ವಾರ್ಧಕ

ಆದಡೆಲೆ ಮಾವ ಕೇಳ್ ಪೂರ್ವದಲಿ ತಾರಕನಿ |
ಗಾದರು ತ್ರಿಯಾತ್ಮಜರು ಮೇಲಜನ ವರದಿಂದ |
ಲಾದುದವರಿಗೆ ಪುರತ್ರಯವಂಬರದೊಳು ಬಳಿಕವರು ಜಗಕಹಿತರಾಗಿ ||
ಆ ದೇವರಿಪುಗಳೊಡನಾಹವಕೆ ಹರನಯ್ದ |
ಲಾ ದಯಾನಿಧಿ ಸರಸಿಜಾಸನಂ ಸುರರ ಮೊರೆ |
ಯಾದರಿಸಿ ಸೂತತನಮಂ ಮಾಡಿ ತ್ರಿಪುರರಂ ನಾಶಮಂ ಗೆಯ್ದಿಸಿದನು || ೬೦ ||

ಶಾರ್ದೂಲವಿಕ್ರೀಡಿತಂ

ಮಾವಂ ಕೇಳದರಿಂದ ನೀ ಕೃಪೆಯನುಂ ಮಾಡೆಮ್ಮನುಂ ಪ್ರೇಮದಿಂ
ಕಾವಂಥಾ ತೆರನಿರ್ದಡೀ ಕ್ಷಣದೊಳುಂ ಕಾರುಣ್ಯದಿಂ ಪೇಳು ನೀ
ನೀ ವೀರಂ ಸುಭಟೋತ್ತಮಂ ಕಲಿಯಲೈ ನಿರ್ಮೋಹಕಾ ಯುದ್ಧದೀ
ಸೇವಾವೃತ್ತಿಯಿದಲ್ಲ ದಿಗ್ವಿಜಯಮಂ ಸೇರ್ವಂತೆ ಮಾಡೆಮ್ಮನುಂ || ೬೧ ||

ಕಂದ

ಎನೆ ಮಾದ್ರೇಶನು ಕೇಳ್ದಾ |
ತನ ನುಡಿಗೊಡಬಡಲಾ ರವಿಜನ ಕರೆದಾಗಂ ||
ವಿನಯದಿ ಶಲ್ಯನ ಕಯ್ಯೊಳು |
ಜನಪಂ ತೆಗೆದಿತ್ತು ಮನ್ನಿಸಿದನತಿ ಮುದದಿಂ || ೬೨ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಮೇಲೆ ಭೂಪತಿ ತೆರಳಿದನತ್ತ | ತ | ನ್ನಾಲಯಕಾಗಿ ಸೂರ್ಯಜನಿತ್ತ ||
ಕೋಲಿನ ಮನೆಗಾಗಿ ಬಂದನು | ಶಸ್ತ್ರ | ಜಾಲಕರ್ಚಿಪ ಮನದಂದನು  || ೬೩ ||

ಧನುದೇವತೆಗೆ ಪೂಜೆ ಮಾಡಿದ | ಕ | ಯ್ಯನು ಜೋಡಿಸುತ ಜಯ ಬೇಡಿದ ||
ತನಿರಕ್ತಗಲಸಿದ ಬಲಿಗಳ | ನಿತ್ತು | ನೆನೆದನು ಭೂತ ಗಣಂಗಳ || ೬೪ ||

ಈಸು ಪೂಜೆಯನು ತಾನೆಸಗಲು | ದ | ರ್ಭಾಸನವನು ಹಾಸಿ ಮಲಗಲು |
ಗಾಸಿ ಮಾಡುತ್ತ ಕತ್ತಲೆಯನು | ಎಳೆ | ನೇಸರಿಂದರ್ಕ ರಂಜಿಸಿದನು || ೬೫ ||

ವಾರ್ಧಕ

ಇನನುದಯದೊಳಗೆದ್ದು ನಿತ್ಯ ಕರ್ಮಂಗಳಂ |
ವಿನಯದಿಂ ರಚಿಸಿ ಬಹುದಾನಂಗಳಂ ವಿಪ್ರ |
ಜನಕಿತ್ತು ರವಿಜನತಿ ರಭಸದಿಂ ಕೊಳುಗುಳಕೆ ಸನ್ನದ್ಧನಾಗಿ ಬರಲು ||
ಅನಕ ಮಾದ್ರೇಶನಯ್ತಂದು ನಿಜಸ್ಯಂದನವ |
ನನುಗೊಳಿಸಿ ತುರಗಂಗಳಂ ಜೋಡಿಸುತ್ತಲಾ |
ಗನುವರಕ್ಕುದ್ಯುಕ್ತನಾಗಿ ನಿಂದಿರೆ ಕಂಡು ರವಿಜನತ್ಯುತ್ಸಹದೊಳು || ೬೬ ||

ಭಾಮಿನಿ

ಸಾರಥಿಗೆ ವಂದಿಸಿ ವರೂಥದ |
ವಾರುವಂಗಳಿಗೆರಗಿ ಸೊಗಯಿಪ |
ತೇರಿಗೆ ಪ್ರದಕ್ಷಿಣೆಯ ಗೆಯ್ದೊಡನಂದು ಸಂತಸದಿ ||
ಭೂರಿ ವಾದ್ಯದ ವಂದಿಜನಕಯ್ |
ವಾರಿಸಲು ಪಟುಭಟರ ಗಡಣದೊ |
ಳೇರಿದನು ಕಲಿ ಕರ್ಣನಹಿತರ ಧೈರ್ಯಘಟ ಬಿರಿಯೆ || ೬೭ ||

ಕಂದ

ದಳಪತಿ ಸನ್ನಹವಾಗಲು |
ತಿಳಿದಾ ಕ್ಷಣ ಮಹಿಪಾಲಕನತಿರಥರೊಡನಂ ||
ತುಳುಕುವ ಶರಧಿಯವೋಲ್ ಕೊಳು |
ಗುಳಕೆನುತಯ್ತಂದನು ರವಿಜಾತನ ಪೊರೆಗಂ || ೬೮ ||

ರಾಗ ಕಾಂಭೋಜಿ ಝಂಪೆತಾಳ

ಕೇಳು ಧೃತರಾಷ್ಟ್ರಾವನಿಪ ನಿನ್ನ ಮದದಾನೆ | ಯಾಳುತನದುಬ್ಬಿನಬ್ಬರವ ||
ಸೂಳವಿಪ ಭುಜಪ್ರತಾಪಗಳಿಂದ ಭುಲ್ಲವಿಸಿ | ತೇಳು ಭುವನಂಗಳನು ಬಳಿಕ || ೬೯ ||

ಕಲಿ ಕರ್ಣನೆಂದನೀ ದಳನಿಕಾಯದೊಳೆನಗೆ | ಫಲುಗುಣನ ಕುರುಹುಗಳ ಮತ್ತಾ |
ಜಲಜನಾಭನ ಮಯ್ದುನನ ವರೂಥದ ನೆಲೆಯ | ಕಲಹದ ಕಠೋರವನು ಸಹಿತ || ೭೦ ||

ತೋರ್ವರಾರವರಿಂಗೆ ಬೇಕಾದ ದ್ರವ್ಯಗಳ | ನೂರ್ವಿ ಮೊದಲಾದ ವಸ್ತುಗಳ ||
ಸರ್ವಸ್ವವನು ಕೊಟ್ಟು ಮನ್ನಿಸುವೆ ನಿಮಿಷಕಾ | ಗರ್ವಿತನ ಮುಂಕೊಳಿಪುದೆಂದ || ೭೧ ||

ಬವರದೊಳಗೆನ್ನ ತನುವಾ ಧನಂಜಯನ ಕೂ | ಡವನ ತನುವೆನ್ನೊಳನುವಾಗಿ ||
ತವಕಿಸುತಲೀ ಪರಿಯ ಸಮಯುದ್ಧವೆಸಗಿದೊಡೆ | ಭುವನವಿಖ್ಯಾತನಹೆ ಬಳಿಕ || ೭೨ ||

ಪಾಕಶಾಸನಸುತನ ತರಿದು ರಕುತವ ಭೀಮ | ನಾ ಕಪಾಲದೊಳು ಮೊಗೆಮೊಗೆದು |
ಶಾಕಿನಿಯ ಬಳಗಕುಣಿಸಿದರೆ ಕೌರವನೆನ್ನ | ಸಾಕಿದಕೆ ಫಲವಾಯಿತೆಂದ || ೭೩ ||

ವಾರ್ಧಕ

ವಿಜಯನೊಡನಾಹವದೊಳಿದಿರಾಗಿ ಪಾರ್ಥನೊಳ್ |
ಭುಜಪ್ರತಾಪದಿ ಸೆಣಸುತಾ ಕಿರೀಟಯ ಕೂಡೆ |
ನಿಜ ಶೌರ್ಯಮಂ ತೋರುತರ್ಜುನನ ಕೆಣಕಿದು ಧನಂಜಯನ ಚಚ್ಚರದೊಳು ||
ಭಜಿಸುತ ಬಿಭತ್ಸುವಿನ ನುಗ್ಗೊತ್ತಿ ನರನೊಳಜಿ |
ಗಿಜಿಯಾಗಿ ಸವ್ಯಸಾಚಿಯ ಸದೆದು ಜಿಷ್ಣುವಂ |
ಗಜರಿಸುತ ಫಲುಗುಣನೊಳೆಚ್ಚಾಡಿ ಸರಸದಿಂ ಕಾದಲಾಂ ಧನ್ಯನೆಂದ || ೭೪ ||

ಭಾಮಿನಿ

ಶ್ವೇತವಾಹನಗೆನಗೆ ರಣನಿ |
ರ್ಭೀತ ಗಾಂಡೀವಿಗೆ ಮಹೋನ್ನತ |
ವೀತತುಕ್ಷಣಕಳವಿ ಘಟಿಸಿದರೀ ಧರಿತ್ರಿಯಲಿ ||
ಖ್ಯಾತನಹೆ ತಾನೆಂದು ಬಲು ಸ |
ತ್ತ್ವಾತಿಶಯದಿಂದುಬ್ಬಿ ರವಿಸಂ |
ಜಾತ ನುಡಿಯಲು ಕೇಳ್ದು ಬಳಿಕಾ ಶಲ್ಯನಿಂತೆಂದ || ೭೫ ||

ರಾಗ ಮಧ್ಯಮಾವತಿ ಏಕತಾಳ

ಕೇಳು ಸೂತನ ತನಯನೆ ನೀನು | ಈ | ಖೂಳತನಕೆ ನಾನುಸಿರುವುದೇನು || ಕೇಳು  || ಪ ||

ವ್ಯರ್ಥವೀ ಜನಕೆಲ್ಲ ಮೊರೆಯಿಟ್ಟರೇನಪ್ಪು |
ದರ್ತಿಯಿಂದೆನಗೆ ನೀ ಪೇಳ್ದರೀಗ ||
ಪಾರ್ಥಿವರೊಳು ನಿರುಪಮ ಶೌರ್ಯವಂತ ಸ |
ಮರ್ಥನರ್ಜುನನನು ನಾ ತೋರಿಸುವೆನಯ್ಯ | ಕೇಳು || ೭೬ ||

ಕೊಡದಿರು ಕಾಸೊಂದೆನಗೆ ಈ ಕ್ಷಣದೊಳು |
ಬಿಡದೆ ರಣಾಂಗಣದೊಳಗೊಲಿದು ||
ಧಡಿಗ ನಿನ್ನಯ ಕರುಳ ತೋಡಿ ರಣದಿ ಜಯ |
ಮಡದಿಯನೊಯ್ವ ಕಲಿ ನರನ ತೋರುವೆನೀಗ  || ಕೇಳು || ೭೭ ||

ಅವರಿವರೊಳು ನೀ ಪಲ್ಗಿರಿವುದೇತಕೆ ಸರ್ವ |
ಸ್ವವನಿತ್ತು ನೋಡುವ ಮನವಿರ್ದಡೆ ||
ಬವರಗಾರರ ದೇವ ರಿಪುವಂಶಗಜ ಕಂಠೀ |
ರವನ ತೋರುವೆ ನಾನು ನೀ ಮಾಳ್ಪುದೇನು || ಕೇಳು || ೭೮ ||

ವಾರ್ಧಕ

ಎಲೆ ಮೊಗೇರನ ಮಗನೆ ಗಳಹದಿರು ನಿನಗೇಕೆ |
ಕಲಿ ನರನ ಸಂಗರದ ಮಾತು ಸುರಗಜವೆತ್ತ |
ಹುಲು ಕೋಣ ನೀನೆತ್ತ ಬಯಲ ಪೌರುಷವಿದಕೆ ತಾ ಮೆಚ್ಚೆ ಪೋಗೆಂದನು ||
ಕಲಕಿದುರಿಯಂತೆ ರೋಷಂ ಪೆಚ್ಚಿದಾಲಿಗಳ್ |
ಬಲಿದ ಕಿಡಿಯುಗುಳಿದವು ಮೋರೆ ಕಾಯ್ದಂತಾಯಿ |
ತಲುಗಿದವು ಮೀಸೆಗಳು ತುದಿವೆರಳನಾಡಿಸುತಲಾ ಕರ್ಣನಿಂತೆಂದನು || ೭೯ ||

ರಾಗ ಕೇದಾರಗೌಳ ಅಷ್ಟತಾಳ

ಖೂಳ ಮಾದ್ರೇಶ ನೀನೇನೆಂದೆಯೆಲವೊ ಈ | ರೇಳು ಲೋಕದೊಳೆನ್ನನು |
ಕೇಳಿ ಬಲ್ಲರು ಬಿಡು ಬಿಡು ನಿನ್ನ ಪೌರುಷ | ದೇಳಿಗೆಯನು ಸುಮ್ಮನೆ  || ೮೦ ||

ಹುರುಳೇನು ಹಳ್ಳಿಯ ಕುರುಬರ್ಗೆ ಠಕ್ಕಿನ | ಹರಳು ಮಾಣಿಕವಲ್ಲವೆ |
ಧರೆಯೊಳು ಶಿಥಿಲಪೌರುಷರಿಗೆ ನರನಂಥ | ಧುರಧೀರರಿಲ್ಲವೆಂದು || ೮೧ ||

ಕಾಣುವುದೀ ಮಾತು ಸಹಜವಾಗಿದೆ ಮಾದ್ರ | ಕ್ಷೆಣಿಪಾಲರ ವಂಶಕೆ |
ಕೇಣವಲ್ಲದೆ ದುರ್ಗುಣಂಗಳ ಚೇಷ್ಟೆಯ | ಠಾಣವಲ್ಲದೆ ಬೇರುಂಟೆ || ೮೨ ||

ಅಹಿತರು ಸಲೆ ಮತ್ಸರಿಗಳು ಸುಜ್ಞಾನವಿ | ರಹಿತರು ನಿಷ್ಕೃಪರು ||
ಕುಹಕಿಗಳತಿ ಚಾಂಡಾಲರು ಮಾದ್ರಾ | ಮಹಿಯೊಳಗುದಿಸಿರ್ಪರು  || ೮೩ ||

ಎಲೆ ಷಂಡ ಕೇಳು ನೀನಿಂದು ಕಿರೀಟಿಯ | ಬಲುಹಿಗೆ ಬೆದರಿಕೊಂಡು ||
ಹುಲುಭಟನೆಂದೆನ್ನ ಜರೆದೆಯ ಕರ್ಣನ | ಕಲಿತನವರಿಯದಿಂತು || ೮೪ ||

ಭಾಮಿನಿ

ಕ್ಷಿತಿಪ ಕೇಳೈ ಬಳಿಕ ಸೂರ್ಯನ |
ಸುತನ ಶಲ್ಯನ ನುಡಿಗೆ ನುಡಿ ಹೆ |
ಚ್ಚಿತು ಮಹಾಭಯವಾದುದೀರ್ವರ ರಭಸದದುಭುತಕೆ ||
ಅತುಳಬಲ ಮಾದ್ರೇಶನಿತ್ತಲು |
ಜತೆಯ ನಿಜ ಮೋಹರವ ನೆರಹಿಸ |
ಲತಿ ಪರಾಕ್ರಮಿ ಕರ್ಣ ತಿಳಿದೆಚ್ಚರಿಸೆ ಸೈನಿಕವ  || ೮೫ ||

ಕಂದ

ಕಳಕಳದಿಂದಾ ರಣಕಂ |
ದಳವನು ನೆರಹಿಸಲಾ ಶಲ್ಯನು ರಥದಿಂದಂ ||
ಇಳಿದಯ್ದಿದನಾ ಕ್ಷಣಕಾ |
ಒಳಕೋಟೆಯೊಳೆದ್ದುದು ಕದನದ ಬಲು ರಭಸಂ || ೮೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೂಡೆ ಕೇಳುತ ಬಂದ ಕೌರವ | ರೂಢಿಪತಿ ಒಳತೋಟ ನಿಲಿಸಿ ವಿ |
ಭಾಡಿಸಿದ ಶಲ್ಯಂಗೆ ಶಾಂತವ | ಮಾಡಿ ಬಳಿಕ || ೮೭ ||

ರವಿಜ ಮಾದ್ರೇಶ್ವರರ ಮನಕ್ಲೇ | ಶವನು ಬಿಡಿಸಿದು ಮತ್ತೆ ಹರುಷವ |
ಹವಣಿಸುತ ನೆರೆಗೆಯ್ದು ಕಳುಹಿದ | ಬವರಕಾಗ || ೮೮ ||

ಮೊಳಗಿದವು ನಿಸ್ಸಾಳಕೋಟಿಯು | ಕಳಕಳಧ್ವನಿ ಬೆದರಿಸಿತು ಜಗ |
ವಳುಕಿದುದು ಫಣಿ ಕೂರ್ಮ ದಿಗ್ಗಜ | ವಿಳೆಯು ನಡುಗೆ || ೮೯ ||

ವಾರ್ಧಕ

ಅಬ್ಬರಿಸಿ ಮೋಹರವ ನೂಕಿದಂ ಕೂಡೆ ಧರೆ |
ಗುಬ್ಬಸಂ ಘಟಿಸುವಂತೀ ಚಮೂಪಂ ನಡೆಯ |
ಲಿಬ್ಬದಿಯೊಳವಶಕುನಮಂ ಕಂಡು ಗಣ್ಯಕದನುಂ ತಾರದಾ ಕ್ಷಣದೊಳು ||
ಉಬ್ಬಿದ ಮದಾಂಧತನದಿಂದಯ್ದುತಿಹ ಭಟರ |
ಬೊಬ್ಬೆಯಿಂ ಘೀಳಿಡುವ ವಾರಣರವಂಗಳಿಂ |
ದುಬ್ಬರದ ಚಾಪಠೇಂಕಾರದಿಂದಯ್ದೆ ರಿಪುಸೇನೆ ತಾ ಮುಕ್ಕುರಿಸಿತು || ೯೦ ||

ಭಾಮಿನಿ

ಅಳವಿಯಲಿ ಚತುರಂಗಸೇನೆಯು |
ಹಳಚಿ ಹೊಸ ಕುಮ್ಮರಿಯ ಪೋಲ್‌ರಣ |
ದೊಳಗೆ ಪೆಣ ಸಾಲಿಟ್ಟು ಕೆಡೆದುದು ರಕುತ ಮಡುಗಟ್ಟಿ ||
ತಳಿತನೊಣಗಳ ಮಿದುಳ ಮಾಂಸಂ |
ಗಳಲಿ ರೌದ್ರಾಕಾರವೆಸೆದುದು |
ಬಳಿಕ ರಣವಿಕ್ರಮರು ತಾವ್ ಕೈಗೊಂಡರಾಹವವ || ೯೧ ||

ಕಂದ

ಇತ್ತಲು ಸಮಸಪ್ತಕರೊಡ |
ನೊತ್ತುತಲೊಂದೆಸೆಯಲಿ ಕಾದುತ್ತಿರೆ ಪಾರ್ಥಂ ||
ಅತ್ತಲು ಕೌರವಬಲಕೆ ಮ |
ರುತ್ತಜ ತಾಗಲು ರವಿಜಂ ಬೆರಸಿದ ನೃಪನಂ || ೯೨ ||

ರಾಗ ದೇಶಿ ಮಟ್ಟೆತಾಳ

ಎಲೆಲೆ ಧರ್ಮಜ | ನಿಲ್ಲು ಸಮರಕೆ || ಸುಲಭವೇ ಧರಾಧಿಪತ್ಯ | ದೊಲವು ಇನಿತಕೆ || ೯೩ ||
ನಿನಗೆ ಸಮರದ | ವ್ಯಸನವೇತಕೆ || ಬಿನುಗೆ ನೀ ಪಲಾಯನಕ್ಕೆ | ಮನವ ಕೊಡದಿರು || ೯೪ ||
ಎಂದು ಕನಲುತ | ರವಿಜ ರೋಷದಿ || ಅಂದು ಮರಳಿ ನೂರು ಶರಗ | ಳಿಂದ ಮುಸುಕಿದ ||೯೫||

ಭಾಮಿನಿ

ಎಲೆಲೆ ಹಾ ಹಾ ಖೂಳ ಕರ್ಣನ |
ಬಲುಹು ಬಿರುಸೈ ಕೋಳು ಹೋದುದು |
ಸಲೆ ನೃಪಾಲನ ಬಿಡಿಸಿಕೊಳ್ಳುವರಿಲ್ಲಲಾ ಎನುತಾ ||
ಬಲವು ಬೊಬ್ಬಿಡುತಿರಲು ಕೇಳಿದು |
ಕಲಿ ಮರುತ್ಸತಮುಖ್ಯ ಸೇನಾ |
ಜಲಧಿ ಕವಿದುದು ರವಿಜನಿದಿರಲಿ ನೃಪನ ಹಿಂದಿಕ್ಕಿ || ೯೬ ||

ರಾಗ ಭೈರವಿ ಏಕತಾಳ

ಪೂತುರೆ ರಾಧಾತನುಜ | ಬಲು | ಘಾತಕಿಯಹುದೈ ಸಹಜ ||
ಪಾತಕಿಯೇ ನಲಿದಾಡಿ | ಪು | ಣ್ಯಾತುಮನೊಳು ಕೈಮಾಡಿ || ೯೭ ||

ಬದುಕುವೆನೆಂಬಾಸೆಯಲಿ | ಬಂ | ದೊದಗಿದೆ ದುರ್ವಾಂಛೆಯಲಿ ||
ಸದರವೆ ನಿನಗೆಂದೆನುತ | ಮುಸು | ಕಿದರೆಲ್ಲರು ಝೋಂಪಿಸುತ || ೯೮ ||

ದ್ಯುಮಣಿಯ ಸುತನದ ಕಂಡು | ತಾ | ನಿಮಿಷದೊಳಗೆ ಮುಂಕೊಂಡು ||
ಸಮರದಿ ರಿಪು ಸೇನೆಯನು | ಸದೆ | ದೆಮನ ಪುರಿಗೆ ಕಳುಹಿದನು || ೯೯ ||

ವಾರ್ಧಕ

ಚತುರಂಗಬಲವ ಸಂಹರಿಸಿದು ರಣಾಂಗಣದೊ |
ಳತುಳ ಧೃಷ್ಟದ್ಯುಮ್ನನಂ ಸದೆದು ಮಾದ್ರಿಜರ |
ಸತುವಮಂ ನೆರೆಗೆಡಿಸಿ ದ್ರೌಪದೇಯರ ಜಡಿದು ಪಾಂಚಾಲಕೇಕಯರನು ||
ಮತಿವಿಹೀನರ ಮಾಡಿ ಮಿಕ್ಕಾದ ನಾಯಕರ |
ಪತಿತರೆಂದೆನಿಸಿ ಕಲಿಭೀಮನಂ ತಿರುಗಿಸುತ |
ಪ್ರತಿಭಟಭಯಂಕರಂ ಬೊಬ್ಬಿರಿದ ಸಾಹಸಕೆ ಮೆಚ್ಚಿದಂ ಮಾದ್ರೇಶನು || ೧೦೦ ||

ರಾಗ ಕಾಂಭೋಜಿ ಅಷ್ಟತಾಳ

ಭಳಿರೆ ರಾಧೇಯ ಮೆಚ್ಚಿದೆನು | ನಿನ್ನ | ಕೊಳುಗುಳವ ಕಂಡು ಹೆಚ್ಚಿದೆನು ||
ಸುಳಿವವರಾರು ಭೂ | ತಳದಿ ಸುರಾಸುರ |
ರೊಳಗೆ ನಿನ್ನ ಸಮಾನರಹದಳ | ದುಳದ ಭಟರುಗಳಿಲ್ಲವೈ || ೧೦೧ ||

ಏಸು ಬಲಾಢ್ಯ ತೋಳುಗಳೊ | ಮೇಣಿ | ನ್ನೇಸು ವಿಕ್ರಮದ ಬಾಣಗಳೊ ||
ಈಸು ಪೆಣಂಗಳ | ರಾಸಿಯ ಕದನದಿ |
ಬೇಸರಿಸದೆ ನೀನೊಟ್ಟಿದೈ ಶಾ | ಭಾಸುರೇ ಕಲಿ ಧೀರನೈ || ೧೦೨ ||

ರಥಕೆ ತಾನಿಂಬಿಲ್ಲ ಪೊಗಲು | ತ್ರಿಪುರ | ಮಥನನಾಟೋಪಕೆ ಮಿಗಿಲು ||
ಪ್ರತುಳ ಶೌರ್ಯಂಗಳ | ಕಥೆ ಪೊಸತಿಂದಿಗೆ |
ಪೃಥೆಯ ಮಕ್ಕಳು ನಿನ್ನ ಶರಗಳ | ವ್ಯಥೆಗೆ ಮೈಗೊಡದಿರ್ಪರೆ || ೧೦೩ ||

ಭಾಮಿನಿ

ಎಂದು ಶಲ್ಯನು ಪೊಗಳುತಾಕ್ಷಣ |
ಸ್ಯಂದನವ ತಾ ವಾಮಭಾಗದೊ |
ಳಂದು ನಡೆಸಲು ಪೊಕ್ಕನಾ ಕಲಿಕರ್ಣನಬ್ಬರಿಸಿ
ಮಂದಿಯಜಗಿಜಿಯಾಗೆ ಬಳಿಕೆಮ |
ನಂದನನೆ  ಬಿಲ್ ಹಿಡಿಯದೇತಕೆ |
ಪಿಂದುಗಳೆವೆಯೆನುತ್ತಲಾ ಝೋಂಪಿಸುತಲಿದಿರಾದ ||೧೦೪||

ರಾಗ ಪಂಚಾಗತಿ ಮಟ್ಟೆತಾಳ

ಪೂತು ಮಝರೆ ಕರ್ಣ ನಿನ್ನೊ | ಳಾತುಕೊಂಬಡಯ್ದೆ ಸತ್ತ್ವ |
ದಾತಿಶಯಗಳುಂಟೆ ನಮ್ಮ | ದೇತರದು ಶರ ||
ಮಾತಿನಿಂದಲೇನು ಫಲ ವಿ | ಖ್ಯಾತನಹೆಯೆನುತ್ತಲಾಪ |
ರೇತಪತಿಯ ತನುಜ ಬಾಣ | ಜಾತ ಕವಿಸಲು  || ೧೦೫ ||

ಧೀರನುರೆ ಶಭಾಸು ನಿನಗಿ | ದಾರು ಕಲಿಸಿಕೊಟ್ಟರೆಂದು |
ಭೂರಿ ಸರಳ ಸವರುತುರೆ ಪ | ಚಾರಿಸುತ್ತಲೆ ||
ಚಾರುವರಿವುತಂದು ರವಿಕು | ಮಾರ ಕನಲಿ ಭೂಪನೆದೆಯ |
ಬೀರುವಂತೆಯೆಚ್ಚ ಶರದ | ಸಾರ ಘಟಿಸಲು || ೧೦೬ ||

ನಿಶಿತಶರಸಮೂಹವಯ್ದಿ | ಪಸರಿ ನೃಪನ ತೇರು ಟಕ್ಕೆ |
ಎಸೆವ ಕುದುರೆಗಳನು ಸಹಿತ | ಕುಸುರಿದರಿದನು ||
ಅಸಮ ವೀರನೊಲಿದು ಮೂರು | ವಿಶಿಖದಿಂದಲೊಡನೆ ನೃಪತಿ |
ಗೆಸೆಯೆ ಬೇಗ ಧಾತುಗೆಟ್ಟು | ವಸುಧೆಗುರುಳಿದ || ೧೦೭ ||

ವಾರ್ಧಕ

ನೃಪ ಮೂರ್ಛೆಯಿಂದಿರಲ್ ಕಂಡು ರಾಧೇಯನತಿ |
ಕೃಪಣದಿಂ ಜರೆದೆಂದನೆಲೆ ಮರುಳೆ ಬರಿದೆ ಭೂ |
ಮಿಪನಾಗಬಹುದೆ ರಣದೊಳು ಕಾದಿಜಯಿಸದಡೆ ಧರೆ ನಿನ್ನ ಕಯ್‌ವಿಡಿವಳೆ ||
ವಿಪುಳ ಸಿಂಹನ ಕೂಡೆ ನರಿಗೆ ಸೆಣಸಾಟವೇ |
ಶಪಥವೇನಿನ್ನು ತಾಯ್ನುಡಿಗೊಂಡರಿಂ ನಿನ್ನ |
ವಪುವ ರಕ್ಷಿಸಿಬಿಟ್ಟೆ ಪೋಗೆಂದು ಜಡಿದವಂ ತಿರುಗಿದಂ ಖಾತಿಯಿಂದ || ೧೦೮ ||

ಕಂದ

ರವಿಜಂ ಮರಳಲ್ಕಾಗಲ್ |
ಪವನಜನಿತ್ತಲು ವೈರಿಚುತುರ್ಬಲವೆಲ್ಲಂ ||
ಸವರಿ ಮಹಾರಥರತಿರಥ |
ರವಘಡಿಸುತಲಾ ಕುರುನೃಪನೆಡೆಗಡಹಾಯ್ದಂ   || ೧೦೯ ||

ರಾಗ ಶಂಕರಾಭರಣ ಮಟ್ಟೆತಾಳ

ಗಾರುಗೆಡದಿರೆಲವೊ ಕುಹಕಿ | ಗಾರ ನಿನ್ನಯ |
ಮೋರೆಯನ್ನು ಪದುಳದಿಂದ | ತೋರಿಸೆನ್ನಯ ||
ಭಾರಿ ಗದೆಯು ನಿನ್ನ ಗೆಲಲು | ಚಾರುವರಿವುದು |
ಸಾರಿ ಮುಂಬರಿವುತಿದಕೊ ಕೈ | ಮೀರಿ ಬರುವುದು || ೧೧೦ ||

ನಿಲ್ಲು ಪಿಂತೆ ಸರಿಯಬೇಡ | ಖುಲ್ಲನೆನುತಲಿ |
ಪಲ್ಲ ಮೊರೆದು ಭರದಿ ಗಜರಿ | ಮಲ್ಲ ನಗುತಲಿ
ಮೆಲ್ಲನಯ್ದುತವನ ಸಾರಿ | ಚೆಲ್ಲಬಡಿಯಲು |
ಬಲ್ಲಿದಧಟ ಕುರುಮಹೀಶ | ರೆಲ್ಲ ಸಿಡಿಯಲು || ೧೧೧ ||

ಬಳಿಕ ವಿಶ್ರಮಿಸಿಕೊಂಡು | ಕಳನೊಳೀರ್ವರು |
ಮುಳಿದು ಕಾದಲಾಗ ನೋಡ | ಲುಳಿದ ಸರ್ವರು ||
ಪೊಳೆವ ಭೀಮಸೇನನೆಚ್ಚ | ಹಿಳುಕಿನಿಂದಲಿ |
ಬಳಲಿ ನೃಪತಿ ಹೊಕ್ಕ ತನ್ನ | ದಳದ ಸಂದಿಲಿ || ೧೧೨ ||

ಭಾಮಿನಿ

ಅರಸ ಬಳಲಿದನೆಂದು ತವಕದಿ |
ಗುರುಜ ಕೃತವರ್ಮಾದಿ ಸಮರದ |
ಹರಿಬಕಾರರು ಬಂದು ಝೋಂಪಿಸಿಕೊಳ್ಳಲಂದವರು ||
ತರಣಿತನುಜಗೆ ತೋರಿ ಶಲ್ಯನು |
ಜರೆದನೆಲವೋ ಪಾಪಿ ಸುಡು ನೀ |
ಪರಮ ಘಾತವ ನೆನೆದರದು ತಾ ಬಿಡದು ನಿನಗೆನುತ || ೧೧೩ ||

ಕಂದ

ಸಲೆ ಮಾದ್ರೇಶನ ನುಡಿಗಂ |
ಕಲಿಕರ್ಣಂ ತವಕದೊಳಯ್ತಂದತಿ ಭರದಿಂ ||
ಫಲುಗುಣನಗ್ರಜನೊಳು ಮಾ |
ರ್ಮಲೆತುರೆ ಸಂಗ್ರಾಮದೊಳೆಚ್ಚಾಡಿದನಾಗಂ || ೧೧೪ ||

ರಾಗ ಘಂಟಾರವ ಅಷ್ಟತಾಳ

ಎಲವೊ ಭೀಮನೆ ಗೆಲಿದೆಮ್ಮ ಸೈನ್ಯವ |
ನಿಳೆಯಪಾಲನ ಮೇಲೆ ಮಲೆತಿಹ | ಬಲುಹ ನಿಲಿಪೆನು ತೋರೆಲಾ || ೧೧೫ ||

ಸೂತನಂದನ ಬಗುಳದಿರೆಲೊ ನಿನ್ನ |
ನೀ ತತೂಕ್ಷಣ ಗೆಲಿದು ಕುಹಕಿಯ | ಘಾತಿಸುವೆನೆಂದೆಚ್ಚನು || ೧೧೬ ||

ಎಚ್ಚ ಬಾಣವ ತರಿದೆಸೆಯಲಿಕದ |
ನುಚ್ಚುಗೆಯ್ಯುತ ಹೆಣಗಲಭ್ರದೊ | ಳಚ್ಚರಿಸೆ ಸುರರೆಲ್ಲರು || ೧೧೭ ||

ರಾಗ ದೇಶಿ ಅಷ್ಟತಾಳ

ಕಾದಿದರ್ ಮತಿಯುತ ಭೀಮರವಿಜರು |
ಮೇದಿನಿಯ ಸುಭಟಾಳಿತಾವ್ ಬೆರ | ಗಾದರೀ ಪರಿ ಸಮರದಿ  || ೧೧೮ ||

ಎಚ್ಚ ಬಾಣವ ಗುಡಿಕಟ್ಟಿದನು ಕರ್ಣ |
ಕಿಚ್ಚಿನಂತುರಿಮಸಗುತದರನು | ನುಚ್ಚುಗೆಯ್ದನು ಮರುತಜ   || ೧೧೯ ||

ಹೆಚ್ಚಿ ರೋಷದಿ ಬಳಿಕ ರಾಧೇಯನು |
ಚುಚ್ಚುವಂದದಿ ಸರಳನೆಸೆಯಲು | ಮೆಚ್ಚಿ ಖಂಡಿಸಲಾತನು  || ೧೨೦ ||

ಮತ್ತೆ ಬೊಬ್ಬಿರಿದಾರ್ದು ಶರಂಗಳ |
ಮೊತ್ತ ಸುರಿಯಲು ಕೂಡೆ ಭೀಮನ | ಮುತ್ತಿದನು ಸರ್ವಾಂಗದಿ || ೧೨೧ ||

ತತ್ತ ಮಾರ್ಗಣವೆಲ್ಲ ಸಂಹರಿಸಿ ಮ |
ರುತ್ತಜನು ಕಲಿಯಾಗಿ ರಿಪುಭಟ | ನುತ್ತಮಾಂಗದೊಳೆರಗಿದ  || ೧೨೨ ||

ವಾರ್ಧಕ

ತುಂಗಭುಜಬಲ ವೃಕೋದರನಯ್ದೆ ಜಡಿದು ರಿಪು |
ಪುಂಗವನ ಸುವರೂಥದಿಂದೆಳೆದು ಕೊರಳೌಕು |
ತಂಗಮಂ ಜಜ್ಝರಿತಮಂ ಗೆಯ್ದು ಕೆಡಹಲ್ಕೆ ಮಾದ್ರಾವನೀಶನಂದು ||
ಹಂಗಿಗಂ ತಾನಾಗಿ ಪೇಳ್ದನೆಲೆ ಭೀಮ ನೀ |
ಸಂಗರದಿ ಕಲಿಯಲೈ ಸಾಕು ಬಿಡು ಕರ್ಣನಂ |
ಭಂಗಿಸಿದೆ ಮೇಣೇತರವಮಾನಗಳು ಬೇಕು ಶೌರ್ಯವಂತರಿಗೆಂದನು || ೧೨೩ ||