ರಾಗ ಕಾಂಭೋಜಿ ಝಂಪೆತಾಳ

ಸುರಪತಿಯ ನೇಮದಲಿ ಹರುಷದಿಂ ಮಾತಲಿಯು |
ವರ ವರೂಥವು ಸಹಿತಲಂದು ||
ಧರಣಿಗಯ್ತರುವುದನು ನರನು ಕಂಡೇನಿದ |
ಚ್ಚರಿಯೆಂದು ಬೆರಗಿನಿಂದಿರ್ದು ||197||

ಸುರಪಸೂತನು ರಥವನಿಳಿದು ಪಾರ್ಥನ ಕರೆದು |
ಹರುಷದಿಂದಿಂತೆಂದನವಗೆ ||
ಬೆರಗುವಡಲೇಕಿನಿತು ಧುರವಿಜಯನಾಗಿ ನೀ |
ತೆರಳೆನುತ್ತೆಂದನವನೊಡನೆ ||198||

ನೀನೆ ಕಲಿ ಪಾರ್ಥನೆಂಬತಿಧೀರನಹುದಿನ್ನು |
ಸಾನುರಾಗದೊಳೇರು ರಥವ ||
ಮಾನವರು ಹಲವು ಯಾಗವ ಮಾಡಿದರು ಕಾಣ |
ರೇನೆಂಬೆ ನಿನ್ನ ಪುಣ್ಯವನು ||199||

ಪಾಕಶಾಸನ ನಿನ್ನ ಕರೆದು ತಾರೆಂದೆನ್ನ |
ತಾ ಕಳುಹಿಸಿದನು ನಿನ್ನೆಡೆಗೆ ||
ನಾಕ ಕೈವಶವಾದುದಿನ್ನು ಸರಿಯುಂಟೆ ಮೂ |
ರ್ಲೋಕದೊಳಗೆನಲು ನರ ನುಡಿದ ||200||

ಸುರಸೂತ ಕೇಳು ನಾಕವದೆಲ್ಲಿ ನಾವೆಲ್ಲಿ |
ನರರಿಗದು ಕಣ್ಗೆ ಗೋಚರವೆ ||
ಹರನ ಕರುಣದಿ ಭಾಗ್ಯವಾದೆನೆಂದೆನುತಲಾ |
ನರನೇರ್ದನಾ ಕನಕರಥವ ||201||

ಭಾಮಿನಿ

ಜನಪ ಕೇಳಾ ಇಂದ್ರಕೀಲದ |
ವನಕೆ ಕೈ ಮುಗಿದಲ್ಲಿರುವ ಮುನಿ |
ಜನಕೆರಗಿ ಬೀಳ್ಗೊಂಡು ಪಾರ್ಥನು ಕುಳಿತು ರಥದೊಳಗೆ ||
ಮನದಿ ಹರುಷಿಸಿ ನಡೆಸು ನೀ ಸ್ಯಂ |
ದನವನೆನೆ ಮಾತಲಿಯು ಹಯಗಳ |
ನನುವಿನಿಂ ಚಪ್ಪರಿಸಲಯ್ದಿದನಭ್ರಮಾರ್ಗದಲಿ ||202||

ನರಗೆ ಬ್ರಹ್ಮಾಂಡದ ಮಹಾ ವಿ |
ಸ್ತರವನೆಲ್ಲವ ತೋರುತಾ ಸುರ |
ವರನ ಸಾರಥಿ ಬಂದ ನರಸಹಿತಮರಪುರವರಕೆ ||
ಅರಸ ಕೇಳರ್ಜುನನ ಭಾಗ್ಯಕೆ |
ಸರಿಯದಾವನು ನರರೊಳಗೆ ಶಂ |
ಕರನ ಕರುಣದಿ ಕಂಡನಮರಾವತಿಯ ಸುಲಭದಲಿ ||203||

ಕಂದ

ಫಲುಗುಣನಿಂತಾ ದಿವಿಜರ |
ಪೊಳಲಂ ಕಂಡರ್ತಿಯಿಂದಲಾ ರಥದಿಂ ||
ದಿಳಿದಭವನ ಧ್ಯಾನದೆ ಮಾ |
ತಲಿಯೊಡನಾ ಪುರವನೀಕ್ಷಿಸುತಲಯ್ತಂದಂ  ||204||

ರಾಗ ರೇಗುಪ್ತಿ ತ್ರಿವುಡೆತಾಳ

ಅರಸ ಕೇಳರ್ಜುನನು ದಿವಿಜರ | ಪುರದ ಸಿರಿಯನು ಕಂಡು ಮನದಲಿ |
ಹರುಷಗೊಳ್ಳುತ ಬೆರಗುದಾಳುತ | ಹಿರಿದು ಮೆಚ್ಚುತ ಶಿವ ಶಿವೆನ್ನುತ |
ಬರ ಬರಲು ತನ್ಮಧ್ಯದಲಿ ಸುರ | ವರನ ಭವನ ವಿರಾಜಿಸಿರಲಾ |
ನರನು ಮಾತಲಿವೆರಸಿ ತನ್ಮಂ | ದಿರವ ಪೊಕ್ಕನು ವೇಗದಿಂದಲಿ |
ವೇಗದಿಂದ | ಬಹಳ ವಿ | ನೋದದಿಂದ ||205||

ಸುತನ ಬರವನು ಕಂಡು ಸುಮನಸ | ಪತಿಯು ವೇಗದಿ ಸಿಂಹಪೀಠವ |
ನತಿ ಮುದದಲಿಳಿದಿದಿರು ಬಂದ | ಪ್ಪುತ ಘನ ಸ್ನೇಹದಲಿ ಬಾರ |
ಪ್ರತಿಮಬಲ ಬಾರೆಂದು ನರನನು | ಚಿತವಚನದಿಂ ಕರವಿಡಿದು ತಂ |
ದತುಳ ಮೋಹದಿ ತನ್ನ ಕೆಲದಲಿ | ಶತಮಖನು ಕುಳ್ಳಿರಿಸಿದನು ಬಲು |
ಮೋದದಿಂದ | ಬಹಳ ವಿ | ನೋದದಿಂದ ||206||

ಭಾಮಿನಿ

ಹರಿಹಯನ ಸಿಂಹಾಸನಾರ್ಧದಿ |
ನರನು ಕುಳ್ಳಿರೆ ಕಂಡು ಸುರಕಿ |
ನ್ನರ ಗರುಡ ಗಂಧರ್ವ ಮುಖ್ಯರು ತಮ್ಮತಮ್ಮೊಳಗೆ ||
ನರರು ಶತಯಾಗದಲಿ ಸಾರ್ವರು |
ಸುರಪತಿಯ ಗದ್ದುಗೆಯನಿದು ಹೊಸ |
ಪರಿ ಪರೀಕ್ಷಿಸಬೇಕೆನುತ ನಡೆತಂದರೊಗ್ಗಿನಲಿ ||207||

ವಾರ್ಧಕ

ಅರಸ ಕೇಳೀ ತೆರದೊಳಿಂದ್ರನೋಲಗಕಮರ |
ಗರುಡಗಂಧರ್ವಚಾರಣಸಿದ್ಧ ಸಾಧ್ಯ ಕಿಂ |
ಪುರುಷಗುಹ್ಯಕಯಕ್ಷ ವಸುಕಿನ್ನರಾದ್ಯರುಂ ನೆರೆದುದೊತ್ತೊತ್ತೆಯಾಗಿ ||
ಬರುವವರ್ಗಿಂಬಿಲ್ಲಮಿನ್ನು ಬರಲೀಸದಿರಿ |
ಬರಗೊಡದಿರಲ್ಪ ಪುಣ್ಯರನೆಂದು ಗರ್ಜಿಸುವ |
ಸುರರಿಂದ ಅಮರೇಂದ್ರನಂದಿನೊಡ್ಡೋಲಗದ ಪರಿಯನಿನ್ನೇಂ ಪೊಗಳ್ವೆನು ||208||

ರಾಗ ಭೈರವಿ ಝಂಪೆತಾಳ

ನೆರೆದು ಸುಮನಸರೆಲ್ಲ | ಬೆರಗಾಗಿ ಪಾರ್ಥನನು |
ಪರಿಕಿಸುತಲಿವನಾವ | ದೊರೆಕುಮಾರಕನೊ ||209||

ನುಸಿಗಳಿಳೆಯವದಿರೆಂ | ಬೊಸಗೆ ಸುರಲೋಕದಲಿ |
ಪುಸಿಯಾಯಿತಿಂದಿನಲಿ | ವಸು ಮುಖ್ಯರುಗಳ ||210||

ನಲವಿನಿಂದೀಕ್ಷಿಸಲು | ಚೆಲುವನಿವನಿವನ ಭುಜ |
ಬಲಕೆ ಸರಿ ಭಟರು ಸುರ | ಕುಲದೊಳಿಲ್ಲೆನುತ ||211||

ನೋಡುತ್ತ ಹಿಗ್ಗುತ್ತ | ಹಾಡುತ್ತ ಹರಸುತ್ತ |
ಕೂಡಿದಮರೌಘ ಕೊಂ | ಡಾಡುತಿರಲಂದು ||212||

ಕಂದ

ಇಂತಾ ಸಮಯದಿ ಪಾರ್ಥಂ |
ಚಿಂತೆಯೊಳ್ ಮನಮರುಗುತ ಪಿತನಂ ನೋ ||
ಳ್ಪಂತರ್ಭಾವದಿ ನಾಲ್ದೆಸೆ |
ಯಂ ತಾಂ ತಳುವದೆ ಪರಿಕಿಸೆ ಸುರಪತಿ ನುಡಿದಂ ||213||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಫಲುಗುಣ ತಪಸಿನಿಂದಲಿ | ನೀನು ಬಲು ಬಳಲಿರ್ಪೆ ನುಡಿಯದ |
ಡೇನು ಕಾರಣ ನಮ್ಮೊಳಿಂತನು | ಮಾನವೇಕೆ ||214||

ಎನಲು ಕೈಮುಗಿದೆಂದನೆನ್ನಯ | ಜನಕ ತಾ ಸುರಸಭೆಗೆ ಸಲ್ಲನು |
ಯೆನುತಲಣ್ಣನೊಳೆಂದ ನಾರದ | ಮುನಿಪನಂದು ||215||

ಧರಣಿಪತಿ  ಧರ್ಮಜನು ರಾಜಾ | ಧ್ವರವ ಮಾಡಿದರೆನ್ನ ಬೊಪ್ಪನ |
ಸುರರ ಸಭೆಯಲಿ ಕಾಣೆವಾವೆಡೆ | ವಿರವು ಪಿತಗೆ  ||216||

ಹರನ ದಯದಲಿ ನಿಮ್ಮ ಲೋಕವ | ಪರಿಕಿಸಿದ ನಾನೆನ್ನ ತಂದೆಂು |
ಕರೆಸಿ ತೋರ್ದಡೆ ಕಾಂಬೆ ನಿಮ್ಮಯ | ಕರುಣದಿಂದ ||217||

ಭಾಮಿನಿ

ಎನಲು ಕರೆಸುವೆನೆಂದು ದೂತರ |
ವಿನಯದಿಂ ತಾ ಕಳುಹಿ ಪಾರ್ಥನ |
ಮನದಣಿಯೆ ಪೊಗಳುತ್ತಲಿರಲೀ ಚರರು ನಡೆತಂದು ||
ಜನಪ ಪಾಂಡುವಿಗೆರಗಿ ತಂದರು |
ತನುಜದರುಶನಕೆಂದು ಕಾಣು |
ತ್ತನಿಮಿಷಾಧಿಪನೆನುತಲೆರಗಿದ ನರನು ಪಿತನಡಿಗೆ ||218||

ಅಂದು ಪಾಂಡುನಪಾಲನನು ಸಾ |
ನಂದದಲಿ ಕುಳ್ಳಿರಿಸಿ ಪಾರ್ಥನ |
ನಂದು ಮನ್ನಿಸೆ ಸುರರು ನೋಡಲು ಸಭೆಯ ಸಂಭ್ರಮವ ||
ಮಂದಿಯನು ಹೊರತೆಗೆಸು ಬಾಗಿಲ |
ನೆಂದೆನಲು ಮಿಗೆವಾರನಾರೀ |
ವಂದ ಕವಿದುದು ಮನ್ಮಥನ ಕೂರ್ಗಣೆಗಳೆಂಬಂತೆ ||219||

ರಾಗ ಮಾರವಿ ಏಕತಾಳ

ಲಾಲಿಸು ಭೂವರನಿಂದ್ರನು ಮೆರೆವೊ | ಡ್ಡೋಲಗದೊಗ್ಗಿನಲಿ ||
ಬಾಲೆಯರಯ್ದಿತು ಪರಿಮಳವನು ಸುರ | ಜಾಲಕೆ ಬೀರುತಲೆ ||220||

ಕಂಕಣಗಳ ಝೇಂಕರಿಸುತ ಕಾಂಚೀ | ಕಿಂಕಿಣಿ ರವವೆಸೆಯೆ ||
ಪಂಕಜದಂದದಿ ಮೊಲೆಯಲುಗಲ್ ಅಳಿ | ಝೇಂಕಾರದೊಳುಲಿಯೆ ||221||

ಸುಳಿಗುರುಳಿನ ತಳತಳಸುವ ಕದಪಿನ | ಹೊಳೆಹೊಳೆವಕ್ಷಿಗಳ ||
ಕಲಶಕುಚದ ಕೋಮಲೆಯರ ಬಂದರು | ಬಲವೈರಿಯ ಸಭೆಗೆ ||222||

ವಾರ್ಧಕ

ಅರಸ ಕೇಳ್ ಮೇನಕೆ ತಿಲೋತ್ತಮೆ ಘತಾಚಿ ಸು |
ಸ್ವರೆ ರಂಭೆ ಚೈತ್ರರಥೆ ಚಾರುವಕ್ತ್ರೆ ಸುಕೇಶಿ |
ಸುರಭಿಗಂಧಿನಿ ವರೂಥಿನಿ ಚಿತ್ರಲೇಕೆಯುರ್ವಶಿ ಸುರಸೆ ಮುಖ್ಯರಾದ ||
ಪರಿಪರಿಯ ಪೆಸರುಳ್ಳ ಸುರನಾರನಾರಿಯರ್
ನೆರೆದರಂದಪರಿಮಿತವಾಗಿ ಸುರಸಭೆಯೊಳಂ |
ತರತರದ ಮನ್ಮಥಂ ಬರೆದಿಟ್ಟ ಚಿತ್ತರದ ಬೊಂಬೆಗಳಿದೆಂಬಂತಿರೆ ||223||

ಕಂದ

ಬಾಲೆಯರಿಂತಯ್ದಿರೆ ಸುರ |
ಪಾಲನ ಸಮ್ಮುಖದೊಳಗತಿ ಲೀಲೆಯೊಳಾಗಂ ||
ತಾಳದ ಲಯದೊಳ್ ನಾಟ್ಯವ |
ಬಾಲೆಯರ್ ಮುದದಿಂದಾಡಿದರತಿ ಕುಶಲದೊಳುಂ ||224||

ರಾಗ ನಾಟಿ ಆದಿತಾಳ

ಆಡಿದರಪ್ಸರನಾರಿಯರು |
ಪಾಡಿ ಪೊಗಳಿ ಸುರವರನನು ನಾಟ್ಯವ | ನಾಡಿದರಪ್ಸರನಾರಿಯರು  || ಪಲ್ಲವಿ ||

ದೇವಾಧಿಪ ಸೇವಕಜನಸಂಜೀವ |
ದಾನವ ಸಂಕುಲವನದಾವ | ನೀ ಮಹಾನುಭಾವ ||
ಧೇಂ ಧೇಂ ತಕದಿಂ ಧಿಂತಕ ಝೇಂತಾ |
ಝೇಂತಾ ತಕದಿಂ ನಾನುತ ತಕತತ್ತರಿ ತರಿಕಿಣತೋ ಯೆಂ |
ದಾಡಿದರಪ್ಸರನಾರಿಯರು ||225||

ಬಾಲಾರ್ಯಮಕೋಟಿ ಭಾಸುರ ಗುಣಶೀಲ |
ನಿತ್ಯಸಜ್ಜನಪಾಲ | ನವ್ಯತರ ಸುಚೇಲ ||
ತಕ್ಕುತ ತಕ್ಕುತ ಝೇಂತಕ್ಕುತ ಝೇಂತಕ ದಧಿಗಿಣತೋಯೆಂ |
ದಾಡಿದರಪ್ಸರನಾರಿಯರು ||226||

ಭಾಮಿನಿ

ಸುರಸತಿಯರೀ ಪರಿಯ ನರ್ತಿಸು |
ತಿರಲು ಕಾಣುತಲದರೊಳುರ್ವಶಿ |
ತರುಣಿಯೊಬ್ಬಳೆ ಹೊರತು ಬಳಿಕುಳಿದವರು ಈ ತೆರದಿ ||
ಭರತಶಾಸ್ತ್ರದಿ ನಲಿದು ನರ್ತಿಸು |
ವರನು ಕಾಣೆನೆನುತ್ತಲರ್ಜುನ |
ಬೆರಗುವಟ್ಟಿರೆ ಹರಿದುದೋಲಗವಿಂದ್ರನಾಜ್ಞೆಯಲಿ ||227||

ದ್ವಿಪದಿ

ಸುರಪನಾ ಸತಿಯರಿಗೆ ವೀಳ್ಯವನು ಕೊಡಿಸಿ |
ಸುರರನೆಲ್ಲರನಯ್ದೆ ಘನಹರುಷ ಪಡಿಸಿ ||228||

ಮನೆಗಳಿಂಗೆಲ್ಲರನು ಕಳುಹಿ ಬೇಗದಲಿ |
ತನುಜ ಸಹಿತಾರೋಗಿಸಿದನು ಹರುಷದಲಿ ||229||

ನರನ ಕಳುಹಿಸಿ ಬೇರೆ ಮನೆಗೆ ಪವಡಿಸಲು |
ಸುರಪಾಲ ಕರೆದೆಂದ ಚಿತ್ರಸೇನನೊಳು ||230||

ಸುತನ ಮನಸೂರ್ವಶಿಯ ಮೇಲೆ ನಟ್ಟಹುದು |
ಸತಿಯವಳ ನೀನಾತನಲ್ಲಿಗಟ್ಟುವದು ||231||

ಇನಿತು ಸತಿಯರೊಳವಳನಕ್ಷಿಯಲಿ ಮುದದಿ |
ಮನವಿಟ್ಟು ನೋಡಿದನು  ಕಳುಹು ನೀ ಜವದಿ ||232||

ಎನಲು ಕೇಳುತ ಚಿತ್ರಸೇನ ಜೀಯೆನುತ |
ವನಿತೆಯೂರ್ವಶಿಯ ಮನೆಗಯ್ತಂದ ನಗುತ ||233||

ಕಂದ

ನಡೆತರುತ ಚಿತ್ರಸೇನಂ |
ನುಡಿಸಲು ಸಖಿಯೊರ್ವಳಯ್ದಿಯಾತನ ಬರವಂ ||
ಒಡತಿಗೆ ಸೂಚಿಸಿ ಕರೆಸು |
ತ್ತುಡುಗರೆಯೀಯುತೆಂದಳು ಊರ್ವಶಿ ಮುದದಿಂ ||234||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಬಂದೈ ಚಿತ್ರಸೇನ ನಿ | ಧಾನಮಾಗಿಯೆ ಪೇಳು ಸುರಪತಿ |
ತಾನೆ ಕಳುಹಿಸಿದನೊ ಸ್ವಕಾರ್ಯವೊ | ಮಾನನಿಧಿಯೆ ||235||

ಎನಲು ನಗುತೆಂದನು ಸುರೇಶ್ವರ | ತನುಜನಲ್ಲಿಗೆ ನಿನ್ನ ಕಳುಹಲು |
ತನಗೆ ನೇಮವಕೊಟ್ಟು ಬೀಳ್ಗೊ | ಟ್ಟನು ಮಗಾಕ್ಷಿ ||236||

ನಂದನನು ತನಗರ್ಜುನನು ನೀ | ನಿಂದು ಸೊಸೆಯಾಗಲಿಯೆನುತ್ತ ಪು |
ರಂದರನು ಕೇಳೆನ್ನನಟ್ಟಿದ | ಮಂದಗಮನೆ ||237||

ಇಂತೆನಲು ಕೇಳ್ದೂರ್ವಶಿಯು ಘನ | ಸಂತಸವ ಪಡತುಬ್ಬಿ ಮನದೊಳು |
ಕಾಂತೆಯರ ಕರೆಸಿದಳು ಸದ್ಗುಣ | ವಂತೆಯರನು ||238||

ಭಾಮಿನಿ

ಕೇಳು ಧರಣಿಪ ಚಿತ್ರಸೇನನ |
ಬೀಳುಗೊಂಡು ಸಹಸ್ರಸಂಖ್ಯೆಯ
ಕೇಳ ಮೇಳದ ಸಖಿಯರಿಂದಾನಂದಜಲಧಿಯಲಿ ||
ಬಾಲೆ ಮುಳುಗುತ ನರನ ನೋಳ್ಪಾ |
ಲೀಲೆಯಲಿ ತಾನಾಗ ಮಣಿಗಣ |
ಜಾಲಭೂಷಿತೆಯಾಗಿ ಪೊರಟಳು ದಿವ್ಯ ಕಾಂತಿಯಲಿ ||239||

ರಾಗ ಪುನ್ನಾಗ ಅಷ್ಟತಾಳ

ಬಂದಳೇನೆಂಬೆ ಬಾಲೆಯ ಬರವ ಸಾ |
ನಂದದಿಂ ಸ್ತ್ರೀ ವಂದ ಸಹಿತ |
ಮಂದಗಾಮಿನಿ ಚಂದದಿ || ಬಂದಳೇನೆಂಬೆ  || ಪಲ್ಲವಿ ||

ಮಡದಿರನ್ನೆಯ ಸುತ್ತ ಮುತ್ತಲು ಚೆಲ್ವ |
ಹಡಪ ಕನ್ನಡಿ ವ್ಯಜನ ಚಾಮರ |
ಕಡುಗಿ ಮುನಿಮಗ ವಿಡಿಯೆ ಕಳುಹಿದ |
ಪಡೆಯೆನಲು ನಡೆತಂದಳು || ಬಂದ ||240||

ವಾರ್ಧಕ

ಒರೆಯಲಳವಲ್ಲವಳ ಹಾವಮಂ ಭಾವಮಂ |
ನೆರೆದು ಬಹ ತರುಣಿಯ ಹಂತಿಯಿಂ ಕಾಂತಿಯಿಂ |
ಮರೆದು ರಂಜಿಪ ಕೊಂಕುಗುರುಗಳಿಂದ ಬೆರಳಿಂದಲೆಸೆವ ಮುದ್ರಿಕೆಗಳಿಂದ ||
ಪರಿಪರಿಯ ಸೌಂದರ್ಯವತಿಯರಂ ಸತಿಯರಂ
ಕರೆಕರೆದು ಗಾನಮಂ ಪಾಡಿಸುತ ಲಾಲಿಸುತ |
ನರನನೊಡಗೂಡುವ ವಿಲಾಸದಿಂತೋಷದಿಂ ಬರುತಿರ್ದಳೇನ್ ಪೊಗಳ್ವೆನು ||241||

ಅರಸ ಕೇಳಿಂತು ಸತಿಯರ ನಡುವೆ ಗಗನದೊಳ್ |
ಮೆರೆವ ನಕ್ಷತ್ರ ಮಧ್ಯದ ಚಂದ್ರನಂತೆ ಭಾ
ಸುರತೆ ಮಿಗಲಂದಣವನೇರಿ ಪರಿಮಳಗಳಂ ದೆಸೆದೆಸೆಗೆ ಪಸರಿಸುತ್ತ ||
ಹರುಷದಿಂ ಬರುವ ಸತಿಯರ ಕಾಣುತೆಲ್ಲರುಂ |
ನರನ ಪುಣ್ಯೋದಯಕೆ ಸರಿಗಾಣೆನೆಂದಾಡು |
ತಿರೆ ಪಾರ್ಥನಿರ್ಪ ಮಂದಿರಕೆ ಬಂದಂದಣವನಿಳಿದಳೂರ್ವಶಿಯು ಮುದದಿಂ ||242||

ರಾಗ ಕೇದಾರಗೌಳ ಅಷ್ಟತಾಳ

ಚೆಲುವೆಯರರಸಿ ಈ ಪರಿಯಿಂದಲಂದಣ | ವಿಳಿದು ಕಾಂತೆಯರನೆಲ್ಲ
ನಿಲಿಸಿ ಬಾಗಿಲೊಳು ತಾನೊಬ್ಬಳೆವೊಳಪೊಕ್ಕ | ಳೊಲುಮೆಗಾರ್ತಿಯರೊಡನೆ ||243||

ನರ ಮಲಗಿರುವಲ್ಲಿಗಯ್ದಿ ಕರವನೊರ್ವ | ತರುಣಿಯ ಪೆಗಲೊಳಿಟ್ಟು ||
ಸ್ಮರನ ಪೂಶರಕೆ ಮೆಯ್ಗಟ್ಟು ತಾ ನಿಂದಳು | ಪರಿಕಿಸುತಾತನನು ||244||

ಮದನಾರಿಯೊಳು ಸೆಣಸಿದ ಧೀರ ಸ್ಮರನಿಗೆ | ಬೆದರಿ ಹಿಮ್ಮೆಟ್ಟುವನೆ ||
ಬದಲೊಂದನರಿಯದೆ ಸುಖನಿದ್ರೆಯಿಂದಿರ್ದ | ಪದುಮನಾಭನ ಸಖನು ||245||

ಭಾಮಿನಿ

ಏನ ಹೇಳುವೆನರಸ ಮತ್ತಾ |
ಮಾನಿನಿಯ ತನುಗಂಧ ಪಸರಿಸಿ |
ತಾ ನರನ ಸನ್ಮುಖಕೆ ತಿಳಿದುದು ನಿದ್ರೆ ನಿಮಿಷದಲಿ ||
ಮಾನನಿಧಿ ಪರಿಮಳವಿದೆತ್ತಣ |
ದೇನಿದೇನಚ್ಚರಿಯೆನುತಲವ |
ಳಾನನವನೀಕ್ಷಿಸುತಲಿಳಿದನು ಮಂಚದಿಂದಿಳೆಗೆ ||246||

ರಾಗ ಕಾಂಭೋಜಿ ಝಂಪೆತಾಳ

ಶಿವ ಶಿವನೆ ತರುಣಿ ವಾಸವಸಭೆಯ ಸೂರೆಗೊಂ |
ಡವಳಿವಳು ಇಂದ್ರಗನುಕೂಲೆ ||
ಇವಳಿಗೆರಗಲು ಬಹುದೆನುತ್ತಲತಿ ಭಕ್ತಿಯೊಳ |
ಗವನೆಂದನಾ ತರುಣಿಯೊಡನೆ ||247||

ಏನು ತೆರಳಿದಿರವ್ವ ಕುಳ್ಳಿರಿ ಸುರೇಶ್ವರನ |
ಮಾನಿನಿಯರಯ್ಸೆ ನಿಮ್ಮಡಿಗೆ ||
ತಾನೆರಗಬಹುದು ಕಾರ್ಯವ ಬೆಸಸಿರೆನೆ ಕೇಳ್ದು |
ಮಾನಸದಿ ಬೆರಗಾದಳಂದು ||248||

ಆಶ್ಚರ್ಯ ತಾಳಿದಳು ಲಜ್ಜೆಯಿಂ ಬಾಗಿದಳು |
ಮೆಚ್ಚಿದಳು ನರನ ನಡವಳಿಗೆ ||
ಹೆಚ್ಚಿದಳು ಮನ್ಮಥನ ಶರಕೆ ಮಗುಳುತ್ತರವ |
ನುಚ್ಚರಿಸೆ ಪ್ರತಿಗಾಣದಬಲೆ ||249||

ಯಾಕೆ ನುಡಿದನೊ ಚಿತ್ರಸೇನನೆಂಬಾ ಪಾಪಿ |
ಕಾಕು ಮಾಡಿದ ತನ್ನನಕಟ ||
ತಾ ಕೆಟ್ಟೆನೆನುತಲಾ ಕ್ಷಣಕೆ ಮಗುಳುತ್ತರವ |
ನಾ ಕಮಲಮುಖಿ ನುಡಿದಳಿಂತು ||250||

ಎಲೆಲೆ ನರ ನೀನೇಕೆ ಭ್ರಮೆಗೊಂಡೆ ಸುರಪಾಲ |
ಕಳುಹಿಸಿದರಿಂ ಬಂದೆನೀಗ ||
ಉಳಿಯಗೊಡ ಮನ್ಮಥನು ಮಮ ಮನೋಭೀಷ್ಟವನು |
ಸಲಿಸು ಸಂಶಯವೇಕೆ ನಿನಗೆ ||251||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರ ಹರೀ ಮಾತೇತಕೆಂಬಿರಿ | ಧೊರೆ ಪುರೂರವನರಸಿ ಪೂರ್ವದಿ |
ತರುಣಿ ನೀ ಪೂರಾಯರಾಯನಿ | ಗಿರದೆ ನಹುಷ ||252||

ತನುಜನಾದನು ತತ್ಕುಲದಿ ನಾ | ಜನಿಸಿ ಪಾತಕಕೆಳಸುವೆನೆ ನೀ |
ಜನನಿ ನಮ್ಮನ್ವಯಕೆ ಸಿದ್ಧವಿ | ದೆನುತ ಮಣಿದ ||253||

ಮರುಳೆ ಫಲುಗುಣ ಕೇಳು ಧರ್ಮವು | ಮೆರೆವುದೇ ಗಣಿಕೆಯರ ಮನೆಯಲಿ |
ತರುಣನಾಗಲಿ ತಂದೆಯಾಗಲಿ | ಧುರದಿ ಮಡಿದ ||254||

ಧುರಪರಾಕ್ರಮಿಗಳನು ಕ್ರತುಗಳ | ವಿರಚಿಸಿದ ಮಹಾತ್ಮರನು ನಾ |
ನೆರೆವೆಯೊಬ್ಬಳೆ ಕಾಂಬೆ ತಾನೀ | ತೆರದೊಳೆನಲು ||255||

ತರುಣಿಮನವನು ಸಲಿಸದವ ತಾ | ಸುರಪನಾಗಲಿ ಚಂದ್ರನಾಗಲಿ |
ಕರಿಕಣಾ ಫಡ ಮನುಜ ನೀನೆಂ | ತರಿವೆಯದನು ||256||