ವಾರ್ಧಕ

ಇಳೆಯಪತಿ ಲಾಲಿಸೈ ವೀರ ವೃಷಸೇನ ದಳ |
ದುಳಿಸಿ ಧೃಷ್ಟದ್ಯುಮ್ನ ಮೊದಲಾದ ಪಾಂಡವರ |
ದಳವ ನೋಯಿಸಿ ನೃಪನ ಬೆಂಬತ್ತಿ ಗರ್ಜಿಸುತ ಹಾಯ್ದನಾ ಪಾರ್ಥನೆಡೆಗೆ ||
ಬಳಿಕವಂ ಕೋಪದಿ ಕನಲ್ದೆಚ್ಚು ಮೂರು ಶರ |
ದೊಳು ಕರ್ಣನಂದನನ ಶಿರವನರಿದಾಗ ಧರೆ |
ಗಿಳುಹಲ್ಕೆ ಜನರೆಲ್ಲ ತರಳನಳಿವಿಂಗೆ ಹಾ ಹಾಯೆಂದು ದುಃಖಿಸಿದರು || ೩೧೧ ||

ಭಾಮಿನಿ

ಏನನೆಂಬೆನು ಕರ್ಣತನಯನ |
ಹಾನಿಯನು ಕಾಣುತ್ತ ಕೌರವ |
ಸೇನೆ ತಲೆಕೆಳಗಾಯ್ತು ಕುರುಪತಿ ದುಗುಡಮನನಾದ ||
ಈ ನೆರೆದ ಪರಿಭವವ ಕಾಣುತ |
ತಾನೆ ರೋಷಾಗ್ನಿಯಲಿ ಭುಗಿಲೆಂ |
ದಾ ನರನ ಸಮ್ಮುಖಕೆ ರಥವನು ಚಾಚಿದನು ಕರ್ಣ || ೩೧೨ ||

ಕಂದ

ರಣದೊಳಗೀರ್ವರು ಚೂಣಿಯೊ |
ಳಣಕಿಸಿ ರಥಮಂ ದುವ್ವಾಳಿಸುತಲೆ ಬಳಿಕಂ ||
ಕುಣಿಸುವ ಚಾಪಧ್ವನಿಗಾ |
ಕ್ಷಣ ಬ್ರಹ್ಮಾಂಡದ ಭಟರೆದೆ ಬಿರಿದಂತಾಗಲ್ || ೩೧೩ ||

ದ್ವಿಪದಿ

ಆಧರಿಸು ಜನಪಾಲನೊಂದು ಚೋದ್ಯವನು |
ಈ ಧರೆಯೊಳಿಂತಾಗದಿರ್ಪ ಪದ್ಯವನು || ೩೧೪ ||

ಆ ಧನಂಜಯನ ಪಕ್ಷದೊಳು ಸುರನಾಥ |
ರಾಧೇಯನಲಿ ಸಪ್ತವಾರುಹವರೂಥ || ೩೧೫ ||

ಸುರರು ಮುನಿಮುಖ್ಯರಾ ನರನತ್ತಲಾಗೆ |
ದುರುಳ ದೈತ್ಯರು ಸೂರ್ಯಸುತನಿತ್ತಲಾಗೆ || ೩೧೬ ||

ನಿರತ ಸಜ್ಜನರೆಲ್ಲ ಕೌಂತೇಯನತ್ತ |
ಪರಮ ದುರ್ಜನರೆಲ್ಲ ಕಲಿಕರ್ಣನತ್ತ || ೩೧೭ ||

ಉಸಿರಲೇನುತ್ತಮ ಪದಾರ್ಥವಾ ಕಡೆಗೆ |
ಪಿಸುಣಾಧಮಾಧಮ ಪದಾರ್ಥವೀಕಡೆಗೆ || ೩೧೮ ||

ಎಸೆವುತ್ತಲಿಹ ಕಮಲಜಾಂಡವಾ ಪಕ್ಷ |
ಹಸನಾದ ಪಕ್ಷವಿದು ಲಾಲಿಸು ಗತಾಕ್ಷ || ೩೧೯ ||

ಕಂದ

ಇತ್ತಲು ಕರ್ಣಾರ್ಜುನರಿಗೆ |
ಹತ್ತಿತು ಕಾಳಗವಿಳೆ ಬಾಯ್ ಬಿಡಲೀ ತೆರದಿಂ ||
ಮತ್ತೆ ವಿಭಾಡಿಸುತಿರೆ ಗಜ |
ರುತ್ತಲೆ ಮೂದಲಿಸಿದು ಮಾತಾಡಿದರಾಗಳ್ || ೩೨೦ ||

ರಾಗ ಭೈರವಿ ಏಕತಾಳ

ಎಲವೋ ಸೂತನ ಮಗನೆ | ನೀ | ಕಲಹದೊಳತಿ ಸಹಸಿಗನೆ ||
ತಲೆಯನು ನೀಗಲಿಕಹುದೊ | ಮೇಣ್ | ಮಲೆತರೆ ಕಾಣಲುಬಹುದೊ || ೩೨೧ ||

ಬಿಡು ಬಿಡು ಸಾಕೆಲೊ ಪಾರ್ಥ | ನೀ | ಪೊಡವಿಯೊಳಧಿಕ ಸಮರ್ಥ ||
ಕಡುಗಲಿಯೆಂಬಬ್ಬರವು | ಎ | ನ್ನೊಡನದು ಸಲ್ಲದು ನಿರವು || ೩೨೨ ||

ಸಾಯಕ ತೊಡುವ ವಿಚಾರ | ರಾ | ಧೇಯಗೆ ಸಲುವುದೆ ತೋರಾ ||
ಕಾಯುವರ್ ಯಾರೈ ನಿನಗೆ | ನೀ ಸಾಯದೆ ನಡೆಯೈ ಮನೆಗೆ || ೩೨೩ ||

ಹಾರದಿರಕಟಾ ನರನೆ | ನಿನ | ಗ್ಯಾರರಿವರು ಪಾಮರನೆ |
ತೋರುವೆನೆನ್ನಯ ಬಿರುಸು | ಮೈ | ದೋರಿಯೆ ಕಾದಿದರಿರಿಸು || ೩೨೪ ||

ಭಾಮಿನಿ

ರವಿಜಕೌಂತೇಯರಿಗೆ ರೋಷದಿ |
ತವಕಿಸುತ ಕೈಚಳಕ ಶೌರ್ಯದ |
ಬವರಿಗರು ಹೊರೆಯೇರಿ ಕಾದುವ ರಭಸದದುಭುತಕೆ ||
ಅವನಿ ಮುಗ್ಗಿತು ವರ ಚತುರ್ದಶ |
ಭುವನ ಕಂಪಿತವಾಯ್ತು ಪರ್ವತ |
ದವಯವಂಗಳು ಸಡಿಲಿತಾ ಬ್ರಹ್ಮಾಂಡಘಟ ಬಿರಿಯೆ || ೩೨೫ ||

ಕಂದ

ಇನಿತಾ ಕರ್ಣಧನಂಜಯ |
ರನುವರಮಂ ಕಾಣುತಲಾ ಗುರುಸಂಜಾತಂ ||
ಘನ ಬೇಗದಿ ಬಂದಾ ಕುರು |
ಜನಪಾಲಕನೊಡನೆಂದನುಮತಿ ಸಂಭ್ರಮದಿಂ || ೩೨೬ ||

ರಾಗ ಭೈರವಿ ಝಂಪೆತಾಳ

ಕೇಳು ಕುರುರಾಯ ಬಲು | ಕಟ್ಟುಹೋದುದು ಕಾರ್ಯ |
ಪೇಳುವೆನು ತಾನೀಗ | ಪೆಸರಿಟ್ಟು ನಿನಗೆ  || ೩೨೭ ||

ಇಂದಿನಾಹವದೊಳಗೆ | ರವಿಜನತಿ ಬಲವಂತ |
ನೆಂದು ಲೋಕದೊಳೆಲ್ಲ | ನಿರ್ಧಾರವಾಯ್ತು || ೩೨೮ ||

ಇಂಥಾ ಮನುಷ್ಯನನು | ಈ ಸ್ವಲ್ಪ ಕೆಲಸಕ್ಕೆ |
ನಿಂತು ನೀ ಕೊಲಿಸುವುದು | ನೀತಿಯೇನಯ್ಯ || ೩೨೯ ||

ವಾರ್ಧಕ

ಎಲೆ ಕುರುನೃಪಾಲಾಗ್ರಣಿಯೆ ಮುನ್ನಿನಾರಾಭ್ಯ |
ಕುಲಗೋತ್ರ ಬಂಧು ಬಾಂಧವ ತನುಜರನುಜರೀ |
ಛಲದಂಕ ರವಿಜನೋರುವನಲ್ಲದಿಲ್ಲೆಂಬೆ ಮೇಣಿವನ ಕೊಳಗುಳದೊಳು ||
ಕೊಲಿಸದಿರ್ ನೀನುಳಿವ ಪರಿಯಂತ ಸುತರಳಿವ |
ಸಲೆ ಸೂತತನುಜನಂ ಕಂಡು ಮರೆತಿಹೆ ಮುಂದೆ |
ಕಲಿಕರ್ಣನಳಿಯಲಾರಂ ನೋಡಿ ಮೆರೆವ ಬಿಡು ಸಂಧಾನಮೆಸಗೆಂದನು || ೩೩೦ ||

ಭಾಮಿನಿ

ಸಾಕು ಮೂರ್ಖತೆ ಬೇಡ ಮನಕೆ ವಿ |
ವೇಕ ತಂದುಕೊ ರಣದೊಳಳಿದುದ |
ನೇಕ ಸುಭಟಾವಳಿಯ ನೋಡಿದೆ ಕಣ್ಣಿನೊಳು ಮತ್ತಾ ||
ಆಕೆವಾಳರ ಕೂಡೆ ಸಮರವಿ |
ದೇಕೆ ಬಿಡು ಸಂಧಿಯನು ಮಾಡಿಸಿ |
ನೀ ಕರೆದು ತಂದಿಟ್ಟುಕೊಳ್ಳೈ ಪಾಂಡುಸುತರಿಂಗೆ || ೩೩೧ ||

ಕಂದ

ಇನಿತಶ್ವತ್ಥಾಮಂ ಪೇ |
ಳ್ದನಿತಂ ಕುಹಕಿಶಿರೋಮಣಿ ಕೇಳಿದು ಭರದಿಂ ||
ಮನದಿ ವಿರೋಧವ ತಾಳ್ದುಂ |
ಘನ ರೋಷದ ಭಾವದೊಳವನೊಡನಿಂತೆಂದಂ || ೩೩೨ ||

ರಾಗ ಕೇದಾರಗೌಳ ಅಷ್ಟತಾಳ

ಗರುಡಿಯಾಚಾರ್ಯಕುಮಾರ ನೀನಿಂದಿನೊ | ಳೊರೆದ ಮಾತಿನ ಬಗೆಗೆ ||
ಹರುಷವಾಯ್ತೆನ್ನ ಚಿತ್ತದೊಳೀಗ ಬಿಡು ಬಿಡು | ಮರಳಿದನಾಡದಿರು || ೩೩೩ ||

ಪಣೆಯೊಳು ವಿಧಿ ಬರೆದಂಥ ಕಲ್ಪನೆಯನ್ನು | ಜುಣುಗಿದರದು ತಪ್ಪುದೆ |
ರಣದೊಳು ಸುತಸೋದರರು ಸಹಿತಳಿದ ಮೇಲ್ | ಬಣಗರೊಳ್ ಸಂಧಾವನೇ || ೩೩೪ ||

ವಿಹಿತವಿನ್ನಾದರಾಗಲಿ ಮುಂದೆ ಸಂಧಾನ | ವಹ ರೀತಿಯೆಂತು ಕಂಡೈ ||
ಅಹಿತರೆಮ್ಮವರ ನಷ್ಟವ ನೋಡಿ ನೀವು ನಿ | ರ್ವಹಿಸಲೊಪ್ಪುವೆನಿಂದಿಗೆ || ೩೩೫ ||

ವಾರ್ಧಕ

ದ್ರೋಣನದಿಸುತರೆರಡುತಟ್ಟಿನವರಿಗೆ ಸಮಂ |
ಮೇಣು ಲಕ್ಷಣ ಮುಖ್ಯರಭಿಮನ್ಯು ಮೊದಲಾದ |
ಭ್ರೂಣರಿಗೆ ಸರಿಯಾಯ್ತು ಮಿಕ್ಕಿನಿತ್ತಂಡದೊಳ್ ಪೊಯ್ದಾಡಿ ಮಡಿದೊರಗಿದ ||
ಕ್ಷೆಣಿಪರ ಬಿಡಲಿ ವೃಷಸೇನ ದುಶ್ಯಾಸನರ |
ನೂಣಯಕೆ ತೆರಪಿಲ್ಲ ಮಾರುತಿಜ ಧನಂಜಯರ |
ಗೋಣಂಗಳಂ ತರಿದರಪ್ಪುದು ಸಮಂ ಬಳಿಕ ಸಂಧಾನಮೆಸಗೆಂದನು || ೩೩೬ ||

ಕಂದ

ಎಂದಾ ಗುರುಜನ ಗರ್ಜಿಸ |
ಲಂದು ವಿಭಾಡಿಸಿ ಮುರಿದವ ಪೋಗಲ್ಕಿತ್ತಂ ||
ಕುಂದದೆ ಜತೆಯೊಳಗೀರ್ವರು |
ನಿಂದು ರಣಾಗ್ರದೊಳೆಚ್ಚಾಡಿದರತಿ ಭರದಿಂ || ೩೩೭ ||

ರಾಗ ಶಂಕರಾಭರಣ ಏಕತಾಳ
ಪೂತು ಮಝರೆ ಧೀರನೈಸೆ | ನೀತಿವಂತನಹುದೊ ನಮ್ಮ |
ಜಾತನಾದವೃಷಸೇನನ | ನೇತಕೆ ಕೊಂದೆ ||
ಜಾತನಾದರವನು ತನ್ನ | ಮಾತೆಯೊಂದಿಗಿರದೆ ದಳವ |
ಘಾತಿಸುತ್ತ ಮೇಲೆ ಬೀಳ | ಲಾತು ತರಿದೆನು || ೩೩೮ ||

ಇಂದ್ರತನಯ ಭಳಿರೆ ಕುರು | ವೃಂದ ಸಹಿತ ಗೋಗ್ರಹಣದಿ |
ನಿಂದು ಜಯಿಸಿದಂದದಿಂದ | ಲಿಂದುಬ್ಬಬೇಡ ||
ಹಿಂದೆ ರಣದಿ ಮಾಗಧನ | ಮುಂದುಗೆಡಿಸಿ ಸೆಳೆದೆ ರಾಜ್ಯ |
ವೆಂದು ಮನದೊಳುಲಿಯದಿರು | ನಿಂದು ತೋರೆಲಾ || ೩೩೯ ||

ಹರಿಹರರ ಕೂಡೆ ಯುದ್ಧ | ಕಿರದೆ ಮಲೆತು ಕವಚಖಳರ |
ತರಿದ ಬಲ್ಮೆಯಿಂದ ಗಳಹೆ | ಧುರಕೆ ಬೆದರ್ವೆನೆ ||
ತರಳೆ ಭಾನುಮತಿಯ ಕುರು | ವರಗೆ ಲಗ್ನಗೆಯ್ಯುವಲ್ಲಿ |
ನೆರೆದ ರಾಯರನ್ನು ಗೆಲ್ದ | ಬಿರುಸ ತೋರೆಲಾ || ೩೪೦ ||

ಮಲ್ಲ ದ್ರುಪದನಲ್ಲಿ ಜಯಿಸಿ | ನಿಲ್ಲದಗ್ನಿಗಿತ್ತೆ ಸುರರ |
ಚೆಲ್ವ ವನವ ಸುರರ ಗೆಲ್ದು | ದೆಲ್ಲ ಕೇಳ್ದಿಹೆ ||
ನಿಲ್ಲು ತಿಳಿವೆ ಕುರುಮಹೀಶ | ನಲ್ಲಿ ಹೈಡಿಂಬಿಯ |
ನಲ್ಲಿ ಗೆಲಿದೆ ಮೂರುಕೋಟಿ | ಮಲ್ಲ ಖಳರನು || ೩೪೧ ||

ಎನಲು ಕರ್ಣ ರೋಷದಿಂದ | ಕನಲಿ ದಿವ್ಯ ಸರಳನೆಸೆಯ |
ಲನಿತು ತರಿದು ನುಡಿದನಾಗ | ಕಿನಿಸಿನಿಂದಲಿ ||
ಘನತೆ ತೋರು ತೋರೆನುತ್ತ | ಕಣೆಯ ಕವಿಸೆ ಕಡಿದು ಸುರಿದ |
ವನಜನೇತ್ರ ಮೆಚ್ಚುವಂತೆ | ಕ್ಷಣದಿ ರವಿಜನು || ೩೪೨ ||

ರಾಗ ಸಾವೇರಿ ಮಟ್ಟೆತಾಳ

ಪೂತು ಮಝರೆ ಕರ್ಣ ನೀ ವಿ | ಖ್ಯಾತನೆಂದು ಪೂರ್ಣ |
ಶಾತಕುಂಭ ಪುಂಖದಸ್ತ್ರ | ವ್ರಾತವೆಸೆದನಾಗ ||
ನೀತಿವಂತ ನೀನು ಪೃಥೆಯ | ಜಾತನಾಗಬಹುದೊ |
ಆತುಕೊಂಬದೆನುತ ರವಿಜ | ನೂತನಂಬುಗರೆದ || ೩೪೩ ||

ಎಲವೊ ಸೂತತನುಜ ನಿನ್ನ | ಹುಲು ಕಣಾಳಿ ಮುಂದೆ |
ನಿಲಲರಿಯದೆನುತ್ತಲಾಗ | ಲುಲಿವ ಶರಗಳುಗಿದ |
ಕಲಿಗಳೊಳಗೆ ನೀನೆ ಧೂರ್ತ | ಬಲಿದ ವೀರನಹುದೊ |
ನೆಲೆಯ ನೋಳ್ಪೆನೆನುತ ಕರ್ಣ | ಕಲಿಕಿರೀಟಿಗೆಸೆದ || ೩೪೪ ||

ವಾರ್ಧಕ

ಈ ಪರಿಯೊಳಾ ರವಿಜಫಲುಗುಣರ್ ಕದನದಾ |
ಳಾಪದೆಂದೆಚ್ಚಾಡಿದರ್ ಬಳಿಕ ನರನು ಪ್ರ |
ತಾಪದಿಂ ತೆಗೆದೆಸಲ್ ಕರ್ಣನ ರಥಂ ಬುಗರಿಯಂತೆ ಧಿರ್ರನೆ ತಿರುಗಿತು ||
ತಾ ಪೋಗಲೊಂದು ಯೋಜನ ಪಿಂತೆ ಕಂಡಿನಜ |
ಕೋಪದಿ ಕನಲ್ದೆಚ್ಚನಾತನ ವರೂಥಮಂ |
ಮೀ ಪರಂತಪೆಯ ಮೇಲ್ ಪತ್ತು ಬಿಲ್ಲಂತರಂ ಪಿಂತೆ ಸರಿದುದು ಘರ್ರನೆ || ೩೪೫ ||

ಭಾಮಿನಿ

ಪೂತು ಮಝರೇ ಕರ್ಣ ಜಗವಿ |
ಖ್ಯಾತ ಧಣು ಧಣು ಸಮರದೊಳು ಸ |
ತ್ತ್ವಾತಿಶಯನಹೆ ಧಿರುರೆ ಮಝ ಬಿಲ್ಲಾಳು ನೀನೆನುತ ||
ಯಾತುಧಾನರ ವೈರಿ ಪೊಗಳಿದ |
ಮಾತ ಕೇಳುತ ಪಾರ್ಥ ಮನದಲಿ |
ಕಾತರಿಸಿ ಧನುವಿಳುಹಿ ದುಗುಡದೊಳಿರಲು ಹರಿ ನುಡಿದ || ೩೪೬ ||

ರಾಗ ರೇಗುಪ್ತಿ ಆದಿತಾಳ

ಏನು ಚಿಂತೆ ಬಂತು ಪಾರ್ಥ | ಎನ್ನೊಳೀಗ ಪೇಳು ||
ಮಾನಭಂಗವನ್ನು ಗೆಯ್ದ | ರಾರು ನಿನಗಿಂದಿನೊಳು || ೩೪೭ ||

ಮುಂದೆ ಕರ್ಣನೆಂಬ ಧೂರ್ತ | ನಿಂದಿರ್ಪ ತಾನಿದಕೊ ||
ಕುಂದಿ ಧನುವನಿಳುಹಿ ಕುಳಿತು | ಕೊಂಡಿರ್ಪುದು ನೀನೇಕೊ || ೩೪೮ ||

ರಣದೊಳೆಮ್ಮಂಥವರಿಗಾದರು | ಕೋಪವೇರಿ ಬಹುದು ||
ಸೆಣಸುವಂಥ ವೀರ ನಿನಗೆ | ಸೇರುವುದೆ ಹೀಗಿಹುದು || ೩೪೯ ||

ಕಂದ

ಮುರಹರನೆಂದುದ ಕೇಳ್ದುಂ |
ತರಹರಿಸದೆ ಪುರುಹೂತಕುಮಾರನು ಭರದಿಂ ||
ದುರುತರ ಲೀಲಾನಾಟಕ |
ನರಚಾರಿತ್ರನೊಳಿಂತೆಂದ ವಿನೋದದೊಳುಂ || ೩೫೦ ||

ರಾಗ ಕೇದಾರಗೌಳ ಅಷ್ಟತಾಳ

ದೇವ ಲಾಲಿಪುದೀಗ ಬಿಡದೊಂದು ಯೋಜನ | ಕಾ ವಿರೋಧಿಯ ರಥವ ||
ನೀವೆ ನೋಡುವ ತೆರದಿಂದೆಚ್ಚು ರಿಪುವಿನ | ಡಾವರ ಬಿಡಿಸಿದೆನು  || ೩೫೧ ||

ಜೀವದಾಸೆಯ ಬಿಟ್ಟು ಪತ್ತು ಬಿಲ್ಲಂತರ | ಕೀ ವರೂಥವನು ಮತ್ತಾ |
ಧೀವರಾತ್ಮಜನೆಚ್ಚಡಾತನನತಿ ತೋಷ | ಭಾವದಿ ಪೊಗಳುವಿರಿ  || ೩೫೨ ||

ಎನ್ನಯ ಭುಜಬಲದೊಳಗೇನು ಕುಂದುಗ | ಳನ್ನು ಕಂಡಿರಿ ನೀವಿಂದು ||
ಕುನ್ನಿ ರಾಧೇಯನ ವಿಕ್ರಮದಾಟೋಪ | ದುನ್ನತಿಕೆಯು ಹೆಚ್ಚೇನು || ೩೫೩ ||

ಎನ್ನುವುದೇನು ನಾನೇಸು ಗೆಯ್ದರು ಕಷ್ಟ | ವನ್ನು ನಿರರ್ಥವಲ್ಲಾ |
ಘನ್ನಘಾತಕದ ಪ್ರಾರಬ್ಧಾನುವಶವಲ್ಲ | ದಿನ್ನು ಪೇಳುವುದಾರಿಗೆ || ೩೫೪ ||

ವಾರ್ಧಕ

ಆ ಕಿರೀಟಿಯು ನುಡಿದುದಂ ಕೇಳ್ದು ನಗುತ ಕರು |
ಣಾಕರಂ ಪೇಳ್ದನೆಲೆ ಮರುಳೆ ಕೌಂತೇಯ ಕೇ |
ಳೀ ಕಮಲಜಾಂಡಮಂ ಪೊತ್ತಿರ್ಪೆನೆನ್ನ ಸಹಿತೀದೇವದತ್ತ ಸಹಿತ ||
ಈ ಕಪೀಶ್ವರ ಸಹಿತಮೀ ಚಾಪ ನೀ ಸಹಿತ |
ಮೀ ಕಠಿನ ರಥಮೆಸೆವರೇಸು ಸತ್ತ್ವಂಗಳುಂ |
ಬೇಕವನ ಹುಲುರಥವನೆಚ್ಚಡೇನಾಯ್ತು ರವಿಜಾತಗೆಣೆಗಾಣೆನೆಂದ || ೩೫೫ ||

ಕಂದ

ಚಿತ್ತದ ದುಮ್ಮಾನವ ಬಿಡು |
ಮತ್ತೆ ಶರಾಸನಮಂ ಝೇಗೆಯ್ದತಿ ಭರದಿಂ ||
ದತ್ತ ರಣಾಗ್ರದಿ ರಿಪುವಿನ |
ಕತ್ತರಿಸೆನೆ ಕಲಿ ಪಾರ್ಥಂ ಬಳಿಕನುವಾದಂ || ೩೫೬ ||

ರಾಗ ಭೈರವಿ ಅಷ್ಟತಾಳ

ಎಲವೊ ರಾಧೇಯ ಕೇಳು | ಉಬ್ಬದಿರಿನ್ನು | ತಿಳಿವೆ ನೀನಂದಿನೊಳು ||
ಹುಲು ಖೇಚರನಲಿ ಜೀವಿಸಿದಂದ ಮರೆತಿಂದು | ಕಲಿತನದೋರುವೆಯ  || ೩೫೭ ||

ಸುರತರುಣಿಯಲಿ ನೀನು | ಶಾಪವ ಕೊಂಡು | ದರಿತಿಹೆ ಕೇಳ್ದು ನಾನು ||
ಬರಿದೇಕೆ ಗಳಹುವೆ ಧುರಧೀರನಾದರೆ | ಪರಿಕಿಸೆಂದೆಚ್ಚನಾಗ || ೩೫೮ ||

ರಾಗ ಪಂಚಾಗತಿ ಮಟ್ಟೆತಾಳ

ಜನಪ ಕೇಳು ರೋಷದಿಂದ | ಕನಲುತಿಂದ್ರಜಾತ ತನ್ನ |
ಧನುವ ಝೇಂಕರಿಸುತ ರವಿಜ | ನನು ಪಚಾರಿಸಿ ||
ಧನುವ ಝೇಂಕರಿಸುತ ರವಿಜ | ನನು ಪಚಾರಿಸುತ್ತಲಾಗ |
ಘನ ಶರಂಗಳಿಂದಲವನ | ತನುವ ಮುಸುಕಿದ  || ೩೫೯ ||

ಎಚ್ಚ ಕಣೆಗಳನ್ನು ನಡುವೆ | ಕೊಚ್ಚಿ ಪುಡಿಯ ಮಾಡುತೌಡು |
ಗಚ್ಚಿ ಪಲ್ಲಮೊರೆದು ಬಳಿಕ | ಲಚ್ಚ ಸಾಣೆಯ |
ಕಚ್ಚಿ ಪಲ್ಲಮೊರೆದು ಬಳಿಕ | ಲಚ್ಚ ಸಾಣೆಯಲಗಿನಿಂದ |
ಮುಚ್ಚಿದನು ಕಿರೀಟಿಯನ್ನು | ಮೆಚ್ಚಲಮರರು || ೩೬೦ ||

ವಾರ್ಧಕ

ಹರಿಗೆ ಪನ್ನೆರಡು ರಥಹರಿಗಳ್ಗೆ ಪದಿನೆಂಟು |
ನರನಿಗಯ್ವತ್ತು ಪಳವಿಗೆ ಹನುಮಗಿಪ್ಪತ್ತು |
ವರರಥಾಂಗಗಳಿಗಯ್ದಯ್ದು ಶರವೆಚ್ಚು ಕಲಿ ರಾಧೇಯನುರೆ ಗರ್ಜಿಸೀ |
ಮರಳೆಲ್ಲವರ್ಗೆನಲುವತ್ತು ಬಾಣದೊಳೆರ್ಚು |
ಭರದೊಳರ್ಜುನನ ನೂರಂಬಿನಿಂ ಮುಸುಕಲ್ಕೆ |
ತರಹರಿಸಿ ಪಾರ್ಥ ಮೂರ್ಛಿತನಾದನವರೆಲ್ಲರಲ್ಲಲ್ಲಿ ಕಡು ನೊಂದರು || ೩೬೧ ||

ಭಾಮಿನಿ

ಕೇಳು ಧೃತರಾಷ್ಟ್ರಾವನಿಪ ನಿ |
ನ್ನಾಳು ರಣದೊಳು ವಿಜಯಲಕ್ಷ್ಮಿಯು |
ತೋಳತೆಕ್ಕೆಯೊಳಿರ್ದಳೊಂದರೆನಿಮಿಷಮಾತ್ರದಲಿ ||
ಪೇಳಲೇನದ ಬಳಿಕ ಮೂರ್ಛೆಯೊ |
ಳಾಳಿದರ್ಜುನನೆದ್ದು ಖತಿಯನು |
ತಾಳಿದುರು ಕಾರ್ಮುಕವ ಧರಿಸುತ ಕನಲುತಿದಿರಾದ || ೩೬೨ ||

ರಾಗ ಪಂತುವರಾಳಿ ಅಷ್ಟತಾಳ

ಪೂತು ಮಝರೆ ಧೀರನಹುದೊ | ಸೂತಸಂಭವ ||
ಯಾತು ರಣದೊಳೊಮ್ಮೆ ತನ್ನ | ಜಯಿಸಿದಂದವ ||
ರೀತಿಯಿಂದ ತೋರೆನುತ್ತ ಶರವ ಮುಸುಕಲು ||
ಖಾತಿಯಿಂದ ತರಿಯುತೆಂದ | ಕರ್ಣ ನರನೊಳು || ೩೬೩ ||

ಇನ್ನು ನೋಳ್ಪುದೇನು ಪಿಂತೆ | ಕಂಡ ಬಗೆಯನು |
ತನ್ನ ಬಲುಹನರಿತು ಬಪ್ಪು | ದೇಕೆ ನೋಡಿನ್ನು ||
ಎನ್ನುತೆಚ್ಚನಧಿಕ ಮಾರ್ಗ | ಣಗಳ ಪಾರ್ಥನು |
ನಿರ್ಣಯಿಸಿ ಕನಲುತೆಸೆದ | ಮಸೆಯುವಲಗನು || ೩೬೪ ||

ವಾರ್ಧಕ

ಸಾರಥಿಗೆ ಪದಿನಯ್ದು ತೇಜಿಗಳಿಗಿಪ್ಪತ್ತು |
ವೀರಕರ್ಣಗೆ ನೂರು ಧ್ವಜದ ಮೇಲರುವತ್ತು |
ಚಾರು ರಥಚಕ್ರಗಳಿಗೆಂಟೆಂಟು ಕೋಲ್ಗಳೆಚ್ಚಾರ್ದವಂ ಬೊಬ್ಬಿರಿದನು ||
ಮೀರಿ ಪುನರಪಿ ಪತ್ತು ಶರದಿಂದವರ್ಗಳಂ |
ಗಾರುಗೆಡಿಸಿದು ಮತ್ತೆ ತೊಂಭತ್ತು ಮಾರ್ಗಣದೊ |
ಳಾ ರವಿಜನಂ ಮುಸುಕೆ ನಿರ್ವಹಿಸಲರಿಯದಾತಂ ಕೂಡೆ ಮೆಯ್ ಮರೆದನು || ೩೬೫ ||

ಭಾಮಿನಿ

ರವಿಜ ಮೂರ್ಛಿತನಾಗಲಾ ಕೌ |
ರವನ ಬಲ ಕಳವಳಿಸೆ ಸಮರದ |
ತವಕಿಗಳು ಗುರುಜ ಕೃಪ ಮುಖ್ಯರು ಹರಿಬಕಯ್ತಂದು ||
ಬವರದೊಳು ಮೊಗದಿರುಹಲನ್ನೆಗ |
ರವಿಕುಮಾರಕನೆದ್ದು ಮಿಗೆ ತ |
ನ್ನವರನೀಕ್ಷಿಸಿ ಬಳಿಕ ತಾನಿದಿರಾದನಾಹವಕೆ || ೩೬೬ ||

ರಾಗ ಶಂಕರಾಭರಣ ಏಕತಾಳ

ನಿಲ್ಲು ನಿಲ್ಲೊ ರಣಕೆ ನಿನ್ನ | ಮಲ್ಲತನವ ನಿಲಿಸುತೀಗ |
ಹಲ್ಲ ಮುರಿವೆನೆನುತ ಶರವ | ಚೆಲ್ಲೆ ರವಿಜನು || ೩೬೭ ||

ತರಿಯೆ ನರನ ನೋಡುತೆಸೆದ | ಗಿರಿಯುರಗ ಮೇಘ ತಿಮಿರ |
ಮರುತ ಗರುಡ ವಹ್ನಿ ಶರವ | ಭರಿತ ಖತಿಯೊಳು || ೩೬೮ ||

ಖಂಡಿಸಲ್ಕೆ ಕರ್ಣ ಖಾತಿ | ಗೊಂಡು ಸಕಲ ಮಂತ್ರಶರವ |
ಕಂಡು ಕವಿಸೆ ತರಿಯೆ ಸುರರು | ಕಂಡು ಮೆಚ್ಚಲು || ೩೬೯ ||

ಭಾಮಿನಿ

ಅಂಧನೃಪ ಕೇಳಿಂತು ಸಮರದಿ |
ನಿಂದು ಕಾದಿದರಮಮ ತ್ರಿಭುವನ |
ಕಂದಿಹೋಯ್ತವರೆಚ್ಚ ದಿವ್ಯಾಸ್ತ್ರಗಳ  ಹೊಯ್ಲಿನಲಿ ||
ಮುಂದೆ ಲಾಲಿಸು ಪಾಂಡುತನುಜಗೆ |
ಬಂದ ಹರಿಬವನೇನನುಸಿರುವೆ ||
ನಂದು ಭುಜಗಾಸ್ತ್ರವನು ಕೈಗೊಂಡುಲಿದನಾ ಕರ್ಣ || ೩೭೦ ||

ರಾಗ ಮಾರವಿ ಏಕತಾಳ

ಇಂತೀ ಪರಿಯಲಿ ಕರ್ಣನು ರೋಷವ | ನಾಂತತಿ ಸಾಹಸದಿ ||
ಸಂತಸದಲಿ ಭುಜಗಾಸ್ತ್ರವ ತೆಗೆದು ಮ | ಹಾಂತ ಪರಾಕ್ರಮದಿ || ೩೭೧ ||

ಮುಗಿಲೊಳಗಿಹ ರವಿಯಂದದಿ ಫಣಿಶರ | ಝಗಝಗಿಸುತ ಪೊಳೆಯೆ ||
ಉಗುಳುವ ವಿಷದುರಿಗಂಬರದೊಳಗಿಹ | ಖಗಸಂತತಿಯಳಿಯೆ || ೩೭೨ ||

ಉರಗಮಹಾಸ್ತ್ರವ ತೆಗೆಯಲು ಕಾಣುತ | ಕುರುಪತಿ ಹರುಷದೊಳು ||
ಅರಿಗಳ ಜಯಮೀ ಶರದೊಳಗೆನ್ನುತ | ಲಿರಲತಿ ಹರುಷದೊಳು || ೩೭೩ ||

ಅತ್ತಲು ಪಾಂಡವಸೈನ್ಯದಿ ಭೀತಿಯು | ಹತ್ತಿತು ಶರದುರಿಗೆ ||
ಚಿತ್ತದಿ ಭಯಗೊಂಡಾ ಧರ್ಮಜ ತಲೆ | ಗುತ್ತಿದನಾ ಘಳಿಗೆ || ೩೭೪ ||

ಮರುತಜ ಸಾತ್ಯಕಿ ನಕುಲಾದಿಗಳಂ | ದುರುತರ ಭೀತಿಯಲಿ |
ಇರುತಿರಲಾ ಕ್ಷಣ ಪೂಡಿದನಾ ಮಹ | ಶರವನು ತಿರುವಿನಲಿ  || ೩೭೫ ||

ಆಡಂಬರದೊಳಗಾ ಬಾಣದ ಗುರಿ | ನೋಡಿ ನರನ ಗಳಕೆ |
ಪೂಡುತ ಶಲ್ಯನ ಕಂಡರ್ಕಜ ಮಾ | ತಾಡಿದನಗ್ಗಳಿಕೆ || ೩೭೬ ||

ಭಾಮಿನಿ

ಏನು ಸಾರಥಿ ಸರಳು ಪಾಂಡವ |
ಸೇನೆಯನು ಗೆಲಲಹುದೆ ಪಾರ್ಥನ |
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಬಹುದೆ ||
ಆನಲಮ್ಮುವರುಂಟೆ ನಿನಗಿದು |  ಸಾನುರಾಗವೆ ಹೇಳೆನಲು ರವಿ |
ಸೂನುವಿನ ಮೊಗ ನೋಡಿ ಮಾದ್ರಾಧೀಶನಿಂತೆಂದ || ೩೭೭ ||

ರಾಗ ಕೇದಾರಗೌಳ ಅಷ್ಟತಾಳ

ಎಲೆ ಭಾನುಜಾತ ಕೇಳಸ್ತ್ರದ ನೆಲೆಯನು | ತಿಳಿಯದೆ ನೀ ಹೂಡಿದೆ ||
ನಳಿನಾಕ್ಷನಾತನ ರಥದೊಳಗಿರೆ ನಿನ್ನ | ಗೆಲುವರೆ ಬಿಡುವನೇನೈ || ೩೭೮ ||

ಕೊರಳಿಗೆ ಹಿಡಿದರೆ ಮಕುಟಕೆ ತಾಗುವು | ದುರಕಾಗಿ ಬೆಸಸಿದರೆ ||
ಶಿರವ ಕತ್ತರಿಸುವುದಿದು ಸಿದ್ಧ ಬೇಗದಿ | ಮರಳಿ ನೀ ತೊಡು ಎಂದನು || ೩೭೯ ||

ಭಾಮಿನಿ

ಒಂದು ಶರಸಂಧಾನ ನಾಲಿಗೆ  |
ಯೊಂದು ನಮ್ಮಲಿ ಕುಟಿಲವಿದ್ಯೆಯ |
ನೆಂದು ಕಂಡೈ ಶಲ್ಯ ನಾವಡಿಯಿಡುವ ಧರ್ಮದಲಿ ||
ಇಂದು ಹೂಡಿದ ಸರಳ ನಿಳುಹುವು |
ದಂದವೇ ನೀನರಿಯೆ ಹೊರಸಾ |
ರೆಂದು ಖಾತಿಯೊಳಂಬನೆಸೆದನು ಕರ್ಣನಾ ಕ್ಷಣದಿ || ೩೮೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಚ್ಚ ಭುಜಗಾಸ್ತ್ರವದು ಬಾಯೊಳ | ಗಚ್ಚ ವಿಷ ಕಾರುತ್ತ ಜಗವನು |
ಬೆಚ್ಚಿಸುತ ಪಾರ್ಥನ ಸಮೀಪಕೆ | ಚಚ್ಚರದಲಿ || ೩೮೧ ||

ಬರುವ ವೇಳ್ಯದಿ ಗಗನಮಂಡಲ | ನರನ ರಥ ಸಲೆ ವಾಜಿ ಮತ್ತಾ |
ಧುರಧುರಂಧರರಸುರ ರೂಪಿಲಿ | ಪರಿಕಿಸಿದರು || ೩೮೨ ||

ಕಬ್ಬೊಗೆಯ ಸೂಸುತ್ತ ರೋಷದೊ | ಳಬ್ಬರಿಸುತಾ ಕ್ಷಣದಿ ಪಾರ್ಥನ |
ಕೊಬ್ಬ ಮುರಿವೆನೆನುತ್ತಲಯ್ದಿತು | ಬೊಬ್ಬೆಯಿಂದ || ೩೮೩ ||

ವಾರ್ಧಕ

ತರಣಿಸುತನೆಸೆದಂಬು ವಿಷವುಗುಳಿ ಬರೆ ರವಕೆ |
ನೆರೆ ಚತುರ್ದಶ ಭುವನ ಭಯಗೊಳ್ಳಲುರಿಮಸಗಿ |
ಬರೆ ಪಾಂಡವರ್ ಭೀತಿಯಿಂದ ಹರಿಯಂ ನೆನಸೆ ಕೌರವನ ಬಲಜಲಧಿಯು ||
ಹರುಷದಿಂದುಕ್ಕುತಿರಲಾ ಶರಂ ಮುಟ್ಟವಿಸೆ |
ಧರೆಯೊಳಯ್ದಂಗುಲವ ತೇರ ತಗ್ಗಿಸೆ ಹರಿಯು |
ನರನ ಮುಕುಟವ ಕಚ್ಚಿಕೊಂಡಡರಲಾ ನಭಕೆ ಮೂಜಗಂ ಬೆರಗಾಗಲು || ೩೮೪ ||

ರಾಗ ಭೈರವಿ ಏಕತಾಳ

ಒರೆಯುವುದೇನಾ ಬಗೆಗೆ | ಶ್ರೀ | ಹರಿಯನು ನಂಬಿದವರಿಗೆ ||
ಬರುವುದೆ ಮಹದಾಪತ್ತು | ಪರಿ | ಹರ ಮಾಡನೆ ತಾ ಮೃತ್ಯು || ೩೮೫ ||

ಹತ್ತಿರೆ ಬರುವಾಸ್ತ್ರವನು | ಕಾ | ಣುತ್ತಲೆ ಮಧುಸೂದನನು ||
ಒತ್ತಿದನಾ ಕ್ಷಣ ರಥವ | ತಗ್ಗೆ | ಪೃಥ್ವಿಯು ಐದಂಗುಲವ || ೩೮೬ ||

ಬರಸಿಡಿಲಂದದೊಳಾಗ | ಬಂ | ದುರಗಾಸ್ತ್ರವು ತಾ ಬೇಗ ||
ನರನ ಮುಕುಟವನು ಕೊಂಡು | ನಭ | ಕೆರಗಿತು ಪೌರುಷಗೊಂಡು || ೩೮೭ ||

ಕೊಂಡಾ ಮುಕುಟವನಾಗ | ರವಿ | ಮಂಡಲಕಯ್ದುತ ಬೇಗ |
ಕಂಡಿತು ಶಿರವಲ್ಲೆಂದು | ತಾಪ | ಗೊಂಡತಿಮನದೊಳಗಂದು || ೩೮೮ ||

ಆರ್ಯಾ ಏಕತಾಳ

ಪಾರ್ಥನ ಶಿರವದು ತಪ್ಪಲು ಕಂಡು ನಿ | ರರ್ಥಕವಾಯ್ತೆನುತಾ ಶರವು ||
ಸ್ವಾರ್ಥದಿ ಪೋಗಿಯೆ ಕರ್ಣನೊಳೆಂದುದು | ವ್ಯರ್ಥವಿಚಾರದ ಮನದರಿವು || ೩೮೯ ||

ರಾಗ ಬಿಲಹರಿ ಏಕತಾಳ

ಆಯ ಕೆಟ್ಟಿತು ರಾ | ಧೇಯ ಲಾಲಿಸು ಕೌಂ | ತೇಯ ತಪ್ಪಿದ ಮೋಸ | ವಾಯಿತೇನೆಂಬೆ ||
ಪ್ರೀಯದೊಳೊಮ್ಮೆ ವ | ಜ್ರಾಯುಧಸುತನಲ್ಲಿ | ನೀಯೆನ್ನ ಕಳುಹಲು | ನೋಯಿಸಿಬಿಡುವೆನು || ೩೯೦ ||

ಎನಲು ನೋಡುತ ಕರ್ಣ | ಮನದೊಳಚ್ಚರಿಗೊಂಡು | ವಿನಯದಿ ನೀನಾರೆಂ | ದೆನುತ ಕೇಳಿದರೆ  ||
ಅನಿಮಿಷರ ಉದ್ಯಾನ | ವನ ಸೇರಿಕೊಂಡಿರ್ದ | ಘನದಶ್ವಸೇನ ಸ | ರ್ಪನು ತಾನಂದಿನಲಿ ||೩೯೧||

ಪುರುಹೂತಸುತನದ | ನುರಿಸುವ ಸಮಯದೊ | ಳರೆಗಡಿದನು ತನ್ನಾ | ಸುರಭಾವದಿಂದ ||
ಅರಿಯದೆ ಬಳಿಕಾನು | ಧುರದೊಳಾತನ ಕೊಲ್ಲ | ಲುರುಪರಾಕ್ರಮಿ ನಿನ್ನೊ | ಳಿರುತಿರ್ದೆನೆಂದ ||೩೯೨||

ಭಾಮಿನಿ

ಕೇಳಿ ಕರ್ಣನು ಕನಲುತೆಲೆಲೆ ನಿ |
ವಾಳಿ ನಿನ್ನಯ ಬಲುಹಿನಿಂದಲಿ |
ಕಾಳಗದೊಳರಿವಧೆಯನೆಸಗುವನಲ್ಲ ಹೋಗೆನುತ ||
ಪೇಳಲಾ ನುಡಿಗೊಲಿದು ಶಲ್ಯನು |
ಕೀಳುಮಾಡದಿರಕಟ ಬಾಣವ |
ಮೇಳವಿಸಿ ನೀ ತೊಡುವುದೆನಲಾ ರವಿಜನಿಂತೆಂದ || ೩೯೩ ||

ರಾಗ ಮಾರವಿ ಏಕತಾಳ

ಬಿಡು ಬಿಡು ಮಾದ್ರಾಪತಿ ನೀನೆನ್ನೊಳು | ನುಡಿವುದಿದನುಚಿತವು |
ಬಿಡದೊಮ್ಮೆಗೆ ಬಿಟ್ಟಾಸ್ತ್ರವ ಮರಳಿದು | ತೊಡುವೆನೆ ಸಮರದೊಳು || ೩೯೪ ||

ಮುನ್ನಿನಾರಭ್ಯದೊಳಯ್ದಿದ ಶರ ಮಗು | ಳಿನ್ನು ಬಂದುದ ಕಾಣೆ ||
ತನ್ನಾಪತ್ತಿನಲೋಸುಗ ಬಂದೀ | ಗೆನ್ನ ಕಾಡುವುದೈಸೆ || ೩೯೫ ||

ಅಂಬರ ಕುಸಿದರು ತೊಟ್ಟ ಶರವ ತೊಡೆ | ನೆಂಬ ಬಿರುದು ತನಗೆ ||
ಹಂಬಲಿಸುವುದೇಕೆನುತಲೆ ಗರ್ಜಿಸು | ತಂಬನು ನೂಕಿಸಿದ || ೩೯೬ ||

ವಾರ್ಧಕ

ಇಂತು ನೂಕಿಸಲಾ ಶರಂ ಗರ್ಜಿಸುತ ತಾನೆ |
ಕುಂತೀಕುಮಾರನಂ ಕೊಲುವೆನೆಂದಯ್ತರಲು |
ಕಂತುಪಿತನಾಜ್ಞೆಯೊಳ್ ಬಾಣವಂ ಖಂಡಿಸಿದನಾ ಕ್ಷಣದೊಳಾ ಪಾರ್ಥನು ||
ಚಿಂತಿಸುತಲಿತ್ತ ಶಲ್ಯಂ ಬಿಟ್ಟು ಪೋಗುವ ದಿ |
ನಂ ತನಗೆ ಬಂತೆನುತಲಿನಜನಂ ಜರೆದೆಂದ |
ನಿಂತೆಲವೊ ಖೂಳ ಬೆಸನಂ ಬೇಡಿದಸ್ತ್ರವನು ಕಳೆದೆ ಪಾತಕಿಯೆನ್ನುತ || ೩೯೭ ||