ಯಕ್ಷಗಾನದ ಪೂರ್ವರಂಗವು ಅನೇಕ ನಿರ್ದಿಷ್ಟ ವೇಷಗಳಿಂದ ಕೂಡಿದ್ದು, ಅವು ಪ್ರದರ್ಶನದ ನಿಗದಿತ ಸಮಯದಲ್ಲಿ ಕುಣಿಯುತ್ತವೆ. ಪೂರ್ವರಂಗದ ವೇಷಗಳನ್ನು ಕ್ರಮವಾಗಿ ಹೀಗೆ ದಾಖಲಿಸಬಹುದು. ಕೋಡಂಗಿ ವೇಷಗಳು, ಬಾಲಗೋಪಾಲ ವೇಷಗಳು, ಷಣ್ಮುಖ ಸುಬ್ರಾಯ ವೇಷ, ಅರ್ಧನಾರಿ ವೇಷ, ಮುಖ್ಯ ಸ್ತ್ರೀವೇಷ, ಹೊಗಳಿಕೆಯ ವೇಷ ಮತ್ತು ಪೀಠಿಕೆ ಸ್ತ್ರೀವೇಷ(ಕಚ್ಚೆ ಸ್ತ್ರೀವೇಷ). ಈ ವೇಷಗಳು ನಿತ್ಯವೂ ರಂಗಸ್ಥಳಕ್ಕೆ ಬಂದು ಕುಣಿದು ಹೋಗುವ ಸಂಪ್ರದಾಯವಿತ್ತು. ಆದುದರಿಂದ ಇವುಗಳಿಗೆ ನಿತ್ಯವೇಷಗಳೆಂಬ ಹೆಸರೂ ಇದೆ. ಈಗ ಬಾಲಗೋಪಾಲ ವೇಷಗಳನ್ನು ಮಾತ್ರ ಪೂರ್ವರಂಗದಲ್ಲಿ ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಇವುಗಳನ್ನು ಮಾತ್ರ ನಿತ್ಯವೇಷಗಳೆಂದು ಸೀಮಿತ ಅರ್ಥದಲ್ಲಿ ಹೇಳಲಾಗುತ್ತಿದೆ. ಪೂರ್ವರಂಗವು ಹ್ರಸ್ವವಾಗಿದ್ದು, ಕೆಲವು ಮೇಳಗಳಲ್ಲಿ ಪೂರ್ವರಂಗವು ಬಾಲಗೋಪಾಲ, ಸ್ತ್ರೀವೇಷ ಮತ್ತು ಹೊಗಳಿಕೆ ವೇಷಗಳಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ನಿತ್ಯವೇಷ ಎಂಬ ಹೆಸರು ಈ ವೇಷಗಳಿಗೂ ಅನ್ವಯವಾಗುತ್ತದೆ. ಕೊಕ್ಕೆ ಚಿಕ್ಕ, ಮಲಯಾಳ ಮಂತ್ರವಾದಿ ಮೊದಲಾದ ಹಾಸ್ಯ ಪಾತ್ರಗಳೂ ಹಿಂದೆ ಪೂರ್ವರಂಗದ ವೇಷ ಗಳಾಗಿದ್ದುವು ಎಂದು ಹಿರಿಯರು ಹೇಳುತ್ತಾರೆ.

ಯಕ್ಷಗಾನ ಪ್ರಸಂಗಗಳು ಆರಂಭವಾಗುವುದಕ್ಕೆ ಮೊದಲು ಸಾಂಪ್ರದಾಯಕವಾದ ಸಭಾ ಲಕ್ಷಣಗಳಿವೆ. ಇವುಗಳು ಆಚರಣೆಯ ಭಾಗವಾಗಿ ಪರಂಪರಾಗತವಾಗಿ ಉಳಿದುಕೊಂಡು ಬಂದಿವೆ. ಪೂರ್ವರಂಗ ಎನ್ನುವುದು ಕೇವಲ ಆಚರಣೆಯ ಸಂಪ್ರದಾಯ ಆಗಿಲ್ಲ. ಅದಕ್ಕೂ ಮಿಗಿಲಾಗಿ ಯಕ್ಷಗಾನದ ವೇಷಧಾರಿಗಳಿಗೆ ಇದು ತರಬೇತಿ ರಂಗ. ಯಾವುದೇ ಕಲೆ ಇರಲಿ, ಅಲ್ಲಿ ಕಲಾಭ್ಯಾಸಿಗಳಿಗೆ ಪ್ರತ್ಯೇಕವಾದ ತರಬೇತಿ ನೀಡುವ ವ್ಯವಸ್ಥೆ ಇರುತ್ತದೆ. ಅಲ್ಲೆಲ್ಲ ತರಬೇತಿ ಎನ್ನುವುದು ಕೇವಲ ಗುರುಶಿಷ್ಯರಿಗೆ ಮಾತ್ರ ಸೀಮಿತವಾದ ವ್ಯವಸ್ಥೆ ಆಗಿರುತ್ತದೆ. ಆದರೆ ಯಕ್ಷಗಾನದ ಪೂರ್ವರಂಗದಲ್ಲಿ ತರಬೇತಿ ಹೊಂದುವವರು ಗುರುಗಳ ಸೂಚನೆಯ ಮೇರೆಗೆ ಪ್ರೇಕ್ಷಕರ ಮುಂದೆ ಅಭ್ಯಾಸ ಮಾಡಬೇಕಾಗಿತ್ತು. ಇಲ್ಲಿ ಹೇಳಿಕೊಡುವ ಗುರು ಎಂದರೆ ತಂಡದ ಹಿರಿಯ ಹಾಗೂ ಇತರೆ ಸಹ ಕಲಾವಿದರು. ವೇಷಧಾರಿಯಾಗಬೇಕಾದ ಕಲಾವಿದನಿಗೆ ಬಣ್ಣಗಾರಿಕೆ, ನೃತ್ಯ, ಕುಣಿತಗಳ ಅಭ್ಯಾಸಗಳನ್ನು ಮಾಡಲು ಯಕ್ಷಗಾನ ತರಬೇತಿ ಕೇಂದ್ರಗಳು ಹಿಂದೆ ಇದ್ದಿರಲಿಲ್ಲ. ಮೇಳಗಳನ್ನು ಹೊಸದಾಗಿ ಸೇರುವ ಹುಡುಗರು ಮೇಳದ ಸಾಮಾನು ಸರಂಜಾಮುಗಳನ್ನು ಹೊರುವ, ಆಟದ ರಂಗಸ್ಥಳ ಸಿದ್ಧಪಡಿಸುವ ಇತ್ಯಾದಿ ಹತ್ತು ಹಲವು ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಕಲಾಸಕ್ತ ರಾದವರು ಪೂರ್ವರಂಗದಲ್ಲಿ ಒಂದೊಂದೆ ವೇಷಗಳನ್ನು ಧರಿಸಿ, ಕುಣಿದು ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ಕಲಾವಿದರಾಗಿ ರೂಪುಗೊಳ್ಳುತ್ತಿದ್ದರು. ನೋಡಿ, ನೋಡಿದ್ದನ್ನು ಮಾಡುತ್ತಾ ಪ್ರಾಯೋಗಿಕವಾಗಿ ಪೂರ್ವರಂಗದಲ್ಲಿ ತರಬೇತಿ ಹೊಂದಿ ಯಕ್ಷಗಾನದ ಸರ್ವಾಂಗೀಣ ಕಲಾವಿದರಾಗಿ ಹೆಸರು ಮಾಡಿದವರೇ ಅನೇಕರು.

ಹೀಗೆ ಮೇಳಕ್ಕೆ ಹೊಸದಾಗಿ ಬಂದು ಸೇರುವ ಹುಡುಗರು ಕಿರಾತರಂತಹ ಪಾತ್ರಗಳ ಜೊತೆಯಲ್ಲಿ ಬೇಟೆಗಾರರಾಗಿ, ಅತಿಕಾಯ, ಇಂದ್ರಜಿತು ಮೊದಲಾದವರೊಡನೆ ಹೋರಾಡುವ ಕಪಿ ಸೇನೆಯ ಸದಸ್ಯರಾಗಿ ಮುಖಕ್ಕೆ ಬಣ್ಣ ಹಚ್ಚಿ ರಂಗಸ್ಥಳಕ್ಕೆ ಬರುತ್ತಿದ್ದರು. ಕಲಿಕೆಯ ಹಂತಕ್ಕೆ ಬಂದಾಗ ಪೂರ್ವರಂಗದಲ್ಲಿ ಮೊದಲು ಕೋಡಂಗಿ ನಂತರ ಬಾಲಗೋಪಾಲರು, ಸುಬ್ರಾಯ (ಷಣ್ಮುಖ ಸುಬ್ರಾಯ), ಅರ್ಧನಾರಿ ಮೊದಲಾದ ವೇಷಗಳನ್ನು ಹಂತ ಹಂತವಾಗಿ ನಿರ್ವಹಿಸುವುದು ಸಂಪ್ರದಾಯ. ಹಿರಿಯ ವೇಷಧಾರಿಗಳ ಕುಣಿತವನ್ನು ನೋಡಿ ತಾವೂ ಕುಣಿಯುತ್ತಾ ತಮ್ಮ ಕಲಿಕೆಯನ್ನು ಮುಂದುವರಿಸಬೇಕಾಗಿತ್ತು. ಪ್ರತಿಭಾವಂತ ಹುಡುಗರನ್ನು ಗುರುತಿಸಿ ಹಿರಿಯ ಕಲಾವಿದರು ವಿಶೇಷ ಗಮನವನ್ನು ಕೊಟ್ಟು ಅವರಿಗೆ ಹೆಚ್ಚಿನ ತರಬೇತಿ ಯನ್ನು ಕೊಡುವುದೂ ಇತ್ತು. ಹೀಗೆ ಪರಿಣತಿ ಪಡೆದ ಬಳಿಕ ಎರಡನೆಯ ಸ್ತ್ರೀ ವೇಷವನ್ನು ಮಾಡುವ ಅವಕಾಶವಿರುತ್ತಿತ್ತು. ನಂತರ ಎರಡನೆಯ ಪುಂಡುವೇಷ, ಮುಖ್ಯ ಸ್ತ್ರೀ ವೇಷ, ಒಂದನೆಯ ಪುಂಡುವೇಷಗಳನ್ನು ಮಾಡುವ ಹಂತದವರೆಗೆ ತಲುಪುತ್ತಿದ್ದರು. ನೃತ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಸಮರ್ಥನಾದ ಕಲಾವಿದ ಮುಖ್ಯ ಸ್ತ್ರೀ ವೇಷವನ್ನು ಮಾಡುವ ಅವಕಾಶ ಪಡೆಯುತ್ತಿದ್ದನು. ಈ ಹಂತದಲ್ಲಿ ನೃತ್ಯಾಭ್ಯಾಸ ಎಲ್ಲವೂ ಮುಗಿದಿರುತ್ತದೆ. ಇಲ್ಲಿಂದ ಮುಂದೆ ಆತ ಯಕ್ಷಗಾನದ ಎಲ್ಲಾ ತೆರನ ವೇಷವನ್ನು ನಿರ್ವಹಿಸಲು ಸಮರ್ಥನಾಗುತ್ತಿದ್ದ. ಕಲಾವಿದರ ಆಸಕ್ತಿ, ಮನೋಧರ್ಮಗಳಿಗೆ ಅನುಗುಣವಾಗಿ ಆತ ಸ್ತ್ರೀ ವೇಷಧಾರಿಯಾಗಿಯೇ ಮುಂದುವರಿಯಬಹುದು. ಪೀಠಿಕೆ ವೇಷಧಾರಿಯೂ ಆಗಬಹುದು. ಎದುರು ವೇಷಗಳನ್ನು ಮಾಡಬಹುದು. ನಂತರ ಬಣ್ಣದ ವೇಷಧಾರಿಯೂ ಆಗಬಹುದು. ಹೀಗೆ ಸಾಂಪ್ರದಾಯಿಕ ಪೂರ್ವರಂಗದ ಮೂಲಕ ಬಂದ ಹುಡುಗರು ಕೋಡಂಗಿಯಿಂದ ಆರಂಭಿಸಿ ಬಣ್ಣದ ವೇಷದವರೆಗೆ ವಿವಿಧ ಹಂತಗಳನ್ನು ದಾಟಿ ಪರಿಪೂರ್ಣ ವೇಷಧಾರಿಗಳಾಗಿ ರೂಪುಗೊಳ್ಳುತ್ತಾರೆ. ಬಣ್ಣದ ವೇಷಧಾರಿಯಾದವನಿಗೆ ಯಕ್ಷಗಾನದ ಯಾವುದೇ ಪಾತ್ರವನ್ನು ನಿರ್ವಹಿಸಲು ಬೇಕಾದ ಸಾಮರ್ಥ್ಯ ಅನುಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಪೂರ್ವರಂಗದ ವೇಷಗಳಿಗೆ ಮಹತ್ವವಿದೆ. ಯಕ್ಷಗಾನ ಕಲಾವಿದರ ರಂಗಪರಿಣತಿಗಾಗಿಯೆ ಈ ಪೂರ್ವರಂಗ ರೂಪಿಸಿದ್ದಾದರೂ ಅಲ್ಲಿನ ಧಾರ್ಮಿಕ ಅಂಶಗಳನ್ನು ಅಲ್ಲಗಳೆಯುವಂತಿಲ್ಲ. ಪೂರ್ವರಂಗದ ಒಂದೊಂದೇ ವೇಷವನ್ನು ವಿವರವಾಗಿ  ನೋಡಬಹುದು.

ಕೋಡಂಗಿ

ಕೋಡಂಗಿ ಎಂದರೆ ರೂಢಿಯಲ್ಲಿ ಅವಿವೇಕಿ ಎಂದರ್ಥವಿದೆ. ಆದರೆ ಯಕ್ಷಗಾನದಲ್ಲಿ ಕೋಡಂಗಿ ಎಂದರೆ  ಏನೂ ತಿಳಿಯದವರು ಎಂದೇ ಅರ್ಥ. ಏನೂ ತಿಳಿಯದವರು ಎಂದರೆ ಯಕ್ಷಗಾನದ ಬಗೆಗೆ ಏನೂ ತಿಳಿಯದವರು ಅಥವಾ ವಿವೇಕವಿಲ್ಲದವರು ಎಂಬರ್ಥದಲ್ಲಿಯೇ ಈ ಪದ ಪ್ರಯೋಗಕ್ಕೆ ಬಂದಿರಬೇಕು. ಕೋಡಂಗಿಯ ವೇಷವೆಂದರೆ ಮುಖಕ್ಕೆ ಬಿಳಿಗೆರೆ ಯನ್ನೆಳೆದು ನೀಳವಾದ ಅಂಗಿಯೊಂದರಿಂದಲೇ ಇಡೀ ದೇಹವನ್ನು ಆವರಿಸುವ ವೇಷ. ಹಾಗಾಗಿ ಕೊಡಿ ಎಂದರೆ ತುದಿ ಎಂದರ್ಥ. ಅಂಗಾಂಗಗಳ ತುದಿಯ ತನಕ ಬರುವ ಅಂಗಿಯುಳ್ಳವನಾದ್ದರಿಂದ ಅವನು ಕೋಡಂಗಿ ಎಂದು ತಾಳ್ತಜೆ ಕೃಷ್ಣಭಟ್ಟರು (೧೯೭೪ : ೩೩) ಅಭಿಪ್ರಾಯ ಪಟ್ಟಿದ್ದಾರೆ. ಈ ಅಭಿಪ್ರಾಯ ಸಾಧುವಾದುದಲ್ಲ. ಯಕ್ಷಗಾನದ ಎಲ್ಲಾ ವೇಷಗಳನ್ನು ಪಾತ್ರಗಳ ಮನೋಧರ್ಮ ಅಥವಾ ಸ್ವಭಾವದ ನೆಲೆಯಿಂದಲೇ ಹೆಸರಿಸಲಾಗಿದೆ. ಪುಂಡುವೇಷ, ಎದುರು ವೇಷ, ಪೀಠಿಕೆ ವೇಷ ಇತ್ಯಾದಿ. ದಕ್ಷಿಣ ಕನ್ನಡ, ಕಾಸರಗೋಡು ಮೊದಲಾದ ಪ್ರದೇಶಗಳಲ್ಲಿ ಕೊಂಗಿ ಎಂಬ ಪದವಿದೆ. ಕೊಂಗಿ ಎಂದರೆ ಅವಿವೇಕಿ ವರ್ತಿಸು, ಡೊಂಕು ನಡೆಯುಳ್ಳವನು ಎಂದರ್ಥವಿದೆ. ಕೋಂಗಿ ಮಾಡುವವನೇ ಕೋಡಂಗಿ. ಕೋಡಂಗಿಯ ಕುಣಿತಗಳು ಅಂಕುಡೊಂಕಿನ ವರ್ತನೆಯಿಂದ ಕೂಡಿದವುಗಳು. ಆ ಕಾರಣಕ್ಕಾಗಿ ಅವನನ್ನು ಕೋಡಂಗಿ ಎಂದು ಕರೆದಿರಬಹುದು. ಕೋಡಂಗಿ ತೊಡುವ ಅಂಗಿಗೆ ಡವರಂಗಿ ಎಂದು ಹೆಸರು. ಈ ಡವರಂಗಿಯ ಅಂಚಿಗೆ ಕೆಂಪು, ಕಪ್ಪು ಅಥವಾ ಹಸಿರು ಬಣ್ಣದ ಪಟ್ಟೆಗಳಿರುತ್ತವೆ. ಹಿಂದಿನ ಕಾಲದಲ್ಲಿ ಸೈನಿಕರು ಈ ತೆರನ ಅಂಗಿಗಳನ್ನು ಧರಿಸುತ್ತಿದ್ದರಂತೆ. ಅಂಗಿಯ ಮೇಲೆ ಅಲ್ಲಲ್ಲಿ ಸರಪಳಿ ಬಿಗಿದು ಅಲಂಕಾರ ಮಾಡಿಕೊಳ್ಳುತ್ತಿದ್ದರಂತೆ. ದಳಾಯ್ತರ ಅಂಗಿಯೇ ಬೇರೆ ತೆರನಾಗಿದ್ದುದರಿಂದ ನೀಳವಾದ ಅಂಗಿಗಳಿಗೆ ದಳಾಯ್ತರ ಅಂಗಿಗಳೆಂದೇ ಹೆಸರಾಯಿತು. ಕೋಡಂಗಿಯು ಹಾಸ್ಯರಸದ ಪ್ರತೀಕವಾದ್ದರಿಂದ ಆ ವೇಷಕ್ಕೆ ಬಿಳಿ ಗೆರೆ ಮತ್ತು ಬಿಳಿ ಅಂಗಿಗಳೂ ಶಾಸ್ತ್ರ ದೃಷ್ಟಿಯಿಂದಲೂ ಸಮ್ಮತಿಸಬಹುದಾಗಿದೆ. ಹಾಸ್ಯರಸಕ್ಕೆ ಅಧಿದೇವತೆ ಗಜಮುಖ. ‘ಹಾಸ್ಯಕ್ಕಧೀಶಂ ಗಜಾಸ್ಯಂ’ (ರಸ ರತ್ನಾಕರ) ಹಾಸ್ಯದ ಬಣ್ಣ ಬಿಳಿ. ಹಾಗಾಗಿ ಗಣಪತಿಯ ಆರಾಧನೆಗೆಂದು ಬರುವ  ಕೋಡಂಗಿ ಹಾಕುವ ಬಿಳಿ ಬಣ್ಣಕ್ಕೂ, ಬಿಳಿ ವೇಷಕ್ಕೂ ಒಂದಕ್ಕೊಂದು ಸಂಬಂಧವಿದೆ. ಸಾಮಾನ್ಯವಾಗಿ ಎರಡು ಕೋಡಂಗಿ ವೇಷ ಗಳನ್ನು ಇಲ್ಲಿ ಕಾಣಬಹುದು. ಅಂದರೆ ಆಟದ ಅಭ್ಯಾಸಕ್ಕೆ ಬರುವ ಹುಡುಗರ ಸಂಖ್ಯೆ ಅಧಿಕವಿದ್ದಾಗ ಒಂದಕ್ಕಿಂತ ಹೆಚ್ಚು ಕೋಡಂಗಿ ವೇಷಗಳನ್ನು ಮಾಡಲಾಗುತ್ತದೆ. ಕೋಡಂಗಿ ಮನ ಬಂದಂತೆ ಕುಣಿಯಬಹುದು. ಮನಬಂದಂತೆ ವರ್ತಿಸಬಹುದು. ಈ ನೆಲೆಯಲ್ಲಿ ನೋಡಿದರೆ ಕೋಡಂಗಿಯ ವರ್ತನೆ ಕೋಡಗ ಸಮಾನ. ಕೋಡಗವೇ ಕೋಡಂಗಿಯಾಗಿ ರೂಢಿಗೆ ಬಂದಿದೆ ಎಂಬ ಅಭಿಪ್ರಾಯವನ್ನು ಕೂಡಾ ಗಮನಿಸಬಹುದು. ಕೋಡಂಗಿ ಮತ್ತು ಕೋಡಗಗಳ ನಡುವಿನ ಪದ ಸಾಮ್ಯದಿಂದಲೂ ಈ ಅಭಿಪ್ರಾಯವನ್ನು ಸಮರ್ಥಿಸಬಹುದು. ಹಾಸ್ಯಗಾರರನ್ನು ಹನುಮನಾಯಕನೆಂದು ಕರೆಯುತ್ತಾರೆನ್ನುವ ಸಂಗತಿ ಕೂಡಾ ಇದಕ್ಕೆ ಪೂರಕವಾಗಬಹುದು. ಸಂಸ್ಕೃತ ನಾಟಕಗಳಲ್ಲೂ ವಿದೂಷಕನಿಗೆ ಕಪಿ, ವಾನರ ಎಂಬಿತ್ಯಾದಿ ವಿಶೇಷಣಗಳ ಬಳಕೆಯಿದೆ (ಕುಕ್ಕಿಲ ಕೃಷ್ಣಭಟ್, ಮಂದಾರ: ೧೯೮೬). ನಾಟ್ಯಶಾಸ್ತ್ರ ಸಂಪ್ರದಾಯದಲ್ಲಿ ಕೋಡಂಗಿಗಳೆಂದರೆ ಪಾರಿಪಾರ್ಶ್ವಕರೆಂದೂ, ಸ್ತುತಿಪಾಠಕರೆಂದೂ ಮೂಲ ಪರಿಕಲ್ಪನೆಯೆಂಬುದು ಕುಕ್ಕಿಲ ಕೃಷ್ಣಭಟ್ಟರ ಅಭಿಪ್ರಾಯ. ಒಟ್ಟಿನಲ್ಲಿ ಕೋಡಂಗಿ ಎಂದರೆ ಹಾಸ್ಯಗಾರ ಮತ್ತು ವೇಷಧಾರಿಗಳ ಪ್ರಾಥಮಿಕ ಹಂತವಾಗಿದೆ.

ಕೋಡಂಗಿ ವೇಷಕ್ಕೆ ಮುಖದಲ್ಲಿ ಮೂಲಲೇಪನವಿರುವುದಿಲ್ಲ. ಕೋಡಂಗಿ ವೇಷವನ್ನು ಹಾಕುವವರು ಸಾಮಾನ್ಯವಾಗಿ ಪೆಟ್ಟಿಗೆ ಹೊರುವ ಹುಡುಗರು ಅಥವಾ ನಾಟ್ಯಾಭ್ಯಾಸ ಮಾಡುವ ಹುಡುಗರಾಗಿರುತ್ತಾರೆ. ಹಿಂದೆ ಮೇಳಗಳಲ್ಲಿ ಕೋಡಂಗಿ ವೇಷವನ್ನು ಕಟ್ಟಿ ಕುಣಿಯುವ ಮೂಲಕವೇ ಯಕ್ಷಗಾನ ನಾಟ್ಯಾಭ್ಯಾಸಕ್ಕೆ ಕಾಲಿರಿಸುತ್ತಿದ್ದರು. ಯಕ್ಷಗಾನದ ಮೊದಲ ಪಾಠಗಳು ಕೋಡಂಗಿ ವೇಷದಿಂದಲೇ ಆರಂಭ.

ಕೋಡಂಗಿಯದು ಸರಳ ವೇಷ. ಹಣೆಗೆ ಉದ್ದ ಬಿಳಿ ನಾಮವನ್ನು ಬರೆಯುತ್ತಾರೆ. ನಾಮದ ಮಧ್ಯದಲ್ಲಿ ಕೆಂಪು ಗೀಟು ಇರುತ್ತದೆ. ಬಿಳಿಬಣ್ಣದ ಮೀಸೆ ಬರೆಯುವುದೂ ಇದೆ. ಕಾಡಿಗೆ ಮಸಿಯಿಂದ ಮೀಸೆ, ಹುಬ್ಬುಗಳನ್ನು ಬರೆಯುವ ಕ್ರಮ ಕೋಡಂಗಿ ವೇಷಗಳಿಗಿಲ್ಲ. ಬಿಳಿ ಪೈಜಾಮ ಮತ್ತು ನಿಲುವಂಗಿ ಉಡುಗೆಗಳು. ಸೊಂಟಕ್ಕೆ ಒಂದು ಕೆಂಪು ವಸ್ತ್ರವನ್ನು ಬಿಗಿಯಾಗಿ ಬಲಬದಿಗೆ ಕಟ್ಟಿಕೊಳ್ಳುತ್ತಾರೆ. ಉರುಳು ಗಂಟನ್ನು ಹಾಕಿ ಎರಡು ತುದಿಗಳನ್ನು ಕೆಳಕ್ಕೆ ಬಿಡುತ್ತಾರೆ. ತಲೆಗೆ ಕೆಂಪು ಬಣ್ಣದ ವಸ್ತ್ರವನ್ನು ಹಿಂದಕ್ಕೆ ಇಳಿಬಿಟ್ಟು ಮುಂಡಾಸು ಕಟ್ಟುತ್ತಾರೆ. ಕಾಲಿಗೆ ಗೆಜ್ಜೆ ಹಾಗೂ ಕೊರಳಿಗೆ ಅಡ್ಡಿಗೆಯನ್ನು ಧರಿಸುತ್ತಾರೆ. ತಲೆಯ ಮುಂಡಾಸಿಗೆ ಮಾವಿನೆಲೆಯನ್ನು ಸಿಕ್ಕಿಸುವುದೂ ಇದೆ. ಹಾಗಾಗಿ ಈ ವೇಷಕ್ಕೆ ಸ್ಥಳೀಯ ಭಾಷೆಯಲ್ಲಿ ‘ಕುಕ್ಕುತಪ್ಪಿ(ಮಾವಿನ ಸೊಪ್ಪಿ)ನ ವೇಷ’ ಎಂಬ ಹೆಸರೂ ಇದೆ. ‘ಡವುರು ವೇಷ’ವೆಂದೂ ಇದನ್ನು ಕರೆಯುತ್ತಾರೆ.

ಕೋಡಂಗಿ ವೇಷಗಳನ್ನು ಒಬ್ಬರಿಗಿಂತ ಹೆಚ್ಚು ಮಂದಿ ಹುಡುಗರು ಮಾಡುವ ಸಂದರ್ಭದಲ್ಲಿ ಇವುಗಳನ್ನು ಎರಡು ವರ್ಗಗಳಾಗಿ ವಿಂಗಡಿಸುತ್ತಾರೆ. ಎಡದ ಕೋಡಂಗಿ ಹಾಗೂ ಬಲದ ಕೋಡಂಗಿ ಎಂದೇ ಇವುಗಳನ್ನು ಗುರುತಿಸಲಾಗುತ್ತದೆ. ಎಡದ ಕೋಡಂಗಿ ಎಂದರೆ ಆರಂಭದ ಹಂತ. ಬಲದ ಕೋಡಂಗಿಗಳು ಸ್ವಲ್ಪ ಕುಣಿತದಲ್ಲಿ ಪಳಗಿದ ಹುಡುಗರು. ಹೀಗೆ ವಿಭಾಗಿಸಿದ ಕೋಡಂಗಿ ವೇಷಗಳು ನಿರ್ದಿಷ್ಟ ಪಡಿಸಿದ ಭಾಗಗಳಲ್ಲಿಯೇ ಕುಣಿಯ ಬೇಕೆಂಬುದು ಕಟ್ಟು ನಿಟ್ಟಾದ ನಿಯಮ. ಎಡಭಾಗದಲ್ಲಿರುವ ಚೆಂಡೆ ವಾದಕನಿಗೆ ಕುಣಿಯು ವವನ ಕಾಲುಗಳು ಕಾಣಿಸುವಂತೆ ಹೊಸತಾಗಿ ಸೇರಿಕೊಂಡವ ಎಡಭಾಗದಲ್ಲಿ ನಿಲ್ಲುವ ನಿಯಮ ರೂಪಿಸಿರಬೇಕು. ಇದರಿಂದ ಕಲಿಯುವ ಹುಡುಗರಿಗೆ ಕುಣಿತದ ಸಂದರ್ಭದಲ್ಲಿ ಹಾಗೂ ಅನಂತರ ಸೂಚನೆಗಳನ್ನು ಕೊಡಲು ಚಂಡೆವಾದಕರಿಗೆ ಸಾಧ್ಯವಾಗುವಂತೆಯೂ ಈ ವ್ಯವಸ್ಥೆಯನ್ನು ಮಾಡಿರಬೇಕು. ಚೆಂಡೆವಾದಕರೆಂದರೆ ಪರಿಪೂರ್ಣ ತಾಳಜ್ಞಾನವನ್ನು ನಡೆದ ಮದ್ದಳೆವಾದಕರು. ಚೆಂಡೆ ಬಾರಿಸುವವರನ್ನು ಮದ್ದಳೆಗಾರರು ಎಂದೇ ರೂಢಿಯಲ್ಲಿ ಹೇಳಲಾಗುತ್ತದೆ.

ಬಾಲಗೋಪಾಲ ವೇಷಗಳು

ಯಕ್ಷಗಾನದ ಪೂರ್ವರಂಗದಲ್ಲಿ ಬರುವ ಬಾಲಗೋಪಾಲ ವೇಷಗಳು ನಿತ್ಯ ವೇಷಗಳೆಂದೇ ಪ್ರಸಿದ್ಧವಾಗಿವೆ. ಕೋಡಂಗಿ ಕುಣಿತದ ನಂತರ ಗಣಪತಿ ಸ್ತುತಿಯೊಂದಿಗೆ ರಂಗಸ್ಥಳಕ್ಕೆ ಬಂದು ಕುಣಿಯುವ ಪಕಡಿ ಧರಿಸಿದ ಪುಂಡುವೇಷಗಳು ಇವು. ಯಕ್ಷಗಾನ ಪದ್ಯದ ಸೂಚನೆಯಂತೆ ಈ ವೇಷಗಳು ಬಲರಾಮ ಹಾಗೂ ಕೃಷ್ಣನನ್ನು ಪ್ರತಿನಿಧಿಸುತ್ತವೆ. ಆದರೆ ಎರಡೂ ವೇಷಗಳು ಮುಖವರ್ಣಿಕೆ ವೇಷಭೂಷಣಗಳಲ್ಲಿ ಸಮಾನವಾಗಿವೆ. ಸಾಮಾನ್ಯವಾಗಿ ಒಂದೇ ಎತ್ತರದ, ಪ್ರಾಯದ ಹುಡುಗರು ಈ ವೇಷಗಳನ್ನು ಧರಿಸುತ್ತಾರೆ.

ಬಾಲಗೋಪಾಲ ವೇಷಗಳಿಗೆ ಗೌರವರ್ಣವನ್ನು ತಳಪಾಯದ ಬಣ್ಣವಾಗಿ ಲೇಪಿಸುತ್ತಾರೆ. ಊರ್ಧ್ವ ಪುಂಡ್ರ ನಾಮವನ್ನು ಹಣೆಯಲ್ಲಿ ಬರೆಯುತ್ತಾರೆ. ಕಣ್ಣಿನ ಇಕ್ಕೆಲಗಳಲ್ಲಿ ಹಾಗೂ ಗಲ್ಲದಲ್ಲಿ ಬಿಳಿ ಬಣ್ಣದ ಮುದ್ರೆಗಳನ್ನು ಬರೆಯುತ್ತಾರೆ.

ಅಡೂರು ಶ್ರೀಧರರಾಯರ ಅಭಿಪ್ರಾಯದಂತೆ ಬಾಲಗೋಪಾಲ ವೇಷಗಳಲ್ಲಿ ಒಂದು ಕೃಷ್ಣನ ಮುಖವರ್ಣಿಕೆಯನ್ನು ಮಾಡಬೇಕು. ಅಂದರೆ ಒಂದು ವೇಷವು ಹಸಿರು ಬಣ್ಣವನ್ನು ಮೂಲಲೇಪನವಾಗಿ ಬಳಸಿ, ಕೃಷ್ಣನಿಗೆ ಬರೆಯುವಂತೆ ಹಣೆಯಲ್ಲಿ ಕಸ್ತೂರಿ ತಿಲಕವಿರುವ ನಾಮವನ್ನು ಬರೆಯಬೇಕು. ಇನ್ನೊಂದು ವೇಷವು ಬಲರಾಮನ ವೇಷವಾಗಿದ್ದು, ಗೌರವರ್ಣದಲ್ಲಿ ಊರ್ಧ್ವಪುಂಡ್ರ ಬರೆಯಬಹುದು.

ಬಾಲಗೋಪಾಲ ವೇಷಗಳು ಪುಂಡು ವೇಷದ ವೇಷಭೂಷಣಗಳನ್ನೇ ಧರಿಸುತ್ತವೆ. ಬಾಲಮುಂಡಿನ ಅಂಚು ಕೆಂಪು ಬಣ್ಣದಿಂದ ಕೂಡಿರುತ್ತದೆ. ಬಾಲಮುಂಡಿನ ಅಂಚಿನ ಬಣ್ಣ ಹಾಗೂ ರವಕೆಯ ಬಣ್ಣ ಸಮಾನವಾಗಿರುತ್ತದೆ. ಕೆಂಪು ಇಜಾರು ಧರಿಸುತ್ತಾರೆ. ಭುಜಕೀರ್ತಿ ಧರಿಸುವುದಿಲ್ಲ. ಭುಜದ ಬಳಿಯಲ್ಲಿ ದಪ್ಪ ನೆರಿಗೆಗಳಿರುತ್ತವೆ. ಎದೆ ಪದಕ, ವೀರಗಾಸೆಗಳು ಕೆಂಪು ಉಲ್ಲನ್‌ನಿಂದ ಕೂಡಿವೆ. ಕಾಲಿಗೆ ಗೆಜ್ಜೆ, ಕಾಲ್ಚೆಂಡು, ಕಡಗ, ಕೈಗಳಿಗೆ ಕೈಕಟ್ಟು, ತೋಳ್ಕಟ್ಟುಗಳಿರುತ್ತವೆ. ತಲೆಗೆ ಕೆಂಪು ಉಲ್ಲನ್ ಅಂಚಿರುವ ಪಕಡಿಯನ್ನು ಧರಿಸುತ್ತಾರೆ. ಪಕಡಿಯ ತುದಿಯಲ್ಲಿ ನವಿಲುಗರಿ ಇರುತ್ತದೆ.

ಸುಬ್ರಾಯ ವೇಷ

ಸುಬ್ರಾಯ ವೇಷ, ಸುಬ್ಬರಾಯ, ಷಣ್ಮುಖ ಅಥವಾ ಷಣ್ಮುಖ ಸುಬ್ರಾಯ ಎಂಬಿತ್ಯಾದಿ ಹೆಸರುಗಳಿಂದ ಯಕ್ಷಗಾನದಲ್ಲಿ ಪ್ರಚಲಿತದಲ್ಲಿದ್ದ ವೇಷವು ಅತ್ಯಂತ ಪ್ರಾಚೀನವಾದು ದೆಂದೆನಿಸುತ್ತದೆ. ಈ ಹಿಂದೆಯೇ (ನೋಡಿ ಅಧ್ಯಾಯ ೨) ಚರ್ಚಿಸಿದಂತೆ ಇದು ನಾಗಾರಾಧನೆಗೆ ಸಂಬಂಧಿಸಿದ ವೇಷ ವಿಧಾನ. ನಾಗನ ಹೆಡೆಯಾಕಾರದ ತುರಾಯಿ, ಸ್ವಲ್ಪ ದೊಡ್ಡ ಹುಡುಗರಾದರೆ ಕಿರೀಟ ಧರಿಸಿ ಸುಬ್ರಾಯ ವೇಷವನ್ನು ಮಾಡುತ್ತಿದ್ದರು. ಕೆಲವರ ಪ್ರಕಾರ ಸುಬ್ರಾಯ ವೇಷವು ಕಿರೀಟ ಧರಿಸಿಯೇ ಮಾಡುವ ಸಂಪ್ರದಾಯ ಯಕ್ಷಗಾನದಲ್ಲಿದ್ದುದು. ಕಿರೀಟ ಧರಿಸುವ ಈ ವೇಷಕ್ಕೆ ಮೀಸೆಯಿರುತ್ತಿರಲಿಲ್ಲವಂತೆ. ನಾಗನನ್ನು ಸಂಕೇತಿಸುವ ವೇಷ ಇದಾದ್ದರಿಂದ ಪುರುಷ ವೇಷದ ಲಕ್ಷಣವಾದ ಮೀಸೆಯನ್ನು ಕೈಬಿಟ್ಟಿರಬೇಕು.

ಸುಬ್ರಾಯ ವೇಷವು ಪೂರ್ವರಂಗದ ಒಂದು ಪ್ರಮುಖ ವೇಷ. ಮೊದಲನೆಯದು ಧಾರ್ಮಿಕವಾಗಿ ಯಕ್ಷಗಾನದಲ್ಲಿ ನಾಗಾರಾಧನೆಯನ್ನು ಪ್ರತಿನಿಧಿಸುವ ವೇಷ. ಎರಡನೆಯದಾಗಿ ಪೂರ್ವರಂಗದಲ್ಲಿ ಇದನ್ನು ಬಿಟ್ಟರೆ ಕಿರೀಟ ಧರಿಸುವ ವೇಷಗಳಿಲ್ಲ. ಪೂರ್ವರಂಗದಲ್ಲಿ ತರಬೇತಿ ಹೊಂದಿ ಪಳಗಿದ ಹುಡುಗರು ಸುಬ್ರಾಯ ವೇಷದ ಮೂಲಕ ಕಿರೀಟ ಧಾರಣೆ ಮಾಡುತ್ತಾರೆ. ಕಿರೀಟ ಧರಿಸಿ ಕುಣಿಯುವುದಕ್ಕೆ ಅನುಕೂಲವಾಗುವಂತೆ ಈ ವೇಷವನ್ನು ಪೂರ್ವರಂಗದಲ್ಲಿ ರೂಪಿಸಿರಬೇಕು. ಧಾರ್ಮಿಕ ಕಾರಣಕ್ಕಾಗಿ ಪರಂಪರೆಯಿಂದ ಬಂದ ಸುಬ್ರಾಯ ವೇಷವು ಹೆಸರಿಗಿಂತ ತನ್ನ ವೇಷ ಹಾಗೂ ಕುಣಿತದ ಕಾರಣಕ್ಕಾಗಿ ವಿಶಿಷ್ಟವಾಗಿದೆ. ಯಕ್ಷಗಾನದಲ್ಲಿ ಕಿರೀಟ ಇಡುವ ಎಲ್ಲಾ ವೇಷಗಳಿಗೂ ಮೀಸೆಯಿರುತ್ತದೆ. ಕಿರೀಟ ಇಟ್ಟು ಮೀಸೆಯಿಲ್ಲದಿರುವ ವೇಷವೆಂದರೆ ಪೂರ್ವರಂಗದ ಸುಬ್ರಾಯ ವೇಷ ಮಾತ್ರ. ಹಿಂದೆ ಯಕ್ಷಗಾನದ ಪೂರ್ವರಂಗದಲ್ಲಿ ಷಣ್ಮುಖ ಸುಬ್ರಾಯನ ವೇಷವಿತ್ತು. ಕೆಲವು ಮೇಳಗಳಲ್ಲಿ ಈ ವೇಷಕ್ಕೆ ಪಕಡಿಯನ್ನು ಧರಿಸುತ್ತಿದ್ದರು. ಕೆಲವರು ಕೋಲು ಕಿರೀಟವನ್ನು ಧರಿಸುತ್ತಿದ್ದರಂತೆ.

ಸುಬ್ರಾಯ ವೇಷದ ಮುಖವರ್ಣಿಕೆಯಲ್ಲಿ ತಳಪಾಯದ ಬಣ್ಣವು ಗೌರವರ್ಣವಾಗಿದೆ. ಹಣೆಗೆ ಮೂರು ಪಟ್ಟಿಗಳ  ಲಿಂಗನಾಮವನ್ನು ಹಾಕುತ್ತಾರೆ. ಮಧ್ಯೆ ಕೆಂಪು ಬೊಟ್ಟು ಇರುತ್ತದೆ. ಕಣ್ಣಿನ ಅಂಚಿನಲ್ಲಿ ಹಾಗೂ ಗಲ್ಲದಲ್ಲಿ ಮುದ್ರೆ ಬರೆಯುತ್ತಾರೆ. ಕೋಲು ಕಿರೀಟವನ್ನು ಧರಿಸಿದರೂ ಮೀಸೆ ಕಟ್ಟಿಕೊಳ್ಳುವುದಿಲ್ಲ.

ಈ ವೇಷವು ದಗಲೆಯನ್ನು ಧರಿಸುವುದಿಲ್ಲ. ಬದಲಾಗಿ ಎರಡು ಸೋಗೆವಲ್ಲಿಗಳನ್ನು ಕತ್ತರಿಹಾಕಿ ಕಟ್ಟಿಕೊಳ್ಳುತ್ತಾರೆ. ಅವುಗಳ ಮೇಲೆ ಎದೆಪದಕವನ್ನು ಧರಿಸುತ್ತಾರೆ. ಕೊರಳಿಗೆ ಅಡ್ಡಿಗೆ, ಭುಜಗಳಿಗೆ ಭುಜ ಕೀರ್ತಿಗಳು, ಕೈಗಳಿಗೆ ತೋಳ್ಕಟ್ಟು, ಕೈಕಟ್ಟುಗಳನ್ನು ಧರಿಸುತ್ತಾರೆ. ಸೊಂಟದಲ್ಲಿ ಹಸಿರು ಅಂಚಿನ ಬಿಳಿ ಬಾಲ್‌ಮುಂಡು ಧರಿಸಿ, ಡಾಬು ಬಿಗಿಯುತ್ತಾರೆ. ವೀರಗಸೆ, ಕಾಲಿಗೆ ಗೆಜ್ಜೆ, ಕಡಗ, ಕಾಲ್ಚೆಂಡುಗಳನ್ನು ಇತರ ವೇಷಗಳಂತೆಯೇ ಧರಿಸುತ್ತಾರೆ. ತೀರ್ಥ ಯಾತ್ರೆ ಮುಗಿಸಿ ಬರುವ ಬಲರಾಮನಿಗೂ ಇದೇ ರೀತಿಯ ವೇಷಧಾರಣ ಕ್ರಮವಿದೆ ಎಂಬುದನ್ನು ಇಲ್ಲಿ  ನೆನಪಿಸಿಕೊಳ್ಳಬಹುದು.

ಇದು ಶಿವಕುಮಾರನಾದ ಷಣ್ಮುಖ ಸುಬ್ರಾಯನ ವೇಷವಾದರೂ ಕರಾವಳಿಯ ನಾಗಾರಾಧನೆಯ ಪ್ರಭಾವವನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ. ಮೀಸೆಕಟ್ಟದೆ ಧರಿಸುವ ಕಿರೀಟ, ದಗಲೆ ಧರಿಸದೆ ಇತರೆ ವೇಷಭೂಷಣಗಳಿಂದ ಶೋಭಿಸುವ ಸುಬ್ರಾಯ ವೇಷವು ನಾಗನ ರೂಪವನ್ನು ಹೋಲುತ್ತದೆ.

ಅರ್ಧನಾರೀ ವೇಷ

ಯಕ್ಷಗಾನದ ಪೂರ್ವರಂಗದಲ್ಲಿ ಅಪೂರ್ವವಾಗಿ ಕಾಣಿಸಿಕೊಳ್ಳುವ ಒಂದು ವೇಷ ಅರ್ಧನಾರೀ ವೇಷ. ಒಬ್ಬನೇ ಕಲಾವಿದ ಅರ್ಧಭಾಗ ಗಂಡಾಗಿಯೂ, ಅರ್ಧಭಾಗ ಹೆಣ್ಣಾಗಿಯೂ ವೇಷಧಾರಣೆ ಮಾಡಿಕೊಂಡು ಕುಣಿಯುವ ಕಲಾ ನೈಪುಣ್ಯವನ್ನು ಈ ವೇಷದಲ್ಲಿ ಕಾಣಬಹುದು. ಹೆಸರೇ ಸೂಚಿಸುವಂತೆ ಒಂದು ಭಾಗದಲ್ಲಿ ಪಾರ್ವತಿಯ ವೇಷ ಭೂಷಣಗಳನ್ನೂ, ಇನ್ನೊಂದು ಭಾಗದಲ್ಲಿ ಈಶ್ವರನ ವೇಷಭೂಷಣಗಳನ್ನೂ ಧರಿಸುತ್ತಾರೆ. ಸ್ತ್ರೀ ವೇಷದ ಹಾವಭಾವಗಳನ್ನೂ, ಗಂಡುವೇಷದ ಗಂಡುಗಲಿತನವನ್ನೂ ಸಮರ್ಥವಾಗಿ ಅಭಿನಯಿಸುವ ಕಲಾವಿದರಿಗೆ ಮಾತ್ರ ಈ ವೇಷದ ನಿರ್ವಹಣೆ ಸಾಧ್ಯ.

ಅರ್ಧನಾರೀ ವೇಷದ ಮುಖವರ್ಣಿಕೆಯು ವಿಶೇಷವಾಗಿದೆ. ಮುಖವನ್ನು ಎರಡು ಭಾಗಗಳಾಗಿ ವಿಭಾಗಿಸಿಕೊಂಡು ಬಣ್ಣವನ್ನು ಲೇಪಿಸುತ್ತಾರೆ. ಮೂಲ ಲೇಪನ ಗೌರವರ್ಣ ವಾಗಿದ್ದರೂ, ಹೆಣ್ಣಿನ ಮುಖವರ್ಣಿಕೆಯಲ್ಲಿ ಸೌಮ್ಯಬಣ್ಣವನ್ನೂ, ಗಂಡಿನ ಮುಖವರ್ಣಿಕೆ ಯಲ್ಲಿ ಸ್ವಲ್ಪ ಕಡು ಬಣ್ಣವನ್ನು ಬಳಸುತ್ತಾರೆ. ಹಣೆಯ ಒಂದು ಭಾಗದಲ್ಲಿ ಶಿವನ ಹಣೆಗಣ್ಣು ಹಾಗೂ ಶಿವನಾಮಗಳಿದ್ದರೆ, ಅದಕ್ಕೆ ಹೊಂದಿಕೊಂಡಂತೆ ಪಾರ್ವತಿಯ ಉರುಟು ಬೊಟ್ಟು ಶೋಭಿಸುತ್ತದೆ. ಶಿವನಿಗೆ ದಪ್ಪ ಹುಬ್ಬು ಬರೆದರೆ, ಪಾರ್ವತಿಗೆ ಪುಟ್ಟ ನೀಳ ಹುಬ್ಬನ್ನು ಬರೆಯುತ್ತಾರೆ. ಶಿವನ ಕಣ್ಣನ್ನು ಕಪ್ಪು, ಕೆಂಪು ರೇಖೆಗಳ ಮೂಲಕ ಪ್ರಖರಗೊಳಿಸುತ್ತಾರೆ. ಪಾರ್ವತಿಯ ಕಣ್ಣುಗಳು ನೀಳವಾಗಿ ಸೌಮ್ಯವಾಗಿರುತ್ತದೆ. ಮೂಗಿಗೆ ನತ್ತು ಧರಿಸಿದ ಭಾಗ ಹೆಣ್ಣಾದರೆ, ಶಿವನಿಗೆಂದು ಭಾಗದಲ್ಲಿ ಮೀಸೆಯನ್ನು ಅಂಟಿಸುತ್ತಾರೆ.  ಪಾರ್ವತಿಯ ಕಿವಿಗಳಿಗೆ ಬುಗುಡಿ, ಓಲೆ ಧರಿಸಿದರೆ, ಶಿವನ ಭಾಗದಲ್ಲಿ ಕುಡುಕ ಧರಿಸುತ್ತಾರೆ.

ಪಾರ್ವತಿಯ ಭಾಗದಲ್ಲಿ ಅರ್ಧಭಾಗಕ್ಕೆ ಬಿಳಿ ಸೀರೆ ಧರಿಸಿ ಕೆಂಪು ರವಕೆ ತೊಡುತ್ತಾರೆ. ಕೈಕಟ್ಟು, ತೋಳ್ಕಟ್ಟು, ಕೊರಳಿಗೆ ಅಡ್ಡಿಗೆಯನ್ನು ಧರಿಸುತ್ತಾರೆ. ಎದೆಯ ಭಾಗದಲ್ಲಿ  ಮೊಲೆಕಟ್ಟನ್ನು ಧರಿಸಿ, ಮುತ್ತಿನ ಹಾರವನ್ನು ಧರಿಸುತ್ತಾರೆ. ಸೊಂಟಕ್ಕೆ ಜಾಲರಿಗಳಿರುವ ಸೊಂಟಪಟ್ಟಿ ಇರುತ್ತದೆ. ಶಿವನ ಅರ್ಧಭಾಗದಲ್ಲಿ ಕೊರಳಿಗೆ ಸರ್ಪಾಭರಣ, ರುದ್ರಾಕ್ಷಿ, ಅಡ್ಡಿಗೆ, ಹುಲಿಚರ್ಮಾಂಬರದ ಉಡುಗೆ ಇರುತ್ತದೆ. ತೋಳುಗಳಿಗೆ ಕಪ್ಪು ಉಲ್ಲನ್ ದಾರವನ್ನು ಕಟ್ಟುತ್ತಾರೆ. ಅರ್ಧನಾರೀಶ್ವರ ವೇಷದ ಶಿರೋಭೂಷಣವೂ ವಿಶಿಷ್ಟವಾಗಿದೆ. ಶಿವನ ಭಾಗದಲ್ಲಿ ಜಟೆಯನ್ನು ಮುಡಿಯ ಆಕಾರದಲ್ಲಿ ಕಟ್ಟಿ, ಚಂದ್ರಕಲೆಯನ್ನು ಧರಿಸುತ್ತಾರೆ. ಜಟೆಯ ತುದಿಗೆ ರುದ್ರಾಕ್ಷಿ ಅಥವಾ ಸರ್ಪಾಭರಣವಿರುತ್ತದೆ. ಪಾರ್ವತಿಯ ಭಾಗದಲ್ಲಿ ಅರ್ಧ ಬೈತಲೆ ತೆಗೆದು ನೀಳವಾದ ಕೂದಲನ್ನು ಇಳಿ ಬಿಡುತ್ತಾರೆ. ಅರ್ಧಭಾಗಕ್ಕೆ ಪುಟ್ಟ ಕಿರೀಟವನ್ನು ಧರಿಸಿ, ಹೂವು ಮುಡಿಯುತ್ತಾರೆ. ಹಣೆಯ ಮೇಲ್ಭಾಗದಲ್ಲಿ ಮುತ್ತು ಬೈತಲೆ, ಬೈತಲೆ ಪದಕ ಶೋಭಿಸುತ್ತದೆ.  ಹೀಗೆ ಒಬ್ಬನೇ ವ್ಯಕ್ತಿ ಶಿವ ಹಾಗೂ ಪಾರ್ವತಿಯ ವೇಷವನ್ನು ಧರಿಸಿಕೊಂಡು ಭಿನ್ನ ಭಾವಗಳನ್ನು ಪ್ರದರ್ಶಿಸುವ ಕಲಾವಂತಿಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಆದುದರಿಂದಲೇ ಯಕ್ಷಗಾನ ಪೂರ್ವರಂಗದಿಂದ ಅರ್ಧನಾರೀಶ್ವರನ ವೇಷ ಈಗ ಮಾಯವಾಗಿದೆ. ಅರ್ಧನಾರೀಶ್ವರ ವೇಷದ ಆಹಾರ್ಯ ಕ್ರಮವು ಯಕ್ಷಗಾನ ರಂಗದಲ್ಲಿಯೇ ಅಪೂರ್ವ ಹಾಗೂ ಶ್ರಮದಾಯಕ.

ಈ ಹಿಂದೆಯೇ ಚರ್ಚಿಸಿದಂತೆ ಅರ್ಧನಾರೀ ವೇಷವೇ ಅರ್ಧನಾರೀಶ್ವರ ವೇಷವಾಗಿ ಪರಿವರ್ತನೆ ಹೊಂದಿದ ತರುವಾಯ ರೂಪುಗೊಂಡ ವೇಷದ ವಿವರಗಳಿವು. ಪಾರ್ವತಿಯ ಸಂಬಂಧಿ ಹಾಡುಗಳಿಗೆ ಸ್ತ್ರೀ ಭಾಗವನ್ನು ತೋರಿಸಿ ಕುಣಿಯುವುದು, ಶಿವನ ಪಾತ್ರದ ಪದ್ಯಗಳಿಗೆ ತಿರುಗಿ ಮತ್ತೊಂದು ಭಾಗವನ್ನು ತೋರಿಸಿ ಕುಣಿಯುವುದು ಪದ್ಧತಿ. ತೆರೆಯ ಹಿಂದೆಯೇ ಅರ್ಧನಾರೀಶ್ವರ ವೇಷ ಕುಣಿಯುವುದು ಸಂಪ್ರದಾಯ.

ಮುಖ್ಯ ಸ್ತ್ರೀ ವೇಷಗಳು

ಯಕ್ಷಗಾನದ ಪೂರ್ವರಂಗದಲ್ಲಿ ಎರಡು ಸ್ತ್ರೀ ವೇಷಗಳು ಬಂದು ಕುಣಿಯುತ್ತವೆ. ಇವುಗಳಿಗೆ ನಿತ್ಯ ಸ್ತ್ರೀ ವೇಷಗಳೆಂದೂ, ಪೀಠಿಕೆ ಸ್ತ್ರೀ ವೇಷಗಳೆಂದೂ ಹೇಳುತ್ತಾರೆ. ಈ ಸ್ತ್ರೀ ವೇಷಗಳೇ ಮುಂದೆ ಪ್ರಸಂಗದ ಸ್ತ್ರೀ ಭೂಮಿಕೆಗಳಲ್ಲಿ ಅಭಿನಯಿಸುತ್ತವೆ.

ಈ ವೇಷಗಳ ಮುಖಕ್ಕೆ ಗೌರವರ್ಣವನ್ನು ಮೂಲ ಲೇಪನವಾಗಿ ಹಚ್ಚಿಕೊಳ್ಳುತ್ತಾರೆ. ಹುಬ್ಬು ಹಾಗೂ ಕಣ್ಣಿನ ಭಾಗದಲ್ಲಿ ಕಾಡಿಗೆ ಹಚ್ಚಿ ನೀಳವಾಗಿ ಬರೆಯುತ್ತಾರೆ. ಹಣೆಗೆ ಉರುಟು ಬೊಟ್ಟು ಇಡುತ್ತಾರೆ. ಹುಬ್ಬಿನ ಮೇಲ್ಭಾಗದಲ್ಲಿ ಬಿಳಿ, ಕೆಂಪು ಬಣ್ಣಗಳ ಮುತ್ತರಿ ಸಾಲುಗಳನ್ನು ಇಡುತ್ತಾರೆ. ಗಲ್ಲದಲ್ಲಿ ದೃಷ್ಟಿಬೊಟ್ಟು ಇಡುತ್ತಾರೆ.

ಹನ್ನೆರಡು ಮೊಳದ ಸೀರೆಯನ್ನು ಉಡುತ್ತಾರೆ. ಹಿಂದೆ ಕಪ್ಪು ಬಣ್ಣದ ಸೀರೆಯನ್ನು ಉಡುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಈಗ ಬಣ್ಣ ಬಣ್ಣದ ಸೀರೆಗಳನ್ನು ಉಡುತ್ತಾರೆ. ಅದಕ್ಕೆ ಒಪ್ಪುವ ಬಣ್ಣದ ರವಕೆಗಳು, ಸೊಂಟಕ್ಕೆ ಸೊಂಟಪಟ್ಟಿ, ಜಾಲರಿಗಳು, ಕೈಗೆ ತೋಳ್ಕಟ್ಟು, ಕೈಕಟ್ಟು, ಕಿವಿಗೆ ಓಲೆ, ಬುಗುಡಿ, ಮೂಗಿಗೆ ನತ್ತು, ಕೊರಳಿಗೆ ಅಡ್ಡಿಗೆ, ಕೊರಳ ಹಾರ, ಪದಕಗಳು ಇತರ ವೇಷಭೂಷಣಗಳಾಗಿವೆ. ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಳ್ಳುತ್ತಾರೆ.

ತಲೆಯಲ್ಲಿ ಉದ್ದವಾದ ಜವರಿಯನ್ನು ಬಳಸಿ ಜಡೆಯನ್ನು ಹೆಣೆದುಕೊಳ್ಳುತ್ತಾರೆ. ಹಿಂಭಾಗದಲ್ಲಿ ಉರುಟಾಗಿ ಮುಡಿಕಟ್ಟಿ, ಹೂವು ಮುಡಿದು, ಕೇದಗೆಯಂತಹ ಪುಟ್ಟ ಕಿರೀಟವನ್ನು ಧರಿಸುತ್ತಾರೆ. ಹಣೆಯ ಅಂಚಿನಲ್ಲಿ ಕೂದಲಿಗೆ ಹೊಂದಿಕೊಂಡಂತೆ ಮುತ್ತು ಬೈತಲೆ ಎಂಬ ಆಭರಣವನ್ನು ಹಾಗೂ ಬೈತಲೆ ಪದಕವನ್ನು ಧರಿಸುತ್ತಾರೆ.

ಹೊಗಳಿಕೆ ವೇಷ

ಮುಖ್ಯ ಸ್ತ್ರೀವೇಷಗಳ ಕುಣಿತದ ನಡುವೆ ರಂಗಸ್ಥಳವನ್ನು ಪ್ರವೇಶಿಸುವ ಪುರುಷವೇಷವೇ  ಹೊಗಳಿಕೆ ವೇಷ. ಮೇಳದ ಯಜಮಾನರನ್ನೂ, ಆಟ ಆಡಿಸುವವರನ್ನೂ, ಸ್ಥಳದೇವರನ್ನೂ,  ಹೊಗಳುವ ಕಾರಣದಿಂದ ಹೊಗಳಿಕೆ ವೇಷ ಎಂಬ ಹೆಸರು ಬಂದಿರಬಹುದು.

ಹೊಗಳಿಕೆ ವೇಷದ ಬಣ್ಣಗಾರಿಕೆ ಹಾಗೂ ವೇಷಭೂಷಣಗಳು ಸರಳವಾಗಿವೆ. ಮುಖಕ್ಕೆ ಗೌರವರ್ಣವನ್ನು ಲೇಪಿಸುತ್ತಾರೆ. ಹಣೆಯಲ್ಲಿ ಬಿಳಿ ಬಣ್ಣದ ಊರ್ಧ್ವನಾಮ ಹಾಗೂ ಕಣ್ಣಿನ ಅಂಚಿನಲ್ಲಿ ಮುದ್ರೆಗಳಿರುತ್ತವೆ. ತಲೆಗೊಂದು ಕೆಂಪು ರುಮಾಲಿನ ಬಾಲ ಬಿಟ್ಟ ಮುಂಡಾಸು. ಬಿಳಿ ಬಣ್ಣದ ಪೈಜಾಮವನ್ನು ಧರಿಸಿ, ಅದೇ ಬಣ್ಣದ ಅಂಗಿ ಧರಿಸುತ್ತಾರೆ. ಇದರ ಮೇಲೊಂದು ಕಪ್ಪು ಬಣ್ಣದ ಮೇಲಂಗಿ, ಕೊರಳಿಗೆ ಅಡ್ಡಿಗೆ, ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಕೈಯಲ್ಲಿ ಕರವಸ್ತ್ರವಿರುತ್ತದೆ. ಸೊಂಟಕ್ಕೆ ಕೇಸರಿ ಬಣ್ಣದ ವಸ್ತ್ರವನ್ನು ಕಟ್ಟುತ್ತಾರೆ.

ಕಸೆ ಸ್ತ್ರೀ ವೇಷಗಳು : ಎರಡು ವೀರಗಚ್ಚೆಯ ಅಥವಾ ಕಸೆ ಸ್ತ್ರೀ ವೇಷಗಳು ಪೂರ್ವರಂಗದಲ್ಲಿ ಬರುತ್ತವೆ. ಕಸೆ ಎಂದರೆ ಎರಡು ಕಾಲುಗಳು ಮುಚ್ಚುವಂತೆ ಹಾಕುವ ಸೀರೆಯ ಕಚ್ಚೆ ಎಂದರ್ಥ. ಇದು ಮುಖ್ಯ ಸ್ತ್ರೀ ವೇಷದಿಂದ ಭಿನ್ನವಾಗಿದ್ದು ವೀರರಸದ ಭಾವವನ್ನು ಪ್ರಕಟಿಸುತ್ತವೆ. ಇವು ಪುಂಡುವೇಷಗಳಂತೆ ವೀರ ಪ್ರಕಟಣೆಯ ವೇಷಗಳು. ಇವುಗಳನ್ನು ಚಂದಭಾಮಾ ಸ್ತ್ರೀ ವೇಷಗಳೆಂಬ ಹೆಸರಿನಿಂದಲೂ ಕರೆಯುತ್ತಾರೆ. ಕೆಲವರ ಅಭಿಪ್ರಾಯದಂತೆ ಮೂರು ಸ್ತ್ರೀ ವೇಷಗಳಿರುತ್ತವೆ. ಈ ವೇಷಗಳು ಅರ್ಧನಾರೀ ವೇಷಗಳಿಂದ ಮೊದಲು ರಂಗಸ್ಥಳಕ್ಕೆ ಬರುತ್ತವೆ ಎಂಬುದೊಂದು ಅಭಿಪ್ರಾಯವಿದೆ. ಹೊಗಳಿಕೆ ವೇಷದ ನಂತರ ಬರುತ್ತದೆ ಎಂಬುದು ಇನ್ನೊಂದು ಅಭಿಪ್ರಾಯ. ಎರಡನೆ ಅಭಿಪ್ರಾಯವೇ ಸರಿಯೆಂದು ಮತ್ತು ಇದೇ ಕ್ರಮ ರೂಢಿಯಲ್ಲಿದೆ. ಬಾಲಗೋಪಾಲರ ವೇಷದಿಂದ ಆರಂಭಿಸಿ ಮುಖ್ಯ ಸ್ತ್ರೀವೇಷ ಹಾಗೂ ಹೊಗಳಿಕೆ ವೇಷಗಳು ಕುಣಿಯುವ ತನಕ ಮದ್ದಳೆಯ ಬಳಕೆ ಮಾತ್ರ ಇದೆ. ಆಮೇಲೆ ಚಂಡೆಯಿಂದ ಪೀಠಿಕೆ ಬಾರಿಸಿ ಕಸೆ ಸ್ತ್ರೀವೇಷಗಳನ್ನು ಕುಣಿಸಲಾಗುತ್ತದೆ. ಪ್ರಸಂಗದಲ್ಲಿ ಬರುವ ಪ್ರಮೀಳೆ, ಮೀನಾಕ್ಷಿ ಮೊದಲಾದ ವೀರ ಸ್ತ್ರೀಯರ ವೇಷಗಳೂ ಇದೇ ಮಾದರಿಯಲ್ಲಿರುತ್ತವೆ. ಈ ವೇಷಗಳು ಪೂರ್ವರಂಗದಲ್ಲಿ ಬರಲು ಯಾವುದೇ ಧಾರ್ಮಿಕ ಉದ್ದೇಶವಿದ್ದಂತಿಲ್ಲ. ಲೌಕಿಕವಾದ ಭಾವ ಪ್ರಕಟ ಮಾಡುವುದ ರೊಂದಿಗೆ ಅಬ್ಬರದಿಂದ ಕುಣಿದು ವಿಜೃಂಭಿಸುಮದು ಈ ಪಾತ್ರಗಳ ಉದ್ದೇಶ.

ಯಕ್ಷಗಾನದ ಪೂರ್ವರಂಗದ ಸಂಪ್ರದಾಯದಲ್ಲಿ ಪಾರಂಪರಿಕವಾದ ಪ್ರಾಚೀನ ಧಾರ್ಮಿಕ ಅವಶಿಷ್ಟಗಳನ್ನು ಕಾಣಬಹುದು. ಒಟ್ಟು ಪೂರ್ವರಂಗದ ಎಲ್ಲಾ ಪ್ರಕ್ರಿಯೆಗಳು ಒಂದು ತೆರನ ಧಾರ್ಮಿಕ ಕ್ರಿಯೆಗಳೇ ಹೌದು. ಪ್ರಸಂಗದ ಕಥಾ ಭಾಗವನ್ನು ಹೊರತುಪಡಿಸಿ ಆರಂಭದ ನಾಂದೀ ರೂಪದ ರಂಗಕ್ರಿಯೆಗಳೇ ಯಕ್ಷಗಾನದ ಪೂರ್ವರಂಗ. ಕೋಡಂಗಿ ಚೌಕಿಯಿಂದ ದೀಪದೊಡನೆ ರಂಗ ಪ್ರವೇಶ ಮಾಡುವ, ಕಿರೀಟವನ್ನು ಸಿಂಹಾಸನದಲ್ಲಿ ಇರಿಸಿ ಆಡಿಸುವ ಭಾಗಗಳೆಲ್ಲವೂ ಇಲ್ಲಿಯೇ ಬರುತ್ತದೆ. ಪೂರ್ವರಂಗದ ವೇಷಗಳಲ್ಲಿ ವೈವಿಧ್ಯಗಳಿವೆ. ಇವು ಗಳಲ್ಲಿ ಮುಖ್ಯವಾಗಿ ಎರಡು ವರ್ಗದ ವೇಷಗಳನ್ನು ಕಾಣಬಹುದು. ಮೊದಲನೆಯ ವರ್ಗ ವೆಂದರೆ ಯಕ್ಷಗಾನದ ಕಲಾ ಜಗತ್ತಿಗೆ ಸೇರಿದ ಲೌಕಿಕ ವೇಷಗಳು. ಎರಡನೆಯ ವರ್ಗವೆಂದರೆ ಯಕ್ಷಗಾನದ ಸಾಂಸ್ಕೃತಿಕ ಅವಶಿಷ್ಟಗಳೆನ್ನಬಹುದಾದ ಧಾರ್ಮಿಕ ವೇಷಗಳು. ಯಕ್ಷಗಾನ ಕಲಾಜಗತ್ತಿಗೆ ಸೇರಿದ ಲೌಕಿಕ ಪಾತ್ರಗಳೆಂದರೆ ಕೋಡಂಗಿ, ಸ್ತ್ರೀ ವೇಷಗಳು ಹಾಗೂ ಮಂತ್ರವಾದಿ, ಪುರೋಹಿತ ಮೊದಲಾದ ಕಟ್ಟು ಹಾಸ್ಯ ವೇಷಗಳು. ಸುಬ್ರಾಯ, ಅರ್ಧನಾರೀಶ್ವರ, ಬಾಲಗೋಪಾಲರು ಎಂಬೀ ವೇಷಗಳು ಪರಂಪರೆಯ ಸಾಂಸ್ಕೃತಿಕ  ಅವಶಿಷ್ಟ್ಯಗಳಲ್ಲಿ ಸೇರುತ್ತವೆ.

ಲೌಕಿಕವೆನ್ನುವ ಪಾತ್ರಗಳೆಲ್ಲ ಯಕ್ಷಗಾನವು ಪ್ರಜ್ಞಾಪೂರ್ವಕವಾದ ಕಲೆ ಎಂಬ ನೆಲೆಯಲ್ಲಿ ರೂಪುಗೊಂಡವುಗಳು. ಕೋಡಂಗಿ ಯಕ್ಷಗಾನದ ಕಲಿಕೆಯ ಭಾಗವಾಗಿ ರೂಪುಗೊಂಡುದು. ಅದು ವೇಷ ವಿಧಾನದಲ್ಲಿ ಮೊದಲ ಹಂತ ಎಂಬ ಕಾರಣಕ್ಕಾಗಿಯೋ ಸಾಂಪ್ರದಾಯಕ ತರಬೇತಿಗಾಗಿಯೋ ರೂಪು ಪಡೆದುದು. ಸ್ತ್ರೀ ವೇಷಗಳು ಕಲಿಕೆಯ ಪರಿಣತಿಯನ್ನು ಸಾಬೀತುಪಡಿಸುವುದಕ್ಕಾಗಿ ಜಾಗ ಪಡೆದವುಗಳು. ಕಟ್ಟು ಹಾಸ್ಯಗಳೆಲ್ಲ ಕೇವಲ ಪ್ರೇಕ್ಷಕ ರಂಜನೆಯ ಸಲುವಾಗಿಯೇ ರೂಪುಗೊಂಡವುಗಳಾಗಿವೆ. ಆದರೆ ಇವ್ಯಾವುವೂ ಯಕ್ಷಗಾನದ ಪ್ರಾಚೀನತಮ ಎನ್ನಬಹುದಾದ ಸ್ವರೂಪದ ಸಂದರ್ಭದಲ್ಲಿಯೇ ರೂಪುಗೊಂಡವುಗಳಲ್ಲ. ಇವೆಲ್ಲ ಕಾಲಾನಂತರ ಬೆಳವಣಿಗೆಯ ಯಾವುದೋ ಕಾಲಘಟ್ಟದಲ್ಲಿ ಪರಿಷ್ಕರಣ ಹಂತದಲ್ಲಿ ರೂಪುಗೊಂಡವುಗಳು. ಆದರೆ ಧಾರ್ಮಿಕ ಎನ್ನಬಹುದಾದ ವೇಷಗಳೆಲ್ಲ ಯಕ್ಷಗಾನದ ಪ್ರಾಚೀನತಮ ವೇಷಗಳಾಗಿವೆ. ಅವುಗಳೆಲ್ಲ ಆಟದ ಸಂಪ್ರದಾಯ ರೂಪುಗೊಳ್ಳುವಾಗಲೋ ಅಥವಾ ಯಕ್ಷಗಾನದ ಧಾರ್ಮಿಕತೆಯ ಸಂದರ್ಭದಲ್ಲಿಯೋ ರೂಪುಗೊಂಡವುಗಳಾಗಿವೆ. ಅವೆಲ್ಲ ಇಂದಿಗೂ ಉಳಿದುಕೊಂಡಿದೆಯೆಂದರೆ ಅದು ಒಂದು ನಂಬಿಕೆಯ ಭಾಗವಾಗಿ ಮಾತ್ರ. ಸಂಪ್ರದಾಯದ ಹೆಸರಿನಲ್ಲಿಯೇ ಉಳಿದ ಸಾಂಸ್ಕೃತಿಕ ಅವಶಿಷ್ಟಗಳಿವು. ಇಲ್ಲಿ ಸುಬ್ರಾಯ ವೇಷ, ಬಾಲಗೋಪಾಲರ ವೇಷ ಹಾಗೂ ಅರ್ಧನಾರೀಶ್ವರ ವೇಷ ಇತ್ಯಾದಿಗಳೆಲ್ಲ ಸಾಂಸ್ಕೃತಿಕ ಸಂಗತಿಗಳ ಪಳೆಯುಳಿಕೆಗಳಾಗಿಯೇ ಗೋಚರಿಸುತ್ತವೆ.

ಸುಬ್ರಾಯ ಅಥವಾ ಸುಬ್ಬರಾಯ ವೇಷವು ಯಕ್ಷಗಾನದ ನಾಗಾರಾಧನೆಯ ನೆಲೆಯನ್ನು ಪ್ರತಿನಿಧಿಸುತ್ತದೆ. ಆಟದ ಸಂಪ್ರದಾಯವು ಆರಂಭವಾದಾಗಿನ ಧಾರ್ಮಿಕ ನಂಬಿಕೆಯನ್ನು ಸಂಕೇತಿಸುವ ಸಲುವಾಗಿ ಈ ವೇಷವು ಜಾಗ ಪಡೆದಿದೆ. ನಾಗಾರಾಧನೆಯ ಭಾಗವಾಗಿದ್ದ ಯಕ್ಷಗಾನವು ಸುಬ್ರಾಯನನ್ನು ಷಣ್ಮುಖಸುಬ್ರಾಯ ಎಂದು ಹೆಸರಿಸುವಲ್ಲಿ ಶೈವ ಪ್ರಭಾವವನ್ನು ಗುರುತಿಸಬಹುದು. ಅರ್ಧನಾರೀಶ್ವರ ಎಂಬ ವೇಷ ಕೂಡಾ ಯಕ್ಷಗಾನದ ಶೈವ ಹಿನ್ನೆಲೆಯನ್ನು ಸಂಕೇತಿಸುತ್ತದೆ. ಬಾಲಗೋಪಾಲರ ವೇಷಗಳು ಯಕ್ಷಗಾನದ ವೈಷ್ಣವ ಪ್ರಭಾವವನ್ನು ಸೂಚಿಸುತ್ತವೆ. ಇವುಗಳನ್ನು ಬಲರಾಮ ಕೃಷ್ಣರು ಎಂದೇ ಹೇಳಲಾಗುತ್ತದೆ. ಇದಕ್ಕೂ ಭಿನ್ನವಾಗಿ ಇವು ರಾಮ ಕೃಷ್ಣರ ವೇಷಗಳೆಂದು ಹೇಳುವವರೂ ಇದ್ದಾರೆ. ‘ರಾಮಕೃಷ್ಣರು ಬಂದರು ಬಾಗಿಲ  ತೆರೆಯಿರೋ’ ಎಂಬ ಯಕ್ಷಗಾನದ ಹಾಡೂ ಇದನ್ನೇ ಸಮರ್ಥಿಸುತ್ತದೆ. ಅಂದರೆ ಇದು ಭಾಗವತ ಪಂಥದ ಪ್ರಭಾವವನ್ನು ಸೂಚಿಸುತ್ತದೆ. ರಾಮ ಮತ್ತು ಕೃಷ್ಣರ ಪ್ರಾತಿನಿಧ್ಯವನ್ನು ಸಂಕೇತಿಸುವಂತೆ ಈ ವೇಷಗಳು ಯಕ್ಷಗಾನದಲ್ಲಿ ಜಾಗ ಪಡೆದಿವೆ. ಈ ಧಾರ್ಮಿಕವಾದ ವೇಷ ವಿಧಾನಗಳನ್ನು ನೋಡಿದರೆ ಯಕ್ಷಗಾನವು ಬೆಳೆದು ಬಂದ ದಾರಿಯನ್ನು ಖಚಿತಪಡಿಸಿಕೊಳ್ಳಬಹುದು. ನಾಗಾರಾಧನೆ, ಶೈವಾರಾಧನೆ, ವೈಷ್ಣವಾರಾಧನೆ, ವೈದಿಕ ಹಾಗೂ ಭಾಗವತ ಮನೋಧರ್ಮದ ಭಕ್ತಿ ಪರಂಪರೆಗಳ ಮೂಲಕ ಯಕ್ಷಗಾನವು ಹಾದು ಬಂದಿದೆ. ಯಕ್ಷಗಾನವು ಧಾರ್ಮಿಕವಾಗಿ ನಿರ್ದಿಷ್ಟವಾದ ಒಂದು ಕಾಲಘಟ್ಟದ ಕೊಡುಗೆಯಲ್ಲ. ಅದು ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಭಕ್ತಿ ಪರಂಪರೆಯ ಸಂದೇಶವನ್ನು ಸಾರುವ ಉದ್ದೇಶಕ್ಕಾಗಿಯೇ ಪರಿಷ್ಕಾರಗೊಳ್ಳುತ್ತಾ ಬಂದಿದೆ. ಈ ಕಾರಣಕ್ಕಾಗಿ ಕಾಲದ ಧಾರ್ಮಿಕ ಅಗತ್ಯಗಳನ್ನು ಮೀರಿ ಬಂದಾಗಲೂ ಪಾರಂಪರಿಕ ಎನ್ನುವ ಅವಶಿಷ್ಟಗಳು ಉಳಿದುಕೊಂಡವು. ಅವು ತಮ್ಮ ನಿರ್ದಿಷ್ಟ ಅರ್ಥ ಸಂಕೇತಗಳನ್ನು ಮೀರಿ ಕಲಾತ್ಮಕ ನೆಲೆಯಿಂದ ಉಳಿದುಕೊಂಡು ಬಂದಿವೆ.