ಮಾಗಧನ ವೇಷವಿಧಾನ

ಮಾಗಧನ ಮುಖವರ್ಣಿಕೆಯಲ್ಲಿ ಸಾಮಾನ್ಯವಾಗಿ ರಾವಣನ ಮಾದರಿಯೇ ಇರುತ್ತದೆ. ಹಣೆಯಲ್ಲಿ ಅರ್ಧ ಚಂದ್ರಾಕೃತಿಯ ಬಿಳಿಯ ಗೆರೆ ಇದ್ದು ಇದರ ಮೇಲೆ ಕೆಂಪು ಬೊಟ್ಟನ್ನು ಇಡಲಾಗುತ್ತದೆ. ಅದಕ್ಕೆ ಬಿಳಿಯ ಅಡ್ಡಗೆರೆ ಈ ಗೆರೆಯ ಇಕ್ಕೆಲದಲ್ಲಿ ಹಳದಿ ಬಣ್ಣದ ಗೆರೆ ಅದರ ನಂತರ ಕಪ್ಪು ಗೆರೆ ಇರುತ್ತದೆ. ಉಳಿದ ಭಾಗದಲ್ಲಿ ಹಳದಿ ಬಣ್ಣವನ್ನು ತುಂಬಿ ಮೂಗಿನ ಮೇಲಿರುವ ಹತ್ತಿಯ ಗೊಂಡೆಗೆ ಸೇರಿಸಲಾಗುತ್ತದೆ. ಹಣೆಯಲ್ಲಿಯೂ ಮೂರು ಗೊಂಡೆಗಳಿರುತ್ತವೆ. ಹೀಗೆ ಮುಖದಲ್ಲಿ ಒಟ್ಟು ನಾಲ್ಕು ಗೊಂಡೆಗಳಿರುತ್ತವೆ. ಮಾಗಧನಿಗೆ ಶೃಂಗಾರ ಭಾವ ಇಲ್ಲದ ಕಾರಣಕ್ಕಾಗಿ ಹಳದಿ ಅಥವಾ ಛಾಯೆಯ ಬಣ್ಣವನ್ನೇ ತುಂಬಲಾ ಗುತ್ತದೆ. ಶೈವ ಸಂಪ್ರದಾಯಕ್ಕೆ ಸೇರಿದವನೆಂಬುದರ ಪ್ರತೀಕವಾಗಿ ಬಿಳಿ ಬಣ್ಣದ ಅಕ್ಷತೆಯನ್ನು ಇಡಲಾಗುತ್ತದೆ. ಅಕ್ಷತೆ ಅಂದರೆ ನಾಲ್ಕು ಸಾಲಿನ ಚುಟ್ಟಿ. ಇದುವೇ ಈ ವೇಷದ ಮುಖವರ್ಣಿಕೆಯ ವೈಶಿಷ್ಟ್ಯ. ಕ್ರೌರ್ಯದ ಸಂಕೇತವಾಗಿ ಕಣ್ಣಿನ ಕೆಳಭಾಗದಲ್ಲಿ ಕೆಂಪು ಬಣ್ಣವನ್ನು ಲೇಪಿಸಲಾಗುತ್ತದೆ. ವಾಲಿ, ಕಂಸ ಮೊದಲಾದ ವೇಷಗಳು ಕೂಡ ಇದೇ ಮಾದರಿಯಲ್ಲಿರುತ್ತವೆ. ಇತ್ತೀಚಿಗೆ ಈ ವೇಷಗಳನ್ನು ನಾಟಕೀಯವಾಗಿ ಬದಲಾಯಿಸಲಾಗಿದೆ.

ವಾಲಿ

ವಾಲಿಯ ವೇಷವನ್ನು ಕೇಸರಿತಟ್ಟಿ ಧರಿಸುವ ಮೂಲಕ ಚಿತ್ರಿಸಲಾಗುತ್ತದೆ. ವಾಲಿ ಪಾತ್ರವು ಕೂಡ ಬಣ್ಣದ ವೇಷದ ವರ್ಗಕ್ಕೆ ಸೇರುತ್ತದೆ. ಕೆಲವೊಂದು ಪ್ರಸಂಗದಲ್ಲಿ ಮಾತ್ರ ಇದನ್ನು ನಾಟಕೀಯವಾಗಿಯೂ, ಎದುರು ವೇಷವಾಗಿಯೂ ಚಿತ್ರಿಸುವುದು ಇದೆ. ಬಣ್ಣದ ವೇಷದ ಸಂದರ್ಭದಲ್ಲಿ ಹಣೆಯಲ್ಲಿ ಸುಳಿಯ ರೇಖೆ ಇರುತ್ತದೆ. ಬಿಳಿ, ಅರಿಶಿನ, ಕೆಂಪು, ಕಪ್ಪು ಈ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಹಣೆಯಲ್ಲಿ ವೈಷ್ಣವನಾಮವನ್ನು ಬರೆಯಲಾಗುತ್ತದೆ. ಕಣ್ಣುಗಳನ್ನು ಹನುಮಂತನ ಚಿತ್ರಣದಂತೆ ವಜ್ರಾಕೃತಿಯಲ್ಲಿ ಮೂಡಿಸಲಾಗುತ್ತದೆ. ವಜ್ರಾಕೃತಿಯೇ ವಿನ್ಯಾಸದ ಚುಟ್ಟಿಯ ಒಳಗಡೆ ಕಣ್ಣಿನ ಸುತ್ತಲೂ ಕಪ್ಪು ಬಣ್ಣವಿರುತ್ತದೆ. ಚುಟ್ಟಿಯ ಹೊರಗೆ  ಮುಖದಲ್ಲಿ ದಟ್ಟವಾದ ಹಸಿರು ಬಣ್ಣವನ್ನು ಹಚ್ಚಿ ಮೀಸೆಯನ್ನು ಕಟ್ಟಲಾಗುತ್ತದೆ.

ಚುಟ್ಟಿಯ ಬದಲಿಗೆ ಹತ್ತಿಯನ್ನು ಹಚ್ಚಿಯೂ ಮುಖ ಚಿತ್ರಿಸುವುದಿದೆ. ಕಣ್ಣನ್ನೇ ಕೇಂದ್ರೀಕರಿಸಿ ಕಪ್ಪು ಬಣ್ಣದಲ್ಲಿ ಬರೆದ ವಜ್ರಾಕೃತಿಯ ಸುತ್ತಲೂ ಬಿಳಿಯ ಚುಟ್ಟಿ ಇರಿಸಿದಾಗ ಅದರ ಸೌಂದರ್ಯವೇ ಪ್ರತ್ಯೇಕ. ಎರಡು ವಜ್ರಾಕೃತಿಗಳ ನಡುವಿನಿಂದ ಮೇಲಕ್ಕೆ ಹೊರಡುವ ನಾಮವನ್ನು ಕಪ್ಪು ವಜ್ರಾಕೃತಿಯಲ್ಲಿ ಚಿತ್ರಿಸುವ ಮೂಲಕ ಇದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.

ಯಮ, ಶನಿ

ಯಮನ ಮುಖವರ್ಣಿಕೆಯು ಸಾಮಾನ್ಯ ಬಣ್ಣದ ವೇಷವನ್ನು ಹೋಲುತ್ತದೆ. ಮುಖದಲ್ಲಿ ಸಣ್ಣ ಚುಟ್ಟಿಮುಳ್ಳುಗಳನ್ನು ಇಡುತ್ತಾರೆ. ಮೂಗಿನಲ್ಲಿ ನಾಸಿಕಾಪುಷ್ಪ, ಹಣೆಯಲ್ಲಿ ಲಲಾಟಪುಷ್ಪವಿರುತ್ತದೆ. ಮೀಸೆ ಹಾಗೂ ಗಡ್ಡಗಳನ್ನು ಕಟ್ಟಿಕೊಳ್ಳುತ್ತಾರೆ. ಕರ್ಣಪತ್ರದ ಬದಲಿಗೆ ಓಲೆಯನ್ನು ಧರಿಸುತ್ತಾರೆ. ವೇಷಭೂಷಣಗಳೆಲ್ಲ ಬಣ್ಣದ ವೇಷ ಧರಿಸುವಂತದ್ದೇ ಆಗಿರುತ್ತದೆ.

ಶನಿಯ ಮುಖವರ್ಣಿಕೆಯಲ್ಲಿ ಕಣ್ಣಿನ ಸುತ್ತಲೂ ಬರೆಯುವ ಬಿಳಿ ಮತ್ತು ಕಪ್ಪು ಬಣ್ಣದ ವರ್ತುಲಗಳು ವಿಶಿಷ್ಟವಾಗಿವೆ. ಉಳಿದಂತೆ ಚುಟ್ಟಿ, ನಾಸಿಕಾ ಪುಷ್ಪ, ಲಲಾಟ ಪುಷ್ಪ, ಓಲೆಗಳು, ಮೀಸೆ ಹಾಗೂ ಗಡ್ಡಗಳನ್ನು ಧರಿಸುತ್ತಾರೆ. ತಲೆಯಲ್ಲಿ ಕೇಶಾವರಿತಟ್ಟಿಯನ್ನು ಧರಿಸುತ್ತಾರೆ. ವೇಷಭೂಷಣಗಳೆಲ್ಲ ಬಣ್ಣದ ವೇಷದ್ದೇ ಆಗಿವೆ.

ಕಾಟುಬಣ್ಣ ಮುಖವರ್ಣಿಕೆ

ಬಕಾಸುರ, ಹಿಡಿಂಬಾಸುರ, ಕಿಮ್ಮೀರ, ವಿದ್ಯುಲ್ಲೋಚನ ಮೊದಲಾದ ರಾಕ್ಷಸ ಪಾತ್ರಗಳು ‘ಕಾಟುಬಣ್ಣ’ದ ಪ್ರಭೇದಕ್ಕೆ ಸೇರಿವೆ. ನಾಗರಿಕತೆಯ ಲವಲೇಶ ಸ್ಪರ್ಶವೂ ಇಲ್ಲದೆ, ಕಾಡಿನಲ್ಲಿ ಅಲೆದಾಡುತ್ತಾ, ಕ್ರೌರ್ಯವನ್ನೇ ಪ್ರಕಟಿಸುವ ಪಾತ್ರಗಳಾದ್ದರಿಂದ ಈ ವೇಷಗಳಿಗೆ ಯಕ್ಷಗಾನ ದಲ್ಲಿ ಕಾಟುಬಣ್ಣ ಎಂಬ ಹೆಸರು ಬಂದಿರಬಹುದು.

ಕಾಟುಬಣ್ಣದ ವೇಷದ ಮುಖವರ್ಣಿಕೆಯಲ್ಲಿ ಸುಳಿಗಳಿಲ್ಲ. ಸುಬಾಹು, ಹಿಡಿಂಬ, ಬಕ, ಕಿಮ್ಮೀರ ಮೊದಲಾದ ರಾಕ್ಷಸ ಪಾತ್ರಗಳ ಬಣ್ಣ ವಿನ್ಯಾಸವನ್ನು ಕಾಟುಬಣ್ಣ ಎಂದು ಹೇಳಲಾಗುತ್ತದೆ. ಕೆಲವೆಡೆಯಲ್ಲಿ ಕಾಟುಚುಟ್ಟಿ ಎಂದೂ ಕರೆಯುತ್ತಾರೆ. ಕಲಾವಿದರ ಸೃಜನಶೀಲತೆಗೆ ಕಾಟುಬಣ್ಣಗಳ ವಿನ್ಯಾಸದಲ್ಲಿ ಅಪಾರವಾದ ಅವಕಾಶಗಳಿವೆ. ಕಾಟುಬಣ್ಣ ದಲ್ಲಿ ನಿರ್ದಿಷ್ಟ ವಿನ್ಯಾಸಗಳೆಂಬ ನಿಯಮಗಳಿಲ್ಲ. ಈ ಕಾರಣಕ್ಕಾಗಿ ವೈವಿಧ್ಯ ಅಧಿಕ. ಕಲಾವಿದನ ಕೌಶಲ್ಯವನ್ನು ಪ್ರಕಟಪಡಿಸುವುದಕ್ಕೆ ಅವಕಾಶವು ಕೂಡ ಮುಕ್ತವಾಗಿದೆ.

ಬಣ್ಣದ ವೇಷದ ಪ್ರಭೇದವಾದ ‘ಕಾಟುಬಣ್ಣ’ಗಳಲ್ಲಿ ಮೂಗಿನ ಇಕ್ಕೆಲದಿಂದ ಮೇಲಕ್ಕೆ ಸರಿದ ಚುಟ್ಟಿಗಳು ಹಣೆಯ ನಡುವೆ ಸಂಧಿಸುತ್ತವೆ. ಅಥವಾ ಹಣೆಯಿಂದ ಕೆಳಕ್ಕೆ ಸರಿದು ಮೂಗಿನ ಮೇಲೆ ಒಂದುಗೂಡುತ್ತವೆ. ಕಣ್ಣುಗಳ ಅಂಚಿನಲ್ಲಿಯೇ, ಕೆಲವೊಮ್ಮೆ ಕಣ್ಣುರೆಪ್ಪೆಗಳ ಮೇಲೆಯೇ ಚುಟ್ಟಿಗಳನ್ನಿಟ್ಟು ನಿಜವಾದ ಕಣ್ಣುಗಳು ಮರೆಯಾಗುವಂತೆ ಮಾಡುತ್ತಾರೆ. ಇದನ್ನು ‘ಕಣ್ಣಿಲ್ಲದ ಕಾಟುಬಣ್ಣ’  ಅಥವಾ ‘ಕುರುಡುಬಣ್ಣ’ ಎಂದು ಕರೆಯುತ್ತಾರೆ. ಇಂತಹ ಪಾತ್ರಗಳಿಗೆ ಹಣೆಯಲ್ಲಿ ಕೃತಕ ಕಣ್ಣುಗಳನ್ನು ಬರೆದು, ಆ ಪಾತ್ರಗಳ ದುಷ್ಟಯೋಚನೆ ಹಾಗೂ ಯೋಜನೆಗಳನ್ನು  ಸಂಕೇತಿಸುತ್ತಾರೆ. ಬಕಾಸುರನಂತಹ ಪಾತ್ರಗಳಿಗೆ ಜೋಲಾಡುವ ನಾಲಗೆಯನ್ನು ಬರೆದು ಕ್ರೌರ್ಯವನ್ನೂ,  ಹೊಟ್ಟೆಬಾಕತನವನ್ನೂ ಸಂಕೇತಿಸುತ್ತಾರೆ.

ಕಾಟುಬಣ್ಣದ ವೇಷಭೂಷಣಗಳಲ್ಲಿ, ಶಿರೋಭೂಷಣಗಳಲ್ಲಿ ಕಪ್ಪು ಬಣ್ಣಕ್ಕೆ ಪ್ರಾಶಸ್ತ್ಯ.  ಸೋಗೆವಲ್ಲಿ, ಬಾಲ್‌ಮುಂಡುಗಳಲ್ಲಿ ಕೆಂಪು, ಕಪ್ಪು ಮಿಶ್ರ ಬಣ್ಣಗಳಿದ್ದರೂ ಕ್ರೌರ್ಯವೇ ಪ್ರತಿಬಿಂಬಿಸುತ್ತದೆ. ಬಣ್ಣದ ವೇಷಗಳು ಧರಿಸುವ ಎಲ್ಲ ವೇಷಭೂಷಣಗಳೇ ಕಾಟುಬಣ್ಣಕ್ಕೆ ಉಪಯೋಗವಾಗುತ್ತದೆ.

ಹೆಣ್ಣುಬಣ್ಣ

ಯಕ್ಷಗಾನದಲ್ಲಿ ಹೆಣ್ಣು ಬಣ್ಣವೆಂದರೆ ರಾಕ್ಷಸಿ ವೇಷಗಳು ಎಂದರ್ಥ. ಬಯಲಾಟದ ರಂಗಭೂಮಿಯಲ್ಲಿ ಬಣ್ಣದ ವೇಷದ ರಾಕ್ಷಸ ಪಾತ್ರಗಳಿಗೆ ರಾಕ್ಷಸಿ ವೇಷಗಳು ಸರಿದೊರೆ ಯಾಗಿ ನಿಲ್ಲುತ್ತವೆ. ರಾಜನ ಪಾತ್ರದ ಮುಂದೆ ನಿಲ್ಲುವ ಸ್ತ್ರೀ ಪಾತ್ರಗಳ ಅಸಮತೋಲನ ಇಲ್ಲಿಲ್ಲ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ ಪಾಲಿಗೆ ದೊರಕದ ಅನೇಕ  ಸಾಂಪ್ರದಾಯಕ ವೇಷಭೂಷಣಗಳು ಮತ್ತು ರಂಗಕ್ರಿಯೆಗಳು ಹೆಣ್ಣುಬಣ್ಣಕ್ಕೆ ದೊರೆತಿದೆ. ಯಕ್ಷಗಾನದ ರೌದ್ರರಸ ಸೃಷ್ಟಿಗೆ ಪೂರಕವಾಗಿ ಹೆಣ್ಣು ಬಣ್ಣದ ರಂಗಪ್ರಕ್ರಿಯೆಗಳು ರೂಪುಗೊಂಡಿವೆ. ಅಸೂಯೆ, ಉತ್ಸಾಹ, ಅಹಂಕಾರ, ಚಾಪಲ್ಯ, ಹರ್ಷ, ಮದ, ಕ್ರೋಧ, ಉಗ್ರತೆ ಇವುಗಳನ್ನೆಲ್ಲ ಅಭಿವ್ಯಕ್ತಿಸುವ ಪಾತ್ರವಾಗಿಯೇ ಯಕ್ಷಗಾನ ರಂಗಭೂಮಿಯಲ್ಲಿ ಹೆಣ್ಣು ಬಣ್ಣಗಳು ರೂಪುಗೊಂಡಿವೆ. ಆವರಣ ಸೃಷ್ಟಿಯಲ್ಲಿ ಹೆಣ್ಣು ಬಣ್ಣದ ರಂಗಪ್ರವೇಶ, ನಟನೆ, ವರ್ತನೆ ಇವುಗಳಿಗೆಲ್ಲ ಪೂರಕವಾಗಿ ಹೆಣ್ಣು ಬಣ್ಣದ ಕಾಲ್ಪನಿಕ ಸೌಂದರ್ಯ ರೂಪುಗೊಂಡಿದೆ. ಪಾತ್ರದ ನಾಟಕೀಯ ಸ್ವಭಾವವನ್ನು ಕಲಾತ್ಮಕತೆಯನ್ನು ರೂಪಿಸುವಲ್ಲಿ ಹೆಣ್ಣುಬಣ್ಣಕ್ಕೆ ಬೇಕಾದ ವೇಷಭೂಷಣಗಳು ಯಕ್ಷಗಾನದಲ್ಲಿ ಇರುವುದು ಅದ್ಭುತವೇ ಸರಿ.

ಪಂಚವಟಿಯ ಶೂರ್ಪನಖಿ, ಲಂಕಾದಹನದ ಲಂಕಿಣಿ, ಹಿಡಿಂಬಾ ವಿವಾಹದ ಹಿಡಿಂಬೆ, ಕುಮಾರ ವಿಜಯದ ಅಜಮುಖಿ, ಕೃಷ್ಣಲೀಲೆಯ ಪೂತನಿ, ವಿದ್ಯುನ್ಮತಿ ಕಲ್ಯಾಣದ ವೃತ್ರಜ್ವಾಲೆ, ಜರಾಸಂಧ ವಧೆಯ ಜರೆ, ಶ್ವೇತಕುಮಾರ ಚರಿತ್ರೆಯ ಕರಾಳನೇತ್ರೆ, ಸೀತಾ ಕಲ್ಯಾಣದ ಮೊದಲ ಭಾಗದಲ್ಲಿ ಬರುವ ತಾಟಕಿ ಮೊದಲಾದ ಹೆಣ್ಣು ಬಣ್ಣಗಳು ಯಕ್ಷಗಾನದಲ್ಲಿ ಪ್ರಚಲಿತದಲ್ಲಿವೆ.

ಹೆಣ್ಣು ಬಣ್ಣದ ಮೂಲ ಲೇಪನಕ್ಕೆ ಕಪ್ಪು ಬಣ್ಣವನ್ನು ಬಳಸುವುದು ಸಂಪ್ರದಾಯ. ಕೆಲವೊಮ್ಮೆ ಹಸಿರು ಬಣ್ಣವನ್ನು ಬಳಸುವುದಿದೆ. ಪಾತ್ರಕ್ಕನುಗುಣವಾಗಿ ಕೆಲವು ವೇಷಗಳಿಗೆ ಹಣೆಯತನಕವೂ ನಾಮವಿರುತ್ತದೆ.  ಮೂಗಿನ ಹೊಳ್ಳೆಯ ಬದಿಗೆ ಬಿಳಿ ಬಣ್ಣದಲ್ಲಿ ಮೂಗುತಿ ಬರೆಯುತ್ತಾರೆ. ಹಣೆ, ಕೆನ್ನೆಗಳಲ್ಲಿ ಚಕ್ರಗಳನ್ನು ಬರೆದು ಅವುಗಳ ಸುತ್ತಲೂ ಕೆಂಪು ರೇಖೆ, ಮಧ್ಯಕ್ಕೆ ಕೆಂಪು ಬಣ್ಣ ತುಂಬಿಸಲಾಗುತ್ತದೆ. ನಾಮವನ್ನು ಕೆಂಪು ಬಣ್ಣದಿಂದ ತುಂಬಿಸಲಾಗುತ್ತದೆ. ತುಟಿಯ ಕೆಳಗೆ ಬಾಯಿಯ ಎರಡೂ ಬದಿಗಳಲ್ಲಿ ಕೋರೆ ಹಲ್ಲುಗಳನ್ನು ಬಿಡಿಸಲಾಗುತ್ತದೆ. ಹಣೆಗೆ ಚುಟ್ಟಿಯಲ್ಲಿ ಅಡ್ಡನಾಮವಿಡುವ ಸಂಪ್ರದಾಯವೂ ಇದೆ. ತುಟಿಯ ಕೆಳಗೆ ಕೋರೆ ಹಲ್ಲುಗಳ ನಡುವೆ ಒಂದು ಚಕ್ರವನ್ನು ಬಿಡಿಸುವುದೂ ಇದೆ. ಹೀಗೆ ಮುಖವನ್ನು ರಾಕ್ಷಸ ವಿಕಾರವಾಗಿಸಿಯೂ ಹೆಣ್ತನವನ್ನುಳಿಸಿಕೊಳ್ಳುವುದು ಇಲ್ಲಿನ ರೇಖೆಗಳ ವೈಶಿಷ್ಟ್ಯ. ಇಲ್ಲಿ ಬಳಸುವ ನಾಮಗಳು, ಸುಳಿಗಳು, ಮುದ್ರೆಗಳು ಇವು ಎಲ್ಲವುಗಳು ಬಣ್ಣದ ವೇಷದ ಮುಖವರ್ಣಿಕೆಯ ಗಾಂಭೀರ್ಯಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿವೆ.

ಹೆಣ್ಣು ಬಣ್ಣದ ವೇಷಗಾರಿಕೆಯಲ್ಲಿ ವೈವಿಧ್ಯವಿದೆ. ಸೂಕ್ಷ್ಮ ಕಲಾಪ್ರಜ್ಞೆ ಇದೆ. ಪಾತ್ರದ ಪೋಷಣೆಗೆ ಬೇಕಾದ ರಂಗಶಿಲ್ಪಗಳಿಂದ ರೂಪಿತಗೊಂಡ ಹೆಣ್ಣು ಬಣ್ಣಗಳು ಜಾನಪದ ನೆಲೆಯ ಒಂದು ಕಲಾತ್ಮಕ ಕಾಲ್ಪನಿಕ ಸೃಷ್ಟಿ. ಪಾತ್ರದ ಸ್ವಭಾವಕ್ಕೆ ಅನುಗುಣವಾಗಿ ಕೆಂಪು ಬಣ್ಣದಲ್ಲೋ, ಕಪ್ಪು ಬಣ್ಣದಲ್ಲೋ ಬರುವ ಈ ಪಾತ್ರಗಳ ಉಡುಗೆ ತೊಡುಗೆಯಲ್ಲೇ ವೈಶಿಷ್ಟ್ಯಗಳಿವೆ. ದಪ್ಪವಾದ ದೇಹ ಅದಕ್ಕೆ ಪೂರಕವಾಗಿ ಎತ್ತರವನ್ನು ಬಿಂಬಿಸಲು ಎತ್ತರದ ಕುತ್ತರಿ ಕಿರೀಟ. ಸಾಮಾನ್ಯವಾಗಿ ಹಣೆಯಲ್ಲಿ ನಾಮ, ಅರ್ಧಚಂದ್ರಾಕೃತಿಯ ತಿಲಕ ಅಥವಾ ಹೆಚ್ಚು ಕೆಂಪು ಸೂಸುವ ದೊಡ್ಡ ಅಕ್ಷತೆ, ನೆರಿಗೆಯ ಸೀರೆ, ಮೊಲೆಕಟ್ಟು ಅವುಗಳು ಹೊರಚಾಚಿರುವ ಅಥವಾ ಮರೆಯಾಗಿ ಉಬ್ಬಿರುವ ಕ್ರಮಗಳು ಇವೆಲ್ಲ ವೇಷಕ್ಕೊಂದು ವೈಶಿಷ್ಟ್ಯವನ್ನು ಒದಗಿಸುತ್ತವೆ. ನೋಡುವವರಿಗೆ ಭಯಾನಕವಾಗಿ ಕಾಣುವ ಈ ಪಾತ್ರಗಳು ಯಕ್ಷಗಾನದ ರಂಗವೈಭವವನ್ನು ಹೆಚ್ಚಿಸುತ್ತವೆ. ರಂಗಭೂಮಿಯಲ್ಲಿ ವೇಗವಾಗಿರುವ ಇವುಗಳ ಚಲನ ವಲನಗಳು ಉಳಿದೆಲ್ಲಾ ಪಾತ್ರಗಳಿಗಿಂತ ಹೆಚ್ಚು ತೀವ್ರತರವಾದುದು. ಅವುಗಳ ವೇಷಭೂಷಣಗಳು ಅಷ್ಟೇ ತೀಕ್ಷ್ಣವಾದುದು. ಇವುಗಳ ರಂಗಪ್ರವೇಶವಾಗುವ ಸಂದರ್ಭದಲ್ಲಿ ಹಿಮ್ಮೇಳದ ಸರ್ವ ವಾದ್ಯ, ವಾದನಗಳು ಹೆಣ್ಣು ಬಣ್ಣಗಳ ರಂಗಕ್ರಿಯೆಗೆ ಪೂರಕವಾಗಿ ಸ್ಪಂದಿಸುತ್ತವೆ.

ಯಕ್ಷಗಾನದಲ್ಲಿ ಪ್ರತಿಯೊಂದು ಪ್ರಸಂಗದಲ್ಲೂ ಹೆಣ್ಣು ಬಣ್ಣ ಇರುವುದೆಂದಿಲ್ಲ. ಆದರೆ ಇದು ಯಕ್ಷಗಾನದ ಒಂದು ಅಪೂರ್ವವಾದ ಆಕರ್ಷಕ ವೇಷವಿಧಾನ. ಹಾಗೂ ಇದೊಂದು ಯಕ್ಷಗಾನದ ವಿಶಿಷ್ಟ ಪಾತ್ರ ಶಿಲ್ಪ. ವಿಶಿಷ್ಟವಾದ ಮುಖವರ್ಣಿಕೆ ಹಾಗೂ ನರ್ತನದ ಮೂಲಕ ಒಡ್ಡೋಲಗ, ವೀರರಸ ಮೊದಲಾದ ಸನ್ನಿವೇಶಗಳಲ್ಲಿ ಇವು ನಿರ್ಮಿಸುವ ಅತಿಮಾನುಷ ಆವರಣ ಒಂದು ರೀತಿಯಲ್ಲಿ ಭಯಾನಕವಾದುದು.

ಹೆಣ್ಣುಬಣ್ಣಕ್ಕೆ ಚುಟ್ಟಿ ಇಡುವ ಕ್ರಮವಿಲ್ಲ. ಕಲಾವಿದರು ಕೆಂಪು, ಬಿಳಿ, ಹಳದಿ ಬಣ್ಣಗಳಿಂದ ಮುಖದ ರಾಕ್ಷಸೀ ಕಳೆಯನ್ನು ಹೆಚ್ಚಿಸುತ್ತಾರೆ. ಹಣೆಯಲ್ಲಿ ನಾಮ ಅಥವಾ ಅರ್ಧಚಂದ್ರಾಕೃತಿಯನ್ನು ಕೆಂಪು ಬಣ್ಣದಿಂದ ಅಗಲವಾಗಿ ಬರೆಯುತ್ತಾರೆ. ಹಣೆಯ ಇಕ್ಕೆಲಗಳಲ್ಲಿಯೂ ಬಿಳಿ ಬಣ್ಣದ ವರ್ತುಲಗಳನ್ನು ಬಿಡಿಸುತ್ತಾರೆ.

ಹೆಣ್ಣುಬಣ್ಣವು ಕೇಶಾವರಿತಟ್ಟಿ ಮತ್ತು ಗಡ್ಡವನ್ನು ಹೊರತುಪಡಿಸಿ ಬಣ್ಣದ ವೇಷ ದಂತೆಯೇ ದಗಲೆ, ದಂಬೆ ಇತ್ಯಾದಿ ಎಲ್ಲಾ ಭೂಷಣಗಳನ್ನು ಧರಿಸುತ್ತದೆ. ಇತ್ತೀಚೆಗೆ ಸೊಂಟದಿಂದ ಕೆಳಭಾಗದಲ್ಲಿ ಬಾಲ್‌ಮುಂಡುವಿಗೆ ಬದಲಾಗಿ ತುಂಬ ನೆರಿಗೆಗಳಿರುವ ಕಪ್ಪು, ಬಿಳಿ, ಹಸಿರು ಬಣ್ಣದ ಗೋಟುಗಳಿರುವ ಲಂಗದಂತಹ ಚಿಕ್ಕ ಉಡುಗೆಯನ್ನೂ ಧರಿಸುವುದಿದೆ. ನೆರಿಗಳ ಹಿಂದಿನ ಕ್ರಮದ ಬದಲು ನಾಟಕೀಯ ವೇಷದ ಜಾಕೆಟನ್ನು ಹಾಕಿ ಸೆರಗನ್ನು ಹಾಕಿಕೊಳ್ಳುವ ಕ್ರಮವೂ ಈಗ ರೂಢಿಗೆ ಬಂದಿದೆ. ಕುತ್ತರಿ ಕಿರೀಟದ ಬದಲು ತುರಾಯಿಯನ್ನು ಬಳಸಲಾರಂಭಿಸಿದ್ದಾರೆ. ಇದರಿಂದ ಹೆಣ್ಣುಬಣ್ಣದ ಪಾತ್ರಗಳು ಬಣ್ಣದ ವೇಷಗಳಷ್ಟು ಶಕ್ತಿಶಾಲಿಗಳಲ್ಲ ಎಂಬ ಸಂಕೇತವಿರುವುದನ್ನು ಗುರುತಿಸಬಹುದು. ಎದೆಗೆ ಬೇಕಾದಷ್ಟು ಬಟ್ಟೆಯನ್ನು ತುಂಬಿ ದಪ್ಪ ಮೊಲೆಗಟ್ಟನ್ನು ಸಿದ್ಧಪಡಿಸಿ, ಅದರ ಮೇಲೆ ವೀರಗಸೆಯನ್ನು ಬಿಗಿಯುತ್ತಾರೆ. ಉಳಿದಂತೆ  ಅಡ್ಡಿಗೆ, ಡಾಬು, ಕೈಕಟ್ಟು, ತೋಳ್ಕಟ್ಟು, ಕಾಲು ಕಡಗ, ಗೆಜ್ಜೆ ಗಳನ್ನು ಧರಿಸುತ್ತಾರೆ. ದಗಲೆ ಹಾಗೂ ಕಪ್ಪು ಬಣ್ಣದ ಇಜಾರನ್ನು ತೊಟ್ಟುಕೊಳ್ಳುತ್ತಾರೆ. ಹೆಣ್ಣುಬಣ್ಣಕ್ಕೆಂದೇ ಪ್ರತ್ಯೇಕ ಎದೆಪದಕಗಳಿಲ್ಲ.

ಯಕ್ಷಗಾನದ ಹೆಣ್ಣು ಬಣ್ಣಗಳಲ್ಲಿ ಶೂರ್ಪನಖಿಯ ಪಾತ್ರಕ್ಕೆ ವಿಶೇಷವಾದ ಪ್ರಾಶಸ್ತ್ಯವಿದೆ. ರಾಮನನ್ನು ಮೋಹಿಸುವ ಮೋಹ ವಿರಹಗಳನ್ನು ಸಂಕೇತಿಸುವ ಘೋರ ಮತ್ತು ಮಾಯಾ ಚೌಕಟ್ಟನ್ನು ರೂಪಿಸುವ ಈ ಪಾತ್ರದ ಮನೋಧರ್ಮವೇ ವಿಶಿಷ್ಟವಾದುದು. ಈಕೆಯ ಮುಖವರ್ಣಿಕೆ ಕೂಡಾ ವಿಶೇಷವಾಗಿದೆ. ಗಂಡ ಸತ್ತ ಪ್ರತೀಕವಾಗಿ ಶೂರ್ಪನಖಿಗೆ ತಳಪಾಯದ ಬಣ್ಣ ಕಪ್ಪು. ಮೂಗು ಅಗಲವಾಗಿ ಕಾಣುವಂತೆ ಹಣೆಯ ನಾಮವನ್ನು ಮೂಗಿನ ತುದಿಯವರೆಗೆ ಬರೆಯುತ್ತಾರೆ. ಇದು ಆನೆಯ ಸೊಂಡಿಲಿನ ಸಂಕೇತವಂತೆ. ಆನೆಯಷ್ಟು ಬಲವುಳ್ಳವಳು ಎಂಬುದನ್ನು ಸೂಚಿಸಲು ಈ ಬರವಣಿಗೆ ಎಂದು ಹೇಳಲಾಗುತ್ತದೆ. ಭೀಮನ ವೇಷಕ್ಕೂ ಇದೇ ರೀತಿಯ ನಾಮದ ಬರವಣಿಗೆ ಇದೆ. ಹಣೆಯ ಇಕ್ಕೆಲಗಳಲ್ಲಿ ಹಾಗೂ ಕೆನ್ನೆಗಳಲ್ಲಿ ಎರಡೆರಡು ಬಿಳಿಯ ಚಕ್ರಗಳನ್ನು ಬಿಡಿಸಿ, ಅವುಗಳಿಗೆ ಕೆಂಪುಗೆರೆಯ ಅಂಚನ್ನು ಬರೆಯುತ್ತಾರೆ. ತುಟಿಗೆ ಕೆಂಪು ಬಣ್ಣವನ್ನು ಹಚ್ಚಿ ಅದರ ಅಂಚಿನಲ್ಲಿ ಬಿಳಿ ಬಣ್ಣದಿಂದ ಎರಡು ಕೋರೆಹಲ್ಲುಗಳನ್ನು ಬರೆಯುತ್ತಾರೆ. ಗಲ್ಲದಲ್ಲಿ  ಒಂದು ಚಕ್ರ ಬಿಡಿಸುವ ಕ್ರಮವೂ ಇದೆ. ಉಳಿದಂತೆ ಹೆಣ್ಣುಬಣ್ಣದ ವೇಷಭೂಷಣಗಳು ಹಾಗೂ ಶಿರೋಭೂಷಣಗಳನ್ನೇ ಧರಿಸುತ್ತಾರೆ.

ಅಜಮುಖಿ ಮೊದಲಾದ ಹೆಣ್ಣುಬಣ್ಣಗಳ ಮುಖವರ್ಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಈ ವೇಷಗಳಿಗೆ ತಳಪಾಯದ ಬಣ್ಣವನ್ನು ಬಳಸುವುದಿಲ್ಲ. ಕೆನ್ನೆಯ ಭಾಗದಲ್ಲಿ ಕೆಂಪು ಹಾಗೂ ತುಟಿಯ ಕೆಳ ಭಾಗದಲ್ಲಿ ಹಸಿರು ಬಣ್ಣವನ್ನು ಬಳಿಯುತ್ತಾರೆ. ಹಣೆಯಲ್ಲಿ ಕೆಂಪು ಬಣ್ಣದ ಅಡ್ಡ ನಾಮಕ್ಕೆ ಹಳದಿ ಬಣ್ಣದ ಅಂಚು ಇರುತ್ತದೆ. ಈ ನಾಮದ ಸುತ್ತಲೂ ಬಿಳಿ ಬಣ್ಣದ ಚುಟ್ಟಿಯ ಮುತ್ತರಿ ಸಾಲುಗಳು ಆವರಿಸಿಕೊಳ್ಳುತ್ತವೆ. ಮೂಗಿನ ತುದಿಯನ್ನೂ ಆವರಿಸಿಕೊಂಡಂತೆ ಹಸಿರು ಬಣ್ಣವನ್ನು ಲೇಪಿಸುತ್ತಾರೆ. ತುಟಿಯ ಅಂಚಿನಲ್ಲಿ ಬಿಳಿ ಬಣ್ಣದ ಕೋರೆ ಹಲ್ಲುಗಳನ್ನು ಬರೆಯುತ್ತಾರೆ. ಕಣ್ಣಿನ ಅಂಚಿನಲ್ಲಿ ಹಳದಿ ಮತ್ತು ಕೆಂಪು ಬಣ್ಣದ ರೇಖೆಗಳು ಈ ಪಾತ್ರಗಳ ಕ್ರೌರ್ಯವನ್ನು ಬಿಂಬಿಸುತ್ತವೆ. ಉಳಿದಂತೆ ವೇಷಭೂಷಣಗಳೆಲ್ಲ ಇತರ ಹೆಣ್ಣುಬಣ್ಣಗಳದ್ದೇ  ಆಗಿವೆ.

ಶಿರೋಭೂಷಣ

ಹೆಣ್ಣುಬಣ್ಣದ ವೇಷಗಳು ಧರಿಸುವ ಶಿರೋಭೂಷಣಕ್ಕೆ ಕುತ್ತರಿಕಿರೀಟ, ಕೊಂಡೆಕಿರೀಟ ಅಥವಾ ಬಾಲ್ದಿ ಕಿರೀಟ ಎಂದೆಲ್ಲಾ ಹೆಸರುಗಳಿವೆ. ಕುತ್ತರಿಬುಟ್ಟಿ ಅಥವಾ ಬಕೇಟಿನ ಆಕಾರದಂತಿರುವುದರಿಂದಲೇ ಇದಕ್ಕೆ ಈ ಹೆಸರು ಬಂದಿರಬೇಕು. ಯಕ್ಷಗಾನದಲ್ಲಿ ಬರುವ ಪ್ರಮುಖವಾದ ಹೆಣ್ಣು ಬಣ್ಣವೆಂದರೆ ಶೂರ್ಪನಖಿ. ಆ ಕಾರಣಕ್ಕಾಗಿ ಈ ಕಿರೀಟಕ್ಕೆ ಶೂರ್ಪನಖಿಯ ಕಿರೀಟವೆಂಬ ಹೆಸರೂ ಇದೆ. ಈ ಕಿರೀಟವನ್ನು ಬಿದಿರಿನಿಂದ ತಯಾರಿ ಸುತ್ತಾರೆ. ಇದರ ಮೇಲೆ ಹುಣಸೆ ಚರಿಯನ್ನು ಹಚ್ಚಿ ಅದರ ಮೇಲೆ ಕೆಂಪು ಬಟ್ಟೆಯನ್ನು ಅಂಟಿಸುತ್ತಾರೆ. ಇದರ ತಳಭಾಗವು ತಲೆಗೆ ಕೂರುವಂತೆ ಹಾಳತವಾಗಿದ್ದು ಮೇಲ್ಭಾಗ ಅಗಲವಾಗಿರುತ್ತದೆ. ಮೆಲ್ಭಾಗದಲ್ಲಿ ಮರದ ಹಲ್ಲೆಗಳನ್ನು ಜೋಡಿಸಿ ಅಲಂಕರಿಸಿರುತ್ತಾರೆ. ಕಿವಿಗಳು ರಾಜ ಕಿರೀಟದಂತೆಯೇ ಇರುತ್ತವೆ. ಈ ಕಿರೀಟದಲ್ಲಿ ಚೌಕಾಕಾರದ ಹಲ್ಲೆಗಳನ್ನು ಬಳಸಲಾಗುತ್ತದೆ. ಕಿರೀಟದ ಮೇಲ್ಭಾಗ ವೃತ್ತಾಕಾರವಾಗಿರುತ್ತದೆ. ಪದ್ಮಗಳು, ತ್ರಿಕೋನಗಳು ಇದರ ಅಲಂಕಾರ ವಿನ್ಯಾಸವನ್ನು ಹೆಚ್ಚಿಸುತ್ತವೆ. ಅತ್ಯಂತ ಹೆಚ್ಚು ನವಿಲುಗರಿಗಳನ್ನು ಈ ಕಿರೀಟಕ್ಕೆ ಬಳಸಲಾಗುತ್ತದೆ. ಹೆಣ್ಣು ಬಣ್ಣಗಳ ದೊಡ್ಡ ಗಾತ್ರಕ್ಕೆ ಅನುಗುಣವಾಗಿ ಈ ಕಿರೀಟವನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು ಎರಡು ಅಡಿ ವ್ಯಾಪಿಸುವ ಈ ಕಿರೀಟದ ಎತ್ತರ ಸುಮಾರು ಒಂದೂವರೆ ಅಡಿ. ಮುಖದ ಅಳತೆಯ ಪ್ರಮಾಣದಷ್ಟೇ ಕಿರೀಟದ ಅಳತೆ ಇರುತ್ತದೆಂಬ ರಾಜ ವೇಷದ ಕಿರೀಟದ ಎಣಿಕೆ ಉಳಿದ ಕಿರೀಟಗಳಿಗೆ ಸರಿ ಹೊಂದುವುದಿಲ್ಲ. ಬಣ್ಣದ ವೇಷದ ಶಿರೋಭೂಷಣಗಳೆಲ್ಲ ವೇಷಗಳ ಪ್ರಮಾಣ ವನ್ನನುಸರಿಸಿ ಬೃಹತ್ತಾಗಿಯೇ ಇದೆ. ನೀಳವಾದ ಈ ಕಿರೀಟವು ಕೊನೆಯಲ್ಲಿ ನವಿಲುಗರಿಗಳ ಅಂಚಿನಿಂದ ಕೂಡಿರುತ್ತದೆ. ಇದು ಹೆಣ್ಣುಬಣ್ಣದ ವೇಷದ ಗಾತ್ರವನ್ನು ಬಹುವಾಗಿ ಹಿಗ್ಗಿಸಲು ಸಹಕಾರಿಯಾಗಿದೆ. ಈ ಕಿರೀಟದ ಎರಡು ಕಿವಿಗಳೂ ಕತ್ತಿಯ ಆಕಾರದಲ್ಲಿದ್ದು, ಅದರಲ್ಲಿ ಕೆಂಪು ಉಲ್ಲನ್ ಅಥವಾ ಕೆಂಪು, ಕಪ್ಪು ಮಿಶ್ರಿತ ಉಲ್ಲನಿನ ಗೊಂಡೆಗಳು ಜೋತಾಡುತ್ತಿರುತ್ತವೆ. ಹೆಣ್ಣುಬಣ್ಣದ ವೇಷಧಾರಿಗಳು ಕಪ್ಪು ಕೂದಲ ಕೇಸರಿ ಹಾಕಿ ಆಮೇಲೆ ಉದುರಿಗಳಿಂದ ಜಡೆ ಹೆಣೆದು ಮುಂಭಾಗಕ್ಕೆ ಹಾಕಿಕೊಳ್ಳುತ್ತಾರೆ. ಕಿವಿಯ ಬಳಿಯಲ್ಲಿ ಬಣ್ಣದ ವೇಷದಂತೆ ಓಲೆಗಳನ್ನು ಧರಿಸುತ್ತಾರೆ.

ಇತರೆ ಬಣ್ಣದ ವೇಷಗಳು ಅಥವಾ ಹಸಿ ಬಣ್ಣದ ವೇಷಗಳು

ಯಕ್ಷಗಾನದಲ್ಲಿ ಕೆಲವು ಪಾತ್ರಗಳನ್ನು ವಿಶಿಷ್ಟ ಬಣ್ಣದ ವೇಷಗಳ ಸಾಲಿಗೆ ಸೇರಿಸ ಬಹುದು. ಈ ಪಾತ್ರಗಳು ರಾಕ್ಷಸ ಪಾತ್ರಗಳಲ್ಲದಿದ್ದರೂ, ತಮ್ಮ ಗುಣಸ್ವಭಾವಗಳಿಂದ ಉಗ್ರ ಭಾವವನ್ನು ಪ್ರಕಟಿಸುವಂತವುಗಳು. ಮುಖವರ್ಣಿಕೆ ಹಾಗೂ ವೇಷಭೂಷಣಗಳಲ್ಲಿ ಇಂತಹ ರೌದ್ರಭಾವವನ್ನು ಬಿಂಬಿಸಿ ಕಲಾವಿದರು ಪಾತ್ರಗಳಿಗೆ ಜೀವ ತುಂಬುತ್ತಾರೆ. ಕುಂಭಕರ್ಣ, ಭೀಮ, ವೀರಭದ್ರ, ವರಾಹ, ನರಸಿಂಹ, ಮಹಿಷಾಸುರ, ಯಮ, ಶನಿ, ಹನುಮಂತ ಮೊದಲಾದ ವೇಷಗಳೆಲ್ಲ ಯಕ್ಷಗಾನದಲ್ಲಿ ವಿಶಿಷ್ಟ ಬಣ್ಣದ ವೇಷಗಳಾಗಿವೆ.

ಕುಂಭಕರ್ಣ

ರಾವಣನ ಸಹೋದರನಾದ ಕುಂಭಕರ್ಣನದು ಬಣ್ಣದ ವೇಷವೇ ಹೌದು. ಆದರೆ ಕುಂಭಕರ್ಣನ ವೇಷಕ್ಕೆ ಅಕ್ಕಿ ಹಿಟ್ಟಿನ ಚುಟ್ಟಿ ಇಡುವ ಕ್ರಮವಿಲ್ಲ. ಚುಟ್ಟಿಯ ಬದಲಿಗೆ ಹತ್ತಿಯ ಪಟ್ಟಿಯನ್ನು ಅಥವಾ ಹತ್ತಿಯ ಚುಟ್ಟಿಯನ್ನು ಅಂಟಿಸುತ್ತಾರೆ. (ಅಕ್ಕಿಹಿಟ್ಟು ಇಲ್ಲದ ಅನಿವಾರ್ಯ ಸಂದರ್ಭಗಳಲ್ಲಿ ಬಣ್ಣದ ವೇಷಗಳಿಗೂ ಹತ್ತಿಯನ್ನೇ ಚುಟ್ಟಿಯಾಗಿ ಬಳಸಿದ ಪ್ರಯೋಗಗಳೂ ಆಗಿವೆ). ಉಳಿದಂತೆ ಕಾಟುಬಣ್ಣದ ಮುಖವಿನ್ಯಾಸವನ್ನು ಹೋಲುವ ಮುಖವರ್ಣಿಕೆ ಇರುತ್ತದೆ. ಮೂಗಿನ ತುದಿಯಿಂದ ಆರಂಭವಾಗುವ ಚುಟ್ಟಿಗಳು ಕೆನ್ನೆಯನ್ನು ಹಾಯ್ದು ಹಣೆಯ ಮೇಲ್ಭಾಗದಲ್ಲಿ ಸುಳಿಗಳಾಗಿ ಕೊನೆಯಾಗುತ್ತವೆ. ಎರಡು ಸಾಲು ಚುಟ್ಟಿಗಳು ಹಣೆಯ ನಡುವಿನಿಂದ ಆರಂಭಿಸಿ ಅರ್ಧವಜ್ರಾಕೃತಿಯಲ್ಲಿ ಮೇಲಿನ ಸುಳಿಯನ್ನು ಸಂಧಿಸುತ್ತವೆ. ಸುಳಿಯ ಮಧ್ಯದಲ್ಲಿ ಅಡ್ಡನಾಮದಂತೆ ಚುಟ್ಟಿಗಳಿರುತ್ತವೆ. ಇದಕ್ಕೆ ಗೀರುಗಂಧಚುಟ್ಟಿ ಎಂಬ ಹೆಸರೂ ಇದೆ. ಸಂಪೂರ್ಣ ಮೇಲ್ಭಾಗದಲ್ಲಿ ಪುಟ್ಟದಾದ ಅರ್ಧವೃತ್ತಾಕಾರದ ಚುಟ್ಟಿ ಇಡಲಾಗುತ್ತದೆ. ಸುಳಿಗಳಿಗೆ ತಾಗಿಕೊಂಡಂತೆ ಕಪ್ಪು ಬಣ್ಣವು ಅದರ ಸಮೀಪದಲ್ಲಿ ಅನುಕ್ರಮವಾಗಿ ಹಳದಿ ಮತ್ತು ಕೆಂಪು ವರ್ಣದ ರೇಖೆಗಳನ್ನು ಎಳೆಯಲಾಗುತ್ತದೆ. ಕಣ್ಣಿನ ಸುತ್ತಲೂ ಕಪ್ಪು ಬಣ್ಣವನ್ನೇ ಲೇಪಿಸಲಾಗುತ್ತದೆ. ಇದನ್ನು ಅಂಚಿನಲ್ಲಿ ಕಿರಿದುಗೊಳಿಸಿ ಮೇಲ್ಮುಖವಾಗಿ ಸುಳಿಗಳವರೆಗೆ ರೇಖೆ ಬರೆಯುತ್ತಾರೆ. ಕಣ್ಣಿನ ಕೆಳಭಾಗದಲ್ಲಿ ಶೃಂಗಾರದ ಅಂಶವನ್ನು ಸೂಚಿಸುವ ಕಾರಣಕ್ಕಾಗಿ ವಿಕಾರ ವಿನ್ಯಾಸಗಳ ನಡುವೆಯೂ ಹಸಿರು ಬಣ್ಣವನ್ನು ಹಚ್ಚಲಾಗುತ್ತದೆ. ಹತ್ತಿಯ ಮೂರು ಪುಟ್ಟ ಉಂಡೆಗಳನ್ನು ಮಾಡಿ ಅವುಗಳಲ್ಲಿ ಎರಡನ್ನು ಕೆಂಪು ಬಣ್ಣದಲ್ಲಿ ಹೊರಳಿಸಿ ಸುಳಿಗಳ ಒಳಗೆ ಹಚ್ಚಲಾಗುತ್ತದೆ. ಒಂದನ್ನು ಹಳದಿ ಬಣ್ಣದಲ್ಲಿ ಹೊರಳಿಸಿ ಹಣೆಯ ಮೇಲ್ಭಾಗದಲ್ಲಿ ಹಚ್ಚಿಕೊಳ್ಳಲಾಗುತ್ತದೆ. ಒಂದು ದೊಡ್ಡ ಹತ್ತಿಯ ಉಂಡೆಯನ್ನು ಮೂಗಿನ ಮೇಲೆ ಹಚ್ಚಿಕೊಳ್ಳಲಾಗುತ್ತದೆ.

ಭೀಮ

ಭೀಮನನ್ನು ಕೂಡ ಬಣ್ಣದ ವೇಷದ ಸಾಲಿಗೇ ಸೇರಿಸಲಾಗುತ್ತದೆ. ಕೆಂಪು ಬಣ್ಣವನ್ನು ಹೆಚ್ಚು ಹಾಕಿ ಭೀಮನ ಬಣ್ಣಗಾರಿಕೆಯಲ್ಲಿ ರೌದ್ರಭೀಕರತೆಯನ್ನು ಪ್ರಕಟಿಸುತ್ತಾರೆ. ಎಲ್ಲಾ ಬಣ್ಣಕ್ಕೂ ಬರೆಯುವಂತೆ ಹುಬ್ಬು ಮತ್ತು ಕಣ್ಣು ರೆಪ್ಪೆಗಳಿಗೆ ಕಾಡಿಗೆ ಅಥವಾ ಎಣ್ಣೆಮಸಿಯನ್ನು ಬರೆಯುತ್ತಾರೆ. ನಂತರ ಮೂಗಿನ ತುದಿಯಿಂದ ಹಣೆಯ ಮೇಲ್ಪದರದತನಕ ಅಗಲಕ್ಕೆ ಕೆಂಪು ಬಣ್ಣದ ನಾಮವನ್ನು ಹಚ್ಚುತ್ತಾರೆ. ಇದು ಬುಡ ಭಾಗದಲ್ಲಿ ಸಪೂರವಾಗಿ ಮೇಲಕ್ಕೆ ಹೋದಂತೆ ಅಗಲವಾಗುತ್ತದೆ. ಕಣ್ಣಿನ ಕೆಳಗೆ ಅಂಡಾಕಾರದಲ್ಲಿ ಕೆಂಪು ವರ್ತುಲವನ್ನು ಬರೆಯಲಾಗುತ್ತದೆ. ಹಣೆಯ ಎರಡೂ ಕಡೆಗಳಲ್ಲಿ ಕಪ್ಪು ಚಕ್ರವನ್ನು ಬಿಡಿಸಿ ಸುತ್ತಲೂ ಬಿಳಿಯ ಚುಕ್ಕೆಗಳನ್ನು ಇರಿಸುತ್ತಾರೆ. ಹಣೆಗೆ ಹಾಕಿದ ಕೆಂಪು ಉದ್ದನೆಯ ನಾಮದ ಪಕ್ಕದಲ್ಲಿ ಕಪ್ಪು ಛಾಯೆ ಹಾಗೂ ಬಿಳಿ ಗೆರೆಗಳನ್ನು ಅದರ ಜೊತೆಗೆ ಚುಟ್ಟಿಗಳನ್ನು ಇಡುತ್ತಾರೆ. ಇದೇ ತೆರನ ಬಣ್ಣವನ್ನು ಕಣ್ಣ ರೆಪ್ಪೆಯ ಕೆಳಗಿನ ವರ್ತುಲದ ಸುತ್ತಲೂ ಬರೆಯಲಾಗುತ್ತದೆ. ಗಡ್ಡದ ಕೆಳಗೆ ಚುಟ್ಟಿ, ಅದರ ಮೇಲೆ ಕೆಂಪು ಹಾಗೂ ಬಿಳಿಯಲ್ಲಿ ರೇಖೆಯನ್ನು ಬರೆಯುತ್ತಾರೆ. ಮುಖದ ಉಳಿದ ಭಾಗದಲ್ಲೆಲ್ಲ ಕೆಂಪಿಗೆ ಸ್ವಲ್ಪ ಬಿಳಿ ಮಿಶ್ರ ಮಾಡಿದ ರೌದ್ರ ಬಣ್ಣವನ್ನು ತುಂಬಿಸಲಾಗುತ್ತದೆ. ಆಮೇಲೆ ಕಪ್ಪು ಗಡ್ಡವನ್ನು ಕಟ್ಟಲಾಗುತ್ತದೆ. ಇಲ್ಲಿ ಮೂಗಿನ ಮೇಲೆ ಬರೆಯುವ ಕೆಂಪು ನಾಮವು ಆನೆಯ ಸೊಂಡಿಲನ್ನು ಸಂಕೇತಿಸುತ್ತದೆ. ಹಣೆಯ ಇಕ್ಕೆಲದಲ್ಲಿ ಬರೆಯುವ ಕಪ್ಪು ಚಕ್ರವು ಆನೆಯ ಕಣ್ಣನ್ನು ಸಂಕೇತಿಸುತ್ತದೆ. ಇದು ಭೀಮನ ಸಹಸ್ರ ಆನೆ ಬಲವನ್ನು ಸೂಚಿಸುವುದರ ಪ್ರತೀಕವೆಂದು ಹೇಳಲಾಗುತ್ತದೆ.

ಬಕಾಸುರನ ಬಂಡಿಯನ್ನುಂಡ, ಹಿಡಿಂಬೆಯಂತಹ ರಕ್ಕಸಿಯನ್ನು ಮದುವೆಯಾದ,  ದುಶ್ಯಾಸನನ ಬಸಿರು ಬಗೆದು ನೆತ್ತರು ಕುಡಿದ, ಸಾವಿರ ಆನೆಗಳ ಬಲವುಳ್ಳವನೆಂಬ ಖ್ಯಾತಿಯ ಭೀಮನ ಪಾತ್ರವನ್ನು ಯಕ್ಷಗಾನದಲ್ಲಿ ಬಣ್ಣದ ವೇಷದ ಸಾಲಿಗೆ ಸೇರಿಸಿದ್ದು ಸರಿಯಾಗಿಯೇ ಇದೆ. ಇಂತಹ ವೇಷಗಳನ್ನು ಅರೆ ಬಣ್ಣ ಎಂದೂ ಕರೆಯುವುದಿದೆ. ತೆಂಕುತಿಟ್ಟಿನಲ್ಲಿ ಎರಡು ರೀತಿಯ ಭೀಮನ ಚಿತ್ರಗಳಿವೆ.  ಸಾಮಾನ್ಯವಾಗಿ ಒಡ್ಡೋಲಗದ ಪಾತ್ರವಾಗಿ ಬರುವ ಭೀಮ ಒಂದು ತೆರನಾದರೆ ರೌದ್ರ ರಸವನ್ನು ಪ್ರತಿಪಾದಿಸುವ ದುಶ್ಯಾಸನ ವಧೆ ಪ್ರಸಂಗದ ಭೀಮ ಇನ್ನೊಂದು ತೆರ. ‘ದುಶ್ಯಾಸನ ವಧೆ’ಯ ಭೀಮನಂತೂ ರುದ್ರಭೀಮನೆಂದೇ ಪ್ರಖ್ಯಾತವಾಗಿದ್ದು, ಇಲ್ಲಿ ಗುಲಾಬಿ ಬಣ್ಣದ ಮೂಲಲೇಪನಕ್ಕೆ ಬದಲಾಗಿ ಮುಖಕ್ಕೆ ಕೆಂಪು ಬಣ್ಣವನ್ನು ಮೆತ್ತಿಕೊಂಡು ರುದ್ರಭಯಂಕರನಾಗಿ ಕಾಣಿಸಿಕೊಳ್ಳುತ್ತಾನೆ.

ರುದ್ರಭೀಮನ ಮುಖವರ್ಣಿಕೆಯು ವಿಶಿಷ್ಟವಾಗಿದೆ. ಮೂಗನ್ನು ಆವರಿಸಿ ಅಗಲವಾಗಿ ಹಣೆಯ ಮೇಲಕ್ಕೆ ಚಾಚಿದ ದೊಡ್ಡ ಕೆಂಪುನಾಮ, ಅದಕ್ಕೆ ಬಿಳಿಯ ಅಂಚು, ಕೆನ್ನೆಗಳಲ್ಲಿ ವರ್ತುಲಗಳು, ಹಣೆಯ ಮೇಲೆ   ‘ಆನೆಕಣ್ಣು’ಗಳೆಂಬ ಹೆಸರಿನ ದೀರ್ಘ ವರ್ತುಲಗಳು ಇತ್ಯಾದಿ ಬರವಣಿಗೆಗಳಿಂದ ಭೀಮನ ಮುಖವರ್ಣಿಕೆ ಪ್ರತ್ಯೇಕವಾಗಿದೆ. ಕೆಂಪು, ಕಪ್ಪು ವರ್ಣರೇಖೆಗಳ ಅಂಚಿಗೆ ಕಿರು ಚುಟ್ಟಿ ಇಡುವುದರಿಂದ ಮುಖಕ್ಕೆ ಉಬ್ಬುಶಿಲ್ಪದ ಬೆಡಗು ಉಂಟಾಗುತ್ತದೆ.  ರಾಕ್ಷಸ ವೇಷಕ್ಕೆ ಕಟ್ಟುವಂತಹ ದಪ್ಪವಾದ ಮೀಸೆ ಹಾಗೂ ಕಪ್ಪು ಗಡ್ಡವನ್ನು ಕೊರಳ ಭಾಗದಲ್ಲಿ ಕಟ್ಟುತ್ತಾರೆ.

ಭೀಮನಿಗೆ ಕೆಂಪು ಕಪ್ಪು ಬಣ್ಣಗಳ ಮಿಶ್ರ ವೇಷಭೂಷಣಗಳನ್ನು ಬಳಸುತ್ತಾರೆ. ಭುಜಕಿರೀಟ, ಎದೆ ಪದಕ, ವೀರಗಸೆಯ ಉಲ್ಲನ್‌ಗಳು ಮಿಶ್ರ ಬಣ್ಣದಿಂದ ಕೂಡಿವೆ. ಕೆಂಪು ಬಣ್ಣದ ದಗಲೆ ಮತ್ತು ಇಜಾರನ್ನು ಧರಿಸುತ್ತಾರೆ. ಕೆಂಪು ಕಪ್ಪು ಬಣ್ಣಗಳ ಸೋಗೆವಲ್ಲಿಯನ್ನು ಧರಿಸುತ್ತಾರೆ. ಬಾಲ್ಮುಂಡಿನ ಅಂಚಿನ ಅಥವಾ ಫ್ರಿಲ್ಲಿನ ಬಣ್ಣ ಕೆಂಪು. ಕೈಕಟ್ಟು, ತೋಳ್ಕಟ್ಟು, ಕೈಬಳೆ, ಡಾಬು, ಮಾರ್ಮಾಲೆ, ಕಾಲ್ಗಡಗ ಮೊದಲಾದ ವೇಷಭೂಷಣಗಳು ಇತರ ಬಣ್ಣದ ವೇಷಗಳಂತೆಯೇ ಇರುತ್ತವೆ.

ಯಕ್ಷಗಾನದಲ್ಲಿ ಭೀಮನು ಧರಿಸುವ ವಿಶೇಷ ವಿನ್ಯಾಸದ ಕಿರೀಟಕ್ಕೆ ಭೀಮನ ಮುಡಿ ಎಂದು ಹೆಸರು. ಇದು ಆಕಾರದಲ್ಲಿ ಇತರ ಕಿರೀಟಗಳಿಗಿಂತ ಭಿನ್ನವಾಗಿದೆ. ಮೂರು ಹಂತಗಳಿರುವ ಈ ಕಿರೀಟವು ವಿಶಿಷ್ಟವಾಗಿದ್ದು, ಸುಮಾರು ಒಂದು ಗೇಣು ಉದ್ದವಿರುತ್ತದೆ. ಇದರ ಮಧ್ಯಭಾಗದಲ್ಲಿರುವ ಕಲಶವು ತಲೆಯಭಾಗದಲ್ಲಿ ಕಡಿಮೆ ಸುತ್ತಳತೆಯಿರುತ್ತದೆ. ಮಧ್ಯಭಾಗದಲ್ಲಿ ಸುತ್ತಳತೆ ಹೆಚ್ಚಾಗಿರುತ್ತದೆ. ತುದಿಯಲ್ಲಿ ಒಮ್ಮೆಗೆ ಕಡಿದಾಗಿ ಚಿಕ್ಕದಾದ ಬಾಯಿಯಿರುತ್ತದೆ. ಇದರ ಕಿವಿಯು ರಾಕ್ಷಸ ವೇಷದ ಭುಜದಂಡೆಯನ್ನು ಹೋಲುವ ಗರುಡನ ಆಕಾರದಲ್ಲಿರುತ್ತದೆ. ಕಿವಿಯ ಕೆಳಭಾಗ ಒಂದೊಂದು ಪದ್ಮದ ಆಕಾರವಿರುತ್ತದೆ. ಎರಡೂ ಬದಿಗಳಲ್ಲಿ ಕೆಂಪು, ಕಪ್ಪು ಮಿಶ್ರ ಬಣ್ಣಗಳಿರುವ ಉಲ್ಲನ್ ಉಂಡೆಗಳು ಇರುತ್ತವೆ. ಕಿವಿಯ ಬಳಿಯಲ್ಲಿ ಮಿಶ್ರ ಬಣ್ಣದ ಓಲೆಯನ್ನು ಧರಿಸುತ್ತಾರೆ. ಕೇಸರಿಯನ್ನು ಹಿಂಭಾಗದಿಂದ ಇಳಿಬಿಡುತ್ತಾರೆ.

ದುಶ್ಯಾಸನನ ಕರುಳು ಬಗಿಯುವ ಸನ್ನಿವೇಶದಲ್ಲಿ ಭೀಮನ ಕಿರೀಟದ ಮುಂಭಾಗಕ್ಕೆ ಬಿಳಿ ಅಥವಾ ಕಪ್ಪಿನ ಚವುರಿ ಕೇಸರಿಯನ್ನು ಇಳಿಬಿಟ್ಟು ವೇಷದ ಭೀಕರತೆಯನ್ನು ಹೆಚ್ಚಿಸುವುದೂ ಇದೆ.

ವೀರಭದ್ರ

ಯಕ್ಷಗಾನದಲ್ಲಿ ವೀರಭದ್ರನಿಗೂ ಭೀಮ ನಂತೆಯೇ ಮುಖವರ್ಣಿಕೆ ಮತ್ತು ವೇಷ ಭೂಷಣಗಳನ್ನು ಬಳಸುತ್ತಾರೆ. ವೀರಭದ್ರನ ಕಣ್ಣುಗಳನ್ನು ದೊಡ್ಡ ವೃತ್ತಾಕಾರವಾಗಿ ಕಪ್ಪು, ಬಿಳಿ, ಹಳದಿ ರೇಖೆಗಳಿಂದ ಬರೆದು ಉಗ್ರಗೊಳಿಸುತ್ತಾರೆ. ಹಣೆಗೆ ಭಸ್ಮಲಾಂಛನ ವನ್ನು ಅಡ್ಡ ನಾಮದ ಮೂಲಕ ಬರೆಯುತ್ತಾರೆ. ಶಿವನಂತೆ ಹಣೆಗಣ್ಣನ್ನು ಬರೆಯಲಾಗುತ್ತದೆ. ಕೆಲವರು ಹಣೆಯಲ್ಲಿ ವಜ್ರಾಕೃತಿಯ ಆಕಾರ ವನ್ನು ಚಿತ್ರಿಸುತ್ತಾರೆ. ಕಣ್ಣಿನ ಸುತ್ತಲೂ ಕಿರು ಚುಟ್ಟಿಗಳನ್ನು ಇಡಲಾಗುತ್ತದೆ. ಕೋರೆ ದಾಡೆಯನ್ನು ಬರೆಯುವ ಕ್ರಮವೂ ಇದೆ. ಮೀಸೆ ಹಾಗೂ ಗಡ್ಡವನ್ನು ಕಟ್ಟಿಕೊಳ್ಳುತ್ತಾರೆ. ರುದ್ರನ ಜಡೆಯ ಅಪ್ಪಳಿಸುವಿಕೆಯಿಂದ ಹುಟ್ಟಿ ಬಂದವನೆಂಬುದರ ಸಂಕೇತವಾಗಿ ಆತನ ಪ್ರವೇಶದ ಸಂದರ್ಭದಲ್ಲಿ ಒಂದು ಜಡೆಯ ತುಂಡನ್ನು ಬಾಯಲ್ಲಿ ಕಚ್ಚಿಕೊಂಡಿರುವುದೂ ಇದೆ. ವೇಷಭೂಷಣಗಳೆಲ್ಲವೂ ಭೀಮನು ಧರಿಸುವ ಹಾಗೆಯೇ ಕೆಂಪು-ಕಪ್ಪು ಬಣ್ಣಗಳಿಂದ ಕೂಡಿರುತ್ತವೆ. ಕಿವಿಯ ಬಳಿಯಲ್ಲಿ ಮಿಶ್ರ ಬಣ್ಣದ ಕರ್ಣ ಪತ್ರವನ್ನು ಧರಿಸುತ್ತಾರೆ. ಧರಿಸುವ ಕಿರೀಟವು ಭೀಮನ ಮುಡಿಯೇ ಆದರೂ ಕಿರೀಟದ ಮೇಲ್ಭಾಗದಲ್ಲಿ ಒಂದು ಅಟ್ಟೆ ಇರುವುದು ಇದರ ವೈಶಿಷ್ಟ್ಯ. ಈ ಅಟ್ಟೆಗೆ ಚಿಕ್ಕ ದೀವಟಿಗೆಯ ಐದು ಕಡ್ಡಿಗಳನ್ನು ಇರಿಸಿ ಪ್ರವೇಶ ಮಾಡುವಾಗ ಬೆಂಕಿ ಹಚ್ಚಿ ಬರುವುದಿದೆ.