ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಶಬರಯೆನ್ನ ಶರದೊ | ಳಳಿದುದೀ ವರಾಹವಿದರ |
ಬಳಕೆ ನಿನಗದೇಕೆ ಸಾರು | ಕೆಲಕೆ ಮನದಲಿ ||
ಛಲಗಳುಳ್ಳಡೆಮ್ಮ ಸೆಣಸು | ಸುಲಭವಲ್ಲ ತೀರ್ಚಬೇಡ |
ತಲೆಯ ಋಣವ ಕಳುಹು ನಿನ್ನ | ದಳದ ಪತಿಯನು  ||120||

ಎನಲು ನಗುತಲಭವನವನ | ಮನದ ಧತಿಗೆ ಹಿಗ್ಗುತಾಗ |
ಘನ ಪರಾಕ್ರಮವನು ತೋರ್ದ | ವನಿತೆ ಗಿರಿಜೆಗೆ ||
ಮನಸಿನಲ್ಲಿ ಭಕ್ತನೊಡನೆ | ಸೆಣಸುವರ್ತಿಯಿಂದ ಸುರಪ |
ತನುಜಗೆಂದನಾ ಸಹಸ್ರ | ದಿನಪತೇಜನು ||121||

ಲಾಲಿಸಿನ್ನು ತಪಸಿ ತಪಸಿ | ನೂಳಿಗವನು ಬಿಟ್ಟು ನಮ್ಮೊ |
ಳಾಳುತನಕೆ ಬರುವೆಯೇನೊ | ಖೂಳರಂದದಿ ||
ಕೇಳು ನಿನಗೆ ಶಸ್ತ್ರಚಯದ | ಮೇಳವೇಕೆ ಬಿಡೆವು ನಮ್ಮ |
ಕೋಲಲಳಿದ ಕಿಟಿಯನೆಂದ | ಫಾಲನೇತ್ರನು ||122||

ಮರುಳು ವ್ಯಾಧ ಬನದ ಹುಲ್ಲೆ | ಮರಿಗಳನ್ನು ಮರೆಯೊಳಿದ್ದು |
ತರಿದ ಬಲುಹ ತೋರು ತ | ನ್ನಿದಿರು ಗರ್ವದಿ ||
ಹರನ ಭಕ್ತರಾವು ಶಸ್ತ್ರ | ವೆರಸಿ ತಪವಮಾಳ್ಪೆವಧಟ |
ನರಿಯದೆಮ್ಮ ಕೆಣಕಬೇಡ | ಮರುಳೆ ಸುಮ್ಮನೆ ||123||

ಎಂದ ಪಾರ್ಥನೊಡನೆ ಶಬರ | ನೆಂದನಹುದು ಮನದಿ ಮಗವ |
ಕೊಂದು ಮೆಲುವುದೆಮ್ಮ ಕುಲಕೆ | ಸಂದ ಬಿರುದದು ||
ಇಂದುಧರನು ಬಂದು ತಡೆದ | ರಿಂದು ಬಿಡೆವು ಛಲವನೆನಲಿ |
ಕಂದು ನರನು ಖತಿಯೊಳಿದಿರು | ನಿಂದನಾಚೆಗೆ ||124||

ಕಂದ

ಕಿನಿಸಿಂದಂ ಸಿತತುರಗಂ |
ಧನು ಶರ ಕೊಂಡಕ್ಷಿಯಿಂದುಗುಳುತ ಕಿಡಿಯಂ ||
ವನಚರ ನಿನಗೇಕೆನುತಂ |
ಘನ ಗರ್ವದಿ ಪೂಡಿದನುದ್ಧತ ಮಾರ್ಗಣವಂ ||125||

ರಾಗ ಶಂಕರಾಭರಣ ಮಟ್ಟೆತಾಳ

ಪೂಡಿ ಶರವ ಸೇದಿ ಕೆನ್ನೆಗುಗಿದು ಪಾರ್ಥನು |
ಬೇಡನೆಂಬ ಬಗೆಯೊಳೆಚ್ಚನಯ್ದೆ ಹರನನು ||
ಕೂಡೆ ಕಿಡಿಯನುಗುಳಿ ಬರುವ ಬಾಣತತಿಯನು |
ನೋಡಿ ಗಣರು ಬೆದರಲೆಂದನವರೊಳಭವನು ||126||

ಗಜಬಜಿಸುವಿರೇತಕೆನಗೆ ಭಜಕನೀತನು |
ಸುಜನ ಜನರು ನೋಡಿರಿವನ ಭುಜದ ಬಲುಹನು ||
ಭಜಕನೊಡನೆ ಸೆಣಸಿ ನೋಳ್ಪೆನೆನುತಲೀಶನು |
ವಿಜಯನತ್ತ ನೋಡಿ ಪಿಡಿದ ನಗುತ ಧನುವನು ||127||

ಎಲವೊ ತಪಸಿ ಕದನದಾಸೆ ಪಡುವೆಯೇತಕೆ |
ಕಲಹಕಾವು ಬಂದುದಿಲ್ಲ ನಿನ್ನ ಮೌನಕೆ ||
ಸಲುವ ಬಿರುದು ನಮ್ಮ ಕುಲಕೆ ಬಿಡೆವು ಛಲವನು |
ನಿಲು ನಿಲಾದಡೆನುತ ತರಿದನವನ ಶರವನು  ||128||

ಫಡಕಿರಾತ ಬೇಡ ನಿನಗೆ ಶಪಥವೆನ್ನಲಿ |
ಬಡ ತಪಸ್ವಿಯೆಂದು ಬಗೆದೆ ನಿನ್ನ ಮನದಲಿ ||

ಒಡಲ ಬಗಿವೆನೊಂದು ಶರದಿ ನೋಡೆನುತ್ತಲಿ |
ಮಡನನೆಚ್ಚನಸ್ತ್ರಕುಲದಿ ಮತ್ತೆ ಖತಿಯಲಿ ||129||

ಬಡವನಾಗು ಭಟನೆಯಾಗು ವ್ಯರ್ಥವೀ ನುಡಿ |
ಕೊಡುವೆಯೇತಕೆಮಗೆ ಶಿರವ ಪಿಂತೆ ಸಾರ್ ನಡಿ ||

ತೊಡುವ ಶರಕೆ ಕರುಣವಿಲ್ಲ ನೋಡೆನುತ್ತಲಿ |
ಮಡನು ನರನ ಮುಸುಕೆ ಶಸ್ತ್ರಗಡಣದಿಂದಲಿ || ||130||

ವಾರ್ಧಕ

ಹರನ ಶರಜಾಲಮಂ ತರಿದು ಪ್ರತಿಕೂಲಮಂ |
ಬರಮಯ್ದೆ ಬಾಣ ಮಯಮಾಗಲೆಚ್ಚಂ ವಿಜಯ |
ನುರಿಯುಗುಳುತಂಬುಗಳ್ ಬಳಿಯಂಬಿಗಿಂಬುಗಳ್ ಕಾಣದಂತಭ್ರಕಡರೆ ||
ಹರನದರ ಘಾತಿಯಿಂ ಕೆರಳಿ ನಸುಖಾತಿಯಿಂ |
ತರಿಯುತಾ ಶರಗಳಂ ನರನನಬ್ಬರಗಳಂ |
ಪರಿಕಿಸಿ ವಿಲಾಸದಿಂ ಕೈರಾತವೇಷದಿಂ ಸೆಣಸುತಿರ್ದಂ ನರನೊಳು ||131||

ರಾಗ ಭೈರವಿ ಏಕತಾಳ

ಹರನೆಂದರಿಯದೆ ನರನು | ಮಗು | ಳುರುತರ ಮಂತ್ರಾಸ್ತ್ರವನು ||
ಭರದಿಂದೆಸುತಿರಲಿವನು | ಘನ | ಹರುಷದಿ ನುಂಗಿದ ಶಿವನು ||132||

ಕಂಡರ್ಜುನ ಖಾತಿಯಲಿ | ಕೆಂ | ಗೆಂಡ ಕಾರುತ ನೇತ್ರದಲಿ ||
ಕೊಂಡಕ್ಷಯ ಬಾಣವನು | ಮುಂ | ಗೊಂಡಭವನ ಮುಸುಕಿದನು ||133||

ಕಿರುನಗೆಯಲಿ ಶಂಕರನು | ಬಹ | ಶರಗಳ ತರಿದೊಟ್ಟಿದನು ||
ನರನದ ಕಾಣುತಲೆಂದ | ಮನ | ಮರುಗುತ ಪೇಳಿದನೊಂದ ||134||

ಭಾಮಿನಿ

ಧರೆಯೊಳೆನಗಿದಿರಾಗಿ ಕಾದುವ |
ಧುರಸಮರ್ಥರ ಕಾಣೆನೀ ಶಾ |
ಬರನದೇಂ ಸಾಹಸಿಯೊ ತೀರ್ಚಿದನಕ್ಷಯಾಸ್ತ್ರವನು ||
ಹರನ ನಾ ಮೆಚ್ಚಿಸುವೆನೆಂದರೆ |
ದುರುಳ ಕಂಟಕನಾದನೈ ಬಡಿ |
ದುರುಳಿಚುವೆ ನಾನೆನುತಲಪ್ಪಳಿಸಿದನು ಚಾಪದಲಿ ||135||

ರಾಗ ಶಂಕರಾಭರಣ ಮಟ್ಟೆತಾಳ

ಧನುವಿನಿಂದ ಪೊಡೆಯೆ ಕಾಣು | ತನಘ ದಂಡೆಯಿಂದಲಂದು |
ಝುಣುಗೆ ಕಂಡು ಪೊಯ್ದನಾಗ | ಲಲನನೇತ್ರನ ||
ಬಿನುಗು ಶಬರಯೆನ್ನ ಕೂಡೆ | ಸೆಣಸಬೇಡವೆನುತ ರೋಷ |
ಕನಲಿ ಭರದಿ ನಿಲಲು ಬಳಿಕ | ಮನದ ಸತ್ತ್ವದಿ  ||136||

ಕಂಡು ಹರನು ಪಾರ್ಥನು | ದ್ದಂಡತನದಿ ಧನುವ ಸೆಳೆದು |
ಕೊಂಡನರನು ಧನುವ ರೋಷ | ಗೊಂಡು ನಗುತಲೆ ||
ಚಂಡಬಲ ಕಿರೀಟಿ ಖಡ್ಗ | ಕೊಂಡು ಫಡ ಕಿರಾತ ನಿನ್ನ |
ದಿಂಡುದರಿವೆನೆನುತಲೆರಗೆ | ರುಂಡಮಾಲನು  ||137||

ಕರದ ಖಡ್ಗವನ್ನು ಸೆಳೆಯೆ | ನರನು ಮರವೆಯಿಂದ ಮತ್ತೆ |
ಗಿರಿಶನೆಂದು ತಿಳಿಯದಯ್ದೆ | ಮರನ ಕೊಂಬಿಲಿ ||
ಭರದಿ ಪೊಯ್ಯಲಾಗ ಕಂಡು | ದುರುಳ ಕೆಡೆಯೆನುತ್ತಲಿಡಲು |
ತರಿವುತದನು ಪಾರ್ಥಗೆಂದ | ಪುರವಿನಾಶನು  ||138||

ಎಲವೊ ತಪಸಿ ಶಸ್ತ್ರಹೀನ | ರೊಳಗೆ ಸೆಣಸೆವಾವುದೀಗ |
ಬಲುಮೆಯಿರ್ದಡಿದಿರು ನಿಲ್ಲು | ಬಳಲಲೇತಕೆ ||
ಹಲವು ದಿವಸ ತಪದೊಳಿರ್ದು | ತಲೆಗೆ ಪಿತ್ತವಡರಿ ಭ್ರಾಂತು |
ಗೊಳಲು ಬೇಡವೆನುತ ನುಡಿದ | ಮುಳಿದು ವಿಜಯಗೆ ||139||

ಎಲವೊ ಶಬರ ಬೇಡ ನಿನ್ನ | ಕಲಹಕಸ್ತ್ರವೆನ್ನ ಭುಜದ |
ಬಲುಹ ನೋಡು ನಿಲ್ಲು ಮುಷ್ಟಿ | ಕಲಹಕೆಂದೆನೆ ||
ಭಳಿರೆಯೆನುತ ಗಣರು ಬೆರಗು | ದಳೆಯಲೀಶ ಕಾಣುತವನ |
ಬಲುಹ ಪೊಗಳುತೆಂದನಗಜೆ | ಯೊಳು ಸರಾಗದಿ ||140||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತರುಣಿ ನೋಡೀ ಪಾರ್ಥನಧಟನು |
ನಿರಶನದಿ ಬಲು ದಿವಸ ತಪವನು |
ವಿರಚಿಸಿಯೆ ಬಲು ಬಳಲಿದನು ನೋಡ್ |
ಮರುಳನಿವನು ||141||

ಸೆಣಸಿವನು ಸರಿಯಾಗಿ ನಮ್ಮೊಳು |
ಧನುವ ಕೊಳ್ಳದೆ ಶಸ್ತ್ರವಿಲ್ಲೆಂ |
ದೆಣಿಸದೆನ್ನೊಳು ಮಲ್ಲರಂದದಿ | ಹೆಣಗಲೆಂದು ||142||

ಭುಜವನೊದರಿಸಿ ನಿಂದಿರುವನೀ |
ವಿಜಯನೊಳು ಸೆಣಸುವೆನು ನಮ್ಮಯ |
ಭಜಕನೀತನನೀಕ್ಷಿಸಾತನ | ಭುಜ ಬಲವನು ||143||

ರಾಗ ಭೋಗ ಮಟ್ಟೆತಾಳ

ಎನುತ ಸತಿಗೆ ಪೇಳಿ ಭರ್ಗನೆಯ್ದೆ ನರನಲಿ |
ಹೊಣಕೆಯಿಂದ ಹೊಕ್ಕು ಹೋರುತಿರಲು ಮುದದಲಿ ||
ಕಿನಿಸ ತಾಳ್ದು ನರನು ಹರನ ಸರಿಸಮಾನದಿ |
ಸೆಣಸುತಿರಲು ಕಂಡು ಹೊಗಳ್ದರಮರರಭ್ರದಿ ||144||

ಮಗುಳೆ ಪಾರ್ಥನೆಂದ ನೆಲವೊ ಶಬರ ನಿನ್ನಯ |
ನಗೆಯ ಮಾಣಿಸುವೆನು ನಿಮಿಷ ಸೈರಿಸೆನ್ನಯ ||
ಬಿಗುಹ ನೋಡು ನೋಡೆನುತ್ತಲಧಿಕ ರೋಷದಿ |
ಅಗಜೆಯರಸನುರವ ತಿವಿದ ಮತ್ತೆ ಸತ್ತ್ವದಿ ||145||

ಭಳಿರೆ ತಪಸಿ ಧೀರನಹೆಯನುತ್ತಲೀಶನು |
ಮುಳಿದು ಮುಷ್ಟಿಯಿಂದ ತಿವಿದನೊಯ್ಯೆ ನರನನು ||
ಬಳಿಕ ರೋಷವೆತ್ತು ಪಾರ್ಥಹರನ ವಕ್ಷವ |
ತಳುವದಾರ್ದು ತಿವಿದನೇನನೆಂಬೆ ಶೌರ್ಯವ ||146||

ತಡೆದು ನರನ ಹತಿಯ ಮರಳಿ ಮಡನು ತಿವಿಯಲು |
ಕಡುಗಿ ವಿಜಯ ತಿವಿದ ಮುಷ್ಟಿ ಕಿಡಿಯನುಗುಳಲು ||
ಒಡನೆ ಖತಿಯೊಳಭವ ಭರದಿ ಪೊಡೆಯೆ ಪಾರ್ಥನು |
ಪೊಡವಿಗುರುಳ್ದನಯ್ದೆ ಕಾರುತರುಣಜಲವನು ||147||

ಭಾಮಿನಿ

ಪಶುಪತಿಯ ಪದಹತಿಗೆ ಬಾಯೊಳು |
ಬಿಸಿ ರಕುತ ಹೊರಸೂಸೆ ಪಾರ್ಥನು |
ಬಸವಳಿಯೆ ಕಂಡಕಟ ಕೈತಪ್ಪಾಯಿತೆಂದೆನುತ ||
ಶಶಿಧರನು ಮನಮರುಗುತಿರಲಾ |
ಗಸಮಬಲ ನರನೆದ್ದು ಮೆಲ್ಲನೆ |
ವಶವಳಿದು ಧತಿಗೆಟ್ಟು ತನ್ನಯ ಮನದೊಳಿಂತೆಂದ ||148||

ರಾಗ ಸಾಂಗತ್ಯ ರೂಪಕತಾಳ

ಶಿವ ಶಿವ ಕೈರಾತನೊಳು ವ್ಯರ್ಥ ಕಾದಿ ಸೋ |
ಲುವದಾಯ್ತೆ ತನಗಕಟಕಟ ||
ದಿವಿಜ ದಾನವ ಮಾನವರೊಳಗೆನಗಿದಿರು ನಿ |
ಲ್ಲುವರನ್ನು ಕಾಣೆನೀವರೆೆ ||149||

ಪಿಂದಣ ಭವದ ಪಾಪವೊ ತನಗಲ್ಲದ |
ರಿಂದು ಮೌಳಿಯ ಪೆರ್ಮೆಯಿಂದ ||
ಒಂದೆ ಮನದೊಳಾನು ಭಜಿಸದಾದೆನೊ ಶಿವನ |
ನಿಂದಿಸಿದೆನೊ ಹಿರಿಯರನು ||150||

ಏಕೆ ಬಂದುದೊ ಪಾಪಿ ಸೂಕರನೆನ್ನಿದಿ |
ರೇಕೆಚ್ಚೆನದನು ಹಮ್ಮಿನಲಿ ||
ಈ ಕಿರಾತನೊಳೇಕೆ ಸೆಣಸಿದೆ ಧರೆಯೊಳ್ ವಿ |
ವೇಕಬುದ್ಧಿಯದಿಲ್ಲದಾಯ್ತು ||151||

ಎನುತ ಮತ್ತಾಲೋಚಿಸುತಲೆಂದನೇಕೆ ತಾ |
ಮನದಿ ದುಃಖಿಪುದಿನ್ನು ಬರಿದೆ ||
ಕನಕಾದ್ರಿಚಾಪನ ಭಜಿಸಿ ಮೆಚ್ಚಿಸಿ ಮತ್ತೆ
ವನಚರನನು ಗೆಲ್ವೆನೆಂದು ||152||

ವಾರ್ಧಕ

ನರನಿಂತೆನುತ ಮಳಲೊಳಯ್ದೆ ಶಿವಲಿಂಗಮಂ |
ವಿರಚಿಸುತ ಭಕ್ತಿಯಿಂದಾಗಮೋಕ್ತಂಗಳಿಂ |
ಪರಿಪರಿಯ ಪತ್ರಪುಷ್ಪಂಗಳಿಂ ಪೂಜಿಸಿ ಪ್ರದಕ್ಷಿಣೆಯ ಗೆಯ್ದು ಬಳಿಕ ||
ಎರಗಿ ಪ್ರಾರ್ಥಿಸುತೆಂದನೆಲೆ ದೇವನೆನ್ನನೀ |
ದುರುಳ ಶಬರಂ ಗೆಲುವನಿನ್ನು ನಿನ್ನನು ನಂಬಿ |
ದರಿಗಪಜಯಂ ಬಪ್ಪುದುಂಟೆ ಲೋಕದೊಳೆಂದು ಮಗುಳೆರಗುತಿಂತೆಂದನು ||153||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಈಶ ಲಾಲಿಸು ಬದಲು ಮಾತೇ | ಕೀ ಶಬರನನು ಗೆಲುವ ಶಕ್ತಿಯ |
ನೋಸರಿಸದಿತ್ತೆನ್ನ ರಕ್ಷಿಪು | ದೀ ಸಮಯದಿ ||154||

ಎಂದು ಪುನರಪಿ ಲಿಂಗವನು ಬಲ | ಬಂದು ನಮಿಸಿಯೆ ಧೈರ್ಯದಿಂದಲಿ |
ನಿಂದು ಕೋಪದಿ ಭುಜವನೊದರಿಸು | ತಂದು ನುಡಿದ ||155||

ಫಡ ಫಡೆಲವೊ ಕಿರಾತ ಕೇಳ್ ನಿ | ನ್ನೊಡಲ ಬಗಿವೆನು ಮಡನ ಬಲದಲಿ |
ಬಿಡುವವನೆ ನೀನಡಗದಿರು ನಿ | ಲ್ಲಡಿ ಮಿಡುಕದೆ ||156||

ಭಾಮಿನಿ

ಕಾಣಬಹುದೋ ಶಬರ ನಿನ್ನಯ |
ಪ್ರಾಣವೆನ್ನಾಧೀನವರಿಯಾ |
ಸ್ಥಾಣುವಿನ ಬಲುಹಾಯ್ತು ಹಿಂಡುವೆನೀಗ ನಿನ್ನಸುವ ||
ಗೋಣನರಿವೆನು ಮಿಡುಕಿದರೆ ನಿ |
ನ್ನಾಣೆ ಬಾ ಸಮ್ಮುಖಕೆ ಹಾಣಾ |
ಹಾಣಿಗನುವಾಗೆನುತ ಎವೆಯಿಕ್ಕದೆ ನಿರೀಕ್ಷಿಸಿದ ||157||

ಮಂಜು ಮಸುಕಿದಡೇನು ಪರ್ವತ |
ವಂಜುವುದೆ ಹಾಲಾಹಲವ ನೊಣ |
ವೆಂಜಲಿಸುವದೆ ವಡಬಶಿಖಿ ನೆನೆವುದೆ ತುಷಾರದಲಿ ||
ಕಂಜನಾಳದಿ ಕಟ್ಟುವಡೆವುದೆ |
ಕುಂಜರನು ನರ ಶರದ ಜೋಡಿಯ |
ಜಂಜುವಳಿಯಲಿ ಜಾಹ್ನವೀಧರನಳುಕುವನೆಯೆಂದ ||158||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎನುತ ನೋಡಲು ಲಿಂಗಕಿರಿಸಿ | ರ್ದನಿತು ಕುಸುಮಗಳಿರಲಿಕಾ ವ್ಯಾ |
ಧನ ಶಿರಸ್ಸಿಲಿ ಕಂಡು ಬೆರಗಿನ | ಮನದೊಳೆಂದ ||159||

ನರನು ಯೋಚಿಸುತೇನಿದಚ್ಚರಿ | ಪರಿಕಿಸುವೆನಿನ್ನೊಮ್ಮೆ ತಾನೆನು |
ತಿರದೆ ನಿರ್ಮಾಲ್ಯಂಗಳನು ಬೇ | ರಿರಿಸಿ ಮಗುಳೆ ||160||

ಭಾಮಿನಿ

ಅರಸ ಕೇಳೈ ಬದಲು ಸುಮವನು |
ನರನು ತಂದತಿ ಭಕ್ತಿಯಲಿ ಶಂ |
ಕರ ನಮೋಯೆಂದರ್ಚಿಸಿದನಾ ಮಳಲಲಿಂಗವನು ||
ಪರಮಪಾವನಮೂರ್ತಿ ನೀನು |
ದ್ಧರಿಸು ತನ್ನನೆನುತ್ತುಲೆರಗಿದು |
ತಿರುಗಿ ನಿಂದನು ಮತ್ತೆ ನೋಡಿದನಾ ಕಿರಾತನನು ||161||

ಪರಿಕಿಸಿದನವನುತ್ತಮಾಂಗದಿ |
ನರನು ತಾನರ್ಚಿಸಿದ ಸುಮವನು |
ಮರಳಿ ಕಂಡನು ಸುಮಗಳಿಲ್ಲದ ಬರಿಯ ಲಿಂಗವನು ||
ಅರಿದನನಿತರ ಮೇಲೆ ಸರ್ವೇ |
ಶ್ವರ ಸನಾತನನೀತನೆಂಬುದ |
ನಿರದೆ ಮನದಲಿ ಮರುಗುತಾತಂ ತನ್ನೊಳಿಂತೆಂದ ||162||

ರಾಗ ಕಾಂಭೋಜಿ ಝಂಪೆತಾಳ

ಹರ ಹರಾ ಸಾಕ್ಷಾತ್ ಪರಮೇಶನಿವನು |
ದಿಟವರಿಯದಾದೆನು ಮರವೆಯಿಂದ ||
ನಿರಶನದಿ ಪಿತ್ತ ತಲೆಗೇರಿ ಭ್ರಮೆಯಾಯ್ತು ಗಡ |
ಮರುಳರಾರ್ ಜಗದೊಳೆನ್ನಂತೆ ||163||

ಎಸೆದ ಬಾಣಗಳೊಳೆಲ್ಲವ ತರಿದನುರು ಮಂತ್ರ |
ವಿಶಿಖವನು ನುಂಗಿಹನು ಧನುವ ||
ನಸುನಗುತ ಕೊಂಡನಸಿಯನು ಸೆಳೆದನನಿತನೀ |
ಕ್ಷಿಸಿ ತಿಳಿಯದಾದೆ ಹಮ್ಮಿನಲಿ ||164||

ಅನಘನೆನ್ನನು ಪರೀಕ್ಷಿಸಲೆಂದು ಶಬರರೂ |
ಪನು ತಾಳಿ ಬಂದನೆಂಬುದನು ||
ಮನದೊಳರಿಯದೆ ಮೂದಲಿಸಿ ಹೊಕ್ಕು ಹೆಣಗಿದೆನು |
ಘನ ಮದಾಂಧತೆಯಿಂದಲಕಟ ||165||

ಏಕೆ ಕಿಟಿಯಯ್ತಂದುದೇಕೆ ನಾ ಸೆಣಸಿದೆನೊ |
ಈ ಕಿರಾತನೊಳು ಘನ ಮದದಿ ||
ಕಾಕುತನವಾಯ್ತು ತನ್ನಿಂದೆನುತ ಮರುಗಿದನು |
ಪಾಕಶಾಸನಸೂನು ಭಯದಿ ||166||

ಕಂದ

ಇಂತಳುತಿಹ ಪಾರ್ಥನನುಂ |
ಕಂತುಹರಂ ಕಾಣುತಯ್ದೆ ಕಾರುಣ್ಯದೊಳುಂ ||
ತಾಂ ತಳುವದೆ ಪಂಚಾನನ |
ನಿಂತೆಂಬುದ ತಾನೆ ತೋರಿದನಾ ನರಗಂ ||167||

ವಾರ್ಧಕ

ಅರಸ ಕೇಳಿಂತಭವನುಂ ಸನಕ ನಾರದಾ |
ದ್ಯರಿಗಗೋಚರಮಾದ ಪೂರ್ಣತರರೂಪದಿಂ |
ಗಿರಿಜಾತೆಸಹಿತಮತಿ ಭಾಸುರಾನ್ವಿತಮಾಗಿ ಗೋಪತಿಯನೇರ್ದ ಬಳಿಕ ||
ವರವೀರಭದ್ರಾದಿ ಪ್ರಮಥಪರಿವಾರನಾ |
ಗಿರೆ ಕಂಡುನಾಕದೊಳ್ ಪಾರ್ಥಂ ಕತಾರ್ಥನೆಂ |
ದಿರದೆ ದುಂದುಭಿ ಮೊಳಗಲಿತ್ತಂ ನರಂ ಕಾಣುತೆರಗಿದಂ ಭಕ್ತಿಯಿಂದ ||168||

ಜಯ ವಂದ್ಯಜನಪೋಷ ಜಯ ಸರ್ಪಭೂಷ ಜಯ |
ಜಯ ಶೈಲತನುಜೇಶ ಜಯ ಭವವಿನಾಶ ಜಯ |
ಜಯ ಸಚ್ಚಿದಾನಂದ ಜಯ ಪ್ರಮಥವಂದ ಜಯ ಜಯ ಜಯ ಕಪಾಲಮಾಲ ||
ಜಯ ಸುಮನಸೋದ್ಧಾರ ಜಯ ದುರಿತದೂರ ಜಯ |
ಜಯ ಮೌನಿಕುಲ ರಕ್ಷ ಜಯ ದಕ್ಷಶಿಕ್ಷ ಜಯ |
ಜಯ ಜಯತು ಭಸ್ಮಾಂಗ ಜಯ ಮಹಾಲಿಂಗ ಜಯ ಜಯ ಜಯೆಂದೆರಗಿರ್ದನು ||169||

ರಾಗ ಭೈರವಿ ಝಂಪೆತಾಳ

ಇಂತೆರಗಿ ನುತಿಸುತಿಹ | ಕೌಂತೇಯನೆಡೆಗೆ ಬಂ |
ದಂತರಾತ್ಮಕನಧಿಕ | ಸಂತೋಷದಿಂದ ||170||

ಶಿರವ ಮದುಹಸ್ತದಲಿ | ಭರದಿಂದ ಪಿಡಿದೆತ್ತಿ
ನರಗೆಂದನಭವನತಿ |  ಕರುಣದಿಂದೊಲಿದು ||171||

ಘನ ಪರಾಕ್ರಮಿ ಕೇಳು | ಮನದಿ ಬೆದರದಿರಿನ್ನು |
ಕಿನಿಸಿಲ್ಲವೆಮಗೆ ಗುಹ | ಗಣಪತಿಗಳಾಣೆ ||172||

ತವ ಚಾಪ ಖಡ್ಗ ಶರ | ವಿವೆ ಮುನ್ನ ಕೊಳ್ಳೆನುತ |
ಲವಗಿತ್ತು ಮಗುಳೆಂದ | ಶಿವನು ನರನೊಡನೆ ||173||

ನಿನ್ನ ಮೂದಲೆಯೆನಗೆ | ಸನ್ನುತ ನಮಸ್ಕಾರ |
ನಿನ್ನ ಧುರವರ್ಚನೆಗ | ಳೆನ್ನು ನೀ ಮನದಿ ||174||

ಬೆಚ್ಚದಿರು ಬೆದರದಿರು | ಮೆಚ್ಚಿದೆನು ಮನದಿರವ |
ನುಚ್ಚರಿಪುದೆಂದನಾ | ಸಚ್ಚಿದಾತ್ಮಕನು ||175||

ಕಂದ

ಎಂದಭವನ ನುಡಿಯಂ ಕೇ |
ಳ್ದಂದಾ ನರನಯ್ದೆ ತೋಷಜಲಧಿಯೊಳಾಳ್ದಂ ||
ನಿಂದಾ ಚಿನ್ಮಯನೊಡನಿಂ |
ತೆಂದಂ ಭಕ್ತಿಯೊಳತಿಸಂಭ್ರಮದಿಂದಾಗಂ ||176||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರನೆ ಲಾಲಿಸು ನಿನ್ನ ನಂಬಿದ | ನರರಿಗೆಲ್ಲಿಯ ಭೀತಿ ಚಿನ್ಮಯ |
ನರಿಯೆಯಾ ನೀನೆನ್ನ ಬಯಕೆಯ | ನೊರೆವುದೇನು ||177||

ಶರಣನೆಂಬೀ ಪ್ರೇಮವುಳ್ಳಡೆ | ಕರುಣಿಸೈ ಪಾಶುಪತಶರವನು |
ಮರಳಿ ಮಾತೇನೆನುತ ಪಾದ | ಕ್ಕೆರಗೆ ಕಂಡು ||178||

ನುಡಿಗೆ ತಪ್ಪುವುದುಂಟೆ ಮಗನೇ | ಕೊಡುವೆ ನೀ ಬೇಡಿದ ಶರಂಗಳ |
ತಡೆಯದೀಗೆಂದೆನುತಲಪ್ಪಿದ | ಮಡನು ನರನ ||179||

ವಾರ್ಧಕ

ಅರಸ ಕೇಳಿಂತಭವನೆಂದುದಂ ಕೇಳುತಂ |
ನರನಧಿಕ ಭಕ್ತಿಯಿಂ ಮಿದುಂ ಶುಚಿಯಾಗಿ ಪುರ |
ಹರನಡಿಗೆ ಬಂದು ತಲೆವಾಗಿ ಕಯ್ ಮುಗಿದು ನಿಂದಿರುವ ಪಾರ್ಥನ ಕಾಣುತ ||
ಗಿರಿಶನತಿಶಯದೊಳ್ ರಹಸ್ಯದಿಂದಾಗಲಾ |
ಶರದ ಪರಿಯಂ ತಿಳುಹಿ ಮಂತ್ರೋಪದೇಶಮ್ |
ಕರೆದಿತ್ತು ಪಾಶುಪತ ಶರವನುಂ ಕೊಟ್ಟನಿನ್ನೇಸು ಸುಕತನೊ ಪಾರ್ಥನು ||180||

ಭಾಮಿನಿ

ಹರನು ಪಾಶುಪತಾಸ್ತ್ರವನು ಸಿತ |
ತುರಗಗೀಯಲು ಕಾನುತಭ್ರದಿ |
ಸುರರು ಸನ್ಮತದಿಂದ ಸುರಿದರು ಪುಷ್ಪವಷ್ಟಿಗಳ ||
ಅರಸ ಕೇಳಿತ್ತಲು ಮಹೇಶನು |
ನರನ ಮನ್ನಿಸಿ ಮೆಯ್ದಡವಿ ಘನ |
ಕರುಣದಿಂದೀಕ್ಷಿಸುತ ನುಡಿದನು ಮಧುರವಚನದಲಿ ||181||

ರಾಗ ಮಧುಮಾಧವಿ ತ್ರಿವುಡೆತಾಳ

ತರುಣ ಕೇಳೈ ಪೂರ್ವದಲಿ ನೀ | ನರಋಷಿಯು ಮಗುಳೆಮಗೆ ಭಕ್ತನು |
ಪಿರಿದು ಮೆಚ್ಚಿದೆ ನಿನಗೆ ನೀನಿ | ನ್ನರಿಗಳನು ಜಯಿಸೆನ್ನುತ ||
ಹರನು ಮಗುಳೆ ||182||

ಅರುಹಿ ಮತ್ತಾ ಗಿರಿಶನಗಜೆಯ | ಕರೆದು ನುಡಿದನು ಕಾಂತೆ ಕೇಳ್ ನೀ |
ಶರಣನನು ಪೊರೆಯೆನಲು ವಧುಪದ | ಕೆರಗಿ ನುತಿಸಿದ ಶಿವೆಯನು ||
ಭಕ್ತಿಯಿಂದ ||183||

ಚರಣಕಾನತನಾಗಿ ನುತಿಸುವ | ನರನ ನೀಕ್ಷಿಸುತುಮೆಯು ಪ್ರೇಮದಿ |
ಮುರಹರನ ಮಯ್ದುನನೆ ಬಾ ಸ | ಚ್ಚರಿತ ನೀ ಬಾರೆನುತಲೆ ||
ತವಕದಿಂದ ||184||

ಕರೆದು ಕರುಣದೊಳಂಜನಾಸ್ತ್ರವ | ನಿರದೆ ಕೊಟ್ಟದರಂದವೆಲ್ಲವ |
ನರುಹಲಗಜೆಗೆ ಮಣಿಯುತಲೆ ಮ | ತ್ತೆರಗಿದನು ತತ್ಸುತರಿಗೆ ||
ಪಾರ್ಥ ಮುದದಿ ||185||

ಕಂದ

ಕರಿಮುಖಷಣ್ಮುಖರುಂ ಘನ |
ಹರುಷದಿ ಪಿಡಿದೆತ್ತುತ ತಕ್ಕಯ್ಸೆ ಪಾರ್ಥನನುಂ ||
ಅರಿಗಳನುಂ ಜಯಿಸೆನ್ನುತ |
ಲುರುತರ ಮಂತ್ರೋಪದೇಶವಿತ್ತುಪಚರಿಸಿದರ್ ||186||

ರಾಗ ಕೇದಾರಗೌಳ ಅಷ್ಟತಾಳ

ಮಗುಳೆ ಕಯ್ ಮುಗಿದು ನಿಂದಿರುವ ಪಾರ್ಥನ ನೋಡಿ |
ಮಗಧರತೋಷದಲಿ ||
ಮಗನೆ ನೀ ನಡೆ ಶಕ್ರಪುರಕೆ ಲೇಸಹುದು ಕಾ |
ರ್ಯಗಳೆಲ್ಲ ನಿನಗೆ ಮುಂದೆ ||187||

ಹರಿಯು ಮಿತ್ರನು ನಮಗವನೆನ್ನ ಸಮಬಲ |
ನರಿತಿಪ್ಪುದವನ ನೀನು ||
ಮರೆಯದಿರಾತನನೆಂದು ಮೆಯ್ದಡವಿ ಶಂ |
ಕರನಂತರ್ಧಾನನಾದ ||188||

ಹರನು ಗಣರು ಸಹ ತೆರಳಲಿತ್ತಲು ಸುರ |
ರೆರೆಯನ ಸುಕುಮಾರನು ||
ಮರುಗುತ್ತ ಶಿವನ ಪಾದವನಗಲಿದೆನೆಂಬ |
ಪರಿಗೆ ಚಿಂತೆಸುತಿರ್ದನು ||189||

ಭಾಮಿನಿ

ಜನಪ ಕೇಳಾ ಸಮಯದೊಳಗ |
ರ್ಜುನನ ಕಾಂಬರ್ತಿಯಲಿ ಬಂದರು |
ವನಧಿನಾಥ ಕುಬೇರ ಯಮ ನಿರ್ಋತಿಯು ಮೊದಲಾಗಿ ||
ಘನತರೋತ್ಸಹದಿಂದಲಿಂದ್ರನು |
ತನುಜನೆಡೆಗಯ್ತರಲು ಕಾಣುತ |
ಲನಿಬರಿಗೆ ಮಣಿದನು ಧನಂಜಯನಧಿಕ ಭಕ್ತಿಯಲಿ ||190||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಚರಣಕೆರಗಿದ ನರನನಪ್ಪುತ | ಸುರಪನೆಂದನು ಮಗನೆ ಸೇರಿತು |
ಹರನಶರ ನಿನಗಿದಿರದಾರೈ | ಧರೆಯೊಳಿನ್ನು ||191||

ಆ ಶರಕೆ ಬಳುವಳಿಯ ಕೊಡುವೆ ವಿ | ಲಾಸದಿಂ ಕೊಳ್ಳೆನುತಲಮರಾ |
ಧೀಶನೈಂದ್ರಾಸ್ತ್ರವನು ಕೊಟ್ಟನು | ತೋಷದಿಂದ ||192||

ವರುಣ ವಾಯು ಕುಬೇರರಸ್ತ್ರವ | ನರನಿಗಿತ್ತರು ಮಗುಳೆ ಸುಮನಸ |
ರೆರೆಯನೆಂದನು ಕರೆದು ಪಾರ್ಥನ | ಕರುಣದಿಂದ  ||193||

ತರುಣ ಕೇಳೈ ತಪವ ವಿರಚಿಸಿ | ನಿರಶನದಿ ನೀ ದಣಿದೆ ನಮ್ಮಯ |
ಪುರಕೆ ಬಂದೀ ಬಳಲಿಕೆಯ ಪರಿ | ಹರಿಪುದಿನ್ನು ||194||

ಕಳುಹಿಸುವೆವು ವರೂಥವನು ಮಾ | ತಲಿಯೊಡನೆ ನೀ ಬಪ್ಪುದೆನುತಲೆ |
ತಿಳುಹಿ ಮಗನನು ಪರಸಿ ಸ್ವರ್ಗಕೆ | ನಲವಿನಿಂದ ||195||

ಕಂದ

ಸುರಪತಿ ದಿಕ್ಪಾಲರ್ ಸಹ |
ತೆರಳಲು ತೋಷದಿ ನಾಕಕೆ ಮುದದಿಂ ಸುರ ಪಂ ||
ಕರೆದಾ ಮಾತಲಿಗರುಹಿದ |
ನರನಿರ್ದೆಡೆಗತಿ ಬೇಗದಿ ಪೋಪುದುಯೆನುತಂ ||196||