ಶಾರ್ದೂಲವಿಕ್ರೀಡಿತಂ

ಶ್ರೀರಾಮಂ ನವರತ್ನಕುಂಡಲಧರಂ ಶ್ರೀರಾಮರಕ್ಷಾಮಣಿಂ
ಶ್ರೀರಾಮಂ ಚ ಸಹಸ್ರಭಾನುಸದಶಂ ಶ್ರೀರಾಮಚಂದ್ರೋದಯಂ |
ಶ್ರೀರಾಮಂ ಶ್ರುತಿಕೀರ್ತಿಮಾಕರಮಹಂ ಶ್ರೀರಾಮಮುಕ್ತಿಪ್ರದಮ್
ಶ್ರೀರಾಮಂ ರಘುನಂದನಂ ಭಯಹರಂ ಶ್ರೀರಾಮಚಂದ್ರಂ ಭಜೇ ||1||

ಭಾಮಿನಿ

ಕುಶನೆ ಕೇಳೈ ರಾವಣೇಶ್ವರ |
ನೆಸೆವ ಪುತ್ರಾಪೌತ್ರಬಾಂಧವ |
ವಿಸರವಳಿಸಿದೆ ತಾನೆನುತ ಚಿಂತಿಸುವ ಸಮಯದಲಿ ||
ಬಸವಳಿದು ಚಾರಕರು ಬಂದಾ |
ದಶಮುಖಂಗರುಹಿದರು ರಾಮನ |
ವಿಶಿಖದಲಿ ಮಕರಾಕ್ಷ ಹಾಯ್ದನು ಯಮನ ಪುರಕೆಂದು ||2||

ರಾಗ ನಾದನಾಮಕ್ರಿಯೆ ಅಷ್ಟತಾಳ

ಮಕರಾಕ್ಷ ಮಡಿದ ವಾರ್ತೆಯ ಕೇಳೀ | ದಶ |
ಮುಖ ಧೈರ್ಯಗುಂದಿ ಕ್ಲೇಶವ ತಾಳಿ ||
ಕಳವಳಿಸುತ ಮಂಚಕೊರಗಿದಾ | ದಿಟ್ಟ |
ಕಲಹಗಾರಿಗನಂತೆ ಮರುಗಿದ ||3||

ಜಲಜಭವಾಸ್ತ್ರ ಜಳ್ಳಾಯಿತೇ | ಜಯ |
ಲಲನೆ ರಾಘವನಲ್ಲಿ ಹೋಯಿತೇ ||
ಗೆಲಲೆಂದಟ್ಟಿದ ಧೈರ್ಯ ಪೂರ್ಣಗೇ | ನಮ್ಮ |
ನೆಲನತೀರಿತು ಕುಂಭಕರ್ಣಗೇ ||4||

ತಂಗಿಯು ಕುಲಕೆ ಕೇಡಾದಳು | ಗೆಲು |
ವಂಗವಿಲ್ಲೆಮಗೆ ರಾಘವನೊಳು ||
ಸಾವು ನಿಶ್ಚಯವೆಂದು ಬಗೆದನು | ಬಂದು |
ದೇವೇಂದ್ರಜಿತು ಕಯ್ಯ ಮುಗಿದನು ||5||

ಭಾಮಿನಿ

ಚಿಂತೆಯೇಕೆಲೆ ಜೀಯ ರಿಪುಕುಲ
ದಂತಕನು ತಾನಿರಲು ನಿಮ್ಮ ಮು |
ಖಾಂತರದಲಹುದೆನಿಸಿಕೊಂಬೆನು ಕಡೆಯ ಮಾತೇನು ||
ಕಂತುಹರ ಕಮಲಜರೆನಿಗೆ ಮಾ |
ರಾಂತವಿದಕೋ ಬಾಣವರಿನೃಪ |
ರಂತರವಿದೇನೆನುತ ಗರ್ಜಸಿ ನುಡಿದನಿಂದ್ರಾರಿ ||6||

ರಾಗ ಶಂಕರಾಭರಣ ಏಕತಾಳ

ತಂದೆ ಕೇಳ್ ಮರ್ಕಟರುಗಳ |
ನಿಂದು ರಣದಿ ಗೆಲದೆ ಪಿಂತೆ |
ಬಂದೆ ನಾದರೆಯು ನಿನ್ನ | ಕಂದನಲ್ಲೆಂದ ||7||

ಶತ್ರುಗಳೆಲ್ಲವರನ್ನು |
ಮರ್ದಿಸದಿರ್ದರೆ ನಾನು |
ಸತ್ಯವೇ ಮಂಡೋದರಿಯ | ಪುತ್ರನಲ್ಲೆಂದೂ ||8||

ತಾತನೊಳಪ್ಪಣೆ ಗೊಂಡು |
ತಾನುರಥವನೇರುತಾ ಸಂ |
ಖ್ಯಾತ ಸೇನೆ ಕೂಡಿಕೊಂಡು | ನಡೆದನಿಂದ್ರಾರಿ ||9||

ಸಂದಣಿಸುವ ಕೀಶಬಲವ |
ನಂದುಮಹಾಯುಧದಿ ಖಳನು |
ಕೊಂದುವಟ್ಟಿದನು ಮಾಯ | ದಿಂದ ನಿಮಿಷದಿ ||10||

ಬಿದ್ದಸೇನೆ ಕಂಡು ರಾಮ |
ನೆದ್ದು ಬಿಲ್ಲ ಹಿಡಿದು ಖೂಳ |
ನಿದ್ದಬಳಿಗೆ ಬಂದು ಶರದೊ | ಳದ್ದಿದನವನ | ||11||

ಧಾರಿಣಿಗಿಳಿದು ಬಂದು |
ಹೋರುತಿರಲು ರಾಮ ರಥವ |
ನೂರವೊಂದು ಮುರಿಯೆ ಖಳನು | ಸಾರಿದನಂದು ||12||

ಭಾಮಿನಿ

ಇವನೊಡನೆ ಕಾದುವ ಸಮರ್ಥರು |
ಭುವನ ಮೂರರೊಳಿಲ್ಲೆನುತ ಖಳ |
ಪವನಜನ ಸಮ್ಮುಖಕೆ ಹಾಯ್ದನು ಕಪಟವನು ನೆನೆದು ||
ಶಿವನಿಗರಿಯದ ಧೂರ್ತ ಮಾಯದೊ |
ಳವನಿಜೆಯ ನಿರ್ಮಿಸುತ ಕಪಿಗಳ |
ನಿವಹದಲಿ ತೋರಿದನು ಖಡ್ಗವ ಕೊರಳಿಗಾನಿಸುತ ||13||

ರಾಗ ನೀಲಾಂಬರಿ ಏಕತಾಳ

ನೋಡಿದೇನಯ್ಯ ಹನುಮ | ರಕ್ಕಸನೆನಗೆ |
ಮಾಡುವದಾಜ್ಞೆಯನು ||14||

ಗಾಢದಿಂದೆನ್ನ ರಕ್ಷಿಸೊ | ರಾಘವನೊಳು |
ಕೂಡಿರ್ಪೆ ಬದುಕಿದರೆ ||15||

ಒತ್ತಿ ಗಂಟಲು ಹಿಡಿದು | ಕಬರಿ ಕಯ್ಯ |
ಸುತ್ತಿ ನೆಗಹಿದ ಖಳನು ||16||

ಕೆಟ್ಟೆನಯ್ಯಯ್ಯೆ ಹನುಮ | ರಾಘವನಿಗೆ |
ಪಟ್ಟದರಸಿಯಲ್ಲವೇ ||17||

ಯಾರಿಗಾಗಿ ಕಾದುವಿರಿ | ಎನ್ನನು ಕೊಂದು |
ವಾರಿಧಿಗೇಕೆ ಸೇತು ||18||

ಉಬ್ಬಸ ಘನವಾಯಿತೆ | ಕಾವವರೆನ |
ಗೊಬ್ಬರಿಲ್ಲದೆ ಹೋಯಿತೆ ||19||

ಘನಬೇಗ ಹನುಮ ಪೋಗು | ರಾಘವನೆಡೆ |
ಗನುಮಾನ ಮಾಡದಿರೂ ||20||

ವನಿತೆಯಾಸೆಯಿಲ್ಲದೆಡೆ | ಲಕ್ಷ್ಮಣಾಂಗದ |
ಗಿನಜಗಾದರು ನೀ ಪೇಳು ||21||

ಗಂಡಬೇಡೆಂದು ಲಂಕೆಗೇ | ಬಂದವಳಲ್ಲ |
ಖಂಡಪರಶು ತಾ ಬಲ್ಲ ||22||

ಮರುಗಿ ಮನದಿ ಹನುಮಾ | ರಕ್ಕಸನಿಗಿಂ |
ತರುಹಿದ ದೈನ್ಯದಲಿ ||23||

ರಾಗ ಸಾರಂಗ ಅಷ್ಟತಾಳ

ಮತಿವಂತ ಖಳನೆ ಕೇಳೂ | ಹೆಂಗೊಲೆಯಿದು | ಹಿತವೇನೊ ತಿಳಿದು ಪೇಳು ||
ಯತಿ ಪೌಲಸ್ತ್ಯನ ವೀರ್ಯ | ಗತಿಗೆ ಸಾಧನಇಂದ್ರ |
ಜಿತುವೆಂಬ ನಾಮದೊ | ಳತಿಶಯ ಬಿರುದುಳ್ಳ || ಮತಿವಂತ ||24||

ಓದಿನೋಡಿದೆ ಶಾಸ್ತ್ರವ | ಬೊಮ್ಮನ ಚತು | ರ್ವೇದ ಪುರಾಣಸ್ತೋತ್ರವ ||
ಮೇದಿನಿಯೊಳು ವಿಕ್ರ | ಮಾಗ್ರಣಿಯೆನಿಸಿದೆ |
ಸಾಧಿಸಿ ಬೊಮ್ಮನ | ಶಿವನನೊಲಿಸಿಕೊಂಡೆ || ಮತಿವಂತ ||25||

ಅರಸುತನದಲಿ ನೀನು | ಆಳುವ ಲಂಕಾ | ಪುರದರಸನ ಮಗನು ||
ಹರಕಮಲಜರಿರಿತ್ತ | ವರವುಂಟೆನುತಲೀಕೆ |
ಹರಣ ಗೊಂಡರೆ ಮುಂದೆ | ಪರಿಹಾರ ನಿನಗುಂಟೆ || ಮತಿವಂತ ||26||

ಭಾಮಿನಿ

ಬರಲಿದರ ದೆಸೆಯಿಂದ ಪಪ್ರಥೆ |
ದೊರಕಲಿದರಿಂದಪಜಯವು ಮುಂ |
ಬರಿದಿರಲಿ ದುಷ್ಕೀರ್ತಿಯಂಜುವ ಭಟನು ತಾನಲ್ಲ ||
ಮರುತಸುತ ಕೇಳಸುರ ರಾವಾ |
ಸುರವಿಕರ್ಮ ವಿಧರ್ಮ ಪಥವೆಮ |
ಗರಿದೆನುತ ಜಾನಕಿಯ ಕಡಿದಿಳುಹಿದನು ಧರಣಿಯಲಿ ||27||

ರಾಗ ಸಾಂಗತ್ಯ ರೂಪಕತಾಳ

ಧರಣಿನಂದನೆಶಿರ ಧರೆಗೆ ಬೀಳದ ಮುನ್ನ |
ಯೆರಗಿದ ಖಳನ ಮುಷ್ಟಿಯಲಿ ||
ಭರಕೆ ತಪ್ಪಿಸಿಕೊಂಡು ಜುಣುಗಲು ರಥವು ಜ |
ಜ್ಝರಿತವಾಗಲು ಮರಳಿದನೂ ||28||

ಅಯ್ಯಯ್ಯ ಅವನಿಜೆಅಬಲೆಯರೊಳು ಸಹಜೆ |
ಮಯ್ಯ ಚಾಚುವುದಾತೆ ನೆಲಕೆ ||
ಕಯ್ಯರೆ ಕರ್ಮವನುಣಿಸಿತೆನಗೆ ಜಗ |
ದಯ್ಯನೊಳೇನೆಂಬೆನಕಟಾ ||29||

ಪಾತಕಿ ನಾ ನಿಮ್ಮ ಸೇರಿರ್ಪೆನೆಂದರೆ |
ಸೀತೆಯ ಪೆಸರಡಗಿಸಿತೇ ||
ಯಾತಕೋಸುಗ ಬಂದೆ ಖಳನುಪದ್ರಕೆ ನಾನು |
ಮಾತೆ ನಿಮ್ಮಳಿವ ನೋಡುವರೆ ||30||

ಕಡಿವೆರಡರಲಿ ಶೋಣಿತಧಾರೆ ಸುರಿವುದ |
ಬಿಡುವ ಮುಚ್ಚುವ ಕಣ್ಣಾಕೃತಿಯ ||
ಕಡುಪ್ರಕಾಶದ ಚಂದ್ರಾನನ ಕಂಡು ಹನುಮಂತ |
ಪೊಡವಿಗೊರಗಿದ ಮೂರ್ಛೆಯಲಿ ||31||

ವಾರ್ಧಕ

ಅನಿಲಜನ ಘನಸಿಂಹನಾದಮಂ ಕಾಣದಿರೆ |
ಧನುವ ಝೆಂಕರಿಸುತ್ತಲಿಂದ್ರಾರಿ ಮೆರೆವುತಿರೆ |
ವನಜಾಕ್ಷ ಕಂಡು ಜಾಂಬವರುಹಿ ಸಂಗತಿಯ ತಿಳಿದು ಬಾ ಪೋಗೆಂದನು ||
ಅನುವರದ ಭೂಮಿಯೊಳ್ ಬಿದ್ದ ಸೇನೆಯ ದಾಂಟಿ |
ಘನತರಶ್ವಂಗಳಂ ಹತ್ತಿಳಿದು ಒಳಲುತ್ತ |
ಜನಕಜೆಯು ಬಿದ್ದ ಚೋದ್ಯವಕಂಡು ವಿಧಿಸುತಂ ಹನುಮನೊಳ್ ಬೆಸಗೊಂಡನು ||32||

ರಾಗ ಸೌರಾಷ್ಟ್ರ ತ್ರಿವುಡೇತಾಳ

ಕೇಳು ಮರುತಾತ್ಮಜನೆ ಇಂದಿನ |
ಕಾಳಗದಿಖಳ ಮೆರೆದ ಪರಿಯನು |
ಕೇಳಿಬಾರೆಂದೆನ್ನ ಕಳುಹಿದ | ವ್ಯಾಳಶಯನ ||33||

ಏನು ನಿನ್ನಯ ಮನದ ದುಗುಡವಿ |
ದೇನೆನುತ ಬೆಸಗೊಂಡ ಬೊಮ್ಮನ |
ಸೂನುವಿಂಗನಿಲಜನು ಪೆಳ್ದನಿ | ಧಾನದಿಂದ ||34||

ರಾಗ ಕಾಂಬೋಜಿ ಅಷ್ಟತಾಳ

ಜಾಂಬವದೇವ ಕೇಳಯ್ಯ | ಕಾದಿ |
ಜಂಭಾರಿಜಿತುವೆನ್ನ ಕಯ್ಯ ||
ಅಂಬುಜಾಕ್ಷನ ಸಮರದಿ ಸೋತ ಖತಿಯಿಂದ |
ಕುಂಭಿನಿಜಾತೆಯ ಕೆಡಹಿ ತಪ್ಪಿಸಿಕೊಂಡ || ಜಾಂಬವ ||35||

ಇವನ ಕೊಲ್ಲದಡೀಗ ನಾನು | ಬಾಳೆ |
ಭುವನದೊಳಗೆ ಫಲವೇನು ||
ದಿವಕರಕುಲಜರ್ಗೆ ಮೊಗವೆಂತು ತೋರುವೆ |
ಶಿವನಾಣೆ ಸಾವುದಲ್ಲದೆ ಪರಿಹರವುಂಟೆ | ಜಾಂಬವ ||36||

ರಾಗ ಶಂಕರಾಭರಣ ತ್ರಿವುಡೇತಾಳ

ಜಗದ ಜೀವನ ಬೇಡ ನಿನಗೀ |
ಬಗೆಯ ಪಂಥವೆನುತಲಿ ||
ಮೊಗುವ ಕಂಬನಿ ತೊಡೆದು ನಯನದಿ | ಾಂಬವಂತ ||37||

ಮರುಸುತ ಸುಜ್ಞಾನಿ ನಿನಗೀ |
ಮರುಳು ಯಾಕೈ ಸುಮ್ಮನೆ ||
ನಿರತವೋ ಪುಸಿಯೆಂದು ತಿಳಿಯದೆ | ಧೈರ್ಯ ಸಾಕೆ ||38||

ಮಾಯೆಯಿದು ದಿವಿಜಾರಿ ರಚಿಸಿದ |
ದೇವಿಯಲ್ಲಾ ತೆಗೆದುಕೋ ||
ಆಯತಾಕ್ಷಿಯ ಮುಂದೆ ತೋರಿದ | ಡಾತ ಬಲ್ಲಾ ||39||

ತರಳೆಯನು ಕೊಂಡೊಯ್ದು ಪವನಜ |
ಕಪಟ ಸತಿಯಾ ರಾಮನ ||
ಚರಣಕೊಪ್ಪಿಸಿ ಬಿನ್ನವಿಸಿದನು | ಖಳನ ಕಥೆಯ ||40||

ಭಾಮಿನಿ

ಧರಣಿಜೆಯ ಖಂಡಿಸಿದ ಘಾಯದಿ |
ಸುರಿವ ರಕುತವ ಕಂಡು ರಘುಪತಿ |
ಯೊರಗಿರಲು ಮೂರ್ಛೆಯಲಿ ಸೌಮಿತ್ರ್ಯಾದಿ ಕಪಿಕಟಕಾ ||
ಮರುಗುತಿರಲರೆಗಳಿಗೆ ಮಾತ್ರದೊ |
ಳರಿಭಯಂಕರನೆದ್ದು ಸತಿಯಳ |
ಕರದೊಳಗೆ ತಕ್ಕವಿಸಿ ಹಲವಂಗದಲಿ ಹಲುಬಿದನು ||41||

ರಾಗ ಸಾವೇರಿ ಆದಿತಾಳ

ಜನಕಾತ್ಮಜೆ ಜಾಣೆಯರರಸಿಯೆ |
ಮುನಿಸೆನ್ನೊಳು ಯಾತಕೆಂದೆನುತ ||
ಘನಸ್ನೇಹದಿ ಚುಂಬಿಸುತಧರವ |
ಮನದಣಿಯೆ ಮುದ್ದಾಡುತೆಂದಾ ||42||

ಚಂದ್ರಾನನೆ ಚೆಲುವೆ ನೋಡೆಮ್ಮನು |
ಮಂದಹಾಸದಿ ಮಾತನಾಡಬಲೇ ||
ಇಂದ್ರಾಂತಕ ದಶಮುಖಾದಿಗಳನು |
ಕೊಂದೀವೆ ಹಿಡಿ ನಂಬುಗೆಯನೂ ||43||

ಬೇಡೆಂದೆರೆ ಸುಖಭಾಗ್ಯಹೀನನ |
ಕೂಡೇತಕೆ ಬಂದೆ ಸಾವುದಕೆ ||
ಮೂಢಾತ್ಮನ ಖಡುಗದ ಭಯದಿ ಕೂ |
ಗಾಡಿದೆಯೆಷ್ಟೆಮ್ಮ ಕರೆಕರೆದೂ ||44||

ದೇಶಾಂತರ ಇವಳಾಟಪಾಟದಿ |
ದೇಶಾಯೋಧ್ಯಪುರವೆಂದೆನಿಸಿತು ||
ಲೇಸಾಗಬೇಕೆಂದೆಮ್ಮ ಜಪಿಸುವ |
ಈ ಸೀತೆಯ ಮರವರೆ ತಮ್ಮ ||45||

ವಾರ್ಧಕ

ದೇವ ಕೇಳೆಂದಾ ವಿಭೀಷಣಂ ಕಯ್ ಮುಗಿದು |
ದೇವಿ ಜಾನಕಿಯಲ್ಲ ನಮ್ಮವರ ಕಪಟವಿದು |
ನೀವು ಚಿಂತಿಸಲೇಕೆ ನರರಂತೆ ಯೋಚಿಸಲು ನರಸತಿಯೆ ಜನಕಾತ್ಮಜೆ ||
ಪಾವನಾತ್ಮಿಕೆ ವನದೊಳಿಲ್ಲದಡೆ ನಾ ನಿಮ್ಮ |
ಸೇವೆಗಾಗುವನಲ್ಲವೆಂದಸುರಪತಿ ನುಡಿಯೆ |
ಪಾವಮಾನಿಯನಪ್ಪಣೆಯನ್ನಿತ್ತು ಕಳುಹಿದಂ ತಿಳಿವುದಕೆ ರಘುನಾಥನೂ ||46||

ರಾಗ ಸುರುಟಿ ಆದಿತಾಳ

ಧಾರಿಣಿಪಗೆ ನಮಿಸಿ | ಪವನಜ | ಹಾರಿದಶೋಕವನಕೇ ||
ನಾರಿಮಣಿಯ ಕಂಡೆರಗುತ ಹರುಷದಿ |
ಚಾರುಚರಣದೆಡೆಯೊಳು ಸ್ತುತಿಗೆಯ್ದನು ||47||

ಜಯ ಜನಕನ ಜಾತೆ | ತ್ರಿಜಗ | ನ್ಮಯೆ ಸುಜನರ ಮಾತೇ ||
ಭಯವರ್ಜಿತೆ ಜಂಭಾಂತಕಪೂಜಿತೆ |
ದಯಾಸಾಗರೆ ಲಾಲಿಸು ಭಿನ್ನಪವನು ||48||

ಮಾತೆ ನಿನ್ನಂತಬಲೆ | ರಚಿಸಿಂದ್ರಾ | ಜಿತು ಕಡಿದನು ರಣದಿ ||
ಪ್ರೀತಿಯಿಂದ ಹೇರಳ ದುಃಖಿ ರಘು |
ನಾಥನು ಕಳುಹಿದ ನಿನ್ನೆಡೆಗೆನ್ನನು ||49||

ರಾಗ ಧನ್ಯಾಸಿ ಅಷ್ಟತಾಳ

ಚೆಂದವಾಯ್ತು ಹನುಮ ನೀ |
ಬಂದಕಾರಣದೊಳೆನ್ನ ||
ಕಂದ ಬಾ ಬಾರೆನುತಲರ |
ವಿಂದಮುಖಿ ತಾನಪ್ಪಿದಳು ||50||

ದೂಷಣಾರಿಯಂತೆ ಶಿರವ |
ನಾಸುರೇಂದ್ರ ಕಾಣಿಸಲ್ಕೆ |
ಕ್ಲೇಶದಿಂದ ಸಾಯಬಗೆಯ |
ಲೀ ಸರಮೆ ತಡೆದಳೆನ್ನ ||51||

ಅಂತರಂಗವಿದೇ ಮಾತ |
ಕಾಂತನಿಗರುಹು ಹಿಂದೆ |
ಕಾಂತಾರದಿ ರಾಮನು ಜ |
ಯಂತನಿಂಗುದ್ಧರಿಸಿದುದ ||52||

ತಾಯೆ ಖಳರಾಯುಷ್ಯ ತೀರಿ |
ಹೋಯಿತೆನುತ ಬಂದು ಹನುಮ |
ಪ್ರೀಯದಿಂದಲಾಗ ರಘು |
ರಾಯಗೆ ವಿಸ್ತರಿಸಿದನು ||53||

ರಾಗ ತುಜಾವಂತು ಅಷ್ಟತಾಳ

ವಸಗೆಂಬ ವಾರ್ತೆ ಕೇಳಿದರೆಲ್ಲ | ಸೀತೆ |
ಯಶೋಕಾವನದಿ ರಾಮ ನಾಮವ ಸ್ಮರಿಸಿರ್ಪ  || ಪ ||

ಅಮ್ಮಮ್ಮ ವಿಭಿಷಣಗೆಣೆಯಿಲ್ಲ | ಜಗ |
ದಮ್ಮ ತಾ ಪುಸಿಯೆಂದು ಪೇಳಿದ ಸೊಲ್ಲ ||
ಬ್ರಹ್ಮಪುತ್ರನು ಮೂಲಾದಿಯ ಬಲ್ಲ |  ಪರ |
ಬ್ರಹ್ಮ ತಾನಲ್ಲದೆ ಹನುಮಂತ ಕಪಿಯಲ್ಲ ||54||

ಹೀಗೆಂದು ಕಪಿಗಳು ನಲಿದಾಡಿ | ನಳ |
ಭೋಗಿ ಸುಗ್ರಿವಾದಿಗಳನೊಡಗೂಡಿ ||
ರಾಘವನೊಳಗಪ್ಪಣೆಯ ಬೇಡಿ | ಕಟ್ಟಿ |
ಬೇಗದಿಂದೆಳೆದು ತರುವೆವಿಂದ್ರಾರಿಯ ನೋಡಿ ||55||

ವಾರ್ಧಕ

ಇತ್ತ ಕಪಿಗಳು ಪಾರುಪತ್ಯಮಂ ಮಾಡುತಿರೆ |
ಚಿತ್ತದಲಿ ಪುರುಹೂತಜಿತು ಚಿಂತಿಸುತಲಯ್ಯ |
ಗಿತ್ತ ಭಾಷೆಗೆ ಮಾರಣಾಧ್ವರವ ನಿಶ್ಚಯಿಸಿ ಕುಂಭನಿಯೊಳೈತಂದನು ||
ಸುತ್ತೇಳುಕೋಟಿ ರಕ್ಕಸರ ನಿಲಿಸುತ್ತಲದ |
ರೊತ್ತಿನಲಿ ಭೂತಭೇತಾಳರಂ ಪರುಠವಿಸಿ |
ಬಿತ್ತರದ ಯಜ್ಞಶಾಲೆಯ ರಚಿಸಿ ಕುಲದೇವಿಗರ್ಚಿಸುತ ಪೊಡಮಟ್ಟನು ||56||

ರಾಗ ಢವಳಾರ (ಧ್ರುವ) ತ್ರಿವುಡೆತಾಳ

ಶಂಕರಿ ಸರ್ವೇಶ್ವರಿ ದುರಿತಭ |
ಯಂಕರಿ ನಮ್ಮಾನ್ವಯಪೋಷಿಣಿ |
ಕಿಂಕರಜನ ಮಾತೇ ಗಿರಿಜಾತೆ |
ಗಿರಿಜಾತೆಯೇ ನಮ್ಮರಸಗೆ ಕರುಣಿಸು |
ಲಂಕಾಧಿಪತ್ಯ ಸ್ಥಿರವಾಗಿ || ಶೋಭಾನೆ ||57||

ಶತ್ರುಗಳನು ಜಯಿಸುವ ಶಕ್ತಿಯು |
ಮಿತ್ರರನೂ ಸಲಹುವ ಯುಕ್ತಿಯು |
ಧಾತ್ರಿಯಿರುವನಕಾ ನಡೆಸೆಂದು ||
ನಡೆಸೆಂದತಿ ಭಕ್ತಿಯೊಪರ್ಚಿಸಿದರೆ |
ಕಾತ್ಯಾಯಿನಿ ಮೊಗವ ತಿರುಹಿದಳು  || ಶೋಭಾನೆ ||58||

ರಾಗ ಸಾಂಗತ್ಯ ರೂಪತಾಳ

ಸೋಲವಾಯಿತುಯೆಂದು ಸುರಪಾಲಜಿತು ಬಂದು |
ಮೂಲಕುಂಭಿನಿ ಭೂಮಿಗಿಳಿದೂ ||
ಕಾಲನಂದದಿ ಪೌರೋಹಿತ ಪೇಳ್ದ ಮತದಿಂದ |
ಶಾಲೆ ಹಿಡಿದು ದೀಕ್ಷೆಗೊಂಡಾ ||59||

ಕಾಮಾರಿಕಮಲಜರಿಂದ ನೇಮವಗೊಂಡು |
ಹೋಮ ಕಯ್ಗಂಡ ಶಕ್ರಾರೀ ||
ಅ ಮಹಾಕುರಿಕೋಣ ಮಾಂಸ ದುರ್ಗಂಧವು |
ರಾಮನ ಬಲಕೆ ಕಾಣಿಸಿತು ||60||

ಧಗಧಗಿಸುವ ದಳ್ಳುರಿಯ ಕಂಡು ಶರಣಂಗೆ |
ರಘುನಾಥನೊಲಿದು ಕೇಳಿದನು ||
ಸುಗುಣಸಾಗರನೆ ಪೇಳಿಂತಾಹ ಪರಿಯಾರಿಂ |
ದೊಗೆದುದೆಂದೆನಲರುಹಿದನು ||61||

ರಾಗ ಕಾಂಭೋಜಿ ಅಷ್ಟತಾಳ

ರಾಘವದೇವ ಕೇಳಯ್ಯ | ನಿಗ |
ಮಾಗಮವೇದ್ಯಾಹಿಶಯ್ಯ ||
ನಾಗಿ ತನ್ನೊಡನಿಂತ | ಮೇಗರತನವೇತ |
ಕಾಗಲಿ ತೋರ್ಪ ಭ | ಯಾಗಮವರುಹುವೆ ||62||

ಮಾರಣಧ್ವರ ಮಾಳ್ಪ ನಿನಗೇ | ಸುರ |
ಪಾರಿ ಕುಂಭಿನಿಯೊಳಗವಗೇ ||
ಮೂರು ಲೋಕದೊಳಿದಿ | ರಾರುಂಟು ಬೊಮ್ಮನ |
ಕಾರುಣ್ಯದಲಿ ಬಂದ | ಸಾರ ಸಾಮರ್ಥ್ಯದಿ ||63||

ನಿನ್ನ ಸೇನೆಯೊಳಗುತ್ತುಂಗಾ | ರುಂಟೆ |
ಅನ್ನಾಹಾರದಿ ಸತಿಸಂಗಾ ||
ಹನ್ನೆರಡಬ್ದ ವಿ | ಭಿನ್ನ ಸದ್ಬ್ರತರಿರ |
ಲಿನ್ನವರೊಳು ಖಳ | ನಿರ್ನಾಮನಾಗುವ ||64||

ಕಂದ

ಮಿಕ್ಕವರಿಂಗಸದಳ ಬಲು |
ರಕ್ಕಸನಂ ಮುರಿದುರುತರ ಕೀರ್ತಿಯ ಪಡೆಯಲ್ ||
ತಕ್ಕವರಿಲ್ಲೆನೆ ಲಕ್ಷ್ಮಣ |
ನಕ್ಕು ನಪಾಲನೊಳೆಂದನು ಶೌಂರ್ುವು ಜಡಿಯಲ್ ||65||

ರಾಗ ಮಾರವಿ ಏಕತಾಳ

ಯಾಕೀಪರಿ ಕಡು | ವ್ಯಾಕುಲ ತಾಳ್ವಿರಿ |
ಈ ಖೂಳನ ವಧೆಗೆ ||
ಕಾಕುತ್ಸ್ಥಾಧಿಪ ತಾ ಕರ್ಪುರ ವೀ |
ಳ್ಯಾಕುಲವನು ತನಗೆ ||66||

ಕೊಂದುಕೊಡುವೆ ದಶ | ಕಂಧರನಣುಗನ |
ಸಂದೇಹಗಳೇನು |
ಮಂದರಾದ್ರಿಧರ | ನೊಂದು ಕರುಣವಿರ |
ಲಿಂದಂಜೆನು ನಾನು ||67||

ಎಲ್ಲವರಿಂದಲಿ | ಸಲ್ಲದ ಕಾರ್ಯವ |
ನೊಳ್ಳಿತೆನಲು ಮಾಡಿ ||
ಉಲ್ಲಾಸದೊಳು ಪ್ರ | ಫುಲ್ಲ ಯಶಸ್ಸಿದ |
ರಲ್ಲಿ ಫಡೆವೆ ನೋಡೀ ||68||

ರಾಗ ಸೌರಾಷ್ಟ್ರ  ತ್ರಿವುಡೇತಾಳ

ಊರ್ಮಿಳಾಪತಿಯೆಂದ ನುಡಿ ಕೇ |
ಳ್ದುಮ್ಮಳಿಸುವಾನಂದರಸದೊಳ |
ಗೊಮ್ಮೆ ತಳ್ಕಿಸುತೆಂದ ರಾಘವ | ತಮ್ಮನೊಡನೇ ||69||

ಒಂದುಳಿಯದೀ ಸಾಧನಗಳಿ |
ದ್ದಿಂದು ಶಕ್ರಾರಿಯನು ಕೊಂದಡೆ |
ತಂದವನು ನೀನಾದೆ ಜನಕನ | ನಂದನೆಯನು ||70||

ಹನುಮ ನೀಲಾಂಗದ ವಿಭೀಷಣ |
ವನಜಭವ ಸುತ ಸಹಿತಲೈವರ |
ರಣಕೆ ಬೆಂಬಲವಾಗಿ ಕರಕೊಂ | ಡನುಜ ಪೋಗೈ ||71||

ಭಾಮಿನಿ

ಕೆಡಿಸಿ ಖಳರಧ್ವರವ ಮಂತ್ರವ |
ಸುಡಿಸಿ ಸೋಪಸ್ಕಾರ ಸಾರವ |
ಬಿಡಿಸಿರೈ ದಾನವರ ವರಸಂಸಾರವಿಭ್ರಮವ ||
ನಡಿರೆನಲು ರಾಘವನ ಬೀಳ್ಗೊಂ |
ಡೊಡನೆ ಕುಂಭಿನಿಗಿಳಿದು ಕಲ್ಪದ |
ಕಡೆಯ ಭೈರವರಂತೆ ಮುತ್ತಿದರಾ ಮಹಾಧ್ವರವಾ ||72||

ವಾರ್ಧಕ

ಸುಳಿಸಿದರ್ ಭೂತಭೇತಾಳರಂ ದೆಸೆದೆಸೆಯೊ |
ಳಳಿಸಿದರ್ ಪ್ರಾಕಾರದಸುರರಂ ಜಡಿವುತ |
ಪ್ಪಳಿಸಿದರ್ ಡೊಳ್ಳಾದ ಋತ್ಪಿಕ್ಕುಗಳ ಹೊಗೆವ ಹೋಮದೊಳ್ ಹೋಮಿಸಿದರು ||
ಬಳಸಿದರ್ ಯಜ್ಞಸಾಹಿತ್ಯಮಂ ತಮ್ಮೊಳೊ |
ಕ್ಕಳಿಸಿದರ್ ಮಾರಣಧ್ವರವ ಹನುಮ ಪ್ರಮುಖ |
ರುಳಿಸಿದರ್ ಶಕ್ರಾರಿಗೊಬ್ಬನಂ ಒಳಿಕ ಲಕ್ಷ್ಮಣನಾತಗಿಂತೆಂದನು ||73||

ರಾಗ ಭೈರವಿ ಏಕತಾಳ

ಫಡ ರಾವಣಿ ಸಾಕೇಳೂ | ಬಿಲ್ |
ಹಿಡಿದೇರ್ನಿಲು ತೇರಿನೊಳೂ ||
ಕಡೆಗಾಲಕೆ ಮಖವೇಕೆ | ಇ |
ನ್ನಡಗೀರ್ದರೆ ಬಲು ಠೀಕೆ ||74||

ಪೊಡವಿಯ ಪೊಕ್ಕಡಗಿದರಾ | ಬೆಂ |
ಬಿಂಡುವುದೆ ಪರನಾರಿಯರ ||
ಕೆಡಿಸಿದ ಕಡು ಪಾತಕವೂ | ಕುಲ |
ಕಡರದಿಹುದೆ ಘಾತಕವೂ ||75||

ಇನ್ನಾದರು ಛಲ ಬಿಟ್ಟು | ಶ್ರೀ |
ಕನ್ಯಾಮಣಿಯನು ಕೊಟ್ಟು ||
ಚೆನ್ನಾಗಿಯೆ ಮರೆವಿಡಿಯೊ | ಶ್ರೀ |
ಮನ್ನಾರಾಯಣನಡಿಯಾ ||76||

ಕಂದ

ಇಕ್ಷ್ವಾಕು ಕುಲೋದ್ಭವನೆಂ |
ಬಾಕ್ಷೇಪದ ಮೂದಲೆಯಂ ಕೇಳ್ದಮರಾರೀ ||
ದೀಕ್ಷೆಯ ಬಿಸುಟೆದ್ದು ವಿಲೋ |
ಕಾಕ್ಷಿಯೊಳೆಂದನು ಕಿರಿಯಯ್ಯಗೆ ಖತಿಯೇರೀ ||77||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಎಲವೊ ಸುಡು ಸುಡು ನಿನ್ನ ಮೋರೆಯ |
ಕುಲ ಸುಗಂಧದ್ರುಮಕುಠಾರಕ |
ನಿಲದಿರೆನ್ನಿದಿರಿನೊಳು ಭಂಡರ | ತಿಲಕ ತೊಲಗೂ ||78||

ಎಂದವನ ಧಿಕ್ಕರಿಸಿ ಲಕ್ಷ್ಮಣ |
ಗೆಂದನೆಲೆ ಕೋದಂಡವನುಹಿಡಿ |
ಬಂದೆನಿದೆ ರಿಪುವಂಶಪರಶು ಪು | ರಂದರಾರೀ ||79||

ಹರಣದಾಸೆಗಳುಳ್ಳಡಣ್ಣನ |
ಕರೆಸು ವೀಳೆಯ ವಿತ್ತುದೇಶಾಂ |
ತರಕೆ ತಿರುದುಂಬುದುಕೆ ಶರಣನ | ಭರದಿಕಳುಹೂ ||80||

ಅಣ್ಣನನು ಕರೆಸುವೆ ದಶಾಸ್ಯನ |
ಮಣ್ಣಿಗುಣಿಸಿ ಶಶಾರ್ಕರಿರುತಿರು |
ವನ್ನಬರ ಶರಣಂಗೆ ಲಂಕೆಯ | ಪಣ್ಣಿಕೊಡಲೂ ||81||

ಭಾಮಿನಿ

ಮಗಧರಾಯನ ಮೊಮ್ಮನಾಡಿ |
ರ್ದಗಡುವಾಕ್ಯವ ಕೇಳ್ದು ಸುರಪನ |
ಬಿಗಿದ ಖಳನುಬ್ಬೇರಿ ಗರ್ಜಿಸುತೆಂದ ಖಾತಿಯಲೀ |
ರಘುಕುಲದೊಳತಿ ಧೀರನೆಂಬೀ |
ಹಗರಣವು ನಿನಗಿರಲು ಕೊಳ್ಳೆಂ |
ದುಗಿಸಿದನು ಮುಂಗಾರ ಮೇಘದ ಸೋನೆಯೆನೆ ಸರಳಾ ||82||