಪ್ರದಾಯಕ ವರ್ಗೀಕರಣವನ್ನು ಕಂಡುಕೊಳ್ಳಬಹುದು. ಈ ವರ್ಗೀಕರಣವು ವೇಷಗಳ ವೈವಿಧ್ಯತೆಯನ್ನು ತಿಳಿಸುತ್ತದೆ. ಅಲ್ಲದೆ ವೇಷಗಳ ಪ್ರಾಮುಖ್ಯವನ್ನನುಸರಿಸಿ ಹಿರಿತನದ ಆಧಾರದಲ್ಲಿ ವರ್ಗೀಕರಿಸಿ ಬಣ್ಣದ ಮನೆಯಲ್ಲಿ ಜಾಗವನ್ನು ನಿಗದಿಪಡಿಸಲಾಗಿದೆ. ಆಯತಾಕಾರದ ಚೌಕಿಯ ಅಗ್ರಭಾಗದಲ್ಲಿ ದೇವರನ್ನು ಪ್ರತಿಷ್ಠಾಪಿಸ ಲಾಗುತ್ತದೆ. ಆಮೇಲೆ ಕೆಳಗೆ ಸೂಚಿಸಿದಂತೆ ಚೌಕಿಯ ಬಲದ ಭಾಗದಲ್ಲಿ ಬಣ್ಣದ ವೇಷ, ಎದುರು ವೇಷ, ಮೂರನೆಯ ಕಟ್ಟು ವೇಷ, ಪೀಠಿಕೆ ವೇಷ, ಮುಖ್ಯ ಸ್ತ್ರೀವೇಷ, ಬಾಲಗೋಪಾಲ, ಕೋಡಂಗಿ ಇತ್ಯಾದಿ ಮತ್ತೆ ಎಡಭಾಗದಲ್ಲಿ ಅನುಕ್ರಮವಾಗಿ ಎರಡನೆಯ ಬಣ್ಣ, ಪುಂಡುವೇಷ, ಏಳನೆಯ ಕಟ್ಟು ವೇಷ, ಎರಡನೆಯ ಸ್ತ್ರೀವೇಷ, ಎರಡನೆಯ ಪುಂಡುವೇಷ, ಬಾಲಗೋಪಾಲ, ಕೋಡಂಗಿ ಇತ್ಯಾದಿ ಇವು ಚೌಕಿಯ ಸಾಮಾನ್ಯ ಸಂಪ್ರದಾಯ. ಕೊನೆಯ ಅಡ್ಡಚೌಕಿಯಲ್ಲಿ ದೇವರಿಗೆ ಎದುರಾಗಿ ಹಾಸ್ಯ ಪಾತ್ರಧಾರಿಗೆ ಜಾಗವನ್ನು ನೀಡಲಾಗುತ್ತದೆ. ಇದರಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳೊಡನೆ ಬೇರೆ ಬೇರೆ ಕ್ರಮಗಳನ್ನು ಅನುಸರಿಸಲಾಗುತ್ತದೆ. ಸಂಪ್ರದಾಯದ ಈ ಕ್ರಮಕ್ಕಿಂತ ವ್ಯತ್ಯಾಸವಾದ ಎರಡು ಕ್ರಮಗಳನ್ನು ಕೂಡ ಮುಂದೆ ಗಮನಿಸಬಹುದು.

ಚೌಕಿಯ ಅನುಕ್ರಮ : ತೆಂಕುತಿಟ್ಟು

ದೇವರು

ಒಂದನೆಯ ಬಣ್ಣ ಎರಡನೆಯ ಬಣ್ಣ
ಎದುರುವೇಷ ಪುಂಡುವೇಷ
ಮೂರನೆಯ ಕಟ್ಟುವೇಷ ಏಳನೆಯ ಕಟ್ಟುವೇಷ
ಪೀಠಿಕೆವೇಷ ಎರಡನೆಯ ಸ್ತ್ರೀವೇಷ
ಮುಖ್ಯಸ್ತ್ರೀವೇಷ ಎರಡನೆಯ ಪುಂಡುವೇಷ
ಬಾಲಗೋಪಾಲ ಬಾಲಗೋಪಾಲ
ಕೋಡಂಗಿ ಕೋಡಂಗಿ
ಇತ್ಯಾದಿ ಇತ್ಯಾದಿ

 

ಅಡ್ಡಚೌಕಿ
ಹಾಸ್ಯಗಾರ

ಚೌಕಿ : ತೆಂಕುತಿಟ್ಟುಇನ್ನೊಂದು ಕ್ರಮ

ದೇವರು 

ಒಂದನೇ ಬಣ್ಣ ಎರಡನೇ ಬಣ್ಣ
ಪೀಠಿಕೆವೇಷ ಎರಡನೇವೇಷ  (ಎದುರುವೇಷ)
ಮೂರನೇ ಕಟ್ಟುವೇಷ ಮೂರನೇ ಬಣ್ಣ (ಎಡೆಒತ್ತು)
ಒಂದನೇ  ಪುಂಡುವೇಷ ಎರಡನೇ ಪುಂಡುವೇಷ
ಮುಖ್ಯಸ್ತ್ರೀವೇಷ ಎರಡನೇ ಸ್ತ್ರೀವೇಷ
ಬಾಲಗೋಪಾಲ ಬಾಲಗೋಪಾಲ
ಕೋಡಂಗಿ ವಗೈರೆ ಕೋಡಂಗಿ ವಗೈರೆ
ಹುಡುಗರು ಹುಡುಗರು

ಅಡ್ಡಚೌಕಿ
ಹಾಸ್ಯಗಾರ

ಚೌಕಿ ತೆಂಕುತಿಟ್ಟು : ಮತ್ತೊಂದು ಕ್ರಮ

ದೇವರು

ಎದುರುವೇಷ ಬಣ್ಣದವೇಷ
ಪೀಠಿಕೆವೇಷ ಎರಡನೆಯ ಬಣ್ಣದವೇಷ
ಮೂರನೆಯ ಕಟ್ಟುವೇಷ ಐದನೆಯ ಕಟ್ಟುವೇಷ
ಮುಖ್ಯಸ್ತ್ರೀವೇಷ ಏಳನೆಯ ಕಟ್ಟುವೇಷ
ಪುಂಡುವೇಷ ಒತ್ತು ಪುಂಡುವೇಷ
ಸ್ತ್ರೀವೇಷ ಸ್ತ್ರೀವೇಷ
ಬಾಲಗೋಪಾಲ ಬಾಲಗೋಪಾಲ
ಕೋಡಂಗಿ ಕೋಡಂಗಿ
ಹುಡುಗರು ಹುಡುಗರು

 

ಅಡ್ಡಚೌಕಿ
ಹಾಸ್ಯಗಾರ

ಚೌಕಿಯ ಭಾಷೆಯಲ್ಲಿ ಹುಡುಗರೆಂದರೆ, ಅಭ್ಯಾಸಿಗಳು. ಮುಖ್ಯವೇಷಧಾರಿಗಳಲ್ಲಿ ಅವರು ಗಣನೆಗೆ ಬರುವುದಿಲ್ಲ. ಅವರು extras ಅಥವಾ apprentices ಆಗಿರುವರು (ನೋಡಿ : ಪ್ರಭಾಕರ ಜೋಶಿ, ೧೯೯೪).

ಸುಮಾರು ಹದಿಮೂರು ವೇಷಗಳನ್ನು ಇಲ್ಲಿ ಹೆಸರಿಸಲಾಗಿದೆ. ಇವುಗಳಲ್ಲಿ ಮುಖ್ಯ ವಾದುದು ಒಂದನೆಯ ಬಣ್ಣ. ಒಂದನೆಯ ಬಣ್ಣವೆಂದರೆ ಮುಖ್ಯ ಬಣ್ಣದವೇಷ. ಯಕ್ಷಗಾನದಲ್ಲಿ ಬಣ್ಣದ ವೇಷಕ್ಕೆ ಮೊದಲ ಪ್ರಾಶಸ್ತ್ಯ. ಯಕ್ಷಗಾನದಲ್ಲಿ ಕೋಡಂಗಿ ವೇಷದ ಮೂಲಕ ರಂಗ ಪ್ರವೇಶ ಮಾಡಿದ  ಕಲಾವಿದನೊಬ್ಬ ಯಕ್ಷಗಾನದ ಪರಿಪೂರ್ಣ ವೇಷಧಾರಿಯಾಗುವುದು ಬಣ್ಣದ ವೇಷದ ಮೂಲಕ. ಬಣ್ಣದ ವೇಷಧಾರಿಗಳು ಯಕ್ಷಗಾನದ ಅನೇಕ ವರ್ಷಗಳ ಅನುಭವಿ ಕಲಾವಿದರು. ವಯಸ್ಸಿನಲ್ಲಿ ಹಿರಿಯರು. ಯಕ್ಷಗಾನದ ಎಲ್ಲಾ ವೇಷಗಳ ನಡೆಯನ್ನು ಅರಿತವರು. ಈ ಕಾರಣಕ್ಕಾಗಿ ತಂಡದಲ್ಲಿ ಕಲಾವಿದರಾಗಿಯೂ, ವೇಷದ ಕಾರಣಕ್ಕಾಗಿಯೂ ಇವರು ಗೌರವಾರ್ಹರು. ಇಡೀ ಯಕ್ಷಗಾನದಲ್ಲಿಯೇ ಅತ್ಯಂತ ಹೆಚ್ಚು ಸಮಯ ತೆಗೆದುಕೊಂಡು ಬಣ್ಣಗಾರಿಕೆ, ವೇಷ ಇತ್ಯಾದಿಗಳನ್ನು ಮಾಡಿಕೊಂಡು ಕಡಿಮೆ ಸಮಯ ರಂಗದಲ್ಲಿ ಶೋಭಿಸುವ ಪಾತ್ರ ಇವರದು. ಇದಕ್ಕೆ ಚೌಕಿಯಲ್ಲಿ ಶ್ರಮ ಹೆಚ್ಚು. ಈ ಕಾರಣಕ್ಕಾಗಿ ದೇವರ ದೀಪದ ಸಮೀಪ ಕುಳಿತು ತುಂಬಾ ಹೊತ್ತು ಮುಖವರ್ಣಿಕೆ ಯನ್ನು ಮಾಡಲು ಅನುಕೂಲವಾಗುವಂತೆಯೂ ದೇವರ ಸಮೀಪದ ಮೊದಲ ಪ್ರಾಶಸ್ತ್ಯದ ಜಾಗವನ್ನು ಬಣ್ಣದ ವೇಷಕ್ಕೆ ನೀಡಿರಬೇಕು.

ಎರಡನೆಯ ಪ್ರಾಶಸ್ತ್ಯ ಎದುರು ವೇಷಕ್ಕೆ. ಎದುರು ವೇಷವು ಯಕ್ಷಗಾನದ ಪ್ರಸಂಗದ ಬಹುಮುಖ್ಯ ಪಾತ್ರ. ಕರ್ಣ, ಭೀಷ್ಮ, ದುರ್ಯೋಧನ ಪ್ರಸಂಗದ ದೃಷ್ಟಿಯಿಂದ ಎದುರು ವೇಷಗಳೇ ಪ್ರಸಂಗದ ಪ್ರತಿ ನಾಯಕರಾಗಿ ಗುರುತಿಸಬಹುದಾದ ಈ ಪಾತ್ರಗಳ ನಿರ್ವಹಣೆಯ ಮೂಲಕವೇ ಯಕ್ಷಗಾನದ ಪ್ರಯೋಗದ ಮೌಲ್ಯಮಾಪನ ನಡೆಯುತ್ತದೆ. ಯಕ್ಷಗಾನದ ಒಟ್ಟು ಆಶಯ ಸಾತ್ವಿಕ ಪಾತ್ರಗಳ ಜಯವೇ ಆಗಿದೆ. ಆದರೆ ಆಹಾರ್ಯದ ದೃಷ್ಟಿಯಿಂದ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ಸಾತ್ವಿಕೇತರ ಪಾತ್ರಗಳಿಗೆ. ಅಂದರೆ ಯಕ್ಷಗಾನದ ರಂಗಕರ್ಮಿಗಳೆನಿಸಿದ ಪ್ರಬುದ್ಧ ಕಲಾವಿದರು ನಿರ್ವಹಿಸುವ ಪಾತ್ರಗಳು ಹೆಚ್ಚಾಗಿ ಸಂಘರ್ಷಾತ್ಮಕವಾದವುಗಳು. ಇಂತಹ ಪಾತ್ರ ನಿರ್ವಹಣೆಗೆ ರಂಗಕ್ರಿಯೆಯ ಅನೇಕ ಸಂಪ್ರದಾಯಗಳನ್ನು ತುಂಬಿರಬೇಕು. ಹಾಗೆಯೇ ವೇಷ ವಿಧಾನದ ನೆಲೆಯಿಂದಲೂ ಮುಖವರ್ಣಿಕೆಯ ನೆಲೆಯಿಂದಲೂ ಇಂತಹ ಪಾತ್ರಗಳಿಗೆ ಹೆಚ್ಚಿನ ಶ್ರದ್ಧೆ, ಶ್ರಮ ಅಗತ್ಯ. ಮುಖವರ್ಣಿಕೆಯ ವಿವಿಧ ವಿನ್ಯಾಸಗಳನ್ನು ರೂಪಿಸುವ ಪಾತ್ರಗಳೇ ಅಭಿನಯದ ಎಲ್ಲಾ ಅಂಗಗಳಲ್ಲೂ ಹೆಚ್ಚು ಸೃಜನಶೀಲವಾಗಿರಬೇಕಾಗುತ್ತದೆ. ಇಂತಹ ಪಾತ್ರಗಳು ಯಕ್ಷಗಾನ ದಲ್ಲಿ ಕಲಾವಿದರಿಗೆ ನಿರಂತರ ಸವಾಲುಗಳಾಗಿ ಎದುರಾಗಿವೆ. ಅಭಿನಯದ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕ ಅಂಗಗಳಲ್ಲೆಲ್ಲ ಈ ಪಾತ್ರಗಳೇ ಹೆಚ್ಚು ಕಲಾವಿದರ ಕಲಾ ಸಾಮರ್ಥ್ಯಕ್ಕೆ ಪಂಥಾಹ್ವಾನ ನೀಡಿವೆ. ಪಾತ್ರಗಳು ಹೆಚ್ಚು ಬೌದ್ದಿಕತೆಯನ್ನು ಪ್ರದರ್ಶಿಸುವವುಗಳಾದರೆ ಅವುಗಳಿಗೆ ವಾಚಿಕಾಂಗದಲ್ಲಿ ಪ್ರಾಮುಖ್ಯ ಲಭ್ಯವಾಗುತ್ತದೆ. ಆದರೆ ಬೌದ್ದಿಕತೆಯ ಜೊತೆಗೆ ಇತರ ಅಭಿನಯಾಂಗಗಳಲ್ಲಿ ಪಾತ್ರ ಮೂರ್ತಗೊಳ್ಳಬೇಕಾದ ಎದುರುವೇಷಗಳ ಚೌಕಿಯ ವ್ಯವಸ್ಥೆಯಲ್ಲೂ ಪ್ರಾಮುಖ್ಯವನ್ನು ನೀಡಿರುವುದನ್ನು ಗಮನಿಸ ಬಹುದು.

ಮುಖವರ್ಣಿಕೆಗೆ ಪ್ರಾಧಾನ್ಯವಿರುವ ಪಾತ್ರಗಳಿಗೆ ದೇವರ ಚೌಕಿಗೆ ಸಮೀಪದಲ್ಲಿಯೇ ಜಾಗ ಕೊಡುವುದಕ್ಕೆ  ಇನ್ನೊಂದು ಕಾರಣವೆಂದರೆ ಸದಾ ಉರಿಯುವ ದೇವರ ದೀಪದ ಬೆಳಕು ಕಲಾವಿದರ ಮುಖವರ್ಣಿಕೆಗೆ ಪೂರಕವಾಗಿರುವುದು. ಆಕಸ್ಮಿಕವಾಗಿ ಬೆಳಕಿನ ವ್ಯವಸ್ಥೆಗೆ ಅಡಚಣೆಯಾದರೂ ಕಲಾವಿದರ ಮುಖವಿನ್ಯಾಸಕ್ಕೆ  ತೊಡಕಾಗುವುದಿಲ್ಲ. ಅದೇನೆ ಇರಲಿ ಒಟ್ಟು ಚೌಕಿ ವ್ಯವಸ್ಥೆಯನ್ನು ನೋಡಿದರೆ ವೇಷಗಳನ್ನು ಸಂಖ್ಯೆಯ ದೃಷ್ಟಿಯಿಂದಲೂ ಪ್ರಾಶಸ್ತ್ಯ ನೀಡಿ ಹೇಳಿರುವುದನ್ನು ಗಮನಿಸಬಹುದು. ಒಂದನೆಯ ವೇಷ, ಎರಡನೆಯ ವೇಷ ಹೀಗೆ ಏಳನೆಯ ವೇಷದವರೆಗೆ ಈ ಸಂಖ್ಯಾವಾಚಕವನ್ನು  ಸೇರಿಸಿ ಹೆಸರಿಸಿರುವುದನ್ನು ಕಾಣಬಹುದು. ಇವುಗಳ ಹಿನ್ನೆಲೆಯನ್ನು ಇಲ್ಲಿ ಚರ್ಚಿಸಬಹುದು.

ಯಕ್ಷಗಾನ ಪ್ರಸಂಗದ ನಾಯಕ ಪಾತ್ರಗಳಾದ ದೇವೇಂದ್ರ, ಶ್ರೀರಾಮ, ಅರ್ಜುನ ಮೊದಲಾದ ಪಾತ್ರಗಳನ್ನು ಪೀಠಿಕೆ ವೇಷಗಳೆಂದು ಗುರುತಿಸಲಾಗುತ್ತದೆ. ಇವು ಪ್ರಸಂಗದ ಆರಂಭದಲ್ಲಿಯೇ ಬರುತ್ತವೆ. ಪ್ರಸಂಗದ ಒಟ್ಟು ಆಶಯಕ್ಕೆ ಅನುಗುಣವಾಗಿ ವಿಜಯಶಾಲಿ ಗಳಾಗುವ ಪಾತ್ರಗಳಿವು. ಈ ನಾಯಕ ಪಾತ್ರಗಳಿಗೆ ಪ್ರತಿಸ್ಪರ್ಧಿಯಾಗಿ ಬರುವ ಪಾತ್ರಗಳಿಗೆ ಎದುರು ವೇಷಗಳು ಎಂದು ಹೆಸರಿಸುವುದು ರೂಢಿ. ಈ ಎದುರು ವೇಷಗಳು ದುಷ್ಟ ಪಾತ್ರಗಳೇ ಆಗಬೇಕೆಂದಿಲ್ಲ. ನಾಯಕ ಸ್ಥಾನದಲ್ಲಿರುವ ಪಾತ್ರಗಳಿಗೆ ಪ್ರತಿಸ್ಪರ್ಧಿಯೆನಿಸುವ ಪಾತ್ರಗಳಿವು. ಭೀಷ್ಮ, ಕರ್ಣ ದುರ್ಯೋಧನಾದಿ ಪಾತ್ರಗಳು ಎದುರು ವೇಷಗಳೆಂಬ ಹೆಸರಿನಿಂದ ಗುರುತಿಸಲಾಗುತ್ತದೆ. ನಾಯಕ ಪಾತ್ರಗಳನ್ನು ಎದುರಿಸುವ ಪಾತ್ರಗಳಾದ್ದರಿಂದ ಎದುರು ವೇಷಗಳೆಂಬ ಹೆಸರು  ಬಂದಿರಬೇಕು ಎಂದು ಸೇಡಿಯಾಪು ಕೃಷ್ಣಭಟ್ಟರು ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕ, ಪ್ರತಿನಾಯಕ ಎಂಬಿತ್ಯಾದಿ ಪಾತ್ರಕಲ್ಪನೆಗಳು ಯಕ್ಷಗಾನದಲ್ಲಿಲ್ಲ. ಪೀಠಿಕೆಯ ವೇಷಗಳಿಗೆ ಮುಖಾಮುಖಿ ಯಾಗುವ ವೇಷಗಳೇ ಎದುರುವೇಷಗಳು. ಎದುರು ವೇಷಗಳಿಗೆ ಮುಖವರ್ಣಿಕೆಯ ರೇಖಾ ವಿನ್ಯಾಸಗಳಲ್ಲಿ ಪ್ರಖರತೆ ಅಧಿಕ. ಪೀಠಿಕೆ ವೇಷಗಳು ಪ್ರಸಂಗದ ಹಿನ್ನೆಲೆಯನ್ನು ಒದಗಿಸಿ ಪ್ರಸಂಗದ ಬೆಳವಣಿಗೆಗೆ ಪೂರಕವಾದ ಆವರಣವನ್ನು ನಿರ್ಮಿಸಿಕೊಡುತ್ತವೆ. ಅಂತಿಮವಾಗಿ ಪೀಠಿಕೆ ವೇಷಗಳ ಆಶಯಗಳಿಗೆ ಜಯ ಲಭಿಸುತ್ತದೆ. ಇಡೀ ಪ್ರಸಂಗದ ಸಾರವನ್ನು ಪ್ರತಿಬಿಂಬಿಸುವ ಪಾತ್ರಗಳು ಪೀಠಿಕೆ ವೇಷಗಳು. ತರುಣ ವೇಷಗಳನ್ನು ಪುಂಡು ವೇಷಗಳೆಂದು ಕರೆಯುತ್ತಾರೆ.

ಸಂಪ್ರದಾಯದ ಪಟ್ಟಿಯನ್ನು ನೋಡಿದರೆ ಇಲ್ಲಿ ಒಂದನೆಯ ಬಣ್ಣ, ಎರಡನೆಯ ಬಣ್ಣ, ಮೂರನೆಯ ಕಟ್ಟು ವೇಷ ಇತ್ಯಾದಿ ಸಂಖ್ಯಾವಾಚಕದ ಮೂಲಕ ವೇಷಗಳನ್ನು ನಿರ್ದೇಶಿಸಿರುವುದನ್ನು ಗಮನಿಸಬಹುದು. ಕೆಲವು ವೇಷಗಳನ್ನು ಹೆಸರಿಸುವುದರ ನಡುವೆ ಕೆಲವೊಂದು ವೇಷಗಳನ್ನು ಸಂಖ್ಯಾವಾಚಕದ ನೆಲೆಯಿಂದ ಸ್ಥಾನ ನಿರ್ದೇಶಿಸಿರುವುದನ್ನು ನೋಡಿದರೆ ಹಿಂದಿನ ಕಾಲದ ವೇಷ ವರ್ಗೀಕರಣ ಹೆಚ್ಚು ವೈಜ್ಞಾನಿಕ ಎಂದೇ ಅನ್ನಿಸುತ್ತದೆ.

ಹಿಂದಿನ ಕಾಲದ ಆಟದ ಮೇಳವೊಂದರಲ್ಲಿ ಏಳು ಮಂದಿ ವೇಷಧಾರಿಗಳಿರುತ್ತಿದ್ದರು. ಜೊತೆಗೆ ಇಬ್ಬರು ಸ್ತ್ರೀ ವೇಷಧಾರಿಗಳು ಹಾಗೂ ಒಬ್ಬ ಹಾಸ್ಯಗಾರರು ಹೀಗೆ ಮುಮ್ಮೇಳದಲ್ಲಿ ಒಟ್ಟು ಹತ್ತು ಮಂದಿ ಕಲಾವಿದರು ಮಾತ್ರ ಇರುತ್ತಿದ್ದರು. ಉಳಿದವರೆಲ್ಲ ಹುಡುಗರು. ಇವರು ಕೋಡಂಗಿ, ನಿತ್ಯವೇಷ ಮೊದಲಾದವುಗಳನ್ನು ನಿರ್ವಹಿಸುವ ಹಾಗೂ ಕಲಿಯುವ ಹುಡುಗರು. ಅವರು ಸಾಂಪ್ರದಾಯಕ ತರಬೇತಿಯನ್ನು ಇಲ್ಲಿಯೇ ಪಡೆಯುತ್ತಿದ್ದರು.

ಮೇಲೆ ಹೇಳಿದ ಏಳು ಮಂದಿ ವೇಷಗಳಿಗೆ ಕಟ್ಟುವೇಷಗಳು ಎಂದೇ ಹೇಳಲಾಗುತ್ತಿತ್ತು. ಇವರು ಬಣ್ಣಕ್ಕೆ ಕುಳಿತುಕೊಳ್ಳುವ ಸ್ಥಾನನಿರ್ಣಯವನ್ನು ಸಂಖ್ಯೆಯ ಮೂಲಕ ನಿರ್ದೇಶಿಸಿರ ಬೇಕು. ಈ ಸ್ಥಾನ ನಿರ್ದೇಶನವು ವೇಷಧಾರಿಯ ಪರಿಣತಿ ಅಥವಾ ಅನುಭವ ಜೇಷ್ಠತೆಯನ್ನೇ ಆಧರಿಸಿ ಮಾಡಲಾಗಿದೆ ಎಂಬುದನ್ನಿಲ್ಲಿ ಗಮನಿಸಬಹುದು. ಅಂದರೆ ಪಾತ್ರಗಳ ಆಹಾರ್ಯದ ನೆಲೆಯಿಂದ ಮುಖವರ್ಣಿಕೆಯಲ್ಲಿ ರೇಖಾ ವಿನ್ಯಾಸಗಳ ಪ್ರಖರತೆಯ ಆಧಾರದಲ್ಲಿಯೇ ಸ್ಥಾನ ನಿರ್ದೇಶನ ಮಾಡಲಾಗಿದೆ. ದೇವರ ಚೌಕಿಯ ಬಲಭಾಗದಲ್ಲಿ ಒಂದರಿಂದ ನಾಲ್ಕನೆಯ ಬಣ್ಣ ಹಾಗೂ ಎಡ ಚೌಕಿಯಲ್ಲಿ ಐದರಿಂದ ಏಳನೆಯ ಬಣ್ಣಗಳಿಗೆ ಸ್ಥಾನ ನಿರ್ದೇಶನ ಮಾಡಲಾಗಿದೆ. ಆ ನಂತರವಷ್ಟೇ ಸ್ತ್ರೀ ಪಾತ್ರಧಾರಿಗಳ ಸ್ಥಾನ ಅಡ್ಡ ಚೌಕಿಯಲ್ಲಿ ಹಾಸ್ಯಗಾರನ ಸ್ಥಾನ.

ಈ ಕೆಳಗಿನ ಕೋಷ್ಟಕದಲ್ಲಿ ಚೌಕಿಯ ಸ್ವರೂಪವನ್ನು ಕಂಡುಕೊಳ್ಳಬಹುದು.

ದೇವರ ಚೌಕಿ

ಒಂದನೆಯ ಬಣ್ಣ ಐದನೆಯ ಬಣ್ಣ
ಎರಡನೆಯ ಬಣ್ಣ ಆರನೆಯ ಬಣ್ಣ
ಮೂರನೆಯ ಬಣ್ಣ ಏಳನೆಯ ಬಣ್ಣ
ನಾಲ್ಕನೆಯ ಬಣ್ಣ ಎರಡನೆಯ ಸ್ತ್ರೀ ವೇಷ
ಸ್ತ್ರೀ ವೇಷ  

ಹಾಸ್ಯಗಾರ

ಯಕ್ಷಗಾನದ ಪಾತ್ರಗಳೆಲ್ಲ ಬಣ್ಣದ ವೇಷಗಳೇ ಆಗಿವೆ. ಮುಖಕ್ಕೆ ಬಣ್ಣ ಹಾಕುವುದರ ಮೂಲಕವೇ ಪಾತ್ರಗಳಾಗಿ ಬದಲಾಗುವ ಪ್ರಕ್ರಿಯೆ ಇದೆ. ಈ ಕಾರಣದಿಂದ ಯಕ್ಷಗಾನದಲ್ಲಿ ವೇಷ ಮಾಡಲು ಆರಂಭಿಸುವುದೆಂದರೆ ಬಣ್ಣ ಹಾಕಲು ಆರಂಭಿಸುವುದೆಂದೇ ಅರ್ಥ. ಇದನ್ನು ಬಣ್ಣಕ್ಕೆ ಕುಳಿತುಕೊಳ್ಳುವುದು ಎಂದೇ ಹೆಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಣ್ಣದ ಪ್ರಾಮುಖ್ಯವನ್ನು ಅಥವಾ ಪ್ರಖರತೆಯನ್ನನುಸರಿಸಿ ಸಂಖ್ಯೆಯ ಮೂಲಕ ಸ್ಥಾನ ನಿರ್ಣಯ ಮಾಡಿದುದು ಸಾಧುವೆಂದೆನಿಸುತ್ತದೆ. ಚೌಕಿಯ ಸಂಪ್ರದಾಯದಲ್ಲಿ ಬಣ್ಣದ ವೇಷವು ಉನ್ನತಸ್ಥಾನದಲ್ಲಿದ್ದರೆ ಕೋಡಂಗಿ ವೇಷವು ಕನಿಷ್ಠ ಸ್ಥಾನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಎಂದರೆ ಯಕ್ಷಗಾನದ ತಿಳುವಳಿಕೆಯಲ್ಲದೆ ವೇಷ ತೊಡಲು ಕಲಿಯುವ ಹಂತದ ಕೋಡಂಗಿಗೂ ಆಹಾರ್ಯದ ಸಕಲವನ್ನು ತಿಳಿದಿರುವ ಉತ್ತುಂಗ ಸ್ಥಾನದಲ್ಲಿರುವ ಬಣ್ಣದ ವೇಷದವರೆಗಿನ ವೇಷಗಳನ್ನು ಅಧ್ಯಯನ ದೃಷ್ಟಿಯಿಂದ ವರ್ಗೀಕರಿಸಬೇಕಾದುದು ಅನಿವಾರ್ಯ. ಹಾಗಾಗಿ ವೇಷಗಳನ್ನು ಅವುಗಳ ಸ್ವರೂಪವನ್ನನುಸರಿಸಿ ಆರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.

ಕೋಡಂಗಿ ಬಾಲಗೋಪಾಲರ ವೇಷಗಳೆಲ್ಲ ಯಕ್ಷಗಾನದ ಪೂರ್ವರಂಗದಲ್ಲಿ ಬರುವ ವೇಷಗಳು. ಅವುಗಳನ್ನು ಆಗ ತಾನೆ ಯಕ್ಷಗಾನದಲ್ಲಿ ತರಬೇತು ಹೊಂದುತ್ತಿರುವ ಹುಡುಗರೇ ನಿರ್ವಹಿಸುತ್ತಾರೆ. ಅವರಿಗೆ ಇದುವೇ ಸಾಂಪ್ರದಾಯಕ ತರಬೇತಿ. ಇವುಗಳಲ್ಲದೆ ಸುಬ್ರಾಯ ವೇಷ, ಅರ್ಧನಾರೀಶ್ವರ ಹಾಗೂ ಇನ್ನಿತರ ಕಟ್ಟು ಹಾಸ್ಯಗಳೂ ಬರುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳನ್ನೆಲ್ಲ ಪೂರ್ವರಂಗದ ವೇಷಗಳು ಎಂದು ಗುರುತಿಸಲಾಗಿದೆ.

ಚೌಕಿ ಸಂಪ್ರದಾಯದಲ್ಲಿ ಪೀಠಿಕೆ ವೇಷಗಳು ಹಾಗೂ ಎದುರು ವೇಷಗಳೂ ಇವೆಲ್ಲ ವೇಷ ಸ್ವರೂಪದ ದೃಷ್ಟಿಯಿಂದ ಒಂದೇ ಸ್ವರೂಪದ ಕಿರೀಟ ವೇಷಗಳು. ಇವುಗಳ ಮುಖಗಳ ರೇಖಾ ವಿನ್ಯಾಸ ಬಣ್ಣಗಳು ಮಾತ್ರ ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ಕಿರೀಟ ವೇಷಗಳು ಎಂದು ಗುರುತಿಸಿ ಅಧ್ಯಯನ ಮಾಡಲಾಗಿದೆ. ಇವಿಷ್ಟನ್ನು ಹೊರತು ಪಡಿಸಿದರೆ ಉಳಿದಂತೆ ಚೌಕಿ ಸಂಪ್ರದಾಯದಲ್ಲಿ ಹೆಸರಿಸಿದ ಪಕಡಿ ವೇಷಗಳು, ಸ್ತ್ರೀ ವೇಷಗಳು, ಬಣ್ಣದ ವೇಷಗಳು, ಹಾಸ್ಯ ವೇಷಗಳು ಎಂಬ ವರ್ಗೀಕರಣವನ್ನು ಉಳಿಸಿಕೊಂಡು ಅಧ್ಯಯನ ಮಾಡಲಾಗಿದೆ. ಪ್ರಸ್ತುತ ಬರವಣಿಗೆಯಲ್ಲಿ ಪುರುಷ ವೇಷಗಳು ಎಂಬ ಶೀರ್ಷಿಕೆಯಲ್ಲಿ ಕಿರೀಟ ವೇಷಗಳು ಮತ್ತು ಪಕಡಿ ವೇಷಗಳು ಎಂಬ ವಿಭಾಗಗಳಲ್ಲಿ ಅಧ್ಯಯನ ಮಾಡಲಾಗಿದೆ.