ರಾಗ ನಾದನಾಮಕ್ರಿಯೆ ಅಷ್ಟತಾಳ

ರಾವಣಾತ್ಮಜ ಭಾರಿ ಬಲನಯ್ಯ | ನೀ ಬಿ |
ಟ್ಟೀ ವಿಶಿಖದೊಳೇನು ಫಲವಯ್ಯ ||
ಜೀವಗಳ್ಳರ ಗಂಡ ನೋಡೆಂದೂ | ಬಲು |
ಠೀವಿಯೊಳದ ಖಂಡಿಸಿದನಂದೂ ||83||

ಅಲ್ಪ ಪೌರುಷನೆಂದು ಬಗೆದೆಯಾ | ಮತಿ |
ತಪ್ಪಿ ದೂಷಣೆಯನ್ನು ತೆಗೆದೆಯಾ ||
ಮುಪ್ಪುರಾಂತಕನಿತ್ತ ಶಕ್ತಿಯಾ | ತೆಗೆ |
ದಪ್ಪಳಿಸುವೆ ತೋರು ಯುಕ್ತಿಯಾ ||84||

ಹರಶರವಾದಡೇನನ್ಯರಾ | ಸತಿ |
ಯರ ತಂದವ ರೊಳಿರಲಾ ಶರಾ ||
ಬರಿ ಹುಲುಕಡ್ಡಿಸಮಾನವಾ | ಗಿಹು |
ದರಿತು ಕೊಳ್ಳೆನುತೆಚ್ಚ ಬಾಣವಾ ||85||

ಭಾಮಿನಿ

ಮಾಯವಾದುದು ನೋಡೆಲಾ ನಾ |
ರಾಯಣಾಸ್ತ್ರದೊಳೊಕ್ಕುವರ ದೈ |
ತ್ಯೇಯನೆಚ್ಚ ಭವಾಸ್ತ್ರವದರುಗ್ಗಡ ಪ್ರತಾಪದೊಳು ||
ಭೀಯ ಪೌರುಷನಾಗಿ ಖಳ ಮೂ |
ರ್ಛಾಯಗತನಾಗುತ್ತ ಶುಕ್ರನ |
ಪ್ರೀಯ ಮಂತ್ರದೊಳೆದ್ದು ಪುನರಪಿ ಸಮರಕನುವಾದಾ ||86||

ರಾಗ ಶಂಕರಾಭರಣ ಮಟ್ಟೆತಾಳ

ಮಲ್ಲ ದೈತ್ಯರೆಮ್ಮ ರಣದಿ | ಗೆಲ್ವುಪಾಯವೂ |
ಹುಲ್ಲು ಮನುಜರರಿತ ರೆಂಬು | ದೊಳ್ಳೆ ಚೋದ್ಯವೂ |
ಮೆಲ್ಲನೆಮ್ಮ ಕಿರಿಯ ತಾತ | ನೆಲ್ಲ ಕಲಿಸಿದಾ |
ಅಲ್ಲದಿರೆ ಮನುಷ್ಯನೀತ | ನೆಲ್ಲಿ ಪಠಿಸಿದಾ ||87||

ಇನ್ನಿದಕ್ಕೆ ತಕ್ಕುಪಾಯ | ವನ್ನು ನೋಡದೇ |
ಖಿನ್ನನಾದಡುಳಿವ ಕಾಣೆ | ಭಿನ್ನ ಮಾಡದೇ |
ಸಣ್ಣ ಪಿತನ ಕ್ಷೇಮ ವದಗ | ದೆನ್ನುತಾ ಕ್ಷಣಾ |
ಮುನ್ನ ಬೊಮ್ಮನಿತ್ತ ಶಕ್ತಿ | ಯನ್ನುಗಿದ ಘನಾ ||88||

ಕುಲಕುಠಾರ ಕರೆಸಿಕೊಳ್ಳು | ತಲೆಯ ಕಾವನಾ |
ನೆಲನ ಋಣವು ತೀರಿತಿದಕ್ಕೋ | ಜಲಜಕುವರನಾ |
ಜ್ವಲಿತ ಶಕ್ತಿಯನ್ನು ಬಿಟ್ಟು | ಕೊಲುವೆ ನಿನ್ನನೂ |
ಉಳಿಯಗೊಡೆನು ಬೊಪ್ಪನೆಂಬ | ತಿಳಿವ ಮರೆತೆನೂ ||89||

ವಾರ್ಧಕ

ಎಂದು ದಿವ್ಯಾಸ್ತ್ರದಿಂದಿಡಲಾ ವಿಭಿಷಣಂ |
ಸಿಂಧೂರವರದನಂ ಧ್ಯಾನಿಸುತ್ತಿರಲು ಕಪಿ |
ಸಂದೋಹ ಕಳವಳಿಸಲಾ ಶಕ್ತಿ ಶರಣನ ಸಮೀಪಕಾರ್ಭಟಿಸಿ ಬರಲು |
ಅಂದಾಂಜನೇಯ ನಡೆಹಾಯ್ದ ಮಹಾಸ್ತ್ರಮಂ |
ಸಂದಾಗೆ ಮುರಿದು ಸಾಗರಕೆ ಬಿಸುಡಲ್ ಕಂಡು |
ನೊಂದಾ ಖಳಂ ಬಳಿಕ ಭೂದೇವಿ ದತ್ತಶಕ್ತಿಯ ತೆಗೆವುತಿಂತೆಂದನು ||90||

ರಾಗ ಕೇದಾರಗೌಳ ಅಷ್ಟತಾಳ

ನಳಿನಾಕ್ಷ ಕರುಣದಿ | ಸಲಹಿದಡವಗಾರು |
ಮುಳಿದೇನ ಮಾಡುವರೂ ||
ಉಳಿದನಿಂದಿಗೆ ನಮ್ಮ | ಕುಲಗೇಡಿಯನು ಹಿಂದೆ |
ತೊಲಗಿಸಿ ದೂಡಿದರೂ ||91||

ಆದಿನಾರಾಯಣ | ನಾದಕಾರಣ ರಾಮ |
ನೀ ದುಷ್ಟ ವಾನರರೂ ||
ಕಾದಿ ಗೆಲ್ಲುವರಲ್ಲ | ದಾದರೆ ಬಲುಹೇನು |
ಚೋದಿಗ ಕಪಿವರರೂ ||92||

ಸುಡಲೆಂದು ಕೋಪದೊ | ಳಡಿಗಡಿಗುರಿದೇಳು |
ತೊಡನೆ ಸೌಮಿತ್ರಿಯೊಳೂ ||
ಎಡಗಯ್ಯ ಶಕ್ತಿಯ | ಮಿಡುಕಿಸುತೆಂದನು |
ಗ್ಗಡದ ಗಾಂಭೀರ್ಯದೊಳು ||93||

ರಾಗ ಭೈರವಿ ಅಷ್ಟತಾಳ

ತರಳ ಕೇಳಾಹಾರವೂ | ನಿದ್ರೆಯು ಸತಿ |
ಯರೊಳು ಸಂಭೋಗವಿವೂ ||
ಸರಿಯಾಗಿ ಬಿಡದೆ ಹನ್ನೆರಡಬ್ದ ತ್ಯಜಿಸಿದ |
ನಿರುಗೆಯಿದ್ದರೆ ನಿಲ್ಲೆಲಾ ||94||

ಮಾತಿನೊಳೇನಹುದೂ | ನಿನ್ನಯ ಬಾಣ |
ಜಾತವ ಕಳುಹುವುದೂ ||
ಧಾತುಗೆಟ್ಟರೆ ನಿನ್ನ | ತಾತನ ಕರೆಸಿಕೊ |
ಳ್ಳೇತಕಿದೆನುತೆಚ್ಚನೂ ||95||

ಚಿಕ್ಕವಗಾವುತವೂ | ಸಾಧಿಸುವರೆ |
ತಕ್ಕುದಲ್ಲವು ಮಾರ್ಗವೂ ||
ಮಿಕ್ಕುಳಿದರಿಗದು | ದಕ್ಕದೆನುತ ನಿನ್ನೊ |
ಳಕ್ಕರ ತಾಳಿದೆನೂ ||96||

ಎಲವೊ ಶಕ್ರಾರಿ ಕೇಳೂ | ದಿವ್ಯಾಸ್ತ್ರವ |
ಕಳುಹಿಸು ಬೇಗದೊಳೂ ||
ಬಲು ವ್ರತವಿರಲಿಲ್ಲ | ದುಳಿಯಲಿ ಮಮತೆಯ |
ಛಲಬೇಡ ನಿನಗೆಂದನೂ ||97||

ಆದರೆ ಕೊಳ್ಳೆನುತಾ | ತೊಟ್ಟನು ಮಹಾ |
ಭೂದೇವಿಶರವನಾತಾ ||
ಹಾದು ಬರಲುಕಂಡು | ಭೇದಿಸಿ ಕೆಡಹಿದ |
ಮೇದಿನಿಯೊಳಗದನೂ ||98||

ಬಳಿಕ ರಾಘವನಂಘ್ರಿಯಾ | ಧ್ಯಾನಿಸುತೆಚ್ಚ |
ಘಳಿಲನೆ ರಾವಣಿಯ ||
ನಳಿನಭವಾಸ್ತ್ರದಿ | ತಲೆಯನು ಕಡಿದು ಬಾಂ |
ದಳದೊಳು ಕಾಣಿಸಿತೂ ||99||

ಕಂದ

ಅಮರರು ಮಂದಾರದ ಬಿರಿ |
ಸುಮವರ್ಷವನತಿ ಹರುಷಧಿ ಸೂಸಲ್ ಬೇಗಂ ||
ಗಮಸಿದು ರಾಘವನಂಘ್ರಿಗೆ |
ನಮಿಸುತ ರಣವತ್ತಾಂತವನರುಹಿದರಾಗಂ ||100||

ಭಾಮಿನಿ

ಮೂರಲೋಕದ ಮತ್ಯುಯಮನಲಿ |
ಸೇರಿದನು ಖಳನೆಂದು ರಘುಪತಿ |
ಭೂರಿ ಹರುಷದಿ ಲಕ್ಷ್ಮಣನ ತೆಕ್ಕೈಸಿ ಮುದ್ದಾಡೀ ||
ಚಾರುತರ ವಿನಯೋಕ್ತಿಯಿಂದುಪ |
ಚಾರ ಮನ್ನಣೆಗಳಲಿ ನಿಜಪರಿ |
ವಾರವನು ಸಂತಯಿಸಿ ಬಳಲಿದ ಸಹಜನನು ಕರೆದೂ ||101||

ರಾಗ ಭೈರವಿ ಝಂಪೆತಾಳ

ಕಿತ್ತು ಘಾಯದಕಣೆಯ ಮೈಯರಕ್ತವ ತೊಳೆದು |
ಯಿತ್ತಕವಳೌಷಧಿಯ | ಮಂತ್ರಿಸುತ ರಾಮಾ ||102||

ನಿತ್ತುಕೊಂಡಿರಬೇಡಿ | ಹನುಮ ನೀಲಾಂಗದರೆ |
ನುತ್ತಲುಪಚರಿಸಿದನು | ಮರ್ಕಟಾಧಿಪರಾ ||103||

ಸಾಧ್ಯವಾಯಿತು ನಮಗೆ | ಸೇರಿದಳು ಜಯಲಕ್ಷ್ಮಿ |
ಗೆದ್ದ ಭರತನ ತಮ್ಮ | ನಿದ್ದ ಕಡೆಯಿಂದಾ ||104||

ಬದ್ಧವಾಯಿತು ಲಂಕೆ | ಬಳಲಿರುವ ಶರಣಂಗೆ |
ಬಿದ್ದ ರಾವಣ ರಣದೊ | ಳೆಂದು ನಿಶ್ಚಯಿಸೀ ||105||

ಕಂದಕೇಳೀ ಶರಣ | ನೆಂದ ಸಾಧನವು ಮೂ |
ರೆಂದು ದೊರಕಿತು ನಿನಗೆ | ಹನ್ನೆರಡು ವರುಷಾ ||106||

ಇಂದು ಪರಿಯಂತ ಫಲ | ತಂದೀವೆ ದೇವರಿಗೆ |
ತಿಂದವನು ನಾನಲ್ಲ | ಜಠರಾಗ್ನಿಗಾಗೀ ||107||

ದೇಶಾಂತರವ ತಿರುಗಿ | ಕಾನನಾಂತರದೊಳಗೆ |
ಘಾಸಿ ಯಾದುದು ನಿದ್ರೆ | ಯೆಂತು ನಿನಗೆಂದಾ ||108||

ಹಾಸಿ ಮಲಗುವುದುಂಟೆ | ಶಸ್ತ್ರಾಸ್ತ್ರವನು ಪಿಡಿದು |
ದಾಸತ್ವ ಸಲಹಿದೆನು | ದೂಷಕರ ಭಯದೀ ||109||

ತರುಣಿಯರ ಭೋಗವನು | ತೊರೆದು ನೀನೀತನಕ |
ಯಿರುತಿದ್ದ ಕಾರಣವ | ನರುಹೆನಗೆ ತಮ್ಮಾ ||110||

ಊರ್ಮಿಳಾಂಗನೆ ಮದುವೆ | ಮಾದಾರಭ್ಯದಿ ತಾಯ |
ಮರ್ಮದಲಿ ಚರಿಸಿದೆನು | ವನವಾಸದೆಡೆಯಾ ||111||

ಅರಿಯದಾದೆನು ಹಸಿವೆ | ಗಾಹಾರವನುಗೊಳದೆ |
ತರುವೆ ಹಂಪಲವನೆ | ನ್ನಾಜ್ಞೆ ಹೊರತೆಂದೂ ||112||

ಕರುಣಹೀನನ ಸೇರಿ | ಕಷ್ಟವೊದಗಿತು ನಿನಗೆ |
ತರಳ ನಿನ್ನುಪಕಾರ | ಮರೆಯಲಿನ್ನುಂಟೇ ||113||

ಕರ್ಮವಶದಿಂದಲೀ | ವ್ರತ ಸಾಧ್ಯವಲ್ಲದಿರೆ |
ವ್ಯೋಮಕೇಶನ ಭಕ್ತ | ಸೋಲುವನೆ ರಣದೀ ||114||

ಅನುಜನಾಡಿದ ನುಡಿಗೆ | ಮೆಚ್ಚಿ ರಾಘವ ತಾನು |
ಅನಿಮಿಷರು ಪೊಗಳಲ್ಕೆ ಪೊಕ್ಕ ಬೀಡಿಗೆಯಾ ||115||

ಭಾಮಿನಿ

ಇಳುಹಿದನು ದಶಕಂಠನೋಲಗ |
ದೊಳಗೆ ಸಾರಥಿ ಶಕ್ರಜಿತುವಿನ |
ತಲೆಯ ಮೊಸಗೆಯ ಹರೆಯ ಹೊಯ್ ಸೀಳಿಂದಿನಾಹವವಾ ||
ಗೆಲುವಿದೆಂಬೀ ಕೂರಿತಹ ನುಡಿ |
ಯಲಗು ನಾಂಟಿತು ಬೆನ್ನಿನಲಿ ಕಳ |
ವಳಿಸಿ ಹಾ ಯುವರಾಜ ಹಾಯೆನುತೊರಗಿದನು ನೆಲಕೇ ||116||

ರಾಗ ನೀಲಾಂಬರಿ ಆದಿತಾಳ

ಕಂದಾ ನೀ ನಮ್ಮಾನ್ವಯಾಬ್ಧಿ | ಚಂದ್ರನೆತ್ತ ಪೋದೆ |
ಇಂದ್ರಾರಿಯೆಂದೆಂಬ ಪೆಸರ | ನಿಂದಿನೊಳಡಗಿಸಿತೇ ||117||

ಮಗನೆ ನಿನ್ನ ಗೆಲುವ ವೀರ | ಜಗದೊಳಿಲ್ಲವೈಸೆ |
ಮಗಧರನಿತ್ತಾಯುಷ್ಯವು | ನಗೆಗೀಡಾದುದಯ್ಯ ||118||

ಈರೇಳು ಲೋಕವೆನ್ನ ಕೈ | ಸೇರಿತು ನಿನ್ನಿಂದಾ |
ಯಾರುಂಟು ನಿನ್ನಂತಾ ಸುಕು | ಮಾರರು ಧಾತ್ರಿಯಲೀ ||119||

ದ್ವಿಪದಿ

ಕಾಂತೆ ಬಂದಳು ಕೇಳಿ ದಶಶಿರನ ಪೊರೆಗೇ |
ಸಾಂತ್ವದಲಿ ಕಡುನೊಂದು ಸೊಸೆಯರತಿ ಮರುಗೇ ||120||

ಮಗನ ಶಿರ ಮಂಡೋದರಿಯ ತೊಡೆಯೊಳಿಟ್ಟೂ |
ಮೊಗವ ನೋಡುತ್ತ ಮೋಹದಿ ಮುತ್ತಕೊಟ್ಟೂ ||121||

ಮತ್ಯುವಾದಳು ಮಗನೆ ಕುಲಕೆ ನಿನ್ನತ್ತೇ |
ಕರ್ತವಿಲ್ಲದೆ ರಾಜ್ಯ ಪರರಾಳುವಂತೇ ||122||

ಬಗೆಬಗೆಯ ಶೋಕದಲಿ ಮುಳುಗಿ ಬಸವಳಿದು |
ಮಗುಳೆ ಕಾಂತನ ಪಚಾರಿಸುತ ಕಡು ಮುಳಿದು ||123||

ಹೆತ್ತೊಡಲು ಹಾಳಾದುದರಸ ನಿನ್ನಿಂದೆ |
ಪುತ್ರಶೋಕಾಗ್ನಿಗೆ ವಿವೇಕ ಪೇಳ್ಮುಂದೇ ||124||

ಎಂದು ನಾನಾ ತೆರದೊಳಳುವದನು ಕಂಡೂ |
ನಂದಿವಾಹನನಂತೆ ದನುಜ ಖತಿಗೊಂಡೂ ||125||

ಭಾಮಿನಿ

ಸುರಪಜಿತುವಿನ ಮರಣ ಮಂಡೋ |
ದರಿಯ ದೈನ್ಯುಪಚರಣೆಗಾ ಖಳ |
ಧರಣಿಜೆಯ ಕೊಲಲೆಂದು ಖಡ್ಗವಗೊಂಡು ಹೊರವಂಟಾ ||
ಸುರರು ಬಾಬಿಡಲಾ ಪ್ರಧಾನರು |
ಕರದ ಕತ್ತಿಯನಿಳುಹಿ ನಾನಾ |
ಪರಿವಿವೇಕದೊಳೊಡಬಡಿಸಿ ಮರಳಿಚಿದರರಮನೆಗೇ ||126||

ವಾರ್ಧಕ

ತರಳರಿರ ಕೇಳಿರಳಿದುಳಿದ  ಬಲಸಹಿತ ದಶ |
ಶಿರ ಬಂದು ಶ್ರೀರಾಮಗಿದಿರಾಗಲವನ ಸಂ |
ಹರಿಸಿ ಲಂಕಾಧಿಪತ್ಯವ ವಿಭೀಷಣಗಿತ್ತು ಜಾನಕಿಯನಗ್ನಿಮುಖದೀ ||127||

ಪರಿಶೋಧಿಸುತ ವರಿಸಿ ಪುಷ್ಪಕ ವಿಮಾನದೊಳ್ |
ತೆರಳಿ ನಂದಿಗ್ರಾಮದೊಳು ಭರತನಂ ಕಂಡು |
ಧರೆಯಾಧಿಕಾರಮಂ ಕೈಗೊಂಡು ಪ್ರಜೆಗಳಂ ಪರಿಪಾಲಿಸುತ್ತಿರ್ದನು ||128||

ಮಂಗಲಪದ

ಮಂಗಳಂ | ಜಯ | ಮಂಗಳಂ || ಪಲ್ಲ ||

ಅಖಿಳ ಬ್ರಹ್ಮಾಂಡ ನಾಥನಿಗೇ |
ಸಕಲ ಚರಾಚರ ಭರಿತನಿಗೇ |
ಸುಖಮಯಮೂರುತಿ ಚಿನ್ಮಯಗೆ |
ಮುಕುತಿದಾಯಕನಿಗೆ ಶಾಶ್ವತಗೇ || ಮಂಗಳಂ ||129||

ಪರತರ ಪಾವನ ರೂಪನಿಗೇ |
ಕರುಣಾಂಬುಧಿ ವರಚಿದ್ಘನಗೇ |
ಸುರನರ ಮನುಮುನಿ ಪೂಜಿತಗೆ ||
ಪರಿಪೂರ್ಣ ಸದಾನಂದನಿಗೇ || ಮಂಗಳಂ ||130||

ಕಡಲೊಳು ಶಯನವಗೈದವಗೇ |
ಮಡದಿಯ ವಕ್ಷದೊಳಿರಿಸಿದಗೇ |
ದಢ ಭಕ್ತರ ಹದ್ವಾಸನಿಗೇ |
ಒಡೆಯ ಕಾಂತೇಶನ ಮಿತ್ರನಿಗೇ ||
ಮಂಗಳಂ | ಜಯ | ಮಂಗಳಂ | ಶುಭ | ಮಂಗಳಂ | ನಿತ್ಯಮಂಗಳಂ ||131||

ಶ್ರೀಮದ್ರಾಮಾಯಣದೊಳಗಣ ಯಕ್ಷಗಾನ
ಇಂದ್ರಜಿತುಕಾಳಗವು ಸಂಪೂರ್ಣವು