ಯಕ್ಷಗಾನದಲ್ಲಿ ನಿಜವಾಗಿಯೂ ವೇಷವೆಂದರೆ ಸ್ತ್ರೀವೇಷಗಳು. ಯಾಕೆಂದರೆ ಇಲ್ಲಿ ಸ್ತ್ರೀವೇಷವನ್ನು ಧರಿಸುವವರು ಪುರುಷರೇ ಹೊರತು ಸ್ತ್ರೀಯರಲ್ಲ. ಸ್ತ್ರೀವೇಷಧಾರಿ ಕಲಾವಿದರಿಗೆ ಹೆಣ್ಣಿನ ನಡಿಗೆ, ಹಾವಭಾವಗಳು, ಒನಪು, ವಯ್ಯಾರಗಳನ್ನು ಅಭಿನಯಿಸಿ ತೋರಿಸಬೇಕಾದ ಅನಿವಾರ್ಯತೆ ಇದೆ. ಮಹಿಳೆಯಂತೆ ಮಾತನಾಡುವ ಸ್ವರವನ್ನೂ, ಮಾತಿನ ಧಾಟಿಯನ್ನೂ ರೂಢಿಸಿಕೊಳ್ಳಬೇಕಾಗುತ್ತದೆ. ಕಲಾವಿದ ಪಾತ್ರವಾಗುವ ಪೂರ್ವದಲ್ಲಿ ಇಷ್ಟನ್ನು ಮೊದಲಿಗೇ ರೂಢಿಸಿಕೊಳ್ಳಬೇಕಾಗುತ್ತದೆ. ಆ ಬಳಿಕ ಮಾತ್ರವೇ ಪಾತ್ರೋಚಿತವಾದ ಸ್ವಭಾವ, ಪ್ರವೃತ್ತಿಗಳನ್ನು ಪ್ರಕಟಿಸಬೇಕಾಗುತ್ತದೆ. ಮೂಲತಃ ಪುರುಷರಾಗಿದ್ದು, ಸ್ತ್ರೀಪಾತ್ರಗಳಾಗಿ ಪರಿವರ್ತನೆಗೊಂಡು ಪ್ರಕಟಗೊಳ್ಳಬೇಕಾದರೆ ಮಾನಸಿಕ ಹಾಗೂ ದೈಹಿಕ ಶ್ರಮ ಹೆಚ್ಚು. ಅನೇಕರು ಇಂತಹ ಸ್ತ್ರೀ ಸಹಜ ಅಭಿನಯಗಳನ್ನು ಪ್ರಯತ್ನಪೂರ್ವಕವಾಗಿ ರೂಪಿಸಿಕೊಂಡು ನಿಜ ಬದುಕಿನಲ್ಲೂ ಸ್ತ್ರೀಯರಂತೆ ವ್ಯವಹರಿಸುವವರಿದ್ದಾರೆ.  ಮೀಸೆ ಬೋಳಿಸಿ, ಕೂದಲು ಬಿಟ್ಟು ಸಮಾಜದಲ್ಲಿ ಸ್ತ್ರೀಪಾತ್ರಧಾರಿ ಬದುಕಬೇಕಾಗುತ್ತದೆ. ಸಾಮಾಜಿಕವಾಗಿಯೂ ವ್ಯಂಗ್ಯ, ವಿಡಂಬನೆಗಳನ್ನು ಸ್ತ್ರೀ ಪಾತ್ರಧಾರಿ ಸಹಜವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಈಗ ಆ ಪರಿಸ್ಥಿತಿ ಇಲ್ಲ.

ಯಕ್ಷಗಾನದ ಸಂದರ್ಭದಲ್ಲಿ ಸ್ತ್ರೀವೇಷಗಳು ವಾಸ್ತವ ಬದುಕಿನ ನೆಲೆಯಿಂದಲೇ ಅನುಕರಣೆ ಮಾಡಿದಂತೆ ತೋರುತ್ತದೆ. ಇತರ ವೇಷಗಳಲ್ಲಿರುವ ಕಾಲ್ಪನಿಕ ವೈಭವ ಸ್ತ್ರೀವೇಷಗಳಲ್ಲಿ ಕಾಣಿಸುವುದಿಲ್ಲ. ಉಳಿದ ವೇಷಗಳಿಗೆ ಹೋಲಿಸಿದರೆ ಸ್ತ್ರೀವೇಷ ತುಂಬ ಶಿಥಿಲವಾಗಿಯೂ ಅಸಮತೋಲನವನ್ನೂ ಉಳಿಸಿಕೊಂಡಿದೆಯೆಂದು ಯಕ್ಷಗಾನದ ವೇಷಭೂಷಣಗಳ ಬಗೆಗೆ ಬರೆದ ಪ್ರತಿಯೊಬ್ಬ ವಿದ್ವಾಂಸರೂ ಹೇಳಿದ್ದಾರೆ. ಅನೇಕರು ಅಭಿಪ್ರಾಯಪಡುವಂತೆ ಯಕ್ಷಗಾನದ ಇತರ ವೇಷಗಳನ್ನು ಕಲ್ಪಿಸಿದ ಪ್ರತಿಭಾವಂತ ಕಲಾವಿದ ಅದಕ್ಕೆ ಹೊಂದಿಕೆಯಾಗುವಂತೆ ಸ್ತ್ರೀವೇಷವನ್ನೂ ಕಲ್ಪಿಸಿರಬೇಕು. ಸ್ತ್ರೀವೇಷ ಪ್ರೇಕ್ಷಕರಿಗೆ ಆಕರ್ಷಣೀಯವಾಗಿರಬೇಕು ಹಾಗೂ ರಂಜನೀಯವಾಗಿರಬೇಕು ಇತ್ಯಾದಿ ಕಾರಣಗಳನ್ನಿಟ್ಟು ಕಾಲಾನುಕ್ರಮದಲ್ಲಿ ವಾಸ್ತವ ಜಗತ್ತಿನ ಅನುಕರಣೆಯನ್ನು ಮಾಡಿರಬಹುದು. ಪ್ರಸ್ತುತ ದಿನಗಳ ಯಕ್ಷಗಾನದ ಸ್ತ್ರೀವೇಷಗಳನ್ನು ನೋಡಿದರೆ ಇತರ ವೇಷಗಳ ಜತೆಗೆ ಹೊಂದಾಣಿಕೆ ಇಲ್ಲದಿರುವುದನ್ನು ಗಮನಿಸಬಹುದು. ನೆನಪಿನ ಶಕ್ತಿಯಿಂದ ಪರಂಪರೆಯ ಸ್ತ್ರೀ ಪಾತ್ರಗಳನ್ನು ಹೇಳುವಾಗಲೂ ಪ್ರಬುದ್ಧವಾದ ಸ್ತ್ರೀವೇಷಗಳ ರಚನೆ ಯಕ್ಷಗಾನದಲ್ಲಿತ್ತು ಎಂಬುದನ್ನು ಹೇಳುವವರಿಲ್ಲ.

ಸ್ತ್ರೀವೇಷದ ಮುಖವರ್ಣಿಕೆ

ಸ್ತ್ರೀವೇಷಕ್ಕೆ ಸಂಬಂಧಿಸಿ ಹೇಳುವಾಗ ಪ್ರಾಚೀನವಾದ ಸ್ತ್ರೀ ಮುಖವರ್ಣಿಕೆಯ ಮಾದರಿಗಳು ದೊರೆಯುತ್ತಿಲ್ಲ. ಇಂದಿನ ಸ್ತ್ರೀಪಾತ್ರಗಳ ಮುಖವರ್ಣಿಕೆಗಳನ್ನು ಗಮನಿಸಿದರೆ ಆಧುನಿಕ ಸ್ತ್ರೀಯರ ಅನುಕರಣೆ ಮಾಡಿರುವುದನ್ನು ಕಾಣಬಹುದು. ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ಸುಮಾರು ೧೯೦೫ರಿಂದ ೧೯೧೫ರ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ಸ್ತ್ರೀಪಾತ್ರಗಳ ಮುಖವರ್ಣಿಕೆಯನ್ನು ಸೇಡಿಯಾಪು ಕೃಷ್ಣಭಟ್ಟರು ಯಕ್ಷಗಾನದ ಸ್ತ್ರೀವೇಷಗಳು (ಮಹಾಬಲಭಟ್ಟ ಮುಳಿಯ : ೧೯೮೦) ಎಂಬ ಲೇಖನದಲ್ಲಿ ವಿವರಿಸಿದ್ದಾರೆ. ಯಕ್ಷಗಾನದ ಸ್ತ್ರೀ ಮುಖವರ್ಣಿಕೆಯ ಅತ್ಯಂತ ಹಳೆಯ ಪರಂಪರೆಯ ಮಾದರಿ ಎಂದು ಇದನ್ನೇ ಗುರುತಿಸಬಹುದು. ಈ ಕಾರಣಕ್ಕಾಗಿ  ಸೇಡಿಯಾಪು ಅವರು ನೆನಪಿನಿಂದ ಮಾತುಗಳ ಮೂಲಕ ವಿವರಿಸಿದ ಸ್ತ್ರೀವೇಷದ ಬಣ್ಣಗಾರಿಕೆಯನ್ನೇ ಮೊದಲಿಗೆ ಉಲ್ಲೇಖಿಸಬಹುದು.

ವೇಷ ಹಾಕುವ ಪೂರ್ವದಲ್ಲಿ ಗಡ್ಡ ಮೀಸೆಗಳನ್ನೆಲ್ಲ ನುಣ್ಣಗೆ ಬೋಳಿಸಿಕೊಳ್ಳುವುದು ಸ್ತ್ರೀಪಾತ್ರಧಾರಿಯ ಮೊದಲ ಕರ್ತವ್ಯ. ಬಳಿಕ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದು, ಮುಖಕ್ಕೆ ಬಣ್ಣ ಹಾಕಲು ಆರಂಭಿಸುತ್ತಾರೆ. ಮುಖಕ್ಕೆ ನಸು ಹಳದಿಗೆಂಪಿನ ಬಣ್ಣ ಬಳಿದು ಎರಡೂ ಕೆನ್ನೆಗಳ ನಡುವೆ ಚಿಬುಕ(chin)ದಲ್ಲಿ ಎದ್ದು ಕಾಣುವ ಹಾಗೆ ಒಂದೊಂದು ಕೆಂಪು ಬೊಟ್ಟನ್ನು ಇಟ್ಟುಕೊಳ್ಳುವರು. ಅವುಗಳ ಸುತ್ತಲೂ ಬಿಳಿಯ ಬಣ್ಣದ ‘ಮುತ್ತರಿ’ ಗಳನ್ನಿಡುವರು. ಹಣೆಯ ನಡುವೆ ನೇರವಾಗಿ ಕೇದಗೆಯಾಕಾರದಲ್ಲಿ ಕೆಂಪು ಬಣ್ಣದ ಸಣ್ಣ ನಾಮವನ್ನಿಟ್ಟುಕೊಳ್ಳುವರು. ಅದರ ಸುತ್ತಲೂ ಸಣ್ಣ ಸಣ್ಣ ಬಿಳಿ ಮುತ್ತರಿಗಳ ಎರಡು ಸಾಲುಗಳನ್ನು ಇಟ್ಟುಕೊಳ್ಳುತ್ತಿದ್ದರು. ಅಂದಿನ ಸ್ತ್ರೀವೇಷಗಳ ಹಣೆಗೆ ಉರುಟುಬೊಟ್ಟು ಇಡುವ ಪದ್ಧತಿ ಎಂದೂ ಇದ್ದಿರಲಿಲ್ಲವಂತೆ. ಕೆಲವರು ಮದುವೆಯಾಗದ ಪಾತ್ರಗಳಿಗೆ ಕೇದಗೆಯಾಕಾರದ ನಾಮವೆಂದು ಮದುವೆಯಾದ ಪಾತ್ರಗಳಿಗೆ ಉರುಟು ಬೊಟ್ಟು ಎಂದು ಹೇಳುತ್ತಾರೆ. ರಾಜವೇಷಗಳಿಗೆಲ್ಲ ಊರ್ಧ್ವ ಪುಂಡ್ರಾಕಾರದ ‘ನಾಮ’ವನ್ನು ಇಟ್ಟು ಕೊಳ್ಳುತ್ತಿದ್ದರು. ಇದೇ ಪದ್ಧತಿ ಬಹುಮಟ್ಟಿಗೆ ರಾಜ ವೇಷಗಳಲ್ಲಿ ಇಂದಿಗೂ ಉಳಿದು ಕೊಂಡಿದೆ. ಅಂದು ಸ್ತ್ರೀವೇಷಗಳಿಗೂ ನಾಮವನ್ನಿಡುತ್ತಿದ್ದುದ್ದರಿಂದ ಸ್ತ್ರೀ ಮತ್ತು ಪುರುಷ ವೇಷಗಳ ಮುಖವರ್ಣಿಕೆಯಲ್ಲಿ ಒಂದು ರೀತಿಯ ಸಾದೃಶ್ಯವನ್ನು ಕಾಣಬಹುದಾಗಿತ್ತು.  ಸೇಡಿಯಾಪು ಅವರು ಹೇಳುವಂತೆ ಸ್ತ್ರೀವೇಷದ ತ್ರಿಕೋನಾಕೃತಿಯ ನೊಸಲಿಗೆ ತಕ್ಕುದಾಗಿ ಶೋಭಿಸುತ್ತಿದ್ದ ಆ ದೀಪ್ತ ವರ್ಣದ ನಾಮವು ತಲೆಕೂದಲುಗಳ ಹಾಗೂ ಹುಬ್ಬುಗಳ ಕಪ್ಪಿನ ಕತ್ತಲೆಯಲ್ಲೊಂದು ಚಿನ್ನದ ಹಣತೆಯ ದೀಪಶಿಖೆ ಎಂಬಂತೆ ಅಪೂರ್ವವಾದೊಂದು ಕಾಂತಿಯನ್ನು ಸೂಸುತ್ತಿತ್ತು (ಮಹಾಬಲಭಟ್ಟ ಮುಳಿಯ, ೧೯೮೦: ೩೦೦). ಮೂಗಿನ ಎರಡೂ ಹೊಡೆಗಳ ತಗ್ಗಿನ ಭಾಗದಲ್ಲಿ ರತ್ನದಂತೆ ಹೊಳೆಯುವ ವಸ್ತುವನ್ನು ಅಂಟಿಸು ತ್ತಿದ್ದರು. ಇವು ಮೂಗು ಬೊಟ್ಟುಗಳೆಂಬಂತೆ ಕಾಣಿಸುತ್ತಿದ್ದುವು.  ಹೆಣ್ಣು ಮಕ್ಕಳು ತೊಟ್ಟು ಕೊಳ್ಳುತ್ತಿದ್ದ ‘ಬುಲಾಕು’ ಎಂಬ ಮೂಗಿನ ಆಭರಣವನ್ನು ಇಟ್ಟುಕೊಳ್ಳುತ್ತಿದ್ದರು. ಅದನ್ನು ಧರಿಸಲು ಮೂಗು ಚುಚ್ಚುವ ಅವಶ್ಯಕತೆ ಇರಲಿಲ್ಲ. ಅರ್ಧ ಚಂದ್ರಾಕೃತಿಯ ಕುಂಡಲದ ಹಾಗಿರುವ ಅದರ ಕೊನೆಗಳನ್ನು ಮೂಗಿನ ಹೊಳ್ಳೆಗಳೊಳಗೆ ತಳ್ಳಿ ಬಿಟ್ಟರಾಯಿತು. ಮೂಗಿನ ನಡುಮರದಲ್ಲಿ ಅದು ಸಿಕ್ಕಿಕೊಂಡು ನೇಲುತ್ತಿರುತ್ತದೆ. ಮುತ್ತಿನಂತಹ ಒಂದು ದೊಡ್ಡ ಮಣಿ ಆ ಅರ್ಧಚಂದ್ರದ ಮಧ್ಯದಿಂದ ಕೆಳಗೆ ಜೋಲುತ್ತಾ ತುಟಿಗಳನ್ನು ಸ್ಪರ್ಶಿಸು ವಂತಿರುತ್ತದೆ. ಅಂದು ಬುಲಾಕು ಯಕ್ಷಗಾನದಲ್ಲಿ ನಿತ್ಯಸ್ತ್ರೀವೇಷಗಳಿಗೆ ಕಡ್ಡಾಯವಾಗಿದ್ದ ಆಭರಣ. ಪ್ರಸಂಗದ ಸ್ತ್ರೀವೇಷಗಳಿಗೆ ಕೆಲವೊಮ್ಮೆ ಬುಲಾಕಿನ ಬದಲಾಗಿ ಹಳ್ಳಿಯ ಮುತ್ತೈದೆಯರು ಧರಿಸುತ್ತಿದ್ದ ಉದ್ದ ಮೂಗುತಿಯನ್ನು ಎಡಮೂಗಿಗೆ ಧರಿಸುತ್ತಿದ್ದರಂತೆ. ಮುಖಾಲಂಕರಣದಲ್ಲಿ ಕಣ್ಣು ಮತ್ತು ಹುಬ್ಬುಗಳನ್ನು ತಿದ್ದುವುದು ಮುಖ್ಯವಾದ ಅಂಶ. ಹುಬ್ಬಿಗೆ ಕಪ್ಪು ಬಣ್ಣವನ್ನು ಹಚ್ಚಿ, ಮೇಲ್ಗೆನ್ನೆಯ ಅರ್ಧವನ್ನು ಆವರಿಸಿದ ತಲೆ ಕೂದಲಿ ನವರೆಗೂ ವಿಸ್ತರಿಸುತ್ತಿದ್ದರು. ಕಣ್ಣಿನ ಕೊನೆಯನ್ನು ಕಪ್ಪು ಬಣ್ಣದ ರೇಖೆಯ ಮೂಲಕ ವಿಸ್ತರಿಸಿ ಹುಬ್ಬಿಗೆ ಅನುರೂಪವಾಗಿ ಬರೆಯುತ್ತಿದ್ದರು. ಹುಬ್ಬುಗಳ ಮೇಲುಭಾಗ ದಲ್ಲಿ ಮುತ್ತರಿಗಳ ಸಾಲನ್ನು ಉದ್ದಕ್ಕೂ ಇಡುತ್ತಿದ್ದರು. ಇವುಗಳಿಂದಾಗಿ ಸ್ತ್ರೀವೇಷ ಮತ್ತು ಪುರುಷ ವೇಷಗಳ ಮುಖವರ್ಣದಲ್ಲಿ ಒಂದು ರೀತಿಯ ಅನುರೂಪ್ಯವನ್ನು ಕಾಯ್ದುಕೊಳ್ಳ ಲಾಗುತ್ತಿತ್ತು.

ಆ ಬಳಿಕ ತಲೆಗೂದಲಿಗೆ ಎಣ್ಣೆ ಸವರಿ ಬಾಚಿಕೊಂಡು ಕಿವಿಯಿಂದ ಕಿವಿಯವರೆಗೆ ಅಡ್ಡ ಬೈತಲೆ ತೆಗೆದು ಕೂದಲುಗಳನ್ನು ಹಿಂದಲೆ ಮುಂದಲೆಯಾಗಿ ಎರಡು ಭಾಗ ಮಾಡುತ್ತಿದ್ದರು. ನಂತರ ಮುಂದಲೆಯ ಕೂದಲನ್ನು ಪುನಃ ಬಾಚಿ ನೇರವಾಗಿ ಹಣೆಯ ಮೇಲೆ ಸೂಡಿ ಹಿಡಿದು, ಅದರ ಬುಡಕ್ಕೆ ಇನ್ನೊಬ್ಬರ ಸಹಾಯದಿಂದ ನೂಲಿನಿಂದ ಬಿಗಿಯಾಗಿ ಕಟ್ಟಿಸಿಕೊಳ್ಳು ತ್ತಿದ್ದರು. ಕಟ್ಟಿನ ಮುಂದೆ ಕುದುರೆಯ ಬಾಲದಂತೆ ಜೋಲಾಡುವ ಕೂದಲುಗಳನ್ನು ಸರಿಯಾಗಿ ಎರಡು ಎಸಳುಗಳಾಗಿ ವಿಂಗಡಿಸಿಕೊಳ್ಳುತ್ತಿದ್ದರು. ಮತ್ತೆ ಅವುಗಳಿಗೆ ಚೆನ್ನಾಗಿ ಎಣ್ಣೆ ಸವರಿ ಬಾಚಿ, ಚಪ್ಪಟೆಯಾದ ಎರಡು ಹಾಳೆಗಳಂತೆ ರೂಪಿಸಿ, ಒಂದೊಂದು ಹಾಳೆಯನ್ನು ಒಂದೊಂದು ಹುಬ್ಬಿನ ಕೊನೆಗೆ ತಾಗುವಂತೆ ಇಳಿಸಿ, ಅವುಗಳ ತುದಿಯನ್ನು ಕಿವಿಗಳ ಮೇಲಿನಿಂದ ಹಿಂದಕ್ಕೊಯ್ದು, ಅಡ್ಡ ಬೈತಲೆಯ ಹಿಂದಲೆಯ ಕೂದಲುಗಳ ಜತೆ ಸೇರಿಸಿ ಬಿಗಿಯಾಗಿ ಹಿಡಿದು ಬಾಚಿಸಿಕೊಳ್ಳುತ್ತಿದ್ದರು. ಚಕ್ರಮುಡಿ ಕಟ್ಟುವ ಸ್ತ್ರೀಯರು ಇಂದಿಗೂ ಬಳಸುವ ಬಳೆಯಾಕಾರದ ಬಟ್ಟೆಯ ಸಿಂಬಿಯೊಳಗೆ ಹಿಂದಲೆ ಕೂದಲುಗಳನ್ನು ತುರುಕಿಸಿ, ಆಮೇಲೆ ಆ ಸಿಂಬಿಯನ್ನೆಲ್ಲ ಮುಚ್ಚುವಂತೆ ಕೂದಲುಗಳನ್ನು ಅರಳಿಸಿ, ಸಿಂಬಿಯನ್ನು ತಲೆಗೆ ಒತ್ತಿ ಹಿಡಿದು, ಕೊನೆ ಕೂದಲುಗಳನ್ನೆಲ್ಲ ಸಿಂಬಿಯ ಹೊರ ಮಗ್ಗುಲಿಗೆ ಎಳೆದು ಮಡಚಿಟ್ಟು ನೂಲುಗಳಿಂದ ಬಿಗಿಯಾಗಿ ಸುತ್ತಿ ಮುಡಿ ಕಟ್ಟುತ್ತಿದ್ದರು. ಸುಂದರವಾದ ಮುಡಿಗೆ ಬೇಕಾದಷ್ಟು ಕೂದಲು ಇಲ್ಲವಾದರೆ ವೇಷಧಾರಿಗಳು ಚವರಿಯನ್ನು ಹಿಂದಲೆ ಕೂದಲಿಗೆ ಸೇರಿಸುತ್ತಿದ್ದರು. ಹೀಗೆ ಕೇಶ ವಿನ್ಯಾಸವನ್ನು ಮಾಡಿದಾಗ ವೇಷಧಾರಿಯ ಹಣೆಗೆ ತ್ರಿಕೋನಾಕೃತಿ ಬರುತ್ತಿತ್ತು.

ಯಾವುದೇ ಸ್ತ್ರೀವೇಷಗಳಿಗೆ ಸೋರ್ಮುಡಿ(ಜಡೆ)ಯನ್ನು ಕಟ್ಟುವ ಸಂಪ್ರದಾಯ ಯಕ್ಷಗಾನದಲ್ಲಿ ಇದ್ದಂತಿಲ್ಲ. ಬೇಲೂರಿನ ಶಿಲಾಬಾಲಿಕೆಯರಲ್ಲೂ ಕೂಡಾ ಚಕ್ರಮುಡಿಯೇ ಇರುವುದನ್ನು ಗಮನಿಸಬಹುದು. ಯಕ್ಷಗಾನ ಪ್ರಚಲಿತವಿರುವ ಪ್ರದೇಶಗಳಲ್ಲಿ ಸ್ತ್ರೀಯರು ಪ್ರಬುದ್ಧರಾದ ಮೇಲೆ ಜಡೆ ಬಿಡುವ ಪದ್ಧತಿ ಇತ್ತೀಚಿಗಿನವರೆಗೂ ಇದ್ದಿರಲಿಲ್ಲ. ಮದುವೆ ಯಾದವರೆಲ್ಲ ಚಕ್ರಮುಡಿ ಕಟ್ಟುವುದೇ ಸಾಮಾನ್ಯ ಸಂಪ್ರದಾಯವಾಗಿತ್ತು. ಈ ಕಾರಣದಿಂದ ಯಕ್ಷಗಾನದಲ್ಲೂ ಈ ಪದ್ಧತಿ ಬಳಕೆಗೆ ಬಂದಿರಬಹುದು. ಹೀಗೆ ಮೇಲೆ ಹೇಳಿದಂತೆ ಕೇಶರಚನೆಯನ್ನು ಮಾಡಿಕೊಂಡ ಮೇಲೆ ಅಡ್ಡ ಬೈತಲೆಯ ರೇಖೆಯನ್ನು ಮುತ್ತಿನಂತಹ ಮಣಿಗಳ ಎರಡೆಳೆಯ ಮಾಲೆಯಿಂದ ಮರೆ ಮಾಡುತ್ತಿದ್ದರು. ಹಣೆಯ ಮೇಲ್ಭಾಗದಲ್ಲಿ ಬಿಗಿದ ಗಂಟನ್ನು ಕಿರುಮಣಿಗಳು ಜೋಲುತ್ತಿರುವ ಪದಕದಂತಹ ‘ಮುಂದಲೆಬೊಟ್ಟು’ ಎಂಬ ಆಭರಣದಿಂದ ಮುಚ್ಚಿಕೊಳ್ಳುತ್ತಿದ್ದರು. ಸಹಜವಾದ ನೇರ ಬೈತಲೆ ಉಂಟೆಂಬ ಭಾವನೆ ಹುಟ್ಟುವ ಹಾಗೆ ಕಿರುಮಣಿಗಳ ಇನ್ನೊಂದು ಮಾಲೆಯನ್ನು ಮುಂದಲೆಬೊಟ್ಟಿನಿಂದ ಎಡ ತಲೆಯ ಚಕ್ರಮುಡಿಯವರೆಗೆ ಕಟ್ಟಿಕೊಳ್ಳುತ್ತಿದ್ದರು. ಮಲ್ಲಿಗೆಯ ಮಾಲೆಯನ್ನು ಮುಡಿಗೆ ಸುತ್ತಿಕೊಳ್ಳುತ್ತಿದ್ದರು. ಮತ್ತು ಚಕ್ರಮುಡಿಯ ಹೊಕ್ಕುಳಿಗೆ ತಿರುಪಿನ ಹೂ ಎಂಬ ಆಭರಣವನ್ನು ಧರಿಸುತ್ತಿದ್ದರು. ಬೇರೆ ಬೇರೆ ಬಣ್ಣಗಳಿಂದ ಹೊಳೆಯುವ ಕಿರುಮಣಿಗಳನ್ನು ಪೋಣಿಸಿ ಕಿವಿಯ ಆಕಾರವನ್ನು ಮಾಡಿ, ಕಿವಿಗಳನ್ನು ಮುಚ್ಚಿ ಬಿಡುತ್ತಿದ್ದರು. ಈ ಕರ್ಣಾಭರಣದ ಕೆಳ ತುದಿಯಲ್ಲೂ ಕಿರುಮಣಿಗಳು ಜೋಲುತ್ತಿರುವ ಸಣ್ಣ ಗಂಟೆ ಯಾಕಾರದ ಕುಚ್ಚು ತೂಗಾಡುತ್ತಿರುತ್ತದೆ. ಆ ಕುಚ್ಚಿನ ತೊಟ್ಟಿಗೆ ಚಿನ್ನದ ಹಾಗೆ ಹೊಳೆಯುವ ಮೂರೆಳೆಯ ಸರಪಳಿಯೊಂದನ್ನು ತಗುಲಿಸಿ, ಸರಪಳಿಯ ಇನ್ನೊಂದು ಕೊಳಿಕೆಯ ತುದಿಯನ್ನು ಸರಪಳಿ ಸ್ವಲ್ಪ ಜೋಲುವ ರೀತಿಯಲ್ಲಿ ಎಡ ತಲೆಯ ಕೂದಲಿಗೆ ಸಿಕ್ಕಿಸುತ್ತಿದ್ದರು. ಆ ಕರ್ಣಾಭರಣದ ಮೇಲಿನ ತುದಿಗೆ ಇನ್ನೊಂದು ಸರಪಳಿಯೂ ಇರುತ್ತಿತ್ತು. ಅದನ್ನು ಮುಖದ ಕಡೆಗೆ ಸ್ವಲ್ಪ ವಾಲಿಸಿ, ಅದರ ಕೊಳಿಕೆಯನ್ನು ಮೇಲ್ಗೆನ್ನೆಯ ಮೇಲೆ ಕೂದಲಿಗೆ ಸಿಕ್ಕಿಸುತ್ತಿದ್ದರು. ಈ ರೀತಿಯ ಆಭರಣ ಅಂದಿನ ಕಾಲದ ಮಹಿಳೆಯರು ಕಿವಿಗಿಟ್ಟು ಕೊಳ್ಳುತ್ತಿದ್ದರೆಂಬುದು ಸೇಡಿಯಾಪು ಅವರ ವಿವರಣೆಯಿಂದ ತಿಳಿಯುತ್ತದೆ. ಇಂದು ಬಳಕೆಯಲ್ಲಿಲ್ಲದಿರುವ ‘ಗಿಳಿಯೋಲೆ’ ಎಂಬ ಕರ್ಣಾಭರಣಕ್ಕೆ ಮೇಲೆ ಹೇಳಿದ ಎರಡು ಸರಪಳಿಗಳು ಇದ್ದುವಂತೆ. ಈ ಸರಪಳಿಗಳಿಗೆ ಓಲೆ ಸರಪಳಿ ಮತ್ತು ತಾಂಗು ಸರಪಳಿ ಎಂದು ಹೆಸರು.

ಸೇಡಿಯಾಪು ಅವರ ಈ ವಿವರಣೆಗಳನ್ನು ನೋಡಿದರೆ ಇಂದಿನ ಸ್ತ್ರೀವೇಷಗಳು ಈ ಪರಂಪರೆಯನ್ನು ಬಿಟ್ಟು ಬಹಳ ದೂರ ಬಂದಿರುವುದನ್ನು ಕಾಣಬಹುದು.

ಸ್ತ್ರೀವೇಷಗಳಲ್ಲಿ ಪುರುಷ ವೇಷಗಳಲ್ಲಿರುವಷ್ಟು ವೈವಿಧ್ಯತೆ ಯಕ್ಷಗಾನದಲ್ಲಿ ಇಂದಿಗೂ ಗೋಚರಿಸುವುದಿಲ್ಲ. ಸ್ತ್ರೀವೇಷ ಧರಿಸುವವರು ಗೌರವರ್ಣದಿಂದ ಮೂಲಲೇಪನ ಮಾಡಿಕೊಂಡು ನಾಮ ಹಾಗೂ ಮುದ್ರೆಗಳನ್ನು ಬರೆಯುತ್ತಾರೆ. ಹಣೆಗೆ ನಾಮದ ಬದಲಿಗೆ ಇಂದು ವರ್ತುಲಾಕಾರದ ತಿಲಕವನ್ನು ಇಡಲಾಗುತ್ತದೆ. ಹಿಂದೆ ಈ ಪದ್ಧತಿಯಿರಲಿಲ್ಲವಂತೆ. ಹಿಂದೆ ಕನ್ನಡದಲ್ಲಿ ಅಂಕೆ ನಾಲ್ಕನ್ನು ಬರೆಯುವಂತೆ – (೪) ಆಕಾರದಲ್ಲಿ – \Pಕವನ್ನು ಇಡುತ್ತಿದ್ದರಂತೆ. ಇದನ್ನು ಕಲಶ ತಿಲಕ ಎಂದು ಕರೆಯಲಾಗುತ್ತದೆ. ದೀಪದ ಶಿಖೆಯಂತೆ ಉದ್ದನೆಯ ತಿಲಕವಿಡುವ ಸಂಪ್ರದಾಯವೂ ಹಿಂದೆ ರೂಢಿಯಲ್ಲಿತ್ತಂತೆ. ಸಾಂಪ್ರದಾಯಕ ಮರಾಠಿ ಮಹಿಳೆಯರು, ಮಾಧ್ವ ಸ್ತ್ರೀಯರು ಧರಿಸುವ ನಾಮವನ್ನು ಹೋಲುವ ನಾಮಗಳಿವು. ಹಣೆಯ ಕಲಶ ತಿಲಕ ಹಾಗೂ ಉದ್ದನೆಯ ನಾಮದಿಂದಾಗಿ ಪುರುಷ ವೇಷಗಳ ಅದರಲ್ಲೂ ಪೀಠಿಕೆ ವೇಷಗಳ ಮುಖವರ್ಣಿಕೆಯೊಡನೆ ಸಾದೃಶ್ಯವನ್ನು ಕಾಣಬಹುದಿತ್ತು. ಕೂದಲನ್ನು ಕಟ್ಟಿ ತ್ರಿಕೋನಾಕೃತಿಯಾಗಿಸಿದ ಹಣೆಯಲ್ಲಿ ಈ ತೆರನ ತಿಲಕಗಳಿಗೆ ವಿಶಿಷ್ಟವಾದ ಶೋಭೆ ಪ್ರಾಪ್ತವಾಗುತ್ತಿತ್ತು.

ಹಣೆಗೆ ವೃತ್ತಾಕಾರದಲ್ಲಿ ಕುಂಕುಮದ ತಿಲಕವನ್ನು ಇಡುವ ಪದ್ಧತಿ ಇಂದು ಬಹುತೇಕ ಎಲ್ಲಾ ಸ್ತ್ರೀ ಪಾತ್ರಧಾರಿಗಳು ಅನುಸರಿಸುವುದನ್ನು ಕಾಣಬಹುದು. ಕೆಲವೊಂದು ಪಾತ್ರಗಳಿಗೆ ಕುಂಕುಮದ ಅಡ್ಡ ಬೊಟ್ಟನ್ನು ಇಡುವುದಿದೆ. ಕೆಲವೊಮ್ಮೆ ಶ್ರೀಗಂಧ, ಅರ್ಧಚಂದ್ರಾಕೃತಿಯ ತಿಲಕ ಇತ್ಯಾದಿಗಳನ್ನು ಇಡುವುದನ್ನು ಕಾಣಬಹುದು. ದೇವಿಯಂತಹ ವಿಶಿಷ್ಟ ಸ್ತ್ರೀ ಪಾತ್ರಗಳ ಸಂದರ್ಭದಲ್ಲಿ ಈ ತೆರನ ತಿಲಕಗಳನ್ನು ಬಳಸುವುದಿದೆ. ಪುರುಷ ವೇಷಗಳಿಗಿಂತಲೂ ಸೂಕ್ಷ್ಮವಾಗಿ ಹಾಗೂ ಪುಟ್ಟದಾಗಿ ಕಾಡಿಗೆಯಲ್ಲಿ ತಿದ್ದಿದ ಹುಬ್ಬು, ಗದ್ದಕ್ಕೆ ಕಾಡಿಗೆಯ ಬೊಟ್ಟು ಇತ್ಯಾದಿಗಳ ಮೂಲಕ ಸ್ತ್ರೀವೇಷದ ಅಂದವನ್ನು ಹೆಚ್ಚಿಸುವುದಿದೆ. ಪ್ರಮೀಳೆ ಮೊದಲಾದ ರಾಜಸ ಪ್ರವೃತ್ತಿಯ ಪಾತ್ರಗಳಿಗೆ ಕಣ್ಣ ರೆಪ್ಪೆಗಳ ಕೆಳ ಭಾಗದಲ್ಲಿ ನಸುಕೆಂಪು ಬಣ್ಣವನ್ನು ಹಚ್ಚುವುದೂ ಇದೆ.

ಸ್ತ್ರೀವೇಷದ ವೇಷಭೂಷಣಗಳು

ಯಕ್ಷಗಾನದ ಸ್ತ್ರೀವೇಷಗಳನ್ನು ನೋಡಿದರೆ ಆಧುನಿಕ ಫ್ಯಾಶನ್ ವಲಯದ ಸ್ತ್ರೀಯರ ವೇಷಭೂಷಣಗಳನ್ನೇ ಹೋಲುತ್ತವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ವರ್ಣಗಳ, ಜರಿಗಳ ತೊಡುಗೆಗಳನ್ನು ತೊಟ್ಟುಕೊಂಡು ಸ್ತ್ರೀವೇಷಗಳು ಆಧುನಿಕ ದೃಶ್ಯ ಮಾಧ್ಯಮಗಳ ಸ್ತ್ರೀ ಪಾತ್ರಗಳನ್ನು ಅನುಕರಿಸುವಂತೆ ಭಾಸವಾಗುತ್ತಿವೆ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ ವೇಷಭೂಷಣಗಳು ತೀರಾ ದುರ್ಬಲ ಎಂಬ ಅಭಿಪ್ರಾಯವನ್ನು ಅನೇಕ ವಿದ್ವಾಂಸರು ಹೇಳುತ್ತಲೇ ಬಂದಿದ್ದಾರೆ. ಆದರೆ ಯಕ್ಷಗಾನದಲ್ಲಿ ಪರಿಪೂರ್ಣವಾದ ಮತ್ತು ಯಕ್ಷಗಾನದ ಗುರುತುಗಳನ್ನು ಉಳಿಸಿಕೊಂಡ ಸ್ತ್ರೀವೇಷದ ವೇಷಭೂಷಣಗಳು ಇರಲೇ ಇಲ್ಲವೆ ಎಂಬ ಸಂದೇಹ ಬರುತ್ತದೆ. ಲಭ್ಯ ಮಾಹಿತಿಗಳನ್ನು ಇಟ್ಟುಕೊಂಡು ಶೋಧಿಸಿದರೆ ಸೇಡಿಯಾಪು ಕೃಷ್ಣಭಟ್ಟರ ವಿವರಗಳೇ ಬಹಳ ಹಳೆಯವು ಎಂದೆನಿಸುತ್ತದೆ. ಇಲ್ಲೂ ಕೂಡಾ ಸ್ತ್ರೀ ಪಾತ್ರಗಳು ಆಧುನಿಕ ಸ್ತ್ರೀಯರ ರವಕೆ ಇತ್ಯಾದಿಗಳನ್ನು ತೊಟ್ಟುಕೊಂಡಿರುವುದು ಬಹುಶಃ ಯಕ್ಷಗಾನದ ಪರಂಪರೆಯಲ್ಲಿ ಸ್ತ್ರೀವೇಷಗಳಿಗೆ ನಿರ್ದಿಷ್ಟ ಉಡುಪುಗಳು ಇದ್ದಂತೆ ತೋರುವುದಿಲ್ಲ. ೨೦ನೇ ಶತಮಾನದ ಆರಂಭದ ದಶಕದ ಯಕ್ಷಗಾನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸೇಡಿಯಾಪು ಅವರ ವಿವರಗಳನ್ನೆ ಇಲ್ಲಿಯೂ ಗಮನಿಸಬಹುದು.

ಸ್ತ್ರೀವೇಷಧಾರಿಯು ಸಾಮಾನ್ಯವಾಗಿ ಹದಿನೆಂಟು ಮೊಳದ ಸೀರೆಯನ್ನು ಕಚ್ಚೆ ಹಾಕಿ ಉಟ್ಟು ಕೊಳ್ಳುತ್ತಿದ್ದನು. ಸಾಮಾನ್ಯವಾಗಿ ಸೀರೆಯ ಬಣ್ಣ ಕಪ್ಪು. ಅಗಲವಾದ ಅದರ ಅಂಚು ಹಾಗೂ ಮೇಲು ಸೆರಗು ಕೆಂಪು. ಎದೆಯ ಭಾಗದಲ್ಲಿ ಸಾಕಷ್ಟು ಗಾತ್ರದ ವಸ್ತ್ರದುಂಡೆ ಗಳನ್ನು ಇಟ್ಟು, ಮೊಲೆಕಟ್ಟು ಬಿಗಿದು ಕಪ್ಪು ಅಥವಾ ಕೆಂಪು ಬಣ್ಣದ ರವಕೆಯನ್ನು ತೊಟ್ಟು ಕೊಳ್ಳುತ್ತಿದ್ದರು. ರವಕೆಯ ಕೈ ಮೊಣಕೈ ಗಂಟಿನಿಂದ ಒಂದು ಬೆರಳು ಅಗಲದಷ್ಟು ಮೇಲಿನ ವರೆಗೆ ಇರುತ್ತಿತ್ತು. ರವಕೆಯ ಕೈಯ ಕೊನೆಯ ಭಾಗವು ವಿವಿಧ ಬಣ್ಣಗಳ ಮಣಿ ಗಳಿಂದ ರಚಿಸಿದ ಎರಡಂಗುಲ ಅಗಲದ ಪಟ್ಟಿಯಂತಹ ತೊಡುಗೆಯಿಂದ ಬಿಗಿಯಾಗುತ್ತಿತ್ತು. ಚಿನ್ನದ ಬಣ್ಣದ ಸಣ್ಣ ಸಣ್ಣ ಮಣಿಗಳಿಂದ ಮಾಡಿದ ಅಗಲವಾದ ಒಂದು ಪಟ್ಟಿಯ ತೊಡುಗೆಯಿಂದ ಕಂಠವನ್ನು ಅಲಂಕರಿಸಲಾಗುತ್ತಿತ್ತು. ಸ್ತ್ರೀಯರಿಗೆ ಇಲ್ಲದ ಪುರುಷ ಜಾತಿಗೆ ಇದ್ದೇ ಇರುವ ಕೊರಳ ಗಂಟನ್ನು ಮರೆ ಮಾಡುವುದು ಇದರ ಉದ್ದೇಶವಾಗಿರಬಹುದು. ಹಿಂದಿನ ಕಾಲದಲ್ಲಿ ‘ಚಿಂತಾಕು’ ಎಂಬ ಹೆಸರಿನ ಇಂತಹುದೇ ಆಭರಣವನ್ನು ಧರಿಸುತ್ತಿದ್ದ ಬಗೆಗೆ ಹಿರಿಯರು ಹೇಳಿದ್ದನ್ನು ಸೇಡಿಯಾಪು ಅವರು ನೆನಪಿಸಿಕೊಂಡಿದ್ದಾರೆ. ಸೀರೆಯ ಸೆರಗನ್ನು ಎಡ ಹೆಗಲ ಮೇಲಿಂದ ಹಿಂದಕ್ಕೆಳೆದು ಬಲ ತೋಳಿನ ಅಡಿಯಿಂದ ತಂದು ಸೆರಗಿನ ತುದಿಯನ್ನು ಚಿನ್ನದಂತೆ ಹೊಳೆಯುತ್ತಿದ್ದ ಅಗಲವಾದ ಸೊಂಟದ ಪಟ್ಟಿಗೆ ಸಿಕ್ಕಿಸಿಕೊಳ್ಳುತ್ತಿದ್ದರು. ನೀಳವಾಗಿ ಇಳಿಬಿಟ್ಟ ಈ ಸೆರಗಿನ ತುದಿಯು ನಿತಂಬ ಪ್ರದೇಶವನ್ನು ಮೀರಿ ಜೋಲುತ್ತಿತ್ತು. ಉಡುಗೆಯ ಈ ವಿಧಾನದಿಂದಾಗಿ ಕುಣಿಯುವ ವೇಳೆಗೆ ಎರಡು ತೋಳುಗಳ ಕ್ರಿಯೆಗಳು ಸ್ಪಷ್ಟವಾಗಿ ಹಾಗೂ ಸಮಾನವಾಗಿ ಕಾಣುತ್ತಿದ್ದುವು, ರಭಸದ ಕುಣಿತದಲ್ಲಿಯೂ ಸೆರಗು ಜಾರದೆ, ಕಾಲು ತೊಡರದೆ ಇದು ನೆರವಾಗುತ್ತಿತ್ತು. ಚಿನ್ನದ ಬಣ್ಣದ ಮಣಿಗಳಿಂದ ಸಿದ್ಧಪಡಿಸಿದ ಉದ್ದನೆಯ ಹಾರಗಳು ಎದೆಯ ಭಾಗವನ್ನು ಆವರಿಸಿಕೊಳ್ಳುತ್ತಿದ್ದುವು. ಸೊಂಟಕ್ಕೆ ಮೇಲೆ ಹೇಳಿದ ಪಟ್ಟಿ ಮಾತ್ರ ಅಲ್ಲದೆ ಅದರ ಕೆಳಗೆ ಉಡಿಗೆಜ್ಜೆ ಎಂಬ ಮೇಖಲೆಯನ್ನು ಧರಿಸಲಾಗುತ್ತಿತ್ತು.  ಕಾಲುಗಳ ಮಣಿಗಂಟುಗಳಲ್ಲಿ ಗೆಜ್ಜೆಗಳನ್ನು ಧರಿಸುತ್ತಿದ್ದರು. ಗೆಜ್ಜೆಯ ಜತೆಗೆ ‘ಪಾಡಗ’ ಎಂಬ ಒಂದು ಬಗೆಯ ಕಾಲು ಕಡಗವೂ ಇರುತ್ತಿತ್ತು. ಕೈಯ ಕಂಕಣ ಸ್ಥಾನದಲ್ಲಿ ಸಾಮಾನ್ಯವಾಗಿ ಅಲುಗಾಡುವ ಬಳೆಗಳು ಇರುತ್ತಿರಲಿಲ್ಲ. ಅವುಗಳ ಬದಲಿಗೆ ಬಣ್ಣ ಬಣ್ಣದ ಮಣಿಗಳನ್ನು ಹಾಗೂ ಚತುಷ್ಕೋನಾ ಕೃತಿಯ ಬಣ್ಣ ಬಣ್ಣದ ಸಣ್ಣ ಗಾಜಿನ ತುಂಡುಗಳನ್ನು ಸಾಲು ಸಾಲಾಗಿ ಅಳವಡಿಸಿ ನಿರ್ಮಿಸಿದ ಅಗಲವಾದ ಪಟ್ಟಿಯನ್ನು ಅಲುಗಾಡದಂತೆ ಕಟ್ಟಲಾಗುತ್ತಿತ್ತು. ಇದು ಯಾವುದೇ ರೀತಿಯ ನೃತ್ಯ, ಅಭಿನಯ ಮಾಡುವ ಸಂದರ್ಭದಲ್ಲಿ ಅತ್ತಿತ್ತ ಸರಿಯುತ್ತಿರಲಿಲ್ಲ. ಅಲುಗಾಡುವ ಬಳೆಗಳನ್ನು ಧರಿಸಿಕೊಂಡರೆ ಪುರುಷರ ಮಣಿಗಂಟಿನ ನಿಜರೂಪವು ಪ್ರಕಟವಾಗಿ ವೇಷದ ವಿರೋಧಾಭಾಸವನ್ನು ತಡೆಯಲು ಇದರಿಂದ ಸಾಧ್ಯವಾಗುತ್ತಿದ್ದಿರಬಹುದು.

ಸೇಡಿಯಾಪು ಅವರ ಈ ವಿವರಗಳು ಇಂದಿನ ಸ್ತ್ರೀವೇಷಗಳಿಗಿಂತ ಸ್ವಲ್ಪ ಭಿನ್ನವಾದ ವೇಷದ ಚಿತ್ರಣವನ್ನು ಮುಂದಿಡುತ್ತದೆ. ಬಹುಶಃ ಇವು ಕಾಲಾನುಕ್ರಮದಲ್ಲಿ ಅನುಕೂಲವನ್ನು ಆಶ್ರಯಿಸಿ ಪರಿವರ್ತನೆಗೊಂಡಿರಬಹುದು. ಯಕ್ಷಗಾನಗಳಲ್ಲಿ ಪುರುಷ ವೇಷಗಳಷ್ಟೇ ಸ್ತ್ರೀವೇಷಕ್ಕೂ ಪ್ರಾಧಾನ್ಯ ಇದೆ. ಸ್ತ್ರೀವೇಷಗಳಲ್ಲಿ ಪರಂಪರೆಯ ಭಾಗವಾಗಿ ಬರುವ ನಿತ್ಯ ಸ್ತ್ರೀವೇಷಗಳದ್ದು ಒಂದು ಬಗೆಯಾದರೆ, ಪ್ರಸಂಗದಲ್ಲಿ ಬರುವ ಮುಖ್ಯ ಸ್ತ್ರೀವೇಷ ಇನ್ನೊಂದು ರೀತಿಯದ್ದು, ಇವಲ್ಲದೆ ಸಖಿ ಮೊದಲಾದ ಪಾತ್ರಗಳು ಯಕ್ಷಗಾನದಲ್ಲಿ ಬರುತ್ತವೆ.

ತೆಂಕುತಿಟ್ಟಿನ ಸಂದರ್ಭದಲ್ಲಿ ಪ್ರಸಂಗ ಆರಂಭವಾಗುವುದಕ್ಕೆ ಪೂರ್ವದಲ್ಲಿ ಇಬ್ಬರು ಸ್ತ್ರೀ ಪಾತ್ರಧಾರಿಗಳು ಕುಣಿದು ಯಕ್ಷಗಾನದ ಪ್ರಸಂಗಕ್ಕೆ ಪೂರ್ವ ಪೀಠಿಕೆಯನ್ನು ಒದಗಿಸುತ್ತಿದ್ದುವು. ಸ್ತ್ರೀಯರ ಹಾವಭಾವಗಳನ್ನು ಪ್ರಕಟಿಸುವ ಮತ್ತು ಗೋಪಿಕೆಯರನ್ನು ನೆನಪಿಸುವ ಶೃಂಗಾರದ ವರ್ಣನೆಗಳ ಸಂಗೀತಕ್ಕೆ ಲಾಸ್ಯವಾಡುವ ನರ್ತಕಿಯರಿವರು. ತಮ್ಮ ಒನಪು, ವಯ್ಯಾರಗಳ ಮೂಲಕ ಆಕರ್ಷಣೀಯವಾಗಿ ವೇಷ ತೊಡುವ ಈ ಪಾತ್ರಗಳ ಚಾಕಚಕ್ಯತೆಯು ಮುಂದಿನ ಪ್ರಸಂಗ ಪ್ರದರ್ಶನದ ಗುಣಮಟ್ಟವನ್ನು ಮುಂದಿಡುತ್ತದೆ. ಏಕ ಕಾಲಕ್ಕೆ ರಂಗಪ್ರವೇಶ ಮಾಡಿ, ಏಕ ಪ್ರಕಾರವಾಗಿ ನೃತ್ಯ ಮಾಡುವ ಈ ಕಲಾವಿದರಿಗೆ ಯಕ್ಷಗಾನ ನೃತ್ಯದಲ್ಲಿ ಒಳ್ಳೆಯ ನೈಪುಣ್ಯವೂ, ಪರಿಣತಿಯೂ ಇರಬೇಕಾಗಿತ್ತು. ಶರೀರ ಸೌಷ್ಠವದೊಡನೆ ಸಹಜ ಸೌಂದರ್ಯವೂ ಅಗತ್ಯವಾಗಿದ್ದುವು. ಸಮರ್ಥರಾದ ಸ್ತ್ರೀ ಪಾತ್ರಧಾರಿಗಳು ಸುಮಾರು ಒಂದು ಗಂಟೆಯ ಅವಧಿವರೆಗೂ ತಮ್ಮ ನೃತ್ಯ ನೈಪುಣ್ಯವನ್ನು ಭಾಗವತನ ತಾಳಲಯವನ್ನು ಆಶ್ರಯಿಸಿ ನೃತ್ಯ ಮಾಡುತ್ತಿದ್ದರು. ನೃತ್ಯ ಸ್ತ್ರೀವೇಷಗಳು ರಂಗದಿಂದ ನಿರ್ಗಮಿಸಿದ ಬಳಿಕ ಎರಡು ವೀರಗಸೆಯ ಸ್ತ್ರೀವೇಷಗಳ ರಂಗಸ್ಥಳ ಪ್ರವೇಶವು ರಂಗದ ಇಕ್ಕೆಲಗಳಿಂದ ಏಕ ಕಾಲದಲ್ಲಿ ಆಗುತ್ತದೆ. ಇದುವರೆಗೆ ನೃತ್ಯ ಮಾಡಿದ ಸ್ತ್ರೀವೇಷಗಳ ಮೃದು ನಡಿಗೆಗಳಿಗಿಂತ ಭಿನ್ನವಾಗಿ ಇವು ವೀರಗಸೆಯ ವೇಷಧಾರಣೆಯ ಮೂಲಕ ವೀರರಸವನ್ನೇ ಹೆಚ್ಚು ಪ್ರತಿಪಾದಿಸುತ್ತಿದ್ದುವು. ಸಾಮಾನ್ಯವಾಗಿ ಮೊದಲು ಹೇಳಿದ ನಿತ್ಯ ವೇಷಗಳ ಸ್ತ್ರೀ ಪಾತ್ರಗಳು ಪ್ರಸಂಗದ ಮುಖ್ಯ ಸ್ತ್ರೀವೇಷವಾಗಿ ಅಭಿನಯಿಸುವುದು ಸಂಪ್ರದಾಯ. ಕೆಲವೊಮ್ಮೆ ಸೀರೆ ಕುಪ್ಪಸಗಳ ಬದಲಾವಣೆಗಳೊಂದಿಗೆ ಮುಖ್ಯ ಸ್ತ್ರೀವೇಷವಾಗಿ ಪ್ರಸಂಗದಲ್ಲಿ ಕಾಣಿಸಿಕೊಳ್ಳುವುದೂ ಇದೆ. ಆದರೆ ವೀರಗಸೆಯ ಸ್ತ್ರೀವೇಷಗಳು ಅದೇ ಸ್ವರೂಪದಲ್ಲಿ ಸಾಮಾನ್ಯವಾಗಿ ಮತ್ತೊಮ್ಮೆ ಪ್ರಸಂಗದ ಪಾತ್ರಗಳಾಗಿ ಬರುವುದು ವಿರಳ. ಈ ಪಾತ್ರಗಳು ಯಕ್ಷಗಾನದ ವೀರಗಾಸೆಯ ಸ್ತ್ರೀ ಪಾತ್ರಗಳಾದ ಪ್ರಮೀಳೆ, ಮೀನಾಕ್ಷಿ, ಮೊದಲಾದ ಪಾತ್ರಗಳ ರೂಪದಲ್ಲಿರುತ್ತವೆ.

ಸ್ತ್ರೀವೇಷಗಳಿಗೆ ಪುರುಷ ವೇಷಗಳಷ್ಟು ಆಭರಣಗಳಿಲ್ಲ. ಹಿಂದಿನ ಕಾಲದಲ್ಲಿ ಕಿವಿಯನ್ನು ಸಂಪೂರ್ಣ ಮರೆಮಾಡುವ ಓಲೆ ಕುಚ್ಚು ಎಂಬ ಆಭರಣವನ್ನು ಧರಿಸುತ್ತಿದ್ದರು. ಹಾಗೆ ನೋಡಿದರೆ ಇದು ಪರ್ಯಾಯವಾದ ಕಿವಿಯೇ ಹೌದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇದು ಅಲಂಕರಿಸಿದ ಕಿವಿಯ ರೂಪ. ಕೊಪ್ಪು, ಬುಗುಡಿ, ಕೊಚ್ಚು ಮೊದಲಾದುವು ಇದರ ಭಾಗಗಳು. ಕೆಳಗೆ ಕುಚ್ಚಿನಂತೆ ಮುತ್ತು, ಮಣಿಗಳಿರುತ್ತವೆ. ಸಣ್ಣ ಗಂಟೆಯಾಕಾರದಲ್ಲಿ ಕುಚ್ಚು ತೂಗಾಡುತ್ತಿರುತ್ತದೆ. ಆ ಕುಚ್ಚಿನ ತುದಿಗೆ ಚಿನ್ನದಂತೆ ಹೊಳೆಯುವ ಮೂರೆಳೆಯ ಸರಪಳಿಯೊಂದನ್ನು ತಗುಲಿಸಿ ಅದರ ಇನ್ನೊಂದು ತುದಿಯಲ್ಲಿರುವ ಕೊಳಿಕೆಯನ್ನು ಸರಪಳಿಯು ಜೋಲುವಂತೆ ಹೆಡತಲೆಯ ಕೂದಲಿಗೆ ಸಿಕ್ಕಿಸಿಬಿಡುತ್ತಿದ್ದರು. ಇಂತಹ ಕರ್ಣಾಭರಣವು ಕಳೆದ ಶತಮಾನದ ಆರಂಭದ ದಶಕದಲ್ಲಿ ಇತ್ತೆಂದು ಸೇಡಿಯಾಪು ಕೃಷ್ಣಭಟ್ಟರು ಹೇಳಿದ್ದಾರೆ (ಮಹಾಬಲಭಟ್ಟ ಮುಳಿಯ, ೧೯೮೦: ೨೨೫). ಹಿಂದೆ ಕಿವಿಗೆ ಓಲೆಯನ್ನು ಧರಿಸುತ್ತಿದ್ದರು. ಇದನ್ನು ತಾಳೆಯ ಗರಿಯಿಂದಲೇ ತಯಾರಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಓಲೆ ಎಂಬ ಹೆಸರೂ ಬಂದಿರಬಹುದು. ಇವುಗಳಲ್ಲಿ ಅರಳೋಲೆ, ಕುಚ್ಚಿನ ಓಲೆ, ಸಿಳಿಯೋಲೆ, ಸುಳಿಯೋಲೆ ಮೊದಲಾದ ಬಗೆಗಳಿವೆ. ಇವುಗಳಲ್ಲದೆ ಲವಂಗದ ಕಡ್ಡಿ, ಓಲೆ ಸರಪಳಿ, ಕೊಪ್ಪು ಸರಪಳಿ ಮೊದಲಾದ ಆಭರಣಗಳನ್ನು ಬಳಸುತ್ತಿದ್ದುದಾಗಿ ತಿಳಿದು ಬರುತ್ತದೆ. ಆದರೆ ಇವ್ಯಾವುದೂ ಇಂದು ಬಳಕೆಯಲ್ಲಿಲ್ಲ. ಈಗ ಕರ್ಣಾಭರಣವಾಗಿ ಬೆಂಡೋಲೆ ಮತ್ತು ಝುಮುಕಿಯನ್ನು ಧರಿಸುತ್ತಾರೆ. ಬೆಂಡೋಲೆ, ಝುಮುಕಿಗಳು ಸ್ತ್ರೀಯರು ಸಾಮಾನ್ಯವಾಗಿ ಬಳಸುವ ಆಭರಣದಂತೆಯೇ ಇದ್ದು ಗಾತ್ರದಲ್ಲಿ ಸ್ವಲ್ಪ ದೊಡ್ಡದಿರುತ್ತದೆ.

ಕೊರಳಿನಲ್ಲಿ ಕೊರಳಡ್ಡಿಗೆ, ಹಲ್ಲೆಕಟ್ಟು ಎಂಬ ಎರಡು ತರಹದ ಆಭರಣಗಳನ್ನು ಧರಿಸುತ್ತಾರೆ. ಕೊರಳಡ್ಡಿಗೆಯು ಕೊರಳಿಗೆ ತಾಗಿಕೊಂಡಂತೆ ಇರುತ್ತದೆ. ಇದರ ಕೆಳಭಾಗದಲ್ಲಿ ಹಲ್ಲೆಕಟ್ಟನ್ನು ಧರಿಸುತ್ತಾರೆ. ಇದು ಕೊರಳಿಗೆ ತಾಗಿಕೊಂಡು ಆಧುನಿಕ ನೆಕ್ಲೆಸ್‌ನಂತೆ ಕಾಣುತ್ತದೆ. ಇದನ್ನು ಅಡ್ಡಿಗೆ  ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದರಲ್ಲಿ ಗುಂಡಡ್ಡಿಗೆ, ಗೆಜ್ಜೆ ಅಡ್ಡಿಗೆ, ಹಲ್ಲೆ ಅಡ್ಡಿಗೆ, ಸಂಕಲೆ ಅಡ್ಡಿಗೆ ಮೊದಲಾದ ಬೇರೆ ಬೇರೆ ವಿನ್ಯಾಸಗಳಿವೆ. ಕೊರಳಡ್ಡಿಗೆಗೆ ಗುಂಡಾದ ಮರದ ಇಲ್ಲವೇ ಪ್ಲಾಸ್ಟಿಕ್ ಮಣಿಗಳನ್ನು  ಪೋಣಿಸಿ ಹಾರವನ್ನು ರಚಿಸುತ್ತಾರೆ.

ಪುರುಷ ವೇಷಗಳಲ್ಲೂ ಈ ತೆರನ ಹಲ್ಲೆಗಳಿಂದ ರಚಿಸಿದ ಆಭರಣಗಳನ್ನು ಬಳಸುತ್ತಾರೆ. ಇವುಗಳಲ್ಲದೆ ಕೊರಳಹಾರವಾಗಿ ಮಣಿಗಳ, ಮರದ ಹಲ್ಲೆಗಳ, ಪ್ಲಾಸ್ಟಿಕ್ ಗುಂಡುಗಳ ಸರವನ್ನು ಧರಿಸುತ್ತಾರೆ.

ಕುಪ್ಪಸದ ಕೈಯ ಕೊನೆಗೆ ತೋಳ್ಕಟ್ಟನ್ನು ಕಟ್ಟುತ್ತಾರೆ. ಇದನ್ನು ಮರದ ಹಲ್ಲೆ ಮಣಿಗಳು ಹಾಗೂ ಮರದ ಗೊಂಡೆಯಿಂದ ಅಲಂಕರಿಸುತ್ತಾರೆ. ಎರಡಂಗುಲದ ಸ್ತ್ರೀವೇಷದ ತೋಳ್ಕಟ್ಟು ಗಳು ಪುರುಷರ ತೋಳ್ಕಟ್ಟಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಮುಂಗೈಗೆ ಬಳೆಗಳನ್ನು ಧರಿಸುವುದು ರೂಢಿಯಲ್ಲಿರಲಿಲ್ಲ. ತೋಳ್ಕಟ್ಟಿನ ಮಾದರಿಯ ಕೈಕಟ್ಟನ್ನು ಧರಿಸುತ್ತಾರೆ. ಇದನ್ನು ಬಣ್ಣದ ಮಣಿಗಳ ಚತುಷ್ಕೋನಾಕೃತಿಯ ಅಥವಾ ವಜ್ರಾಕೃತಿಯ ಬಣ್ಣದ ಗಾಜಿನ ತುಂಡುಗಳನ್ನು ಸಾಲಾಗಿ ಜೋಡಿಸಿ ಅಲಂಕರಿಸಿರುತ್ತಾರೆ. ಇವು ಪುರುಷ ವೇಷಗಳ ತೋಳ್ಕಟ್ಟಿಗಿಂತ ಭಿನ್ನ ವಾಗಿದ್ದು ಕೈಗೆ ಬಳೆಗಳಿಗಿಂತ ಹೆಚ್ಚು ಹೊಂದಿಕೆಯಾಗುತ್ತದೆ. ಇವುಗಳ ವಿನ್ಯಾಸದಲ್ಲಿ ಮುಳ್ಳುಗಳಿರದೆ ವೃತ್ತಾಕಾರದಲ್ಲಿದ್ದು ಸರಳವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಣಿಗಳ ಆಭರಣಗಳು ಬಳಕೆಯಲ್ಲಿವೆ.

ಸ್ತ್ರೀವೇಷದ ಡಾಬು ಹಾಗೂ ಪುರುಷ ವೇಷದ ತೋಳ್ಕಟ್ಟಿಗೂ ಹೋಲಿಕೆಯಿದೆ. ಹಾಗೆಯೇ ತೋಳ್ಕಟ್ಟು ಕೈಕಟ್ಟಿಗೂ ಹೋಲಿಕೆಯಿದೆ. ಪುರುಷ ವೇಷದ ವೀರಗಸೆಯ ಜಾಗದಲ್ಲಿ ಸ್ತ್ರೀವೇಷಕ್ಕೆ ಮಣಿಗಳಿಂದ ಅಲಂಕೃತವಾದ ಸರಗಳನ್ನು ಧರಿಸುತ್ತಾರೆ. ಹಿಂದೆ ಉಡಿಗೆಜ್ಜೆ ಎಂಬ ಮೇಖಲೆಯನ್ನು ಬಳಸಲಾಗುತ್ತಿತ್ತು. ಇವುಗಳನ್ನು ಮರದ ಗುಂಡುಗಳಿಂದ ತಯಾರಿಸ ಲಾಗುತ್ತಿತ್ತು.

ಸ್ತ್ರೀವೇಷದ ವಿಧಗಳು

ಶೃಂಗಾರ ಸ್ತ್ರೀವೇಷಗಳು : ಪ್ರಭಾವತಿ, ರತಿ, ಅಪ್ಸರೆಯರು, ನರ್ತಕಿಯರು ಮತ್ತು ಮದುವೆಯಾಗದ ಪಾತ್ರಗಳನ್ನು ಈ ಗಂಪಲ್ಲಿ ಸೇರಿಸಬಹುದು. ಈ ಪಾತ್ರಗಳು ಶೃಂಗಾರ ಪಾತ್ರಗಳಾಗಿದ್ದು ಕೇದಗೆಯಾಕಾರದ ಕಿರಣವನ್ನು ಧರಿಸಿಕೊಳ್ಳುತ್ತವೆ. ಸಾಮಾನ್ಯ ಸ್ತ್ರೀಯರು ತೊಟ್ಟುಕೊಳ್ಳುವಂತೆ ಸೀರೆಯನ್ನು ಉಟ್ಟುಕೊಂಡು ಹೊಳೆಯುವ ಆಭರಣವನ್ನು  ಧರಿಸುತ್ತಾರೆ. ಅವಿವಾಹಿತ ಅಥವಾ ಮೋಹಿನಿಯಂತಹ ಪಾತ್ರಗಳು ಇಂದು ಅರ್ಧ ಸೀರೆ ತೊಟ್ಟುಕೊಂಡು ಬರುವಷ್ಟರವರೆಗೆ ವೇಷಗಳು ಆಧುನಿಕವಾಗಿವೆ.

ಗಂಭೀರ ಸ್ತ್ರೀವೇಷಗಳು : ದಾಕ್ಷಾಯಣಿ, ದಮಯಂತಿ, ಸುಭದ್ರೆ ಮೊದಲಾದ ಪಾತ್ರಗಳನ್ನು ಈ ಗುಂಪಿನಲ್ಲಿ ಸೇರಿಸಿಕೊಳ್ಳಬಹುದು. ಇವುಗಳ ಪಾತ್ರ ಚಿತ್ರಣದಲ್ಲಿ ಗಂಭೀರವಾದ ನಡೆ, ನುಡಿಯು ಕಾಣುವಂತಿರಬೇಕು. ಅದಕ್ಕಾಗಿ ಹೆಚ್ಚಿನವರು ಕೇದಗೆ ಕಿರಣವನ್ನು ಧರಿಸಿ ಕಡಿಮೆ ಜರಿಗಳಿರುವ ಸೀರೆಯನ್ನು ಉಟ್ಟುಕೊಳ್ಳುತ್ತಾರೆ. ಇತರೆ ವಿಷಯಗಳಲ್ಲಿ ಶೃಂಗಾರ ಪಾತ್ರಗಳು ಧರಿಸುವ ಆಭರಣ ಇತ್ಯಾದಿಗಳನ್ನು ಬಳಸುತ್ತಾರೆ.

ಕಸೆ (ಕಚ್ಚೆ) ಸ್ತ್ರೀವೇಷಗಳು : ಪ್ರಮೀಳೆ, ಸ್ವಯಂಪ್ರಭೆ, ಶಶಿಪ್ರಭೆ ಮೊದಲಾದ ಪಾತ್ರಗಳು ವೀರಗಚ್ಚೆ ಧರಿಸುವ  ಕಸೆ ಸ್ತ್ರೀ ವೇಷಗಳು. ಕಚ್ಚೆ ಹಾಕಿ ರವಕೆ ಧರಿಸಿ ಸೀರೆ ಅಥವಾ ತುಂಡು ಶಾಲಿನಿಂದ ಎದೆ ಮತ್ತು ಬೆನ್ನಿಗೆ ಕತ್ತರಿ ಪಟ್ಟಿಯನ್ನು ಕಟ್ಟುತ್ತಾರೆ. ತಲೆಗೆ ಕಿರಣ ಅಥವಾ ತುರಾಯಿಯನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಮಂತ್ರಿ, ಸೇನಾನಿ ಮೊದಲಾದ ವೇಷಗಳಿಗೆ ಹಿಂದೆ ತುರುಬು ಹಾಕಿ ಕೂದಲು ಇಳಿಬಿಡುತ್ತಾರೆ. ಅಥವಾ ಅದರ ಮೇಲೆ ತುರಾಯಿ ಕಟ್ಟುತ್ತಾರೆ. ಭ್ರಮರಕುಂತಳೆಯಂತಹ ಶೃಂಗಾರ ಪಾತ್ರಗಳು ಕಿರಣ ಧರಿಸುವುದು ಕೂಡ ಇದೆ. ಆಭರಣಗಳು ಸ್ತ್ರೀ ವೇಷಗಳಂತೆಯೂ ಇರುತ್ತವೆ.

ಸಾಮಾನ್ಯ ಸ್ತ್ರೀವೇಷಗಳು : ರುದ್ರಾಕ್ಷಿ ಮಾಲೆಯನ್ನು ಧಾರಣೆ ಮಾಡಿ ಜುಟ್ಟು ಹಾಕಿ ಬಿಳಿ ಅಥವಾ ಹಳದಿ ಸೀರೆಯನ್ನು ಉಟ್ಟುಕೊಳ್ಳುವ ಋಷಿ ಪತ್ನಿಯರ ವೇಷಗಳು ಈ ಗುಂಪಿನಲ್ಲಿ ಸೇರುತ್ತವೆ. ಬಂಗಾರದ ಆಭರಣಗಳಿಲ್ಲದ ಈ ವೇಷಗಳು ಸೊಂಟಕ್ಕೆ ಕಾವಿ ಬಟ್ಟೆ ಕಟ್ಟುತ್ತಾರೆ. ತುರುಬಿಗೆ ಹೂ ಮುಡಿದುಕೊಳ್ಳುತ್ತಾರೆ.

ಸಖಿವೇಷಗಳು : ಸೈರಂಧ್ರಿ, ಸರಮೆ, ತ್ರಿಜಟೆ ಹಾಗೂ ಜಲಕೇಳಿಯ ಸ್ತ್ರೀವೇಷಗಳೆಲ್ಲ ಸಖಿ ಪಾತ್ರಗಳು. ಆಧುನಿಕ ಸ್ತ್ರೀಯ ವೇಷಭೂಷಣಗಳನ್ನು ಧರಿಸಿ ರಂಗದಲ್ಲಿ ಬರುವ ಸಾಮಾಜಿಕ ವಾಸ್ತವ ವೇಷಗಳಿವು. ಇವುಗಳು ಬಂಗಾರದ ಆಭರಣಗಳನ್ನು ಧರಿಸುವಂತಿಲ್ಲ. ಮಣಿಯ ಸರಗಳು ಹಾಗೂ ಬಳೆಗಳನ್ನು ತೊಟ್ಟುಕೊಳ್ಳಬಹುದು. ಹಳೆಯ ಸೀರೆಯನ್ನು ಧರಿಸುವುದು ಸಂಪ್ರದಾಯ. ಆದರೆ ಜಲಕೇಳಿಯ ಸಖಿಯರಿಗೆ ರಾಣಿಯ ಅಥವಾ ರಾಜಕುಮಾರಿಯ ಗೆಳತಿಯರು ಎಂಬ ಕಾರಣಕ್ಕಾಗಿ ಅಲ್ಪಸ್ವಲ್ಪ ಆಭರಣಗಳನ್ನು ಧರಿಸುವ ಕ್ರಮಗಳಿವೆ. ಸೈರಂಧ್ರಿ ಪಾತ್ರಕ್ಕೆ ಬಿಳಿ ಸೀರೆಯನ್ನು ತೊಟ್ಟುಕೊಳ್ಳುವ ಪದ್ಧತಿ ಇದೆ.

ವಿರೂಪವೇಷಗಳು : ಮಂಥರೆ, ಕುಬ್ಜೆ, ಶಬರಿ, ಮುದುಕಿಯರು ಇತ್ಯಾದಿ ಪಾತ್ರಗಳು ವಿರೂಪ ವೇಷಗಳ ಸಾಲಿಗೆ ಸೇರುತ್ತವೆ. ಪ್ರಾಯಸಂದ ಅಸಹ್ಯ ರೂಪದ ಸ್ತ್ರೀಯರಂತೆ ಈ ಪಾತ್ರಗಳು ಕಪ್ಪು ಸೀರೆಯುಟ್ಟು ರಂಗದಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಹಣೆಯಲ್ಲಿ ಬಿಳಿ ಬೊಟ್ಟು ಅಥವಾ ಅಡ್ಡನಾಮ ಹಾಕಿಕೊಳ್ಳುವುದೂ ಇದೆ. ಸ್ತ್ರೀಪಾತ್ರದ ನೆಲೆಯಲ್ಲಿ ಕೈಯ ಬಳೆಗಳು ತುರುಬು ಇತ್ಯಾದಿಗಳನ್ನು ವಿಕಾರವಾಗಿ ಗಂಟು ಹಾಕಿಕೊಳ್ಳುವುದಿದೆ.

ಶ್ರೀದೇವಿ

ಯಕ್ಷಗಾನದಲ್ಲಿ ಶ್ರೀದೇವಿಯ ಪಾತ್ರವು ವಿಶಿಷ್ಟವಾದುದು. ಮುಖ್ಯವಾಗಿ ಶ್ರೀದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀದೇವಿ ಲಲಿತೋಪಖ್ಯಾನದಂತಹ ಆಧುನಿಕ ಪ್ರಸಂಗಗಳಲ್ಲಿ ದೇವಿಯ ಪಾತ್ರವು ಪ್ರಧಾನವಾಗಿದ್ದು, ಸ್ತ್ರೀವೇಷಧಾರಿಗಳು ಅದನ್ನು ವಿಶಿಷ್ಟವಾಗಿ ರೂಪಿಸುತ್ತಾರೆ. ಸ್ತ್ರೀ ಪಾತ್ರಗಳಲ್ಲಿ ದೇವಿಯ ಪಾತ್ರಕ್ಕೆ ವಿಶೇಷ ಪ್ರಾಧಾನ್ಯವಿದೆ. ಭಕ್ತಿಯ ಗೌರವವಿದೆ.

ಶ್ರೀದೇವಿ ವೇಷದ ಮುಖವರ್ಣಿಕೆಯಲ್ಲಿ ತಳಪಾಯದ ಬಣ್ಣವಾಗಿ ಗೌರವರ್ಣವನ್ನು ಬಳಸುತ್ತಾರೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯ ಕೆಂಪು ಬೊಟ್ಟು,  ಅದರ ನಡುವೆ ಶಿವನ ಕಣ್ಣಿನ ಗುರುತನ್ನು ಬರೆಯುತ್ತಾರೆ. ಹಣೆಯ ಅರ್ಧ ಚಂದ್ರಾಕೃತಿಯ ಅಂಚಿಗೆ ಬಿಳಿ ಅಂಚು ಶೋಭಿಸುತ್ತದೆ. ಹರಿ ಹರ ಬ್ರಹ್ಮಾದಿಗಳ ಶಕ್ತಿ ಸಂಚಯದಿಂದ ಹುಟ್ಟಿ ಬಂದವಳೆಂಬ ಕಲ್ಪನೆಗೆ ಪೂರಕವಾಗಿ ಹಣೆಯ ಬರವಣಿಗೆಗಳಿರುತ್ತವೆ. ಭ್ರೂಮಧ್ಯದಲ್ಲಿ ಕೆಂಪು ವರ್ತುಲಾಕಾರದ ಬೊಟ್ಟು ಹಾಗೂ ಅದರ ಸುತ್ತಲೂ ಮುತ್ತರಿ ಸಾಲುಗಳಿರುತ್ತವೆ. ಕಣ್ಣಿಗೆ ಕಾಡಿಗೆಯನ್ನು ಬರೆದು, ಎರಡೂ ಅಂಚುಗಳಲ್ಲಿ ಚಕ್ರ ಮುದ್ರೆಗಳನ್ನು ಬರೆಯುತ್ತಾರೆ. ಕಣ್ಣಿನ ಕೆಳಭಾಗದಲ್ಲಿ ಬರೆಯುವ ಕೆಂಪು ರೇಖೆಗಳು ದೃಷ್ಟಿಯನ್ನು ಪ್ರಖರಗೊಳಿಸುತ್ತವೆ. ಗಲ್ಲದಲ್ಲಿ ಚಕ್ರಮುದ್ರೆಯನ್ನು ಬರೆದು, ಗಲ್ಲದ ಅಂಚಿನಲ್ಲಿ ಕಾಡಿಗೆಯ ದೃಷ್ಟಿಬೊಟ್ಟು ಇರಿಸುವುದು ಕ್ರಮ. ರಾಕ್ಷಸರ ವಧೆಯ ಸಂದರ್ಭಗಳಲ್ಲಿ ದೇವಿಯ ಮುಖಕ್ಕೆ ಹೆಚ್ಚು ಕೆಂಪು ಬಣ್ಣವನ್ನು ಹಚ್ಚಿ ರೌದ್ರಗೊಳಿಸುತ್ತಾರೆ.

ಶ್ರೀದೇವಿಯ ವೇಷಭೂಷಣಗಳಲ್ಲಿ ವಿಶಿಷ್ಟವಾದುದೆಂದರೆ ತೋಳಿಗೆ ಕಟ್ಟಿಕೊಳ್ಳುವ ಮೂರು, ಮೂರು ಹೆಚ್ಚುವರಿ ಕೈಗಳು. ಮರದಿಂದ ತಯಾರಿಸಿದ ಈ ಕೈಗಳು ಶಂಖ, ಚಕ್ರ, ಗದಾ, ಪದ್ಮಗಳನ್ನು ಹಿಡಿದಿದ್ದು, ಮೂರು ಕೈಗಳ ಒಂದು ಜತೆಯನ್ನು ಬಲ ತೋಳಿಗೂ, ಇನ್ನೊಂದು ಜತೆಯನ್ನು ಎಡ ತೋಳಿಗೂ ಕಟ್ಟುತ್ತಾರೆ. ಕೈಗಳನ್ನು ಕಟ್ಟಿದ ಭಾಗಕ್ಕೆ ಸಣ್ಣ ಬಟ್ಟೆಯ ತುಂಡನ್ನು ಕಟ್ಟಿ, ಸೀರೆಯ ಸೆರಗನ್ನು ಮುಚ್ಚುತ್ತಾರೆ. ಇದರಿಂದಾಗಿ ಕಟ್ಟಿದ ಸಂದು ಗೊತ್ತಾಗುವುದಿಲ್ಲ. ಹೀಗೆ ಆರು ಕೃತಕ ಕೈಗಳನ್ನು ಕಟ್ಟಿ ಅಷ್ಟಭುಜೆಯಾದ ಶ್ರೀದೇವಿಯ ವೇಷವನ್ನು ರೂಪಿಸುತ್ತಾರೆ. ಪಾತ್ರಧಾರಿಯ ನಿಜವಾದ ಕೈಗಳಲ್ಲಿ ಒಂದರಲ್ಲಿ ಕತ್ತಿಯನ್ನೂ, ಇನ್ನೊಂದರಲ್ಲಿ ತ್ರಿಶೂಲವನ್ನೂ ಹಿಡಿಯುವುದು ಕ್ರಮ.

ಶ್ರೀದೇವಿಯ ಪಾತ್ರಧಾರಿಯು ಮೊದಲು ಸೀರೆಯನ್ನು ಉಟ್ಟು, ಅದರ ಮೇಲೆ ಪದರು ಪದರಾದ ವಿವಿಧ ಬಣ್ಣಗಳಿಂದ ಕೂಡಿದ ಲಂಗದಂತಹ ‘ನೆರಿ’ಯನ್ನು ಧರಿಸುತ್ತಾರೆ. ಈ ‘ನೆರಿ’ಯು ಹಸಿರು, ಬಿಳಿ, ಹಳದಿ, ಕೆಂಪು ಬಣ್ಣಗಳ ಗೋಟುಗಳಿಂದ ಕೂಡಿರುತ್ತದೆ. ಕೆಂಪು ರವಕೆಯನ್ನು ಧರಿಸಿ, ಕೈಕಟ್ಟು, ಬಳೆಗಳನ್ನು ಧರಿಸುತ್ತಾರೆ. ಕೊರಳಿಗೆ ಅಡ್ಡಿಗೆ, ಕೊರಳ ಹಾರ, ನವರತ್ನ ಖಚಿತವಾದ ಆಭರಣಗಳ ಜತೆಗೆ ಹೂವಿನ ಹಾರಗಳನ್ನೂ ಧರಿಸುತ್ತಾರೆ. ಸೊಂಟಕ್ಕೆ ಜಾಲರಿಗಳಿರುವ ಒಡ್ಯಾಣವು ಶೋಭಿಸುತ್ತದೆ. ಮೂಗಿಗೆ ಬುಲಾಕು ಧರಿಸಿ, ಮೂಗುತಿಯನ್ನು ಇಡುತ್ತಿದ್ದರು. ಕಿವಿಯ ಬಳಿಯಿಂದ ಮುತ್ತು ಬೈತಲೆಯಂತಹ ಆಭರಣ ವೊಂದು ಮೂಗುತಿಯನ್ನು ಸಂಧಿಸುತ್ತಿತ್ತು. ಕಿವಿಗೆ ಓಲೆ, ಬುಗುಡಿ, ಕುಚ್ಚುಗಳನ್ನು ಧರಿಸುತ್ತಿದ್ದರು.

ಶ್ರೀದೇವಿಯು ಧರಿಸುವ ಕಿರೀಟವು ವಿಶಿಷ್ಟವಾಗಿದೆ. ಇದು ವಿಶಿಷ್ಟವಾದ ನಾಟಕೀಯ ಕಿರೀಟದಂತಿದೆ. ಇದಕ್ಕೆ ದೇವಿ ಕಿರೀಟ ಅಥವಾ ಗುಂಡು ಕಿರೀಟ ಎಂದು ಕರೆಯುತ್ತಾರೆ. ನೀಳವಾದ ತಲೆಗೂದಲನ್ನು ತುರುಬು ಹಾಕಿ ಕಟ್ಟಿ, ಅದರ ನಡುವೆ ಅರಳಿ ಎಲೆಯ ಆಕಾರದಲ್ಲಿರುವ, ಮುಗುಳಿ ಕಿರೀಟವನ್ನು ಧರಿಸುತ್ತಾರೆ. ಈ ಕಿರೀಟದ ಮೇಲ್ಭಾಗದಲ್ಲಿ ಕೊಡೆಯ ಆಕಾರವಿದ್ದು, ಬೆಳ್ಳಿಯ ಅರಳೋಲೆಗಳು ಜೋತಾಡುತ್ತವೆ. ಈ ಕಿರೀಟವನ್ನು ಧರಿಸಿದ ನಂತರ ಮಲ್ಲಿಗೆಯ ದಂಡೆಯನ್ನು ಮುಡಿಯುತ್ತಾರೆ. ಅನಂತರ ತಲೆಯ ಮುಂಭಾಗದಲ್ಲಿ ತುರಾಯಿಯನ್ನು ಧರಿಸುತ್ತಾರೆ. ತುರಾಯಿಯ ಪಕ್ಕದಲ್ಲಿ ಮುಂದಲೆಬೊಟ್ಟು, ಮುತ್ತು ಬೈತಲೆ ಮೊದಲಾದ ಆಭರಣಗಳನ್ನು ಧರಿಸುತ್ತಾರೆ.

ಕಾಳಿ

ಮುಖಕ್ಕೆ ಹಸಿರು ಅಡಿಪಾಯ, ಹಣೆಗೆ ಚಂದ್ರಾಕೃತಿ, ತುಟಿಯ ಕೆಳಗೆ ನಾಲಗೆ, ಹಲ್ಲುಗಳು ವಿಶೇಷವಾಗಿರುವ ಸ್ತ್ರೀಪಾತ್ರ. ಹಸಿರು ಅಥವಾ ಕಪ್ಪು ರವಕೆ ಧರಿಸಿ ಕೊರಳಿಗೆ ಹಸಿರು ಅಥವಾ ನೀಲ ಬಣ್ಣದ ಕೈಗಳನ್ನು ಕಟ್ಟಿಕೊಳ್ಳುತ್ತಾರೆ. ಕೊರಳಿಗೆ ರುಂಡಮಾಲೆ ಸೊಂಟಕ್ಕೆ ಇಜಾರು ಮತ್ತು ನೆರಿ ಹಾಗೂ ತುಂಡು ಚವುರಿ ಧರಿಸುತ್ತಾರೆ. ತಲೆಗೆ ತುರಾಯಿಯನ್ನು ಕಟ್ಟಿಕೊಳ್ಳುತ್ತಾರೆ.

ಒಟ್ಟಾರೆ ಸ್ತ್ರೀವೇಷಗಳನ್ನು ಗಮನಿಸಿದರೆ ಯಕ್ಷಗಾನದ ಇತರ ವೇಷಗಳ ಮುಂದೆ ತೀರಾ ಶಿಥಿಲವಾಗಿ ಕಾಣಿಸುತ್ತದೆ. ಪುರುಷ ವೇಷಗಳ ಆಹಾರ್ಯವನ್ನು ಸೃಷ್ಟಿಸಿದ ಕಲಾವಿದರು ಸ್ತ್ರೀವೇಷಗಳಿಗೂ ಅದೇ ಮಾದರಿಯ ಅತಿಮಾನುಷ ಕಾಲ್ಪನಿಕ ವೇಷ ವಿಧಾನವನ್ನು ರೂಪಿಸಿಕೊಟ್ಟಿರಬಹುದು. ಅವು ರೂಢಿಯಿಂದ ತಪ್ಪಿ ಹೋಗಿರಬಹುದು. ಅದಕ್ಕೂ ಕಾರಣ ಗಳನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲಾ ಪ್ರಸಂಗಗಳಲ್ಲಿ ಸ್ತ್ರೀವೇಷಗಳು ಇರುವುದೆಂದಿಲ್ಲ. ಸ್ತ್ರೀವೇಷಗಳನ್ನು ಮಾಡುವ ಕಲಾವಿದರಿಗೆ ಕೆಲವು ನಿರ್ದಿಷ್ಟ ಲಕ್ಷಣಗಳು ಸಹಜವಾಗಿ ಇರಬೇಕಾಗುತ್ತದೆ. ಸುಮಧುರವಾದ ಕಂಠ, ಹಿತಮಿತವಾದ ದೇಹಲಕ್ಷಣ ಇಷ್ಟಿದ್ದೂ ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಳ್ಳಬೇಕಾದ ಹಾವ, ಭಾವ, ಲಾಲಿತ್ಯಗಳು

ಇತ್ಯಾದಿಗಳ ಕಾರಣಕ್ಕೆ ಆಯ್ದ ವ್ಯಕ್ತಿಗಳು ಮಾತ್ರ ಸ್ತ್ರೀವೇಷಧಾರಿಗಳಾಗುತ್ತಿದ್ದರು. ಸಾಮಾನ್ಯವಾಗಿ ಪ್ರಸಂಗಗಳನ್ನು ಪ್ರಯೋಗಕ್ಕೆ ಆಯ್ಕೆ ಮಾಡುವಾಗ ಸ್ತ್ರೀ ಪಾತ್ರಧಾರಿಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ನಿರ್ದಿಷ್ಟ ಸ್ತ್ರೀ  ಪಾತ್ರಗಳನ್ನು ನಿರ್ವಹಿಸಲು ಯೋಗ್ಯ ಸ್ತ್ರೀಪಾತ್ರಧಾರಿಗಳು ಸಿಕ್ಕಾಗ ಮಾತ್ರ ಪ್ರಯೋಗಕ್ಕೆ ಅವಕಾಶವಿರುತ್ತಿತ್ತು. ಇಲ್ಲವಾದಲ್ಲಿ ಸ್ತ್ರೀಪಾತ್ರಗಳಿಲ್ಲದ ಪ್ರಸಂಗಗಳೇ ಆಟವಾಗಿ ಪ್ರಯೋಗಗೊಳ್ಳುತ್ತಿದ್ದುವು.

ಇಂದಿಗೂ  ಸ್ತ್ರೀಪಾತ್ರಧಾರಿಗಳ  ಕೊರತೆಯಾದಾಗ  ಸ್ತ್ರೀಪಾತ್ರಗಳಿಲ್ಲದ  ಪ್ರಸಂಗಗಳನ್ನು ಆಡುವುದಿದೆ. ಯಾವುದೇ ಪ್ರಸಂಗಗಳನ್ನು ಆಯ್ಕೆ ಮಾಡಿದರೆ ಅದರಲ್ಲಿ ಪುರುಷ ಪಾತ್ರಗಳ ಸಂಖ್ಯೆಗಿಂತ ಸ್ತ್ರೀಪಾತ್ರಗಳ ಸಂಖ್ಯೆ ಕಡಿಮೆ. ಸ್ತ್ರೀಪಾತ್ರಗಳಿಲ್ಲದೆಯೂ ಆಟಗಳು ನಡೆಯಬಹುದು ಎಂಬ ಕಾರಣಕ್ಕಾಗಿ ಪರಂಪರೆಯ ಸ್ತ್ರೀವೇಷಗಳನ್ನು ಶ್ರದ್ದೆಯಿಂದ ರೂಪಿಸಿದವರ ಸಂಖ್ಯೆ ಕಡಿಮೆ. ಸ್ತ್ರೀ ಪಾತ್ರಗಳು ಇದ್ದಾಗ ಮಾತ್ರ ಉಪಯೋಗಕ್ಕೆ ಬರುವ ಸ್ತ್ರೀವೇಷಗಳ ವೇಷಭೂಷಣಗಳು ಸರಳವಾಗುತ್ತ ಬಂದಿರಬೇಕು. ಸರಳತೆಯ ದಾರಿ ಹಿಡಿದು ಆಧುನಿಕ ದಿನಮಾನಗಳಲ್ಲಿ ವಾಸ್ತವ ಸ್ತ್ರೀ ರೂಪಗಳ ಅನುಕರಣೆಯ ಮೂಲಕವೆ ಸ್ತ್ರೀ ಪಾತ್ರಗಳನ್ನು ರೂಪಿಸಿಕೊಂಡಿರಬೇಕು. ಪ್ರಾಚೀನರು ರೂಪಿಸಿಕೊಟ್ಟ ಸ್ತ್ರೀವೇಷಗಳ ಉಡುಗೆ, ತೊಡುಗೆ, ಆಭರಣಗಳನ್ನೆಲ್ಲ ನಿರಂತರ ಮುಂದುವರಿಸಿಕೊಂಡು ಬರಲು ಬೇಕಾದ ಸ್ತ್ರೀವೇಷಧಾರಿಗಳು ಯಕ್ಷಗಾನ ಕ್ಷೇತ್ರದಲ್ಲಿ ಇದ್ದಿರಲಾರರು. ಆ ಕಾರಣಕ್ಕಾಗಿ ತಲೆಮಾರಿನಿಂದ ತಲೆಮಾರುಗಳ ಅಂತರಕ್ಕೆ ಸ್ತ್ರೀವೇಷಗಳ ವೇಷಭೂಷಣಗಳು ಕ್ಷೀಣಿಸುತ್ತಾ ಬಂದಿರಬಹುದು ಎಂದೆನ್ನಿಸುತ್ತದೆ.