ಪಕಡಿ ವೇಷಗಳು ಅಥವಾ ಪುಂಡುವೇಷಗಳು

ಯಕ್ಷಗಾನದಲ್ಲಿ ತರುಣ ವೇಷಗಳನ್ನು ಪುಂಡುವೇಷಗಳೆಂದು ಕರೆಯುತ್ತಾರೆ. ಈ ವೇಷಗಳು ಶೌರ್ಯದ, ಆವೇಶದ ಕುಣಿತಗಳಿಗೆ ಪ್ರಸಿದ್ಧವಾಗಿವೆ. ಆದುದರಿಂದ ಹೆಚ್ಚು ಭಾರವಾದ ವೇಷಭೂಷಣಗಳನ್ನೂ, ಶಿರೋಭೂಷಣವನ್ನೂ ಧರಿಸುವುದಿಲ್ಲ. ಪಕಡಿ ಎಂಬ ಶಿರೋಭೂಷಣವನ್ನು ಧರಿಸುವುದರಿಂದ ಪಕಡಿ ವೇಷಗಳೆಂದೂ ಇವುಗಳನ್ನು ಗುರುತಿಸಲಾಗುತ್ತದೆ.

ಯಕ್ಷಗಾನ ಪೂರ್ವರಂಗದ ಬಾಲಗೋಪಾಲ ವೇಷಗಳು ಪುಂಡುವೇಷಗಳ ಮಾದರಿ ಗಳಾಗಿವೆ. ದೇವೇಂದ್ರನ ಜೊತೆಗಿರುವ ಅಗ್ನಿ, ವಾಯು, ವರುಣಾದಿ ದಿಕ್ಪಾಲಕರು ಪುಂಡು ವೇಷದ ಮೂಲಕ ಪ್ರಕಟಗೊಳ್ಳುತ್ತಾರೆ. ಶ್ರೀಕೃಷ್ಣ, ಅಭಿಮನ್ಯು, ಸುಧನ್ವ, ಬಭ್ರುವಾಹನ ಮೊದಲಾದ ವೇಷಗಳು ಪ್ರಖ್ಯಾತ ಪುಂಡುವೇಷಗಳಾಗಿವೆ. 

ಸಾಮಾನ್ಯವಾಗಿ ಪುಂಡುವೇಷಗಳಿಗೆ ಗೌರವರ್ಣವನ್ನು ಮೂಲಬಣ್ಣವಾಗಿ ಲೇಪಿಸುತ್ತಾರೆ. ಪಾತ್ರದ ಸ್ವಭಾವಕ್ಕೆ ಹೊಂದಿಕೊಂಡಂತೆ ಹಣೆಯಲ್ಲಿ ವಿವಿಧ ಆಕೃತಿಯ ನಾಮಗಳನ್ನು ಬರೆಯುತ್ತಾರೆ. ಕಣ್ಣಿನ ಕೊನೆ ಹಾಗೂ ಗಲ್ಲದಲ್ಲಿ ಮುದ್ರೆ ಬರೆಯುವ ಕ್ರಮವಿದೆ. ಪುಂಡು ವೇಷಕ್ಕೆ ಮೀಸೆ ಇರಿಸುವ ಕ್ರಮವಿಲ್ಲ. ಆದರೆ ಸ್ವಲ್ಪ ದೊಡ್ಡ ಗಾತ್ರದ ಪಕಡಿಯನ್ನು ಧರಿಸುವ ಕೀಚಕ, ವಿಭೀಷಣ, ಶಲ್ಯ ಮೊದಲಾದ ಪಾತ್ರಗಳಿಗೆ ಮೀಸೆ ಕಟ್ಟುವ ಪದ್ಧತಿ ಇದೆ.

ಪುಂಡುವೇಷಗಳು ಧರಿಸುವ ದಗಲೆಗೆ ಪುಂಡು ರವಕೆ ಎಂದು ಹೆಸರು. ಈ ಪುಂಡು ರವಕೆಗೆ ಭುಜದಲ್ಲಿ ದಪ್ಪವಾದ ನೆರಿಗೆಗಳಿರುತ್ತವೆ. ರವಕೆಯ ಬಣ್ಣಕ್ಕೆ ಅನುಗುಣವಾಗಿ ಇಜಾರು ಇರುತ್ತದೆ. ಬಾಲ್‌ಮುಂಡಿನ ಗೋಟುಗಳಲ್ಲಿ ಎರಡು ಅಥವಾ ಮೂರು ಬಣ್ಣಗಳಿವೆ. ಕೊರಳಿಗೆ ಅಡ್ಡಿಗೆ, ಎದೆಗೆ ಎದೆಪದಕ, ಕಾಲಿಗೆ ಗೆಜ್ಜೆ, ಕಾಲಕಡಗ, ಜಂಗು ಧರಿಸುತ್ತಾರೆ. ಸೊಂಟಕ್ಕೆ ವೀರಕಸೆ ಮತ್ತು ಡಾಬು, ಹಿಂದೆ ಬಾಲ್‌ಮುಂಡು ಮತ್ತು ಜಟ್ಟಿ ಕೂಡುವಲ್ಲಿಗೆ ಉಲ್ಲನ್ ಡಾಬು ಅಥವಾ ಅಗಲ ಡಾಬು ಧರಿಸುತ್ತಾರೆ. ಭುಜಕೀರ್ತಿಯನ್ನು ಧರಿಸುವುದಿಲ್ಲ. ಕರ್ಣಪತ್ರ ಕಟ್ಟಿ ಅಶ್ವತ್ಥ ಎಲೆಯಾಕಾರದ ಪಕಡಿ ಕಿರೀಟವನ್ನು ಹಿಂದಕ್ಕೆ ಎಳೆದು ಕಟ್ಟಲಾಗುತ್ತದೆ. ಈ ಕಿರೀಟವು ಹಿಂದೆ ಬಾಗಿದಿದ್ದರೆ ಚಂದ ಕಾಣುವುದಿಲ್ಲ. ಅದಕ್ಕಾಗಿ ಹಿಂದಕ್ಕೆ ಬಾಗಿಸಿ ಪಕಡಿ ಕಟ್ಟಿದ ಮೇಲೆ ಕೆನ್ನೆಪೂ ಧರಿಸಿ ಬಿಗಿಗೊಳಿಸಲಾಗುತ್ತದೆ. ಪುಂಡುವೇಷದಲ್ಲಿ ಸಾತ್ವಿಕ ಪಾತ್ರಗಳು, ಎದುರು ವೇಷಗಳೂ ಇವೆ. ಪುಂಡುವೇಷಗಳಲ್ಲಿ ಒಂದನೆಯ ಪುಂಡು, ಎರಡನೆಯ ಪುಂಡು, ಮೂರನೆಯ ಪುಂಡು ಎಂಬ ವಿಧಗಳಿವೆ. ಒಂದನೆಯ ಪುಂಡಿಗೆ ಕೃಷ್ಣ, ರಾಮನಂತಹ ಸಾತ್ವಿಕ ಪಾತ್ರಗಳು ಬರುತ್ತವೆ. ಎರಡನೆಯ ಪುಂಡಿಗೆ ಅಭಿಮನ್ಯು, ಬಬ್ರುವಾಹನಂತಹ ಪಾತ್ರಗಳು ಸೇರುತ್ತವೆ. ಮೂರನೆಯ ಪುಂಡಿಗೆ ಅಗ್ನಿ ಇತ್ಯಾದಿ ಪಾತ್ರಗಳನ್ನು ಸೇರಿಸಲಾಗುತ್ತದೆ.

ಶ್ರೀಕೃಷ್ಣ

ಶ್ರೀಕೃಷ್ಣನ ಮುಖಕ್ಕೆ ಹಸಿರು ಬಣ್ಣವನ್ನು ತಳಪಾಯದ ಬಣ್ಣವಾಗಿ ಲೇಪಿಸುತ್ತಾರೆ. ಹಣೆಯಲ್ಲಿ ಕಸ್ತೂರಿ ತಿಲಕವನ್ನು ಒಳಗೊಂಡ ಉದ್ದ ನಾಮವನ್ನು ಹಾಕುತ್ತಾರೆ. ಕಣ್ಣಿನ ಕೊನೆ ಹಾಗೂ ಗಲ್ಲದಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಚಕ್ರ ಮುದ್ರೆಗಳನ್ನು ಬರೆಯುತ್ತಾರೆ. ಕಣ್ಣಿಗೆ ಮತ್ತು ಹುಬ್ಬಿಗೆ ಕಾಡಿಗೆ ಬಳಿಯುತ್ತಾರೆ. ಶ್ರೀಕೃಷ್ಣನು ಸ್ತ್ರೀಲೋಲ ಎಂಬುದನ್ನು ಸೂಚಿಸುವುದಕ್ಕೋ ಎಂಬಂತೆ ಹಿಂದೆ ಆ ಪಾತ್ರದ ಮೂಗಿಗೆ ಬುಲಾಕನ್ನು ಧರಿಸುವ ಪದ್ಧತಿ ಇತ್ತು.

ಕೃಷ್ಣನಿಗೆ ಹಸಿರು ಬಣ್ಣದ ರವಕೆ ಮತ್ತು ಮೇಲ್‌ಇಜಾರು ಇದ್ದು, ಅದೇ ಬಣ್ಣದ ಅಂಚಿನ ಫ್ರಿಲ್ ಬಾಲ್‌ಮುಂಡನ್ನು ಕಟ್ಟುತ್ತಾರೆ. ಎದುರಿಗೆ ಹಳದಿ ಬಣ್ಣದ ಫ್ರಿಲ್ ಇರುವ ತುಂಡು ಸೋಗೆವಲ್ಲಿಯನ್ನು ಕಟ್ಟಲಾಗುತ್ತದೆ. ಇದು ಕೃಷ್ಣನ ಪೀತಾಂಬರಕ್ಕೆ ಸಂಕೇತ. ಅದರ ಮೇಲೆ ವೀರಗಸೆ ಮತ್ತು ಸಪೂರ ಡಾಬುಗಳನ್ನು ಕಟ್ಟುಲಾಗುವುದು. ವೀರಗಸೆಯ ಉಲ್ಲನ್ ಸಂಪೂರ್ಣ ಕೆಂಪು ಬಣ್ಣದಿಂದ ಅಥವಾ ಕೆಂಪು ಕಪ್ಪು ಮಿಶ್ರಣದಿಂದ ಕೂಡಿರುತ್ತದೆ. ಕಾಲಿಗೆ ಗೆಜ್ಜೆ, ಕಾಲ್ಚೆಂಡು, ಜಂಗು ಕಟ್ಟುತ್ತಾರೆ. ತಲೆಗೆ ಕರ್ಣಪತ್ರ, ಪಕಡಿಯನ್ನು ಧರಿಸಿ, ಕೆನ್ನೆಪೂಗಳನ್ನು ಚುಚ್ಚುತ್ತಾರೆ. ಪಕಡಿಯ ಅಂಚಿನ ಉಲ್ಲನ್ ಕೆಂಪು ಬಣ್ಣ ಮತ್ತು ಕೆಂಪು ಕಪ್ಪು ಮಿಶ್ರಣದಿಂದ ಕೂಡಿರುತ್ತದೆ. ಶ್ರೀಕೃಷ್ಣನು ಕೈಯಲ್ಲಿ ಚಕ್ರವನ್ನು ಹಿಡಿದಿರುತ್ತಾನೆ. ಹಿಂದಿನ ಕಾಲದಲ್ಲಿ ಶ್ರೀಕೃಷ್ಣನ ವೇಷವೂ ಇತರ ಪುಂಡುವೇಷಗಳಂತೆಯೇ ಇದ್ದಿತ್ತಂತೆ. ಕಂಪನಿ ನಾಟಕಗಳ ಹಾಗೂ ಕ್ಯಾಲೆಂಡರ್ ಚಿತ್ರಗಳ ಪ್ರಭಾವದಿಂದ ಕೃಷ್ಣನಿಗೆ ನೀಲವರ್ಣ ಬಳಸುವ ಕ್ರಮವು ರೂಢಿಯಾಯಿತು. ಸಾಮಾನ್ಯವಾಗಿ ತೆಂಕುತಿಟ್ಟಿನಲ್ಲಿ ಶ್ರೀಕೃಷ್ಣ ಮತ್ತು ವಿಷ್ಣುವಿನ ಪಾತ್ರ ಒಂದೇ ಆಗಿರುತ್ತದೆ. ಈ ವೇಷಗಳನ್ನು ಪ್ರತ್ಯೇಕಿಸಲು ಮುಖ್ಯ ಗುರುತೊಂದಿದೆ. ಹಣೆಯಲ್ಲಿ ನಾಮದ ನಡುವೆ ಕಪ್ಪು ಬೊಟ್ಟಿದ್ದರೆ ಕೃಷ್ಣ. ಉದ್ದನೆಯ ಕೆಂಪುರೇಖೆ ಮಾತ್ರ ಇದ್ದರೆ ಅದು ವಿಷ್ಣು.

ವಿಠಲಶಾಸ್ತ್ರಿಗಳು ಸೃಷ್ಟಿಸಿದ ಕೃಷ್ಣನ ವೇಷ ಇನ್ನೊಂದು ಹೊಸ ಪರಂಪರೆಯನ್ನೇ ಬೆಳೆಸಿತು ಎಂದು ಶೇಣಿ ಗೋಪಾಲಕೃಷ್ಣಭಟ್ಟರು ಹೇಳಿದ್ದಾರೆ (೧೯೮೧ : ೨೩). ಹಿಂದಿನ ದಿನಗಳಲ್ಲಿ ಪಾರಿಜಾತ ಪ್ರಸಂಗದ ಕೃಷ್ಣನೋ, ಕೃಷ್ಣಾರ್ಜುನ ಕಾಳಗದ ಕೃಷ್ಣನೋ ಎಂಬ ವ್ಯತ್ಯಾಸವಿಲ್ಲದೆ ಕೃಷ್ಣನ ಒಡ್ಡೋಲಗವೆಂಬ ಹೆಸರಿನ ಒಂದು ದೃಶ್ಯವಿರುತ್ತಿತ್ತು. ಕೃಷ್ಣನ ವೇಷವು ಮೀಸೆ ಕಟ್ಟಿದ ಪುಂಡುವೇಷವೇ ಆಗಿತ್ತು. ಹೆಗಲಿನಿಂದ ಇಳಿಯಬಿಟ್ಟ ಒಂದು ಸೋಗೆ ವಲ್ಲಿಯೂ, ಮೀಸೆಯ ಮೇಲೆ ಮೂಗಿನ ತುದಿಯಲ್ಲಿ ಧರಿಸಿದ ಬುಲಾಕು ಎಂಬ ಆಭರಣವೂ, ಮುಖಕ್ಕೆ ಹಚ್ಚಿದ ಪಚ್ಚೆ ಬಣ್ಣವೂ ಮುಖ್ಯವಾಗಿತ್ತು. ದ್ವಾರಕೀಶನಾಗಿ, ಲೀಲಾ ಪುರುಷೋತ್ತಮನೆನಿಸಿ, ದುಷ್ಟನಿಗ್ರಹ, ಶಿಷ್ಟಪಾಲನೆಯ ಕರ್ಮದೀಕ್ಷೆಯನ್ನು ವಹಿಸಿಕೊಂಡ ಕೃಷ್ಣನು ಭಾಗವತರು ಹಾಡುವ “ಕಸ್ತೂರೀ ತಿಲಕಂ ಲಲಾಟ ಫಲಕೇ ಗೋಪಸ್ತ್ರೀ ಪರಿವೇಷ್ಟ್ಯಿತಂ…” ಎಂಬ ಶ್ಲೋಕದ ‘ಗೋಪಾಲ ಚೂಡಾಮಣಿಯಾಗಿ, ರಂಗಸ್ಥಳದಲ್ಲಿ ತೆರೆಯವರು ಬಿಲ್ಲುಗಳಿಂದ ತೆರೆಯನ್ನು ಆಧರಿಸಿ ಎತ್ತಿ ಹಿಡಿದು ತಯಾರಿಸುವ ರಂಗದೊಳಗಿನ ರಂಗಮಂಚದಲ್ಲಿ, ಇದ್ದಷ್ಟು ಸ್ತ್ರೀವೇಷಗಳಿಂದ ಕೂಡಿ ಪ್ರತ್ಯಕ್ಷನಾಗುವುದು ಪದ್ಧತಿಯಾಗಿತ್ತು.

ಬಭ್ರುವಾಹನ / ಅಭಿಮನ್ಯು

ಬಭ್ರುವಾಹನ, ಅಭಿಮನ್ಯು ಮೊದಲಾದ ಪಾತ್ರಗಳು ಪುಂಡುವೇಷಗಳಾಗಿವೆ. ಈ ಪಾತ್ರಗಳ ಮುಖವರ್ಣಿಕೆಯಲ್ಲಿ ವೈಶಿಷ್ಟ್ಯವಿದೆ. ಬಭ್ರುವಾಹನನಿಗೆ ವಜ್ರಾಕೃತಿಯನ್ನು ಬರೆದು ಬಿಳಿಬಣ್ಣದ ಅಡ್ಡಗೆರೆಯನ್ನು ಬರೆಯಲಾಗುತ್ತದೆ. ಧರಿಸುವ ರವಕೆಯ ಮತ್ತು ಇಜಾರಿನ ಬಣ್ಣ ಕೆಂಪು ಅಥವಾ ಕಪ್ಪು. ಪಕಡಿಯ ಉಲ್ಲನ್ ಹಾಗೂ ವೀರಗಸೆಯ ಉಲ್ಲನ್ ಕಪ್ಪು ಮತ್ತು ಕೆಂಪು ಮಿಶ್ರಬಣ್ಣದಿಂದ ಕೂಡಿರುತ್ತದೆ. ಅಭಿಮನ್ಯುವಿಗೆ ಹಣೆಯಲ್ಲಿ ವಜ್ರಾಕೃತಿಯನ್ನು ಬರೆದು, ಗೀರುಗಂಧದ ಗೆರೆಗಳನ್ನು ಬಿಡಿಸುತ್ತಾರೆ.

ಸುಧನ್ವ, ಜಯಂತ ಮೊದಲಾದ ಪಾತ್ರಗಳು ಹಣೆಯಲ್ಲಿ ಪುಂಡ್ರಾವನ್ನು ಬರೆಯುವ ಸಾತ್ವಿಕ ವೇಷಗಳಾಗಿವೆ. ಸರ್ಪಾಸ್ತ್ರ, ತಕ್ಷಕ ಮೊದಲಾದ ಸರ್ಪ ವೇಷಗಳನ್ನು ಪಕಡಿ ಕಿರೀಟವಿಟ್ಟು ಪುಂಡುವೇಷಗಳಾಗಿ ರೂಪಿಸುತ್ತಾರೆ. ಇವುಗಳ ಮುಖವರ್ಣಿಕೆ ಹಾವಿನ ಹೆಡೆಯ ಚಿತ್ರದಂತೆ ಸಂಕೀರ್ಣವಾಗಿದೆ. ಇವುಗಳು ಧರಿಸುವ ಪಕಡಿಗಳು ಕೆಂಪು ಮತ್ತು ಕಪ್ಪು ಬಣ್ಣದ ಉಲ್ಲನ್‌ನಿಂದ ಕೂಡಿವೆ. ಕೊಕ್ಕು ಧರಿಸಿದ ಪಕ್ಷಿ ಪಾತ್ರವನ್ನು ಕೂಡಾ ಪುಂಡುವೇಷವಾಗಿ ಮಾಡುವ ಸಂಪ್ರದಾಯವಿದೆ.

ಕೀಚಕ / ವಿಭೀಷಣ (ರಾಜಪಕಡಿ ವೇಷಗಳು)

ಕೊರಳಿನಿಂದ ಕೆಳಗೆ ರಾಜವೇಷಗಳಂತೆ ಕಂಡು ತಲೆಗೆ ಪಕಡಿಯನ್ನು ಧರಿಸುವುದರಿಂದ ಇದಕ್ಕೆ ರಾಜಪಕಡಿ ಎಂದು ಕರೆದಿರಬಹುದೆಂದು ಅನಿಸುತ್ತದೆ. ಈ ವೇಷಗಳ ನಡೆಯಲ್ಲಿ ರಾಜವೇಷಗಳ ಗತ್ತುಗಾರಿಕೆಯೇ ಇದೆ. ಕೀಚಕ, ವಿಭೀಷಣ ಮೊದಲಾದ ಪಾತ್ರಗಳು ಈ ಸಾಲಿನ ವೇಷಗಳಾಗಿವೆ. ಮೀಸೆ ಧರಿಸುವುದು ಇಲ್ಲಿ ವಿಶೇಷವಾಗಿದೆ. ದಪ್ಪ ಉಲ್ಲನ್ ಮೀಸೆಯನ್ನು ಧರಿಸುವ ಈ ಪಾತ್ರಗಳ ಪಕಡಿಯೂ ದೊಡ್ಡ ಗಾತ್ರದವು. ರಾಜವೇಷದ ವೇಷಭೂಷಣಗಳನ್ನು ಧರಿಸುವುದು ವಿಶೇಷ.

ಕೀಚಕನ ಮುಖವರ್ಣಿಕೆಯಲ್ಲಿ ಶೃಂಗಾರ ಸೂಚಕವಾದ ಹಸಿರು ಬಣ್ಣವನ್ನು ಬರೆಯುತ್ತಾರೆ. ಸೋಗೆವಲ್ಲಿಯನ್ನು ಧರಿಸಿ ಅದರ ಮೇಲೆ ಡಾಬು ಕಟ್ಟಿಕೊಳ್ಳುತ್ತಾರೆ. ಎದೆ ಪದಕ, ಕಾಲಿನ ತೊಡುಗೆಗಳು ಇರುತ್ತವೆ. ಅಕ್ರೂರ, ಶಲ್ಯ ಮೊದಲಾದ ಪಾತ್ರಗಳಿಗೂ ಇದೇ ಬಗೆಯ ವೇಷ ವಿಧಾನವಿದೆ.

ಕಿರಾತ (ಓರೆ ಪಕಡಿ ವೇಷ)

ಓರೆ ಪಕಡಿಯು ಕಿರಾತನಿಗೆ ಸೀಮಿತವಾಗಿದೆ. ಮುಖವರ್ಣಿಕೆಯಲ್ಲಿ ಹಸಿ ಬಣ್ಣ ಅಥವಾ ಬಣ್ಣದ ಸಾಲಿಗೆ ಸೇರುವ ಕಿರಾತ ವೇಷವು ಕೊರಳಿನಿಂದ ಕೆಳಗೆ ರಾಜವೇಷದಂತಿರುತ್ತದೆ. ಮೇಲೆ ಕರ್ಣಪಟ್ಟಿ ಕಟ್ಟಿ ದೊಡ್ಡದಾದ ಓರೆಪಕಡಿಯನ್ನು ಕಟ್ಟಲಾಗುತ್ತದೆ. ಆ ಪಕಡಿಯ ಹಿಂದಿನ ಬಟ್ಟೆಗೆ ಹುಲಿ ಚರ್ಮದಂತೆ ಚುಕ್ಕೆಗಳಿರುತ್ತದೆ. ಓರೆ ಪಕಡಿ ಇಲ್ಲದೇ ಇದ್ದಾಗ ಕಿರಾತ ವೇಷಕ್ಕೆ ದೊಡ್ಡ ಪಕಡಿಯನ್ನೇ ಓರೆಯಾಗಿ ಕಟ್ಟುವ ಕ್ರಮವೂ ಇದೆ. ಈ ವೇಷಕ್ಕೆ ಸೋಗೆ ವಲ್ಲಿಯನ್ನು ವಕ್ರವಾಗಿ ಕಟ್ಟಲಾಗುತ್ತದೆ. ಮೈಯ ಸುತ್ತ ಮಾವಿನ ಸೊಪ್ಪು ಕಟ್ಟಿ ಕಿರಾತ ಎಂಬುದನ್ನು ಸಂಕೇತಿಸಲಾಗುತ್ತದೆ.

 

ಕಿರೀಟ ವೇಷಗಳು

ಯಕ್ಷಗಾನದಲ್ಲಿ ಕಿರೀಟವೆನ್ನುವುದು ಅಧಿಕಾರದ ಹಾಗೂ ಹಿರಿತನದ ಸಂಕೇತ. ವಯಸ್ಸಿನಲ್ಲಿ ಹಿರಿತನವನ್ನು ಹಾಗೂ ಪಾತ್ರದ ಘನತೆಯನ್ನು ಕಿರೀಟದ ಮೂಲಕವೇ ಸೂಚಿಸಲಾಗುತ್ತದೆ. ಯುವಕರಲ್ಲದ ಎಲ್ಲಾ ಪಾತ್ರಗಳಿಗೂ ಯಕ್ಷಗಾನದಲ್ಲಿ ಕಿರೀಟಗಳೇ ಶಿರೋಭೂಷಣಗಳಾಗಿವೆ. ಕಿರೀಟ ವೇಷಕ್ಕೆ ರಾಜವೇಷ ಎಂಬ ಪರ್ಯಾಯ ಹೆಸರೂ ಇದೆ. ಈ ರಾಜವೇಷಕ್ಕೆ ಉಪಯೋಗಿಸುವ ರಾಜ ಕಿರೀಟಕ್ಕೆ ಪೂಂಬೆ ಕಿರೀಟ ಎಂಬ ಹೆಸರೂ ಇದೆ. ಇದರ ಮುಗುಳಿಗೆ ಬಾಳೆಗೊನೆ ಮೂತಿಯ ಆಕಾರವಿರುವುದರಿಂದ ಈ ಹೆಸರು ಬಂದಿರಬಹುದು. ಸ್ಥಳೀಯ ಭಾಷೆಯಲ್ಲಿ ಬಾಳೆಮೂತಿಗೆ ಪೂಂಬೆ ಎಂಬ ಹೆಸರೇ ಇದೆ.

ರಾಜ ಪಾತ್ರಗಳಿಗೆ ಕಿರೀಟವೇ ಶಿರೋಭೂಷಣ. ಕಿರೀಟವೆಂಬುದು ರಾಜವೇಷದ ಸಂಕೇತವೂ ಹೌದು. ರಾಜರಲ್ಲದವರೂ ಯಕ್ಷಗಾನದಲ್ಲಿ ಕಿರೀಟವನ್ನೇ ಶಿರೋಭೂಷಣವಾಗಿ ಧರಿಸುತ್ತಾರೆ. ಉದಾಹರಣೆಗೆ ಅತಿಕಾಯ, ಇಂದ್ರಜಿತು, ಅರ್ಜುನಾದಿ ವೇಷಗಳ ಶಿರೋಭೂಷಣವೂ ಕಿರೀಟವೇ ಆಗಿದೆ. ಯಕ್ಷಗಾನದ ಕಿರೀಟದಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ. ಇದರಲ್ಲಿ ಮುಖ್ಯವಾದ ಭಾಗ ಕಲಶ. ಎರಡು ಬದಿಯಲ್ಲಿ ಕಿವಿಗಳು ಮತ್ತು ಕಲಶದ ಮೇಲ್ಭಾಗದಲ್ಲಿ ನವಿಲುಗರಿಯ ಗುಚ್ಛ. ಇದನ್ನು ನೋಡಿದರೆ ಸುಂದರವಾಗಿ ಅಲಂಕರಿಸಿದ ಕಲಶ ಅಥವಾ ಚೆಂಬಿನಂತೆ ಕಾಣುತ್ತದೆ. ಇದರ ಕಲಶದ ಭಾಗದಲ್ಲಿ ಬಾಯಿ, ಕಂಠ, ಹೊಟ್ಟೆ ಮತ್ತು ಟೊಳ್ಳಾಗಿರುವ ಒಳ ಭಾಗವಿರುತ್ತದೆ. ಟೊಳ್ಳಾದ ಭಾಗವು ತಲೆಯ ಮೇಲೆ ಕುಳಿತುಕೊಳ್ಳಲು ಅನುಕೂಲವಾದ ಆಕಾರದಲ್ಲಿರುತ್ತದೆ. ಕಲಶದಲ್ಲಿ ಸುಂದರವಾದ ಅಲಂಕೃತ ಆಕೃತಿಗಳಿರುತ್ತವೆ. ಮಣಿ ವಸ್ತುಗಳು, ಕನ್ನಡಿ ಮೊದಲಾದವುಗಳಿಂದ ಇಡೀ ಕಿರೀಟವನ್ನು ಅಲಂಕರಿಸಲಾಗುತ್ತದೆ.

ಹಿಂದೆ ಯಕ್ಷಗಾನಗಳಲ್ಲಿ ಪೂಜೆಗಾಗಿ ಗಣಪತಿಯ ವಿಗ್ರಹವನ್ನು ಇಡುತ್ತಿರಲಿಲ್ಲವಂತೆ. ಕಿರೀಟವನ್ನೇ ಗಣಪತಿಯ ಸಂಕೇತವಾಗಿ ಇಡಲಾಗುತ್ತಿತ್ತು. ಇಂತಹ ಕಿರೀಟಗಳ ಕಲಶದ ಕೆಳ ಭಾಗದಲ್ಲಿ ಗಣಪತಿಯ ಸೂಕ್ಷ್ಮ ಕೆತ್ತನೆಗಳಿರುತ್ತಿದ್ದವು. ಈ ಕಿರೀಟಗಳನ್ನು ರಾಮ ಲಕ್ಷ್ಮಣರ ಕಿರೀಟವೆಂದೇ ಹೇಳಲಾಗುತ್ತಿತ್ತು. ಪ್ರಸಂಗಗಳಲ್ಲಿ ರಾಮಲಕ್ಷ್ಮಣರ ಪಾತ್ರಗಳು ಇದೇ ಕಿರೀಟವನ್ನು ಧರಿಸುತ್ತಿದ್ದುವಂತೆ. ಆರುಗೇಣು ಉದ್ದದ ದೇಹದಲ್ಲಿ ಒಂದು ಗೇಣು ಉದ್ದದ ಮುಖ, ಒಂದು ಗೇಣು ಮುಖಕ್ಕೆ ಒಂದು ಗೇಣುದ್ದದ ಕಿರೀಟ ಇದು ಅಳತೆಯ ಪ್ರಮಾಣ.

ಕಿರೀಟ ವೇಷಗಳಲ್ಲಿ ಪೀಠಿಕೆ ವೇಷ ಗಳೆಂದು ಎದುರು ವೇಷಗಳೆಂದು ಎರಡು ವಿಧ. ಯಕ್ಷಗಾನದಲ್ಲಿ ಪೀಠಿಕೆ ವೇಷ ಗಳೆಂದರೆ ಬಹುತೇಕ ಪ್ರಸಂಗದ ನಾಯಕ ಪಾತ್ರಗಳೆಂದೇ ಅರ್ಥ. ದುಷ್ಟರನ್ನು ಶಿಕ್ಷಿಸುವಲ್ಲಿ, ಶಿಷ್ಟರನ್ನು ರಕ್ಷಿಸುವಲ್ಲಿ ಇವುಗಳ ಪಾತ್ರ ಹಿರಿದು. ಸಾಮಾನ್ಯವಾಗಿ ಸಾತ್ವಿಕ ಸ್ವಭಾವದ ಈ ಪಾತ್ರಗಳು ಪ್ರಸಂಗದಲ್ಲಿ ಕೊನೆಗೆ ಗೆಲುವನ್ನು ಸಾಧಿಸುತ್ತವೆ. ದುಷ್ಟ ಶಕ್ತಿಗಳ ಅಥವಾ ದುಷ್ಟ ಸ್ವಭಾವದ ಪಾತ್ರಗಳನ್ನು ವಿರೋಧಿಸಿ ನಿಂತು ಕೊನೆಗೆ ದೈವಕೃಪೆ ಯಿಂದ ರಕ್ಷಣೆಗೊಳ್ಳುವ ಪಾತ್ರಗಳಿವು. ಸಾಮಾನ್ಯವಾಗಿ ಪೀಠಿಕೆ ವೇಷಗಳ ಮುಖವರ್ಣಿಕೆ, ಕುಣಿತ ಇವುಗಳೆಲ್ಲ ಸೌಮ್ಯವಾಗಿರ ಬೇಕೆಂಬುದು ಸಂಪ್ರದಾಯ. ಇವುಗಳ ಮುಖವರ್ಣಿಕೆಗಳಲ್ಲೂ ಸೌಮ್ಯಸ್ವಭಾವವೇ ಪ್ರಕಟವಾಗುವಂತಿರಬೇಕು. ಸಾತ್ವಿಕ ವರ್ಣಗಳಲ್ಲೇ ಇವುಗಳ ಮುಖವರ್ಣಿಕೆಯು ಇರುತ್ತದೆ. ಆಟದಲ್ಲಿ ಮೊದಲು ಒಡ್ಡೋಲಗ ಕೊಡುವ ಅಥವಾ ರಂಗಕ್ಕೆ ಬರುವ ವೇಷಗಳಿವು. ಪ್ರಸಂಗಕ್ಕೆ ಪೀಠಿಕೆಯ ರೂಪದಲ್ಲಿ ಬರುವ ಪಾತ್ರಗಳಾದ್ದರಿಂದ ಇವುಗಳನ್ನು ಪೀಠಿಕೆ ವೇಷಗಳೆಂದು ಕರೆದಿರಬಹುದು. ಇವುಗಳಲ್ಲಿ ಪ್ರಮುಖವಾಗಿ ಬರುವ ವೇಷಗಳೆಂದರೆ ಕಿರೀಟ ಧರಿಸಿದ ರಾಜವೇಷಗಳು. ಮೀಸೆ ಕಟ್ಟುವ ವೇಷಗಳಾದ್ದರಿಂದ ಇವುಗಳನ್ನು ಕಟ್ಟುವೇಷಗಳೆಂದೂ ಹೇಳಲಾಗುತ್ತದೆ. ಯಾವುದೇ ಪ್ರಸಂಗಕ್ಕೆ ಸಂಬಂಧಿಸಿದಂತೆ ಬರುವ ಪೀಠಿಕಾಪಾತ್ರಗಳನ್ನು ಈ ವೇಷಗಳು ಸೂಚಿಸುತ್ತವೆ. ಮುಖ್ಯವಾಗಿ ಯಕ್ಷಗಾನ ಪ್ರಸಂಗಗಳ ಪೀಠಿಕೆ ವೇಷಗಳೆಂದರೆ ಶ್ರೀರಾಮ, ದೇವೇಂದ್ರ, ಅರ್ಜುನ, ನಳ ಇತ್ಯಾದಿ ಪಾತ್ರಗಳು.

ಪೀಠಿಕೆ ವೇಷದ ಬಣ್ಣಗಾರಿಕೆ

ಮುಖಕ್ಕೆ ಮೊದಲಿಗೆ ನಸುಕೆಂಬಣ್ಣ ಕಾಣುವ ಬಂಗಾರ ಬಣ್ಣದ ಛಾಯಬಣ್ಣವನ್ನು ಮೂಲಲೇಪನವಾಗಿ ಹಚ್ಚಿಕೊಳ್ಳುತ್ತಾರೆ. ಹಣೆಗೆ ವೈಷ್ಣವನಾಮವನ್ನು (ಊರ್ಧ್ವಪುಂಡ್ರ) ಬರೆಯುತ್ತಾರೆ. ಹುಬ್ಬಿನ ಮಧ್ಯೆ ಹಣೆಗೆ ಕೆಂಪು ಗೀಟು ಎಳೆದು, ಅದಕ್ಕೆ ತೆಳ್ಳಗಿನ ಕಪ್ಪು ಗೆರೆ ಹಾಕಿ ಅರಶಿನ ಬಣ್ಣದ ‘U’ ಆಕಾರ ಬರೆಯುತ್ತಾರೆ. ಇದಕ್ಕೂ ತೆಳ್ಳಗಿನ ಕಪ್ಪು ಗೆರೆಯನ್ನು ಎಳೆಯಲಾಗುತ್ತದೆ. ಸಾಮಾನ್ಯವಾಗಿ ಕಾಣದಂತಿರುವ ಈ ಕಪ್ಪು ಗೆರೆಗಳನ್ನು ಎಳೆಯುವುದರಿಂದ ಬಣ್ಣಗಳು ಪರಸ್ಪರ ಮಿಶ್ರವಾಗುವುದಿಲ್ಲ. ಕೆಲವರು ಸಾತ್ವಿಕ ನೆಲೆಯಿಂದ ಕಪ್ಪು ಗೆರೆಗಳನ್ನು ಎಳೆಯದೆಯೇ ನಾಮಗಳನ್ನು ಹಾಕುತ್ತಾರೆ. ಇದುವೇ ಪರಂಪರೆಯ ಶುದ್ಧವಾದ ಕ್ರಮವಂತೆ. ಹೊರಭಾಗದಲ್ಲಿ ಸ್ವಲ್ಪ ದಪ್ಪಗೆ ಬಿಳಿಬಣ್ಣವನ್ನು ಹಳದಿ ನಾಮದ ಹೊರ ಅಂಚಿಗೆ ಸರಿಯಾಗಿ ಎಳೆಯುತ್ತಾರೆ. ಭ್ರೂಮಧ್ಯದ ಕೆಳಗೆ ಮೂಗಿನ ಮೇಲೆ ಒಂದು ವೃತ್ತಾಕಾರದ ಚಕ್ರ ಮುದ್ರೆ ಬರೆಯುವುದೂ ಇದೆ. ಹುಬ್ಬಿಗೆ ಕಾಡಿಗೆ ಹಾಗೂ  ಕಣ್ಣಿಗೆ ಕಾಡಿಗೆಯ ಸಪೂರ ಗೆರೆಗಳನ್ನು ಎಳೆಯುತ್ತಾರೆ. ಕಣ್ಣಿನ ಕೊನೆಗಳಲ್ಲಿ ಬಿಳಿಗೆರೆಗಳನ್ನು ಬರೆದು, ಚಿಬುಕದಲ್ಲಿ ಚಕ್ರಮುದ್ರೆ ಯನ್ನು ಬರೆಯುತ್ತಾರೆ. ಚಕ್ರ ಮುದ್ರೆಯು ಕೆಂಪು ಬೊಟ್ಟು, ಅದರ ಸುತ್ತಲೂ ಅರಶಿನ ವೃತ್ತ, ಅದರ ಸುತ್ತಲೂ ದಪ್ಪ ಬಿಳಿ ವೃತ್ತ ಇದಕ್ಕೆ ತಾಗಿಕೊಂಡಂತೆ ಮುದ್ರೆ, ಆ ಮುದ್ರೆಯ ಸುತ್ತಲೂ ಕೆಂಪು ಅಂಚನ್ನು ಒಳಗೊಂಡಿರುತ್ತದೆ. ಗಲ್ಲದಲ್ಲಿಯೂ ಇದೇ ರೀತಿಯ ಮುದ್ರೆ ಬರೆಯುವ ಕ್ರಮವಿದೆ. ಗಲ್ಲದ ಕೊನೆಯಲ್ಲಿ ಕಾಡಿಗೆಯಲ್ಲಿ ಗಡ್ಡ ಬರೆಯುತ್ತಾರೆ. ಇದಕ್ಕೆ ಕೆಂಪು ಅಂಚು ಇರುತ್ತದೆ.

ವೇಷವಿಧಾನ

ಪೀಠಿಕೆ ವೇಷಗಳು ಸಾಮಾನ್ಯವಾಗಿ ಹಸಿರು ದಗಲೆಯನ್ನು ಹಾಕಿಕೊಳ್ಳುತ್ತವೆ. ದಗಲೆಯ ಬಣ್ಣ, ಚಲ್ಲಣದ ಬಣ್ಣ ಮತ್ತು ಬಾಲ್‌ಮುಂಡಿನ ಅಂಚಿನ ಬಣ್ಣ ಒಂದೇ ಆಗಿರಬೇಕೆಂಬುದು ನಿಯಮ. ಬಾಲ್‌ಮುಂಡು ಬಿಳಿ ಬಣ್ಣದ್ದಾಗಿದ್ದು, ಹಸಿರು ಮತ್ತು ಹಳದಿ ಗೋಟುಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಹಳದಿ ಮತ್ತು ಬಿಳಿಬಣ್ಣದ ಸೋಗೆವಲ್ಲಿಗಳನ್ನು ಧರಿಸುತ್ತಾರೆ.

ಕೊರಳಿಗೆ ಬಿಳಿಯ ಕಾಯಿಗಳಿರುವ ಗುಂಡಡ್ಡಿಗೆಯನ್ನು ಮತ್ತು ಅಗಲಡ್ಡಿಗೆಯನ್ನು ಧರಿಸುತ್ತಾರೆ. ಎದೆಪದಕದ ಅಂಚು ಕೆಂಪು ಉಲ್ಲನ್‌ನಿಂದ ಅಥವಾ ಕೆಂಪು ಕಪ್ಪು ಮಿಶ್ರಣದ ಉಲ್ಲನ್‌ನಿಂದ ಕೂಡಿರುತ್ತದೆ.  ಭುಜಕೀರ್ತಿ(ಅಂಚಿಗೆ ಉಲ್ಲನ್ ಇದೆ), ತೋಳ್ಕಟ್ಟು, ಕೈಕಟ್ಟು ಕೆಂಪು ಬಣ್ಣದ್ದಾಗಿರುತ್ತವೆ. ವೀರಗಸೆಯ ಉಲ್ಲನ್ ಮತ್ತು ಗೊಂಡೆಯ ಬಣ್ಣ ಕೆಂಪು ಅಥವಾ ಕೆಂಪು ಕಪ್ಪು ಮಿಶ್ರಣದ ಉಲ್ಲನ್‌ನಿಂದ ಕೂಡಿರುತ್ತದೆ. ಎರಡು ಡಾಬು, ಎರಡು ಜತೆ ಮಾರುಮಾಲೆ, ಒಂದೊಂದು ಜತೆ ಕಾಲುಮುಳ್ಳು, ಕಾಲು ಕಡಗ, ನೂರು ಗೆಜ್ಜೆಗಳಿರುವ ಒಂದು ಜತೆ ಗೆಜ್ಜೆ, ಐವತ್ತು ಗೆಜ್ಜೆಗಳಿರುವ ಕಾಲುಜಂಗು ಧರಿಸುತ್ತಾರೆ. ಆರು ಕಟ್ಟುದಿಂಬುಗಳಲ್ಲಿ ನಾಲ್ಕು ಕೆಂಪು ಹಾಗೂ ಎರಡು ಕಪ್ಪು ಬಣ್ಣದಿಂದ ಕೂಡಿರಬೇಕು. ಒಟ್ಟಿನಲ್ಲಿ, ಪೀಠಿಕೆ ವೇಷಗಳ ವೇಷವಿಧಾನವು ಕೆಂಪು ಬಣ್ಣದಿಂದ ಶೋಭಿಸುತ್ತದೆ.

ಶಿರೋಭೂಷಣ

ಪೀಠಿಕೆ ವೇಷದ ಕೋಲು ಕಿರೀಟವು ಕೆಂಪು ಸಕಲಾತಿಯಿಂದ ಕೂಡಿದ್ದು, ಕೆಂಪು ಉಲ್ಲನ್ ಗೊಂಡೆಗಳಿರುತ್ತವೆ. ಒಂದು ಜತೆ ಕರ್ಣಪತ್ರವನ್ನು ಕಿವಿಯ ಇಕ್ಕೆಡೆಗಳಲ್ಲಿ ಧರಿಸುತ್ತಾರೆ. ಅವುಗಳ ಉಲ್ಲನ್ ಬಣ್ಣ ಕೆಂಪು. ಕೆನ್ನೆಪೂ ಒಂದು ಜತೆಯನ್ನು ಧರಿಸಿ, ಕಿರೀಟವನ್ನು ಬಿಗಿಯಾಗಿ ಇರಿಸುತ್ತಾರೆ. ಪೀಠಿಕೆ ವೇಷಗಳು ಉಲ್ಲನ್ ಮೀಸೆಯನ್ನು ಕಟ್ಟಿಕೊಳ್ಳುತ್ತವೆ. ಕಿರೀಟದ ಹಿಂಭಾಗದಲ್ಲಿ ಕೇಸರವನ್ನು ಇಳಿಬಿಡಲಾಗುತ್ತದೆ.

ಪೀಠಿಕೆ ವೇಷದ ಶಿರೋಭೂಷಣದ ತುದಿಯಲ್ಲಿ ಬೆಳ್ಳಿಯ ಅರಳೋಲೆಗಳನ್ನು ಪೋಣಿ ಸುತ್ತಾರೆ. ಇದು ಪೀಠಿಕೆ ವೇಷಗಳಿಗಿರುವ ಅನನ್ಯತೆಯಾಗಿದೆ. ಪೀಠಿಕೆ ವೇಷದ ಕಿರೀಟವನ್ನು ಸಾಮಾನ್ಯವಾಗಿ ಚೌಕಿಯಲ್ಲಿ ಪೂಜೆಗೆ ಇಡುತ್ತಾರೆ. ನಂತರ ಅದನ್ನು ಅಕ್ಷತೆ ಹಾಕಿ ಪುರೋಹಿತರು ಪೀಠಿಕೆ ಪಾತ್ರ ಧರಿಸುವ ಕಲಾವಿದನ ತಲೆಗೆ ಇಡುತ್ತಾರೆ. ಕಲಾವಿದನು ಎಡ ಮೊಣಕಾಲನ್ನು ಊರಿ, ಕಿರೀಟವನ್ನು ಮುಟ್ಟಿ ನಮಸ್ಕರಿಸಿ ತಲೆಗಿರಿಸಿಕೊಳ್ಳುತ್ತಾನೆ.

ಧರ್ಮರಾಯನ ಕಿರೀಟ (ಚಿಕ್ಕ ಕೇಶಾವರಿ)

ಯಕ್ಷಗಾನದಲ್ಲಿ ಧರ್ಮರಾಯನ ಕಿರೀಟ ಎಂದು ಸಾಮಾನ್ಯವಾಗಿ ಕರೆಯುವ ಶಿರೋಭೂಷಣವಿದೆ. ಇದನ್ನು ಚಿಕ್ಕ ಕೇಶಾವರಿ ಎಂದೂ ಹೇಳಲಾಗುತ್ತದೆ. ಏಕೆಂದರೆ ಈ ಕಿರೀಟದ ಮುಗುಳಿಗೆ ಚಿಕ್ಕ ವೃತ್ತಾಕಾರದ ತಟ್ಟೆ ಅಥವಾ ತಟ್ಟಿಯನ್ನು ಬಂಧಿಸಿರುತ್ತದೆ. ನೋಡಲು ಆಕಾರದಲ್ಲಿ ಬಣ್ಣದ ವೇಷದ ಕೇಶಾವರಿ ಕಿರೀಟದಂತೆ ಕಂಡರೂ ಅದಕ್ಕಿಂತಲೂ ತುಂಬಾ ಚಿಕ್ಕದಾಗಿದೆ. ಈ ಕಿರೀಟವನ್ನು ತೊಡುವ ವೇಷಗಳು ರಾಜವೇಷದ ವಿಭಾಗದಲ್ಲಿಯೇ ಸೇರುತ್ತವೆ. ವೇಷ ವಿಧಾನವೆಲ್ಲ ಹಿಂದೆ ಹೇಳಿದ ಕಿರೀಟ ವೇಷಗಳದ್ದೇ ಆಗಿರುತ್ತದೆ. ಆದರೆ ಶಿರೋಭೂಷಣ ಮಾತ್ರ ಉರುಟಾಗಿರುತ್ತದೆ. ಸಣ್ಣ ಅಟ್ಟೆಯಿರುವ ವೃತ್ತಾಕಾರದ ಕಿರೀಟದ ಸುತ್ತಲೂ ಉಲ್ಲನ್‌ಗೊಂಡೆ ಇರುವುದಿಲ್ಲ. ಕಿರೀಟದ ಮೇಲ್ತುದಿಯಲ್ಲಿ ಒಂದು ಸತ್ತಿಗೆ ಇರುತ್ತದೆ. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಇದನ್ನು ಧರ್ಮರಾಯನು ಧರಿಸುವುದರಿಂದ ಧರ್ಮರಾಯನ ಕಿರೀಟ ಎಂಬ ಹೆಸರು ಬಂದಿರಬೇಕು. ಧರ್ಮರಾಯ ಮಾತ್ರವಲ್ಲದೆ ಮಯೂರಧ್ವಜ, ಭೀಮಕ, ದಶರಥ, ಶಲ್ಯಪರ್ವದ ಶಲ್ಯ ಮೊದಲಾದ ಪಾತ್ರಗಳು ಇದೇ ಕಿರೀಟವನ್ನು ಧರಿಸುತ್ತವೆ.

ಈ ಕಿರೀಟದ ವ್ಯಾಸವು ೧೮ ಇಂಚು ಇರುತ್ತದೆ. ಧರ್ಮಿಷ್ಠರೂ, ಪ್ರಾಜ್ಞರೂ ಆದ ಚಕ್ರವರ್ತಿಗಳು ರಾಜರ್ಷಿಗಳು ಈ ಕಿರೀಟವನ್ನು ಧರಿಸುವುದು ಕ್ರಮ. ಧರ್ಮರಾಯ, ಮಯೂರಧ್ವಜ, ಭೀಮಕ ಇವರಿಗೆ ಕೆಂಪು ದಗಲೆ ಹಾಗೂ ಕೆಂಪು ಇಜಾರು ಇರುತ್ತದೆ. ದಶರಥನಿಗಾದರೆ ಬಿಳಿ ದಗಲೆ ಮತ್ತು ಬಿಳಿ ಇಜಾರು ಧರಿಸುವ ಕ್ರಮವಿದೆ.

ಮುಖವರ್ಣಿಕೆಯಲ್ಲಿ ಧರ್ಮರಾಯ ಮತ್ತು ಮಯೂರಧ್ವಜರಿಗೆ ವೈಷ್ಣವನಾಮ, ಚಕ್ರ, ಮುದ್ರೆ ಇರುತ್ತದೆ. ಭೀಮಕ ಮಹಾರಾಜನಿಗೆ ಅಡ್ಡನಾಮ ಹಾಗೂ ವೃದ್ಧಾಪ್ಯವನ್ನು ತೋರಿಸುವಂತೆ ಮುಖವರ್ಣಿಕೆಯಲ್ಲಿ ಬದಲಾವಣೆ ಮಾಡುತ್ತಾರೆ. ಧರ್ಮರಾಯನ ಮುಖವರ್ಣಿಕೆಯಲ್ಲಿ ಕೆಲವರು ಮೂಗಿನ ಮೇಲಿನಿಂದಲೇ ‘V’ ಆಕಾರದ ನಾಮವನ್ನು ಆರಂಭಿಸಿ ಹಣೆಗೆ ವಿಸ್ತರಿಸುತ್ತಾರೆ. ಈ ನಾಮ ವಿನ್ಯಾಸದ ನಡುವೆ ತಿಲಕವಿಡುತ್ತಾರೆ. ಸಾಮಾನ್ಯವಾಗಿ ಕೆಲವರು ಇದರ ಜೊತೆಗೆ ಅಡ್ಡನಾಮವನ್ನೂ ಹಾಕುವುದಿದೆ. ಧರ್ಮರಾಯನ ಕಿರೀಟದ ವಿನ್ಯಾಸಕ್ಕೆ ಒಂದು ರೀತಿಯಲ್ಲಿ ಹೊಂದಿಕೆಯಾಗುವಂತೆ ಹಣೆಯ ಅಡ್ಡನಾಮ, ಉದ್ದನಾಮ ಅದರ ನಡುವೆ ತಿಲಕವಿರಿಸಿದ್ದನ್ನು ಕಾಣಬಹುದು. ಧರ್ಮರಾಯ ಗಡ್ಡಕಟ್ಟಿ ಕೊಳ್ಳುವುದರ ಮೂಲಕ ಭೀಮಕ ಮೊದಲಾದ ಪಾತ್ರಗಳನ್ನು ಮಾಡಲಾಗುತ್ತದೆ.

ಎದುರು ವೇಷ

ಎದುರು ವೇಷವೆಂದರೆ ಪ್ರಸಂಗದ ಪ್ರಧಾನ ಪಾತ್ರದ ವಿರುದ್ಧವಾದ ಪಾತ್ರ. ಅಂದರೆ ಪ್ರಸಂಗದ ಪ್ರತಿನಾಯಕ ಪಾತ್ರ ಎಂದೇ ಅರ್ಥ. ಪೀಠಿಕೆ ವೇಷಗಳು ನಾಯಕನ ಪಾತ್ರಗಳಾಗಿಯೂ ಅವುಗಳಿಗೆ ವಿರೋಧಿ ಸ್ಥಾನದಲ್ಲಿ ಪ್ರತಿನಾಯಕರಾಗಿ ಬರುವ ಎಲ್ಲ ಪಾತ್ರಗಳು ಎದುರು ವೇಷಗಳ ಗುಂಪಿನಲ್ಲಿ ಸೇರುತ್ತವೆ. ಕರ್ಣಪರ್ವ ಪ್ರಸಂಗದಲ್ಲಿ ಅರ್ಜುನ ಪೀಠಿಕೆ ವೇಷವಾದರೆ ಕರ್ಣನದು ಎದುರು ವೇಷ. ಹೀಗೆ ಕೌರವ, ಕಾರ್ತವೀರ್ಯ, ತಾಮ್ರ ಧ್ವಜ, ಅತಿಕಾಯ, ಸುಲೋಚನ ಮೊದಲಾದವುಗಳೆ ಎದುರು ವೇಷಗಳ ಪಾತ್ರಗಳು.

ನಾಯಕ ಪಾತ್ರದ ಮುಖ್ಯಧೋರಣೆಯನ್ನು ವಿರೋಧಿಸುವ ಕಾರಣಕ್ಕೆ ವಿರೋಧ ಎಂಬರ್ಥದಲ್ಲಿ ಎದುರು ವೇಷ ಎಂಬ ಹೆಸರು ಬಂದಿರಬಹುದು. ಇದನ್ನು ಇದಿರುವೇಷ ಎಂದೂ ಕರೆಯುವುದಿದೆ. ಸೇಡಿಯಾಪು ಕೃಷ್ಣಭಟ್ಟರು ಹೇಳುವಂತೆ ಇದಿರು, ಎದುರು ಎಂಬುದಕ್ಕೆ ಎರಡು ಬಗೆಯುವುದು ಅಥವಾ ಎರಡಾಡುವುದು ಎಂಬ ಅರ್ಥವಿದೆ. ಎರಡಾಡುವ ಕಾರಣಕ್ಕೆ ಪ್ರತಿನಾಯಕ ವೇಷಕ್ಕೆ ಈ ಹೆಸರು ಬಂದಿರಬಹುದು. ಬಡಗುತಿಟ್ಟಿ ನಲ್ಲಿ ಈ ವೇಷಕ್ಕೆ ಎರಡನೇ ವೇಷ ಎಂದು ಕರೆಯುತ್ತಾರೆ.

ಎದುರುವೇಷ ಬಣ್ಣಗಾರಿಕೆ

ಎದುರು ವೇಷಗಳು ಯಕ್ಷಗಾನದಲ್ಲಿ ಪ್ರತಿನಾಯಕ ಪಾತ್ರಗಳಾಗಿರುವುದರಿಂದ ಅವುಗಳ ಸ್ವಭಾವಕ್ಕನು ಗುಣವಾಗಿ ಮುಖವರ್ಣಿಕೆಯೂ, ಉಗ್ರವಾಗಿರುತ್ತದೆ. ಮುಖವರ್ಣಿಕೆಗೆ ಹೆಚ್ಚಾಗಿ ಕೆಂಪು, ಹಳದಿ, ಮತ್ತು ಕಪ್ಪು ಬಣ್ಣಗಳನ್ನೇ ಬಳಸುತ್ತಾರೆ. ರೇಖೆಗಳು ಸಾಮಾನ್ಯವಾಗಿ ವಕ್ರವಾಗಿದ್ದು, ತಮ್ಮ ಸ್ವಭಾವವನ್ನು ಪ್ರತಿಬಿಂಬಿಸುವಂತಿರುತ್ತವೆ. ಮುಖವರ್ಣಿಕೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣಗಳು ಎದ್ದು ಕಾಣುತ್ತವೆ. ಹುಬ್ಬು ವಕ್ರವಾಗಿ ದಪ್ಪವಾಗಿರುತ್ತವೆ. ಸಾಮಾನ್ಯವಾಗಿ ಅಡ್ಡನಾಮ, ಉರುಟುಬೊಟ್ಟು ಅಥವಾ ಇಸ್ಪೀಟು ಎಲೆಯ ಆಟಿನ್ ಆಕಾರದ ನಾಮಗಳನ್ನೇ ಬರೆಯುತ್ತಾರೆ. ಉದ್ದನಾಮದ ಎದುರು ಪಾತ್ರಗಳಿಗೆ ಕೆಂಪು ನಾಮ ಎಳೆದು ನಂತರ ಕಪ್ಪು, ಹಳದಿ, ಕಪ್ಪು, ಬಿಳಿ, ಬಿಳಿ ಮುತ್ತರಿ, ಕೆಂಪು ಗೆರೆಗಳನ್ನು ಎಳೆಯಲಾಗುತ್ತದೆ. ಹೀಗೆ ಎಳೆಯುವ ಆಕಾರವು ಸಾತ್ವಿಕ ಪಾತ್ರದಂತೆಯೇ ಇರುತ್ತದೆ. ದಕ್ಷ, ಗದಾಪರ್ವದ ಕೌರವ ಮೊದಲಾದ ಪಾತ್ರಗಳು ಉದ್ದ ಮತ್ತು ಅಡ್ಡನಾಮಗಳನ್ನು ಹಾಕುವ ಕ್ರಮವಿದೆ. ಹಸಿಬಣ್ಣದ ಪಾತ್ರಗಳು ಕೂಡಾ ಎದುರು ವೇಷಗಳ ಸಾಲಿಗೆ ಸೇರುತ್ತವೆ.

ಎದುರು ವೇಷದ ವೇಷವಿಧಾನ

ಎದುರು ವೇಷಗಳು ಹಾಕಿಕೊಳ್ಳುವ ದಗಲೆಯಲ್ಲಿ ಸೀಮಿತವಾದ ಕೆಲವು ಪಾತ್ರಗಳಿಗೆ ಕೆಂಪು ದಗಲೆ, ಕೆಂಪು ಇಜಾರು ಧರಿಸುವುದನ್ನು ಹೊರತುಪಡಿಸಿದರೆ ಉಳಿತಂದೆ ಎಲ್ಲಾ ವೇಷಗಳಿಗೆ ಧರಿಸುವ ದಗಲೆಯ ಮತ್ತು ಇಜಾರಿನ  ಬಣ್ಣ ಕಪ್ಪು. ಭುಜಕಿರೀಟ, ಎದೆಪದಕ, ಡಾಬು, ವೀರಗಾಸೆ ಎಲ್ಲವೂ ಕೆಂಪು ಬಣ್ಣದವುಗಳು. ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣದ ಸೋಗೆವಲ್ಲಿಗಳನ್ನು ಧರಿಸುತ್ತಾರೆ. ಉಳಿದಂತೆ ಕಿರೀಟ ವೇಷದ ಎಲ್ಲ ವೇಷಭೂಷಣ ಗಳನ್ನು ಧರಿಸುತ್ತಾರೆ.

ಶಿರೋಭೂಷಣ

ಎದುರು ವೇಷಗಳು ಕಿರೀಟ ವೇಷಗಳೇ ಆಗಿವೆ. ಅಂದರೆ ಕೋಲು ಕಿರೀಟ ಅಥವಾ ಪೂಂಬೆ ಕಿರೀಟವನ್ನು ಧರಿಸುತ್ತವೆ. ಆದರೆ ಕಿರೀಟದ ಸಕಲಾತಿ ಅಥವಾ ವೆಲ್ವೆಟ್ ಹಾಗೂ ಉಲ್ಲನ್ ಗೊಂಡೆಗಳು ಕಪ್ಪು ಬಣ್ಣ ಅಥವಾ ಕಪ್ಪು ಕೆಂಪು ಮಿಶ್ರ ಬಣ್ಣದಿಂದ ಕೂಡಿರುತ್ತವೆ. ಪೀಠಿಕೆ ವೇಷದ ಕಿರೀಟದಲ್ಲಿರುವಂತೆ ಅರಳೋಲೆ ಎದುರು ವೇಷದ ಕಿರೀಟದಲ್ಲಿರುವುದಿಲ್ಲ. ಕಿರೀಟ ಹಿಂಭಾಗದಲ್ಲಿ ಕಪ್ಪು ಕೇಸರ ಹಾಗೂ ಉಲ್ಲನ್ ಮೀಸೆ ಕಟ್ಟಲಾಗುತ್ತದೆ.

ಕರ್ಣ

ಕರ್ಣನ ಪಾತ್ರಧಾರಿಯು ಮುಖಕ್ಕೆ ಮೂಲಲೇಪನವನ್ನು ಹಚ್ಚಿಕೊಂಡು, ಉದ್ದ ಮತ್ತು ಅಡ್ಡನಾಮವನ್ನು ಬಿಳಿ ಬಣ್ಣದಲ್ಲಿ ಬರೆಯುತ್ತಾನೆ. ಹಣೆಯ ಮಧ್ಯೆ ಕೆಂಪು ಬಣ್ಣದ ಉರುಟುಬೊಟ್ಟು ಶೋಭಿಸುತ್ತದೆ. ಈಗೀಗ ಎದುರು ವೇಷದ ಉದ್ದ ನಾಮವನ್ನೇ ಹಾಕುವ ಪದ್ಧತಿ ರೂಢಿಗೆ ಬಂದಿದೆ. ಕಣ್ಣಿನ ಕೊನೆಯಲ್ಲಿ ಬಿಳಿಗೆರೆಗಳಿಂದ ಕೂಡಿದ ಚಕ್ರಮುದ್ರೆಯನ್ನು ಬರೆಯುತ್ತಾರೆ. ಮುದ್ರೆ, ಗಡ್ಡ ಬರವಣಿಗೆಗೆ ಹಾಗೂ ನಾಮ ಬರವಣಿಗೆಗೆ ಕೆಂಪು, ಕಪ್ಪು, ಮತ್ತು ಬಿಳಿ ಬಣ್ಣಗಳನ್ನು ಹೆಚ್ಚು ಬಳಸುತ್ತಾರೆ. ದಪ್ಪವಾದ ಹುಬ್ಬು ಹಾಗೂ ಕಪ್ಪು ಉಲ್ಲನ್ ಮೀಸೆ ಕರ್ಣನ ಪಾತ್ರವನ್ನು ಕಳೆಗಟ್ಟಿಸುತ್ತದೆ.

ಸಾಂಪ್ರದಾಯಕವಾಗಿ ತೆಂಕುತಿಟ್ಟಿನಲ್ಲಿ ಕುರುಕ್ಷೇತ್ರ ಪ್ರಸಂಗಗಳನ್ನಾಡುವಾಗ ದ್ರೋಣ ಪರ್ವದ ದ್ರೋಣನ ಪಾತ್ರವನ್ನು ನಿರ್ವಹಿಸಿದ ಪಾತ್ರಧಾರಿಯೇ ಕರ್ಣ ಪರ್ವದ ಕರ್ಣನ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹಣೆಯಲ್ಲಿ ಮೂರು ಅಡ್ಡನಾಮಗಳು ‘V’ ಆಕಾರದ ಉದ್ದನಾಮ ನಡುವೆ ತಿಲಕವನ್ನು ಇಟ್ಟುಕೊಳ್ಳಲಾಗುತ್ತದೆ. ಕಣ್ಣಂಚಿನಲ್ಲಿ ಮುದ್ರೆಗಳನ್ನು ಇರಿಸಲಾಗುತ್ತದೆ. ದ್ರೋಣ ಮತ್ತು ಕರ್ಣನ ಪಾತ್ರ ನಿರ್ವಹಿಸಲು ಬೇರೆ ಬೇರೆ ವೇಷಧಾರಿಗಳಿದ್ದಾಗ ಅಡ್ಡನಾಮ ಇಲ್ಲದೆ ಊಧತ್ರಿಪುಂಡ್ರ, ಮೂಗಿನ ಮೇಲೆ ಮುದ್ರೆ ಹಾಗೂ ಕಣ್ಣಿನ ಕೆಳಭಾಗದಲ್ಲಿ ಬಿಳಿರೇಖೆಗಳಿಂದ ಜೋಡಿಸುವ ಮುದ್ರೆ ಇರುತ್ತದೆ. ಹಣೆಯಲ್ಲಿ ಉದ್ದನಾಮವನ್ನು ದಾಸವಾಳದ ತೊಟ್ಟಿನಂತೆಯೂ ಅಲಂಕರಿಸಿ ಬರೆದು ನಡುವೆ ತಿಲಕವಿಡುವ ಕ್ರಮವೂ ಇದೆ. ದ್ರೋಣ ಪಾತ್ರಕ್ಕೆ ಪ್ರತ್ಯೇಕ ವೇಷಧಾರಿ ಇದ್ದಾಗಲೂ ಕರ್ಣನ ಪಾತ್ರವನ್ನು ಮೇಲಿನಂತೆ ಮಾಡುವುದು ಸಂಪ್ರದಾಯ ವಾಗಿಯೇ ಬಂದಂತಿದೆ.

ದ್ರೋಣ ಪರ್ವದಲ್ಲಿ ಕರ್ಣನಿಗೆ ಕಡಿಮೆ ಕೆಲಸ. ಇದನ್ನು ಎಳೆಯ ಕಲಾವಿದರು ನಿರ್ವಹಿಸುವುದು ರೂಢಿ. ಹಾಗಾಗಿ ದ್ರೋಣ ಪರ್ವದ ಕರ್ಣನಿಗೆ ಕೋಟೆಕರ್ಣ ಎಂಬ ಪ್ರತ್ಯೇಕ ವೇಷವೇ ರೂಢಿಗೆ ಬಂದಿದೆ. ಸಾಮಾನ್ಯವಾಗಿ ಮೊದಲು ಧರ್ಮರಾಯನ ಪಾತ್ರವನ್ನು ನಿರ್ವಹಿಸಿದ ಕಲಾವಿದನೇ ಪಕಡಿ ಕಟ್ಟಿಕೊಂಡು ಕರ್ಣನಾಗಿ ಬರುತ್ತಿದ್ದ. ಈ ಕಾರಣಕ್ಕಾಗಿ ಈ ವೇಷ ವಿಧಾನ ರೂಪುಗೊಂಡಿರಬಹುದು.

ಹಸಿಬಣ್ಣದ ರಾಜವೇಷಗಳು

ಇಂದ್ರಜಿತು, ರಕ್ತಬೀಜ, ಮಕರಾಕ್ಷ, ಪಂಚಜನ, ಭಾನುಕೋಪ, ಸುಂದ-ಉಪಸುಂದ ಇತ್ಯಾದಿ ಪಾತ್ರಗಳಿಗೆ  ಅಡಿಪಾಯ ಮತ್ತು ಮುಖದ ರೇಖೆಗಳನ್ನು ಹಸಿಬಣ್ಣದಲ್ಲಿಯೇ ಬರೆಯಲಾಗುತ್ತದೆ. ಮುಖದ ರೇಖೆಗಳನ್ನು ಬರೆದಾದ ಮೇಲೆ ಉಳಿದ ಭಾಗಕ್ಕೆ ಅಡಿಪಾಯ ವಾಗಿ ಹಸಿರು, ನೀಲಿ, ಗುಲಾಬಿ, ಕಪ್ಪು ಮೊದಲಾದ ಬಣ್ಣಗಳನ್ನು ಬಳಸಲಾಗುತ್ತದೆ.

ಇಂದ್ರಜಿತು / ರಕ್ತಬೀಜಾಸುರ

ಯಕ್ಷಗಾನದಲ್ಲಿ ಪ್ರಖ್ಯಾತ ಎದುರು ವೇಷಗಳಾದ ಇಂದ್ರಜಿತು ಮತ್ತು ರಕ್ತಬೀಜಾಸುರ ಪಾತ್ರಗಳ ವೇಷವಿಧಾನವು ಪರಸ್ಪರ ಹೋಲುತ್ತದೆ. ಇಂದ್ರಜಿತುವಿನ ಮುಖವರ್ಣಿಕೆಯಲ್ಲಿ ಕೆಂಪು, ಹಳದಿ ಮತ್ತು ಕಪ್ಪು ಬಣ್ಣಗಳೇ ವಿಜೃಂಭಿಸುತ್ತವೆ. ಹಣೆಯಲ್ಲಿ ಕೆಂಪು ಬಣ್ಣದ ಕೆಳಮುಖವಾಗಿರಿಸಿದ ಅರಳಿ ಎಲೆಯಾಕಾರದ ಬೊಟ್ಟು ಇಡುತ್ತಾರೆ. ಇದನ್ನು ಆಟೀನು ಬೊಟ್ಟು ಎಂದು ಕರೆಯುತ್ತಾರೆ. ಆಟೀನಿಗೆ ಬದಲು ಡೈಮಂಡ್ ಆಕಾರದ ಬೊಟ್ಟನ್ನು ಇರಿಸಿ ಚುಟ್ಟಿಗಳಿಂದ ಅಲಂಕರಿಸುವ ಮೂಲಕ ಇಂದ್ರಜಿತು ಪಾತ್ರವನ್ನು ಮಾಡುವ ಕಲಾವಿದರೂ ಇದ್ದರಂತೆ (ನೋಡಿ : ಯಕ್ಷಭೀಮನ ನೂರು ಹೆಜ್ಜೆಗಳು, ೨೦೦೪ : ೩೫೮).  ಹಣೆಯನ್ನು ಹೀಗೆ ಚಿತ್ರಿಸಿದ ಬಳಿಕ ಮೂಗಿನ ಹೊಳ್ಳೆಗಳಿಂದ ಎರಡೂ ಕಿವಿಗಳ ಕಡೆಗೆ ಸರಿಯುವ ಬಿಳಿಬಣ್ಣದ ರೇಖಾ ವಿನ್ಯಾಸಗಳು, ಕಣ್ಣಿನ ಕೊನೆಯಲ್ಲಿ ಕೆಂಪು, ಕಪ್ಪು ಹಾಗೂ ಬಿಳಿ ಬಣ್ಣದ ವರ್ಣಿಕೆಗಳು, ಗಲ್ಲದಲ್ಲಿ ಬರೆಯುವ ಹಳದಿ, ಬಿಳಿ, ಕಪ್ಪು, ಕೆಂಪು ಬಣ್ಣದ ವಕ್ರರೇಖೆಗಳು. ಕೆಂಪು, ಬಿಳಿ ಮಿಶ್ರಣದ ಅಡಿಛಾಯೆಯು ಇಂದ್ರಜಿತು ಹಾಗೂ ರಕ್ತಬೀಜನ ಮುಖವರ್ಣಿಕೆಗೆ ರೌದ್ರದ, ರಾಕ್ಷಸತ್ವದ ಆಯಾಮವನ್ನು ತಂದುಕೊಡುತ್ತದೆ. ಕೆಲವರು ಹಣೆಯಲ್ಲಿ ಬಿಳಿ ಅಂಚಿನಿಂದ ಕೂಡಿದ ಕೆಂಪು ಬಣ್ಣದ ಉರುಟು ಬೊಟ್ಟನ್ನೂ ಬರೆಯುತ್ತಾರೆ. ರಕ್ತಬೀಜನಿಗೆ ಹಿಂದೆ ದೈವೀಭಕ್ತನೆಂಬ ನೆಲೆಯಲ್ಲಿ ಓಂಕಾರದ ಚಿತ್ರವನ್ನೂ ಬರೆಯುತ್ತಿದ್ದ ರಂತೆ.  ಈ  ಪಾತ್ರಗಳು  ಕೆಂಪು  ಅಂಗಿ, ಕೆಂಪು ಚಲ್ಲಣ ಹಾಗೂ ಕೆಂಪು ಅಂಚಿನ ಬಾಲ್ ಮುಂಡು ಧರಿಸುತ್ತವೆ. ಭುಜಕೀರ್ತಿ, ಎದೆಪದಕ, ವೀರಗಸೆ, ಡಾಬು ಇವುಗಳ ಬಣ್ಣ ಕೆಂಪು. ಈ ಪಾತ್ರಗಳಿಗೆ ಕೆಂಪು ದಗಲೆಗೆ ಕೆಂಪು ಆಭರಣಗಳನ್ನೇ ಧರಿಸುವ ಕ್ರಮವು ಹೆಚ್ಚು ರೂಢಿ ಯಲ್ಲಿದೆ. ಕೆಂಪು ಮತ್ತು ಬಿಳಿಬಣ್ಣದ ಸೋಗೆವಲ್ಲಿಗಳನ್ನು ಧರಿಸುತ್ತವೆ. ಉಳಿದಂತೆ ರಾಜ ವೇಷದ ಎಲ್ಲ ವೇಷಭೂಷಣಗಳನ್ನು ತೊಟ್ಟುಕೊಳ್ಳುತ್ತವೆ.

ಈ ಪಾತ್ರಗಳು ಕಪ್ಪು ಗೊಂಡೆಗಳಿಂದ ಕೂಡಿದ ಕೋಲು ಕಿರೀಟವನ್ನು ಧರಿಸುತ್ತವೆ. ಕರ್ಣಪತ್ರ ಹಾಗೂ ಚೆನ್ನೆಪೂಗಳು ಹಿಂಭಾಗದಲ್ಲಿ ನೀಳವಾದ ಕೇಸರವನ್ನು ಧರಿಸಲಾಗುತ್ತದೆ. ಇಂದ್ರಜಿತು ಪಾತ್ರಕ್ಕೆ ಹುಬ್ಬಿನ ಮೇಲೆ ಮತ್ತು ಕಣ್ಣಿನ ಕೆಳಗೆ ಕಿರುಗಾತ್ರದ ಚುಟ್ಟಿಯನ್ನು ಇಡುತ್ತಾರೆ. ಇಂದ್ರಜಿತು ಮಾರಣಾಧ್ವರವನ್ನು ಮಾಡುವ ವಿಷಯ ಪ್ರಸಂಗದಲ್ಲಿದೆ. ಮಾರಣಾಧ್ವರವನ್ನು ಮಾಡುವವರು ರಕ್ತವರ್ಣದ ಕೆಂಪು ಬಟ್ಟೆಯನ್ನು ಧರಿಸಬೇಕೆಂದು ಪ್ರಸಂಗದಲ್ಲೇ ಹೇಳಲಾಗಿದೆ.

ಅತಿಕಾಯ

ಅತಿಕಾಯ, ಹಿರಣ್ಯಾಕ್ಷ ಮೊದಲಾದುವು ರಾಕ್ಷಸ ವೇಷಗಳೇ ಆಗಿವೆ. ಆದರೆ ಈ ವೇಷಗಳ ಮುಖವರ್ಣಿಕೆಯನ್ನು ರಾಕ್ಷಸ ಪಾತ್ರಗಳಷ್ಟು ಘೋರವಾಗಿ ಚಿತ್ರಿಸುವುದಿಲ್ಲ. ಅತಿಕಾಯನ ಮುಖದ ಮೂಲ ಲೇಪನ ಹಸಿರು ಬಣ್ಣದಲ್ಲಿರುತ್ತದೆ. ಈತ ವೈಷ್ಣವ ಭಕ್ತ ಮತ್ತು ಸಾತ್ವಿಕ ಎಂಬುದನ್ನು ಸೂಚಿಸುವ ಸಲುವಾಗಿ ಈ ಚಿತ್ರಣವಿರುತ್ತದೆ. ಹಣೆಯಲ್ಲಿ ಉದ್ದನಾಮ ಮತ್ತು ಕಣ್ಣಿನ ಒಳ ವಿಶಿಷ್ಟ ಮುದ್ರೆ ಕಣ್ಣಿನ ಮೇಲೆ ಮತ್ತು ಕೆಳಗೆ ಇಂದ್ರಜಿತು ಪಾತ್ರಕ್ಕೆ ಇಡುವಂತೆ ಕಿರುಗಾತ್ರದ ಚುಟ್ಟಿಗಳಿಂದ ಮುದ್ರೆಯನ್ನು ಇಡಲಾಗುತ್ತದೆ.

ಅತಿಕಾಯ ವೇಷಧಾರಿಯು ಕಪ್ಪು ದಗಲೆ ಹಾಗೂ ಕಪ್ಪು ಚಲ್ಲಣವನ್ನು ಹಾಕಿಕೊಳ್ಳುತ್ತಾನೆ. ಕೆಂಪು ಮತ್ತು ಕಪ್ಪು ಬಣ್ಣದ ಸೋಗೆವಲ್ಲಿಗಳನ್ನು ಧರಿಸುತ್ತಾನೆ. ಕೆಂಪು ದಗಲೆ ಕೆಂಪು ಇಜಾರನ್ನು ಧರಿಸಿಯೂ ವೇಷ ಮಾಡಲಾಗುತ್ತದೆ. ಅಲ್ಲದೆ ನಸು ಹಸಿರು ಅಂಚಿನ ಬಾಲ್‌ಮುಂಡು ಧರಿಸುತ್ತಾನೆ. ಎದೆಪದಕ, ಭುಜಕೀರ್ತಿ, ವೀರಗಸೆ ಮೊದಲಾದ ಆಭರಣಗಳು ಉಲ್ಲನ್ ಕೆಂಪು ಮತ್ತು ಕಪ್ಪು ಮಿಶ್ರಬಣ್ಣದಿಂದ ಕೂಡಿರುತ್ತದೆ. ಉಳಿದಂತೆ ಕಿರೀಟ ವೇಷಗಳು ಧರಿಸುವ ಎಲ್ಲ ವೇಷಭೂಷಣಗಳಿರುತ್ತವೆ. ಧರಿಸುವ ಕಿರೀಟದ ಗೊಂಡೆಗಳು ಕಪ್ಪು, ಕೆಂಪು ಮಿಶ್ರಬಣ್ಣದಿಂದ ಕೂಡಿರುತ್ತವೆ. ಕರ್ಣಪತ್ರಗಳೂ ಮಿಶ್ರಬಣ್ಣದ್ದಾಗಿವೆ.

ಬಲರಾಮ, ಶಿಶುಪಾಲ, ವೀರವರ್ಮ, ಕೌಂಡ್ಲಿಕ ಮೊದಲಾದ ಪಾತ್ರಗಳು ಹಸಿರು ಬಣ್ಣದಲ್ಲೇ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.

ಮಾರೀಚ

ಮಾರೀಚನ ವೇಷದ ಮುಖ ವರ್ಣಿಕೆಯು ವರ್ಣಮಯ ವಿನ್ಯಾಸದಿಂದ ಕೂಡಿರುತ್ತದೆ. ಈ ಪಾತ್ರದ ಮುಖವರ್ಣಿಕೆಯು ಹೂವಿನಂತಹ ವಿನ್ಯಾಸಗಳು ಹಾಗೂ ವಿವಿಧ ಬಣ್ಣಗಳ ರೇಖೆಗಳೂ ಇರುತ್ತವೆ. ಇವೆಲ್ಲವುಗಳಿಂದ ಮಾರೀಚನೊಬ್ಬ ಮಾಂತ್ರಿಕ ಹಾಗೂ ಮಾಯಾವಿ ಎಂಬುದನ್ನು ಸಂಕೇತಿಸಲಾಗುತ್ತದೆ. ಸಾಮಾನ್ಯವಾಗಿ ಹಣೆಗೆ ಬಿಳಿ ಬಣ್ಣ ಹಚ್ಚಿ, ಕುಂಕುಮ ತಿಲಕವಿಟ್ಟು ಕಪ್ಪುಗೆರೆ ಎಳೆದು ಮೂರು ನಾಮಗಳಾಗಿ ವಿಂಗಡಿಸಲಾಗುತ್ತದೆ. ಕಣ್ಣಿನ ಸುತ್ತ ಕೆಂಪು ಹಾಗೂ ಕೆಳಭಾಗದಲ್ಲಿ ಅರದಾಳದ ಪುಡಿ ಹಚ್ಚಿ ಹೊಳಪು ಬರಿಸಲಾಗುತ್ತದೆ. ಗಲ್ಲಕ್ಕೆ ನಡುವೆ ಕೆಂಪು ಮತ್ತು ಅರದಾಳ ಹಚ್ಚಿ ಹೊಳಪು ಬರಿಸಿ ಗೌರವರ್ಣವನ್ನು ಹಾಕಲಾಗುತ್ತದೆ.  ಹುಬ್ಬಿಗೆ ಹಾಗೂ ಕಣ್ಣಿನ ಸುತ್ತ ಕಾಡಿಗೆ ಹಚ್ಚಿ ಮೀಸೆಯನ್ನು ಕಟ್ಟಿಕೊಳ್ಳಲಾಗುತ್ತದೆ.

ದ್ರೋಣ

ದ್ರೋಣ ಪಾತ್ರವನ್ನು ಯಕ್ಷಗಾನದಲ್ಲಿ ನಾಟಕದ ವೇಷದಂತೆ ಚಿತ್ರಿಸುವುದು ಸಂಪ್ರದಾಯ. ಹಣೆಗೆ ಅಡ್ಡನಾಮ, ನಡುವೆ ತಿಲಕ, ಗಡ್ಡ, ಮೀಸೆ, ತಲೆಗೆ ರುಮಾಲು ಅದರ ಮೇಲೆ ತುರಾಯಿಯನ್ನು ಕಟ್ಟಿಕೊಳ್ಳಲಾಗುತ್ತದೆ. ಜನಿವಾರ ತೊಟ್ಟು ಹಳದಿ ಬಣ್ಣದ ಸೀರೆಯನ್ನು ಕಚ್ಚೆ ಹಾಕಿಕೊಳ್ಳವುದರ ಮೂಲಕ ದ್ರೋಣನ ವೇಷದಲ್ಲಿ ಬ್ರಾಹ್ಮಣ್ಯವನ್ನು ಪ್ರತಿನಿಧಿಸಲಾಗುತ್ತದೆ. ಪರಂಪರೆಯಿಂದಲೇ ಈ ವೇಷ ವಿಧಾನ ಬಂದಿದೆ ಎಂಬುದು ಅನೇಕರ ಅಭಿಪ್ರಾಯ. ಪರಶುರಾಮ, ದಕ್ಷಬ್ರಹ್ಮ ಮೊದಲಾದ ವೇಷಗಳನ್ನು ಕಿರೀಟ ವೇಷಗಳನ್ನಾಗಿ ರೂಪಿಸಿರುವಾಗ ದ್ರೋಣ ಪಾತ್ರಕ್ಕೆ ಮಾತ್ರ ಬ್ರಾಹ್ಮಣ್ಯದ ಗುರುತನ್ನು ನೀಡಿರುವುದನ್ನು ಕಾಣುತ್ತೇವೆ. ಈ ಬಗೆಗೆ ಯೋಚಿಸಿದ ಹಿರಿಯರು ದ್ರೋಣನ ಪಾತ್ರ ಚಿತ್ರಣಕ್ಕೆ ಹೊಸ ಆಯಾಮವನ್ನು ನೀಡಿರುವುದು ಗಮನಾರ್ಹ.

ದ್ರೋಣನ ಪಾತ್ರವನ್ನು ಕಿರೀಟ ವೇಷವಾಗಿ ಚಿತ್ರಿಸುವುದೇ ಸರಿಯಾದ ರೀತಿ ಆಗಬಹುದು. ಹಣೆಗೆ ಅಡ್ಡನಾಮ, ನಡುವೆ ತಿಲಕವಿಡುವ ಹಾಗೂ ಗಡ್ಡ ಮೀಸೆಯ ಮುಖಕ್ಕೆ ಕಿರೀಟ ವೇಷದ ಎಲ್ಲಾ ವೇಷಭೂಷಣಗಳನ್ನು ತೊಡುವುದು, ಕಿವಿಗಳನ್ನು ಹಾಗೂ ನವಿಲುಗರಿಗಳನ್ನು ತೆಗೆದ ಕಿರೀಟವನ್ನು ಧರಿಸಿಕೊಳ್ಳುವುದು, ಕಿರೀಟದ ಕೊನೆಗೆ ಹಿಂದಿನಿಂದ ಬಟ್ಟೆಯೊಂದನ್ನು ಕಟ್ಟಿ ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು. ಅಡೂರಿನ ಯಕ್ಷಗಾನ ಕಮ್ಮಟವೊಂದರಲ್ಲಿ ಮಾಡಿದ ಈ ಚಿತ್ರಣವು ಯಕ್ಷಗಾನದ ಚೌಕಟ್ಟಿನ ಒಳಗಡೆ ಚೆನ್ನಾಗಿ ಹೊಂದುತ್ತದೆ ಎಂಬುದನ್ನು ಅನೇಕರು ಒಪ್ಪಿಕೊಂಡಿದ್ದಾರೆ(ನೋಡಿ ಚಿತ್ರ).

ಈಶ್ವರ

ಈಶ್ವರನ ಪಾತ್ರವು ಪರಂಪರೆಯಲ್ಲಿ ಕಿರೀಟವೇಷವೇ ಆಗಿತ್ತು ಎಂದು ಹೇಳುವವರಿದ್ದಾರೆ. ಮೇಲೆ ವಿವರಿಸಿದ ದ್ರೋಣನ ಪಾತ್ರದಂತೆ ಶಿವನ ಪಾತ್ರವನ್ನು ಕಿರೀಟ ಧರಿಸಿ ಕೆಲವರು ಈಗಲೂ ನಿರ್ವಹಿಸುವವರಿದ್ದಾರೆ. ಆದರೆ ಹೆಚ್ಚು ಪ್ರಚಲಿತವಿರುವ ಶಿವನ ವೇಷವೆಂದರೆ ಬೈರಾಗಿಯ ಸ್ವರೂಪದ್ದು. ಹಣೆಯಲ್ಲಿ ಕಪ್ಪು ವಜ್ರಾಕೃತಿಯನ್ನು ರಚಿಸಿ ಅದರ ನಡುವೆ ಕಣ್ಣು, ಎರಡು ಬಿಳಿ ಪಟ್ಟಿಗಳ ಅಡ್ಡನಾಮ, ಅವುಗಳನ್ನು ಅಂಚಿನಲ್ಲಿ ಮೂರು ಕಪ್ಪುಗೆರೆಗಳನ್ನು ಹಾಕಿ ಸ್ಪಷ್ಟಗೊಳಿಸಲಾಗುವುದು. ಕೆನ್ನೆಗೆ ಮುದ್ರೆ, ಗಡ್ಡ, ಮೀಸೆ ಇವಿಷ್ಟು ಶಿವನ ಮುಖವರ್ಣಿಕೆ. ಕೊರಳಲ್ಲಿ ಹಾವು, ಜಟೆ ಧರಿಸಿ ಅದರಲ್ಲಿ ಚಂದ್ರಕಲೆ, ಸೊಂಟದಲ್ಲಿ ಹುಲಿಯ ಚರ್ಮವನ್ನು ಹೋಲುವ ವಿನ್ಯಾಸದ ಬಟ್ಟೆ, ಬರಿಮೈಯಾದರೆ ಎದೆ, ಭುಜ, ತೋಳುಗಳಿಗೆ ಭಸ್ಮ ಲೇಪನ, ರುಂಡಮಾಲೆ, ರುದ್ರಾಕ್ಷಿಸರ ಇಷ್ಟಿದ್ದರೆ ಶಿವನ ವೇಷವಾಯಿತು. ಅರ್ಧತೋಳಿನ ಹಳದಿ ಅಂಗಿ ಧರಿಸಿ ಸೊಂಟಕ್ಕೆ ಶಾಲು ಕಟ್ಟಿಕೊಳ್ಳುವ ಪದ್ಧತಿಯೂ ಇದೆ.

ಜಾಂಬವ

ಜಾಂಬವನ ವೇಷವಿಧಾನವೂ ಹನುಮಂತನ ಹಾಗೆಯೇ ಇದೆ. ಆದರೆ ಮುಖವರ್ಣಿಕೆ ಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಮುಖವರ್ಣಿಕೆಯಲ್ಲಿ ಸುಳಿಯ ಬರವಣಿಗೆಯಿಲ್ಲ. ಉದ್ದವಾದ ಕೆಂಪುನಾಮ ಹಾಗೂ ತುಟಿ ಮತ್ತು ಮೂಗನ್ನೂ ಒಳಗೊಂಡಂತೆ ಹಣೆಯವರೆಗೆ ಬಿಳಿ ಬಣ್ಣವನ್ನು ಬರೆಯುತ್ತಾರೆ. ಉಳಿದ ಭಾಗವನ್ನು ಕಪ್ಪು ಬಣ್ಣದಿಂದ ತುಂಬಿಸುತ್ತಾರೆ. ಹಣೆಯ ಇಕ್ಕೆಲಗಳಲ್ಲಿ ಬಿಳಿ, ಕಪ್ಪು ಬಣ್ಣಗಳ ಎರಡು ಚಕ್ರಗಳನ್ನು ಬರೆಯುತ್ತಾರೆ.

ವೇಷಭೂಷಣಗಳೆಲ್ಲ ರಾಜ ವೇಷದ್ದೇ ಆಗಿದೆ. ಬಿಳಿ ಮಸುಕಾದ ಅಂಗಿ, ಬಾಲ್‌ಮುಂಡು, ಹಳದಿ, ಬಿಳಿ ಸೋಗೆವಲ್ಲಿ, ಭುಜಕೀರ್ತಿ, ಕರ್ಣಪತ್ರ, ವೀರಗಾಸೆ, ಎದೆ ಪದಕವೆಲ್ಲ ಮಿಶ್ರ ಬಣ್ಣ.

ಜಾಂಬವನಿಗೂ ಹನುಮಂತನಂತದ್ದೇ ಕಿರೀಟ. ಆದರೆ ಅದರ ಒಳಭಾಗದಲ್ಲಿ ಸೂರ್ಯ, ಚಂದ್ರರ ಗುರುತುಗಳಿರುವುದಿಲ್ಲ. ಬದಲಾಗಿ ಐದು ನಕ್ಷತ್ರಗಳ ಗುರುತುಗಳಿವೆ. ಹಿಂಬದಿ ಯಿಂದ ಕೇಸರವನ್ನು ಧರಿಸುತ್ತಾನೆ. ಈಗ ಬಿಳಿ ಚೋಲೆಯ ವೇಷವೇ ಬಳಕೆಯಲ್ಲಿದೆ.

ಕೆಲವು ವಿಶಿಷ್ಟ ವೇಷಗಳು

ಗರುಡ : ಗರುಡೋದ್ಭವ ಪ್ರಸಂಗದಲ್ಲಿ ಬರುವ ಗರುಡ ಪಾತ್ರವು ಕೊಕ್ಕು ಧರಿಸಿ ಉಗ್ರ ಸ್ವರೂಪದಿಂದ ರಾಜವೇಷದಲ್ಲಿ ಕಂಗೊಳಿಸುತ್ತದೆ. ಉಳಿದ ಪ್ರಸಂಗಗಳಲ್ಲಿ ಬರುವ ಗರುಡ, ಜಟಾಯು ಮೊದಲಾದ ಪಾತ್ರಗಳನ್ನು ಕಲಾವಿದರು ತಮ್ಮ ಅನುಕೂಲತೆಗೆ ತಕ್ಕಂತೆ ರಾಜ ಅಥವಾ ಪುಂಡು ವೇಷಗಳನ್ನಾಗಿ ಮಾಡುತ್ತಾರೆ.

ಜಾಂಬವ : ಕಪ್ಪು ದಗಲೆ ಅಥವಾ ಬಿಳಿ ಚೋಲೆಯನ್ನು ಹಾಕುವ ಜಾಂಬವತಿ ಕಲ್ಯಾಣದ ಜಾಂಬವ ಪಾತ್ರವು ರಾಜವೇಷವಾಗಿದ್ದು, ಇದಕ್ಕೆ ಹಸಿ ಬಣ್ಣವನ್ನೇ ಬರೆಯಲಾಗುತ್ತದೆ.

ಕಪಿ : ವಾಲಿ ಸುಗ್ರೀವರ ಕಾಳಗದ ಸುಗ್ರೀವ ಪಾತ್ರವನ್ನು ರಾಜವೇಷವಾಗಿ ಚಿತ್ರಿಸಲಾ ಗುತ್ತದೆ. ಈಗೀಗ ಕೆಲವರು ವಾಲಿ ಪಾತ್ರವನ್ನೂ ರಾಜವೇಷವಾಗಿ ಚಿತ್ರಿಸುತ್ತಾರೆ. ಮೈಂದದಿವಿದ ಕಾಳಗದ ಮೈಂದ, ದಿವಿದರು ಕೂಡ ರಾಜವೇಷದಲ್ಲೇ ವಿಜೃಂಭಿಸುತ್ತಾರೆ.

ಸರ್ಪ : ಶೇಷ, ವಾಸುಕಿ ಮೊದಲಾದ ನಾಗರಾಜ ಪಾತ್ರಗಳನ್ನು ರಾಜವೇಷದಲ್ಲಿ ಚಿತ್ರಿಸುತ್ತಾರೆ. ಪುಂಡುವೇಷ ಮಾಡುವವರಿಗೆ ಈ ಪಾತ್ರಗಳು ದೊರೆತಾಗ ಇವುಗಳು ಪಕಡಿ ವೇಷವಾಗಿ ರೂಪುಗೊಳ್ಳುತ್ತವೆ. ಕರ್ಣಪರ್ವದ ಸರ್ಪಾಸ್ತ್ರವನ್ನು ಪಕಡಿವೇಷವಾಗಿಯೇ ಮಾಡಲಾಗುತ್ತದೆ.

ಯಕ್ಷಗಾನದ ಕಿರೀಟ ವೇಷಗಳು ಸಾಮಾನ್ಯವಾಗಿ  ಇತರ ಯಾವುದೇ ರಂಗಪ್ರಕಾರ ಗಳಲ್ಲಿಯೂ ಕಾಣದ ವಿಶಿಷ್ಟ ರಚನೆಗಳಾಗಿವೆ. ಇವುಗಳು ತಮ್ಮ ವಿನ್ಯಾಸಗಳ ಕಾರಣಗಳಿ ಗಾಗಿಯೇ ವಿಶಿಷ್ಟವಾಗಿ ನಿರ್ದಿಷ್ಟ ಯಕ್ಷಗಾನ ಪರಂಪರೆಯನ್ನು ಪೋಷಿಸಿಕೊಂಡು ಬಂದಿವೆ. ಈ ವೇಷಗಳು ಅಡಿಯಿಂದ ಮುಡಿಯವರೆಗೆ ಒಂದು ರೀತಿಯ ಸಮತೋಲನವನ್ನು ಕಾಯ್ದುಕೊಂಡು ಬಂದಿವೆ. ಕಿರೀಟ, ಎದೆಪದಕ ಹಾಗೂ ವೇಷಭೂಷಣಗಳನ್ನು ಮೃದುವಾದ ಮರ ಹಾಗೂ ವಸ್ತ್ರಗಳಿಂದ ಸಿದ್ಧಪಡಿಸಲಾಗುತ್ತಿತ್ತು. ಕಿರೀಟಗಳು ಸಾಮಾನ್ಯವಾಗಿ ಒಂದು ಅಂಗುಲ ಉದ್ದವಿರುತ್ತವೆ. ಒಬ್ಬ ವ್ಯಕ್ತಿಯ ದೇಹ ಸಾಮಾನ್ಯವಾಗಿ ಎಂಟು ಗೇಣು ಉದ್ದವಾಗಿರುತ್ತದೆ.   ಅದರಲ್ಲಿ  ಒಂದು  ಗೇಣು ಮುಖ.   ತಲೆಯ   ಮೇಲಿರಿಸುವ  ಕಿರೀಟ  ಮುಖಕ್ಕಿಂತ ದೊಡ್ಡದಾಗಬಾರದು ಎಂಬ ಔಚಿತ್ಯಪ್ರಜ್ಞೆ ಇಲ್ಲಿದೆ. ಆದರೆ ರಾಕ್ಷಸ ಪಾತ್ರಗಳಿಗೆ ಹಾಗೂ ತಾಮಸ ಪ್ರವೃತ್ತಿಯ ಪಾತ್ರಗಳಿಗೆ ಅಗಲ ಕಿರೀಟಗಳನ್ನು ಧರಿಸುತ್ತಾರೆ. ಕಿರೀಟದ ಅಗಲ ಹತ್ತರಿಂದ ಇಪ್ಪತ್ತೊಂದು ಅಂಗುಲಗಳವರೆಗೂ ಇರುತ್ತದೆ. ಇಲ್ಲಿ ತೊಡುವ ಪ್ರತಿಯೊಂದು ವೇಷ ಪರಿಕರಗಳೂ ಸಹ ನಿರ್ದಿಷ್ಟ ಸಂಕೇತಗಳ ರೂಪದಲ್ಲಿ ಬಂದಿರಬಹುದು.

ಕಿರೀಟ ರಾಜ ಪದವಿಯ ಸಂಕೇತವಾದರೆ ಭುಜಕೀರ್ತಿಯು ಪರಾಕ್ರಮದ ಸಂಕೇತವಾಗಿರಬಹುದು. ಮೀಸೆ,  ಪೌರುಷದ  ಸಂಕೇತ  ಎದೆ.  ಪದಕವು ಹೃದಯ ವೈಶಾಲ್ಯದ ಸಂಕೇತ. ಶರೀರವನ್ನು ಅಗಲವಾಗಿಯೂ ವಿಸ್ತರಿಸುವಲ್ಲಿ ಕಿರೀಟದ ಕಿವಿಗಳು, ದೇಹಕ್ಕೆ ತೊಟ್ಟ ಬಟ್ಟೆ ಆಭರಣಗಳು ನೆರವಾಗುತ್ತವೆ. ಇವೆಲ್ಲ ಸಂಕೇತಗಳನ್ನು ಮೀರಿ ಯಕ್ಷಗಾನದ ಸಹಜ  ಪಾತ್ರಗಳಾಗಿ ಮೈ ಪಡೆಯಲು ಬೇಕಾದ ಕನಿಷ್ಟ. ವೇಷ ಪರಿಕರಗಳು ನಿರ್ದಿಷ್ಟ ಪ್ರಸಂಗದ ವ್ಯಾಪ್ತಿಗೆ ಬಂದಾಗ ಮಾತ್ರ ಇವು ನಿರ್ದಿಷ್ಟ ಬಣ್ಣಗಳ, ಹಣೆಯಲ್ಲಿ ನಿರ್ದಿಷ್ಟ ರೇಖಾವಿನ್ಯಾಸ ಗಳ ಮೂಲಕ ಪಾತ್ರಗಳಾಗುತ್ತವೆ. ಹಾಗಾಗಿ ವೇಷಗಳಿಗೆ ಸಹಜವಾಗಿರುವ ಕಿರೀಟ ರಾಜ ಪಾತ್ರಗಳಿಗೆ ಏಕಕಾಲಕ್ಕೆ ಸಹಜ ವೇಷಗಳೊಡನೆ ರಾಜ ಪದವಿಯ ಸಂಕೇತವೂ ಆಗುತ್ತದೆ. ರಾಜ ಪದವಿಯಿಲ್ಲದ ಪಾತ್ರಗಳಿಗೆ ಮಾತ್ರ ಅವು ಸಹಜ ವೇಷ ವಿಧಾನಗಳಾಗಿ ಮಾತ್ರ ಗ್ರಾಹ್ಯವಾಗುತ್ತದೆ. ಹೀಗೆ ಕಿರೀಟ ವೇಷಗಳು ಯಕ್ಷಗಾನದ ಪ್ರಬುದ್ಧವಾದ ಪಾತ್ರಗಳಾಗಿ ಯಕ್ಷಲೋಕದ ಸಹಜ ಪ್ರಜೆಗಳಂತೆ ಭಾಸವಾಗುತ್ತವೆ. ರಾಮ, ಲಕ್ಷ್ಮಣರು ಜಟಾವಲ್ಕಲಧಾರಿ ಗಳಾಗಿ ವನವಾಸದಲ್ಲಿದ್ದಾಗಲೂ ಯಕ್ಷಗಾನದಲ್ಲಿ ವೇಷಭೂಷಣ, ಕಿರೀಟಗಳ ಸಹಿತವೇ ಇರುತ್ತಾರೆ. ಕಂಸನ ಪಾತ್ರವು ವೇದಿಕೆಯಲ್ಲಿ ಕನಸು ಕಾಣುವ ದೃಶ್ಯವಿದೆ. ಮಲಗುವಾಗಲೂ ಕಂಸ ತಲೆಯ ಕಿರೀಟವನ್ನು ಬಿಚ್ಚಿಡಬೇಕಾಗಿಲ್ಲ. ಅದೂ ಕಂಸ ಪಾತ್ರದ ಭಾಗವೇ ಆಗಿರುವ ವೇಷವಿಧಾನ. ಬಿಟ್ಟ ಮಂಡೆಯ ಕಂಸನನ್ನೇ ಕನಸಿನ ದೃಶ್ಯದಲ್ಲಿ ತರುವ ಪ್ರಯತ್ನಗಳೂ ನಡೆದಿವೆ. ಅವೆಲ್ಲ ಯಕ್ಷಗಾನದಲ್ಲಿ ಆಭಾಸ. ಯಕ್ಷಗಾನದ ಪಾತ್ರಗಳಿಗೆ ಕನಿಷ್ಠ ಸಾಂಸ್ಕೃತಿಕ ಗೌರವವೆನ್ನಬಹುದಾದ ಆಹಾರ್ಯವು ಪ್ರತಿಯೊಂದು ಪಾತ್ರಕ್ಕೂ ಅತ್ಯಂತ ಅಗತ್ಯ. ಒಟ್ಟಿನಲ್ಲಿ ಕಿರೀಟ ವೇಷಗಳೆಂದರೆ ಯಕ್ಷಗಾನ ಲೋಕದ ಪ್ರಜೆಗಳ ಪ್ರಾತಿನಿಧಿಕ ರೂಪಗಳೆನಿಸಿವೆ.