ಕಂದ

ಕೇಳಿದು ಶಲ್ಯನ ವಚನವ |
ಭಾಳವಿಲೋಚನನಂದದಿ ಮಾರುತ ತನಯಂ ||
ಘೋಳಿಡುತಯ್ತರಲಾ ಕುರು |
ಪಾಳೆಯದತಿರಥರುಗಳಂ ತರುಬಿದನಾಗಳ್ || ೧೨೪ ||

ಭಾಮಿನಿ

ಮೇದಿನಿಪ ಕೇಳಿತ್ತ ಮೂರ್ಛಿತ |
ನಾದ ಧರ್ಮಜನೆದ್ದು ರಕುತದಿ |
ತೋದ ಮೈ ತೊಳೆದಮಲ ವಸ್ತ್ರವನುಟ್ಟು ವಿಶ್ರಮಿಸಿ ||
ಕಾದಿ ಮೈಮರೆದೊರಗಿರುವ ಛಲ |
ವಾದಿ ರವಿಸುತನೆದ್ದು ಬಂದು ವೃ |
ಕೋದರನ ಮರೆಮಾಚಿ ಭೂಪನ ಬೆರಸುತಯ್ತಂದ || ೧೨೫ ||

ರಾಗ ಮಾರವಿ ಏಕತಾಳ

ಅಬ್ಬರಿಸಿನಸುತ | ನುಬ್ಬುವ ಕಲಿಗಳಿ | ಗುಬ್ಬಸದಾಕೃತಿ | ಹಬ್ಬಿಸಿ ಚಾಪವ |
ತೆಬ್ಬ ಝೇವಡೆದತಿ | ಬೊಬ್ಬೆಗಜಾಂಡವು |
ಇಬ್ಬದಿಯಾಗಲು | ದಬ್ಬಿದ ರಥವ | ಏನನೆಂಬೆ || ೧೨೬ ||

ಫಡ ಫಡ ಭೂಪತಿ | ಪಿಡಿ ಪಿಡಿ ಚಾಪವ | ತೊಡು ತೊಡು ಮಾರ್ಗಣ | ಗಡಬಡಿಸುತ ಹಿಂ |
ದಡಿಯಿಡಬೇಡಿಕೊ | ನುಡಿ ನುಡಿಯೆನುತಲೆ |
ಎಡೆಬಿಡದಾ ಕ್ಷಣ | ಗುಡುಗುಡಿಸುತಲೆ | ತಡೆದನಾಗ || ೧೨೭ ||

ಬಂತಿದು ಮರಳಿ ಕೃ | ತಾಂತಸ್ವರೂಪವ | ನೆಂತು ಸೈರಿಪೆನೆನು | ತಂತಕಸುತ ಬಲ |
ವಂತನು ತನಗತಿ | ಚಿಂತಿಸಿ ರಣಕಿದಿ |
ರಾಂತನು ಪ್ರತಿ ಜವ | ನಂತೆ ಗರ್ಜಿಸುತ | ಖಾತಿಯಿಂದ || ೧೨೮ ||

ಆ ತುರಗಾನೆ ವ | ರೂಥ ಸಮೇತ ಪ | ದಾತಿ ಸಕಲ ಸಂ | ಖ್ಯಾತವ ಕ್ಷಣದಿ ನಿ |
ಪಾತವ ಗೆಯ್ದದು | ಭೂತದಿ ಪಾರ್ಥಿವ |
ಜಾತರ ಬಿಡದುರೆ | ಘಾತಿಸೆ ಕರ್ಣ | ಕೇಳು ಭೂಪ || ೧೨೯ ||

ವಾರ್ಧಕ

ಇಳೆಯಪತಿ ಲಾಲಿಸೈ ಕರ್ಣನೆಸೆದಿರ್ದ ದಳ |
ದುಳಕೆ ಧೃಷ್ಟದ್ಯುಮ್ನ ಮೊದಲಾದ ಪಾಂಡವರ |
ದಳದ ನಾಯಕರು ಸತ್ತ್ವದಿಕುಂದಿ ಹರಿಹಂಚಿ ಪೋಗೆ ಮಾದ್ರೇಶ ಕಂಡು ||
ನಳಿನ ಸಖಸುತನಾಗಬಹುದೆಲೈ ನಿನ್ನೊಡನೆ |
ಕೊಳುಗುಳಕೆ ನಿಲ್ವ ಭಟನಾವನೊ ಸುರಾಸುರರಿ |
ಗಳವೆ ಮಝ ಭಾಪೆಂದು ಪೊಗಳಲ್ಕೆ ರಥವ ನೂಕಿದ ನೃಪನ ಸಮ್ಮುಖದೊಳು || ೧೩೦ ||

ರಾಗ ಮಾರವಿ ಮಟ್ಟೆತಾಳ

ನಿಲ್ಲು ನಿಲ್ಲು ನೃಪತಿ | ನೀ | ನೆಲ್ಲಿಗೆಂದು ಪೋಗುತಿ |
ಬಿಲ್ಲನೆತ್ತಿ ಕಣೆಗಳನ್ನು | ಚೆಲ್ಲು ನೋಳ್ಪೆನದನು ||
ಬಿಲ್ಲ ಪ್ರೌಢಿಯನ್ನು | ತೋ | ರಿಲ್ಲಿ ಎನ್ನೊಳಿನ್ನು |
ನಿಲ್ಲದೋಡಿಪೋಗುವರಿಗಿಂ | ಬಿಲ್ಲ ತಾಯ ಬಸಿರಲಿ || ೧೩೧ ||

ಬಗುಳದಿರು ರಾಧೇಯ | ನೀ | ಜಗಕತಿ ಕಲಿಯಾದೆಯ |
ವಿಗಡನಾದರೀಕ್ಷಿಸೆನ್ನ | ಬಗೆಯ ತೋರ್ಪೆನೀಗ ||
ಮುಗುದ ನೃಪರ ಮೇಲೆ | ಕೈ | ಮಗುಚಿದ ಹೊಯ್ಮಾಲೆ |
ಪೊಗದು ಸಾಕೆನ್ನೊಡನೆ ತೆಗೆ | ತೆಗೆಯೊ ಬೊಬ್ಬಾಟವನು || ೧೩೨ ||

ಎನಲು ಕೇಳ್ದು ಕರ್ಣ | ತಾ | ಕನಲುತಾ ಸಂಪೂರ್ಣ |
ಧನುವಿಗೌಕಿ ಸರಳ ಮಳೆಯ | ಘನದಿ ಕರೆಯೆ ಕಂಡು ||
ಬಿನುಗೆ ನೀ ಪೋಗೆಂದು | ಯಮ | ತನುಜ ನಲಿದು ಬಂದು |
ಮಿನುಗುವಂಬಿನೊಳಗೆ ಮುಸುಕಿ | ದನು ನೃಪತಿ ಮುಂಕೊಂಡು || ೧೩೩ ||

ಭಾಮಿನಿ

ಯಮಜನಸ್ತ್ರವ ಕಡಿದು ಕರ್ಣನು |
ನಿಮಿರಿಸಿದ ಬಾಣಪ್ರಯೋಗದಿ |
ತಮವೆರಸಿ ನಭವಾವುದಿಳೆ ತಾನಾವುದೆನೆ ಮುಸುಕೆ |
ಕಮಲಜಾಂಡವ ತುಂಬೆ ಬಳಿಕಾ |
ಕ್ರಮಿಸಿಕೊಂಡವನೀಶನಂಗದೊ |
ಳಮರಿದವು ಶರ ಕೂಡೆ ಮೈಮರೆದೊರಗಿದನು ಭೂಪ || ೧೩೪ ||

ಕಂದ

ಶರಹತಿಯಿಂ ನೃಪತನು ಜ |
ಜ್ಝರಿತವದಾಗಲು ಮೂರ್ಛೆಯೊಳಾ ರಥದೊಳಗಂ ||
ಬರಸಿಡಿಲೆರಗಿದವೋಲ್ ಮಲ |
ಗಿರೆ ಕಾಣುತ ರವಿಜನೊಳಿಂತೆಂದನು ಶಲ್ಯಂ || ೧೩೫ ||

ರಾಗ ಮಧ್ಯಮಾವತಿ ಏಕತಾಳ

ಇನಸೂನು ಲಾಲಿಸೈ ಮಾತ ನೀನೀಗ | ನೆನೆಯದಿರಕೃತ್ಯಗಳ ಬಿಟ್ಟು ಬೇಗ |
ಜನಪ ತಾನೇತರ ಸಹಸಿಗನೆಂದು | ಮುನಿವೆಯ ಪೇಳವನ ಕೂಡೆ ನೀನಿಂದು || ೧೩೬ ||

ಹಸುಳೆಯರಾ ಮಾದ್ರಿಜರು ನಿನ್ನೊಳೀಡೆ | ವಸುಧೇಶ ಧರ್ಮಾತ್ಮಭವ ನಿನ್ನ ಪಾಡೆ ||
ಪಸರಿಸಿದತಿ ವಿಕ್ರಮಾನ್ವಿತ ನೀನು | ಮಸಗದವರ ಮೇಲೆ ಮರುಗೈಗಳೇನು || ೧೩೭ ||

ಖೂಳರಾಗಿರುವ ವೃಕೋದರಾರ್ಜುನರು | ಕಾಳಗದೊಳಗೆ ನಿಷ್ಠೂರ ದುರ್ಜನರು ||
ತೋಳಿನಬ್ಬರವಿದ್ದರವರೊಳು ಸೆಣಸು | ಏಳಿವನನು ಬಿಟ್ಟು ಪೋಪುದಕೆಣಿಸು || ೧೩೮ ||

ವಾರ್ಧಕ

ಮಾದ್ರೇಶನಿಂತೆನಲ್ಕಾ ಕರ್ಣನತಿರೋಷ |
ದುದ್ರೇಕದಿಂ ತಿರುಗಿದಂ ಬಳಿಕ ಮೂರ್ಛೆಯೊಳ್ |
ಮುದ್ರಿಸಿದ ಶರಹತಿಯ ವೇದನೆಗೆ ಬಸವಳಿದ ಭೂಪನಂ ಕಂಡು ಹೊರಗೆ ||
ಆ ದ್ರುಪದತನುಜ ಯಮಳರ್ ಮುಖ್ಯ ವಿಕ್ರಮಸ |
ಮುದ್ರರಯ್ತಂದು ಕಂಡಳಲುತೆಲ್ಲರು ಮತ್ತೆ |
ನಿದ್ರಾಶರೀರನಂ ಶಿಬಿರ ಕೊಯ್ಯಲ್ ಕೂಡೆ ನಡೆದುದಾ ಸರ್ವ ಸೇನೆ || ೧೩೯ ||

ರಾಗ ಸವಾಯ್ ಏಕತಾಳ

ಸೇನೆಯು ತೆರಳುವ ಹದನವನಂದಾ | ದಾನವರಿಪು ತಾ ನೆರೆ ಕಂಡು ||
ಏನೆಂದೀ ಪರಿ ದೂರದಿ ತೋರಿದ | ನಾ ನರನಿಗೆ ಬಲು ಭಯಗೊಂಡು || ೧೪೦ ||

ರಾಗ ಕಾಂಭೋಜಿ ಏಕತಾಳ

ನೋಡು ಮುಂದೆ ಕಾಂಬುತಿದೆ | ಎಲೊ ಪಾರ್ಥ | ನಿಲ್ಲ |
ದೋಡುತಿಹುದು ಸೇನೆಯದಕೊ | ಎಲೊ ಪಾರ್ಥ ||
ರೂಢಿಪತಿಯ ಸ್ಯಂದನವು ಪೋ | ಪುದು ಮುಂದೆ | ಅದರ |
ಕೂಡೆ ಮಾದ್ರಿಸುತರ ರಥ | ವಿಹುದು ಹಿಂದೆ  || ೧೪೧ ||

ಅಕ್ಕೊ ಸೇನಾಪತಿಯ ತೇರು | ಎಳಕೊಂಡು | ಪೋಪ |
ಮಿಕ್ಕ ಸುಭಟಾವಳಿಯ ಪತಾ | ಕಿನಿ ದಂಡು |
ಹೆಕ್ಕಳುಳ್ಳ ಚಾತುರಂಗ | ಬಲವೆಲ್ಲ | ಮುರಿಯಿ |
ತಿಕ್ಕೊ ನೋಡು ನಾವಿಲ್ಲಿರುವು | ದನುವಲ್ಲ || ೧೪೨ ||

ಭಾಮಿನಿ

ಎಂದು ನುಡಿದಾ ಕ್ಷಣ ಮಹಾರಥ |
ಮುಂದೆ ನಡೆದುದು ಕೂಡೆ ರಭಸದಿ |
ಹಿಂದೆ ಬೆನ್ನಟ್ಟುತ್ತ ಪೋಗುವುದೆಲ್ಲಿ ನಿಲ್ಲೆನುತ ||
ಸ್ಯಂದನವನಡಹಾಯ್ದು ಗರ್ಜಿಸಿ |
ಬಂದು ಮುಕ್ಕುರಿಕೀರ್ದ ನಿಷ್ಠುರ |
ಮಂದಮತಿ ಸಮಸಪ್ತಕರಿಗಿದಿರಾದನಾ ಪಾರ್ಥ  || ೧೪೩ ||

ರಾಗ ಭೈರವಿ ಏಕತಾಳ

ಫಡ ಫಡ ಯಾಮಿನಿಚರರೆ | ನಿಮ್ಮ | ಕಡುತನವಿಂದೆಮಗಿದಿರೆ ||
ತಡೆಯದೆ ಭಂಗಿಪೆನೆನುತ | ಹೇ | ರೊಡಲರಿಗೆಚ್ಚನು ಪಾರ್ಥ || ೧೪೪ ||

ತರಿದೆಂದರು ನೀನೆಲ್ಲಿ | ರಣ | ತೊರೆಯುತ ತೆರಳುವೆ ನಿಲ್ಲೀ ||
ಶಿರವರಿಯದೆ ಬಿಡೆವೆನುತ | ಭೋ | ರ್ಗರೆದೆಚ್ಚರು ಗರ್ಜಿಸುತ || ೧೪೫ ||

ಮಸಗುತ ತರಿಯಲು ನರನ | ಮೇ | ಲೆಸೆಯುತಲಯ್ದುತ ನಿನ್ನ ||
ರಸೆಯಲಿ ಬಿಡೆವೆಂದೆನುತ | ಆ | ಅಸುರರು ಬಲು ರೋಷಿಸುತ || ೧೪೬ ||

ಹಿಂದೆಮ್ಮಯ್ಯನ ರಣದಿ | ನೀ | ಕೊಂದುದಕೀ ಕ್ಷಣ ಧುರದಿ ||
ಸಂದೆಲುಬನು ಕಳಚುವೆವು | ಮನ | ದಂದವ ನೆರೆ ಸಲಿಸುವೆವು || ೧೪೭ ||

ಪಿತಸುತರತಿ ಜತೆಯಿಂದ | ಇಹ | ಮತವತಿಯೋಗ್ಯವಿದೆಂದ ||
ಅತಿ ಕಠಿನದ ಶರವೆಸೆದ | ಆ | ಮತಿಹೀನರ ತೊಲಗಿಸಿದ || ೧೪೮ ||

ರಾಗ ದೇಶಿ ಮಟ್ಟೆತಾಳ

ಕೆಟ್ಟ ದನುಜರು | ಬೆ | ನ್ನಟ್ಟಿ ಬಹರಲಾ ||
ಸುಟ್ಟುಬಿಡುವೆನೆನುತ ಶರಗ | ಳೊಟ್ಟು ಮುಸುಕಿದ || ೧೪೯ ||

ಬಿಟ್ಟ ಬಾಣವ | ಮೈ | ಮುಟ್ಟದಂದದಿ ||
ಧಟ್ಟಿಸುತ್ತಲವರು ಮರಳಿ | ತೊಟ್ಟರಸ್ತ್ರವ  || ೧೫೦ ||

ಅತಿಶರೌಘವು | ಬಂ | ದೆರಗುವನ್ನೆಗ |
ಮುರಿಯಲೆಚ್ಚು ತನ್ನ ನಿಶಿತ | ಶರಗಳೆಚ್ಚನು || ೧೫೧ ||

ಮರಳಿ ಫಲುಗುಣ | ಬೊ | ಬ್ಬಿರಿದು ಖಳರಿಗೆ ||
ತೆರಹುಗೊಡದೆ ಮತ್ತೆ ನೂರು | ಶರದೊಳೆಚ್ಚನು || ೧೫೨ ||

ವಾರ್ಧಕ

ನರನು ಖಳರಂ ಭಂಗಿಸುತ ನಡೆಯಲಿದಿರಾಗಿ |
ಕುರುನೃಪಾನುಜರು ಬಲು ಬಲಸಹಿತ ಸೌಬಲಂ |
ದೊರೆ ಬೃಹದ್ರಥ ಸೋಮದತ್ತ ಕೃಪ ಕೃತವರ್ಮ ವೃಷಸೇನ ಮುಖ್ಯರೆಲ್ಲ ||
ಶರಗಳಂ ಕವಿಸಿದರೆ ಖಂಡಿಸುತ ಬೇರ್ಬೇರೆ |
ತಿರುವಿಗೆಚ್ಚರಿಭಟರ ನುಗ್ಗರಿದು ಬರುತಿರಲ್ |
ಗುರುಜನಯ್ತಂದು ಪೋಪೆಯದೆಲ್ಲಿ ನಿಲ್ಲೆನುತ ಮಾರ್ಗಣವ ಕವಿಸಿ ತಡೆದ || ೧೫೩ ||

ರಾಗ ಮಾರವಿ ಏಕತಾಳ

ನಿಲ್ಲೆಲೊ ಫಲುಗುಣ | ನೆಲ್ಲಿಗೆ ಗಮನವ | ದಿಲ್ಲಿಯೆ ತೋರಿಸು | ಮಲ್ಲ ತನಂಗಳ |
ಬಲ್ಲಿದ ಭಟನೆನು | ತಲ್ಲಿಯೆ ಕೂರ್ಗಣೆ |
ಚೆಲ್ಲುತ ಖತಿಯಿಂ | ಭುಲ್ಲವಿಸಿದನು | ಕೇಳು ಭೂಪ || ೧೫೪ ||

ಬರುವ ಶರವ ಕ | ತ್ತರಿಸುತಲೆಂದನು | ನೆರೆ ವಿಪ್ರರು ಜಪ |
ವಿರಚಿಪುದುಳಿಯುತ | ಧುರಕಯ್ತಂದರೆ | ದೊರೆನಂದನರೊಳು |
ಬರುವುದೆ ಜಯವೆನು | ತಿರದೆಚ್ಚನು ಶರ | ಕೋಪದಿಂದ || ೧೫೫ ||

ಮಸಗುತ ಗುರುಸುತ | ನಸಮಾಸ್ತ್ರಂಗಳ | ಕುಸುರಿತರಿದು ಮೇಣ್ |  ದೆಸೆಗಾಣದ ತೆರ |
ಪೊಸ ಶರ ತುಂಬಲ್ | ಕೆಸೆಯುತ ಖಂಡಿಸಿ |
ವಿಶಿಖವ ಚೆಲ್ಲುತ | ಕುಶಲದಿ ಜಯಿಸಿ | ಬಂದನಾಗ || ೧೫೬ ||

ವಾರ್ಧಕ

ಘನ ನಿಶಿತಶರಹತಿಗೆ ಸಮಸಪ್ತಕರ್ ಪಲಾ |
ಯನಮೆಸಗೆ ಭರದಿ ಮುಂಬರಿಯುವ ವರೂಥಮಂ |
ದನುಜರದನರಿತು ಬಂದಡಹಾಯ್ದು ದಾರಿಯಂ ಕಟ್ಟಿ ಮುಸುಕಲು ಕಾಣುತ ||
ಕನಲಿದು ಧನಂಜಯಂ ಮಗುಳೆಚ್ಚ ಕೂರ್ಗಣೆಯೊ |
ಳನಿಮಿಷಾರಿಗಳೆದೆಯು ಜಜ್ಝರಿತವಾಗೆ ಗುಣ |
ವನಧಿ ತಿರುಗಿಸೆ ರಥವ ಸೂಟಿಯೊಳ್ ಕಂಡನಶ್ವತ್ಥಾಮನೀ ಪಾರ್ಥನ || ೧೫೭ ||

ಕಂದ

ಭೋರನೆ ನಡೆವ ಕಿರೀಟಿಯ |
ತೇರಿಂಗಡಹಾಯ್ದು ವಿರೋಧದಿ ಗುರು ತನುಜಂ ||
ಮೀರಿಯೆ ಪೋಗದಿರೆಲೊ ಜ |
ಜ್ಝಾರನೆ ತನಗಿದಿರಾಗೆನುತಲಿ ತೆಗೆದೆಚ್ಚಂ  || ೧೫೮ ||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ಏನನೆಂಬೆನಂದಿನಾಹವ | ಕೇಳು ನೃಪತಿ | ಏನನೆಂಬೆನಂದಿನಾಹವ   || ಪ ||

ಗುರುಜನೆಚ್ಚ ಬಾಣತತಿಯ | ತರಿದು ಪಾರ್ಥ ಸ್ವರ್ಣಪುಂಖ |
ದುರು ಶಿಲೀಮುಖಂಗಳನ್ನು | ಕರೆಯೆ ಕಂಡು ಕನಲಿ ಭೋ |
ರ್ಗರೆದು ಮತ್ತೆ ಖಾತಿಯಿಂದಲಿ || ರಿಪುವಿನಂಬ |
ತರಿದು ಸರ್ವಶಕ್ತಿಯಿಂದಲಿ ||  ತಡೆದರಾಗ  |
ಶರವನೆಚ್ಚು ಶೌರ್ಯದಿಂದಲಿ || ಏನನೆಂಬೆ  || ೧೫೯ ||

ಹೊಡೆದ ಕಣೆಗಳೆಲ್ಲ ಕ್ಷಣದಿ | ಕಡಿದು ಪೊಸ ಸುಮಾರ್ಗಣಂಗ |
ಳೊಡನೆ ಬಿಟ್ಟು ಕರದೊಳೆತ್ತಿ | ಪಿಡಿದ ಧನುವ ಖಂಡಿಸಲ್ಕೆ |
ಸಿಡಿದು ಪಿಂತೆ ಸರಿಯೆ ಗುರುಸುತ || ರಥವು ಮುಂದೆ |
ನಡೆಯೆ ಕುರುಕುಲಾಬ್ಧಿ ಗಜರುತ ||  ಬಂದು ನರನ |
ತಡೆದರಾಗ ನಿಲು ನಿಲೆನ್ನುತ || ಏನನೆಂಬೆ  || ೧೬೦ ||

ವಾರ್ಧಕ

ಬಂದೆರಗಿದರ್ ಕೂಡೆ ನರನ ಪಥಮಂ ಮುಸುಕು |
ತಂಧನೃಪನಾತ್ಮಜರ್ ಕರ್ಣ ಕೃಪ ಶಕುನಿ ಗುರು |
ನಂದನಾದ್ಯಖಿಲ ಸಮಸಪ್ತಕರ್ ಸಹಿತ ಧನು ಝೇಗೆಯ್ದು ಗಜಬಜಿಸುತ ||
ಒಂದೇ ಕ್ಷಣಾರ್ಧದೊಳ್ ಗೌತಮನ ತೆಗೆದೆಚ್ಚು |
ಹಿಂದೆ ರವಿಜನ ತುಡುಕಿ ಸೌಬಲನ ಬರಿಗೆಯ್ದು |
ನೊಂದಿಸಿ ತ್ರಿಗರ್ತರಶ್ವತ್ಥಾಮನೃಪನನುಜರಂ ಸದೆದನಾ ಪಾರ್ಥನು || ೧೬೧ ||

ಭಾಮಿನಿ

ಅತಿರಥಮಹಾರಥರ ಭಂಗಿಸಿ |
ಪ್ರತಿಭಟಭಯಂಕರ ಕಿರೀಟಿಯು |
ಕ್ಷಿತಿಪನಿರವನು ಕಾಂಬ ತವಕದಿ ಬರಲು ಮಾರ್ಗದಲಿ ||
ಖತಿಯೊಳುರಿಮಸಗುತ್ತಲಾ ಕುರು |
ಪತಿಯ ಸೇನೆಯ ಕೊಲ್ಲುತಿಹ ಮಾ |
ರುತಿಯ ಗರ್ಜನೆ ಕೇಳ್ದು ತಿರುಗಿದನವನ ಪೊರೆಗಾಗಿ || ೧೬೨ ||

ಕಂದ

ಮಾರುತತನಯನ ಕಾಣುತ |
ಧಾರಿಣಿಪಾಲಗೆ ಸುಕ್ಷೇಮವೆ ಪೇಳೆನಲುಂ ||
ಯಾರದು ಬಲ್ಲರು ತಾನು ವಿ |
ಚಾರಿಸಲಿಲ್ಲೆನಲರ್ಜುನನವನೊಡನೆಂದಂ || ೧೬೩ ||

ರಾಗ ಕೇದಾರಗೌಳ ಅಷ್ಟತಾಳ

ಅಣ್ಣಯ್ಯ ಕೇಳು ನೀ ಬಳಲಿರ್ದ ಭೂಪನ | ಕಣ್ಣಾರೆ ನೋಡಿಕೊಂಡು ||
ತಣ್ಣಗಾರಯ್ದು ಸಂತಯಿಸಿ ಮೇಣಿಲ್ಲಿಗೆ | ಮಿಣ್ಣನೆ ನಡೆತಪ್ಪುದು || ೧೬೪ ||

ಅನಕ ರಣಾಂಗಣಕಿದಿರಾಗಿ ಕಾದುವೆ | ಘನಪರಾಕ್ರಮದಿ ನಾನು ||
ವಿನಯದೊಳೀ ಕ್ಷಣ ತಡೆಯದೆ ಪೋಗೆಂದ | ಡನಿಲಸಂಭವ ಪೇಳ್ದನು || ೧೬೫ ||

ತಮ್ಮ ನೀ ಮರುಳು ಪೋಗೆನ್ನಯ ಕೂಡಿಂಥ | ಹೆಮ್ಮೆತನಂಗಳೇಕೆ ||
ಸುಮ್ಮನೆ ನಡೆ ಭೂಮಿಪಾಲನ ನೋಡುವ | ರೆಮ್ಮನು ಕೆಣಕಬೇಡ || ೧೬೬ ||

ವಾರ್ಧಕ

ಅನಿಲಸುತನಿಂತೆಂದು ಧಿಕ್ಕರಿಸಲಾ ಕ್ಷಣಂ |
ಜನಪನಂ ಕಾಂಬ ಕಡು ಲವಲವಿಕೆಯಿಂದಲಾ |
ವನಜಾಕ್ಷಫಲುಗುಣರ್ ನಡೆತರಲ್ಕಿತ್ತಲುಂ ಬೀಡಿನೊಳ್ ಭೂಪಾಲನು ||
ಇನಸುತನ ಕೂರಂಬಿನುಪಹತಿಯೊಳುರೆ ನೊಂದು |
ತನುವಿನೊಳ್ ವಶವಿಲ್ಲ ಕರಣೇಂದ್ರಿಯಂಗಳಂ |
ಘನದೂರ್ಧ್ವಶ್ವಾಸ ಘುರುಘುರಿಸೆ ಪರವಶನಾಗಿ ಮೂರ್ಛೆಯಿಂದಿರುತಿರ್ದನು || ೧೬೭ ||

ಕಂದ

ಧರಣಿಪನಿರವಂ ಕೇಳಿದು |
ಭರದಿಂ ದ್ರೌಪದಿ ತನ್ನ ಸಖೀಜನ ಸಹಿತಂ ||
ತರಹರಿಸುತ ನಡೆತಂದೀ |
ಪರಿಯಂ ಕಾಣುತ ಧೊಪ್ಪನೆ ಕೆಡೆದಿಂತೆಂದಳ್ || ೧೬೮ ||

ರಾಗ ನವರೋಜು ಆದಿತಾಳ

ಏನಾಯಿತೆಲೆ ಕಾಂತ | ಯಾರಿಂದ ನಿನಗಿಂಥ ||
ತಾನಿರಲೀ ವಿಧಿ ಬಂತು | ತಾಪವ ಸೈರಿಪುದೆಂತು || ೧೬೯ ||

ನೀತಿವಂತರು ನೀವು | ನಯದಿ ಕಾದಲು ನೋವು ||
ಘಾತಕರಿನ್ನರಿತಿಹರೆ | ಗಾಸಿಯೊಳಿಂದಯ್ತಹರೆ || ೧೭೦ ||

ಮೊದಲೇ ನಿಷ್ಠುರರವರು | ಮೋಸದಿ ಜೈಸದೆ ಬಿಡರು ||
ಕದನಕೆ ಧರ್ಮದಿ ಪೋಗಿ | ಕಾದಿದಿರೇ ಇದಿರಾಗಿ || ೧೭೧ ||

ಹರ ಹರ ಈ ಪರಿ ವಿಧಿಯು | ಹಣೆಯಲಿ ಗೀರಿದ ಲಿಪಿಯು |
ಧರಣಿಯೊಳಾವನುಭವಿಸಿ | ತೀರಿಸಬೇಕನುಸರಿಸಿ || ೧೭೨ ||

ರಾಗ ನೀಲಾಂಬರಿ ಅಷ್ಟತಾಳ

ಆಯಿತಿನ್ನೇನು ರಾಜ್ಯದ ಭೋಗ | ತೀರಿ | ಹೋಯಿತಿಂದಿನೊಳು ಸಾಕೆಮಗೀಗ ||
ದಾಯಾದ್ಯರುಗಳತಿ ಖೂಳರು | ಸರ್ವ | ಮಾಯಕದೊಳಗೆ ಸಮ್ಮೇಳರು || ೧೭೩ ||

ಹಸುವಿನೊಳ್ ಕೇಡುಬಾಗುಗಳನ್ನು | ಇತ್ತು | ಕಳೆದರು ಪ್ರಾಣಮಾತ್ರದೊಳಿನ್ನು ||
ಉಳಿದಿರ್ದೆವಿಂದಿಗೆ ಖಳರೊಳು | ಕಾಯ | ಇಳೆಗಾಗಿ ತೊರೆವುದಾಯ್ತಿವರೊಳು || ೧೭೪ ||

ಮಾನವ ಕೊಂಡರು ಪಗೆಗಳು | ಜೀವ | ದಾನವನಿತ್ತರೆಯವರೊಳು ||
ತಾನಾಗಿ ಹರಣವ ಕೊಡಲೆಂದು | ಬಂದೆ | ವೇನೆಂಬುದನು ಕಾಣದೆನಗೊಂದು || ೧೭೫ ||

ಧುರದೊಳಗಿಂದಿನವರೆಗಿಂಥ | ದೊಂದಾ | ದರು ಕಷ್ಟ ಪಡಲಿಲ್ಲೆನ್ನಯ ಕಾಂತ ||
ಹರಿ ತನ್ನ ಪಂಚ ಪ್ರಾಣಗಳೆಂದು | ಸಲಹಿ | ಧರಣೀಶನನು ಮರೆತೆಯೊ ಇಂದು || ೧೭೬ ||

ಭಾಮಿನಿ

ಹಲುಬಿದಳು ನಾನಾ ಪ್ರಕಾರದಿ |
ಲಲನೆ ಬಳಿಕಾ ರಾಯನಂಗದೊ |
ಳುಲಿವ ಗಾಯಕ್ಕೌಷಧಂಗಳ ಸೇಕಲೇಪಗಳ ||
ಕಲಿತ ಪಂಡಿತರಿಂದ ಮಾಡಿಸಿ |
ಮಲಗಿಸಿ ನೃಪೋತ್ತಮನ ಸುತ್ತಲು |
ನೆಲಸಿದರು ಸಚಿವಾಪ್ತ ಜನರುಗಳಖಿಳರೆಡೆಬಿಡದೆ  || ೧೭೭ ||

ಕಂದ

ಇತ್ತ ನೃಪಾಲನ ಕಾಂಬ ನಿ |
ಮಿತ್ತದಿ ಜವದಿಂ ಪೋಪ ಕಿರೀಟಿಯು ಭರದಿಂ ||
ಚಿತ್ತವು ಕದಡಿತು ಕಳವಳಿ |
ಸುತ್ತಲೆ ಕಂಬನಿದುಂಬುತಲೆಂದಂ ಹರಿಯೊಳ್  || ೧೭೮ ||

ರಾಗ ನೀಲಾಂಬರಿ ಧ್ರುವ ಝಂಪೆತಾಳ

ಕೇಳು ಮುರರಿಪು | ಕಮಲಲೋಚನ ||
ಪೇಳಲಂಜುವೆ | ಪೆಚ್ಚಿದುರಿಯನು || ೧೭೯ ||

ಒಡಲು ಸುಡುವುದು | ತಾಳಲಾರೆನು ||
ಪೊಡವಿಪಾಲನ | ವರ್ತಮಾನವ || ೧೮೦ ||

ಸಹಜವಿರ್ಪುದೊ | ಏನು ಕೇಳುವ ||
ದಿಹುದೊ ಕಿವಿಯಲಿ | ಕಾಣೆನಿಂದಿಗೆ || ೧೮೧ ||

ಪ್ರಾಣಮಾತ್ರದಿ | ಬದುಕಿಹನೇನೊ ||
ಮೇಣು ಸುರರಲಿ | ಸೇರ್ದನೋ ಹರಿ || ೧೮೨ ||

ನಿಶ್ಚಯಂಗಳ | ತಿಳಿಯದೆನಗದು ||
ಸ್ವಚ್ಛವಾಗಿಯೆ | ನುಡಿಯಬೇಹುದು || ೧೮೩ ||

ರಾಗ ಕಾಂಭೋಜಿ ಝಂಪೆತಾಳ

ಕಲಕಿ ಬರುತಿದೆ ಮನಸು ಕಯ್ ಕಾಲು ನಡುಗಿ  ಕ |
ತ್ತಲೆ ಬೀರುತಿದೆ ಕಣ್ಗೆ ಹರಿಯೆ |
ನೆಲ ಕಂಡರರಸಿನದ ಛಾಯೆ ತೋರಿದು ತನುವ |
ನೊಲೆದು ಕಂಪಿಸುತಿಹುದು ಹರಿಯೆ  || ೧೮೪ ||

ಆ ನರಾಧಿಪ ಜೀವದಿಂದಿಹನೊ ನೋಳ್ಪ ಋಣ |
ವೇನಾದರೆನಗುಂಟೆ ಹರಿಯೆ |
ಸೇನೆಯೊಂದುಳಿಯದಯ್ದಿದ ಪರಿಯ ನೋಡಿದರೆ |
ಮಾನನಿಧಿಯುಳಿವಿಲ್ಲ ಹರಿಯೆ  || ೧೮೫ ||

ಅಂತಕಜನಂಗ ನಾಲ್ವರು ನಮ್ಮ ಜೀವವೆಂ |
ಬಂತರ್ಯ ನೀ ಬಲ್ಲೆ ಹರಿಯೆ |
ಎಂತು ಸೈರಿಪೆನಕಟ ಕಾಯ ತೊಲಗಿದ ಮೇಲೆ |
ಚಿಂತೆರಹಿತನೆ ಪೇಳು ಹರಿಯೆ  || ೧೮೬ ||

ವಾರ್ಧಕ

ನರನಾಥ ಲಾಲಿಸೈ ಫಲುಗುಣನ ನುಡಿಗೆ ಮುರ |
ಹರನವನ ಸಂತಯಿಸುತಳಲದಿರು ನಡೆ ನೋಳ್ಪ |
ರರಸನನು ತಾವೆಂದೆನುತ್ತಾ ವರೂಥಮಂ ಹರಿಸಿದಂ ಸೂಟಿಯಿಂದ ||
ತೆರಳುವ ಕಿರೀಟಿಯಂ ಕಂಡು ಪೋಗದಿರೆಲವೊ |
ನರ ನಿನ್ನ ಸಾಹಸವ ತೋರೆಂದು ಗರ್ಜಿಸುತ |
ತರಣಿಜಂ ಬಂದಡ್ಡಗಟ್ಟಿ ಬಾಣಂಗಳಂ ಕವಿಸಿದಂ ನರನ ಮೇಲೆ || ೧೮೭ ||

ರಾಗ ಭೈರವಿ ಏಕತಾಳ

ನೋಡಿದನಿದ ಕಲಿ ಪಾರ್ಥ | ವಿಧಿ | ರೂಢಿಸಿತಿನ್ನು ಯಥಾರ್ಥ ||
ಮಾಡುವುದೇನೆನುತಾಗ | ಶರ | ಜೋಡಿಸಿದನು ತಾ ಬೇಗ || ೧೮೮ ||

ಮುಸುಕಿದನೊಂದೇ ಕ್ಷಣದಿ | ಕಣೆ | ವಿಸರವನೆಲ್ಲವ ಕಣದಿ ||
ಪಸರಿಸಿದಂಬುಗಳುಗಿದು | ಪೊಸ | ಮಸೆಯ ಶರಂಗಳ ಸುರಿದು || ೧೮೯ ||

ಬೊಬ್ಬಿರಿದನು ಕಲಿ ಕರ್ಣ | ಕಂ | ಡುಬ್ಬಿದ ನರ ಸಂಪೂರ್ಣ ||
ತೆಬ್ಬಿನ ಝೇಂಕಾರದೊಳು | ಕಣೆ | ದಬ್ಬಿದನರೆ ನಿಮಿಷದೊಳು || ೧೯೦ ||

ಭಾಮಿನಿ

ಫಲುಗುಣನ ಶರಹತಿಗೆ ಕರ್ಣನು |
ನಿಲಲರಿಯದುರಿಗೊಂಡು ಮರಳಲು |
ಕಲಿ ಧನಂಜಯ ಮುಂದೆ ನಡೆಯಲ್ಕಿತ್ತ ಮಾರುತಿಯು ||
ಕಲಹದೊಳಗೇನೆಂಬೆ ಕೌರವ |
ಬಲನಿಪಾತವ ಮಾಡೆ ರಿಪುಕುಲ |
ತಿಲಕ ನೋಡಿದು ಕೌಳಿಕದ ಸಂಧಾನವನು ನೆನೆದ || ೧೯೧ ||

ಕಂದ

ಚರರೀರ್ವರನಂ ಹತ್ತಿರೆ |
ಕರೆದರುಹಿದ ವಾಯುಜನಲ್ಲಿಗೆ ಪೋಗೆನುತಂ ||
ಪರಮೋಲ್ಲಾಸದೊಳಾ ದೂ |
ತರು ತಾವಯ್ತಂದಾ ಭೀಮನೊಳಿಂತೆಂದರ್ || ೧೯೨ ||

ರಾಗ ಫರಜು ಏಕತಾಳ

ಏನೆಮ್ತಿದ್ದೆಲೆ ಭೀಮ | ಸೇನಪ್ಪಾ ನಿನ್ಮೇಲೆ |
ತಾನೆ ನಮ್ದೊರೆ ದಯವಾದ || ಸಾಕೇಟ್  ಮಾತು ||
ಜ್ಞಾನುಳ್ಳ ಧೊರೆಗೆ ಮ | ದ್ದಾನೆ ಕರ್ಣಪ್ಪ ತುಳಿದು |
ಮಾನವ್ರ ಮೇಗಣಭೋದಿಲ್ಲ | ಸಾಕೇಟ್ ಮಾತು || ೧೯೩ ||

ಎಲ್ಲ ಬಡೆದಾಟವನ್ನು | ನಿಲ್ಲಲ್ಲಿ ಕಾಳಗವಿಂ |
ದೊಲ್ಲೆ ತಾನೆಂಬುತಯ್ದಾನೆ || ಸಾಕೇಟ್ ಮಾತು ||
ಸುಳ್ಳಿನೋಲೆಕಾರನಲ್ಲ | ಪೊಳ್ಳೆಲ್ ನೀನೆಂದಕಾಸಿ |
ಒಳ್ಳೆ ಒಳ್ಳೇ ಮೆಚ್ಚಿಕೊಂಡಯ್ದೆ ||  ಸಾಕೇಟ್ ಮಾತು || ೧೯೪ ||

ಓಟು ದಂಡೆಲ್ಲ ನಿನ್ನ | ಕೂಟೆ ಕಡಿದಾಡಿದರು |
ಗೂಟ ನಿಂತ ಹಾಗೆ ನಿಂತಯ್ದಿ || ಸಾಕೇಟ್ ಮಾತು ||
ಈಟಾಗುಳ್ಳ ಗೆಣೆಯರ | ಕೂಟಾದರು ಪೋಗಿ ತಿವಿ |
ದಾಟದಾ ಪರಿಪಾಟೇನೆಂಬ್ತಿ || ಸಾಕೇಟ್ ಮಾತು || ೧೯೫ ||

ವಾರ್ಧಕ

ದೂತರ ದುರುಕ್ತಿಗಂ ಮೆಚ್ಚಿದು ಜಗತ್ಪ್ರಾಣ |
ಜಾತ ನಗುತವರ ಬೋಳಯಿಸಿ ನಿಮ್ಮೊಡೆಯ ವಿ |
ಖ್ಯಾತನಹ ಸಮರದೊಳ್ ಬಳಲಿದಗ್ರಜನ ಹರಿಬಂ ಪೂರವಿಸಿದಲ್ಲದೆ ||
ಭೂತಳಾಧಿಪನೆಡೆಗೆ ಪೋಪವಂ ತಾನಲ್ಲ |
ಮಾತಿನಿಂದೇನು ಫಲ ನೆರೆದಿಹ ಚತುರ್ಬಲವ |
ನಾತುಕೊಳಲಾನೋರ್ವನೇ ಸಾಕು ನಮ್ಮವರಗೊಡವೆ ನಿಮಗೇಕೆಂದನು || ೧೯೬ ||

ಕಂದ

ಎನುತವರಂ ಕಳುಹಿಸಿ ಭೀ |
ಮನು ತನ್ನವರೀರ್ವರನುಂ ಕೌರವನೆಡೆಗಂ ||
ವಿನಯದೊಳಟ್ಟಲು ಬಂದಾ |
ಜನಪನೊಳಿಂತೆಂದರು ವಿಕ್ರಮದಿಂದಾಗಳ್ || ೧೯೭ ||

ರಾಗ ದಿವಾಳಿ ಏಕತಾಳ

ತೆಕ್ಕೋ ಸಲ್ಲಾಮು ಭಿರ್ರನೆ | ಕುರುರಾಯ ಭೂಪ | ತೆಕ್ಕೋ ಸಲ್ಲಾಮು ಭಿರ್ರನೆ    || ಪ ||

ಕಾಟಕಮಂದಿ ನೋಟ್ಕ್ಯಾ ಸುಮ್ಗೇ | ಮೀಟಾದೋಲೆಕಾರರ್ ಭೀಮ್ಗೇ ||
ಥಾಟು ಥಾಟು ಬಜಾಯ್ಸುವರಿಲ್ಲಿ | ನಮ್ದೊರೆ ಸಿಟ್‌ಗಿಟ್ |
ಮೀಟಾಗ್ಯಾನು ಕಾಣೆನಿದರಲ್ಲಿ  || ತೆಕ್ಕೋ || ೧೯೮ ||

ಮಂಕುಗೆಣೆಯರ್ ಬಂದೂಕು ಸೋಟು | ಡೊಂಕು ಡೊಂಕು ಪಿಸ್ಕುವರೀಟು ||
ಬಿಂಕಗಿಂಕ ಬೇಡಿರೆಂದವನೆ | ಭೀಮಪ್ಪ ನಿನ್ನ |
ಟೊಂಕ ಮುರಿವೆನೆಂತ ನಿಂತವನೆ || ತೆಕ್ಕೋ || ೧೯೯ ||

ನಮ್ದೀ ನಿಮ್ದೀ ಲಡಾಯಿದಾಗೆ | ತಿಮ್ದೇವು ಗಿಮ್ದೇವು ಮೊಗದಾ ಮ್ಯಾಗೆ ||
ಗುಮ್ದೇವು ಸಿಟ್ಟು ಮಾಡಬೇಡೆಂದ | ನಿನ್ ಹತ್ತಿರ ಹೋಗಿ |
ನಮ್ಮವ್ಗೊಮ್ಮೆ ಹೇಳಿ ಬಾರೆಂದ  || ತೆಕ್ಕೋ || ೨೦೦ ||