ಭೋಗಷಟ್ಪದಿ

ಧಡಿಗ ದೈತ್ಯರಂದು ದಿವಿಜ |
ರೊಡೆಯನೆಲ್ಲಿ ತೋರೆನುತ್ತ |
ದಡುಗುಡಿಸುತೆ ಕವಿಯೆ ಸುರರ ಗಡಣ ಭರದಲಿ ||
ತಡೆಯದೋಡುತಿರಲು ನರನು |
ಫಡ ಫಡೆನುತಲನಿತು ಖಳರ |
ಪಡೆಯನೈಂದ್ರ ಶರದಿ ತರಿದನೊಡನೆ ಸತ್ತ್ವದಿ ||316||

ಅರಸೆ ಪೇಳ್ವುದೇನು ದನುಜ |
ರುರುಪರಾಕ್ರಮದಲಿ ಮತ್ತೆ |
ಶರಧಿಮೇಲೆಯೊಡೆದು ಬರ್ಪ ತೆರದೊಳುಲಿಯುತ ||
ನರನ ರಥವ ಮುಸುಕಕಾಣು |
ತಿರದೆ ಖಾತಿಯಿಂದೆ ಮಗುಳೆ |
ತರಿದು ಬಿಸುಟನರುಣಜಲವು ಪರಿದುದಗಲಕೆ ||317||

ಮತ್ತೆ ಖಳರು ಮುರಿದು ಕಾಣು |
ತಿತ್ತಲಮರಸೈನ್ಯತೋಷ |
ವೆತ್ತು ಪಾರ್ಥ ಭಾಪು ಭಳಿರೆನುತ್ತಲುಲಿವುತ ||
ಪತ್ತಿಗಜತುರಂಗ ರಥದಿ |
ಮೊತ್ತದಿಂದಲಾರ್ಭಟಿಸುತ |
ಮುತ್ತಿಕೊಂಡಸುರಪುರದ ಸುತ್ತಲಾಕ್ಷಣ ||318||

ಭಾಮಿನಿ

ಸುರರು ಸುಮ್ಮಾನದಲಿ ದೈತ್ಯರ |
ನುರುಬ ಕೋಟೆಯನಡರುತಿರೆ ಕಂ |
ಡರರೆ ಸುಮನಸರಾಳು ದುರ್ಗವನೇರಿ ಬಂದರಲಾ ||
ಕೊರಳ ಕಡಿ ತಿವಿ ಕೊಲ್ಲು ತಿನ್ನಿರಿ |
ಕರುಳನುಗಿಯೆನುತಾ ಶರೇಂದ್ರರು |
ಧುರಕೆ ಪೊರಟರು ಮೂರುಕೋಟಿ ನಿಶಾಚರರು ಸಹಿತ ||319||

ರಾಗ ರೇಗುಪ್ತಿ ತ್ರಿವುಡೆತಾಳ

ನುಡಿಯಲರಿದು ನಿವಾತಕವಚರ | ಕಡುಹನದನೇನೆಂಬೆ ಕಲ್ಪದ |
ಸಿಡಿಲ ಮೊಳಗೆಂಬಂತೆ ಬಲು ಬೊ | ಬ್ಬಿಡುತ ಗಜ ರಥ ತುರಗ ಸಹಿತೊಡ |
ನೊಡನೆ ಗರ್ಜಿಸುತಯ್ದೆ ಸುಮನಸ | ರೊಡೆಯನಾವೆಡೆ ತೋರು ತೋರೆನು |
ತಡಿಯಿಡುತಲೆಡೆವಿಡದೆ ಬರುತಿರೆ | ಪಡೆವೆರಸಿ ಘುಡುಘುಡಿಸಿ ಕದನಕೆ ||
ಬಂದರಾಗ | ಖಳರ | ಯ್ತಂದರಾಗ ||320||

ಕೊಲ್ಲಿರೋ ಮುಂಬರಿವ ಸುರರನು | ಬಿಲ್ಲ ಕಸಿಯಿರೊ ಬೆರೆತು ನಗುವರ |
ಹಲ್ಲ ಮುರಿಯಿರೊ ತಲೆಯನೊಡೆಯಿರೊ | ಚೆಲ್ಲಬಡಿದವದಿರ ಕರುಳ್ಗಳ |
ನೆಲ್ಲವನು ಶಾಕಿನಿಯರಿಗೆ ನ | ಮ್ಮಲ್ಲಿಯೌತಣವಾಗಲಯ್ತವ |
ನೆಲ್ಲಿ ತೋರಾ ಸುರಪನಾವೆಡೆ | ನಿಲ್ಲೆಲಾಹವಕೆನುತ ದೈತ್ಯರು |
ಬಂದರಾಗ | ಖಳರ | ಯ್ತಂದರಾಗ ||321||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳೇನೆಂಬೆನಿಂತಾ | ದುರುಳರಾರ್ಭಡಿಸುತ್ತ ಬರೆ ಕಂ |
ಡಿರದೆ ದೂರದಲೋಡತೊಡಗಲು | ಸುರರು ಭಯದಿ ||322||

ತೋರು ತೋರಮರೇಂದ್ರನಾವೆಡೆ | ತೋರಿಸೈರಾವತವನೆನುತಲೆ |
ಭೂರಿ ಬಾಣವ ಕವಿದೆಸುತ ಶರ | ವಾರ ಸಹಿತ ||323||

ಬೊಬ್ಬಿರಿವುತಯ್ತರಲು ಕಾಣುತ | ಲುಬ್ಬಿ ಮನದಲಿ ಪಾರ್ಥನಿವದಿರ |
ಕೊಬ್ಬ ಮುರಿವೆನು ಸೂತ ನೋಡೆನು | ತಬ್ಬರಿಸುತ ||324||

ಧನುವ ಝೇವಡೆದಾರ್ದು ಬಾಣವ | ವನಧಿಯನು ತುಳುಕಿದನು ಪಾರ್ಥನ |
ಕನಲಿಸಿದು ಜೀವಿಸಿದರುಂಟೇ | ಯನುವರದೊಳು ||325||

ಕರಿರಥಾಶ್ವಪದಾತಿಯನು ಹೊ | ಯ್ದರಸಿದನು ಮಾರ್ಬಲವ ದನುಜರ |
ಕೊರಳ ಬಳೆಗಳು ಕಳಚಲೆಚ್ಚನು | ಭರದಲಂದು ||326||

ರಾಗ ಮಾರವಿ ಏಕತಾಳ

ಭರದೊಳೆಸುತ ಬಹ ನರನನು ಕಾಣುತ |
ಲರರೆ ಬಂದ ಭಟ ಸುರಪನಲ್ಲ ಹೊಸ |
ಪರಿಯ ವೀರನಿವನಿರಿತಕೆ ಬೆದರದೆ |
ತರಿ ಕೊಲ್ಲಿರಿ ಎನುತುರುಬುತಾ ಖೂಳರು | ಖಾತಿಯಿಂದ ||327||

ಘುಡುಘುಡಿಸುತಲಡಗೆಡಹಿರಿವನನೆನು |
ತೆಡೆವಿಡದೌಕುವ ದಡಿಗರನೀಕ್ಷಿಸು |
ತಡಿಗಡಿಗಂಬನು ತೊಡುತೊಡನೆಸೆವುತ |
ಲಡಬಳಿಗರ ತಲೆಗೆಡಹಿದ ನರನು | ಖಾತಿಯಿಂದ ||328||

ಖೂಳರನೀಪರಿ ಕೋಟಿಗೊಬ್ಬಿಬ್ಬರ |
ಸೀಳಿದು ಘನತರ ಕೋಲಾಹಲದೊಳು |
ಮೇಲೆ ಮೇಲೆ ಕವಿವಾಳು ಕುದುರೆಗಳ |
ಬೀಳಗೆಡಹಿ ಖಳರೋಳಿಯ ಮುರಿದ | ಖಾತಿಯಿಂದ ||329||

ಭಾಮಿನಿ

ಎಲೆಲೆ ಕವಿ ತಿವಿ ಕೊಲುವನೀತನು |
ಬಲುಮೆಯುಳ್ಳವನಿಂದ್ರನಿಂದ್ರರ |
ಬಳಿಯವರ ಬಗೆಯಲ್ಲ ಕವಿ ತಿವಿ ಕರುಳನುಗಿಯೆನುತ ||
ಖಳರು ಮುಸುಕಲು ಮತ್ತೆ ಕೋಲಾ |
ಹಲವನದನೇನೆಂಬೆನರ್ಜುನ |
ನಳುಕದುಬ್ಬರಿದೆಚ್ಚನಂಬುಜಭವ ಮಹಾಶರವ ||330||

ವಾರ್ಧಕ

ಅರಸ ಕೇಳಾ ಬ್ರಹ್ಮಮಾರ್ಗಣದ ಮುಖದಿಂದ |
ಉರಿಯ ಕರಡಿಗೆ ಬಾಯ್ದೆರೆದಂತೆ ಕಬ್ಬೊಗೆಯು |
ಹೊರಳಿ ಕಿಡಿಗಳ್ ಸೂಸಿದವು ಭುಗಿಲ್ ಭುಗಿಲು ಧಗಧಗವೆಂಬ ರಭಸದಿಂದ ||
ಕರಿ ತುರಂಗಮ ರಥ ಪದಾತಿಗಳ್ ವೆರಸಿ ಮೋ |
ಹರಿಸಿ ಮುತ್ತಿರ್ದ ಮೂರ್ಕೋಟಿ ದಾನವರ ನಿ |
ಟ್ಟೊರಸಿದುದು ಮಾರ್ಮಲೆವರಂ ಕಾಣದಡಗಿತರ್ಜುನನ ವರ ಬಾಣಧಿಯೊಳು ||331||

ರಾಗ ಭೈರವಿ ಝಂಪೆತಾಳ

ಅರಸ ಕೇಳಾ ಬ್ರಹ್ಮ | ಶರದುರಿಯೊಳಸುರಬಲ |
ಉರಿದುದೊಂದೇ ಕ್ಷಣಕೆ | ನರನ ಕದನದಲಿ ||332||

ಸುರರು ಸುಮ್ಮಾನದಲಿ | ಶರಧಿಘೊಷದಿ ಪೊಗಳು |
ತಿರೆ ಕಂಡು ಪಾರ್ಥನತಿ | ಹರುಷಪಡೆದೆಂದ ||333||

ರಥತಿರುಹೆಂದು ಸಾ | ರಥಿಗೆ ನೇಮಿಸಲಮರ |
ವಿತತಿ ತಿರುಗಿತು ನಗರ | ಕತುಳರಭಸದಲಿ ||334||

ಕೇಳುತೀ ವಾರ್ತೆಯನು | ಕಾಲಕೇಯರೆನಿಪ್ಪ |
ಖೂಳರಡಗಟ್ಟಿದರು | ಬಾಳ ಝಳಪಿಸುತ ||335||

ಭೋಗಷಟ್ಪದಿ

ಎಲವೊ ನಿಲ್ ನಿವಾತಕವಚ |
ರಳವ ಮುರಿದೆನೆಂಬ ಗರ್ವ |
ದೊಳಗೆ ಪೋಗಬೇಡ ನಿನ್ನ ತಲೆಯವನಿಗೆ ||
ಇಳುಹದಿರ್ದಡಾವು ದೈತ್ಯ |
ಕುಲದೊಳುದಿಸಿದವರೆ ನಮ್ಮ |
ಬಲುಹ ನೋಡೆನುತ್ತ ಸರಳಮಳೆಯ ಕರೆವುತ ||336||

ಬರುವ ಬಾಣಗಳನು ತಂದು |
ನರನು ತೋಷದಿಂದ ಸರಳು |
ಗರೆದನವನಿಯಭ್ರವೆಲ್ಲ ಶರದ ಮಯದಲಿ ||
ತೆರಪುಗಾಣದಂದಮಾಗೆ |
ಕೆರಳಿ ಮತ್ತೆದನುಜರಧಿಕ |
ತೆರದ ಮಾಯೆಯಿಂದ ಕಾದಿದರು ಸಗರ್ವದಿ ||337||

ಪಲವುತೆರದ ಮಾಯೆಗಳಲಿ |
ಕಲಹಕೊದಗುವವರ ಕಂಡು |
ತಳುವದವರ ಮಾಯೆಗಳನು ನಿಲಿಸಿ ನಿಮಿಷಕೆ ||
ಮುಳಿದು ಮತ್ತೆ ಬ್ರಹ್ಮಶರದಿ |
ಖಳರ ಗೋಣನರಿದು ಮಗುಳೆ |
ಯುಳಿದ ಬಲವನೈಂದ್ರಶರದಿ ತಲೆಯ ಕಡಿದನು  ||338||

ಅರಸ ಪೇಳ್ವೆನೇನ ಖಳರ |
ಮರಣವನ್ನು ಕಂಡು ಮುದದಿ |
ಚರರು ಮುಂದೆಪಾಯ್ದರಮರವರನಿಗರುಹಲು ||
ಎರಗುತೆಂದರೊಡೆಯ ವಸಗೆ |
ವರೆಯ ಹೊಯ್ಸುಗೆಲಿದ ನಿನ್ನ |
ತರುಣ ದೈತ್ಯರೋಳಿಸಹಿತ ಮರಣವಡೆದರು ||339||

ಭಾಮಿನಿ

ಎನುತ ಕೇಳುತಲಂಗಚಿತ್ತವ |
ನನಿಬರಿಂಗೊಲಿದಿತ್ತು ಹರುಷದಿ |
ಮನದಲುಬ್ಬಿದನೇನನೆಂಬೆನು ಸುರಪನುತ್ಸವವ ||
ವನಿತೆಯರ ಬರಹೇಳು ದುಂದುಭಿ |
ನಿನದವಾಗಲಿ ಬರಲಿ ದಿಗಧಿಪ |
ರೆನುತ ಪಾರ್ಥನನಿದಿರು ಗೊಂಬರ್ತಿಯಲಿ ಪೊರವಂಟ ||340||

ರಾಗ ರೇಗುಪ್ತಿ ತ್ರಿವುಡೆತಾಳ

ಸುರಪನೀ ಪರಿಯಿಂದ ಸಂತಸ | ವೆರಸಿ ದಿಗಧಿಪರೊಡನೆ ಮಿಗೆ ಭೋ |
ರ್ಗರೆವ ವಾದ್ಯಸುಘೋಷದಲಿ ಸುರು | ಚಿರದ ಕನ್ನಡಿ ಕಲಶವಿಡಿದ |
ಯ್ತರುವ ನಾರಿಯರಿಂದ ಗಂಧ | ರ್ವರ ಸುಗಾನದಿ ಪಾಠಕರ ಪರಿ |
ಪರಿಯ ಪೊಗಳಿಕೆಯಿಂದಲಪ್ಸರ | ತರುಣಿಯರ ನರ್ತನವ ನೋಡುತ |
ಬಂದನಾಗ | ನಗುತ | ಯ್ತಂದನಾಗ ||341||

ವಾರ್ಧಕ

ಇಂತು ನಡೆತಪ್ಪ ಸುರಕಾಂತನಂ ದೂರದೊಳ್ |
ಕುಂತೀಕುಮಾರಕಂ ಕಂಡು ಭಕ್ತಿಯೊಳೆ ರಥ |
ದಿಂ ತಳುವದಿಳಿದೊಯ್ಯನಯ್ತಂದು ತತ್ಪದಕೆ ಸಾಷ್ಟಾಂಗದಿಂದೆರಗಲು ||
ದಂತೀಂದ್ರಯಾನನತ್ಯಂತ ಹರುಷದೊಳಣುಗ |
ನಂ ತೆಗೆದು ತಕ್ಕವಿಸಿ ಮುಂಡಾಡಿ ಮುದ್ದಿಸುತ |
ಅಂತರಂಗ ಸ್ನೇಹದಿಂದ ಲಧಿಕಾನಂದಭಾಷ್ಪಲೋಚನನಾದನು ||342||

ರಾಗ ಕೇದಾರಗೌಳ ಅಷ್ಟತಾಳ

ಹರುಷದಿ ಹಿಗ್ಗುತ ಸುರಪನೀ ಪರಿಯಲ್ಲಿ | ನರನನು ಕೊಂಡಾಡುತ ||
ಮರಳಿ ತಕ್ಕಯಿಸಿ ಸಾಸಿರಮೊಗದಹಿಪನ | ತೆರದಿಂದ ಪೊಗಳುತಲಿ ||343||

ಕರೆದು ಮಾತಲಿಯನ್ನು ರಥವೇರ್ದು ಸುತಸಹಿ | ತುರುತರ ಸಂಭ್ರಮದಿ ||
ಸುರರೊಡವೆರಸಿ ದುಂದುಭಿ ಘೋಷದಿಂದಲಂ | ದರಮನೆಗಯ್ತಂದನು ||344||

ವಾರನಾರಿಯರ ನರ್ತನವ ನೋಡುತಲಿ ಗ | ಭೀರ ಭೇರಿಯ ರವದಿ ||
ನಾರದ ನುಡಿಪ ವೀಣೆಯನಾಲಿಸುತ ಬಂದ | ಭೂರಿನೇತ್ರನು ಅಂದದಿ ||345||

ವನಿತೆಯರಾರತಿಗಳ ತರಲೆನ್ನುತ | ತನುಜನ ಕರವಿಡಿದು ||
ವಿನಯದಿ ಕರವಿಡಿದಯ್ತಂದನರಮನೆ | ಗನಿಮಿಷರೊಡನಿಂದ್ರನು ||346||

ಘೋರ ದಾನವರ ಸಂಹಾರವ ಮಾಡಿ ವಂ | ದಾರಕರನು ಪೊರೆದ ||
ವೀರಾಧಿವೀರ ಪಾರ್ಥನೆ ಜಯವೆನ್ನುತ | ಲಾರತಿ ಬೆಳಗಿದರು ||347||

ಭಾಮಿನಿ

ಸುರಸತಿಯರೀ ತೆರದಿ ವರ ಸುರು |
ಚಿರದ ರತುನಾರತಿಯ ಬೆಳಗಲು |
ಸುರಪನರಸಿಯು ಬಂದು ಮುತ್ತಿನ ಸೇಸೆಯನು ತಳಿದು ||
ನರನ ಕೊಂಡಾಡುತ್ತ ದಿವಿಜರ |
ಪರಿಭವಿಸಿದಸುರರನು ಗೆಲಿದೈ |
ತರುಣ ನೀನಾದುದರ ಫಲವಾಯ್ತೆಂದಳಿಂದುಮುಖಿ ||348||

ರಾಗ ಕಾಂಭೋಜಿ ಝಂಪೆತಾಳ

ಇಂತೆಂದ ಶಚಿಯಂಘ್ರಿಗೆರಗಿ ನಿಮ್ಮಯ ಪುಣ್ಯ |
ದಿಂ ತರಿದೆನೌ ಖಳೋತ್ತಮರ ||
ಅಂತರಾತ್ಮಕನ ಕಪೆಯಿಂದ ಜಯವಾಯ್ತೆಂದು ||
ಕುಂತಿಯಾತ್ಮಜ ನುಡಿದನಾಗ ||349||

ಬಳಿಕ ಸುರಪನು ನರನ ಮನ್ನಿಸುತಲೆಂದನೆಮ |
ಗಳವಡದ ದೈತ್ಯರಟ್ಟುಳಿಯ ||
ನಿಲಿಸಿದೈ ನಿನಗಿನ್ನು ಸರಿಯಾರು ಮೂಲೋಕ |
ದೊಳಗೆನುತಲಪ್ಪಿದನು ಮಗುಳೆ ||350||

ಸುರರೆಲ್ಲ ಪಾರ್ಥನನು ಶರಧಿ ಘೋಷದಿ ಪೊಗಳು |
ತಿರೆ ಕಾಣುತಿಂದ್ರನತಿ ಮುದದಿ ||
ಪರಿಪರಿಯಲುಪಚರಿಸುತಿರಲಯ್ದುದಿನ ಸಂದು |
ದಿರದೆ ಸ್ವರ್ಗದಲಿ ಸಂಭ್ರಮದಿ ||351||

ಭಾಮಿನಿ

ಧರಣಿಪತಿ ಕೇಳಿಂತು ಪಾರ್ಥನು |
ಸುರಪಭವನದಲಯ್ದು ದಿನವಿರೆ |
ಧರೆಗೆ ವತ್ಸರವಾಯಿತಯ್ದವನರಿತು ಮನದೊಳಗೆ ||
ಮರುಗದಿರನಗ್ರಜನು ತಾ ಮ |
ದ್ವಿರಹಕೆನುತಾ ನರನು ಚಿಂತಿಸು |
ತಿರದೆ ಪಿತನಡಿದಾವರೆಗೆ ತಲೆವಾಗುತಿಂತೆಂದ ||352||

ರಾಗ ಶಂಕರಾಭರಣ ತ್ರಿವುಡೆತಾಳ

ಜೀಯ ಲಾಲಿಸು ಬಂದು ಬಹು ದಿನ | ವಾಯಿತಿನ್ನಡವಿಯಲಿ ಚಿಂತಿಪ
ರಾ ಯುಧಿಷ್ಠಿರ ವಾಯುಸುತ ಮಾ | ದ್ರೇಯರೆನ್ನ ||353||

ಕಳುಹು ತನ್ನನು ಧರಣಿಗೆಂದಡಿ | ಗಳಿಗೆ ಮಣಿದಿಹ ಮಗನ ಮನ್ನಿಸಿ |
ನಲವಿನಿಂದಮರೇಂದ್ರನಾ ಮಾ | ತಲಿಯ ಕರೆದು ||354||

ರಥವ ತಾ ತಡವೇತಕೀ ಪುರಮಥನಭಜಕ ಸುಧರ್ಮಸುತನಿಹ |
ಪಥಿವಿಗೊಡಗೊಂಡಯ್ದಿ ಮತ್ತೀಕಥೆಯನೆಲ್ಲ ||355||

ಧರ್ಮಜನಿಗಿದನರುಪಿ ತಡೆದನು | ನಮ್ಮ ದೆಸೆಯಿಂದೀತನೆಂಬೀ |
ಮರ್ಮವನು ನೆರೆ ತಿಳುಪಿ ಬಾರೆನೆ | ಸಮ್ಮುದದಲಿ ||356||

ವಾರ್ಧಕ

ಸುರಸೂತನಾ ಕ್ಷಣಕೆ ಸುರಪತಿಯ ನೇಮದಿಂ |
ಹರಿವೇಗದಿಂದೆಸೆವ ಹರಿಗಳಂ ಮೇಳಯ್ಸಿ |
ಸುರುಚಿರದ ಕನಕಭಾಸುರಮಣಿವರೂಥಮಂ ತರೆ ಕಾಣುತಾ ಪಾರ್ಥನು ||
ಪುರಹೂತನಿಂಗೆರಗಿ ಪುರುಷಾರ್ಥಕನುವಪ್ಪ |
ಪರಿಪರಿಯ ಶುಭವಾದ ಪರಕೆವಡೆದಾ ರಥದ |
ತುರಗತತಿಗಭಿನಮಿಸುತುರುತರಾನಂದದಿಂದಾ ವರೂಥವನೇರ್ದನು ||357||

ದ್ವಿಪದಿ

ನರನಾಥನಾಲಿಸಾ ನರನು ಹರುಷದಲಿ |
ತರಣಿಶತಕೋಟಿಭಾಸುರವರೂಥದಲಿ ||358||

ಸುರರ ಸಾರಥಿಯೊಡನೆ ಗಗನಮಾರ್ಗದಲಿ |
ಬರುತಿರ್ದನಗ್ರಜನ ನೋಳ್ಪ ತವಕದಲಿ ||359||

ಇತ್ತ ಧರ್ಮಜನು ವಿಪ್ರೋತ್ತಮರು ಸಹಿತ |
ಕತ್ತಿವಾಸನ ಪದಾಂಬುಜವ ಧ್ಯಾನಿಸುತ ||360||

ವನದೊಳಗೆ ಚರಿಸುತಿರಲೊಂದು ದಿನ ಮನದಿ |
ಅನುಜ ಪಾರ್ಥನ ನೆನೆದು ವಿಗತ ಸಂತಸದಿ  ||361||

ಭೀಮಸೇನನ ಕರೆದು ಬಿಸುಸುಯ್ವುತಂದು |
ಭೂಮಿಪಾಲಕನೆಂದ ಮನದಲುರೆ ನೊಂದು ||362||

ರಾಗ ನೀಲಾಂಬರಿ ವಿಳಂಬ ಅಷ್ಟತಾಳ

ಸಹಜಾತ ಕೇಳರ್ಜುನನೇತಕೆ | ಬಹು ವಾಸರ ತಡೆದ ಸ್ವರ್ಗದಲಿ ||
ಮಹದುತ್ಸವದಲ್ಲ್ಯಮರೇಂದ್ರನ | ಸಹವಾಸದಿ ಮರೆತನೆಮ್ಮುವನು ||363||

ಸುರಲೋಕದಿ ಸುಖದೊಳಿಹನುಯೆನು | ತರುಹಿದನೆನ್ನೊಡನೆ ಸುದಾಮ ||
ನರನೇತಕೆ ದಿನವಿಷ್ಟು ಸಂದರು | ಬರನಿಲ್ಲಿಗೆ ಏನಯ್ಯ ತಮ್ಮ ||364||

ವನವಾಸದಾಯಸಕೆ ಬೇಸರ್ತನೊ | ತನುವಿನಲೇನೂ ಸುಖವಿಲ್ಲದಿಹನೊ ||
ಅನುಜನ ಕಾಣದೆ ಒಂದರೆ | ದಿನವೆಂಬುದು ಯುಗವಾಯಿತಯ್ಯ ||365||

ಭಾಮಿನಿ

ಧರೆಯನಾಳ್ವುದನುಳಿದು ವಿಪಿನಾಂ |
ತರಕೆ ಸಂದೆವದಲ್ಲದನುಜನ |
ವಿರಹದಲಿ ಬೆಂಡಾದೆನಕಟೆನ್ನಂತೆ ಲೋಕದಲಿ ||
ಪರಮ ದುಃಖಿಗಳಾರೆನುತ ನಪ |
ಮರುಗುತಿರೆ ಕೇಳಿಸಿತು ನಭದಿಂ |
ದಿರದೆ ಮಾತಲಿಯಬ್ಬರಣೆ ಧರ್ಮಜನ ಕಿವಿಗಳಿಗೆ ||366||

ವಾರ್ಧಕ

ತಮ್ಮ ನೋಡಭ್ರದಿಂದತಿ ರವಂ ಕೇಳುತಿದೆ |
ಸುಮ್ಮನಲ್ಲಿದುವೆ ನೋಡುವ ಬಾರೆನುತ್ತಲುರೆ |
ದುಮ್ಮಾನಮಂ ಬಿಟ್ಟು ಮರುತಜಂ ಸಹಿತಲಾ ಧರ್ಮಜಂ ನೋಡುತಿರಲು ||
ಸುಮ್ಮಾನದಿಂ ಸುರರ ಸೂತರ ಪೊಗಳ್ಕೆಯಿಂ |
ಚಮ್ಮಟಿಕೆ ವಿಡಿದ ಮಾತಲಿಯ ಗರ್ಜನೆಗಳಿಂ |
ದಂ ಮಹಿಗೆ ಬಂದನರ್ಜುನನಿಂದ್ರರಥದೊಳಿನ್ನೇನೆಂಬೆನುತ್ಸಹವನು ||367||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳಿತ್ತಲು ಯುಧಿಷ್ಠಿರ | ನರಪತಿಯು ಸೋದರರು ಸಹಿತಲೆ |
ಬೆರಗಿನಿಂದೀಕ್ಷಿಸುತಲಿರಲಾ | ನರನು ಭರದಿ ||368||

ಸುರವರೂಥವನಿಳಿದುಮಾತಲಿ | ವೆರಸಿ ಬಹು ಭಕ್ತಿಯಲಿ ನಡೆತಂ |
ದೆರಗಿದನು ಸಾಷ್ಟಾಂಗದಿಂದ ನಪ | ವರನ ಪದಕೆ ||369||

ಎರಗಿದನುಜನ ಕಂಡು ಸಂತಸ | ಭರದೊಳೋಲಾಡುತ್ತ ನಪ ಮುಂ |
ಬರಿವ ಮೋಹದಲೆತ್ತಿದನು ಕರ | ವೆರಡರಿಂದ ||370||

ತೆಗೆದು ಬಿಗಿದಪ್ಪಿದನು ಕಂಗಳೊ | ಳೊಗೆವ ಬಾಷ್ಪಕಣಾಲಿಯಲಿ ಮೈ |
ದೆಗೆಯಲರಿಯದೆ ಮಗುಳೆ ಮುಗುಳತಿ | ಸೊಗಸಿನಿಂದ ||371||

ಮರುತಸುತನಿಗೆ ಮಣಿದು ಮಾದ್ರೀ | ವರಕುಮಾರರನಪ್ಪಿ ಮುದ್ದಿಪ |
ನರನನೀಸುತವನಿಪತಿಯತಿ | ಕರುಣದಿಂದ ||372||

ಬಂದೆಯಾ ಮತ್ಕೀರ್ತಿವಾರಿಧಿ ಇಂದು ನೀ ಬಾರೆಮ್ಮ ಭಾಗ್ಯದ |
ಕಂಧರವೆ ಬಾರೆನುತ ಮುದ್ದಿಸು | ತಂದದಿಂದ ||373||

ಮಾತಲಿಯ ನಪವರನು ಘನಸಂ | ಪ್ರೀತಿಯಲಿ ಕುಳ್ಳಿರಿಸಿ ತನ್ನನು |
ಜಾತನನು ಬೆಸಗೊಂಡನಾ ಯಮ | ಜಾತನೊಲಿದು ||374||

ರಾಗ ಕಾಂಭೋಜಿ ಝಂಪೆತಾಳ

ಏನಯ್ಯ ತಮ್ಮ ಬಲು ದಿನವಾಯ್ತು ಪೋಗಿ ತಡ |
ವೇನು ಕಾರಣವಾದುದಿನಿತು ||
ನೀನುಸಿರೆನಲ್ಕೆ ತಲೆವಾಗಿ ನರನಗ್ರಜಗೆ |
ಸಾನುರಾಗದಿ ನುಡಿದನಾಗ ||375||

ಜೀಯ ನಿನ್ನಪ್ಪಣೆಯೊಳಾಂ ಪೋಗಿ ತಪವಿರ್ದೆ |
ನಾ ಇಂದ್ರ ಕೀಲವನದೊಳಗೆ ||
ಮಾಯೆಯಲಿ ಬಂದಭವನೆನ್ನೊಳೆಚ್ಚಾಡಿ ಬಲು
ನೋಯಿಸಿದನಿರದೆ ಕಪಟದಲಿ ||376|

ಕಡೆಗೆ ಮೆಚ್ಚಿದು ಕೊಟ್ಟನಸ್ತ್ರವನು ತನಗದರ |
ತೊಡುವ ಬಿಡುವಂದವನು ತಿಳುಪಿ ||
ನಡೆದನಂತರ್ಧಾನಕಿತ್ತಲಮರೇಂದ್ರ ಸುರ |
ರೊಡಗೊಂಡು ಬಂದನಾಯೆಡೆಗೆ ||377||

ಮುಂದಣ ಕಥಾಂತರವ ಮಾತಲಿಯೊಡನೆ ಕೇಳ್ವು |
ದೆಂದು ತಲೆಗುತ್ತಿ ಕೈಮುಗಿದು
ನಿಂದನುಜನಂ ಮನ್ನಿಸುತ ಮಾತಲಿಯ ಮೊಗವ |
ನಂದು ನಪ ನೋಡಲವನುಸಿರ್ದ ||378||

ರಾಗ ಕೇದಾರಗೌಳ ಅಷ್ಟತಾಳ

ಅರಸ ಧರ್ಮಜ ಕೇಳು ಸುರಪನಪ್ಪಣೆಯಿಂದ |
ಕರೆದೊಯ್ದೆನಾ ಪಾರ್ಥನ ||
ಸುರಲೋಕದಲಿ ಬಂದುದೀತಗೂರ್ವಶಿಯೆಂಬ |
ತರುಣಿಯ ಶಾಪವಲ್ಲಿ ||379||

ಅಮರರಿಂಗಸದಳವಾದ ದೈತ್ಯರನೆಲ್ಲ |
ಸಮರದಿ ಸೀಳಿದನು ||
ಸುಮನಸರಿಗೆ ಸ್ವಸ್ಥವಾಯಿತೀತನ ಪರಾ |
ಕ್ರಮಕೆಣೆಗಾಣೆನಯ್ಯ ||380||

ವೀರಾಧಿವೀರನರ್ಜುನನೆಂದು ಡಂಗುರ |
ಸಾರಿದರಮರರಲಿ ||
ಮೂರುಲೋಕದ ಗಂಡನೆನಿಸಿದನಿವನಿಗಿ |
ನ್ನಾರುಂಟು ಸರಿ ಲೋಕದಿ ||381||

ನಮಗಾಗಿ ತಡೆದನೆಂಬೀ ವಿವರವನೆಲ್ಲ |
ಯಮಜನಿಗರುಪಿ ನೀನು ||
ಮಮತೆಯಿಂಪಾರ್ಥನ ಕಳುಪಿ ಬಾರೆನುತೆನ್ನ |
ನಮರೇಂದ್ರ ಬೀಳ್ಗೊಟ್ಟನು ||382||

ಭಾಮಿನಿ

ಎಂದು ಮಾತಲಿ ಸುರಪನೆಂದುದ |
ನಂದವಿಟ್ಟೊರೆದರಸಗೆರಗಿದು |
ಬಂದನಾ ಪಾರ್ಥನನು ಬೀಳ್ಗೊಂಡಮರಪುರವರಕೆ ||
ಮುಂದುವರಿದತಿತೋಷದಲಿ ನಪ |
ನಂದು ನರನನು ಮುದ್ದಿಸುತಲಾ |
ನಂದರಸದಲಿ ಮುಳುಗಿದರು ಭೀಮಾದಿಗಳು ಸಹಿತ ||383||

ವಾರ್ಧಕ

ಅರಸ ಕೇಳರ್ಜುನಂ ಪಾಶುಪತಶರವನುಂ |
ಕರುಣದಿಂ ಪಡೆದನೀಶನೊಳಿನ್ನು ಹರಿಯ ಭ |
ಕ್ತರಿಗಸಾಧ್ಯಮದಾವುದೆಂದು ವೈಶಾಂಪಾಯನುಂ ಪರೀಕ್ಷಿತಜಾತಗೆ ||
ಅರುಹಿದೀ ಕಥನಮಂ ಪೇಳ್ದೆ ನಾನಜಪುರೇ |
ಶ್ವರನ ಕಪೆಯಿಂದಿದಂ ಪೇಳಿ ಕೇಳುವ ಜನರ |
ದುರಿತಮಂ ಪರಿಹರಿಸಿ ಇಷ್ಟಾರ್ಥವರವೀವನಾ ಮಹಾಲಿಂಗೇಶನು ||384||

ಕಂದ

ದ್ವಿಜಕುಲಜಾತಂ ರಾಮಾ |
ತ್ಮಜ ವಿಷ್ಣುವೆನಿಪ್ಪನಜಪುರೇಶನ ಭಜಕಂ |
ಸಜಿಸಿದ ಕಾವ್ಯವನಾಲಿಸಿ |
ಸುಜನರ್ ಮುದವೆತ್ತು ಮೆರೆಸವೇಳ್ಕುಂ ಧರೆಯೊಳ್ ||385||

ಅಜವಿನುತಂ ಸುಜನನುತಂ |
ಭುಜಗಾಭರಣಂ ಸುರೇಶ ವಂದಿತ ಚರಣಂ ||
ಅಜಪುರವಾಸಂ ಈಶಂ |
ಗಜಚರ್ಮಾಂಬರನೆ ಹರನೆ ರಕ್ಷಿಸುಗೆಮ್ಮಂ ||386||

ಮಂಗಲ

ರಾಗ ಸೌರಾಷ್ಟ್ರ ಏಕತಾಳ

ಗಿರಿಜಾಧವನಿಗೆ ಮಂಗಳ | ಚೆಲ್ವ | ಉರಗಾಭರಣಗೆ ಮಂಗಳ  || ಪಲ್ಲವಿ ||

ಆದಿಮಧ್ಯಾಂತರಹಿತನಿಗೆ ಮಂಗಳ |
ವೇದಾಂತವೇದ್ಯಗೆ ಮಂಗಳ ||
ಸಾದು ರಕ್ಷಕಗೆ ಸರ್ವೇಶಗೆ ಮಂಗಳ |
ಮಾಧವಮಿತ್ರಗೆ ಮಂಗಳ || ಗಿರಿಜಾಧವ  ||387||

ಸುರಚಿರರತ್ನವಿಭೂಷಗೆ ಮಂಗಳ |
ಸುರಪತಿವಂದ್ಯಗೆ ಮಂಗಳ
ನರಗೊಲಿದಸ್ತ್ರವನಿತ್ತಗೆ ಮಂಗಳ |
ಪರಮೇಶ್ವರನಿಗೆ ಮಂಗಳ || ಗಿರಿಜಾಧವ ||388||

ಗಜಚರ್ಮಾಂಬರಧರನಿಗೆ ಮಂಗಳ |
ತ್ರಿಜಗತ್ಪಾಲಗೆ ಮಂಗಳ
ಭಜಕರ ಭವಭಯನಾಶಗೆ ಮಂಗಳ |
ಅಜಪುರವಾಸಗೆ ಮಂಗಳ | ಗಿರಿಜಾಧವ ||389||

 

 || ಯಕ್ಷಗಾನ ಇಂದ್ರಕೀಲಕ ಮುಗಿದುದು ||