ಕಂದ

ಜಲಜದಳಾಕ್ಷನ ನುಡಿಯಂ |
ಕಲಿ ಪಾರ್ಥನು ಕೇಳಿದು ಮತ್ತೆ ವಿನೋದದೊಳುಂ ||
ನಲಿದುರೆ ಹೆಕ್ಕಳಿಸುತ್ತಂ |
ಹಲವಂಗದಿ ತನ್ನನೆ ತಾ ಪೊಗಳಿದನಾಗಳ್ || ೨೪೪ ||

ರಾಗ ಭೈರವಿ ಅಷ್ಟತಾಳ

ಎಲವೊ ನೃಪಾಲ ಕೇಳು | ನೋಡೆನ್ನಂಥ | ಬಲವಂತರುಂಟೆ ಪೇಳು ||
ಛಲದಂಕನೀ ಮೂರು ಲೋಕದೊಳೆನ್ನ ಮುಂ | ದುಲಿಯುವ ಭಟನಾವನೈ  || ೨೪೫ ||

ಅರಿಯೆ ನೀನಂದಿನಲಿ | ದ್ರೌಪದಿಸ್ವಯಂ | ವರ ಗೆಲ್ದು ನಿಮಿಷದಲಿ ||
ಸುರರ ಖಾಂಡವವನ ದಹಿಸಿ ಶಂಕರನ ಮೇ | ಲೆರಗಿದ ಭಟನಾವನೈ || ೨೪೬ ||

ಅಂಗಿಯ ಖಳರ ಕೊಂದೆ | ಗೋಗ್ರಹಣದ | ಸಂಗರ ಗೆಲಿದು ಬಂದೆ ||
ಹಿಂಗದೆ ದ್ರೋಣ ಭೀಷ್ಮಾದ್ಯರ ತರಿದ ಉ | ತ್ತುಂಗವಿಕ್ರಮಿ ತಾನಲ್ಲೈ || ೨೪೭ ||

ವಾರ್ಧಕ

ಇಂದೀ ಮಹಾ ಕಾಳಗವ ಗೆಯ್ದವಂ ತಾನು |
ಮುಂದೀ ಕುರುಕ್ಷೇತ್ರದೊಳಗಿರ್ಪ ಸೇನೆಯಂ |
ಕೊಂದು ಕರ್ಣಾದಿಗಳ ಶಿರವ ಚೆಂಡಾಡಿದು ಮಹೀತಳವ ಕೈವಶದೊಳು ||
ತಂದುಕೊಳುವಾತ ತಾನಲ್ಲದಿನ್ನಿದರೊಳಾ |
ರಿಂದಪ್ಪುದೈ ತನ್ನ ಸರಿ ಸಮರ್ಥರುಗಳಾ |
ರೆಂದು ವೆಗ್ಗಳತನಂ ನುಡಿಯಲಾನೃಪತಿ ವೈರಾಗ್ಯದಿಂ ಹರಿಗೆಂದನು || ೨೪೮ ||

ರಾಗ ಗೌಳನೀಲಾಂಬರಿ ಏಕತಾಳ

ದಾನವಾರಿ ಮಾತ ಲಾಲಿಸೊ | ಸುಪ್ರೇಮದಿಂದ | ಲೀ ನರಂಗೆ ಮತಿಯ ಪಾಲಿಸೊ |
ತಾನು ಬೆರತರಿಂದಲಿವರಿಂಗೆ | ಈ ಪಾಟಿ ಬಹಳ | ಹಾನಿಯಾಯ್ತಿನ್ನಾದರವರಿಂಗೆ || ೨೪೯ ||

ಕ್ಷೇಮವಾಗುತಿರಲಿ ತೋಷದಿ | ನಾ ಪೋಗುತಿರ್ಪೆ | ನಾ ಮಹಾಂತಾರಣ್ಯವಾಸದಿ ||
ಭೂಮಿಯಲ್ಲಿ ಕಲಿಯು ಬಂದುದು | ಸಾಮೀಪ್ಯದೊಳಿ | ನ್ನೀ ಮಹೀಪತಿತ್ವ ನಿಂದುದು || ೨೫೦ ||

ಪಾರ್ಥ ಜಯಿಸಿ ತಂದ ದೊರೆತನ | ಭೀಮನಿಗಿತ್ತು | ಸ್ವಾರ್ಥದಿಂದ ಪೊರೆವುದಾತನ ||
ವ್ಯರ್ಥದಾ ಪ್ರಪಂಚವ ಬಿಟ್ಟು | ತವ ಧ್ಯಾನದಿ ಕೃ | ತಾರ್ಥನಪ್ಪೆ ಹರುಷವ ಪಟ್ಟು || ೨೫೧ ||

ಭಾಮಿನಿ

ತಿಣ್ಣಭುಜಬಲ ಪಾರ್ಥ ಕೇಳೈ |
ಸಣ್ಣವರು ಮಾದ್ರೀಕುಮಾರರು |
ಪೆಣ್ಣುಗಳೊಳತಿ ಪ್ರೌಢೆ ದ್ರೌಪದಿಯಿವರನೆಡೆಬಿಡದೆ ||
ಬಣ್ಣದಿಂದಲಿ ಸಲಹುತಿಹುದಿ |
ನ್ನೆಣ್ಣದಿರು ಕ್ಲೇಶಂಗಳೆನುತಲಿ |
ಕಣ್ಣನೀರಲಿ ಪೊರಟು ಭೂಪತಿ ನಡೆದನನುವಾಗಿ || ೨೫೨ ||

ವಾರ್ಧಕ

ನಡೆದ ನೃಪತಿಲಕನಂ ಕಂಡು ಮರುಗುತ್ತಲಾ |
ಮಡದಿ ಪೊರಮಟ್ಟಳಾ ಕೂಡೆ ಮಾದ್ರೀಸುತರು |
ತಡೆಯದಯ್ದಿದರು ಬಳಿಕುಳಿದ ಸೇನಾಪತಿಗಳಖಿಳ ಬಾಂಧವರು ಸಹಿತ ||
ಪೊಡವಿಪನ ಬಳಿಸಾರ್ದರದುಭುತವ ಕಾಣುತಂ |
ಕಡೆಯಾಯ್ತು ನಿನ್ನಭ್ಯುದಯಕೆಲೆ ದುರಾತ್ಮ ನೀ |
ನಡಿಗೆರಗಿ ಕರೆತಪ್ಪುದೆಂದೆನುತ ಮುರಹರ ಧನಂಜಯನ ಕಳುಹಿಸಿದನು || ೨೫೩ ||

ಕಂದ

ಬೀದಿಯೊಳಯ್ದಿ ನೃಪಾಲನ |
ಪಾದದೊಳೆರಗುತ್ತಳಲುತಲಾ ಕಲಿ ಪಾರ್ಥಂ ||
ಸೋದರನೆಂಬಭಿಮಾನದೊ |
ಳಾದರು ನೀ ಕೃಪೆಮಾಡಲು ಬೇಕೆನುತೆಂದಂ || ೨೫೪ ||

ರಾಗ ದೇಶಿ ಏಕತಾಳ

ತಪ್ಪುಗಳ ಪಾಲಿಸಬೇ | ಕಣ್ಣದೇವ | ಎನ |
ಗಪ್ಪಣೆಯನಿತ್ತು ಪೋಪು | ದಣ್ಣದೇವ ||
ಬೊಪ್ಪನಿಗೆ ಮಕ್ಕಳ ಮೇ | ಲಣ್ಣದೇವ | ಪಗೆ ತಾ |
ನಿಪ್ಪುದೆ ಕರುಣೆ ಮಾಳ್ಪು | ದಣ್ಣದೇವ  || ೨೫೫ ||

ತಂದೆಯವೋಲಿಷ್ಟು ದಿವಸ | ಅಣ್ಣ ದೇವ | ಸಲಹಿ |
ಇಂದು ಮುನಿದು ಪೋಪರೇನೈ | ಅಣ್ಣದೇವ ||
ಮಂದಮತಿ ರಾಧೇಯನ ನಾ | ನಣ್ಣದೇವ | ಕ್ಷಣದಿ |
ಕೊಂದುಬಿಡುವೆ ಬಾರೊ ದಯದೊ | ಳಣ್ಣದೇವ || ೨೫೬ ||

ಭಾಮಿನಿ

ಇನಿತು ಪಾರ್ಥನು ಮರುಗಿ ಪೇಳಲು |
ವನಿತೆ ಭೂಪನ ಚರಣಕೆರಗಿದು |
ಘನವಿಷಾದವ ತಾಳ್ದು ಮಿಗೆ ತಾ ಬೇಡಿಕೊಳಲಂದು ||
ಅನಘ ಕರುಣಾಜಲಧಿ ಕೃಷ್ಣನು |
ಜನಪನೆಡೆಗಯ್ತಂದು ಬಹುವಿಧ |
ವಿನಯದೊಳು ಸಂತವಿಸಿ ಮರಳಿಸಿ ತಂದನಾಲಯಕೆ || ೨೫೭ ||

ಕಂದ

ಬರಲಾ ನೃಪನಾಲಯಕಂ |
ಭರದಿ ಚತುರ್ಬಲ ಘೇಯೆಂದುದು ಸಂತಸದಿಂ ||
ಪರಮ ವಿನೋದದಿ ಪಾರ್ಥನ |
ಕರೆದು ಮಹೀಪತಿ ಬೋಳವಿಸುತಲಿಂತೆಂದಂ || ೨೫೮ ||

ರಾಗ ಕೇದಾರಗೌಳ ಝಂಪೆತಾಳ

ತಮ್ಮ ಫಲುಗುಣನೆ ನೀನು | ಕೇಳೀಗ | ಸುಮ್ಮನೇ ಕುಳಿತುದೇನು ||
ಒಮ್ಮೆಗಾ ಸೂತಸುತನ | ಕೊಂದಲ್ಲ | ದೆಮ್ಮ ಮನ ನಿಲದು ಜತನ || ೨೫೯ ||

ಮುಂದೇನು ಹದನ ಕಂಡೆ | ಪೇಳೆನ್ನ | ತಂದೆ ನೀ ಹರುಷಗೊಂಡೆ ||
ಕುಂದದೊರ್ವನೆ ಭೀಮನು | ಛಲವಿಡಿದು | ನಿಂದಿಹನು ನಿಸ್ಸೀಮನು || ೨೬೦ ||

ವಾರ್ಧಕ

ರಾಯನಿಂತೆನೆ ಪಾರ್ಥನೆದ್ದು ಭೂಭುಜರ ಸಮು |
ದಾಯದೊಳ್ ಗರ್ಜಿಸುತಲಿಂದಿನಾಹವದಿ ರಾ |
ಧೇಯನಂ ಸಂಹರಿಸಿ ಶಿರವ ಚೆಂಡಾಡದಿರೆ ತನ್ನಯ ಪ್ರತಿಜ್ಞೆಗಳನು ||
ಪ್ರೀಯದಿಂ ಕೇಳಿದೈ ವಿಪ್ರನ ದರಿದ್ರನ ನಿ |
ರಾಯುಧನ ಕೊಂದವನ ವಿಶ್ವಾಸಘಾತಕನ |
ಮಾಯಕಿಗಳುರು ಸ್ವಾಮಿ ದ್ರೋಹಿಗಳ ಗತಿಯು ತನಗಹುದೆಂದು ಬೊಬ್ಬಿರಿದನು || ೨೬೧ ||

ಭಾಮಿನಿ

ಕೇಳಿ ನೃಪ ಹಿಗ್ಗಿದನು ಸೋದರ |
ನಾಳುತನಕುರೆ ಮೆಚ್ಚಿ ಕಪ್ಪುರ |
ವೀಳೆಯವ ತರಿಸಿತ್ತು ಕರ್ಣನ ಕೊಂದು ಬಿಸುಡೆನುತ ||
ಬೋಳವಿಸಿ ಕಳುಹಲ್ಕೆ ಪಾರ್ಥನು |
ಕಾಳಗಕೆ ಬಲು ರಭಸವೆಸಗಿದು |
ಘೀಳಿಡುವ ವಾದ್ಯದ ನಿನಾದದಿ ಪೊರಟನಾಲಯವ || ೨೬೨ ||

ಕಂದ

ಕುದುರೆಯ ಚಪ್ಪರಿಸುತ್ತಂ |
ಮದನನ ಪಿತ ರಥಮಂ ಸನ್ನಹಿಸಲ್ಕಾಗಂ ||
ಕದನವಿಶಾರದ ರಿಪುಕುಲ |
ಮದಗಜಕಂಠೀರವನೇರಿದು ನಡೆತಂದಂ || ೨೬೩ ||

ಆರ್ಯಾ ಏಕತಾಳ

ಕೂಡೆ ಮಹಾರಥರಥಿರಥ ನಾಯಕ | ವಾಡಿಗಳ ನಿಕಾಯದೊಳಾಗಂ ||
ರೂಢಿಪ  ತಾನೇ ಬಂದನು ನಲಿನಲಿ | ದಾಡುತ ಕೊಳುಗುಳಕತಿಬೇಗಂ || ೨೬೪ ||

ರಾಗ ಭೈರವಿ ಮಟ್ಟೆತಾಳ

ಅನಕ ಭೀಮಸೇನನಿತ್ತ | ಕನಲಿ ಧುರದೊಳು ||
ಘನ ಚತುರ್ಬಲವನು ತರಿದು | ತೊನೆದು ಭರದೊಳು || ೨೬೫ ||

ಕೊಂದು ರಿಪುನೃಪಾಲನೆಡೆಗೆ | ಹೊಂದಿ ಗಜರಲು ||
ಬಂದು ಕ್ಷಣದೊಳಾತನನುಜ | ರಂದು ತರುಬಲು || ೨೬೬ ||

ಧಿಮ್ಮನೆಲ್ಲ ಸದೆದು ನೃಪನ | ತಮ್ಮದಿರುಗಳ ||
ಘಮ್ಮನೆ ಗೋಳಿಡಲು ಬಡೆದ | ನೊಮ್ಮೆರಿಪುಗಳ || ೨೬೭ ||

ಭಾಮಿನಿ

ಕಣುಗಳಿಲ್ಲದ ನೃಪತಿ ಕೇಳೈ |
ರಣದೊಳಿಂದಿನವರೆಗೆ ತೀರಿದ |
ಅಣುಗರೀಲೆಕ್ಕದೊಳು ತೊಂಭತ್ತೆಂಟು ಜನವಾಯ್ತು ||
ಗಣಿತವಿದು ನೀ ನೋಡಿಕೋ ಮುಂ |
ದಣಕಿಸುತ ಕಲಿ ಭೀಮ ಪೊಕ್ಕನು |
ಕಣನ ಮಧ್ಯದಿ ಕಂಡು ದುಶ್ಯಾಸನನನುರೆ ಕರೆದ || ೨೬೮ ||

ರಾಗ ತುಜಾವಂತು ಏಕತಾಳ

ವೀರ ದುಶ್ಯಾಸನ | ಬಾರೊ ಬಾರೀಗ ||
ಭೂರಿ ವಿಕ್ರಮಗಳ | ತೋರೊ ತೋರೀಗ || ವೀರ    || ಪ ||

ಸುರನರರೊಳು ನಿನ್ನ | ಸರಿ ಭಟನಾರೊ ||
ಕುರು ಬಲದೊಳು ನೀನೆ | ಸರಸನು ಬಾರೊ  || ವೀರ || ೨೬೯ ||

ಕಲಿಗಳು ನಾವ್‌ರಣ | ದಲಿ ಜಗವರಿಯೆ ||
ಕಲಿತ ವಿದ್ಯೆಗಳನಾ | ಡಲಿಕದು ಮೆರೆಯೆ || ವೀರ || ೨೭೦ ||

ನೋಡಲಿ ಕಣನೊಳು | ಕೂಡಿದ ಜನರು ||
ಮೋಡಿಯೊಳಾವ್ ಮೆರೆ | ದಾಡುವ ಘನರು || ವೀರ || ೨೭೧ ||

ಕಂದ

ಭೀಮನ ನುಡಿಗಂ ರಣನಿ |
ಸ್ಸೀಮ ನೃಪಾನುಜನತಿ ಸಂತಸವೆತ್ತಾಗಂ ||
ತಾ ಮೇಲು ವಿಚಾರವ ಮರೆ |
ದಾ ಮಿಗೆ ಗರ್ಜಿಸುತಯ್ತಂದೆಚ್ಚನು ಭರದೊಳ್ || ೨೭೨ ||

ರಾಗ ಶಂಕರಾಭರಣ ಮಟ್ಟೆತಾಳ

ಧಿರುರೆ ಮರುತಜಾತನಿಂದು | ಧುರಕೆನುತ್ತ ಕರೆದೆ ತೋಷ |
ವೆರಸಿ ಬಂದೆ ನಿಲ್ಲೆನುತ್ತ | ಸರಳ ಸುರಿದನು |
ತರಿಯುತೆಂದ ಭಳಿರೆ ಮನಕೆ | ಭರಿತ ತೋಷವಾಯ್ತು ನಿನ್ನ |
ತರಿದು ಭಾಷೆಯನ್ನು ಮೆರೆಸಿ | ಧರೆಯ ಕೊಂಬೆನು  || ೨೭೩ ||

ಕಾಡಿನೊಳಗೆ ಪುಟ್ಟಿದವಗೆ | ನಾಡೊಳಾಸೆಯೇಕೆ ಬರಿದೆ |
ತೋಡಿ ತೆಗೆವೆ ಕರುಳನೆಂದ | ರೂಢಿಪಾನುಜ ||
ಮೂಢ ಕೇಳು ಸಭೆಯೊಳೆನ್ನ | ವ್ಯಾಢವೇಣಿ ಕೃಷ್ಣೆಯಳನು |
ನೋಡಲೆಲ್ಲ ಭಂಗಿಸಿದ್ದ | ಪಾಡ ತೋರೆಲಾ || ೨೭೪ ||

ಭೂತಳವ ಬಿಟ್ಟು ಕ್ಷಾತ್ರ | ರೀತಿಯುಳಿದು ವಿಪ್ರರಂತೆ |
ನೀತಿಗೊಂಡ ತಿರುಕರಲ್ಲೊ | ಮಾತಿದೇನಲಾ |
ನೀತಿವಂತ ಲಾಕ್ಷಾಭವನ | ರೀತಿ ಕೃತಕಿಯಿತ್ತು ವಿಷವ |
ಮೇತಯತ್ನಗೆಯಿಸಿದಧಮ | ಘಾತಿಸುವೆನು || ೨೭೫ ||

ಏರಿ ಮದದೊಳನುಜರುಗಳ | ಮಾರಿಗಿತ್ತೆ ನಿನ್ನ ಉದರ |
ಹೀರಿ ತೆಗೆವೆ ಸೋದರರನು | ಭಾರಿ ಛಲದಲಿ ||
ವೀರ ಕೇಳು ಅನುಜರುಗಳು | ಸಾರಿದಂತ ಠಾವತೋರ್ಪೆ |
ಭೂರಿ ಬಲುಹು ಇರಲು ತೋರು | ತೋರು ತನ್ನಲಿ || ೨೭೬ ||

ಆದಡೀಗ ನಿಲ್ಲೆನುತ್ತ | ಕ್ರೋಧದಿಂದ ಪತ್ತು ಶರದಿ |
ಭೇದಿಸಿದ ತೇಜಿ ಸಹಿತ | ಲಾ ಧುರಂಧರ ||
ಆ ಧರಿತ್ರಿಗುರುಳಿ ಭೀಮ | ಕ್ರೋಧನಾಗಿ ಮತ್ತೆ ಕುಹಕಿ |
ಸೋದರನ್ನ ಹೊಯ್ಯೆ ಎದ್ದು | ಕಾದುತಿದ್ದನು || ೨೭೭ ||

ರಾಗ ಪಂಚಾಗತಿ ಮಟ್ಟೆತಾಳ

ಕುರುನೃಪಾಲನನುಜನೆಚ್ಚ | ಸರಳತತಿಯ ಕಂಡು ಭೀಮ |
ನುರು ಶಿಲೀಮುಖಂಗಳಿಂದ | ಬರಿಯಗೆಯ್ದನು ||
ಮರಳಿ ಸ್ವರ್ಣಪುಂಖಯುಕ್ತ | ಶರಸಮೂಹದಿಂದಲವನ |
ವರರಥಾಶ್ವಸೂತನನ್ನು | ಭರದಿ ಮುಸುಕಿದ || ೨೭೮ ||

ಆ ಸಮೀರತನುಜನಸ್ತ್ರ | ದಾ ಸಮೂಹ ತರಿವುತಾ ದು |
ಶ್ಶಾಸನಾಂಕ ಮಗುಳೆ ಕನಲು | ತಾ ಸರಾಗದಿ ||
ಏಸು ಬಾಣ ಪೊಡೆದಡದನು | ಗಾಸಿ ಮಾಡಿ ಮರುತಸುತ ಶ |
ರಾಸನದೊಳೌಕಿ ಕಣೆಯ | ರಾಸಿಯುಗಿದನು || ೨೭೯ ||

ಭಾಮಿನಿ

ಎಚ್ಚ ಶರ ದುಶ್ಯಾಸನಾಧಮ |
ಕೊಚ್ಚಿ ಮುಳಿದು ಮಹಾ ಶರಂಗಳ |
ನೆಚ್ಚು ಭೀಮನ ಮುಸುಕಲಾ ಕ್ಷಣಕೀತ ಸಂಹರಿಸೆ ||
ಅಚ್ಚ ಪೊಸ ಮಾರ್ಗಣೆಯನೆಸೆಯಲು |
ಕಿಚ್ಚನೋಲಿವನಂತು ಸವರುತ |
ಹೆಚ್ಚಿತೀ ಪರಿ ಸಮರ ಬಳಿಕಾ ಮರುತಸುತ ನುಡಿದ || ೨೮೦ ||

ರಾಗ ಆಹೇರಿ ಝಂಪೆತಾಳ

ಭಳಿರೆ ದುಶ್ಯಾಸನಾಖ್ಯ | ನಿನ್ನೊಡನೆ | ಕೊಳಗುಳವದಾರಿಂಗೆ ಸೌಖ್ಯ || ಭಳಿರೆ  || ಪ ||

ಏಸು ದಿನ ಧನುವಿನ | ಭ್ಯಾಸಮಂ ಮಾಡಿದೆಯೊ |
ವಾಸಿ ಪಂಥಗಳೊಳ್ಳಿ | ತೀ ಸಮರದೊಳಗೆ ನಾ |
ವೀಸು ನೆರೆದಂತಾಯಿತು | ಪೌರುಷದ |
ಮೀಸಲರಿಯದೆ ಹೋಯಿತು | ಯುದ್ಧದ ವಿ |
ಲಾಸದೊಳು ಪಗೆಯಾಯಿತು  || ಭಳಿರೆ  || ೨೮೧ ||

ಎಲ್ಲರೆಸಗುವ ತೆರನಿ | ದಲ್ಲದೇ ಪೊಸಪರಿಗ |
ಳಿಲ್ಲಿ ತೋರಲುಬೇಕು | ನಿಲ್ಲದೀ ಕ್ಷಣ ನಾವು |
ಮಲ್ಲಯುದ್ಧದಿ ಕಾದುವ || ಚಾಪದೊಳ |
ಗಿಲ್ಲ ನೋಡು ವಿನೋದವ | ಬಾ ಬೇಗ |
ಬಲ್ಲ ತನಗಳ ನೋಡುವ  || ಭಳಿರೆ  || ೨೮೨ ||

ವಾರ್ಧಕ

ಕೇಳಂಧನೃಪ ನಿನ್ನ ಮಗನನೀ ತೆರದಿ ಕ |
ಟ್ಟಾಳು ಭೀಮಂ ಕರೆಯೆ ಕಂಡು ನಗುತಾ ಕ್ಷಣಕೆ |
ತೋಳಬಲ್ಪಿಂದವಂ ಸಮ್ಮತಂಬಡಲು ರಥದಿಂದೀರ್ವರಿಳಿದು ನಿಂದು |
ತಾಳಿದೊಸನಂ ತೆಗೆದು ಚಲ್ಲಣವ ಬಿಗಿದು ಕೆಂ |
ಧೂಳಿಯಂ ಮೆಯ್ಗೆ ಪೂಸಿದು ಭುಜವ ಚಪ್ಪರಿಸಿ |
ಕಾಳಗಕೆ ಸನ್ನದ್ಧರಾಗಿ  ಜಗಜಟ್ಟಿಗಳ್ ಮೆರೆದರಾನೇವೇಳ್ವೆನು || ೨೮೩ ||

ರಾಗ ಭೈರವಿ ತ್ರಿವುಡೆತಾಳ

ಬಂದರಾಗ | ಯುದ್ಧಕೆ | ನಿಂದರಾಗ      || ಪ ||

ಖಳನು ಜಾನುವನೊತ್ತಿ ಸಮ್ಮುಖ | ದೊಳಗೆ ನಿಂತು ವಿಡಾಯಿಯಲಿ ತಾ |
ತಿಳಿದ ಸಂಜ್ಞೆಯ ಗೆಯ್ದು ಕಾಲಿಂ | ದಿಳೆಯ ಘಟ್ಟಿಸಿ ಮತ್ತೆ ಪುಟನೆಗೆ |
ದುಳಿಯದಂತಿರೆ ಸೇರಿ ಪೌರುಷ | ದೊಳವನರಿತು ವಿಭಾಡಿಸುತ ಕೈ |
ಚಳಕವನು ತೋರುತ್ತ ತಿವಿತಿವಿ | ದುಳಿಚಿಕೊಂಡರು ಕೂಡೆ ಸಮರದಿ  || ಬಂದರಾಗ || ೨೮೪ ||

ಓರೆಕಣ್ಣಿನ ಕುಣಿವ ಮೀಸೆಯ | ಭೋರುಗುಟ್ಟುವ ನಾಸಿಕಂಗಳ |
ಭೂರಿ ಕಿಣಿ ಕಿಟಿಲೆಂಬ ಮುಷ್ಟಿಗ | ಳಾರುಭಟಿಸುವ ಬಾಯ ಗರ್ಜನೆ |
ಮೀರಿ ಹತ್ತಾ ಹತ್ತಿಯಿಂದಲಿ | ಸೇರಿಸುವ ತಿವಿಗಳಿಗೆ ಮಿಕ್ಕು ಕ |
ಠೋರ ಗಾಯದೊಳಿಳಿವ ರಕ್ತದ | ಧಾರೆಯಾಗಲು ಬಿಡದೆ ಸಮರದಿ || ಬಂದರಾಗ || ೨೮೫ ||

ಸೋತನಿವನಿಕೊ ನೋಡಿರೈನ | ಮ್ಮಾತ ಗೆಲಿದನು ಎಂಬರೀಚೆಯೊ |
ಳಾತ ಮುರಿದನು ಕಾಣಿರೈ ವಿ | ಖ್ಯಾತ ನಮ್ಮವ ಗೆದ್ದನೆಂಬುವ |
ರಾತುಕೊಂಡಾಚೆಯಲಿ ಬಿಡದೀ | ರೀತಿಯಲಿ ಬಲವೆರಡು ಪೊಗಳಲು |
ಪೂತು ಮಝರೇ ಭೀಮ ತಾನದು | ಭೂತ ದುಶ್ಯಾಸನನ ಕೆಡಹಿದ || ನೇನನೆಂಬೆ || ೨೮೬ ||

ಭಾಮಿನಿ

ಬಿದ್ದ ದುಶ್ಯಾಸನನ ನಿಮಿಷದಿ |
ಹೊದ್ದಿ ಧರೆಗಪ್ಪಳಿಸಿ ಕಾಲಿಂ |
ದೊದ್ದುತೆದೆಯಲಿ ಕುಳಿತು ಕರದಿಂದವನ ಶೋಣಿತವ ||
ಮೆದ್ದು ತುಟಿ ಚಪ್ಪರಿಸಿ ಬಿಡದುರೆ |
ಗುದ್ದಿ ಮಾಂಸವ ಬಗಿದು ಕರುಳೊಳ |
ಗಿದ್ದ ರಕುತವ ಸವಿದು ಢರ್ರನೆ ತೇಗಿದನು ಭೀಮ || ೨೮೭ ||

ವಾರ್ಧಕ

ತೀರಿತೇ ನಿನ್ನಾಟ ಸಭೆಯೊಳಗೆ ಮುನ್ನೆಮ್ಮ |
ಘೋರಿಸಿದ ಬಗೆ ಹೇಗೆ ಜೂಜಿನೊಳು ಗೆಲಿದು ಕಾಂ |
ತಾರಕಂ ಕಳುಹಿಸಿದ ಪರಿ ಹೇಗೆ ಪೋಪಾಗ ನಗುವ ಪರಿ ಹೇಗೆಂದನು ||
ನಾರಿಯಂ ಸೆಳೆದ ಬಗೆ ಹೇಗೆ ಸಭೆಯೊಳಗೆ ಭಂ |
ಗಾರಮಂ ಸುಲಿದ ಪರಿ ಹೇಗೆ ತನ್ನನು ಕಟ್ಟಿ |
ವಾರಿಗಂ ಹಾಕಿ ವಿಷವಿತ್ತಂದ  ಹೇಗದರ ತೋರೆಂದು ಗರ್ಜಿಸಿದನು || ೨೮೮ ||

ಕಂದ

ಮತ್ತೆಡೆಬಿಡದಾ ಖೂಳನ |
ನೆತ್ತರಮಂ ಮೊಗೆಮೊಗೆದು ವಿಲಾಸದೊಳಾಗಂ ||
ಚಿತ್ತದಿ ಕನಲಿದು ರಿಪುನೃಪ |
ರತ್ತಲು ನೋಡುತ ಕರೆದವರೊಡನಿಂತೆಂದಂ || ೨೮೯ ||

ರಾಗ ಪಂತುವರಾಳಿ ಅಷ್ಟತಾಳ

ಕೇಳ್ದಿರೆ ನೀವು ಸರ್ವರು ಬೇಗ | ಕೇಳ್ದಿರೆ   || ಪಲ್ಲವಿ ||

ಅಮ್ಮಮ್ಮ ಈ ಪಾಟಿ ಸವಿಗಾಣೆನೇಸು | ಕಮ್ಮಗಾಗಿಹುದು ಕೌರವನೆ ನೋಡೀಸು |
ತಮ್ಮನ ರಕುತವೆಂದಿನಿತು ಹೇಸದೆ ನೀ ಬಂ | ದೊಮ್ಮೆಸೇವಿಸದಡೆ ತೋರ್ಗತಿಲೇಸು |
ಸುಮ್ಮನಿರಬೇಡಿತ್ತ ಬಾ ಸುರ | ರೆಮ್ಮಿಕೊಂಡಿಹ ಸುಧೆಗೆ ಮಿಕ್ಕಹು |
ದುಮ್ಮಳಿಸದೀಗೆಂದು ಮಾತಿನ | ಸೊಮ್ಮನಾದರು ನೀ ಪರೀಕ್ಷಿಸು || ಕೇಳ್ದಿರೆ || ೨೯೦ ||

ಎಲೆ ಕರ್ಣ ನೀನತಿ ಸಹಸಿಯೈ ರಣದಿ | ಬಲಿದನಶ್ವತ್ಥಾಮನಿದಕೊ ಈ ಕ್ಷಣದಿ |
ಕೊಲುವೆನಲ್ಲೈ ನಿಮ್ಮ ಭೂಪಾಲನನುಜನ | ಛಲವಿದ್ದಡಯ್ತಂದು ಬಿಡಿಸಿರುಬ್ಬಣದಿ ||
ಕಲಹದಲಿ ಮಿಡುಕುಳ್ಳ ಕೃಪ ಸೌ | ಬಲರು ಮಾದ್ರಿಪ ಮುಖ್ಯ ಪಾರ್ಥಿವ |
ಕುಲದ ವೀರರು ನಿಮ್ಮ ನೆರವಿಯ | ಕಲಿಯ ಕೊಲುವೆನು ಬಿಡಿಸಿಕೊಳಿರೈ || ಕೇಳ್ದಿರೆ || ೨೯೧ ||

ನೋಡುವ ಮೇಲಣ ಸುಮನಸಾದಿಗಳು | ಗಾಢದೊಳಯ್ತಂದು ಬಿಡಿಸುವರುಗಳು |
ಹೇಡಿಗಳಂತೆ ನಿಂದಿರ್ಪರಲ್ಲದೆ ಕೈ | ಮಾಡರು ತಾವಿಂದಿನ ಸಮರದೊಳು ||
ಪಾಡಿನಲಿ ನೀವಾದರೆಮ್ಮಯ | ಕೂಡೆ ಸಮಸಮನಾಗಿ ಯುದ್ಧವ |
ಮಾಡಿ ದುಶ್ಯಾಸನನ ಹರಣಕೆ | ಕೇಡು ಬಾರದ ತೆರನನೀಕ್ಷಿಸಿ  || ಕೇಳ್ದಿರೆ || ೨೯೨ ||

ವಾರ್ಧಕ

ಎನ್ನುವ ಕಠೋರೋಕ್ತಿಗಾರು ಮಾತಾಡಿದರೆ |
ಕುನ್ನಿಗಳ್ ಬಿಡಿ ಸುಮ್ಮನೇತಕಾನೊರೆಯಬೇ |
ಕೆನ್ನವರ ಕಾಂಬೆನೆಂದಿತ್ತ ತಿರುಗಿದು ಪೇಳ್ದ ನೆಲೆ ಮುರಾಸುರಮರ್ದನ ||
ನಿನ್ನಯ ಸುದರ್ಶನವ ಬಿಟ್ಟೀ ಖಳಾಧಮನ |
ಮನ್ನಿಸುವುದೆನಲಾತ ಸುಮ್ಮನಿರೆ ಬಳಿಕ ನರ |
ನಂನೋಡಿ ನಗುತ ತವಗಾಂಡೀವಮಂ ತೆಗೆ ಶರಾಳಿಯಂ ಕಳುಪೆಂದನು || ೨೯೩ ||

ಭಾಮಿನಿ

ಗಂಡುಗಲಿ ನರನೀ ಪ್ರತಾಪದ |
ಚಂಡ ನುಡಿಯನು ಕೇಳುತಲೆ ಕೋ |
ದಂಡವನು ಝೇಗೆಯ್ದು ಶರಗಳ ಪೂಡುತಿರಲಾಗ ||
ಕಂಡನು ಮುರಾಂತಕನಿದೇನೈ |
ಪುಂಡುತನವೇ ಪಾರ್ಥ ಲೋಕದ |
ಭಂಡನಲ್ಲಾ ನೀನು ಮರುತಜನಾರು ನೋಡೆಂದ || ೨೯೪ ||

ಕಂದ

ಎನಲು ಧನಂಜಯಗಾ ಕ್ಷಣ |
ಘನ ದಿವ್ಯ ನಿರೀಕ್ಷೆಯ ನೀಡಲು ಮಾರುತಿಯಂ ||
ವಿನಯದೊಳೀಕ್ಷಿಸೆ ಪಂಚಾ |
ನನ ದುರ್ಧರರೂಪವ ಕಂಡಂಜಿದನಾಗಳ್ || ೨೯೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರ ಹರ ತ್ರಿಯಂಬಕನೆ ರಕ್ಷಿಸು | ಮರುತಸುತನೆಂದೇ ಮನಸ್ಸಿನ |
ಬರಡುತನದಲಿ ಚಾಪವೆತ್ತಿದೆ | ಧುರವ ನೆನೆದು || ೨೯೬ ||

ಮೋಸವಾದುದೆನುತ್ತ ನೆಗೆದ ಶ | ರಾಸನವನಿಳುಹಿದು ಧನಂಜಯ |
ನಾ ಸಮೀರಜನಿರವನೀಕ್ಷಿಸು | ತಾ ಸಮಯದಿ || ೨೯೭ ||

ಇತ್ತ ವಾಯುಕುಮಾರ ಹರುಷದಿ | ಮತ್ತಕಾಶಿನಿಯಳನು ಕರೆಯಲಿ |
ಕತ್ತ ದೂತರ ಕಳುಹೆ ಬಂದರು | ಮತ್ತೆ ಭರದಿ || ೨೯೮ ||

ಭಾಮಿನಿ

ರಾಯರರಸಿಯ ಬಳಿಗೆ ದೂತರು |
ಪ್ರೀಯದಲಿ ನಡೆತಂದು ತವಕದೊ |
ಳಾ ಯುವತಿಯಳ ಕಂಡು ಬಿನ್ನಹ ಮಾಡಿದರು ನಗುತ ||
ತಾಯೆ ಕೇಳೌ ರಣದಿ ವೀರ ಗ |
ದಾಯುಧನು ದುಶ್ಯಾಸನಾಧಮ |
ನಾಯುವನು ನೆರೆ ತೊಡೆದ ನೀ ದಯೆಗೆಯ್ಯಬೇಕೆನಲು || ೨೯೯ ||

ಕಂದ

ಚರರಾಡಿದುದಂ ಕೇಳಿದು |
ಸರಸಿಜಲೋಚನೆ ಚಿತ್ತದಿ ಸಂತಸವೆತ್ತುಂ ||
ಮೆರೆವ ಸಖೀಜನರೊಡನಂ |
ತೆರಳಿದಳು ವಿಲಾಸದೊಳಾ ಧುರಮಂಡಲಕಂ ||

ರಾಗ ಹಿಂದುಸ್ತಾನಿ ಅಷ್ಟತಾಳ

ಭೋರನಯ್ತಂದಳಾ ದ್ರೌಪದಿ | ಚೆಲ್ವ | ನಾರಿಯರ್ಗಡಣದಾಳಾಪದಿ || ಭೋರ  || ಪ ||

ದಂಡಿಗೆಯೊಳಗೇರಿ | ಕೊಂಡು ವಿಲಾಸದಿ |
ಹಿಂಡು ಸತಿಯರ್ ಪೊಗಳ್ವ ಘೋಷದಿ | ಮಹಾ | ತೋಷದಿ || ಭೋರ    || ೩೦೦ ||

ಮಾನಭಂಗವ ಗೆಯ್ದ | ದಾನವ ಮಡಿದನೆಂ |
ದಾನಂದದಲಿ ನಲಿದಾಡುತ್ತಮಾತ |  ನಾಡುತ್ತ || ಭೋರ || ೩೦೧ ||

ನೋಡುವ ವಿಟರೆದೆ | ಗೇಡಿಪ ಸ್ಮರನ ಸಿಂ |
ಗಾಡಿಯಲಿರುವ ವಯ್ಯಾರದಿ | ಸಖಿ ಸಂ | ಚಾರದಿ || ಭೋರ || ೩೦೨ ||

ವಾರ್ಧಕ

ಧುರದಿ ಮಡಿದುರೆ ಬಿದ್ದ ಹೆಣದ ಮಯ ನೆಣದ ಮಯ |
ಧರೆಗೆ ಮೆತ್ತಿರ್ದ ನಿಡುಗರುಳ ಮಯ ಕೊರಳಮಯ |
ದುರುದುರಿಸಿ ಪರಿವ ನೆತ್ತರದ ಮಯ ಶಿರದ ಮಯ ಕೇಶಪಾಶಗಳ ಮಯವು ||
ಕರಿಹಯಗಳುರುಳ್ವ ಕಡಿ ಖಂಡಮಯ ರುಂಡಮಯ |
ಮೊರೆದು ಝೇಂಕರಿಸುತಿಹ ಕಾಕಮಯ ಘೂಕಮಯ |
ಭರದಿಂದ ಮುತ್ತುವ ಪರೇತಮಯ ಭೂತಮಯದಿಂದ ಭೀಕರಮೆಸೆದುದು || ೩೦೩ ||

ಕಂದ

ಇಂತಾ ಸಮರವ ತುಳಿದುಂ |
ಕಾಂತಾಜನರೊಡನಾ ದ್ರೌಪದಿ ಪೋಗುತ್ತಂ ||
ತಾಂ ತವಕದಿ ಮಿಗೆ ಪ್ರಳಯಕೃ |
ತಾಂತನವೋಲಿಹ ಭೀಮನ ಕಂಡಂಜಿದಳಾಗಳ್ || ೩೦೪ ||

ಆರ್ಯಾ ಏಕತಾಳ

ಪವನಜನೋ ಮೇಣಿವ ಕಡೆಗಾಲದ |
ಶಿವನೋ ತಾನರಿಯೆನು ಎನುತಂ ||
ಯುವತಿಯು ಮನದೊಳು ಜವಗೆಡುತಿರೆ ಬಳಿ |
ಕವಳ ನಿರೀಕ್ಷಿಸಿ ನಗುತೆಂದಂ || ೩೦೫ ||

ರಾಗ ಭೈರವಿ ಝಂಪೆತಾಳ

ಬಾರೆ ಮೋಹನಾಕಾರೆ | ಬಾ ಮದನವಯ್ಯಾರೆ |
ಬಾರೆಲಗೆ ಶುಕವಾಣಿ | ಬಾ ನಾಗವೇಣಿ  || ೩೦೬ ||

ನಿನ್ನ ಮಾನವನಂದು | ನೀಗಿದಧಮನ ಕೊಂದು |
ಮನ್ನಿಸಿದೆ ಧುರದೊಳಗೆ | ಒರಗಿಸಿದೆನಿಳೆಗೆ  || ೩೦೭ ||

ನೋಡುವರೆ ಬಾ ಮುಂದೆ | ನೋಯುವುದೆ ಮನವಿಂದೆ |
ತೋಡಿರುವೆ ಕರುಳವನ | ತೋರ್ಪೆ ನಿನಗದನು  || ೩೦೮ ||

ಭಾಮಿನಿ

ಎನುತ ನಾರಿಯ ಕರೆದು ಹತ್ತಿರೆ |
ವಿನಯದಿಂ ಕುರುಳ್ಗಳನು ಬಿಡಿಸಿದು |
ಘನದ ತಿಳಿರಕುತವನು ಹಾಕಿದು ಬಾಚಿ ಮುಡಿಗಟ್ಟಿ ||
ದನುಜನಾ ಕರುಳ್ಗಳನು ತೆಗೆದಾ |
ವನಿತೆಯಳ ತುರುಬಿಂಗೆ ಸೂಡಿಸಿ |
ನೆನೆದ ಭಾಷೆಯು ತೀರಿತೇ ನಡೆ ಹೋಗು ಮನೆಗೆಂದ || ೩೦೯ ||

ಆರ್ಯಾ ಏಕತಾಳ

ನಳಿನದಳಾಕ್ಷಿಯ ಕಳುಹಿಸಿ ಭೀಮನು |
ಕಳನೊಳಗಾ ಪೆಣಮಂ ಬಿಸುಟುಂ ||
ತಿಳಿನೀರಿಂದಲಿ ಕಯ್ ಕಾಲ್ ಮೊಗವನು |
ತೊಳೆಯಲ್ ಕಾಣಿಸಿಕೊಂಡಧಟಂ || ೩೧೦ ||