ಯಕ್ಷಗಾನ ಆಹಾರ್ಯದಲ್ಲಿ ಬಣ್ಣಗಳು, ವಸ್ತ್ರಗಳು, ಆಭರಣಗಳು ಇತ್ಯಾದಿ ಪ್ರಮುಖ ಪರಿಕರಗಳು ಇವೆ. ಇವುಗಳನ್ನು ಒಂದಕ್ಕೊಂದು ಪೂರಕವಾಗುವಂತೆ ಜೋಡಿಸಿ, ನಿರ್ದಿಷ್ಟವಾದ ವೇಷವೊಂದನ್ನು ರೂಪಿಸಲಾಗುತ್ತದೆ. ಪರಂಪರಾಗತವಾಗಿ ಬಂದ ವಸ್ತು ಪರಿಕರಗಳನ್ನೇ ಸಾಂಪ್ರದಾಯಕ ಚೌಕಟ್ಟಿನಲ್ಲಿ ಸೌಂದರ್ಯಾತ್ಮಕವಾಗಿ ರೂಪಿಸಲಾಗುತ್ತದೆ. ಇಲ್ಲಿ ಬಳಸುವ ಒಂದೊಂದು ಪರಿಕರಗಳೂ ಸಮಕಾಲೀನ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಿಕೊಂಡವುಗಳೇ ಆಗಿವೆ. ಕಲೆಯ ಆಂತರಂಗಿಕ ಬೇಡಿಕೆಗಳಿಗೆ ಅನುಗುಣವಾಗಿ ಬಾಹ್ಯ ಸಂಗತಿಗಳೂ ಕಲೆಯನ್ನು ಪ್ರಭಾವಿಸಿವೆ ಎನ್ನುವುದು ಗಮನಾರ್ಹ ವಿಷಯ. ಕಲೆ ಆಂತರಿಕವಾಗಿ ವಿಕಾಸಗೊಳ್ಳುತ್ತಾ ಬರುವ ಹಂತದಲ್ಲಿ ಬೇರೆ ಬೇರೆ ವಿದ್ಯಮಾನಗಳಿಗೆ ತೆರೆದುಕೊಂಡು ವಿಸ್ತರಿಸಿಕೊಂಡಿದೆ. ಇದು ಕಾಲಕ್ಕನುಸರಿಸಿದ ಆಧುನಿಕ ಪರಿಕರ ಹಾಗೂ ತಂತ್ರಜ್ಞಾನಗಳ ಬದಲಾವಣೆಯ ಕಾರಣಗಳೂ ಹೌದು. ಜೊತೆಗೆ ಸಮಕಾಲೀನ ಪ್ರೇಕ್ಷಕರನ್ನು ಗಮನ ಸೆಳೆಯುವಂತೆ ಮಾಡುವಲ್ಲಿ ಇಂತಹ ಬದಲಾವಣೆಗಳು ಅನಿವಾರ್ಯವೇ ಆಗುತ್ತವೆ. ದೊಂದಿ ಬೆಳಕಿನಲ್ಲಿ ಬಳಸುತ್ತಿದ್ದ ಬಣ್ಣಗಳು, ವೇಷಗಳು, ವಿದ್ಯುತ್ ಬೆಳಕಿನ ಸಂದರ್ಭದಲ್ಲಿ ಆಕರ್ಷಣೀಯವಾಗಿ ಕಾಣಿಸಲಾರವು. ಈ ಹಿನ್ನೆಲೆಯಲ್ಲಿ ಬಣ್ಣಗಳಲ್ಲಿ ಬದಲಾವಣೆಗಳಾಗಿವೆ. ಮಣಿ ಸಾಮಾನುಗಳಿಂದ ರೂಪುಗೊಳ್ಳುತ್ತಿದ್ದ ಆಭರಣಗಳ ಭಾಗದಲ್ಲಿ ಬಂಗಾರದ ಬಣ್ಣದ ಬೇಗಡೆ ಅಂಟಿಸಿದ ಮರದ ಆಭರಣಗಳು ಸೇರಿಕೊಂಡಿವೆ. ಹತ್ತಿ ಹಾಗೂ ಹೂಗಳ ಬಳಕೆಯ ಜಾಗದಲ್ಲಿ ಉಲ್ಲನ್, ರೇಷ್ಮೆ, ಪ್ಲಾಸ್ಟಿಕ್, ನೈಲಾನ್ ಬಟ್ಟೆಗಳು ಜಾಗ ಪಡೆದಿವೆ. ಇವೆಲ್ಲವು ಗಳನ್ನು ಸ್ವೀಕರಿಸಿ ಕಲೆ ಅಂತರಂಗದಲ್ಲಿ ಬದಲಾವಣೆಗಳಿಗೆ ಸ್ವಂದಿಸಿದೆ. ಈ ಬದಲಾವಣೆಗಳು ಕಾಲದ ಅಗತ್ಯಗಳಿಗೆ ಅನುಗುಣವಾದವುಗಳೇ ಆಗಿರಬಹುದು. ಆದರೆ ಅನೇಕ ವೇಳೆ ಅವುಗಳನ್ನು ಮೀರಿ ಕಲಾವಿದರ ಪ್ರತಿಭೆಗಳು ವಿಭಿನ್ನ ನೆಲೆಗಳಲ್ಲಿ ಆಹಾರ್ಯವನ್ನು ರೂಪಿಸಿ ಬೆಳೆಸಿಕೊಂಡು ಬಂದಿರುವುದನ್ನು ಸಹ ಗಮನಿಸಬಹುದಾಗಿದೆ. ಪ್ರಸ್ತುತ ಅಧ್ಯಾಯದಲ್ಲಿ ಯಕ್ಷಗಾನ ಆಹಾರ್ಯದ ಪರಿಕರಗಳು ಮೂಲಭೂತವಾಗಿ ಯಕ್ಷಗಾನದಲ್ಲಿ ಜಾಗ ಪಡೆದ ಬಗೆ ಹಾಗೂ ಅವುಗಳ ನೆಲೆಗಳ ಕಡೆಗೆ ಗಮನಹರಿಸಲಾಗಿದೆ. ಅವುಗಳಲ್ಲಿ ಬಣ್ಣಗಾರಿಕೆ, ವೇಷಧಾರಣ ವಿಧಾನ, ಆಭರಣ ಪರಿಕರಗಳು ಹಾಗೂ ಅವುಗಳ ಅರ್ಥ ಇತ್ಯಾದಿಗಳನ್ನು ವಿವರವಾಗಿ ಗಮನಿಸಬಹುದು.

ಬಣ್ಣಗಳು

ಬಣ್ಣವು ಕಾಣುವ ಸ್ವರೂಪದಲ್ಲಿದೆಯಾದರೂ ಅದನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿ ಸುವುದು ಕಷ್ಟ. ಆದರೆ ಬಣ್ಣಗಳನ್ನು ಗುರುತಿಸಲು ಎಳೆಯ ಮಕ್ಕಳಿಗೂ ಸಾಧ್ಯ. ಪ್ರಕೃತಿಯಲ್ಲಿರುವ ವಿವಿಧ ಬಣ್ಣಗಳನ್ನು ನೋಡಿ ಆನಂದಿಸುವ ಸ್ವಭಾವ ಮನುಷ್ಯರಲ್ಲಿ ಸಹಜವಾಗಿದೆ. ಹಾಗೆಯೇ ತಾನು ಉಪಯೋಗಿಸುವ  ಪ್ರತಿಯೊಂದು ವಸ್ತುವಿನಲ್ಲಿಯೂ ಇರುವ ಬಣ್ಣಗಳ ವ್ಯತ್ಯಾಸವನ್ನು ಮಾನವ ಗುರುತಿಸಬಲ್ಲ. ಬಣ್ಣವನ್ನು ವಿವರಿಸಬೇಕೆಂದಾಗ ಕೆಂಪು ಎಂದರೆ ರಕ್ತದಂತೆ, ಬಿಳಿ ಎಂದರೆ ಹಾಲಿನಂತೆ ಎಂದು ಮಾತ್ರ ಹೇಳಲು ಸಾಧ್ಯವಾಗುತ್ತದೆ. ಆದರೆ ಈ ಬಣ್ಣಗಳನ್ನು ಕಂಡಾಗ ಮನುಷ್ಯನ ಪ್ರಜ್ಞೆಯಲ್ಲಿ ಅದನ್ನು ಮೀರಿದ ಅರ್ಥ, ಸಂಕೇತಗಳ ನೆಲೆಯಿಂದ ದಾಖಲಾಗಿರುತ್ತದೆ. ಅಂದರೆ ಬಣ್ಣವೊಂದರ ಗ್ರಹಿಕೆ ಮೂಲಭೂತವಾಗಿ ಒಂದೇ ಆದರೂ ಅದರ ಕಾರ್ಯ ವಿಧಾನಗಳು ಸ್ಥಳ, ಕಾಲ, ಸಂದರ್ಭಗಳನ್ನನುಸರಿಸಿ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಒಂದು ಬಣ್ಣಕ್ಕೆ ನಿರ್ದಿಷ್ಟ ಅರ್ಥವಿರುವುದಿಲ್ಲ. ಕೆಲವು ವಸ್ತುಗಳಿಗೆ ಬಣ್ಣವೇ ಅಸ್ತಿತ್ವವಾದರೆ ಇನ್ನು ಕೆಲವುಗಳಿಗೆ ವಸ್ತುಗಳ ಅಸ್ತಿತ್ವಕ್ಕೆ ಬಣ್ಣ ಆನುಷಂಗಿಕ. ಆದರೆ ಮನುಷ್ಯ ಅವುಗಳನ್ನು ಮೀರಿದ ಸಾಂದರ್ಭಿಕ ಅರ್ಥ ಸಂಕೇತಗಳನ್ನು ನೀಡಿರುತ್ತಾನೆ. ಇದಕ್ಕೆ ನಿರ್ದಿಷ್ಟ ಸಮಾಜ ಸಾಂಸ್ಕೃತಿಕವಾಗಿ ನೀಡಿದ ಅರ್ಥಗಳೇ ಕಾರಣವಾಗಿರಬಹುದು. ಭಾರತದ ತ್ರಿವರ್ಣ ಧ್ವಜದಲ್ಲಿ ಬಳಸಿದ ಹಸಿರು ಸಮೃದ್ದಿಯ ಸಂಕೇತ. ಬಿಳಿ ಪರಿಶುದ್ಧತೆಯ ಸಂಕೇತ. ಕೇಸರಿ ತ್ಯಾಗದ ಸಂಕೇತವಾಗಿದೆ. ಜನಪದ ಸಂಸ್ಕೃತಿಯಲ್ಲಿ ಕೆಂಪು ಭಯದ ಸಂಕೇತವಾಗಿದ್ದರೆ ಆಧುನಿಕ ದಿನಗಳಲ್ಲಿ ಕೆಂಪು ಕಮ್ಯುನಿಸ್ಟರ ಕ್ರಾಂತಿಯ ಸಂಕೇತವಾಗಿದೆ. ಇವನ್ನೆಲ್ಲ ರಾಜಕೀಯ ನೆಲೆಯ ಅರ್ಥ ಸಂಕೇತಗಳಾಗಿ ನೋಡಬಹುದು. ಆದರೆ ಬಣ್ಣದ ಬಳಕೆಯು ಪ್ರಾಚೀನ ಶಿಲಾಯುಗದ ಕಾಲದಿಂದಲೇ ಆಗಿದೆ ಎಂಬುದನ್ನು ಪ್ರಾಚ್ಯ ಅವಶೇಷಗಳಿಂದ ಗುರುತಿಸಲಾಗಿದೆ. ಹರಪ್ಪ ಮೊಹೆಂಜೋದಾರೋಗಳಲ್ಲಿ ದೊರಕಿದ ವಸ್ತುಗಳಲ್ಲೂ ಬಣ್ಣದ ಬಳಕೆಯಾದ ಬಗೆಗೆ ತಿಳಿದು ಬರುತ್ತದೆ. ಶಿಲಾಯುಗದ ಗುಹೆಗಳಲ್ಲೂ ಬಣ್ಣಗಳನ್ನು ಬಳಸಿದ ಕುರುಹುಗಳು ದೊರೆಯುತ್ತವೆ. ಇಲ್ಲೆಲ್ಲ ಹೆಚ್ಚಾಗಿ ಹಳದಿ, ಕೆಂಪು ಹಾಗೂ ಕಪ್ಪು ಬಣ್ಣಗಳನ್ನೇ ಬಳಸಲಾಗಿದೆ.

ಅಜಂತ ಗುಹೆಗಳಲ್ಲಿನ ಚಿತ್ರಗಳನ್ನು ಕುರಿತಂತೆ ಶಿವರಾಮ ಕಾರಂತರು “ಅವರು ಬಳಸಿದ ಬಣ್ಣಗಳೆಂದರೆ ಕಪ್ಪಿಗೆ ಮಸಿ, ಅರಿಷಿನಕ್ಕೆ ಅರದಾಳ, ನೀಲ, ಕಂದು, ಕೆಂಪು ಮೊದಲಾದ ವುಗಳಿಗೆ ವಿವಿಧ ಜಾತಿಯ ಮೃತ್ತಿಕೆ ಇಲ್ಲವೇ ಕಲ್ಲು ಪುಡಿಗಳು. ಇವೆಲ್ಲಾ ಹೆಚ್ಚಾಗಿ ಕಡುಪು ಬಣ್ಣಗಳು (Dark colours) ಒಂದೂವರೆ ಸಾವಿರ ವರ್ಷಗಳ ಬಳಿಕ ಅವನ್ನು ಕಾಣುತ್ತಿರುವ ನಮಗೆ, ಅವು ಸಾಕಷ್ಟು ಮಾಸಿದುದರಿಂದ ತುಂಬಾ ಹಿತವಾಗಿಯೇ ಕಾಣುತ್ತವೆ” ಎಂದಿದ್ದಾರೆ (ಮಾಲಿನಮಲ್ಯ.ಬಿ, ೧೯೯೪ : ೨೩೮). ದ್ರಾವಿಡರ ಕೇಂದ್ರವಾಗಿದ್ದ ಮೊಹೆಂಜೋದಾ ರೋದಲ್ಲಿ ಬಳಸಿದ ಬಣ್ಣಗಳು ಹಳದಿ ಮಿಶ್ರಿತ ನಸುಕೆಂಪು ಅಥವಾ ಕೆಂಪು ಮತ್ತು ಕೆಲವು ಗೆರೆಗಳು. ಈ ಎಲ್ಲಾ ದೃಷ್ಟಿಯಿಂದ ಶಿಲಾಯುಗದಲ್ಲಿ, ಮೊಹೆಂಜೋದಾರೋ ಹರಪ್ಪಾಗಳಲ್ಲಿ ಕೆಲವು ದ್ರಾವಿಡ ವಾಸ್ತು ಶಿಲ್ಪದಲ್ಲಿ ಕಂಡುಬರುವ ಬಣ್ಣಗಳೆಂದರೆ ಕಂದು, ಹಳದಿ ಮತ್ತು ಕೆಂಪು. ಬಾದಾಮಿಯ ಗುಹೆಗಳಲ್ಲಿ ನೀಲಿ ಮತ್ತು ಹಸಿರು ಬಣ್ಣದ ಪ್ರಯೋಗ ಇದೆ. ಹಾಗಾಗಿ ಮೊದಲ ದ್ರಾವಿಡ ಬಣ್ಣಗಳು ಮೂರು. ೧. ಹಳದಿ ೨. ಕೆಂಪು ೩. ಕಪ್ಪು. ಕಂದು ಬಣ್ಣವು ಕೆಂಪು ಮತ್ತು ಕಪ್ಪಿನ ಮಿಶ್ರಣದಿಂದ ಒದಗುವ ಬಣ್ಣ. ಕಂದು ಬಣ್ಣವನ್ನು ಪ್ರಕೃತಿ ದತ್ತವಾಗಿ ಸ್ವೀಕರಿಸಿದ್ದಿರಬಹುದು. ದ್ರಾವಿಡರು ಉಪಯೋಗಿಸಿದ ಮುಖ್ಯ ಬಣ್ಣಗಳು ಕಪ್ಪು, ಕೆಂಪು ಮತ್ತು ಹಳದಿ (ಕೇಶವಶರ್ಮ, ೨೦೦೪ : ೫).

ವೇದಗಳಲ್ಲಿ ವಿವಿಧ ಕಲೆಗಳ ಬಗೆಗಿನ ಉಲ್ಲೇಖಗಳಿವೆ. ಋಗ್ವೇದದಲ್ಲಿ ಮರದ ಕುಶಲ ಕೈಗಾರಿಕೆ, ಚಿನ್ನದ ಕೆಲಸ, ತುರುಬು ಕಟ್ಟುವುದು, ಸಂಗೀತ, ಶಿಲ್ಪ, ನಾಟ್ಯ, ಕಾವ್ಯ ಇತ್ಯಾದಿ ಕಲೆಗಳ ಕುರಿತು ಹೇಳಿದೆ. ಯಜುರ್ವೇದದಲ್ಲಿ ನಾಟ್ಯಗಳಲ್ಲಿ ಬಳಸುತ್ತಿದ್ದ ಮುಖವರ್ಣಿಕೆಯ ಕುರಿತ ಉಲ್ಲೇಖಗಳನ್ನು ಕಾಣಬಹುದು (ಕೇಶವಶರ್ಮ, ೨೦೦೪:೫). ಆದರೆ ಕಲಾರೂಪಗಳಲ್ಲಿ ಬಳಸುತ್ತಿದ್ದ ಮುಖವರ್ಣಿಕೆಗಳ ಬಗೆಗಿನ ವಿವರಗಳಿಲ್ಲ.

ಭಾರತೀಯ ತತ್ವಜ್ಞಾನದಲ್ಲಿ ಕಲೆಗೆ ಸಂಬಂಧಿಸಿದಂತೆ ೧. ರಸಬ್ರಹ್ಮವಾದ, ೨. ನಾದಬ್ರಹ್ಮವಾದ, ೩. ವಸ್ತು ಬ್ರಹ್ಮವಾದವೆಂದು ತ್ರಿವಿಧಗಳಿವೆ. ಇಲ್ಲಿ ಕಲೆಯನ್ನು ಬ್ರಹ್ಮತ್ವಕ್ಕೆ ಏರಿಸಿದ್ದನ್ನು ಕಾಣಬಹುದು. ಕಲೆಯ ಪರಿಣಾಮ ಕೂಡಾ ಬ್ರಹ್ಮಾನಂದ ಸದೃಶವಾದುದು.

ಸಮಾಜದಲ್ಲಿ ಕಂಡುಬರುವ ಎಲ್ಲಾ ಮನೋಭಾವಗಳನ್ನು ಸತ್ವ, ರಜ, ತಮಗಳೆಂದು ಮೂರು ಗುಣಗಳಾಗಿ ವರ್ಗೀಕರಿಸಲಾಗಿದೆ. ಮೂರು ಗುಣಗಳಿಗೆ ಮೂರು ಬಣ್ಣಗಳನ್ನು ಹೇಳಲಾಗಿದೆ. ಈ ಮೂರು ಬಣ್ಣಗಳಿಗೂ ಬೆಂಕಿ, ನೀರು, ಭೂಮಿಗೂ ಸಂಬಂಧವನ್ನು ಕಲ್ಪಿಸಲಾಗಿದೆ. ಭಾಗವತ, ಪುರಾಣ ಇತ್ಯಾದಿಗಳಲ್ಲಿ ಬರುವ ಬ್ರಹ್ಮ, ವಿಷ್ಣು, ಮಹೇಶ್ವರ ಇವರು ಒಂದೊಂದು ಗುಣದ ಅಧಿದೇವತೆಗಳು. ಸತ್ವವು ಒಳ್ಳೆಯದನ್ನು ಪ್ರತಿನಿಧಿಸುತ್ತದೆ. ರಜೋ ಗುಣವು ಕ್ಷಾತ್ರದ ಪ್ರತಿನಿಧಿ. ಇದು ಸತ್ವ ಹಾಗೂ ತಮೋ ಗುಣವನ್ನು ಒಳಗೊಂಡಿರುತ್ತದೆ. ತಾಮಸವು ಅಂಧಕಾರವನ್ನು ಪ್ರತಿನಿಧಿಸುತ್ತದೆ. ಸಾಂಖ್ಯಕಾರಿಕದ ವಿವರಣೆಯಿಂದ ನಾವು ಇದನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ಬಿಳಿ       –           ನೀರು    –           ಸತ್ವ      –           ವಿಷ್ಣು ಇದಕ್ಕೆ ಅಧಿದೇವತೆ

ಕೆಂಪು    –           ಅಗ್ನಿ      –           ರಜ       –           ಬ್ರಹ್ಮ ಇದಕ್ಕೆ ಅಧಿದೇವತೆ

ಕಪ್ಪು      –           ಭೂಮಿ –             ತಮ     –           ಶಿವ ಇದಕ್ಕೆ ಅಧಿದೇವತೆ

ದೇವಿ ಭಾಗವತದಲ್ಲಿ ಸತ್ವಗುಣವು ರಜೋಗುಣದ ಸಂಬಂಧಿ, ರಜೋಗುಣವು ಸತ್ವದ ಸಂಬಂಧಿ. ಸತ್ವ ಮತ್ತು ರಜಸ್ಸುಗಳೆರಡೂ ತಮಸ್ಸಿನ ಸಂಬಂಧಿ, ಸತ್ವ ರಜಸ್ಸುಗಳೆರಡೂ ತಮಸ್ಸಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ (ಕೇಶವಶರ್ಮ, ೨೦೦೪ : ೭).

ತಮೋಗುಣವು ರಕ್ಕಸರದು. ಕ್ರೌರ್ಯವೇ ಅದರ ಸ್ವಭಾವ ಎಂದು ಮನು ಕೂಡಾ ಹೇಳಿದ್ದಾನೆ. ಸತ್ವಗುಣ ದೇವತೆಗಳದು. ಸಾತ್ವಿಕವೇ ಅದರ ಸ್ವಭಾವ. ಬಣ್ಣಗಳಲ್ಲಿ ಬಿಳಿ ಮತ್ತು ಕಪ್ಪು ವಿರುದ್ಧವಾಗಿ ಪ್ರವರ್ತಿಸು ವವುಗಳು. ಇವುಗಳ ಮಧ್ಯದಲ್ಲಿ ಕೆಂಪು ಬಣ್ಣ ನಿಲ್ಲುತ್ತದೆ. ಸಪ್ತವರ್ಣಗಳ ಮಿಶ್ರಣವೇ ಬಿಳಿ ಬಣ್ಣ.

ಕಪ್ಪು      –  ತಮ, ಕೆಂಪು – (ಕಪ್ಪು-ಬಿಳಿ) ರಜ (ಸತ್ವ-ತಮ)

ಬಿಳಿ       –  ಸತ್ವ ಈ ಬಣ್ಣಗಳ ನಡುವೆ ಉಳಿದೆಲ್ಲಾ ಬಣ್ಣಗಳು ಸೇರುತ್ತವೆ.

ಕೆಂಪು ಬಣ್ಣವು ರಜಸ್ಸಿಗೆ ಸಂಕೇತ. ರಜಸ್ಸಿನಲ್ಲಿ ಸಾತ್ವಿಕ, ತಾಮಸ ಎರಡೂ ಗುಣಗಳು ಸೇರಿರುತ್ತವೆ. ಬಣ್ಣದಲ್ಲಿ ಬಿಳಿ ಹಾಗೂ ಕಪ್ಪು ಎರಡೂ ಬಣ್ಣಗಳ ಅಂಶ ಅಡಕಗೊಂಡಿರುತ್ತದೆ. ಹೀಗೆ ಗುಣ ಮತ್ತು ಬಣ್ಣದ ಸಂಯೋಜನೆಯ ನೆಲೆಯಿಂದಲೇ ಭಾರತೀಯ ಕಲೆಗಳು ಬಣ್ಣಗಳನ್ನು ಬಹುತೇಕ ರೂಪಿಸಿಕೊಂಡಿವೆ. ಭರತಮುನಿಯು ನಾಟ್ಯಶಾಸ್ತ್ರದಲ್ಲಿ ಹೇಳಿದಂತೆ ಶೃಂಗಾರ ರಸದ ಬಣ್ಣ ಕಪ್ಪು (ಶ್ಯಾಮ), ಬಿಳಿ ಬಣ್ಣ ಹಾಸ್ಯದ್ದು, ಕರುಣಕ್ಕೆ ಹರಿತ ವರ್ಣ, ರೌದ್ರಕ್ಕೆ ಕೆಂಪು, ಧೀರತೆಗೆ ಗೌರ (ಹೊಳೆಯುವ  ಬಿಳುಪು), ಭಯಾನಕದ್ದು ಕಪ್ಪು, ಬೀಭತ್ಸದ್ದು, ನೀಲಿ ಅದ್ಭುತದ್ದು ಹಳದಿ. ಹೀಗೆ ಒಂದೊಂದು ರಸಕ್ಕೂ ಒಬ್ಬೊಬ್ಬ ಅಧಿದೇವತೆಯನ್ನು ಹೇಳಿದ್ದಾನೆ. ಶೃಂಗಾರಕ್ಕೆ ವಿಷ್ಣು, ಹಾಸ್ಯ ರಸಕ್ಕೆ ಗಣಪತಿ, ರೌದ್ರ ರಸಕ್ಕೆ ರುದ್ರ, ಕರುಣ ರಸಕ್ಕೆ ಯಮ, ಬೀಭತ್ಸಕ್ಕೆ ಮಹಾಕಾಲ, ಭಯಾನಕಕ್ಕೆ ಕಾಲ, ವೀರಕ್ಕೊಡೆಯನು ಮಹೇಂದ್ರಾ, ಅದ್ಭುತಕ್ಕೊಡೆಯ ಬ್ರಹ್ಮ, ಭರತನು ಮೊದಲಿಗೆ ಶೃಂಗಾರ, ರೌದ್ರ, ಬೀಭತ್ಸ, ವೀರಗಳೆಂಬ ನಾಲ್ಕು ರಸಗಳನ್ನು ಮಾತ್ರ ಅಂಗೀಕರಿಸಿದ್ದ. ಇವುಗಳನ್ನು ಅನುಕ್ರಮವಾಗಿ ಕಪ್ಪು, ಕೆಂಪು, ನೀಲಿ, ಬಿಳುಪು ಬಣ್ಣಗಳನ್ನು ಹೇಳಿದ್ದಾನೆ. ಕಪ್ಪು, ಕೆಂಪು, ಬಿಳಿ ಮಾತ್ರವೇ ಮೂಲ ಬಣ್ಣಗಳು ಎಂಬುದನ್ನು ಗಮನಿಸಬೇಕು. ನೀಲಿ ಬಣ್ಣವು ಬಿಳಿ ಮತ್ತು ಕಪ್ಪು ಬಣ್ಣಗಳ ಮಿಶ್ರಣದಿಂದ ಹಾಗೂ ಹಳದಿ, ಕಪ್ಪು ಬಣ್ಣಗಳ ಮಿಶ್ರಣದಿಂದ ಹಸಿರು ಬಣ್ಣವು ಹುಟ್ಟುತ್ತದೆ.

ಮಾತೃಗುಪ್ತನು ಬಿಳಿ, ನೀಲಿ, ಹಳದಿ, ಕೆಂಪು ಈ ನಾಲ್ಕನ್ನು ಮೂಲ ಬಣ್ಣಗಳೆಂದು ಹೇಳುತ್ತಾನೆ. ಸಾಳ್ವನು ಶೃಂಗಾರಕ್ಕೆ ಹಸಿರು, ಹಾಸ್ಯ, ರೌದ್ರಗಳಿಗೆ ಬಿಳುಪು, ಕರುಣಕ್ಕೆ ಕಪ್ಪು, ಭಯಕ್ಕೆ ಹೊಗೆ ಕಪ್ಪು, ಅದ್ಭುತಕ್ಕೆ ಬಂಗಾರದ ಬಣ್ಣ, ವೀರಕ್ಕೆ ಪ್ರಕಾಶವಾದ ಬಿಳಿ, ಬೀಭತ್ಸ ಹಾಗೂ ಶಾಂತರಸಗಳಿಗೆ ಶುಭ್ರ ಕಪ್ಪು ಬಣ್ಣವನ್ನು ಹೇಳಿದ್ದಾನೆ.

ಶೃಂಗಾರ, ಕರುಣ, ಭಯಾನಕ, ಬೀಭತ್ಸ ರಸಕ್ಕೆ ಸಂಬಂಧಿಸಿದಂತೆ ಸಾಳ್ವ ಮತ್ತು ಭರತರಲ್ಲಿ ಅಭಿಪ್ರಾಯ ಭಿನ್ನತೆಯಿದೆ. ಭರತನು ಶೃಂಗಾರ ರಸಕ್ಕೆ ಕಪ್ಪು ಬಣ್ಣ ಎಂದು ಹೇಳಿದರೆ ಸಾಳ್ವನು ಹಸಿರು ಬಣ್ಣ ಎಂದು ಹೇಳುತ್ತಾನೆ. ಭರತನ ಪ್ರಕಾರ ಕಪ್ಪು ಶೃಂಗಾರಕ್ಕೂ, ಭಯಕ್ಕೂ ಸಂಕೇತವಾಗುತ್ತದೆ. ಇದರ ಭೇದವನ್ನು ಭರತ ಹೇಳಿಲ್ಲ. ಕರುಣ ರಸಕ್ಕೆ ಸಾಳ್ವ ಕಪ್ಪು ಬಣ್ಣವನ್ನು ಹೇಳಿದರೆ ಭರತ ಕಪೋತ ಬಣ್ಣವನ್ನು ಹೇಳಿದ್ದಾನೆ. ಬೀಭತ್ಸ ರಸಕ್ಕೆ ಕೃಷ್ಣ ಶುಭ್ರ ಮತ್ತು ನೀಲಿ ಬಣ್ಣಗಳನ್ನು ಇಬ್ಬರೂ ಹೇಳಿದ್ದಾರೆ.

ನಾಟ್ಯಶಾಸ್ತ್ರದ ರಚನೆಗೆ ನಾಲ್ಕು ವೇದಗಳೇ ಕಾರಣವೆಂದು ಹೇಳಲಾಗಿದೆ. ವೇದಗಳ ವಿಚಾರಗಳು ಶೂದ್ರರಿಗೂ ತಿಳಿಯಬೇಕೆಂಬ ಕಾರಣಕ್ಕೆ ಭರತನು ನಾಲ್ಕು ವೇದಗಳಿಂದ ಒಂದೊಂದು ಅಂಶವನ್ನು ಸ್ವೀಕರಿಸಿ ಐದನೆಯದಾದ ನಾಟ್ಯವೇದವನ್ನು ರಚನೆ ಮಾಡಿದ. ಈ ಹಿನ್ನೆಲೆಯಲ್ಲಿ ನೋಡಿದರೆ ನಾಟ್ಯವು ಶೂದ್ರರಿಗೆ ಸೃಷ್ಟಿಯಾದ ಕಲೆ. ಈ ಕಾರಣಕ್ಕಾಗಿಯೇ ನಾಟ್ಯವು ದ್ರಾವಿಡರು ಪ್ರತಿನಿಧಿಸುವ ಕಲೆಯೆಂದು ಹೇಳುತ್ತಾರೆ. ನಟರಾಜನ ಅರ್ಚನೆ ಕೂಡ ದ್ರಾವಿಡರ ಸಂಕೇತವೇ ಆಗಿದೆ. ದ್ರಾವಿಡರಲ್ಲಿ ಅನೇಕ ಜಾತಿಗಳಾಗಿ ಉಳಿದು ಬಂದಿರುವ ಜನಸಮುದಾಯಗಳು ನಾಟ್ಯ ಪದ್ಧತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಆದರೆ ಭರತ ನಿರೂಪಿಸುವ ಅಧಿದೇವತೆಗಳ ಸಂದರ್ಭದಲ್ಲಿ ಆರ್ಯ ದ್ರಾವಿಡ ದೇವತೆಗಳ ಹೆಸರಿದೆಯಾದರೂ ಆರ್ಯರ ದೇವತೆಗಳ ಹೆಸರೇ ಹೆಚ್ಚಾಗಿ ಕಾಣಿಸುತ್ತಿದೆ. ಇಂದಿಗೂ ದ್ರಾವಿಡರ ಮೂಲ ದೇವರುಗಳಾದ ತೆಯ್ಯಂ, ಬೂತೊ ಮೊದಲಾದ ಜನಪದ ಆರಾಧನಾ ನರ್ತನ ಪರಂಪರೆಯನ್ನು ಭರತ ಹೆಸರಿಸುವುದೇ ಇಲ್ಲ. ಭರತನ ಪ್ರಕಾರ ರಸಾನುಭವಕ್ಕೆ ಕಾರಣವಾದ ರಸಗಳು ನಾಲ್ಕು. ಅವು ಶೃಂಗಾರ, ರೌದ್ರ, ವೀರ ಮತ್ತು ಬೀಭತ್ಸ. ಇವುಗಳಲ್ಲಿ ಶೃಂಗಾರದಿಂದ ಹಾಸ್ಯ, ಬೀಭತ್ಸದಿಂದ ಭಯಾನಕವು ಹುಟ್ಟುತ್ತದೆಂದು ಭರತ ಹೇಳುತ್ತಾನೆ. ಹಾಗಾಗಿ ಪ್ರಧಾನ ರಸಗಳು ನಾಲ್ಕು. ಅದಕ್ಕನುಗುಣವಾದ ಪ್ರಮುಖ ಬಣ್ಣಗಳು ನಾಲ್ಕೇ ಇದ್ದಿರಬಹುದೆಂದು ಊಹಿಸುವುದಕ್ಕೆಡೆಯಿದೆ.

ಮಾತೃಗುಪ್ತನೂ ಸಹ ಭರತನು ಹೇಳುವ ಬಣ್ಣವನ್ನೇ ಹೇಳುತ್ತಾನೆ.

ಸೀತೋ ನೀಲಶ್ಚ ಪೀತಶ್ಚ ಚತುರ್ಥೋ ರಕ್ತಮೇವಚ
ಏತೇ ಸ್ವಭಾಜಾ ವರ್ಣಾಯೈ ಕಾರ್ಯತ್ವಂಗ ವರ್ತನಮಂ

ಬಿಳಿ, ನೀಲಿ, ಹಳದಿ, ಕೆಂಪು ಇವು ನಾಲ್ಕು ಮೂಲ ಬಣ್ಣಗಳು. ಈ ಮೂಲ ಬಣ್ಣಗಳಿಂದ ಅನೇಕ ಮಿಶ್ರ ಬಣ್ಣಗಳುಂಟಾಗುತ್ತವೆ. ಹಳದಿ ಮತ್ತು ನೀಲ ಬಣ್ಣಗಳ ಮಿಶ್ರಣದಿಂದ ಕಪೋತವರ್ಣವುಂಟಾಗುತ್ತದೆ ಎಂದು ಹೇಳಿದ್ದಾನೆ.

ಸಾಳ್ವ ಮತ್ತು ಭರತಮುನಿ ಇವರ ಪ್ರಕಾರ ಬಣ್ಣಕ್ಕೆ ರಸಕ್ಕೆ ಅವುಗಳ ಅಧಿ ದೇವತೆಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಗಮನಿಸಬಹುದು.

ರಸಗಳು

ಸಾಳ್ವ

ಭರತ

ಬಣ್ಣ

ಅಧಿದೇವತೆ

ಬಣ್ಣ

ಅಧಿದೇವತೆ

ಶೃಂಗಾರ ಹಸಿರು ಹರಿ ಕಪ್ಪು ವಿಷ್ಣು
ಹಾಸ್ಯ ಬಿಳುಪು ಗಜಮುಖ ಬಿಳುಪು ಪ್ರಮಥ ಗಣ
ರೌದ್ರ ಬಿಳುಪು ಹರ ಕೆಂಪು ರುದ್ರ
ಕರುಣ ಕಪ್ಪು ಯಮ ಕಪೋತ ಯಮ
ಭಯಾನಕ ಹೊಗೆಕಪ್ಪು ಮೃತ್ಯು ಕಪ್ಪು ಕಾಲ
ಅದ್ಭುತ ಬಂಗಾರ ವಿಧಿ ಹಳದಿ ಬ್ರಹ್ಮ
ವೀ ಪ್ರಕಾಶವಾದ ಬಿಳಿ ಇಂದ್ರ ಹೊಳೆಯುವ ಬಿಳುಪು ಮಹೇಂದ್ರ
ಬೀಭತ್ಸ ಕಪ್ಪು ಶುಭ್ರ ಮಹಾಕಾಲ ನೀಲಿ ಮಹಾಕಾಲ
ಶಾಂತ ಕಪ್ಪು ಶುಭ್ರ ಮಹಾಕಾಲ ನೀಲಿ ಮಹಾಕಾಲ

ಈ ಕೋಷ್ಟಕವನ್ನು ಗಮನಿಸಿದರೆ ಸಾಳ್ವ ಮತ್ತು ಭರತರಲ್ಲಿ ಅಭಿಪ್ರಾಯ ವ್ಯತ್ಯಾಸವಿರುವುದು ತಿಳಿಯುತ್ತದೆ. ಮುಖ್ಯವಾಗಿ ವ್ಯತ್ಯಾಸವನ್ನು ಕಾಣುವುದು ಶೃಂಗಾರ, ಕರುಣ, ಭಯಾನಕ ಹಾಗೂ ಬೀಭತ್ಸ ರಸಗಳ ವಿಷಯದಲ್ಲಿ. ಭರತ ಶೃಂಗಾರಕ್ಕೆ ಕಪ್ಪು ಬಣ್ಣವನ್ನು ಹೇಳಿದರೆ ಸಾಳ್ವ ಹಸಿರು ಬಣ್ಣವನ್ನು ಹೇಳಿದ್ದಾನೆ. ಭರತನ ಪ್ರಕಾರ ಕಪ್ಪು ಬಣ್ಣವು ಶೃಂಗಾರ ಹಾಗೂ ಭಯಾನಕವನ್ನು ಪ್ರತಿನಿಧಿಸುತ್ತದೆ. ಇವುಗಳ ನಡುವೆ ವರ್ಣ ಭೇದವನ್ನು ಹೇಳಿಲ್ಲ. ಕರುಣ ರಸಕ್ಕೆ ಸಾಳ್ವ ಕಪ್ಪು ಬಣ್ಣವನ್ನು ಹೇಳಿದರೆ ಭರತ ಕಪೋತ ಬಣ್ಣವನ್ನು ಹೇಳಿದ್ದಾನೆ. ಬೀಭತ್ಸ ರಸಕ್ಕೆ ಕಪ್ಪು ಶುಭ್ರ ಮತ್ತು ನೀಲಿ ಬಣ್ಣಗಳನ್ನು ಹೇಳಿದ್ದಾನೆ. ಇವುಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆ.

ಜನಪದರಲ್ಲಿ ಬಣ್ಣಗಳು

ಜನಪದರಲ್ಲೂ ಬಣ್ಣಗಳಿಗೆ ವಿವಿಧ ಅರ್ಥಗಳನ್ನು ಕಲ್ಪಿಸಲಾಗಿದೆ. ಅವರ ಪ್ರಕಾರ

ಬಿಳಿ       –           ಪರಿಶುದ್ಧತೆ ಹಾಗೂ ಪಾವಿತ್ರ್ಯ

ಕೆಂಪು    –           ಶುಭದ ಹಾಗೂ ಮಂಗಳಕರ

ಕಪ್ಪು      –           ಅಪಶಕುನ ಹಾಗೂ ದುಃಖ

ಹಸಿರು   –           ಸಮೃದ್ದಿ ಹಾಗೂ ಪ್ರೀತಿ

ನೀಲ     –           ಹೃದಯ ವೈಶಾಲ್ಯ ಹಾಗೂ ಅಗಾಧತೆ

ಈ ಐದು ಬಣ್ಣಗಳನ್ನು ಮಾತ್ರ ಜನಪದರು ವಿವಿಧ ಸಂದರ್ಭಗಳಲ್ಲಿ ಸಾಂಕೇತಿಕವಾಗಿ ಹೆಸರಿಸುವುದನ್ನು ಕಾಣಬಹುದು.

ಬಿಳಿ : ಪರಿಶುದ್ಧತೆಯ ಹಾಗೂ ಪಾವಿತ್ರ್ಯದ ಸಂಕೇತವಾದ್ದರಿಂದಲೇ ಹಾಲಿನ ಬಿಳಿಯನ್ನು ಜನಪದರು ಉಲ್ಲೇಖಿಸುತ್ತಾರೆ. ಹಾಲಿನಂತಹ ಮನಸ್ಸು ತೀರ್ಥದಷ್ಟೇ ಪವಿತ್ರ ಇತ್ಯಾದಿ. ವಿಧವೆಯಾದವಳು ಕೇಶ ಮುಂಡನ  ಮಾಡಿ ಬಿಳಿಯ ಬಟ್ಟೆಯನ್ನು ಉಟ್ಟುಕೊಳ್ಳುವುದಿದೆ. ಆಕೆಗೆ ಇಂದ್ರಿಯ ನಿಗ್ರಹದ ಸಾಮರ್ಥ್ಯವನ್ನು ಕಲ್ಪಿಸಿ ಪರಿಶುದ್ಧತೆಯ ಗುಣವನ್ನು ಆರೋಪಿಸಲಾಗುತ್ತದೆ. ಪಾವಿತ್ರ್ಯದ ಕಾರಣಕ್ಕಾಗಿಯೇ ಬಿಳಿಯ ಮಡಿ ಬಟ್ಟೆ ಮದುವೆ ಯಂತಹ ಮಂಗಳ ಕಾರ್ಯದಲ್ಲಿ ಮದುವೆ ಮಂಟಪದ ಮೇಲ್ಛಾವಣಿಗೆ, ಕಂಬಗಳಿಗೆ ಕಟ್ಟಲಾಗುತ್ತದೆ. ಸಾವು ಸಂಭವಿಸಿದ ಮನೆಗಳಲ್ಲಿ ಸೂತಕ ಕಳೆಯಲು ಬಿಳಿಯ ಮಡಿ ಬಟ್ಟೆಯನ್ನು ಮುಟ್ಟಿಕೊಳ್ಳುವ ಸಂಪ್ರದಾಯ ಜನಪದರಲ್ಲಿದೆ.

ಕೆಂಪು : ಕೆಂಪು ಶುಭದ ಹಾಗೂ ಮಂಗಳಕರ ಸಂಕೇತ. ಅದಕ್ಕಾಗಿಯೇ ಮಂಗಳಕರವಾದ ಕಾರ್ಯಕ್ರಮದಲ್ಲಿ ಕೆಂಪು ಬಟ್ಟೆಯನ್ನು ಧರಿಸುವುದು ಜನಪದರಲ್ಲಿ ಕಾಣಬಹುದು. ತೆಯ್ಯಂ, ಬೂತೊ ಮೊದಲಾದ ದೈವಗಳ ಸಂದರ್ಭದಲ್ಲಿ ಕೆಂಪು ಬಟ್ಟೆ, ಬಣ್ಣಗಳ ಬಳಕೆಯನ್ನು ಕಾಣಬಹುದು. ವಿಧವೆಯಾದವಳು ಕೆಂಪು ಬಟ್ಟೆಯನ್ನು ಉಡುವುದರ ಮೂಲಕ ಅಮಂಗಳತೆ ಯನ್ನು ಅಲ್ಪಮಟ್ಟಿಗೆ ದೂರವಾಗಿಸುತ್ತಾಳೆ ಎಂಬ ನಂಬಿಕೆಯಿದೆ. ಕೆಂಪು ಬಣ್ಣದ ಹೂಗಳು ಪೂಜೆಗೆ ಯೋಗ್ಯ. ಆದರೆ ಮುಡಿಯಬಾರದೆಂಬ ನಂಬಿಕೆ ಇದೆ.

ಕಪ್ಪು : ಕಪ್ಪು ಅಪಶಕುನದ ಹಾಗೂ ದುಃಖದ ಸಂಕೇತ. ಮಂಗಳ ಕಾರ್ಯದಲ್ಲಿ ಕಪ್ಪು ಬಟ್ಟೆಯನ್ನಾಗಲಿ ಬಣ್ಣವನ್ನಾಗಲಿ ಬಳಸುವುದಿಲ್ಲ. ಕಾಗೆ ಕಪ್ಪಾದ್ದರಿಂದ ಅದು ಅಪಶಕುನ. ಬೆಕ್ಕು ಅಪಶಕುನ. ಮನೆಯ ಬೆಕ್ಕು ಅಪಶಕುನವಲ್ಲ. ಆದರೆ ಕಪ್ಪು ಬೆಕ್ಕು ಮನೆಯದ್ದಾದರೂ ಅಪಶಕುನವೇ. ವಿಧವೆಯಾದವಳು ಕಪ್ಪು ಬೊಟ್ಟನ್ನು ದುಃಖದ ಸಂಕೇತವಾಗಿ ಹಚ್ಚಿಕೊಳ್ಳ ಬಹುದು.

ಹಸಿರು : ಹಸಿರು ಸಮೃದ್ದಿ ಹಾಗೂ ಪ್ರೀತಿಯ ಸಂಕೇತ. ಹಸಿರು ಯಾವಾಗಲೂ ಸ್ನೇಹದ ಪ್ರತೀಕ. ಮೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಹಸಿರು ಬಣ್ಣದಲ್ಲಿ. ತಮಗೆ ಪ್ರಿಯರಾದವರ ಹೆಸರನ್ನು, ಚಿತ್ರಗಳನ್ನು ಹಚ್ಚೆಯ ರೂಪದಲ್ಲಿ ಹಾಕಿಕೊಳ್ಳುವ ಸಂಪ್ರದಾಯ ಜನಪದರಲ್ಲಿದೆ. ಪ್ರೀತಿಯ ಸಂಕೇತವಾಗಿ ಹೆಣ್ಣು ಮಕ್ಕಳಿಗೆ ಹಸಿರು ಬಳೆಗಳನ್ನು ತೊಡಿಸುವುದಿದೆ. ಸಮೃದ್ದಿಯನ್ನು ಹಾರೈಸಿ ಗರ್ಭಿಣಿಯರಿಗೂ ಹಸಿರು ಬಳೆಗಳನ್ನು ತೊಡಿಸ ಲಾಗುತ್ತದೆ.

ಜನಪದರ ನಂಬಿಕೆಯ ನೆಲೆಯಲ್ಲಿಯೇ ಯಕ್ಷಗಾನದಲ್ಲಿ ಬಣ್ಣಗಳ ಬಳಕೆಯೂ ಇದ್ದಿರಬಹುದು. ಕಾಲಾನಂತರ ವಿವಿಧ ಹಂತಗಳಲ್ಲಿ ಬದಲಾವಣೆಗಳು ಆಗಿರುವ ಸಾಧ್ಯತೆ ಖಂಡಿತವಾಗಿಯೂ ಇದೆ. ಯಾವುದೇ ಕಾಲದ ನಿರ್ದಿಷ್ಟ ಚೌಕಟ್ಟಿನ ಒಳಗಡೆ ಯಕ್ಷಗಾನದ ವೇಷ ವಿಧಾನಗಳು ನೆಲೆ ನಿಂತಿಲ್ಲ ಎಂಬ ವಸ್ತು ಸ್ಥಿತಿಯ ನೆಲೆಯಲ್ಲಿ ಇವುಗಳನ್ನು ಊಹಿಸ ಬಹುದಾಗಿದೆ.

ಯಕ್ಷಗಾನದಲ್ಲಿ ಬಳಸುವ ಬಣ್ಣಗಳು

ಯಕ್ಷಗಾನದ ಮುಖವರ್ಣಿಕೆಯಲ್ಲಿ ಮುಖ್ಯವಾಗಿ ಐದು ಬಣ್ಣಗಳನ್ನು ಮಾತ್ರ ಬಳಸಲಾಗುತ್ತದೆ. ಬಿಳಿ (ಸಫೇದ) ಹಳದಿ (ಅರದಾಳ) ಕೆಂಪು (ಇಂಗಲೀಕ) ಕಪ್ಪು (ಎಣ್ಣೆ ಮಸಿ) ಮತ್ತು ಹಸಿರು.

ಕೆಂಪು : ಕೆಂಪು ಬಣ್ಣವನ್ನು ಪ್ರಕೃತಿಯಲ್ಲಿ ದೊರೆಯುವ ಕೆಂಪು ಬಣ್ಣದ ಕಲ್ಲುಗಳನ್ನು ಪುಡಿ ಮಾಡಿ ಸಿದ್ಧಪಡಿಸಲಾಗುತ್ತದೆ. ಹಿಂದೆ ಹೆಂಚಿನ ಹುಡಿಯನ್ನು ಸಹ ಬಳಸಲಾಗುತ್ತಿತ್ತೆಂದು ತಿಳಿದು ಬರುತ್ತದೆ. ಕುಂಕುಮ, ಇಂಗಲೀಕ, ಕೆಂಪು ವರ್ಣದ್ರವ್ಯಗಳನ್ನು ಕೆಂಪು ಬಣ್ಣಕ್ಕಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನ ಮತ್ತು ಸುಣ್ಣವನ್ನು ಬೆರೆಸಿ ಕೆಂಪು ಬಣ್ಣವನ್ನು ಸಿದ್ಧಪಡಿಸಲಾಗುತ್ತಿತ್ತು. ಆಧುನಿಕ ದಿನಗಳಲ್ಲಿ ಸಿದ್ಧ ಬಣ್ಣದ ಪುಡಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಕಪ್ಪು : ಕಪ್ಪು ಬಣ್ಣಕ್ಕೆ ಕಾಡಿಗೆಯನ್ನು ಬಳಸಲಾಗುತ್ತದೆ. ಕಣ್ಣುಗಳಿಗೆ ಹಾನಿ ಇಲ್ಲ ಎಂಬ ಕಾರಣಕ್ಕಾಗಿ ಹರಳೆಣ್ಣೆಯ ದೀಪದ ಮಸಿಯನ್ನು ಸಂಗ್ರಹಿಸಿ ಕಾಡಿಗೆ ಮಾಡಲಾಗುತ್ತದೆ. ಕಪ್ಪು ಬಣ್ಣವು ಕರಿ, ಮಸಿ ಇತ್ಯಾದಿಗಳಿಂದಲೂ ಸಂಗ್ರಹಿಸಲಾಗುತ್ತದೆ.

ಬಿಳಿ : ಬಿಳಿ ಬಣ್ಣಕ್ಕೆ ಅಕ್ಕಿಹಿಟ್ಟನ್ನು ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ಬಿಳಿ ಬಣ್ಣದಲ್ಲಿ ಹಲ್ಲುಗಳನ್ನು ಬಿಡಿಸಬೇಕಾದ ಸಂದರ್ಭದಲ್ಲಿ ಅಥವಾ ಚುಟ್ಟಿ ಇಡಬೇಕಾದ ಸಂದರ್ಭದಲ್ಲಿ ಅಕ್ಕಿಹಿಟ್ಟಿನ ಜತೆಗೆ ಸುಣ್ಣದ ಪುಡಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆಧುನಿಕ ದಿನಗಳಲ್ಲಿ ಸಫೇದ ಎಂಬ ಬಿಳಿ ಬಣ್ಣದ ಪುಡಿಯನ್ನು ಬಳಸಲಾಗುತ್ತದೆ. ಸಫೇದ ಎಂಬುದು ಬಿಳಿ ವರ್ಣದ್ರವ್ಯ(Zine Oxide). ಹಿಂದೆ ಅರದಾಳವನ್ನು ಬಳಸುತ್ತಿದ್ದರಂತೆ. ಈಗ ಗೌರವರ್ಣವನ್ನು ಮೂಲಲೇಪನಕ್ಕಾಗಿ ಹಳದಿ, ಕೆಂಪು ಬೆರೆಸಿ ಸಿದ್ಧಪಡಿಸುವರು. ಅಂಚಿನ ಬಿಳಿಗೆ ಇದನ್ನು ಮಾತ್ರ ಉಪಯೋಗಿಸುವರು.

ಹಳದಿ : ಹಳದಿ ಬಣ್ಣಕ್ಕಾಗಿ ಅರಶಿನ ಪುಡಿಯನ್ನು ಬಳಸಲಾಗುತ್ತಿತ್ತು. ಆಧುನಿಕ ದಿನಗಳಲ್ಲಿ ಅರದಾಳ ಪುಡಿಯನ್ನು ಬಳಸಲಾಗುತ್ತದೆ. ಇದನ್ನು ಅರಿದಾಳ, ಅರ್ದಲ, ಅರ್ದಾಲ, ಅರಿದಾಲ, ಅರದಾಳ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಮುಖವರ್ಣಿಕೆಯ ಮೂಲ ಲೇಪನಕ್ಕೆ ಹಳದಿ ಬಣ್ಣದ ಈ ದ್ರವ್ಯ ಬೇಕು. ಯಕ್ಷಗಾನವಲ್ಲದೆ ದೈವದ ಕೋಲಗಳಲ್ಲೂ, ಕಥಕಳಿಯ ಸಂದರ್ಭದಲ್ಲೂ ಈ ಹಳದಿ ಬಣ್ಣದ ಬಳಕೆಯಿದೆ. ಸ್ವಲ್ಪ ನಸುಗೆಂಪು ಛಾಯೆಯುಳ್ಳ ಹಳದಿ ಬಣ್ಣವಿದು. ಇದಕ್ಕೆ ಸ್ವಲ್ಪ ಕೆಂಪು ಬಣ್ಣ ಮಿಶ್ರ ಮಾಡಿ ಬಳಸುವುದೂ ಇದೆ. ಸಾಮಾನ್ಯವಾಗಿ ಅರದಾಳ ವರ್ಣದ್ರವ್ಯವು ಮೂರು ಮೂಲ ಗಳಿಂದ ಲಭಿಸುತ್ತವೆ.

೧. ಖನಿಜ ಅರದಾಳ (Arsenicum Flavum) ಆರ್ಸೆನಿಕ್ ಮತ್ತು ಗಂಧಕಗಳ ಮಿಶ್ರಣ. ಇದಕ್ಕೆ ದುರ್ವಾಸನೆ ಇದೆ. ಇದೇ ಪ್ರಸಿದ್ಧ ಅರದಾಳ. Yellow orpiment. ಕಲ್ಲು ಅರದಾಳ.

೨. ವೃಕ್ಷ ಅರದಾಳ ಅ) ಅರಸಿನ ಗುರ್ಗಿ ಮರ(Garcenia mosella)ದ ತೊಗಟೆ, ಕಾಂಡದಿಂದ. ಆ) Orpine (Sedum Telephium) ಗಿಡದಿಂದ. ಇದರಲ್ಲಿ ನೇರಳೆ, ಹಳದಿ ಜಾತಿಗಳಿವೆ. ಇ) ಮರದರಸಿನ ಬೇರುಗಳಿಂದ. (Morinda umbelata) ಈ) ಹಲಸಿನ ಮರಕ್ಕೆ ಬರುವ ಗಡ್ಡೆ ಅರೆದು ತಯಾರಿಸುವುದು. ೩. ಹಳದಿ ಕಲ್ಲು ವಿಶೇಷತಃ ಹೊಳೆಗಳಲ್ಲಿ, ಹಳ್ಳಗಳಲ್ಲಿ ಲಭ್ಯ.

ಅರದಾಳವನ್ನು ಅರೆದು ಮುಖಕ್ಕೆ ಬಳಿದ ಅನಂತರ ಅದರ ಮೇಲೆ ಯಾವುದೇ ಶುಷ್ಕ ಪೌಡರ್ ವಗೈರೆ ಹಚ್ಚುವ ಕ್ರಮವಿರಲಿಲ್ಲ. ಹಾಗಾಗಿ ಹಿಂದಿನ ಬಣ್ಣಗಾರಿಕೆಗೆ ಹಸಿಬಣ್ಣ ಎನ್ನುವರು. ಮಂದವಾದ ಬೆಳಕಿಗೆ ಇದು ಸುಂದರವಾಗಿ ಕಾಣುವುದು.

ಈ ಅರದಾಳದ ಬಣ್ಣಕ್ಕೆ ‘ಛಾಯ’ (ಗೌರವರ್ಣ) ವೆಂದು ಹೆಸರು. ಇದು ಸಾಮಾನ್ಯ ಮನುಷ್ಯವರ್ಣವೆಂದು ತಾತ್ಪರ್ಯ. ಬಣ್ಣದ ವೇಷ, ಪಚ್ಚೆವೇಷಗಳನ್ನು ಬಿಟ್ಟರೆ ಉಳಿದೆಲ್ಲ ಪಾತ್ರಗಳಿಗೆ ಇದೇ ಮೂಲವರ್ಣ.

ಈಗ ಅರದಾಳಕ್ಕೆ ಬದಲು ಅರಸಿನ, ಬಿಳಿ ಬಣ್ಣಕ್ಕೆ ಸಫೇದ, ಕೆಂಪು ಸೇರಿಸಿ ಎಣ್ಣೆಯಲ್ಲಿ ಕಲಸಿ ಲೇಪಿಸುವರು (ಎಂ. ಪ್ರಭಾಕರ ಜೋಶಿ, ೧೯೯೪ : ೭).

ಹಸಿರು : ಸಾಮಾನ್ಯವಾಗಿ ಹಸಿರು ಬಣ್ಣವನ್ನು ನಿರ್ದಿಷ್ಟ ಗಿಡಗಳ ಎಲೆಗಳಿಂದ ಸಿದ್ಧ ಪಡಿಸುತ್ತಿದ್ದರು. ಹಿಂದೆ ಜಂಗಮ ಅಥವಾ ನೆಲ್ಲಿ ಗಿಡದ ಎಲೆಗಳ ಹುಡಿಯನ್ನು ಬಳಸು ತ್ತಿದ್ದರು. ನೆಲ್ಲಿ ಗಿಡದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ, ಪುಡಿಮಾಡಿ ಹಸಿರು ಬಣ್ಣದ ಹುಡಿಯನ್ನು ಸಿದ್ಧಪಡಿಸಲಾಗುತ್ತಿತ್ತು.

ಬಣ್ಣ ಮತ್ತು ಬೆಳಕು

ಹಿಂದೆ ಯಕ್ಷಗಾನದಲ್ಲಿ ಮುಖಕ್ಕೆ ಅರದಾಳವನ್ನು ಅರಿಶಿನ ಮೂಲಲೇಪನವಾಗಿ ಹಚ್ಚುತ್ತಿದ್ದರು. ದೀವಟಿಗೆ ಬೆಳಕಿನಲ್ಲಿ ಅರದಾಳವು ನಸು ಹಳದಿ ಬಣ್ಣದಿಂದ ಶೋಭಿಸುತ್ತಿತ್ತು. ಬೂತದ ಕೋಲದಲ್ಲಿಯೂ ಇದೇ ಬಣ್ಣವನ್ನು ಬಳಸಲಾಗುತ್ತದೆ. ಈಗ ಸಫೇದ ಎಂಬ ಬಿಳಿಯ ಪುಡಿಯು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಹಾಗಾಗಿ ಆಧುನಿಕ ವಿದ್ಯುತ್ ಬೆಳಕಿಗೆ ಅರದಾಳಕ್ಕಿಂತ ಈ ಪುಡಿಯು ಹೆಚ್ಚು ಪ್ರಖರವಾಗಿ ಕಾಣಿಸುತ್ತದೆ. ಕೆಂಪು ಬಣ್ಣಕ್ಕೆ ಹೊಳೆಯಲ್ಲಿ ಸಿಗುವ ಜಾಜಿ ಕಲ್ಲುಗಳನ್ನು ಪುಡಿ ಮಾಡಿ ಬಳಸುತ್ತಿದ್ದರು. ಇಂಗಲೀಕ ಹಿಂದೆ ಇದ್ದಿರಲಿಲ್ಲ. ಕುಂಕುಮ ಕಾಯಿಯನ್ನು ಕೆಂಪು ಬಣ್ಣಕ್ಕೆ ಬಳಸುತ್ತಿದ್ದರು. ಹಸಿರು ಬಣ್ಣವನ್ನು ನೆಲ್ಲಿಕಾಯಿಯ ಎಲೆಯನ್ನು ಒಣಗಿಸಿ ತಯಾರಿ ಸುತ್ತಿದ್ದರು. ಹೊನ್ನೆಣ್ಣೆಯ ದೀಪ ಹೊತ್ತಿಸಿ ಅದರ ಮೇಲೆ ಒಂದು ಬಟ್ಟಲನ್ನು ಕವುಚಿಹಾಕಿ ಮಸಿಯನ್ನು ಸಂಗ್ರಹಿಸುತ್ತಿದ್ದರು. ಇದಕ್ಕೆ ಎಣ್ಣೆ ಮಸಿ ಎಂದೇ ಹೆಸರು. ಹಿಂದೆ ಬಣ್ಣಗಳಿಗೆ ನೀರನ್ನು ಮಿಶ್ರ ಮಾಡಿ ಹಸಿ ಬಣ್ಣವನ್ನು ಹಚ್ಚುವುದಿತ್ತು. ಹಸಿ ಬಣ್ಣವು ದೀವಟಿಗೆಯ ಮಂದಬೆಳಕಿನಲ್ಲಿ ವೇಷದ ವೈಭವವನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತಿತ್ತು. ಹಸಿ ಬಣ್ಣವು ಹೆಚ್ಚು ಹೊತ್ತು ನಿಲ್ಲುವುದಿಲ್ಲ ಎಂಬ ಕಾರಣಕ್ಕೊ ಬೆವರಿದಾಗ ಅವು ಬಿದ್ದು ಹೋಗುತ್ತವೆ ಎಂಬ ಕಾರಣಕ್ಕೊ ಬಣ್ಣಗಳನ್ನು ಎಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚುವ ಸಂಪ್ರದಾಯ ರೂಢಿಗೆ ಬಂದಿರಬೇಕು. ಹಿಂದೆ ಮುಖದ ಕೆನ್ನೆ, ಮೂಗು, ಗದ್ದ ಮೊದಲಾದ ಜಾಗಗಳಿಗೆಲ್ಲ ಛಾಯವರ್ಣವನ್ನು ಕೊಡುವ ಸಂಪ್ರದಾಯವಿರಲಿಲ್ಲವಂತೆ. ದೀವಟಿಗೆ ಬೆಳಕಿಗೆ ಅಂತಹ ಮುಖವರ್ಣಿಕೆ ಕೂಡ ಶೋಭಿಸುತ್ತಿತ್ತು. ಗ್ಯಾಸ್‌ಲೈಟಿನ ಅಥವಾ ವಿದ್ಯುತ್ತಿನ ಪ್ರಖರವಾದ ಬೆಳಕಿಗೆ ಮುಖಗಳು ಪೇಲವವಾಗಿ ಕಾಣುತ್ತಿದ್ದವು. ಆ ಕಾರಣಕ್ಕಾಗಿ ನಾಟಕದ ವೇಷಗಳಂತೆ ಛಾಯವರ್ಣವನ್ನು  ಬಯಲಾಟದ ವೇಷಗಳಿಗೂ ಆರಂಭಿಸಿರಬೇಕು. ಇದೇ ವೇಷಗಳು ದೀವಟಿಗೆಯ ಬೆಳಕಿನಲ್ಲಿ ಮಂಕಾಗಿ ಗೋಚರಿಸುತ್ತವೆ ಎಂದು ಅಭಿಪ್ರಾಯಪಡುವವರೂ ಇದ್ದಾರೆ. ದೀವಟಿಗೆಯ ಬೆಳಕಿನಲ್ಲಿ ಕೆಂಪು, ಹಳದಿ ಕಿರಣಗಳು ತುಂಬಾ ಇವೆ. ದೀವಟಿಗೆಯ ಹಳದಿ ಬಣ್ಣದ ಬೆಳಕಿನ ಕಿರಣಗಳನ್ನು ಪ್ರತಿಫಲಿಸದೆ ಹೀರಿಕೊಳ್ಳುತ್ತವೆ. ಬಿಳಿಬಣ್ಣವು ದೀವಟಿಗೆ ಬೆಳಕಿನ ಕೆಂಪು ಹಳದಿ ಬಣ್ಣಗಳೊಡನೆ ಸೇರಿಕೊಂಡು ಪ್ರತಿಫಲಿಸುತ್ತವೆ. ಈ ಹಿನ್ನೆಲೆಯಲ್ಲಿ ಬಿಳಿಬಣ್ಣದ ಮುಖವು ದೀವಟಿಗೆ ಬೆಳಕಿನಲ್ಲಿ ಗೌರವರ್ಣದ ಛಾಯೆಯನ್ನು ಸಹಜವಾಗಿಯೇ ಕೊಡುತ್ತದೆ. ಬಿಳಿಬಣ್ಣದ ಸೋಗೆವಲ್ಲಿ, ಬಾಲ್‌ಮುಂಡು ಮೊದಲಾದ ವಸ್ತ್ರಗಳು ದೀವಟಿಗೆ ಬೆಳಕಿನಲ್ಲಿ ರೇಶ್ಮೆಬಟ್ಟೆಯ ಕಾಂತಿಯಿಂದ ಶೋಭಿಸುತ್ತವೆ. ನೀಲಬಣ್ಣವು ಕತ್ತಲಿನಲ್ಲಿ ಲೀನವಾಗುತ್ತವೆ. ಆದುದರಿಂದ ಮಂದಬೆಳಕಿನಲ್ಲಿ ನೀಲಬಣ್ಣವು ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಅಶಕ್ತವಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರಾಚೀನ ರಂಗಭೂಮಿಯ ಸಂದರ್ಭದಲ್ಲಿ ನೀಲಬಣ್ಣದ ಬಳಕೆ ಯಾಗಿರಲಿಲ್ಲ. ವಿದ್ಯುತ್ ದೀಪದ ಬೆಳಕಿನಲ್ಲಿ ಪ್ರಖರವಾಗಿ ಶೋಭಿಸುವಂತೆ ಮುಖದ ಬಣ್ಣವನ್ನು ಹಾಗೂ ವೇಷಭೂಷಣಗಳಿಗೆ ಬೇಗಡೆ, ಕನ್ನಡಿಚೂರುಗಳು ಮೊದಲಾದ ಹೊಳೆಯುವ ವಸ್ತುಗಳನ್ನು ಬಳಸತೊಡಗಿದರು. ಅದಕ್ಕೂ ಪೂರ್ವದಲ್ಲಿ ಯಕ್ಷಗಾನದ ಅನೇಕ ವೇಷಪರಿಕರಗಳು ಮರದ ಸಾಮಗ್ರಿಗಳೇ ಆಗಿದ್ದವು. ಅವೆಲ್ಲ ತೊಡುಗೆಯಾಗಿ ಪಾತ್ರವನ್ನು ಹಾಗೂ ಪಾತ್ರದ ಗಾತ್ರವನ್ನು ಪೋಷಿಸುತ್ತಿದ್ದವು. ಅವು ಬೆಳಕಿನಲ್ಲಿ ಹೊಳೆದು ಕಣ್ಣುಕುಕ್ಕುವಂತೆ ಮಾಡಬೇಕಾಗಿಯೂ ಇರಲಿಲ್ಲ. ಪಾತ್ರಗಳು ಆಹಾರ್ಯದ ಮೂಲಕ ಹಾಗೂ ಇತರ ಅಭಿನಯಗಳ ಮೂಲಕ ರಂಗದಲ್ಲಿ ವಿಜೃಂಭಿಸುವ ಪ್ರಯತ್ನವನ್ನೇ ಮಾಡುತ್ತಿದ್ದವು. ಆದರೆ ವಿದ್ಯುತ್‌ದೀಪದ ಬೆಳಕಿನಲ್ಲಿ ಪಾತ್ರಗಳ ಅಂಗಾಂಗಗಳು ಬಟ್ಟಬಯಲಾದುವು. ಆಗ ಅವುಗಳ ಸೌಂದರ್ಯದ ಕಡೆಗೆ ಹೊಸನೆಲೆಯಿಂದ ಯೋಚಿಸಲು ಸಾಧ್ಯವಾಯಿತು. ಈ ಕಾರಣಕ್ಕಾಗಿಯೇ ಬಣ್ಣ ಹಾಗೂ ಬೆಳಕಿಗೆ  ಸಂಬಂಧವನ್ನು ಕಲ್ಪಿಸುತ್ತ ಯಕ್ಷಗಾನದ ವೇಷಭೂಷಣಗಳು ಹೊಸ ಆವಿಷ್ಕಾರಗಳನ್ನು ರೂಢಿಸಿಕೊಂಡಿವೆ.

ಬಣ್ಣ ಮತ್ತು ಅರ್ಥ

ಯಕ್ಷಗಾನದ ಬಣ್ಣಗಳನ್ನು ಪಾತ್ರಗಳ ಸ್ವಭಾವಕ್ಕನುಗುಣವಾಗಿ ಸ್ಥೂಲವಾಗಿ ವಿಂಗಡಿಸುವುದಿದೆ. ಅವುಗಳಲ್ಲಿ ಮುಖ್ಯವಾಗಿ ಸಾತ್ವಿಕ, ರಾಜಸ ಮತ್ತು ತಾಮಸ ಎಂಬ ಮೂರು ಪಾತ್ರ ಸ್ವಭಾವಗಳನ್ನು ಕಾಣಬಹುದು. ಸಾತ್ವಿಕ ಪಾತ್ರಗಳಲ್ಲಿ ವೇಷಭೂಷಣಗಳಲ್ಲಿ ಕೆಂಪು, ಹಸಿರು ಬಣ್ಣಗಳು ಬಳಕೆಯಾದರೂ ಮೇಲ್ನೋಟಕ್ಕೆ ಸಾತ್ವಿಕ ಪಾತ್ರಗಳೆಲ್ಲ ಬಿಳಿ ಬಣ್ಣದ ಪಾತ್ರಗಳೇ. ರಾಜಸ  ಸ್ವಭಾವದ ಪಾತ್ರಗಳಲ್ಲಿ ಕೆಂಪು ಕಪ್ಪು ಬಣ್ಣದ ವೇಷಭೂಷಣ ಗಳು ಬಳಕೆಯಾದರೂ ಮೇಲ್ನೋಟಕ್ಕೆ ಕೆಂಪು, ಬಣ್ಣವೇ ಎದ್ದು ಕಾಣುತ್ತದೆ. ತಾಮಸ ಪ್ರವೃತ್ತಿಯ ಪಾತ್ರಗಳಲ್ಲಿ ಕೆಂಪು ಕಪ್ಪು ಬಣ್ಣಗಳಲ್ಲಿ ಕಪ್ಪು ಬಣ್ಣವೇ ಎದ್ದು ಕಾಣುವಂತಿರುತ್ತದೆ.

ಕಾಡಿನಲ್ಲಿ ಸಂಚರಿಸುವ ಶೂರ್ಪನಖಿ, ವಿದ್ಯುಲ್ಲೋಚನ, ಬಕಾಸುರ, ಹಿಡಿಂಬೆ ಮೊದಲಾದ ಪಾತ್ರಗಳಲ್ಲಿ ಹಸಿರು ಬಣ್ಣವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಹಸಿರು ಬಣ್ಣಕ್ಕೆ ಸಾಳ್ವ ಕವಿ ಹೇಳುವಂತೆ ಶೃಂಗಾರದ ಭಾವವಿರುವುದಾದರೂ ಈ ಪಾತ್ರಗಳಲ್ಲಿ ಕೂಡಾ ಶೃಂಗಾರ ಸ್ವಭಾವವನ್ನು ಕಾಣಬಹುದು. ಆದರೆ ಈ ಪಾತ್ರಗಳ ವೇಷಭೂಷಣಗಳ ಬಣ್ಣ ಹಸುರಾಗುವುದಕ್ಕೆ ಯಕ್ಷಗಾನದ ದೃಷ್ಟಿಯಿಂದ ನೋಡಿದರೆ ಅವುಗಳು ಕಾಡಿನಲ್ಲಿ ಸಂಚರಿಸುವ ಪಾತ್ರಗಳೆಂಬುದೇ ಆಗಿದೆ. ಅಂದರೆ ತಾಮಸ ಪ್ರವೃತ್ತಿಯ ಪಾತ್ರಗಳು ಎಂದೇ ಅರ್ಥ.

ಯಕ್ಷಗಾನದಲ್ಲಿ ಬಳಸುವ ಬಣ್ಣಗಳಿಗೆ ನಿರ್ದಿಷ್ಟವಾದ ಅರ್ಥಗಳಿವೆ. ಆದರೆ ಈ ಅರ್ಥಗಳು ಜನಪದ ಬಣ್ಣಗಳ ನೆಲೆಯಿಂದ ರೂಪುಗೊಂಡುದು ಅಲ್ಲ. ಹಾಗೂ ಭಾರತೀಯ ತತ್ವಶಾಸ್ತ್ರದ ನೆಲೆಯಿಂದಲೂ ರೂಪುಗೊಂಡವುಗಳೂ ಅಲ್ಲ. ಆದರೆ ಇವೆರಡರ ಪ್ರಭಾವಗಳು ನಿಚ್ಚಳವಾಗಿಯೇ ಯಕ್ಷಗಾನದ ಆಹಾರ್ಯದ  ಬಣ್ಣಗಳಲ್ಲಿ ಗೋಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಶಾಸ್ತ್ರಗ್ರಂಥಗಳು ಉಲ್ಲೇಖಿಸಿದ ಬಣ್ಣಗಳಿಗೂ ಹಾಗೂ ಅವುಗಳ ಅರ್ಥ ಗಳಿಗೂ ಕೆಲವೊಮ್ಮೆ ನೇರ ಸಂಬಂಧಗಳು ಕಾಣುತ್ತವೆ. ಕೆಲವೊಮ್ಮೆ ಇದಕ್ಕೆ ವ್ಯತಿರಿಕ್ತವಾದ ದೃಷ್ಟಾಂತಗಳು ಇವೆ. ಯಕ್ಷಗಾನದ ಆಹಾರ್ಯಕ್ಕೆ ಸಂಬಂಧಿಸಿ ಹೇಳುವಾಗ ಅದು ಯಾವತ್ತೂ ಒಂದು ನಿರ್ದಿಷ್ಟ ಚೌಕಟ್ಟಿನ ಒಳಗಡೆಯೇ ರೂಪುಗೊಂಡಿದೆ ಎಂದು ಹೇಳಲಾಗದು. ಅದು ಕಾಲಕಾಲಕ್ಕೆ ವಿವಿಧ ಕಲಾವಿದರ ಪ್ರತಿಭೆಗಳ ಚೌಕಟ್ಟಿನಲ್ಲಿ ವಿನೂತನವಾಗಿ ಗೋಚರಿಸುತ್ತ ಬಂದಿದೆ. ರಂಗಭೂಮಿಯ ಸಂದರ್ಭದಲ್ಲಿ ಕಾಲಕಾಲಕ್ಕೆ ಬದಲಾದ ಬೆಳಕಿನ ವ್ಯವಸ್ಥೆಯ ಹಿನ್ನೆಲೆಯಿಂದಲೂ ಆರ್ಹಾಯದ ಬಣ್ಣಗಳಲ್ಲಿ ಬದಲಾವಣೆಗಳಾಗುತ್ತಾ ಬಂದಿವೆ. ಹೊನ್ನೆಣ್ಣೆ ದೊಂದಿಯ ಮಂದ ಬೆಳಕಿನಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ಬಳಸುತ್ತಿದ ಬಣ್ಣಗಳಲ್ಲಿ ಪೆಟ್ರೋಮ್ಯಾಕ್ಸಿನ ಲೈಟಿಗೂ ಬಳಸುತ್ತಿದ್ದ ಬಣ್ಣಗಳಲ್ಲಿ ವ್ಯತ್ಯಾಸಗಳನ್ನು ಮಾಡುವುದು ಅನಿವಾರ್ಯವೇ ಆಗಿತ್ತು. ಆ ನಂತರ ವಿದ್ಯುತ್ ದೀಪಗಳ ಬೆಳಕಿನಲ್ಲಿ ಯಕ್ಷಗಾನದ ಆಹಾರ್ಯದ ಬಣ್ಣಗಳಲ್ಲಿ ಬದಲಾವಣೆ ಸಾಕಷ್ಟು ಆಗಿದೆ. ಈ ಹಿನ್ನೆಲೆಯಿಂದ ನೋಡಿದರೆ ಬಣ್ಣ ಮತ್ತು ಬೆಳಕಿನ ಸಂಯೋಜನೆ ಕೂಡ ಯಕ್ಷಗಾನದ ಆಹಾರ್ಯದ ಮೇಲೆ ಸ್ಪಷ್ಟವಾದ ಪ್ರಭಾವವನ್ನು ಬೀರಿದೆ. ಅದರ ಜೊತೆಗೂ ಯಕ್ಷಗಾನದ ಪಾತ್ರ ಹಾಗೂ ಅವುಗಳ ಸ್ವಭಾವವನ್ನು ಲಕ್ಷಿಸಿ  ಪಾತ್ರಗಳ ಬಣ್ಣದ ಆಯ್ಕೆ ಕೂಡ ನಡೆದಿದೆ.

ಕೆಂಪು, ಹಳದಿ, ನೀಲಿ ಬಣ್ಣಗಳು ಬೆಳಕಿಗೆ ಹೆಚ್ಚು ಪ್ರಖರವಾಗಿ ಪ್ರತಿಸ್ಪಂದಿಸುವ ಗುಣವನ್ನು ಹೊಂದಿವೆ. ಈ ಕಾರಣಕ್ಕಾಗಿ ಪ್ರಕೃತಿಯಿಂದ ದೊರೆಯುವ ಹಸಿರು ಬಣ್ಣ ಯಕ್ಷಗಾನದ ಆಹಾರ್ಯದಲ್ಲಿ ವಿರಳವಾಗಿದೆ. ಯಕ್ಷಗಾನದ ಪಾತ್ರಗಳ ಮುಖವರ್ಣಿಕೆಯ ಬಣ್ಣಗಳಿಗೂ ವೇಷಭೂಷಣಗಳ ಬಣ್ಣಗಳಿಗೂ ನೇರವಾದ ಸಂಬಂಧವಿದೆ. ವೇಷಗಳ ಮಾದರಿ ಮತ್ತು ಬಣ್ಣ ಯಕ್ಷಗಾನದ ಪಾತ್ರಗಳ ಸ್ವಭಾವವನ್ನು ಆಧರಿಸಿಯೇ ರೂಪು ಗೊಂಡಿದೆ.

ಈ ಕೆಳಗಿನ ಪಟ್ಟಿಕೆಯಲ್ಲಿ ವೇಷಗಳಿಗೆ ತೊಡುವ ದಗಲೆ ಹಾಗೂ ಮುಖವರ್ಣಿಕೆಯ ಬಣ್ಣವನ್ನು ಗಮನಿಸಬಹುದಾಗಿದೆ.