ಶಾರ್ದೂಲವಿಕ್ರೀಡಿತಂ

ಶ್ರೀಗಂಗಾಧರನಂಬುಜಾಪ್ತಶತಭಾಸಂ ತ್ರೈಜಗತ್ಪಾಲಕಂ
ನಾಗಾರೂಢಮುಖಾಮರೌಘವಿನುತಂ ಕೈಲಾಸವಾಸಂ ಹರಂ |
ನಾಗಾರಾತಿವರೂಥಮಿತ್ರಮಭವಂ ನಾನಾಸುವಿದ್ಯಪ್ರದಂ |
ವಾಗೀಶಾಖ್ಯಪುರೇಶನೀವುದೆಮಗಂ ಸದ್ಭಕ್ತಿಸಂದೋಹಮಂ || ||1||

ವಾರ್ಧಕ

ಪುರಹರನ ರಾಣಿಯಂ ಕಾಳಾಹಿವೇಣಿಯಂ |
ಶರಜಾತಪಾಣಿಯಂ ಕಳಕೀರವಾಣಿಯಂ |
ಹರಿಣಾಂಕವದನೆಯಂ ಮುನಿಹದಯಸದನೆಯಂ ಕುಂದಕುಡ್ಮಲರದನೆಯಂ ||
ದುರುಳಖಳನಾಶೆಯಂ ನಿರತ ಸಂತೋಷೆಯಂ |
ಶರಣಜನಪೋಷೆಯಂ ನವರತ್ನಭೂಷೆಯಂ |
ತರಣಿಸಂಕಾಶೆಯಂ ಕುಟಜಾದ್ರಿವಾಸೆಯಂ ಸ್ಮರಿಸಿ ಪಡೆವೆಂ ಮತಿಯನು ||2||

ಕಂದ

ಹರಪುತ್ರಂ ಗಜವಕ್ತ್ರಂ |
ಹರಿಮಿತ್ರಂ ವಾಸವಾದಿತ್ರಿದಶಸ್ತೋತ್ರಂ ||
ಸ್ಥಿರತೋಷಂ ಉರಗಭೂಷಂ |
ಕರುಣದೊಳೆಮಗೀಗೆ ಮತಿಯನು ವಿಘ್ನೇಶಂ || ||3||

ವಾರ್ಧಕ

ಕಮಲದಳನೇತ್ರನಂ ನೀಲಾಭಗಾತ್ರನಂ |
ಸುಮನಸೋದ್ಧಾರನಂ ಕರುಣರಸಪೂರನಂ |
ತಮದೈತ್ಯನಾಶನಂ ಕೌಸ್ತುಭವಿಭೂಷನಂ ಮಾಕಾಂತ ನಂ ಶಾಂತನಂ ||
ದ್ಯುಮಣಿಶತತೇಜನಂ ಸ್ಮಿತಮುಖಸರೋಜನಂ |
ನಮಿತ ಜನಪಾಲನಂ ವರಪೀತಚೇಲನಂ |
ಸುಮಶರನ ತಾತನಂ ಶಂಕರನ ಪ್ರೀತನಂ ನೆನೆದುಸಿರ್ವೆಂ ಕತಿಯನು ||4||

ಭಾಮಿನಿ

ಶ್ರೀಸತಿಗೆ ತಲೆವಾಗುತಂಭೋ |
ಜಾಸನನ ಸಂಸ್ತುತಿಸಿ ಘನ ಸಂ |
ತೋಷ ದಿಂ ಶಾರದೆಗೆ ವಂದಿಸಿ ಭಕ್ತಿಯಿಂದೊಲಿದು ||
ವಾಸವಾದ್ಯರಿಗೆರಗಿ ವೇದ |
ವ್ಯಾಸಮುನಿಪೋತ್ತಮರ ಕೋಮಲ |
ಭಾಸುರಾಂಘ್ರಿಗೆ ಮಣಿದು ಪೇಳುವೆನೀ ಪ್ರಬಂಧವನು ||5||

ದ್ವಿಪದಿ

ಶುಕಮುನಿಪನನು ಭಜಿಸಿ ಸುಜನರಿಗೆ ನಮಿಸಿ |
ಸಕಲ ಕವಿಗಳ ನೆನೆದು ಭಕ್ತಿರಸವೆರಸಿ ||6||

ಭಾರತ ಮಹಾಕಥನದೊಳಗೆ ಫಲುಗುಣನು |
ಮುರಾರಿಯೊಳು ಸೆಣಸಿ ಶರವ ಪಡೆದುದನು ||7||

ಉತ್ತಮವಿದೆಂದು ವರ ಯಕ್ಷಗಾನದಲಿ |
ಬಿತ್ತರಿಪೆನಜಪುರದ ಹರನ ಕರುಣದಲಿ ||8||

ಬಾಲಭಾಷಿತವೆಂದು ನಿಂದಿಸದೆ ಧರೆಯ |
ಮೇಲುಳ್ಳ ಸಜ್ಜನರು ಕೇಳ್ವುದೀ ಕಥೆಯ ||9||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸೋಮಕುಲಸಂಜಾತನಾಗಿಹ | ಭೂಮಿಪತಿ ಜನಮೇಜಯಂಗಾ |
ಪ್ರೇಮಿ ವೈಶಂಪಾಯಮುನಿಪತಿ | ಸಾಮದಿಂದ ||10||

ವರ ಮಹಾಭಾರತ ಪುರಾಣವ | ನರುಹುತಿರಲೊಂದಿವಸ ಮುನಿಪತಿ |
ಗೆರಗಿ ಮತ್ತಿಂತೆಂದನವ ನಿಪ | ಕರವ ಮುಗಿದು ||11||

ಪರಮ ಋಷಿಕುಲತಿಲಕ ಕೇಳೈ | ಹರನೊಡನೆ ನರನೆಂತು ಕಾದಿದ |
ಶರವ ಸಂಪಾದಿಸಿದನೆಂತದ | ನೊರೆವುದಯ್ಯ ||12||

ಇಂತು ಪೇಳ್ದುದ ಕೇಳ್ದು ಮುನಪತಿ | ದಂತಿಪುರವರನನ್ನು ತಳ್ಕಿಸಿ |
ಕಂತು ಜನಕನ ನೆನೆದುಸಿರ್ದನು | ಸಂತಸದಲಿ ||13||

ವಾರ್ಧಕ

ಅವನಿಪತಿ ಕೇಳ್ದೆಲೈ ಪಿಂದಾದ ಕಥನಮಂ |
ವಿವರಿಸುವೆನಿನ್ನು ಮೇಲಣ ಕಥೆಯನುಂ ಯಮಜ |
ಪವನಸುತ ಪಾರ್ಥ ನಕುಲಾಂಕ ಸಹದೇವರಯ್ವರು ಮಾತೆಯಂ ವಿದುರನ ||
ಭವನದೊಳ್ ನಿಲಿಸಿ ದ್ರೌಪದಿಯನೊಡಗೊಂಡು ಭೂ |
ದಿವಿಜರ ಸಮೂಹದಿಂ ವಾಸಿಯಿಂ ಧರೆಯನುಳಿ |
ದಿವರು ಧೌಮ್ಯನ ಪುರೋಹಿತತನದಿ ದುಗುಡದಿಂ ಪುರವನುಂ ಪೊರಮಟ್ಟರು ||14||

ಭಾಮಿನಿ

ಧರಣಿಪತಿ ಕೇಳಾ ಯುಧಿಷ್ಠಿರ |
ನರಪತಿಯ ಬೆಂಬಳಿಯಲಯ್ದಿತು |
ಮರುಗಿ ಭೀಷ್ಮ ದ್ರೋಣ ಮೊದಲಾದವರು ದುಗುಡದಲಿ ||
ಅರಸನವದಿರ ನಿಲಿಸಿ ಗಂಗಾ |
ವರನದಿಯ ದಾಟುತ್ತವುತ್ತರ |
ಪರಮ ಪುಣ್ಯಸ್ಥಾನದಲಿ ವಿರಚಿಸಿದನಾಶ್ರಮವ ||15||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಿಡದೆ ಬರುತಿಹ ರಾಜಪುತ್ರರ | ಗಡಣವನು ಮನ್ನಣೆಯ ಭಟರನು |
ಪೊಡವಿಯಮರಸಮೂಹವನು ಕಂ | ಡೊಡನೆ ಯಮಜ ||16||

ಬೆರಳ ಮೂಗಿನೊಳಿಟ್ಟು ಚಿಂತಿಸಿ | ಮರುಗಿ ದುಷ್ಕೃತ್ಯವನ್ನು ಬಯ್ವುತ |
ಬೆರಗುವಟ್ಟಾ ಭೀಮಸೇನನ | ಕರೆದುಸಿರ್ದ ||17||

ಧರಣಿ ಕೌರವಗಾಯ್ತು ವಿಪಿನಾಂ | ತರನಿವಾಸಿಗಳಾದೆವೈ ಭೂ |
ಸುರರು ಬರಲೇಕಿವರು ಹೇಳೆಂ | ದರಸ ನುಡಿದ ||18||

ಕಂದ

ಭೂರಮಣಂ ಪೇಳಿದುದಂ |
ಮಾರುತನಾತ್ಮಜ ಲಾಲಿಸಿ ಮನಮರುಗುತ್ತಂ ||
ಧಾರಿಣಿಸುರರೊಳ್ ತಾ ಗಂ |
ಭೀರದೊಳಿಂತೆಂದನೆಲ್ಲರುಂ ಕೇಳ್ ವೋಲುಂ ||19||

ರಾಗ ಸಾಂಗತ್ಯ ರೂಪಕತಾಳ

ನಿಲ್ಲಿರೈ ದ್ವಿಜರು ನೇಮವ ಕೊಳ್ಳಿ ಭೂಪನೊ | ಳೆಲ್ಲ ಪಿಂತಿರುಗಿ ಯೋಚಿಸದೆ ||
ಸಲ್ಲದೀ ವನವಾಸ ನಿಮಗೆನೆ ಕೇಳ್ದವ | ರೆಲ್ಲರೊಟ್ಟಾಗಿ ಹೇಳಿದರು || ||20||

ಏಕೆಮ್ಮನೂರಿಗಟ್ಟುವಿರಿ ಸಜ್ಜನಸಂಗ | ಬೇಕೆಂಬ ಮನದಿ ಬಂದಿಹೆವು ||
ಆ ಕೌರವನ ಕೂಡೆ ರಾಜ್ಯದೊಳಿಹುದರಿಂ | ದೀ ಕಾಡೊಳಿಹೆವು ಸೌಖ್ಯದಲಿ ||21||

ನೀವೆ ಪಾಲಕರಲ್ಲದೆಮಗ ಮತ್ತಿನ್ನೊರ್ವ | ಭೂವರನನು ಕಾಂಬುದುಂಟೆ ||
ಆವ ಘೋರಾರಣ್ಯಕಯ್ದಿದರ್ಬಹೆವೆಮ್ಮ |  ಕಾವ ಕರ್ತಗಳು ನೀವಯ್ಸೆ ||22||

ಭಾಮಿನಿ

ಎನಲು ಧರ್ಮಜ ಕೇಳ್ದು ಚಿಂತಾ |
ವನಧಿಯಲಿ ಮುಳುಗುತ್ತಲೀ ಕಾ |
ನನನಿವಾಸದೊಳೆಂತು ರಕ್ಷಿಪೆನೀ ಮಹೋತ್ತಮರ ||
ದನುಜಹರನೇ ಬಲ್ಲನಿಳೆಯೊಳು |
ಜನಪರಾರೆನ್ನಂತೆ ಪಾಪಿಗ |
ಳೆನುತ ದುಃಖಿಸೆ ಧೌಮ್ಯನಿಂತೆಂದನು ಯುಧಿಷ್ಠಿರಗೆ ||23||

ರಾಗ ಮಾರವಿ ಏಕತಾಳ

ಜನಪಾಲಾಗ್ರಣಿ ಬಿಡು ಬಿಡು ನಿನ್ನಯ |
ಮನಸಿನ ದುಗುಡವನು ||
ಇನಿತೀ ಕೆಲಸಕೆ ಯೋಚನೆಯೇಕೆಲೊ |
ದಿನಮಣಿಯನು ಭಜಿಸು ||24||

ಬಗೆಬಗೆ ಷಡುರಸದನ್ನವು ದೊರೆವುದು |
ಸುಗುಣ ನೀ ಕೇಳೆನಲು ||
ಜಗತೀವಲ್ಲಭ ಧೌಮ್ಯನ ಮಾತಿಗೆ |
ಮಿಗೆ ಸಂತೋಷದೊಳು ||25||

ಬಂದಾಗಂಗಾನದಿಯೊಳು ಸ್ನಾನವ |
ನಂದು ರಚಿಸಿ ಶುಚಿಯಿಂದ ||
ನಿಂದಾ ತೀರದಿ ರವಿಯ ನಿರೀಕ್ಷಿಸು |
ತಂದು ಸಮಾಧಿಯಲಿ ||26||

ತವದಿಂದಿರಲಾ ಕ್ಷಣದೊಳು ಮೆಚ್ಚಿಯೆ |
ತಪನನು ನಡೆತಂದ ||
ಉಪಚರಿಸಲು ಕಣ್ದೆರೆದೀಕ್ಷಿಸಿ ಭೂ |
ಮಿಪ ಸಂಸ್ತುತಿಗೆಯ್ದ ||27||

ಧರಣಿಪ ಕೇಳಕ್ಷಯಪಾತ್ರವ ನಾ |
ಕರುಣದಿ ನಿನಗೀವೆ ||
ತರುಣೀಮಣಿ ದ್ರೌಪದಿ ಬಡಿಸಲಿ ಭೂ |
ಸುರರಿಗುಳಿದ ಜನಕೆ ||28||

ಅದರಿಂ ಮೇಲಯ್ವರು ನೀವುಂಬುದು |
ಸುದತಿಯು ಮತ್ತುಣಲಿ ||
ವಿಧವಿಧದನ್ನವು ದಿನದಿನಕಾಹುದು |
ಬೆದರದಿರೆನುತಿತ್ತ ||29||

ವಾರ್ಧಕ

ಧರಣಿಪತಿಯಾಲಿಸೈ ಕನಕಪಾತ್ರೆಯನಿತ್ತು |
ಮರವಿಂದಸಖನಯ್ದಲಿತ್ತಲುಂ ಪಾಂಡವರ್ |
ಹರುಷದಿಂದಿರಲಿತ್ತಲುಂ ಹಸ್ತಿನಾವತಿಗೆ ಮೈತ್ರೇಯ ಮುನಿಪನಯ್ದಿ ||
ಕುರುಪತಿಯೊಡನೆ ಪಾಂಡುಸುತರನಂ ಮರಳಿ ನೀ |
ಕರೆಸೆನಲ್ ಖತಿಯಿಂದವಂ ತೊಡೆಯನುಂ ತಟ್ಟ |
ಲುರು ಕೋಪದಿಂ ತೊಡೆಯೊಳಂತ್ಯಮಾಗಲಿ ನಿನಗೆನುತ ಮುನಿ ಶಪಿಸಿ ನಡೆದನು ||30||

ರಾಗ ಭೈರವಿ ಝಂಪೆತಾಳ

ಇತ್ತ ಪಾಂಡವರು ವಿ | ಪ್ರೋತ್ತಮರ ಕೂಡಿಕೊಂ |
ಡತ್ಯಂತ ಹರುಷ ದಿಂ | ದಾಪ್ತಜನಸಹಿತ ||31||

ಘನಪರಾಕ್ರಮದಿ ಕಾ | ನನಕೆ ಬರೆ ಮೂರನೆಯ |
ದಿನಕೆ ಕಾಮ್ಯಕವೆಂಬ | ವನಸಮೀಪದೊಳು ||32||

ತೋರುತಿರಲಲ್ಲಿ ಕಿ | ರ್ಮೀರನೆಂಬವನೊರ್ವ |
ವೀರ ಬಕನಣ್ಣನವ | ನಾರುಭಟೆಯಿಂದ ||33||

ತಡೆದಿವರ ಪಾಳೆಯವ | ನೊಡನೆ ಹೂಂಕರಿಸಿ ಕ |
ಣ್ಗಿಡಿ ಗೆದರಿನಿಂದನಾ | ಧಡಿಗ ದಾನವನು ||34||

ಕಂದ

ನಿಂದಾ ದಾನವನಂ ಕಂ |
ಡಂದಾ ವಿಪ್ರೌಘಮಯ್ದೆ ಬೆದರುತ್ತಾಗಂ ||
ಬಂದಾ ಧೌಮ್ಯಂ ತಾ ದಿ |
ಗ್ಬಂಧನವಂ ಗೆಯ್ದು ಪೇಳ್ದ ಭೂಸುರರರ್ಗಂ ||35||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಯಾಕೆ ಬೆದರುವಿರೈ ದ್ವಿಜೋತ್ತಮ | ರೀ ಕುಠಾರನ ಗೆಲುವಡೆಮ್ಮಯ |
ಸಾಕಿದವನಿಪನೆಂದ ಧೌಮ್ಯ ವಿ | ವೇಕದಿಂದ ||36||

ಅನಿತರೊಳಗರ್ಜುನನು ತನ್ನಯ | ಧನುವ ಝೇವಡೆಗಯ್ದುತಿರೆ ಕಂ |
ಡನಿಲಸುತನಡಹಾಯ್ವುತೆಂದನು | ದನುಜನೊಡನೆ ||37||

ಖೂಳ ಖಳ ಕೇೆಲವೊ ಬಲುಹನು | ಬಾಲವದ್ಧರ ಮೇಲೆ ತೋರ್ಪೆಯ |
ಕಾಲನವರಿಂಗೀವೆ ನಿನ್ನನು | ಸೀಳಿಭರದಿ ||38||

ಎಲವೊ ಮನುಜಾಧಮನೆ ನಿನ್ನಯ | ತಲೆಯನರಿದೀ ಜನ ಸಮೂಹವ |
ನಲಸದೀ ಕ್ಷಣ ತಿಂಬೆನೊಂದರೆ | ಗಳಿಗೆಯೊಳಗೆ ||39||

ಅನುಜನಾಗಿಹ ಬಕನ ನಿನ್ನಯ | ತನುವ ಸೀಳಿದು ತೆಗೆವೆನೀ ಕ್ಷಣ |
ವೆನಲು ಗಹಗಹಿಸುತ್ತ ಮಾರುತ | ತನಯ ನುಡಿದ ||40||

ದನುಜ ಕೇಳ್ ನಿನ್ನನುಜ ತನ್ನಯ | ತನುವಿನೊಳಗಿಲ್ಲಾತ ಯಮಪ |
ಟ್ಟಣವ ತೋರ್ಪೆನು ಕ್ಷಣದಿಯೆನ್ನುತ | ಘನತೆಯಿಂದ ||41||

ರಾಗ ಶಂಕರಾಭರಣ ಮಟ್ಟೆತಾಳ

ಎನಲು ದೈತ್ಯ ರೋಷದಿಂದ ಮರನ ಮುರಿದನು |
ಕನಲಿ ಗರ್ಜಿಸುತ್ತ ಹೊಯ್ದನನಿಲಸುತನನು ||
ಮನದಿ ರೋಷವೆತ್ತು ಮಾರುತಕುಮಾರನು |
ದನುಜನನ್ನು ಹೊಕ್ಕು ತಿವಿದನತಿ ಬಲಾಡ್ಯನು ||42||

ತಿವಿದ ಹತಿಗೆ ಧರೆಗೆ ಬೀಳುತೆದ್ದು ಭರದಲಿ |
ದಿವಿಜವೈರಿ ಭುಜವನೊದರಿಸುತ್ತ ಖತಿಯಲಿ ||
ಅವನಿಯೊಡೆವ ತೆರದಿ ಕೂಗೆ ಕಂಡು ವಿಪ್ರರು |
ಪವನತನುಜ ಬೇಗಲಿವನ ತೀರ್ಚುಯೆಂದರು ||43||

ಬುಧರು ಬೆದರುವುದನು ಕಂಡು ಭೀಮಸೇನನು |
ಗದೆಯ ತೂಗುತಭಯವಿತ್ತು ಮತ್ತೆ ಖಳನನು ||
ಇದಿರು ನಿಲ್ಲು ನಿಲ್ಲೆನುತ್ತ ಭಾರಿ ಗದೆಯೊಳು |
ತ್ರಿದಶವೈರಿಗೆರಗೆ ಬಿದ್ದನವನು ಧರೆಯೊಳು ||44||

ಭಾಮಿನಿ

ಗದೆಯ ಹೊಯ್ಲಲಿ ಕೆಡೆದವನ ಕಂ |
ಡಧಿಕ ಹರುಷದಿ ಭೀಮನೆಳೆದಾ |
ಡಿದನು ಹುಡಿಯಲಿ ಹೂಳಿದನು ಕಿರ್ಮೀರದಾನವನ ||
ಬುಧರು ಕಾಣುತ ಖಳನ ಶವವನು |
ಮದದಿ ಮರುತಾತ್ಮಜನನೆಲ್ಲರು |
ವಿಧವಿಧದಿ ಹೊಗಳಿದರು ನಮ್ಮನು ನೀನೆನುತ ||45||

ರಾಗ ಕೇದಾರಗೌಳ ಅಷ್ಟತಾಳ

ಮುಂದಿನ್ನು ಭಯವಿಲ್ಲ ನಮಗೆ ಈ ವನದೊಳ |
ಗೆಂದು ಧರ್ಮಜ ನಗುತ ||
ಬಂದೆಲ್ಲರೊಡನೆ ಕಾಮ್ಯಕವೆಂಬ ವದೊಳ |
ಗಂದವಾಗಿಹ ಸ್ಥಳದಿ ||46||

ಎಲೆಮನೆಗಳ ರಚಿಸಿಯೆ ಪಾಂಡುತನುಜರು |
ಜಲಜಮಿತ್ರನು ದಯದಿ ||
ಒಲಿದಿತ್ತಕ್ಷಯಪಾತ್ರದಿಂದಲಿ ಭೂಸುರ |
ಕುಲಕೆ ತಪ್ತಿಯಪಡಿಸಿ ||47||

ದಿನದಿನಕೀಪರಿಯಿಂದಿರುತಿರ್ದರು |
ಮನೆಯಿಂದಧಿಕವೆನಿಸಿ ||
ವನವಾಸವಾಯ್ತೆಂಬ ವ್ಯಾಕುಲಮಿಲ್ಲದೆ |
ವನಜನಾಭನ ದಯದಿ ||48||

ವಾರ್ಧಕ

ಇಂತು ಅರಣ್ಯವಾಸದಿ ಪಾಂಡುನಂದನರು |
ಕಂತುಪಿತನಂ ಮನದಿ ನೆನೆವುತ್ತ ವಿಪ್ರರಂ |
ಸಂತುಷ್ಟಿಬಡಿಸುತಿರೆ ವಹಿಲದಿಂ ಪರ್ಬಿತೀ ವಾರ್ತೆ ದ್ವಾರಾವತಿಯೊಳು ||
ದಂತಿಪುರವರನನುಜರೊಡಗೂಡಿ ವನವಾಸ |
ಮಂತಳೆದನೆಂದು ಕೇಳ್ದಲ್ಲಿರುವ ಹರಿಕಾರ |
ರುಂ ತಳುವದೋಳ್ ಬಂದು ಹರಿಯ ಸಿರಿಚರಣಮಂ ಕಂಡೆರಗುತಿಂತೆಂದರು ||49||

ರಾಗ ಕೇದಾರಗೌಳ ಅಷ್ಟತಾಳ

ಲಾಲಿಸು ಜೀಯ ಪಾಂಡವರಿಗೆ ಕಾಂತಾರ |
ದಾಲಯವಾಯಿತಂತೆ ||
ಖೂಳ ಕೌರವ ಕಪಟದ ಜೂಜೊಳವದಿರ |
ಸೋಲಿಸಿ ಗೆಲಿದನಂತೆ ||50||

ಧಾರಿಣಿಯನು ಬಿಟ್ಟು ನಾರಸೀರೆಯನುಟ್ಟು |
ನಾರಿ ದ್ರೌಪದಿ ಸಹಿತ ||
ಅರಣ್ಯ ಕಯ್ದಿದರ್ ಪಾಂಡುನಂದನರೆಂಬ |
ವಾರತೆ ಕೇಳ್ದೆವಿಂದು ||51||

ಎನಲಾ ಮಾತನು ಕೇಳಿ ಮನದಿ ದುಃಖಿಸುತಲೆ |
ವನಜಾಕ್ಷ ಚಿಂತಿಸುತ ||
ಘನಕ್ಲೇಶದಲಿ ಮರುಗುತ ತನ್ನೊಳೆಂದನು ||
ಮನುಜರಂದದಲಿ ತಾನು ||52|

ಶಿವ ಶಿವ ಧರ್ಮನಿಷ್ಠರಿಗೆ ಕಾಂತಾರದ |
ಭವನವು ದೊರೆವುದಾಯ್ತೆ ||
ನವೆದಾರು ಪಿರಿದಾಗಿ ಪಗೆಯಾದ ಪಾಪಿ ಕೌ |
ರವನಿಂದ ಸನ್ಮಾರ್ಗರು ||53||

ಹಲವು ಶಾಸ್ತ್ರವ ಬಲ್ಲನಾ ಧರ್ಮಸುತನೇಕೆ |
ಖಳರೊಳಗಾಡಿದನೊ ||
ಹಳುವದೊಳೆಂತವನಿಪರಿಹರೆನ್ನುತ |
ನಳಿನಾಕ್ಷ ಮರುಗಿದನು ||54||

ಭಾಮಿನಿ

ಮರುಗಿ ಬಿಸುಸುಯ್ವುತ್ತಲಾ ಭ |
ಕ್ತರನು ಕಾಂಬರ್ತಿಯಲಿ ಸೈನಿಕ |
ವೆರಸಿ ಪೊರಟನು ಶರಣರೇನ್ ಘನವೋ ಸನಾಥನಿಗೆ |
ಅರಸ ಕೇಳಂದಣಗಳಲಿ ಬಂ |
ದರು ಸತೀನಿಕುರಂಬ ವಾದ್ಯದ |
ಭರಿತ ಘೋಷದೊಳಾ ಕ್ಷಣವೆ ನಡೆತಂದನಸುರಾರಿ ||55||

ರಾಗ ಮಧ್ಯಮಾವತಿ ತ್ರಿವುಡೆತಾಳ

ಭೂರಿವೈಭವದಿಂದ ಯಾದವ | ವೀರನೊಡನಯ್ತರಲು ಘನ ಗಂ |
ಭೀರ ಭೇರಿಯ ರಾವದಿಂ ಸ್ತ್ರೀ | ವಾರಸಹ ಶತಶೂರತೇಜದಿ |
ವೀರಪಾಂಡವರಿರ್ಪ ವನವನು | ಸಾರಬೇಕೆಂದೆಂಬ ತವಕದಿ |
ಚಾರುಮೌಕ್ತಿಕಹಾರ ದೈತ್ಯವಿ | ದಾರ ಶರಣಾಗತರನೀಕ್ಷಿಪ |
ತೋಷದಿಂದ | ಬಂದ ವಿ | ಲಾಸದಿಂದ ||56||

ವಾರ್ಧಕ

ಅರಸ ಕೇಳಿತ್ತಲಚ್ಯುತನಿಂತು ಬರುತಿರಲು |
ಧರೆಗಧಿಪರೊಳ್ ಪಾಂಡು ನಂದನರ್ಗಾಪ್ತರಾ |
ದರಸುಗಳು ದ್ರುಪದ ಕುಂತೀಭೋಜ ಮುಖ್ಯರೀ ವಾರ್ತೆಯಂ ಕೇಳ್ದು ಮರುಗಿ ||
ಭರದಿಂದ ಪಾಂಡುಸುತರಂ ನೋಳ್ಪ ತವಕದಿಂ |
ದಿರದೆ ಕಾಮ್ಯಕವನಕೆ ಬರಲವರನುಪಚರಿಸಿ |
ಹರಿಯನುಂ ನೋಳ್ಪರ್ತಿಯಿಂ ಧರ್ಮಜಂ ಸೋದರರ್ವೆರಸಿ ಪೊರಮಟ್ಟನು ||57||