ಮುಖವಿನ್ಯಾಸಗಳು

ತೆಂಗಿನ ಗರಿಯ ಹಸಿ ಕಡ್ಡಿಗಳನ್ನು ಬಳಸಿ ಮುಖವರ್ಣಿಕೆಯನ್ನು ಮಾಡುತ್ತಾರೆ. ಮುಖವರ್ಣಿಕೆಯ ಮೊದಲ ಭಾಗವಾಗಿ ಕಣ್ಣು ಮತ್ತು ಹುಬ್ಬುಗಳಿಗೆ ಕಪ್ಪು ಎಣ್ಣೆ ಮಸಿಯನ್ನು ಬರೆಯಲಾಗುತ್ತದೆ. ಆಮೇಲೆ ನಾಮ, ಮುದ್ರೆಗಳು ಮತ್ತು ತುಟಿಗೆ ಬಣ್ಣವನ್ನು ಹಚ್ಚಲಾಗುತ್ತದೆ. ವೇಷಗಳು ಹಣೆಯಲ್ಲಿ ಬರೆಯುವ ನಾಮಗಳಲ್ಲಿ ಅಡ್ಡ ನಾಮ (ಗೋಟು ನಾಮ) ಉದ್ದ ನಾಮ (ಗೂಟ ನಾಮ) ಎಂದು ಎರಡು ಬಗೆಗಳಿವೆ. ಇವುಗಳಲ್ಲಿ ಅಡ್ಡ ನಾಮವನ್ನು ಶೈವನಾಮಗಳೆಂದೂ, ಉದ್ದ ನಾಮಗಳನ್ನು ವೈಷ್ಣವ ನಾಮಗಳೆಂದು ಹೇಳುವುದೂ ಇದೆ. ಹಣೆಯಲ್ಲಿ ಉದ್ದ ಮತ್ತು ಅಡ್ಡ ಗೀರುಗಳನ್ನು ಹಾಕಿ ಬರೆಯುವ ನಾಮದ ಬಗೆಯೂ ಇದೆ. ಇದನ್ನು ಭಾಗವತ ನಾಮ ಎಂದು ಕರೆಯಲಾಗುತ್ತದೆ. ಅಡ್ಡ ನಾಮವೆಂದರೆ ಮಧ್ಯದಲ್ಲಿ ಹಣೆಗೆ ಬಿಳಿ ಬಣ್ಣ ಹಚ್ಚಿ ಕೆಂಪು ಬೊಟ್ಟು ಹಾಕಿ ಕಪ್ಪು ಅಥವಾ ಕೆಂಪು ಗೆರೆಗಳಿಂದ ಅದನ್ನು ವಿಭಾಗಿಸುವುದು ಅಥವಾ ಕೆಂಪು ಅಥವಾ ಕಪ್ಪು ಗೆರೆಯ ಅಡ್ಡನಾಮ ಹಾಕಿ ಅದರ ಪಕ್ಕದಲ್ಲಿ ಬಿಳಿ ರೇಖೆಗಳನ್ನು ಎಳೆಯಲಾಗುತ್ತದೆ. ಉದ್ದ ನಾಮವೆಂದರೆ ಹಣೆಯ ಮಧ್ಯದಲ್ಲಿ ಕಪ್ಪು ಗೆರೆ ಎಳೆಯುವುದು. ಅದರ ನಡುವೆ ವೃತ್ತಾಕಾರದ ಬೊಟ್ಟನ್ನಿಡುವುದು. ಮಧ್ಯದ ಕಪ್ಪು ಗೆರೆಯ ಎರಡೂ ಬದಿಗಳಲ್ಲಿ ಹಳದಿ, ಬಿಳಿ, ಕೆಂಪು, ನಾಮಗಳನ್ನು ಎಳೆಯುವುದು. ಇದರಿಂದ ನಾಮದ ಗಾತ್ರವು ದೊಡ್ಡದಾಗುತ್ತದೆ. ಪೀಠಿಕೆಯ ವೇಷ ಮತ್ತು ಸಾತ್ವಿಕ ಪಾತ್ರಗಳಿಗೆ ಮಧ್ಯದ ಗೆರೆ ಕೆಂಪು ಬಣ್ಣದ್ದಿರುತ್ತದೆ. ಕೆಂಪಿನ ಬದಿಗೆ ಕಪ್ಪಿನ ನಂತರ ಹಳದಿ, ಬಿಳಿ, ಕೆಂಪು ಗೆರೆಗಳನ್ನು ಎಳೆಯಲಾಗುತ್ತದೆ. ಹೆಚ್ಚಿನ ಪಾತ್ರಗಳಿಗೆ ಬಿಳಿ ಗೆರೆಗೆ ತಾಗಿಕೊಂಡಂತೆ ಬಿಳಿಯ ಮುತ್ತರಿಗಳನ್ನು ಇಡಲಾಗುತ್ತದೆ. ಕೆಲವರು ಹಳದಿ ಬಣ್ಣದ ಗೆರೆಯನ್ನು ಹಾಕದೆ ಉದ್ದ ನಾಮವನ್ನು ಬರೆಯುತ್ತಾರೆ. ಸಾಮಾನ್ಯವಾಗಿ ನಾರದ ಪಾತ್ರವನ್ನು ಹೊರತು ಪಡಿಸಿ ಎಲ್ಲ ಋಷಿಪಾತ್ರಗಳಿಗೂ ಅಡ್ಡ ನಾಮವನ್ನು ಹಾಕುವುದು ಸಂಪ್ರದಾಯ. ಕೆಲವರು ಬೃಹಸ್ಪತಿ ಮತ್ತು ವಸಿಷ್ಠರಿಗೆ ವೈಷ್ಣವ ಧಾರ್ಮಿಕ ನೆಲೆಯಲ್ಲಿ ಉದ್ದನಾಮವನ್ನು ಹಾಕುವರು. ಉದ್ದನಾಮ ಹಾಕಿದ ಪಾತ್ರಗಳು ಸಾಮಾನ್ಯವಾಗಿ ಗೆಲ್ಲುವ ಪಾತ್ರಗಳು. ಎಂದರೆ ನಾಯಕ ಸ್ಥಾನದಲ್ಲಿರುವ ಈ ಪಾತ್ರಗಳು ಸಾಮಾನ್ಯವಾಗಿ ವೈಷ್ಣವ ಮನೋಧರ್ಮದವುಗಳು. ಸೋಲುವ ಪಾತ್ರಗಳಿಗೆ ಸಾಮಾನ್ಯವಾಗಿ ಅಡ್ಡ ನಾಮವೇ ಹೆಚ್ಚಾಗಿರುತ್ತದೆ. ಇವುಗಳೆಲ್ಲ ಶೈವ ಪರವಾದ ಪಾತ್ರಗಳು. ಈ ಕಾರಣಕ್ಕಾಗಿ  ಯಕ್ಷಗಾನದ ರಾಕ್ಷಸ ಪಾತ್ರಗಳಿಗೆ ಅಡ್ಡ ನಾಮಗಳ ಸಂಪ್ರದಾಯ ಬಂದಿದೆ. ದಕ್ಷ, ಗದಾಪರ್ವದ ಕೌರವ ಮೊದಲಾದ ಪಾತ್ರಗಳಿಗೆ ಉದ್ದ ಹಾಗೂ ಅಡ್ಡನಾಮಗಳನ್ನು ಹಾಕುವ ಕ್ರಮವಿದೆ.

ನಾಮಗಳನ್ನು ಗೆರೆ ಅಥವಾ ಗೀಟುಗಳ ಮೂಲಕ ರೂಪಿಸಲಾಗುತ್ತದೆ. ಮುಖದ ವಿನ್ಯಾಸದ ಸಂದರ್ಭದಲ್ಲಿ ಕಪ್ಪು, ಕೆಂಪು, ಬಿಳಿ, ಹಳದಿ ಬಣ್ಣಗಳ ವಿವಿಧ ರೇಖೆಗಳು ಮುಖದಲ್ಲಿ ಪಾತ್ರದ ಸ್ವಭಾವವನ್ನು ಪ್ರಕಟಿಸುತ್ತಿರುತ್ತವೆ. ಗೆರೆಗಳ ಮೂಲಕವೂ ಮುಖದಲ್ಲಿ ವಿವಿಧ ರೀತಿಯ ಮುದ್ರೆಗಳನ್ನು ಬರೆಯಲಾಗುತ್ತದೆ. ಕಣ್ಣಿನ ಕೊನೆಯಿಂದ ಕಿವಿಯ ದಿಕ್ಕಿಗೆ ಎರಡೂ ಕಡೆ ಮುಖದಲ್ಲಿ ವಿವಿಧ ಮುದ್ರೆಗಳನ್ನು ಬರೆಯಲಾಗುತ್ತದೆ. ಪಾತ್ರಗಳ ಸ್ವಭಾವ ಗಳಿಗನುಗುಣವಾಗಿ  ಅಥವಾ  ಕಲಾವಿದನ  ಕೌಶಲ್ಯವನ್ನು  ಅನುಸರಿಸಿ ವಿಭಿನ್ನ ರೀತಿಯ ಮುದ್ರೆಗಳಿರುತ್ತವೆ. ಇವುಗಳಲ್ಲಿ ಚಕ್ರಮುದ್ರೆ, ಶಂಖಮುದ್ರೆ, ಉರುಟು ಗೆರೆಗಳ ಮುದ್ರೆ, ಚುಕ್ಕಿಗಳ ಹೂವಿನಂತಹ ಮುದ್ರೆ ಇತ್ಯಾದಿ ವೈವಿಧ್ಯಗಳಿರುತ್ತವೆ. ಈ ಮುದ್ರೆಗಳು ಮುಖ ಮತ್ತು ಶಿರೋಭೂಷಣಗಳ ಸೌಂದರ್ಯವನ್ನು ಜೋಡಿಸುವ ಸಂಪರ್ಕ ಸೇತುವೆಯಂತಿರುತ್ತವೆ.

 

 

ವೇಷದ ಮುಖವರ್ಣಿಕೆಯನ್ನು ಮುತ್ತರಿಗಳ ಮೂಲಕ ಇನ್ನಷ್ಟು ವಿನ್ಯಾಸಗೊಳಿಸ ಲಾಗುತ್ತದೆ. ಮುತ್ತರಿಗಳೆಂದರೆ ಬಣ್ಣದ ಚುಕ್ಕಿಗಳ ಸಾಲು. ಸಾಮಾನ್ಯವಾಗಿ ಪುರುಷ ವೇಷಗಳ ನಾಮಗಳ ಪಕ್ಕದಲ್ಲಿ ಅಥವಾ ಕೆನ್ನೆಯ ಮೇಲಿನ ಮುದ್ರೆಗಳ ಸುತ್ತಲೂ, ಇನ್ನು ಕೆಲವೊಮ್ಮೆ ಕಣ್ಣಿನ ಕೆಳ ಭಾಗದಲ್ಲಿ ಮುತ್ತರಿಗಳಿಡುವ ಸಂಪ್ರದಾಯವಿದೆ. ಸ್ತ್ರೀವೇಷಗಳಾದರೆ ಹುಬ್ಬಿನ ಮೇಲಿನಿಂದ ಸಾಲಾಗಿ ಮುತ್ತರಿಗಳನ್ನಿಡುವ ಸಂಪ್ರದಾಯವಿದೆ. ಕೆಲವು ಪಾತ್ರಗಳಿಗೆ ಗಡ್ಡವನ್ನು ಬರೆಯುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಗಡ್ಡವನ್ನು ಎಣ್ಣೆಮಸಿಯಲ್ಲಿ ಗೆರೆಯಂತೆ ಬರೆದು ಅದಕ್ಕೆ ಕೆಂಪು ಜೀವರೇಖೆಯನ್ನು ಕೊಡಲಾಗುತ್ತದೆ. ಪುಂಡುವೇಷ, ಸ್ತ್ರೀವೇಷಗಳಿಗೆ ಇವು ಅಗತ್ಯವಿರುವುದಿಲ್ಲ. ಚುಟ್ಟಿ ಇಡುವ ವೇಷಗಳಾದರೆ ಮುಖವರ್ಣಿಕೆಯಲ್ಲಿ ಈ ತೆರನ ವಿನ್ಯಾಸಗಳಿರುವುದಿಲ್ಲ. ವಿಭಿನ್ನ ವೇಷಗಳ ಮುಖವರ್ಣಿಕೆಯನ್ನು ಕುರಿತು ಮುಂದಿನ ಅಧ್ಯಾಯಗಳಲ್ಲಿ ಪ್ರತ್ಯೇಕವಾಗಿಯೇ ಗಮನಹರಿಸಬಹುದು.

ಯಕ್ಷಗಾನದ ಮುಖವರ್ಣಿಕೆಯಲ್ಲಿರುವ ವಿವಿಧ ಬಣ್ಣದ ಗೆರೆಗಳು ಸೌಂದರ್ಯದ ನೆಲೆಯಿಂದಲೇ ರೂಪುಗೊಂಡಿವೆ. ಆದರೂ ಆ ಗೆರೆಗಳಿಗೆ ನಿರ್ದಿಷ್ಟವಾದ  ಅರ್ಥ ಸಂಕೇತಗಳು ಇದೆಯೆಂಬುದು ಗಮನಾರ್ಹ. ಹಣೆಯ ಉದ್ದ ನಾಮವು ವೈಷ್ಣವ ಒಲವನ್ನು ಪ್ರಕಟಿಸುವ ವೇಷಗಳಾದರೆ ಅಡ್ಡ ನಾಮದ ವೇಷಗಳು ಶಿವನ ಒಲವನ್ನು ಹೊಂದಿದವು. ವೈಷ್ಣವ ವಿರೋಧವನ್ನು ಸೂಚಿಸುವ ಸಂದರ್ಭಗಳಲ್ಲಿಯೂ ಅಡ್ಡ ನಾಮಗಳನ್ನು  ಹಾಕಲಾಗುತ್ತದೆ. ಮುಖವರ್ಣಿಕೆಯಲ್ಲಿ ಹಣೆಯ ನಾಮಗಳೇ ಒಟ್ಟು ಪಾತ್ರದ ಸ್ವಭಾವವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಣೆಯ ಮಧ್ಯೆ ಇಡುವ ಕೆಂಪು ಬೊಟ್ಟು ಶುಭದ ಸಂಕೇತವಾಗಿರುತ್ತದೆ. ಕೆಲವೊಮ್ಮೆ ನಾಮದ ನಡುವೆ ಕೂಡ ಕೆಂಪು ಬೊಟ್ಟು ಇಡಲಾಗುತ್ತದೆ. ಶೈವ ಮತ್ತು ವೈಷ್ಣವ ತತ್ವಗಳ ನಡುವೆ ದ್ವಂದ್ವವನ್ನು ಸೂಚಿಸುವ ಸಂದರ್ಭದಲ್ಲಿ ಉದ್ದ ಮತ್ತು ಅಡ್ಡನೆಯ ಎರಡೂ ಗೆರೆಗಳನ್ನು ಹಣೆಯ ಮೇಲೆ ಬರೆಯಲಾಗುತ್ತದೆ. ಮುಖವರ್ಣಿಕೆಯಲ್ಲಿ ಹಣೆಯ ಬಣ್ಣಕ್ಕೆ ಅಥವಾ ರೇಖೆಗಳಿಗೆ ಪೂರಕವಾಗಿ ಮುಖವಿನ್ಯಾಸ ಗಳನ್ನು ರೂಪಿಸಲಾಗುತ್ತದೆ. ಒಂದು ಗೆರೆಯ ಪಕ್ಕದಲ್ಲಿ ಇನ್ನೊಂದು ಬಣ್ಣದ ಗೆರೆಯನ್ನು ಎಳೆಯುವಾಗ ಕೆಲವು ನಿರ್ದಿಷ್ಟತೆಯನ್ನು ಯಕ್ಷಗಾನದ ಮುಖವರ್ಣಿಕೆಯಲ್ಲಿ ಕಾಯ್ದುಕೊಳ್ಳ ಲಾಗಿದೆ. ಕೆಂಪು ಗೆರೆಯ ಪಕ್ಕದಲ್ಲಿ ಹಳದಿಗೆರೆ, ಅದರ ಪಕ್ಕದಲ್ಲಿ ಬಿಳಿಗೆರೆಯನ್ನು ಎಳೆಯುವುದರ ಮೂಲಕ ಬಣ್ಣಗಳು ಪ್ರಕಾಶಮಾನವಾಗಿ ಕಾಣುವಂತೆ ಮಾಡಲಾಗುತ್ತದೆ. ಹಳದಿ ಬಣ್ಣದ ನಡುವೆ ಕೆಂಪು ಮತ್ತು ಬಿಳಿ ಪ್ರಕಾಶಮಾನವಾಗಿ ಶೋಭಿಸುತ್ತಿದೆಯೆಂಬ ಸೂಕ್ಷ್ಮವನ್ನು ಯಕ್ಷಗಾನ ಮುಖವರ್ಣಿಕೆಯಲ್ಲಿ ಗಮನಿಸಲಾಗಿದೆ. ಮೂಗಿನ ಮೇಲೆ ಬರೆಯುವ ಮುದ್ರೆಗಳು ಹಾಗೂ ಮುಖದ ಮೇಲಿನ ಮುತ್ತರಿಗಳು ಬಿಳಿಯ ಬಣ್ಣದಲ್ಲಿದ್ದು ಇವು ಮುಖದ ಬಣ್ಣವನ್ನು ವಿಶಾಲಗೊಳಿಸುತ್ತವೆ. ಕಣ್ಣರೆಪ್ಪೆಯ ಸಮೀಪ ಇಡುವ ಬಿಳಿಯ ಮುದ್ರೆಗಳು ಒಂದೆಡೆ ವೈಷ್ಣವ ತತ್ವಗಳನ್ನು ಪ್ರತಿಪಾದಿಸಿದರೆ ಇನ್ನೊಂದೆಡೆ ಅದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಬಣ್ಣದ ವೇಷಗಳಲ್ಲಿ ಸೂಕ್ಷ್ಮವಾದ ಗೆರೆಗಳಿರುವುದಿಲ್ಲ. ಇಲ್ಲಿನ ಚುಟ್ಟಿ ಹಾಗೂ ಬರೆಯುವ ಸುಳಿಗಳು ವೇಷಕ್ಕೆ ಗಾಂಭೀರ್ಯವನ್ನು ತಂದುಕೊಡುತ್ತವೆ. ಎದುರು ವೇಷಗಳಲ್ಲಿ ಬರುವ ಕೆಲವು ಪಾತ್ರಗಳಿಗೆ ಅವುಗಳ ಸ್ವಭಾವಗಳಿಗನುಗುಣವಾಗಿ ಸಂಕೀರ್ಣವಾದ ಗೆರೆಗಳಿರುತ್ತವೆ. ಮುಖದ ಮೇಲೆ ಅರಿಶಿನದ ಗೆರೆಗಳು, ಕಪ್ಪು ಗೆರೆಗಳು ಹಾಗೂ ಕೆಂಪು ಗೆರೆಗಳು ಮುಖವನ್ನು ಭೀಕರವಾಗಿ ಕಾಣಿಸುವಲ್ಲಿ ನೆರವಾಗುತ್ತವೆ. ಸಂಕೀರ್ಣ ಮುಖವರ್ಣಿಕೆಯ ನಡುವೆಯೂ ಕೆಲವು ಸಂಕೇತಗಳನ್ನು ವೇಷಗಳ ಸ್ವಭಾವಕ್ಕಾಗಿ ಉಳಿಸಿಕೊಳ್ಳಲಾಗುತ್ತದೆ. ಅತಿಕಾಯನಂತಹ ವೇಷಗಳಲ್ಲಿ ಹಣೆಯ ಬಿಳಿಯ ನಾಮ ಹಾಗೂ ಹಸಿರು ಮತ್ತು ನೀಲಿ ಬಣ್ಣಗಳ ಮುದ್ರೆಗಳು ವೈಷ್ಣವನೆಂಬುದನ್ನು ಸಂಕೇತಿಸುತ್ತವೆ. ಕಾರ್ತವೀರ್ಯಾರ್ಜುನನಿಗೆ ನಾಮದ ಎರಡೂ ಬದಿಗಳಲ್ಲಿ ಚಕ್ರ ಮುದ್ರೆಯನ್ನು ಬರೆಯುವುದರ ಮೂಲಕ ಸುದರ್ಶನವತಾರಿ ಎಂಬುದನ್ನು ಸಂಕೇತಿಸಲಾಗುತ್ತದೆ. ರಾಮನ ಕಣ್ಣುಗಳ ಕೆಳ ಭಾಗದಲ್ಲಿ ಹಸಿರು ಬಣ್ಣವನ್ನು ಶೃಂಗಾರದ ಸಂಕೇತವಾಗಿ ಹಾಕಲಾಗುತ್ತದೆ. ಸಾಮಾನ್ಯ ಹೆಣ್ಣು ವೇಷಗಳಿಗೆ ಹಸಿರು ಬಣ್ಣವೇ ಮುಖ್ಯ. ಇದು ಶೃಂಗಾರದ ಸಂಕೇತ. ಶೂರ್ಪನಖಿಯಂತವಳು ಕಾಮುಕಿಯಾದ್ದರಿಂದ ಅವಳಿಗೆ ಕಪ್ಪು ಬಣ್ಣವನ್ನು ಬಳಸಲಾಗುತ್ತದೆ. ಈಕೆ ಬಲಶಾಲಿ ಎಂಬುದನ್ನು ತೋರಿಸಲು ಮೂಗಿನ ತುದಿಯಿಂದಲೇ ಹಣೆಯವರೆಗೂ ಸೊಂಡಿಲ ರೂಪದ ನಾಮವನ್ನು ಬರೆಯುತ್ತಾರೆ. ಭೀಮನ ಪಾತ್ರಕ್ಕೆ ಹೀಗೆಯೇ ಸೊಂಡಿಲರೂಪದ ನಾಮವನ್ನು ಹಾಕಲಾಗುತ್ತದೆ. ಇದು ಆನೆಯಷ್ಟು ಬಲಶಾಲಿ ಎಂಬುದನ್ನು ಸಂಕೇತಿಸುತ್ತದೆ. ಭೀಮನಿಗೆ ಹಣೆಯ ಎರಡೂ ಭಾಗಗಳಲ್ಲಿ ಕಣ್ಣುಗಳ ಗುರುತನ್ನು ಬರೆಯಲಾಗುತ್ತದೆ. ಇದು ಸಾವಿರ ಆನೆಗಳ ಬಲಶಾಲಿ ಎಂಬುದರ ಸಂಕೇತ. ಹೀಗೆ ಯಕ್ಷಗಾನದ ಮುಖವರ್ಣಿಕೆಯು ವಿವಿಧ ವಿನ್ಯಾಸಗಳ ಮೂಲಕ ರೂಪುಗೊಂಡು ವೇಷಗಳಿಗೆ ಗಾಂಭೀರ್ಯ ವನ್ನೂ, ಸೌಂದರ್ಯವನ್ನೂ ಏಕಕಾಲಕ್ಕೆ ತಂದು  ಕೊಡುತ್ತದೆ.

ಮುಖವರ್ಣಿಕೆಗೆ ಬಳಸುವ ದ್ರವ್ಯಗಳು ಚರ್ಮದ ಮೇಲೆ ದುಷ್ಪರಿಣಾಮವನ್ನು ಬೀರುವುದಿಲ್ಲ. ಇವು ಹೆಚ್ಚು ಕಾಲ ಕೆಡದಂತೆ ಉಳಿಯಬೇಕಾಗುತ್ತದೆ. ಒಂದು ಬಣ್ಣವನ್ನು ಇನ್ನೊಂದು ಬಣ್ಣದ ಸಮೀಪದಲ್ಲಿ ಹಚ್ಚಿದಾಗ ಅದು ಮೊದಲು ಹಚ್ಚಿದ ಬಣ್ಣದೊಂದಿಗೆ ಮಿಶ್ರವಾಗಬಾರದು. ಮುಖದ ಮೇಲೆ ಭಾವನೆಯನ್ನು ಪ್ರಕಟಿಸುವಾಗ ಮಾಂಸಖಂಡಗಳ ಚಲನೆಗೆ ಅಡ್ಡಿಯಾಗಬಾರದು. ಬೆವರಿನೊಂದಿಗೆ ಕರಗಬಾರದು. ಜೊತೆಗೆ ಹೆಚ್ಚು ಆಕರ್ಷಕವಾಗಿದ್ದು ಸುಲಭ ಲಭ್ಯವಾಗುವ ದ್ರವ್ಯಗಳನ್ನೇ ಯಕ್ಷಗಾನದ ಮುಖವರ್ಣಿಕೆಗೆ ಬಳಸಲಾಗುತ್ತದೆ. ಈ ತೆರನ ಎಚ್ಚರವನ್ನು ಗಮನದಲ್ಲಿಟ್ಟುಕೊಂಡೇ ಯಕ್ಷಗಾನದ ಬಣ್ಣ ಗಳನ್ನು ಆಯ್ಕೆ ಮಾಡಲಾಗಿದೆ.

ಬಣ್ಣಗಳನ್ನು ಮಿಶ್ರ ಮಾಡಲು ಹಾಗೂ ಹಚ್ಚಿದ ಬಣ್ಣವನ್ನು ತೆಗೆಯಲು ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಇದು ಚರ್ಮಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡುವುದಿಲ್ಲ. ಬಣ್ಣವನ್ನು ಬರೆಯಲು ಕುಂಚವನ್ನು ಬಳಸುವ ಕ್ರಮ ಹಿಂದೆ ಇದ್ದಿರಲಿಲ್ಲ. ತೆಂಗಿನ ಕಡ್ಡಿಗಳಲ್ಲೇ ಬರೆಯುವ ಸಂಪ್ರದಾಯವಿತ್ತು. ಯಕ್ಷಗಾನದ ವೃತ್ತಿಮೇಳಗಳಲ್ಲಿ ಇದೇ ಸಂಪ್ರದಾಯವು ಇಂದಿಗೂ ರೂಢಿಯಲ್ಲಿದೆ. ಅಡಿಪಾಯದ ಮೂಲ ಬಣ್ಣವನ್ನು ಒಣಗಿಸಲು ಹಾಕುವ ಪೌಡರನ್ನು ತೆಗೆಯಲು ಶೇವಿಂಗ್ ಬ್ರಷ್ ಬಳಸುತ್ತಾರೆ. ಮೀಸೆಯನ್ನು ಅಂಟಿಸಿಕೊಳ್ಳಲು ಸ್ಪಿರಿಟ್ ಗಮ್ ಬಳಸಲಾಗುತ್ತದೆ. ಇದನ್ನು ರಾಳ ಮತ್ತು ಸ್ಪಿರಿಟ್ ಮಿಶ್ರ ಮಾಡಿ ತಯಾರಿಸಲಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಸಿದ್ಧ ಮಾದರಿಯಲ್ಲೇ ಇವು ಲಭಿಸುತ್ತವೆ.

ವೇಷ ಹಾಗೂ ಆಭರಣ ಪರಿಕರಗಳು

ಯಕ್ಷಗಾನದ ಬಣ್ಣಗಾರಿಕೆಯಲ್ಲಿ ಭಾವವನ್ನು ಪ್ರಕಟಿಸುವಂತೆ ಉಡುಗೆ ತೊಡುಗೆ ಗಳಲ್ಲಿಯೂ ಆಯಾ ಪಾತ್ರಗಳ ಗುಣಧರ್ಮವನ್ನು ಅನುಸರಿಸಿ ವಿವಿಧ ಕ್ರಮಗಳನ್ನು ಅಳವಡಿಸಲಾಗಿದೆ. ಯಾವುದೇ ಪಾತ್ರ ಪಾತ್ರವಾಗಿ ಪ್ರತ್ಯೇಕವಾಗುವಾಗಲೂ ಎಲ್ಲಾ ಪಾತ್ರಗಳ ತೊಡುಗೆಗಳಲ್ಲಿಯೂ ಸಾಮಾನ್ಯವಾದ ಅನೇಕ  ಸಂಗತಿಗಳಿರುತ್ತವೆ. ವೇಷಭೂಷಣಗಳ ಪ್ರಾಥಮಿಕ ಸಂಗತಿಗಳು ಎಂಬ ನೆಲೆಯಲ್ಲಿ ಇವುಗಳು ವೇಷಗಳಿಗೆ ಇರಲೇಬೇಕು. ಅವುಗಳನ್ನು ಇಲ್ಲಿ ಒಂದೊಂದಾಗಿ ಪರಿಕರಗಳನ್ನು ಗಮನಿಸಬಹುದು.

ಕಾಲುಚೀಲಗಳು (ಶಾಕ್ಸ್) : ಕಾಲುಚೀಲವನ್ನು ಪಾದದ ಮೇಲಿನಿಂದ ಮೊಣಕಾಲಿನವರೆಗೆ ಧಾರಣೆ ಮಾಡಲಾಗುವುದು. ಕಾಲುಚೀಲವೆಂದರೆ ಪಾದವನ್ನು ಮುಚ್ಚದೆ ಮೀನಖಂಡವನ್ನು ಮಾತ್ರ ಮುಚ್ಚುವಂತಿರುವ ಚೀಲಗಳು. ಹಿಂದೆ ಕಾಲುಚೀಲಗಳನ್ನು ಬಳಸುವ ಕ್ರಮ ಇದ್ದಿರಲಿಲ್ಲ.

ಗೆಜ್ಜೆ : ವೇಷಗಳು ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆಸರ. ಇದನ್ನು ಕಾಲ್ಗೆಜ್ಜೆ ಎಂದೂ ಹೇಳಲಾಗುತ್ತದೆ. ಕಂಚು, ಬೆಳ್ಳಿಗಳ ಮಿಶ್ರಣದಿಂದ ಇದನ್ನು ತಯಾರಿಸಲಾಗುತ್ತದೆ. ಗೆಜ್ಜೆ ಗಳನ್ನು ದಾರಗಳಲ್ಲಿ ಪೋಣಿಸಿ ಬಳಸಲಾಗುತ್ತದೆ. ಅಲ್ಲದೆ ಬಟ್ಟೆಗಳಿಗೂ, ಚರ್ಮದ ಮೆತ್ತೆಗಳಿಗೂ ಹೊಲಿದು ಇದನ್ನು ಸಿದ್ಧಪಡಿಸುವುದೂ ಇದೆ. ವೇಷಗಳು ಕುಣಿಯುವಾಗ ತಾಳಕ್ಕೆ ತಕ್ಕ ಹಾಗೆ ನಾದವನ್ನು ಹೊರಡಿಸುವುದರಿಂದ ವೇಷದ ನಡಿಗೆಗೊಂದು ಶ್ರುತಿ ದೊರೆಯುತ್ತದೆ. ಯಕ್ಷಗಾನದ ಎಲ್ಲಾ ವೇಷಗಳು ಧರಿಸುತ್ತವೆ.

ಕಾಲುಚೆಂಡು : ಗೆಜ್ಜೆಯ ಮೇಲ್ಭಾಗಕ್ಕೆ ಕಟ್ಟುವ ಹತ್ತಿಯ ಅಥವಾ ಬಟ್ಟೆಯ ಮೆತ್ತೆಯ ಬಳೆ. ಗೆಜ್ಜೆಯ ಮೇಲೆ ಬೆಂಡೆಕಾಯಿ ಗಾತ್ರದ ಮೂರು ಬಳೆಗಳನ್ನು ಧರಿಸುವುದು ಕ್ರಮ. ಗೆಜ್ಜೆಗೆ ತಾಗಿದಂತೆ ಕೆಂಪು ಅದರ ಮೇಲೆ ಕಪ್ಪು ಮತ್ತೊಂದರ ಮೇಲೆ ಕೆಂಪು ಬಣ್ಣದ ಕಾಲು ಚೆಂಡನ್ನು ಧರಿಸುತ್ತಾರೆ. ಇವು ಕಾಲಿನ ಪ್ರಮಾಣವನ್ನು ದೇಹದೊಂದಿಗೆ ಸರಿದೂಗಿಸುತ್ತವೆ. ಹಾಗೂ ತೊಟ್ಟುಕೊಂಡ ವೇಷಭೂಷಣಗಳ ಜೊತೆ ಹೊಂದಾಣಿಕೆ ಯಾಗುತ್ತದೆ. ಈ ಕಾಲುಚೆಂಡು ಇತ್ತೀಚೆಗೆ ಬಳಕೆಯಾಗುತ್ತಿಲ್ಲ.

ಕಾಲು ಮುಳ್ಳು: ಕಾಲ್ಚೆಂಡಿನ ಮೇಲ್ಗಡೆ ಕಟ್ಟುವ ಮರದ ಕಾಲು ಬಳೆ. ಸಾಮಾನ್ಯವಾಗಿ ಇದರ ಬಣ್ಣ ಬಿಳಿ. ಇದರ ಹೊರಮೈಗೆ ಶಂಕುವಿನಾಕೃತಿಯ ಮುಳ್ಳುಗಳು ಅಥವಾ ಕಮಾನುಗಳಿರುತ್ತವೆ. ಇದು ಕಿರೀಟ, ಭುಜಕೀರ್ತಿಗಳಿಗೆ ಸಂವಾದಿಯಾಗಿ ಕಾಲಿಗೆ ಧರಿಸುವ ಆಭರಣ. ಇವು ಮುಳ್ಳುಗಳಂತಿರದೆ ತುದಿಯಲ್ಲಿ ವೃತ್ತಾಕಾರದಲ್ಲಿರುತ್ತದೆ. ಹಿಂದೆ ಮೂರು ಕಾಲು ಮುಳ್ಳುಗಳನ್ನು ಧರಿಸುವ ಸಂಪ್ರದಾಯವಿತ್ತು. ಭುಜಕೀರ್ತಿ ಮತ್ತು ಕಿರೀಟದೊಂದಿಗೆ ಅಪೂರ್ವ ಸಾಮರಸ್ಯವನ್ನು ಸಾಧಿಸುತ್ತವೆ. ಇದರ ಬಳಕೆ ಕೂಡ ಈಗ ಕಡಿಮೆಯಾಗಿದೆ.

ಕಾಲು ಜಂಗು : ಪುರುಷ ವೇಷಗಳು ಮೊಣಕಾಲಿನ ಕೆಳಗೆ ಸುತ್ತಿದ ಗೆಜ್ಜೆಯ ಪಟ್ಟಿ. ಬಟ್ಟೆಯ ಮೆತ್ತೆಗೆ ಹಲ್ಲೆ ಗೆಜ್ಜೆಗಳನ್ನು ಹೊಲಿದು ತಯಾರಿಸಲಾಗುತ್ತಿದೆ.

ಕಾಲು ಪಟ್ಟೀಸ್ : ಕಾಲಿನ ಮಣಿಗಂಟಿನಿಂದ ಮೊಣಕಾಲಿನವರೆಗೆ ಸುತ್ತುವ ಸುಮಾರು ಮೂರಂಗುಲ ಅಗಲದ ಉದ್ದದ ದಪ್ಪದ ಜರಿಮಣಿಗಳಿರುವ ಬಟ್ಟೆ. ಇದು ಹಿಂದೆ ಇದ್ದಿ ರಲಿಲ್ಲ. ಈ ಕಾಲು ಪಟ್ಟೀಸ್ ನಾಟಕೀಯ ವೇಷಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿವೆ.

ಕಾಲ ಕಡಗ : ಕಾಲು ಮುಳ್ಳುಗಳ ಮೇಲೆ ಮತ್ತೆ ಕಾಲು ಚೆಂಡುಗಳನ್ನು ಕಟ್ಟಿ ಅದರ ಮೇಲೆ ಕಟ್ಟುವ ಆಭರಣ. ಇದು ಉರುಟಾಗಿದ್ದು ಸರಳಿನ ಬಳೆಯ ಆಕಾರದಲ್ಲಿರುತ್ತದೆ. ಹಿಂದೆ ಇವುಗಳನ್ನು ಗೋಳಿಮರದ ಬೇರುಗಳಿಂದ ತಯಾರಿಸುತ್ತಿದ್ದರಂತೆ. ಈಗ ಅಲ್ಯುಮಿನಿಯಂನ ರಚನೆಗಳಾಗಿವೆ. ಪುರುಷ ವೇಷಗಳಿಗೆ ಮಾತ್ರ ಇದನ್ನು ಕಟ್ಟಲಾಗುತ್ತದೆ. ಹಿಂದೆ ದೋಣಿಯಾಕೃತಿಯ ಚಿಕ್ಕ ಗಗ್ಗರ ಎಂಬುದನ್ನು ಕಡಗದ ಬದಲಿಗೆ ಕಟ್ಟಲಾಗುತ್ತಿತ್ತಂತೆ. ಇದರ ಒಳಗಡೆ ಕಾಯಿಗಳಿದ್ದು ನಡೆಯುವಾಗ ನಾದವನ್ನು ಹುಟ್ಟಿಸುತ್ತಿದ್ದುವು.

ಇಜಾರು : ಮೊಣಕಾಲಿನವರೆಗೆ ಇಳಿಯುವ ಚಡ್ಡಿ ಅಥವಾ ಚಲ್ಲಣ. ಪುರುಷ ವೇಷಗಳು ಕಚ್ಚೆಯ ಬದಲು ಧರಿಸುವ ಚಲ್ಲಣ. ಈ ಇಜಾರಿನ ಕೆಳ ಪಟ್ಟಿಗಳನ್ನು ಎರಡು ಮೊಣಕಾಲು ಗಳಿಗೆ ಬಂಧಿಸಲಾಗುತ್ತದೆ. ಇಜಾರಿನಲ್ಲಿ ಒಳ ಇಜಾರು ಕಪ್ಪು ಕೋರ ಬಟ್ಟೆಯದ್ದಾಗಿರುತ್ತದೆ. ಹೊರ ಇಜಾರು ಹತ್ತಿ ಬಟ್ಟೆ ಅಥವಾ ವೆಲ್‌ವೆಟ್ ಅಥವಾ ನೈಲಕ್ಸ್ ಬಟ್ಟೆಗಳದ್ದಾಗಿದ್ದು ಕೆಂಪು, ಹಸಿರು, ಕಪ್ಪು ಬಣ್ಣದವುಗಳಾಗಿವೆ. ಪುಂಡು ವೇಷಗಳಿಗೆ ಇತರ ಬಣ್ಣದ ಚೆಡ್ಡಿಗಳನ್ನು ಕೂಡ ಬಳಸಲಾಗುತ್ತದೆ.

ಅಂಡು : ಹೊಟ್ಟೆ ಅಥವಾ ಸೊಂಟದಿಂದ ತೊಡೆಯತನಕ ವೇಷದ ಗಾತ್ರವನ್ನು ಹಿಗ್ಗಿಸಲು ಬಳಸುವ ದಪ್ಪದ ಚಿಂದಿ ಬಟ್ಟೆಗಳ ಗಂಟು. ಹಗುರದ ಕಾರಣಕ್ಕೆ ಈಗ ಪ್ಲಾಸ್ಟಿಕ್ ಗೋಣಿ ಗಳನ್ನು ಬಳಸುತ್ತಾರೆ. ಸೀರೆಗಳು, ಹಳೆಯದಾದ ವೇಷದ ಜವುಳಿ ಇತ್ಯಾದಿಗಳು ಅಂಡು ಕಟ್ಟಲು ಉಪಯೋಗವಾಗುತ್ತದೆ. ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಸೀರೆಯನ್ನು ಸುತ್ತುವುದರ ಮೂಲಕ ವೇಷದ ಗಾತ್ರವನ್ನು ಹಿಗ್ಗಿಸಲಾಗುತ್ತದೆ.

ಬಾಲ್ಮುಂಡು: ಪುರುಷ ವೇಷಗಳು ಮೊಣಕಾಲಿನಿಂದ ಸ್ವಲ್ಪ ಕೆಳಗೆ ಇಳಿಯುವಂತೆ ಸೊಂಟಕ್ಕೆ ಕಟ್ಟಿಕೊಳ್ಳುವ ಲಂಗದಂತಹ ತೊಡುಗೆ. ಬಾಲದಂತೆ ಇಳಿಬಿಡುವ ತೊಡುಗೆ ಯಾದ್ದರಿಂದ ಈ ಹೆಸರು ಬಂದಿರಬಹುದು. ಇವುಗಳು ಬಿಳಿಬಣ್ಣದವುಗಳಿದ್ದು, ಕೆಳಭಾಗದಲ್ಲಿ ಕೆಂಪು, ಹಸಿರು, ಕಪ್ಪು ಬಣ್ಣಗಳ ಗೋಟುಗಳಿರುತ್ತವೆ.

ಜಟ್ಟಿ : ಸೊಂಟಕ್ಕೆ ಬಿಗಿದು ಕಟ್ಟುವ ಸುಮಾರು ಹನ್ನೆರಡರಿಂದ ಹದಿನೈದು ಅಡಿ ಉದ್ದದ ಬಟ್ಟೆ. ಬಿಳಿ ಬಟ್ಟೆಯನ್ನು ನಾಲ್ಕು ಮಡಿಕೆಯಾಗಿ ಹೊಲಿದ ನಾಲ್ಕೈದು ಇಂಚು ಅಗಲದ ಉದ್ದನೆಯ ಪಟ್ಟಿ. ಅಂಡಿನ ಮೇಲೆ ಇಜಾರನ್ನು ಕಟ್ಟಿ ಅದರ ಮೇಲೆ ಸೊಂಟಕ್ಕೆ ಒಂದು ಸುತ್ತು ಜಟ್ಟಿಯನ್ನು ಕಟ್ಟಿ ನಂತರ ಬಾಲ್‌ಮುಂಡು ಬಿಗಿದು ಅದರ ಮೇಲೆ ಮತ್ತೆ ಆಯವಾಗಿ ಜಟ್ಟಿಯನ್ನು ಸುತ್ತಲಾಗುತ್ತದೆ. ಇದು ಇಡೀ ವೇಷಭೂಷಣದ ಭಾರವನ್ನು ಧರಿಸಲು ಸೊಂಟಕ್ಕೆ ಆಧಾರವಾಗುತ್ತದೆ. ದಟ್ಟಿ ಎಂಬ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತದೆ.

ವೀರಕಸೆ : ಸೊಂಟದ ಮುಂಭಾಗ ಎರಡು ಕಾಲುಗಳ ನಡುವೆ ಇಳಿಬೀಳುವಂತೆ ದೀರ್ಘವಾದ ಆಯತಾಕಾರದ ಆಭರಣ. ಇದು ಸುಮಾರು ಆರು ಅಥವಾ ಏಳು ಅಂಗುಲ ಅಗಲವಿರುತ್ತದೆ. ಹದಿನೆಂಟು ಅಥವಾ ಇಪ್ಪತ್ತು ಅಂಗುಲ ಉದ್ದವಿರುತ್ತದೆ. ಬಟ್ಟೆಯ ಮೆತ್ತೆಗೆ ಮಣಿಗಳನ್ನು ಹಲ್ಲೆಗಳನ್ನು ಸೇರಿಸಿ ಹೊಲಿದು ತಯಾರಿಸಲಾಗುತ್ತದೆ. ಸುತ್ತಲೂ ಉಣ್ಣೆಯ ಅಟ್ಟೆ ಇದ್ದು ಕೆಳಗೆ ಅಲಂಕಾರಕ್ಕಾಗಿ ಗೊಂಡೆಯೂ ಇರುತ್ತದೆ. ವೀರಗಸೆಯ ಮಧ್ಯದಲ್ಲಿ ಮೇಲಿನಿಂದ ಕೆಳಗಿನವರೆಗೆ ಐದು ‘ತಾವರೆ’ಯ ರಚನೆಯನ್ನು ಹಚ್ಚಿರುತ್ತಾರೆ. ತಾವರೆಯ ಗಾತ್ರವು ಮೇಲಿನಿಂದ ಕೆಳಗೆ ಕಿರಿದಾಗುತ್ತಾ ಬಂದಿರುತ್ತದೆ. ಇದರ ಸುತ್ತ ಚೌಕಬಿಲ್ಲೆ ಮತ್ತು ಮಣಿಗಳು ಅಥವಾ ಭುಜಕೀರ್ತಿಯಲ್ಲಿಯಂತೆ ತುದಿ ಕತ್ತರಿಸಿದ ಶಂಖುವಿನಾ ಕೃತಿಯನ್ನು ಬಳಸಿರುತ್ತಾರೆ. ವೀರಗಸೆಯ ಹೊರಭಾಗದಲ್ಲಿ ಸುತ್ತಲೂ ಕಪ್ಪು ಮತ್ತು ಕೆಂಪು ಬಣ್ಣದ ಉಲ್ಲನ್ ಗೊಂಡೆಗಳಿಂದ ಅಲಂಕರಿಸಿರುತ್ತಾರೆ. ಹೆಣ್ಣು ಬಣ್ಣದ ವೇಷಗಳಿಗೆ ಕೊರಳ ಹಾರವಾಗಿಯೂ ಇದನ್ನು ಉಪಯೋಗಿಸಲಾಗುತ್ತದೆ.

ಮಾರ್ಮಾಲೆ ಅಥವಾ ಮಾರುಮಾಲೆ: ವೀರಕಸೆಯ ಎಡ ಬಲಗಳಲ್ಲಿ ಅಷ್ಟೇ ಉದ್ದಕ್ಕೆ ನೇತು ನಿಲ್ಲುವ ಸರದಂತಹ ಆಭರಣ. ಪಕಡಿ ವೇಷಗಳ ವೀರಕಸೆಯ ಅಕ್ಕಪಕ್ಕದಲ್ಲಿ ಮಾರುಮಾಲೆಗಳಿರುವುದಿಲ್ಲ. ಕಿರೀಟ ವೇಷಗಳಿಗೆ ಮಾತ್ರ ವೀರಕಸೆಯ ಅಕ್ಕಪಕ್ಕದಲ್ಲಿ ಮಾರು ಮಾಲೆಗಳಿರುತ್ತವೆ. ಸಂಪಿಗೆ ಮೊಗ್ಗುಗಳಂತಹ ಮಣಿಗಳ ಸರ. ಇದರ ತುದಿಗೆ ಗೇಣುದ್ದದ ಮರದ ಸಪೂರವಾದ ರೋಲುಗಳಂತಿರುವುದನ್ನು ಕಟ್ಟಿರುತ್ತಾರೆ. ಇದರ ಜೊತೆಗೆ ಚಕ್ತೆಕಡ್ಡಿಸರ ಎಂದು ಹೇಳುವ ಮಾಲೆಯನ್ನು ಬಳಸುತ್ತಿದ್ದರಂತೆ. ಇದನ್ನು ಹೆಸರೇ ಸೂಚಿಸುವಂತೆ ಚಕ್ತೆ (ಚಗತೆ) ಗಿಡದ ಕಾಂಡವನ್ನು ಚಿಕ್ಕಚಿಕ್ಕ ಡಮರಿನ ಆಕಾರದಲ್ಲಿ ಕತ್ತರಿಸಿ ಬೇಗಡೆಯನ್ನು ಅಂಟಿಸಿ ದಾರದಲ್ಲಿ ಪೋಣಿಸಿ ತಯಾರಿಸುತ್ತಿದ್ದರು. ಮಾಲೆಯ ತುದಿಗೆ ಗೊಂಡೆಗಳು ಇರುತ್ತವೆ.ಇವು ಲೋಲಕದಂತೆ ಇದ್ದು ಚಲನೆಯ ಮೂಲಕ ವಿಶಿಷ್ಟ ವಿನ್ಯಾಸವನ್ನು ಕೊಡುತ್ತದೆ.

ಡಾಬು: ವಿವಿಧ ಆಕೃತಿಯ ಸೊಂಟಪಟ್ಟಿಗಳು. ಮರದ ಬಿಲ್ಲೆಯ ಜೋಡಣೆ ಅಥವಾ ಬಟ್ಟೆಯ ಮೆತ್ತೆಗೆ ಮಣಿ, ಜರಿ ಇತ್ಯಾದಿಗಳನ್ನು ಕೂರಿಸಿ ಮಾಡಿದ ಪಟ್ಟಿಗಳು. ಇವುಗಳಲ್ಲಿ ಎರಡು ಬೆರಳುಗಳಷ್ಟು ಹಾಗೂ ಮೂರು ಬೆರಳುಗಳಷ್ಟು ಅಗಲದವೂ ಇರುತ್ತವೆ. ಸುಮಾರು ಇಪ್ಪತ್ತು, ಇಪ್ಪತ್ತೆರಡು ಅಂಗುಲದಷ್ಟು ಉದ್ದವಾಗಿರುತ್ತದೆ.

ಉಲ್ಲನ್ ಡಾಬು : ಸುಮಾರು ಮೂರು ಅಥವಾ ನಾಲ್ಕು ಅಂಗುಲದ ಉಲ್ಲನ್ ಇರುವ ಡಾಬು. ಇದು ಸಪೂರ ಡಾಬುವಿನಷ್ಟೇ ಉದ್ದವಿರುತ್ತದೆ. ಪುಂಡು, ರಾಜ, ಬಣ್ಣದ ವೇಷಗಳ ಹಿಂಬದಿಗೆ ಬಾಲ್‌ಮುಂಡು ಮತ್ತು ಜಟ್ಟಿಯ ಜೋಡಣೆಯ ಮೇಲೆ ಕಟ್ಟ ಲಾಗುತ್ತದೆ.

ದಗಲೆ : ದೊಗಲೆ ಅಥವಾ ಸಡಿಲವಾದ ತುಂಬುತೋಳಿನ ಅಂಗಿ. ಇವುಗಳಿಗೆ ಗುಂಡಿಗಳ ಬದಲಾಗಿ ಕಟ್ಟಲು ದಾರಗಳಿರುತ್ತವೆ. ಪಾತ್ರದ ಗಾತ್ರಕ್ಕೆ ಅನುಗುಣವಾಗಿ ಮುಖ್ಯದಗಲೆಯ ಒಳಗಿನಿಂದ ಹಲವು ಬಿಳಿ ದಗಲೆಗಳನ್ನು ತೊಟ್ಟುಕೊಳ್ಳುವುದಿದೆ. ಪುರುಷವೇಷಗಳಿಗೆ ಮೇಲು ದಗಲೆಗಳಲ್ಲಿ ಮುಖ್ಯವಾಗಿ ನಾಲ್ಕು ಬಣ್ಣದ ದಗಲೆಗಳಿರುತ್ತವೆ. ಕೆಂಪು, ಕಪ್ಪು, ಹಸಿರು ಮತ್ತು ಬಿಳಿ. ಇವುಗಳಲ್ಲಿ ಬಿಳಿ ದಗಲೆ ಎಂದರೆ ಕಪ್ಪು ಅಥವಾ ಕೆಂಪು ದಗಲೆಯ ಒಳಮೈ. ಹಾಗಾಗಿ ಒಳಗೆ ಬಿಳಿ ಕೋರ ಇರುವ ಕಪ್ಪು ಅಥವಾ ಕೆಂಪು ದಗಲೆಯನ್ನು ಉಪಯೋಗಿಸ ಲಾಗುತ್ತದೆ. ಕೆಲವೊಮ್ಮೆ ಬಿಳಿಯ ಕೋರದ ಅಂಗಿಯನ್ನು ಕೂಡ ಬಳಸುವುದಿದೆ. ಪುಂಡು ವೇಷಗಳಿಗೆ ಅರ್ಧತೋಳಿನ ದಗಲೆಗಳಿರುತ್ತವೆ. ಇದಕ್ಕೆ ಚೋಲೆ ಎಂದೂ ಪುಂಡು ರವಕೆ ಎಂದೂ ಹೇಳಲಾಗುತ್ತದೆ. ಸ್ತ್ರೀವೇಷಗಳಿಗೆ ದಗಲೆ ಬದಲಿಗೆ ತುಂಬು ತೋಳಿನ ‘ಕುಪ್ಪಾಯ’(ಕುಪ್ಪಸ)ವನ್ನು ಹಿಂದೆ ಉಪಯೋಗಿಸುತ್ತಿದ್ದರಂತೆ. ವೇಷಗಳ ಸ್ವಭಾವ ಪ್ರಕಟವಾಗುವುದು ಅವು ಧರಿಸುವ ದಗಲೆ ಅಂಗಿಯಿಂದ. ಇವುಗಳಿಗೆ ಗುಂಡಿಗಳಿರುವುದಿಲ್ಲ ಬದಲಿಗೆ ಕಟ್ಟುವ ಕಸೆ ಲಾಡಿಗಳಿರುತ್ತವೆ. ಹಾಗಾಗಿ ಇವುಗಳನ್ನು ‘ಕಸೆ ಅಂಗಿ’ ಎಂದೂ ಕರೆಯುವುದೂ ಇದೆ. ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಮಾತ್ರ ಬಳಸಲಾಗುತ್ತದೆ. ಹತ್ತಿ ಬಟ್ಟೆಯ ಬಣ್ಣವು ಹೊಳೆಯದೆ ಸೌಮ್ಯವಾಗಿರುತ್ತದೆ. ದೇಹದ ಮೇಲೆ ತೊಟ್ಟುಕೊಂಡರೆ ಅನುಕೂಲಕರವಾಗಿ ಹೊಂದಿಕೊಳ್ಳುತ್ತದೆ. ಇದರ ಮೇಲೆ ಕಟ್ಟಿಕೊಳ್ಳುವ ಆಭರಣಗಳು ಜಾರದೆ ಸರಿಯಾಗಿ ನಿಂತುಕೊಳ್ಳುತ್ತವೆ. ಇಷ್ಟೇ ಅಲ್ಲದೆ ಮೈಯ್ಯ ಬೇವರನ್ನು ಹೀರುವ ಗುಣವಿರುವುದರಿಂದ ಹತ್ತಿ ಬಟ್ಟೆಯ ಬಳಕೆ ಆರೋಗ್ಯಕರ ವಾದುದೂ ಹೌದು. ಇತ್ತೀಚಿನ ದಿನಗಳಲ್ಲಿ ವೆಲ್ವೆಟ್ ಮತ್ತು ನೈಲಾನ್ ಬಟ್ಟೆಯ ಬಳಕೆಯೂ ಇದೆ.

ಸೋಗೆವಲ್ಲಿ : ಸೋಗೋಲೆ, ಸೋಗೋಲಿ ಎಂದು ಕರೆಯುತ್ತಾರೆ. ಕಿರೀಟ ವೇಷ, ಬಣ್ಣದ ವೇಷಗಳಿಗೆ ಶಾಲಿನಂತೆ ಹೆಗಲ ಮೇಲೆ ಹಾಕಿ ಇದಿರಿನಿಂದ ಎರಡೂ ಬದಿಗಳಲ್ಲಿ ಪಾದದವರೆಗೆ ಇಳಿಬಿಟ್ಟು ಸೋಗೆಯಂತೆ ನೇತಾಡುವ ವಲ್ಲಿ. ಸುಮಾರು ಎರಡು ಮಾರಿ ಗಿಂತಲೂ ಉದ್ದವಾದ ಸೀರೆಯಷ್ಟು ಅಗಲದ ಎರಡು ಕೋನಗಳಲ್ಲಿ ಬಣ್ಣದ ಗೋಟುಗಳುಳ್ಳ ಬಣ್ಣದ ಬಟ್ಟೆಯನ್ನು ಸೋಗೋಲಿಯಾಗಿ ಬಳಸಲಾಗುತ್ತದೆ.

ಕೈಸರ : ಸರಪಳಿಯಂತೆ ಕಿರೀಟ ವೇಷಗಳು ಮುಂಗೈಯಲ್ಲಿ ತೊಡುವ ಸರ. ಕೈಗೆ ಮಣಿಗಂಟಿನ ಮೇಲೆ ಕೈಕಟ್ಟಿಗೆ ಸಿಕ್ಕಿಸುವ ಸರ. ಬೇಗಡೆ ಹಚ್ಚಿ ಗುಂಡುಗಳನ್ನು ಪೋಣಿಸಿದ ಮರದ ಬಳೆ. ಇದರ ತುದಿಗೆ ಗೊಂಡೆಯೂ ನೇತಾಡುತ್ತಿರುತ್ತದೆ.

ಭುಜಕೀರ್ತಿ : ಭುಜಕೀರ್ತಿ ಪಾತ್ರಗಳ ಭುಜಬಲದ ಸಂಕೇತವಾಗಿದೆ. ವೀರ, ಶೌರ್ಯಗಳನ್ನು ಪ್ರದರ್ಶಿಸುವ  ಪಾತ್ರಗಳಲ್ಲಿ ಭುಜಕೀರ್ತಿಎದ್ದು ಕಾಣುವ ಒಂದು ಆಭರಣ ವಿಶೇಷ. ಇದು ಶಂಕುವಿನಾಕೃತಿಯ ಮುಳ್ಳುಗಳಿಂದ ಕೂಡಿದ ರಚನೆ. ಹಾಗಾಗಿ ಇದನ್ನು ಭುಜಮುಳ್ಳು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ೧.೫ ಇಂಚು ಎತ್ತರದ ೧೪ ರಿಂದ ೨೦ ಬೆಳ್ಳಿಯ ವರ್ಣ ಅಥವಾ ಸುವರ್ಣವರ್ಣದ ಶಂಕುವಿನಾಕೃತಿಯ ಭುಜಕೀರ್ತಿಯು ವಿಶಿಷ್ಟವಾಗಿ ಶೋಭಿಸುತ್ತದೆ. ಮರದ ಮುಳ್ಳುಗಳಿಗೆ ಬೇಗಡೆ ಹಚ್ಚಿ ವಸ್ತ್ರದ ಮೆತ್ತೆಗೆ ಹೊಲಿದು ಎರಡೂ ಪಾರ್ಶ್ವಕ್ಕೆ ಕುಳಿತುಕೊಳ್ಳುವಂತೆ ಆಯತಾಕೃತಿಯಲ್ಲಿ ಈ ಆಭರಣವನ್ನು ರಚಿಸಲಾಗುತ್ತದೆ. ಬಡಗಿನಲ್ಲಿ ಭುಜಕೀರ್ತಿಯು ತ್ರಿಕೋನಾಕೃತಿಯಲ್ಲಿರುತ್ತದೆ. ಹಿಂದೆ ಜುಮ್ಮನ ಮರ(ಕಾವಟಿ ಮರ zantha kylon-Rhesta)ದ ತೊಗಟೆಯ ಮೇಲಿರುವ ಮುಳ್ಳುಗಳನ್ನು ಬಳಸಿ ಭುಜಕೀರ್ತಿಯನ್ನು ತಯಾರಿಸಲಾಗುತ್ತಿತ್ತು. ಭುಜವನ್ನು ಮುಚ್ಚುವಂತಹ ವಸ್ತ್ರದ ಮೆತ್ತೆಯನ್ನು ಅಥವಾ ಕ್ಯಾನ್‌ವಾಸನ್ನು ಆಯತಾಕೃತಿಯ ಕವಚದ ಒಂದೊಂದು ಪಾರ್ಶ್ವದಲ್ಲೂ ತುದಿ ಕತ್ತರಿಸಿದ ಶಂಖುವಿನ ರಚನೆಗಳಿರುವ ಮರದ ತುಂಡುಗಳನ್ನು ಜೋಡಿಸುತ್ತಾರೆ. ಈ ಶಂಖುವಿನ ಕೊನೆಗೆ ಕನ್ನಡಿಯನ್ನು ಅಂಟಿಸುತ್ತಾರೆ. ಎರಡೂ ಪಾರ್ಶ್ವಗಳ ಮಧ್ಯಭಾಗದಲ್ಲಿ ಕೆಂಪು ಮತ್ತು ಕಪ್ಪು ಉಲ್ಲನ್ ಗೊಂಡೆಗಳ ಪಟ್ಟಿ ಇರುತ್ತದೆ. ಈ ಉಲ್ಲನ್ ಗೊಂಡೆಗಳು ವೆಲ್ವೆಟನ್ನು ಸ್ಪರ್ಶಿಸುವಲ್ಲಿ ಮಣಿಗಳ ಸಾಲು ಇರುತ್ತದೆ. ಪಾತ್ರಗಳಿಗೆ ಅನುಗುಣವಾಗಿ ಭುಜಕೀತಿಯ ಗಾತ್ರದಲ್ಲೂ ವ್ಯತ್ಯಾಸವಿರುತ್ತದೆ.

ದಂಬೆ ಅಥವಾ ಭುಜದಂಬೆ : ಬಣ್ಣದ ವೇಷಗಳು ಭುಜಕೀರ್ತಿಯ ಬದಲಿಗೆ ಬಳಸುವ ಆಭರಣ. ಇದಕ್ಕೆ ಮುಳ್ಳುಗಳಿರುವುದಿಲ್ಲ. ಭುಜದ ಮೇಲೆ ನಿಲ್ಲುವಂತೆ ಮರವನ್ನು ಕೊರೆದು ಟೊಳ್ಳಾಗಿಸಿ ಹೊರಮೈಗೆ ಬೇಗಡೆ ಹಚ್ಚಿ ಇದನ್ನು ತಯಾರಿಸಲಾಗುತ್ತದೆ. ಹೊರಮೈಯಲ್ಲಿ ರೆಕ್ಕೆಯಂತಹ ರಚನೆಗಳು ಮೇಲ್ಭಾಗದಲ್ಲಿ ಗಿಳಿಯ ಮಾದರಿಯ ಕೆತ್ತನೆಗಳನ್ನು ಜೋಡಿಸ ಲಾಗುತ್ತದೆ. ಈಗೀಗ ಮರದ ಬದಲಿಗೆ ವೆಲ್ವೆಟ್ ಬಟ್ಟೆ ಅಂಟಿಸಿದ ರಟ್ಟಿನ ದಂಬೆಗಳು ಕೂಡ ಬಳಕೆಯಾಗುತ್ತಿವೆ.

ಜಾಲರಿ ಡಾಬು : ಇವುಗಳಲ್ಲಿ ಸ್ತ್ರೀ ವೇಷದ ಜಾಲರಿ ಡಾಬು ಮತ್ತು ನಾಟಕೀಯ ವೇಷದ ಜಾಲರಿ ಡಾಬು ಎಂದು ಎರಡು ವಿಧಗಳಿವೆ. ಇದು ಸೊಂಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ.

ತೋಳಕಟ್ಟು : ಭುಜಕೀರ್ತಿಗೆ ತಾಗಿಕೊಂಡಂತೆ ಅದರ ಕೆಳಗೆ ಕಟ್ಟುವ ಅಲಂಕರಿಸಿದ ಪಟ್ಟಿ ತೋಳಕಟ್ಟು. ಇದನ್ನು ಕೇಯೂರ, ತೋಳಭಾಪುರಿ ಎಂಬ ಹೆರುಗಳಿಂದಲೂ ಕರೆಯುತ್ತಾರೆ. ತೋಳಿಗೆ ಕಟ್ಟುವ ಆಭರಣ. ಇದರಲ್ಲಿ ಮೂರು ಅಥವಾ ನಾಲ್ಕು ಆಭರಣಗಳ ಸಾಲು ಇರುತ್ತವೆ. ಮೊದಲ ಮತ್ತು ಕೊನೆಯ ಸಾಲುಗಳು ಅಷ್ಟಪಟ್ಟಿ ಮತ್ತು ಮಣಿಗಳನ್ನು ಹೊಂದಿರುತ್ತದೆ. ಮಧ್ಯದ ಸಾಲಿನಲ್ಲಿ ‘ಚೌಕಹಲ್ಲೆ’ ಎಂಬ ಚೌಕಾಕಾರದ ಮರದ ಬಿಲ್ಲೆಗಳ ರಚನೆಯಿರುತ್ತದೆ. ಪಾತ್ರಗಳಿಗೆ ಅನುಗುಣವಾಗಿ ಬೇರೆ ಬೇರೆ ತೆರನ ತೋಳ್ಕಟ್ಟುಗಳಿವೆ.

ಕೈಕಟ್ಟು : ಕೈಗೆ ಮಣಿಗಂಟಿನಿಂದ ಮೇಲ್ಗಡೆ ಕಟ್ಟುವ ಆಭರಣ. ಇದು ಆಯತ ಅಥವಾ ಅರ್ಧ ವಜ್ರಾಕೃತಿಯಲ್ಲಿರುತ್ತದೆ. ಮರದ ಕಡ್ಡಿ, ಹಲ್ಲೆಗಳನ್ನು ಜೋಡಿಸಿ ಅಥವಾ ಮೆತ್ತೆಗೆ ಮಣಿ, ಹವಳಗಳನ್ನು ಕೂರಿಸಿ ತಯಾರಿಸುವರು. ಇದರಲ್ಲಿ ನಾಲ್ಕರಿಂದ ಆರು ಸಾಲು ಅಷ್ಟಪಟ್ಟಿಗಳಿರುತ್ತವೆ. ನಡುವೆ ಮೂರು ಸಾಲು ಮಣಿ ಹಾಗೂ ಚೌಕಹಲ್ಲೆಗಳಿಂದ ಅಲಂಕರಿಸಿರುತ್ತಾರೆ. ಇದನ್ನು ಕೈಗೆ ಸಿಕ್ಕಿಸಿ ದಾರವನ್ನು ಎಳೆದಾಗ ಎರಡೂ ಬದಿಗಳು ಸೇರಿಕೊಂಡು ಬಿಗಿಯಾಗಿ ನಿಂತುಕೊಳ್ಳುತ್ತವೆ. ಇದರ ಹಲ್ಲೆಗಳ ರಚನೆಗಳು ಸ್ಥಳೀಯವಾಗಿ ದೊರಕುವ ಕಿಸ್ಗಾರ ಎಂಬ ನಾಲ್ಕು ಎಸಳಿನ ಹೂವನ್ನು ಹೋಲುತ್ತದೆ.

ಎದೆ ಪದಕ (ಕೊರಳಾರ) : ಎದೆಯ ಮೇಲೆ ಕಟ್ಟುವ ಪದಕದಂತಿರುವ ಎದೆ ಕವಚ. ಇದನ್ನು ಎದೆಹಾರ, ಎದೆಕವಚ, ಪಡಿಪದಕ, ಎದೆಕಟ್ಟು, ಕಂದಹಾರ ಎಂಬಿತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಇದರಲ್ಲಿ ನಾಲ್ಕಾರು ಬಗೆಗಳು ಬಳಕೆಯಲ್ಲಿವೆ. ಉರುಟಾದ ದೊಡ್ಡ ಹಲ್ಲೆ(ಜೇನುಗುಟ್ಟು)ಯಂತಿದ್ದು ಮೇಲ್ಭಾಗದಲ್ಲಿ ಎಡ ಬಲಗಳಿಗೆ ಚಿಕ್ಕ ಹಲ್ಲೆಯಾಕೃತಿಯ ಕಿವಿಗಳಿರುತ್ತವೆ. ಇವಲ್ಲದೆ ತ್ರಿಕೋನಾಕೃತಿ, ಆಯತಾಕೃತಿ, ಗೋಲಾಕೃತಿ, ಗೇರುಹಣ್ಣಿನ ಆಕೃತಿಗಳಲ್ಲೂ ಇರುತ್ತವೆ. ಕೆಂಪು ವೆಲ್ವೆಟ್ಟಿನ ಮೇಲೆ ವಿಭಿನ್ನ ರೀತಿಯ ಮಣಿ ಮತ್ತು ಮರದ ಆಭರಣಗಳನ್ನು ಹಾಗೂ ಪದ್ಮಗಳನ್ನು ಜೋಡಿಸಿ ಹಾರದ ಆಕೃತಿಯನ್ನು ವಿನ್ಯಾಸಗೊಳಿಸಿರುತ್ತಾರೆ. ಕೊರಳನ್ನು ಸುತ್ತುವರಿಯುವ ಇದರ ಸುತ್ತಲೂ ಉಲ್ಲನ್ ಗೊಂಡೆಗಳನ್ನು ಹೊಲಿದಿರುತ್ತಾರೆ.

ಅಡ್ಡಿಗೆ (ಗುಂಡಡ್ಡಿಗೆ) : ಗಂಡು ಹಾಗೂ ಹೆಣ್ಣು ವೇಷಗಳ ಕೊರಳಿನ ಆಭರಣ. ಕುತ್ತಿಗೆಗೆ ತಾಗಿಕೊಂಡೆ ನಿಲ್ಲುವ ಆಭರಣವನ್ನು ಅಡ್ಡಿಗೆ ಎಂದು ಹೇಳುವರು. ಇವು ಸರಗಳಿಗಿಂತ ಗಿಡ್ಡವಾಗಿರುತ್ತದೆ. ಇವುಗಳಲ್ಲಿ ಗುಂಡಡ್ಡಿಗೆ, ಗೆಜ್ಜೆ ಅಡ್ಡಿಗೆ, ಹಲ್ಲೆ ಅಡ್ಡಿಗೆ, ಸಂಕಲೆ ಅಡ್ಡಿಗೆ ಎಂಬಿತ್ಯಾದಿ ಪ್ರಭೇದಗಳಿವೆ. ಗುಂಡುಗಳುಳ್ಳದ್ದು ಗುಂಡಡ್ಡಿಗೆ, ಗೆಜ್ಜೆ ಯುಳ್ಳದ್ದು ಗೆಜ್ಜೆ ಅಡ್ಡಿಗೆ.

ಅಗಲಡ್ಡಿಗೆ : ರಾಜ ವೇಷ ಮತ್ತು ಪುಂಡು ವೇಷಗಳಿಗೆ ಎದೆ ಪದಕದ ಮೇಲೆ ಗುಂಡಡ್ಡಿಗೆ ಕೆಳಗೆ ಕಟ್ಟುವ ಆಭರಣ. ಒಂದಿಂಚು ಅಗಲದ ಅರ್ಧಚಂದ್ರಾಕೃತಿಯಲ್ಲಿರುವ ಆಭರಣ ಇದು.

ತುಂಡು ಸೋಗೆವಲ್ಲಿ : ಪಗಡಿ ವೇಷಗಳಿಗೆ ಮುಂಭಾಗದಲ್ಲಿ ಸೊಂಟದಿಂದ ಇಳಿ ಬಿಡುವ ಬಟ್ಟೆಯ ತುಂಡುಗಳು. ಇವು ಎರಡಿದ್ದು ಒಂದೇ ದಾರದಲ್ಲಿ ಬಂಧಿಸಲಾಗಿರುತ್ತದೆ. ಇದಕ್ಕೆ ಸೋಗೆವಲ್ಲಿಯ ಹಾಗೆಯೇ ಬಣ್ಣದ ಗೋಟುಗಳಿವೆ.

ಜಾಕೆಟ್ : ಮಧು ಕೈಟಭರಂತಹ ನಾಟಕೀಯ ವೇಷಗಳಿಗೆ ಜಾಕೆಟನ್ನು ಬಳಸುತ್ತಾರೆ. ಇದನ್ನು ವೆಲ್ವೆಟ್ ಬಟ್ಟೆಯಲ್ಲಿ ಹೊಲಿದು ಭುಜದ ಮೇಲೆ ಮೂರು, ನಾಲ್ಕು ಅಂಗುಲ ಅಂತರದಲ್ಲಿ ಅಗಲವಾದ ಆಯತಾಕಾರದ ಪಟ್ಟಿಗಳಿದ್ದು ಅದಕ್ಕೆ ಜಾಲರಿಯನ್ನು ಹೊಲಿಯ ಲಾಗುತ್ತದೆ. ಹಿಂದಿನ ಕಾಲದಲ್ಲಿ ಜಾಕೆಟ್ಟಿನ ಬಳಕೆಯಿದ್ದಿರಲಿಲ್ಲ. ಇದು ನಾಟಕೀಯ ಪ್ರಭಾವದಿಂದಾಗಿ ಯಕ್ಷಗಾನದಲ್ಲಿ ನುಸುಳಿಕೊಂಡಿದೆ.

ಬೆರಿ ಸಾಲು : ಇದು ಕೂಡ ನಾಟಕೀಯ ವೇಷಗಳ ಹಿಂಬದಿಗೆ ಬೆನ್ನಿನ ಮೇಲೆ ಇಳಿ ಬಿಡುವ ಶಾಲಿನಂತಹ ಬಟ್ಟೆ. ಈ ಶಾಲಿನ ಮೇಲ್ಬದಿಗೆ ಕಾಣುವಂತೆ ನೆರಿಯ ಫ್ರಿಲ್ಲನ್ನು ಹೊಲಿಯಲಾಗುತ್ತದೆ.

ನೆರಿ : ಪುಂಡು ಮತ್ತು ನಾಟಕೀಯ ರಾಜ ವೇಷಗಳಿಗೆ ಬಾಲ್‌ಮುಂಡಿನ ಬದಲಿಗೆ ಸೊಂಟದ ಸುತ್ತ ಕಟ್ಟುವ ವಸ್ತ್ರ. ಈ ನೆರಿಯ ಕೆಳ ಅಂಚಿಗೆ ಆರು ಇಂಚು ಅಗಲದ ಬಣ್ಣದ ಗೋಟನ್ನು ಹೊಲಿಯಲಾಗುತ್ತದೆ.

ದೇವಿ ನೆರಿ : ದೇವಿ ಪಾತ್ರಕ್ಕೆ ಅಗಲ ಲಂಗದ ಐದಾರು ಬಣ್ಣಗಳಿರುವ ಎಂಟು ಅಥವಾ ಹತ್ತು ಇಂಚು ಅಗಲದ ಫ್ರಿಲ್ಲ್‌ಗಳನ್ನು ಹೊಲಿದು ತಯಾರಿಸಿದ ನೆರಿಯನ್ನು ಉಪಯೋಗಿಸ ಲಾಗುತ್ತದೆ. 

ಟೋಪನ್ : ಸ್ತ್ರೀ ವೇಷ, ಮುನಿ ವೇಷ, ನಾಟಕೀಯ ಪುಂಡು ಹಾಗೂ ರಾಜ ವೇಷಗಳಿಗೆ ಟೋಪನ್‌ಗಳನ್ನು ಬಳಸಲಾಗುತ್ತದೆ. ಬಿಳಿ ಟೋಪನ್‌ಗಳು ಕೂಡ ಬಳಕೆಯಲ್ಲಿವೆ. ಸ್ತ್ರೀ ಪಾತ್ರಗಳಿಗೆ ಚವಲಿ ಬಳಸುವ ಸಂಪ್ರದಾಯವಿದೆ.

ಬಟ್ಟೆಯ ಶಾಲು (ಪೀಸು) : ಮುನಿ ವೇಷ, ನಾಟಕೀಯ ವೇಷ ಹಾಗೂ ಮೈಬಿಟ್ಟ ವೇಷಗಳಿಗೆ ಈ ಬಟ್ಟೆಯ ಸಾಲುಗಳನ್ನು ಉಪಯೋಗಿಸಲಾಗುತ್ತದೆ.

ಚೋಲೆಗಳು : ಹನುಮಂತ (ಹಸಿರು) ಜಾಂಬವಂತ (ಬಿಳಿ) ಸಿಂಹ (ಕೇಸರಿ) ಹುಲಿ (ಪಟ್ಟೆಗಳಿರುವ ಬಟ್ಟೆ) ಕರಡಿ (ಕಪ್ಪು) ಇತ್ಯಾದಿ ಪಾತ್ರಗಳಿಗೆ ಇಜಾರು ಮತ್ತು ಅಂಗಿಗಳಿರುವ ಚೋಲೆಗಳನ್ನು ಉಪಯೋಗಿಸಲಾಗುತ್ತದೆ.

ಕೊರಳಿನ ಹಾರ : ರಾಜ ಮತ್ತು ಪುಂಡು ವೇಷಗಳಿಗೆ ದೊಡ್ಡ ಗುಂಡುಗಳಿರುವ ಹಾರಗಳನ್ನು ಬಳಸಿದರೆ, ಸ್ತ್ರೀ ವೇಷಗಳಿಗೆ ಚಿಕ್ಕ ಮಣಿಗಳ ಸರವನ್ನು ಬಳಸಲಾಗುತ್ತದೆ. ಹಾಗೂ ಮದುವೆಯಾದ ಸ್ತ್ರೀ ಪಾತ್ರಗಳು ಕರಿಮಣಿ ಹಾರವನ್ನು ಧರಿಸುತ್ತವೆ. 

ರುದ್ರಾಕ್ಷಿ ಆಭರಣಗಳು : ಮುನಿ ಮತ್ತು ಈಶ್ವರ ಪಾತ್ರಗಳಿಗೆ ರುದ್ರಾಕ್ಷಿಯ ಮಾಲೆಯನ್ನು ಧರಿಸಲಾಗುತ್ತದೆ. ಕೈಕಟ್ಟು, ತೋಳ್ಕಟ್ಟು ಮತ್ತು ಸೊಂಟ ಡಾಬುಗಳಿಗೆ ರುದ್ರಾಕ್ಷಿಯನ್ನು ಹೊಲಿದು ಆಭರಣಗಳನ್ನಾಗಿ ಮಾಡಿ  ಧರಿಸುವ ಕ್ರಮವೂ ಇದೆ.  

ಮೀಸೆ : ಮೀಸೆಗಳಲ್ಲಿ ಮೂರು ವಿಧ. ಕಟ್ಟುವ ಮೀಸೆ, ಬರೆಯುವ ಮೀಸೆ ಹಾಗೂ ಹಚ್ಚುವ ಮೀಸೆ. ಕಟ್ಟುವ ಮೀಸೆ ಕಿರೀಟ ವೇಷಗಳಿಗೆ ಮೂಗಿನ ಅಡಿಯಿಂದ ಕಿವಿಯವರೆಗೆ ಇರುತ್ತದೆ. ಇದರ ದಾರವನ್ನು ತಲೆಯ ಹಿಂಬದಿಗೆ ಕಟ್ಟುವರು. ಬರೆಯುವ ಮೀಸೆಗಳು ಕೋಡಂಗಿ, ಹಾಸ್ಯಗಾರರ ಪಾತ್ರಗಳಿಗೆ ಮಾತ್ರ. ಕಪ್ಪು ಅಥವಾ ಬಿಳಿಯ ಮೀಸೆಗಳನ್ನು ಬರೆಯಲಾಗುತ್ತದೆ. ಹಾಸ್ಯಗಾರನಿಗೆ ಮೂಗಿಗೆ ಸಿಕ್ಕಿಸುವ ಮೀಸೆ ಹಾಗೂ ತೆಂಗಿನ ನಾರಿನ ಹಚ್ಚುವ ಮೀಸೆಯೂ ಬಳಕೆಯಲ್ಲಿತ್ತು. ಈಗ ಹಚ್ಚುವ ಮೀಸೆಯೆಂದರೆ ಆಧುನಿಕ ಕ್ರೇಪ್ ಹೇರನ್ನು ಬಿಡಿಸಿ ಬೇಕಾದ ಆಕಾರ ಕೊಟ್ಟು ಸ್ಪಿರಿಟ್‌ಗಮ್‌ನಿಂದ ಅಂಟಿಸಲಾಗುತ್ತದೆ. ಉಲ್ಲನ್ ಮತ್ತು ಚಾರಿಯ ಮೀಸೆಗಳು ಪರಂಪರೆಯ ಮೀಸೆಗಳಾಗಿವೆ.

ಗಡ್ಡ  : ಮುನಿ ಪಾತ್ರಗಳಿಗೆ ಹಾಗೂ ರಾಜ ಮತ್ತು ಬಣ್ಣದ ವೇಷಗಳಿಗೆ ಬಿಳಿ ಅಥವಾ ಕಪ್ಪು ಗಡ್ಡಗಳನ್ನು ಬಳಸಲಾಗುತ್ತದೆ.

ಕರ್ಣಪತ್ರ : ಕಿವಿ ಕಾಣದಂತೆ ಕಿವಿಯ ಬುಡದಿಂದ ಕಿರೀಟದ ಬುಡದವರೆಗೆ ಎರಡು ಬದಿಗಳಲ್ಲಿ ಕಟ್ಟಿ ತೂಗಿಸುವ ಆಭರಣ. ಇದನ್ನು ಮರದಿಂದ ನಿರ್ಮಿಸಲಾಗುತ್ತದೆ. ಕರ್ಣಪತ್ರದ ಮೇಲೆ ಮತ್ತು ಕೆಳಗೆ ಎರಡು ಪದ್ಮದ ಆಕಾರವಿರುತ್ತದೆ. ಇದಕ್ಕೆ ಕಪ್ಪು ಬಣ್ಣದ ದಾರ ಅಥವಾ ಉಣ್ಣೆಯ ಅಂಚು ಅಥವಾ ಗೊಂಡೆ ಇರುತ್ತದೆ.

ಓಲೆ : ಬಣ್ಣದ ವೇಷಗಳ ಕರ್ಣ ಪತ್ರಗಳನ್ನು ಓಲೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಗಾತ್ರದಲ್ಲಿ ದೊಡ್ಡದಾಗಿದ್ದು ಉರುಟಾಗಿರುತ್ತದೆ. ಕರ್ಣಪತ್ರ ಮತ್ತು ಓಲೆಗಳ ದಾರವು ಗದ್ದದ ಅಡಿಯಲ್ಲಿ ಕುತ್ತಿಗೆಯ ಮೇಲ್ಭಾಗದಲ್ಲಿ ನಿಲ್ಲುತ್ತವೆ. ಇದರ ಕಟ್ಟುವ ಗಂಟು ನೆತ್ತಿಯ ಮೇಲಕ್ಕೆ ಬರುತ್ತದೆ.

ಕೇಸರಿ : ರಾಜ ಮತ್ತು ಬಣ್ಣದ ವೇಷಗಳ ಕಿರೀಟದ ಹಿಂಬದಿಯಲ್ಲಿ ಸೊಂಟದವರೆಗೆ ಇಳಿ ಬಿಟ್ಟಿರುವ ಕೂದಲು. ಇದನ್ನು ಹಿಂದೆ ದಡ್ಡಾಲ, ಪರಂಗಿ ಗಿಡ, ಬೆಂಡೆಕಾಯಿ ಗಿಡದ ಕಾಂಡ ಇತ್ಯಾದಿಗಳನ್ನು ಕೊಳೆ ಹಾಕಿ ಸಿಗುವ ನಾರಿನಿಂದ ತಯಾರಿಸಲಾಗುತ್ತಿತ್ತು ಎಂದು ತಿಳಿದುಬರುತ್ತದೆ. ಸಿಂಹದ ಕೇಸರವನ್ನು ನೆನೆದು ಈ ಹೆಸರಿನಿಂದ ಗುರುತಿಸಿರಬಹುದು.

ಕೆನ್ನೆಪೂ : ಕಿವಿಯ ಮೇಲ್ಭಾಗದಲ್ಲಿ ನಿಲ್ಲುವಂತೆ ಕರ್ಣಪತ್ರದ ಬದಿಗೆ ತುರುಕಿಸುವ ಒಂದು ಆಭರಣ. ಇದು ದೀಪಶಿಖಾಕೃತಿಯಲ್ಲಿದ್ದು ಇದನ್ನು ಸಿಕ್ಕಿಸಲು ಕಡ್ಡಿ ಇರುತ್ತದೆ.

ಚೆನ್ನೆಪೂ : ಕಿವಿಯ ಮೇಲ್ಗಡೆ ಕರ್ಣಪತ್ರದ ಒಳಗಿನಿಂದ ಸಿಕ್ಕಿಸುವ ಚಕ್ರದಂತಹ ಆಭರಣ. ಇದನ್ನು ಸಿಕ್ಕಿಸಿಡಲು ಕಡ್ಡಿಯಿರುತ್ತದೆ.

ಈಗ ಕೆನ್ನೆಪೂ ಮತ್ತು ಚೆನ್ನೆಪೂ ಜೋಡಣೆಯಾಗಿದ್ದು ಕೆನ್ನೆಪೂ ಎಂಬ ಒಂದೇ ಆಭರಣ ಬಳಕೆಯಲ್ಲಿದೆ.

ಕೈಬಳೆ : ಮರದ ಬಳೆಗಳು. ಬಣ್ಣಗಳನ್ನು ಲೇಪಿಸಿ ವಿವಿಧ ಬಣ್ಣಗಳ ಬಳೆಗಳನ್ನು ತಯಾರಿಸಲಾಗುತ್ತದೆ. ಸ್ತ್ರೀ ಪಾತ್ರಕ್ಕೆ ಈ ಬಳೆಗಳನ್ನು ಉಪಯೋಗಿಸಲಾಗುತ್ತದೆ.

ಇವಿಷ್ಟು ಯಕ್ಷಗಾನದ ಪುರುಷ ಪಾತ್ರಗಳ  ವೇಷ ಪರಿಕರಗಳು. ಇವುಗಳನ್ನು ಆಯಾ ಪಾತ್ರದ ಗಾತ್ರ, ಸ್ವಭಾವ, ಗುಣ ಧರ್ಮಗಳನ್ನು ಅನುಸರಿಸಿ ಬಳಸುತ್ತಾರೆ. ಹಾಸ್ಯ ಪಾತ್ರಗಳಿಗೆ ಧರಿಸುವ ನೆರಿಗೆಯುಳ್ಳ ಬಿಳಿ ಅಂಗಿ, ಹಾಸ್ಯ ವೇಷದ ಇಜಾರ ಇತ್ಯಾದಿಗಳೂ ಇರುತ್ತವೆ.

ಸ್ತ್ರೀವೇಷಗಳಿಗೆ ಇಂತಹ ವೇಷ ಪರಿಕರಗಳಿರುವುದಿಲ್ಲ. ಅವುಗಳಿಗೆ ಆಧುನಿಕ ಸ್ತ್ರೀಯರ ವೇಷ ವಿಧಾನಗಳನ್ನು ಬಳಸಲಾಗುತ್ತದೆ. ಕಾಲಿಗೆ ಗೆಜ್ಜೆ, ಕೈಗೆ ಬಳೆಗಳು, ಕಂಟಿ, ಗುಂಡು ಮಣಿ ಸರ, ಚೂಡಾಮಣಿ, ಓಲೆ ಸರಪಳಿ, ಮುಂದಲೆ ಬೊಟ್ಟು ಇತ್ಯಾದಿಗಳನ್ನು ಧರಿಸಿದರೆ ಸ್ತ್ರೀ ವೇಷಗಳು ಸಿದ್ಧವಾಗುತ್ತವೆ. ಸೀರೆ, ಲಂಗ, ರವಕೆ, ಮೊಲೆ ಚೆಂಡು ಅಥವ ಮೊಲೆಕಟ್ಟು ಇತ್ಯಾದಿಗಳು ಸ್ತ್ರೀ ವೇಷದ ವಸ್ತುಗಳಾಗಿವೆ.

ಹಾಸ್ಯದ ಬಟ್ಟೆ  : ಹಾಸ್ಯ ಪಾತ್ರಗಳಿಗೆ ಬಿಳಿ, ಕಪ್ಪು ಮತ್ತು ಇತರೆ ಬಣ್ಣ ಬಣ್ಣದ ಪ್ಯಾಂಟು ಮತ್ತು ಉದ್ದ ಅಂಗಿಗಳನ್ನು ಉಪಯೋಗಿಸಲಾಗುತ್ತದೆ. ಟೊಪ್ಪಿ, ವಾಸ್‌ಕೋಟು, ಬಟ್ಟೆಯ ತುಂಡುಗಳನ್ನು ಹಾಸ್ಯ ಪಾತ್ರಕ್ಕೆ ಉಪಯೋಗಿಸಲಾಗುತ್ತದೆ.

ಚಿಟ್ಟೆ ಪಟ್ಟಿ : ಬಣ್ಣ ಬರೆಯಲು ಕುಳಿತುಕೊಳ್ಳುವಾಗ ಕಟ್ಟುವ ಬಟ್ಟೆಯ ಪಟ್ಟಿ. ಶಿರೋಭೂಷಣವನ್ನು ಕಟ್ಟುವಾಗ ಇದೇ ಚಿಟ್ಟೆ ಪಟ್ಟಿಯನ್ನು ಬಿಚ್ಚಿ ತಲೆಯ ಹಿಂಭಾಗದ ಚಿಟ್ಟೆ ಪಟ್ಟಿಯನ್ನು ತಂದು ಹಣೆಯ ಮೇಲ್ಭಾಗದಲ್ಲಿ ಗಂಟು ಹಾಕಿಕೊಳ್ಳಲಾಗುತ್ತದೆ. ಈ ಗಂಟಿನ ಜತೆಗೆ ಕೂದಲಿದ್ದರೆ ತಲೆಯ ಕೂದಲನ್ನು ಸೇರಿಸಿ ಬಿಗಿಯಾಗಿ ನೂಲು ಸುತ್ತಿ ಗಂಟು ಹಾಕಿ ಉಂಡೆಯಂತೆ ಮಾಡಲಾಗುತ್ತದೆ. ಅದರ ಮೇಲೆ ಮತ್ತೆ ಪಟ್ಟಿಯನ್ನು ಹಾಕಿ  ತಲೆಯ ಹಿಂಭಾಗದಲ್ಲಿ ಮುಡಿಯ ಭಾಗದಲ್ಲಿ ಗಂಟು ಹಾಕಿ ಅಲ್ಲಿಯೂ ಕೂದಲು ಸೇರಿಸಿ ಉಂಡೆಯಂತೆ ಮಾಡಲಾಗುವುದು. ತಲೆಯಲ್ಲಿ ಹಣೆಯ ಮೇಲ್ಭಾಗದಲ್ಲಿ ಮತ್ತು ಹಿಂದೆ ಮುಡಿಯ ಹಿಂಭಾಗದಲ್ಲಿ ಚಿಟ್ಟೆಪಟ್ಟಿಯ ಉಂಡೆಯಂತಿರುವ ಎರಡು ಗಂಟುಗಳಿರುತ್ತವೆ. ಇವು ಕಿರೀಟ ನಿಲ್ಲಲು ಆಧಾರವಾಗಿರುತ್ತವೆ.

ಆಭರಣ ಸಲಕರಣೆಗಳು

ಯಕ್ಷಗಾನದ ಆಭರಣ ತಯಾರಿಕೆಯಲ್ಲಿ ಬಳಸುವ ಸಲಕರಣೆಗಳು ಪ್ರಾದೇಶಿಕ ವಿಶಿಷ್ಟವಾದವುಗಳೇ ಆಗಿವೆ. ಸಮಕಾಲೀನವಾದ ಲಭ್ಯ ಸಲಕರಣೆಗಳೇ ಅನೇಕ ಸಂದರ್ಭಗಳಲ್ಲಿ ಯಕ್ಷಗಾನದ ಆಹಾರ್ಯವನ್ನು ಅಲಂಕರಿಸಿದೆ. ಪ್ರಾಚೀನ ಸಂಪ್ರದಾಯದಲ್ಲಿ ಯಕ್ಷಗಾನದ ವೇಷಭೂಷಣಗಳೆಲ್ಲ ಮಣಿ ಭೂಷಣಗಳೇ ಆಗಿದ್ದುವು. ಜೊತೆಗೆ ಮರದ ಸಾಮಗ್ರಿಗಳು ಕೂಡ ಇದ್ದವು. ಈಗ ಮಣಿಯ ಭೂಷಣಗಳು ಕಡಿಮೆಯಾಗಿದ್ದು ಮರದ ಸಾಮಗ್ರಿಗಳಿಂದ ಮಾಡಿದ ಭೂಷಣಗಳೇ ಹೆಚ್ಚಾಗಿವೆ. ಆಭರಣಗಳ ತಯಾರಿಕೆಗೆ ಬಳಸುವ ಮರಗಳು ಕೆಲವು ವಿಶಿಷ್ಟ ಗುಣಗಳಿಂದ ಕೂಡಿರಬೇಕಾಗುತ್ತದೆ. ಅವು ಹಗುರವಾಗಿರಬೇಕು, ಸೂಕ್ಷ್ಮವಾದ, ನವಿರಾದ ಕೆತ್ತನೆಗಳಿಗೆ ಒಗ್ಗುವಂತಿರಬೇಕು. ಕೆತ್ತನೆಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಬಿರುಕು ಬಿಡುವ ಅಥವಾ ಒಡೆದು ಹೋಗುವ ಗುಣವನ್ನು ಹೊಂದಿದ ಮರಗಳನ್ನು ಉಪಯೋಗಿಸುವಂತಿಲ್ಲ. ಸಾಕಷ್ಟು ವರ್ಷ ಬಾಳಿಕೆ ಬರುವಂತಿರುವುದೂ ಮುಖ್ಯ. ಇಂತಹ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕೆಲವೊಂದು ಜಾತಿಯ ಮರಗಳನ್ನು ಆಭರಣಗಳ ತಯಾರಿಕೆಗೆ ಬಳಸಲಾಗುತ್ತದೆ. ಕಮ್ಟೆ, ಹಾಲೆ, ಹಾಲವಾಣ, ಅತ್ತಿ, ಕೊಂಡಮಾವು, ಕುಂಬಳ ಮೊದಲಾದ ಮರಗಳ ಕಾಂಡಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಕೆಲವೊಮ್ಮೆ ಹಲಸು, ಸಾಗುವಾನಿ ಮೊದಲಾದ ಮರಗಳ ಕಾಂಡಗಳ ಬಳಕೆಯೂ ಇದೆ.

ಅಂಗಡಿಯಲ್ಲಿ ದೊರೆಯುವ ಬೇಗಡೆಯನ್ನು ಮರದ ಆಭರಣಗಳ ಮೇಲೆ ಅಂಟಿನಿಂದ ಹಚ್ಚಿ ಅಲಂಕಾರಗೊಳಿಸುತ್ತಾರೆ. ಬೇಗಡೆಯು ಮಾರುಕಟ್ಟೆಯಲ್ಲಿ ದೊರೆಯುವ ವಸ್ತು. ಹಿಂದೆ ಸೀಸದಿಂದ ತಯಾರಿಸಿದ ಬೇಗಡೆಗಳನ್ನು ಬಳಸಲಾಗುತ್ತಿತ್ತು. ಈಗ ಅಲ್ಯೂಮಿನಿಯಂ ನಿಂದ ತಯಾರಿಸಿದ ಬೇಗಡೆಗಳನ್ನು ಬಳಸಲಾಗುತ್ತದೆ. ಇದು ತೆಳುವಾದ ಹಾಳೆಯಾದ ಕಾರಣ ಇವುಗಳನ್ನು ತುಂಡುಮಾಡಿ ಹಚ್ಚುವುದು ಸುಲಭ. ಚಿನ್ನದ ಬಣ್ಣದ ಹಾಗೂ ಬೆಳ್ಳಿಯ ಬಣ್ಣದ ಬೇಗಡೆಗಳು ದೊರೆಯುತ್ತವೆ. ಹಾಗಾಗಿ ಮರದ ಆಭರಣವು ಚಿನ್ನದ ಅಥವಾ ಬೆಳ್ಳಿಯ ಆಭರಣವಾಗಿ ಗೋಚರಿಸುವಂತೆ ಮಾಡುವುದು ಸುಲಭ.

ಆಭರಣಗಳ ತಯಾರಿಕೆಯಲ್ಲಿ ನೈಸರ್ಗಿಕ ಅಂಟುಗಳ ಬಳಕೆ ಇತ್ತು. ಈಗ ಫೆವಿಕಾಲ್ ನಂತಹ ಮಾರುಕಟ್ಟೆಯ ಅಂಟುಗಳ ಬಳಕೆಯು ರೂಢಿಗೆ ಬಂದಿದೆ. ಆದರೂ ಆಭರಣದ ಬಾಳಿಕೆ ಮತ್ತು ಸೌಂದರ್ಯದ ದೃಷ್ಟಿಯಿಂದ ನೈಸರ್ಗಿಕ ಅಂಟುಗಳ ಬಳಕೆಯೇ ಹೆಚ್ಚು ಪ್ರಚಲಿತದಲ್ಲಿದೆ. ರಾಸಾಯನಿಕ ಅಂಟುಗಳಲ್ಲಿ ಅಂಟಿಸಿದ ಬೇಗಡೆಗಳನ್ನು ಮತ್ತೆ ಕಿತ್ತು ಹಚ್ಚಲು ಬರುವುದಿಲ್ಲ. ಇವುಗಳಿಗೆ ಅನುಕೂಲವಾಗುವಂತೆ ಹಲಸಿನ ಮೇಣ, ಗೇರುಮರದ ಮೇಣ ಜೇನುಮೇಣ ಅಥವಾ ಇವೆಲ್ಲವುಗಳ ಮಿಶ್ರಣವನ್ನು ಅಂಟಿನ ರೂಪದಲ್ಲಿ ಬಳಸಲಾಗುತ್ತದೆ. ಧೂಪದ ರಾಳವನ್ನು ಸ್ಪಿರಿಟ್‌ನೊಂದಿಗೆ ಬೆರೆಸಿ ಅಂಟನ್ನು ಸಿದ್ಧಮಾಡು ವುದೂ ಇದೆ. ಆಭರಣ ತಯಾರು ಮಾಡುವವರೇ ಈ ಅಂಟನ್ನು ಕೂಡ ತಯಾರಿಸಿ ಕೊಳ್ಳುತ್ತಾರೆ. ಸಾಮಾನ್ಯವಾಗಿ ಅಂಟು ತಯಾರಿಸುವ ಒಂದು ವಿಧಾನವೆಂದರೆ ಮುಕ್ಕಾಲು ಭಾಗ ಜೇನುಮೇಣ, ಕಾಲು ಭಾಗ ಹಲಸಿನ ಮೇಣವನ್ನು ದಪ್ಪನೆಯ ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಕುದಿಸಬೇಕು. ಕುದಿಸಿದಾಗ ಮೇಣಗಳು ಪರಸ್ಪರ ಒಂದಾಗಿ ಬಂಧ ಏರ್ಪಡುತ್ತದೆ. ಹೀಗೆ ಸಿದ್ದಗೊಂಡ ಮಿಶ್ರಣಕ್ಕೆ ಸ್ವಲ್ಪ ಎಣ್ಣೆಯನ್ನು ಸೇರಿಸಿ ಬಳಸಬಹುದು. ಇಂತಹ ನೈಸರ್ಗಿಕವಾದ ಮೇಣದ ಬಳಕೆಯಿಂದ ಮರವು ಕೆಡುವುದಿಲ್ಲ.

ಬಿಡಿಬಿಡಿಯಾದ ಆಭರಣಗಳನ್ನು ಒಂದಕ್ಕೊಂದು ಜೋಡಿಸಲು ದಾರಗಳನ್ನು ಬಳಸುತ್ತಾರೆ ಇದಕ್ಕಾಗಿ ನೈಲಾನ್ ಅಥವಾ ನಾರಿನ ದಾರಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ.

ಇವಲ್ಲದೆ ಗೊಂಡೆಗಳನ್ನು ತಯಾರಿಸಲು ಕುರಿಯ ಉಣ್ಣೆಯನ್ನು ಅಥವಾ ಉಲ್ಲನ್‌ನನ್ನು ಬಳಸಲಾಗುತ್ತದೆ. ಅಲಂಕಾರಕ್ಕಾಗಿ ಬೆತ್ತ, ನವಿಲುಗರಿಯ ಹೀಲಿ, ಪ್ಲಾಸ್ಟಿಕ್ ಮಣಿಗಳು ಅಲಂಕಾರಿಕ ತಗಡಿನ ಬಿಲ್ಲೆಗಳು ಮೊದಲಾದವುಗಳನ್ನು ಬಳಸಲಾಗುತ್ತದೆ. ಕೇಸರವನ್ನು ಸಿದ್ಧಪಡಿಸಲು ದಡ್ಡಾಲದ ಎಲೆಯನ್ನು ನೀರಿನಲ್ಲಿ ಕೊಳೆ ಹಾಕಿದ ಬಳಿಕ ಉಳಿಯುವ ನಾರುಗಳಿಂದ ಸಿದ್ಧಪಡಿಸಲಾಗುತ್ತದೆ. ಬಿಳಿಯ ಬಣ್ಣದ ಈ ನಾರುಗಳು ನರೆಗೂದಲುಗಳನ್ನು ಹೋಲುತ್ತವೆ. ಬಣ್ಣವನ್ನು ಲೇಪಿಸಿ ಕಪ್ಪು ಕೇಸರವನ್ನು ತಯಾರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೆಲವೊಮ್ಮೆ ಬೆಂಡೆಕಾಯಿಯ ಗಿಡದ ನಾರಿನಿಂದಲೂ ಕೇಸರವನ್ನು ಸಿದ್ಧಪಡಿಸ ಲಾಗುತ್ತಿತ್ತಂತೆ. ಈಗೀಗ ಬಟ್ಟೆಯಿಂದ ಹೊಲಿದ ಕೂದಲಿನ ಕೇಸರಿಯನ್ನು ಉಪಯೋಗಿಸ ಲಾಗುತ್ತದೆ.

ಆಭರಣಗಳಲ್ಲಿ ಫಯರ್ ಪಾಲಿಶ್ ಗ್ಲಾಸನ್ನು ಬಳಸಲಾಗುತ್ತದೆ. ಇದು ಕನ್ನಡಿಯಂತೆ ಹೊಳೆಯುವ ವಸ್ತು. ಸುಲ್ತಾನರ ದೌಲತ್ತಿನ ಸಂಕೇತವಾಗಿ ಅರಮನೆಯಲ್ಲಿ ಕಾಣುತ್ತಿದ್ದ ಝೂವರ್‌ಗಳು (ಗೊಂಚಲು ದೀಪ) ಇವೇ ಅಲಂಕಾರಿಕ ಗಾಜಿನವುಗಳು. ಇವುಗಳ ಸಣ್ಣ ತುಣುಕುಗಳನ್ನು ಇಂದಿಗೂ ಕೂಡ ಯಕ್ಷಗಾನದ ವೇಷಭೂಷಣಗಳಲ್ಲಿ ಬಳಸಲಾಗುತ್ತದೆ. ಹೈದರಾಬಾದಿನ ಸಮೀಪದ ಕರೀಂ ನಗರದಿಂದ ಇದನ್ನು ತರಿಸಿಕೊಳ್ಳಲಾಗುತ್ತಿದೆ. ಒಂದು ಮಿಲ್ಲಿ ಮೀಟರಿಗಿಂತಲೂ ಕಡಿಮೆ ದಪ್ಪ ಇದ್ದು ಸುಲಭವಾಗಿ ಮೇಣದಿಂದ ಅಂಟಿಸಬಹುದು. ಸಾಧಾರಣ ಕತ್ತರಿಯಲ್ಲಿ ಇವುಗಳನ್ನು ಬೇಕಾದ ಆಕಾರಕ್ಕೆ ತುಂಡರಿಸಿಕೊಳ್ಳಬಹುದು. ಬಹಳ ವರ್ಷಗಳವರೆಗೆ ದರ್ಪಣ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಗುಣ ಇದಕ್ಕಿದೆ. ಸಾಧಾರಣ ಗಾಜಿಗೆ ಬಳಸುವ ಪಾದರಸಕ್ಕಿಂತಲೂ ಇದಕ್ಕೆ ವಿಶೇಷವಾದ ಪಾದರಸ ಮತ್ತು ಸೀಸದ ಲೇಪನವಿರುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಇದರ ಬಳಕೆ ಯಕ್ಷಗಾನದಲ್ಲಿ ರೂಢಿಗೆ ಬಂದಿದೆ. ಸಾಮಾನ್ಯ ಕನ್ನಡಿಯನ್ನು ಬಳಸಿದರೆ ವೇಷಗಳು ಪ್ರತಿಫಲನದ ಮೂಲಕ ಪ್ರೇಕ್ಷಕನ ಕಣ್ಣುಗಳಿಗೆ ಅಡ್ಡಿ ಉಂಟುಮಾಡಬಲ್ಲವು. ಫಯರ್ ಪಾಲಿಶ್ ಗ್ಲಾಸುಗಳು ಗೋಲಾಕಾರದ ಬುರುಡೆಯ ಸಣ್ಣ ತುಣುಕುಗಳು. ಅವು ಉಬ್ಬಿರುವುದರಿಂದ ಅವುಗಳ ಮೂಲಕ ಪ್ರತಿಫಲನ ಗೊಂಡ ಬೆಳಕು ಚದುರಿ ಹೋಗುತ್ತವೆ. ಇವುಗಳ ಆಭರಣಗಳು ವಜ್ರದ ಹರಳುಗಳಂತೆ ಶೋಭಿಸುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ಫಯರ್ ಪಾಲಿಶ್ ಗ್ಲಾಸು ಯಕ್ಷಗಾನದ ವೇಷಭೂಷಣದಲ್ಲಿ ಜಾಗ ಪಡೆದಿದೆ. ಆದರೆ ಪ್ರಾಚೀನ ಕಾಲದಲ್ಲಿ ಜೀರುಂಡೆಯ ರೆಕ್ಕೆಯ ಭಾಗವನ್ನು ಇದರ ಜಾಗದಲ್ಲಿ ಬಳಸಲಾಗುತ್ತಿತ್ತು. ಇಂದು ಅವುಗಳನ್ನು ಸಂಗ್ರಹಿಸುವ ಕೆಲಸ ಪರಿಶ್ರಮದಾಯಕವಾದುದು. ಈ ಕಾರಣಕ್ಕಾಗಿ ಆಧುನಿಕ ಲಭ್ಯ ಸಾಮಗ್ರಿಯಾದ ಫಯರ್ ಪಾಲಿಶ್ ಗ್ಲಾಸು ಹೆಚ್ಚು ಪ್ರಚಲಿತದಲ್ಲಿದೆ.