ಮಹಿಷಾಸುರ

ಮಹಿಷಾಸುರನದು ಯಕ್ಷಗಾನದಲ್ಲಿ ಮತ್ತೊಂದು ವಿಶಿಷ್ಟ ವೇಷ. ಬಣ್ಣದ ವೇಷದವರಿಗೆ ಈ ಪಾತ್ರ ಮೀಸಲು. ಹಾಗೆಂದು ಇದಕ್ಕೆ ಚುಟ್ಟಿ ಇಡುವ ಕ್ರಮವಿಲ್ಲ. ಮುಖದಲ್ಲಿ ಮಲೆಯುವಂತಹ ಎರಡು ದೊಡ್ಡ ಕಣ್ಣುಗಳನ್ನು ಬರೆದು ಕೋಣದ ವಿಶಿಷ್ಟ ಕಳೆಯನ್ನು ನೀಡುತ್ತಾರೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯ ನಾಮವನ್ನು ಬರೆಯಲಾಗುತ್ತದೆ. ಕೆಲವರು ಅಡ್ಡನಾಮವನ್ನು ಹಾಕುತ್ತಾರೆ. ಕಪ್ಪು, ಹಳದಿ ರೇಖೆಗಳ ಬರವಣಿಗೆಯ ಮೂಲಕ ಮುಖವನ್ನು ದೀರ್ಘವಾಗಿಸಿ, ಕೋಣದ ಮುಖದಂತೆ ಮಾಡುತ್ತಾರೆ. ದಪ್ಪ ಮೀಸೆಯನ್ನು ಕಟ್ಟಿ, ಓಲೆಯನ್ನು ಕಿವಿಯ ಬಳಿಯಲ್ಲಿ ಕಟ್ಟುತ್ತಾರೆ. ತಲೆಗೆ ಕಿರೀಟದ ಬದಲು ಉದ್ದವಾದ ಬಾಗಿದ ಕೋಣನ ಕೊಂಬುಗಳಂತಿರುವ ರಟ್ಟಿನ ಕೊಂಬುಗಳನ್ನು ಕಟ್ಟುತ್ತಾರೆ. ಇದರಲ್ಲಿ ಕೋಣನ ಕಿವಿಗಳಂತಿರುವ ಎರಡು ಕಿವಿಗಳೂ ಇರುತ್ತವೆ. ಇದು ಸುಮಾರು ಒಂದೂವರೆ ಅಡಿಗಳಷ್ಟು ಉದ್ದವಾಗಿರುತ್ತದೆ. ತಲೆಗೆ ಜಟ್ಟಿ ಮತ್ತು ಕಪ್ಪು ಬಟ್ಟೆಯನ್ನು ಗಟ್ಟಿಯಾಗಿ ಸುತ್ತಿ ಹಿಗ್ಗಿಸುತ್ತಾರೆ. ಬಳಿಕ ಕಪ್ಪು ಕೇಸರಿಯಿಂದ ಹೊದ್ದ ಮೇಲೆ ಹಣೆಗೆ ತಾಗಿಸಿ ಕೊಂಬುಗಳ ಮೇಲೆ ಮೇಲ್ಮುಖವಾಗಿ ಎದೆಪದಕವನ್ನು ಕಟ್ಟಿ ಅಲಂಕರಿಸುತ್ತಾರೆ. ಇದೇ ಮಹಿಷಾಸುರನ ಕಿರೀಟವಾಗುತ್ತದೆ. ತಲೆಯನ್ನು ಕಪ್ಪು ಕೇಸರದಿಂದ ಹಿಗ್ಗಿಸಿ, ಕೊಂಬುಗಳ ಮಧ್ಯಭಾಗವನ್ನು ಎದೆ ಪದಕವನ್ನು ಕಟ್ಟುವ ಮೂಲಕ ಅಲಂಕರಿಸುತ್ತಾರೆ. ಮಹಿಷಾಸುರನಿಗೆ ಪ್ರತ್ಯೇಕ ಕಿರೀಟವಿಲ್ಲ,  ಅಡೂರು ಶ್ರೀಧರರಾಯರು ಮಹಿಷಾಸುರನ ಕೊಂಬುಗಳನ್ನು ಪರಿಷ್ಕರಿಸಿ, ಕಿರೀಟದ ಆಕಾರದಲ್ಲಿ ಸಿದ್ಧಪಡಿಸಿರುವುದೂ ಇದೆ. ಹಿಂದಿನ ಕಾಲದಲ್ಲಿ ಈ ತೆರನ ಮಹಿಷಾಸುರನ ವೇಷ ಕ್ರಮ ಇದ್ದಿರಲಿಲ್ಲವಂತೆ. ಶೇಣಿಗೋಪಾಲಕೃಷ್ಣ ಭಟ್ಟರ ಮಾತಿನಂತೆ ಮಹಿಷಾಸುರ ವೇಷವನ್ನು ವಿನೂತನವಾಗಿ ರೂಪಿಸಿದ ಸಂದರ್ಭವೊಂದನ್ನು ಇಲ್ಲಿ ಉಲ್ಲೇಖಿಸಬಹುದು. ೧೯೩೬-೩೮ರ ಅವಧಿ ಇರಬಹುದು. ಅದುವರೆಗೆ ರಂಗದಲ್ಲಿ ಪ್ರಯೋಗವಾಗದೇ ಇದ್ದ “ದೇವೀ ಮಾಹಾತ್ಮ್ಯ” (ದೇವೀ ಮಹಾತ್ಮೆ) ಪ್ರಸಂಗವನ್ನು ಕೊರಕ್ಕೋಡು ಮೇಳದವರು ಸ್ಥಳೀಯ ದೇವಿ ಸನ್ನಿಧಿಯಲ್ಲಿ ಪ್ರಪ್ರಥಮವಾಗಿ ಆಡಿದ್ದರು. ಮೂರು ದಿನಗಳ “ದೇವೀ ಮಹಾತ್ಮೆ” ಪ್ರಸಂಗದ  ಪ್ರದರ್ಶನದಲ್ಲಿ ಎರಡನೆಯ ದಿನ ‘ಮಹಿಷಾಸುರಮಹಿಮೆ” ಪ್ರದರ್ಶನ. ಬಣ್ಣದ ವೇಷದಲ್ಲಿ ಹೆಸರು ಮಾಡಿದ್ದ ಉದಯೋನ್ಮುಖ ಕಲಾವಿದ ಪಟ್ಟಾಜೆ ಕುಞ್ಞ ಎಂಬವರು ಮಹಿಷಾಸುರನ ವೇಷಧಾರಿ. ಅಂದಿನವರೆಗೆ ರಾವಣ, ಕಂಸ, ಜರಾಸಂಧ ಮುಂತಾದ ಪಾತ್ರ ವ್ಯತ್ಯಾಸಗಳಿದ್ದರೂ, ಅವೆಲ್ಲ ಖಳ ಪಾತ್ರಗಳೆಂಬ ಕಾರಣಕ್ಕಾಗಿ, ವೇಷ ವ್ಯತ್ಯಾಸವಿಲ್ಲದೆ ಒಂದೇ ಕ್ರಮದ ರಾಕ್ಷನ ವೇಷದಿಂದ ರಂಗದಲ್ಲಿ ಕಾಣಿಸುತ್ತಿದ್ದು ರೂಢಿಯಾಗಿತ್ತು.

ಆದರೆ ಮಹಿಷಾಸುರನ ವೇಷವು ರೂಢಿಯ ರಾಕ್ಷಸ ವೇಷದ ಕಿರೀಟದ ಬದಲಿಗೆ ನೀಳವಾದ ಕೋಡುಗಳನ್ನು ಧರಿಸಿ, ಕಪ್ಪು ಬಟ್ಟೆಯನ್ನು ತಲೆಗೆ ಮುಂಡಾಸಿನಂತೆ ಸುತ್ತಿ ಮುಂದಲೆಗೆ ಎದೆಪದಕವನ್ನು ಕಟ್ಟಿ ಮಾಡಿಕೊಂಡ ಆವಿಷ್ಕಾರದಿಂದ ಕೋಣನ ತಲೆಯನ್ನೇ ಹೊತ್ತು ಬಂದ ಮಾನವ ದೇಹದಂತೆ ತೋರುತ್ತಿತ್ತು. ಮುಖವರ್ಣಿಕೆಯಲ್ಲಿಯೂ, ವೇಷಧಾರಣೆಯಲ್ಲಿಯೂ, ಆಟನೋಟಗಳಲ್ಲಿಯೂ ವಾಸ್ತವಿಕತೆಯು ಎದ್ದು ಕಾಣುತ್ತಿದ್ದ ಈ ಭೀಕರ ದೃಶ್ಯವು ಕುಞ್ಞನವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆ ಮೇಲೆ ಎಲ್ಲ ಮೇಳದವರೂ ಇಂದಿನವರೆಗೆ ನೂರಾರು ದೇವೀ ಮಹಾತ್ಮೆ ಪ್ರಸಂಗವನ್ನು ಆಡಿದ್ದಾರಾದರೂ ಇದರ ಕೊಡುಗೆಯ ಕೀರ್ತಿ ಕೊರಕ್ಕೋಡು ಮೇಳಕ್ಕೂ, ಮಹಿಷಾಸುರ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಞ್ಞನವರಿಗೂ ಸಲ್ಲಬೇಕು (೧೯೮೧ : ೧೭) ಎಂಬುದು ಶೇಣಿಯವರ ಖಚಿತ ಮಾತು.

ಮಹಿಷಾಸುರ ಪಾತ್ರದ ಉಳಿದ ವೇಷ ವಿಧಾನವೆಲ್ಲ ಬಣ್ಣದ ವೇಷದ್ದು. ವೇಷಭೂಷಣಗಳಲ್ಲಿ ಕಪ್ಪು ಬಣ್ಣಕ್ಕೆ ಪ್ರಾಶಸ್ತ್ಯ. ಅಂಗಿ, ಚಲ್ಲಣ, ಬಾಲ್‌ಮುಂಡು, ಎದೆ ಪದಕ, ಭುಜಕೀರ್ತಿ, ವೀರಗಾಸೆಗಳೆಲ್ಲ ಕಪ್ಪು ಬಣ್ಣದವುಗಳು. ಒಟ್ಟಿನಲ್ಲಿ ಕಂಠದಿಂದ ಮೇಲೆ ಕೋಣನಂತೆಯೂ, ಕುತ್ತಿಗೆಯಿಂದ ಕೆಳಭಾಗದಲ್ಲಿ ಅಸುರನಂತೆಯೂ ಈ ವೇಷವು ಕಾಣಿಸುತ್ತದೆ. ಮಹಿಷಾಸುರನಂತಹ ವೇಷಗಳು ದೊಂದಿ ರಾಳದ ಮುಖೇನ ದೂರದ ಬೆಟ್ಟದಿಂದಿಳಿದು ರಂಗಸ್ಥಳ ಸೇರುವುದರ ಮೂಲಕ ಅಬ್ಬರದ ಪ್ರವೇಶವನ್ನು ಕೊಡುವುದು ಸಂಪ್ರದಾಯ.

ಹನುಮಂತ

ಸಾಂಪ್ರದಾಯಕ ಹನುಮಂತನ ವೇಷವನ್ನು ಬಣ್ಣದ ವೇಷದ ಸಾಲಿಗೆ ಸೇರಿಸಲಾಗಿದೆ. ಹನುಮಂತನ ಮುಖದ ಮೂಲ ಲೇಪನವು ಹಸಿರು ಬಣ್ಣದಲ್ಲಿರುತ್ತದೆ. ಇತ್ತೀಚೆಗೆ ಕೆಲವರು ನೀಲಿ ಬಣ್ಣವನ್ನು ಬಳಸುತ್ತಿದ್ದಾರೆ. ಹನುಮಂತನ ಮುಖವರ್ಣಿಕೆಯಲ್ಲಿ ಎಂಟು ‘ಸುಳಿ’ ಗಳಿರುತ್ತವೆ. ಕಣ್ಣುಗಳ ಸುತ್ತಲು ಮೂರು ಸುಳಿಗಳು ಬಾಯಿಯ ಇಕ್ಕೆಡೆಗಳಲ್ಲಿ ಎರಡು ಸುಳಿಗಳೂ ಇರಬೇಕು. ಈ ಸುಳಿಗಳನ್ನು ಜೋಡಿಸಿ ಕಣ್ಣು ಮತ್ತು ಬಾಯಿಯ ಸುತ್ತ ಕಪ್ಪು ರೇಖೆಯನ್ನು ಎಳೆಯಲಾಗುತ್ತದೆ. ಸುಳಿಗಳ ಅಂಚಿಗೆ ಕೆಂಪು ಮತ್ತು ಹಳದಿ ರೇಖೆಗಳನ್ನು ತುಂಬಿಸುತ್ತಾರೆ. ಕಣ್ಣಿನ ಸುಳಿಯೊಳಗೆ ಕಪ್ಪು ಎಣ್ಣೆ ಮಸಿಯನ್ನು ಹಾಕಿದರೆ ಬಾಯಿಯ ಪಕ್ಕದ ಸುಳಿಯೊಳಗೆ ಹಳದಿ ಮತ್ತು ಕೆಂಪು ಹುಡಿಯ ಮಿಶ್ರಣವನ್ನು ಹಚ್ಚುವರು. ತುಟಿಯನ್ನು ಎಣ್ಣೆ ಮಸಿಯಿಂದ ಕಪ್ಪು ಮಾಡುವರು. ಎರಡು ಸುಳಿ, ನಾಲ್ಕು ಸುಳಿಗಳ ಹನುಮಂತನನ್ನು ಸೃಷ್ಟಿಸುವುದೂ ಇದೆ. ಈ ಸುಳಿಗಳ ಅಂಚಿಗೆ ಚುಟ್ಟಿಯ ಬೊಟ್ಟುಗಳನ್ನು ಅಥವಾ ಬಿಳಿ ಬಣ್ಣದ ಬೊಟ್ಟನ್ನು ಇಡುತ್ತಾರೆ. ಹನುಮಂತನ ಮುಖವರ್ಣಿಕೆಯಲ್ಲಿ ಹಸಿರು, ಕಪ್ಪು, ಬಿಳಿ, ಹಳದಿ ಬಣ್ಣಗಳನ್ನು ಹೇರಳವಾಗಿ ಬಳಸುತ್ತಾರೆ. ಬಾಯಿಯ ಸುತ್ತ ಸುಳಿಯ ಒಳಗೆ ಉಬ್ಬಿದ ಹನುವಿನಾಕಾರ ಬರಲು ಹತ್ತಿಯನ್ನು ಮೂರು ಭಾಗಗಳಾಗಿ ಅಂಟಿಸುತ್ತಾರೆ. ಇದಕ್ಕೂ ಕಪಿಶ (ಬೂದು) ಬಣ್ಣದ ಲೇಪವನ್ನು ಹಾಕುತ್ತಾರೆ. ಇದರಿಂದ ಕಪಿ ಕಳೆ ಕಾಣುತ್ತದೆ.

ಹನುಮಂತನ ಮುಖವರ್ಣಿಕೆಯಲ್ಲಿ ಮುತ್ತರಿಗಳು ಬಹು ಮುಖ್ಯವಾಗಿವೆ. ಮುತ್ತರಿಗೆ ಬಳಸುವ ಕಪ್ಪು ಹಾಗೂ ಹಸಿರು ಬಣ್ಣ ಪರಸ್ಪರ ಹೊಂದಿಕೊಂಡು ಮುಖಕ್ಕೊಂದು ಛಾಯೆಯನ್ನು ಸೃಷ್ಟಿಮಾಡುತ್ತದೆ. ಚುಟ್ಟಿಗಳೂ ಸಹ ಮುಖದ ಗಾಂಭೀರ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.

ಹನುಮಂತನ ವೇಷಕ್ಕೆ ನಾಟಕದ ಚೋಲೆಯನ್ನು ಬಳಸುವ ಕ್ರಮ ಯಕ್ಷಗಾನ ಪರಂಪರೆ ಯಲ್ಲಿ ಇಲ್ಲ. ಬಾಲವಿಲ್ಲದ ಹನುಮಂತನೇ ಯಕ್ಷಾಂಗಣದಲ್ಲಿ ವಿರಾಜಿಸುತ್ತಾನೆ. ಹನುಮಂತನ ವೇಷಧಾರಿಯು ಬಿಳಿ ಬಣ್ಣದ ದಗಲೆಯನ್ನು ಧರಿಸುತ್ತಾನೆ. ಇದು ನಸು ಬಿಳಿ ಬಣ್ಣದ್ದಾಗಿದ್ದು, ಬಿಳಿ ಬಣ್ಣದ ಕೋರ ಬಟ್ಟೆಯನ್ನು ಒಳಗೆ ಹಾಕಿ ಹೊಲಿದ ಕೆಂಪು ಅಥವಾ ಹಸಿರು ಅಂಗಿಯನ್ನು ಮಗುಚಿ ಹಾಕಿದರೆ ಸಾಕಾಗುತ್ತದೆ. ಹಸಿರು ಅಂಚಿನ ಬಾಲ್‌ಮುಂಡು ಧರಿಸಿ, ಅದರ ಮೇಲೆ ಬಿಳಿ ಹಸಿರು ಸೋಗೆವಲ್ಲಿಗಳನ್ನು ಹಾಕಿ ಸೊಂಟ ಡಾಬಿನ ಒಳಬದಿಗೆ  ಸೇರಿಸುತ್ತಾರೆ. ಭುಜಕೀರ್ತಿ, ಎದೆ ಪದಕ, ವೀರಗಾಸೆ, ಕರ್ಣಪತ್ರಗಳು ರಾಜ ವೇಷದ ಭೂಷಣಗಳೇ ಆಗಿವೆ.

 

ಹನುಮಂತನ ಕಿರೀಟ ವಿಶಿಷ್ಟವಾಗಿದೆ. ದೊಡ್ಡ ಬಟ್ಟಲಿನ ಮೇಲೆ ಒಂದು ‘ಮುಗುಳಿ’ ಇದ್ದು ಶಿಖರದಂತೆ ಅದು ಕಾಣಿಸುತ್ತದೆ. ದೊರೆ ಕಿರೀಟ ಎಂಬ ಹೆಸರಿನಿಂದ ಕರೆಯುವ ಈ ಟೊಪ್ಪಿ ಕಿರೀಟವು ಯಕ್ಷಗಾನದ ಎಲ್ಲ ತಿಟ್ಟುಗಳಲ್ಲಿ ಬಳಕೆಯಲ್ಲಿದ್ದಂತೆ ತಿಳಿದುಬರುತ್ತದೆ. ಕೂಡಿಯಾಟ್ಟಂ, ಕಥಕಳಿ ಮೊದಲಾದ ಕಲಾಪ್ರಕಾರಗಳಲ್ಲೂ ಇದೇ ತೆರನ ಕಿರೀಟದ ಬಳಕೆಯಿದೆ. ಹಿಂದೆ ಯುರೋಪಿಯನ್ ಅಧಿಕಾರಿಗಳನ್ನು ದೊರೆಗಳೆಂದು ಸಂಬೋಧಿ ಸುತ್ತಿದ್ದರಂತೆ. ಅವರು ಧರಿಸುತ್ತಿದ್ದ ಹ್ಯಾಟ್ ಅಥವಾ ಟೊಪ್ಪಿಯನ್ನು ಹೋಲುವ ಕಿರೀಟ ಇದಾದ್ದರಿಂದ ಇದನ್ನು ದೊರೆ ಕಿರೀಟ ಎಂದು ಕರೆದಿರಬಹುದು. ತಲೆಗೆ ಸಿಕ್ಕಿಸಲು ಪಟ್ಟಿ ಆಧರಿಸಿದ ತೂತು ಇರುವ ಅಗಲವಾದ ವರ್ತುಲವು ಕೆಳಭಾಗದಲ್ಲಿದ್ದು ಬಟ್ಟಲು ಹಾಗೂ ಮುಗುಳಿಯನ್ನು ಇದಕ್ಕೆ ಹೊಲಿದಿರುತ್ತದೆ. ಬಟ್ಟಲಿನ ಸುತ್ತಲೂ ಅಶ್ವತ್ಥ ಎಲೆಯಾಕಾರದ ಜಾಲರಿಗಳಿರುತ್ತವೆ. ಇದೇ ಮಾದರಿಯ ಕಿರೀಟವನ್ನು ಹಿಂದೆ ವಾಲಿ ವೇಷಕ್ಕೂ ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ಇಂದು ಹನುಮಂತನ ಪಾತ್ರಕ್ಕೆ ಈ ಕಿರೀಟವನ್ನು ವ್ಯಾಪಕವಾಗಿ ಬಳಸುವುದೆಂದಿಲ್ಲ. ‘ಮಂಕಿಕ್ಯಾಪ್’ನ ಮಾದರಿಯ ಟೊಪ್ಪಿಗೆಗೆ ಮುಡಿಯಾಕಾರ ದಲ್ಲಿ ಟೋಪನಿನ ಜುಟ್ಟು ಕಟ್ಟಿ ಹೂಮಾಲೆಯನ್ನು ಸುತ್ತಿ ಬರುವ ನಾಟಕೀಯ ಹನುಮಂತನೇ ಹೆಚ್ಚಿನ ಬಳಕೆಯಲ್ಲಿದೆ. ಆದರೆ ಇದು ಪರಂಪರೆಯಲ್ಲ. ಮೋಹಕವಾದ ಯಕ್ಷಗಾನೀಯ ಆಕರ್ಷಣೆಯು ಕಂಡುಬರುವುದಿಲ್ಲ. ಪರಂಪರೆಯ ವೇಷ ಮಾಡಿ ಹನುಮಂತನ ಬಟ್ಟಲ ಕಿರೀಟವನ್ನು ಕಟ್ಟಿದರೆ ಹಿಂಭಾಗದಲ್ಲಿ ನಿಲ್ಲುವ ಬಟ್ಟಲಿನ ಅಂಚಿಗೆ ಬಿಳಿಯ ಕೇಸರಿ ಅಥವಾ ಹೆಚ್ಚಿನ ಕೂದಲನ್ನು ಸೊಂಟದವರೆಗೆ ಇಳಿಯಬಿಡಬೇಕು. ಕಿರೀಟದಲ್ಲಿ ಅರಳೋಲೆ ಗಳಿರುತ್ತವೆ. ಕಿರೀಟದ ಅಡಿ ಭಾಗದಲ್ಲಿ ಕೆಂಪು ಉಲ್ಲನ್ ಇದ್ದು, ಅದರಲ್ಲಿ ಐದು ಸೂರ್ಯಚಂದ್ರರ ಆಕೃತಿಗಳಿವೆ. ಕಿವಿಯ ಬಳಿಯಲ್ಲಿ ಕೆಂಪು ಉಲ್ಲನ್ ಇರುವ ಕರ್ಣಪತ್ರ ಗಳನ್ನು ಧರಿಸುತ್ತಾರೆ. ಕುತ್ತಿಗೆಗೆ ಬಿಳಿಗಡ್ಡವನ್ನು ಕಟ್ಟಿಕೊಳ್ಳುತ್ತಾರೆ. ಕಥಕಳಿಯಲ್ಲಿ ಹನುಮಂತನ ವೇಷವು ‘ವೆಳ್ಳತಾಡಿ’ ವಿಭಾಗಕ್ಕೆ ಸೇರಿದ್ದು, ಕಥಕಳಿಯಿಂದಲೇ ಇದು ಯಕ್ಷಗಾನಕ್ಕೆ ಬಂದಿರಬೇಕು ಎಂಬ ಅಭಿಪ್ರಾಯವೂ ಇದೆ.

ಯಕ್ಷಗಾನದ ಬಡುಗುತಿಟ್ಟಿನ ಸಂಪ್ರದಾಯದಲ್ಲೂ ಇದೇ ತೆರನ ಹನುಮಂತನ ಚಿತ್ರಣ ಇತ್ತೆಂದು ಹೇಳಲಾಗುತ್ತದೆ. ಅವನ ಮುಖವರ್ಣಿಕೆ ಕಪಿಯದಾಗಿದ್ದು, ಅಲ್ಲಿ ಕಪಿಯ ತುಂಟತನ ವ್ಯಕ್ತವಾಗುವಂತೆ ರೂಪಿಸಲಾಗುತ್ತಿತ್ತು. ರಾಜ ವೇಷದ ಸಾಂಪ್ರದಾಯಕ ಉಡುಪಿನಲ್ಲಿಯೇ ಇಲ್ಲಿನ ಹನುಮಂತ ಕಾಣಿಸಿಕೊಳ್ಳುತ್ತಿದ್ದ. ಬಾಲ್‌ಮುಂಡು, ದಗಲೆ, ಸೋಗೋಲೆ ಎಲ್ಲವೂ ಬಿಳಿಯ ಬಣ್ಣದವುಗಳೇ. ಬಿಳಿಯ ಗಡ್ಡ, ಗಡ್ಡ ಕಟ್ಟಿದ ಬಳಿಕ ಗೆಜ್ಜೆಡ್ಡಿಗೆ ಕಟ್ಟಿ ಕರ್ಣಪತ್ರ, ಕೆನ್ನೆಪೂ, ಚೆನ್ನೆಪೂಗಳನ್ನಿಡುತ್ತಿದ್ದರು. ಬಳಿಕ ಹನುಮಂತನ ಕಿರೀಟ ಕಟ್ಟಿ ಹಿಂಭಾಗದಲ್ಲಿ ಬಿಳಿಯ ಕೇಸರಿಯನ್ನಿಳಿಬಿಡಲಾಗುತ್ತಿತ್ತು. ಕಣ್ಣಿನ ಸುತ್ತಲೂ ಮೂರು ಸುಳಿಗಳನ್ನು ಬರೆಯಲಾಗುತ್ತಿತ್ತು. ಬಾಯಿಯ ಸುತ್ತಲೂ ವರ್ತುಲವನ್ನು ರಚಿಸಲಾಗುತ್ತಿತ್ತು. ಇಲ್ಲಿ ಕಪಿಯ ಮುಖ ಕೇವಲ ಸಾಂಕೇತಿಕ. ಬಾಲವನ್ನು ಧರಿಸುವ ಪದ್ಧತಿ ಇರಲಿಲ್ಲ. ಹೀಗೆ ತೆಂಕು, ಬಡಗು ತಿಟ್ಟುಗಳನ್ನು ಸೇರಿದಂತೆ ಯಕ್ಷಗಾನದಲ್ಲಿ ನಿರ್ದಿಷ್ಟವಾದ ಸಂಪ್ರದಾಯವಿದೆ.

ಡಾ. ಶಿವರಾಮ ಕಾರಂತರು ಹನುಮಂತನ ಪಾತ್ರವನ್ನು ಕುರಿತು ಹೀಗೆ ಹೇಳಿದ್ದಾರೆ. “ಆಂಜನೇಯನಂತಹ ಪಾತ್ರದ ಮುಖವರ್ಣಿಕೆ ಹೇಗಿತ್ತೆಂಬುದನ್ನು ತೋರಿಸಬಲ್ಲವರ ಅಭಾವವಿದೆ. ಈ ನಡುವೆ ಶತಕದ ಆರಂಭದಲ್ಲಿ ವ್ಯವಸಾಯೀ ನಾಟಕ ಕಂಪನಿಗಳು ಕನ್ನಡ ದೇಶವನ್ನು ಸುತ್ತಾಡುತ್ತಾ ತಮ್ಮ ಸಂಪ್ರದಾಯವನ್ನು ಸಾರಿದರು. ಲಂಕಾದಹನದಂತಹ ಕಥೆ ಜನಪ್ರಿಯವಾಗತೊಡಗಿತು. ಅಲ್ಲಿನವರದು ಆಂಜನೇಯನ ಆಕೃತಿಯನ್ನು ರಾಜಾ ರವಿವರ್ಮನ ಅನುಕರಣೆಯಿಂದ ರಚಿಸಿದರು. ಅದನ್ನು ಕಂಡ ಯಕ್ಷಗಾನ ಕಲಾವಿದರು ಅದೇ ಹಾದಿಯನ್ನು ತುಳಿದರು. ರವಿವರ್ಮನ ಆಂಜನೇಯ ವಾಸ್ತವಿಕ ದೃಷ್ಟಿಯಿಂದ ರೂಪುಗೊಂಡ ಆಕಾರ. ಯಕ್ಷಗಾನದ ಮುಖ್ಯ ಪಾತ್ರಗಳು ವಾಸ್ತವಿಕತೆಯಿಂದ ದೂರ ಸರಿದು ಸಂಪ್ರದಾಯವೆಂಬುದನ್ನು ಈ ಕಲಾವಿದರು ಮರೆತೇ ಬಿಟ್ಟರು. ಈ ಕಾರಣಗಳಿಂದ ಅನೇಕ ಪಾತ್ರಗಳಿಗೆ ಮುಖವರ್ಣಿಕೆ ವೇಷಭೂಷಣಗಳ ಸಂಪ್ರದಾಯ ಅವಾಸ್ತವಿಕ ಅಂದರೆ ಕಾಲ್ಪನಿಕತೆಯ ತಳಹದಿಯ ಮೇಲೆ ಅವನ್ನು ತಿರುಗಿ ನಿಲ್ಲಿಸಬೇಕೆಂದಲ್ಲ”(ಶಿವರಾಮ ಕಾರಂತ: ೧೯೭೪). ಕಾರಂತರು ಹಳೆ ತಲೆಮಾರಿನ ಕಲಾವಿದರ ಜೊತೆ ಸಮಾಲೋಚಿಸಿ ಹನುಮಂತನಿಗೆ ಕಲ್ಪನೆಯ ಸಾಕಾರ ರೂಪವನ್ನು ಕೊಟ್ಟಿದ್ದಾರೆ. ಆದರೆ ಇಂದು ತೆಂಕುತಿಟ್ಟಿನ ಅನೇಕ ಪ್ರಯೋಗಗಳಲ್ಲಿ ಹಸಿರು ರೋಮದ ಚೋಲೆ, ಇಜಾರು ಮತ್ತು ಅಂಗಿತೊಟ್ಟ ಆಧುನಿಕ ಹನುಮಂತನೇ ಪ್ರತ್ಯಕ್ಷನಾಗುತ್ತಾನೆ. ಇದು ಕುರಿಯ ವಿಠಲಶಾಸ್ತ್ರಿಗಳು ಬಳಕಗೆ ತಂದ ಸಂಪ್ರಾದಾಯವೆಂಬ ಅಭಿಪ್ರಾಯ ಇದೆ.

ಸುಗ್ರೀವ

ಗುಲಾಬಿ ಬಣ್ಣದ ತಳಹದಿ ಬಣ್ಣವನ್ನು ಹಾಕಿ ಕಣ್ಣಿನ ಸುತ್ತಲೂ ಆರೇಳು ಬಣ್ಣದಲ್ಲಿ ಅಂಡಾಕಾರವನ್ನು ಬರೆಯುತ್ತಾರೆ. ತುಟಿಗೆ ಕಪ್ಪನ್ನು ಬರೆಯಲಾಗುತ್ತದೆ. ಹಣೆಯಲ್ಲಿ ಕಪ್ಪು ತಿಲಕವಿಡಲಾಗುತ್ತದೆ. ಮೂಗಿನ ನಡುವಿನಿಂದ ಕೆಳಮುಖವಾಗಿ ಕಪ್ಪು ಗೆರೆಯನ್ನು ಬರೆಯ ಲಾಗುತ್ತದೆ. ತುಟಿಯ ಕಪ್ಪು ಬಣ್ಣದ ಸುತ್ತಲೂ ಬಿಳಿಯ ಬಣ್ಣವಿರುತ್ತದೆ. ಹಣೆಯ ತಿಲಕದ ಸುತ್ತಲೂ ಹಳದಿ, ಬಿಳಿ, ಕೆಂಪು ಬಣ್ಣಗಳಿರುತ್ತವೆ. ಕಣ್ಣ ರೆಪ್ಪೆಯ ಸುತ್ತಲೂ ಇದೇ ರೀತಿಯ ಬಣ್ಣಗಾರಿಕೆ ಇರುತ್ತದೆ. ರಾಜ ವೇಷದ ವಿನ್ಯಾಸದಲ್ಲಿ ಈ ಪಾತ್ರವಿರುತ್ತದೆ.

ಜಟಾಯು

ಜಟಾಯು ಮೊದಲಾದ ಪಕ್ಷಿಯ ವೇಷವನ್ನು ತೋರಿಸಲು ರಟ್ಟಿನಿಂದ ಕೊಕ್ಕನ್ನು ಮಾಡಿಕೊಳ್ಳುತ್ತಿದ್ದರು. ರೆಕ್ಕೆಯಿರುವ ವಿಶಿಷ್ಟ ಭುಜದಂಬೆಯನ್ನು ಬಳಸುತ್ತಿದ್ದರು. ಸೋಗೆವಲ್ಲಿಯನ್ನು ಕೊರಳ ಹಿಂಭಾಗದಲ್ಲಿ ಕಟ್ಟಿ ತುದಿಗಳನ್ನು ಎರಡೂ ತೋಳುಗಳಿಗೆ ಕಟ್ಟಿ ರೆಕ್ಕೆಯನ್ನು ಸಂಕೇತಿಸುವಂತೆ ಮಾಡುವರು. ಪರಂಪರೆಯಲ್ಲಿ ಜಟಾಯು ಪಾತ್ರಕ್ಕೆ ರಾಜ ವೇಷವಾದರೆ ಇತ್ತೀಚಿಗೆ ಪಕಡಿ ಮತ್ತು ತುರಾಯಿ ವೇಷಗಳು ಹೆಚ್ಚಾಗಿ ಬಳಕೆಯಲ್ಲಿವೆ.

ವರಾಹ

ವರಾಹ ವೇಷಕ್ಕೆ ಮುಖವರ್ಣಿಕೆಯಲ್ಲಿ ಚುಟ್ಟಿ ಇರಿಸುವ ಕ್ರಮವಿಲ್ಲ. ಪ್ರಖರವಾದ ಬಿಳಿ, ಕಪ್ಪು, ಕೆಂಪು ವರ್ಣರೇಖೆಗಳಿಂದ ಹಂದಿಯ ಮುಖವನ್ನು ಚಿತ್ರಿಸಲಾಗುತ್ತದೆ. ಮುಖ್ಯವಾಗಿ ಕಣ್ಣು ಹಾಗೂ ಬಾಯಿಯ ಭಾಗದಲ್ಲಿ ಕಪ್ಪು ಬಿಳಿ ರೇಖೆಗಳ ಮೂಲಕ, ಕೋರೆದಾಡೆಯನ್ನು ಬರೆಯುವ ಮೂಲಕ ವರಾಹ ಮೂರ್ತಿಯ ಮುಖವರ್ಣಿಕೆಯನ್ನು ಮಾಡಲಾಗುತ್ತದೆ. ತಲೆಗೆ ಕಿರೀಟದ ಬದಲಾಗಿ ಬಿಳಿ ಕೇಸರಿ ಹಾಗೂ ತುರಾಯಿ ಅಥವಾ ಎದೆಪದಕವನ್ನು ಕಟ್ಟುವುದು  ಪದ್ಧತಿ. ಇದಕ್ಕೂ ಹನುಮಂತನಂತೆ ಬಿಳಿ ದಗಲೆಯನ್ನು ಬಳಸುವರು.

ನರಸಿಂಹ

ನರಸಿಂಹನ ವೇಷದ ಮುಖವರ್ಣಿಕೆಯು ಸಿಂಹದ ಯಥಾವತ್ತು ಪ್ರತಿರೂಪವಲ್ಲ. ಸೂಚ್ಯವಾಗಿ ಸಿಂಹವನ್ನು ನೆನಪಿಸುವಂತಿರುತ್ತದೆ. ನರಸಿಂಹನ ಮುಖವರ್ಣಿಕೆಯು ಕಪ್ಪು, ಬಿಳಿ, ಕೆಂಪು ಬಣ್ಣಗಳಿಂದ ಕೂಡಿದ್ದು ಉಗ್ರವಾಗಿರುತ್ತದೆ. ಕಣ್ಣುಗಳ ಸುತ್ತಲೂ ವಕ್ರವಾದ ರೇಖೆಗಳನ್ನು ಬರೆದು, ಜೋಲಾಡುವ ನಾಲಗೆಯನ್ನು ಬರೆಯುವ ಕ್ರಮವಿತ್ತು. ಕೆಲವರು ಕೆಂಪು ಬಣ್ಣದ ತಗಡಿನ ನಾಲಗೆಯನ್ನು ಇರಿಸಿಕೊಳ್ಳುತ್ತಿದ್ದರು. ತಲೆಗೆ ಬಿಳಿ ಕೇಸರಿ  ಹಾಗೂ ಮುಖದ ಕೆಳಗೆ ಬಿಳಿ ಗಡ್ಡವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ರಾಜ ವೇಷದ ಕಿರೀಟವನ್ನು ಧರಿಸಿ, ಅದಕ್ಕೆ ಬಿಳಿ ಕೇಸರವನ್ನು ಪೋಣಿಸುವುದೂ ಇದೆ. ಮೈಬಿಟ್ಟ ನಾಟಕೀಯ ನರಸಿಂಹ ರೂಪವೂ ಬಳಕೆಯಲ್ಲಿದೆ.

ಒಟ್ಟಿನಲ್ಲಿ ಯಕ್ಷಗಾನದ ಬಣ್ಣದ ವೇಷಗಳೆಂದರೆ ಅತ್ಯಂತ ಕ್ರಿಯಾಶೀಲವಾದ ಅತಿಮಾನುಷ ಶಕ್ತಿಗಳು. ಅವುಗಳ ಸ್ವರೂಪದಲ್ಲಾಗಲಿ, ಕ್ರಿಯೆಯಲ್ಲಾಗಲಿ ಅತಿಮಾನುಷ ಲೇಪವಿರುತ್ತದೆ. ಆ ಕಾರಣದಿಂದಲೇ ಇತರೆಲ್ಲ ಪಾತ್ರಗಳಿಗಿಂತಲೂ ಬಣ್ಣದ ವೇಷಗಳಿಗೆ ವಿಶಿಷ್ಟ ಮುಖವಿನ್ಯಾಸಗಳಿರುತ್ತವೆ. ವಿಶಿಷ್ಟ ವೇಷಭೂಷಣಾದಿಗಳಿರುತ್ತವೆ. ಬಣ್ಣದ ವೇಷವೆಂದರೆ ಮಾಯಾ ಸ್ವರೂಪದವು. ಕೌತುಕದಿಂದ ಕೂಡಿದ ಬಣ್ಣದ ವರ್ತನೆಗಳ ವೇಷಗಳು. ಇವುಗಳ ಬಣ್ಣ ಕ್ಷಣಿಕವಾದುದು. ಯಕ್ಷಗಾನ ರಂಗಭೂಮಿಯಲ್ಲಿ  ಬರುವ ಬಣ್ಣದ ವೇಷಗಳೆಲ್ಲ ಕ್ಷಣಿಕವಾದವುಗಳು. ವೇಷಗಳು ಸಿದ್ಧಗೊಳ್ಳಲು ತೆಗೆದುಕೊಳ್ಳುವ ಸಮಯವೂ ಅತ್ಯಂತ ಹೆಚ್ಚು. ಆದರೆ ರಂಗಭೂಮಿಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರಿಯಾಶೀಲವಾಗಿರುವವುಗಳು. ಯಕ್ಷಗಾನದಲ್ಲಿ ಈ ಎಲ್ಲಾ ಪಾತ್ರಗಳು ಅಸಹಜ ನಡವಳಿಕೆಯಿಂದ ಕುತಂತ್ರದ ದಾರಿಯನ್ನು ಹಿಡಿಯುವವುಗಳು. ಬದುಕಿನಲ್ಲಿ ಇಂತಹ ಸ್ವಭಾವಗಳುಳ್ಳ  ವ್ಯಕ್ತಿಗಳಿಗೂ  ವಿನಾಶ  ಕಟ್ಟಿಟ್ಟ ಬುತ್ತಿ  ಎಂಬ ಸಂದೇಶವನ್ನು ನೀಡುವ ಸಲುವಾಗಿಯೇ ಈ ಪಾತ್ರಗಳ ಆಹಾರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ದೇವ ವಿರೋಧವನ್ನು ಕಟ್ಟಿಕೊಳ್ಳುವ ಈ ಪಾತ್ರಗಳೆಲ್ಲ ತಮ್ಮ ಅಲ್ಪಮತಿಗೆ ತೋರಿದ ದಾರಿಯಲ್ಲಿ ನಡೆಯುವವುಗಳು. ದೇವ ವಿರೋಧವನ್ನು ಬೆಳೆಸಲು ಬೇಕಾದ ದೇಹದಾರ್ಡ್ಯತೆ ಈ ಪಾತ್ರಗಳಿಗೆ ಅನಿವಾರ್ಯ. ಇಂತಹ ಸಾಮರ್ಥ್ಯವನ್ನು ಸಂಕೇತಿಸುವ ಸಲುವಾಗಿಯೇ ಆ ಪಾತ್ರಗಳಿಗೆ ವಿಶಿಷ್ಟವಾದ ವೇಷಭೂಷಣಗಳನ್ನು ಜೋಡಿಸಲಾಗಿದೆ. ಎಷ್ಟೇ ಸಾಮರ್ಥ್ಯ ವಿದ್ದರೂ ವಿವೇಚನ ರಹಿತವಾದ ನಡವಳಿಕೆ ನಾಶಕ್ಕೆ ಕಾರಣ ಎಂಬ ಸಂದೇಶವನ್ನು ಸಾರುವುದೇ ಈ ಪಾತ್ರಗಳ ಉದ್ದೇಶ.

ಆದರೆ ಇತರ ಬಣ್ಣದ ವೇಷಗಳೆಂದು ಗುರುತಿಸಬಹುದಾದ ಪಾತ್ರಗಳ ಆಹಾರ್ಯದಲ್ಲಿ ಅಷ್ಟು ಪ್ರಖರತೆ ಇರುವುದಿಲ್ಲ. ಅವೆಲ್ಲ ವಿಶಿಷ್ಟ ಶಕ್ತಿಗಳನ್ನು ಪಡೆದ ಪಾತ್ರಗಳು. ಸಾಂದರ್ಭಿಕ ಔಚಿತ್ಯಗಳನ್ನು ಮನಗಂಡು ಅವು ಕ್ರಿಯಾಶೀಲವಾಗಿರುತ್ತವೆ. ಆದರೆ ಈ ತೆರನ ಪಾತ್ರ ಗಳ್ಯಾವುವೂ ವಿಕೃತ ಸ್ವಭಾವದವುಗಳಲ್ಲ.

ಬಣ್ಣದ ವೇಷಗಳು ಯಕ್ಷಗಾನದಲ್ಲಿಯೇ ಅತ್ಯಂತ ಹೆಚ್ಚು ಪ್ರಖರ ಸ್ವರೂಪದ ವಿಕಾರ ರೂಪಗಳು. ಅವು ಪ್ರೇಕ್ಷಕರಲ್ಲಿ ಭಯವನ್ನು, ಭೀತಿಯನ್ನು ಹೆಚ್ಚಿಸಲು ಭಾವನೆಗಳನ್ನು ಕೆರಳಿಸಲು ಶಕ್ತವಾದವುಗಳು. ಆಹಾರ್ಯದ ಉತ್ತುಂಗ ಸ್ಥಿತಿಯನ್ನು ಬಣ್ಣದ ವೇಷಗಳು ಪ್ರಕಟಿಸುತ್ತವೆ.