ಭಾಮಿನಿ

ಎಂದ ಚರರನು ನೋಡಿ ನಗುತಾ |
ಮಂದಮತಿ ಕುರುರಾಯ ಸತ್ಕರ ||
ದಿಂದಲವರನು ಕಳುಹಿ ಕೂಡೆ ರಣಾಂಗಣಕ್ಕೊಲಿದು ||
ಮಂದಿ ತೇರು ಗಜಾಶ್ವ ರಥಿಕರ |
ಸಂದಣಿಯು ನೆರೆಯಲ್ಕೆ ಕಾಣುತ |
ಬಂದು ಹೊಕ್ಕನು ಭೀಮ ಕದಳಿಯ ವನದಿ ಕರಿಯಂತೆ || ೨೦೧ ||

ವಾರ್ಧಕ

ಧುರದೊಳಿದಿರಾಗಿರ್ದ ಕರಿಗಳಂ ಹರಿಗಳಂ |
ಭರದಿ ಮುಂದಯ್ತಹ ಪದಾತಿಗಳ ಯೂಥಗಳ |
ವರವರೂಥಂಗಳಂ ಕುಟ್ಟಿದಂ ಮೆಟ್ಟಿದಂ ಥಟ್ಟವಿಸಿ ಘಟ್ಟಿಸಿದನು ||
ಮರುತಸುತನಿಂತು ಕಲಿತನದಿಂದ  ಘನದಿಂದ |
ಅರಿಬಲೌಘವ ಕೊಲ್ಲುತಿರಲಿತ್ತ ನರನತ್ತ |
ಧರಣಿಪನ ಕಾಣುವತ್ಯುಗ್ರದಿಂ ಶೀಘ್ರದಿಂದಯ್ದಿದಂ ಪಾಳೆಯದೊಳು || ೨೦೨ ||

ಕಂದ

ಭರಿತಪಯೋಧಿಯ ತೆರದಿಂ |
ದಿರುತಿಹ ಪಾಳ್ಯವ ಕಂಡು ವರೂಥವ ನಿಳಿದುಂ ||
ಗರಹೊಡೆದಂತೀಕ್ಷಿಪ ಜನ |
ರಿರವಿಗೆ ಕಳವಳಿಸುತ ಹೊಕ್ಕ ನೃಪಾಲಯಮಂ || ೨೦೩ ||

ರಾಗ ಭೈರವಿ ಝಂಪೆತಾಳ

ಅವನಿಪತಿ ಕೇಳು ನಿ | ನ್ನವರವಸ್ಥೆಯನಿಂತು |
ಹವಣಿಸುವಡೆನಗಳವೆ | ಶಿವನಿಗರಿದಾಗ  || ೨೦೪ ||

ಬಂದು ಫಲುಗುಣ ಭರದಿ | ಮಂದಿರವ ಪೊಕ್ಕು ಗೋ |
ವಿಂದ ನರಳುವ ನೃಪನ | ಮುಂದೆ ನಿಂದಿರ್ದ  || ೨೦೫ ||

ತೆರೆಯದ ವಿಲೋಚನದ | ಘುರುಘುರಿಪ ನಿಶ್ವಾಸ |
ಮರಣದಾಕೃತಿಯ ಜ | ರ್ಜರ ಶರೀರವನು  || ೨೦೬ ||

ಹತ್ತಿರದೊಳಿದ್ದೈವ | ರುತ್ತಮಾಂಗನೆ ಪದವ |
ನೊತ್ತುವಳು ಮಾದ್ರಿಸುತ | ರೊತ್ತಿಲಿಹರಳುತ  || ೨೦೭ ||

ಆಪ್ತಜನರಡಿಗಡಿಗೆ | ತಪ್ತ ಮಾನಸರಾಗಿ |
ಪ್ರಾಪ್ತಿಗಂ ಬೈವ ಲೋ | ಲುಪ್ತಿ ಸಹ ಕಂಡ  || ೨೦೮ ||

ಕಂದ

ನರನೀ ತೆರನಂ ಕಾಣುತ |
ಲುರಿಮಸಗುತ ಕೆಲಬಲನ ನಿರೀಕ್ಷಿಸುತಾಗಂ ||
ತರತರದಿಂ ಯೋಚಿಸುತಿರೆ |
ಧುರಧೀರರು ನಡುಗಲು ಬಳಿಕಣ್ಣನೊಳೆಂದಂ || ೨೦೯ ||

ರಾಗ ಸಾಂಗತ್ಯ ರೂಪಕತಾಳ

ಅಣ್ಣನವರಿಗಿಂಥಾ ವಿಧಿ ಸಂಘಟಿಸಿತೆ ಮೂ | ರ್ಕಣ್ಣಿನ ಶಿವನೊಬ್ಬ ಬಲ್ಲ ||
ಪುಣ್ಯಹೀನರು ನಾವಾದುದರಿಂದಲೀ ಪರಿ | ಕಣ್ಣಾರೆ ಕಾಣುವುದಾಯ್ತು || ೨೧೦ ||

ಧಾರಿಣಿಪತಿ ನಿನ್ನ ಬಳಲಿಸಿದರೆ ಇಂಥ | ಭೂರಿ ವಿಕ್ರಮರಿದ್ದು ರಣದಿ ||
ಆರಾದರಾ ವೇಳ್ಯಕೊದಗದೀ ಪರಿ ಮೋಸ | ದೋರಿದರಲ್ಲಕಟಕಟ || ೨೧೧ ||

ಉದ್ದುರುಟರಿಯದೆ ಖೂಳನೊಡನೆ ಕಾದಿ | ಬಿದ್ದೆಯ ಹಾ ಹಾ ನೃಪತಿಯೇ ||
ಹೊದ್ದಿದಾಪತ್ತಿನೊಳೊದಗದ ಮೇಲೆ ನಾ | ವಿದ್ದು ಇಲ್ಲದ ರೀತಿ ನಿನಗೆ || ೨೧೨ ||

ಭಾಮಿನಿ

ಆ ಸಮಯದಲಿ ಬಂದು ಲಕ್ಷ್ಮಿನಿ |
ವಾಸ ಹತ್ತಿರೆ ಕುಳಿತು ಭೂಪನ |
ತಾ ಸರಾಗದೊಳಮೃತಹಸ್ತದಿ ತನುವ ತಡವರಿಸಿ ||
ಏಸು ನೊಂದೈ ತಂದೆ ನಿನ್ನನು |
ಗಾಸಿಮಾಡಿದರೇ ಕಠೋರರು |
ಮೋಸದವರವರೆಂದು ಕಂಬನಿ ದುಂಬಿದನು ಕೃಷ್ಣ || ೨೧೩ ||

ಆರ್ಯಾ ಏಕತಾಳ

ಅಮೃತಕರಾಗ್ರವು ಸೋಕಲು ಭೂಪತಿ | ಅಮೃತವಿನೋದನು ತಾನಾಗಿ ||
ಅಮೃತವಿರೋಧವಿನಾಶಧ್ವಜನನು | ಅಮೃತಿಯೊಳೀಕ್ಷಿಸೆ ಲೇಸಾಗಿ || ೨೧೪ ||

ಕಂದ

ಅಂಗವನಲುಗಿಸುತೆದ್ದು ಕು |
ರಂಗವಿಲೋಚನೆಯುಳ ಮೇಲೊರಗುತ ಭೂಪಂ ||
ತುಂಗಪರಾಕ್ರಮಿ ಪಾರ್ಥಂ |
ಕಂಗಳಿದಿರು ಕಾಣಲು ಬಳಿಕವನೊಡನೆಂದಂ || ೨೧೫ ||

ರಾಗ ಸಾವೇರಿ ತ್ರಿವುಡೆತಾಳ

ಬಂದೆಯ ಪಾರ್ಥ ನೀನು | ಸಮಸಪ್ತಕ | ರಿಂದಲ್ಲಿ ಬಿಟ್ಟರೇನು | ಸಂಗ್ರಾಮದಿ |
ನೊಂದು ಬಿದ್ದಿರುವೆ ನಾನು | ಪೋದಲ್ಲಿ ನೀನು ||
ಚಂದವಾದುದೆ ರಣದೊಳಾ ರವಿ | ನಂದನಗೆ ಹದನೇನು ಮಾಡಿದೆ |
ಕೊಂದೆಯೋ ಮಿಗೆ ಸಲಹಿದೆಯೊ ಮೇ | ಣಿಂದು ನುಡಿ ನುಡಿ ತಡೆಯದೀ ಕ್ಷಣ || ೨೧೬ ||

ಬಾಯಿಂದ  ಬಗುಳಿದರೆ | ಕಾರ್ಯವು ತನ್ನ | ದಾಯಿತೆ ಪೊಗಳಿದರೆ | ಪೌರುಷದಂಗ |
ದಾಯತಿಕೆಗಳೆ ಬೇರೆ | ತಾ ನೆಗಳ್ದರೆ ||
ನೋಯಿಸುವರಿಲ್ಲೆಂಬ ಕಡೆಯೊಳು | ಗಾಯದೋರುವ ವಿಕ್ರಮವು ರಾ  |
ಧೇಯನಿದಿರಲಿ ನಡೆವುದೇ ಮುದಿ | ನಾಯಿಗಳಿಗೇಕೀ ಪರಾಕ್ರಮ || ೨೧೭ ||

ಸದೆದು ವೈರಿಗಳನೆಲ್ಲ | ಸಂಗರದೊಳು | ಬದುಕಿ ನೀ ಬಂದೆಯಲ್ಲ | ಈ ತನು ಸಾಕು |
ಮೊದಲಿದನಾರು ಬಲ್ಲ | ನೊಂದ ನೋವೆಲ್ಲ ||
ಕದನದೊಳು ಸಿಲುಕಿರ್ದ ಭೀಮನ | ವದನ ಕಂಡವರಾರು ಕಾದುವ |
ಡದುಭುತದ ಭಟನೆಂಬ ಗರ್ವದೊ | ಳಿದಿರು ಬಂದೆಯ ಸಾಕು ಬಿಡು ಬಿಡು || ೨೧೮ ||

ಇವರ ನಂಬಿದವರಿಗೆ | ದೇಶಾಂತರ | ದವಧಿಯಲ್ಲವೆ ಕಡೆಗೆ | ಸೇರುವುದು ತಾ |
ನವನಿಯೆಂಬುದು ಸುಮ್ಮಗೆ | ಕಾಳಗದೊಳಗೆ ||
ನವೆಯಲೋಸುಗ ಘಟಿಸಿತಲ್ಲದೆ | ಎಮಗೆ ಸಾಧ್ಯವೆ ತಿಳಿಯದಾದೆನು |
ರವಿಯ ನಂದನನೋಲು ವೀರರು | ಭುವನದೊಳಗಾರುಂಟು ಧಣುಧಣು || ೨೧೯ ||

ವಾರ್ಧಕ

ಅವನಿಯೊಳ್ ಕಲಿ ಕರ್ಣಗಿದಿರಾದ ಭಟರಿಲ್ಲ |
ರವಿಜನೊಡನಾಹವದಿ ಕೈಗಲಸುತುರೆ ಬದುಕಿ |
ದವರಿಲ್ಲ ರಾಧೇಯನಂ ಕೆಣಕಿ ಬಾಳ್ದವರನಾರನುಂ ಕಾಣೆನಿಂದು ||
ಅವನ ಸಮಬಲರಾರು ನಮ್ಮೀ ಭಟಾಳಿಯೊಳ್ |
ಬವರಗಾರರ ದೇವನೆನಬಹುದು ಪೂತು ಕೌ |
ರವನ ಭಾಗ್ಯೋದಯದ ಬೆಳಕೆಂದು ನೃಪ ಪೊಗಳೆ ಕೈಮುಗಿದು ನರ ನುಡಿದನು || ೨೨೦ ||

ರಾಗ ಕಾಂಭೋಜಿ ಏಕತಾಳ

ಲಾಲಿಸೆನ್ನ ಬಿನ್ನಪವ | ಕರುಣದಿಂದ ಜೀಯ |
ಜಾಲವಲ್ಲ ಚಿತ್ತದೊಳು | ನೀನೀಗೊಲಿದು ರಾಯ || ಲಾಲಿ   || ಪ ||

ಸಮಸಪ್ತಕರೊಳ್ ಕಾದುತಿರ್ದೆ | ಮೊದಲಿಂಗೆ ನಾ ನಿನ್ನ |
ಶ್ರಮಗಳನ್ನು ಕೇಳ್ದು ಮೇಲೆ | ತಿರುಗಿದೆನೈ ಎನ್ನ ||
ಗಮನವ ಕಂಡಡ್ಡ ಬರಲು | ಖಳರ ನಿರ್ಣಯಿಸಿದೆನು |
ನಿಮಿಷದೊಳ್ ಗುರುಸಂಜಾತನ | ಧನುವ ಖಂಡಿಸಿದೆನು || ಲಾಲಿ || ೨೨೧ ||

ಅನಿತರೊಳ್ ಕೌರವಭಟರು | ಶರಧಿಫೋಷದಿಂದ |
ಕನಲುತಡ್ಡಯ್ಸಿದರೆ ಕ್ಷಣದಿ | ಮುರಿದೆನಿನ್ನನುವಿನಿಂದ ||
ಇನಜ ಕಂಡು ಬೆನ್ನಟ್ಟಿದನು | ನಿಲ್ಲು ನಿಲ್ಲೆಂದಾಗ |
ಬಿನುಗೆ ಪೋಗೆಂದವನ ಪಿಂತೆ | ಸರಿಸಿದೆನು ನಾ ಬೇಗ || ಲಾಲಿ || ೨೨೨ ||

ಬಿಟ್ಟ ಸೂಟಿಯಿಂದ ಭೀಮನ | ಕಂಡು ಮಾತಾಡಿಸಿದೆ |
ತಟ್ಟನಲ್ಲಿಂದಿತ್ತ ಬರಲೆಂ | ದೊತ್ತಿ ರಥವೋಡಿಸಿದೆ ||
ಇಟ್ಟಿಣಿಸಿ ಮತ್ತೆ ಕರ್ಣ | ಬರಲು ಭಂಗಿಸಿದೆನು |
ಪಟ್ಟ ಶ್ರಮಗಳಾರಿಗೆಂಬೆ | ದೇವನೆ ಕಂಡಿಹನು || ೨೨೩ ||

ಭಾಮಿನಿ

ಎನಲು ಕೇಳ್ದಾ ನೃಪತಿ ಕನಲಿದು |
ತನು ವಿಭಾಡಿಸಿ ನುಡಿದನೆಲವೋ |
ಘನ ಮದಾಂಧನೆ ದಣಿದೆಯೈ ತಪ್ಪೇನು ತಪ್ಪೇನು ||
ಅನುಜನಾದೊಡೆ ನನ್ನ ಹರಿಬವ |
ನೆನೆದು ರಿಪು ಸೂತಜನ ಕೊಲ್ಲದೆ |
ಜುನುಗಿ ಬಪ್ಪೆಯ ಸಾಕು ಸುಡು ಗಾಂಡೀವವಿದನೆಂದ || ೨೨೪ ||

ಕಂದ

ಅಣ್ಣನ ನುಡಿ ಕೇಳುತ ಮು |
ಕ್ಕಣ್ಣನ ತೆರದಿಂದರ್ಜುನ ರೋಷವ ತಾಳ್ದುಂ ||
ಎಣ್ಣಿ ವಿರೋಧವನುಂ ಪೊಂ |
ಬಣ್ಣದ ಒರೆಯಿಂದುಗಿದಂ ನಿಜ ಖಡ್ಗವನುಂ || ೨೨೫ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಚಿತ್ತವಿಸೈ ಪರೀಕ್ಷಿತಜಾತ | ನಿನ್ನ | ಮುತ್ತಜ್ಜರುಗಳಿಗಾಗಿಹ ಮಾತ ||
ಕತ್ತರಿಸುವೆ ನೃಪನನೆನ್ನುತ | ಪಾರ್ಥ | ನೆತ್ತಿ ಖಡ್ಗವ ಮುಂದುವರಿವುತ || ೨೨೬ ||

ಝಳಪಿಸುವಾಯುಧವನು ಕಂಡು | ಮ | ತ್ತಿಳೆಯ ಪಾಲಕನು ತಾ ಮುಂಕೊಂಡು ||
ಬಳಿ ಸಾರ್ದು ನಡುಗುತ ಬಂದನು | ಕುಟ್ಟಿ | ಕಳೆದು ತೀರಿಸು ತನ್ನನೆಂದನು || ೨೨೭ ||

ನೋಡಿ ದ್ರೌಪದಿ ಹಾಯ್ದು ಬಂದಳು | ಬೇಡ | ಬೇಡೆಂದು ತಡೆದಡ್ಡ ನಿಂದಳು ||
ಗಾಢದೊಳಸುರಾರಿ ದಯೆಗೆಯ್ದ | ಕಯ್ | ಮಾಡದಿರೆನುತರ್ಜುನನ ಬಯ್ದ || ೨೨೮ ||

ವಾರ್ಧಕ

ತಡೆಯದಿರು ಮುರಮಥನನಿವನು ಸಾಹಸಿ ಕಣಾ |
ಕಡಿದಿಕ್ಕಿ ತನ್ನಯ ಪ್ರತಾಪಮಂ ಮೆರೆಸಲೈ |
ಬಿಡು ವೃಥಾ ಕಾರ್ಯಕುಪಹತಿಯ ತಾರದಿರೆಂದು ನೃಪ ನರಳುತಂ ಪೇಳಲು ||
ತುಡುಕುತಘಹರನಯ್ದೆ ನರನ ಗರ್ಜಿಸುತ ಕಯ್ |
ವಿಡಿದೆಂದನೆಲೆ ದುರಾತುಮ ಹಿರಿಯರಂ ಕೊಂದು |
ಕಡು ನರಕವನ್ನಾಳ್ವೆನೆಂದು ಯೋಚಿಸಿದೆಯೈ ಎನಲಾತನಿಂತೆಂದನು || ೨೨೯ ||

ರಾಗ ಸೌರಾಷ್ಟ್ರ ಅಷ್ಟತಾಳ

ಎನ್ನಿಂದ ತಪ್ಪೇನು ಸೆರಗಿನೊಳಿಕ್ಕೀಗ | ದೇವ ಕೇಳು | ನಾ |
ಮುನ್ನಿನಾರಭ್ಯ ಪಾಲಿಸಿದೆನೀ ಶಪಥವ | ದೇವ ಕೇಳು ||
ಪನ್ನಗ ನರ ಸುರ ದೈತ್ಯರೊಳಾಗಲಿ | ದೇವ ಕೇಳು | ಈ |
ಸನ್ನುತ ಗಾಂಡೀವವನು ಜರೆದವರನ್ನು | ದೇವ ಕೇಳು || ೨೩೦ ||

ಅರಿಭಾವದೊಳು ಸಂಹರಿಸುವೆನಲ್ಲದಡಾನು | ದೇವ ಕೇಳು | ಕೊರ |
ಳರಿದು ಸಾಯುವೆನೆಂಬುದೀ ಸುಪ್ರತಿಜ್ಞೆಯು | ದೇವ ಕೇಳು |
ಧರೆಯೊಳಗೆಲ್ಲ ಪ್ರಖ್ಯಾತವಾಗಿಹುದೈಸೆ | ದೇವಕೇಳು | ಇದ
ನರಿತವರೀ ರೀತಿ ಭಂಗಿಸಬಹುದೇನೈ | ದೇವ ಕೇಳು || ೨೩೧ ||

ಅದರಿಂದಗ್ರಜನಾದಡೀ ಕ್ಷಣ ಕೊಲುವೆನು | ದೇವ ಕೇಳು | ಮ |
ತ್ತೊದಗದಿರ್ದಡೆ ಕೊರಳರಿದು ಸಾಯುವೆನೀಗ | ದೇವ ಕೇಳು ||
ಇದಕೆ ಕೇಡನು ತಾರೆ ತಡೆಯದಿರೆನ್ನನು | ದೇವ ಕೇಳು | ತ |
ಪ್ಪಿದನಾದರೆಯು ನಿನ್ನ ಪಾದಸೇವಕನಲ್ಲ | ದೇವ ಕೇಳು || ೨೩೨ ||

ಭಾಮಿನಿ

ಅರ್ಜುನನ ನುಡಿ ಕೇಳಿ ಮುರರಿಪು |
ಗರ್ಜಿಸುತ ತತ್ವ್ತಾರ್ಥದಿಂದಲಿ |
ದುರ್ಜನತ್ವವ ಕಳೆವ ಕಥೆಗಳ ಪೇಳಲವಗಂದು ||
ಊರ್ಜಿತದ ನಿರುಗೆಯನು ಕೇಳುತ |
ಮೂರ್ಜಗತ್ಪತಿ ನಗುತ ಪಾಪವಿ |
ಸರ್ಜನದ ಹದನಂಗಳರುಹಿದನಾಗ ಸಂತಸದಿ || ೨೩೩ ||

ರಾಗ ಸಾವೇರಿ ಏಕತಾಳ

ಕೇಳು ಕೇಳಯ್ಯ  ಧನಂಜಯ | ಎನ್ನಯ ನುಡಿಯ | ಕೇಳು ಕೇಳಯ್ಯ ಧನಂಜಯ || ಪ ||

ಹಿರಿಯರ ಕೊಲ್ಲುವೆನೆಂದೆಣಿಸಿದ ಬಲು | ತರ ದುರಿತಕ್ಕುಪಶಮನಗಳುಂಟೆಲೆ ||
ಬರಿಯ ವಿಷಾದವಿದೇತಕೆ ಬಿಡು ಬಿಡು | ಗರುವರಿಗಿದು ಬಹುಮಾನವೆ ಸುಮ್ಮನೆ || ಕೇಳು || ೨೩೪ ||

ಮಾನವುಳ್ಳ ಮಾನುಷರುಗಳಿಗವ | ಮಾನಗಳಾಗಲು ಸತ್ತಂತೆಂಬುದು ||
ಈ ನುಡಿ ಶಾಸ್ತ್ರಪ್ರಕಾರವು ಸರಿ ನೀ | ಹೀನಿಸು ಭೂಪನ ಕೊಂದಂತಾದುದು  || ಕೇಳು || ೨೩೫ ||

ಶರಷಟ್ಪದಿ

ಮುರಹರನೆಂದಾ | ಸರಸದ ನುಡಿಯಂ |
ನರ ತಾ ಕೇಳಿದು ತವಕದೊಳು |
ಪರಿಪರಿಯಿಂದಲಿ ಧರಣೀಪಾಲನ |
ಜರೆದನು ನಿಂತು ವಿರೋಧದೊಳು  || ೨೩೬ ||

ರಾಗ ಕೇದಾರಗೌಳ ಅಷ್ಟತಾಳ

ಎಲೆ ಷಂಢನೃಪತಿ ನಿನ್ನೊಡಹುಟ್ಟಲೆಮಗೆಲ್ಲ | ಹಲವಂಗದಲಿ ಕಷ್ಟವೈ ||
ನೆಲಸಿತಲ್ಲದೆ ಬೇರೆ ಸುಖವೆಂಬುದೊಂದರ್ಧ | ತಿಲದಷ್ಟು ಕಾಣೆವಿಂದು || ೨೩೭ ||

ದ್ಯೂತದಾಟಗಳಿಂದ ರಾಜ್ಯವ ರಿಪುಗಳ್ಗೆ | ಸೋತು ಭಿಕ್ಷುಕರ ಗೆಯ್ದೆ ||
ಖ್ಯಾತಿಯಿಂ ಗುಡ್ಡಬೆಟ್ಟಗಳ ಸುತ್ತಿಸಿದಂಥ | ಪಾತಕಿ ನಿನಗೇನೆಂಬೆ || ೨೩೮ ||

ವಿಗಡತನಂಗಳ ಬಿಡಿಸಿದು ಪರಸೇವೆ | ತಗುಳಿಸಿದಧಮನಲ್ಲೈ ||
ಜಗದೊಳಗಧಿಕ ನಿಷ್ಠೂರ ದುರಾತ್ಮನ | ಮೊಗ ನೋಡಬಹುದೇನಯ್ಯ || ೨೩೯ ||

ಇಂದುರಣಾಗ್ರದೊಳೊಮ್ಮೆ ನೋಯಲು ಸಿಟ್ಟು | ಬಂದುದು ದಿನದಿನದಿ ||
ಕೊಂದು ತಾ ಕೊಲಿಸಿಕೊಂಡಲ್ಲದೆ ಜಯಸಿರಿ | ಪೊಂದಿ ಪೃಥ್ವಿಪನಾಹನೆ || ೨೪೦ ||

ಭೂಪರ ವೇಷವಿದೇಕೆ ವಿಜೃಂಭಕ | ಲಾಪವೇತಕೆ ಹೇಡಿಗೆ |
ಪಾಪಿ ಸಂಸಾರವ ಪೊರೆದೆ ವ್ಯರ್ಥದೊಳೆಂದು | ಕೋಪಿಸಿ ನುಡಿದ ಪಾರ್ಥ || ೨೪೧ ||

ವಾರ್ಧಕ

ಆ ನರಂ ಬಳಿಕಯ್ದೆ ಝಳಪುವಸಿಯಂ ಕೊರಳಿ |
ಗಾನಿಸಿದು ತನ್ನ ಪ್ರಾಣವ ಕಳೆವೆನೆಂದು ಸಂ |
ಧಾನಮಂ ಗೆಯ್ಯಲನ್ನೆಗ ಬಂದು ಖಡ್ಗಮಂ  ಪಿಡಿದಸುರರಿಪು ಕೋಪಿಸಿ ||
ಏನೆಲೆ ಕಿರೀಟಿ ಮನದನುವನುಂ ಪೇಳೀಸು |
ಹೀನನೆಂಬುದನರಿಯದಾದೆನೈ ಬಿಡದೊಂದ |
ನಾನರುಹಿದಪೆನು ಪ್ರಾಯಶ್ಚಿತ್ತವಿದಕೆಂದು ತಿಳಿದು ನೀ ಮಾಳ್ಪುದೆಂದ || ೨೪೨ ||

ಭಾಮಿನಿ

ತಿಳಿ ಧನಂಜಯನಿರದೆ ತನ್ನ |
ಗ್ಗಳಿಕೆ ತಾನೆ ಪೊಗಳ್ವನಾವನು |
ಮುಳಿದು ತನ್ನನೆ ಕೊಂದುಕೊಂಡವನೆಂಬ ಶ್ರುತಿವಚನ ||
ಅಳುಕದದರಿಂದೀಗ ತವ ಹೆ |
ಗ್ಗಳಿಕೆತನಗಳ ನೀನೆ ಪೊಗಳಿಕೊ |
ಸುಳಿವ ದೋಷದ ಭಯವಿನಾಶನವಹುದು ಕಡೆಗೆಂದ || ೨೪೩ ||