ಯಕ್ಷಗಾನದಲ್ಲಿ ಅತ್ಯಂತ ಸರಳ ವೇಷಗಳೆಂದರೆ ಹಾಸ್ಯ ಪಾತ್ರಗಳದ್ದು. ಪೂರ್ವರಂಗ ದಲ್ಲಿ ಬರುವ ಕೋಡಂಗಿ ವೇಷಗಳು, ಹೊಗಳಿಕೆ ವೇಷಗಳು, ಕಟ್ಟು ಹಾಸ್ಯಗಳೆಲ್ಲ ಹಾಸ್ಯ ಪಾತ್ರಗಳಾಗಿದ್ದರೂ ಪ್ರಸಂಗಗಳಲ್ಲಿ ಬರುವ ಕೆಲವು ಹಾಸ್ಯ ಪಾತ್ರಗಳು ವಿಶಿಷ್ಟವಾಗಿವೆ. ಚಾರಕ, ಅಗಸ, ಬ್ರಾಹ್ಮಣ, ಮಂತ್ರವಾದಿ ಮೊದಲಾದ ಪಾತ್ರಗಳೆಲ್ಲ ಹಾಸ್ಯ ವೇಷಗಳಾಗಿವೆ. ಹಾಸ್ಯ ವೇಷಧಾರಿಯು ಪ್ರಸಂಗದುದ್ದಕ್ಕೂ ಬೇರೆ ಬೇರೆ ಹಾಸ್ಯ ಪಾತ್ರಗಳನ್ನು ನಿಭಾಯಿಸ ಬೇಕಾದುದರಿಂದ ಹಾಸ್ಯ ವೇಷಗಳು ಸರಳವಾಗಿರಬಹುದು.

ಯಕ್ಷಗಾನದ ಹಾಸ್ಯವೇಷಗಳೆಂದರೆ ಪ್ರಸಂಗವನ್ನಾಧರಿಸಿ ಕಲಾವಿದರು ಸ್ವತಹ ಮಾಡಿ ಕೊಂಡ ಕಲ್ಪನೆಯ ಸೃಷ್ಟಿಗಳು. ಯಕ್ಷಗಾನ ಪ್ರಸಂಗಗಳಲ್ಲಿ ಹಾಸ್ಯವೇಷಗಳಿಗೆ ಅವಕಾಶವಿಲ್ಲ. ರಾತ್ರಿಯಿಂದ ಬೆಳಗ್ಗಿನ ತನಕ ನಡೆಯುವ ಪ್ರಸಂಗಗಳಲ್ಲಿ ರಂಜನೆಯ ದೃಷ್ಟಿಯಿಂದ ಹಾಸ್ಯ ಕಲಾವಿದರು ಪಾತ್ರಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದರು. ಸಂಸ್ಕೃತ ನಾಟಕಗಳ ವಿದೂಷಕರಿಂದ ಪ್ರೇರಣೆ ಪಡೆದೋ ಏನೋ ಹಾಸ್ಯ ಪಾತ್ರಗಳು ಯಕ್ಷಗಾನದಲ್ಲಿ ಎಡೆಯರಿತು ಬರುತ್ತವೆ. ಪ್ರಸಂಗದ ಏಕತಾನತೆಯನ್ನು ತಪ್ಪಿಸಲೋ, ಪ್ರಸಂಗದ ಗಂಭೀರ ವಾತಾವರಣದಿಂದ ಸ್ವಲ್ಪ ಪ್ರೇಕ್ಷಕರ ಮನಸ್ಸನ್ನು ತಿಳಿಗೊಳಿಸಲೋ,  ಹಾಸ್ಯ ಪಾತ್ರಗಳು ನಡು ನಡುವೆ ಪ್ರವೇಶಿಸುತ್ತವೆ. ಪ್ರಸಂಗದ ವೇಷ, ಭಾಷೆ, ಆವರಣವನ್ನು ಮೀರಿ ಹಾಸ್ಯ ಪಾತ್ರಗಳಿಗೆ ಮಾತನಾಡುವ ಸ್ವಾತಂತ್ರ್ಯವಿದೆ. ಪ್ರಸಂಗದ ಅಲೌಕಿಕ ಪಾತ್ರಗಳಿಗೂ, ಪ್ರೇಕ್ಷಕರಿಗೂ ನಡುವೆ ಸಂಪರ್ಕ ಏರ್ಪಡಿಸುವಲ್ಲಿ ಹಾಸ್ಯಪಾತ್ರಗಳು ಮುಖ್ಯವಾಗಿ  ಕಾರ್ಯನಿರ್ವಹಿಸುತ್ತವೆ. ಅತ್ತ ಪೌರಾಣಿಕ ಲೋಕಕ್ಕೂ ಹೊಂದದ ಇತ್ತ ಪ್ರೇಕ್ಷಕ ಲೋಕಕ್ಕೂ ತಾಳೆಯಾಗದ ನಡುಸ್ತರದಲ್ಲಿ ಹಾಸ್ಯ ಪಾತ್ರಗಳ ಚಿತ್ರಣಗಳು ರೂಪುಗೊಂಡಿವೆ. ತುಟಿ ಮೀರಿದ ಹಲ್ಲು, ಗೂನು ಬೆನ್ನು, ಸೊಟ್ಟ ಕಾಲು, ಬಾತ ಬಸಿರು, ಓರೆ ಬಾಯಿ, ಸೊಟ್ಟ ಮೂಗು, ಜೋಲು ಮೀಸೆ ಹೀಗೆ ಒಂದಲ್ಲ ಒಂದು ವೈಶಿಷ್ಟ್ಯದಿಂದ ಹಾಸ್ಯವೇಷಗಳು ಯಕ್ಷಗಾನ ರಂಗದಲ್ಲಿ ಕಾಣಿಸುತ್ತವೆ. ಹಾಸ್ಯವೇಷಗಳು ಕೇವಲ ಮಾತಿನ ಮೂಲಕ ಹಾಸ್ಯರಸವನ್ನು ಬಿಂಬಿಸುವುದಿಲ್ಲ. ತಮ್ಮ ವೇಷಭೂಷಣಗಳ ಮೂಲಕವೂ ಹಾಸ್ಯದ ಪ್ರವೃತ್ತಿಯನ್ನು ತೋರಿಸುತ್ತವೆ. ಸಾಮಾನ್ಯ ನೋಟಕ್ಕೆ ಎದ್ದು ಕಾಣುವ ವಿಕಾರಗಳ ಮೂಲಕವೇ ಹಾಸ್ಯವನ್ನು ಪ್ರೇರಿಸುವಂತೆ ವೇಷಭೂಷಣಗಳನ್ನು ತೊಟ್ಟುಕೊಳ್ಳಲಾಗುತ್ತದೆ. ಯಕ್ಷಗಾನ ಮೇಳಗಳಲ್ಲಾಗಲಿ, ತಂಡಗಳ ಲ್ಲಾಗಲಿ ಅಥವಾ ಏರ್ಪಡಿಸುವ ಪ್ರಯೋಗಗಳಲ್ಲಾಗಲಿ ಒಬ್ಬ ಹಾಸ್ಯವೇಷಧಾರಿ ಕಡ್ಡಾಯ ವಾಗಿ ಇರಲೇಬೇಕು. ಹಾಸ್ಯ ಕಲಾವಿದನಿಗೆ ಇಡೀ ಪ್ರಯೋಗದಲ್ಲಿ ವಿಶಿಷ್ಟ ಸ್ಥಾನವಿದೆ. ರಂಗಭೂಮಿಯ ಹಾಗೂ ಪ್ರಸಂಗದ ಮುಖ್ಯ ಪಾರುಪತ್ಯವೆಲ್ಲವೂ ಹಾಸ್ಯಗಾರನಿಗೆ ಸೇರಿದ್ದು. ಪ್ರಸಂಗದಲ್ಲಿ ಸಂದರ್ಭವಶಾತ್ ಬರುವ ಹಾಸ್ಯ ಪಾತ್ರಗಳನ್ನಲ್ಲದೆ ಎಡೆಯರಿತು ಬರುವ ಸಣ್ಣಪುಟ್ಟ ಪಾತ್ರಗಳ ನಿರ್ವಹಣೆಯೂ ಹಾಸ್ಯಗಾರನಿಗೇ ಸೇರಿದ್ದು. ಹಾಗಾಗಿ ನಾರದ, ವರಕೊಡುವ ಬ್ರಹ್ಮ, ಈಶ್ವರ ಮೊದಲಾದ ಪಾತ್ರಗಳು ಹಾಸ್ಯಗಾರನಿಗೇ ಮೀಸಲು. ಸಾಂದರ್ಭಿಕವಾಗಿ ಬರುವ ಸಣ್ಣಪುಟ್ಟ ಋಷಿಮುನಿಗಳ ಪಾತ್ರಗಳೂ ಹಾಸ್ಯಗಾರನೇ ನಿರ್ವಹಿಸುವುದು ಯಕ್ಷಗಾನದಲ್ಲಿ ರೂಢಿ. ಹಾಸ್ಯಗಾರನು ಎಲ್ಲಾ ಪಾತ್ರಗಳನ್ನು ಮಾಡುವ ಸಾಮರ್ಥ್ಯವುಳ್ಳವನಾಗಿರಬೇಕು ಎಂಬ ಪ್ರತೀತಿ ಇದೆ. ತಂಡದ ಮುಖ್ಯ ಕಲಾವಿದರು ಬಾರದಿದ್ದಾಗ ಆ ಪಾತ್ರವನ್ನು ನಿರ್ವಹಿಸುವಷ್ಟು ಹಾಸ್ಯ ಪಾತ್ರಧಾರಿ ಶಕ್ತನಾಗಿರಬೇಕು. ಹಾಗಾಗಿ ಹಾಸ್ಯಗಾರನನ್ನು ಸೂತ್ರಧಾರ ಎಂದೂ ಹೇಳಲಾಗುತ್ತದೆ.

ಯಕ್ಷಗಾನದಲ್ಲಿ ಪ್ರಮುಖ ಹಾಸ್ಯ ಪಾತ್ರಗಳೆಂದರೆ ದೂತನ ಪಾತ್ರಗಳು. ಇವು ಯಕ್ಷಗಾನ ಪ್ರಸಂಗದಲ್ಲಿ ತಾನೇ ತಾನಾಗಿ ಸೃಷ್ಟಿಸಿಕೊಳ್ಳುವ ಪಾತ್ರಗಳು. ಈ ಪಾತ್ರಗಳು ಕತೆಯ ದೃಷ್ಟಿಯಿಂದ ಮುಖ್ಯವಲ್ಲ. ಅವುಗಳನ್ನು ಒಟ್ಟು ಕತೆಯು ಲೋಪವಾಗದಂತೆ ಪ್ರಸಂಗ ಬೆಳೆಸಲು ಅವಕಾಶವಿದೆ. ಆದರೆ ಹಾಸ್ಯರಸ ಸೃಷ್ಟಿಗಾಗಿ ಪಾತ್ರಗಳನ್ನು ಸೃಷ್ಟಿಸಿರುವುದನ್ನು ಯಕ್ಷಗಾನಗಳಲ್ಲಿ ಕಾಣಬಹುದು. ದೂತನ ಪಾತ್ರಗಳಲ್ಲಿಯೂ ಅನೇಕ ವಿಧಗಳಿವೆ. ದೇವದೂತ, ರಾಕ್ಷಸದೂತ, ಮೂಕಾಸುರ, ಕುದುರೆ ದೂತ, ಬೇಹಿನ ದೂತ, ಹೊಗಳಿಕೆ ದೂತ, ಗಡಿಬಿಡಿ ದೂತ ಹೀಗೆ ದೂತ ವರ್ಗದಲ್ಲಿಯೇ ವಿಭಿನ್ನ ವರ್ಗಗಳಿವೆ. ಸಂದೇಶ ರವಾನೆಗೊಳಿಸುವುದೇ ಇವುಗಳ ಮುಖ್ಯ ಕೆಲಸವಾದರೂ ಇವುಗಳ ಸ್ವಭಾವಗಳು ವಿಭಿನ್ನವಾಗಿವೆ. ಇವುಗಳಲ್ಲದೆ ಪ್ರಸಂಗದ ಕಥಾಪಾತ್ರ ಗಳಾಗಿಯೂ ಕೆಲವೊಂದು ಪಾತ್ರಗಳು ಹಾಸ್ಯ ರಸವನ್ನು ರಂಗದಲ್ಲಿ ಪ್ರಕಟಿಸುತ್ತವೆ. ಪುರೋಹಿತ, ವೃದ್ಧ ಬ್ರಾಹ್ಮಣ, ಬೈರಾಗಿ, ಕುಂಬಾರ, ಕಟ್ಟಿಗೆ ಮಾರುವವ, ಮಂತ್ರವಾದಿ, ವೈದ್ಯ, ಜೋಯಿಸ, ಅಗಸ, ಮಾಪಿಳ್ಳೆ ಹೆಂಡ ಮಾರುವವ, ಮುದುಕಿ, ಭಿಕ್ಷುಕಿ, ದೂತಿ, ಜಾಂಬವ, ಮಂಥರೆ, ಕುಬ್ಜೆ, ಮಕರಂದ, ವಿಜಯ, ದಾರುಕ, ಗೋವಳ, ಚಿತ್ರಗುಪ್ತ ಮೊದಲಾದ ಪಾತ್ರಗಳು ಸಾಂದರ್ಭಿಕವಾಗಿ ಹಾಸ್ಯಗಾರನೇ ನಿರ್ವಹಿಸಬೇಕಾಗುತ್ತದೆ. ಇವೆಲ್ಲವೂ ಯಕ್ಷಗಾನದಲ್ಲಿ ಹಾಸ್ಯ ವೇಷ ಗಳಾಗಿಯೇ ಪ್ರಸಿದ್ಧವಾಗಿವೆ. ಈ ಪಾತ್ರಗಳು ಸ್ವಭಾವತಃ ಜವಾಬ್ದಾರಿ ಉಳ್ಳವುಗಳೇ ಆಗಿವೆ. ಆದರೆ ಇವು ಪ್ರೇಕ್ಷಕರನ್ನು ರಂಜಿಸುವ ರೀತಿಯಲ್ಲಿ ರೂಪಿಸುವುದು ಯಕ್ಷಗಾನದಲ್ಲಿ ಸಾಮಾನ್ಯವಾಗಿದೆ. ಪ್ರಸಂಗದ ಆವರಣ ಕೆಡದಂತೆ ಕಲಾವಿದರು ಇವುಗಳ ಮೂಲಕ ಹಾಸ್ಯರಸವನ್ನು ಪ್ರತಿಪಾದಿಸುವುದನ್ನು ಯಕ್ಷಗಾನ ರಂಗಭೂಮಿಯಲ್ಲಿ ಕಾಣಬಹುದು.

ಯಕ್ಷಗಾನದ ಕೋಡಂಗಿ ಹಾಗೂ ಹೊಗಳಿಕೆ ವೇಷಗಳು ಯಕ್ಷಗಾನದ ಪೂರ್ವರಂಗದಲ್ಲಿ ಬರುವ ಹಾಸ್ಯ ಪಾತ್ರಗಳು. ಇವು ಮಾತಿಲ್ಲದೆ ತಮ್ಮ ಆಹಾರ್ಯ ಹಾಗೂ ಆಂಗಿಕಾಭಿನಯಗಳ ಮೂಲಕ ಹಾಸ್ಯರಸ ಸ್ಫುರಿಸುವಂತೆ ಮಾಡುತ್ತವೆ. ೨೦ನೆಯ ಶತಮಾನದ ಆದಿಯಲ್ಲಿ ವಿದೂಷಕನ ಪಾತ್ರ ತುಂಬಾ ಸರಳವಾಗಿತ್ತು ಎಂಬ ಅಭಿಪ್ರಾಯವಿದೆ. ಅಲ್ಲದೆ ದೂತ, ವಿದೂಷಕ ಇವುಗಳ ವೇಷಗಳಲ್ಲೂ ವೈವಿಧ್ಯತೆಯಿರಲಿಲ್ಲ ಎಂಬ ಅಭಿಪ್ರಾಯವೂ ಇದೆ. ಆದರೆ ನಂತರದ ದಿನಗಳಲ್ಲಿ ಕಲಾವಿದರು ಯಕ್ಷಗಾನದ ಹಾಸ್ಯ ವೇಷಗಳನ್ನು ತುಂಬಾ ವೈವಿಧ್ಯಮಯವಾಗಿ ರೂಪಿಸಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ವಿದೂಷಕನ ಅಥವಾ ದೂತನ ಪಾತ್ರವೆಂದರೆ ಕಪ್ಪು ಇಜಾರ ತೊಟ್ಟು ಅದರ ಮೇಲೆ ಬಿಳಿಯ ನೀಳವಾದ ಕಸೆ ಅಂಗಿಯನ್ನು ಹಾಕಿಕೊಳ್ಳುವುದು. ತಲೆಗೆ ಕೆಂಪು ಹಾಗೂ ಬಿಳಿ ಬಣ್ಣಗಳ ವಸ್ತ್ರಗಳನ್ನು ಜೊತೆಯಾಗಿ ಸುತ್ತಿ ಬಾಲಬಿಟ್ಟ ಮುಂಡಾಸು ಕಟ್ಟಿಕೊಳ್ಳುವುದು. ಕೆಲವೊಮ್ಮೆ ಇಜಾರದ ಮೇಲೆ ಕಪ್ಪಂಚಿನ ಬಿಳಿ ಧೋತ್ರ ಉಡುವುದೂ ಇತ್ತು. ನಡುವಿಗೆ ಕೆಂಪು ಅಥವಾ ಬಿಳಿ ಶಲ್ಲೆಯನ್ನು ಬಿಗಿದುಕೊಳ್ಳುವುದೂ ಇತ್ತು. ಆದರೆ ಈ ದೂತ ಅಥವಾ ವಿದೂಷಕನ ಪಾತ್ರಗಳಲ್ಲಿ ಅನೇಕ ಬಗೆಗಳಿವೆ.

ದೇವದೂತ

ನಸುಕೆಂಪು ನಸುಹಳದಿ ಮಿಶ್ರಿತ ಬಿಳಿಯ ಬಣ್ಣದ ಪಾಕದಿಂದ ಮುಖದ ತಳಪಾಯವನ್ನು ಹಾಕುವುದು. ಹಣೆಯಲ್ಲಿ ವೈಷ್ಣವ ನಾಮ. ಅಂದರೆ ಆಯತ ವರ್ತುಲಾರ್ಧದಂತಿರುವ ಗೋಪೀನಾಮದ ಸಂಕೇತವಾಗಿರುವ ಬಿಳಿಯ ನಾಮ. ಅದರ ನಡುವೆ ಕಪ್ಪಗಿನ ಉದ್ದ ರೇಖೆ. ಬುಡದಲ್ಲಿ ಅಕ್ಷತೆಯ ಸ್ಥಾನದಲ್ಲಿ ಕೆಂಪು ತಿಲಕ. ಕಣ್ಣು ಹಾಗೂ ಕಿವಿಗಳ ನಡುವೆ ಕಣ್ಣಿಗೆ ಹತ್ತಿರದಲ್ಲಿ ಗೇರುಬೀಜ ಆಕಾರದ ಬಿಳಿಯ ರೇಖೆ, ರೇಖೆಯ ಒಳಗೆ ಮತ್ತು ಹೊರಗೆ ಕೆಂಪು ಬಣ್ಣದ ಲೇಪನ. ತುಟಿಗೆ ಕೆಂಪು, ಹುಬ್ಬಿಗೆ ಕಾಡಿಗೆ, ಸಹಜವಾಗಿರುವ ಮೀಸೆ ಇವಿಷ್ಟು ದೇವದೂತನ ಪಾತ್ರದ ಮುಖವರ್ಣಿಕೆ.

ಬಾಲ ಇಲ್ಲದ ಮುಂಡಾಸು, ಬಿಳಿಯ ಉದ್ದನೆಯ ಅಂಗಿ, ಬಿಳಿ ಪೈಜಾಮ, ಕೆಂಪು ವಾಸ್ಕೋಟು, ಸೊಂಟಕ್ಕೂ, ಹೆಗಲಿಗೂ ಸೋಗೆವಲ್ಲಿ. ಸಾಮಾನ್ಯವಾಗಿ ಜರಿಯ ಪೋಷಾಕು ಗಳನ್ನು ಬಳಸುವುದಿದೆ. ಕೆಲವೊಮ್ಮೆ ಕೆಂಪು ಬಣ್ಣದ ಮುಂಡಾಸನ್ನು ಬಳಸುವುದೂ ಇದೆ. ಹಿಂದಿನ ಕಾಲದಲ್ಲಿ ಮೀಸೆಯನ್ನು ಮಸಿಯಿಂದ ಬರೆಯುತ್ತಿದ್ದರು. ಈಗ ಕ್ರೇಪ್ ಹೇರನ್ನೇ ಬಳಸಲಾಗುತ್ತದೆ. ಕ್ಲಿಪ್ ಮೀಸೆಯ ಬಳಕೆ ಹೆಚ್ಚು.

ದೇವದೂತನ ಪಾತ್ರಗಳನ್ನೇ ಹೋಲುವ ದಾರುಕ, ಹೊಗಳಿಕೆ ಹಾಸ್ಯ, ಅತಿಕಾಯನ ಸಾರಥಿ ಮೊದಲಾದ ಪಾತ್ರಗಳ ವೇಷ ವಿಧಾನವೂ ಬಹುತೇಕ ಇದೇ ರೀತಿ ಇರುತ್ತದೆ. ಸಣ್ಣಪುಟ್ಟ ವ್ಯತ್ಯಾಸಗಳೂ ಕೆಲವೊಮ್ಮೆ ಗೋಚರಿಸಬಹುದು. ತಾತ್ವಿಕವಾಗಿ ಇವೆಲ್ಲ ವೈಷ್ಣವ ಮನೋಧರ್ಮದ ಪಾತ್ರಗಳು. ಮಾಧ್ವ ಸಂಪ್ರದಾಯವನ್ನು ಸೂಚಿಸುವ ಮುಖವರ್ಣಿಕೆ ಯಿದು. ನಾರದಾದಿ ಪಾತ್ರಗಳ ನಿರ್ವಹಣೆಗೂ ಈ ಮುಖವರ್ಣಿಕೆ ಅನುಕೂಲ ವಾಗುತ್ತದೆ. ಈ ಪಾತ್ರಗಳ ಮುಖವರ್ಣಿಕೆಯಲ್ಲಿ ಹಾಸ್ಯದ ಪ್ರವೃತ್ತಿ ಕಾಣಿಸುವುದಿಲ್ಲ.

ರಾಜದೂತ

ರಾಜರ ಆಸ್ಥಾನದ ದೂತರನ್ನು ರಾಜದೂತರ ಸಾಲಿನಲ್ಲಿ ಸೇರಿಸಲಾಗುತ್ತದೆ. ಮುಖವರ್ಣಿಕೆಯನ್ನು ವಿಕಾರವಾಗಿ ಮಾಡುವುದರ ಮೂಲಕ ಹಾಸ್ಯವ್ಯಂಜಕ ಅಂಶವನ್ನು ತೋರಿಸಲಾಗುತ್ತದೆ. ಹಲ್ಲುಗಳನ್ನು ಲೋಪವಾಗಿಸಿಯೋ, ತುಟಿಯಿಂದ ಹಲ್ಲುಗಳನ್ನು ರೂಪಿಸಿಯೋ, ಓರೆ ಮೀಸೆ ಇತ್ಯಾದಿ ವಿಕಾರಗಳ ವೂಲಕ ಹಾಸ್ಯರಸ ಸೃಷ್ಟಿಗೆ ಪೋಷಕ ವಾಗುವಂತೆ ಪಾತ್ರಗಳನ್ನು ಮಾಡಲಾಗುತ್ತದೆ. ದೇವದೂತನ ಬಣ್ಣದ ಮೂಲ ಲೇಪನವನ್ನು ಹಾಗೆಯೇ ಉಳಿಸಿಕೊಂಡು ಭೂಲೋಕದ ದೂತನನ್ನು ವಿಕಾರವಾಗಿ ಚಿತ್ರಿಸಲಾಗುತ್ತದೆ. ಅದಕ್ಕಾಗಿ ಮೇಲಿನ ಎರಡು ಹಲ್ಲುಗಳನ್ನು ಮಸಿ ಹಚ್ಚಿ ಕಾಣದಂತೆ ಮಾಡಲಾಗುತ್ತದೆ. ಕೆಳಗಿನ ತುಟಿಯಲ್ಲಿ ಬಿಳಿಯ ಬಣ್ಣದ  ಎರಡು ಹಲ್ಲುಗಳನ್ನು ಬರೆದು ಅದು ಸ್ಪಷ್ಟವಾಗಿ ಕಾಣುವಂತೆ ಸುತ್ತಲೂ ಸಪೂರವಾಗಿ ಕಪ್ಪು ಗೆರೆಯನ್ನು ಬರೆಯಲಾಗುತ್ತದೆ. ಬಿಳಿಯ ಪ್ಲಾಸ್ಟಿಕ್ ಅಥವಾ ಸಿಗರೇಟ್ ಪ್ಯಾಕಿನ ರಟ್ಟು ಇತ್ಯಾದಿಗಳಿಂದ ಕೃತಕ ಹಲ್ಲುಗಳನ್ನು ಮಾಡಿಕೊಳ್ಳುವುದೂ ಇದೆ. ಮೀಸೆಯನ್ನು ಓರೆಕೋರೆಯಾಗಿ ಚಿತ್ರಿಸುವುದೂ, ಕಟ್ಟಿಕೊಳ್ಳುವುದೂ ಇದೆ. ಬಾಲವಿರುವ ಮುಂಡಾಸು ಹಾಗೂ ಚಿತ್ರ ವಿಚಿತ್ರವಾದ ಉದ್ದನೆಯ ಬಣ್ಣದ ನಿಲುವಂಗಿ, ಪೈಜಾಮ, ಸೋಗೆವಲ್ಲಿ ಇತ್ಯಾದಿಗಳು ದೂತನ ವೇಷ ಪರಿಕರಗಳು.

ರಾಕ್ಷಸದೂತ

ರಾಕ್ಷಸ ದೂತನನ್ನು ಹಲವು ಬಗೆಯಲ್ಲಿ ಮಾಡುತ್ತಾರೆ. ಮುಖವರ್ಣಿಕೆ ಹಾಗೂ ವೇಷವಿಧಾನದಲ್ಲಿ ವಿಕಾರವನ್ನು ಸೃಷ್ಟಿಸಿ ಹಾಸ್ಯ ಉಂಟುಮಾಡುತ್ತಾರೆ. ಕಣ್ಣುಗಳ ಸುತ್ತಲೂ ಕಪ್ಪು, ಹಳದಿ, ಕೆಂಪು, ಬಿಳಿ ಬಣ್ಣಗಳನ್ನು ಬರೆಯುತ್ತಾರೆ. ಬಾಯಿಯ ಅಂಚಿನಲ್ಲಿ ಕೋರೆಹಲ್ಲುಗಳನ್ನು ಅಥವಾ ಎದುರಿನಲ್ಲಿ ಉಬ್ಬು ಹಲ್ಲುಗಳನ್ನು ಬಿಡಿಸುತ್ತಾರೆ. ಕಿವಿಗಳನ್ನು ದೊಡ್ಡದಾಗಿ ಕಟ್ಟಿಕೊಳ್ಳುತ್ತಾರೆ. ಕೆದರಿದ ಕೂದಲು, ಕಪ್ಪು ನಿಲುವಂಗಿ, ಉಬ್ಬಿದ ಹೊಟ್ಟೆ, ಕಪ್ಪು ಪೈಜಾಮ ಇದು ಸಾಮಾನ್ಯವಾಗಿ ರಾಕ್ಷಸ ದೂತನ ವೇಷ. ಮುಖವರ್ಣಿಕೆ ಯಲ್ಲಿ ವೈವಿಧ್ಯತೆಯನ್ನು ಮೆರೆಯಲು ಸಾಧ್ಯ. ಇಡೀ ಮುಖವನ್ನು ಕೇಂದ್ರವಾಗಿರಿಸಿಕೊಂಡು, ಕಪ್ಪು, ಬಿಳಿ, ಹಳದಿ ಬಣ್ಣಗಳ ವರ್ತುಲಗಳನ್ನು ಬರೆದು ಮುಖವರ್ಣಿಕೆ ಮಾಡುವುದೂ ಇದೆ. ವಿವಿಧ ರೀತಿಯ ಮುಖವರ್ಣಿಕೆಯನ್ನು ಇಲ್ಲಿ ಕಾಣಬಹುದಾಗಿದೆ.

ರಾಕ್ಷಸ ದೂತ

ರಾಕ್ಷಸ ದೂತರಲ್ಲಿ ಅನೇಕ ಬಗೆಗಳಿವೆ. ವೈವಿಧ್ಯಮಯವಾಗಿ ಕಲಾವಿದರು ರಾಕ್ಷಸ ದೂತನ ಪಾತ್ರಗಳನ್ನು ಚಿತ್ರಿಸಿದ್ದಾರೆ. ಅಂಗಗಳ ವಿಕಾರ ಕಲ್ಪನೆಯ ಮೂಲಕವೇ ಹಾಸ್ಯವನ್ನು ವ್ಯಂಜಿಸುವಂತೆ ಈ ವೇಷಗಳನ್ನು ಮಾಡಲಾಗುತ್ತದೆ. ರಾಕ್ಷಸ ದೂತನಲ್ಲಿ ಚಕ್ರದೂತ ಎಂಬೊಂದು ಕಲ್ಪನೆಯಿದೆ. ಇದು ಯಕ್ಷಗಾನದಲ್ಲಿ ಹಿಂದಿನ ಕಾಲದಿಂದಲೂ ಪ್ರಚಾರ ದಲ್ಲಿತ್ತೆಂದು ಹೇಳಲಾಗುತ್ತದೆ.

ಚಕ್ರದೂತನ ಬಣ್ಣಗಾರಿಕೆಯು ಸರಳವಾಗಿದೆ. ಆದರೆ ಅದು ವ್ಯಂಜಿಸುವ ಭಾವ ಅಪಾರ ವಾದುದು. ಮೊದಲು ಮೂಗಿನ ತುದಿಗೆ ಬಿಳಿಯ ಬಣ್ಣದಲ್ಲಿ ದೊಡ್ಡದಾದ ಒಂದು ಬೊಟ್ಟು ಹಾಕಲಾಗುತ್ತದೆ. ಅದರ ಸುತ್ತಲೂ ಬೆರಳಿನಷ್ಟು ಗಾತ್ರದ ಕಪ್ಪಾದ ವರ್ತುಲವನ್ನು ಬರೆಯುವುದು. ಅದರ ಹೊರಗಿನಿಂದ ಪುನಃ ಬಿಳಿಯ ವರ್ತುಲ ಮತ್ತೆ ಕಪ್ಪು ವರ್ತುಲ. ಹೀಗೆ ಮುಖ ಪೂರ್ತಿ ಕಪ್ಪು, ಬಿಳಿ ಬಣ್ಣಗಳ ವರ್ತುಲಗಳನ್ನು ಬರೆದರೆ ಚಕ್ರದೂತನ ಮುಖ ವರ್ಣಿಕೆಯ ಕೆಲಸ ಮುಗಿಯಿತು. ಈ ಬಣ್ಣಗಾರಿಕೆಗೆ ಹೊಂದಿಕೆಯಾಗುವಂತೆ ಕಪ್ಪು ಒಳ ಗೆರೆಗಳನ್ನು ವೃತ್ತಾಕಾರದ ಟೊಪ್ಪಿಗೆ ಅಂತಹುದೇ ಉದ್ದಂಗಿ, ಪೈಜಾಮ, ಸೋಗೆವಲ್ಲಿ ಗಳನ್ನು ಧರಿಸುತ್ತಾರೆ.

ರಾಕ್ಷಸ ದೂತ

ಕಿವಿಯ ಕೆಳಗಿನಿಂದ ತುಟಿಗಳ ಮೇಲೆ ಹಾದು ಹೋಗಿ ಇನ್ನೊಂದು ಕಿವಿಯವರೆಗೆ ಅರ್ಧಚಂದ್ರಾಕಾರವಾಗಿ ಸುಮಾರು ಒಂದು ಅಂಗುಲದಷ್ಟು ಅಗಲದ ಬಿಳಿ ಬಣ್ಣ ಬಳೆಯುವುದು. ಅದರ ನಡುವಿನಿಂದ ಉದ್ದನೆಯ ಕಪ್ಪು ಗೆರೆ. ಅಲ್ಲಲ್ಲಿ ಕಪ್ಪು ಅಡ್ಡಗೆರೆಗಳನ್ನು ಬರೆಯುವುದರ ಮೂಲಕ ಕೆಳ ದವಡೆ ಮೇಲು ದವಡೆಗಳನ್ನು ರೂಪಿಸುವುದು. ನೋಡುವಾಗ ಒಂದು ತಲೆ ಬುರುಡೆಯ ಆಕೃತಿಯನ್ನು ಹೋಲುವಂತಿರುತ್ತದೆ. ಆನಂತರ ಕಣ್ಣಿನ ಸಹಿತ ಮುಖದ ಇತರ ಭಾಗಗಳಿಗೆಲ್ಲಾ ಕಪ್ಪು ಬಣ್ಣವನ್ನು ಹಚ್ಚಲಾಗುತ್ತದೆ. ಇದರಿಂದ ಬೀಭತ್ಸ ಭಾವವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಕೆಲವರು ಕಣ್ಣಿನ ಭಾಗಕ್ಕೆ ಮಾತ್ರ ಕೆಂಪು ಬಣ್ಣ ಹಚ್ಚಿ ಅದರ ಕೇಂದ್ರ ಬಿಂದುವಿನ ಹೊರಗಿನಿಂದ ಸುತ್ತಲೂ ಕಿರಣದ ಹಾಗೆ ಬಿಳಿಯ ಗೆರೆಗಳನ್ನು ಬರೆಯುತ್ತಾರೆ. ಈ ಗೆರೆಗಳು ಕಣ್ಣು ಮುಚ್ಚುವಾಗ ಹಾಗೆಯೇ ತೆರೆಯುವಾಗ ಒಮ್ಮೆ ಸಂಕುಚಿತವಾದಂತೆ ಮತ್ತೊಮ್ಮೆ ವಿಕಾಸವಾದಂತೆ ಕಾಣಿಸುತ್ತದೆ. ಮತ್ತೆ ಕೆಲವರು ಸಹಜ ಕಣ್ಣನ್ನು ಮಸಿಯಿಂದ ಮರೆಸಿ ಹಣೆಯ ಎಡಬಲ ಬದಿಗಳಲ್ಲಿ ಹೊಸಕಣ್ಣುಗಳನ್ನು ಬರೆಯುತ್ತಾರೆ. ಬಿಳಿಯ ಬೊಟ್ಟು ಇರಿಸಿ ಸುತ್ತಲೂ ಕಣ್ಣಿನ ರೇಖೆಗಳನ್ನು ಬರೆಯುವುದೂ ಇದೆ. ವಿಚಿತ್ರ ಬಣ್ಣದ ಟೊಪ್ಪಿಗೆ, ಉದ್ದನೆಯ ಅಂಗಿ, ಪೈಜಾಮ, ಸೋಗೆವಲ್ಲಿಗಳು ಇವರ ವೇಷಭೂಷಣಗಳು. ಈ ವೇಷಗಳನ್ನು ಡೊಳ್ಳು ಹೊಟ್ಟೆಯ, ಗೂನು ಬೆನ್ನಿನ ರೀತಿ ಯಲ್ಲಿಯೂ ಚಿತ್ರಿಸಲಾಗುತ್ತದೆ.

ರಾಕ್ಷಸ ದೂತ

ಸಿರಿ ಬಾಯಿಯ ದೂತನನ್ನು ಆಟಗಳಲ್ಲಿ ಚಿತ್ರಿಸಿದ್ದೂ ಇದೆ. ತುಟಿಯ ಒಂದು ಬದಿಗೆ ಕೆಂಪು ಬಣ್ಣವನ್ನು ಹಚ್ಚಿ ತುಟಿಯನ್ನು ಇನ್ನಷ್ಟು ಉದ್ದವಾಗಿ ತೋರಿಸಲಾಗುತ್ತದೆ. ಬಾಯಿಯ ಮಧ್ಯ ಭಾಗದಲ್ಲಿ ಬಿಳಿಯ ಬಣ್ಣದಿಂದ ಉಬ್ಬು ಹಲ್ಲೊಂದನ್ನು ಬರೆದು ಉಳಿದ ಅರ್ಧ ತುಟಿಗೆ ಏನೂ ಹಚ್ಚದೆ ಹಾಗೆಯೇ ಬಿಟ್ಟು ಸಿರಿ ಬಾಯಿಯ ಚಿತ್ರಣವನ್ನು ಮಾಡುತ್ತಾರೆ. ಕೆಲವರು ಹತ್ತಿಯ ಸುರುಳಿಗೆ ಕೆಂಪು ಹಚ್ಚಿ ಓರೆ ತುಟಿಯಂತೆ ಬಾಯಿಯ ಒಂದು ಬದಿಗೆ ಅಂಟಿಸುವುದೂ ಇದೆ. ಸಿರಿ ಬಾಯಿಯನ್ನು ಚಿತ್ರಿಸಿದಾಗ ಅದಕ್ಕೆ ಸರಿಯಾಗಿ ತೊದಲು ನುಡಿಯೂ ಬರುವಂತೆ ಎಚ್ಚರವಾಗಿ ಮಾತನಾಡಬೇಕಾಗುತ್ತದೆ.

ರಾಕ್ಷಸದೂತ

ಓರೆ ಬಾಯಿ ದೂತನನ್ನು ಚಿತ್ರಿಸುವ ಹಾಸ್ಯಗಾರರಿದ್ದಾರೆ. ಒಂದು ಕೆನ್ನೆಗೆ ಹಳದಿ ಬಣ್ಣವನ್ನು ಹಚ್ಚಿ ಇನ್ನೊಂದು ಬದಿಯಲ್ಲಿ ಬಾಯಿಯನ್ನು ಓರೆಯಾಗಿ ಚಿತ್ರಿಸಲಾಗುತ್ತದೆ. ಸಾಮಾನ್ಯವಾಗಿ ಕಾಟುಬಣ್ಣದ ವೇಷಗಳ ದೂತರನ್ನು ಸಾಮಾನ್ಯವಾಗಿ ಓರೆ ಬಾಯಿಯ ವಿಧಾನದಿಂದ ಚಿತ್ರಿಸಲಾಗುತ್ತದೆ.

ರಾಕ್ಷಸ ದೂತ

ರಾವಣನು ರಾಕ್ಷಸನಾದರೂ ಅವನ ದೂತ ಇತರ ರಾಕ್ಷಸ ದೂತರಂತಲ್ಲ. ಇವನಿಗೆ ಮುಖವರ್ಣಿಕೆಯಲ್ಲಿ ವಿಕಾರವಿಲ್ಲ. ಓರೆ ಮೀಸೆ, ಚಿಕ್ಕ ಗಡ್ಡ ಇದ್ದರೆ ಸಾಕು. ಕೆಲವೊಮ್ಮೆ ತುದಿಕೆಳಗಾಗಿರುವ ಚೀಣಿ ಮೀಸೆ ಹಾಗೂ ಚೀಣಿ ಗಡ್ಡಗಳನ್ನು ಅಂಟಿಸಲಾಗುತ್ತದೆ. ಗಲ್ಲ ಮೀಸೆ, ಕೆಂಪು ಕಣ್ಣು ಮತ್ತು ತ್ರಿಪುಂಡ್ರ ನಾಮ ರಾವಣ ದೂತನ ವೈಶಿಷ್ಟ್ಯ. ಗೆರೆಗೆರೆಯ ಅಂಗಿ, ಪೈಜಾಮ, ಸೋಗೆವಲ್ಲಿಗಳನ್ನು ಧರಿಸುವುದು ಪದ್ಧತಿ.

ಯುದ್ಧ ದೂತ

ಯುದ್ಧದ ಸುದ್ದಿಯನ್ನು ತಿಳಿಸಲು ಹೆದರಿಕೊಂಡು ಅಥವಾ ಅಳುತ್ತಾ ಬರುವ ದೂತನಾದರೆ ಕೆದರಿದ ಕೂದಲಿನೊಡನೆ ಮುಂಡಾಸು ಬಿಚ್ಚಿಕೊಂಡು ಬರಲಾಗುತ್ತದೆ. ಮುಖದಲ್ಲಿ ಕೆಂಪು ಬಣ್ಣದ ಗೆರೆಗಳನ್ನು ಬರೆದು ಗಾಯಗಳನ್ನು ಸೂಚಿಸಿದರಾಯಿತು.

ಗಡಿಬಿಡಿ ದೂತ

ಈತನಿಗೆ ಬಣ್ಣಗಾರಿಕೆಯಲ್ಲಿ ಅಥವಾ ವೇಷವಿಧಾನದಲ್ಲಿ ಹೊಸತೇನಿಲ್ಲ. ಉದ್ದದ ಸೀರೆಯನ್ನು ಮುಂಡಾಸಾಗಿ ಸುತ್ತಿಕೊಂಡು ಬರುವುದು ಅದು ಸಡಿಲವಾಗಿ ಬೀಳುವುದು ಮತ್ತೆ ಕಟ್ಟಿಕೊಳ್ಳುವುದು ಇದೇ ಈ ಪಾತ್ರದ ಆಹಾರ್ಯ.

ಹೊಗಳಿಕೆ ದೂತ

ಇದು ಪೂರ್ವರಂಗದ ಹೊಗಳಿಕೆ ವೇಷದ ರೂಪದಲ್ಲಿರುತ್ತದೆ. ಸಾಮಾನ್ಯವಾಗಿ ರಾಜರನ್ನು ಹೊಗಳುವ ಕಾರಣಕ್ಕಾಗಿ ಇತನನ್ನು ವೇದಿಕೆಗೆ ತರಲಾಗುತ್ತದೆ. ಈತನ ವೆಷವಿಧಾನಗಳಲ್ಲಿ ಬಣ್ಣಗಾರಿಕೆಯಲ್ಲಿ ಯಾವುದೇ ವಿಕಾರಗಳಿಲ್ಲದೆ ಭೂಲೋಕದ ರಾಜದೂತನಂತೆ ಚಿತ್ರಿಸಲಾಗುತ್ತದೆ. ಸಾಮಾನ್ಯವಾಗಿ ಹಾಸ್ಯಗಾರ ಎಂದು ಗುರುತಾಗುವಷ್ಟು ವೇಷವಿದ್ದರಾಯಿತು.

ವಿಜಯ ಮತ್ತು ಮಕರಂದ

ವಿಜಯ ಮತ್ತು ಮಕರಂದರು ಯಕ್ಷಗಾನದಲ್ಲಿ ಹಾಸ್ಯಕ್ಕೆಂದೇ ಮೀಸಲಾದ ಎರಡು ಪಾತ್ರಗಳು. ಶ್ರೀಕೃಷ್ಣನ ಮಿತ್ರರಾದ ಇವರಲ್ಲಿ ವಿಜಯ ಕೃಷ್ಣಲೀಲೆ ಪ್ರಸಂಗದಲ್ಲೂ ಮಕರಂದ ಪಾರಿಜಾತ ಮತ್ತು ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಬ್ಬರದೂ ಒಂದೇ ತೆರನಾದ ವೇಷವಿಧಾನ. ವೈಷ್ಣವ ಪಾತ್ರಗಳಾದ್ದರಿಂದ ವೈಷ್ಣವ ನಾಮವಿರುತ್ತದೆ. ‘U’ ಆಕಾರದ ವೈಷ್ಣವ ನಾಮದ ಬುಡವು ‘V’ ಆಕಾರದಲ್ಲಿರುತ್ತದೆ. ಬಿಳಿಯ ಬಣ್ಣದ ನಾಮದ ನಡುವೆ ಇನ್ನೊಂದು ಕೆಂಪು ಬಣ್ಣದ ಉದ್ದನಾಮ ಇರುತ್ತದೆ. ಮುಖದ ಬಣ್ಣ ಸ್ವಲ್ಪ ಕಪ್ಪಾಗಿರುತ್ತದೆ. ಮುಂಭಾಗದ ಎರಡು ಹಲ್ಲುಗಳು ಕಳಚಿಹೋದಂತೆ ತೋರಿಸಲು ಹಲ್ಲುಗಳಿಗೆ ಕಪ್ಪು ಬಳಿಯಲಾಗುತ್ತದೆ. ಮೊಣಕಾಲಿನವರೆಗೆ ಕಚ್ಚೆ, ಗುಂಡಿಗಳು ಇಲ್ಲದ ತುಂಡು ಕೈಯ ಅಂಗಿ, ಕೈಯಲ್ಲೊಂದು ಕೋಲು, ಕೈಗೆ ಕೀಜಿಯ ಕಡಗ, ಕುತ್ತಿಗೆಗೆ ದೊಡ್ಡ ಕಾಯಿಗಳ ಸರ, ತಲೆಯಲ್ಲಿ ಬ್ರಾಹ್ಮಣ ವಟುವಿನ ಜುಟ್ಟು ಅದನ್ನು ನೆಟ್ಟಗೆ ನಿಲ್ಲಿಸಿ ಮಲ್ಲಿಗೆ ಮುಡಿಯುವುದು ಇದೆ. ಹೆಗಲಲ್ಲೊಂದು ಜೋಳಿಗೆ ಅದರಲ್ಲಿ ಮಂಡಕ್ಕಿ, ಹುರಿಗಡಲೆ, ಚಕ್ಕುಲಿ ಇತ್ಯಾದಿಗಳನ್ನು ಹಾಕಿಕೊಳ್ಳಲಾಗುತ್ತದೆ.

ಗೋವಳ

ವೀರಾಟಪರ್ವ ಪ್ರಸಂಗದಲ್ಲಿ ಗೋವಳನ ಪಾತ್ರ ಬರುತ್ತದೆ. ಕಪ್ಪು ಛಾಯೆಯ ಮುಖ, ಅಯ್ಯಂಗಾರರ ನಾಮ, ಕೈಯಲ್ಲೊಂದು ಬೆತ್ತ, ಅಡ್ಡಲುಂಗಿ, ಹಾಳೆಯ ಟೋಪಿ ಇಷ್ಟಿದ್ದರೆ ಗೋವಳನ ಪಾತ್ರ.

ದಾರುಕ ಮತ್ತು ಅತಿಕಾಯನ ಸಾರಥಿ

ಈ ಎರಡೂ ಪಾತ್ರಗಳ ವೇಷವಿಧಾನಗಳಲ್ಲಿ ವ್ಯತ್ಯಾಸಗಳಿಲ್ಲ. ಪಟ್ಟೆ ಕಚ್ಚೆ ಹಾಕಿ, ಉದ್ದ ಕೈಯ ಜರಿಯ ಅಂಗಿ ಧರಿಸಿ, ಸೊಂಟಕ್ಕೆ ಡಾಬು ಕಟ್ಟಲಾಗುತ್ತದೆ. ಮುಖಕ್ಕೆ ದೇವದೂತನ ಮುಖವರ್ಣಿಕೆ ಇರುತ್ತದೆ.

ಕೊಕ್ಕೆ ಚಿಕ್ಕ

ವಿರಾಟಪರ್ವ ಪ್ರಸಂಗದಲ್ಲಿ ಕೀಚಕನ ಆಪ್ತ ಸಚಿವನಾಗಿ ಬರುವ ಈ ಪಾತ್ರವು ಮುಖಕ್ಕೆ ಕಪ್ಪು ಬಣ್ಣ ಬಳಿದು ಹಣೆಗೆ ಬಿಳಿಯ ತಿಲಕ ಇಡಲಾಗುತ್ತದೆ. ತಲೆಗೆ ಜುಟ್ಟು, ಹೆಗಲಿಗೆ ಕಪ್ಪು ವಸ್ತ್ರ, ಮೊಣಕಾಲಿನವರೆಗೆ ಕಚ್ಚೆ, ಕಾಲಲ್ಲಿ ಕೆಂಪು ಬಣ್ಣ ಬರೆದು ಬಿಳಿಯ ಗುರುತು ಹಾಕಿ ರೇಸಿಗೆ ಸುರಿಯುವ ಹುಣ್ಣಿನಂತೆ ಚಿತ್ರಿಸಲಾಗುತ್ತದೆ. ಸಾಮಾನ್ಯವಾಗಿ ಬೀಭತ್ಸ ರಸ ಪ್ರತಿಪಾದನೆಗಾಗಿ ಈ ಪಾತ್ರವನ್ನು ಬಳಸಲಾಗುತ್ತದೆ. ಬೀಭತ್ಸವು ಹಾಸ್ಯಕ್ಕೆ ಪೋಷಕವಾದ ರಸವಾದ್ದರಿಂದ ಇದರ ನಿರ್ವಹಣೆ ಹಾಸ್ಯಗಾರನಿಗೆ ಸೇರಿದ್ದು.

ಬಾಹುಕ

ದಮಯಂತಿ ಪುನರ್ ಸ್ವಯಂವರ ಪ್ರಸಂಗದಲ್ಲಿ ಬರುವ ಬಾಹುಕನ ಪಾತ್ರವೂ ಹಾಸ್ಯವನ್ನೇ ವ್ಯಂಜಿಸುತ್ತದೆ. ಮುಖಕ್ಕೆ ಕಪ್ಪು ಛಾಯೆಯನ್ನು ಬಳಿದು ಬಿಳಿಯ ಬೊಟ್ಟನ್ನು ಇಡಲಾಗುತ್ತದೆ. ಕಪ್ಪು ಪೈಜಾಮ, ಅಂಗಿ, ಕೈಯಲ್ಲೊಂದು ಕೋಲು ಇದ್ದರಾಯಿತು. ಕೆಲವೊಮ್ಮೆ ಬಾಹುಕನನ್ನು ವಿಕಾರವಾಗಿ ಚಿತ್ರಿಸುವ ಸಲುವಾಗಿ ತುಟಿಯನ್ನು ಕೆಂಪು ಬಣ್ಣದಲ್ಲಿ ವಿಸ್ತರಿಸಿ ಬಾಯಿಯನ್ನು ಅಗಲಗೊಳಿಸುತ್ತಾರೆ. ಮೂಗಿಗೆ ಹಳದಿ ಬಣ್ಣವನ್ನು ಬರೆದು ಸೊಟ್ಟ ಮೂಗಾಗಿಸುತ್ತಾರೆ. ಕೈ, ಕಾಲುಗಳನ್ನು ಸೊಟ್ಟಗಿರಿಸಿಕೊಂಡು ಅಭಿನಯಿಸುವುದೂ ಇದೆ. ಬೆನ್ನು ಗೂನಾಗಿರುವಂತೆಯೂ ಇದನ್ನು ಚಿತ್ರಿಸಲಾಗುತ್ತದೆ.

ಸುಬುದ್ದಿ

ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ಹಾಸ್ಯ ಪಾತ್ರಕ್ಕೆ ಅವಕಾಶ ಕೊಡುವ ಸಲುವಾಗಿ ಬಬ್ರುವಾಹನನ ಮಂತ್ರಿಯನ್ನೇ ಬಳಸಲಾಗಿದೆ. ದೊಡ್ಡ ಮುಂಡಾಸಿನ, ಡೊಳ್ಳು ಹೊಟ್ಟೆಯ ಕಚ್ಚೆ ಅಂಗಿಯ ವೇಷವಿದು. ಬಿಳಿಯ ಗಡ್ಡ, ಮೀಸೆ ಧರಿಸಿದರಾಯಿತು.

ಮುದಿಯಪ್ಪಣ್ಣ

ಮುದಿಯಪ್ಪಣ್ಣನೆಂದರೆ ಯಕ್ಷಗಾನದಲ್ಲಿ ಬರುವ ಬೇಟೆಗಾರರ ಅಥವಾ ವನಪಾಲಕರ ನಾಯಕ. ಇದು ಹಾಸ್ಯಕ್ಕಾಗಿಯೇ ಮೀಸಲಾದ ಪಾತ್ರ. ಇದಕ್ಕೆ ನಿರ್ದಿಷ್ಟವಾದ ವೇಷ ಪರಂಪರೆ ಇದೆ. ಒಂದು ಓನಾಮ, ಎರಡು ಉಬ್ಬು ನಸುಬಿಳಿಯ ಗಡ್ಡ, ಗಲ್ಲ ಮೀಸೆ, ದೊಡ್ಡ ಹೊಟ್ಟೆ, ಕಪ್ಪು ಅಥವಾ ಚಿತ್ರ ಬಣ್ಣದ ಪೈಜಾಮ ಮತ್ತು ಅಂಗಿ. ಬಿಗಿಯಾದ ಟೋಪಿ ಅಥವಾ ಮುಂಡಾಸು. ಸೊಂಟಕ್ಕೊಂದು ವಸ್ತ್ರ ಇವಿಷ್ಟು ಮುದಿಯಪ್ಪಣ್ಣನ ವೇಷ.

ಹೊಲೆಯರು

ಮೈರಾವಣ ಕಾಳಗ ಪ್ರಸಂಗದಲ್ಲಿ ಬರುವ ಪಾತ್ರಗಳಿವು. ಮೈಯೆಲ್ಲಾ ಕಪ್ಪು ಬಣ್ಣವನ್ನು ಬಳಿದುಕೊಂಡು ಸೊಂಟಕ್ಕೊಂದು ಬಟ್ಟೆ ಸುತ್ತಿಕೊಂಡರಾಯಿತು. ಹೆಗಲಿಗೊಂದು ಶಾಲು, ತಲೆಗೆ ಹಾಳೆಯ ಟೋಪಿ. ಇಷ್ಟಿದ್ದರೆ ಹೊಲೆಯರ ವೇಷ.

ಅಗಸ

ರಜಕ ಅಥವಾ ಅಗಸನ ವೇಷ ಯಕ್ಷಗಾನದಲ್ಲಿ ಸರಳವಾಗಿದ್ದು, ಹಾಸ್ಯ ವೇಷಗಳ ಸಾಲಿಗೆ ಸೇರುತ್ತದೆ. ಮುಖಕ್ಕೆ ತಳಪಾಯದ ಬಣ್ಣವನ್ನು ಲೇಪಿಸಿ, ಒಂದೇ ಬಿಳಿ ನಾಮವನ್ನು ಹಣೆಗೆ ಹಾಕುತ್ತಾರೆ. ಮಧ್ಯೆ ಒಂದು ಕೆಂಪು ಬೊಟ್ಟು. ಅರ್ಧ ತೋಳಿನ ಅಂಗಿ, ಧೋತಿಯನ್ನು ಕಚ್ಚೆ ಹಾಕಿ ಉಡುತ್ತಾರೆ. ತಲೆಗೊಂದು ಮುಂಡಾಸು, ಕಿವಿಗೆ ಒಂಟಿ, ತೋಳಿನಲ್ಲಿ ಒಂದು ತಾಯಿತ ಇವಿಷ್ಟು ಅಗಸನ ವೇಷವಿಧಾನ. ಕೈಗಳಲ್ಲಿ ಒಂದು ಬಟ್ಟೆಯ ಗಂಟನ್ನು ಇಟ್ಟುಕೊಂಡಿರುತ್ತಾನೆ.

ಬ್ರಾಹ್ಮಣ

ಯಕ್ಷಗಾನದಲ್ಲಿ ಬ್ರಾಹ್ಮಣ ವೇಷವೆಂದರೆ ವೃದ್ಧ ಬ್ರಾಹ್ಮಣ ಎಂಬ ಕಲ್ಪನೆ ಇದೆ. ಅದಕ್ಕೆ ಅನುಸಾರವಾಗಿಯೇ ಬ್ರಾಹ್ಮಣ ವೇಷಗಳು ರೂಪುಗೊಂಡಿವೆ. ಮುಖವರ್ಣಿಕೆಯಲ್ಲಿ ವೃದ್ಧಾಪ್ಯವನ್ನು ಬಿಂಬಿಸುತ್ತಾರೆ. ಹಣೆಗೆ ಅಡ್ಡನಾಮ, ಕೆನ್ನೆಗಳಲ್ಲಿ ಗುಳಿ ಬೀಳುವಂತೆ ಕಪ್ಪು, ಕೆಂಪು ಮಿಶ್ರಿತ ಲೇಪನ, ಉಬ್ಬು ಹಲ್ಲು, ಮೈಮೇಲೆ ಭಸ್ಮ ಲೇಪನ, ಕೈಯಲ್ಲೊಂದು ಊರುಗೋಲು, ಜನಿವಾರ, ಎದೆಯ ಭಾಗದಲ್ಲಿ ಅಡ್ಡ ಸೋಗೋಲೆ, ಕಚ್ಚೆ ಹಾಕಿದ ವಸ್ತ್ರ ಇವಿಷ್ಟು ಬ್ರಾಹ್ಮಣ ಪಾತ್ರದ ವೇಷವಿಧಾನ.

ಪುರೋಹಿತ ಬ್ರಾಹ್ಮಣ

ಹಣೆಗೆ ಅಡ್ಡನಾಮವನ್ನು ಉದ್ದನಾಮವನ್ನು ಹಾಕಿ, ಕಚ್ಚೆ ಶಾಲು ಮುಂಡಾಸು ಬಿಗಿದುಕೊಂಡರಾಯಿತು. ಅಗತ್ಯವಿದ್ದರೆ ಒಂದು ಶಾಲನ್ನು ಹೊದ್ದುಕೊಳ್ಳುವುದೂ ಇದೆ.

ವೃದ್ಧ ಬ್ರಾಹ್ಮಣ

ಹತ್ತಿಯನ್ನು ಅಂಟಿಸಿ ಗಡ್ಡ, ಮೀಸೆ, ಹುಬ್ಬುಗಳನ್ನು ಬಿಳಿ ಮಾಡಿಕೊಂಡರಾಯಿತು. ಉಬ್ಬು ಹಲ್ಲನ್ನು  ತೋರಿಸುವ ಸಲುವಾಗಿ ಕಾಗದದಿಂದ ಹಲ್ಲು ಮಾಡಿ ಅಂಟಿಸುವುದು. ತುಟಿಗೆ ಕೆಂಪು, ತಲೆಗೆ ಬಾಲ ಇಳಿಬಿಟ್ಟ ಮುಂಡಾಸು, ಕಚ್ಚೆ, ಸೊಂಟಕ್ಕೊಂದು ವಸ್ತ್ರ, ಹೆಗಲಿಗೆ ಶಾಲು ಬಗಲಿಗೆ ಜೋಳಿಗೆ ಸಂದರ್ಭಕ್ಕೆ ಬೇಕಾದಂತೆ ಹಣೆಗೆ ವೈಷ್ಣವ ಅಥವಾ ಶೈವ ನಾಮಗಳನ್ನು ಹಾಕಿಕೊಂಡರಾಯಿತು.

ಶನಿ ಬ್ರಾಹ್ಮಣ

ಕುರುಚಲು ಗಡ್ಡ, ಮೀಸೆ ಬಿಗಿದು ಕಟ್ಟಿದ ಜುಟ್ಟು, ಮುಂಭಾಗದ ಎರಡು ಹಲ್ಲುಗಳಿಗೆ ಕಪ್ಪು ಬಳಿದು ಹಲ್ಲನ್ನು ಮರೆಯಾಗಿಸುವುದು. ತುಟಿಗೆ ಕೆಂಪು, ಹುಬ್ಬಿಗೆ ಕಪ್ಪು, ಕಣ್ಣಿನ ಕೆಳ ಭಾಗ ಅರ್ಧಚಂದ್ರಾಕೃತಿಯ ನಸುಕೆಂಪು ಬಣ್ಣವನ್ನು ಬಳಿಯುವುದು. ಮೊಣಕಾಲವರೆಗೆ ಅರೆ ಕಚ್ಚೆ ಇದಿಷ್ಟು ವೇಷದ ಕ್ರಮ. ಕೈಯಲ್ಲಿ ದರ್ಭೆಯನ್ನು ಹಿಡಿದು ಕೂದಲು ಬಿಚ್ಚಿದ ವೇಷವಾದರೆ ಅಪಶಕುನದ ಬ್ರಾಹ್ಮಣ ವೇಷವು ಆಗುತ್ತದೆ.

ಕೇರಳ ಪಂಡಿತ

ಮುಖಕ್ಕೆ ಭಸ್ಮ ಲೇಪಿಸಿ ಹಣೆಗೆ ಕುಂಕುಮದ ಬೊಟ್ಟು, ಓರೆ ಜುಟ್ಟು, ಕೊರಳಿಗೆ ರುದ್ರಾಕ್ಷಿ ಸೊಂಟಕ್ಕೆ ದಾವಳಿ ವಸ್ತ್ರ, ಕೈಯಲ್ಲಿ ಓಲೆ ಗ್ರಂಥ ಇಷ್ಟಿದ್ದರೆ ಮಾಟ ಮಂತ್ರವಾದ ವೈದ್ಯ ಇತ್ಯಾದಿಗಳನ್ನು ಬಲ್ಲ ಕೇರಳ ಪಂಡಿತನ ವೇಷವಾಗುತ್ತದೆ.

ಮಂಥರೆ

ಮಂಥರೆ ಪಾತ್ರವು ಕೂಡ ಹಾಸ್ಯ ಪಾತ್ರವಾಗಿಯೇ ಯಕ್ಷಗಾನದಲ್ಲಿ ಬರುತ್ತದೆ. ಮುಖಕ್ಕೆ ಇಂಗಲೀಕವನ್ನು ಸ್ವಲ್ಪ ಕಡಿಮೆ ಬಳಸಿ ಬಿಳಿಚಿದ ಮುಖದಂತೆ ಚಿತ್ರಿಸುವುದು. ಹಣೆಗೆ ಕುಂಕುಮ, ಕುತ್ತಿಗೆಗೊಂದು ಸಾಮಾನ್ಯ ಸರ, ಕಪ್ಪು, ಬಿಳಿ ಮಿಶ್ರಿತ ಕೂದಲಿನ ತುರುಬು ಕಟ್ಟಿಕೊಳ್ಳಲಾಗುತ್ತದೆ.

ಕುಬ್ಜೆ

ಕಂಸವಧೆ ಪ್ರಸಂಗದಲ್ಲಿ ಬರುವ ಕುಬ್ಜೆಯು ಗೂನು ಬೆನ್ನು ಹಾಗೂ ಕೆದರಿದ ಕೂದಲಿನ ಪಾತ್ರವಾಗಿರುತ್ತದೆ. ಹಣೆಗೆ ತಿಲಕ, ಕಚ್ಚೆ ಸೀರೆ ಉಟ್ಟುಕೊಳ್ಳುವುದು ಪದ್ಧತಿ.

ಕೆಲವೊಂದು ಪ್ರಸಂಗಗಳಲ್ಲಿ ಮದುಕಿಯ ಹಾಸ್ಯ ಪಾತ್ರವು ಬರುವುದಿದೆ. ಮುಖಕ್ಕೆ ತೆಳುವಾಗಿ ಎಣ್ಣೆ ಮಸಿಯನ್ನು ಹಚ್ಚಿ ಮುಖದ ಮೇಲಿನ ಮುಪ್ಪಿನ ನೆರಿಗೆಗಳು ಸ್ಪಷ್ಟವಾಗಿ ಕಾಣಿಸುವಂತೆ ಬಿಳಿಯ ಬಣ್ಣದ ಗೆರೆಗಳನ್ನು ಬೆರಳಿನಿಂದ ಬರೆಯುತ್ತಾರೆ. ಸಂದರ್ಭಕ್ಕೆ ಬೇಕಾದಂತೆ ತಿಲಕ, ಭಸ್ಮದ ಲೇಪನ, ಸೆರಗನ್ನು ತಲೆಗೆ ಮುಸುಕು ಹಾಕಿಕೊಳ್ಳುವುದು, ಹಳೆಯ ಸಂಪ್ರದಾಯವನ್ನು ಸೂಚಿಸುವಂತೆ ಕಿವಿಗೆ ಕೊಪ್ಪು, ಬುಗುಡಿ ಯಂತ ಆಭರಣಗಳನ್ನು ಧರಿಸುತ್ತಾರೆ. ಹಲ್ಲಿಗೆ ಮಸಿ ಹಚ್ಚಿ ಮರೆಮಾಡುತ್ತಾರೆ. ಕೆಲವೊಮ್ಮೆ ಮೇಲಿನ ಮತ್ತು ಕೆಳಗಿನ ತುಟಿಯೊಳಗೆ ಸ್ಪಂಜಿನ ತುಂಡನ್ನು ಸಿಕ್ಕಿಸಿಕೊಂಡು ಹಲ್ಲುಗಳಿರದ ಬೊಚ್ಚು ಬಾಯಿಯ ವಸಡು ಕಾಣುವಂತೆ ಮಾಡುತ್ತಾರೆ.

ಕೆಲವೊಮ್ಮೆ ಚಂದ್ರಾವಳಿ ವಿಲಾಸದಲ್ಲಿ ಅತ್ತೆಯ ಪಾತ್ರವು ಹಾಸ್ಯ ಪಾತ್ರವಾಗಿಯೇ ಬರುತ್ತದೆ. ಅದು ಅತ್ತೆಯ ಪಾತ್ರವೆಂದು ಸೂಚಿಸುವ ಸಲುವಾಗಿ ಸೊಸೆಗಿಂತ ಹೆಚ್ಚಿನ ಆಭರಣಗಳನ್ನು ತೊಟ್ಟುಕೊಳ್ಳುವುದು ಪದ್ಧತಿ. ಹೀಗೆ ಭಿಕ್ಷುಕಿ, ದೂತಿ ಮೊದಲಾದ ಪಾತ್ರಗಳೆಲ್ಲ ಸಾಮಾಜಿಕ ಹಿನ್ನೆಲೆಯ ಸಾಮಾನ್ಯ ವೇಷಭೂಷಣಗಳಲ್ಲಿ ಯಕ್ಷಗಾನದಲ್ಲಿ ಪ್ರತ್ಯಕ್ಷವಾಗುತ್ತದೆ. ಕಟ್ಟಿಗೆ ಮಾರುವವ, ಕುಂಬಾರ ಇತ್ಯಾದಿ ಪಾತ್ರಗಳನ್ನು ರಂಗದಲ್ಲಿ ತರುವ ಸಂದರ್ಭಗಳಲ್ಲೆಲ್ಲ ಯಕ್ಷಗಾನದ ವಿಶಿಷ್ಟ ವೇಷವಿಧಾನಗಳೆಂದು ಹೇಳುವ ಯಾವ ಸಂಪ್ರದಾಯಗಳು ಇಲ್ಲ. ಅವೆಲ್ಲ ಸಾಮಾಜಿಕ ವಾಸ್ತವದ ನೆಲೆಯಿಂದ ರೂಪು ಪಡೆಯುವ ವೇಷಗಳಾಗಿವೆ. ಇಲ್ಲಿನ ಮುಖ್ಯವಾದ ಗುರಿಯೆಂದರೆ ಹಾಸ್ಯ ರಸದ ಪ್ರತಿಪಾದನೆ. ರಂಜನೆಯೇ ಇಲ್ಲಿನ ಉದ್ದೇಶ. ಹಾಗಾಗಿ ಹಾಸ್ಯ ಪಾತ್ರದ ವರ್ತನೆಗಳೆಲ್ಲ ರಂಗಭೂಮಿಯಲ್ಲಿ ಏಕ ಉದ್ದೇಶಕ್ಕಾಗಿ ದುಡಿಯಬೇಕಾಗಿದೆ. ಇದರಲ್ಲಿ ಆಹಾರ್ಯದ ಪಾತ್ರವು ಪ್ರಮುಖವಾಗಿದೆ. ಉಳಿದ ಅಭಿನಯಾಂಗಗಳೆಲ್ಲ ಹಾಸ್ಯ ರಸವನ್ನು ಪ್ರತಿಪಾದಿಸುವಾಗ ಆಹಾರ್ಯವು ಅದಕ್ಕೆ ವಿರೋಧಾಭಾಸವಾಗಿ ಇರಬಾರದು ಎಂಬ ಎಚ್ಚರಿಕೆ ಹಾಸ್ಯ ಪಾತ್ರಗಳ ಚಿತ್ರಣದಲ್ಲಿ ಬಹಳ ಮುಖ್ಯವಾದದ್ದು.