ರಾಗ ಕಾಂಭೋಜಿ ಏಕತಾಳ

ಇಂಥಾ ಮಾತೇಕೆಂಬಿರವ್ವ | ಪಂಥವೇಕೆನ್ನೊಡನೆ |
ಅಂತರಂಗ ಶುದ್ಧವಾಗಿ | ಇಂತೆಂಬೆ ನಾ ನಿಮ್ಮೊಡನೆ || ಪಲ್ಲವಿ ||

ಮನುಜದೇಹವಿದು ಸದ್ಧರ್ಮದಿ | ನಡೆವುದೆಮಗೆ ನೀತಿ |
ತನು ನಿಲ್ಲುವ ತನಕವಾದರೆ | ಸುಮನಸರ್ಗೆ ಪ್ರೀತಿ ||
ಅನಿಮಿಷಲೋಕ ಸಾರ್ದ | ಡವರ ಮಾರ್ಗ ಬೇರೆ |
ಘನವೆ ದೇಹಕೆ ವಿಷಯವಿದನು | ಸುಡುಯೆಂದಳಾ ನೀರೆ ||257||

ಹರ ಹರಾ ಸದ್ಧರ್ಮಮಾರ್ಗದ | ನಡೆವ ಪುರುಷರಹುದು |
ತರುಣಿಯೊರ್ವಳಿಂಗೆ ರಮಣ | ರಯ್ವರಾಗಬಹುದು ||
ಸುರಲೋಕಕ್ಕೆ ಬರಲು ಬಂತು | ಪರಮ ತತ್ತ್ವ ನಿನಗೆ |
ನರರೊಳಧಮನೆನೆ ಕಯ್ ಮುಗಿಯು | ತೆಂದ ಮಗುಳೂರ್ವಶಿಗೆ ||258||

ಜನನಿಯೆಂದ ನುಡಿಯ ಮೀರ | ಲರಿಯದೋರುವಳನು |
ವನಿತೆಯೆಂದು ನಡೆವೆವಲ್ಲದೆ | ಮರೆವರೆ ನೀತಿಯನು ||
ತನುವಿನ ಸುಖಕ್ಕಾಗಿ ಮನವ | ಸ್ಮರಗೆ ಮಾರುಗೊಟ್ಟು |
ಘನವಾದ ಪಾಪಕ್ಕೆ ಬಿದ್ದು | ಬಾಳ್ವುದಾನಿನ್ನೆಷ್ಟು ||259||

ಜನನಿ ಮಾತಿಗಾಗಿ ಕೂಡಿ | ನೆರೆದಿರೊೀರ್ವಳನ್ನು |
ಜನಕನಿಂದ್ರನೆಂದ ಮಾತ | ಮೀರಬಹುದೆ ನೀನು ||
ಮನಸಿಜನ ಬಾಣದಿಂದ | ದಣಿದೆನಯ್ಯ ಎನಗೆ |
ಘನವಾದ ಮೋಹದಿ ರಮಿಸು | ಎರಗುವೆ ನಾ ನಿನಗೆ ||260||

ಕಾಡಬೇಡ ತಾಯೆ ಮುಂದಿ | ನ್ನಾಡಲೊಮ್ಮೆ ನಾನು |
ನೋಡದೊಂದೆ ಮನದೊಳಿರಲು | ಮನ್ಮಥ ಮಾಳ್ಪುದೇನು ||
ಬೇಡಿಕೊಂಬೆ ಪಾದಕೆರಗಿ | ತಾಯಿ ತನುಜರನ್ನು |
ನೋಡಲ್ ಬಂದ ಕೊರತೆಯುಂಟೆ | ಬಿಜಯಂಗೆಯ್ಯಿರಿನ್ನು ||261||

ವಾರ್ಧಕ

ನರನೆಂದ ನುಡಿಯನುಂ ಕೇಳ್ದು ಕೆಂಗಿಡಿಯನುಂ |
ಕರೆದಳವಳಕ್ಷಿಯಿಂ ಬೀತುದು ಮುಖಾಕ್ಷಿಯಿಂ |
ಕರುಣರಸವಾರಿದುದು ಕ್ರೋಧ ಮುಂದರಿದುದಾ ಹರಿಣಾಂಕನಿಭವಕ್ತ್ರದ ||
ವರ ಕಾಂತಿ ತಗ್ಗಿದುದು ಮೋಹಮಂ ಮುಗ್ಗಿದುದು |
ತರಳೆಯತಿತಾಪದಿಂ ಘನತರದ ಕೋಪದಿಂ |
ತರಹರಿಸುವಂಗದಿಂ ಬಹು ಮಾನಭಂಗದಿಂದಾ ಪಾರ್ಥಗಿಂತೆಂದಳು ||262||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲವೊ ಭಂಡರ ದೇವ ಖೂಳರ |
ತಿಲಕ ಹೇಡಿಗಳರಸ ಷಂಢರ
ಕುಲಗುರುವೆ ತಾನಾವಳೆಂಬುದ | ತಿಳಿಯದಾದೆ ||263||

ಹಿಡಿಯಿದಕೊ ನರಗುರಿಯೆ ಶಾಪವ |
ಕೊಡುವೆ ವತ್ಸರವೊಂದನೆಡೆಬಿಡ | ದೆಡಹಿ ಧರಿಸು ಶಿಖಂಡಿತನವನು |
ಪೊಡವಿಯೊಳಗೆ ||264||

ಹರಿಹರಬ್ರಹ್ಮಾಮರೇಂದ್ರರ | ಮರೆಯ ಪೊಕ್ಕರು ತೀರದೆಂದೆನು |
ತಿರದೆ ಪೊರಟಳು ಕೋಪದಿಂದಾ | ತರುಣಿಯಂದು ||265||

ಕಂದ

ಇಂತಂದೂರ್ವಶಿ ಘನತರ |
ಸಂತಾಪದಿ ಶಪಿಸಿ ಪೋಗಲ್ ನರ ತಾ ಬಳಿಕಂ ||
ಚಿಂತಾಶರಧಿಯೊಳಾಳ್ದಂ |
ಸಂತಾಪದಿ ತಾ ತನ್ನೊಳು ಮರುಗಿದನಾಗಂ ||266||

ರಾಗ ನೀಲಾಂಬರಿ ಆದಿತಾಳ

ಹರ ಹರಾ ಈ ತರುಣಿಯೆನ್ನ | ಜರೆದು ಪೋದಳಿಂದು ||
ಬರಿದೆ ತನ್ನೊಳಪರಾಧವ | ಹೊರಿಸಿ ಪೋದಳ್ ಬಂದು ||267||

ವನಿತೆ ದೇವವಧು ತಾನೆತ್ತ | ಮನುಜನು ತಾನೆತ್ತ ||
ತನಗಿನ್ನಾವ ಭವದ ಪಾಪ | ವಿನಿತು ಕಯ್ ಗೂಡಿಸಿತು ||268||

ಧರೆಯೊಳಿನ್ನು ವರುಷವೊಂದಾ | ಬರಿದೆ ಷಂಡತನದಿ ||
ಇರುವುದುಂಟೆ ಕುರಿಗಳಂತೆ | ಹರಣವಿಡಿದು ಭರದಿ ||269||

ಧರಣೀಶನಿದ್ದಲ್ಲಿಗಯ್ದಿ | ನ್ನೊರೆವೆನಿಂತೀ ಪರಿಯ ||
ಸರುವಥಾ ನಾ ಕೆಟ್ಟಿನೀಗ | ಸುರಲೋಕದೊಳ್ ನಿಧಿಯೆ ||270||

ಶಿವನ ಶರವ ಪಡೆದೆ ನಾ ಕೌ | ರವನ ಕೊಲುವೆನೆಂದು ||
ಯುವತಿ ನುಡಿದ ನುಡಿಗೆ ಮುಂದೆ | ಹವಣವಿನ್ನೆಂತಿಹುದೊ ||271||

ಭಾಮಿನಿ

ಏಕೆ ಬಂದೆನೊ ಸುರಪುರಕೆ ವಿಧಿ |
ಕಾಕುಮಾಡಿಸಿತೆನ್ನನಕಟಾ |
ಸಾಕು ಸಂಸಾರಗಳ ಸುಡಲೆಂದರ್ಜುನನು ಮರುಗಿ ||
ವ್ಯಾಕುಲಂಬಡುತಿರಲು ಈಚೆಯೊ |
ಳಾ ಕಮಲಮುಖಿ ಚಿತ್ರಸೇನನ |
ತಾ ಕರೆದು ಪೇಳಿದಳು ಮಾನಚ್ಯುತಿಯನವನೊಡನೆ ||272||

ಕಂದ

ಇಂತೆನೆ ಕೇಳ್ದಾತಂ ಸುರ |
ಕಾಂತನ ಬಳಿಗಯ್ದಿ ಪೇಳ್ದನೀ ವಾರ್ತೆಯನುಂ ||
ಕುಂತಿಯ ವರ ಸುತನೊಳು ತಾ |
ನಿಂತೆಂದಂ ಗುಣವಂತನೊಳಾಗಳ್ ಮುದದಿಂ ||273||

ರಾಗ ಭೈರವಿ ಝಂಪೆತಾಳ

ಬಂದು ಸುರಪಾಲಕನು | ಕಂದು ಮೊಗದಿಂದಿರುವ |
ನಂದನನ ಕಾಣುತಿಂ | ತೆಂದ ನಸುನಗುತ ||274||

ಏನಯ್ಯ ಪಾರ್ಥ ದು | ಮ್ಮಾನವೇಕೆಲೆ ತಂದೆ |
ಮೌನವೇಕುಸಿರು ತ | ನ್ನಾನೆ ಬಾರೆನುತ ||275||

ನೋಡುತ ಮಗನ ಮು | ದ್ದಾಡಿ ಮೊಗ ನೋಡಿ ಮಾ |
ತಾಡಲರ್ಜುನ ಲಜ್ಜೆ | ಗೂಡಿತಲೆವಾಗಿ ||276||

ಮರುಗುತಿರೆ ಮನದೊಳಗೆ | ಮರಳಿ ಬಿಗಿಯಪ್ಪಿ ಸುರ
ವರನು ಮಗುಳೆಂದ ಸಿತ | ತುರಗನೊಳು ಮುದದಿ ||277||

ತರುಣ ಕೇಳೈ ವಥಾ | ಮರುಗದಿರು ತರುಣಿಯುಪ |
ಕರಿಸಿದಳು ಬರಿದೆ ನೀ | ನರಿಯದಾದೆಯಲಾ ||278||

ವರುಷವಜ್ಞಾತದ | ಲ್ಲಿರಲು ಸಾಧನಮಾಯ್ತು |
ನೆರೆಷಂಡತನವನಾ | ಚರಿಸಬಹುದೆಂದ ||279||

ಭಾಮಿನಿ

ಅರಿಗಳಿಗೆ ಕಾಣಿಸದೆ ಮರೆಯಿಂ |
ದಿರಲು ಬೇಕಜ್ಞಾತವಾಸದಿ |
ದೊರಕಿದುದು ಪುಣ್ಯದಿ ನಪುಂಸಕತನವು ಮರೆಗೊಂಡು ||
ವರುಷವೊಂದನು ತೀರ್ಚಬಹುದೀ |
ಪರಿಯನರಿಯದೆ ಮರುಗಬೇಡೆಂ |
ದರಮನೆಗೆ ಕರೆತಂದನಮರಾಧಿಪ ಧನಂಜಯನ ||280||

ವಾರ್ಧಕ

ಸುರಪನೀ ಪರಿಯಿಂದಲರ್ಜುನನನೊಡಬಡಿಸೆ |
ಮರುತ ಶಿಖಿ ಸೋಮರಸ್ತ್ರವನಿತ್ತರನಿಮಿಷರ |
ತರುಣಿಯರ್ ಸೇಸೆ ತಳಿದರ್ಜುನಗೆ ಜಯಮೆಂದು ಮಗುಳಿಂದ್ರನತಿ ತೋಷದಿಂ ||
ನರಗಸ್ತ್ರಶಸ್ತ್ರದ ರಹಸ್ಯಮಂತ್ರವನರುಪಿ |
ಭರತವಿದ್ಯೆಯನುಸಿರಿ ಸುತನೊಡನೆ ಹರುಷದಿಂ |
ದಿರುತೊಂದು ದಿನವಸುರರುಪ ಹತಿಗೆ ಮರುಗುತ್ತ ಪಾರ್ಥನೊಡನಿಂತೆಂದನು ||281||

ರಾಗ ಸಾಂಗತ್ಯ ರೂಪಕತಾಳ

ಕೇಳಯ್ಯ ಪಾರ್ಥ ನಾನೆಂಬ ಮಾತನು ಸುರ |
ಜಾಲಕ್ಕೆ ಬಂದ ಕಂಟಕವು ||
ಪೇಳಲರಿದು ಖೂಳಖಳರು ಪಟ್ಟಣವನು |
ಧಾಳಿಟ್ಟು ಸೆಳೆದರ್ ವಸ್ತುಗಳ ||282||

ನಿರತ ಬಂದಮರರ ಬಡಿದು ಬಾಧಿಸುವರು |
ತಿರುಗಾಡ ಬಿಡರು ಸ್ವರ್ಗದೊಳು ||
ಅರುಹುವುದೇನು ಮುಚ್ಚಿದ ಕವಾಟವನೆಲ್ಲ |
ತೆರೆಯಲೀಸರು ಮನೆಮನೆಯ ||283||

ಸುರಲೋಕವಧಿಕ ಸಂಭ್ರಮದಿಂದಲಿರುವುದೀ|
ವರೆಗೆ ದಾನವರಿಂದಲೀಗ ||
ಮರುಗುವುದಾಯ್ತು ಸತಿಯರನೆಲ್ಲರನೀಗ |
ಸೆಯೊಳಿಟ್ಟಿಹರು ದಾನವರು ||284||

ನಿನಗೀಶ್ವರನ ಕಪೆಯಾಯ್ತಯ್ಸೆ ಸುದುಷ್ಟ |
ದನುಜರ ಕುಲವ ಸಂಹರಿಸಿ ||
ಅನಿಮಿಷರನು ತೋಷಬಡಿಸು ನಮ್ಮಯ ಸೈನ್ಯ |
ವನು ಕೂಡಿಕೊಡುವೆ ಬೆಂಬಲಕೆ ||285||

ಭಾಮಿನಿ

ಕೇಳು ಪಾರ್ಥ ನಿವಾತಕವಚರು |
ಕಾಲಕೇಯರೆನಿಪ್ಪ ಬಹು ದೈ |
ತ್ಯಾಳಿಯಿಹುದವದಿರನು ತೀರ್ಚಿಸಿ ನಮ್ಮ ಸಲಹೆನಲು ||
ಆಲಿಸುತ ನರನಧಿಕ ಹರುಷವ |
ತಾಳಿ ಶೌರ್ಯದೊಳುಬ್ಬಿ ಸುಮನಸ |
ಪಾಲಕಗೆ ಕಯ್ ಮುಗಿವುತೆಂದನು ಮಧುರವಚನದಲಿ ||286||

ರಾಗ ಭೈರವಿ ಮಟ್ಟೆತಾಳ

ತಾತ ಕೇಳಿದಾವ ದೊಡ್ಡ | ಮಾತ ಪೇಳ್ವಿರಿ |
ಪೇತು ರಕ್ಕಸರಿಗೇಕೆ | ಭೀತಿ ತಾಳ್ವಿರಿ ||
ಪಾತಕಾತ್ಮರಾಗಿರುವ ನಿ | ವಾತಕವಚರ |
ಧಾತುಗೆಡಿಸಿ ಸುಖದೊಳಿಡುವೆ | ನಿಮ್ಮ ದಿವಿಜರ ||287||

ತರಿಸು ರಥವನೇಕೆ ನೋಳ್ಪೆ | ನೆರಹು ಬಲವನು |
ಧುರದೊಳಾಂತು ತರಿವೆನಾ ದು | ರಾತ್ಮಕುಲವನು ||
ಕರೆಸು ಸಾರಥಿಯನು ತಡೆಯ | ದೆಂಬ ಮಗನನು |
ಹರುಷದಿಂದಲಪ್ಪಿ ಮುದ್ದಿ | ಸುತ್ತ ಸುರಪನು ||288||

ಮಾತಲಿಯನು ಕರೆದು ರಥವ | ಹೂಡೆನುತ್ತಲಿ |
ಚಾತುರಂಗಬಲವ ನೆರಹಿ | ಕೊಂಡು ಮುದದಲಿ ||
ಶ್ವೇತ ತುರಗ ನಾಗಲಿಂದ್ರ | ಗೆರಗಿ ರಥವನು |
ಸಾತಿಶಯದೊಳೇರ್ದನಯ್ದೆ | ಕೊಂಡುಧನುವನು ||289||

ಭಾಮಿನಿ

ಪೊಡವಿಪತಿ ಕೇಳಮರಬಲವ |
ಗ್ಘಡಿಸಿ ಕೂಡಿದುದೇನನೆಂಬೆನು |
ಹೊಡೆವ ದುಂದುಭಿ ಪಟಹ ಕಹಳಾರವದ ರಭಸದಲಿ ||
ಒಡೆದುದೋ ಬ್ರಹ್ಮಾಂಡಮೆನೆ ಪಡೆ |
ನಡೆದುದೆಡೆಯಿಲ್ಲೆಂಬವೋಲ್ ನರ |
ನೊಡನೆ ಗರ್ಜಿಸಿ ವರ ಹಿರಣ್ಯಕ ಪುರಕೆ ಧಾಳಿಯಲಿ ||290||

ರಾಗ ಮಾರವಿ ಏಕತಾಳ

ಸುರಸೈನಿಕವೀ ಪರಿಯಾರ್ಭಟಿಸ |
ಲ್ಕುರುತರ ಸತ್ತ್ವದಲಿರದೆ ಹಿಣ್ಯಕ |
ಪುರವನು ಮುತ್ತುವ ಭರವಸದಿಂದಲಿ |
ನರನೊಡನಯ್ತರುತಿರುವ ಬಗೆಯನು | ಏನನೆಂಬೆ ||291||

ಘುಡುಘುಡುಘುಡಿಸುತಲೆಡೆವಿಡದಡಿಯಿಡು |
ತೊಡನೆ ಬೊಬ್ಬಿಡುತಲಿ ಖಡುಗವಿಡಿದು ಜಡಿ |
ದಡಿಗಡಿಗೊದರುತ ಪಡೆ ನಡೆವ ಭರಕೆ |
ಕಡಲುಕ್ಕಿತು ನಡನಡುಗಿತು ಧರಣಿ | ಯೇನನೆಂಬೆ ||292||

ಸರ್ಗಿಗಳೀ ಪರಿಭೋರ್ಗರೆವುತ ಖಳ |
ವರ್ಗವನಂತಕನೂರ್ಗಟ್ಟುವೆವೆನು |
ತೋರ್ಗುಡಿಸುತ ಪೊಂದೇರ್ಗಳ ನೂಕಿ ಭ |
ಟರ್ಗಳಯ್ದಿ ಬಲು ದುರ್ಗವ ಮುತ್ತಿದ | ರೇನನೆಂಬೆ ||293||

ವಾರ್ಧಕ

ಜನಮೇಜಯಾಖ್ಯ ಲಾಲಿಸು ದಿವಿಜಸೈನ್ಯಮಂ |
ದನುಜಪುರವರವನು ಮುತ್ತಿ ಮತ್ತಲ್ಲಿರುವ |
ಬಿನುಗು ಬಿಚ್ಚಟಿಯನುಂ ಬಡೆದಟ್ಟಲಾ ದುರ್ಗವೇನೆಂದರಿಯದಿವರನು ||
ದನುಜನೊರ್ವಂ ಪೊರಗೆ ಗಜಬಜವಿದೇನೆನುತ |
ಅನಿಮಿಷರ ಧಾಳಿಯೆಂಬುದನೀಕ್ಷಿಸುತ್ತಂದು |
ಮನದೊಳುಬ್ಬುತಲಸುರನಾ ಯೆಡೆಗಯ್ತಂದು ಮಣಿದನತಿ ತೋಷದಿಂದ ||294||

ಕಂದ

ಹರುಷದಿನೆರಗಿದ ಖಳನಂ |
ಪರಿಕಿಸುತ ಸುರೇಂದ್ರನಯ್ದೆ ನಸುನಗೆಯಿಂದಂ ||
ಕರೆದೆಂದನೆಲವೊ ಮುದವೇ |
ನರುಹೆನಲವನೆಂದನೊಡನೆಕುಟ್ಮಲಕರದಿಂ ||295||

ರಾಗ ಮುಖಾರಿ ಏಕತಾಳ

ದನುಜೇಶ ಲಾಲಿಸೆನ್ನ ಮಾತ | ಪೇಳುವೆ ನಿರ್ಭೀತ || ದನುಜೇಶ ||
ಹರಣದಾಸೆಯ ತೋರದಿಂದು | ಸುರಸೈನ್ಯವಿಂದು | ಪುರವ ಮುತ್ತಿದರಯ್ಯ ಬಂದು ||
ಅರುಹುವುದೇನೈ | ಕರೆಸು ಮಾರ್ಬಲವನು | ತಿರುಕುಳರಿಂಗೀ ತೆರದ ಪರಾಕ್ರಮ |
ಬರುವದು ಹೊಸತಿದ | ಪರಿಕಿಪುದಿಂದವ | ದಿರ ಸತ್ತವನೆಂ | ದೆರಗಿದನಂದು ||296||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎನಲು ಕೇಳುತ ಖತಿಯೊಳಾ ದೂ |
ತನನು ಹೊಯ್ ಹೊಯ್‌ತಪ್ಪುವನೆ ಸುರ |
ಜನಪನೀತನ ನಾಲಗೆಯ ಕೊ | ಯೆ್ಯನುತಲಾಗ ||297||

ದನುಜಪತಿಯಾರ್ಭಟಿಸಿ ಬಂದಿರು |
ವನನು ನಿಮಿಷದಿ ಮುನ್ನ ಸೀಳಿದು |
ಮಗುಳೆ ತನಗಾಜ್ಞೆಯನು ಮಾಡುವು | ದೆನುತ ಖಳನು ||298||

ನುಡಿಯ ಕೇಳುತ ಬಂದನೇ ಸುರ |
ರೊಡೆಯನೆಮ್ಮಯ ಪುರಕೆ ತಾನೇ |
ಕಡೆಯಕಾಲವಿದಾತಗೆನುತಾ | ಧಡಿಗ ಖಳರು ||299||

ಕರಿ ತುರಗ ರಥ ಸಹಿತ ದೈತ್ಯರ |
ನೆರವಿಯನು  ನೂಕಿದನು ದುರ್ಗವ |
ಪೊರಟುದಸುರರ ಚೂಣಿಕಲ್ಪದ | ಶರಧಿಯಂತೆ ||300||

ಕಂದ

ಕಡುಪಿಂದಂ ದೈತ್ಯಕುಲಂ |
ಬಿಡುಗಣ್ಣರ ಪಡೆಯನಯ್ದೆ ತರಿವೆವೆನುತ್ತಂ
ಗುಡುಗುಡಿಸುತೆ ಕೆಂಧೂಳ್ ನಭ |
ಕಡರುತ್ತಿರಲಾರ್ದು ಪೊಕ್ಕರಿಸೈನೈವನುಂ ||301||

ರಾಗ ಪಂಚಾಗತಿ ಮಟ್ಟೆತಾಳ

ಖಳರು ಗಜ ವರೂಥ ಹಯ ಪದಾತಿ ಸಹಿತಲಿ |
ಮೊಳಗುತಿಹ ಗಭೀರ ಭೇರಿರವದಿ ಭರದಲಿ ||
ಮುಳಿದು ಸರಳಮಳೆಯ ಕರೆವುತಮರದಳವನು |
ಕೊಲುತಲಿರ್ದರೇನನೆಂಬೆನವರ ಬಲುಹನು ||302||

ಮರುತನುರುಬೆಗಿರೆ ಹೊಯ್ದ ಮುಗಿಲ ತೆರದಲಿ |
ಸುರರು ಖಳರ ಹತಿಗೆ ಪಾರ್ದರಿರದೆ ಭರದಲಿ ||
ನರನು ಕಂಡು ನಗುತ ಮಾತಲಿಯೊಳು ರಥವನು |
ಹರಿಸೆನುತ್ತಲುಬ್ಬಿಕೊಂಡ ನಿರದೆ ಧನುವನು ||303||

ನಡೆಸು ರಥವನೆನಲು ಸುರಪಸೂತ ನಿಮಿಷಕೆ |
ತಡೆಯದಸುರಸೈನ್ಯವೆಂಬ ಶರಧಿಮಧ್ಯಕೆ ||
ಬಿಡುವ ಸ್ಯಂದನವನು ಕಾಣುತಂದು ದನುಜರು |
ಫಡ ಫಡಿಂದ್ರ ಬಂದನೆನುತಲಾರ್ದು ಕವಿದರು ||304||

ಇದಿರು ಬರುವ ಬಲವ ಸವರಿ ಬದಿಯೊಳೌಕುವ |
ಮದಮುಖರನು ಸೀಳಿಯಂತೆ ಬರುವ ಸೈನ್ಯವ ||
ಸದೆದು ಮೇಲೆ ಕವಿವ ಖಳರ ಮುರಿದನು |
ಕುದುರೆಯಾನೆ ತೇರುಗಳನು ತರಿದು ಬಿಸುಟನು ||305||

ವಾರ್ಧಕ

ತಡೆದು ಮುತ್ತಿದ ಚಾತುರಂಗಮಂ ಭಂಗಮಂ |
ಬಿಡಿಸಿ ಮತ್ತಾ ನರಂ ತೋಷದಿಂ ಚಾಪದಿಂ |
ದಡಿಗಡಿಗೆ ಬಿಡದೆಸುತ ಸರಳನುಂ ಕೊರಳನುಂ ಕತ್ತರಿಸಿ ರಿಪುಬಲವನು ||
ಪುಡಿಗೆಯ್ದು ದಾನವರ ಚೂಣಿಯಂ ಸಾಣೆೆಯಂ |
ಪಿಡಿದಲಗುಗಳನು ನೆರೆ ಪೂಡಿದಂ ನೋಡಿದಂ |
ಧಡಿಗ ದೈತ್ಯೇಯರಸುಜಾರ್ವುದಂ ಪಾರ್ವುದಂ ದೆಸೆದೆಸೆಗೆ ಬಾಯ ಬಿಡುತ ||306||

ಕಂದ

ನರನುರುಬೆಗೆ ನಿಲಲಾರದೆ |
ಮರಳಿದ ಬಾಯಿ ಬಿಡುತೆ ಬಿಟ್ಟ ಮಂಡೆಯೊಳಾಗಳ್ ||
ಪುರಮಂ ಪೊಕ್ಕಸುರೇಂದ್ರಂ |
ಗರುಹಿದರು ಭೀತಿಯಿಂದೆ ನಡನಡುಗುತ್ತಂ ||307||

ರಾಗ ಮಾರವಿ ಏಕತಾಳ

ದನುಜೇಶ್ವರ ಕೇಳ್ ಬಂದವನತಿಬಲ | ನನಿಮಿಷರಂತಲ್ಲ ||
ಅನುವರದೊಳು ದಾನವಬಲವನು ಗೆಲಿ | ದನು ನಿಮಿಷದೊಳೆಲ್ಲ ||308||

ಕರಿ ರಥತುರಗ ಪದಾತಿಯನೆಲ್ಲವ | ನುರುಳಿಸಿದನು ನೆಲಕೆ ||
ಅರುಹುವುದೇನೆಂದೆರಗಲು ಕೇಳ್ದಾ | ಶರವರನಾ ಕ್ಷಣಕೆ ||309||

ರಾಗ ಭೈರವಿ ಝಂಪೆತಾಳ

ಎಲವೊ ಸುರಪನು ಖಳರ | ಮುರಿದನೇ ಇಂದೆಮ್ಮ |
ಕುಲಕೆ ಕುಂದಾಯ್ತೆನುತ | ಪಲುಮೊರೆವುತಾಗ ||310||

ಬರಹೇಳು ಭರ್ಗನನು | ಜರೆವ ದಾನವರನೆಂ |
ದುರಿಯುಗುಳುತಾ ದೈತ್ಯ | ರೆರೆಯ ಗರ್ಜಿಸುತ ||311||

ನುಡಿಯ ಕೇಳ್ದಸುರರವ | ಗಡಿಸಿ ಕೂಡಿದುದು ಬರ |
ಸಿಡಿಲ ಗರ್ಜನೆಯಂತೆ ಗುಡುಗುಡಿಸುತಾಗ ||312||

ಒಡೆಯ ನೀನೇಕೇಳ್ವೆ | ಬಿಡು ಖತಿಯ ವಾಸವನ |
ಮಡದಿಯನು ಮುಂದಲೆಯ | ಪಿಡಿದು ತಹೆವಿಂದು ||313||

ಶಿವನಡ್ಡನಿಲಲಿ ಭೈ | ರವನು ತಾ ತಡೆಯಲಾ |
ದಿವಿಜರನು ತಿಂದು ತೇ | ಗುವೆನುತ ಖಳರು ||314||

ಭಾಮಿನಿ

ಇನಿತು ಪೇಳ್ದುದ ಕೇಳ್ದು ಆ ಶರ |
ಜನಪ ವೀಳೆಂುವಿತ್ತು ದೈತ್ಯರ |
ನನುವರಕೆ ಬೀಳ್ಗೊಡಲು ಪೊರಟರು ಕೋಟಿಸಂಖ್ಯೆಯಲಿ ||
ವನಧಿಗಳು ತುಳುಕಾಡೆ ಭುವಿ ಬಿ |
ಕ್ಕನೆ ಬಿರಿಯಲಾರ್ಭಟಿಸಿ ವಾದ್ಯದ |
ಘನತರದ ಘೋಷದಲಿ ನಡೆದರು ಸುರರ ಸಮ್ಮುಖಕೆ ||315||