ರಾಗ ಸೌರಾಷ್ಟ್ರ ತ್ರಿವುಡೆತಾಳ

ಈ ತೆರದಿ ಧರ್ಮಜನು ವಿಪ್ರ | ವ್ರಾತ ಸಹಿತಯ್ತಂದು ಕಂಡಬು |
ಜಾತನಯನನಿಗೆರಗಿದನು ಸಹ | ಜಾತರೊಡನೆ ||58||

ಸೋರುವಶ್ರುಗಳಿಂದ ನಮಿಸುವ | ವೀರರನು ಕಂಡಸುರಮರ್ದನ |
ಬೇರೆ ಬೇರೊಲಿದೆತ್ತಿದನು ಕ | ಣ್ಣೀರನೊರಸಿ ||59||

ಭಾವಮೈದುನರುಗಳನಿಂತಾ | ಶ್ರೀವರನು ಪಿಡಿದೆತ್ತಿ ತಳ್ಕಿಸೆ |
ಭಾವೆಯರ ಕುಲದೇವಿ ಬಂದಳು | ದೇವನೆಡೆಗೆ ||60||

ಭಾಮಿನಿ

ಕೇಳು ಧರಣಿಪ ದ್ರುಪದನಂದನೆ |
ನೀಲಮೇಘನಿಭಾಂಗನಂಘ್ರಿಯ |
ಮೇಲೆ ಬಿದ್ದೊರಲಿದಳು ಘನಸಂತಾಪಭಾರದಲಿ ||
ಖೂಳ ಕೌರವನೆನ್ನ ಮಾನವ |
ಕೋಳುಗೊಂಬಾ ಸಮಯದಲಿ ಶ್ರೀ |
ಲೋಲ ಸಲಹೆನೆ ಪಾಲಿಸಿದ ಚಿನ್ಮಯನೆ ಪೊರೆಯೆನುತ ||61||

ರಾಗ ಕೇದಾರಗೌಳ ಅಷ್ಟತಾಳ

ಎಂದು ಪಾದದಿ ಪೊರಳುವ ದ್ರುಪದಜೆಯ ಗೋ |
ವಿಂದನೀಕ್ಷಿಸಿ ಮುದದಿ ||
ಚಂದಿರಾನನೆಯ ಶಿರವ ಪಿಡಿದೆತ್ತುತ |
ಲೆಂದನು ಪರಿತೋಷದಿ ||62||

ತಾಯೆ ಕೇಳೌ ತಂಗಿ ಬಳಲಿದೆ ನೀ ಪರಿ |
ದಾಯಾಸದೊಳು ಸಿಲುಕಿ |
ಬಾಯಾರಬೇಡವೆಂದೆನೆ ಶೋಕ ಹೆಚ್ಚಿತು |
ತೋಯಜದಳನೇತ್ರೆಗೆ ||63||

ತರುಣಿ ಬಿಕ್ಕೀಬಿಕ್ಕಿ ಬಿರಿದಳುತಿರೆ ಕಂಡು |
ಪರಮಪುರುಷ ಮನದಿ ||
ಮರುಗುತ್ತವಳ ಕಂಬನಿಯ ಸೆರಗಿಂದ ತಾ |
ನೊರಸಿ ಪೇಳ್ದನು ಮುದದಿ ||64||

ಮುಡಿಯ ಕಟ್ಟಬಲೆ ದುಃಖಿಸಬೇಡ ಕೌರವ |
ಗಡಣ ಬೆಂದುರಿವುದಿನ್ನು ||
ಸುಡುವುದು ನಿನ್ನೊಡಲಗ್ನಿಯು ಖಳಕುಲ |
ದಡವಿಯನೆನಲೆಂದಳು ||65||

ರಾಗ ನೀಲಾಂಬರಿ ರೂಪಕತಾಳ

ತುರುಬ ಕಟ್ಟುವ ರೀತಿ | ಯರಿಯೆಯ ನಾ ನಿನ್ನೊ |
ಳರುಹುವುದೇನು ಚಿನ್ಮಯನೆ ||
ಕುರುರಾಯನನುಜನ | ಉರದ ರಕ್ತದೊಳದ್ದಿ |
ಮರಳಿ ಕಟ್ಟುವ ಭಾಷೆ ತನಗೆ ||66||

ಅರಿತೆ ನಾ ತಂಗಿ ನೀ | ಮರುಗಲೇಕಿದಕಿನ್ನು |
ಕುರಿಗಳೇಂ ಘನವೆ ನಿನ್ನವರ್ಗೆ ||
ದುರುಳನುರದ ದಂಡೆ | ಕರು ಮುಡಿಸಿ ನಿನ್ನ |
ತುರುಬ ಕಟ್ಟಿಸುವೆನಂಜದಿರು ||67||

ತರುಣಿ ಸುವ್ರತೆ ನೀನು | ನಿನ್ನ ಬಾಧಿಸಿದಂಥ |
ದುರಿತಾತ್ಮರುಗಳು ಬಾಳುವರೆ ||
ಅರಸನಾಡಿದರಣ್ಯ | ವಾಸತೀರದಿ ದುಷ್ಟ |
ನೆರವಿ ತೀರ್ಚಿಸುವೆ ಕೇಳಬಲೆ ||68||

ಭಾಮಿನಿ

ಅರಸ ಕೇಳಿಂತೆಂದು ಮುರರಿಪು |
ತರುಣಿಯನು ಮೆಯ್ದಡವಿ ಕೌಂತೇ |
ಯರನು ಮನ್ನಿಸಿ ಪುರಕೆ ಪಯಣೋದ್ಯೋಗಮನನಾದ ||
ಬರವನೇ ಕಾಣುತ್ತ ಬಳಿಕಾ |
ಮುರಹರಗೆರಗಿ ಸಮ್ಮುಖದಲ |
ಯ್ವರು ರಚಿಸಿ ಪಿತಯಜ್ಞವನು ಬೀಳ್ಗೊಟ್ಟರಚ್ಯುತನ ||69||

ವಾರ್ಧಕ

ಮುರಹರಂ ಪಾಂಡುನಂದನರನುಪಚರಿಸಿ ನಿಜ |
ಪುರಕೆ ಬಿಜಯಂಗೆಯ್ಯಲಿತ್ತಲುಂ ಕಾಮ್ಯಕಾ |
ವರ ವಿಪಿನಮಂ ಪೊರಟು ಹಲವು ಗಿರಿವನಗಳಂ ಕಳೆ ಕಳೆದು ಪಾಂಡುಸುತರು ||
ಬರುತೊಂದು ಘನ ರಮ್ಯತರಮಾದ ವನದೊಳಂ |
ದಿರುತಿರಲ್ ಮರುತಜಂ ತಂದ ಜಂಬೂಫಲದ |
ಪರಿಯನುಂ ಸಹದೇವನಿಂದರಿದು ಧರ್ಮಜಂ ಮರುಗಿ ಹರಿಯಂ ನೆನೆದನು ||70||

ಮಾಧವಂ ಬಂದಾಗಲಾ ಫಲವನುಂ ಧರ್ಮ |
ಜಾದಿಗಳನಾ ಕಣ್ವಮುನಿ ಶಪಿಸದಂತೆ ಮ |
ತ್ತಾ ಧರಿತ್ರೀರುಹದ ಶಾಖೆಗಂ ಮುನ್ನಿನಂತಡರಿಸಿದನವನಿಪರನು ||
ಮೋದದಿಂದಪ್ಪಿ ದ್ರೌಪದಿಯನುಪಚರಿಸಿ ದಾ |
ಮೋದರಂ ಪುರಕಯ್ದಲಿತ್ತಲುಂ ಪಾಂಡವರ್ |
ಭೂದಿವಿಜರೋಳಿಯಿಂದಾ ವನವನುಳಿದಯ್ದಿ ದ್ವೈತವನಮಂ ಸಾರ್ದರು ||71||

ಶಿಲೆಗಳಿಂ ಸಂಧಿಸಿದ ಕೊಳಗಳಿಂ ರಂಜಿಸುವ |
ಬಿಲಗಳಿಂ ಪರಿವುತಿಹ ಜಲಗಳಿಂದೆಸೆವ ನೈ |
ದಿಲೆಗಳಿಂ ಝೇಂಕರಿಸುವಳಿಗಳಿಂದುಲಿವ ಕೋಗಿಲೆಗಳಿಂ ನುಡಿವುತಿರ್ಪ ||
ಗಿಳಿಗಳಿಂ ಪೊಳೆವ ತಳಿರೆಲೆಗಳಿಂ ರಸಭರಿತ |
ಫಲಗಳಿಂ ಸುಮದ ಗೊಂಚಲುಗಳಿಂತೆರಗಿದ ಕ |
ದಳಿಗಳಿಂದಿಡಿದಿರ್ದ ಪೊಲಗಳಿಂ ನೋಡೆ ಸುಸ್ಥಳಗಳಿಂ ವನಮೆಸೆದುದು ||72||

ಕಂದ

ಇಂತಾರಣ್ಯದೊಳಾ ದ್ವಿಜ |
ಸಂತಾನವ ಸಲಹುತ ಪಾಂಡವರಿರಲಾಗಂ ||
ಸಂತಸದಿ ಬಾದರಾಯಣ |
ನುಂ ತಳುವದೆ ನಡೆತಂದಂ ವಿನಯದೊಳಾಗಂ || ||73||

ರಾಗ ಸಾಂಗತ್ಯ ರೂಪಕತಾಳ

ಬಂದ ವೇದವ್ಯಾಸಮುನಿಯ ಕಂಡವನೀಶ |
ನಂದಿದಿರೆದ್ದು ತತ್ಪದಕೆ ||
ವಂದಿಸಿ ಬಹು ಭಕ್ತಿಯಿಂದಲಾತನ ಕರೆ |
ತಂದನು ಪರ್ಣಮಂದಿರಕೆ ||74||

ಪರಮ ಸಂಯಮಿಗೆ ದರ್ಭಾಸನವಿತ್ತುಪ |
ಚರಿಸಿ ಪೂಜಿಸಿ ಕಯ್ಯ ಮುಗಿದ ||
ಧರಣಿಪಾಲಕನ ಮೆಯ್ದಡವಿ ಪ್ರೇಮದಲಿ ಕು |
ಳ್ಳಿರಿಸಿ ಮತ್ತಿಂತೆಂದನಾಗ || ||75||

ಎಲೆ ಭೂಪ ವನವಾಸವಾಯ್ತೆಂದು ಮನದೊಳ |
ಗಲಸದಿರ್ ತವಸತ್ಯದಿಂದ ||
ಇಳೆಯು ಕೈಸೇರುವುದಿನ್ನು ಖೂಳರು ತಮ್ಮಿಂ |
ದಳಿವರು ಕೌರವಾದಿಗಳು ||76||

ಭಾಮಿನಿ

ಎನುತ ಮತ್ತಾ ಮುನಿ ರಹಸ್ಯದಿ |
ಜನಪಗೀಶ್ವರಬೀಜಮಂತ್ರವ |
ವಿನಯದಿಂದುಪದೇಶವಿತ್ತಾ ವಿಧಿಯ ನೆರೆ ತಿಳುಹಿ ||
ಅನಘ ಪೇಳಿದನರುಹು ನೀನ |
ರ್ಜುನನಿಗಾ ನರನಿಂದ್ರಕೀಲದ |
ವನದಿ ಭಜಿಸಲಿ ಹರನನಾ ಶಿವನೊಲಿವ ನಿಮಗೆಂದ ||77||

ರಾಗ ಭೈರವಿ ಝಂಪೆತಾಳ

ಎನುತ ತನ್ನಾಶ್ರಮಕೆ | ಮುನಿಪ ತೆರಳಲ್ಕಿತ್ತ |
ಜನಪನೇಕಾಂತದೊಳ | ಗನುಜನನು ಕರೆದು ||78||

ಹರನ ಮಂತ್ರಾಕ್ಷರವ | ನರುಹಿ ನಪ ಬಳಿಕಲಾ |
ನರಗೆಂದ ಭಜಿಸು ಶಂ | ಕರನ ದಢಮನದಿ ||79||

ಹಲವು ನಯನೀತಿಯನು | ತಿಳುಹಿ ಬೇಗದಿ ನಿನಗೆ |
ಒಲಿಯಲೀಶ್ವರನೆನುತ | ಕಳುಹಿದನು ಮುದದಿ ||80||

ಭಾಮಿನಿ

ಅರಸನನು ಬೀಳ್ಗೊಂಡು ವಿಪ್ರರ |
ಹರಕೆಗೊಂಡಾ ಪಾರ್ಥನಿರದು |
ತ್ತರಕೆ ನಡೆದನು ಹಲವು ಗಿರಿ ಕಾನನವನುರೆ ಕಳೆದು ||
ಪರಮಪಾವನ ಇಂದ್ರಕೀಲದ |
ವರವನಕೆ ಬರಲಂದು ಕೇಳೈ |
ನರನೆ ಪುಣ್ಯಕ್ಷೇತ್ರವಿದೆಯೆಂದುದು ನಭೋವಚನ ||81||

ವಾರ್ಧಕ

ಅಶರೀರವಾಣಿಯಂ ಕೇಳ್ದತಿ ವಿಲಾಸದಿಂ |
ದಸಮಬಲ ಪಾರ್ಥನಾ ಮರುದಿವಸದುದಯದೊಳ್ |
ಕುಶಲದಿಂ ಮಿಂದು ವಿಧಿವಿಹಿತದಿಂದರ್ಕಗರ್ಘ್ಯವನಿತ್ತು ಭಕ್ತಿಯಿಂದ ||
ಬಿಸಜಾಕ್ಷ ಸುಮನಸರ್ಗಕ್ಷಿಯಿಂದೆರಗಿ ತಾ |
ನೆಸೆವ ಕಿಗ್ಗಟ್ಟಿನ ಕಠಾರಿಯಂ ಪೆಗಲಿಗೀ |
ರಿಸಿದ ಬತ್ತಳಿಕೆಯಿಂದೆತ್ತಿ ದೋರ್ದಂಡಗಳೊಳಭವನಂ ಧ್ಯಾನಿಸಿದನು ||82||

ರಾಗ ಮಾರವಿ ಏಕತಾಳ

ಇಂತರ್ಜುನ ತಾನೇಕೋಭಾವದೊ | ಳಂತಕವೈರಿಯನು ||
ಅಂತರಂಗದಿ ಧ್ಯಾನಿಸುತಿರೆ ದ್ವಿಜರೂ | ಪಂ ತಳೆದಮರೇಂದ್ರ ||83||

ನಡೆತಂದಾತ್ಮಜಗೆಂದನಿದೇನೈ | ಖಡುಗ ಕಠಾರಿಗಳು ||
ಪಿಡಿದಿಹೆ ಧನು ಶರಸಹಿತಲಿಹುದು ಬೆಂ | ಗಡೆಯಲಿ ಬತ್ತಳಿಕೆ ||84||

ಏನಿದು ನಿಜದ ಸಮಾಧಿಯೊ ಡಂಭವೊ | ನೀನುಸಿರೆಂದೆನಲು ||
ತಾನಕ್ಷಿಯನರಳಿಚುತೆಂದನು ಮ | ತ್ತಾನರನಾತನೊಳು  ||85||

ಏಕಿನಿತೆಂಬೆ ಧರಾಮರ ಕೇಳು ಪಿ | ನಾಕಿಯ ಚರಣವನು ||
ಏಕೋಭಾವದಿ ಸ್ತುತಿಸುವೆ ನಿನಗೆ ವಿ | ವೇಕವಿದಿಲ್ಲವಲಾ ||86||

ಮಾನಸವೇ ದಢವಲ್ಲದ ಡಂಭದೊ | ಳೇನಹುದೆಂದೆನಲು ||
ತಾನಮರಾಧಿಪನೆಂಬುದ ತಿಳಿಹಿಸಿ | ಸಾನಂದದೊಳೆಂದ ||87||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಗನೆ ಕೇಳ್ ತವ ದಢಕೆ ಮೆಚ್ಚಿದೆ | ನಗಜೆಯರಸನು ಬರಲಿ ನಿನ್ನಯ |
ಬಗೆಯಭೀಷ್ಟವ ಕೊಡಲಿ ಸೇರಲಿ | ಜಗದಿ ನಿನಗೆ ||88||

ಇಂತೆನುತ ಸುತಗುಸಿರಿ ಸುಮನಸ | ಕಾಂತ ತೆರಳಲ್ಕಿತ್ತ ಫಲುಗುಣ |
ನಂತರಂಗದಿ ಭಜಿಸುತಿರ್ದನು | ಕಂತುಹರನ ||89||

ದಿವಸ ಮೂರಕ್ಕೊಮ್ಮೆ ಫಲವನು | ಸವಿಯುತಿರ್ದನು ಮೊದಲು ತದುಪರಿ |
ದಿವಸವಾರಕೆ ಫಲವ ಕೊಳ್ಳುತ | ಶಿವನ ಭಜಿಸಿ ||90||

ಮತ್ತೆ ತರಗೆಲೆಯಿಂದ ದಿನಗಳ | ನುತ್ತರಿಸುತಿರುತಿರ್ದ ಬಳಿಕಾ |
ಚಿತ್ತಶುದ್ಧಿಯೊಳಿರ್ದ ಶ್ವಾಸಮ | ರುತ್ತನಾಗಿ ||91||

ವರ ಸಮಾಧಿಯೊಳಯ್ದೆ ದಷ್ಟಿಯ | ನಿರಿಸಿ ನಾಸಾಗ್ರಹದಲಿ ಮೇಲ್ಮೊಗ |
ವಿರಿಸಿ ಭರ್ಗನ ಭಜಿಸುತಿರ್ದನು | ಮರೆದು ತನುವ ||92||

ಮತ್ತೇಭವಿಕ್ರೀಡಿತಂ

ಸುರನಾಥಾರ್ಚಿತಪಾದನಂ ಗಿರಿಶನಂ ಸರ್ವೇಶನಂ ಈಶನಂ |
ತರುಣಾದಿತ್ಯಸಹಸ್ರಕಾಂತಿಯುತನಂ ಸನ್ಮಾರ್ಗನಂ ಭರ್ಗನಂ |
ಗಿರಿಜಾತಾವರನಂ ಕಪಾಲಧರನಂ ಗಂಗಾರ್ದ್ರನಂ ರುದ್ರನಂ |
ನರನೇಕೋಮನದಿಂದೆ ತಾಂ ಭಜಿಸಿದಂ ಫಾಲಾಕ್ಷನಂ ತ್ರ್ಯಕ್ಷನಂ ||93||

ಭಾಮಿನಿ

ನರನು ತಾನಿಂತಾ ಭವನ ಹತ್ |
ಸರಸಿಜದಿ ನೆಲೆಗೊಳಿಸಿ ತಾನೇ |
ಹರನೆನಿಪ ಸಚ್ಚಿನ್ಮಯಾನಂದಾಬ್ಧಿಯಲಿ ಮುಳುಗಿ ||
ಮರೆದು ದೇಹವನಯ್ದೆ ತಪದಿಂ |
ದಿರಲು ತಜ್ಜ್ವಾಲೆಯಲಿ ಮೂಜಗ |
ಮರುಗಿದುದು ಮಾನಸವದೇಂ ದಢವೋ ಧನಂಜಯನ ||94||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳಲ್ಲಿರುವ ಋಷಿಗಳು | ನರನ ತಪದುರಿಗಾನಲಾರದೆ |
ಮರುಗಿತಾವೊಟ್ಟಾಗುತೆಂದರು | ನೆರೆದು ಭಯದಿ ||95||

ಬಂದು ನರನನು ನೋಡಿತಮ್ಮೊಡ | ನೆಂದನಾರಿವನೊಡನೆ ಶಸ್ತ್ರಗ |
ಳಿಂದ ರಂಜಿಸುವನು ತಪಸ್ಸಿಗೆ | ನಿಂದಿರುವನು ||96||

ನುಡಿಸಿದರೆ ತಾ ನುಡಿಯನೆಮಗೀ | ತೊಡಕದೇತಕ್ಕೇಳಿರೆಲ್ಲರು |
ಮಡಗೆ ದೂರುವೆವೆಂದು ಬೇಗದಿ | ನಡೆದರಂದು ||97||

ವಾರ್ಧಕ

ಧುರದ ಕಣದಂತೆ ಖಡ್ಗಿಗಳಿಂದ ರಾಜಿಸುತ |
ಸುರಪನಂತನುದಿನಂ ಸುರಭಿಯುತಮಾಗಿ ಪಂ |
ಕರುಹಭವನಂತೆ ಗೋಸಂವತಂ ತಾನಾಗಿ ಅಭ್ರದಂತರ್ಕಾನ್ವಿತಂ ||
ಹರಿಯಂತೆ ಶ್ಯಾಮವರ್ಣನುಮಾಗಿ ಭಟನಂತೆ |
ಸುರಗಿಯಿಂ ತಾ ರಂಜಿಸುತ್ತಯೆ ಮಖದಂತೆ |
ನಿರತಮಂ ಶಿಖಿಸಮನ್ವಿತನಾಗಿ ಕೈಲಾಸಗಿರಿವರನಿರಲ್ ಕಂಡರು ||98||

ಕಂದ

ಇಂತಪ್ಪಾ ರಜತಾದ್ರಿಯ |
ನುಂ ತಳುವದಡರ್ದು ಮೌನಿನಿಕರಂ ಭರದಿಂ ||
ಅಂತಕಹರನಂ ದೂರದಿ |
ನಿಂತೀಕ್ಷಿಸಿ ಜಯ ಜಯವೆಂದಡಗೆಡದರಾಗಳ್ ||99||

ರಾಗ ಸಾಂಗತ್ಯ ರೂಪಕತಾಳ

ಕಾಲಿಗೆರಗುತೆಮ್ಮ ಪಾಲಿಸೆಂದೆನೆ ಮೌನಿ |
ಜಾಲವ ಕಂಡು ಶಂಕರನು |
ಏಳಿರೈ ಸಾಕಿನ್ನು ಗೋಳುಗುಟ್ಟುವುದೇಕೆ |
ಪೇಳಿ ಬಂದೆಡರನೆಂದೆನಲು ||100||

ಅರುಹಿ ಬೇಗೆಂದೊರ್ವ ನೀನೆ ಪೇಳೊಂದೊರ್ವ |
ಹಿರಿಯವನುಸಿರಲೆಂದೊರ್ವ ||
ಅರಿಯೆ ನಾನೆಂದೊರ್ವ ಕಿರಿಯವನೊಂದೊರ್ವ |
ನರುಹುವೆನೆಂದೊರ್ವಪಾರ್ವ ||101||

ಪರಮೇಶ ಕೇಳ್ ನಿನ್ನ ಕಪೆಯಿಂದೀವರೆಗೆ ಯ |
ಧ್ವರ ಕರ್ಮಂಗಳನು ಸಾಂಗದಲಿ ||
ವಿರಚಿಸುತಲ್ಲಿ ಸ್ವಸ್ಥದೊಳಿರ್ದೆವಿಂದಿನ |
ನರನೊ ಕಿನ್ನರನೊ ಖೇಚರನೊ ||102||

ಬಂದಲ್ಲಿ ತಪಗೆಯ್ವನವನ ಕಂಡರೆ ಋಷಿ |
ಯಂದವಲ್ಲಾಯುಧವಿಹುದು ||
ಬೆಂದೆವು ತಪಜ್ವಾಲೆಯಿಂದ ನಿಶ್ಚಯವಿದು |
ಮುಂದೆಂಬುದೇನೆಂದು ನಮಿಸೆ ||103||

ಕಂದ

ಹರನಾಲಿಸುತಂತರ್ಯದೊ |
ಳರಿದೆಮ್ಮವನಾತನಂಜದಿರಿ ನೀವವನಂ ||
ತ್ವರಿತದೊಳಲ್ಲಿಂದೆಬ್ಬಿಸಿ |
ಯಿರಿಸುವೆ ತದ್ವನದಿ ನಿಮ್ಮನೆಂದೆನೆ ಮಣಿದರ್ ||104||

ಭಾಮಿನಿ

ಅರಸ ಕೇಳಿಂತಭವಗೆರಗಿದು |
ತೆರಳೆ ಮೌನಿಗಳಿತ್ತಲೀಶನು |
ಕರೆದು ನಂದೀಶ್ವರನ ಕೂಡಿಸು ಭೂತನಿಕರವನು ||
ತ್ವರಿತದಿಂ ನೀನೆಂದು ಪಾರ್ವತಿ |
ವೆರಸಿ ತಾನೇ ಶಬರರೂಪವ |
ಧರಿಸುತೆದ್ದನು ಶರಣರರಸನ ದರುಶನಾರ್ಥಿಯಲಿ ||105||

ಹರ ಕಿರಾತರ ತೆರದಿ ಬೇಟೆಗೆ |
ತೆರಳುವನು ಬಹುದೆಂಬನಂದೀ |
ಶ್ವರನ ವಚನಕೆ ನೆರೆದರಾ ಪ್ರಮಥರುಗಳೊಗ್ಗಿನಲಿ ||
ಕರಿವದನ ಷಣ್ಮುಖರು ಭೈರವ |
ಶರಭ ರೇಣುಕ ಮುಖ್ಯರಾ ಶಂ |
ಕರನೊಡನೆ ನಡೆ ತಂದರಂದು ಕಿರಾತರೂಪದಲಿ ||106||

ರಾಗ ಮಾರವಿ ಏಕತಾಳ

ಲಾಲಿಸು ಧರಣೀ | ಪಾಲ ಚಿದಾತ್ಮನ | ಲೀಲೆಯ ನಾ ಶಬ | ರಾಳಿ ಸಹಿತ ನರ |
ನಾಳುತನವ ನೋ | ಳ್ಪಾಲೋಚನೆಯನು || ತಾಳುತ ವರ ಇಂದ್ರ | ಕೀಲ ಪರ್ವತಕೆ || ಬಂದರಂದು ||107||

ಎಲೆ ಎಲೆ ನೋಡ್ ಹೆ | ಬ್ಬುಲಿ ಹುಲಿಕೇಸರಿ | ಕಲಿತಮರ ದ್ವಿಜ | ಕುಲವಾರ್ಭಟಿಸಲು | ಮಲೆತಿವರಲಸದೆ | ಕೊಲಿರೆಂದುಲಿವುತ | ತಳುವದೆ ಬೇಡರ | ಕುಲವು ಗರ್ಜಿಸುತ || ಬಂದರಂದು ||108||

ವಿಧವಿಧದಸ್ತ್ರದಿ | ಸದೆವುತ ಮಗಗಳ | ಮದನಹರನ ಗುಣ | ರೊದಗಿ ಗರ್ಜಿಸೆ ಕೇ |
ಳಿದು ಮೂಕನೆನಿಪ | ಮದಮುಖನೋರುವ | ನದುಭುತ ಕಿಟಿರೂ | ಪದೊಳಯ್ತಂದ || ಏನನೆಂಬೆ ||109||

ಬಂದೀ ವ್ಯಾಧರ | ವಂದವ ಕಾಣುತ | ತಿಂದು ತೇಗುವೆನಿವ | ನೆಂದಾರ್ಭಟಿಸಲು | ಕಂದುಗೊರಳ ಕಂ | ಡಂದು ಸಮಯವಿ | ದೆಂದೆಚ್ಚನು ಭರ | ದಿಂದಲಿ ಖಳನ ||
ಏನನೆಂಬೆ ||110||

ಕಂದ

ಥಟ್ಟುಗಿದಂಬಿನೊಳಸುರಂ |
ದಿಟ್ಟನೆಯಭವನ ತಂತ್ರದಿ ಗಜರುತ ನರನಂ ||
ಮುಟ್ಟವಿಸಲು ಕಂದೆರವುತ |
ದಿಟ್ಟಿಸುತವನೆಚ್ಚು ಕೆಡಹಿದನು ಸೂಕರನಂ ||111||

ರಾಗ ತೋಡಿ ಏಕತಾಳ

ಏನೆಂಬುತ್ತಾ ನುಡಿತಿದ್ದಿ ಮ್ಯಾ | ಯೆಲೆ ಹಾರುವಯ್ಯ |
ಏನೆಂಬುತ್ತಾ ನುಡಿತಿದ್ದಿ ಮ್ಯಾ || ಪಲ್ಲವಿ ||

ಏನೆಂಬುತ್ತಾ ನುಡಿವುತಿದ್ದಿ | ಹೀನಲತೆಯ ತಿಂಬು ತಿದ್ದಿ |
ಮಾನವಂತ ನಿನಗಿದು ಸರಿಯೆ  || ಅನು ಪಲ್ಲವಿ ||

ಕೊರಳೊಳ ಜಂಝಾರವೇನು | ಸರಳು ಬಿಲ್ಲು ಪಿಡಿದುದೇನು |
ಕಳ್ಳತಪಸಿವೇಷ ನಿನಗೇಕೆ ||112||

ಒಳ್ಳೆವ ನೀನೆಂಬುದೇನು | ಹೊಳ್ಳು ಮೇಲಕೆತ್ತುದೇನು |
ಒಳ್ಳೆ ಶಾಣಾತನವು ನಿನಗೇಕೆ ||113||

ಜುಟ್ಟು ಜಡೆಯ ಪಾರ್ವ ನೀನು | ತೊಟ್ಟ ಸೀಸಕವಚವೇನು |
ಮುಟ್ಟಿಮುಟ್ಟಿ ನೀರೊಳ್ ಮುಳುಗುವೆ ||114||

ಸರಳು ತಾಗಿ ಕಿಟಿಯು ಬಂದಯ್ತೆ | ಉರಿಯು ತಾಳಲಾರದಯ್ತೆ |
ಬರುಬರುತಲೆ ಸತ್ತಯ್ತೆ ||115||

ಕಪಟಮಾಡಿದರೆ ಕಡಿವೆವು ಸಂದಾ | ಕಿಟಿಯ ಬಿಟ್ಟಿರೊಳ್ಳಿತೆಂದ |
ಇಷ್ಟು ಕೊಡುವೆ ತಿಂಬೆಯಾದರ್ ನಿನಗೆ ||116||

ಹಕ್ಕಿ ರಂಗಸ್ವಾಮಿಯಾಣೆ | ಮಿಕ್ಕ ಮಾತನಾಡಬೇಡ |
ತಕ್ಕುದಲ್ಲ ತಪಸಿ ನಿನಗೇಕೆ ||117||

ಏನ ಹೇಳ್ವೆ ಕಳ್ಳ ತಪಸಿ ನೀನು | ಶ್ವಾನಮರಿಗಳ ಬಿಟ್ಟೆವು ನಾವು |
ಸಾನುರಾಗದಿಂದಲ್ಹೊರಿಸ್ಯೇವು ||118||

ಭಾಮಿನಿ

ಧರಣಿಗುರುಳಿದ ಸೂಕರನ ಶಂ |
ಕರನು ಕಂಜರ್ಡುನನ ಧೈರ್ಯವ |
ಪರಿಕಿಸುವ ಬಗೆಯಿಂದ ಬಂದೆಮ್ಮಾಯುಧದ ಮೊನೆಗೆ ||
ಹರಣಗೊಟ್ಟುದು ಹಂದಿ ತೆಗೆಯೆನೆ |
ನರನು ಮದಗರ್ವದಲಿ ಶಿವನೆಂ |
ದರಿಯದೆಂದನು ಹರನ ಮಾಯೆಯ ಮೀರ್ವರ್ ಯಾರೆಂದ ||119||