ರಾಗ ನಾಟಿ ಝಂಪೆತಾಳ

ಜಯತು ಜಯತು ಗಣೇಶ | ಜಯತು ವಿಘ್ನವಿನಾಶ |
ಜಯ ಕೀರ್ತಿ ಸಂಪನ್ನ | ಜಯ ಸುಪ್ರಸನ್ನ ||
ಜಯತು ಜಯ ಮಹಕಾಯ | ಜಯತು ಮೋದಕಪ್ರೀಯ |
ಜಯತು ಮುನಿಜನಹಂಸ  | ಜಯ ರಿಪುಧ್ವಂಸ || ಜಯತು ಜಯತು || ೧ ||

ಕರಚತುಷ್ಟಯಶೋಭ | ಕರವೀರಕುಸುಮಾಭ |
ಕರಸುಚಂದನಯುಕ್ತ | ಕರಕಫಲಭುಕ್ತ |
ಕರಟಾಂತಮದಗಳಿತ | ಕರಸುಭಕ್ಷಕಮಿಳಿತ |
ಕರಿವದನ ಹೇರಂಬ | ಕರುಣಾವಲಂಬ || ಜಯತು  ಜಯತು || ೨ ||

ಶರಧಿಗುಣಗಂಭೀರ | ಶರಣಜನಮಂದಾರ |
ಶರಚಂದ್ರಶತತೇಜ | ಶರಜನ್ಮಸಹಜ ||
ಶರಭಸಮಬಲವ್ರಾತ | ಶರದನುಜನುತಜಾತ |
ಶರಪುರಾಧಿಪ ಶಾಂತ | ವರದೈಕದಂತ || ಜಯ ಜಯತು ಜಯತು || ೩ ||

ವಾರ್ಧಕ

ಧರಣಿಪತಿ ಲಾಲಿಸೈ ಮುಂದಣ ಪ್ರಸಂಗಮಂ |
ಗುರು ರಣಾಗ್ರದೊಳಳಿಯಲಾಗಿ ನಿನ್ನವರೆಲ್ಲ |
ರಿರುಳಿನೊಡ್ಡೋಲಗಕೆ ನಡೆತಂದು ಸಂತಾಪದಿಂ ಬಳಲುತಿರ್ದು ಬಳಿಕ ||
ಗುರುಜ ಕೃಪ ಮುಖ್ಯರಭಿಮತದಿಂದ ನಿಶ್ಚಯಿಸಿ |
ತರಣಿಯ ಕುಮಾರಂಗೆ ಸೇನಾಧಿಪತ್ಯಮಂ |
ವರ ವಿದಿತಲೌಕಿಕ ಸುವೈದಿಕ ವಿಧಾನದಿಂ ರಚಿಸಿದಂ ಕುರುರಾಯನು || ೪ ||

ರಾಗ ಭೈರವಿ ಝಂಪೆತಾಳ

ಕರ್ಣನಿಗೆ ದಳಪತಿಮು | ಹೂರ್ತಾಭಿಷೇಚನವು |
ಪೂರ್ಣವಾಗಲು ಸಕಲ | ವಾದ್ಯರವ ಮೊಳಗೆ  || ೫ ||
ಅತಿರಥ ಮಹಾರಥಾ | ದ್ಯಖಿಲ ಸುಭಟ ನಿಕಾಯ |
ಚತುರಂಗಬಲದೊಡನೆ | ಕಾಣಿಕೆಯನಿತ್ತು  || ೬ ||

ಕಂಡು ಬಳಿಕತ್ಯಧಿಕ | ರಭಸದಿಂದುಬ್ಬಿ ಖತಿ |
ಗೊಂಡು ನಲಿದುದು ಸೇನೆ | ಕಡುಹರುಷದಿಂದ  || ೭ ||

ಭಾಮಿನಿ

ಅನಿತರೊಳು ತನ್ನಾತ್ಮಸಂಭವ |
ನನುವರವನೀಕ್ಷಿಸುವ ತವಕದೊ |
ಳಿನನು ಪೂರ್ವಾಚಲದ ಗದ್ದುಗೆಗಿತ್ತನೋಲಗವ ||
ಘನ ಸಮುದ್ರವು ಮಸಗಿದಂದದೊ |
ಳೆನಗೆ ತನಗೆಂದಾಗ ಬಲು ಗ |
ರ್ಜನೆಯನೆಸಗಲು ಕೂಡಿತಾ ಕ್ಷಣದೊಳಗೆ ಭಟನಿಕರ || ೮ ||

ವಾರ್ಧಕ

ಉಭಯಬಲವೆಚ್ಚಾಡಿ ವೀರರೌಕುಳಮಾಗೆ |
ರಭಸದಿಂದಿದಿರಾದ ಕ್ಷೇಮ ಧೂರ್ತನೃಪಾಲ |
ಪ್ರಬಲದೊಳು ಕಾದಿ ಮರುತಜನಿಂದ ಮಡಿಯಲ್ಕೆ ಕರ್ಣನುರುಖಾತಿಯಿಂದ ||
ತ್ರಿಭುವನಂ ಕಂಪಿಸಲ್ ಬಂದು ನಿಜಮೋಹರ |
ಕ್ಕಭಯವಿತ್ತರಿಭಟರ ನುಗ್ಗೊತ್ತಿ ಕದಳಿವನ |
ದಿಭದಂತೆ ಮುಂಬರಿದು ಕೂಡೆ ನಕುಲಾಂಕನೊಳ್ ಸೆಣಸಿ ಮೂರ್ಛಿತನಾದನು || ೯ ||

ರಾಗ ಸವಾಯ್ ಏಕತಾಳ

ಬವರದೊಳಪಜಯವಾಗಲು ಕರ್ಣಗೆ | ರವಿ ಜಾರಿದ ತಾ ಪಶ್ಚಿಮಕೆ ||
ತವಕದೊಳುಭಯ ಚತುರ್ಬಲವಯ್ದಿತು | ಜವದಿಂ ತಂತಮ್ಮಾಲಯಕೆ || ೧೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇರುಳಿನಲಿ ನಡೆತಂದು ಕೌರವ | ರರಸನೊಡ್ಡೋಲಗದಿ ಕುಳಿತಾ |
ಗುರುಜ ಕೃಪ ರವಿಸೂನು ಮುಖ್ಯಾ | ಪ್ತರುಗಳೆಲ್ಲ || ೧೧ ||

ತಲೆಯ ಮುಸುಕಿನ ಕಯ್ಯ ಕದಪಿನ | ನೆಲನ ನೋಟದ ಪೊತ್ತ ದುಗುಡದ |
ಬಲಿದ ಬೆರಗಿನ ಬಿಗಿದ ಮೌನದ | ಒಲಪಿನಿಂದ || ೧೨ ||

ಸುಭಟರಾಸ್ಥಾನದಲಿ ರಂಜಿಸ | ಲುಭಯ ಪಾರ್ಶ್ವವನೀಕ್ಷಿಸುತ ಕುರು |
ಪ್ರಭವ ನುಡಿದನು ಮತ್ತೆ ಸೇನಾ | ವಿಭುವಿನೊಡನೆ || ೧೩ ||

ರಾಗ ತುಜಾವಂತು ಝಂಪೆತಾಳ

ಏನಾದುದಿಂದಿನಾಹವದಿ ಕಲಿ ಕರ್ಣ | ಮಾನನಿಧಿಗಳಿಗೇತಕೀ ಪರಿಯ ಮೌನ ||   || ಪ ||

ದುಗುಡವೇನಿದು ಬರಿದೆ ಧುರಧುರಂಧರರಿಂಗೆ |
ವಿಗಡರವರಿಂದೇನು ವಿಕ್ರಮಕೆ ಕುಂದು ||
ಹಗೆಯವರ ಕೈಚಳಕ ಹತಿಯು ಪಿರಿದಾಗಿರಲು |
ಬಗೆಯಲಾರಳವೈಸೆ ಬಿಡು ಮನೋವ್ಯಥೆಯ ||  || ೧೪ ||

ರಾಯ ಕೇಳಿಂದು ರಿಪುರಾಜೀವಕೊಳವೆಂಬು |
ವಾಯಿಭಕೆ ಕುಂದೆನಗೆ ದೊರಕಿತೊಂದರಲಿ ||
ಬಾಯಿಂದ ಪೇಳಿದರೆ ಬಪ್ಪುದೇ ಸಾರಥಿಗು |
ಪಾಯವಿಲ್ಲದರಿಂದ ಪಿಸುಣ ನಾನಾದೆ ||  || ೧೫ ||

ಸಾರಥಿಯು ತನಗೋರ್ವ ಸಾಧ್ಯನಾದರೆ ನಾಳೆ |
ಭೂರಿ ರಿಪುಬಲವೆಲ್ಲ ಭಂಗಿಸುವೆ ಕ್ಷಣದಿ
ಯಾರೆನಗೆ ತಕ್ಕಂಥ ಯೋಗ್ಯ ಸೂತನ ತಂದು |
ತೋರುವವರೆಂದೆನುತ ತೊಳಲಿದನು ಕರ್ಣ ||  || ೧೬ ||

ವಾರ್ಧಕ

ಇನಸೂನುವಿಂತೆಂದ ನುಡಿ ಕೇಳ್ದು ನಗುತ ಕುರು |
ಜನಪಾಲ ನುಡಿದನೆಲೆ ರಾಧೇಯ ಕೇಳೆಮ್ಮೊ |
ಳಿನಿತು ಸುಭಟವ್ರಾತವಿದೆ ನಿನ್ನ ಪಾಡಿನವರಾರೆಂಬುದಿದರೊಳಾಯ್ದು ||
ವಿನಯದಿಂದೆನ್ನೊಳೀಕ್ಷಣ ಪೇಳ್ದಡಾತನಂ |
ನಿನಗೊದಗಿಸುವೆ ಸೂತನಂ ಮಾಡಿ ನಿಮಿಷದೊಳ್ |
ಮನದಿ ಶಂಕಿಸದೆ ನೀನೆನ್ನಾಣೆ ಪೇಳೆಂದು ನುಡಿಯಲವನಿಂತೆಂದನು || ೧೭ ||

ರಾಗ ಕೇದಾರಗೌಳ ಅಷ್ಟತಾಳ

ಜೀಯ ಲಾಲಿಪುದೀಗ ನೆರೆದಿಹ ಸುಭಟನಿ | ಕಾಯದೊಳಿರುವರೊಳು ||
ಪ್ರೀಯನಾಗಿಹನೋರ್ವನನು ಕೊಟ್ಟರೆನಗೆ ಸ | ಹಾಯ ನಿನ್ನಿಂದಪ್ಪುದೈ || ೧೮ ||

ಎನ್ನ ನೀನಿಂದಿನವರೆಗೆ ರಕ್ಷಿಸಿದುದ | ಕಿನ್ನು ನಾ ಪೇಳ್ವಂದವ ||
ಮನ್ನಿಸಿ ಮನಸಿಗೆ ತಂದವನೊಪ್ಪಿಸ | ಲುನ್ನತಿಕೆಯ ನೋಡಯ್ಯ || ೧೯ ||

ಶಲ್ಯನೃಪಾಲನು ಸಾರಥಿತನದೊಳ | ತುಲ್ಯಸಂಪನ್ನನಲ್ಲೈ ||
ಬಲ್ಲೆನಾತನನು ತಂದೊದಗಿಸಿಕೊಡಲು ಸಾ | ಫಲ್ಯವಾಹುದು ಕಾರ್ಯವು || ೨೦ ||

ಭಾಮಿನಿ

ಸಾರಶೌರ್ಯಾಗ್ರಣಿಯೆ ಕೇಳ್  ಮೆಯ್ |
ದೋರಿರುವ ಹನ್ನೊಂದಕ್ಷೌಹಿಣಿ |
ಭೂರಿ ಮಾರ್ಬಲದೊಳಗೆ ಸೂತತ್ವವನು ಬಲ್ಲವರ ||
ವೀರರನು ತನಗೊರೆಯದಿಂದು ಮ |
ಹೀರಮಣನಾಗಿರುವ ಶಲ್ಯನ |
ಸಾರಥಿತ್ವಕೆ ಬಯಸಿದೇನೆನಲೆಂದನಾ ಕರ್ಣ || ೨೧ ||

ರಾಗ ಕಾಂಭೋಜಿ ಝಂಪೆತಾಳ

ಚಿತ್ತವಿಸು ಕುಲಕುಲಾಂಬುಧಿಪೂರ್ಣಶುಭ್ರಾಂಶು | ಬಿತ್ತರಿಪೆನೆನ್ನಾದಿ ಕಥೆಯ ||
ಸತ್ಯನಿಧಿ ಭಾರ್ಗವನ ಕೂಡೆ ದ್ವಿಜರೂಪಿನಲಿ | ಗುಪ್ತದಿಂದಡಗಿರ್ದೆ ಜೀಯ || ೨೨ ||

ಸರಸದಿಂ ಸಕಲ ವಿದ್ಯಾಭ್ಯಾಸ ಕಲಿತಿರಲು | ಗುರುವೊಂದು ದಿನವೆನ್ನ ತೊಡೆಯ ||
ಶಿರವಿಟ್ಟು ಮಲಗಿರಲು ಕಡು ಸುಷುಪ್ತಿಯೊಳಾಗ | ಸುರಪನೆಸಗಿದನೊಂದು  ಉಪಾಯ || ೨೩ ||

ಸುತಗೆ ಬಾಧಕ ಬಪ್ಪುದೆನುತಲಳಿರೂಪಿನಿಂ | ದತಿಶಯದಿ ಕೊರೆಯೆ ಜಂಘೆಯನು ||
ಅತಿರಕ್ತಶೀತಳವ ತಿಳಿದೇಳಲಾಗ ಗುರು | ಖತಿಯಿಂದ ಕಾಣುತೆನ್ನುವನು || ೨೪ ||

ರೂಪುದೋರದೆ ಎನ್ನ ವಿದ್ಯವನು ಕಲಿತೆ ಕಡು | ಕಾಪಟಿಗನೆಂದೆನುತ ಮುಳಿದು ||
ಶಾಪವೀಯಲು ಮನದಿ ನಾ ಮರುಗುತಿರಲು ಬಳಿ | ಕಾ ಪರಂಜ್ಯೋತಿಯೆನಗೊಲಿದು || ೨೫ ||

ಭದ್ರತ್ವದಿಂದಿಷ್ಟು ದಿನ ವಿದ್ಯೆ ಕಲಿತುದಕೆ | ಉದ್ರೇಕದಿಂ ಮುಂದೆ ರಣದಿ ||
ಮಾದ್ರಭೂಪನ ಸೂತತನದಿ ಜಯಿಸೆನುತಾ ಸ | ಮುದ್ರಭೀಕರ ಪೇಳ್ದ ದಯದಿ || ೨೬ ||

ಅದರಿಂದ ಶಲ್ಯನಾಪೇಕ್ಷಿಸಿದೆ ಭೂಪ ಕೇಳ್ | ಒದಗಿರ್ದಡವನು ಭರದಿಂದ |
ಸದೆದು ರಿಪುಗಳನು ಯಮಸದನಕಟ್ಟುವೆನು ಎ | ನ್ನಧಟುತನ ಮತ್ತೆ ನೋಡೆಂದ || ೨೭ ||

ಭಾಮಿನಿ

ವೀರ ಕರ್ಣನ ನುಡಿಯ ಕೇಳುತ |
ಭೂರಿ ಸಂತಸವೆತ್ತು ಕೌರವ |
ಭೂರಮಣನತಿ ತವಕದಲಿ ಮಾದ್ರೇಶನರಮನೆಗೆ ||
ಚಾರು ವಿಭವದೊಳಯ್ದೆ ಬರಲಾ |
ಚಾರಕರ ಸನ್ನೆಯಲಿ ತಿಳಿದು ವಿ |
ಚಾರಿಸುತ ಬಳಿಕಿದಿರು ಬಂದರಸನನು ಮನ್ನಿಸಿದ || ೨೮ ||

ಕಂದ

ಮನ್ನಿಸಿ ಭೂಪಾಲಕನಂ |
ತನ್ನ ನಿಜಾಲಯಕಯ್ದಿಸಿ ಶಲ್ಯನೃಪಾಲಂ ||
ಉನ್ನತ ನಿಶಿಯೊಳು ಬರಲೇ |
ಕೆನ್ನುತ ಬೆಸಗೊಳಲವನಿಂತೆಂದನು ನಗುತಂ || ೨೯ ||

ರಾಗ ತುಜಾವಂತು ಝಂಪೆತಾಳ

ಕೇಳ್ದೆಲೈ ಮಹವೀರ ಶಲ್ಯಭೂಪಾಲ |
ತಾಳ್ದು ಪಾಲಿಸಬೇಕು ಬಿನ್ನವಿಪಸೊಲ್ಲ || ಕೇಳ್ದೆಲೈ   || ಪ ||

ಧುರದೊಳಿಂದಿನ ದಿನದೊಳತಿರಥ ಮಹಾರಥರು |
ಮುರಿದು ಹರಿಹಂಚಾದರೀ ಪರಿಯೊಳೆಲ್ಲ ||
ಪರಿಭವಕೆ ಸಂದುದೆಮ್ಮಯ ಸೇನೆ ನೀವಿರ್ದು |
ಹರಿಬಕನುವಾಗುವರ ಕಾಣೆ ಮಿಕ್ಕವರ || ಕೇಳ್ದೆಲೈ || ೩೦ ||

ಕರ್ಣನತಿಬಲನೆಮ್ಮ ಭಟರೊಳಗೆ ಪೆಗ್ಗಳನು |
ಪೂರ್ಣವಿಕ್ರಮನವನಿಗೊಂದರಲಿ ಕೊರತೆ |
ಸ್ವರ್ಣಮಯ ರಥಕೋರ್ವ ಸಾರಥಿಯು ದೊರಕಿದಡೆ |
ನಿರ್ನಾಮವನು ಗೆಯ್ವ ರಿಪುಗಳನು ಕ್ಷಣದಿ  || ಕೇಳ್ದೆಲೈ || ೩೧ ||

ಅದರಿಂದ ನಿನ್ನೊಡನೆ ಬೇಡಿಕೊಳ್ಳುವುದಾನು |
ಸದಮಲನವನ ರಥಕೆ ಸೂತತನವನ್ನು ||
ಪದುಳದಿಂ ಗೆಯ್ದೆಮ್ಮ ಕುರುವಂಶವನು ಕಾಯ್ದು |
ಮುದದಿಂ ಸುಕೀರ್ತಿಯನು ನೀ ಧರಿಸಬೇಕು || ಕೇಳ್ದೆಲೈ || ೩೨ ||

ಕಂದ

ಎನೆ ಕೇಳ್ದಾಗಲೆ ರೋಷದಿ |
ತನು ಕಂಪಿಸುತಲಿ ಕೆಂಪಡರಿದ ಆಲಿಗಳುಂ ||
ಕೊನೆಮೀಸೆಗಳಲುಗಲು ಶ |
ಲ್ಯನು ಗರ್ಜಿಸುತಲಿ ಕುರುಭೂಮಿಪಗಿಂತೆಂದಂ || ೩೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇನ್ನು ಬಗುಳಿನ್ನೊಮ್ಮೆ ಕುರುಪತಿ | ನಿನ್ನ ಭಾವವನರಿತೆ ಚಿತ್ತದೊ |
ಳುನ್ನತದ ಸಿರಿಮದದಿ ನುಡಿದೆಯೊ | ಎನ್ನೊಳಿದನು  || ೩೪ ||

ಆತ ಗಡ ಸಮರದೊಳು ಕಲಿ ವಿ | ಖ್ಯಾತ ಗಡ ಸುಭಟರೊಳು ಮೇಣಾ |
ಸೂತಸುತನೇಸರವನೆಂಬೀ | ಮಾತನರಿಯೈ  || ೩೫ ||

ಏನು ತನ್ನಂಗದಲಿ ಮಲಿನದ | ಹೀನತನವನು ಕಂಡಿತೀ ಪರಿ |
ಮಾನಭಂಗದ ಮಾತ ನುಡಿವರೆ | ನೀನು ಪೇಳೈ  || ೩೬ ||

ಖೂಳರಾಡುವ ತೆರದ ಮಾತಿದು | ಪೇಳಿದರೆ ನಾನೀ ದುರುಕ್ತಿಯ |
ಕೇಳುವೆನೆ ನೀನೆಂದ ಕಾರಣ | ತಾಳಿಕೊಂಡೆ  || ೩೭ ||

ಧೀವರನ ಮಗನೆತ್ತಲೆಮ್ಮಯ  | ಭೂವರತ್ವವಿದೆತ್ತಲಿಂದಿನ |
ಲೀ ವಿಧಿಯು ಪ್ರಾಪ್ತಿಸಿತೆ ತಪ್ಪೇ | ನಾವುದಹಿತ  || ೩೮ ||

ವಾರ್ಧಕ

ಭಾವಿಸಿದಡೆಲೆ ಕುರುನೃಪಾಲನಿವ ಲೋಕದೊಳ |
ಗಾವ ಪಾರ್ಥಿವಸುತಂ ರಾಧೇಯನೀತನುಂ |
ವಾವೆಯಿಲ್ಲದೆ ನೃಪರ ಗದ್ದುಗೆಯನಿತ್ತು ಪತಿಕರಿಸಿದಡೆ ಭಟನಾಹನೆ ||
ನಾವರಿಯೆವೆಂದು ಗರ್ಜಿಸಲವಂ ನಸುನಗುತ |
ಮಾವ ಕೇಳಾನೆಂದ ಕ್ಷಣಕದಂ ಸಂಘಟಿಸಿ |
ತೇ ವಿರೋಧವಿದೇಕೆ ಮನಮಿಲ್ಲದಿರೆ ಬಲಾತ್ಕಾರವೇ ನಿನಗೆಂದನು || ೩೯ ||

ಭಾಮಿನಿ

ಖತಿಯಿದೇನೈ ಮಾವ ನೀನೇ |
ಗತಿಯೆನುತ ನಾ ಬಂದರೆನ್ನೊಡ |
ನತಿಶಯದ ಮಾತೇಕೆ ಬಿಡು ಕಾರುಣ್ಯದೃಷ್ಟಿಯನು ||
ಪತಿಕರಿಸುತೆಮಗೊಂದು ನೀನುಪ |
ಕೃತಿಯ ಮಾಡಿದು ನಿನ್ನ ಶೌರ್ಯೋ |
ನ್ನತಿಯ ಮೆರೆಸಲು ಬೇಕೆನಲ್ಕಿಂತೆಂದನಾ ಶಲ್ಯ || ೪೦ ||

ರಾಗ ಭೈರವಿ ಅಷ್ಟತಾಳ

ಫಡ ಸುಯೋಧನನೆ ಕೇಳು | ನಿನಗೆ ತಕ್ಕ | ನುಡಿಗೆ ತಪ್ಪೇನು ಹೇಳು ||
ಧಡಿಗರ ಧೂರ್ತವಿದ್ಯವ ಸಂಪಾದಿಸುತಲೆ | ನ್ನೊಡನೆ ತೋರಲು ಬಂದೆಯ  || ೪೧ ||

ಕೀಳು ರಾಧೇಯನಿಗೆ | ಸೂತನೆ ತಾನು | ಹೇಳಲು ಬಹುದೆ ಹೀಗೆ |
ಖೂಳರ ಸಹವಾಸದಿಂದ ಜೀವಿಸುವಂಥ | ಬಾಳುವೆ ಸುಡಲು ಲೇಸು || ೪೨ ||

ಇವರತ್ಯಂತಧಮರೆಲ್ಲ | ನಿಕೃಷ್ಟ ದಾ | ನವರೆಂದು ತಿಳಿಯಲಿಲ್ಲ ||
ಹವಣರಿಯದೆ ಬಂದು ಮೋಸವಾಯಿತು ನೀನಿ | ನ್ನವಘಡಿಸಲು ತಪ್ಪುದೆ || ೪೩ ||

ವಾರ್ಧಕ

ಅಕಟ ದೈವದ ಬಲಾತ್ಕಾರವಲೆ ತನಗಿಂದು |
ಪ್ರಕಟಿಸಿತೆಲಾ ಮುನ್ನಿನಾರಭ್ಯದೊಳು ಜಗದಿ |
ವಿಕಟನೆಂದೆಂಬ ಪೆಸರಂ ಪಡೆದು ಪರಿವಾರ ಪ್ರಜೆಗಳಂ ಸಲಹಿ ಬಳಿಕ ||
ಸಕಲ ಯಜ್ಞಾಧಿಕಂ ದಾನಧರ್ಮಾದಿಗಳ |
ನಕಳಂಕದಿಂದ ಲೇಸಂ ಗೆಯ್ದುಮೀ ಕರಂ |
ವಿಕಳಮತಿ ಕರ್ಣನ ಹಯಂಗಳಂ ಚಪ್ಪರಿಸಲಾಯ್ತೆ ಪ್ರಾರಬ್ಧಮೆಂದ || ೪೪ ||

ಕಂದ

ಕೇಳಿದು ಶಲ್ಯನ ವಚನಂ |
ತಾಳಿದು ದುಗುಡವ ಭೂಮಿಪ ಕಾರ್ಯ ನಿಮಿತ್ತಂ ||
ಬೋಳವಿಸುತಲಾತನೊಳಂ |
ಪೇಳಿದನತಿ ದೈನ್ಯದೊಳಾ ಧಾರಿಣಿಪಾಲಂ || ೪೫ ||

ರಾಗ ಕೇದಾರಗೌಳ ಝಂಪೆತಾಳ

ಲಾಲಿಸೈ ಮುದದೊಳಾನು | ಪೇಳ್ವ ನುಡಿ | ಪಾಲಿಸೈ ಮಾವ ನೀನು ||
ಜಾಲಮಾತಲ್ಲವಿದಕೆ | ನೀನೆನ್ನ | ಮೇಲೆ ಖತಿಗೊಳುವುದೇಕೆ || ೪೬ ||

ರವಿಜನತಿಬಲನಾತನು | ರಣದಿ ಕೆಣ | ಕುವರ ಕಾಣೆನು ಖ್ಯಾತನು ||
ದಿವಿಜ ದನುಜಾದ್ಯರೊಳಗೆ | ಸರಿಗಾಣೆ | ನವನಿಗೀ ಭೂಮಿಯೊಳಗೆ || ೪೭ ||

ಪಾನೀಯ ಸತ್ತ್ವವೆತ್ತು  | ಬೆಳೆದರದು | ಹೀನವೇ ಜಗಕೆ ಮುತ್ತು |
ಹಾನಿಯೇನಿದು ಸೂತನ | ಮನೆಯೊಳಗೆ | ತಾನಿರ್ದರಿನಜಾತನ || ೪೮ ||

ವಿಕ್ರಮಕೆ ಕುಂದಪ್ಪುದೆ | ಭುಜಬಲಪ | ರಾಕ್ರಮಕೆ ಜರೆಯಪ್ಪುದೆ ||
ಶಕ್ರನಿವಗಲ್ಲ ಪಾಡು | ಬರಿದೆ ನೀ | ವಕ್ರಿಸದೆ ದಯವ ಮಾಡು || ೪೯ ||

ವಾರ್ಧಕ

ಸಾರಥ್ಯಮಂ ಗೆಯ್ದರೇಂ ಹೀನವೇ ಮಾವ |
ನೀರಜದಳಾಕ್ಷನೇನಭ್ಯಾಸಿಯೇ ನರನ |
ವಾರುವದ ಚಮ್ಮಟಿಕೆಯಂ ಪಿಡಿದನೇಕೈ ಪರೋಪಕಾರಾರ್ಥಮೆಂದ ||
ಧಾರಿಣಿಯೊಳೊರ್ವಂಗೆ  ಶೂರ ಸಾರಥ್ಯಮಂ |
ಪೂರಯಿಸಲದರಿಂದ ಕುಂದೇನು ಪೂರ್ವದೊಳ್ |
ವಾರಿಜಾಸನನಮರರಿಗೆ ಸಹಾಯವ ಮಾಡನೇಯೆಂದಡವನೆಂದನು || ೫೦ ||

ರಾಗ ಮಾರವಿ ಏಕತಾಳ

ಬಿಡು ಬಿಡು ಕೌರವನೃಪತಿ ಕುಲಾಧಮ | ನಡಿಗಡಿಗ್ಹೊಗಳದಿರು ||
ಪೊಡವಿಯೊಳವನತ್ಯಧಿಕ ತಾನಾದರೆ | ತಡೆಯದಿರೀ ಕ್ಷಣದಿ  || ೫೧ ||

ನಡೆರಾಧೇಯನ ಶಿರದಲಿ ಛತ್ರವ | ಪಿಡಿ ನೀನನಿತರಲಿ ||
ಒಡಹುಟ್ಟಿದವರ್ ಪ್ರೇಮದೊಳಾತನ | ಹಡಪಗಳನು ಹೊರಲಿ  || ೫೨ ||

ಆ ಮೇಲವನ ವರೂಥಕೆ ಸಾರಥಿ | ನೀ ಮಾಡಿಸು ತನಗೆ ||
ಭೂಮಿಯೊಳವನೆ ಧುರಂಧರ ಧೀರಸ | ಮಾನನೆನಿಸು ಬಳಿಕ || ೫೩ ||

ಭಾಮಿನಿ

ಕೀಳರಿಗೆ ನೆರೆಯಾಗಿ ಬಂದವ |
ಖೂಳನಲ್ಲವೆ ಮೇಣು ತನಗದು |
ಪೇಳಿ ಫಲವೇನಿನ್ನು ಪ್ರಾರಬ್ಧಾನುವಶದಿಂದ ||
ಮೇಳವಿಸಿತಲ್ಲದೆ ವಿರೋಧವ |
ತಾಳಲಿಂದೇನಪ್ಪುದಿದರೊಳು |
ಕೋಳುಹೋದುದು ನಿನ್ನ ನುಡಿ ಕೈಗೊಂಡೆ ನಿಂದಿನಲಿ  || ೫೪ ||

ಕಂದ

ವರ ಮಾದ್ರೇಶನ ನುಡಿಯಂ |
ಕುರುಭೂಪಾಲಕ ಕೇಳುತ ಹರುಷವ ತಾಳ್ದುಂ ||
ತರಹರಿಸದೆ ಬಳಿಕವನನು |
ಸರಿಸಿದು ಮಾತಾಡಿದನತಿ ದೈನ್ಯದೊಳಾಗಲ್ || ೫೫ ||

ರಾಗ ಕೋರೆ ಅಷ್ಟತಾಳ

ಮಾವ ಕೋಪವೇನೈ | ನಾ ಪೇಳುವ | ಈ ವಾಕುಗಳಿಂದೇನೈ ||
ಹೇವವಿಲ್ಲದೆ ನಿಮ್ಮನು ನಂಬಿರ್ದವರೆಂಬ | ಭಾವದೊಳರಿಕೆಮಾಡಿದಡಿಂದೆನ್ನಯ ಮೇಲೆ || ೫೬ ||

ಆ ಧನಂಜಯನಲ್ಲಿಗೆ | ಸೂತನು ಮಧು | ಸೂದನನಿಹನಿಲ್ಲಿಗೆ ||
ರಾಧೆಯಾತ್ಮಜನ ಸಾರಥ್ಯವ ನೀ ಗೆಯ್ದ | ರೀ ಧರೆಯೊಳಗೆಮಗೆಣೆಯುಂಟೆ ಗ್ರಹಿಸಯ್ಯ || ೫೭ ||

ಅಮರರ ಕಾಯಲೆಂದು | ಕಪರ್ದಿಗೆ | ಕಮಲ ಸಂಜಾತನಂದು ||
ಭ್ರಮಿತ ಮುಪ್ಪುರದ ದಾನವರ ಸಂಗ್ರಾಮದೊ | ಳಮಳ ಸೂತತ್ವವ ಮಾಡಲಿಲ್ಲವೆ ಕೇಳು || ೫೮ ||

ಭಾಮಿನಿ

ಎನಲು ಕೇಳುತ ಶಲ್ಯ ನುಡಿದನು |
ಜನಪ ನಿನ್ನಯ ನುಡಿಗಳಿದುವೇ |
ಘನವಲೈ ನಾನಿಂದು ಸಿಲುಕಿದೆನಾದಡಿಂದಿನೊಳು ||
ಮನುಮಥಾರಿಯು ತ್ರಿಪುರದೈತ್ಯರ |
ಹನನಗೆಯ್ದನದೆಂತು ವಾರಿಜ |
ತನಯನಾತಗೆ ಸೂತನಾಗಿಹ ಪರಿಯನರುಹೆಂದ || ೫೯ ||