ಕೆಲವು ವೇಷಗಳ ಬಣ್ಣಗಳು

 

ದಗಲೆ ಮತ್ತು ಇಜಾರಿನ ಬಣ್ಣ

ಸೋಗೆವಲ್ಲಿಗಳ ಬಣ್ಣ

. ಪೀಠಿಕೆ ವೇಷ
ದೇವೇಂದ್ರ ಹಸಿರು ಹಳದಿ, ಹಸಿರು, ಬಿಳಿ
ಅರ್ಜುನ ಕೆಂಪು ಕೆಂಪು, ಬಿಳಿ
ರಾಮ ಹಸಿರು ಬಿಳಿ, ಹಸಿರು
ದಶರಥ ಕೆಂಪು ಕೆಂಪು, ಬಿಳಿ
. ಎದುರು ವೇಷ
ಅತಿಕಾಯ ಕಪ್ಪು ಕೆಂಪು, ಬಿಳಿ
ಇಂದ್ರಜಿತು ಕೆಂಪು ಕೆಂಪು, ಬಿಳಿ
ಕಾರ್ತವೀರ್ಯ ಕಪ್ಪು ಬಿಳಿ, ಕೆಂಪು
ಕರ್ಣ, ಕೌರವ ಕಪ್ಪು ಕೆಂಪು, ಬಿಳಿ
. ಬಣ್ಣದ ವೇಷ
ನರಕಾಸುರ ಕೆಂಪು ಕೆಂಪು, ಕಪ್ಪು
ರಾವಣ ಕೆಂಪು ಕೆಂಪು, ಕಪ್ಪು
ಮಾಗಧ ಬಣ್ಣದ ವೇಷ ಕಪ್ಪು ಕೆಂಪು, ಕಪ್ಪು
ವಾಲಿ, ಸುಗ್ರೀವ, ಕಂಸ ಕಪ್ಪು ಕೆಂಪು, ಕಪ್ಪು
. ಹೆಣ್ಣು ಬಣ್ಣ
ಶೂರ್ಪನಖಿ ಕಪ್ಪು ಕಪ್ಪು, ಕೆಂಪು
ಪೂತನಿ ಕಪ್ಪು ಕಪ್ಪು, ಕೆಂಪು
ಅಜಮುಖಿ ಶೃಂಗಾರ ಕಪ್ಪು ಕಪ್ಪು, ಕೆಂಪು
ಲಂಕಿಣಿ ಕಪ್ಪು ಕಪ್ಪು, ಕೆಂಪು
ಕರಾಳ ನೇತ್ರೆ ಕಪ್ಪು ಕಪ್ಪು, ಕೆಂಪು

ಶೃಂಗಾರ ವೇಷಗಳಿಗೆ ಹಸಿರು ಬಣ್ಣವನ್ನು ಬಳಸುವುದಾದರೂ ಕೆಲವೊಮ್ಮೆ ರಾವಣ ನಂತಹ ರಾಕ್ಷಸ ಪಾತ್ರಗಳಿಗೆ ಕಣ್ಣಿನಸುತ್ತ ಹಸಿರು ಬಣ್ಣವನ್ನು ಬರೆದು ಶೃಂಗಾರದ ಭಾವವನ್ನು ಸೂಚಿಸಬೇಕು. ರಾಕ್ಷಸೀಯ ಪಾತ್ರಗಳಿಗೆ ಕಪ್ಪು ಬಣ್ಣದ ವೇಷಭೂಷಣಗಳು ಹಾಗೂ ಕಪ್ಪು ನೀಲಿ ಬಣ್ಣಗಳನ್ನು ಬಳಸಿದಾಗಲೂ ಶೃಂಗಾರ ಭಾವವನ್ನು ಪ್ರಕಟಪಡಿಸಲು ಹಸಿರು ಬಣ್ಣವನ್ನು ಬಳಸುವುದಿದೆ. ಆದರೆ ಅತಿಕಾಯನಂತಹ ಪಾತ್ರಗಳಿಗೆ ವೈಷ್ಣವನೆಂಬ ಕಾರಣಕ್ಕೆ ನೀಲವರ್ಣವನ್ನು ಹಾಕಲಾಗುತ್ತಿತ್ತು. ಕೆಲವೊಮ್ಮೆ ಹಸಿರು ಬಣ್ಣವನ್ನು ಕೂಡ ಹಾಕಲಾ ಗುತ್ತದೆ. ಇಲ್ಲಿ ಹಸಿರು ಶೃಂಗಾರದ ಸಂಕೇತವಾಗುವುದಿಲ್ಲ. ಕೃಷ್ಣನನ್ನು ನೀಲವರ್ಣದಲ್ಲಿ ನೀಲಮೇಘಶ್ಯಾಮನಾಗಿ ಚಿತ್ರಿಸುವುದಿದೆ. ಆತ ಶೃಂಗಾರ ಪ್ರಿಯನೆಂಬ ಕಾರಣಕ್ಕೆ ಹಸಿರು ಬಣ್ಣವನ್ನೂ ಸಹ ಬಳಸಲಾಗುತ್ತದೆ. ಹಾಗಾಗಿ ಒಂದು ಪಾತ್ರದ ಸ್ವಭಾವ ಮತ್ತು ಬಣ್ಣದ ಅರ್ಥ ಈ ಹಿನ್ನೆಲೆಯಲ್ಲಿ ನಿರ್ದಿಷ್ಟವಾದ ಚೌಕಟ್ಟು ಯಕ್ಷಗಾನದ ಆಹಾರ್ಯದ ಸಂದರ್ಭದಲ್ಲಿ ಕಂಡುಬರುವುದಿಲ್ಲ. ಒಂದು ಪಾತ್ರದ ಸ್ವಭಾವವನ್ನು ಒಂದು ನಿರ್ದಿಷ್ಟ ಬಣ್ಣದ ಮೂಲಕ ಪ್ರಕಟಪಡಿಸುವ ನಿಯಮವನ್ನು ಹೇಳಿದರೆ ಇದಕ್ಕೆ ವಿರೋಧಾಭಾಸವಾದ ವೇಷಗಳು ಸಹ ಯಕ್ಷಗಾನದಲ್ಲಿ ಕಾಣಿಸುತ್ತವೆ. ಮೇಲ್ನೋಟಕ್ಕೆ ಸತ್ವ, ರಜ, ತಮಗಳೆಂಬ ಮೂರು ಗುಣಗಳಿಗೆ ಬಿಳಿ, ಕೆಂಪು, ಕಪ್ಪು ಬಣ್ಣಗಳನ್ನು ಹೊಂದಿಸಿಕೊಂಡಿರುವುದು ಮಾತ್ರ ಕಾಣುವ ಸ್ಪಷ್ಟ ವಿಚಾರ. ಇಲ್ಲಿ ಶೃಂಗಾರದ ಸ್ವಭಾವವನ್ನು ಹೇಳಲು ಹಸಿರು ಬಣ್ಣವನ್ನು ಔಚಿತ್ಯವರಿತು ಬಳಸುವುದನ್ನು ಕಾಣಬಹುದು. ಹಾಗೇ ಹಸಿರು ಬಣ್ಣ ಹಾಕಿಕೊಂಡ ಪಾತ್ರಗಳಿಗೆಲ್ಲ ಶೃಂಗಾರ ಸ್ವಭಾವವನ್ನು ಆರೋಪಿಸು ವಂತೆಯೂ ಇಲ್ಲ. ಮುಂಗೋಪವನ್ನು ಸೂಚಿಸುವುದಕ್ಕೆ ಮೂಗಿನ ತುದಿಗೆ ಕೆಂಪನ್ನು ಸವರುವುದಿದೆ. ಕೆಲವೊಮ್ಮೆ ಕೆನ್ನೆಯ ಮೇಲೆ ಮುಂಗೋಪದ ಕೆಂಪು ವಿಸ್ತರಿಸಿ ಕಾಣಿಸುವುದಿದೆ. ದೂರ್ವಾಸನಂತಹ ಪಾತ್ರಗಳ ಮುಖವರ್ಣಿಕೆಯಲ್ಲಿ ಇದನ್ನು ಕಾಣಬಹುದು. ದುಡುಕಿನ ಸ್ವಭಾವವನ್ನು  ಹೊಂದಿರುವ ಪಾತ್ರಗಳಾದರೆ ಕಣ್ಣಿನ ಕೆಳಭಾಗದಲ್ಲಿ ಕೆಂಪು ಬಣ್ಣ ಸವರುವುದಿದೆ. ಕಿರಾತನ ಜಂಭವನ್ನು ಹಾಗೂ ಗಂಧರ್ವರ ದುಡುಕು ಸ್ವಭಾವವನ್ನು ಮುಖವರ್ಣಿಕೆಯಲ್ಲಿ ಆ ಮೂಲಕ ಸೂಚಿಸು ವುದಿದೆ. ದುಡುಕು ಸ್ವಭಾವದ ಉನ್ಮತ್ತ ಪಾತ್ರಗಳನ್ನು ಚಿತ್ರಿಸುವಾಗ ಕಣ್ಣಿನ ಸುತ್ತಲೂ ಕೆಂಪು  ಬಣ್ಣವನ್ನು ಸವರಲಾಗುತ್ತದೆ. ಪರಶುರಾಮ, ಅಶ್ವತ್ಥಾಮ ಮೊದಲಾದ ಪಾತ್ರಗಳನ್ನು ಚಿತ್ರಿಸುವಾಗ ಕಣ್ಣಿನ ಸುತ್ತಲೂ ಕೆಂಪು ಬಣ್ಣವನ್ನು ಸವರುವುದಿದೆ.

ಶೂರ್ಪನಖಿಯಂತಹ ಹೆಣ್ಣು ಬಣ್ಣವು ಸ್ವಭಾವದಿಂದ ಶೃಂಗಾರವಾದರೂ ಆಕೆಯನ್ನು ಕಾಮುಕಿಯೆಂದು ಚಿತ್ರಿಸಿ ಕಪ್ಪು ಬಣ್ಣವನ್ನು ಬಳಸಲಾಗುತ್ತದೆ. ಶೂರ್ಪನಖಿಯ ಪಾತ್ರಕ್ಕೆ ಮೂಗಿನಿಂದ ಆರಂಭವಾದ ನಾಮ ಹಣೆಯವರೆಗೂ ವಿಸ್ತರಿಸುತ್ತದೆ. ಆನೆಯ ಸೊಂಡಿಲಿನಂತೆ ಗೋಚರಿಸುವ ಈ ಆಕಾರವು ಆನೆಯ ಬಲದ ಸಂಕೇತವೆಂದು ಹೇಳಲಾಗುತ್ತದೆ. ಭೀಮನ ಪಾತ್ರದ ಚಿತ್ರಣದ ಸಂದರ್ಭದಲ್ಲಿ ಹಣೆಯಲ್ಲಿ ಎರಡು ಆನೆಯ ಕಣ್ಣುಗಳನ್ನು ಹೋಲುವ ಚಿತ್ರಣಗಳನ್ನು ಬರೆಯಲಾಗುತ್ತದೆ. ಈ ಚಿತ್ರಣದಲ್ಲಿ ಕೆಂಪು ಬಣ್ಣ ಬಲಕ್ಕೆ ಸಂಕೇತವಾಗುತ್ತದೆ. ಈ ಸಂಕೇತಗಳು ಅರ್ಥ ಸ್ಪರಿಸುವುದು ಇಲ್ಲಿ ಬಣ್ಣಗಳ ನೆಲೆಯಿಂದಲ್ಲ. ಬದಲಾಗಿ ಅಲ್ಲಿನ ಚಿತ್ರಣದ ಆಕಾರದ ನೆಲೆಯಿಂದ ಎಂಬುದು ಗಮನಾರ್ಹ. ಇವನ್ನೆಲ್ಲ ಗಮನಿಸಿದರೆ ಇಲ್ಲಿ ಬಣ್ಣ ಬಳಕೆಯು ಬಣ್ಣಗಳ ಅರ್ಥಗಳನ್ನು ಅವಲಂಬಿಸಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಪಾತ್ರಗಳು ತೊಡುವ ಅಂಗಿ ಮತ್ತು ಇಜಾರು ಒಂದೇ ಬಣ್ಣವನ್ನು ಹೊಂದಿರುತ್ತದೆ. ಇದು ಬಣ್ಣಗಳ ಹೊಂದಾಣಿಕೆಗಳಿಗಿಂತಲೂ ಸೌಂದರ್ಯದ ನೆಲೆಯಿಂದ ವಾಸ್ತವ ಚಿಂತನೆಗೆ ಪೂರಕವಾದುದೆಂದೆನಿಸುತ್ತದೆ. ಮನುಷ್ಯನ ಮುಖದ ಬಣ್ಣ, ಮೈಯ ಬಣ್ಣ, ತೋಳುಗಳ ಬಣ್ಣ ಹಾಗೂ ಕಾಲುಗಳ ಬಣ್ಣ ಬೇರೆ ಬೇರೆಯಾಗಿರುವುದಿಲ್ಲ. ಹಾಗೆಯೇ ಒಂದು ಪಾತ್ರದ ಸಂದರ್ಭದಲ್ಲಿ ಮುಖಕ್ಕೆ ಹಾಕಿದ ಬಣ್ಣ ಮೂಲಭೂತವಾಗಿ ಆ ಪಾತ್ರದ ಮೈಬಣ್ಣವನ್ನೇ ಸೂಚಿಸುತ್ತದೆ. ಇದಕ್ಕೆ ಸಮೀಪವರ್ತಿಯಾಗಿ ಹೊಂದಾಣಿಕೆಯಾಗುವ ಬಣ್ಣವನ್ನೇ ಮುಖ ಬರವಣಿಗೆಯಲ್ಲಿ ಬಳಸಲಾಗುತ್ತದೆ. ಆ ಕಾರಣಕ್ಕಾಗಿಯೇ ಎದೆ ಪದಕ, ಭುಜಕೀರ್ತಿ, ತೋಳುಪಟ್ಟಿ ಇತ್ಯಾದಿ ಆಭರಣಗಳನ್ನು ಕಟ್ಟಿದ ಬಳಿಕವೂ ಹೊರಗೆ ಕಾಣುವ ಅಂಗಿಯ ಬಣ್ಣವು ಪಾತ್ರದ ಮೈಯ ಬಣ್ಣವನ್ನು ಪ್ರತಿನಿಧಿಸುತ್ತದೆ. ರಂಗದಲ್ಲಿ ಪಾತ್ರ ಕುಣಿಯುವಾಗ ಬಾಲಮುಂಡಿನ ಕೆಳಗೆ ತೊಡೆ ಹಾಗೂ ಕಾಲುಗಳನ್ನು ಇಜಾರಿನ ಬಣ್ಣ ಪ್ರತಿನಿಧಿಸುತ್ತದೆ. ಹಾಗಾಗಿ ರಕ್ತಮಾಂಸಲವಾದ ಮೈ ಒಂದೇ ಬಣ್ಣವನ್ನು ಪ್ರತಿನಿಧಿಸುವಂತೆ ಯಕ್ಷಗಾನದ ಮುಖ ಬಣ್ಣ, ಅಂಗಿ, ಇಜಾರು ಇಷ್ಟು ಒಂದೇ ಬಣ್ಣವನ್ನು ಹೊಂದಿರುತ್ತದೆ. ಇವುಗಳಿಗೆ ಹೊರತಾದ ವೇಷ ವಿಧಾನಗಳು ಮಖವರ್ಣಿಕೆಯ ರೇಖಾ ವಿನ್ಯಾಸಗಳು ಇವೆಲ್ಲ ಪಾತ್ರಗಳ ಸ್ವಭಾವವನ್ನು ಅನುಸರಿಸಿ ರೂಪುಗೊಂಡಿರುತ್ತದೆ. ಅವು ಪಾತ್ರದ ಸ್ವಭಾವ, ಪಾತ್ರಗಳ ಪ್ರವೃತ್ತಿ, ಪಾತ್ರಗಳ ಸ್ಥಾನಮಾನ ಇವುಗಳನ್ನು ಅವಲಂಬಿಸಿ ವಿಭಿನ್ನವಾಗುತ್ತಿರುತ್ತವೆ.

ಯಕ್ಷಗಾನದಲ್ಲಿ ಸ್ವಭಾವದ ದೃಷ್ಟಿಯಿಂದ ಹೇಳುವಾಗ ಪೀಠಿಕೆ ವೇಷಗಳೆಂದು, ಎದುರು ವೇಷಗಳೆಂದು ಎರಡು ವಿಧಾನಗಳಿವೆ. ಪೀಠಿಕೆ ವೇಷಗಳು ಸಾಮಾನ್ಯವಾಗಿ ಸತ್ವಗುಣಗಳನ್ನು ಪ್ರತಿಪಾದಿಸುವ ಪಾತ್ರಗಳು. ಎದುರು ವೇಷಗಳೆಂದರೆ ತಮ ಮತ್ತು ರಜೋಗುಣಗಳನ್ನು ಮೈಗೂಡಿಸಿಕೊಂಡವು. ಸಾಮಾನ್ಯವಾಗಿ ಪೀಠಿಕೆ ವೇಷದ ಮುಖದ ತಳಪಾಯದ ಮಿಶ್ರಣದಲ್ಲಿ ಹಳದಿಯ ಅಂಶ ಹೆಚ್ಚಾಗಿ ಇರುತ್ತದೆ. ಹಸಿರು ಅಂಗಿ ಹಾಗೂ ಇಜಾರನ್ನು ಧರಿಸುವುದು ಶೃಂಗಾರದ ಪ್ರತೀಕವೆಂದು ಹೇಳಲಾಗುತ್ತದೆ. ಭರತನ ಪ್ರಕಾರ ಶೃಂಗಾರಕ್ಕೆ ಕಪ್ಪು ವರ್ಣ. ಲಾಕ್ಷಣಿಕರ ಪ್ರಕಾರ ಹಸಿರು. ಭರತ ಹೇಳುವಂತೆ ಹಳದಿ ಬಣ್ಣ ಅದ್ಭುತ ರಸಕ್ಕೆ ಪ್ರಚೋದಕ. ಮನಃಶಾಸ್ತ್ರಜ್ಞರ ಪ್ರಕಾರ ಹಳದಿ ಬಣ್ಣವು ಕ್ರೀಡಾ ಮನೋಭಾವ, ಎಲ್ಲರೊಂದಿಗೂ   ಬೆರೆಯುವ ಸ್ವಭಾವ, ಸಂತೋಷಚಿತ್ತ, ನಗುಮುಖ, ವಿಶ್ರಾಂತಿ ರಹಿತ ಎಂಬರ್ಥದಲ್ಲಿ ಸಂಕೇತಿಸುತ್ತದೆ. ಪೀಠಿಕೆ ವೇಷಗಳು ಹೆಚ್ಚಾಗಿ ರಂಗದಲ್ಲಿ ಸಾಯುವುದಿಲ್ಲ. ಅವುಗಳಲ್ಲಿ ಶೃಂಗಾರದ ಭಾವವೂ ಇರುತ್ತದೆ. ಶೃಂಗಾರ ವೇಷಗಳನ್ನು ಈ ಹಿನ್ನೆಲೆಯಿಂದ ನೋಡಿದರೆ ಮನಃಶಾಸ್ತ್ರಜ್ಞರು ಹೇಳುವ ಅಭಿಪ್ರಾಯಕ್ಕೂ ಈ ವೇಷಗಳ ಪ್ರವೃತ್ತಿಗೂ ಹೆಚ್ಚಿನ ಸಂಬಂಧವನ್ನು ಕಲ್ಪಿಸಬಹುದು.

ಸಾಮಾನ್ಯವಾಗಿ ಪೀಠಿಕೆ ವೇಷಗಳು ವೈಷ್ಣವ ನಾಮವನ್ನೇ ಹೊಂದಿರುತ್ತದೆ. ವಿಷ್ಣು ಪಾರಮ್ಯವನ್ನು ಶ್ರುತಪಡಿಸುವ ಪ್ರಸಂಗಗಳಲ್ಲಿ ಇವು ರಂಗಭೂಮಿಯಲ್ಲಿ ಕೊನೆಯವರೆಗೂ ಉಳಿಯುವ ಪಾತ್ರಗಳಾಗಿವೆ. ಇವುಗಳ ನಾಮ ನಡುವೆ ಕೆಂಪಾಗಿದ್ದು ಅದರ ಸುತ್ತಲೂ ಹಳದಿ ಬಣ್ಣವಿರುತ್ತದೆ. ನಂತರ ಬಿಳಿ ಚುಕ್ಕಿ, ನಂತರ ಕೆಂಪು ಗೆರೆಗಳಿರುತ್ತವೆ. ಕಣ್ಣಿನ ಕೊನೆಗೆ ಬಿಳಿಯ ಮುದ್ರೆ ಇದ್ದು ಸುತ್ತಲೂ ಕೆಂಪು ಗೆರೆಗಳಿರುತ್ತವೆ. ಭರತನ ಪ್ರಕಾರ ಬಿಳಿ ಬಣ್ಣವು ಹಾಸ್ಯಕ್ಕೆ ಸಂಕೇತ. ಮನಃಶಾಸ್ತ್ರಜ್ಞರ ಹಾಗೂ ಜನಪದ ನಂಬಿಕೆ ಪ್ರಕಾರ ಬಿಳಿ ಗಂಭೀರ, ಪಾವಿತ್ರ್ಯ ಹಾಗೂ ಪರಿಶುದ್ಧತೆಯನ್ನು ಸಂಕೇತಿಸುತ್ತದೆ. ಯಕ್ಷಗಾನದ ರಂಗದ ದೃಷ್ಟಿಯಿಂದ ನೋಡಿದರೆ ಎಲ್ಲಾ ವೇಷಗಳಿಗೂ ನಾಮ ಕೆಂಪು ಮತ್ತು ಬಿಳಿ ಮಾತ್ರವೇ ಆಗಿರುತ್ತದೆ. ಕಾರಣವೇನೆಂದರೆ ಉಳಿದ ಬಣ್ಣಗಳಲ್ಲಿ ಯಾವುದಾದರೂ ಒಂದು ತಳಹದಿಯ ಬಣ್ಣವಾಗಿ ಬಳಸಿರುತ್ತಾರೆ. ಉಳಿದ ಬಣ್ಣಗಳ ಹಿನ್ನೆಲೆಯಲ್ಲಿ ಬಿಳಿ ಬಣ್ಣವು ಹೆಚ್ಚು ಪ್ರಕಾಶ ಮಾನವಾಗಿ ಕಾಣಿಸುತ್ತದೆ. ಗಾಂಭೀರ್ಯದ ಸಂಕೇತವಾದ ಬಿಳಿಯ ಬಣ್ಣವು ಯಕ್ಷಗಾನದಲ್ಲಿ ಪೂರಕ ಬಣ್ಣವಾಗಿ ವೇಷವನ್ನು ವೈಭವೀಕರಿಸುತ್ತದೆ.

ಸಾಮಾನ್ಯವಾಗಿ ಎದುರು ವೇಷಗಳಲ್ಲಿ ಹಸಿರು, ಕೆಂಪು ಮತ್ತು ನೀಲಿ ತಳಹದಿಯ ಬಣ್ಣವಾಗಿರುತ್ತದೆ. ಲಾಕ್ಷಣಿಕರ ಪ್ರಕಾರ ಹಸಿರು ಶೃಂಗಾರದ ಸಂಕೇತ. ಆದರೆ ಈ ವೇಷಗಳು ಕೆಲವೊಮ್ಮೆ ಸತ್ವ, ರಜ ಎರಡೂ ಪ್ರವೃತ್ತಿಗಳಲ್ಲಿ ಕಾಣಿಸುತ್ತವೆ. ಅತಿಕಾಯ ಋತುಪರ್ಣ ದಂತಹ ವೇಷಗಳು ಈ ಸ್ವಭಾವದವುಗಳೇ. ಕೆಲವೊಮ್ಮೆ ತಾಮಸ ಮತ್ತು ರಾಜಸ ಪ್ರವೃತ್ತಿಯ ಸ್ವಭಾವಗಳನ್ನು ಪ್ರತಿನಿಧಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಕಣ್ಣಸುತ್ತ ಕೆಂಪು ಬಣ್ಣವನ್ನು ಹೆಚ್ಚಾಗಿ ಬಳಸುವುದಿದೆ. ಕರ್ಣ, ಕೌರವ ಇತ್ಯಾದಿ ಪಾತ್ರಗಳನ್ನು ಈ ಹಿನ್ನೆಲೆಯಲ್ಲಿ ಹೆಸರಿಸಬಹುದು. ಅಪಾಯಕಾರಿ ಮನೋಭಾವ, ಪ್ರೀತಿಸುವ ಪ್ರವೃತ್ತಿ, ಸಾಧುತನ, ಭಾವುಕತೆಯಂತಹ ಸಂಕೀರ್ಣ ಮನೋವೃತ್ತಿಗಳು ಈ ಪಾತ್ರಗಳಲ್ಲಿರುತ್ತವೆ. ಅಪಾಯಕಾರಿ ಮನೋಭಾವಕ್ಕೆ ಹಸಿರು ಬಣ್ಣವಾದರೆ ಕೆಂಪು ಬಣ್ಣ ಅದಕ್ಕೆ ಪೂರಕವಾಗುತ್ತದೆ. ಈ ಎರಡೂ ಬಣ್ಣಗಳು ದ್ವಂದ್ವ ಮನೋವೃತ್ತಿಯನ್ನು ಸಂಕೇತಿಸುತ್ತವೆ. ಒಂದು ನೆಲೆಯಿಂದ ಸತ್ವ ಗುಣದ ಪಾತ್ರಗಳನ್ನು ವಿರೋಧಿಸುವ ರಾಜಸ ಪ್ರವೃತ್ತಿಯನ್ನು ಹೊಂದಿವೆ. ಇನ್ನೊಂದೆಡೆ ತನ್ನನ್ನೇ ತಾನು ತೋರಿಸಿಕೊಳ್ಳಲಾಗದ ತಮೋಗುಣದ ಅಂಧ ಪ್ರವೃತ್ತಿಯು ಈ ಪಾತ್ರಗಳಲ್ಲಿ ರುತ್ತದೆ. ಒಂದು ರೀತಿಯಲ್ಲಿ ಎರಡು ಬಣ್ಣಗಳ ರೇಖಾ ವಿನ್ಯಾಸಗಳು ದ್ವಂದ್ವ ವ್ಯಕ್ತಿತ್ವವನ್ನು ಸೂಚಿಸುವಂತೆ ತೋರುತ್ತವೆ.

ಎದುರು ವೇಷಗಳಲ್ಲಿ ಇನ್ನೊಂದು ವರ್ಗದ ವೇಷಗಳನ್ನು ಸಹ ಗುರುತಿಸಬಹುದು. ಇಲ್ಲಿ ಹಸಿರು ಬಣ್ಣ ಗೌಣವಾಗಿ ಕೆಂಪು ಬಣ್ಣವೇ ಅಧಿಕವಾಗಿರುತ್ತದೆ. ಮೇಲ್ನೋಟಕ್ಕೆ ಕೆಂಪು ಮುಖವರ್ಣಿಕೆಯಲ್ಲಿ ಈ ಪಾತ್ರಗಳು ಪ್ರಕಟವಾಗುತ್ತದೆ. ಭಾರತೀಯ ತತ್ವಶಾಸ್ತ್ರಜ್ಞರ ಪ್ರಕಾರ ಕೆಂಪು ರಜೋಗುಣಕ್ಕೆ ಹಾಗೂ ರೌದ್ರಕ್ಕೆ  ಸಂಕೇತ. ಮನಃಶಾಸ್ತ್ರಜ್ಞರ ಪ್ರಕಾರ ವಿರೋಧಿಸುವ ಮನೋಭಾವ, ಆತ್ಮರತಿ ಹಾಗೂ ಸ್ವಾಭಿಮಾನದ ಸಂಕೇತ. ಇಂದ್ರಜಿತು, ರಕ್ತಬೀಜನಂತಹ ಪಾತ್ರಗಳನ್ನು ಇಲ್ಲಿ ಹೆಸರಿಸಬಹುದು. ಇವು ಯಕ್ಷಗಾನದಲ್ಲಿ ಆತ್ಮಾಭಿಮಾನದ ದುರಹಂಕಾರದ ಪಾತ್ರಗಳಾಗಿವೆ. ಬಣ್ಣದ ವೇಷಗಳ ಬಿಳಿಯ ಚುಟ್ಟಿಗಳು ಪಾತ್ರಕ್ಕೆ ಭೀಕರತೆಯನ್ನು ತಂದುಕೊಡುತ್ತದೆ. ಒಂದು ರೀತಿಯಲ್ಲಿ ಅತಿಮಾನುಷ ವ್ಯಕ್ತಿತ್ವಗಳನ್ನು ಪ್ರತಿನಿಧಿಸುವಲ್ಲಿ ಇದು ನೆರವಾಗುತ್ತದೆ. ರಾಮನಂತಹ ಪಾತ್ರಗಳಲ್ಲಿ  ಹಸಿರು ಹಾಗೂ ಹಳದಿ ಬಣ್ಣಗಳ ಮಿತಬಳಕೆಯೂ ಇರುತ್ತದೆ. ಭರತ ಹೇಳುವ ಅದ್ಭುತ ರಸಕ್ಕೆ ಇದು ಪ್ರಚೋದಕ ಎನ್ನಬಹುದು. ಮನಃಶಾಸ್ತ್ರಜ್ಞರು ಹೇಳುವ ವಾದವನ್ನು ಇದಕ್ಕೆ ಅನ್ವಯಿಸುವಂತಿಲ್ಲ.

ರಾಮ, ಕೃಷ್ಣ, ಕಾರ್ತವೀರ್ಯ, ಶಿಶುಪಾಲ ಮೊದಲಾದ ವೇಷಗಳಿಗೆ ಹಿಂದೆ ಹಸಿರು ಬಣ್ಣವನ್ನು ಬಳಸಲಾಗುತ್ತಿತ್ತಂತೆ. ಇತ್ತೀಚಿಗೆ ನೀಲ ಬಣ್ಣವನ್ನು ಬಳಸುತ್ತಾರೆ. ಬಿಳಿ ಮತ್ತು ಕಪ್ಪು ಬಣ್ಣವನ್ನು ಮಿಶ್ರ ಮಾಡಿದಾಗ ನೀಲಿ ಬಣ್ಣ ದೊರೆಯುತ್ತದೆ. ಅಥವಾ ಬಿಳಿ ಬಣ್ಣಕ್ಕೆ ನೀಲಿ ಬಣ್ಣವನ್ನು ಮಿಶ್ರ ಮಾಡುವ ಪದ್ಧತಿಯೂ ಇದೆ. ಭಯಾನಕಕ್ಕೂ ಕಪ್ಪು ಬಣ್ಣವನ್ನೇ ಭರತ ಸೂಚಿಸಿದ್ದಾನೆ. ನೀಲಿ ಬೀಭತ್ಸಕ್ಕೆ ಸಂಕೇತವೆಂದು ಭರತನ ಅಭಿಪ್ರಾಯ. ನೀಲಿ ಮತ್ತು ಕಪ್ಪುಗಳ ನಡುವೆ ಭರತ ಹೇಳುವ ಶೃಂಗಾರದ ಬಣ್ಣವಿದೆ. ಅದುವೇ ಯಕ್ಷಗಾನದಲ್ಲಿ ಬಳಸುವ ನೀಲಿ ಇರಬಹುದು. ಆದರೆ ಭರತ ಹಸಿರು ಬಣ್ಣವನ್ನು ಹೆಸರಿಸುವುದೇ  ಇಲ್ಲ. ನೀಲಿ ಬಣ್ಣವು ಪ್ರೀತಿ, ನಿರ್ಭಯ, ಶ್ರೇಷ್ಠತೆ, ಸಾಧು ಮನೋಭಾವ, ಪ್ರಶಾಂತತೆಯ ಪ್ರತೀಕವೆಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಹಾಗಾಗಿ ನೀಲಿ ಬಣ್ಣವೇ ಕೃಷ್ಣನಂತಹ ವೇಷಗಳಿಗೆ ಸರಿ ಎಂದು ತರ್ಕಿಸುವವರೂ ಇದ್ದಾರೆ (ಕೇಶವಶರ್ಮ, ೨೦೦೪ : ೬೭). ವಾಸ್ತವವಾಗಿ ಯಕ್ಷಗಾನದಲ್ಲಿ ರಾಮ, ಕೃಷ್ಣ ಮೊದಲಾದ ವೇಷಗಳಿಗೆ ಹಸಿರು ಅಥವಾ ನೀಲಿ ಬಣ್ಣಗಳ ಬಳಕೆ ಇರಲಿಲ್ಲ. ಉಳಿದ ಪಾತ್ರಗಳಿಗೆ ಬಳಸುವ ಬಂಗಾರದ ಬಣ್ಣದ ಮೂಲಲೇಪನವನ್ನು ಹಾಕಲಾಗುತ್ತಿತ್ತು. ಬಡಗುತಿಟ್ಟಿನಲ್ಲಿ ರಾಮ, ಕೃಷ್ಣ ಇನ್ನಿತರ ಪಾತ್ರಗಳಿಗೆ ಹಸಿರು ಅಥವಾ ನೀಲಿಯನ್ನು ಬಳಸುವ ಕ್ರಮವಿಲ್ಲ.

ರಾಕ್ಷಸ ವೇಷಗಳಿಗೆ ಹಸಿರು, ಕಪ್ಪು ಅಥವಾ ನೀಲಿ ಬಣ್ಣಗಳಿರುತ್ತವೆ. ಭರತನ ಪ್ರಕಾರ ಕಪ್ಪು ಬಣ್ಣ ಬೀಭತ್ಸ ರಸಕ್ಕೆ ಪ್ರೇರಕ. ಹೊU ಕಪ್ಪು ಬೀಭತ್ಸಕ್ಕೂ ಪ್ರತಿನಿಧಿಯಾಗಿದೆ. ಸ್ತ್ರೀ ವೇಷಗಳಿಗೆ ಗೌರವರ್ಣವಿರುತ್ತದೆ. ಇದು ಸಂತೋಷದ ಸಂಕೇತವೆಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ವರಾಹನಂತಹ ವೇಷ ಕಪ್ಪು ತಳಹದಿಯಾಗಿರುವುದರಿಂದ ಅದು ಬೀಭತ್ಸ ರಸಕ್ಕೆ ಪ್ರೇರಕವಾಗಿರುತ್ತದೆ.

ಯಕ್ಷಗಾನದಲ್ಲಿ ಬಣ್ಣಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಈಗಾಗಲೇ ವಿವರಿಸಿರುವಂತೆ ಶಾಸ್ತ್ರಗಳು ಹೇಳಿರುವ ಮೂರು ಗುಣಗಳನ್ನು ದೃಷ್ಟಿಯಲ್ಲಿರಿಸಿಕೊಳ್ಳ ಲಾಗುತ್ತದೆ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳೆಂದು ಅವುಗಳನ್ನು ಹೆಸರಿಸಲಾಗಿದೆ. ಸತ್ವಗುಣವು ಶಾಂತ ಸ್ವಭಾವ, ರಜೋಗುಣವು ವೀರ ಸ್ವಭಾವ ಹಾಗೂ ತಮೋಗುಣವು ರಾಕ್ಷಸ ಸ್ವಭಾವದ್ದು. ಇವುಗಳನ್ನು ಅನುಸರಿಸುವ ಬಣ್ಣಗಳು ಕ್ರಮವಾಗಿ ಹಸಿರು, ಕೆಂಪು ಮತ್ತು ಕಪ್ಪು. ಪೀಠಿಕೆಯ ಸಾತ್ವಿಕ ಪಾತ್ರಗಳೆಲ್ಲ ಹಸಿರು ಬಣ್ಣದ ದಗಲೆಯನ್ನು ತೊಟ್ಟುಕೊಳ್ಳುವುದು ಸಂಪ್ರದಾಯ. ಪೀಠಿಕೆ ವೇಷದ ಪಾತ್ರಗಳೆಲ್ಲ ಯಕ್ಷಗಾನದಲ್ಲಿ ಸಾತ್ವಿಕ ಪಾತ್ರಗಳೇ ಆಗಿವೆ. ದಶರಥ, ರಾಮ, ಕೃಷ್ಣ, ಧರ್ಮರಾಯ, ದೇವೇಂದ್ರ ಇತ್ಯಾದಿ ಪಾತ್ರಗಳು ಸಾತ್ವಿಕ ಸ್ವಭಾವದವುಗಳು. ಈ ವೇಷಗಳಿಗೆ ವಿರೋಧ ಸ್ಥಾನದಲ್ಲಿ ನಿಲ್ಲುವ ಅಥವಾ ಎದುರು ವೇಷಗಳು ವೀರಸ್ವಭಾವದವುಗಳಾದ್ದರಿಂದ ಕೆಂಪು ದಗಲೆಯನ್ನು ಧರಿಸುತ್ತಾರೆ. ಈ ಪಾತ್ರಗಳು ವೀರರಸ ಪ್ರಧಾನವಾದವುಗಳು ಮತ್ತು ಹೆಚ್ಚು ಕ್ರಿಯಾಶೀಲವಾದ ಪಾತ್ರಗಳು. ವರ್ಣಗಳ ದೃಷ್ಟಿಯಿಂದಲೂ ಕೆಂಪು ಕ್ರಿಯಾಶೀಲವಾಗಿದ್ದು ಹಸಿರಿನ ವಿರುದ್ಧ ವರ್ಣವಾಗಿದೆ (ಎ.ಎಸ್.ವಿಶ್ವನಾಥ, ೨೦೦೩). ತಾಮಸ ಸ್ವಭಾವವನ್ನು ಪ್ರಕಟಿಸುವ ರಾಕ್ಷಸನ ಪಾತ್ರಗಳು ಧರಿಸುವ ದಗಲೆಯ ಬಣ್ಣ ಕಪ್ಪು ಇದು ಯಕ್ಷಗಾನದ ವೇಷಗಳ ಸ್ಥೂಲವಾದ ವರ್ಣ ವಿಭಜನೆಯ ನಿಯಮ. ರಾವಣನಂತಹ ಪಾತ್ರ ಪೂರ್ತಿ ತಾಮಸ ಸ್ವಭಾವದ್ದಲ್ಲ. ಅದು ಶೃಂಗಾರವನ್ನೂ, ಶೌರ್ಯವನ್ನೂ ಪ್ರಕಟಿಸುವ ಪಾತ್ರವಾದ ಕಾರಣಕ್ಕಾಗಿ ಕೆಂಪು ದಗಲೆಯನ್ನೇ ಧರಿಸುತ್ತದೆ.

ಬಣ್ಣಗಾರಿಕೆ

ಯಕ್ಷಗಾನದಲ್ಲಿ ಮುಖಕ್ಕೆ ಬಣ್ಣ ಹಚ್ಚುವ ಮತ್ತು ಅದರ ಮೇಲೆ ವಿವಿಧ ವಿನ್ಯಾಸಗಳಲ್ಲಿ ಬರೆಯುವುದನ್ನು ಬಣ್ಣಗಾರಿಕೆ ಎಂದು ಕರೆಯಲಾಗುತ್ತದೆ. ಬಣ್ಣಗಾರಿಕೆಯಲ್ಲಿ ಮುಖ್ಯವಾಗಿ ಎರಡು ಹಂತಗಳಿವೆ. ಮೊದಲನೆಯದು ಮೂಲ ಲೇಪನ. ಎರಡನೆಯದು ರೇಖೆಗಳ ಬರವಣಿಗೆ. ಯಕ್ಷಗಾನದಲ್ಲಿ ಪಾತ್ರದ ಮುಖವರ್ಣಿಕೆ ಅಥವಾ ಕಾಂತಿಯು ಮೂಲ ಲೇಪನವನ್ನು ಅವಲಂಬಿಸಿರುತ್ತದೆ. ಮುಖವರ್ಣಿಕೆಯು ಸುಂದರವಾಗಿ ಕಾಣಬೇಕಾದರೆ ಮೂಲ ಲೇಪನವನ್ನು ಸರಿಯಾಗಿ ಮಾಡಿಕೊಂಡಿರಬೇಕಾಗುತ್ತದೆ. ಯಕ್ಷಗಾನದ ಕಲಾವಿದನು ಪಾತ್ರವಾಗುವ ಪ್ರಕ್ರಿಯೆ ಆರಂಭವಾಗುವುದೇ ಮುಖಕ್ಕೆ ಮೂಲಲೇಪನವನ್ನು ಹಚ್ಚಿಕೊಳ್ಳುವುದರ ಮೂಲಕ. ಮೂಲ ಲೇಪನವು ಬಿಳಿ, ಹಳದಿ, ಕೆಂಪು ಮಿಶ್ರಣದ ಗೌರವರ್ಣದಿಂದ ಕೂಡಿರುತ್ತದೆ. ಕೆಲವು ವೇಷಗಳಿಗೆ ಹಸಿರು ಬಣ್ಣವನ್ನು ಬಳಿಯುತ್ತಾರೆ. ಹಸಿ ಬಣ್ಣ, ರಾಕ್ಷಸ ಮತ್ತು ಹಾಸ್ಯ ವೇಷಗಳನ್ನು ಹೊರತು ಪಡಿಸಿ ಸಾಮಾನ್ಯವಾಗಿ ಎಲ್ಲ ವೇಷಗಳಿಗೂ ಮೂಲ ಲೇಪನ ಇರುತ್ತದೆ.

ಮೂಲ ಲೇಪನ

ಸಾಮಾನ್ಯವಾಗಿ ಬಣ್ಣ ಹಚ್ಚಲು ಕುಳಿತುಕೊಳ್ಳುವ ಮೊದಲು ಕಲಾವಿದರು ಉಡುಗೆ ತೊಡುಗೆಗಳನ್ನು ಕಳಚಿಟ್ಟು ಹಳೆಯ ಇಜಾರನ್ನು (ಚಡ್ಡಿ) ತೊಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಇಜಾರು ಕಪ್ಪು ಬಣ್ಣದ್ದಾಗಿರುತ್ತದೆ. ಕೆಲವೊಮ್ಮೆ ಹಳತಾದ ಇತರೇ ಬಣ್ಣಗಳ ಇಜಾರ(ಮೇಲ್ ಇಜಾರ)ನ್ನು ಧರಿಸುವುದಿದೆ. ಭಾರತದ ಹೆಚ್ಚಿನ ರಂಗಭೂಮಿಯ ಸಂದರ್ಭದಲ್ಲೂ ವೇಷಧಾರಣೆಯ ಮೊದಲಿಗೆ ಇಜಾರವನ್ನು ತೊಟ್ಟುಕೊಳ್ಳುವ ಸಂಪ್ರದಾಯವಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಾಮಾನ್ಯವಾಗಿ ಬಣ್ಣ ಹಚ್ಚು ವುದರ ಮೊದಲು ಮುಖವನ್ನು ನೀರಿನಿಂದ ತೊಳೆಯುವುದೂ ಇದೆ. ಬಣ್ಣ ಹಾಕುವ ಸಂದರ್ಭದಲ್ಲಿ ಹಣೆಗೆ ಕೂದಲು ಬೀಳದಿರಲು ‘ಚಿಟ್ಟೆಪಟ್ಟಿ’ಯನ್ನು ಕಟ್ಟಿಕೊಳ್ಳುತ್ತಾರೆ. ‘ಚಿಟ್ಟೆಪಟ್ಟಿ’ ಎಂದರೆ ಸಾಮಾನ್ಯವಾಗಿ ಒಂದೂವರೆಯಿಂದ ಎರಡೂವರೆ ಇಂಚು ಅಗಲವಿರುವ ಕಪ್ಪು ಬಣ್ಣದ ಕೋರ ಬಟ್ಟೆಯ ಪಟ್ಟಿ. ಇದನ್ನು ಹಣೆಯ ಮೇಲ್ಭಾಗದಿಂದ ಕೂದಲನ್ನು ಹಿಂಬದಿಗೆ ಸರಿಸಿ ಕಿವಿಯ ಮೇಲ್ಗಡೆಯಿಂದ ಹಾದು ಹಿಂಭಾಗದಲ್ಲಿ ಕಟ್ಟಿಕೊಳ್ಳಲಾಗುತ್ತದೆ. ಹಣೆ ಮತ್ತು ತಲೆಯ ಭಾಗವನ್ನು ಬೇರ್ಪಡಿಸುವ ಪಟ್ಟಿಯಾದುದರಿಂದ ಅದಕ್ಕೆ ಚಿಟ್ಟೆಪಟ್ಟಿ ಎಂಬ ಹೆಸರು ಬಂದಿರಬಹುದು (ಚಿಟ್ಟೆ ಎಂದರೆ ಮನೆಯ ಮುಂಭಾಗದಲ್ಲಿ ಅಂಗಳವನ್ನು ಉಳಿದ ಜಾಗಗಳಿಂದ ಪ್ರತ್ಯೇಕಿಸುವ ಮಣ್ಣಿನ ದಿನ್ನೆ). ಹಿಂದಿನ ಕಾಲದಲ್ಲಾದರೆ ಬಹುಶಃ ಚಿಟ್ಟೆಪಟ್ಟಿ ಕಟ್ಟುವ ಪದ್ಧತಿ ಇದ್ದಿರಲಾರದು, ಏಕೆಂದರೆ ಕಲಾವಿದರು ಸ್ವತಃ ತಾವೇ ಉದ್ದವಾಗಿ ನೀಳವಾದ ಕೂದಲನ್ನು ಹೊಂದಿರುತ್ತಿದ್ದರು ಎಂಬುದು ಕೆಲವರ ಅಭಿಪ್ರಾಯ. ತಲೆ ಗೂದಲನ್ನು ಹಿಮ್ಮುಖವಾಗಿ ಬಾಚಿ ಕಟ್ಟಿಕೊಂಡರೆ ಕೂದಲು ಮುಖದ ಮೇಲೆ ಬೀಳುವ ಪ್ರಮೇಯವೇ ಇರುತ್ತಿರಲಿಲ್ಲ.

ಆರಂಭದಲ್ಲಿ ತಳಪಾಯದ ಬಣ್ಣ(ಛಾಯ ಬಣ್ಣ)ವನ್ನು ಮುಖಕ್ಕೆ ಹಚ್ಚಿಕೊಳ್ಳಲಾಗುತ್ತದೆ. ಇದು ಸಾಮಾನ್ಯವಾಗಿ ಬಂಗಾರದ ಬಣ್ಣದಲ್ಲಿರುತ್ತದೆ. ಸಫೇದ, ಅರದಾಳ, ಇಂಗಲೀಕ ಬಣ್ಣಗಳನ್ನು ಪ್ರಮಾಣಕ್ಕನುಸರಿಸಿ ಕೈಯಲ್ಲಿ ತೆಗೆದುಕೊಂಡು, ತೆಂಗಿನೆಣ್ಣೆಯಲ್ಲಿ ಹದವಾಗಿ ಬೆರೆಸಲಾಗುತ್ತದೆ. ೪:೨:೧ ಅಥವಾ ೪: ೧: ೧/೨ರಂತೆ ಕ್ರಮವಾಗಿ ಬಿಳಿ, ಹಳದಿ ಮತ್ತು ಕೆಂಪನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ದೊರೆಯುವ  ಬಂಗಾರ ಬಣ್ಣದ ಮಿಶ್ರಣವನ್ನು ಸ್ತ್ರೀ, ಪುಂಡು, ರಾಜ, ಪೋಷಕ ಪಾತ್ರಗಳನ್ನು ಮಾಡುವವರು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಮುಖಕ್ಕೆ ಪೂರ್ತಿ ಹಚ್ಚಿಕೊಂಡು, ಎರಡೂ ಅಂಗೈಗಳಿಂದ ಹಿತವಾಗಿ ಬಡಿದು ಮುಖಕ್ಕೆ ಹೊಂದಿಸಿ ಹೊಳಪು ಬರಿಸಲಾಗುತ್ತದೆ. ವೇಷಧಾರಿಯು ಮುಖಕ್ಕೆ ಬಣ್ಣ ಹಚ್ಚಲು ಆರಂಭಿಸುವಾಗ ಮೊತ್ತ ಮೊದಲಿಗೆ ದೇವರನ್ನು ನೆನೆದು ಮಾಡಿ ಹಣೆಗೆ ನಾಮ ಹಾಕಿ ಆ ಬಳಿಕ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವುದು ಸಂಪ್ರದಾಯ. ಇಲ್ಲಿ ಬಣ್ಣ ಮಿಶ್ರಣ ಮಾಡುವಾಗ ಬಹಳ ಎಚ್ಚರಿಕೆ ವಹಿಸಲಾಗುತ್ತದೆ. ಮೊದಲಿಗೆ ಅಂಗೈಗೆ ಸಫೇದು ತೆಗೆದು ತೆಂಗಿನೆಣ್ಣೆ ಸೇರಿಸಿ ಬೆರಳಿನಿಂದ ಚೆನ್ನಾಗಿ ತಿಕ್ಕಿ ಮಿಶ್ರ ಮಾಡಲಾಗುತ್ತದೆ. ಸಾಮಾನ್ಯವಾಗಿ ಸಫೇದಿನ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಹಳದಿ ಹಾಗೂ ಅದಕ್ಕಿಂತ ಕಡಿಮೆ ಕೆಂಪು ಬಣ್ಣವನ್ನು ಸೇರಿಸಿ ಚೆನ್ನಾಗಿ ತಿಕ್ಕಿ ಮಿಶ್ರ ಮಾಡಲಾಗುತ್ತದೆ. ಮುಖದ ಮೇಲೆ ಎಲ್ಲೂ ಎಡೆ ಇಲ್ಲದಂತೆ ಒಂದೇ ಪ್ರಮಾಣದಲ್ಲಿ ಪೂರ್ಣವಾಗಿ ತಳಪಾಯದ ಬಣ್ಣ ಬಳಿದು ಹೊಳಪು ಬಂದ ಮೇಲೆ ಪೌಡರ್ ಹಾಕಬೇಕು. ಹೆಚ್ಚಿನ ಪೌಡರಿನ ಅಂಶವನ್ನು ನಿವಾರಿಸಲಾಗುತ್ತದೆ. ಕೆಲವೊಮ್ಮೆ ನೀರು ಹಾಕಿ ಮುಖವನ್ನು ಬಟ್ಟೆಯಿಂದ ಒತ್ತಿ ನೀರಪಸೆಯನ್ನು ತೆಗೆಯಲಾಗುತ್ತದೆ. ಪೌಡರನ್ನು ತೆಗೆದ ಮೇಲೆ ನೀರ ಪಸೆ ಹಚ್ಚದಿದ್ದರೆ ರಂಗದಲ್ಲಿ ಮುಖವು ಬೆವರಿದಾಗ ಹೆಚ್ಚಿನ ಶೋಭೆಯು ಬರುತ್ತದೆ ಎಂಬ ಮಾತಿದೆ. ಹಾಗಾಗಿ ಹೆಚ್ಚಿನವರು ಪೌಡರ್ ಹಾಕಿ ತೆಗೆದ ಮೇಲೆ ನೀರ ಪಸೆ ಹಾಕುವುದಿಲ್ಲ. ತಳಪಾಯದ ಬಣ್ಣದ ಮೇಲೆ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ ಸೂಕ್ಷ್ಮವಾದ ಬಣ್ಣದ ರೇಖೆಗಳ ಬರವಣಿಗೆಯನ್ನು ಮಾಡಲಾಗುತ್ತದೆ. ತಳಪಾಯದ ಬಣ್ಣ ಹೊಳಪಾಗಿದ್ದಲ್ಲಿ ಬಣ್ಣಗಾರಿಕೆಯ ಸೊಗಸು ಹೆಚ್ಚಾಗಿರುತ್ತದೆ. ಪಾತ್ರಗಳ ಸ್ವಭಾವಗಳಿಗೆ ಅನುಗುಣವಾಗಿ ತಳಪಾಯದ ಬಣ್ಣದಲ್ಲಿ ಕೆಂಪು, ಅರಿಶಿನ ಬಣ್ಣಗಳ ಮಿಶ್ರಣವನ್ನು ಹೆಚ್ಚು ಕಡಿಮೆ ಮಾಡುವುದಿದೆ. ತಳಪಾಯದ ಬಣ್ಣ ಹಾಕುವುದೇ ಯಕ್ಷಗಾನ ಬಣ್ಣಗಾರಿಕೆಯ ಮೊದಲ ಹಂತ. ಇದಕ್ಕೆ ಗ್ರೌಂಡು ಮಾಡುವುದು ಎಂದೂ ಹೇಳುತ್ತಾರೆ. ಬಣ್ಣದ ವೇಷಗಳಿಗೆ ತಳಪಾಯದ ಬಣ್ಣ ಅಗತ್ಯವಿಲ್ಲ. ಹಿಂದೆ ಸ್ತ್ರೀವೇಷಗಳಿಗೂ ತಳಪಾಯದ ಬಣ್ಣವನ್ನು ಹಾಕದೆ ಬರಿಯ ಗೆರೆಯಲ್ಲಿ ಬಣ್ಣ ತುಂಬಿಸುವ ಕ್ರಮವಿತ್ತಂತೆ. ಅತಿಕಾಯ, ಇಂದ್ರಜಿತು ಮೊದಲಾದ ಪಾತ್ರಗಳಿಗೂ ತಳಪಾಯದ ಬಣ್ಣವಿಲ್ಲದೆ ಬಣ್ಣಗಾರಿಕೆ ಮಾಡುವ ಕ್ರಮವಿದೆ. ಹಾಗಾಗಿ ತಳಪಾಯದ ಬಣ್ಣ ಯಕ್ಷಗಾನದ ಬಣ್ಣಗಾರಿಕೆಯಲ್ಲಿ ಕಡ್ಡಾಯವಲ್ಲ. ಅದು ಆಯಾ ವೇಷಗಳನ್ನು ಅವಲಂಬಿಸಿರುತ್ತದೆ.

ತಳಪಾಯದ ಬಣ್ಣವು ಮುಖಕ್ಕೆ ಸರಿಯಾಗಿ ಅಂಟಿಕೊಳ್ಳಲು ಬಣ್ಣಗಳನ್ನು ತೆಂಗಿನೆಣ್ಣೆ ಬೆರೆಸಿ ಮಿಶ್ರಣ ಮಾಡಲಾಗುತ್ತದೆ. ಮುಖಕ್ಕೊಂದು ಕಾಂತಿ ಬರಲು  ಎಣ್ಣೆಯಲ್ಲಿ ಬಣ್ಣ ಬೆರೆಸುವುದು ಅಗತ್ಯ. ಹಿಂದಿನ ಕಾಲದಲ್ಲಿ ನೀರಿನಲ್ಲಿ ಬೆರೆಸಿ ಬಣ್ಣ ಹಾಕುವ ಸಂಪ್ರದಾಯವೂ ಇತ್ತಂತೆ. ನೀರಿನಲ್ಲಿ ಬೆರೆಸಿ ಬಣ್ಣ ಹಾಕಿದರೆ   ಬೆವರಿದಾಗ ಬಣ್ಣ ಹೋಗುತ್ತದೆ. ನೀರಿನಿಂದ ಬಣ್ಣ ಹಾಕಿದ ಮುಖಗಳಿಗೆ ಕಳೆ ಇರುವುದಿಲ್ಲ. ಈ ವಿಚಾರವನ್ನು ಒಪ್ಪದ ಕಲಾವಿದರೂ ಇದ್ದಾರೆ. ಎಣ್ಣೆಯಲ್ಲಿ ಬಣ್ಣವನ್ನು ಹಾಕಿದರೆ ಪೌಡರ್ ಹಾಕಿ ಎಣ್ಣೆಯ ಅಂಶವನ್ನು ನಿವಾರಿಸಿ ಹೊಳೆಯುವಂತೆ ಮಾಡಲಾಗುತ್ತದೆ. ನೀರಿನಲ್ಲೇ ಬಣ್ಣ ಹಾಕಿದರೆ ಒಣಗಿದಾಗ ಬಿದ್ದು ಹೋಗುವ ಸಾಧ್ಯತೆ ಇದೆ. ಈಗಲೂ ಕೆಲವೊಮ್ಮೆ ರಂಗಸ್ಥಳದಲ್ಲಿ ಕಡಿಮೆ ಕೆಲಸವಿರುವ ಪಾತ್ರಗಳು ನೀರಲ್ಲಿ ಬೆರೆಸಿದ ಬಣ್ಣವನ್ನು ಹಚ್ಚಿಕೊಳ್ಳುವುದಿದೆ.

ತೆಯ್ಯಂ ಮತ್ತು ಬೂತೊಕೋಲಗಳಲ್ಲೂ ‘ಅರ್ದಲ’(ಅರದಾಳ)ವನ್ನು ಎಣ್ಣೆಯಲ್ಲಿ ಮಿಶ್ರಣ ಮಾಡಿ ಮುಖಕ್ಕೆ ತಳಪಾಯದ ಬಣ್ಣವನ್ನು ಹಚ್ಚುವುದು ಪದ್ಧತಿ. ಇವು ಪೂರ್ಣ  ಧಾರ್ಮಿಕ ಕಲೆಯಾದ್ದರಿಂದ ಬಣ್ಣಕ್ಕೆ ಕುಳಿತುಕೊಳ್ಳುವ ಮೊದಲು ಸ್ನಾನ ಮಾಡುವುದು ಆಚರಣೆಯ ಭಾಗ. ಬಳಿಕ ಕೆಂಪು ಬಣ್ಣದ ಇಜಾರವನ್ನು ತೊಟ್ಟು ಬಣ್ಣಕ್ಕೆ ಕುಳಿತುಕೊಳ್ಳ ಲಾಗುತ್ತದೆ. ಬೂತೊಕೋಲದ ಸಂದರ್ಭದಲ್ಲಿ ಇದನ್ನು ‘ಅರ್ದಲಕ್ಕೆ ಕುಳಿತುಕೊಳ್ಳುವುದು’ ಎಂದೇ ಹೇಳುತ್ತಾರೆ.

ತಳಪಾಯದ ಬಣ್ಣವನ್ನು ಪೂರ್ಣಗೊಳಿಸಿದ ಮೇಲೆ ಪಾತ್ರಧಾರಿಗಳು ತೆಂಗಿನ ಗರಿಯ ಹಸಿಕಡ್ಡಿಗಳನ್ನು ಬಳಸಿ ಹುಬ್ಬು, ಕಣ್ಣು, ಮುದ್ರೆ, ನಾಮ ಮುಂತಾದ ಸೂಕ್ಷ್ಮ ಬರವಣಿಗೆಗಳನ್ನು ಮಾಡುತ್ತಾರೆ. ನಾಲ್ಕು, ಐದು ಇಂಚು ಉದ್ದದ ತೆಂಗಿನ ಗರಿಯ ಹಸಿ ಕಡ್ಡಿಗಳನ್ನು ಗೆರೆ ಎಳೆಯಲು ಹಾಗೂ ಚುಟ್ಟಿ ಇಡಲು ಉಪಯೋಗಿಸುತ್ತಾರೆ. ಕಡ್ಡಿಯು ದುಂಡಾಗಿರಬೇಕು ಎಂಬ ಕಾರಣಕ್ಕಾಗಿ ಸಾಮಾನ್ಯವಾಗಿ ಫಲ ಬಿಟ್ಟ ತೆಂಗಿನ ಮರದ ಕಡ್ಡಿಗಳನ್ನು ಬಳಸಲಾಗುತ್ತದೆ. ಒಣಗಿದ ಕಡ್ಡಿಯಾದರೆ ಒಂದು ತುದಿಯನ್ನು ಉರಿಸಿ ಆರಿಸಿ ಕೈಯಲ್ಲಿ ತುದಿಯನ್ನು ಒರೆಸಲಾಗುತ್ತದೆ. ಇದರಿಂದ ಕಡ್ಡಿಯ ತುದಿಯು ದುಂಡಗಾ ಗುತ್ತದೆ. ಬೊಟ್ಟು, ಗೆರೆ, ಚುಟ್ಟಿಗಳ ಆಕಾರವೂ ದುಂಡಗೆ ಇಡುವಲ್ಲಿ ಕಡ್ಡಿಗಳು ನೆರವಾಗುತ್ತವೆ.

ಈ ಬರವಣಿಗೆಗೆ ಬಳಸುವ ಬಣ್ಣ ಆಯಾ ಪಾತ್ರಗಳ ಸ್ವಭಾವಕ್ಕನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಈಗ ತೆಂಗಿನ ಗರಿಯ ಕಡ್ಡಿಗಳ ಜಾಗದಲ್ಲಿ  ಪುಟ್ಟ ಬ್ರಶ್‌ಗಳನ್ನೂ ಬಳಸಲಾಗುತ್ತದೆ. ಪರಂಪರಾಗತವಾಗಿ ಬಣ್ಣಗಾರಿಕೆಯಲ್ಲಿ ತೆಂಗಿನ ಗರಿಯ ಕಡ್ಡಿಗಳೇ ಬಳಕೆಯಲ್ಲಿವೆ. ನಾಮ, ಮುದ್ರೆಯಂತಹ ಸೂಕ್ಷ್ಮ ಬರವಣಿಗೆಗೆ ಇದು ಸಹಕಾರಿ.

ಮುಖವರ್ಣಿಕೆ

ಮೂಲ ಲೇಪನವನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ಮುಖವರ್ಣಿಕೆಯ ಕೆಲಸ ಆರಂಭವಾಗುತ್ತದೆ. ಮುಖವರ್ಣಿಕೆಯಲ್ಲಿ ನಾಮ, ಗೆರೆ, ಮುದ್ರೆ, ಮುತ್ತರಿ, ಹುಬ್ಬು, ಚುಟ್ಟಿ, ತುಟಿ, ಗಡ್ಡ, ಚಿಹ್ನೆ, ಗೀರುಗಂಧ, ವರ್ಣಛಾಯೆ, ಸುಳಿ, ಹತ್ತಿಗೊಂಡೆ ಹೀಗೆ ವಿವಿಧ ಅಂಗಗಳಿರುತ್ತವೆ.

ನಾಮವೆಂದರೆ ಹಣೆಯಲ್ಲಿ ಹಾಕುವ ಚಿಹ್ನೆ. ಇದರಲ್ಲಿ  ಉದ್ದನಾಮ ಮತ್ತು ಅಡ್ಡನಾಮವೆಂದು ಎರಡು ವಿಧ. ಉದ್ದನಾಮ ಅಥವಾ ಊರ್ಧ್ವ ಪುಂಡ್ರವು ವೈಷ್ಣವದ ಸಂಕೇತ ಆಗಿದೆ. ಅಡ್ಡನಾಮ ಅಥವಾ ತ್ರಿಪುಂಡ್ರವು ಶೈವದ ಸಂಕೇತವಾಗಿದೆ. ಸಾಮಾನ್ಯವಾಗಿ ಇದನ್ನು ಸಾತ್ವಿಕ ಪಾತ್ರಗಳಿಗೆ ಮಾತ್ರ ಹಾಕಲಾಗುತ್ತದೆ.

ಚಿಹ್ನೆಗಳೆಂದರೆ ಕಮಲ, ತ್ರಿದಳಾಕೃತಿ (ಕಳಾವರ್), ಚಕ್ರ, ಹೂವು, ಅಶ್ವತ್ಥದ ಎಲೆ, ವಜ್ರಾಕೃತಿ, ಕಣ್ಣು, ಶಿವಲಿಂಗ, ಉರುಟು ಬೊಟ್ಟು, ಅರ್ಧಚಂದ್ರಾಕಾರದ ಬೊಟ್ಟು, ಮೀಸೆ ಇವುಗಳು ಸೇರುತ್ತವೆ. ಇವುಗಳಲ್ಲಿ ಶಿವಲಿಂಗ, ಕಳಾವರ್, ಅಶ್ವತ್ಥದ ಎಲೆ ಮೊದಲಾದವು ಗಳನ್ನು ರಾಕ್ಷಸ ಪಾತ್ರಗಳಿಗೆ ಹಾಗೂ ವಜ್ರಾಕೃತಿಯನ್ನು ವರಾಹನಿಗೆ ಹಾಕಲಾಗುತ್ತದೆ.

ಮುದ್ರೆ ಎಂದರೆ ಬಿಳಿಯ ಬೊಟ್ಟುಗಳ ಸಮೂಹ. ಇದು ವೈಷ್ಣವದ ಸಂಕೇತವೂ ಹೌದು. ಸಾತ್ವಿಕತೆಯ ಪ್ರತೀಕವೂ ಹೌದು. ಕಡೆಗಣ್ಣ ಪಕ್ಕದಲ್ಲಿ ಮೂರು ಬೊಟ್ಟುಗಳು ಅಥವಾ ದಳಗಳು, ಕೆನ್ನೆಯಲ್ಲಿ ನಕ್ಷತ್ರಾಕಾರದ ಚುಕ್ಕಿಗಳು ಇವುಗಳನ್ನು ಮುದ್ರೆಗಳು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಸಾತ್ವಿಕ ಪಾತ್ರಗಳಾದ ದೇವರುಗಳು, ದೇವತೆಗಳು, ರಾಜರುಗಳಿಗೆ, ಸ್ತ್ರೀಯರಿಗೆ ಈ ತೆರನ ಮುದ್ರೆಗಳನ್ನು ಹಾಕಲಾಗುತ್ತದೆ.

ಗೀರು ಎಂದರೆ ಮುಖದಲ್ಲಿ ಉಗ್ರ ಸ್ವಭಾವವನ್ನು ಪ್ರಕಟಿಸಲು ಎಳೆಯುವ ಗೆರೆಗಳು. ರಾಕ್ಷಸ ಪಾತ್ರಗಳಿಗೆ ಕೆಂಪು ಬಣ್ಣವನ್ನು ಮುಖದಲ್ಲಿ ಪ್ರಖರವಾಗಿ ಎದ್ದು ಕಾಣುವಂತೆ ಗೀರಿನ ರೂಪದಲ್ಲಿ ವಿನ್ಯಾಸಗೊಳಿಸ ಲಾಗುತ್ತದೆ. ಗೀರುಗಂಧವೆಂದರೆ ಹಣೆಯಲ್ಲಿ ಬರೆಯುವ ಅಡ್ಡನಾಮ ಅಥವಾ ತ್ರಿಪುಂಡ್ರ. ರಾಕ್ಷಸ ಪಾತ್ರಗಳು ಅಡ್ಡನಾಮವನ್ನು ಹಣೆಯಲ್ಲಿ ವಕ್ರವಾಗಿ ಅಥವಾ ಅರ್ಧಚಂದ್ರಾಕಾರವಾಗಿ ಬರೆದು ಅದರ ಸುತ್ತಲೂ ಗೀರುಗಳನ್ನು ಬರೆದಾಗ ಪಾತ್ರಗಳಲ್ಲಿ ಉಗ್ರ ಸ್ವರೂಪ ಪ್ರಕಟವಾಗುತ್ತದೆ. ಋಷಿ ಮುನಿಗಳು ಹಣೆಯಲ್ಲಿ ಅಡ್ಡನಾಮ ವನ್ನು ಬರೆಯುತ್ತಾರೆ. ಆದರೆ ಅದು ವಕ್ರವಾಗಿರದೆ ನೇರವಾಗಿಯೇ ಇರುತ್ತದೆ. ಇದು ಶೈವ ಭಕ್ತಿಯ ಸಂಕೇತ. ಮುಖವರ್ಣಿಕೆಯಲ್ಲಿ ವರ್ಣಛಾಯೆ, ಮುತ್ತರಿ, ಸುಳಿಗಳು, ಹತ್ತಿ ಉಂಡೆಗಳು ವಿವಿಧ ಸ್ವಭಾವಗಳ ಸಂಕೇತಗಳಾಗಿವೆ.

ವರ್ಣಛಾಯೆ

ವರ್ಣಛಾಯೆ ಎಂದರೆ ಗುಣ ಸ್ವಭಾವವನ್ನು ಚಿತ್ರಿಸಲು ಕೊಡುವ ಬಣ್ಣ. ಮುದ್ರೆ ಹಾಗೂ ನಾಮಗಳ ಸುತ್ತ ಕಣ್ಣಿನ ಕೆಳಭಾಗದಲ್ಲಿ ಬಣ್ಣಗಳನ್ನು ಲೇಪಿಸುವುದರ ಮೂಲಕ ಪಾತ್ರಗಳ ಸ್ವಭಾವವನ್ನು ಪ್ರಕಟಿಸುವುದಿದೆ. ದೂರ್ವಾಸ, ಜಮದಗ್ನಿ ಮೊದಲಾದಂತಹ ಋಷಿಗಳಿಗೆ ಕಣ್ಣ ಕೆಳಗೆ ಕೆಂಪು ವರ್ಣ ಛಾಯೆಯನ್ನು ಕೊಡುವುದರ ಮೂಲಕ ಅವರ ರಾಜಸ ಗುಣವನ್ನು ಪ್ರಕಟಿಸಲಾಗುತ್ತದೆ.

ಮುತ್ತರಿ

ಮುತ್ತರಿಗಳೆಂದರೆ ಮುದ್ರೆ ಹಾಗೂ ನಾಮಗಳ ಸುತ್ತಲೂ ಇಡುವ ಚಿಕ್ಕ ಚಿಕ್ಕ ಬಿಳಿಯ ಚುಕ್ಕಿಗಳ ಸಾಲು. ಸಾತ್ವಿಕ ವೇಷಗಳ ನಾಮಗಳ ಸುತ್ತಲೂ ಸ್ತ್ರೀ ವೇಷಗಳ ಕೆನ್ನೆಯ ಚಕ್ರದ ಸುತ್ತಲೂ ಕೆಲವೊಮ್ಮೆ ಹುಬ್ಬಿನ ಹೊರಭಾಗದಲ್ಲಿ ಹಾಗೂ ಹೆಣ್ಣು ಬಣ್ಣದ ಮುಖದ ಹೊರವಲಯದಲ್ಲಿ ಮುತ್ತರಿಗಳನ್ನು ಇಡಲಾಗುತ್ತದೆ.

ಸುಳಿಗಳು

ಸುಳಿಗಳು ಎಂದರೆ ಮುಖದಲ್ಲಿ ವಕ್ರವನ್ನು ಹಾಗೂ ವೈಶಿಷ್ಟ್ಯವನ್ನು ಸೂಚಿಸಲು ಹಾಕಲಾಗುತ್ತದೆ. ಇದು ವಾನರ ಪಾತ್ರಗಳಿಗೆ ಮೀಸಲು. ವಾಲಿಗೆ ನಾಲ್ಕು ಸುಳಿಯಾದರೆ ಹನುಮಂತನಿಗೆ ಆರು ಸುಳಿ. ವಲೀ ಮುಖವನ್ನು ಸೂಚಿಸಲು ಈ ಸುಳಿ ನೆರವಾಗುತ್ತದೆ. ರಾಕ್ಷಸ ಪಾತ್ರಗಳಿಗೂ ಸುಳಿಗಳನ್ನು ಬಳಸಲಾಗುತ್ತದೆ. ಇವುಗಳನ್ನು ಚೇಳಿನ ಸುಳಿ, ಮೊಲದ ಸುಳಿ ಎಂಬಿತ್ಯಾದಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಹತ್ತಿಯ ಉಂಡೆಗಳು

ಹತ್ತಿಯ ಉಂಡೆಗಳನ್ನು ಮುಖ ವಿನ್ಯಾಸದಲ್ಲಿ ಬಳಸಲಾಗುತ್ತದೆ. ಬಣ್ಣದ ವೇಷಗಳಿಗೆ ರೌದ್ರ ಭಾವವನ್ನು ಹೆಚ್ಚಿಸಲು ಮೂಗಿನ ತುದಿಯಲ್ಲಿ ಹತ್ತಿಯ ಉಂಡೆಗಳನ್ನು ಅಂಟಿಸಲಾಗುತ್ತದೆ. ಕೆಲವೊಂದು ವಿಶಿಷ್ಟ ಪಾತ್ರಗಳಿಗೆ ಹಣೆಯ ಇಕ್ಕೆಲಗಳಲ್ಲೂ ಚುಟ್ಟಿಗೆ ಸೇರಿಸಿದಂತೆ ಹತ್ತಿಯ ಉಂಡೆಗಳನ್ನು ಇಡುವುದೂ ಇದೆ.