ಬಣ್ಣದ ವೇಷ ಎಂಬುದು ಯಕ್ಷಗಾನ ಸಂದರ್ಭದಲ್ಲಿ ಒಂದು ಪಾರಿಭಾಷಿಕ ಪದವಾಗಿದ್ದು ಕೆಲವು ವಿಶಿಷ್ಟ ಬಗೆಯ ವೇಷಗಳಿಗೆ ಈ ಹೆಸರು ಅನ್ವಯಿಸುತ್ತವೆ. ಯಕ್ಷಗಾನದಲ್ಲಿ ಬಣ್ಣದ ವೇಷ ಎಂಬ ಹೆಸರೇ ತುಂಬ ವಿಶಿಷ್ಟವಾದುದು. ಬಣ್ಣಬಳಿಯದ ಪಾತ್ರಗಳೇ ಯಕ್ಷಗಾನ ರಂಗಭೂಮಿಯಲ್ಲಿಲ್ಲ. ಇತರ ವೇಷಗಳಿಗಿಂತ ಹೆಚ್ಚಾಗಿ ಮತ್ತು ವೈವಿಧ್ಯಮಯವಾಗಿ ಬಣ್ಣವನ್ನು ಬಳಿದುಕೊಳ್ಳುವ ಕಾರಣದಿಂದ ಯಕ್ಷಗಾನದಲ್ಲಿ ‘ಬಣ್ಣದವೇಷ’ ಎಂಬ ಹೆಸರು ವೇಷವಿಧಾನಕ್ಕೆ ರೂಢಿಗೆ ಬಂದಿರಬೇಕು.

ರಾಕ್ಷಸ ಪಾತ್ರಗಳು ಆಗಾಗ ಸ್ವಭಾವವನ್ನು ಬದಲಾಯಿಸುವ ಅಥವಾ ದುರ್ಗುಣಗಳನ್ನೇ ಒಳಗೊಂಡಿರುವ ಪಾತ್ರಗಳಾಗಿರುತ್ತವೆ.  ಸ್ವಭಾವದಿಂದ ಬಣ್ಣ ಬದಲಾಯಿಸುವ  ವೇಷಗಳಾದ ಕಾರಣಕ್ಕೂ ಅವುಗಳಿಗೆ ಬಣ್ಣದ ವೇಷಗಳೆಂಬ ಹೆಸರು ರೂಢಿಗೆ ಬಂದಿರಲೂಬಹುದು. ಎಲ್ಲಾ ಪಾತ್ರ ನಿರ್ವಹಣೆಯ ಪರಿಪೂರ್ಣ ಸ್ಥಿತಿಗೆ ತಲುಪಿದ ಬಳಿಕವೇ ಬಣ್ಣದ ವೇಷಧಾರಿ ಎಂಬ ಉನ್ನತ  ಸ್ಥಾನದಲ್ಲಿ ಕಲಾವಿದನನ್ನು ಗುರುತಿಸಲಾಗುತ್ತದೆ.

ಯಕ್ಷಗಾನದ ಎಲ್ಲ ಪಾತ್ರಗಳಿಗೂ ಬಣ್ಣವನ್ನು ಹಚ್ಚಿಕೊಳ್ಳಲಾಗುತ್ತಿದ್ದರೂ, ನಿರ್ದಿಷ್ಟ ಪಾತ್ರ ಪ್ರಕಾರವನ್ನು ಬಣ್ಣದ ವೇಷವೆಂದು ಹೇಳಲಾಗುತ್ತದೆ. ಉಗ್ರಸ್ವಭಾವದ ಪಾತ್ರಗಳನ್ನು ಬಣ್ಣದವೇಷವೆಂದು ಗುರುತಿಸಲಾಗಿದೆ. ತುಂಬ ಬಣ್ಣ ಹಾಕುವುದರಿಂದ  ಬಣ್ಣದ ವೇಷ ಎಂಬ ಅಭಿಪ್ರಾಯವೂ ಇದೆ. ಬಣ್ಣ ಎಂದರೆ  ವೇಷ ಎಂಬ ಅರ್ಥವೂ ಇದೆ. ಬಣ್ಣದ ಬದುಕು, ಬಣ್ಣಹಾಕು ಎಂಬಲೆಲ್ಲ ಇದೇ ಅರ್ಥ. ಹಾಗಾಗಿ ಮೂಲದಲ್ಲಿ ಯಕ್ಷಗಾನದ ಎಲ್ಲ ವೇಷಗಳಿಗೂ ಬಣ್ಣದ ವೇಷ ಎಂದು ಕರೆಯುತ್ತಿದ್ದಿರಬೇಕು ಎಂಬುದನ್ನು ಮುಳಿಯ ಮಹಾಬಲಭಟ್ಟರು ಊಹಿಸಿದ್ದಾರೆ. ಸಾಮಾನ್ಯವಾಗಿ ಹಿರಿಯ ಕಲಾವಿದರು ಬಣ್ಣದ ವೇಷವನ್ನು ಹಾಕುತ್ತಾರೆ. ಕೋಡಂಗಿ ವೇಷದಿಂದ ತೊಡಗಿದ ಸರಳ ವೇಷ ಪದ್ಧತಿಯಿಂದ ಆರಂಭವಾಗಿ ವೇಷಪದ್ಧತಿಯ ಉತ್ತುಂಗ ಸ್ಥಿತಿಯೊಂದನ್ನು ಬಣ್ಣದ ವೇಷದಲ್ಲಿ ಕಾಣಬಹುದು. ಬಣ್ಣದ ಮನೆಯಲ್ಲಿ ಎರಡು ಸಾಲುಗಳಲ್ಲಿ ಮೊದಲಸ್ಥಾನ ಬಣ್ಣದ ವೇಷಗಳಿಗೆ ಇದೆ. ಯಕ್ಷಗಾನದ ಅಸ್ತಿತ್ವವನ್ನು, ಪರಂಪರೆಯ ವೈಭವವನ್ನು ಸಾಂಸ್ಕೃತಿಕ ಕುರುಹುಗಳನ್ನು ಈ ವೇಷ ವಿಧಾನದಲ್ಲಿ ಕಾಣಬಹುದು.

ಯಕ್ಷಗಾನದ ಬಣ್ಣದವೇಷದಲ್ಲಿ ಮುಖ್ಯವಾಗಿ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ರಾವಣ, ಮಾಗಧ,  ಯಮ ಮೊದಲಾದ ರಾಜಬಣ್ಣಗಳು, ಬಕಾಸುರ, ಹಿಡಿಂಬಾಸುರ, ಸಾಲ್ವ, ಅನುಸಾಲ್ವ ಮೊದಲಾದ ಉಗ್ರರೂಪಿ ರಾಕ್ಷಸ ವೇಷಗಳು ಕಾಟುಬಣ್ಣದ ಸಾಲಿಗೆ ಸೇರುತ್ತವೆ. ರಕ್ಕಸಿಯರ ವೇಷಗಳೆಲ್ಲ ಹೆಣ್ಣು ಬಣ್ಣದ ಸಾಲಿಗೆ ಸೇರುತ್ತವೆ. ಇವಲ್ಲದೆ ರುದ್ರಭೀಮ, ಹನುಮಂತ, ವೀರಭದ್ರ, ವರಾಹ, ನರಸಿಂಹ, ಮಹಿಷಾಸುರ, ನರಕಾಸುರ, ಶುಂಭ, ಹಿರಣ್ಯಕಶ್ಯಪ ಮೊದಲಾದ ಹಸಿ ಬಣ್ಣದ ವಿಶಿಷ್ಟ ಪಾತ್ರಗಳು ಬಣ್ಣದ ವೇಷಗಳ ಸಾಲಿಗೆ ಸೇರುತ್ತವೆ.

ಬಣ್ಣದ ವೇಷಗಳಿಗೆ ತಳಪಾಯ ಬಣ್ಣ ಅಥವಾ ಮೂಲಲೇಪನ (Base makeup) ಹಚ್ಚುವ ಕ್ರಮವಿಲ್ಲ. ಕಪ್ಪು ಬಣ್ಣದಿಂದ ಗೆರೆಗಳ ವಿನ್ಯಾಸಗಳನ್ನು ಎಳೆದು ಅದರ ಮೇಲೆ ಮುಳ್ಳಿನ ಹಾಗೆ ಆಕಾರ ತಾಳುವ ಚುಟ್ಟಿಯನ್ನು ಇಡಲಾಗುತ್ತದೆ.

ಚುಟ್ಟಿ ಇಡುವುದು

ವೇಷಧಾರಿಯು ಕೇಶಾವರಿ ತಟ್ಟಿಯನ್ನು ಕಟ್ಟಲು ಆಧಾರವಾಗುವಂತೆ ದೊಡ್ಡ ಉಂಡೆಯ ಆಕಾರದಲ್ಲಿ ಚಿಟ್ಟಾಪಟ್ಟಿ(ಕಪ್ಪು ಬಟ್ಟೆ)ಯನ್ನು ಕಟ್ಟಿ ಆಮೇಲೆ ಚುಟ್ಟಿಯನ್ನಿಡಲು ಆರಂಭಿಸುತ್ತಾನೆ. ಬಣ್ಣದ ವೇಷದ ರಚನಾವಿಧಾನದಲ್ಲಿ ಮುಖವರ್ಣಿಕೆಗೆ ಪ್ರಾಧಾನ್ಯವಿದೆ. ಮುಖದಲ್ಲಿ ಎಣ್ಣೆ ಮಸಿಯಿಂದ ಎಳೆದ ಕಪ್ಪು ಗೆರೆಯ ಅಂಚಿನಲ್ಲಿ ದೀರ್ಘವಾದ ಮುಳ್ಳುಗಳಂತೆ ತೋರುವ ಚುಟ್ಟಿಯೇ ಪ್ರಧಾನವಾದ ಅಂಶ. ಬೆಳ್ತಿಗೆ ಅಕ್ಕಿಯ ಹಿಟ್ಟು ಮತ್ತು ಸುಣ್ಣದ ಮಿಶ್ರಣವನ್ನು ಚುಟ್ಟಿಗೆ ಬಳಸುತ್ತಾರೆ. ಸುಣ್ಣ ಮತ್ತು ಕಡೆದ ಅಕ್ಕಿಯ ಹಿಟ್ಟನ್ನು ೧-೨ ಅನುಪಾತದಲ್ಲಿ ಬೆರೆಸಿ ಚುಟ್ಟಿ ಇಡಲು ಉಪಯೋಗಿಸುತ್ತಾರೆ. ಚುಟ್ಟಿಗಳು ಮುರಿದು ಬೀಳದೆ ಕೊನೆಯವರೆಗೂ ಉಳಿಯಬೇಕಾದರೆ ಈ ಮೂಲವಸ್ತುವಿನ ತಯಾರಿಕೆ ಪ್ರಮಾಣ ಬದ್ಧವಾಗಿರಬೇಕು. ಅಕ್ಕಿ ಹಿಟ್ಟು ಮತ್ತು ಸುಣ್ಣವನ್ನು  ಸರಿಯಾದ ಪ್ರಮಾಣದಲ್ಲಿ ಬೆರೆಸಿ ಮಿಶ್ರಣವನ್ನು ಹದವಾಗಿ ಪೇಸ್ಟ್‌ನಂತೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಬಳಸುವ ಅಕ್ಕಿ ಹಿಟ್ಟಿನ ಮಿಶ್ರಣವು ಮೂರು, ನಾಲ್ಕು ದಿನಗಳಷ್ಟು ಹಳೆಯದಾದರೆ ಅಂಟಿನ ಪ್ರಮಾಣವು ಹೆಚ್ಚಿದ್ದು ಚುಟ್ಟಿ ಇಡಲು ಅನುಕೂಲಕರವಾಗಿರುತ್ತದೆ. ಐದು ದಿನಗಳಿಗಿಂತ ಹೆಚ್ಚಾದಲ್ಲಿ ಅಕ್ಕಿ ಹಿಟ್ಟು ದುರ್ಗಂಧ ಬೀರುವ ಪ್ರಮೇಯವಿರುತ್ತದೆ. ತೆಂಗಿನ ಗೆರಟೆಯಲ್ಲಿಯೋ ಇತರೆ ಪಾತ್ರೆಯಲ್ಲಿಯೋ ಅದನ್ನು ತೆಗೆದುಕೊಂಡು ತೆಂಗಿನ ಗರಿಯ ಕಡ್ಡಿಯಿಂದ ಮಿಶ್ರಣವನ್ನು ಅದ್ದಿ ಮುಖದ ಮೇಲೆ ಕಪ್ಪು ಗೆರೆಯ ಅಂಚಿನಲ್ಲಿ ಚಿಕ್ಕ ಚಿಕ್ಕ ಮುಳ್ಳಿನ ಆಕಾರದ ರಚನೆಯನ್ನು ಮಾಡಿಕೊಳ್ಳುತ್ತಾರೆ.  ಅದಕ್ಕೆ ಎಣ್ಣೆಪಸೆ ಸ್ವಲ್ಪವೂ ತಾಗಬಾರದು. ಈ ಕಾರಣಕ್ಕಾಗಿ ಬಣ್ಣದ ವೇಷದವನಿಗೆ ಮುಖವರ್ಣಿಕೆಯ ರೇಖೆಯನ್ನು ಬರೆಯಲು ಬೇಕಾದ ಬಣ್ಣಗಳನ್ನು ಬೇರೊಬ್ಬನು ತಯಾರಿಸುತ್ತಾನೆ. ಯಾಕೆಂದರೆ ಈ ಇತರ  ಬಣ್ಣಗಳಲ್ಲಿ ಎಣ್ಣೆಮಿಶ್ರ ವಾಗಿರುತ್ತದೆ. ಇತರ ವೇಷಗಳೆಲ್ಲ ತಮಗೆ ಬೇಕಾದ ಬಣ್ಣಗಳನ್ನು ತಾವೇ ಸಿದ್ಧಪಡಿಸಿ ಕೊಳ್ಳುತ್ತವೆ. ಬಣ್ಣದ ವೇಷಕ್ಕೆ ಮಾತ್ರ ‘ದೊಡ್ಡ ಪೆಟ್ಟಿಗೆಯವನು’ ಈ ಕೆಲಸ ಮಾಡಿ ಕೊಡಬೇಕು.

ದೊಡ್ಡ ಪೆಟ್ಟಿಗೆಯವನು ಎಂದರೆ ದೇವರ ಪೆಟ್ಟಿಗೆ ಹೊರುವವನು. ಇದು ಮೇಳದ ಪೆಟ್ಟಿಗೆಗಳಲ್ಲಿ ಮೊದಲನೆಯದು ಮತ್ತು ಪ್ರಮುಖವಾದುದು. ಇದರಲ್ಲಿ ದೇವರ ಕಿರೀಟ, ಕಾಣಿಕೆ ಡಬ್ಬಿ, ತ್ರಿಶೂಲ, ಚಕ್ರ, ಪರಶು ಮೊದಲಾದ ದೇವರ ಆಯುಧಗಳಿರುತ್ತವೆ. ಹಣ, ಲೆಕ್ಕ ಪುಸ್ತಕವೂ ಇದರಲ್ಲಿ ಇರುತ್ತದೆ. ಆಟದ ವೇಳೆಗೆ ಬಿಡಾರ ಹೂಡಿದ ಸಂದರ್ಭದಲ್ಲಿ ಸರಿಯಾದ ಸ್ಥಳದಲ್ಲಿ ಪೆಟ್ಟಿಗೆಯನ್ನು ಇಟ್ಟುಕೊಳ್ಳುವುದು ಕಲಾವಿದರ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು, ಚೌಕಿಯಲ್ಲಿ ದೀಪ ಉರಿಸುವುದು, ಬಣ್ಣಗಳ ಪೂರೈಕೆ, ವೇಷ ಕಟ್ಟುವವರಿಗೆ ನೆರವಾಗುವುದು ಇತ್ಯಾದಿ ಮುಖ್ಯ ಕೆಲಸಗಳು ಇವನ ಪಾಲಿನದು.

ಚುಟ್ಟಿಯನ್ನಿಡಲು ತೆಂಗಿನಗರಿಯ ಕಡ್ಡಿಗಳನ್ನು ಬಳಸುತ್ತಾರೆ. ಇದಕ್ಕೆ ಫಲಬಿಟ್ಟ ತೆಂಗಿನಮರದ ಕಡ್ಡಿಯೇ ಆಗಬೇಕೆಂದು ವೇಷಧಾರಿಗಳು ಹೇಳುವುದುಂಟು. ಫಲಬಿಡದ ತೆಂಗಿನಮರದ ಗರಿಯ ಕಡ್ಡಿಯಲ್ಲಿ ಧಾರೆಗಳಿರುತ್ತವೆ. ಆದರೆ ಫಲಕೊಡುವ ಮರದ ಕಡ್ಡಿಯು ಮೈತುಂಬಿಕೊಂಡು ಉರುಟಾಗಿರುತ್ತದೆ. ಕಡ್ಡಿಯ ತುದಿಯನ್ನು ಬೆಂಕಿಯಿಂದ ಉರಿಸಿ ಉರುಟಾಗಿ ರೂಪಿಸಿದ ಬಳಿಕ ಕುಂಚವಾಗಿ ಬಳಸಲಾಗುತ್ತದೆ. ಈ ಕಡ್ಡಿಗಳಿಂದ ಹಾಕುವ ಚುಟ್ಟಿಯ ಬೊಟ್ಟುಗಳು ವರ್ತುಲಾಕಾರವಾಗಿದ್ದು, ನೇರವಾಗಿರುತ್ತವೆ. ಬಿಂದು ಬಿಂದುಗಳಾಗಿ ಇರಿಸುತ್ತಾ ಆವರ್ತನವಾಗಿ ಚುಟ್ಟಿಗಳನ್ನು ಬೆಳೆಸುತ್ತಾ ಹೋಗುತ್ತಾರೆ. ಇದರಿಂದ ಮುಖಕ್ಕೆ ಅಮಾನುಷತೆಯೂ, ವಿಲಕ್ಷಣವಾದ ವೈಶಾಲ್ಯವೂ ಒದಗುತ್ತವೆ. ಒಣಗಲು ಕಾಲಾವಕಾಶ ವಿದ್ದರೆ, ಒಂದೆರಡು ಇಂಚುಗಳಷ್ಟು ಚುಟ್ಟಿಗಳನ್ನು ಬೆಳೆಸುತ್ತಾರೆ.

ಎಲ್ಲಾ ಬಣ್ಣದ ವೇಷಗಳಿಗೂ ಚುಟ್ಟಿಯ ವಿನ್ಯಾಸ ಒಂದೇ ತೆರನಾಗಿಲ್ಲ. ಆಯಾ ಪಾತ್ರ ಗಳಿಗೆ  ನಿರ್ದಿಷ್ಟವಾದ ವಿನ್ಯಾಸಗಳಿರುತ್ತವೆ. ಚುಟ್ಟಿಯ ವಿನ್ಯಾಸಕ್ಕೆ ಸರಿಯಾಗಿ ಅದರ ಒಳಬದಿಯಲ್ಲಿ ನಿಲ್ಲುವಂತೆ ಮೊದಲು ಎಣ್ಣೆಮಸಿಯ ರೇಖೆಯನ್ನು ವೇಷಧಾರಿ ಎಳೆಯುತ್ತಾನೆ. ಮೂಗಿನ ಎರಡೂ ಬದಿಗಳಲ್ಲಿ, ಮೀಸೆ ನಿಲ್ಲುವ ಸ್ಥಳದ ಮೇಲ್ಭಾಗದಲ್ಲಿ, ಅಡ್ಡವಾಗಿ ಕಿವಿಗಳ ಕೆಳಭಾಗದ ಸಮೀಪದವರೆಗೆ, ಅಲ್ಲಿಂದ ಮೇಲಕ್ಕೆ ಹಣೆಯ ಇಕ್ಕೆಲಗಳಲ್ಲಿ ಕೊನೆಯತನಕ, ಹಾಗೆಯೇ ಮೀಸೆಯ ಕೆಳಭಾಗದಲ್ಲಿ ಗಡ್ಡದ ಅಂಚಿನ ರೇಖೆಗೆ ಸರಿಯಾಗಿ ಈ ಕರಿಗೆರೆ ವಿಸ್ತರಿಸುತ್ತದೆ. ಇದು ಒಂದು ಮಾದರಿಯಾಗಿದೆ. ಎಲ್ಲ ಬಣ್ಣದ ವೇಷಗಳಿಗೂ ಒಂದೇ ರೀತಿಯ ಮಾದರಿಗಳು ಇರುವುದಿಲ್ಲ. ಹಣೆ ಹಾಗೂ ಕಣ್ಣಿನ ಸಮೀಪದಲ್ಲಿ ಬರೆಯುವ ಚುಟ್ಟಿಯ ವಿನ್ಯಾಸಗಳು ಪಾತ್ರವನ್ನು ಹೊಂದಿಕೊಂಡು ಬೇರೆ ಬೇರೆಯಾಗಿರುತ್ತವೆ.

ವೇಷಧಾರಿಯು ಮುಂದೆ ಇರಿಸಿದ ಚುಟ್ಟಿಯ ಹಿಟ್ಟಿಗೆ ಕಡ್ಡಿಯನ್ನು ಮುಳುಗಿಸಿ, ಕಡ್ಡಿಯ ತುದಿಯಿಂದ ಎಣ್ಣೆಮಸಿಯ ರೇಖೆಯ ಹೊರ ಅಂಚಿನಲ್ಲಿ ಒಂದೊಂದೇ ಬೊಟ್ಟುಗಳನ್ನು ಇಡುತ್ತಾನೆ. ಹೀಗೆ ಒಂದು ಸುತ್ತು ಬರುವ ಹೊತ್ತಿನಲ್ಲಿ ಮೊದಲಿನ ಬಿಂದುಗಳು ಒಣಗಿ ಗಟ್ಟಿಯಾಗುತ್ತವೆ. ಹಾಗೆ ಒಣಗಿದ ಮೇಲೆ ಅವುಗಳ ಮೇಲೆ ಪುನಃ ಬಿಂದುಗಳನ್ನು ಇಡಬೇಕು. ಈ ಬಿಂದುಗಳು ಒಣಗಲು ಸಾಕಷ್ಟು ಅವಕಾಶವನ್ನು ಒದಗಿಸುವುದಕ್ಕಾಗಿ ಕಣ್ಣಿನ ಸುತ್ತಲೂ ಹಾಗೂ ಮುಖದ ಮೇಲೆ ಇತರ ರೇಖೆಗಳನ್ನು ಬರೆಯಲು ಸಮಯವನ್ನು ಉಪಯೋಗಿ ಸುತ್ತಾರೆ. ಚುಟ್ಟಿಯ ಮುಳ್ಳುಗಳು ಸುಮಾರು ಒಂದು ಇಂಚಿನಷ್ಟು ದೀರ್ಘವಾಗಿ ಬೆಳೆಯುವಷ್ಟರಲ್ಲಿ ರೇಖೆಗಳ ಕೆಲಸವೆಲ್ಲ ಮುಗಿದಿರುತ್ತವೆ. ಇಷ್ಟು ಕೆಲಸಕ್ಕೆ ಎಷ್ಟೆಂದರೂ ಎರಡು ತಾಸು ಸಮಯ ಬೇಕಾಗಿರುತ್ತದೆ. ಬೆಳಗಿನ ಜಾವದಲ್ಲಿ ಬರುವ ಮೈರಾವಣನಂತಹ ಪಾತ್ರಗಳಿಗೆ ಎರಡು, ಮೂರು ಇಂಚುಗಳಷ್ಟು ಉದ್ದದವರೆಗೂ ಚುಟ್ಟಿಗಳನ್ನು ಬೆಳೆಸುವುದಿದೆ. ಕೆಲವರು ಚುಟ್ಟಿಯ ಮಿಶ್ರಣದೊಡನೆ ಹಸಿರು, ಕೆಂಪು ಬಣ್ಣಗಳನ್ನು ಸೇರಿಸಿ ಬಿಳಿ, ಹಸಿರು, ಕೆಂಪು ಹೀಗೆ ಮೂರು ಬಣ್ಣಗಳ ಚುಟ್ಟಿಗಳನ್ನು ಒಂದರ ಹಿಂದೆ ಒಂದರಂತೆ ಇರಿಸುವುದೂ ಉಂಟು. ಇನ್ನು ಕೆಲವೊಮ್ಮೆ ಚುಟ್ಟಿಗಳ ಕೊನೆಯಲ್ಲಿ ಕವಲುಗಳನ್ನು ಮೂಡಿಸಿ ‘ಕವಲು ಚುಟ್ಟಿ’ ಇರಿಸುವುದೂ ಇದೆ.

ಬಣ್ಣದ ವೇಷದ ಮುಖವರ್ಣಿಕೆ ಪೂರ್ಣಗೊಳ್ಳಬೇಕಾದರೆ ಮೂಗಿನ ತುದಿಯಲ್ಲಿ ದೊಡ್ಡದಾದ ಒಂದು ಹತ್ತಿಯ ಉಂಡೆಯನ್ನು ಅಂಟಿಸಬೇಕು. ಇದು  ಸಾಮಾನ್ಯವಾಗಿ ಕೋಳಿ ಮೊಟ್ಟೆಯ ಗಾತ್ರದ್ದಾಗಿರುತ್ತದೆ. ಇದಕ್ಕೆ ನಾಸಿಕ ಪುಷ್ಟ ಎಂದು ಹೆಸರು. ರಾವಣನಿಗೆ ಹಣೆಯ ಮೇಲೆ ಮೂರು ಹತ್ತಿಯ ಉಂಡೆಗಳನ್ನಿಡುವುದು ಕ್ರಮ. ಹಣೆಯ ಮೇಲೆ ಇಡುವ ಹತ್ತಿಯ ಉಂಡೆಗೆ ‘ಲಲಾಟ ಪುಷ್ಪ’ ಎಂದು ಹೆಸರು. ಹಣೆಯ ಎರಡೂ ಅಂಚುಗಳಲ್ಲಿ ಇರಿಸುವ ಹತ್ತಿಯ ಉಂಡೆಗಳಿಗೆ ‘ಕರ್ಣಪುಷ್ಪ’ಗಳೆಂದು ಹೆಸರು.

ಬಣ್ಣದ ವೇಷಗಳಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಚುಟ್ಟಿಯ ವಿನ್ಯಾಸ ವಿರುತ್ತದೆ. ಇವುಗಳಲ್ಲಿ ಸುಮಾರು ಹತ್ತು, ಹದಿನೈದು ಬಗೆಯ ವಿನ್ಯಾಸಗಳನ್ನು ಗುರುತಿಸಬಹುದೆಂದು ವಿದ್ವಾಂಸರು ಹೇಳುತ್ತಾರೆ. ಈಗ ಅವುಗಳಲ್ಲಿ ಕೆಲವು ಮಾತ್ರ ಕಾಣಿಸುತ್ತವೆ.

ಚುಟ್ಟಿಯ ಮುಳ್ಳುಗಳಲ್ಲಿ ಹಲವು ಪ್ರಭೇದಗಳಿವೆ. ಕವಲು ಚುಟ್ಟಿ, ಕಮಾನುಚುಟ್ಟಿ, ಪಂಚವರ್ಣ ಚುಟ್ಟಿ ಎಂಬತ್ಯಾದಿ ಹೆಸರುಗಳಿಂದ ಅವುಗಳನ್ನು ಗುರುತಿಸಲಾಗುತ್ತದೆ. ಒಂದು ಚುಟ್ಟಿ ಮುಳ್ಳಿನ ಮೇಲೆ ಇನ್ನೊಂದು ಚುಟ್ಟಿ ಇಟ್ಟು ಕವಲುಗಳಾಗಿ ಕಾಣುವಂತೆ ಇಡುವ ಚುಟ್ಟಿಯನ್ನು ಕವಲು ಚುಟ್ಟಿ ಎಂದು  ಕರೆಯಲಾಗುತ್ತದೆ. ಕಮಾನು ಚುಟ್ಟಿ ಎಂದರೆ ಚುಟ್ಟಿಯ ಮುಳ್ಳುಗಳನ್ನು ಒಂದಕ್ಕೊಂದು ಕಮಾನಿನಂತೆ ಜೋಡಿಸುವುದು, ಚುಟ್ಟಿಯ ಮುಳ್ಳುಗಳಿಗೆ ಕಪ್ಪು, ಕೆಂಪು, ಹಳದಿ, ಹಸಿರು ಬಣ್ಣಗಳನ್ನು ಹಚ್ಚುವುದು, ನಡು ನಡುವೆ ಬಣ್ಣ ಹಚ್ಚದೆ ಉಳಿದ ಚುಟ್ಟಿಯು ಮೂಲ ಬಣ್ಣವನ್ನೇ ಉಳಿಸಿಕೊಳ್ಳಲಾಗುತ್ತದೆ. ಹೀಗೆ ಐದು ಬಣ್ಣಗಳಿಂದ ಚುಟ್ಟಿ ಇಡುವ ಕ್ರಮಕ್ಕೆ ಪಂಚವರ್ಣ ಚುಟ್ಟಿ ಎಂದು ಹೆಸರು.

ಸಾಂಪ್ರದಾಯಕವಾಗಿ ತೆಂಕುತಿಟ್ಟಿನಲ್ಲಿ ಚುಟ್ಟಿಯು ಬಣ್ಣದ ವೇಷಕ್ಕೆ ಮಾತ್ರ ಸೀಮಿತ ವಾಗಿರಲಿಲ್ಲ. ಪುಂಡುವೇಷ, ರಾಜ ವೇಷಗಳೂ, ಸ್ತ್ರೀವೇಷಗಳ ಚುಟ್ಟಿಯ ಮುತ್ತರಿಗಳನ್ನು ಇಡುತ್ತಿದ್ದುವು. ಹಣೆಗೆ ಒಂದು ಬಿಳಿ ಚುಕ್ಕಿ ಇಟ್ಟು ಬಣ್ಣಗಾರಿಕೆ ಮಾಡುವುದು ಸಂಪ್ರದಾಯ. ಚುಟ್ಟಿ ಇಲ್ಲದ ವೇಷ ಇಲ್ಲ ಎಂಬುದು ಹಳೆಯ ಹೇಳಿಕೆ. ಆದರೆ ಈಗ ಚುಟ್ಟಿ ಎಂದರೆ ಬಣ್ಣದ ವೇಷಕ್ಕೆ ಮಾತ್ರ ಸೀಮಿತವಾಗಿದೆ. ಈ ಬಗೆಯ ಬಣ್ಣಗಾರಿಕೆಗೆ ಮತ್ತು ಅದಕ್ಕೆ ಬಳಸುವ ಪರಿಕರಕ್ಕೆ ಕಥಕಳಿ ಸಂಪ್ರದಾಯದಲ್ಲೂ ಚುಟ್ಟಿ ಎಂದೇ ಕರೆಯಲಾಗುತ್ತದೆ. ಕಥಕಳಿ ಕಲಾವಿದನಿಗೆ ಪರ‍್ಯಾಯವಾಗಿ ಚುಟ್ಟಿ ಕಲಾವಿದನೆಂದೇ ಹೆಸರು. ಚುಟ್ಟಿ ಇಡುವ ಕೆಲಸ ಅತ್ಯಂತ ಶ್ರಮದಾಯಕವಾದುದು, ಇದಕ್ಕೆ ವಿಶೇಷ, ತಾಳ್ಮೆ, ಶ್ರದ್ಧೆ ಅಗತ್ಯ. ಈ ವೇಷದ ಮುಖವರ್ಣಿಕೆಯು ರೂಪುಗೊಳ್ಳಲು ಹಲವು ಗಂಟೆಗಳ ಅವಧಿಯು ಬೇಕು. ಈಗ ಚುಟ್ಟಿಯ ಆಕಾರದಲ್ಲಿ ತಯಾರಿಸಿಟ್ಟ ಸಿದ್ಧ ವಸ್ತುಗಳನ್ನು ಬಳಸಲಾಗುತ್ತದೆ. ಹಾಳೆ, ತಗಡು, ಕಾಗದ, ನವಿಲುಗರಿ, ಥರ್ಮೋಕೋಲ್ ಮೊದಲಾದವುಗಳನ್ನು  ಸಹ ಬಳಸುವುದಿದೆ.

ಬಣ್ಣದ ವೇಷಗಳ ರಚನೆಯ ಹಿಂದೆ ಕಲಾವಿದರ ಕಲ್ಪನೆಯ ಸೃಷ್ಟಿ ಹೇರಳವಾಗಿದೆ. ರಂಗಸ್ಥಳಕ್ಕೆ ವೇಷವು ಪ್ರವೇಶಿಸಿದೊಡನೆ ಅಂದರೆ ತೆರೆಯ ಹಿಂದೆ ನಿಂತುಕೊಂಡಾಗ ವೇಷದ ಗಾತ್ರವೇ ನೋಡುಗರ ಗಮನ ಸೆಳೆಯುತ್ತದೆ. ರಾಕ್ಷಸ ಎಂಬ ಪದವೇ ಸೂಚಿಸುವಂತೆ ದೇಹದ ಗಾತ್ರವು ದೊಡ್ಡದಾಗಿರುತ್ತದೆ. ಈ ಕಲ್ಪನೆಯನ್ನು ಮೂರ್ತರೂಪಗೊಳಿಸುವಂತೆ ಬಣ್ಣದ ವೇಷಗಳು ಯಕ್ಷಗಾನದಲ್ಲಿ ರೂಪುಗೊಂಡಿವೆ. ಅವುಗಳ ಸ್ವಭಾವ ಕ್ರೂರ, ಉದ್ಧಟ ಹಾಗೂ ಕಠೋರ ಎಂದು ಮುಖವರ್ಣಿಕೆಯಲ್ಲಿ ಕೂಡಾ ತೋರಿಸುತ್ತಿರುತ್ತವೆ. ಮುಖದ ಅಂಚಿನಲ್ಲಿ ಇರಿಸುವ ಚುಟ್ಟಿ ಮುಳ್ಳು ಮುಖವನ್ನು ಹಿಗ್ಗಿಸಿದಂತೆ ತೋರಿಸುತ್ತದೆ. ದೊಡ್ಡ ಗೆರಸೆಯಂತಹ ಕಿರೀಟವು ದೇಹದ ಗಾತ್ರವನ್ನು ವಿಸ್ತರಿಸುತ್ತದೆ. ದೊಡ್ಡ ಬೀಸಣಿಗೆಗಳಂತಹ ‘ಆಲವಟ್ಟ’ಗಳು ಕೊರಳಿನ ಹಿಂಭಾಗದಲ್ಲಿ ಗಾತ್ರವನ್ನು ವಿಸ್ತರಿಸುತ್ತವೆ. ಭುಜಕೀರ್ತಿ ಎಂಬ ದಂಬೆಯಂತಹ ಬೃಹತ್ ಗಾತ್ರದ ಭುಜಕಟ್ಟು ಭುಜದ ಗಾತ್ರವನ್ನು ಹೆಚ್ಚಿಸುತ್ತದೆ. ಇತ್ಯಾದಿ ಪರಿಕರಗಳೆಲ್ಲ ಇತರ ವೇಷಗಳಿಗಿಂತ ಬಣ್ಣದ ವೇಷವು ದೊಡ್ಡದು ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಬಣ್ಣದ ವೇಷಗಳನ್ನು ಇತರ ರಾಜ ವೇಷಗಳಿಂದ ಬೇರೆ ಮಾಡುವಲ್ಲಿ ಬಹಳ ಮುಖ್ಯವಾಗಿ ಚುಟ್ಟಿ, ಭುಜ ದಂಬೆ, ಆಲವಟ್ಟ ಮತ್ತು ಕಿರೀಟದ ಆಕಾರಗಳನ್ನು ಹೆಸರಿಸಬಹುದು. ಇವುಗಳನ್ನು ಬಿಟ್ಟರೆ ಹೇಳಿಕೊಳ್ಳುವಂತಹ ವ್ಯತ್ಯಾಸವೇನೂ ಇಲ್ಲ. ಇತರ ವೇಷಗಳು ಭುಜಮುಳ್ಳು ಅಥವಾ ಭುಜಕೀರ್ತಿ ಎಂಬ ಆಭರಣವನ್ನು ಧರಿಸುತ್ತವೆ. ಬಡಗುತಿಟ್ಟಿನಲ್ಲಿ ಈಗಲೂ ಭುಜಮುಳ್ಳನ್ನೇ ತೊಟ್ಟುಕೊಳ್ಳುವ ಪದ್ಧತಿ ಇದೆ. ತೆಂಕುತಿಟ್ಟಿನಲ್ಲಿ ಭುಜಕೀರ್ತಿಯ ಸ್ವರೂಪ ಬದಲಾಗಿದೆ. ಭುಜಕೀರ್ತಿಯ ಒಳಗೆ ಮುಳ್ಳುಗಳಂತಹ ಬೇಗಡೆ ಹಚ್ಚಿದ ಮರದ ತುಂಡುಗಳೂ ಇವೆ. ಇತ್ತೀಚೆಗೆ ಹಗುರವಾಗಿಸುವ ದೃಷ್ಟಿಯಿಂದ ಪ್ಲಾಸ್ಟಿಕ್ ಬುಶ್‌ಗಳನ್ನು ಸಹ ಬಳಸಿದ್ದಾರೆ. ಬಣ್ಣದ ವೇಷವು ದಂಬೆ ಎಂಬ ಆಭರಣವನ್ನು ತೊಟ್ಟುಕೊಳ್ಳುತ್ತದೆ. ಇದರಿಂದ ಭುಜಮಂಡಲವು ವಿಸ್ತಾರವಾಗಿ ತೋರುತ್ತದೆ. ಕಿವಿಯ ಮುಂಭಾಗದಲ್ಲಿ ವೃತ್ತಾಕಾರದ ಓಲೆಗಳನ್ನು ತೊಟ್ಟುಕೊಳ್ಳತ್ತವೆ. ಬಣ್ಣದ ವೇಷಗಳಿಗೆ ಕೆನ್ನೆಪೂಗಳನ್ನು ಬಳಸುವ ಕ್ರಮಗಳಿಲ್ಲ. ಕೆಲವೊಮ್ಮೆ ಅನುಕೂಲಕ್ಕಾಗಿ ಕೆನ್ನೆಪೂಗಳನ್ನು ತೊಟ್ಟುಕೊಳ್ಳುವುದೂ ಇದೆ.

ಬಣ್ಣದ ವೇಷದ ಮುಖವರ್ಣಿಕೆ

ಬಣ್ಣದ ವೇಷಗಳಲ್ಲಿ ಮುಖ್ಯವಾಗಿ ರಾಕ್ಷಸ ಪಾತ್ರಗಳು ಎದ್ದು ಕಾಣುವವುಗಳಾಗಿವೆ. ಆದರೂ ರಾಕ್ಷಸ ಕುಲಕ್ಕೆ ಹೊರತಾದ ಪಾತ್ರಗಳು ತಮ್ಮ ಗುಣ ಸ್ವಭಾವಗಳಿಂದಾಗಿ ಬಣ್ಣದ ವೇಷದ ಮೂಲಕ ಪ್ರಕಟಗೊಂಡಿದೆ. ಕಂಸ, ಜರಾಸಂಧ, ಅನುಸಾಲ್ವ ಮೊದಲಾದವರು ಕ್ಷತ್ರಿಯರಾಗಿದ್ದರೂ ತಮ್ಮ ಧೀರೋದ್ಧತ ಸ್ವಭಾವದಿಂದಾಗಿ ಬಣ್ಣದ ವೇಷದ ಮಾಧ್ಯಮ ದಲ್ಲಿ ಪ್ರಕಟಗೊಳ್ಳುತ್ತಾರೆ. ಕಪಿರಾಜನಾದ ವಾಲಿ, ವರಾಹ, ನರಸಿಂಹ, ವೀರಭದ್ರ ಮೊದಲಾದ ಪಾತ್ರಗಳನ್ನೂ ಬಣ್ಣದ ವೇಷಗಳಲ್ಲಿ ಚಿತ್ರಿಸುತ್ತಾರೆ. ಉಗ್ರ ತಾಮಸ ಪ್ರವೃತ್ತಿಯ ರಾಕ್ಷಸ ಸ್ತ್ರೀಯರ ಭೂಮಿಕೆಗಳನ್ನು ಹೆಣ್ಣುಬಣ್ಣ ಎಂಬ ಪಾರಿಭಾಷಿಕ ಪದದಿಂದ ಕರೆಯುತ್ತಾರೆ. ತೆಂಕುತಿಟ್ಟಿನ ಬಣ್ಣದ ವೇಷಗಳಲ್ಲಿ ಹತ್ತು ಹದಿನೈದು ಬಣ್ಣದ ಬರವಣಿಗೆಯ ರೀತಿಗಳಿತ್ತೆಂದು ತಿಳಿದು ಬರುತ್ತದೆ. ಬಣ್ಣದ ವೇಷಗಳನ್ನು ಸ್ಧೂಲವಾಗಿ ರಾಜಬಣ್ಣ ಮತ್ತು ಕಾಟುಬಣ್ಣ ಎಂದು ವಿಭಾಗಿಸಬಹುದು.

ಸರಿಯಾದ ಹಿನ್ನೆಲೆ, ಪ್ರತಿಷ್ಠೆಗಳಿರುವ ಪ್ರಸಿದ್ಧ ರಾಕ್ಷಸಪಾತ್ರಗಳಿಗೆ ರಾಜ ಬಣ್ಣ ಎಂದೂ, ಅಷ್ಟೊಂದು ಸಂಸ್ಕಾರವಿಲ್ಲದೆ ಹೆಚ್ಚಾಗಿ ಕಾಡು-ಮೇಡುಗಳಲ್ಲಿ ತಿರುಗಾಡುವ ಪಾತ್ರಗಳಿಗೆ ಕಾಟುಬಣ್ಣಗಳೆಂದೂ  ಗುರುತಿಸಲಾಗಿದೆ. ಮೊದಲನೆಯ ವರ್ಗಕ್ಕೆ ರಾವಣ, ಶುಂಭಾಸುರ, ಬಾಣಾಸುರ, ಮೈರಾವಣ, ತಾರಕಾಸುರ, ನರಕಾಸುರ, ಶೂರಪದ್ಮ, ಹಿರಣ್ಯಕಶಿಪು ಮೊದಲಾದ ವೇಷಗಳೂ, ಎರಡನೆಯದು ಹಿಡಿಂಬಾಸುರ, ಬಕಾಸುರ, ಕೆಮ್ಮೀರ, ಮೊದಲಾದ ವೇಷಗಳೂ ಉದಾಹರಣೆಗಳಾಗುತ್ತವೆ ಎಂಬುದನ್ನೂ ಈಗಾಗಲೇ ಹೇಳಲಾಗಿದೆ. ರಾಜಬಣ್ಣದಲ್ಲಿಯೇ ತಾರಕಾಸುರ, ನರಕಾಸುರ ಇತ್ಯಾದಿ ವೇಷಗಳನ್ನು ಘೋರಬಣ್ಣ ಎಂದು ಕರೆಯುವುದೂ ಇದೆ. ಬಣ್ಣದ ವೇಷಗಳಿಗೆ ಕೆಂಪು, ಕಪ್ಪು, ಹಸಿರು, ಬಿಳಿ ಮತ್ತು ಹಳದಿ ಬಣ್ಣಗಳನ್ನು ಬಳಸುತ್ತಾರೆ.

ಬಣ್ಣದ ವೇಷದ ಸೌಂದರ್ಯ, ಸೊಗಸುಗಾರಿಕೆ ಇತರ ಎಲ್ಲಾ ವೇಷಗಳಿಗಿಂತಲೂ ಹೆಚ್ಚು. ಈ ಪಾತ್ರಗಳ ರಾಕ್ಷಸತ್ವವನ್ನು ಗುರುತಿಸುವಲ್ಲಿ ಅದರ ಮುಖವರ್ಣಿಕೆಯ ವಿನ್ಯಾಸ ಅದ್ವಿತೀಯವಾದದ್ದು. ಕಲಾವಿದರು ಅಮೂರ್ತ ಕಲ್ಪನೆಯಿಂದ ಪಾತ್ರಗಳಿಗೆ ಮೂರ್ತ ಸ್ವರೂಪವನ್ನು ಕೊಡುವಲ್ಲಿ ಮುಖದ ಬರವಣಿಗೆ, ಆಕಾರ, ವರ್ಣವಿನ್ಯಾಸ ಇವುಗಳ ಕಲಾತ್ಮಕವಾದ ಸಂಯೋಜನೆ ಇಲ್ಲಿನ ಹೆಗ್ಗಳಿಕೆ.

ಬಣ್ಣದ ವೇಷದ ಮುಖವರ್ಣಿಕೆಗೆ ಮೂಲಲೇಪನ ಇಲ್ಲ. ನೇರವಾಗಿ ಕಡ್ಡಿಗಳಿಂದ ವರ್ಣಲೇಪನ ಮಾಡಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ಚುಕ್ಕಿಗಳ ವಿನ್ಯಾಸಗಳಿರುತ್ತವೆ. ಸುಮಾರು ಮೂರರಿಂದ ಐದು ತಾಸುಗಳ ಅವಧಿಯಲ್ಲಿ ಬಣ್ಣದ ಪೂರ್ಣವೇಷ ಚೌಕಿಯಲ್ಲಿ ಸಿದ್ಧ ಗೊಳ್ಳುತ್ತದೆ. ಹೀಗೆ ಸಿದ್ಧಗೊಂಡ ಬಣ್ಣದ ವೇಷಕ್ಕೆ ರಂಗಸ್ಥಳದಲ್ಲಿ ಅಭಿನಯಿಸಲು ಅವಧಿ ಬಹಳ ಕಡಿಮೆ ಇರುತ್ತದೆ. ಇದಕ್ಕೆ ಪ್ರಸಂಗವೂ ಒಂದು ಕಾರಣವಾಗಿದೆ. ಪ್ರಸಂಗದಲ್ಲಿ ಬಣ್ಣದ ವೇಷ ಪ್ರಧಾನವಾಗಿದ್ದಲ್ಲಿ ಮಾತ್ರ ಹೆಚ್ಚಿನ ಅವಧಿಯ ಕೆಲಸವಿರುತ್ತದೆ. ಕೆಲವೊಮ್ಮೆ ಅರ್ಧತಾಸಿನಿಂದ ಒಂದು ತಾಸಿನ ಅವಧಿಯದೂ ಆಗಿರುತ್ತದೆ. ಆದರೂ ಈ ಕಡಿಮೆ ಅವಧಿಯಲ್ಲಿ ಬಣ್ಣದ ವೇಷಗಳು ಪ್ರೇಕ್ಷಕರ ಮನಸ್ಸಿನ ಮೇಲೆ ಅಪಾರವಾದ ಪ್ರಭಾವವನ್ನು ಬೀರುತ್ತವೆ.

ರಾಜ ಬಣ್ಣ

ರಾವಣ, ಜರಾಸಂಧ, ಯಮ, ಶುಂಭ ಮೊದಲಾದ ಪಾತ್ರಗಳ ಬಣ್ಣಗಾರಿಕೆಯನ್ನು ಮುಖ್ಯ ಬಣ್ಣವಾಗಿ ಗುರುತಿಸುವುದಿದೆ. ರಾಜ ಪಾತ್ರಗಳಾದುದರಿಂದ ಇವುಗಳಿಗೆ ರಾಜ ಬಣ್ಣಗಳೆಂದೂ ಹೇಳುವುದಿದೆ. ‘’ ಈ ತೆರನ ಆಕಾರದ ಸುಳಿಗಳು ಹಣೆಯ ಮೇಲ್ಭಾಗದಲ್ಲಿ ಬರೆಯುವುದು ಇವುಗಳ ವೈಶಿಷ್ಟ್ಯ. ಸಾಮಾನ್ಯವಾಗಿ ರಾಜ ಬಣ್ಣದ ಚುಟ್ಟಿಗಳು ಒಂದನ್ನೊಂದು ಪರಸ್ಪರ ಸಂಧಿಸುವುದಿಲ್ಲ. ಸುಳಿಗಳನ್ನೂ ಆಧರಿಸಿ ವೇಷಗಳಿಗೆ ಅನುಗುಣ ವಾಗಿ ಅವುಗಳನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತದೆ. ಸರ್ಪಸುಳಿ, ಅಂಗದನಸುಳಿ, ಯಮನಸುಳಿ, ಚೇಳಿನಸುಳಿ, ಮೊಲದಸುಳಿ, ಏಕಸುಳಿ, ದ್ವಿಸುಳಿ, ತ್ರಿಸುಳಿ ಹೀಗೆ ಅನೇಕ ಪ್ರಕಾರಗಳಿವೆ. ಹೀಗೆ ಸುಮಾರು ಹದಿನೈದು ಬಗೆಯ ವೇಷವಿಧಾನಗಳಿವೆ.

ರಾಜ ಬಣ್ಣಗಳಲ್ಲಿ ಕೆಲವು ವೇಷಗಳಿಗೆ ನಿಗದಿತ ಸುಳಿಗಳಿರಬೇಕೆಂಬ ನಿರ್ಬಂಧವಿದೆ. ಮುಖದ ಮೇಲೆ ಬರೆಯ ಬೇಕಾದ ರೇಖಾ ವಿನ್ಯಾಸದ ಪೂರ್ವದಲ್ಲಿ ಹಳದಿ ಬಣ್ಣದಿಂದ ಬಾಹ್ಯ ರೇಖೆಯನ್ನು ಬರೆಯುವುದು ಪದ್ಧತಿ. ಆನಂತರ ಬರೆದುಕೊಳ್ಳುವ ಕಾಡಿಗೆಯು ಹರಡದಂತೆ ತಡೆಯುವಲ್ಲಿ ಹಳದಿ ಬಣ್ಣದ ಬಾಹ್ಯ ರೇಖೆಯು ಶಕ್ತವಾಗುತ್ತದೆ. ರಾಳದ ಪುಡಿಯನ್ನು ಬೆರೆಸಿ ಬಣ್ಣ ಹಚ್ಚುವುದಿದೆ. ಅಂಟಿನ ಗುಣವಿರುವ ರಾಳವು ಬಣ್ಣ ಹರಡುವುದನ್ನು ತಡೆಗಟ್ಟುವ ಸೂಕ್ಷ್ಮ ಗುಣವನ್ನು ಹೊಂದಿದೆ. ಈ ಹಳದಿ ಬಾಹ್ಯರೇಖೆಗೆ ಸಮೀಪದಲ್ಲಿ ತಾಗಿಕೊಂಡಂತೆ ಚುಟ್ಟಿಗಳನ್ನು ಇಡಲಾಗುತ್ತದೆ. ಚುಟ್ಟಿಗಳು ಮುಖದ ಮೇಲೆ ಗಟ್ಟಿಯಾಗಿ ನಿಲ್ಲಲು ಸ್ಪೀರಿಟ್ ಗಮ್‌ನ ಲೇಪನವನ್ನು ಕೆಲವೊಮ್ಮೆ ಮಾಡಿಕೊಳ್ಳುವುದಿದೆ.

ಹೀಗೆ ರೇಖೆಗಳ ಸುತ್ತ ಮುಳ್ಳಿನ ಆಕೃತಿಗಳನ್ನು ರಚಿಸಿದ ಬಳಿಕ ಅವು ಒಣಗುವವರೆಗೆ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಈ ವೇಳೆಗೆ ಹಳದಿಯ ಸಮೀಪದಲ್ಲಿ ಕಪ್ಪು ಮತ್ತು ಕೆಂಪು ಬಣ್ಣವನ್ನು ಲೇಪಿಸಿಕೊಳ್ಳಲಾಗುತ್ತದೆ. ಇಷ್ಟರಲ್ಲಿ ಮೊದಲು ಇಟ್ಟ ಚುಟ್ಟಿಯು ಸ್ವಲ್ಪ ಒಣಗಿದ್ದು ಮತ್ತೆ ಅದರ ಮೇಲೆ ಎರಡನೇ ಸುತ್ತಿನ ಚುಟ್ಟಿಯನ್ನು ಹಚ್ಚಿಕೊಳ್ಳುತ್ತಾರೆ. ಎರಡನೇ ಸುತ್ತಿನಲ್ಲಿ ಹಚ್ಚಿಕೊಳ್ಳುವ ಮಿಶ್ರಣಕ್ಕೆ ಸುಣ್ಣದ ಪ್ರಮಾಣವನ್ನು ಸ್ವಲ್ಪ ಅಧಿಕಗೊಳಿಸಲಾಗುತ್ತದೆ. ಹೀಗೆ ಮತ್ತೆ ಮತ್ತೆ ಮೂರೋ, ನಾಲ್ಕು ಬಾರಿ ಚುಟ್ಟಿ ಇಟ್ಟು ಕೊಂಡಾಗ, ಒಂದರಿಂದ ಒಂದೂವರೆ ಇಂಚಿನಷ್ಟು ಉದ್ದದ ಮುಳ್ಳಿನ ಆಕಾರಗಳನ್ನು ಚುಟ್ಟಿಯ ಮೂಲಕ ರೂಪಿಸಲಾಗುತ್ತದೆ. ಮುಖದ ಬಣ್ಣ ಹೆಚ್ಚು ಪ್ರಖರವಾಗಿ ಕಾಣಲು ಮೊದಲು ಹಚ್ಚಿದ ಬಣ್ಣದ ಮೇಲೆ ಮತ್ತೊಮ್ಮೆ ಹಚ್ಚಿಕೊಳ್ಳುವುದೂ ಇದೆ. ಕೊನೆಗೆ ಹತ್ತಿಯ ಉಂಡೆಗಳನ್ನು ಮಾಡಿ ಅವುಗಳನ್ನು ಹಳದಿ, ಇಂಗಲೀಕ (ಕೆಂಪು) ಅಥವಾ ಕುಂಕುಮದ ಪುಡಿಗಳಲ್ಲಿ ಹೊರಳಿಸಿ ಮೂಗು ಮತ್ತು ಹಣೆಯ ಭಾಗದಲ್ಲಿ ಸ್ಪಿರೀಟ್ ಗಮ್ ಬಳಸಿ ಹಚ್ಚಿಕೊಳ್ಳಲಾಗುತ್ತದೆ. ಇಂತಹ ಹತ್ತಿಯ ಉಂಡೆಗಳು ನಿಗದಿತ ವೇಷಗಳಿಗೆ ನಿರ್ದಿಷ್ಟ ಸಂಖ್ಯೆಯಲ್ಲಿರುತ್ತವೆ. ರಾವಣನಿಗೆ ನಾಲ್ಕು ಉಂಡೆಗಳಿದ್ದರೆ ಮೈರಾವಣ ಮೊದಲಾದ ಪಾತ್ರಗಳಿಗೆ ಆರು ಉಂಡೆಗಳಿರುತ್ತವೆ. ಕತ್ತಿಬಣ್ಣ(ಹಣೆಯ ಮೇಲೆ ಕತ್ತಿಯಾಕಾರದ ಗೆರೆಗಳನ್ನು ಬರೆದ ವೇಷ)ಗಳಿಗೆ ಎರಡು ಚೇಳುಬಣ್ಣ(ಚೇಳಿನಂತಹ ಸುಳಿ ಇರುವ ಮುಖವರ್ಣಿಕೆ)ಗಳಿಗೆ ಎರಡು ಏಣಿಬಣ್ಣ(ಏಣಿಯಾಕಾರದ ನಾಮವಿರುವ ಬಣ್ಣದ ವೇಷ)ಕ್ಕೆ ಒಂದು ಎಂಬುದು ಸಾಮಾನ್ಯ ನಿಯಮ. ಹಣೆಯ ಭಾಗವು ವಿಶಾಲವಾಗಿ ಕಾಣುವ ಸಲುವಾಗಿ ಬಿಳಿ ಬಟ್ಟೆಯ ಪಟ್ಟಿಯನ್ನು ಕಟ್ಟಿಕೊಂಡು ಬಣ್ಣ ಹಚ್ಚಲಾಗುತ್ತದೆ.

ಹೀಗೆ ಬಣ್ಣದ ವೇಷದ ಮುಖವರ್ಣಿಕೆಗಳು ರೌದ್ರ, ಬೀಭತ್ಸ, ಭಯಾನಕ ರಸಗಳನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಚುಟ್ಟಿಯ ಮುಳ್ಳಿನಂತಹ ರಚನೆಗಳು ಮತ್ತು ಕೆಂಪು, ಕಪ್ಪು, ಹಳದಿ ಬಣ್ಣಗಳ ಬಳಕೆಯು ಮುಖವನ್ನು ವಿಕಾರಗೊಳಿಸಿ ಭೀಕರವಾಗಿ ಕಾಣಿಸುತ್ತವೆ. ಅತಿಮಾನುಷವಾದ ವಿಚಿತ್ರ ಜೀವಿಗಳೆಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಮುಖವರ್ಣಿಕೆಯಲ್ಲಿ ಸುಳಿಗಳ ವೈಶಿಷ್ಟ್ಯಗಳಿಂದಲೇ ಹೊಸ ಹೊಸ ಆಕಾರಗಳು, ಭಾವಗಳು ಸೃಷ್ಟಿಯಾಗುತ್ತವೆ.

ಏಕಸುಳಿ ಅಥವಾ ಸರ್ಪಸುಳಿ

ಹಣೆಯ ಮೇಲೆ ಸರ್ಪದ ಹೆಡೆಯ ಆಕಾರದಲ್ಲಿ ಅಥವಾ ಅಶ್ವತ್ಥ ಎಲೆಯ ಆಕಾರದ ಸುಳಿ ರಚನೆಯನ್ನು ಏಕಸುಳಿ ಅಥವಾ ಸರ್ಪಸುಳಿಯೆಂದು ಹೇಳಲಾಗುತ್ತದೆ. ಸರ್ಪಸುಳಿ ಯೆಂಬುದು ಪಾತಾಳ ಲೋಕದ ಪ್ರತೀಕವೆಂದೂ ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಪಾತಾಳ ಲೋಕದ ರಾಕ್ಷಸರಾದ ಮೈರಾವಣ, ಸಂಶಪ್ತಕ ಮೊದಲಾದ ಪಾತ್ರಗಳಿಗೆ ಸರ್ಪಸುಳಿಯು ರೂಢಿಯಲ್ಲಿದೆ.

ಈ ತೆರೆನ ವಿನ್ಯಾಸಗಳೆಲ್ಲ ಹಣೆಯ ಮೇಲೆ ಮಾತ್ರ ಇರುತ್ತದೆ. ಹಣೆಯಿಂದ ಕೆಳಗೆ ಹೆಚ್ಚಿನ ಎಲ್ಲಾ ವೇಷಗಳಿಗೂ ಒಂದೇ ವಿಧದ ವಿನ್ಯಾಸಗಳಿರುತ್ತವೆ. ಹಣೆಯ ಮೇಲೆ ತಲೆ ಕೆಳಗಾದ ಅಶ್ವತ್ಥದ ಎಲೆಯ ಆಕಾರದಂತೆ ಎರಡು ಸಾಲು ಚುಟ್ಟಿಗಳ ಮೂಲಕ ರಚಿಸ ಲಾಗುತ್ತದೆ. ಅವುಗಳ ನಡುವೆ ಕಪ್ಪು ಬಣ್ಣವಿರುತ್ತದೆ. ಈ ಆಕಾರದ ಒಳ ಭಾಗದಲ್ಲಿ  ಸಣ್ಣ ಆಕಾರದಲ್ಲಿ ಕಪ್ಪು ಬಣ್ಣವಿದ್ದು ಅದರ ಸುತ್ತಲೂ ಹಳದಿ ಬಣ್ಣವಿರುತ್ತದೆ. ಚುಟ್ಟಿ ಮತ್ತು ಹಳದಿ ಬಣ್ಣದ ನಡುವೆ ಕೆಂಪು ಬಣ್ಣವಿರುತ್ತದೆ. ಉಳಿದಂತೆ ಕಣ್ಣಿನ ಕೆಳಗೆ ಒಂದು ಸಾಲಿನ ಚುಟ್ಟಿ ಅದಕ್ಕಿಂತ ಕೆಳಗೆ ಮೂಗಿನ ತುದಿಯಿಂದ ಆರಂಭವಾಗಿ ಕೆನ್ನೆಯವರೆಗೆ ಒಂದು ಸಾಲು ಚುಟ್ಟಿ ಮತ್ತು ಗದ್ದದ ಬಳಿ ಅರ್ಧವೃತ್ತಾಕಾರವಾಗಿ ಒಂದು ಸಾಲು ಚುಟ್ಟಿ ಇರುತ್ತದೆ. ಈಗ ಮುಖದ ಬಹುಭಾಗವು ಕೆಂಪು ವರ್ಣದಿಂದಲೇ ಎದ್ದು ಕಾಣುತ್ತದೆ. ಮುಖದ ಹೊರಸುತ್ತಿನಲ್ಲಿ ಕೆಂಪು ಬಣ್ಣದಲ್ಲಿ ಹೊರಳಿಸಿದ ಹತ್ತಿಯನ್ನು ಹಚ್ಚಿಕೊಳ್ಳಲಾಗುತ್ತದೆ. ಅದಕ್ಕೆ ತಾಗಿದಂತೆ ‘U’ ಆಕಾರದ ಮುಳ್ಳುಗಳಿರುವ ತಗಡಿನ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾರೆ. ಇದನ್ನು ಕಂಗರಿ ಎಂದು ಕರೆಯುತ್ತಾರೆ.

ಮೊಲದಕಿವಿ ಸುಳಿ

ಹಣೆಯ ಮೇಲ್ಭಾಗದಲ್ಲಿ ಸರ್ಪಸುಳಿ ಆಕಾರದ ಎರಡು ಸುಳಿಗಳ ರಚನೆ ಇದ್ದರೆ ಇದನ್ನು ಮೊಲದಕಿವಿ ಸುಳಿ ಎಂದು ಹೇಳಲಾಗುತ್ತದೆ. ಒಂದು ಸಾಲು ಚುಟ್ಟಿಯು ಹಣೆಯ ನಡುಭಾಗದಿಂದ ಹೊರಟು ಎರಡೂ ಕಡೆ ವೃತ್ತಾಕಾರವಾಗಿ ಹಣೆಯ ಮೇಲ್ಭಾಗದಲ್ಲಿ ಕೊನೆಗೊಳ್ಳುತ್ತದೆ. ಹಣೆಯನ್ನು ವಿಗಂಡಿಸಿದಂತೆ ನಡುವೆ ಎರಡೂ ಪಕ್ಕದಲ್ಲಿ ಒಂದು ಸಾಲು ಚುಟ್ಟಿಯಿಂದ ಮೊಲದ ಕಿವಿಯಾಕಾರದ ರಚನೆಯನ್ನು ಮಾಡಲಾಗುತ್ತದೆ. ಸುಳಿಗಳ ನಡುವೆ ಏಕಸುಳಿಗೆ ಇರುವಂತೆ ಹಳದಿ ಬಣ್ಣದ ವೃತ್ತ ಮತ್ತು ಅದರ ನಡುವೆ ಕಪ್ಪು ಬಣ್ಣದ ರಚನೆ ಇರುತ್ತದೆ.

ದ್ವಿಸುಳಿ ಅಥವಾ ಚೇಳುಕೊಂಡಿಸುಳಿ

ಹುಬ್ಬಿನ ಮೂಲದಿಂದ ಆರಂಭವಾದ ಎರಡು ಸಾಲು ಚುಟ್ಟಿಗಳು ಹಣೆಯ ಮೇಲ್‌ತುದಿಯವರೆಗೆ ಇಡಲಾಗುತ್ತದೆ. ಇದನ್ನು ಚೇಳುಕೊಂಡಿಸುಳಿ ಅಥವಾ ದ್ವಿಸುಳಿ ಎಂದು ಕರೆಯಲಾಗುತ್ತದೆ. ಹಣೆಯ ಮೇಲೆ ಚೇಳಿನಕೊಂಡಿಯಂತಹ ಎರಡು ಸುಳಿಗಳ ರಚನೆ ಇರುತ್ತದೆ. ಇದರ ನಡುವೆ ಉದ್ದನಾಮದ ಆಕಾರದಲ್ಲಿ ಎರಡು ಸಾಲು ಚುಟ್ಟಿಗಳಿರುತ್ತವೆ. ಇದು ರಾವಣನ ಸುಳಿಯ ವಿನ್ಯಾಸವನ್ನು ಹೋಲುತ್ತದೆ.

ತ್ರಿಸುಳಿ

ದ್ವಿಸುಳಿಯಂತೆ ತ್ರಿಸುಳಿಯ ವಿನ್ಯಾಸವು ಪರಸ್ಪರ ಹೋಲಿಕೆಯುಳ್ಳದ್ದು. ಹುಬ್ಬಿನ ಮೂಲಭಾಗದಿಂದ ಹೊರಟ ಎರಡು ಸಾಲು ಚುಟ್ಟಿಗಳ ನಡುವೆ ಮೂಗಿನಿಂದ ಆರಂಭವಾಗಿ ಹಣೆಯ ಮಧ್ಯ ಭಾಗದಲ್ಲಿ ಇನ್ನೊಂದು ಸುಳಿಯು ನಿಲ್ಲುತ್ತದೆ. ಹೀಗೆ ಮೂರು ಸುಳಿ ಇರುವ ಕಾರಣಕ್ಕಾಗಿ ಇದನ್ನು ತ್ರಿಸುಳಿ ಎಂದು ಹೇಳಲಾಗುತ್ತದೆ.  ಇದಲ್ಲದೆ ಸರ್ಪಸುಳಿ ಯಂತಹ ಮೂರೂ ವಿನ್ಯಾಸಗಳು ಇದ್ದೂ ಇದುವೇ ತ್ರಿಸುಳಿಯೆಂಬ ಅಭಿಪ್ರಾಯವೂ ಇದೆ.

ಹಣೆಯಲ್ಲಿ ಸುಳಿಗಳು ಬರುವುದೇ ರಾಜ ಬಣ್ಣದ ಚುಟ್ಟಿಯ ವೈಶಿಷ್ಟ್ಯ. ರಾಜ ಬಣ್ಣದಲ್ಲಿ ಮುಖ್ಯವಾಗಿ ರಾವಣನಸುಳಿ, ಅರ್ಧಚಂದ್ರಾಕೃತಿಯಸುಳಿ, ಯಮನಸುಳಿ ಎಂಬಿತ್ಯಾದಿ ಪ್ರಭೇದಗಳಿವೆ. ರಾವಣನ ಬಣ್ಣವು  ಬಣ್ಣದ ವೇಷಗಳಲ್ಲೇ ವಿಶಿಷ್ಟವಾದದ್ದು.

ರಾವಣ

ರಾಮಾಯಣದ ಪ್ರತಿನಾಯಕನಾದ ರಾವಣನ ಪಾತ್ರಕ್ಕೆ ತೆಂಕುತಿಟ್ಟಿನಲ್ಲಿ ವಿಶೇಷವಾದ ಮಹತ್ವವಿದೆ. ಯಕ್ಷಗಾನದಲ್ಲಿ ಉಗ್ರ ರಾವಣನೆಂದೂ, ಶೃಂಗಾರ ರಾವಣನೆಂದೂ ಎರಡು ವಿಧಗಳಿವೆ. ಯುದ್ಧದ ಸನ್ನಿವೇಶದಲ್ಲಿ ಬರುವ ರಾವಣನಿಗೆ ಉಗ್ರ ಸ್ವಭಾವದ ಸಂಕೇತವಾಗಿ ಕೆಂಪು ಬಣ್ಣವನ್ನು ಹೆಚ್ಚು ಬಳಸಲಾಗುತ್ತದೆ. ಶೃಂಗಾರದ ಸಂಕೇತವಾದ ಹಸಿರು ಬಣ್ಣವು ಶೃಂಗಾರ ರಾವಣನಲ್ಲಿ ಹೆಚ್ಚಾಗಿರುತ್ತದೆ. ಇದು ಯಕ್ಷಗಾನದ ಬಣ್ಣದ ವೇಷಗಳಲ್ಲಿ ‘ರಾಜಬಣ್ಣ’ಕ್ಕೆ ಉತ್ತಮ ಉದಾಹರಣೆಯಾಗಿದೆ. ಹಣೆಯ ಎರಡು ಬದಿಗಳಲ್ಲಿ ಚುಟ್ಟಿಗಳನ್ನು ವರ್ತುಲಾಕಾರಕ್ಕೆ ತಂದು, ವರ್ತುಲಗಳ ನಡುವೆ ಹತ್ತಿಯ ಚುಟ್ಟಿಗೊಂಡೆಗಳನ್ನು ಇರಿಸುತ್ತಾರೆ. ಈ ವರ್ತುಲವು ಸುರುಳಿಯಂತಿರುವುದರಿಂದ ಇದನ್ನು ‘ಸುಳಿ ಚುಟ್ಟಿ ಬಣ್ಣ’ ಎನ್ನುತ್ತಾರೆ. ಯಕ್ಷಗಾನದಲ್ಲಿ ಇದು ‘ರಾವಣನ ಸುಳಿ’ ಎಂದೇ ಪ್ರಸಿದ್ಧವಾಗಿದೆ. ಕಣ್ಣಿನ ವರ್ತುಲದಲ್ಲಿ ಹಾಗೂ ಹಣೆಯಲ್ಲಿ ರಾವಣನಿಗೆ ಹಸಿರು ಬಣ್ಣದ ರೇಖೆಗಳಿರುತ್ತವೆ. ಇದು ಶೃಂಗಾರ ಸೂಚಕವಾಗಿದ್ದು, ಬಣ್ಣದ ವೇಷಗಳಲ್ಲಿ ರಾವಣ ವೇಷಕ್ಕೆ ಮಾತ್ರ ಇರುವ ಪ್ರತ್ಯೇಕತೆಯಾಗಿದೆ. ರಾವಣನ ವೇಷವನ್ನು ಯಕ್ಷಗಾನದಲ್ಲಿ ‘ಶೃಂಗಾರ ಬಣ್ಣ’ ಎಂದು ಕರೆಯುವುದೂ ಇದೆ. ಹಣೆಯಲ್ಲಿ ಭಸ್ಮಲಾಂಛನವಾದ ಅಡ್ಡನಾಮವನ್ನು ಬರೆಯುತ್ತಾರೆ. ಕೆಲವರು ಅಡ್ಡನಾಮದ ಮಧ್ಯೆ ಶಿವಲಿಂಗ ಮೊದಲಾದ ಆಕೃತಿಗಳನ್ನು ರಚಿಸುವುದೂ ಇದೆ.

ಮೈರಾವಣ

ಮೈರಾವಣ ವೇಷವು ಯಕ್ಷಗಾನದಲ್ಲಿ ಇನ್ನೊಂದು ವಿಶಿಷ್ಟ ಬಣ್ಣದ ವೇಷ. ಆತ ರಾವಣನ ಮಿತ್ರ, ಸಹಪಾಠಿ, ಪಾತಾಳ ಲಂಕೆಯ ಅಧಿಪತಿ. ಸಾಮಾನ್ಯವಾಗಿ  ಮೈರಾವಣನ ವೇಷ ರಂಗಸ್ಥಳಕ್ಕೆ ಬರುವುದು ಬೆಳಗಿನ ಜಾವ ನಾಲ್ಕು ಅಥವಾ ಐದು ಗಂಟೆಗೆ. ಮೈರಾವಣ ವೇಷಧಾರಿಯು ರಾತ್ರಿ ಸುಮಾರು ಒಂಭತ್ತು ಗಂಟೆಗೆ ಬಣ್ಣಕ್ಕೆ ಕುಳಿತು, ಚುಟ್ಟಿಯನ್ನು ಎರಡರಿಂದ ಮೂರು ಇಂಚುಗಳಷ್ಟು ಬೆಳೆಸುತ್ತಾನೆ.

ಮೈರಾವಣನ ಚುಟ್ಟಿಯಲ್ಲಿ ಸುಳಿ ಇಲ್ಲ. ಹಣೆಯಲ್ಲಿ ಅರ್ಧ ವರ್ತುಲಾಕಾರದ ಎರಡು ಸಾಲು ಚುಟ್ಟಿಗಳು ಇರುತ್ತವೆ. ಹಣೆಯ ಎರಡೂ ಕೊನೆಗಳಲ್ಲಿ ಚುಟ್ಟಿಯ ರೇಖೆ ನಿಲ್ಲುತ್ತದೆ. ಮೂರು ಅಥವಾ ಐದು ಬಣ್ಣಗಳಿಂದ ಕೂಡಿದ ಕವಲು ಚುಟ್ಟಿಗಳನ್ನಿರಿಸಿ, ಆರು ಚುಟ್ಟಿಗೊಂಡೆಗಳನ್ನು ರಚಿಸಿ ಮೈರಾವಣನ ಮುಖವರ್ಣಿಕೆಗೆ ವಿಶೇಷ ಕಳೆಯನ್ನು ನೀಡುವ ಕ್ರಮವೂ ಇದೆ. ಮೈರಾವಣನ ಮುಖವರ್ಣಿಕೆಯನ್ನು ಯಕ್ಷಗಾನದ ಪರಿಭಾಷೆಯಲ್ಲಿ ‘ಗೀರುಗಂಧ ಚುಟ್ಟಿ’ ಎನ್ನುತ್ತಾರೆ.

ಬಲಿ, ತಾರಕಾಸುರ, ಶುಂಭ, ಮೈರಾವಣ ಮೊದಲಾದ ಪಾತ್ರಗಳಿಗೆ ಹಣೆಯ ಮೇಲೆ ಅರ್ಧಚಂದ್ರಾಕೃತಿಯ ಚುಟ್ಟಿಗಳಿರುತ್ತವೆ. ಈ ಕಾರಣಕ್ಕಾಗಿ ಇವುಗಳಿಗೆ ಅರ್ಧಚಂದ್ರಾಕೃತಿಯ ಬಣ್ಣ ಎಂದು ಹೇಳಲಾಗುತ್ತದೆ. ಮೂಗಿನ ತುದಿ ಹಾಗೂ ಹಣೆಯ ನಡುವಿನಿಂದ ಆರಂಭವಾಗುವ ಚುಟ್ಟಿಗಳು ಎರಡೂ ಕಡೆ ವೃತ್ತಾಕಾರವಾಗಿ ಮೇಲ್ಮುಖವಾಗಿ ಸಾಗುತ್ತವೆ. ಈ ಮೂರೂ ಸಾಲು ಚುಟ್ಟಿಗಳು ಪರಸ್ಪರ ಒಂದನ್ನೊಂದು ಸಂಧಿಸದೆ ಹಣೆಯ ಮೇಲ್ಭಾಗ ದಲ್ಲಿ ಸಮಾನಾಂತರವಾಗಿ ಕೊನೆಗೊಳ್ಳುತ್ತವೆ. ಈ ಮೂರು ಸಾಲು ಚುಟ್ಟಿಗಳ ನಡುವೆ ಕ್ರಮವಾಗಿ ಕಪ್ಪು, ಹಳದಿ ಮತ್ತು ಕೆಂಪು ಬಣ್ಣಗಳಿದ್ದು ಕಣ್ಣಿನ ಕೆಳ ಅಂಚಿನ ಕಪ್ಪು ಬಣ್ಣದ ಕೆಳಗೆ ಬಿಳಿ ಬಣ್ಣದ ರೇಖೆ ಇರುತ್ತದೆ. ಹಣೆಯ ಕೊನೆಯಲ್ಲಿ ಸಾಲಾಗಿ ಏಳು ಹತ್ತಿಯ ಉಂಡೆ ಹಾಗೂ ಮೂಗಿನ ತುದಿಯಲ್ಲಿ ಒಂದು ಹತ್ತಿಯ ಉಂಡೆಯನ್ನು ಅಂಟಿಸಲಾಗುತ್ತದೆ.

ಯಮ ಮತ್ತು ವಾಲಿಯ ಸುಳಿಯ ವಿನ್ಯಾಸಗಳು ಅಲ್ಪಸ್ವಲ್ಪ ರಾವಣನ ಸುಳಿಯನ್ನೇ ಹೋಲುತ್ತವೆ. ಹಣೆಯ ಮೇಲೆ ಗೀರುಗಂಧದ ಚುಟ್ಟಿ ಹಾಗೂ ಅರ್ಧಚಂದ್ರಾಕೃತಿಯ ಚುಟ್ಟಿ ಇರುವುದಿಲ್ಲ. ವಾಲಿಯ ಸುಳಿಗೆ ಅಕ್ಕಿಹಿಟ್ಟಿನ ಚುಟ್ಟಿಯ ಬದಲಿಗೆ ಹತ್ತಿಯ ಚುಟ್ಟಿ ಯನ್ನು ಬಳಸುವುದಿದೆ.

ಬಣ್ಣದ ವೇಷಗಳ ವರ್ಣ ವಿನ್ಯಾಸವನ್ನು ಗಮನಿಸಿದರೆ ಇಲ್ಲಿರುವ ಬಣ್ಣಗಳಿಗೆ ನಿರ್ದಿಷ್ಟ ಅರ್ಥ ಸಂಕೇತಗಳನ್ನು ಹೇಳುವಂತಿಲ್ಲ. ಅವು ವಿವಿಧ ರಸಗಳ ಭಾವಗಳನ್ನು ಉದ್ದೀಪಿಸುವಲ್ಲಿ ಬಣ್ಣಗಳ ಜೊತೆಗೆ ರೇಖಾವಿನ್ಯಾಸವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಬಣ್ಣ, ಬಣ್ಣಗಳಿಂದ ರೂಪುಗೊಂಡ ರೇಖಾವಿನ್ಯಾಸಗಳು ಹಾಗು ಅವುಗಳ ಆಕಾರ ಇವೆಲ್ಲ ಪಾತ್ರಗಳ ಸ್ವಭಾವವನ್ನು ಪ್ರಕಟಿಸುವಲ್ಲಿ ಪೂರಕವಾಗಿ ಶ್ರಮಿಸುತ್ತವೆ. ಕಲಾತ್ಮಕವಾದ ವರ್ಣ ಸಂಯೋಜನೆ ಕಲಾವಿದನ ಕೌಶಲ್ಯಕ್ಕನುಗುಣವಾಗಿ ಹೊಸ ಹೊಸ ಅರ್ಥ ಸಾಧ್ಯತೆಗಳನ್ನು ಅನಾವರಣಗೊಳಿಸಬಹುದು. ಪಾತ್ರದ ಸ್ವಭಾವಕ್ಕೆ ಆಕೃತಿಯನ್ನು  ಹಾಗೂ ವಿಕೃತಿಯನ್ನು ನೀಡಬಹುದಾದ ರೇಖೆಗಳ ರಚನೆಗಳು ಪಾತ್ರದಲ್ಲಿ ಗಮನಾರ್ಹವಾಗುತ್ತದೆ. ಈ ನೆಲೆಯಲ್ಲಿ ಪಾತ್ರವೊಂದು ಅತಿಮಾನುಷ ವ್ಯಕ್ತಿತ್ವವನ್ನು ಬಾಹ್ಯ ರೂಪದಲ್ಲಿ ಆವಾಹಿಸಿಕೊಳ್ಳುತ್ತದೆ. ಪಾತ್ರಧಾರಿಯ ಕೌಶಲ್ಯ ಹಾಗೂ ಸಂಯಮವು ಪಾತ್ರದ ಸ್ವಭಾವದ ಮೇಲೆ ನಿರ್ದಿಷ್ಟವಾದ ಪರಿಣಾಮವನ್ನು ಬೀರುತ್ತದೆ.  ಹಾಗಾಗಿ ಪಾತ್ರದ  ಸ್ವಭಾವ ಪ್ರಕಟಣೆಯಲ್ಲಿ ಬಣ್ಣಗಾರಿಕೆಯ ರೇಖಾ ವೈವಿಧ್ಯವು ಸಂಯುಕ್ತವಾಗಿ ಶ್ರಮಿಸಿ ಆಹಾರ್ಯಾಭಿನಯವನ್ನು ಅನಾವರಣ ಗೊಳಿಸುತ್ತದೆ.

ಭೂಷಣ ವಿನ್ಯಾಸ

ಬಣ್ಣದ ವೇಷಗಳಿಗೆ ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ಬಣ್ಣದ ನಿಡುದೋಳಿನ ದಗಲೆ ಹಾಗೂ ಅದೇ ಬಣ್ಣದ ಅದೇ ಬಣ್ಣದ ಅಂಚಿನ ಇಜಾರು ಹಾಗೂ ಬಾಲ್‌ಮುಂಡು ಧರಿಸುತ್ತಾರೆ. ರಾವಣ, ವೀರಭದ್ರ ಇತ್ಯಾದಿ ಕೆಲವು ಪಾತ್ರಗಳಿಗೆ ಕೆಂಪು ದಗಲೆಗಳನ್ನು ಧರಿಸುವ ಕ್ರಮಗಳಿವೆ. ಕೆಂಪು ದಗಲೆಗೆ ಕಪ್ಪು ವೆಲ್ವೆಟ್ ಬಟ್ಟೆಯಿಂದ ಮಾಡಿದ ಆಭರಣಗಳನ್ನು ಕಪ್ಪು ದಗಲೆಗೆ ಕೆಂಪು ವೆಲ್ವೆಟ್ ಬಟ್ಟೆಯಿಂದ ಮಾಡಿದ ಆಭರಣಗಳನ್ನು ಕಟ್ಟಿಕೊಳ್ಳಲಾಗುತ್ತದೆ. ವೀರಭದ್ರನಂತಹ ಪಾತ್ರಗಳಿಗೆ ಕೆಂಪು ದಗಲೆ, ಕೆಂಪು ವೆಲ್ವೆಟ್ ಬಟ್ಟೆಯ ಆಭರಣಗಳನ್ನೇ ಧರಿಸುತ್ತಾರೆ. ಕಟ್ಟಿಕೊಳ್ಳುವ ಬಾಲ್‌ಮುಂಡಿನಲ್ಲಿ ಕೆಳಗಿನ ಫ್ರಿಲ್ ತೊಟ್ಟ ದಗಲೆಯ ಬಣ್ಣ ವನ್ನು ಹೊಂದಿಕೊಂಡಂತಿರುತ್ತದೆ. ಭುಜಕ್ಕೆ ಧರಿಸುವ ಆಭರಣಕ್ಕೆ ‘ಭುಜದಂಬೆ’ ಅಥವಾ ‘ದಂಬೆ’ ಎಂದು ಹೆಸರು. ಇದರಲ್ಲಿ ಜಿಂಕೆ ಅಥವಾ ಹೊರಗೆ ನೋಡುವ ಗಿಳಿಗಳ ರೇಖಾಕೃತಿಗಳಿರುತ್ತವೆ. ಎದೆ ಪದಕ, ವೀರಗಸೆ, ಡಾಬುಗಳ ಆಯವು ಪಾತ್ರದ ಸ್ವಭಾವಕ್ಕೆ ಹೊಂದಿಕೊಂಡು ಹಿರಿದು, ಕಿರಿದಾಗಿರುತ್ತದೆ. ಎದೆಯ ಭಾಗದಲ್ಲಿ ಇಳಿಬಿಡುವ ಸೋಗೆವಲ್ಲಿ ಬಟ್ಟೆಯ ಬಣ್ಣವೂ ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ. ತೋಳ್ಕಟ್ಟು, ಕೈಕಟ್ಟು, ಕೈಬಳೆ, ಬಟ್ಟೆಯ ವೃತ್ತಾಕಾರದ ಎದೆಪದಕ, ಕಾಲ್ಗಡಗ, ಕಾಲಮುಳ್ಳು, ಗೆಜ್ಜೆ, ಕಟ್ಟುದಿಂಬು ಗಳನ್ನು ಇತರ ವೇಷಗಳಂತೆಯೇ ಧರಿಸುತ್ತಾರೆ. ರಾಕ್ಷಸ ವೇಷದ ವಿಸ್ತಾರಕ್ಕೆ ತಕ್ಕಂತೆ ಅಂಡು ಕಟ್ಟಿ ದಟ್ಟಿ ಬಿಗಿಯುತ್ತಾರೆ. ಕೊರಳಿಗೆ ಅಡ್ಡಿಗೆ ಮತ್ತು ಕೊರಳಹಾರದ ಬದಲಿಗೆ ಉದ್ದನೆಯ ಗಡ್ಡವನ್ನು ಕಟ್ಟಲಾಗುತ್ತದೆ.

ರಾವಣನ ವೇಷಧಾರಿಯು ಕೆಂಪು ದಗಲೆಯನ್ನು ಧರಿಸುತ್ತಾನೆ. ಅದೇ ಬಣ್ಣದ ಚಲ್ಲಣ ಹಾಗೂ ಕೆಂಪು, ಬಿಳಿ, ಕಪ್ಪು ಗೋಟುಗಳಿರುವ ಬಾಲ್‌ಮುಂಡು ಧರಿಸುತ್ತಾನೆ. ಭುಜಕ್ಕೆ ಗಿಳಿಗಳಿರುವ ಭುಜದಂಬೆ, ಎದೆಗೆ ಕಪ್ಪು ಮತ್ತು ಕೆಂಪು ಮಿಶ್ರ ಬಣ್ಣದ ಉಲ್ಲನ್ ಗೊಂಡೆಗಳಿರುವ ಎದೆ ಪದಕ ಹಾಗೂ ವೀರಗಸೆ ಧರಿಸುತ್ತಾನೆ. ಸೊಂಟಕ್ಕೆ ಡಾಬು, ಕಾಲಿಗೆ ಕಡಗ, ಕಾಲ್ಚೆಂಡು, ಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾನೆ. ಕಪ್ಪು ಮತ್ತು ಹಸಿರು ಬಣ್ಣದ ಸೋಗೆವಲ್ಲಿಗಳನ್ನು ಧರಿಸುವನು. ಇಲ್ಲಿ ಹಸಿರು ಸೋಗೆವಲ್ಲಿ ಶೃಂಗಾರದ ಸಂಕೇತವಾಗಿದೆ.

ಮೈರಾವಣ ವೇಷಧಾರಿಗಳು ಕಪ್ಪು ಬಣ್ಣದ ದಗಲೆ ಅದೇ ಬಣ್ಣದ ಚಲ್ಲಣ ಹಾಗೂ ಕೆಂಪು ಮತ್ತು ಕಪ್ಪು ಬಣ್ಣಗಳ ಸೋಗೆವಲ್ಲಿಗಳನ್ನು ಧರಿಸುತ್ತಾರೆ. ಎದೆ ಪದಕ, ವೀರಗಸೆಯ ಉಲ್ಲನ್ ಹಾಗೂ ಧರಿಸುವ ಬಾಲ್‌ಮುಂಡಿನ ಅಂಚು ಕಪ್ಪು ಬಣ್ಣದ್ದಾಗಿರುತ್ತದೆ. ಉಳಿದಂತೆ ಬಣ್ಣದ ವೇಷಗಳು ಧರಿಸುವ ಎಲ್ಲ ವೇಷಭೂಷಣಗಳನ್ನೂ ಅದೇ ಕ್ರಮದಲ್ಲಿ ಧರಿಸುತ್ತಾರೆ.

ಬಣ್ಣದ ವೇಷದ ಕರ್ಣಾಭರಣವನ್ನು ಬಣ್ಣದ ಓಲೆ ಎಂದು ಕರೆಯಲಾಗುತ್ತದೆ. ಇದು ವೃತ್ತಾಕಾರದಲ್ಲಿರುತ್ತದೆ. ಅದರ ಮಧ್ಯಭಾಗದಲ್ಲಿ ಕಮಲದಾಕಾರವಿದ್ದು ಸುತ್ತಲೂ ಕನ್ನಡಿ ಮತ್ತು ಹಲ್ಲೆಗಳಿಂದ ಅಲಂಕರಿಸಿರುತ್ತದೆ. ಹೊರಭಾಗದಲ್ಲಿ ಸುತ್ತಲೂ ಕೆಂಪು ಉಲ್ಲನ್ ಗೊಂಡೆಗಳಿರುತ್ತವೆ. ಮುಖದಲ್ಲಿ ಮೃಗೀಯ ಭಾವವನ್ನು ಸ್ಫುರಿಸುವಂತೆ ಮಾಡಲು ಈ ಕರ್ಣಾಭರಣವು ಪೂರಕವಾಗುತ್ತದೆ.

ಶಿರೋಭೂಷಣ

ಬಣ್ಣದ ವೇಷಗಳು ಧರಿಸುವ ಬೃಹತ್ ಕಿರೀಟಕ್ಕೆ ಕೇಶಾವರಿತಟ್ಟಿ ಅಥವಾ ಕೇಶಭಾರ ಕಿರೀಟ ಎಂದು ಹೆಸರು. ಇದನ್ನು ಬಟ್ಟಲುಕಿರೀಟ, ತಡ್ಪೆಕಿರೀಟ, ದೊಡ್ಡಕಿರೀಟ ಎಂದೂ ಕರೆಯುತ್ತಾರೆ. ಕಲಶದ ಆಕೃತಿಯ ಮುಗುಳಿಗೆ ಸುಮಾರು ಇಪ್ಪತ್ತನಾಲ್ಕು ಇಂಚು ವ್ಯಾಸದ ವಿಶಾಲವಾದ ವೃತ್ತಾಕಾರದ ಉಬ್ಬಿರುವ ಅಟ್ಟೆ ಅಥವಾ ತಡ್ಪೆಯನ್ನು ಕಟ್ಟಲಾಗುತ್ತದೆ. ತಗಡು ಅಥವಾ ಕಾರ್ಡ್‌ಬೋರ್ಡಿನಿಂದ ಮಾಡಿದ ಈ ತಡ್ಪೆಯ ವರ್ತುಲದ ಅಂಚಿನಲ್ಲಿ ಕಪ್ಪು, ಕೆಂಪು ಅಥವಾ ಕೆಂಪು, ಹಸಿರು ಬಣ್ಣಗಳ ಮಿಶ್ರಣದ ಉಲ್ಲನಿನ ನೇಯ್ಗೆ ಇರುತ್ತದೆ. ಮುಗುಳಿ ಮತ್ತು ತಟ್ಟೆಯಲ್ಲಿ ಕೆಂಪು, ಕಪ್ಪು ವೆಲ್ವೆಟ್ ಬಟ್ಟೆ ಅಂಟಿಸಿ ಅದರ ಮೇಲೆ ಕೆತ್ತಿದ ಮರದ ಆಭರಣಗಳನ್ನು ಹೊಲಿದು ಕನ್ನಡಿ ತುಂಡು ಹಾಗೂ ಬೇಗಡೆಯನ್ನು ಹಚ್ಚಲಾಗುತ್ತದೆ. ನವಿಲುಗರಿಯ ಹೀಲಿಯನ್ನು ಕೂಡ ಹೊಲಿಯಲಾಗುತ್ತದೆ. ಇದು ಕೇಶಾವರಿತಟ್ಟಿ ಕಿರೀಟದ ಸಾಮಾನ್ಯ ಸ್ವರೂಪ. ಕಿರೀಟವು ಅಟ್ಟೆಯಿಂದ ಬೇರ್ಪಟ್ಟಿದ್ದು ಧರಿಸುವ ಸಂದರ್ಭದಲ್ಲಿ ಜೋಡಿಸಿಕೊಳ್ಳಲಾಗುತ್ತದೆ. ಈ ಕಿರೀಟವು ಯಕ್ಷಗಾನದ ಇತರೆ ಎಲ್ಲ ಶಿರೋಭೂಷಣ ಗಳಿಗಿಂತಲೂ ಹೆಚ್ಚು ಅಲಂಕಾರದಿಂದ ಕೂಡಿದೆ. ವೈಶಿಷ್ಟ್ಯಪೂರ್ಣವಾದ ಕಲಾನೈಪುಣ್ಯತೆಯು ಇದರಲ್ಲಿ ಗೋಚರಿಸುತ್ತದೆ. ಇಷ್ಟು ವೈಭವಯುಕ್ತವಾದ ಬೃಹತ್‌ಕಿರೀಟ ಯಕ್ಷಗಾನದಲ್ಲಿ ಇನ್ನೊಂದಿಲ್ಲ. ಈ ತಡ್ಪೆಯು ಮಥುರಾ ಶೈಲಿಯ ಬುದ್ಧನ ಹಿಂದಿರುವ ಪ್ರಭಾವಳಿಯನ್ನು ಹೋಲುತ್ತದೆ. ಇದು ಯಕ್ಷಗಾನದ ಮೇಲೆ ಬೌದ್ಧಮತದ ಪ್ರಭಾವವನ್ನು ಸೂಚಿಸುತ್ತಿರ ಬಹುದು.

ಹಿಂದೆ ಕಪ್ಪು ಗಡ್ಡವನ್ನು ಕಟ್ಟುವ ರೂಢಿಯಿತ್ತು. ಈಗ ಕೊರಳಿಗೆ ಕಪ್ಪು ಉಲ್ಲನಿನ ಗಡ್ಡವನ್ನು ಕಟ್ಟಿ ಅದರ ಮೇಲೆ ಅರ್ಧದ ಅಂತರಕ್ಕೆ ಕೆಂಪು ಉಲ್ಲನಿನ ಗಡ್ಡವನ್ನು ಮತ್ತೆ ಕಟ್ಟಲಾಗುತ್ತದೆ. ಆಮೇಲೆ ಉಲ್ಲನ್ ಅಥವಾ ಚೌರಿಯ ಮೀಸೆ ಕಟ್ಟಿ ತಲೆಯ ಹಿಂಭಾಗಕ್ಕೆ ಕೇಸರಿಯನ್ನು ಬಿಗಿದುಕೊಳ್ಳಲಾಗುತ್ತದೆ. ಕಿವಿಗಳ ಮುಂಭಾಗಕ್ಕೆ ಓಲೆಯನ್ನು ಕಟ್ಟಿ ಕೇಶಾವರಿ ಕಿರೀಟವನ್ನು ಕಟ್ಟುತ್ತಾರೆ. ಉಲ್ಲನ್ ಗಡ್ಡವು ಬಣ್ಣದ ವೇಷಗಳ ಮುಖವನ್ನು ವಿಸ್ತರಿಸಿ ಪ್ರಕಟಿಸಲು ಸಹಕಾರಿಯಾಗುತ್ತದೆ. ಓಲೆಯ ಉಲ್ಲನ್ ಮತ್ತು ಗಡ್ಡದ ಮೇಲಿನ ಉಲ್ಲನ್ ಕೆಂಪು ಬಣ್ಣವೇ ಆಗಿದ್ದರೆ ಒಂದು ರೀತಿಯ ಸೌಂದರ್ಯ ಗೋಚರಿಸುತ್ತದೆ. ಕೇಶಾವರಿತಟ್ಟಿ ಕಿರೀಟವನ್ನು ಧರಿಸಿದ ರಾವಣನಂತಹ ರಾಜ ಬಣ್ಣಗಳಿಗೆ ತೆರೆ ಕುಣಿತದ ಸಂದರ್ಭದಲ್ಲಿ ಕಿರೀಟದ ಹಿಂಭಾಗದಿಂದ ಎರಡೂ ಬದಿಗಳಲ್ಲಿ ಆಲವಟ್ಟಗಳನ್ನು ಹಿಡಿದು ವೈಭವವನ್ನು ಹೆಚ್ಚಿಸುವ ಸಂಪ್ರದಾಯ ಹಿಂದೆ ರೂಢಿಯಲ್ಲಿತ್ತು.

ರಾವಣನ ವೇಷಧಾರಿಯು ಇಪ್ಪತ್ತನಾಲ್ಕು ಇಂಚು ವ್ಯಾಸದ ವೃತ್ತಾಕಾರದ, ಅಂಚಿನಲ್ಲಿ ಕೆಂಪು ಮತ್ತು ಕಪ್ಪು ಬಣ್ಣ ಮಿಶ್ರ ಉಲ್ಲನ್‌ಗಳಿರುವ ಕೇಶಾವರ ತಟ್ಟೆ(ಕೇಸರಿತಟ್ಟೆ)ಯ ಕಿರೀಟವನ್ನು ಧರಿಸುತ್ತಾನೆ. ಕೆಂಪು ಉಲ್ಲನ್ ಇರುವ ಎರಡು ವೃತ್ತಾಕಾರದ ಓಲೆಗಳನ್ನು ಕಿವಿಯ ಬಳಿಯಲ್ಲಿ ಧರಿಸುತ್ತಾನೆ. ಕಪ್ಪು ಉಲ್ಲನ್ ಮೀಸೆಯನ್ನೂ, ಮೊದಲು ಕೆಂಪು ಹಾಗೂ ಅದರ ಕೆಳಗೆ ಕಪ್ಪು ಉಲ್ಲನ್ ಗಡ್ಡವನ್ನು ಕಟ್ಟಿಕೊಳ್ಳುತ್ತಾನೆ.

ಮೈರಾವಣನಿಗೂ ಶಿರೋಭೂಷಣ ಬಟ್ಟಲು ಕಿರೀಟವೇ ಆಗಿದೆ. ಆದರೆ ಕಿರೀಟದ ಅಂಚಿನ ಉಲ್ಲನ್ ಕಪ್ಪು ಬಣ್ಣದ್ದಾಗಿರುತ್ತದೆ. ಹಾಗೆಯೇ ಧರಿಸುವ ಓಲೆ, ಎದೆ ಪದಕ, ವೀರಗಸೆಗಳ ಉಲ್ಲನ್ ಬಣ್ಣವೂ ಕಪ್ಪು ಆಗಿರುತ್ತದೆ. ಈ ನಿಯಮಗಳು ಇತ್ತೀಚೆಗೆ ಸಡಿಲ ವಾಗಿದ್ದು ತಡ್ಪೆಯ ವೃತ್ತದ ಅಳತೆಯಲ್ಲೂ ಸಹ ಇಂಚುಗಳ ಲೆಕ್ಕಾಚಾರದ ಅಂತರವೂ ಗೋಚರಿಸುತ್ತದೆ.